(ಬನ್ನಿ, ಬಲ್ಲಾಳರಾಯನ ದುರ್ಗಕ್ಕೆ ಭಾಗ ೬)
ಎರಡು ದಿನಗಳ ರಜೆ ಬರುವುದನ್ನು ಮುಂದಾಗಿ ಗುರುತಿಸಿ, ಹಳೇ ಚಾಳಿಯವರನ್ನು ಲೆಕ್ಕಕ್ಕೆ ಹಿಡಿದು ಊರು ತಪ್ಪಿಸಿಕೊಳ್ಳುವ ಕಲಾಪ ಹೊಸೆಯುವುದು ನನಗೆ ರೂಢಿಸಿಬಿಟ್ಟಿತ್ತು. ಅಷ್ಟಕ್ಕೆ ಸುಮ್ಮನಾಗದೆ ಅಂಗಡಿಗೆ ಬಂದ ಯಾರೂ ಸ್ವಲ್ಪವೇ ವನ್ಯ ಒಲವನ್ನು ಕಾಣಿಸಿದರೂ ನಮ್ಮ ಕಲಾಪಕ್ಕೆ ಸೆಳೆದುಕೊಳ್ಳಲೂ ಪ್ರಯತ್ನಿಸುತ್ತಿದ್ದೆ. ಹೀಗೆ ಪ್ರಜಾವಾಣಿ ವರದಿಗಾರರಾಗಿ ಮಂಗಳೂರಿಗೆ ಬಂದಿದ್ದ, ಅಪ್ಪಟ ಬಯಲುಸೀಮೆಯ (ದಾವಣಗೆರೆ ಮೂಲ) ಜಿಪಿ ಬಸವರಾಜು, ಶಾಂತಾ ದಂಪತಿಯನ್ನು ‘ಕಡಮಕಲ್ಲು – ಗಾಳೀಬೀಡು’ ಅಸಾಧ್ಯ ದಾರಿಯಲ್ಲಿ ಕರೆದೊಯ್ದು ಸತಾಯಿಸಿಬಿಟ್ಟಿದ್ದೆ. (ನೋಡಿ: ತಲೆ ನೂರ್ಮಲೆ ಘಾಟಿಯಲ್ಲಿ) ಅವರಿಗೊಂದು ಚಂದದ ಬೈಕ್ ಸವಾರಿ ಮತ್ತು ಸ್ಮರಣೀಯ ಶಿಖರಾನುಭವ ಕೊಡಲೆಂಬಂತೆ ಬಲ್ಲಾಳರಾಯನ ದುರ್ಗವನ್ನು ಆರಿಸಿಕೊಂಡೆ. ಇಲ್ಲಿ ಮಂಗಳೂರ ಉರಿ ಸೆಕೆಯಿಂದ ಬಿಡುಗಡೆ ಮತ್ತು ಘಟ್ಟದ ತಂಪು ಮೈಗೆ ಹತ್ತುವಂತೆ ಒಂದೂವರೆ ದಿನದ ಯೋಜನೆ ಹಾಕಿದ್ದೆ.
ಆರ್ಥಿಕ ವರ್ಷ ಮುಗಿದ ಒಂದೆರಡು ತಿಂಗಳು, ಅಂಗಡಿಗೆ ದೊಡ್ಡ ಮೊತ್ತದ ಸಾಂಸ್ಥಿಕ ವಹಿವಾಟುಗಳೆಲ್ಲ ಕಡಿಮೆಯಿರುತ್ತಿತ್ತು. ನನ್ನ ದ.ಭಾರತ (ಹತ್ತು ದಿನ) ಮತ್ತು ಎರಡು ಅಖಿಲ ಭಾರತ ಮೊ.ಬೈಕ್ ಸಾಹಸ ಯಾತ್ರೆಗಳು (ತಲಾ ಮೂವತ್ತಕ್ಕೂ ಮಿಕ್ಕು ದಿನಗಳು) ನಡೆದದ್ದು ಇದೇ ಅವಧಿಯಲ್ಲಿ. ವಿದ್ಯಾಸಂಸ್ಥೆಗಳೆಲ್ಲ ವಾರ್ಷಿಕ ಅನುದಾನಗಳನ್ನು ಮುಗಿಸಿ, ಪರೀಕ್ಷೆ ಜ್ವರದಲ್ಲಿ ಬಿದ್ದಿರುತ್ತವೆ. ಹಾಗಾಗಿ ಒಂದು ಶನಿವಾರ (೧೧-೫-೮೫) ಮಧ್ಯಾಹ್ನಕ್ಕೇ ಅಂಗಡಿಯನ್ನು ಸಹಾಯಕ ಪ್ರಕಾಶನ ವಶಕ್ಕೊಪ್ಪಿಸಿ ನನ್ನ ಯೆಜ್ದಿ ಬೈಕಿನಲ್ಲಿ ದೇವಕಿ ಅಭಯರನ್ನು (ಸುಮಾರು ಮೂರೂವರೆ ವರ್ಷ) ಏರಿಸಿಕೊಂಡು ಹೊರಟೇಬಿಟ್ಟೆ. ಅರವಿಂದ ರಾವ್ (ಕೇದಗೆ) ಮತ್ತು ಜಯಂತ್ ಜಾವಾದಲ್ಲಿ, ಬಸವರಾಜ್ ಮತ್ತು ಶಾಂತಾ ರಾಜದೂತದಲ್ಲಿ, ರಾಮ ಮೋಹನ್ ಮತ್ತು ಇಲ್ಯಾಸ್ ಬಜಾಜ್ ಸ್ಕೂಟರಿನಲ್ಲಿ ಜತೆಗೊಟ್ಟರು. ಜೋಡುಮಾರ್ಗಕ್ಕೆ ವಿಟ್ಲದ ಗೋವಿಂದ ಭಟ್ ಯೆಜ್ದಿಯಲ್ಲಿ ಬಂದು, ಬೆನ್ನಿಗೆ ಸುಂದರರಾವ್ ಏರಿಸಿಕೊಂಡು ನಮ್ಮನ್ನು ಸೇರಿಕೊಂಡ.
ಪಶ್ಚಿಮ ಘಟ್ಟದ ಮುಖ್ಯ ಶ್ರೇಣಿಯ ಬಹುತೇಕ ಉನ್ನತ ಶಿಖರಗಳಿಗೆ ಕರಾವಳಿಯತ್ತಣಿಂದ ದೀರ್ಘ ಹಾಗೂ ಕಠಿಣ ಏರು ಜಾಡುಗಳಿರುವಂತೇ ಇನ್ನೊಂದು ಮಗ್ಗುಲಿನಿಂದ ತುಸು ಸುಲಭದ, ಅಷ್ಟೇನೂ ದೂರದ್ದಲ್ಲದ ಜಾಡೂ ಇರುತ್ತವೆ. ಇದಕ್ಕೆ ಎರಡೇ ಉದಾಹರಣೆ ಕೊಡುತ್ತೇನೆ: ಸಮುದ್ರ ಮಟ್ಟದಿಂದ ೧೮೦೪ ಮೀ. ಎತ್ತರದ ಕುದುರೆಮುಖ ಶಿಖರಕ್ಕೆ ಕರಾವಳಿಗರು ದಕ ಜಿಲ್ಲೆಯ ನಾವೂರಿನಿಂದ (೨೩೫ ಮೀ) ೧೫೬೯ ಮೀ ಏರಬೇಕಾಗುತ್ತದೆ. ಅದೇ ಚಿಕ್ಕಮಗಳೂರಿನ ಸಂಸೆಯಿಂದಾದರೆ (೭೮೮ ಮೀ) ೧೦೧೬ ಮೀ ಏರಿದರೆ ಸಾಕಾಗುತ್ತದೆ. ಇನ್ನೊಂದು, ಕುಮಾರ ಪರ್ವತ. ಇದರ ಅತ್ಯುನ್ನತ ಕೇಂದ್ರದ ೧೬೯೬ ಮೀ ಎತ್ತರವನ್ನು ಕರಾವಳಿಗರು ದಕ ಜಿಲ್ಲೆಯ ಸುಬ್ರಹ್ಮಣ್ಯದಿಂದ(೧೫೬ ಮೀ) ಏರುವುದಿದ್ದರೆ ೧೫೪೦ಮೀ ಎತ್ತರ ಹತ್ತಬೇಕು. ಬದಲಿಗೆ, ಕೊಡಗಿನ ಹೆಗಡೆಮನೆಯಿಂದಾದರೆ (೧೦೬೨ ಮೀ) ಕೇವಲ ೬೩೪ ಮೀ.ನಲ್ಲಿ ಅಂದರೆ ಅರ್ಧಕ್ಕರ್ಧ ಶ್ರಮದಲ್ಲಿ ಸಾಧಿಸಬಹುದು. ಈ ಲೆಕ್ಕಾಚಾರದಲ್ಲಿ ಬಲ್ಲಾಳರಾಯನ ದುರ್ಗ (೧೪೮೮ ಮೀ) ತುಂಬ ಸುಲಭದ ಗುರಿ. ಹಿಂದಿನ ಪುಟಗಳಲ್ಲಿ ಹೇಳಿದಂತೆ ಕುಕ್ಕಾವಿನಿಂದ (೧೩೧ ಮೀ) ಕನಿಷ್ಠ ಅರ್ಧ ದಿನದ ಶ್ರಮದಲ್ಲಿ ೧೩೫೭ ಮೀ ಏರಬೇಕಾಗುತ್ತದೆ. ಅದೇ ದುರ್ಗದ ಒಳನಾಡಿನ ಸುಲಭ ಜಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿದೆ. ಅಲ್ಲಿನ ಹೋರಿಕಣ ಕೃಷಿಕ್ಷೇತ್ರದವರೆಗೂ ಯಾವುದೇ ವಾಹನ ಹೋಗುವ ಉತ್ತಮ ದಾರಿಯಿದೆ. ಸಮುದ್ರ ಮಟ್ಟದಿಂದ ೧೧೩೧ಮೀ ಎತ್ತರವಿರುವ ಹೋರಿಕಣ ಎಂದರೆ, ಏರಬೇಕಾದ ಎತ್ತರ ಕೇವಲ ೩೫೭ ಕಿಮೀ. ಅದೂ ಸಾಕಷ್ಟು ಸುಲಭವೇ ಇರುವುದರಿಂದ ಸುಮಾರು ಅರ್ಧ ಮುಕ್ಕಾಲು ಗಂಟೆಯ ಚಾರಣವಷ್ಟೇ ಸಾಕಾಗುತ್ತದೆ ಎಂದು ಕೇಳಿದ್ದೆ. ಕುಕ್ಕಾವಿನಿಂದ ನೇರ ಗೋಡೆಮೈ, ಕುದುರೆ ಜಾಡಾದರೂ ಕಠಿಣ ಆರೋಹಣವೆಲ್ಲ ಮಾಡಿದ್ದರೂ ಈ ಬಾರಿ ಈ ಸುಲಭ ದಾರಿಯನ್ನೇ ಆರಿಸಿಕೊಂಡೆ. ಇದು ಪರೋಕ್ಷವಾಗಿ ದೇವಕಿಯ ನಾಲ್ಕು – ಐದು ವರ್ಷಗಳ ಲಾಕ್ಡೌನಿನ ಸಡಿಲಿಕೆಯೂ ಆಗಿತ್ತು. ದೇವಕಿಯ ಲಾಕ್ಡೌನ್ ಏನಂದ್ರಾ? ನನ್ನ ಮದುವೆಯಾದಂದಿನಿಂದ ಮೊದಲು ಗೃಹಿಣಿಯಾಗಿ (೧೯೮೦-೮೧) ಮತ್ತೆ ಮಗುವಿನ ಅಮ್ಮ/ ಏಕೈಕ ಪಾಲಕಿಯಾಗಿ (೧೯೮೧ ರಿಂದ ೮೫ರವರೆಗೂ) ಮನೆಗೇ ಸೀಮಿತವಾಗಿದ್ದದ್ದು ಇಂದಿನ ಎರಡು ಮೂರು ತಿಂಗಳ ಲಾಕ್ಡವ್ನಿಗೂ ಎಷ್ಟೋ ಪಾಲು ದೊಡ್ಡದು. ವನ್ಯ ಪ್ರದೇಶಗಳಲ್ಲಿ ಮಗು-ಅಭಯನನೊಡನೆ ಭಾರೀ ಕಲಾಪ ಸುಧಾರಿಸುವುದು ಅಸಾಧ್ಯವೇ ಇತ್ತು.
ಬೆಳ್ತಂಗಡಿ, ಉಜಿರೆ, ಮುಂಡಾಜೆಯವರೆಗೆ ಹಿಂದಿನದೇ ದಾರಿ. ಮತ್ತೆ ವಳಂಬ್ರವೇ ಆಗಲಿ, ದಿಡುಪೆ ಕುಕ್ಕಾವೇ ಆಗಲಿ ಕಠಿಣ ಚಾರಣದ ಶ್ರಮದ್ದೇ ದಾರಿ ಎಂದು ಹಿಂದಿನ ಲೇಖನಗಳಲ್ಲಿ ನೀವೂ ಕಂಡುಕೊಂಡಿದ್ದೀರಿ. ಆ ಕಾಠಿಣ್ಯದ ಅಂಶವನ್ನು ಇಲ್ಲಿ ತುಸು ಬಳಸು ದಾರಿಯಲ್ಲೇ ಆದರೂ ವಾಹನ ಸವಾರಿಯಲ್ಲಿ ಸಾಧಿಸುವವರಿದ್ದೆವು. ಈ ಸುಲಭ ಲಕ್ಷ್ಯ ಸಾಧನೆಗೆ ಒಟ್ಟಾರೆ (ಸವಾರಿ ಮತ್ತು ಚಾರಣ) ಅರ್ಧ ದಿನದ ಸಮಯ ಸಾಕೆಂದು ಅಂದಾಜಿಸಿಯೇ ಅಪರಾಹ್ನ ಹೊರಟಿದ್ದೆವು. ಆ ಕಾಲದಲ್ಲಿ (೩೫ ವರ್ಷಗಳ ಹಿಂದೆ), ಬೆಳ್ತಂಗಡಿ ದಾರಿ ತೀರಾ ಕಳಪೆಯಿತ್ತು ಮತ್ತು ವಾಹನ ಸಂಚಾರವೂ ವಿರಳವಿತ್ತು. ಕೆಲವೊಂದು ದೀರ್ಘ ತಿರುವುಗಳನ್ನು ನೇರ ಮಾಡಿದ್ದು ಬಿಟ್ಟರೆ ಸವಾರಿ ದಡಬಡ ಮತ್ತು ನಿಧಾನಿಯೇ ಇತ್ತು.
ಸಂಜೆ ಕಾಫಿಯ ಜಿಜ್ಞಾಸೆ ಗುರುವಾಯನಕೆರೆಯಿಂದ ತೊಡಗಿ ಬೆಳ್ತಂಗಡಿಯಲ್ಲಿ ಇತ್ಯರ್ಥವಾಗಿತ್ತು. ಬಸ್ ನಿಲ್ದಾಣದ ಪ್ರಕಾಶ ಹೋಟೆಲಿಗೆ ನುಗ್ಗಿದೆವು. ನಮ್ಮ ಶಿಬಿರಗಳಲ್ಲೆಲ್ಲ ಅರವಿಂದ ಪಾಕಪ್ರವೀಣ ಎಂದೇ ಖ್ಯಾತ. ಅವರ ರುಚಿ ಸೂಕ್ಷ್ಮಕ್ಕೆ ಹೋಟೆಲಿನವರು ದೋಸೆ ತೆಗೆಯುವ ಸಮಯ ಯಾವತ್ತೂ ಸರಿ ಹೊಂದುತ್ತಿರಲಿಲ್ಲ. “ಚಿನ್ನದ ಬಣ್ಣ ಎಂದು ಹೊರಗಿನ ಹದ ನೋಡಿ, ಪೂರಾ ಹಸಿ ಕೊಡ್ತಾರೆ ಮಾರಾಯ್ರೇ” ಎಂದು ದೂರುತ್ತಾ “ಡಬ್ಬಲ್ ರೋಸ್ಟ್” ಎಂದು ಒತ್ತಿ ಹೇಳಿಯೇ ಆರ್ಡರಿಸಿದ್ದರು. ಉಳಿದವರ ತಿನಿಸು ಮುಗಿಯುವ ಕಾಲಕ್ಕೆ ಅರವಿಂದರ ದೋಸೆ ಬಂತು. ಪಾಪ, ಒಳಮೈಯ ಹಸಿ ಹೋಗುವ ಡಬ್ಬಲ್ ರೋಸ್ಟ್ ಸಮಯದಲ್ಲಿ, ಹೊರಮೈ ಕರಂಚಿ ಕಪ್ಪಾಗಿ ದೋಸೆ ಹೋಗಿ, ದೋಷ ಬಂದಿತ್ತು! ಹಾಗೆ ಆರೋಹಣದ ಇನ್-ಹೌಸ್ ಹಾಸ್ಯದಲ್ಲಿ ‘ಡಬ್ಬಲ್ ರೋಸ್ಟ್’ ಸುಟ್ಟದ್ದಕ್ಕೆ ಪರ್ಯಾಯ ಪದವೇ ಆಗಿತ್ತು.
ಚಾರ್ಮಾಡಿ ಗೇಟ್‍ವರೆಗೆ ನಾವು ಮಾಡಿದ್ದೆಲ್ಲ ಮಾರ್ಗಕ್ರಮಣ. ಮುಂದೆ ಕೊಟ್ಟಿಗೆಹಾರದವರೆಗೆ ವಿಹಾರ. ಸಹಜವಾಗಿ ನಾವು ವಾಚಿನ ಮೇಲೊಂದು ಕಣ್ಣು ಆಗೀಗ ಹಾಯಿಸುತ್ತ, ಘಾಟಿ ದಾರಿಯ ತೆರೆಮೈ ಬಂದಲ್ಲಂತೂ ಅಲ್ಲಲ್ಲಿ ನಿಂತು ಮುಂದುವರಿದೆವು. ಅಂದು ಅಭಯನಿಗೆ ಹೆಚ್ಚು ಕಮ್ಮಿ ಇಂದು ಅವನ ಮಗಳು – ಆಭಾಳದೇ ಪ್ರಾಯ! ಅವನಿಗದು ಪ್ರಥಮ ಸಾಹಸಯಾನ ಮತ್ತು ವನವಾಸದ ಅನುಭವ. ಹಿಮ್ಮುರಿ ತಿರುವೊಂದರಲ್ಲಿ ತಂಡ ದೃಶ್ಯ, ಪಟ ಎಂದೆಲ್ಲಾ ಕಟ್ಟೆಪೂಜೆ ನಡೆಸಿತ್ತು. ಅಭಯನಿಗೆ ಮೇಲಿನ ದಾರಿಗೇರುವ ನೇರ ಸವಕಲು ಜಾಡು ಆಕರ್ಷಿಸಿತ್ತು. ಅವನು ಸ್ವತಂತ್ರವಾಗಿ ಏರುವಷ್ಟು ಅದು ಸುಲಭವೇನೂ ಇರಲಿಲ್ಲ. ಆದರೂ ದೇವಕಿಯನ್ನು ಅವನ ಬೆಂಬಲಕ್ಕೆ ಬಿಟ್ಟು, ನಾನು ಸಹಜವಾಗಿ ಬೈಕನ್ನು ಮಾರ್ಗ ಸುತ್ತಿಸಿ ತಂದಿದ್ದೆ. ಇದು ತಂಡದಲ್ಲೇ (ಇಂದು ಓದುಗರಲ್ಲೂ ಹಲವರಿಗೆ) ಕೆಲವರಿಗೆ “ಮಗು ಅಯ್ಯೋ ಪಾಪ” ಅನ್ನಿಸಿದ್ದರೆ ಆಶ್ಚರ್ಯವಿಲ್ಲ. ಆ ಕುರಿತು ಇಂದು ಯೋಚಿಸುವಾಗ, ನನಗದು ‘ಆನುವಂಶಿಕ ದೋಷ’ವೇ ಇರಬೇಕು ಎಂಬ ಸಂಶಯವಿದೆ!
ನನ್ನ ತಂದೆ – ಜಿಟಿನಾ, ಮಡಿಕೇರಿಯಲ್ಲಿ ಅಧ್ಯಾಪಕ ಹಾಗೂ ಎನ್ಸಿಸಿ ಅಧಿಕಾರಿಯಾಗಿದ್ದ ಕಾಲದ ಕತೆ. ನನ್ನ ಸುಮಾರು ನಾಲ್ಕರ ಹರಯದಲ್ಲಿ ಅವರ ಕೊಟ್ಟಮುಡಿ ವಾರ್ಷಿಕ ಶಿಬಿರದಲ್ಲಿ (೧೯೫೫-೫೬ ಇರಬೇಕು) ನನ್ನನ್ನು ‘ಪಾವತಿಸುವ ಅತಿಥಿ’ ಲೆಕ್ಕದಲ್ಲಿ ಪೂರ್ಣ ಭಾಗಿಯಾಗಿಸಿದ್ದರು. ಅಂದು ನನ್ನ ವಾಸ್ತವ್ಯ ತಂದೆಯೊಡನೆ ಪ್ರತ್ಯೇಕ ಗುಡಾರದಲ್ಲಿತ್ತು. ಮುಂದೆ ಅವರು ಬಳ್ಳಾರಿಯಲ್ಲಿ ಪೂರ್ಣಾವಧಿಯ ಎನ್ಸಿಸಿ ಅಧಿಕಾರಿಯಾಗಿದ್ದಾಗ ನಾನು ಆರೋ ಏಳನೆಯದೋ ತರಗತಿಯಲ್ಲಿದ್ದೆ. ಆಗ ಹೊಸಪೇಟೆಯಲ್ಲಿ ನಡೆದ ವಾರ್ಷಿಕ ಶಿಬಿರಕ್ಕೂ ನನ್ನನ್ನು ಮುನ್ನಿನಂತೇ ಒಯ್ದಿದ್ದರು. ಇಲ್ಲಿ ಕಾಲೇಜು ಹುಡುಗರೊಡನೇ ನನ್ನನ್ನು ವಾಸಕ್ಕೆ ಬಿಟ್ಟಿದ್ದರು. ನಾನು ಕುಶಿವಾಸೀ ಶಿಬಿರ/ ತರಬೇತಿಗಳ ನಡುವೆ ಓಡಾಡಿಕೊಂಡಿದ್ದೆ. ಆಗ ಹೊಸಪೇಟೆ – ಹಂಪಿ ಚಾರಣ ಮಾಡಿದ್ದು, ಜಂಬುನಾಥ ಶಿಖರ ಏರಿ ಆಚೆಗೆ ತುಂಗಭದ್ರಾ ಅಣೆಕಟ್ಟಿನ ಹಿನ್ನೀರ ಅಂಚಿಗೆ ಇಳಿದದ್ದೆಲ್ಲ ಬಹಳ ರಮ್ಯ ನೆನಪುಗಳು. ಮುಂದುವರಿದು ಬೆಂಗಳೂರಿಗೆ ಬಂದಾಗ, ನಾನು ಹತ್ತನೇ ತರಗತಿಯಲ್ಲಿದ್ದೆ. ಮಾಗಡಿ ರಸ್ತೆಯ ಭಿಕ್ಷುಕರ ಮರುವಸತಿ ಕೇಂದ್ರದಲ್ಲಿ ಕಾಲೇಜು ಹುಡುಗರ ವಾರ್ಷಿಕ ಶಿಬಿರ. ಅಲ್ಲಿಗೂ ನನ್ನನ್ನು ಸೇರಿಸಿಕೊಂಡಿದ್ದರು.
ಪಕ್ಕಾ ಸಮವಸ್ತ್ರವನ್ನೂ ಕೊಡಿಸಿ, ಹತ್ತತ್ತು ಹುಡುಗರಿದ್ದ ಒಂದು ಗುಡಾರಕ್ಕೇ ದಾಖಲಿಸಿಬಿಟ್ಟಿದ್ದರು. ಹತ್ತೂ ದಿನ ಶಿಬಿರಾರ್ಥಿಗಳಂತೇ ತರಬೇತಿ ಮತ್ತು ‘ಸಮಾಜ ಸೇವೆ’ಯಲ್ಲಿ (ಬರ ನಿರ್ಮೂಲನೆಗೆ ಗುಡ್ಡದ ಇಳಿಜಾರಿನಲ್ಲಿ ಕಂದಕ ತೋಡಿ, ಮಣ್ಣ ದಂಡೆ ಕಟ್ಟುವ ಕೆಲಸ) ಪೂರ್ಣ ಭಾಗಿಯಾಗಿದ್ದೆ. ಆಗಲೇ ಎನ್ಸಿಸಿಯೊಳಗಿನ ವಿಶೇಷ ಬಣವೊಂದು ಸ್ವತಂತ್ರ ಕುದುರೆಮುಖ ಸಾಹಸಯಾನಕ್ಕೆ ಸಜ್ಜಾಗುತ್ತಿತ್ತು. ಅದಕ್ಕೆ ಮಾತ್ರ ವಿಶೇಷ ತರಬೇತಾಗಿ ಶಿಬಿರದಿಂದಲೇ ಒಂದು ದಿನ ಸಾವನದುರ್ಗದ ಮಹಾಬಂಡೆ ಏರುವುದನ್ನೂ ಇಟ್ಟುಕೊಂಡಿದ್ದರು. ಆಗ ನಾನೂ ಹೋಗಿದ್ದೆ ಮತ್ತು ಬಂಡೆಯ ಕಠಿಣ ಮೈಯಲ್ಲಿ ಏರಿದ ಕೆಲವೇ ಮಂದಿಗಳಲ್ಲಿ ಒಬ್ಬನೂ ಆಗಿದ್ದೆ. (ಹೆಚ್ಚಿನ ವಿವರಗಳಿಗೆ ನೋಡಿ: ಅಧ್ಯಾಯ ೩೯ ಸಾವನ ದುರ್ಗದ ಜಾರುಬಂಡೆಯ ಮೇಲೆ) ಇವಕ್ಕೆಲ್ಲ ನಮ್ಮ ಕುಟುಂಬದಲ್ಲೇ ಹಲವರು ಹಿಂದೆಬಿಟ್ಟು ಹೇಳಿಕೊಂಡದ್ದಿತ್ತು – “ನಾರಾಯಣನಿಗೆ ಬುದ್ಧಿಯಿಲ್ಲ”! ಈ ‘ಬುದ್ಧಿ ದೋಷ’ ಮುಂದುವರಿದಂತೆ, ಮೊಮ್ಮಗಳು ಆಭಾಳನ್ನು ಒಂದೂವರೆ ವರ್ಷದ ಹಿಂದೆಯೇ ಅಭಯರಶ್ಮಿಯರು ಬಿಸಿಲೆಯಲ್ಲಿ ಎರಡು ದಿನಗಳ ವನ್ಯ ಅನುಭವಕ್ಕೊಡ್ಡಿದ್ದರು! ಉಪಕತೆ ದೊಡ್ಡದಾಯ್ತು, ಕ್ಷಮಿಸಿ.
ಕೊಟ್ಟಿಗೆಹಾರದಲ್ಲಿ ನಾವು ಎಡಕ್ಕೆ ತಿರುಗಿ ಕಳಸದ ದಾರಿ ಹಿಡಿದೆವು. ಅದರಲ್ಲಿ ಮುಂದೆ ಸುಂಕಸಾಲೆ ಎಂಬ ಹಳ್ಳಿ-ಪೇಟೆ ಸಿಗುತ್ತದೆ. ಅದು ಕೆಲಗೂರು ಚಾ ಕಂಪನಿಯ ತೋಟಗಳ ಕೇಂದ್ರವಾದ್ದರಿಂದ ರೂಢಿಯಲ್ಲಿ ‘ಕೆಲಗೂರು ಸ್ಟಾಪ್’ ಎಂದೂ ಗುರುತಿಸುವುದಿದೆ. ಅದರಿಂದ ಸ್ವಲ್ಪ ಮುಂದೆ ಎಡಕ್ಕೆ ಸಿಗುವ ಕಚ್ಚಾದಾರಿ ನಮ್ಮ ಕೊನೆಯ ಆಯ್ಕೆ. ಅಲ್ಲಿದ್ದ ತುಕ್ಕು ಹಿಡಕಲು ನಾಮಫಲಕ ‘ಬಲ್ಲಾಳ ರಾಯನ ದುರ್ಗಕ್ಕೆ ದಾರಿ’ (ಏಳು ಕಿಮೀ) ಎಂದೇನೋ ಘೋಷಿಸುತ್ತದೆ. ಆದರೆ ಆ ದಾರಿ ಚೆನ್ನಾಗಿ ಉಳಿಯುವಲ್ಲಿ ಉದ್ದಕ್ಕೂ ಸಿಗುವ ಹಲವು ಖಾಸಗಿ ಚಾ/ ಕಾಫಿ ತೋಟಗಳವರ ಪಾಲು ದೊಡ್ಡದು. ಇದು ಬಹುತೇಕ ಮಟ್ಟ ಹಾಗೂ ಜಲ್ಲಿ ಬಿಗಿದ ರಸ್ತೆ. (ಈಗ ಡಾಮರೋ ಕಾಂಕ್ರೀಟೋ ಆಗಿದ್ದರೂ ವಿಶೇಷವಲ್ಲ). ಒಂದೆರಡು ಕವಲುಗಳಲ್ಲಿ ಸಣ್ಣ ಸಂದೇಹ ಕಾಡಿದರೂ ನಕ್ಷೆಯಲ್ಲಷ್ಟೇ ಗುರುತಿಸಿದ್ದ ಹೋರಿಕಣ ಎಸ್ಟೇಟ್ ಸರಿಯಾಗಿಯೇ ತಲಪುವಾಗ ಸಂಜೆ ಆರು ಗಂಟೆಯಾಗಿತ್ತು.
ಹೋರಿಕಣದ ಹೆಸರು, ಮಾರ್ಗಸೂಚನೆಗಳೆಲ್ಲ ನನಗೆ ಹೊಸವು ಮತ್ತು ಕೇವಲ ಸರ್ವೇಕ್ಷಣ ಇಲಾಖೆಯ ನಕ್ಷೆಯದಾಗಿತ್ತು. ಆದರೆ ಅಲ್ಲಿನ ಯಜಮಾನರು ಪಾಣಾಜೆಯಲ್ಲಿ ನನ್ನ ಮಾವನ ನೆರೆಕರೆಯವರೇ ಆದ ಸ್ವರ್ಗದ (ನೆನಪಿರಲಿ, ‘ಸ್ವರ್ಗ’ ಕೇವಲ ಸ್ಥಳನಾಮ) ಋಷಿ ಭಟ್ಟರೆಂದು ತಿಳಿದಾಗ ಎಲ್ಲರಿಗು ಸಂತೋಷವೇ ಆಯ್ತು. (ಅಂದು ಆ ಮನೆಯಲ್ಲಿ ಯಾರೆಲ್ಲ ಇದ್ದರೆಂಬ ವಿವರಗಳು ಮರೆವಿಗೆ ಸಂದದ್ದಕ್ಕೆ ವಿಷಾದಿಸುತ್ತೇನೆ!) ಮನೆಯವರು ಸಂತೋಷವನ್ನು ಸಾಂಪ್ರದಾಯಿಕ ಉಪಚಾರಗಳಲ್ಲೂ (ಬಾಯಾರಿಕೆ ಇತ್ಯಾದಿ) ತೋರಲು ಉತ್ಸಾಹಿಗಳೇ ಆಗಿದ್ದರು. ಸಾಲದ್ದಕ್ಕೆ ಆಗಸದಲ್ಲಿ ಅಕಾಲಿಕ ಮಳೆಯ ಲಕ್ಷಣಗಳೂ ತೋರುತ್ತಿದ್ದುದರಿಂದ, ರಾತ್ರಿ ಅಲ್ಲೇ ಉಳಿಯಲೂ ಒತ್ತಾಯಿಸಿದರು. ಆದರೆ ನಾವು ಯೋಜನೆಯಂತೆ ವಾಹನಗಳನ್ನು ಅವರ ಅಂಗಳದಲ್ಲೇ ಬಿಟ್ಟು, ಶಿಖರ ವಲಯದಲ್ಲಿ ಶಿಬಿರ ಹೂಡುವುದನ್ನೇ ಆಯ್ದುಕೊಂಡೆವು. ಅದಕ್ಕನುಕೂಲವಾಗುವಂತೆ, ಪೂರ್ಣ ಕತ್ತಲೆಗೂ ಮುನ್ನ ನಮಗೆ ಶಿಖರದ ಮಗ್ಗುಲಿನ ಜಲಾಶ್ರಯಕ್ಕೆ ದಾರಿ ತೋರುವಂತೆ ಒಬ್ಬ ಮಾರ್ಗದರ್ಶಿಯನ್ನು ಕೊಡಲು ಕೇಳಿಕೊಂಡೆವು. ಮನಸ್ಸಿಲ್ಲದ ಮನಸ್ಸಿನಲ್ಲೇ ಅವರು ತೋಟದ ಕೆಲಸದವನೊಬ್ಬನನ್ನು ನಮಗೆ ಜತೆ ಮಾಡಿದರು. ಕೊನೆಯ ಮಾತಾಗಿ, “ಮಳೆ ಜೋರಾಗಿ ರಾತ್ರಿ ಕಳೆಯುವುದು ಕಷ್ಟವಾದರೆ, ಖಂಡಿತಾ ನಮ್ಮ ಮನೆಗೆ ಬನ್ನಿ” ಎಂದೇ ಕಳಿಸಿಕೊಟ್ಟರು.
ಅರಸರ ಕಾಲದ (ಇಲ್ಲಿ ಬಲ್ಲಾಳರು) ಕುದುರೆ ಜಾಡು ತುಸು ಬಳಸಂಬಟ್ಟೆ. ಒಳದಾರಿಯಾದರೂ ಕಠಿಣ ಏರೇನೂ ಆಗಿರಲಿಲ್ಲ. ಮಾರ್ಗದರ್ಶಿ “ಎಷ್ಟಿದ್ದರೂ ಪೇಟೆಯವರು, ಮಗುವೊಂದಿಗರು” ಎಂದು ನಮ್ಮನ್ನು ವಿಚಾರಿಸಿಕೊಂಡೇ ಸವಕಲು ಜಾಡಿನಲ್ಲೇ ಏರಿಸಿದ. ಕರಾವಳಿಯಿಂದ ದುರ್ಗಕ್ಕೆ ಬರುವ ಮಂದಿಗೆ ಬೆಟ್ಟದ ಕಡಿದಾದ ಮೈಯೇ ಗೋಡೆ ಕಟ್ಟಿದಂತಿದೆ. ಅದರ ಕೊನೆಯ ಹಂತದಲ್ಲೇನಾದರೂ ದ್ವಾರ ಇತ್ತೋ ನನಗೆ ಗೊತ್ತಿಲ್ಲ. ಆದರೆ ಸುಲಭ ಸಾಧ್ಯದ ಈ ಮುಖದಲ್ಲಿ ಶಿಖರದ ಕೋಟೆಗೋಡೆಗೂ ಸ್ವಲ್ಪ ಮೊದಲೇ ಅಷ್ಟುದ್ದಕ್ಕೆ ಕಗ್ಗಲ್ಲ ಗೋಡೆ, ಮಹಾದ್ವಾರದ ಅವಶೇಷವಾಗಿ ಭಾರೀ ಕಲ್ಲಿನ ದಾರಂದ ನಿಂತುಕೊಂಡಿತ್ತು. ನಾವದನ್ನು ತಲಪುತ್ತಿದ್ದಂತೆ ತಟಪಟ ಹನಿಯಪ್ಪನ ಪ್ರತಾಪ ತೊಡಗಿತ್ತು. ನಾವು ಮುಂದುವರಿದು ಬೋಳು ಶಿಖರ ಸೇರಲು ಬಯಸಲಿಲ್ಲ. ಗೋಡೆ, ದಾರಂದದ ಮರೆಯಲ್ಲೇ ಉಳಿಯುವ ನಿರ್ಧಾರ ಮಾಡಿದೆವು. ಅಕಾಲಿಕ ಮಳೆ ಜೋರಾದರೂ ಹೆಚ್ಚೆಂದರೆ ಅರ್ಧ ಒಂದು ಗಂಟೆ ಬಂದೀತು. ಅಗತ್ಯ ಬಂದರೆ ಗೋಡೆ ಆಧಾರದಲ್ಲಿ ನಾವು ಮಲಗಲು ಒಯ್ದಿದ್ದ ಜಮಖಾನ, ಹೊದಿಕೆಗಳನ್ನು ಮರೆಕಟ್ಟಿ ಸುಧಾರಿಸುವ ಅಂದಾಜು ಹಾಕಿದೆವು. ಮಾರ್ಗದರ್ಶಿ ಹತ್ತಿರದ ಪ್ರಾಕೃತಿಕ ಜಲಾಶ್ರಯದ ಜಾಡು ತೋರಿಸಿ ಮರಳಿದ. ಮಳೆ ಜೋರಾಗಲೇ ಇಲ್ಲ. ವಾಸ್ತವದಲ್ಲಿ ದುರ್ಗದ ಬಲ್ಲಾಳರಾಯ ನಮ್ಮ ಸಾಧನೆಗೆ ವೀರ ಸೇಸೆಯನ್ನೇ ಹಾಕಿದ್ದಿರಬೇಕು. ಕಾವಳ ಪೂರ್ಣಗೊಳ್ಳುವುದರೊಡನೆ ಮಳೆ ಪೂರ್ಣ ನಿಂತು ಹೋಗಿತ್ತು.
ದಾರಂದದ ಬುಡದಲ್ಲೇ ನಮ್ಮೆಲ್ಲ ಹೊರೆ ಇಳಿಸಿ, ಅಭಯನನ್ನಷ್ಟೇ ಹನಿ ಮಳೆಗೆ ಒದ್ದೆಯಾಗದಂತೆ ಕೂರಿಸಿದೆವು. ಉಳಿದವರು ಶಿಬಿರ ಕಲಾಪ ನಡೆಸಿದೆವು. ತುಸು ಆಚಿನ ಪುಟ್ಟ ಕಣಿವೆಯ ಝರಿಯಿಂದ ನೀರು ತಂದಿರಬೇಕು. (ಇಲ್ಲಾ ನಮ್ಮ ನೀರ ಅಂಡೆಗಳಲ್ಲಿದ್ದ ನೀರಿನಿಂದಲೇ ರಾತ್ರಿ ಸುಧಾರಿಸಿದ್ದೂ ಇರಬಹುದು.) ಬೇಸಗೆಯಾದ್ದರಿಂದ ಚಳಿ ಹೆಚ್ಚಿರಲಿಲ್ಲ. ಆದರೆ ಬೆಳಕು, ಅಡುಗೆ ಮತ್ತು ವನ್ಯ ಪ್ರಾಣಿಗಳನ್ನು ದೂರವಿಡಲು ಬೆಂಕಿ ಉರಿಸುವುದು ಅವಶ್ಯವಿತ್ತು. ನೀರು, ಸೌದೆ ಸಂಗ್ರಹ ಬೇಗ ಮುಗಿದದ್ದೇ ನಮ್ಮಲ್ಲಿ ದೊಡ್ಡ ಬಳಗ ಶಿಬಿರಾಗ್ನಿ ಎಬ್ಬಿಸುತ್ತ ‘ಕಥಾಕಾಲಕ್ಷೇಪ’ಕ್ಕಿಳಿದಿತ್ತು.
ವಿಟ್ಲದ ಬಳಿಯ ಹಳ್ಳಿಗ ಗೋವಿಂದ, ವೃತ್ತಿಯಲ್ಲಿ ಸುಸ್ಥಿತಿಯ ಕೃಷಿಕನಾದರೂ ‘ಸಾಹಸ’ದಲ್ಲಿ ವಿಶ್ವವ್ಯಾಪಿಯಾಗುವ ಕನಸನ್ನು ತುಸು ಹೆಚ್ಚೇ ಕಾಣುವವ. (ಮುಂದೆ ಈತ ಸೈಕಲ್ಲೇರಿ ವಿಶ್ವ ಸುತ್ತಿದ್ದೂ ಸೇರಿದಂತೆ ಅನೇಕ ಸಾಹಸಗಳನ್ನು ಪೂರ್ಣ ವಿವರಿಸಲು ನಾನು ಶಕ್ತನಲ್ಲ!) ಕೊಪ್ಪದ ಮೂಲೆಯಿಂದ ಮಂಗಳೂರ ವಿವಿನಿಲಯದವರೆಗೂ ಕನ್ನಡದ ಹೊರೆ ಹೊತ್ತು ಬಂದವರು ಸುಂದರ ರಾವ್. ಅವರಿಗೆ ಕನ್ನಡ ಎಮ್ಮೆ ಸಾಲದೆಂದನ್ನಿಸಿ, ಸಂಶೋಧನಾ ರಂಗಕ್ಕೂ ಒಂದು ವರ್ಷ ಮಣ್ಣು ಹೊತ್ತಿದ್ದರು. ಆಮೇಲೆ ಯಾಕೋ ವಿವಿನಿಲಯಗಳ ‘ಆರೋಗ್ಯ’ ಕುರಿತಂತೆ ಭ್ರಮ ನಿರಸನಗೊಂಡು, ನನ್ನಂತೇ ತಾಪೇದಾರಿ ನಿರಾಕರಿಸಿ, ಜೋಡುಮಾರ್ಗದಲ್ಲಿ ಮುದ್ರಣಾಲಯ ಕಟ್ಟಿ ದೃಢವಾದವರು. ಇಂದು ನನ್ನಂತೇ ಸ್ವಯಂ ನಿವೃತ್ತಿ ತೆಗೆದುಕೊಂಡು ನನ್ನೆಲ್ಲ ‘ಉತ್ಪಾತ’ಗಳಿಗೂ ಜತೆಗಾರರಾಗಿಯೇ ಮುಂದುವರಿದಿದ್ದಾರೆ. ‘ಆರೋಹಣ’ದ ಬೀಜರೋಪಣದಿಂದಲೇ ಜತೆಗೆ ನಡೆದು ಬಂದವರು ಅಧ್ಯಾಪಕ ಜಯಂತ. ಇಂದು ಅವರೂ ನಿವೃತ್ತ ಜೀವನದಲ್ಲಿದ್ದರೂ ಇನ್ನೊಂದು ಮುಖ್ಯ ಹವ್ಯಾಸವಾದ ನಕ್ಷತ್ರವೀಕ್ಷಣೆಯಲ್ಲಿ ಸಕ್ರಿಯರಾಗಿಯೇ ಮುಂದುವರಿದಿದ್ದಾರೆ. ದೇವಕಿ, ನಾನೂ ಅಭಯನ ಓಡಾಟದ ಮೇಲೆ ಕಣ್ಣಿಟ್ಟುಕೊಂಡು ಎಲ್ಲರೊಡನೊಂದಾಗಿ ಪಟ್ಟಾಂಗದಲ್ಲಿ ನಿರತರಾಗಿದ್ದೆವು. ಭೂಮಿಯ ಮೇಲಿನೆಲ್ಲ ಹೂಟಗಳ ಮಥನ ಚೆನ್ನಾಗಿಯೇ ನಡೆದಿತ್ತು.
ಅರವಿಂದ ರಾವ್ (ಕೇದಗೆ) ವಿದ್ಯಾರ್ಹತೆಯಲ್ಲಿ (ಮೈಕ್ರಾಬಯಾಲಜಿಯಲ್ಲಿ ಎಂಎಸ್ಸಿ) ಅಧ್ಯಾಪನ ನಡೆಸಬಹುದಿದ್ದರೂ ತಾಪೇದಾರಿಗೆ ಸಿಲುಕದೆ, ಸ್ವಯಾರ್ಜಿತ ವೈವಿಧ್ಯಮಯ ಕುಶಲ ಕರ್ಮಗಳ ಬಲದಲ್ಲಿ ಸ್ವೋದ್ಯೋಗಿಯಾಗಿ, ವಿದ್ಯಾ ಸಂಸ್ಥೆಗಳ ಸೂಕ್ಷ್ಮ ವೈಜ್ಞಾನಿಕ ಸಲಕರಣೆಗಳ ನಿರ್ವಹಣೆ ಮಾಡುತ್ತಿದ್ದರು. (ಇಂದು ಮುಂದುವರಿದು, ತನ್ನ ವಿದ್ಯಾರ್ಹತೆಗೂ ನ್ಯಾಯ ಸಲ್ಲಿಸುವಂತೆ ಪ್ಯಾಥಲಾಜಿಕಲ್ ಪ್ರಯೋಗಾಲಯಗಳ ಸರಣಿಯನ್ನೇ ನಡೆಸುತ್ತಿದ್ದಾರೆ) ಅವರು ಭಾಗಿಯಾದ ನಮ್ಮೆಲ್ಲ ಶಿಬಿರಗಳಂತೆ ಇಲ್ಲೂ ಸಹಜವಾಗಿ ಕಾಡು ಕಲ್ಲು ಜೋಡಿಸಿ ಕಿಚ್ಚಿಕ್ಕಿ, ರಾತ್ರಿಯ ಪಾಕ ವಿವರಗಳಲ್ಲಿ ಮುಳುಗಿ ಹೋಗಿದ್ದರು. ಜೊತೆಗೇ ಮುಕ್ತ ಕಂಠದಲ್ಲಿ ಹಾಡು ಹಾಸ್ಯ ನಡೆಸುವುದರಲ್ಲೂ ಈತ ಪರಿಣತ. ಅವರ ದೂರ ಸಂಬಂಧಿ ರಾಮಮೋಹನ್ ರಾವ್ ಉರುಫ್ ರಾಂಪಣ್ಣ, ಪ್ರಾಯದಲ್ಲಿ ಕಿರಿಯ, ಘನಸ್ಥಿಕೆಯಲ್ಲಿ ಮಾತ್ರ ಅಕ್ಷರಶಃ ನೂರು ಕಿಲೋ ಮೀರಿದ ಮರಿಯಾನೆ! ವೃತ್ತಿಯಲ್ಲಿ ನಲ್ಲಿ ಹಾಗೂ ವಿದ್ಯುತ್ ಸಂಪರ್ಕಗಳನ್ನು ಮಾಡಿಕೊಡುವ ಕಂತ್ರಾಟಿನವರು. ವೃತ್ತಿಯಲ್ಲಿ ಅವರ ಸಹಾಯಕ ಮತ್ತು ಗೆಳೆಯ ಇಲ್ಯಾಸ್. (ಈ ಜೋಡಿ ಮೇಲೆ ಹೇಳಿದ ತಲೆನೂರ್ಮಲೆ ಘಾಟಿಯಲ್ಲಿ, ತಮ್ಮ ಬಜಾಜ್ ಸ್ಕೂಟರ್ ನಿಭಾಯಿಸಿದ ಸಾಹಸವಂತೂ ಮರೆಯುವಂತೇ ಇಲ್ಲ! ಇಂದು ರಾಮಮೋಹನ ರಾವ್ ಉಳಿದಿಲ್ಲ, ಇಲ್ಯಾಸ್ ಪತ್ತೆ ಇಲ್ಲ.) ಇವರಿಬ್ಬರೂ ಅರವಿಂದರ ತೈನಾತಿ ಕೆಲಸಕ್ಕೆ ನಿಂತು, ಮಾತಿಗೂ ಧಾರಾಳ ಒಗ್ಗರಣೆ ಹಾಕುತ್ತಿದ್ದರು. ವೃತ್ತಿಯಲ್ಲಿ ಪತ್ರಕರ್ತನಾದರೂ ತುಸು ಹೆಚ್ಚೇ ಭಾವಜೀವಿಯಾದ ಬಸವರಾಜ್ ಕವಿ, ಕತೆಗಾರ ಎಂದೇ ಗುರುತಿಸಿಕೊಳ್ಳಲು ಇಷ್ಟಪಡುತ್ತಾರೆ. ಅವರ ಹೆಂಡತಿ ಶಾಂತ, ಹವ್ಯಾಸೀ ಪತ್ರಕರ್ತೆಯೇ. ಹೀಗೆ ವೃತ್ತಿ ಒಲವುಗಳ ಸಮ ಬೆರಕೆಯಲ್ಲಿ ಅವರಿಗೆ ದುರ್ಗದ ಬಲ್ಲಾಳನ ಕುರಿತು ಜಿಜ್ಞಾಸೆ ಬೆಳೆದಿತ್ತು. ಅದಕ್ಕೆ ಸರಿಯಾಗಿ ಸಾಮುದಾಯಿಕವಾಗಿ ರಾಂಪಣ್ಣ ದುರ್ಗದ ತಪ್ಪಲಿನವರೇ, ತಾತ ಮುತ್ತಾತನ ಕಾಲದಲ್ಲಿ ದುರ್ಗದ ಬಲ್ಲಾಳ ಕುಟುಂಬದ ಆಪ್ತರು ಎನ್ನುವುದು ಬಸವರಾಜ್ ದಂಪತಿಗೆ ತಿಳಿಯಿತು. ಹಾಗಾಗಿ ಇವರು ಒಲೆಕಟ್ಟೆಯ ಬಳಿ ಸಾರಿ ಸ್ಥಳಪುರಾಣದ ಕುರಿತು ಕುತೂಹಲದ ಕೆದಕಾಟ ನಡೆಸಿದರು.
ಅರವಿಂದ ರಾಂಪಣ್ಣ ತಿಳಿದಿದ್ದ ಚೂರುಪಾರು ಸ್ಥಳಪುರಾಣಕ್ಕೆ ಜಾಣ-ಮಸಾಲೆ ಹಚ್ಚಿ ದುರ್ಗದ ಐತಿಹ್ಯ ವಿಸ್ತರಿಸತೊಡಗಿದರು. ಚದರುತ್ತಿದ್ದ ತೆಳು ಮೋಡಗಳ ಮೆದೆಯಲ್ಲಿ ಅರ್ಧ ಚಂದ್ರ ತೇಲು ಮುಳುಕಿನಲ್ಲಿದ್ದ. ಮಂದಾನಿಲದ ಒಲೆತಕ್ಕೆ ಒಲೆ – ಶಿಬಿರಾಗ್ನಿಗಳ ಧೂಮಲೀಲೆಯ ವಿಲಾಸವೂ ಏನೋ ನಿಗೂಢವನ್ನೇ ಬಿತ್ತರಿಸುವಂತಿತ್ತು. ಕಥಾಲಹರಿ ಬೆಳೆಯುತ್ತಾ “….ಬಂಗಾಡಿಯ ಅರಮನೆಯಲ್ಲಿ ನಿಶ್ಚಿಂತನಾಗಿದ್ದ ಅರಸ ಬಲ್ಲಾಳನ ಮೇಲೆ ಅನಿರೀಕ್ಷಿತವಾಗಿ ಟಿಪ್ಪೂ ಸುಲ್ತಾನನ ಸೈನ್ಯ ಎರಗಿ ಭೀಕರ ರಕ್ತಪಾತ ನಡೆಸಿತು. ಆ ಕಾಳ ರಾತ್ರಿಯಲ್ಲೂ ಅರಸಿ ಮಿತ ಪರಿವಾರದೊಡನೆ ತಪ್ಪಿಸಿಕೊಂಡು, ಗುಪ್ತವಾಗಿ ದುರ್ಗದ ಎತ್ತರಕ್ಕೇರಿ, ಈ ಕೋಟೆಯಲ್ಲಿ ರಕ್ಷಣೆ ಪಡೆದುಕೊಂಡಳು. ಇಂದಿಗೂ ಬಲ್ಲಾಳನ ಆತ್ಮ ಸೇಡು, ಶಾಂತಿಗಳ ಹುಡುಕಾಟದಲ್ಲಿ ದುರ್ಗದ ಕೋಟೆ ಆವರಣಗಳಲ್ಲಿ ಓಡಾಡುತ್ತಿರುತ್ತದಂತೆ……” ಎನ್ನುವ ಹಂತದಲ್ಲಿ, ಒಮ್ಮೆಗೇ ಕೋಟೆಯತ್ತಣಿಂದ ಏನೋ ಎತ್ತರದ ಬಿಂಬ ಕತ್ತಲೆಯ ಮರೆಯಲ್ಲಿ ಇತ್ತ ಬರುತ್ತಿರುವುದು ಕಾಣಿಸಿತು. ಕಥನಕಾರರು ಝಗ್ಗನೆ ಉಸಿರು ಸಿಕ್ಕಿದಂತಾಗಿ, ಅತ್ತ ಕೈ ಮಾಡಿ “ಬಲ್ಲಾಳನ…” ಎಂದು ತೊದಲುವುದರಲ್ಲೇ ಮರಗಟ್ಟಿದ್ದರು! ಕಥಾಲೀನರಾದ ಬಸವರಾಜು ದಂಪತಿ ಆಘಾತಕ್ಕೊಳಗಾಗಿ, ಸತ್ಯಕ್ಕೆ ಚೇತರಿಸಿಕೊಳ್ಳಲು ಕೆಲವು ಮಿನಿಟುಗಳೇ ಬೇಕಾಯ್ತು. ಇವರ ಬಂಡಲ್ ಕತೆಗೆ, ಅತ್ತ ಪೊದರುಗಳ ಮರೆಯಲ್ಲಿ ಇಲ್ಯಾಸ್ ಕೋಲಿನ ತುದಿಗೆ ಬೆಡ್ ಶೀಟ್ ಸಿಕ್ಕಿಸಿ ಓಡಾಡಿದ್ದ ಎನ್ನುವ ಸತ್ಯ ಸ್ಫೋಟಗೊಂಡಾಗ, ಉಕ್ಕಿದ ನಗು ನಮ್ಮೆಲ್ಲರ ರಾತ್ರಿಯನ್ನು ಹೆಚ್ಚಿಗೆ ರಂಜಕವಾಗಿಸಿತ್ತು. ಗಂಜಿ, ಪಚ್ಚಡಿ ಊಟ ಮುಗಿದು ಮಲಗುವಾಗ ಗಂಟೆ ಹನ್ನೆರಡಾದ್ದನ್ನೂ ಮರೆಸಿತ್ತು.
ಆಗ ಇನ್ನೂ ಬಲ್ಲಾಳರಾಯನ ದುರ್ಗಾದಿ ವನ್ಯ ಪ್ರದೇಶಗಳು ಸೇರಿದಂತೆ ಕುದುರೆಮುಖ ವನಧಾಮ ರೂಪುಗೊಂಡಿರಲಿಲ್ಲ. ವನ್ಯವೆಲ್ಲ ಧರ್ಮರಾಯನ ಛತ್ರವಾಗಿತ್ತು. ಪ್ರಕೃತಿ ಮಡಿಲಲ್ಲಿ, ಸಾಹಸಯಾನ ಎಂದೆಲ್ಲ ಹೇಳಿಕೊಂಡು ಬರುತ್ತಿದ್ದ ಬಹುತೇಕ ಹವ್ಯಾಸಿಗಳಿಗೆ ನಿಜದಲ್ಲಿ ಸುಂದರ ಕಾಡು, ಸ್ವಚ್ಛ ಝರಿ ಜಲಪಾತಗಳೆಲ್ಲ ಏನು ಮಾಡಿದರೂ ಸಹಿಸಿಕೊಳ್ಳುವ ಸ್ವಚ್ಛಂದ ತಾಣವೇ ಆಗಿತ್ತು. ಕಳ್ಳಬೇಟೆ, ಕಳ್ಳನಾಟಾ, ನೆಲ ಒತ್ತುವರಿ, ಗಾಂಜಾ ಬೆಳೆ, ನೂರಕ್ಕೆ ಹತ್ತೂ ಲೆಕ್ಕಕ್ಕೆ ಸಿಗದಿದ್ದ ವನೋತ್ಪತ್ತಿ ಸಂಗ್ರಹ…. ಪಟ್ಟಿ ಮಾಡಿದಷ್ಟು ಮುಗಿಯದ ಅನಾಚಾರಗಳು. ಅಂಥದ್ದೇ ಒಂದು ರೂಪ ಈ ಬಲ್ಲಾಳರಾಯನ ದುರ್ಗದಲ್ಲಾಗುವುದನ್ನು ನಾನು ಕಂಡಿದ್ದೆ. ಆಸುಪಾಸಿನ ಹಳ್ಳಿಗರು ಮಳೆಗಾಲ ಮುಗಿಯುತ್ತಾ ಬೇಸಾಯ ದೂರಾಗುತ್ತಾ ಕಡಸು, ಗೊಡ್ಡು, ಎತ್ತು, ಕೋಣ ಎಂದಿತ್ಯಾದಿ ಕೆಲಸಕ್ಕಿಲ್ಲದ ಜಾನುವಾರುಗಳನ್ನು ಒಟ್ಟು ಮಾಡಿ, ಒಬ್ಬಿಬ್ಬ ಗೋಪಾಲರೊಡನೆ ಈ ಬೆಟ್ಟಗಳಿಗೆ ಅಟ್ಟುತ್ತಿದ್ದರು. ಗೋಪಾಲಕರು ಹಗಲೆಲ್ಲ ಅವುಗಳನ್ನು ಬಿಟ್ಟಿ ಮೇಯಲು ಬಿಡುತ್ತಿದ್ದರು. ರಾತ್ರಿಗೆ ಜಲಾಶ್ರಯಗಳ ಬಳಿ ಹುಲಿ ಚಿರತೆಯಾದಿ ಮಾಂಸಾಹಾರಿ ಪ್ರಾಣಿಗಳ ವಿರುದ್ಧ ಮುಳ್ಳ ಪೊದರುಗಳ ಆವರಣ (ದೊಡ್ಡಿ) ಮಾಡಿ ಕೂಡಿಡುತ್ತಿದ್ದರು. ಮತ್ತವುಗಳ ಆಯಕಟ್ಟಿನ ಜಾಗಗಳಲ್ಲಿ ಒಲೆ ಮಾಡಿ, ಅಡುಗೆ ಮಾಡಿಕೊಳ್ಳುತ್ತಿದ್ದರು. ಹಾಗೇ ಸಣ್ಣ ಬೆಂಕಿ ಮತ್ತು ನಾಯಿಗಳ ಸಂಗದಲ್ಲಿ ರಾತ್ರಿ ನಿದ್ದೆ-ಗಾವಲು ನಡೆಸುತ್ತಿದ್ದರು. ಇವು ವನ್ಯ ಸಸ್ಯಾಹಾರಿಗಳ (ಕಾಡುಕುರಿ, ಜಿಂಕೆ, ಕಡವೆ, ಕಾಟಿ ಇತ್ಯಾದಿ) ಮೇವಿನ ಶೋಷಣೆಯಲ್ಲದೆ, ಅವಕ್ಕೆ ನಗರ ಕಾಯಿಲೆಗಳ ಪ್ರಸರಣ ಕೇಂದ್ರವೂ ಆಗುವುದಿತ್ತು! ನಾವು ಮಾತ್ರ ಆಚಾರಗಳಲ್ಲಿ ಶುದ್ಧ ವನ್ಯಪರವಾಗಿದ್ದು, ನಮ್ಮ ರಕ್ಷಣೆಯ ವಿಚಾರದಲ್ಲಿ ಮಾತ್ರ ಸ್ವಲ್ಪ ಮಟ್ಟಿಗೆ (ನಾಯಿ ಮತ್ತು ವೃಥಾ ಗದ್ದಲ ನಮ್ಮಲ್ಲಿಲ್ಲ) ಕಳ್ಳ ಗೋಪಾಲರನ್ನು ಅನುಸರಿಸಿದ್ದೆವು.
ಶಿಬಿರಾಗ್ನಿ ಜತೆಗೆ ಸಣ್ಣ ಸರದಿ ಪಹರೆ ನಡೆಸಿದೆವು. ಕೊನೇ ಸುತ್ತನ್ನು ಅರವಿಂದರ ಬಳಗ ಇಟ್ಟುಕೊಂಡದ್ದರಿಂದ ಚಾದಲ್ಲೇ ಮುಖ ತೊಳೆಯುವಷ್ಟೂ ಸಮರ್ಥವಾಗಿ ಕೆಲಸ ಪೂರೈಸಿದ್ದರು. ತಿನ್ನಲು ಅವಲಕ್ಕಿ ಕಲಸಿದ್ದರೆಂದು ನೆನಪು. ಅಂತೂ ಮುಂಬೆಳಕಿನೊಡನೇ ಎಲ್ಲ ಎದ್ದು, ಎಲ್ಲ ಮುಗಿಸಿ, ಶಿಬಿರ ತಾಣ ಶುದ್ಧ ಮಾಡಿ ಹೊರಟೆವು. ೮.೪೫ಕ್ಕೆ ಶಿಖರ ತಲಪಿದ್ದೆವು.ಅಲ್ಲಿಂದ ಸಾಂಪ್ರದಾಯಿಕ ಹಳೇ ಕುದುರೆ ಜಾಡು, ಸದ್ಯ ಸವಕಲು ಜಾಡಿನಲ್ಲೇ ಮುಂದುವರಿದೆವು. ಇದು ತುಂಬ ಸುಲಭದ ನಡಿಗೆ. ಹಿಂದೆ ‘ನೀವೇ ಅನುಭವಿಸಿ’ ಕಾರ್ಯಕ್ರಮದಂತೆ ಸ್ವಲ್ಪ ದೂರ ಪ್ರಪಾತದಂಚಿನಲ್ಲೇ ನಡೆಯಬೇಕು. ಅನಂತರ ಸವಕಲು ಜಾಡು ಹುಲ್ಲುಗಾವಲಿನಲ್ಲೇ ಎಡಕ್ಕೆ ಹೊರಳಿದ್ದನ್ನೇ ಅನುಸರಿಸಿ ಬಂಡಾಜೆ ಅಬ್ಬಿಯ ನೆತ್ತಿ ಮುಟ್ಟುವಾಗ ೧೦.೪೫. ಅಲ್ಲೊಂದು ಪಾನಕ, ಕುರುಕಲು ಸೇವೆ ನಡೆಸಿ ೧೧.೨೦ಕ್ಕೆ ವಾಪಾಸು ಹೊರಟೆವು. ಬಂಡಾಜೆ ಝರಿಯ ಉಗಮಸ್ಥಾನ ಮತ್ತು ಅಷ್ಟಾಗಿ ಪ್ರಚಾರದಲ್ಲಿಲ್ಲದ ಶಿಖರ ವಲಯದ ಪೂರ್ವ ಅಂಚನ್ನು ಸಾಧ್ಯವಾದಷ್ಟೂ ನೋಡಲು ನಾವು ಅಂದಾಜಿಸಿದ್ದೆವು. ರಣಗುಟ್ಟುವ ಬಿಸಿಲಲ್ಲಿ ಕರಿಕಾಗುತ್ತ, ಆ ಎತ್ತರಕ್ಕೆ ಸಹಜವಾದ ಗಾಳಿಯಲ್ಲಿ ಹಗುರಾಗುತ್ತ ಸಾಗಿದೆವು. ಆದರೆ ಕ್ಷಣಿಕ ಭಾವಗಳ ಅಥವಾ ಸಹಜ ಸ್ಪಂದನಗಳನ್ನು ಹಿಡಿದಿಡಲಾಗದ ವಯೋಮಾನ ಅಭಯನದ್ದು. ಅವನ ನಿದ್ದೆ, ಬಳಲಿಕೆಗೆಲ್ಲ ನನ್ನ ಭುಜ ಸವಾರಿಯೇ ಮದ್ದಾಗುತ್ತಿತ್ತು. ಭಾರದ ಲೆಕ್ಕದಲ್ಲಿ ಅವನೇನೂ ನನಗೆ ದೊಡ್ಡ ಹೊರೆಯಲ್ಲ. ಆದರೆ ಆತ ನಿದ್ರೆಯಲ್ಲಿ ಓಲಾಡುವಾಗ ಭುಜದ ಮೇಲೇರಿಸಿಕೊಂಡು ಸಂಭಾಳಿಸುವುದು ಕಷ್ಟವಾಯ್ತು. ಆಗ ಸುಲಭ ಪರಿಹಾರವಾಗಿ ಒದಗಿದ್ದು ನಮ್ಮದೇ ಬೆನ್ನಚೀಲ. ಅದರ ಸಾಮಾನೆಲ್ಲವನ್ನು ಇತರರ ಚೀಲಗಳಿಗೆ ಹಂಚಿ ವರ್ಗಾಯಿಸಿ, ಅಭಯನನ್ನು ಚೀಲದೊಳಗೇ ತುಂಬಿದಲ್ಲಿಗೆ (ಮುಚ್ಚಳ ಹಾಕಲಿಲ್ಲ!) ಎಲ್ಲ ಸುಖಮುಖವಾಗಿತ್ತು. ಝರಿ ಪಾತ್ರೆ ಅನುಸರಿಸಲು ಕಷ್ಟಕರವಾದ ಕಲ್ಲು ಕೊರಕಲಾದಲ್ಲಿಗೆ ಅದನ್ನೂ ಕೈ ಬಿಟ್ಟೆವು.
ಹುಲ್ಲುಗಾವಲಿನ ನೂರೆಂಟು ಜಾನುವಾರು ಜಾಡುಗಳಲ್ಲಿ ಅನುಕೂಲದವನ್ನು ಆಯ್ದುಕೊಳ್ಳುತ್ತ ಮುಂದುವರಿದೆವು. ಅತ್ತ ಕಿಲ್ಲೂರು ಅಂಚಿನಂತೆ (ಪಶ್ಚಿಮ) ಇಲ್ಲೂ ಪೂರ್ವ ಅಂಚನ್ನು ಮೀರುವವರು ಗೋಡೆ ಧುಮುಕಿದಂತೆ ಒಂದು ಸಾವಿರ ಅಡಿಗೆ ಕಡಿಮೆಯಾಗದ ಪ್ರಪಾತ ಸೇರುವುದು ಖಾತ್ರಿ. ಆ ಕಣಿವೆಯಾಳದಲ್ಲಿ ಹರಿವ ಝರಿ – ದುರ್ಗದ ಹಳ್ಳ. ಅದು ಮುಂದೆ ಸ್ಥಳಕ್ಕೆ ತಕ್ಕಂತೆ ಚಾರ್ಮಾಡಿ ಹೊಳೆ…. ಎಂದು ಎರಡು ಮೂರು ನಾಮಾಂತರಗಳನ್ನು ಕಂಡರೂ ಕೃತಕೃತ್ಯತೆ ಕಾಣುವುದು ನೇತ್ರಾವತಿ ಅನ್ನಿಸಿಕೊಂಡ ಮೇಲೇ. ಅದರಾಚೆಗೆ ಕಾಣುತ್ತಿದ್ದ (ದಕ್ಷಿಣೋತ್ತರವಾಗಿ ವ್ಯಾಪಿಸಿದ್ದ) ಶಿಖರ ಶ್ರೇಣಿ ಚಾರ್ಮಾಡಿ ಘಾಟೀ ದಾರಿಯದು. ನಮಗೆ ಕಾಣದ ಇನ್ನೊಂದು ಮಗ್ಗುಲಲ್ಲಿ ಚಾರ್ಮಾಡೀ ಘಾಟಿದಾರಿ ಹರಿದಿತ್ತು. ದುರ್ಗದಿಂದ ಬಾಳೇಕಲ್ಲು ಕೊಡಿ ಮಾತ್ರ ಕಾಣುತ್ತಿದ್ದಿರಬೇಕು. ಉಳಿದಂತೆ ತುಸು ಆಚಿನ ತಗ್ಗಿನಲ್ಲಿರುವ ಕೊಡೆಕಲ್ಲು, ಉತ್ತರಕ್ಕೆ ಸರಿದಂತೆ ಅಣ್ಣಪ್ಪನ ಗುಡಿ ನೆತ್ತಿಯ ಜೇನುಕಲ್ಲು, ಶಿಖರ ಸಾಲಿನಲ್ಲೇ ಹುದುಗಿ ಕುಳಿತ ಬಿದಿರತಳ ಹಳ್ಳಿ, ಅಲೆಖಾನ್ ಕೃಷಿಕ್ಷೇತ್ರ, ಮಲೆಯಮಾರುತಾದಿಗಳೆಲ್ಲವನ್ನು ನನ್ನ ಬಗೆಗಣ್ಣು ಮಾತ್ರ ಕಾಣಬಲ್ಲುದು! ಈ ದೃಷ್ಟಿಯಾದರೂ ವಿರಾಮದಲ್ಲಿ ನಾನು ಸರ್ವೇಕ್ಷಣ ಇಲಾಖೆಯ ನಕ್ಷೆಯಿಂದ ತೊಡಗಿ ಇಂದಿನ ಗೂಗಲ್ ಅರ್ತಿನ ವರೆಗೂ ಕಣ್ಣಾಡಿಸುತ್ತ ಕಂಡ ಕನಸುಗಳ ಫಲವಷ್ಟೆ. ಹಾಗೇ ಚಾರ್ಮಾಡಿಯಿಂದ ದುರ್ಗಕ್ಕೇರಬೇಕೆಂಬ ಆಸೆ ಪಲ್ಲವಿಸಿದ ಜಾಲವೂ ಹೌದು. ಆ ಕುರಿತು ತುಸು ಮುಂದುವರಿದ ಹಳಗಾಲದಲ್ಲೇ ಮಾಡಿದ ಒಂದು ವಿಫಲ ಪ್ರಯತ್ನವನ್ನು ಇದೇ ಮಾಲಿಕೆಯಲ್ಲಿ ಮುಂದೆ ಪೋಣಿಸುತ್ತೇನೆ.
ಅರವಿಂದ ರಾವ್ ಜೀವನಾರಂಭದಲ್ಲಿ ಕೊಂಡದ್ದೊಂದು ಜಾವಾ ಮೋಟಾರ್ ಸೈಕಲ್. ಇದರಲ್ಲಿ ಅವರ ಅಂದಿನ ಆರ್ಥಿಕ ಸ್ಥಿತಿಯಷ್ಟೇ ಜಾವಾ ಯಂತ್ರದ ಮೇಲಿನ ಪ್ರೀತಿಯೂ ಸೇರಿಕೊಂಡಿತ್ತು. (ಆರ್ಥಿಕ ಸ್ಥಿತಿ ಬಲಗೊಂಡ ಕಾಲಕ್ಕೆ ನಾವೆಲ್ಲ ಆಗ ತಾನೇ ಬರತೊಡಗಿದ್ದ ಜಪಾನೀ ಆಕ್ರಮಣ, ಅಂದರೆ ಹೊಂಡಾ, ಸುಜುಕಿ ಇತ್ಯಾದಿಗಳನ್ನು ಕೊಂಡಾಗಲೂ ಇವರು ಹೊಸದಾಗಿ ಕೊಂಡದ್ದು ಅದೇ ಜಾವಾ ಕಂಪೆನಿಯ, ಹೆಚ್ಚಿನ ಬಲವಂತ ಬೈಕ್ – ಯೆಜ್ದಿ ರೋಡ್ ಕಿಂಗ್, ೩೫೦ ಸಿಸಿ.) ಆದರೆ ಅರವಿಂದರ ಹಾಸ್ಯಪ್ರಜ್ಞೆ ಅದೊಂದು ಗುಜರಿ ಮಾಲು, ತನ್ನದು ಜಂಕೂಸ್ ಇಂಡಿಯಾ ಉತ್ಪನ್ನ ಎಂಬಂತೇ ಹೇಳಿಕೊಳ್ಳುತ್ತಿದ್ದರು. ನಮ್ಮ ಹಾಸ್ಯರಸಾಯನಗಳಲ್ಲಿ ಅರವಿಂದ (ರಾವ್, ಕೇದಗೆ ಎಲ್ಲಾ ಬಿಟ್ಟು) ಎಂದರೆ ‘ಜಂಕೂಸ್’ ಎನ್ನುವ ಹಾಗಿತ್ತು. ಇಂಥಾ ಅರವಿಂದರ ಹಾಸ್ಯಕಥನಗಳಲ್ಲಿ ಚಿತ್ರಗ್ರಹಣದ್ದು ಒಂದು ಇಲ್ಲಿ ಸ್ಮರಣೀಯ. ಇವರ ಮಲಯಾಳೀ ಗೆಳೆಯನೊಬ್ಬ, ವೃತ್ತಿಪರ ಚಿತ್ರಗ್ರಾಹಿ ದೊಡ್ಡ ಸಮಾರಂಭಗಳಲ್ಲಿ ಸಾರ್ವಜನಿಕ ಒತ್ತಡಕ್ಕೆ ಸಿಕ್ಕುತ್ತಿದ್ದನಂತೆ. ದುಬಾರಿ ಕ್ಯಾಮರಾ, ಫ್ಲ್ಯಾಶು, ರೀಲು, ವಾಶು, ಪ್ರಿಂಟು ಎಂದು ಎಲ್ಲವೂ ಖರ್ಚಿನ ಬಾಬುಗಳೇ ಆಗಿದ್ದ ಆ ದಿನಗಳಲ್ಲಿ, ಸಾಮಾನ್ಯರು ಬಿಟ್ಟಿ ಫೋಟೋಕ್ಕೆ ಮುಖ ಒಡ್ಡಲು ಹಪಹಪಿಸುತ್ತಿದ್ದರು. (ಯಾಕಾಗಿ ಎನ್ನುವುದಕ್ಕೆ ಉತ್ತರ ಅಂದು ಇರಲಿಲ್ಲ. ಚರವಾಣಿ-ಕ್ಯಾಮರಾ ಹೆಚ್ಚು ಕಮ್ಮಿ ಪ್ರತಿಯೊಬ್ಬನ ಕೈ ಸೇರಿ, ‘ಸ್ವಂತೀ’ ಸೌಕರ್ಯ ಕಾಸು ಖರ್ಚಿಲ್ಲದೆ ಪ್ರತಿಯೊಬ್ಬನ ಕೈ ಮುಟ್ಟಿದ ಇಂದೂ ಸಿಕ್ಕಿಲ್ಲ!!) ಆಗ ಈ ಮಲ್ಲೂ ಹಾಕುತ್ತಿದ್ದ
ಜಾಣ ಪಟ್ಟು – ಅಂಬದ್ ಚಕುಪುಕು ಒರು ಫೋಟೋ! ಅಂದರೆ ಕೇಳಿದ ಒಂಬತ್ತೂ ಮಂದಿಯ ಮುಖಕ್ಕೆ ಈತನ ಫ್ಲ್ಯಾಶ್ ಬೆಳಗುತ್ತಿತ್ತಂತೆ. ಅಗತ್ಯದ ಹತ್ತನೆಯದ್ದನ್ನು ಮಾತ್ರ ನಿಜ ಚಿತ್ರೀಕರಿಸುತ್ತಿದ್ದನಂತೆ) ಕತೆ ಏನೇ ಇದ್ದರೂ ಇಂದು ಆ ಕಾಲದ ಮರುಕಟ್ಟೋಣಕ್ಕಿಳಿದ ನನಗೆ ಸಿಗುವ ಕೆಲವು ಚಿತ್ರಗಳು ಜಂಕೂಸ್ ತೆಗೆದ ‘ಒರು, ಒರು ಫೋಟೋಗಳೇ!’ ಅವರ ‘ಮಿತ್ರ ಮಂಡಳಿ’ ಹಿಂದಿನ ರಾತ್ರಿ ಕಟ್ಟಿದ ಬಲ್ಲಾಳನ ಇತಿಹಾಸದ ಗುಂಗನ್ನು ಎರಡನೇ ದಿನದಲ್ಲಿ ಹಲವು ಸನ್ನಿವೇಶಗಳಲ್ಲಿ ಸಾಭಿನಯ ಮುಂದುವರಿಸಿದ್ದರು. ಇಲ್ಯಾಸ್ ಧಾಳಿಕೋರನಾಗಿ ಅನ್ನದ ಸಟ್ಟುಗ ಬೀಸಿದಾಗ ರಾಂಪಣ್ಣ ಕೋಟೆ ರಕ್ಷಕನಾಗಿ ಗಂಜಿ ತಪಲೆ ಒಡ್ಡಿದಾಗ ನಾವಂತೂ ರಂಜನೆಯ ತುರೀಯವನ್ನೇ ಕಂಡಿದ್ದೆವು! ಹೋರಿಕಣ ಎಸ್ಟೇಟಿನಿಂದ ಹತ್ತಿ ಬಂದ ಜಾಡು ನಮಗೆ ತಪ್ಪಿಹೋಯ್ತು. ಆದರೆ ಹಸಿರು ಬೋಗುಣಿಯೊಳಗಿನ ವರ್ಣ ಚಿತ್ತಾರದಂತೆ, ಹೋರಿಕಣ ವಲಯದ ತೋಟ ಗದ್ದೆಗಳು, ಹಳೇ ಕುದುರೆ ಜಾಡು ತೆರೆದು ಬಿದ್ದುಕೊಂಡಿದ್ದಾಗ ನಮಗೆ ದಾರಿ ತಪ್ಪುವ ಭಯವೇತರದು! ಸಂಜೆ ನಾಲ್ಕೂವರೆಯ ಸುಮಾರಿಗೆ ಆರಾಮವಾಗಿ ಹೋರಿಕಣದ ಮನೆ ತಲಪಿದ್ದೆವು. ಅಲ್ಲಿ ನಮ್ಮನ್ನೊಂದು ಸಣ್ಣ ಆಶ್ಚರ್ಯ ಕಾದುಕೊಂಡಿತ್ತು. ಹಿಂದೆಂದೋ ಆ ಮನೆಯವರಿಗೆ ಬೆಟ್ಟದಲ್ಲೊಂದು ಅನಾಥ ಕಡವೆ ಮರಿ ಸಿಕ್ಕಿತ್ತಂತೆ. ಜೀವ ಕಾರುಣ್ಯದಲ್ಲಿ ಅದನ್ನವರು ತಮ್ಮ ಜಾನುವಾರು ಕೊಟ್ಟಿಗೆಯಲ್ಲೇ ಆರೈಕೆ ಮಾಡಿಟ್ಟುಕೊಂಡರಂತೆ. ಅದು ಪರಮ ಸಾಧುವಾಗಿಯೇ ಬೆಳೆದರೂ ವನ್ಯಮೂಲದ ಸ್ಪಂದನ ಮಾತ್ರ ಕಳಚಲಿಲ್ಲವಂತೆ. ಅಂದರೆ ಹಸು ಎಮ್ಮೆಗಳಂತೆ ಕೊಟ್ಟ ಹುಲ್ಲು, ಹಿಂಡಿ, ಕಲಗಚ್ಚನ್ನು ಒಪ್ಪಿಕೊಂಡರೂ ಬಂಧನವನ್ನು ಸಹಿಸಲಿಲ್ಲವಂತೆ. ಹಾಗೆ ಬಿಟ್ಟಾಗ ಮೇಲಿನ ರುಚಿಗೆ ಮನೆಯ ಕೈತೋಟವನ್ನೂ ಉಳಿಸಲಿಲ್ಲವಂತೆ. (ಶಿವಾನಂದ ಕಳವೆ ಹೀಗೇ ಅನಿವಾರ್ಯವಾಗಿ ಜಿಂಕೆ ಸಾಕುವ ಸುಳಿಗೆ ಬಿದ್ದ ಕತೆ ನೆನಪಾಗುತ್ತದೆ) ನಾವು ಹಿಂದಿನ ದಿನ ಕಾಣದ ಆ ಕಡವೆ ಇಂದು ಅಂಗಳದಲ್ಲೇ ಇತ್ತು. ಅಭಯ ಪುಟ್ಟ ಗರಿಕೆಯನ್ನು ಹಿಡಿದು ಕಡವೆ ಬಾಲ ಹಿಡಿದಿದ್ದ. ವರ್ಷದ ಹಿಂದೊಮ್ಮೆ ಅಭಯ ಮೈಸೂರಿನಲ್ಲಿದ್ದಾಗ, ಗೆಳೆಯ ಪಂಡಿತಾರಾಧ್ಯರು ಇವನನ್ನು ಪ್ರಾಣಿಸಂಗ್ರಹಾಲಯಕ್ಕೆ ಒಯ್ದಿದ್ದರು. ಅಲ್ಲಿ ಇವನು ಆನೆಗೆ ಕ್ರಯ ಮಾಡಿದ್ದನ್ನು ಪಂಡಿತಾರಾಧ್ಯರು ಇಂದೂ ಜ್ಞಾಪಿಸುತ್ತಾರೆ. ಆದರೆ ಇಲ್ಲಿ ಆತ ಆನೆ ಬಿಟ್ಟು ಕಡವೆ ಕೊಟ್ಟರೂ ಸಾಕು ಎಂದು ಚೌಕಾಸಿಗಿಳಿದಿದ್ದ! ಮನೆಯವರೋ ರಾತ್ರಿಯ ಮಳೆ, ಮಗುವಿಗೆ ಹಾಲು, ನಮಗೆ ಬಾಯಾರಿಕೆ ಎಂದೆಲ್ಲ ವಿಚಾರಣೆ ಶುರು ಮಾಡಿದ್ದರು. ನಮಗೋ ಸಂಕೋಚ. ಮಂಗಳೂರ ದಾರಿ ದೂರ, ಕತ್ತಲೆಗೆ ಮುನ್ನ ಆದಷ್ಟು ಮಾರ್ಗಕ್ರಮಣ ಮಾಡಬೇಕು ಎಂದೆಲ್ಲ ನೆಪ ಒಡ್ಡಿ, ಚುರುಕಾಗಿಯೇ ಬೈಕ್ ಸಜ್ಜುಗೊಳಿಸಿದೆವು. ಮನೆಯವರು ಹೆಚ್ಚಿನದನ್ನು ಯೋಚಿಸುವ ಮೊದಲೇ ಅಭಯನನ್ನು ಎಳೆದುಕೊಂಡು, ಬೈಕೇರಿ ಮಂಗಳೂರ ದಾರಿ ಹಿಡಿದೆವು.
ಕೊಟ್ಟಿಗೆಹಾರದ ಗೂಡು ಹೋಟೆಲೊಂದರಲ್ಲಿ ಹೊಟ್ಟೆ ಗಟ್ಟಿ ಮಾಡಿಕೊಂಡೆವು. ಮುಂದೆ ಚಾರ್ಮಾಡಿಯಿಂದ ಸೂರ್ಯಾಸ್ತ ನೋಡುವ ಬಯಕೆ ಏನೋ ಇತ್ತು. ಆದರೆ ಕತ್ತಲೆಗೆ ಮುನ್ನ ಹೆಚ್ಚು ಪ್ರಯಾಣಿಸಿದಷ್ಟೂ ಒಳ್ಳೆಯದು ಎಂದುಕೊಳ್ಳುತ್ತ, ಒಬ್ಬರನ್ನೊಬ್ಬರು ಆರೋಗ್ಯಕರವಾಗಿ ಹಿಂದಿಕ್ಕುತ್ತಾ ಓಡಿಸಿದೆವು. ಉಜಿರೆ, ಬೆಳ್ತಂಗಡಿ, ಗುರುವಾಯನಕೆರೆ, ಮಡಂತ್ಯಾರು….. ಇಳಿಯೆಣಿಕೆ ಮಾಡುತ್ತ ದಾರಿ ಸವೆಸಿದೆವು. ಸೂರ್ಯನಾದರೂ ಸುಮ್ಮನೆ ಕುಳಿತಿರಲಿಲ್ಲ. ಬಾನ ಪಶ್ಚಿಮದಂಚಿಗೆ ಜಾರಿ ಜಾರಿ, ನಾವು ಪುಂಜಾಲಕಟ್ಟೆ ಕಳೆಯುವಾಗ ಆತ ಹಗಲ ಕಟ್ಟಳೆ ಮುಗಿಸಿದ್ದ. ಮುಸ್ಸಂಜೆಯ ಮಬ್ಬಿನಲ್ಲಿ ಬೈಕುಗಳ ದೀಪವೂ ಮಬ್ಬೇ. ಸಹಜವಾಗಿ ಕೆಲವರ ಬೈಕ್ ವೇಗ ಇಳಿದಿತ್ತು. ಆದರೆ ಗೋವಿಂದನ ಲೆಕ್ಕಾಚಾರ ಬೇರೇ ಇದ್ದಿರಬೇಕು. ಜೋಡುಮಾರ್ಗ ಇನ್ನೇನು ಎಂಟು – ಹತ್ತು ಕಿಮೀ. ರಾಯರನ್ನು ಅಲ್ಲಿ ಹೊತ್ತು ಹಾಕಿದರೆ, ತಾನು ಪುತ್ತೂರು ದಾರಿ ಬೇಗ ಹಿಡಿಯಬಹುದು. ಸಹಜವಾಗಿ ಆತುರ ಸ್ವಲ್ಪ ಹೆಚ್ಚೇ ಆಗಿರಬೇಕು. ಅದೊಂದು ತುಸು ಎಡದ ತಿರುವು. ತಿರುವಿನ ವಾಲಿಕೆ ಮುಂದುವರಿದಂತೇ ಎಡಕ್ಕೆ ಹಳೆಯ ಮಾರ್ಗವೇನೋ ಹೋಗಿತ್ತು. ಬೈಕ್ ಸಹಜವಾಗಿ ಅದೇ ಓರೆಯನ್ನು ಅನುಸರಿಸಿತ್ತು. ಅಷ್ಟರಲ್ಲಿ ಒಮ್ಮೆಗೆ ಬಲಕ್ಕೆ ನೇರ ಹೊಸ ಮಾರ್ಗ ಸ್ಪಷ್ಟವಾಯ್ತು. ಗೋವಿಂದ ಪ್ರತ್ಯುತ್ಪನ್ನಮತಿತ್ವದಲ್ಲಿ ಎಡ ವಾಲಿದ್ದ ಬೈಕನ್ನು ನೇರ ಮಾಡಿದ. ಬೈಕಿನ ಓಘದಲ್ಲಿ ಒಂದಾಗಿ, ಎಲ್ಲರಿಗೂ ಮೊದಲು ನಾನು ಮನೆ ಸೇರುವೆನೆಂಬ ಆರಾಮಿನಲ್ಲೂ ಕುಳಿತಿದ್ದ ರಾಯರ ದೇಹ ಬೈಕಿನ ಬಲಮುರಿಯನ್ನು ಗ್ರಹಿಸಲೇ ಇಲ್ಲ. ಅವರು ಸೀಟಿನಿಂದ ಅನಾಮತ್ತಾಗಿ ಪುಟಿದು, ಸೀಳು ದಾರಿಯ ನಡುವಿನ ಮಣ್ಣಿನ ಮೇಲೆ ದೊಪ್ಪನೆ ಕುಕ್ಕುರು ಬಡಿದಿದ್ದರು.
ಗೋವಿಂದ ಪಶ್ಚಾತ್ತಾಪದ ಉದ್ಗಾರದೊಡನೆ ತಿರುಗಿ ಬರುವುದರೊಳಗೆ, ಹಿಂಬಾಲಿಸಿದ್ದ ಬೈಕುಗಳು ಗಾಬರಿಗೆಟ್ಟು ನಿಲ್ಲಿಸುವ ಗಡಿಬಿಡಿಗಳನ್ನು ಮುಗಿಸುವುದರೊಳಗೆ, ರಾಯರು ನಗುತ್ತಾ ಎಲ್ಲೋ ಮದುವೆ ಊಟಕ್ಕೆ ಕುಳಿತವರಷ್ಟೇ ಸಹಜವಾಗಿ ಎದ್ದು ಬಂದರು. ಅದೃಷ್ಟಕ್ಕೆ ಸೊಂಟ, ಬೆನ್ನುಹುರಿಗಳ ಜಖಂ ಇರಲಿ, ಒಂದು ತರಚಲು ಗಾಯವೂ ಇಲ್ಲದೇ (ನೆಲ ಗುದ್ದಿದ ಮೂಕನೋವು ಇದ್ದಿರಬಹುದು, ಹೇಳಲಿಲ್ಲ ಅಷ್ಟೆ!) ಪಾರಾಗಿದ್ದರು. ತನ್ನ ತಪ್ಪೊಪ್ಪಿಗೆ ನಡೆಸುತ್ತ “ಅಯ್ಯೋ ನಾನು ಕೈ ಬಿಟ್ಟು ಕೂತಿದ್ದೆ, ತಪ್ಪಾಯ್ತು….” ಗೋವಿಂದನಾದರೂ ಅಷ್ಟೇ ಅಪರಾಧೀ ಪ್ರಜ್ಞೆಯಲ್ಲಿ “ಟ್ವೈ ಲೈಟಲ್ಲಿ ಕನ್‍ಫ್ಯೂಸ್ ಆಗಿ ಜರ್ಕ್ ಹೊಡೆದೆ….” ಅಪಾಯವೇನೂ ಆಗಲಿಲ್ಲವೆಂದು ಖಾತ್ರಿಯಾದ ಮೇಲೆ ನಾವೆಲ್ಲ “ಅಡಿಗೆ ಬಿದ್ದರೂ ರಾಯರ ಮೀಸೆ] ಮಣ್ಣಾಗಲಿಲ್ಲ” ಎಂದು ಹಾಸ್ಯ ಮಾಡಿ ಮುಗಿಸಿದೆವು. ಕೆಟ್ಟ ಕನಸು ಹರಿದ ಎಚ್ಚರದಲ್ಲಿ ಮುಂದುವರಿದೆವು. ಹಿಂದಿನ ಬೆಳಿಗ್ಗೆ ಒಟ್ಟು ಸೇರಿದ ರೀತಿಯಲ್ಲೇ ಅವರವರ ದಾರಿ ಹಿಡಿದು, ನಾವು ಸುಮಾರು ಹತ್ತು ಗಂಟೆಗೆ ಮನೆ ಸೇರಿಕೊಂಡೆವು.
[ಬಾಲಂಗೋಚಿ: ಆ ದಿನಗಳಲ್ಲಿ ದಾಖಲಿಸಿಕೊಳ್ಳುತ್ತಿದ್ದ ಅನ್ಯ ವಿವರದಂತೆ: ನನ್ನ ಬೈಕ್ ಒಟ್ಟು ಸುಮಾರು ೨೫೦ ಕಿಮೀ ಓಟಕ್ಕೆ ಸುಮಾರು ೮ ಲೀ ಪೆಟ್ರೋಲ್ ಉರಿಸಿತ್ತು] ವಿಸೂ: ವರ್ಣ ಚಿತ್ರಗಳೆಲ್ಲಾ ಅರವಿಂದ ರಾವ್ ತೆಗೆದದ್ದು. ಕಪ್ಪು ಬಿಳುಪಿನಲ್ಲಿ ಅಭಯ ಇರುವ ಚಿತ್ರ ಬಹುಶಃ ಜಿಪಿ ಬಸವರಾಜು ತೆಗೆದದ್ದು. ಇನ್ನೂ ಹಳತ್ತು – ಅನಾಮಧೇಯ.
(ಮುಂದುವರಿಯಲಿದೆ)
ಪ್ರಭಾಕರ ಕಾಪಿಕಾಡು ಫೇಸ್ ಬುಕ್ಕಿನಲ್ಲಿ: ಬೈಕುಗಳಲ್ಲಿ ನಿಮ್ಮ ತಂಡದ ಸಾಹಸಯಾತ್ರೆ ರೋಮಾಂಚಕಾರಿಯಾಗಿತ್ತು….ಬಾಲಕ Abhaya Simha ರನ್ನು ಬೆನ್ನ ಚೀಲದಲ್ಲಿ ಕುಳ್ಳಿರಿಸಿ( ಮುಚ್ಚಳ ಹಾಕದೆ) ತೂಗಿಕೊಂಡು ಬೆಟ್ಟದಾರಿಯಲ್ಲಿ ನಡೆದ ಫೋಟೋ ಇದ್ದರೆ ಇಲ್ಲಿ ಹಾಕಿ �� ..ಆಭಾಳ ನೀರಾಟದ ವಿಡಿಯೋ ಮುದವಾಗಿದೆ….ಬಾಲಕ ಅಭಯರು ಮೈಸೂರು ಮೃಗಾಲಯಕ್ಕೆ ಪಂಡಿತಾರಾಧ್ಯ ಮೈಸೂರು ಇದರೊಂದಿಗೆ ಹೋಗಿ ಮರಿಯಾನೆಗೆ ಕ್ರಯ ಮಾಡಿದ್ದು ಕೇಳಿ ಬಿದ್ದೂ ಬಿದ್ದು ನಕ್ಕೆ…ಮಲೆಯಾಳಂ ಭಾಷೆಯಲ್ಲಿ ಅಂಬದ್ ಅಂದರೆ ಐವತ್ತು… ಒಂಬದ್ ಅಂದರೆ ಒಂಭತ್ತು..��
ಮೂರು ವರ್ಷಗಳ ಕೆಳಗೆ ಬಲ್ಲಾಳರಾಯನ ದುರ್ಗಕ್ಕೆ ಕೊಟ್ಟಿಗೆಹಾರದ ಕಡೆಯಿಂದ ಹೋದ ನಮಗೆ ಮಂಜು ಮುಸುಕಿದ್ದರಿಂದ ನಾಲ್ಕು ಹೆಜ್ಜೆ ಮುಂದಕ್ಕೆ ಏನೂ ಕಾಣದೇ ವಾಪಸ್ ಬಂದಿದ್ದು ನೆನಪಾಯಿತು.ನಾವು ಚಾರಣ ಕೈಗೊಳ್ಳುವ ಕಾಲದ ತಯ್ಯಾರಿಯಲ್ಲಿ ಹೆಚ್ಚಿನಂಶ,ತಿಂಡಿಗೆ,ಊಟಕ್ಕೆ ಏನು ಸರಂಜಾಮು ಹೊಂದಿಸುವುದೆಂದೇ ತಲೆ ಕೆಡಿಸಿಕೊಳ್ಳುತ್ತಿದ್ದರು.ನಿಮ್ಮ ತಯ್ಯಾರಿ ನೋಡಿದರೆ(ನಕಾಶೆ!) ಆಶ್ಚರ್ಯ,ಸಂತೋಷ ಆಗುತ್ತದೆ.ಇಷ್ಟು ವರ್ಷ ವಾದರೂ ಅದನ್ನು ಕಾಪಿಟ್ಟಿರುವುದೂ ಗ್ರೇಟೇ.ಎಲ್ಲಾ ಅರ್ಥ ಆಯ್ತು,ಆದರೆ ಆ ನಕಾಶೆಯಲ್ಲಿ ರೆಡ್ ಝೋನ್ನಲ್ಲಿರುವ,ನಿದ್ರೆ 0050 ಏನಂತ ಅರ್ಥ ಆಗಲಿಲ್ಲ��
It must be 12: 50 a m (midnight).. Thumba sogasada lekhana..
I can trust you to make a simple straight forward trek a matter of exciting adventure Ashok. Nice of you to gave exposed your son to Nature that early.
ಶ್ರೀಅಶೋಕವರ್ಧನರಿಗೆ ವ೦ದನೆಗಳು.೧೯೮೫ರ ಬಲ್ಲಾಳರಾಯದುರ್ಗದ ಸಾಹಸಯಾತ್ರೆ ಮಗುಅಭಯನೊಡಗೂಡಿಓದಿಕೊ೦ಡುಹೋಯ್ತು.ನಿಮ್ಮ ಶಬ್ದಭ೦ಡಾರ ಅತ್ರಿಬುಕ್ ನಲ್ಲೇಬೆಳೆದುದೆ೦ದು ಕಾಣತ್ತೆ.ಹೊಸಹೊಸಶಬ್ದಗಳನ್ನುಹೊಸೆದು ಸಾಮಾನ್ಯವಾಗಿ ಯೂಸಿಸದ(!) (ಉಪಯೋಗಿಸದ)ವುಗಳನ್ನು ಅಕ್ಷರೀಕರಿಸಿದ್ದಕ್ಕೆನಮೋ
ಬಹುಶಃ ೨೦೧೨ ರ ಸೆಪ್ಟೆಂಬರ್ ತಿಂಗಳಲ್ಲಿ ಹೋರಿಕಣದ ಪಕ್ಕ ಪ್ರಪಾತದ ಅಂಚಿನಲ್ಲಿ ಬೀಸುವ ಗಾಳಿ ತಡೆಯದೆ, ತಂದ ತಾರ್ಪಲಿನ್ ನಡುವೆ ಹುದುಗಿ, ರಾತ್ರಿ ಕಳೆದು, ಬೆಳಗ್ಗೆ ದುರ್ಗಕ್ಕೆ ಲಗ್ಗೆಯಿಟ್ಟು ಇಳಿದು ವಾಪಸಾದ ನೆನಪಾಯ್ತು.
“ಆನುವಂಶಿಕ ದೋಷ”. ಪದ ಓದಿ ಮೆಚ್ಚಿದೆ.ಒಂದು ಫೋಟೊದಲ್ಲಿ ಭೀಮಾರ್ಜುನರು ಗದಾಯುದ್ಧ ಮಾಡುವುದು ಮಸ್ತ್ ಉಂಟು.