(ಬನ್ನಿ, ಬಲ್ಲಾಳರಾಯನ ದುರ್ಗಕ್ಕೆ ಭಾಗ ೪)
ಲೇಖಕ – ತಿಲಕನಾಥ ಮಂಜೇಶ್ವರ

[ಮಂಗಳೂರಿನಲ್ಲಿ ಕನ್ನಡದ ಕಹಳೆಯನ್ನು ಸಾರ್ವಜನಿಕಕ್ಕೆ ಊದಿದವರು ಮಂಗಳಗಂಗೋತ್ರಿಯ ಸ್ಥಾಪಕಾಚಾರ್ಯ, ಸಾಹಿತಿ ಎಸ್.ವಿ. ಪರಮೇಶ್ವರ ಭಟ್. ಅವರ ಬಹುಮುಖೀ ಸಾಧನೆಯ ಒಂದು ಎಳೆ – ಮನೆಮನೆಗೆ ಸರಸ್ವತಿಯನ್ನು ಗಟ್ಟಿಯಾಗಿ ಹಿಡಿದು ನಡೆಸುವುದರಲ್ಲಿ ಮುಂಚೂಣಿಯ ಪಟು ಭಟನಾಗಿ ನನ್ನ ಪರಿಚಯಕ್ಕೆ ಸಿಕ್ಕವರು ತಿಲಕನಾಥ ಮಂಜೇಶ್ವರ. ತನ್ನ ಕಾಳಜಿ ಎಲ್ಲಿ ವ್ಯಕ್ತಿಪ್ರತಿಷ್ಠೆಯ ಸಂಕೇತವಾಗಿ ಕಾಣುತ್ತದೋ ಎಂಬಂತೆ ತಿಲಕನಾಥ್ ಕಟ್ಟಿ ಬೆಳೆಸಿದ ಸಂಸ್ಥೆ ಭಾವ ಗಂಗೋತ್ರಿ. ಇದು ಮಂಗಳೂರು ವಲಯದ ಸಾಹಿತ್ಯಿಕ ಚಟುವಟಿಕೆಗಳನ್ನು ತಿಲಕನಾಥರ ಹೆಸರೇ ಹೇಳುವಂತೆ, ಅವರ ಅಭಿಮಾನದ ನೆಲೆ ಮಂಜೇಶ್ವರದವರೆಗೂ ವ್ಯಾಪಿಸುವಂತೆ ಮಾಡಿತ್ತು. ಮಂಜೇಶ್ವರದ ಧೀಶಕ್ತಿಯ ಸಂಕೇತವಾದ ಗೋವಿಂದ ಪೈಗಳ ಹೆಸರಿನಲ್ಲಿ ಗ್ರಂಥಾಲಯವನ್ನು ಕಟ್ಟುವ ಮೂಲಕ ಇಂದಿನ ಕಾಲೇಜು ಮತ್ತೊಂದಕ್ಕೆ ಮೂಲ ಪ್ರೇರಣೆಯನ್ನು ಕೊಟ್ಟವರು ತಿಲಕನಾಥ್. ಇವರ ಸಾಹಿತ್ಯಪ್ರೇಮ ಸಿನಿಮಾಕ್ಕೂ ವ್ಯಾಪಿಸಿದಾಗ ಮಂಗಳ ಫಿಲಂ ಸೊಸಾಯಿಟಿಯನ್ನೂ ಮಂಗಳೂರು ಕಂಡಿತ್ತು. ತಿಲಕನಾಥ್ ಉದ್ದಕ್ಕೂ ತಾನು ಕನ್ನಡದ ಸೇವಕ ಹೌದು, ಜಿಗಣೆಯಲ್ಲ ಎಂಬುದನ್ನು ತಮ್ಮ ಸಾಂಸ್ಥಿಕ ವ್ಯವಸ್ಥೆಗಳಲ್ಲಿ ತೋರಿಕೊಟ್ಟರು. ಅವೆಲ್ಲವೂ ಅನುದಾನ ಶೋಷಕಗಳಾಗಿ ಪ್ರಸಿದ್ಧವಾಗಲಿಲ್ಲ, ಭಾವಪೋಷಕವಾಗಿಯೇ ವಿಕಸಿಸಿದ್ದವು. ಈ ಪ್ರಾಮಾಣಿಕತೆಗೆ ಹೆಚ್ಚಿನ ಬೆಲೆ ಬರಬೇಕಿದ್ದರೆ ಸ್ವಂತ ಬದುಕಿಗೊಂದು ಗಟ್ಟಿ ವೃತ್ತಿಯ ನೆಲೆ ತಿಲಕನಾಥರಿಗೆ ಅವಶ್ಯವಿತ್ತು. ಹಾಗೆ ವೃತ್ತಿ ಭದ್ರತೆಯೊಡನೆ ಸಾಹಿತ್ಯಪ್ರೇಮಕ್ಕೆ ಇಂಬು ಎಂಬಂತೆ ಇವರು ತರಂಗ ವಾರಪತ್ರಿಕೆಯ ಸಂಪಾದಕೀಯ ಬಳಗಕ್ಕೇ ಸೇರಿಕೊಂಡರು. ಕುಟುಂಬ ಮಾಲಕತ್ವದ ಸಂಸ್ಥೆಯಲ್ಲಿ ಹೊರಗಿನವರಾಗಿ ತಲಪಬಹುದಾದ ಗರಿಷ್ಠ ಎತ್ತರ, ಗೌರವವನ್ನು ಕಂಡ ತಿಲಕನಾಥರು ಇಂದು ನಿವೃತ್ತ ಜೀವನವನ್ನು ಉಡುಪಿ ವಲಯದಲ್ಲೇ ಚೆನ್ನಾಗಿಯೇ ನಡೆಸಿದ್ದಾರೆ. ಅವರು ಆರೋಹಣದ ಬಲ್ಲಾಳರಾಯನ ದುರ್ಗದ ಸಾಹಸ ಯಾತ್ರೆಯಲ್ಲಿ ಭಾಗವಹಿಸಿದ್ದಲ್ಲದೆ, ಅಷ್ಟೇ ಉತ್ಸಾಹದಲ್ಲಿ ಅನುಭವ ಕಥನವನ್ನೂ ತಮ್ಮ ‘ತರಂಗ’ದ ೬-೩-೧೯೮೩ರ ಸಂಚಿಕೆಯಲ್ಲಿ ಪ್ರಕಟಿಸಿದ್ದರು. ಅದನ್ನು ಬಲ್ಲಾಳರಾಯನ ದುರ್ಗದ ಮಾಲಿಕೆಯ ಎರಡನೆಯ ಕಂತಾಗಿ ಬಳಸಿಕೊಳ್ಳಲು ನಾನು ಸಂತೋಷಿಸುತ್ತೇನೆ – ಅಶೋಕವರ್ಧನ]

ಮಧ್ಯರಾತ್ರಿ ಹನ್ನೆರಡರ ಸಮಯ, ಮೈ ಕೊರೆಯುವ ಚಳಿ, ಎದುರಲ್ಲಿ ಕೆನ್ನಾಲಗೆ ಚಾಚಿಕೊಂಡು ಲಾಸ್ಯವಾಡುವ ಬೆಂಕಿ, ಸುತ್ತಮುತ್ತ ನಿದ್ರಿಸುತ್ತಿರುವಂತೇ ಕಾಣುವ ಶಿಬಿರಾರ್ಥಿಗಳು. ಮೇಲೆ ಬಾನಲ್ಲಿ ಹುಣ್ಣಿಮೆಗೆ ಮುಂಚಿತ ದಿನಗಳ ಪ್ರವರ್ಧಮಾನ ಚಂದ್ರ. ಪಕ್ಕದಲ್ಲಿ ಬಂಡೆಯ ಮೇಲೆ ಹರಿಯುತ್ತಿರುವ ತೊರೆಯ ಜುಳು ಜುಳು ನಿನಾದ. ಬಾನೆತ್ತರಕ್ಕೆ ಏಣಿ ಇಟ್ಟಂತೆ ಬೆಳೆದು ನಿಂತ ವೃಕ್ಷರಾಜಿಗಳು, ಪೂರ್ವ ದಿಕ್ಕಿಗೆ – ಅದರಡಿಯಲ್ಲಿ ದೈತ್ಯಾಕಾರದ ಬಂಡೆಗಲ್ಲುಗಳು. ಬಂಡೆಗಲ್ಲಿನಡಿ ಮೊರೆಹೋದ ಹೆಪ್ಪುಗತ್ತಲು. ದಕ್ಷಿಣಕ್ಕೆ ಮತ್ತು ಉತ್ತರಕ್ಕೆ ತಾಣವನ್ನು ಮರೆಮಾಡುವಂತಹ ಗುಡ್ಡಗಳು. ಪಶ್ಚಿಮಕ್ಕೆ ಬಂಡಾಜೆ ಅರ್ಬಿಯ ಹೃದಯಂಗಮ ನೋಟದ ಪ್ರಾರಂಭದ ತಾಣ. ಚಂದ್ರನ ಬೆಳದಿಂಗಳಿಗೆ ಪ್ರತಿಫಲಿಸುತ್ತ ಧುಮುಕುವ ತೊರೆ, ಹೊಳೆಯುವ ಸಿಂಪಡಿಕೆಯಾಗಿ ಭೂತಳದಲ್ಲಿ ಕಣ್ಮರೆಯಾಗುವ ದೃಶ್ಯ.

ಬರಿಗೈಯಲ್ಲಿ ಕಾಲುಗಂಟೆಗೊಮ್ಮೆ ಪಹರೆ ನಡೆಸುವ ಆ ತಾಣದಲ್ಲಿ ಅಪಾಯ ಅಸಂಭವನೀಯವೇನೂ ಅಲ್ಲ. ಎರಗುವ ಕಾಡುಪ್ರಾಣಿಗಳ ಜಾಡು ತಿಳಿಯುವ ಅವಕಾಶವೇ ಇರಲಿಲ್ಲ. ಕಾರಣ ಅಲ್ಲಿ ಹರಿಯುವ ತೊರೆಯ ಕಲರವ. ಆ ಜಾಗದ, ಸಮಯದ ಗಂಭೀರತೆಯನ್ನು, ಭಯವನ್ನು ಆ ಶಬ್ದ ಹೆಚ್ಚಿಸಿತ್ತು. ಕಾಡು ಪ್ರಾಣಿಗಳಿಂದ ನಮಗೆ ರಕ್ಷಿಸಿಕೊಳ್ಳಲು ಇದ್ದ ಆಯುಧಗಳು – ಉರಿಯುತ್ತಿರುವ ಬೆಂಕಿ ಮತ್ತು ನಲವತ್ತಾರು ಬಾಯಿ ಮಾಡಬಹುದಾದ ಬೊಬ್ಬೆ ಮಾತ್ರ! ಇಂತಹ ರುದ್ರ-ಸುಂದರ ತಾಣದಲ್ಲಿ ಮಧ್ಯ ರಾತ್ರಿಯ ವೇಳೆಯಲ್ಲಿ ನನ್ನ ಮತ್ತು ಇತರ ನಾಲ್ವರು ಮಿತ್ರರ ಸರದಿ ಪ್ರಕಾರದ ಕಾವಲು. ಸಂದರ್ಭ – ಆರೋಹಣದ ‘ಬಲ್ಲಾಳರಾಯನ ದುರ್ಗಕ್ಕೆ ಬನ್ನಿ’ ಕಾರ್ಯಕ್ರಮ.

ದುರ್ಗಮ ದುರ್ಗ

ಪಶ್ಚಿಮ ಘಟ್ಟದ ಬೆಟ್ಟಗಳ ಸರಮಾಲೆಯಲ್ಲಿ ಚಾರ್ಮಾಡಿ ವಿಭಾಗದಲ್ಲಿದೆ ಈ ಬಲ್ಲಾಳರಾಯನ ದುರ್ಗ. ಬೆಳ್ತಂಗಡಿ ಮುಂಡಾಜೆ ದಾರಿಯಾಗಿ, ಬೆಳ್ತಂಗಡಿಯಿಂದ ಸುಮಾರು ೧೫ ಮೈಲಿ ದೂರದ ಊರು ಕಿಲ್ಲೂರು-ಕುಕ್ಕಾವು (ಸ.ಮ.ಸುಮಾರು ೫೦೦ ಅಡಿ). ಇದು ಬಲ್ಲಾಳರಾಯನದುರ್ಗದ ಪರ್ವತ ಶ್ರೇಣಿಯ ಬುಡ. ಸಮುದ್ರ ಮಟ್ಟದಿಂದ ಸುಮಾರು ೪೯೪೦ ಅಡಿ ಎತ್ತರದಲ್ಲಿದೆ ದುರ್ಗ. ಕಿಲ್ಲೂರಿನಿಂದ ಏರಲಿರುವ ಎತ್ತರ ಸುಮಾರು ೪೬೦೦ ಅಡಿಗಳು. ಬಲ್ಲಾಳರಾಯನ ದುರ್ಗವಿರುವ ಶಿಖರ ಉತ್ತರ-ದಕ್ಷಿಣವಾಗಿ ಎರಡು ಮೈಲಿ, ಪೂರ್ವ-ಪಶ್ಚಿಮವಾಗಿ ಒಂದು ಮೈಲಿ ಪ್ರದೇಶ. ಕಣ್ಣೆತ್ತುವವರೆಗೂ ಕಾಣಿಸುವಂತಹ ಎತ್ತರದ ವಿಸ್ತಾರವಾದ ತಾಣ. ಚಿಕ್ಕದೊಂದು ಕೋಟೆಯ ನಾಲ್ಕು ಬದಿಗಳ ಗೋಡೆಗಳು ಅಳಿದುಳಿದು ನಿಂತಿವೆ. ಹೊರವಲಯದಲ್ಲೊಂದು ಗೋಡೆ ಉತ್ತರ ದಿಕ್ಕಿನಿಂದ ಹಾದು ಪೂರ್ವದಲ್ಲೆಲ್ಲೋ ಸರಿದು ಮುಂದೆ ಕಾಣದಾಗುತ್ತದೆ! ಬಹುಶಃ ಸಂಪೂರ್ಣ ನಾಶ ಹೊಂದಿರಬೇಕು.

ಗುಡ್ಡ ಗುಡ್ಡಗಳ ನಡುವಿನ ಕಣಿವೆಯಲ್ಲಿ ದಟ್ಟ ಮರಮಟ್ಟುಗಳು, ಉಳಿದೆಡೆಗಳಲ್ಲೆಲ್ಲಾ ಮೊಣಕಾಲೆತ್ತರ, ಸೊಂಟದೆತ್ತರ ಬೆಳೆದು ನಿಂತ ಹುಲ್ಲು. ಒಳಗೆ ಎಡವಿ ಬೀಳಬಹುದಾದಂತಹ ಕಲ್ಲುಗಳು. ಕಣಿವೆಗಳಲ್ಲಿ ಹರಿವ ನೀರು ಒಂದಾಗಿ ಬಂಡಾಜೆ ಹೊಳೆಯಾಯ್ತು. ಆ ಹೊಳೆ ಬಂಡೆಯ ಅಂಚಿನಿಂದ ಕೆಳಗೆ ನೆಗೆದಾಗ ಬಂಡಾಜೆ ಅರ್ಬಿ. ಇದು ದುರ್ಗದಿಂದ ಕೆಳಗಡೆ ಸುಮಾರು ಒಂದೂವರೆ ಮೈಲಿ ದೂರದಲ್ಲಿದೆ. ಬಂಡಾಜೆ ಅರ್ಬಿಯ ನೆತ್ತಿ ಸ.ಮದಿಂದ ಸುಮಾರು ೪೦೦೦ ಅಡಿ ಎತ್ತರದಲ್ಲಿದ್ದು, ಅರ್ಬಿ ಸುಮಾರು ೬೦೦ ಅಡಿ ಕೆಳಗೆ ಧುಮುಕುತ್ತದೆ. ಅಲ್ಲಿಂದ ಅಷ್ಟೇ ತಗ್ಗಿಗೆ ಹಲವು ಎಡರು ತೊಡರುಗಳ ಮಧ್ಯೆ ಧುಮುಕಿ, ನುಸುಳಿ ಹರಿದು ನೇತ್ರಾವತಿ ನದಿಯನ್ನು ಸೇರುವುದು. ಡಿಸೆಂಬರ್ ತಿಂಗಳಲ್ಲಿ ಸೊರಗಿದ್ದ ಈ ಅರ್ಬಿಯ ಸೊಕ್ಕು ಮಳೆಗಾಲದಲ್ಲಿ ನೋಡಿಯೇ ಅನುಭವಿಸಬೇಕು.

ಆರೋಹಣ

‘ಆರೋಹಣ’ವನ್ನು ಹುಟ್ಟು ಹಾಕಿದಂದಿನಿಂದ ಅದರ ನಾಯಕ ಶ್ರೀ ಜಿ.ಎನ್. ಅಶೋಕ ವರ್ಧನರು ಕಾರ್ಯಕ್ರಮ ಇದ್ದಾಗಲೆಲ್ಲ ನನ್ನನ್ನೂ ಕರೆಯುತ್ತಿದ್ದರು. ೪೮ ಕಿಲೋ ತೂಗುವ ನನ್ನ ದೇಹಕ್ಕೆ ಇದು ಹೇಳಿ ಮಾಡಿಸಿದ್ದಲ್ಲವೆಂದು ತಲೆಯಾಡಿಸಿ ಬಿಡುತ್ತಿದ್ದೆ. ಮೊನ್ನೆ ಒಂದು ಆಸೆ ಹುಟ್ಟಿಸಿದರು – ೨೫೦ ಜನ ಪಾಲ್ಗೊಳ್ಳುವ ಬಲ್ಲಾಳರಾಯನ ದುರ್ಗ ಮತ್ತು ಬಂಡಾಜೆ ಅರ್ಬಿ ಕಾರ್ಯಕ್ರಮ. ೨೫೦ರಲ್ಲಿ ೪೮ ಕಿಲೋ ತೂಗುವವರು ಇದ್ದಾರು ಎಂಬ ಧೈರ್ಯದಿಂದ ಒಪ್ಪಿದೆ. ಕಿಲ್ಲೂರಿನಲ್ಲಿ ೨೫೦ ಜನ ಸೇರಬೇಕೆಂಬುದು ಇದ್ದ ಕಾರ್ಯಕ್ರಮ. ಆದರೆ ಬೇರೆ ಬೇರೆ ಕಾರಣಗಳಿಂದ ೪೫ ಜನರೇ ಹಾಜರಿ ಹಾಕಿದವರು ಕಿಲ್ಲೂರಿನ ಜಮೀನುದಾರರ ಮನೆಯಲ್ಲಿ ರಾತ್ರಿ ತಂಗಿದೆವು. ಊಟ ಉಜಿರೆಯಲ್ಲಿ ಮುಗಿದಿತ್ತಾದ್ದರಿಂದ ತೊಂದರೆಯಾಗಲಿಲ್ಲ. ಅದಾಗಲೇ ಚಳಿ ನಮ್ಮನ್ನು ಎಚ್ಚರಿಸತೊಡಗಿತ್ತು.

ಸಾಹಸ

ಮರುದಿನ ಬೆಳಗ್ಗೆ ೪ ಗಂಟೆಗೆ ಎಚ್ಚರ. ಮುಖಮಾರ್ಜನೆ ಇತ್ಯಾದಿ ಮುಗಿಸಿ ಕೂತಾಗ ಐದೂವರೆ ಗಂಟೆಗೆ ಬೆಳಗ್ಗಿನ ಉಪಾಹಾರಕ್ಕೆ ಕರೆ ಬಂತು. ಅವಲಕ್ಕಿ, ಸಜ್ಜಿಗೆ ಉಪ್ಕರಿ, ವೆಜಿಟೆಬಲ್ ಪಲಾವ್, ಬಾಳೆ ಹಣ್ಣು, ಬಾದಾಮಿ ಹಾಲು ಬೇಕಾದಷ್ಟು ಹೊಡೆದು ಹೊರ ಬರುವಾಗ ಪೊಟ್ಟಣದಲ್ಲಿ ಮಧ್ಯಾಹ್ನದ ಊಟ, ಮೊಸುಂಬಿ, ನಡೆದುಕೊಂಡು ಗಂಟು ಮೂಟೆ ಬೆನ್ನಿಗೇರಿಸಿದವರಿಗೆ ಊರುಗೋಲಾದದ್ದು ಎದೆಯೆತ್ತರದ ಕಬ್ಬಿನ ದಂಟು, ನೀರ ಚೀಲಕ್ಕೆ ಪರಿಮಳಯುಕ್ತ ತಣ್ಣೀರು. ಆರು ಗಂಟೆಗೆ ನಡಿಗೆ ಪ್ರಾರಂಭ.

ಬಲ್ಲಾಳರಾಯನ ದುರ್ಗವಿರುವ ಶಿಖರದ ಉತ್ತರ ದಿಕ್ಕಿಗಿರುವ ಗುಡ್ಡದ ಸೆರಗು ಹಿಡಿದು ಹತ್ತತೊಡಗಿದೆವು. ಬಾಯಾರಿದಾಗ ನೀರು ಕುಡಿದು, ಕಬ್ಬಿನ ಜಲ್ಲೆ ಜಗಿದು, ಆಯಾಸಗೊಂಡಾಗ ಮೊಸುಂಬಿ ತೊಳೆ ಬಾಯಿಗೆ ಹಾಕಿ, ಬೆಟ್ಟ ಕಾಡಿನ ನಡುವೆ ದುರ್ಗಕ್ಕೆ ನಿರ್ಮಿಸಿರಬಹುದಾದ ಮೆಟ್ಟಿಲುಗಳ ದಾರಿಯಲ್ಲಿ ನಡೆದೆವು. ಮತ್ತೊಮ್ಮೆ ಕಾಲುದಾರಿಯಲ್ಲಿ ಸಾಗಿದೆವು. ದುರ್ಗ ಸೇರುವಾಗ ಮಧ್ಯಾಹ್ನ ಒಂದು ಗಂಟೆ. ನೀರಿನ ಸೆಲೆ ಕಂಡಲ್ಲಿ ಬುತ್ತಿ ಬಿಚ್ಚಿ ಊಟ ಮುಗಿಸಿದೆವು. ಇದ್ದ ನೀರು ಮುಗಿದಾಗ ಒರತೆ ನೀರು ತುಂಬಿಸಿಕೊಂಡೆವು. ಗುಡ್ಡ ಹತ್ತಿ ಇಳಿಯುವಾಗ, ಮೊಣಕಾಲೆತ್ತರದ ಹುಲ್ಲಿನೆಡೆ ಅಡಗಿರುತ್ತಿದ್ದ ಬಂಡೆಗಲ್ಲುಗಳ ಚೂರು ನಮ್ಮ ನಡೆಗೆ ಕಡಿವಾಣ ಹಾಕುತ್ತಿದ್ದವು. ಮುಂದಿನವನ ಹೆಜ್ಜೆಯ ಜಾಡಿನಲ್ಲೇ ಹಿಂದಿನವ ನಡೆದರೆ ಪಾದಗಳು ಸುರಕ್ಷಿತವಾಗಿರುತ್ತಿದ್ದವು. ಅಲ್ಲಲ್ಲಿ ಆಯಾಸ ಪರಿಹಾರ ಮಾಡುತ್ತಾ ಬಂಡಾಜೆ ಅರ್ಬಿಯ ಮುಖ ನೋಡುವಾಗ ಸಂಜೆ ಗಂಟೆ ಆರು. ಅಂದರೆ ನಡೆಯಲು ಪ್ರಾರಂಭಿಸಿದ ಹನ್ನೆರಡು ಗಂಟೆಯ ಮೇಲೆ! ಸೋತು ಸುಣ್ಣವಾಗಿದ್ದರೂ ಕತ್ತಲೆಯ ಮೊದಲೇ ಇಡೀ ರಾತ್ರಿಗೆ ಬೇಕಾಗುವಷ್ಟು ಕಟ್ಟಿಗೆ ಸಂಗ್ರಹಿಸಬೇಕಾಗಿತ್ತು. ಶಿಬಿರಾಗ್ನಿಗೆ ಕಟ್ಟಿಗೆ ಸಂಗ್ರಹಿಸಲಾಯಿತು. ಬೆಂಕಿ ಮಾಡಿದೆವು. ಇನ್ನೊಂದು ಕಡೆ ಒಲೆ ಹೂಡಿ ಚಾದ ತಯಾರಿ ನಡೆಯಿತು. ಚಳಿಯ ಪ್ರಭಾವ ಆಗಲೇ ಶುರುವಾದ್ದರಿಂದ ಬೆಂಕಿಯ ಸುತ್ತ ನೆರೆದೆವು. ಸ್ನಾನ ಬೇಕಾದವರು ಆ ಶಾಸ್ತ್ರ ನಡೆಸಿದರು. ಬಿಸ್ಕಿಟ್ಟಿನೊಂದಿಗೆ ಬಿಸಿಬಿಸಿ ಚಹಾ ಗಂಟಲಲ್ಲಿಳಿದು ಜೀವಕ್ಕೆ ಜೀವ ಬಂತು. (ಆ ಹೊತ್ತಿಗಾಗಲೇ ಮೂರು ಸಲ ಕಾಫಿ ಮುಗಿಸುತ್ತಿದ್ದವರಿಗೆ ಆ ದಿನವಿಡೀ ಚಹಾವಾಗಲೀ ಕಾಫಿಯಾಗಲೀ ಇಲ್ಲದ್ದು ಚಹಕ್ಕೆ ಮತ್ತಷ್ಟು ರುಚಿ ತಂದು ಕೊಟ್ಟಿದ್ದಲ್ಲಿ ಆಶ್ಚರ್ಯವೇನಿಲ್ಲ!) ಚಹದೊಂದಿಗೆ ಅವರವರು ತಂದಿದ್ದ ಮತ್ತು ಇತರರೊಂದಿಗೆ ಹಂಚಿದ್ದ ಗಟ್ಟಿ ತಿನಿಸಿನೊಂದಿಗೆ ರಾತ್ರಿ ಊಟದ ನಾಟಕ ಮುಗಿಯಿತು.ಚಳಿ ಕಾಯಿಸುತ್ತಲೇ ತಮಾಷೆ, ಕುಶಾಲು, ಹರಟೆ, ಅಂತ್ಯಾಕ್ಷರಿ ಎಂದು ಸಮಯ ಕಳೆದುದೇ ತಿಳಿಯಲಿಲ್ಲ. ಹತ್ತು ಗಂಟೆಗೆ ನಾಯಕರ ಧ್ವನಿ ಕೇಳಿಬಂತು. ಸರದಿ ಪ್ರಕಾರ ಶಿಬಿರ ಕಾಯುವ ಅವಧಿಯನ್ನು ವಿಂಗಡಿಸಿ ಕೊಡಲಾಯಿತು. ಮೊದಲ ಸರದಿ ಹೆಂಗಸರದು.

ಶಿಬಿರ ಮುಕ್ತಾಯ

ಸಿಕ್ಕ ಸಿಕ್ಕಲ್ಲೆ ಬೆಂಕಿ ಎದುರು ಮುದುಡಿಕೊಂಡವರು ಕೆಲವರಾದರೆ, ದೂರ ಹೋಗಿ ಬಂಡೆಯಲ್ಲಿ ಬಿದ್ದುಕೊಂಡವರು, ಚಳಿ ತಡೆಯಲಾಗದೆ ಎದ್ದು ಬಂದು ಬೆಚ್ಚಗಾಗಿಸಿಕೊಂಡು ಹಿಂದಿರುಗುತ್ತಿದ್ದವರು ಇನ್ನು ಕೆಲವರು. ನಿದ್ರೆ, ಮಂಪರು, ಅರೆ ಎಚ್ಚರದಿಂದಲೇ ಬೆಳಗು ಮಾಡಿ ಚಾ ಕಾಯಿಸಲು ಒಲೆ ಹೊತ್ತಿಸಿದ್ದಾಯಿತು. ಬೆಳಗ್ಗಿನ ಉಪಾಹಾರ ಮುಗಿಸಿ ಸಿಕ್ಕ ಅವಕಾಶದಲ್ಲೇ ಅರ್ಬಿಯ ಕೆಳ ಭಾಗವನ್ನು ಮಂಜು ಮುಸುಕಿದ ಪರಿಯನ್ನು ವೀಕ್ಷಿಸಲು ಹೊರಟೆವು. ಅಲ್ಲಿಂದೆದ್ದು ಶಿಬಿರಾಗ್ನಿ ನಂದಿಸಿ ಹೊರಟಾಗ ಗಂಟೆ ಏಳು. ಇನ್ನಿರುವುದು ಇಳಿಯುವಿಕೆ. ಸೊಂಟದೆತ್ತರ ಬೆಳೆದ ಹುಲ್ಲು ಎಡದ ಕೈಯಲ್ಲಿ, ಆಧಾರಕ್ಕೆ ಬಲಗೈಯಲ್ಲಿ ಬಡಿಗೆ. (ಕಬ್ಬು ಯಾವಾಗಲೋ ಮುಗಿದಿತ್ತು!) ಸಾಲಾಗಿ ಇಳಿದು ಹುಲ್ಲಿನ ಬೆಟ್ಟ ಮುಗಿದಾಗ ಕಾಡಿನ ಪ್ರದೇಶ ಶುರುವಾಯಿತು. ಕಾಡಿನಿಂದ ಕಾಡು-ನಡುವೆಯ ಅರ್ಬಿಯ ಬಂಡೆಯಲ್ಲಿ ಬೆಳಗ್ಗಿನ ಉಪಾಹಾರ ತೀರಿಸಿ ಪುನಃ ಹೊರಟೆವು. ಅಲ್ಲಲ್ಲಿ ಧರೆಗುರುಳಿದ ಒಣ ಮರಗಳು ಮಣ್ಣಾಗುವುದನ್ನು ಕಂಡಾಗ ಕರಾವಳಿಯ ನಮಗೆ ನೀರೂರದಿರಲಿಲ್ಲ.

ಹೊರಟು ಹಿಂದಿರುಗುವವರೆಗೂ ಕಡಂಬಳ ಹಾವೊಂದನ್ನು ಬಿಟ್ಟರೆ ಇನ್ಯಾವ ಪ್ರಾಣಿಗಳೂ ಕಾಣದೇ ಹೋದುದು ನಿರಾಶೆಯನ್ನುಂಟು ಮಾಡಿತು. ಒಂದೆಡೆ ಮುಳ್ಳು ಹಂದಿಯ ಕಣೆಗಳು ಒಂದಷ್ಟು, ಮತ್ತೊಂದೆಡೆ ಒಂದಷ್ಟು ಸೆಗಣಿಯಷ್ಟೇ (ಗಾತ್ರ ಕಂಡಾಗ ಕಾಟಿಯದ್ದೇ ಇರಬೇಕೆಂಬ ಊಹೆ) ಕಂಡದ್ದು ಬಂತು. ಮಧ್ಯಾಹ್ನ ಹನ್ನೆರಡು ಗಂಟೆಗೆ ವಳಂಬ್ರ ಗೌಡರ ಮನೆಯಲ್ಲಿ ಬಿಸಿಬಿಸಿ ಗಂಜಿ ಊಟ ಮಾಡಿ, ವಿಶ್ರಮಿಸುತ್ತಿದ್ದಾಗ ದೂರದಲ್ಲಿ ಬಂಡಾಜೆ ಅರ್ಬಿ ಕಂಡೆ. ಅರೆ! ಅಲ್ಲಿಗೆ ಹತ್ತಿ ಬಂದನೇ ಈ ೪೮ ಕಿಲೋ ಎಂದು ನನ್ನನ್ನೇ ಕೇಳುವಂತಾಯಿತು. ವಳಂಬ್ರದಿಂದ ಕಿಲ್ಲೂರಿಗೆ ನಡೆಯುವಾಗ ಭೂಮಿ ಚಪ್ಪಟೆ ಅಲ್ಲವೆ ಎಂಬ ಪ್ರಶ್ನೆ ಇದಿರಾಯಿತು. ಕಾರಣ ಇಪ್ಪತ್ನಾಲ್ಕು ಗಂಟೆಗಳಲ್ಲಿ ಹತ್ತಿ ಇಳಿಯುತ್ತಲೇ ನಡೆದ ಕಾಲುಗಳಿಗೆ ಸಮತಟ್ಟಿನ ಸ್ಥಳಗಳಲ್ಲಿ ಏನೋ ಕಳಕೊಂಡಂತಾದ ಅನುಭವ. ಕಿಲ್ಲೂರಿನಿಂದ ಬೆಳ್ತಂಗಡಿ, ಬೆಳ್ತಂಗಡಿಯಿಂದ ಮಂಗಳೂರಿಗೆ ಅಲ್ಲಿಂದ ಮನೆಗೆ ಸವಿ ನೆನಪಿನ ಗಂಟು ಮೂಟೆ ಮನದಲ್ಲಿ ಹೊತ್ತುಕೊಂಡು ಸೇರಿದೆವು.

(ತಿಲಕನಾಥ ಮಂಜೇಶ್ವರರ ತರಂಗದ ಲೇಖನ ಮುಗಿಯಿತು)
(ಸರಣಿ ಮುಂದುವರಿಯಲಿದೆ)