(ಚಿತ್ರ ನಿರ್ಮಾಣದ ಅನಧಿಕೃತ ಕಥನ – ೩)
(ಚಕ್ರೇಶ್ವರ ಪರೀಕ್ಷಿತ ೨೧)

 

ಅಭಯ ‘ಪಡ್ಡಾಯಿ’ ಚಿತ್ರ ಯೋಜನೆಯೊಡನೆ ಹೊರಟ ಮೊದಲಲ್ಲೇ ನಾವಿಬ್ಬರೂ ಭೇಟಿಯಾದ ವ್ಯಕ್ತಿ – ಕಣ್ವತೀರ್ಥದ ಬಳಿಯಿರುವ ದಿನೇಶ್ ಉಚ್ಚಿಲ. ಸುಮಾರು ಎರಡೂವರೆ ದಶಕಗಳ ಹಿಂದೆ ಇವರ ಚಾಮುಂಡೀ ಮೀನುಗಾರಿಕಾ ದೋಣಿ ಪಡೆಗಳೊಡನೆ ನಾವು ಸುಮಾರು ಇಪ್ಪತ್ತೈದು ಮಂದಿ ಆಳ ಸಮುದ್ರದ ಮೀನುಗಾರಿಕಾ ಅನುಭವ ನೋಡಲು ಹೋಗಿಬಂದದ್ದು ಅವಿಸ್ಮರಣೀಯ. (ನೋಡಿ: ಸಾಗರ ಸವಾರರು) ಒಂದು ಕಾಲದಲ್ಲಿ ಕಡಲಿನಲ್ಲಿ ಮೀನು ಗುರುತಿಸುವಲ್ಲಿ, ಬಲೆಬೀಸುವ ಜಾಣ್ಮೆ ಹಾಗೂ ತಾಕತ್ತಿನಲ್ಲಿ ಕಡಲ ಗುಳಿಗನೆಂದೇ ಖ್ಯಾತಿವೆತ್ತ ದಿನೇಶರು ಇಂದು ಪ್ರಾಯ ಸಹಜವಾಗಿ ಮೀನುಗಾರಿಕೆಯಿಂದ ನಿವೃತ್ತರಾಗಿ, ಅದೇ ಕಣ್ವತೀರ್ಥದ ಬಳಿಯ ಕಡಲಕಿನಾರೆಯ ಮನೆಯಲ್ಲೇ ಇದ್ದಾರೆ.

ದಿನೇಶರ ಮೇಲಿನ ಪ್ರೀತಿ ಗೌರವದಲ್ಲಿ, ಅಭಯ ‘ಪಡ್ಡಾಯಿ’ ಸಿನಿಮಾದಲ್ಲಿ ಬರುವ ಉದಾತ್ತ ಭಾವದ, ಹಳೆ ಮೌಲ್ಯಗಳನ್ನು ಪೋಷಿಸುವ ಮುಖ್ಯ ಪೋಷಕ ಪಾತ್ರಕ್ಕೆ ದಿನೇಶರ ಹೆಸರನ್ನೇ ಇಟ್ಟಿದ್ದಾನೆ. (ಪಡ್ಡಾಯಿ ಚಿತ್ರದ ತಯಾರಿಯ ಕುರಿತು ಇಲ್ಲೇ ಹಾಕಿದ ಇನ್ನೆರಡು ಲೇಖನಗಳು – ಕಡಲ ಕಲಕಿನಲ್ಲೆದ್ದ ಅಮೃತದ ಹನಿಗಳು ಮತ್ತು ‘ಪಡ್ಡಾಯಿ’ – ಹೊಸ ತುಳು ಸಿನಿಮಾದುದ್ದಕ್ಕೆ…. ) ದಿನೇಶ ಉಚ್ಚಿಲರು ಸಾಂಪ್ರದಾಯಿಕ ಮೀನುಗಾರಿಕೆಯಲ್ಲಿ ನಿಸ್ಸಂದೇಹವಾಗಿ ದೊಡ್ಡ ಸಂಪನ್ಮೂಲ ವ್ಯಕ್ತಿ. ಅವರ ಬಾಲ್ಯ, ಯೌವನ ಕಾಲದ ಮೀನುಗಾರಿಕಾ ದಿನಚರಿ, ಅಲ್ಲಲ್ಲ ವಾರ್ಷಿಕ ಪಂಚಾಂಗ ಕೇಳಿದಾಗ ನಮಗೆ ದೊಡ್ಡ ಆಶ್ಚರ್ಯವೇ ಕಾದಿತ್ತು. ಅವರು ಹೇಳಿದ ತಿಂಗಳೂ, ದಿನಗಳ ಲೆಕ್ಕವೆಲ್ಲ ನಾನು ಮರೆತಿದ್ದೇನೆ, ಕ್ಷಮಿಸಿ. ಆದರೆ ಆ ಒಂದು ತಿಂಗಳಲ್ಲಿ ಇವರು ಮಳೆನೀರಿನ ಗದ್ದೆಗಳಲ್ಲಿ ಸಣಬಿನ ಬೀಜ ಬಿತ್ತುತ್ತಿದ್ದರಂತೆ. ಅವು ನಿರೀಕ್ಷಿತ ಬೆಳವಣಿಗೆ ಕಂಡ ಕಾಲಕ್ಕೆ ಕಟಾವು ಮಾಡಿ, ನೆನೆ ಹಾಕಿ ಕಸ ದೂರ ಮಾಡಿ ನಾರು ಸಂಗ್ರಹಿಸುವುದು, ಅದನ್ನು ಕೈಯಾರೆ ಹುರಿ ಮಾಡಿ, ಅಗತ್ಯಕ್ಕೆ ತಕ್ಕಂಥ ಬಲೆ (ನೇಯುವುದಲ್ಲ) ಗಂಟು ಹಾಕಿಕೊಳ್ಳುವ ಕತೆ ಇದು ಎಲ್ಲೋ ಪುರಾಣದ ಪುಟಗಳನ್ನು ಮಗುಚಿದಂತೇ ಕೇಳಿತ್ತು.

ಮಳೆ ಬಿಟ್ಟ ಕೂಡಲೇ ಇವರ ಅಂದಿನ ದಿನಚರಿಗೆ ಇನ್ನಷ್ಟು ತೀವ್ರತೆ ಬರುತ್ತಿತ್ತು. ನಸುಕು ಹರಿಯುವ ಮುನ್ನ ಕಡಲಿಗಿಳಿದು, ಭಿನ್ನ ಭಿನ್ನ ಸಾಮರ್ಥ್ಯ ಮತ್ತು ವೇಳಾನುಸಾರ ಸಮುದ್ರಕ್ಕೆ ನುಗ್ಗುತ್ತಿದ್ದರು. ಹಾಗೇ ಬೇರೆ ಬೇರೆ ಹೊತ್ತಿನಲ್ಲಿ ‘ಕೊಯ್ಲು’ ನಡೆಸಿ (ಎಷ್ಟೋ ಬಾರಿ ಖಾಲಿ ಕೈಯಲ್ಲೂ) ದಂಡೆಗೆ ಮರಳುತ್ತಿದ್ದರು. ದಂಡೆಯಲ್ಲಿ ದೋಣಿಗಳಿಂದ ಮೀನಿಳಿಸುವುದು, ಹರಾಜು ಹಾಕುವುದಕ್ಕೆಲ್ಲ ಜನ ಬೇರೇ ಇರುತ್ತಿದ್ದರು. ಹಾಗೆಂದು ಇವರ ಜವಾಬ್ದಾರಿ ನೋಡಿದರೆ, “ಅರ್ಧವೇ ಮುಗಿದಿರುತ್ತಿತ್ತು” ಎಂದು ದಿನೇಶರು ಹೇಳಿದಾಗ ನಮಗೆ ಆಶ್ಚರ್ಯ. ಹೌದು, ಬಲೆಗಳಲ್ಲಿ ಮೀನುಗಳ ಜತೆಗೇ ಬಂದ ಕಸ ಕೊಳಕನ್ನು ವಿವರವಾಗಿ ಕಳೆದು, ಹರಕುಗಳಿಗೆ ತುರ್ತು ರಿಪೇರಿ ಕೊಡಬೇಕು. ಅನಂತರ ಅವಕ್ಕೆ ಕಡಲ ಉಪ್ಪು ನೀರಿನಲ್ಲಿ ಒಂದು ಜಳಕ. ಮತ್ತೆ ಅಷ್ಟನ್ನೂ ದಂಡೆಯ ಸಮೀಪದ ಕೆರೆಗೆ ಹೊತ್ತು ಹಾಕಿ ಎರಡನೇ ಸುತ್ತಿನಲ್ಲಿ ಸಿಹಿನೀರ ಸ್ನಾನ. ಇಲ್ಲವಾದರೆ ಒಣಗಿದಾಗ ಉಪ್ಪ ಹರಳುಗಳು ಸಣಬಿನ ಆಯುಷ್ಯವನ್ನು ಕಡಿತಗೊಳಿಸುತ್ತಿತ್ತಂತೆ. ಕೊನೆಯದಾಗಿ ಅವನ್ನು ಒಣಗಲು ಹರಡುವವರೆಗೆ ಬಿಡುಗಡೆ ಇರುತ್ತಿರಲಿಲ್ಲ. ಆದರೆ ಇಂದು ದಿನೇಶರೇ ಹೇಳುವಂತೆ, “ಬಲು ಗಟ್ಟಿಯ, ಉಪ್ಪುನೀರಿಗೆ ನಲುಗದ ನೈಲಾನ್ ಬಲೆಗಳು ಬಳಕೆಯಲ್ಲಿವೆ. ದಂಡೆಗೆ ಬಂದದ್ದೇ ಕೆಲಸ ಮುಗಿಯಿತು, ಹುಡುಗರು ಸೋಮಾರಿಗಳಾಗುತ್ತಿದ್ದಾರೆ!”

ಮೂರು ದಶಕಗಳ ಹಿಂದಿನ ದಿನೇಶ್ ಉಚ್ಚಿಲ್

ಈಚೆಗೆ ನಾನು ಅಂತರ್ಜಾಲದಲ್ಲಿ ಪೆಸಿಫಿಕ್ ಸಾಗರದಲ್ಲಿ ಉದ್ಭವಿಸಿರುವ ‘ಹೊಸ ಭೂಖಂಡ’ದ ಕುರಿತು ಓದಿ ದಿಕ್ಕೆಟ್ಟು ಹೋಗಿದ್ದೆ. ಅದು ವಾಸ್ತವದಲ್ಲಿ ನೆಲವೇ ಅಲ್ಲ, ನಾವು ನಿರ್ಲಜ್ಜವಾಗಿ ತೊರೆ, ನದಿ ಮತ್ತು ನೇರ ಸಮುದ್ರಕ್ಕೆಸೆದ ನಾಗರಿಕ ಕಸಗಳ ತೆಪ್ಪ. ಅದು ಕಡಲ ಮಥನದಲ್ಲಿ ಅನಿವಾರ್ಯವಾಗಿ ಎದ್ದ ಹಾಲಾಹಲವೇ ಸರಿ. ಈಚೆಗೆ ಕಂಡಂತೆ ಅದರ ವಿಸ್ತೀರ್ಣ ಸುಮಾರು ೧.೬ ಮಿಲಿಯ ಚದರ ಕಿಮೀ ಅಥವಾ ೬೧೮,೦೦೦ ಚದರ ಮೈಲಿಗಳು. ಅದರ ಅಂದಾಜು ಭಾರ ೭೯೦೦೦ ಮೆಟ್ರಿಕ್ ಟನ್ನುಗಳು. ಇಷ್ಟಾಗಿ ಅದು ದಿನೇ ದಿನೇ ಬೆಳೆಯುತ್ತಲೇ ಇದೆ. ಅದರ ಇದುವರೆಗಿನ ಹೆಚ್ಚಿನ ವಿವರಗಳನ್ನು ನೀವೇ ಈ ಜಾಲತಾಣ ಲೇಖನದಲ್ಲಿ ಓದಿಕೊಳ್ಳಿ: The Pacific Garbage

ಅದರಿಂದ ನಾನು ದಿಕ್ಕೆಟ್ಟು ಹೋದಾಗ ಮತ್ತೆ ನೆನಪಿಗೆ ಬಂದವರು ಇದೇ ದಿನೇಶ ಉಚ್ಚಿಲ್. ಇವರ ಕಾಲದ ಸಾಂಪ್ರದಾಯಿಕ ಮೀನುಗಾರಿಕೆಯಲ್ಲಿ ಹರಿದು ಕಳೆದ, ಹಳತಾಗಿ ಎಸೆದ ಬಲೆಗಳೆಲ್ಲವೂ ಸಸ್ಯಜನ್ಯ. ಇವು ಸಮುದ್ರದಲ್ಲೇ ಉಳಿದರೂ ಬಲುಬೇಗನೆ ಕುಂಬಾಗಿ, ನೀರಿನಲ್ಲಿ ಕರಗಿ, ಸಾಗರಜೀವಿಗಳ ಪೋಷಕಾಂಶದ ಪಟ್ಟಿಗೆ ಸಹಜ ಸೇರ್ಪಡೆಯಾಗುತ್ತಿತ್ತು. ಆದರೆ ಇಂದು ಪೆಸಿಫಿಕ್ ಸಾಗರದ ‘ಕಚಡಾ ನೆಲ’ದಲ್ಲಿ ಶೇಕಡಾ ನಲ್ವತ್ತಕ್ಕೂ ಮಿಕ್ಕು ಪಾಲು ನೈಲಾನು ಬಲೆಗಳದ್ದೇ ಇವೆ. ಅಷ್ಟಲ್ಲದೆ ಅವು ಇತರ ಪುಡಿ ಕೊಳೆಯಲರಿಯದ ಕಸಗಳನ್ನು (ವಿವಿಧ ನಮೂನೆಯ ಪ್ಲ್ಯಾಸ್ಟಿಕ್ ಉತ್ಪನ್ನಗಳು) ಒಗ್ಗೂಡಿಸಿ, ನಿರಂತರ ಸೂಕ್ಷ್ಮಾಣು ವಿಷವನ್ನು ಕಡಲಿಗೆ ಸೇರಿಸುತ್ತಲೇ ಇರುತ್ತದೆ. ಇದು ಪರಿಸರ ಕೆಡಿಸುವುದರೊಡನೆ, ನೇರ ಎಷ್ಟೋ ಜಲಚರಗಳ ‘ಅಮಾನವೀಯ’ ಮೃತ್ಯುವಿಗೂ ಕಾರಣವಾಗುತ್ತಿರುವುದು ನಿಜಕ್ಕೂ ಗಂಭೀರ ಸಮಸ್ಯೆ. ‘ಪಡ್ಡಾಯಿ’ ಸಿನಿಮಾ ಸಾರ್ವಜನಿಕ ವೀಕ್ಷಣೆಗೆ ಇನ್ನೂ ಮುಕ್ತವಾಗಿಲ್ಲ. ಮೊನ್ನೆತಾನೇ ಬೆಂಗಳೂರಿನಲ್ಲಿ ನಡೆದ ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ಆಯ್ಕೆಗೊಂಡು ಮೊದಲ ಪ್ರದರ್ಶನವಾದದ್ದು, ಈಚೆಗೆ ನ್ಯೂಯಾರ್ಕಿನ ‘ಭಾರತೀಯ ಚಲಚಿತ್ರೋತ್ಸವ’ಕ್ಕೂ ಆಯ್ಕೆಗೊಂಡು ಹೋಗುತ್ತಿರುವುದನ್ನು ಸುದ್ಧಿಯ ಮಟ್ಟದಲ್ಲಾದರೂ ದಿನೇಶ ಉಚ್ಚಿಲರಿಗೆ ತಿಳಿಸಬೇಕೆಂಬ ನನ್ನ ಬಯಕೆಗಿಂದು ಸೈಕಲ್ ಸಲಕರಣೆಯಾಯ್ತು. ಸಂಜೆ ನೇರ ಕಾಸರಗೋಡಿನ ಹೆದ್ದಾರಿಯನ್ನನುಸರಿಸಿದ್ದೆ. ತಲಪಾಡಿಯ ಹೊಸ ಸುಂಕದ ಕಟ್ಟೆ ದಾಟಿ ಸುಮಾರು ಒಂದು ಕಿಮೀಗೆ ಬಲಕ್ಕೆ ಹೊರಳಿದ್ದೇ ಕಣ್ವತೀರ್ಥದ ಸ್ವಾಗತ ಕಮಾನು ಬರಮಾಡಿಕೊಂಡಿತು. ಒಳಗೆ ಸುಮಾರು ಒಂದೂವರೆ ಕಿಮೀ ಸಾಗಿ ದಿನೇಶರ ಮನೆ ಮುಟ್ಟಿದೆ. ಅವರು ತುಸು ಆಚಿನ ತೆಂಗಿನ ತೋಟದಲ್ಲಿರುವ ಸುದ್ಧಿ ಸಿಕ್ಕಿತು. ನನ್ನ ಮರಳುವ ದಾರಿಯಾದರೂ ಅದೇ ಆದ್ದರಿಂದ ಅತ್ತ ಹೋದೆ.

ನಿರೀಕ್ಷೆಯಂತೆ ಸಿಕ್ಕ ದಿನೇಶರಿಗೆ ಸಂತೋಷದ ಸುದ್ದಿ ಚುಟುಕದಲ್ಲಿ ಮುಟ್ಟಿಸಿದೆ. ಮೇ ತಿಂಗಳ ಸುಮಾರಿಗೆ ಚಿತ್ರ ಸಾರ್ವಜನಿಕ ವೀಕ್ಷಣೆಗೆ ಬಂದಾಗ ಅವಶ್ಯ ಬರಬೇಕಾಗಿಯೂ ವಿನಂತಿಸಿಕೊಂಡು ಮುಂದುವರಿದೆ. ಕಣ್ವತೀರ್ಥದಿಂದ ನೇರ ಉತ್ತರಕ್ಕೆ ವಾಹನಯೋಗ್ಯ ದಾರಿ ಮರಳ ಹಾಸಿನಲ್ಲಿ ಮುಗಿತಾಯ ಕಾಣುತ್ತದೆ. ಆದರೆ ಮುಂದುವರಿದು, ಸೈಕಲ್ ನೂಕುತ್ತ ಪುಳಿನಹಾಸಿನಲ್ಲಿ ನಡೆದು, ಉಚ್ಚಿಲದ ಬಟಪಾಡಿ ಭೂಶಿರ ಕಾಣುವುದು ನನಗೇನೂ ಹೊಸ ವಿಚಾರವಲ್ಲ. ವಿಶೇಷ ದಿನ ಅಥವಾ ಋತುಗಳಲ್ಲಷ್ಟೇ ನೀರು ನೆಕ್ಕುವ ಎತ್ತರಿಸಿದ ದಂಡೆ ಎಂದೂ ಚುರುಕಿನ ಮತ್ತು ಶ್ರಮರಹಿತ ನಡಿಗೆಗೆ ಹೇಳಿದ್ದೇ ಅಲ್ಲ. ಎರಡನೆ ಹಂತದಲ್ಲಿ, ಸಾಮಾನ್ಯವಾಗಿ ಹೇಳುವಂತೆ, ಏಳಕ್ಕೊಮ್ಮೆ ಉನ್ನತ ಅಲೆಗಳು ಸುಳಿಯುತ್ತಿರುತ್ತವೆ. ಅದರಿಂದಲೂ ಮುಂದಿನ ಹಂತದಲ್ಲಿ ಅಲೆಯ ಸಂಚಾರ ನಿರಂತರ. ಹೆಚ್ಚು ಕಮ್ಮಿ ಸಪಾಟಾಗಿರುವ ಕಡಲ ಕಿನಾರೆಗಳಲ್ಲಿ ಮೂರನೇ ಹಂತದ ಮರಳು ತೋರಿಕೆಗೆ ದೃಢವಾಗಿರುತ್ತದೆ ಮತ್ತು ನಡಿಗೆಯೋ ಸೈಕಲ್ ಸವಾರಿಯೋ ಸುಲಭಸಾಧ್ಯ. ನನಗಾದರೋ ಸೈಕಲ್ಲಿಗೆ ಉಪ್ಪುನೀರಿನ ಸಂಪರ್ಕ ಬಾರದಂತೆ (ಲೋಹದ ಭಾಗಗಳಿಗೆ ತುಕ್ಕು ಹಿಡಿಯುವುದು ಚುರುಕಾಗುತ್ತದೆ) ನೋಡಿಕೊಳ್ಳುವುದು ಅವಶ್ಯವಾದ್ದರಿಂದ ಎರಡನೇ ಹಂತವನ್ನು ಆರಿಸಿಕೊಂಡಿದ್ದೆ. ಇದು ಭಾವಿಸಿದಷ್ಟು ಹಗುರವೇನಲ್ಲ. (ಇಲ್ಲೇ ಬೆಳಿಗ್ಗೆ ಸ್ವತಂತ್ರವಾಗಿ ನಾನು ಏರಿಸಿದ್ದ ವಿಡಿಯೋ ತುಣುಕನ್ನು ಇನ್ನೊಮ್ಮೆ ನೋಡಿಕೊಳ್ಳಿ) ಉನ್ನತ ಅಲೆಗಳ ಬಗ್ಗೆ ಎಚ್ಚರ ತಪ್ಪದೇ ನಡೆದಿದ್ದೆ. ಆದರೂ ಮಧ್ಯ ದಾರಿಯಲ್ಲೆಲ್ಲೋ ಒಂದು ಅಲೆ ನನ್ನಂದಾಜನ್ನು ಮೀರಿ ಹೊಡೆದೇಬಿಟ್ಟಿತು. ಒಮ್ಮೆಲೆ ನನ್ನ ಮೊಣಕಾಲೆತ್ತರದಲ್ಲಿ ಒಳಬಂದ ಅಲೆ ಸೈಕಲ್ಲನ್ನು (ಬಹುಶಃ ಗಾಳಿತುಂಬಿದ ಚಕ್ರಗಳಿಗಾಗಿ) ನನ್ನ ಎದೆ ಮಟ್ಟಕ್ಕೆ ಎತ್ತಿಬಿಟ್ಟಿತ್ತು. ನಾನದನ್ನು ಕೆಳಕ್ಕೊತ್ತಿ ಗಟ್ಟಿ ಹಿಡಿಯುವುದರೊಳಗೆ, ಮರಳುವ ಅಲೆ ಅಕ್ಷರಶಃ ಬುಡದ ಮರಳು ತೊಳೆದು ಸೈಕಲ್ಲನ್ನು ಪೂರ್ಣ ಅಡ್ಡ ಮಲಗಿಸಿಯೇಬಿಟ್ಟಿತು. ಇಲ್ಲಿ ಜೀವ ಅಪಾಯದ ಸಂಗತಿ ಏನೂ ಇರಲಿಲ್ಲ. ಸೈಕಲ್ ಉಪ್ಪು ನೀರು ಮತ್ತು ಮರಳ ಸ್ನಾನ ಮಾಡಿದ ಸೋಲೊಂದೇ ಸಂಗತಿ!

ಮುಂದೆ ಜಾಗರೂಕತೆಯನ್ನು ಹೆಚ್ಚಿಸಿ, ಬಟಪಾಡಿ ಸೇರಿಕೊಂಡೆ ಅನ್ನಿ. ಅಲ್ಲಿ ತೆಂಗಿನ ಮರಗಳಿಗೆ (ಸಿಹಿ)ನೀರು ಬಿಡುತ್ತಿದ್ದವರೊಬ್ಬರ ಕೃಪೆಯಲ್ಲಿ ಒಮ್ಮೆಗೆ ಸೈಕಲ್ಲಿನ ಸಂದುಗಳನ್ನು ಸೇರಿದ್ದ ಮರಳು, ಉಪ್ಪುನೀರಿನ ಹೊರೆಯನ್ನು ತಿಳಿಗೊಳಿಸಿ ಮಂಗಳೂರ ದಾರಿ ಹಿಡಿದೆ. ಅನುದ್ದಿಷ್ಟ ಮರಳಾಟದ ಮರುಳಿಗೆ ಬಿದ್ದದ್ದಕ್ಕೆ, ಸೂರ್ಯಾಸ್ತ ಮಾತ್ರವಲ್ಲ, ಮುಸ್ಸಂಜೆಯ ನಸು ಬೆಳಕೂ ಮಾಸಿದ ಮೇಲೆ ಮನೆ ಸೇರಿಕೊಂಡೆ.