ಕೇರಳ, ಕೊಡಗುಗಳಲ್ಲಿ ಜನ, ಸೊತ್ತುಗಳ ಮೇಲೆ ಮಳೆಗಾಲ ಬೀರಿದ ದುಷ್ಪ್ರಭಾವ ದೊಡ್ಡ ಸುದ್ದಿ ನಿಜ, ಯುದ್ಧಸ್ತರದಲ್ಲಿ ಕೆಲಸವಾಗಬೇಕಾದ್ದೂ ಸರಿ. ಆದರೆ ಇದು ಇಂಥದ್ದೇ ಅನ್ಯ ಪ್ರಾಕೃತಿಕ ಅನಾಹುತಗಳಿಗೊಂದು ತಾರ್ಕಿಕ ಕೊನೆ ಕೊಡದುಳಿಯಲು, ರಕ್ಷಣೆ ಪರಿಹಾರ ಕಾರ್ಯಗಳ ಕುರಿತು, ಮುಖ್ಯವಾಗಿ ಆಡಳಿತ ಮತ್ತು ಮಾಧ್ಯಮಗಳು ಮರೆತುಬಿಡುವುದು ತಪ್ಪು. ಹಾಗಾಗಿಯೇ ನಾನು ‘ಬಿಸಿಲೆ ಕುಸಿತ, ಎತ್ತಿನಹೊಳೆ ಅವಸ್ಥೆ’ ಮೊದಲ ಪ್ರಾಶಸ್ತ್ಯದಲ್ಲಿ ನೋಡಿ ಬಂದೆ, ತಿಳಿದಷ್ಟು ಬರೆದೆ. ಮತ್ತೂ ತಲೆಯಲ್ಲಿ ಕೊರೆಯುತ್ತಲೇ ಉಳಿದಿತ್ತು, ತುಸು ಹಿಂದಿನ ಇನ್ನೊಂದು ಸಮಸ್ಯೆ – ಮೂಸೋಡಿಯದ್ದು.

ಮೂಸೋಡಿ – ಎಲ್ಲಿ, ಏನು: ‘ಪಡ್ಡಾಯಿ’ ಚಿತ್ರೀಕರಣದ ಅಗತ್ಯಕ್ಕೆ ಕಡಲ ಕೊರೆತಕ್ಕೀಡಾದ ಮನೆಗಳನ್ನು ಹುಡುಕಿ ಅಭಯ, ನಾನು ಕಳೆದ ವರ್ಷ ಓಡಾಡಿದ್ದು, ಮೂಸೋಡಿ ಸಿಕ್ಕಿದ್ದು ನಿಮಗೆಲ್ಲ ತಿಳಿದೇ ಇದೆ (ಇಲ್ಲದವರು ಅವಶ್ಯ ಓದಿ : ಕಡಲ ಕಲಕಿನಲ್ಲೆದ್ದ ಅಮೃತದ ಹನಿಗಳು. ಮೂಸೋಡಿಯಲ್ಲಿ ಅಂದು ಉಳಿದಂತೆ ಕಾಣುತ್ತಿದ್ದದ್ದು ಹಮೀದರ ಒಂದೇ ಮನೆ. ಅದೂ ಬಿದ್ದು ಹೋಗುವ ಮುನ್ನ ಸಿಕ್ಕಷ್ಟು ದಕ್ಕಿಸಿಕೊಳ್ಳಲು, ಯಜಮಾನ ಹಮೀದ್ ಹಳೆ ಹಂಚು ಖರೀದಿಯವನ ಬಳಿ ಚೌಕಾಸಿ ನಡೆಸುತ್ತಿದ್ದನ್ನೂ ನಾವು ಕಂಡಿದ್ದೆವು. ಕಳೆದ ಮಳೆಗಾಲಕ್ಕೂ ಮೊದಲೊಮ್ಮೆ ಅತ್ತ ಪುನಃ ಹೋಗಿದ್ದೆ. ಆ ನುಡಿ ಚಿತ್ರವನ್ನು ಅಂದೇ ಫೇಸ್ ಬುಕ್ಕಿನಲ್ಲೂ ಹಂಚಿಕೊಂಡಿದ್ದೆ. ಅದರ ಸಾರಾಂಶ……

ನಾಲ್ಕು ತಿಂಗಳ ಹಿಂದೆ: (ಸೈಕಲ್ ಸರ್ಕೀಟ್ ೪೦೪/೧೪-೫-೧೮) ಸಂಜೆಯ ಮಳೆ, ಇನ್ನೂ ಕಳೆಯದ ಕಾವಳ ನನ್ನನ್ನು ತಂಪಾಗಿಟ್ಟದ್ದಕ್ಕೋ ಏನೋ ಮಂಜೇಶ್ವರದವರೆಗೂ ಅವಿರತ ಸಾಗಿತ್ತು ನನ್ನ (ಸೈಕಲ್) ಚಕ್ರಾಧಿಪತ್ಯ. ಒಣಗುತ್ತಿದ್ದ ಗಂಟಲಿಗೆ ಮೂರು ಮುಕ್ಕಳಿ ನೀರು ಹನಿಸಿ ಮತ್ತೆ ಮುಂದುವರಿಸಿದವನು ಉಪ್ಪಳಕ್ಕೂ ತುಸು ಮೊದಲು ಹೆದ್ದಾರಿ ಬಿಟ್ಟು, ಬಲದ ಕವಲು ಹಿಡಿದೆ. ಅಲ್ಲಿ ಮೂರು-ನಾಲ್ಕು ಕಿಮೀ ಸಪುರ ದಾರಿಗಳಲ್ಲಿ ಸುಳಿದು ನಿಂತದ್ದು ಮೂಸೋಡಿ ಕಡಲ ಕಿನಾರೆಯಲ್ಲಿ. “ಕಳೆದ ತಿಂಗಳು ಬಂದ ಉಬ್ಬರದ ಅಲೆಗಳು, ಈಗ ಬರುತ್ತಿರುವ ಅಕಾಲಿಕ ಮಳೆಗಳಲ್ಲಿ ಹಮೀದ್ ಮನೆ ಏನಾಗಿರಬಹುದು” ಎಂದು ಉದ್ದಕ್ಕೂ ಕಾಡಿದ ಪ್ರಶ್ನೆಗೆ, ಸಮಾಧಾನ ಪ್ರತ್ಯಕ್ಷವಾಗಿತ್ತು.

ಆಶ್ಚರ್ಯಕರವಾಗಿ ಹಮೀದ್ ಮನೆ ಉಳಿದಿತ್ತು. “ಎಲ್ಲವನ್ನೂ ನುಂಗಿಬಿಡುತ್ತೇನೆ” ಎಂಬಂತೆ ಅಪ್ಪಳಿಸುತ್ತಿದ್ದ ಅಲೆಗಳು ದೂರಾಗಿದ್ದವು. ಅಂದು ರಕ್ಷಣೆಗಾಗಿ ಒಳನಾಡಿಗೆಲ್ಲೋ ವಲಸೆಹೋಗಿದ್ದ ಆತನ ಹೆಂಡತಿ ಮಕ್ಕಳು ಮರಳಿದ್ದರು. ಅಂದು ಅನಿವಾರ್ಯತೆಯಲ್ಲಿ ಮನೆ ಕಳಚುವ ಅಂದಾಜು ಹಾಕಿದ್ದ ಯೋಚನೆಯನ್ನೇ ಆ ಕುಟುಂಬ ಕಳಚಿಕೊಂಡಂತಿತ್ತು. ವಠಾರದಲ್ಲಿ ಕೊರೆತಕ್ಕೆ ಒಳಗಾಗಿ ಉಳಿದ ಬೇರೊಂದು ರಚನೆಯ ಮೋಟುಗೋಡೆ ಮಳೆಗೆ ಶಿಥಿಲಗೊಳ್ಳದಂತೆ ಹಾಕಿದ್ದರು. ಎದುರು ಅಂಗಳದಲ್ಲಿ ನಾಲ್ಕು ಕಂಬ ಊರಿ, ದನ ಕಟ್ಟಲು ತತ್ಕಾಲೀನ ಕೊಟ್ಟಿಗೆ ವ್ಯವಸ್ಥೆ ನಡೆದಿತ್ತು. ಗೃಹಿಣಿ ಮತ್ತು ಮೂರು ಮಕ್ಕಳ ಕಲರವದಲ್ಲಿ, ಒಣಗಲು ಹರಗಿದ ಬಟ್ಟೆಸಾಲಿನಲ್ಲಿ, ಇನ್ನೇನೋ ತತ್ಕಾಲೀನ ರಚನೆಗಳಲ್ಲಿ ಪೂರ್ಣ ಜೀವವಾಡುತ್ತಿತ್ತು. ಯಜಮಾನ ಹೊರಗೆಲ್ಲೋ ಹೋಗಿದ್ದರು. ಯಜಮಾನ್ತಿ ಅತಿಥಿ ಸತ್ಕಾರದಲ್ಲಿ ತಾನು ಕಡಿಮೆಯಲ್ಲ ಎಂಬಂತೆ “ಚಾಯ್ ಮಾಡ್ತೇನೆ….” ಎಂದು ವಿಚಾರಿಸಿದ್ದೇ ನನಗೆ ಸಮ್ಮಾನವಾಯ್ತು. ನಾನು ಆ ಸಂತ್ರಸ್ತರಿಗೆ ಹೊರೆಯಾಗಬಾರದೆಂದು ನಯವಾಗಿ ನಿರಾಕರಿಸಿದೆ.

ಹಮೀದ್ ಮನೆಯ ಹಿತ್ತಿಲಿನಿಂದ ಸುಮಾರು ನೂರಡಿ ಆಚೆ ಕಡಲು ಭೋರ್ಗರೆದಿತ್ತು. ಸ್ಥಳೀಯ ಆಡಳಿತದ ಎರಡು ಹಿತಾಚಿಗಳು ಕೊರೆತದಲ್ಲಿ ಮೂಡಿದ್ದ ತಗ್ಗಿಗೆ ಮರಳೆಳೆದು ಮೊದಲಿನೆತ್ತರಕ್ಕೂ ಬಿತ್ತರಕ್ಕೂ ದಂಡೆ ಮಾಡಿಕೊಂಡಿತ್ತು. ಆ ಮರಳ ಹಾಸಿನ ಅಂಚಿಗೂ ಮತ್ತೆ ಅದರ ಉದ್ದಕ್ಕೂ ಲಾರಿಯೋಡುವ ಅಗಲಕ್ಕೆ ಕೆಮ್ಮಣ್ಣು, ಕಲ್ಲಚೂರು ಹಾಕಿ ಗಟ್ಟಿದಾರಿ ಮಾಡಿಕೊಂಡಿದ್ದರು. ಅದರ ಮೇಲೆ ಅಸಂಖ್ಯ ಲಾರಿ ಹೊರೆಯಲ್ಲಿ, ಭಾರೀ ಬಂಡೆ ತುಣುಕುಗಳನ್ನು ತರಿಸಿ ಅಲೆಗಳ ಮುಖಕ್ಕೆ ಒಡ್ಡಿದ್ದರು. ಮುಂದುವರಿದು ದುರುದುಂಡಿಗಳು (ಹಿತಾಚಿಗಳು) ತತ್ಕಾಲೀನ ಗೋಡೆಯ ಕಲ್ಲುಗಳನ್ನು ಮಂಜೇಶ್ವರ ಹೊಸ ಮೀನುಗಾರಿಕಾ ಬಂದರ್ ಕಟ್ಟೆಯವರೆಗೂ ಬಿಗಿಗೊಳಿಸುವ ಕೆಲಸ ನಡೆಸಿತ್ತು.

ನಾನು ಕಚ್ಚಾದಾರಿಯಲ್ಲಿ ಸಣ್ಣ ಸವಾರಿ ಮಾಡಿ, ‘ಕಲ್ಲು ಹೊಲಿಯುವ’ ಕ್ರಿಯೆ ನೋಡಿದೆ. ಕಡಲ ಲೆಕ್ಕಕ್ಕದು ಶಾಂತ ದಿನಗಳು. ಆದರೂ ಇಟ್ಟ ಪ್ರತಿ ಕಲ್ಲನ್ನು ಅಲೆಗಳು ಅಲುಗಾಡಿಸುತ್ತಲೇ ಇದ್ದವು. ಇನ್ನು ಮೂರು ನಾಲ್ಕು ವಾರಗಳಲ್ಲೇ ಪೂರ್ಣ ದಂಡೆತ್ತಿ ಬರುವ ಮಳೆಗಾಲಕ್ಕೆ ಇದು ಸಾಕೇ? ಸಾವಿರದ ಲೆಕ್ಕದ ಬಂಡೆ ತುಣುಕುಗಳು (ನಿಜ ಲೆಕ್ಕದಲ್ಲಿ ಕೆಲವು ನೂರುಗಳೇ ಇದ್ದರೆ ಆಶ್ಚರ್ಯವಿಲ್ಲ), ದಿನಗಟ್ಟಳೆ ಓಡಿದ ಲಾರಿ, ದುರುದುಂಡಿಗಳ ಶ್ರಮ ಅಕ್ಷರಶಃ ನೀರ ಮೇಲೆ ಮಾಡಿದ ಹೋಮವಾಗದಿರದು. ನಿಜದಲ್ಲಿ ಮಂಜೇಶ್ವರದ ಹೊಸ ಮೀನುಗಾರಿಕಾ ಬಂದರಿನ ಅಪರಿಪೂರ್ಣ ಯೋಜನಾನುಷ್ಠಾನ ತಂದ ಅನಿಷ್ಠ – ಈ ಕಡಲಕೊರೆತ. ಇದರ ಪೂರ್ಣ ಆಯಾಮ ಮೂಸೋಡಿಯ ಬಡವರಿಗೆ ತಿಳಿದಿರಲಾರದು. ಹಾಗಾಗಿ ಮರಳಿ ಕಡಲ ಕೊರೆತ ವಕ್ಕರಿಸಿದಾಗ, ರಾಜಕೀಯ ಪಕ್ಷಗಳು ಮತಬಿಕ್ಷೆಗಿಳಿದಾಗ ಸರಕಾರ ಪಾವತಿಸಿದ ಬಿಲ್ಲಿನ ಮೊತ್ತವೇ ‘ಕಾಳಜಿ ಪ್ರಮಾಣಪತ್ರ’ದ ಸ್ಥಾನ ಗಿಟ್ಟಿಸೀತು. “ಪಾಪ ಸರ್ಕಾರ/ಪಕ್ಷ ಬಂದೋಬಸ್ತು ಮಾಡಿದರೂ ದೇವರು ಒಪ್ಪಲಿಲ್ಲ, ನಮ್ಮ ಅದೃಷ್ಟ ಖೊಟ್ಟಿ……” ಎಂದಿತ್ಯಾದಿ ಬಡಪಾಯಿಗಳು ದುಃಖವನ್ನು, ನಷ್ಟವನ್ನು ನುಂಗಿಕೊಳ್ಳುವ ಸ್ಥಿತಿ ನೆನೆಯುತ್ತಲೇ ವಾಪಾಸಾಗಿದ್ದೆ. ಆದರೆ ಈ ಸಲ……..

ನಿನ್ನೆ ಮೊನ್ನೆ ಕಂಡಂತೆ: ಮಳೆಯಿಲ್ಲದ ಸಂಜೆ (೭-೯-೧೮) ಮೋಟಾರ್ ಸೈಕಲ್ಲಿನಲ್ಲಿ ನಾನು, ದೇವಕಿಯೂ ಮೂಸೋಡಿಗೆ ಹೋಗಿದ್ದೆವು. ನನ್ನ ಆಶ್ಚರ್ಯ ಇಮ್ಮಡಿಸುವಂತೆ ಹಮೀದ್ ಮನೆ ಕಳೆಗಟ್ಟಿತ್ತು. ಹಿತ್ತಿಲಿನ ತುಸು ಅಂತರದಲ್ಲಿ ಬೇರೊಂದು ತತ್ಕಾಲೀನ ಕೊಟ್ಟಿಗೆಯಾಗಿತ್ತು. ಮನೆ ಹಿಂದಿನಂತೇ ಸುಭದ್ರವಾಗಿಯೇ ಇತ್ತು. ಕಡಲ ಕೊರೆತದ ಅವಶೇಷವಾಗುಳಿದಿದ್ದ ಮೋಟುಗೋಡೆಗೇ ಹಿಂದೆ ಮುಂದೆ ಹಂಚಿನ ಮಾಡು ಹೊಂದಿಸಿ, ಸಿಲ್ಪಾಲೀನ್ ಶೀಟ್ ಸುತ್ತಿ ಒಂದು ಅಂಗಡಿಯನ್ನೇ ತೆರೆದಿದ್ದರು! ಹಿಂದೆ ಕನಿಷ್ಠ ನಲ್ವತ್ತೈವತ್ತು ಮನೆ, ಅಂಗಡಿಗಳಿದ್ದ ಆ ವಠಾರಕ್ಕಿಂದು ಉಳಿದಿರುವ ಒಂದೇ ಮನೆಯ ಈ ಅಂಗಡಿ ಯಾರಿಗೆ? ‘ಹಾಳೂರು’ ನೋಡಲು, ಹಾಗೇ ಬೀಚ್ ವಿಹರಿಸಲು ಬರುವ ಜನರ ಚಪಲದ ಚಾಕಲೇಟು, ಕುರ್ಕುರೆ, ಗುಟ್ಕಾ ಚೀಟಿ, ಬೀಡಿ, ಸಿಗರೇಟ್, ಮಿನರಲ್ ವಾಟರ್, ಜೂಸ್….. ನಾಲ್ಕು ಕಾಸು ಕೊಡದೇ? ಮೀನುಗಾರಿಕಾ ಬಂದರ್ ಕಾರ್ಯಾಚರಣೆಗಿಳಿದ ಕಾಲದಲ್ಲಿ ಈ ಮಗ್ಗುಲಿಗೆ ಬಂದ ಜನಕ್ಕೆಲ್ಲ ಇದೊಂದೇ ಅಂಗಡಿಯಾಗದೇ!

ಮನೆಯಂಗಡಿಯಿಂದ ಹತ್ತಿಪ್ಪತ್ತು ಮೀಟರ್ ದೂರದಲ್ಲಿ ಕಡಲ ಕೊರೆತದಿಂದ ಒಮ್ಮೆಗೇ ಮುಗಿದಂತಿರುವ ಹಳೇ ಡಾಮರ್ ದಾರಿಯಲ್ಲಿ ಎರಡು ಕಾರು, ಒಂದು ಸ್ಕೂಟರ್ ಆಗಲೇ ಅಲ್ಲಿತ್ತು. ಮನೆ ವಠಾರದಲ್ಲಿ ಏನೋ ಕೆಲಸದಲ್ಲಿದ್ದ ಹಮೀದ್ ದೂರದಿಂದಲೇ ನನ್ನನ್ನು ಗುರುತಿಸಿ, ಕೈ ಬೀಸಿ ನಮಸ್ಕಾರ ಕೊಟ್ಟರು. ಬೈಕನ್ನು ಗಟ್ಟಿ ನೆಲದಲ್ಲೇ ಬಿಟ್ಟು, ಕುಶಲ ವಿಚಾರಿಸಲು ಅತ್ತ ಹೋದೆ. ಆತ ಹಸ್ತ ಲಾಘವ ಕೊಟ್ಟು, ಸ್ವಾಗತಿಸಿ, “ಬಾಯಾರಿಕೆಗೆ ಎರಡು ಸೋಡಾ ಕೊಡಲೇ” ಎಂದಾಗ ಅಲ್ಲಿ ಆತ್ಮೀಯತೆಯನ್ನಷ್ಟೇ ಕಂಡೆ; ವ್ಯಾಪಾರಿಯನ್ನಲ್ಲ!

ಮಂಜೇಶ್ವರ ಹಳೆ ಬಂದರಿನ ಒಂದು ನೋಟ

ಕಡಲ ಅಬ್ಬರ ಎಂದಿನಂತೇ ಇತ್ತು. ರಕ್ಷಣಾ ಕಾಮಗಾರಿ ಬರ್ಖಾಸ್ತುಗೊಂಡು, ಯಂತ್ರಗಳೆಲ್ಲ ಪರಾರಿಯಾಗಿ (ಅಲ್ಲಾ ಕಡಲ ತಳದಲ್ಲಿ ವಿಶ್ರಮಿಸ ಹೋಗಿ?) ಕೆಲಕಾಲವಾದಂತಿತ್ತು. ನಾನು ಅಂದಾಜಿಸಿದ್ದಂತೇ ಹಿಂದೆ ಕಟ್ಟುತ್ತಿದ್ದ ಭಾರೀ ಕೊರೆತ ತಡೆ ವ್ಯವಸ್ಥೆ ಅಲ್ಲಲ್ಲಿ ಭಗ್ನಗೊಂಡಿತ್ತು, ಕುಸಿದು ಕುಳಿತಿತ್ತು. ಮಳೆಗಾಲದ ಉತ್ಕರ್ಷದಲ್ಲಿ ಗೋಡೆಯನ್ನು ನಗಣ್ಯ ಮಾಡಿ ಹಾರಿದ ಅಲೆಗಳು, ಕೆಲವೆಡೆ ಗೋಡೆಯನ್ನು ಪೂರ್ಣ ಕಳಚಿಯೇ ನುಗ್ಗಿದ ಭಾರೀ ಸುಳಿಗೈಗಳು ಗೋಡೆಯ ಹಿಂದೆ ಉದ್ದಕ್ಕೂ ಕಂದಕವನ್ನೇ ಮಾಡಿ ಹೋಗಿದ್ದವು. ಆ ಅಲೆಗಳು ವಿವಿಧ ಕಾಲಘಟ್ಟಗಳಲ್ಲಿ ತಲಪಿದ ಎತ್ತರಗಳಿಗೆ, ನಾವೇ ಕಡಲಿಗೆ ಕೊಟ್ಟ ಕೊಳಕುಗಳನ್ನು ನಿಶಾನಿಯಂತೆ ಉಳಿಸಿ ಹೋದದ್ದು ನಾಗರಿಕತೆಯನ್ನು ಅಣಕಿಸುತ್ತಿತ್ತು. ರಕ್ಷಣಾ ಕಾಮಗಾರಿಗೆ ಮಾಡಿಕೊಂಡಿದ್ದ ಕಚ್ಚಾರಸ್ತೆಯ ಯಾವ ಕುರುಹೂ ಉಳಿದಿರಲಿಲ್ಲ! ಹಮೀದ್ ಮನೆಯ ಹಿತ್ತಲಿನಲ್ಲಿ ಸುಮಾರು ಮೂವತ್ತಡಿ ಹರಹನ್ನಷ್ಟೇ ಉಳಿಸಿ, ಸುಮಾರು ಆರಡಿ ಆಳದವರೆಗೂ ಮರಳನ್ನು ತೊಳೆದು ಕಳೆದಿತ್ತು. ದಿನದ ವಿರಾಮಕ್ಕೆ ಜಾರುತ್ತಿದ್ದ ಸೂರ್ಯನನ್ನು ಕರಿಮೋಡಗಳು ಮುತ್ತಿ ಕಾವಳ ಪಸರಿಸಿತ್ತು. ಆದರೂ ಎಲ್ಲೋ ಒಂದು ಕಂಡಿಯಲ್ಲಿ ಅಷ್ಟು ಬೆಳಕೋಲುಗಳು ಸಾಗರದ ಗೊಂದಲದ ಮೇಲೆ ಆಡುತ್ತಿದ್ದವು. ಭವ್ಯ ಭವಿಷ್ಯ!! : ಕಾರಿನಲ್ಲಿ ಬಂದಿಳಿದ ಒಂದು ಪುಟ್ಟ ಸಂಸಾರ ಕಡಲ ಅನಾಹುತದ ಅವಶೇಷಗಳನ್ನು ವಿಶೇಷ ಗಮನಿಸದೇ ಸ್ವಂತೀ, ಚೆಂಡು, ಅಲೆಯಂಚಿನಲ್ಲಿ ನೀರಾಟಕ್ಕಿಳಿದಿತ್ತು. ಹಮೀದ್‍ಗೆ ಗಿರಾಕಿಯೂ ಆಗಬಹುದು. ಬೈಕಿನಲ್ಲಿ ಬಂದಿದ್ದ ಗಾಳಿಗನೊಬ್ಬ, ಎಡಕ್ಕೆ ಉಳಿದಿದ್ದ ಕಲ್ಲ ಗುಪ್ಪೆಯ ಮೇಲೆ ನಿಂತು, ರಾತ್ರಿಯ ಊಟಕ್ಕೆ ಎಷ್ಟು ಮೀನು ಸಿಕ್ಕೀತು ಎಂದು ತಪಸ್ಸು ನಡೆಸಿದ್ದ. ಉತ್ತರಕ್ಕೆ ಸುದೂರದಲ್ಲಿ ಹೊಸ ಬಂದರುಗಟ್ಟೆಯ ಕೆಲಸ ಪ್ರಗತಿಪಥದಲ್ಲಿತ್ತು. ಭದ್ರ ಕಲ್ಲಕೋಟೆಯಲ್ಲಿ ಹರಾಜು ಕೊಟ್ಟಿಗೆಗಳು. ದಾಸ್ತಾನು ಕೋಠಿಗಳು, ಆಡಳಿತ ಕಟ್ಟಡಗಳು ಇನ್ನೇನು ಸುಣ್ಣ ಬಣ್ಣ ಕಾಣುವ ಸ್ಥಿತಿಗೆ ಬಂದಿದ್ದವು. ಬಹುಶಃ ಹಮೀದ್, ಮುಂದೆ ಅಲ್ಲಿ ತನ್ನ ಮೀನು ತುಂಬಿದ ದೋಣಿಯನ್ನು ತಂಗಿಸುವ ಕನಸ್ಸು ಕಾಣುತ್ತಿರಬಹುದು. ಅದೇ ವೇಳೆಯಲ್ಲಿ ಇತ್ತ ಆತನ ಹೆಂಡತಿ ಮನೆಯಂಗಡಿಯಲ್ಲಿ ಬಿಜಿನೆಸ್ ಹೆಚ್ಚಿ, ಸದ್ಯ ಉಳಿದಿರುವ ಮೋಟು ಗೋಡೆ ಅಳಿಸಿ, ಹೊಸದೇ ಮಳಿಗೆ ಸೇರಿಕೊಳ್ಳುವ ಕನಸ್ಸಿನಲ್ಲೂ ಇರಬಹುದು. ನನ್ನಲ್ಲಿ ಹಮೀದ್ ಹರಕು ಮುರುಕು ಕನ್ನಡದಲ್ಲಿ ಹೇಳಿದ್ದಾದರೂ ಏನು? “ಮಳೆಗಾಲದ ಇಡುಕ್ಕಿ ಅವಾಂತರದಲ್ಲಿ ಸರಕಾರ ಪಾಪ ಮಂಜೇಶ್ವರ ಹಳೆ ಬಂದರಿನ ಒಂದು ನೋಟ ಬಿಝಿ ಇರಬೇಕು!” ಪುಡಾರಿಗಳು ಉಪದೇಶಿಸುವ ದೇಶಭಕ್ತಿಯಾದರೂ ಇದೇ ಅಲ್ಲವೇ – ಊರಿಗಾಗಿ (ಇನ್ನೊಬ್ಬರ?) ಸಂಸಾರ ಮರೆಯಬೇಕು.

ಮುಂದಿನ ಕಡಲ ಉತ್ಕರ್ಷದಲ್ಲಿ ಹಮೀದ್ ಕುಟುಂಬದ ಕನಸುಗಳು ಉಳಿದಾವೇ? ನಾವು ಮಳೆ ಮತ್ತು ಕತ್ತಲಾವರಿಸುವ ಮುನ್ನ ಮಂಗಳೂರ ಹೃದಯದಲ್ಲಿರುವ ನಮ್ಮ ಮನೆಗೆ ಮರಳಿದೆವು.