ಜೀವನರಾಂ ಸುಳ್ಯ – ನಾಟಕ ರಂಗದ ಬಹುಮುಖಿ (ನಟ, ನಿರ್ದೇಶಕ, ಸಂಘಟಕ ಇತ್ಯಾದಿ), ಅಪ್ಪಟ ಮನುಷ್ಯಪ್ರೀತಿಯ (ಮನುಜ ನೇಹಿಗ, ಇವರ ಮಗನ ಹೆಸರು!) ಕಲಾವಿದ. ಇವರು ಸ್ವಂತ ವಾಸಕ್ಕೆ ಕಟ್ಟಿಕೊಳ್ಳುವಲ್ಲೂ ರೂಪಿಸಿದ್ದು ‘ರಂಗಮನೆ’ ಎಂಬ ವಿಶಿಷ್ಟ ಆವರಣ. ಇದನ್ನು ನಾನು ಹಿಂದೆ ಕಂಡವನೇ ಮತ್ತು ಅಲ್ಲಿ ನಡೆಯುವ ಕಲಾಪಗಳೂ ನನಗೆ ಸದಾ ಕುತೂಹಲಕಾರಿಯವೇ ಇತ್ತು. ಆದರೆ ಮಂಗಳೂರಿನಿಂದ ಅಲ್ಲಿಗಿರುವ ಭೌತಿಕ ಅಂತರ (ಸುಮಾರು ಎರಡು ಗಂಟೆಯ ಪ್ರಯಾಣಾವಧಿ) ಮತ್ತು ಅವೇಳೆಗಳಲ್ಲಿ ಮರಳಿ ಪಯಣಿಸುವಲ್ಲಿನ ಸೌಕರ್ಯಗಳ ಕೊರತೆಯಷ್ಟೇ ನನ್ನನ್ನು ಅದರಿಂದ ದೂರವಿಟ್ಟಿತ್ತು.
ಕಳೆದ ತಿಂಗಳು ಅಲ್ಲಿನೊಂದು ಆಮಂತ್ರಣ ಫೇಸ್ ಬುಕ್ಕಿನಲ್ಲಿ ಕಂಡಾಗ ಮಾತ್ರ ನನ್ನ ಸಂಯಮ ಸಡಲಿತು: “೧೨-೮-೧೮ರಂದು ರಂಗಮನೆಯ ವಾರ್ಷಿಕೋತ್ಸವದಲ್ಲಿ, ಬಡಗು ತಿಟ್ಟಿನ ಅದ್ವಿತೀಯ ಯಕ್ಷಗುರು ಬನ್ನಂಜೆ ಸಂಜೀವ ಸುವರ್ಣ (ನೋಡಿ: ಕರುಣ ಸಂಜೀವ) ತೆಂಕು ತಿಟ್ಟಿನ ಪಾತ್ರಾಭಿನಯಿಸುತ್ತಾರೆ!” ನಮ್ಮ ಮೂರೂ ದೀವಟಿಗೆ ಬೆಳಕಿನ ಯಕ್ಷ ಕಲಾಪಗಳ ಸಂಯೋಜನೆಯಲ್ಲಿ (ಅವುಗಳಲ್ಲಿ ಎರಡರ ವಿಡಿಯೋ ದಾಖಲೀಕರಣವನ್ನೂ ಆಸಕ್ತರು ಇಲ್ಲಿ ಚಿಟಿಕೆ ಹೊಡೆದು ನೋಡಬಹುದು: ) ಅದ್ವಿತೀಯ ಸಹಕಾರ ಕೊಟ್ಟ ಗೆಳೆಯ ಪೃಥ್ವೀರಾಜ್ ಕವತ್ತಾರ್.
(ತೆಂಕು ತಿಟ್ಟು – ಕುಂಭಕರ್ಣ ವಧೆ, ದೀವಟಿಗೆ ಬೆಳಕಿನಲ್ಲಿ)
(ದುಶ್ಶಾಸನ ವಧೆ – ತೆಂಕು ತಿಟ್ಟು, ದೀವಟಿಗೆ ಬೆಳಕಿನಲ್ಲಿ)
ಆ ಮೂರು ಲೆಕ್ಕವೇ ಅಲ್ಲ ಎನ್ನುವಷ್ಟು ವೈವಿಧ್ಯಮಯ ಯಕ್ಷಗಾನ ಪ್ರಯೋಗಗಳಲ್ಲಿ ಗಂಭೀರ ಅಧ್ಯಯನಾತ್ಮಕ ಆಸಕ್ತಿಯೊಂದೇ ಇಟ್ಟುಕೊಂಡು ದುಡಿಯುವ ಪೃಥ್ವೀ, ವೃತ್ತಿರಂಗದಲ್ಲಿ ಹಿರಿಯ ಪತ್ರಕರ್ತ. ಇವರು ವಿಶಿಷ್ಟವಾಗಿ ಸಂಯೋಜಿಸಿದ ಅಭಿಮನ್ಯು ಕಾಳಗ, ಮತ್ತದರಲ್ಲಿ ನನಗೆ ತಿಳಿದಂತೆ ಇದೇ ಪ್ರಥಮ ಎನ್ನುವಂತೆ ಸಂಜೀವರ ಸುವರ್ಣರನ್ನು ವೇಷ ಕಟ್ಟಿಸುವವರಿದ್ದರು. ಈ ವಿಶೇಷವನ್ನು ನಾನು ಇಷ್ಟರೆಲ್ಲರಲ್ಲೂ ಪ್ರಚುರಿಸಿದ್ದಕ್ಕೆ, ‘ಸಂಜೀವ’ ನಾಮಸ್ಮರಣೆಯಲ್ಲಿ ನನಗೆ ಕಡಿಮೆಯಿಲ್ಲದ ಉತ್ಸಾಹದಿಂದ ಜತೆಗೊಡಲು ಸಜ್ಜಾದವರು ದೇವಕಿ, ಕೆ. ಲಕ್ಷ್ಮೀನಾರಾಯಣ ರೆಡ್ಡಿ ಮತ್ತು ಮುರಳಿ ಪ್ರಭು.
ಸುಳ್ಯದ ಕಲಾಪಕ್ಕೆ ಇನ್ನೂ ಒಂದು ವಾರ ಬಾಕಿಯಿದ್ದಂತೆ, ಮಂಗಳೂರಿನಲ್ಲೇ ಅನ್ಯ ಪ್ರದರ್ಶನ ಒಂದರಲ್ಲಿ ಸಂಜೀವರ ಶಿಷ್ಯ – ಶೈಲೇಶ್ ನಾಯಕ್ ಸಿಕ್ಕಿದ್ದರು. ಆಗ ನಾನು ಪ್ರಚಾರಪತ್ರದ ವಿಚಾರ ಪ್ರಸ್ತಾವಿಸಿದೆ. ಅವರು “ಹೌದು ಸಾರ್, ಬನ್ನಂಜೆ ಗುರುಗಳು ‘ಅಭಿಮನ್ಯು ಕಾಳಗಕ್ಕೆ ಹೋಗಲಿಕ್ಕುಂಟು, ನೀನೂ ಬರಬೇಕು’ ಎಂದಿದ್ದಾರೆ. ನನ್ನದು ಸಾರಥಿಯ ವೇಷವಿರಬಹುದು” ಎಂದದ್ದು ನಮ್ಮ ಉಮೇದನ್ನು ಹೆಚ್ಚಿಸಿತು. ನಾವು ನಾಲ್ವರೂ ಅರವತ್ತರ ಪ್ರಾಯ ಮೀರಿದವರು. ವಿಪರೀತ ಮಳೆ ಮತ್ತು ದಾರಿಯ ದುಸ್ಥಿತಿಯೊಡನೆ ವಾಪಾಸು ಬರುವ ಅಪ-ರಾತ್ರಿಯ ವೇಳೆ ಲೆಕ್ಕ ಹಾಕಿ, ಮಿತವ್ಯಯವನ್ನೂ ಗಮನದಲ್ಲಿಟ್ಟು ಸ್ವಂತ ಕಾರು ಬಿಟ್ಟು, ಸರಕಾರೀ ಬಸ್ ನಿಶ್ಚೈಸಿಕೊಂಡೆವು. ವಾಪಾಸು ಬರುವ ದಾರಿಯಲ್ಲಿ ರಾತ್ರಿ ಹತ್ತು – ಹನ್ನೊಂದರ ವೇಳೆಗೆ ಸುಳ್ಯದಿಂದ ಬಸ್ಸು-ಲಭ್ಯತೆ ಕುರಿತು ಖಚಿತಪಡಿಸಿಕೊಳ್ಳಲು ನೇರ ಜೀವನರಾಂ ಅವರಿಗೇ ಫೋನಿಸಿದ್ದೆ. ನಡು ರಾತ್ರಿಯವರೆಗೂ ಮಂಗಳೂರು ಬಸ್ಸುಗಳ ಆಶ್ವಾಸನೆ ಸಿಕ್ಕಿತು. ಆಗಲೇ ನಾನು, “ಹತ್ತಿಪ್ಪತ್ತು ವರ್ಷಗಳ ಹಿಂದೆ ದಿಲ್ಲಿಯಲ್ಲಿ ಸಂಜೀವರ ಬಡಗಿನ ಅಭಿಮನ್ಯು ನೋಡಿದ್ದು ಮರೆಯಲಾರೆ. ಈಗ ಅವರ ತೆಂಕುತಿಟ್ಟಿನ ಅಭಿಮನ್ಯು ನೋಡುವ ಅವಕಾಶಕ್ಕಾಗಿಯೇ ಬರುತ್ತಿದ್ದೇನೆ” ಎಂದೆ. ಜೀವನ್ರಾಂ ಸಣ್ಣ ತಿದ್ದುಪಡಿ ಹಾಕಿದರು, “ಅಭಿಮನ್ಯು ಅಲ್ಲ ಸಾರ್, ಈ ಸಲ ಅವರದು ಸುಭದ್ರೆಯಂತೆ.” ಅದು ನನ್ನನ್ನು ವಿಚಲಿತಗೊಳಿಸುವುದು ಬಿಟ್ಟು ಇನ್ನಷ್ಟು ಉತ್ತೇಜಿಸಿತು. “ಅರೆ, ಒಳ್ಳೇದೇ ಆಯ್ತು, ಸಂಜೀವರ ಸ್ತ್ರೀವೇಷ ನಾನೀವರೆಗೆ ನೋಡಿಯೇ ಇಲ್ಲ” ಎಂದೇ ಮಾತು ಮುಗಿಸಿದ್ದೆ. ಇಷ್ಟೆಲ್ಲದರ ಕೊನೆಯಲ್ಲಿ ಪ್ರದರ್ಶನದಂದು ಸಂಜೆ ನಾವು ರಂಗಮನೆಯನ್ನು ತಲಪಿದಾಗ ಜೀವನ್ರಾಂ ಬಹಳ ನಿರಾಶೆಯಲ್ಲೇ ಕೊಟ್ಟ ಸುದ್ದಿ ಮಾತ್ರ ನಮ್ಮ ಉತ್ಸಾಹವನ್ನು ಜರ್ರನೆ ಇಳಿಸಿಬಿಟ್ಟಿತು – “ಸಂಜೀವರು ಬರುತ್ತಿಲ್ಲ!”
(ಗೋಕುಲ ನಿರ್ಗಮನ – ನಿ: ಬಿ.ವಿ. ಕಾರಂತ)
ಕೌಟುಂಬಿಕ ಪ್ರಭಾವಶೂನ್ಯ, ಆರ್ಥಿಕ ಮತ್ತು ವಿದ್ಯಾಬಲಗಳೇನೂ ಹೇಳಿಕೊಳ್ಳುವಂತದ್ದಲ್ಲ ಎನ್ನುವಲ್ಲಿಂದ ತೊಡಗಿದ್ದು ಜೀವನರಾಮ್ ಜೀವನಗಾಥೆ. ಆ ಹಂತದಲ್ಲೆಲ್ಲೋ, ಒಬ್ಬಾನೊಬ್ಬ ಪ್ರೇಕ್ಷಕನಾಗಷ್ಟೇ ನಾನು ಜೀವನರಾಂರನ್ನು ಕಂಡದ್ದಿದ್ದರೆ ಅದು ಬಿವಿ ಕಾರಂತ ನಿರ್ದೇಶಿತ ನಾಟಕ – ಗೋಕುಲ ನಿರ್ಗಮನದಲ್ಲಿ. ಆ ಕಾಲದಲ್ಲೇ ನಾನು ನೋಡಿದ ಇನ್ನೂ ಕೆಲವು ನಾಟಕಗಳಲ್ಲೂ ಅವರಿದ್ದಿರಬಹುದು, ನನಗೆ ನೆನಪಿಲ್ಲ ಬಿಡಿ. ಆದರೆ ಜೀವನರಾಂ ಮಾತ್ರ ತನಗೆ ದಕ್ಕಿದ ಕಿಡಿಯನ್ನು ಜೋಪಾನ ಮಾಡಿ, ಸುಳ್ಯದಲ್ಲಿ ನೆಲೆಯೂರಿ ಈ ವಲಯದ ರಂಗ ಚಟುವಟಿಕೆಗಳಿಗೆ ಹೆದ್ದೀಪವಾಗಿ ಬೆಳಗಿದರು, ಬೆಳೆದರು. ಅವರ ನಿರ್ದೇಶನದ ನಾಟಕಗಳಾದ ಬಿರುಗಾಳಿ ಮತ್ತು ಮಹಾಮಾಯಿ ನನ್ನ ನೆನಪಿನ ಕಡತದಲ್ಲಿರುವ ದಪ್ಪ ಅಕ್ಷರದ ದಾಖಲೆಗಳು. ಹಾಗಾಗಿ ……..
ರಂಗಮನೆಯ ಕಲಾಪಗಳು ಶುರುವಾಗುವ ಅವಧಿಗೂ ಸಾಕಷ್ಟು ಮುಂಚೆ ನಾವು ರಂಗಮನೆ ಸೇರಿದ್ದರೂ ಸಮಯ ಕಳೆದದ್ದು ಗೊತ್ತೇ ಆಗಲಿಲ್ಲ. ಅವರಿತ್ತ ಉಪಾಹಾರ ಮುಗಿಸಿ, ಮನೆಯೊಳಗೆ ಜೀವನರಾಂಗೆ ಬಂದ ಪ್ರಶಸ್ತಿಪತ್ರ-ಫಲಕಗಳ ರಾಶಿಯ ಮೇಲೆ ಕಣ್ಣಾಡಿಸಿದೆವು. ಅಂಗಳದ ಮೂಲೆಯಲ್ಲಿ ಬಹಳ ಹಿಂದೆಯೇ ನಿಂದ ಬಣ್ಣದ ವೇಷ, ಮತ್ತದಕ್ಕೆ ಜತೆಗೊಡುವಂತೆ ಈಚೆಗೆ (ತಾಯಿ ವನಜ ಜಯರಾಂ ಅವರ ಸ್ಮೃತಿಗೆ) ಬಂದ ನಟರಾಜನ ಭೂಮಗಾತ್ರದ ಶಿಲ್ಪಗಳು ಭವ್ಯವಾಗಿವೆ. ಉಳಿದಂತೆ ಸರ್ವವ್ಯಾಪಿಯಾದ ಚಿತ್ರ, ಉಬ್ಬುಚಿತ್ರಗಳು, ಸಭಾಮಂದಿರಗಳನ್ನು ನೋಡಿ ದಣಿದೆವು, ಬರುತ್ತಿದ್ದ ಅನೇಕಾನೇಕ ಪೂರ್ವಪರಿಚಿತ ಗಣ್ಯರಲ್ಲಿ ನುಡಿದು ಸಂತೋಷಿಸಿದೆವು. ಭೋರ್ಗುಡುತ್ತಿದ್ದ ಮಳೆಗಳುಕದೆ, ಇನ್ನೂ ಬರಬಹುದಾದ ಪ್ರೇಕ್ಷಕರ ದಾಕ್ಷಿಣ್ಯ ಇಟ್ಟುಕೊಳ್ಳದೆ, ನಿಗದಿತ ವೇಳೆಗೆ ಮಿನಿಟೂ ತಪ್ಪದಂತೆ ಜೀವನರಾಂ ರಂಗ ಕಲಾಪಕ್ಕಿಳಿದೇ ಬಿಟ್ಟರು.
(ವೇಣು ವಿಸರ್ಜನ – ಮಂಟಪ ಪ್ರಭಾಕರ ಉಪಾಧ್ಯರ ಏಕವ್ಯಕ್ತಿ)
ಆಮಂತ್ರಣದಲ್ಲಿದ್ದಂತೆ, ಮೊದಲ ಕಲಾಪ ಬಡಗು ತಿಟ್ಟಿನದು. ದಿವಾಕರ ಹೆಗಡೆ ಕೆರೆಹೊಂಡ ಅವರ ರಚನೆ – ವೇಣು ವಿಸರ್ಜನ. ಪ್ರಸನ್ನ ಭಟ್ (ಭಾಗವತ), ಎನ್ಜಿ ಹೆಗಡೆ (ಮದ್ದಳೆ) ಮತ್ತು ಅಕ್ಷಯ ಆಚಾರ್ (ಚಂಡೆ) ಅವರ ಹಿಮ್ಮೇಳ. ಎರಡೇ ಪಾತ್ರಗಳ ಮಿತಿಯಲ್ಲಿ ರಂಗಪ್ರಸ್ತುತಿ ಮಾಡಿದವರು ಅಶ್ವಿನಿ ಕೊಂಡದ ಕುಳಿ (ಕೃಷ್ಣ) ಮತ್ತು ವಿಜಯ ಗಾಣಿಗ ಕುಂದಾಪುರ (ರಾಧೆ). ಬಹಳ ಹಿಂದೆಯೇ ಪುತಿನ ರಚನೆಯ, ಬಿವಿ ಕಾರಂತ ನಿರ್ದೇಶನದ ಗೋಕುಲ ನಿರ್ಗಮನ ನಾಟಕ ಮತ್ತೆ ಈಚೆಗೆ ಶತಾವಧಾನಿ ಗಣೇಶರ ರಚನೆಯ ಮಂಟಪ ಪ್ರಭಾಕರ ಉಪಾಧ್ಯರ ಏಕವ್ಯಕ್ತಿ ಪ್ರದರ್ಶನ ರಾಧಾರಾಗ ಅಥವಾ ವೇಣು ವಿಸರ್ಜನಗಳನ್ನು ನೋಡಿ, ಅತೀವ ಮೆಚ್ಚಿದವನಾಗಿ, ಹೊಸದೇ ರಾಧಾ-ಕೃಷ್ಣ ಕಲಾಪಕ್ಕೆ ನನ್ನ ನಿರೀಕ್ಷೆ ಹೆಚ್ಚಿನದ್ದೇ ಇತ್ತು. ಆದರೆ ನಾಟ್ಯ ರೂಪಕಗಳಾಗಬಹುದಾಗಿದ್ದ ಬಾಲಕೃಷ್ಣಲೀಲೆಗಳು ಬೀಸುಹೇಳಿಕೆಗಳಾಗಿ (ಬೆಣ್ಣೆಕಳ್ಳ, ಗೋಪಿಕಾ ವಸ್ತ್ರಾಪಹರಣ…), ನವಿರಾದ ಭಾವಗಳ ಪ್ರತಿನಿಧಿಯಾಗಬೇಕಿದ್ದ ನಾಟ್ಯಾಭಿನಯದ ಬಹುಭಾಗಗಳು ಸುದೀರ್ಘ ದೈಹಿಕ ಕಸರತ್ತುಗಳಲ್ಲಿ ಕಳೆದುಹೋದವು. ಮಧುರ ಭಾವಗಳನ್ನು ಕಟ್ಟಿಕೊಡಬೇಕಾದ ರಾಗಾಲಾಪಗಳು ಬಹುತೇಕ ಉಚ್ಚ ಕಂಠದ ಹಾಡಿಕೆ ಮತ್ತು ಮದ್ದಳೆ ಚಂಡೆಗಳ ಅವಿರತ ಪೆಟ್ಟುಗಳಲ್ಲಿ ಕೊಚ್ಚಿಹೋದವು. ಒಟ್ಟಾರೆ ಉನ್ನತ ಮಾತು, ಉತ್ಕಟ ಭಾವಗಳ ಮೊತ್ತದಲ್ಲಿ ಹನಿಗಣ್ಣರಾಗಿ, ಮೂಕರಾಗಬೇಕಿದ್ದ ಪ್ರೇಕ್ಷಕರು ಚಪ್ಪಾಳೆ, ಶಿಳ್ಳೆ ಹಾಕುವ ಹುಸಿ ನಾಟಕೀಯತೆಗೆ ಸೀಮಿತಗೊಂಡಿತ್ತು. ಸುಮಾರು ಒಂದೂವರೆ ಗಂಟೆಯ ಪ್ರದರ್ಶನ – ಅತ್ತ ಸಾಂಪ್ರದಾಯಿಕ ಯಕ್ಷಗಾನದ ಸೌಖ್ಯ ಕೊಡಲಿಲ್ಲ, ಪ್ರಾಯೋಗಿಕ ರಂಗದ ಚಿಂತನೆಗೂ ಹಚ್ಚಲಿಲ್ಲ ಎಂದು ವಿಷಾದದಲ್ಲೇ ಹೇಳಬೇಕಾಗಿದೆ!
ನಡುವೆ ಒಂದು ಸಭಾಕಲಾಪ – ಪ್ರಶಸ್ತಿ ಪ್ರದಾನ. ರಂಗಮನೆ ಕಳೆದ ಐದು ವರ್ಷಗಳಿಂದ, ದಿವಂಗತ ವನಜ ಜಯರಾಂ (ಜೀವನರಾಂ ತಾಯಿ) ಅವರ ಹೆಸರಿನಲ್ಲಿ, ಈ ವಲಯದ ಹಿರಿಯ ಸಾಂಸ್ಕೃತಿಕ ಕಲಾಕಾರರೊಬ್ಬರನ್ನು ಸಾಂಕೇತಿಕ ಮೊತ್ತದೊಡನೆ, ಸಾರ್ವಜನಿಕವಾಗಿ ಗೌರವಿಸುತ್ತ ಬಂದಿದೆ. ಹಾಗೆ ಈ ವರ್ಷದ ಗೌರವಕ್ಕೆ ಭಾಜನರಾದವರು, ಬಹುಖ್ಯಾತಿಯ ಸಾಲಿಗ್ರಾಮ ಮಕ್ಕಳ ಮೇಳದ ಸಂಸ್ಥಾಪಕ, ನಾಲ್ಕು ದಶಕಗಳಿಗೂ ಮಿಕ್ಕು ಅದರ ಬಹುಮುಖೀ ಸಂಚಾಲಕ ಎಚ್. ಶ್ರೀಧರ ಹಂದೆಯವರು. ಸಮ್ಮಾನಕ್ಕೆ ಹೆಚ್ಚಿನ ಘನತೆ ತಂದವರು ಹಿರಿಯ ರಂಗ ನಿರ್ದೇಶಕ ರಘುನಂದನ ಮತ್ತು ಮಂಗಳೂರಿನ ಅರೆಹೊಳೆ ಪ್ರತಿಷ್ಠಾನದ ಮುಖ್ಯಸ್ಥ ಸದಾಶಿವರಾವ್. ಜೀವನರಾಂ ಅವರ ತಂದೆ – ಜಯರಾಮ್, ಹಿರಿಯ ಯಕ್ಷಗಾನ ಕಲಾವಿದ, ಸದ್ಯ ದೈಹಿಕವಾಗಿ ಅಶಕ್ತರಾಗಿದ್ದರೂ ಮೌನ ಉಪಸ್ಥಿತಿಯೊಡನೆ, ತಮ್ಮ ಹರ್ಷ ಮತ್ತು ಅನುಮೋದನೆಯನ್ನೇ ವ್ಯಕ್ತಪಡಿಸಿದರು. ಜೀವನ್ರ ಪತ್ನಿ – ಮೌಲ್ಯ, ಪ್ರಶಸ್ತಿ ಪತ್ರ ವಾಚನದ ನೆಪದಲ್ಲಷ್ಟೇ ಒಮ್ಮೆ ಮೈಕ್ ಹಿಡಿದಿದ್ದರು. ಉಳಿದಂತೆ ಅವರೂ ಅವರೀರ್ವರ ಏಕೈಕ ಮಗ – ಇನ್ನೂ ಹತ್ತರ ಪ್ರಾಯದ ಮನುಜ ನೇಹಿಗನೂ ಎಲ್ಲ ಸೇವಾ ವಿಭಾಗಳಲ್ಲೂ ತೀವ್ರವಾಗಿ ತೊಡಗಿಕೊಂಡಿದ್ದದ್ದು ‘ರಂಗ-ಮನೆ’ಯ ಹೆಸರನ್ನು ಅನ್ವರ್ಥಗೊಳಿಸಿತ್ತು.
ದಿನದ ಕೊನೆಯ ಕಲಾಪವಾಗಿ ‘ಥಿಯೇಟರ್ ಯಕ್ಷ’ ತೆಂಕುತಿಟ್ಟಿನ ಅಭಿಮನ್ಯು ಕಾಳಗವನ್ನು ಪ್ರಸ್ತುತಪಡಿಸಿತು. ಸಿರಿಬಾಗಿಲು ರಾಮಕೃಷ್ಣ ಮಯ್ಯ (ಭಾಗವತ) ಲವಕುಮಾರ ಐಲ (ಮದ್ದಳೆ) ಮತ್ತು ಶ್ರೀಧರ ವಿಟ್ಲರದು (ಚಂಡೆ) ಹಿಮ್ಮೇಳ. ಪಾತ್ರ ವರ್ಗದಲ್ಲಿ ಉಬರಡ್ಕ ಉಮೇಶ ಶೆಟ್ಟಿ, ಶಂಭಯ್ಯ ಕಂಜರ್ಪಣೆ, ಶಶಿಕಾಂತ ಶೆಟ್ಟಿ ಕಾರ್ಕಳ, ಶಶಿಕಿರಣ ಕಾವು, ಲಕ್ಷ್ಮಣ ಮರಕಡ, ಹರಿರಾಜ ಕಟೀಲು, ಸುನೀಲ್ ಪಲ್ಲಮಜಲು ಮತ್ತು ಶಿವಾನಂದ ಪೆರ್ಲರಿದ್ದರು. ಯಕ್ಷಗಾನ ಪುನರುತ್ಥಾನದ ಪ್ರಯೋಗಗಳಲ್ಲಿ ಸದಾ ಗಂಭೀರವಾಗಿ ನಿರತವಾಗಿರುವ ಬಳಗ ಥಿಯೇಟರ್ ಯಕ್ಷ. ಆ ಅರಿವಿನಲ್ಲಿ ಪ್ರದರ್ಶನ ಸಾಂಪ್ರದಾಯಿಕ ಪೂರ್ವರಂಗ, ಒಡ್ಡೋಲಗ, ಉದ್ದುದ್ದ ಮಾತು ಅಥವಾ ಪುನರುಕ್ತಿಗಳನ್ನೆಲ್ಲ ನಿವಾರಿಸಿದ್ದು ಚೆನ್ನಾಗಿಯೇ ಇತ್ತು. ಇದು ಕಾಲಮಿತಿಗೂ ಸಹಕಾರಿಯೇ ಸರಿ. ಆದರೆ ಯಕ್ಷಗಾನ ಒಂದು ‘ಶೈಲೀಕೃತ ಕಲೆ’ ಎಂದು ಒಪ್ಪಿಕೊಂಡ ನೆಲೆಯಲ್ಲಿ ಪ್ರದರ್ಶನದಾರಂಭದಲ್ಲಿ ಧರ್ಮರಾಯ ಯಾವುದೇ ಕುಣಿತವಿಲ್ಲದೆ ನೇರ ನಡೆದು ಬಂದದ್ದು ಚಪ್ಪೆಯಾಯ್ತು. ಇನ್ನೂ ವಿಚಿತ್ರವಾದದ್ದು, ಮುಂದೆ ನೋಟಕ್ಕೆ ವಿಶಿಷ್ಟವಾಗಿಯೇ ಇದ್ದ ಜಯದ್ರಥ. ಈ ಪಾತ್ರವೂ (ಧರ್ಮರಾಯನ ಹಾಗೆ) ಪ್ರೇಕ್ಷಕರಿಗೆ ಪೂರ್ವ ಪರಿಚಯ ಅಥವಾ ಸೂಚನೆ ಕೊಡದೇ, ಕುಣಿತವಿಲ್ಲದೇ, ಪೂರ್ಣ ರಂಗಕ್ಕೂ ಬಾರದೇ (ಪ್ರವೇಶ ದ್ವಾರದಲ್ಲಿ), ಮೌನಿಯಾಗಿಯೇ ಬಂದು ನಿಂತಂತಿತ್ತು. ಈ ಪಾತ್ರದೊಡನೆ ಯುದ್ಧೋತ್ಸಾಹದಲ್ಲಿ ನುಗ್ಗುವ ಅಭಿಮನ್ಯುವಿನ ಸಾರಥಿಗಾದಷ್ಟೇ (ಅನಿರೀಕ್ಷಿತವಾದ್ದರಿಂದ) ಆಶ್ಚರ್ಯ ನನಗೂ ಆಯ್ತು. ಇಂಥ ಚರ್ಯೆಗಳು ನನಗಂತೂ ಹೊಸ ಅರ್ಥ ಹೊಳೆಸುವುದಕ್ಕಿಂತ ಹೆಚ್ಚು, ಪಾತ್ರಧಾರಿಗಳ ಉದಾಸೀನದ ನಡೆಗಳಾಗಿ, ಸಂವಹನಕ್ಕೆ ಕೊರತೆಯಾಗಿಯೇ ಕಾಣಿಸುತ್ತವೆ. (ಯಕ್ಷಗಾನದ ಹೆಚ್ಚು ಬಳಕೆಯಿಲ್ಲದವರೊಬ್ಬರು ಧರ್ಮರಾಯನನ್ನು ತಡವಾಗಿ ಗುರುತಿಸಿದರು. ಅವರಿಗೆ ಚಕ್ರವ್ಯೂಹ ಪ್ರಸಂಗದಲ್ಲಿ ಜಯದ್ರಥನ ವೈಶಿಷ್ಟ್ಯವೇ ಕಳೆದುಹೋಗಿ, ಎಂಥದೋ ಒಂದು ವೇಷವಾಗುಳಿಯಿತು) ಉಳಿದಂತೆ ನಾವು ಹತ್ತಾರು ಸಲ ನೋಡಿದ್ದೇ ‘ಅಭಿಮನ್ಯು ವಧಾ’ ಮತ್ತೆ ನೋಡುತ್ತ, ಮಂಗಳೂರಿಗೆ ಬಸ್ ಹಿಡಿಯುವ ಅವಕಾಶವನ್ನು ಹೆಚ್ಚು ದುರ್ಬಲಗೊಳಿಸಲು ಮನಸ್ಸಾಗದೇ ಸಭಾತ್ಯಾಗ ಮಾಡಿದೆವು.
ಮಳೆಯ ಅಬ್ಬರ ಅಸಾಮಾನ್ಯವಿತ್ತು. ಸಹಜವಾಗಿ ಮಂದಿರದ ತಗಡಿನ ಮಾಡಿನ ಗದ್ದಲ ಕಲಾಸ್ವಾದನೆಗೆ ಅಡ್ಡಿಯಾಗುತ್ತಲೇ ಇತ್ತು. ಇವುಗಳ ಅರಿವಿದ್ದೂ ಸುತ್ತಮುತ್ತಣ ಗ್ರಾಮಾಂತರ ಪ್ರದೇಶಗಳಿಂದಲೂ ಸೇರಿದಂತೆ ದೊಡ್ಡ ಸಂಖ್ಯೆಯಲ್ಲೇ ಹರಿದು ಬಂದು, ಬಹುತೇಕ ಕೊನೆಯವರೆಗೂ ಉಳಿದಿದ್ದ ಪ್ರೇಕ್ಷಕ ವೃಂದ, ರಂಗಮನೆ ಕುಟುಂಬದ ಕಲಾ ಕಾಳಜಿಗೆ ಸಂದ ಪ್ರಶಸ್ತಿಯೇ ಸರಿ. ಅಲ್ಲಿಗೆ ಬಂದಾಗಲೇ ನಾವು ಜೀವನರಾಂ ಬಳಿ ಕೊನೆಯಲ್ಲಿ ನಮ್ಮನ್ನು ಬಸ್ ನಿಲ್ದಾಣಕ್ಕೆ ಮುಟ್ಟಿಸಲು (ಬಾಡಿಗೆ ನಾವೇ ಕೊಡುವಂತೆ) ರಿಕ್ಷಾ ವ್ಯವಸ್ಥೆ ಕೇಳಿದ್ದೆವು.
ಪುಣ್ಯಾತ್ಮ “ಇಲ್ಲ, ನಾನೇ ಕಾರಿನಲ್ಲಿ ನಿಮ್ಮನ್ನು ಮುಟ್ಟಿಸುತ್ತೇನೆ” ಎಂದು ಹೇಳಿದ್ದರು, ನಿಂತಿದ್ದರೆ ದಾಕ್ಷಿಣ್ಯಕ್ಕೆ ಗುರಿಮಾಡುವವರಿದ್ದರು. ಆ ಕಾರಣಕ್ಕೂ ಕಲಾಪ ಕೊನೆಗೊಳ್ಳುವ ಮುನ್ನ ನಾವು ಜಾಗ ಖಾಲಿ ಮಾಡಲಿದ್ದೆವು. ಆದರೆ ಹಿಂದಿನ ಸಾಲಿನಲ್ಲೇ ಇದ್ದ ಮೌಲ್ಯಜೀವನ್ ನಮ್ಮನ್ನು ಹಿಡಿದು, ಮನೆಯೊಳಗೆ ವಿಶೇಷ ಊಟ ಕೊಟ್ಟೇ ಬೀಳ್ಕೊಂಡದ್ದು ಆ ಕುಟುಂಬದ ಸಹೃದಯತೆಗೆ ಸಣ್ಣ ಸಾಕ್ಷಿ. ಸರಕಾರದ ಮೂಲಭೂತ ಆವಶ್ಯಕತೆಗಳನ್ನೊದಗಿಸುವ ಜವಾಬ್ದಾರಿಯಲ್ಲಿ ‘ಕಲಾಭಿವ್ಯಕ್ತಿ’ ಆದ್ಯತೆಯಲ್ಲಿ ನಿರೀಕ್ಷಿಸುವುದು ರಂಗಮಂದಿರವನ್ನು. ಅದನ್ನೇ ಸಾಕ್ಷಾತ್ಕರಿಸಿಕೊಳ್ಳುವಲ್ಲಿ ಸೋತ ಮಂದಿ ನಾವು. ಉದಾಹರಣೆಗೆ ಮಂಗಳೂರನ್ನೇ ನೋಡಿ – ಕಳೆದ ಎಂಟು-ಹತ್ತು ವರ್ಷಗಳಲ್ಲಿ ಕೆಲವು ಪ್ರಜಾಪ್ರತಿನಿಧಿಗಳು ಹತ್ತೆಂಟು ಸ್ಥಳಗಳಲ್ಲಿ ಭೂಮಿಪೂಜೆಯೇನೋ ನಡೆಸಿದರು. ಅವು ಎಲ್ಲೂ ಮಂದಿರಗಳಾಗಿ ವಿಕಾಸಗೊಳ್ಳಲೇ ಇಲ್ಲ. ಬದಲಿಗೆ ಈಗ ಕೆಲವು ಜಿಲ್ಲಾಕೇಂದ್ರಗಳಿಗೆ ‘ಮೇಲಿನಿಂದ’ ಇಳಿದು ಬರಲಿರುವ ರಂಗಶಿಕ್ಷಣ ಕೇಂದ್ರದ ಸುದ್ಧಿ ಹರಡಿದೆ. ಸಹಜವಾಗಿ ಸಿಗದವರು ಹಪಹಪಿಸುವುದೂ ನಡೆದಿದೆ. ಇದು ಸರಿಯಲ್ಲ. ಹೆಗ್ಗೋಡಿನ ಹಳ್ಳಿಮೂಲೆಯಲ್ಲಿ ಶಿವರಾಮ ಕಾರಂತ ರಂಗ ಮಂದಿರ ಐದು ದಶಕಗಳ ಹಿಂದೆ ಬಂದದ್ದು ಅಲ್ಲಿನ ನೆಲದ ಸತ್ತ್ವದಿಂದ. ಜಿಲ್ಲಾ ಕೇಂದ್ರ ಬಿಡಿ, ದೊಡ್ಡ ಪೇಟೆಯ ಸಾಮೀಪ್ಯವೂ ಇಲ್ಲದ ಆ ಹೆಗ್ಗೋಡಿನಲ್ಲಿ ನಾಲ್ಕು ದಶಕಗಳಿಗೂ ಮಿಕ್ಕು ಬೆಳೆದ ಮಹಾವೃಕ್ಷ ನೀನಾಸಂ ನಮಗೆ ಆದರ್ಶವಾಗಬೇಕು. ಮೊದಲೇ ಹೇಳಿದಂತೆ, ನೀನಾಸಂ ಚೇತನದ ಮುಂದುವರಿಕೆಯೇ ಆಗಿರುವ ಜೀವನರಾಮ್, ಸುಳ್ಯದ ಮೂಲೆಯಲ್ಲಿ ಕಟ್ಟಿ, ದಶವರ್ಷಕ್ಕೂ ಮಿಕ್ಕು ಗಟ್ಟಿಯಾಗಿ ನಡೆಸುತ್ತಿರುವ ರಂಗಮನೆ, ಎಲ್ಲರಿಗೆ ನಿಜದ ಪ್ರೇರಕವಾಗಬೇಕು, ಅದು ಇನ್ನಷ್ಟು ಕ್ರಿಯಾಪ್ರಧಾನವಾಗಿ ಬೆಳಗುತ್ತಲಿರಲಿ.
ಇಡೀ ಕಾರ್ಯಕ್ರಮವನ್ನು ಮತ್ತೆ ಕಟ್ಟಿಕೊಟ್ಟ ವಿಶ್ಲೇಷಣೆ.
ಪ್ರೀತಿಯ ಅಶೋಕ ವರ್ಧನ್,ನೀವು ಕಳಿಸಿದ ಎಲ್ಲವನ್ನೂ (ಕೆಲವನ್ನು ಕೂಡಲೇ ಕೆಲವನ್ನು ಆ ಮೇಲೆ) ಓದುತಿದ್ದೇನೆ. ಮೊನ್ನೆ ಸಂಜೀವ ಸುವರ್ಣ ಅವರ ಸನ್ಮಾನ ದಿನದ ಎಲ್ಲ ವಿವರಗಳನ್ನೂ ಎಷ್ಟು ವಿಶದವಾಗಿ ತಿಳಿಸಿದಿರಿ. ಅಲ್ಲಿಗೆ ಮಧ್ಯಾಹ್ನದ ಮೇಲೆ ಹೋದ (ಬೆಳಿಗ್ಗೆ ಬೇರೆ ಕಡೆ ಹೋಗಲೇ ಬೇಕಾಗಿ ಬಂದದ್ದರಿಂದ) ನಾನು ಕೆಲವು ತಪ್ಪಿಹೋದ ಬೇಸರದಲ್ಲಿದ್ದೆ. ನೀವು ಅದನ್ನು ತುಂಬಿ ಕೊಟ್ಟಿರಿ. ಪುರುಷೋತ್ತಮ ಅವರ ಮಾಳದ ಮನೆಗೆ ನಾನೂ ಹೋಗಿದ್ದೆ. ನಿಮ್ಮ ಲೇಖನ ಓದುತ್ತ ಓದುತ್ತ ಇನ್ನೊಮ್ಮೆ ಇನ್ನೂ ಚೆನ್ನಾಗಿ ಹೋಗಿಬಂದ ಹಾಗಾಯ್ತು. ಈಗ ಜೀವನ್ ಮನೆ. ಅಲ್ಲಿಗೂ ನಾನು ಹೋಗಿದ್ದೆ. ಜೀವನ್ ಅಂಥವರು ಒಬ್ಬ ಬಲು ಭಯಂಕರ ಅಪರೂಪ. ಆ ಇಡೀ ಕುಟುಂಬದ ಪ್ರೀತಿ ಮತ್ತು ನಿಷ್ಠೆ ನೋಡಿಯೇ ಮನಸ್ಸು ತುಂಬುತ್ತದೆ. ನೀವು ಹೋದ ಕಡೆಗೆಲ್ಲ ಹೀಗೆ ನಮ್ಮನ್ನೂ ಒಯ್ಯುತ್ತೀರಲ್ಲ. ನಿಮಗೆ ಹೇಗೆ ವಂದನೆ ಹೇಳಲಿ ಎಂದೇ ಯೋಚನೆ ಈಗ. ಹೀಗೇ ನಾವು ನಿಮ್ಮ ಬರಹದ ಮೂಲಕ ನೀವು ಹೋದ ಕಡೆಗೆಲ್ಲಾ ಹೋಗಿ ಬಂದು ಮಾಡುವವರು. ಸಂಭ್ರಮ ನಮಗೆ.