ಚಕ್ರೇಶ್ವರ ಪರೀಕ್ಷಿತ – ೧೮
ಸಂಜೆ ಸೈಕಲ್ ಸುತ್ತಾಟ ಪಣಂಬೂರು ಕಡಲ ಕಿನಾರೆ ಮುಟ್ಟಿದಲ್ಲಿಂದ ತೊಡಗಿತು. ನಿರಂತರ ತೊಳತೊಳಸುತ್ತಿದ್ದ ಸಮುದ್ರದಲ್ಲಿ ಒಂದು ಕಣ್ಣು ಕೀಲಿಸಿದ್ದಂತೆ, ಹಿತವಾಗಿ ತೀಡುತ್ತಿದ್ದ ಗಾಳಿಗೆ ಮೈಯೊಡ್ಡಿ ಪೆಡಲೊತ್ತುತ್ತಿದ್ದರೆ ಬೈಕಂಪಾಡಿ, ಹೊಸಬೆಟ್ಟು ಕವಲುಗಳು ಕಳೆದದ್ದೇ ಗೊತ್ತಾಗಲಿಲ್ಲ. ಮೊದಲು, ಪಣಂಬೂರಿನಲ್ಲಿ ಒಂದು ಕಂಟೇನರ್-ಸಂಪರ್ಕದಲ್ಲಿ ಪ್ರಗತಿ ವಿಚಾರಿಸಿಕೊಂಡಿದ್ದೆ. ಹಿಂದಿರುಗುವ ಮೊದಲು, ಎಂಸಿಎಫ್ ಹಿಂದೆಯಿದ್ದ ಇನ್ನೊಂದೇ ಕಂಟೇನರ್-ಸಂಪರ್ಕವನ್ನೂ ವಿಚಾರಿಸುವ ಅಗತ್ಯವಿತ್ತು. ಹಾಗಾಗಿ ಸುರತ್ಕಲ್ ಕವಲನ್ನು ಗುರುತಿಟ್ಟು, ಬಲ ಹೊರಳಿ, ಹೆದ್ದಾರಿ ಸೇರಿದೆ. ಮಂಗಳೂರುಮುಖಿಯಾಗಿ, ಎನ್ನೆಂಪೀಟೀ ವಸತಿ ಸಮೂಹ ಮತ್ತು ಶಾಲಾದಾರಿಯಲ್ಲಿ ಎಡ ಕವಲು ಹಿಡಿದೆ. ನೇರ ದಾರಿ ಉದ್ಯಮ ರಕ್ಷಣಾ ದಳದ ಕಚೇರಿಯಲ್ಲಿ ಬಹುತೇಕ ಮುಗಿದಂತಿತ್ತು. ಬಲದ ಕವಲಿಗಾಗಿ ಹೋಗಿ, ಅನಿವಾರ್ಯವಾಗಿ ಬಳಕೆ ತಪ್ಪಿ ಹೋದಂತಿದ್ದ ಪೂರ್ವ ದಿಶೆಗೆ ತಿರುಗಿಕೊಂಡೆ. ಅಲ್ಲಿ ಈ ‘ಹಾಳೂರು’ ಕಾಣ ಸಿಕ್ಕಿತು!
ಇದು ಪಣಂಬೂರು ಬಂದರಿನ ನೌಕರರದೇ ವಸತಿ ಸಮೂಹವಾಗಿತ್ತಂತೆ. ಬಳ್ಳಾರಿ ‘ಗಣಿ ದರೋಡೆ’ಯ ಕಾಲದಲ್ಲಿ ಈ ವಲಯದ ಮೇಲೆ ನಡೆದ ಲಾರಿಗಳ ದಾಳಿ, ಪರಿಣಾಮವಾಗಿ ಎದ್ದ ದೂಳೀದೈತ್ಯ, ಇಲ್ಲಿನ ಜನರನ್ನು ವಿಪರೀತ ಕಾಡಿತ್ತಂತೆ. ಅವರು ಪ್ರತಿಭಟಿಸಿದರು. ಸರಕಾರ, ಬಂದರು ಇಲಾಖೆಗಳು ಸ್ಪಂದಿಸಿ, ಕಂಕನಾಡಿ ವಲಯದಲ್ಲೆಲ್ಲೋ ಹೊಸದೇ ವಸತಿ ಸಮೂಹ ಕಟ್ಟಿಸಿ ಕೊಟ್ಟರಂತೆ. ಇತ್ತ ಇಡಿಯ ಗಣಿ ವ್ಯವಸ್ಥೆಯೇ ಕುಸಿದುಬಿತ್ತು. ಸಹಜವಾಗಿ ಲಾರಿ ಮತ್ತು ದೂಳಿನ ಪೀಡೆಯೇ ಇಲ್ಲವಾಯ್ತು. ಆದರೇನು ನೌಕರರೆಲ್ಲರ ವಸತಿ ವರ್ಗಾವಣೆ ನಡೆದೇ ಹೋಯ್ತು. ಇಲ್ಲಿನ ಎರಡೆರಡು ಮಾಳಿಗೆಯ ಅಸಂಖ್ಯ ಮನೆಗಳಿರುವ ಕಟ್ಟಡ ಮತ್ತು ಪೂರ್ಣ ನಾಗರಿಕ ವ್ಯವಸ್ಥೆ ಇಂದು ವ್ಯರ್ಥವಾಗಿ ಬಿದ್ದಿದೆ. ತಮಾಷೆ ಎಂದರೆ ಇವರೆಲ್ಲರ ಪ್ರತಿಭಟನೆ ತಮ್ಮದೇ ಉದ್ದಿಮೆಯ ಸಾಮಾಜಿಕ ಮತ್ತು ಪಾರಿಸರಿಕ ಹಾನಿಯನ್ನು ನಿಯಂತ್ರಿಸುವ, ಕನಿಷ್ಠ ಸುಧಾರಿಸಿಕೊಳ್ಳುವ ದಿಕ್ಕಿನಲ್ಲಿ ದುಡಿಯಲೇ ಇಲ್ಲ. ಬದಲು, ಹಕ್ಕಿನ ಮೇಲೆ ಆರೋಗ್ಯಪೂರ್ಣ ವಠಾರಕ್ಕೆ ಓಡಿಹೋದರು! (ಹಿಂದೆ ಭಾರತೀಯ ಪರಮಾಣು ಇಲಾಖಾ ಮುಖ್ಯಸ್ಥ ರಾಜಾರಾಮಣ್ಣ, ಕೈಗಾ ವಲಯದ ಅನಾರೋಗ್ಯಕರ ಪರಿಸರದ ಮಾತು ಬಂದಾಗ ಸುಳ್ಳೇ ಘೋಷಿಸಿದ್ದು ನೆನಪಾಯ್ತು – “ನಾನು ನಿವೃತ್ತನಾದ ಮೇಲೆ ಅಲ್ಲೇ ಮನೆ ಮಾಡುತ್ತೇನೆ!” ಹಾಗೇನೂ ಮಾಡದೆ ಅವರು ಮೆಟ್ರೋಪಾಲಿಟನ್ ನಗರದಲ್ಲೇ ಅಂತ್ಯ ಕಂಡರು. ಇಂದು ಕೈಗಾ ಸುತ್ತಮುತ್ತಣ ಹಳ್ಳಿಗಳಲ್ಲಿ ಕ್ಯಾನ್ಸರ್ ವ್ಯಾಪಿಸಿರುವುದು ಸುದ್ಧಿಯೇ ಅಲ್ಲ.)
ಹಾಳೂರಿನ ಕತೆಯನ್ನು ನನಗಲ್ಲಿ ವಾಯುವಿಹಾರ ನಡೆಸಿದ್ದ ಪಕ್ಕದ ವಠಾರದ, ಬಹುಶಃ ಅದೇ ಸಂಸ್ಥೆಯ, ಹಿರಿಯ ನೌಕರರೊಬ್ಬರು ಹೇಳಿದರು. ನನಗದು ಸಹ್ಯವಾಗಲಿಲ್ಲ. ಅಷ್ಟು ದೊಡ್ಡ ವಸತಿ ವ್ಯವಸ್ಥೆ ಇದ್ದೂ ಇಲ್ಲದಂತೆ, ಹೊಸತಕ್ಕೆ ಹೋದದ್ದು ಬಹಳ ದೊಡ್ಡ ಸಾರ್ವಜನಿಕ ದ್ರೋಹ. ಇದು ಸಾರ್ವಜನಿಕ ಹಣದ ಅಪವ್ಯಯ, ಪಾರಿಸರಿಕವಾಗಿ ನಮಗೆ ಮರಳಿಸಲಾಗದ ಕಟ್ಟೋಣ ಸಾಮಗ್ರಿಗಳ (ಕಬ್ಬಿಣ, ಸಿಮೆಂಟ್, ಮರಳು ಇತ್ಯಾದಿ) ದುಂದು ಎಂದೇ ನಾನೆಣಿಸುತ್ತೇನೆ. ಹಳೆಯ ಕಟ್ಟಡವನ್ನು ಅನ್ಯ ಉಪಯೋಗಕ್ಕೆ ಅಳವಡಿಸಿಕೊಳ್ಳದೆ ಹಾಳು ಬಿಟ್ಟದ್ದು ತೀರಾ ಅನ್ಯಾಯ. ನಾನಿದನ್ನು ಸೂಚ್ಯವಾಗಿ ಹೇಳಿದಾಗ ಆ ಹಿರಿಯರು ಪಕ್ಕಾ ಅಧಿಕಾರಶಾಹಿಯಂತೇ ಉತ್ತರಿಸಿದರು. “ಆ ಪ್ರಾಪರ್ಟಿ (ಅವರರ್ಥದಲ್ಲಿ ಕೇವಲ ನೆಲ!) ಪೋರ್ಟ್ ಟ್ರಸ್ಟಿನದು, ಬೇರೆ ಕೊಡಕ್ಕಾಗಲ್ಲ. ಇನ್ನೇನಾದರೂ ಹೊಸ ಅಗತ್ಯ ಬಂದಾಗ, ಇದನ್ನ ಡೆಮಾಲಿಶ್ ಮಾಡಿ, ಹೊಸ್ತು ಕಟ್ಕೋತಾರೆ!” ಸ್ವಂತ ಹಣದಲ್ಲಿ ನಮ್ಮದೇ ಮನೆಗೊಂದು ಕಲ್ಲು ಸೇರಿಸಬೇಕಾದರೂ, ಸೋರಿಕೆಯೊಂದನ್ನು ನಿಲ್ಲಿಸಬೇಕಾದರೂ ನಾವು ಹತ್ತು ಸಾಧ್ಯತೆಗಳನ್ನು ಹುಡುಕುತ್ತೇವೆ. ಅದೇ ಸಾರ್ವಜನಿಕದಲ್ಲಿ “….. ಡೆಮಾಲಿಶ್ ಮಾಡಿ ಕಟ್ಕೋತಾರೆ!!”
ನನಗೆ ಹೊಳೆದ ಇನ್ನೂ ದೊಡ್ಡ ದುರಂತವನ್ನು ಇಲ್ಲೇ ಹೇಳಿಬಿಡುತ್ತೇನೆ. ಲಾರಿ, ದೂಳಿ ಹಾವಳಿಗೆ ಈ ವಠಾರಕ್ಕಿಂತ ಎಷ್ಟೆಷ್ಟೋ ಸಮೀಪಸ್ಥವಾಗಿ ಸಾವಿರಾರು ಖಾಸಗಿ ವಸತಿ, ಶಾಲೆ, ಆರೋಗ್ಯಕೇಂದ್ರ, ಉದ್ದಿಮೆಗಳು ಅತ್ತ ಸುರತ್ಕಲ್ಲಿನಿಂದ ಇತ್ತ ಕೂಳೂರಿನವರೆಗೆ ಹರಡಿವೆ. ಮತ್ತೆ ಅವರಿಗೇನೂ ಸಂಬಂಧಿಸದ ಪಾರಿಸರಿಕ ಮತ್ತು ಸಾಮಾಜಿಕ ಅವ್ಯವಸ್ಥೆ ಇದಾಗಿತ್ತು. ಆದರೆ ಅವರಿಗೆ ಬದಲಿ, ಪರಿಹಾರದ ಮಾತುಗಳಿರಲಿ, ಕನಿಕರದ ಹೇಳಿಕೆಯನ್ನೂ ಕೊಟ್ಟವರಿಲ್ಲ 🙁
ಅದೇ ಎನ್ನೆಂಪೀಟೀ ವಠಾರದ ಇನ್ನೊಂದು ಮಗ್ಗುಲಲ್ಲಿ ಈ ಸೌರ ವಿದ್ಯುತ್ ಫಲಕಗಳ ಕೊಯ್ಲು ಕಂಡೆ; ಒಳ್ಳೇ ಯೋಜನೆ. ನವಮಂಗಳೂರು ಬಂದರು ಇಲಾಖೆ, ತಮ್ಮ ಅಗತ್ಯದ ವಿದ್ಯುಚ್ಛಕ್ತಿಯನ್ನು ಸರಕಾರೀ ಇಲಾಖೆಯಿಂದ ಹಕ್ಕಿನ ಮೇಲೆ ಪಡೆದರೂ ಹಡಿಲು ಬಿದ್ದ ಒಂದಷ್ಟು ಸ್ವಂತ ನೆಲದಲ್ಲಿ ಹೀಗೊಂದು ಪ್ರಯತ್ನ ನಡೆಸಿ, ಸರಕಾರದ ಬೆಂಬಲಕ್ಕೆ ನಿಂತ ಕ್ರಮ ಮೆಚ್ಚಬೇಕಾದದ್ದೆ. (ನಮ್ಮ ಕುಟುಂಬ ಮಿತ್ರ ಕಾವೂರು ಪ್ರಸನ್ನ ತನ್ನ ಮನೆಯ ತಾರಸಿಯಲ್ಲಿ ಬಹಳ ಹಿಂದೆಯೇ ಇದನ್ನು ಪೂರ್ಣ ಸ್ವಂತ ತಾಕತ್ತು ಮತ್ತು ಜವಾಬ್ದಾರಿಯಲ್ಲಿ ಮಾಡಿದ್ದನ್ನು ಇಲ್ಲಿ ಅವಶ್ಯ ಸ್ಮರಿಸಬೇಕು.)
ಬಂದರು ಭದ್ರತಾ ದಳದ ಒತ್ತಿನಲ್ಲಿ ತುಸು ಕಚ್ಚಾ ದಾರಿ ಹಿಡಿದು, ಯಾವುದೋ ಒತ್ತಾಯಕ್ಕೆಂಬಂತೆ ಸದ್ಯ ಪಾಗಾರ ಒಡೆದು ಬಿಡುಗಡೆ ಕಾಣಿಸಿದ ದಾರಿಯಲ್ಲಿ ದಾಟಿ, ವಿಜಯ ಕರ್ನಾಟಕ ಮುದ್ರಣಾಲಯದ ಬಳಿ ಬಯಲಾದೆ. ಮತ್ತೆ ಯೋಜನೆಯಂತೆ ಇನ್ನೊಂದೇ ಕಂಟೇನರ್-ಸಲಹೆಗಾರನ ಭೇಟಿ ಮಾಡಿ, ಫಲ್ಗುಣೀ ತೀರದ ದಾರಿ ಹಿಡಿದು ಕೂಳೂರು, ಮಂಗಳೂರು, ಮನೆ. (೨೯-೩-೨೦೧೮)
(ಅನಿರ್ದಿಷ್ಟವಾಗಿ ಮುಂದುವರಿಯಲಿದೆ)