(ಜಾತಿ ಮತಗಳ ಚಕ್ರಸುಳಿ ಮೀರಿ – ೪)

೧. ತಪ್ಪಿಸಿಕೊಳ್ಳಲಾಗದ ಕಂಬಳಿ ಪೆರೇಡ್

ಮಹಾರಾಜಾದಲ್ಲಿ ನಾನು ಕಾಲೇಜಿಗಿಂತ ಹೆಚ್ಚಿನ ಮುತುವರ್ಜಿಯಲ್ಲಿ ಎನ್.ಸಿ.ಸಿ ಸೇರಿದ್ದೆ. ಕಾರಣ ಗೊತ್ತಲ್ಲ – ತನ್ಮೂಲಕ ಪರ್ವತಾರೋಹಣ ಶಿಬಿರಕ್ಕೆ ಹೋಗುವುದು! ನಾನು ಬೆಂಗಳೂರಿನಲ್ಲಿದ್ದಾಗ ಕಡ್ಡಾಯ ಎನ್.ಸಿ.ಸಿ ಇತ್ತು. ಸಹಜವಾಗಿ ಸರಕಾರೀ ಕಾಲೇಜು ಒಂದಕ್ಕೇ ಒಂದು ಬಟಾಲಿಯನ್ ವ್ಯವಸ್ಥೆ ಇತ್ತು. ಆದರೆ ಮೈಸೂರಿಗೆ ಬರುವಾಗ ಕಡ್ಡಾಯ ರದ್ದಾಗಿತ್ತು. ಹಾಗಾಗಿ ನಮ್ಮ ಬಟಾಲಿಯನ್ನಿನ ವ್ಯಾಪ್ತಿಗೆ ಮೈಸೂರಲ್ಲದೆ ಸಮೀಪದ ಕೊಳ್ಳೇಗಾಲ, ಮಂಡ್ಯ ಮುಂತಾದ ಊರುಗಳ ಹಲವು ಕಾಲೇಜುಗಳೂ ಸೇರಿಕೊಂಡಿದ್ದವು. (ನನಗೆ ಅಗೋಚರ ಸ್ಪರ್ಧಿಗಳೂ ಇದ್ದರು!) ಮಹಾರಾಜಾದ ಹಾಜರಿ ಪುಸ್ತಕದಲ್ಲಿ ಸುಮಾರು ನಲ್ವತ್ತೈವತ್ತು ಹೆಸರಿದ್ದರೂ ನಿಯತ ಕವಾಯತುಗಳಿಗೆ ನಿಜ ಭಾಗಿಗಳು ಇಪ್ಪತ್ತು ಮೂವತ್ತನ್ನು ಮೀರುತ್ತಿರಲಿಲ್ಲ.

ಕಾಲೇಜಿನ ಎನ್.ಸಿಸಿ ಅಧಿಕಾರಿ – ಮೇಜರ್ ಸಿಜಿ ಪುರುಷೋತ್ತಮ್, ಇಂಡಾಲಜಿ ಪ್ರಾಧ್ಯಾಪಕ, ಒಂದು ಕಾಲದಲ್ಲಿ ನನ್ನ ತಂದೆಯ ಎನ್ಸಿಸಿ ಸಹೋದ್ಯೋಗಿ. ಒಳ್ಳೆಯವರೇ ಆದರೂ ಸಮವಸ್ತ್ರ ಧರಿಸಿ ಮೈದಾನಕ್ಕೆ ಬಂದದ್ದು ತೀರಾ ಕಡಿಮೆ. ಕಾಲೇಜು ತುಕಡಿಯಲ್ಲಿ ಕೆಲವು ಹಿರಿಯ ಕ್ಯಾಡೆಟ್ಟುಗಳ (ಜಯಣ್ಣ, ನರೇಂದ್ರಸಿಂಹ, ಶಿವಕುಮಾರ್ ಎಂದು ಕೆಲವು ಹೆಸರುಗಳಷ್ಟೇ ನೆನಪಾಗುತ್ತದೆ) ಹೆಸರೇನೋ ಇತ್ತು, ಕಂಡದ್ದು ವಿರಳ. ಅವರಲ್ಲಿ ಕೆಲವರು ವಿಶೇಷ ಸಮಾರಂಭಗಳಂದಷ್ಟೇ ಬಂದು, ತಮ್ಮ ಹಿರಿತನಕ್ಕೆ ತಕ್ಕ ಸ್ಥಾನಗಳಲ್ಲಿ (ಸೀಯುಒ, ಜೇಯುಒ, ಸೀಕ್ಯೂಎಂ…) ಮೆರೆದು ಮರೆಯಾಗುತ್ತಿದ್ದರು. ನಾನು ಬೆಂಗಳೂರಿನಲ್ಲೇ ಬಿ ಅರ್ಹತಾ ಪರೀಕ್ಷೆ ದಾಟಿ, ಅಲ್ಪ ಸ್ಥಾನೋನ್ನತಿಯನ್ನೂ ಕಂಡಿದ್ದೆ. ಸಹಜವಾಗಿ ನಿತ್ಯದಲ್ಲಿ ನಮ್ಮ ಕಾಲೇಜಿನ ಇಪ್ಪತ್ತೋ ಮೂವತ್ತೋ ಅಳಿದೋರಿಗೆ ನಾನೇ ಗೌಡ! ಈ ಹಿರಿಮೆಯಲ್ಲಿ ನನಗೆ ದಕ್ಕಿದ್ದಾದರೂ ಏನು? ನಿತ್ಯದ “ಏಕ್ದೋತೀನ್ ಏಖ್, ಲೆಫ್ಟ್ ರೈಟ್, ಪೀಛೇ ಮೂಡ್”. ಹಾಜರಿ ಪುಸ್ತಕ ತುಂಬುವುದು, ಉಪಾಹಾರ ಚೀಟಿ ವಿತರಣೆ, ಕಾಲಕಾಲಕ್ಕೆ ಬರುತ್ತಿದ್ದ ಮೇಲಿನ ಸೂಚನೆಗಳನ್ನು ದಾಟಿಸುವುದು. ಅಲ್ಲದೇ ಕೇಯಾರ್ ಪೇಟೆಯಲ್ಲಿ ನಡೆದ ಒಂದು ವಾರ್ಷಿಕ ಶಿಬಿರದಲ್ಲಿ ನಮ್ಮ ತುಕಡಿಯ ನಾಯಕತ್ವ ನನಗೇ ಬಂತು. ಅಲ್ಲಿ ನನ್ನ ಬಳಗದ ಶಿಸ್ತಿನ ಪ್ರದರ್ಶನ ಅನ್ಯ ಬಳಗ ಒಂದರಲ್ಲಿ ಹೊಟ್ಟೆಕಿಚ್ಚನ್ನೇ ಹುಟ್ಟಿಸಿತ್ತಂತೆ. ಅವರು ನನ್ನನ್ನು ‘ಕಂಬಳಿ ಪೆರೇಡಿಗೆ’ ಒಳಪಡಿಸುವ ಹುನ್ನಾರ ನಡೆಸಿದ್ದು ಕಡೇ ಗಳಿಗೆಗೆ ತಿಳಿದು, ಬಚಾವಾದೆ. (ಕಂಬಳಿ ಪೆರೇಡ್ ಕುರಿತು ಎರಡು ಮಾತು: ಶಿಬಿರದಲ್ಲಿ ಕತ್ತಲಾದ ಮೇಲೆ, ಮಲಗುವ ವೇಳೆಗೂ ಮುನ್ನ, ‘ಬಲಿಪಶು’ ಒಬ್ಬನೇ ಓಡಾಡುವುದನ್ನು ದಾಳಿಕೋರರು ಮೊದಲು ಗುರುತಿಸಿಕೊಳ್ಳುತ್ತಾರೆ. ಮತ್ತೆ ಆ ವೇಳೆಯಲ್ಲಿ ಮರೆಯಲ್ಲಿ ಕಾದು ನಿಂತು, ಬಲಿಯ ಮೇಲೆ ಒಮ್ಮೆಗೇ ಕಂಬಳಿ ಮುಚ್ಚಿ, ನಾಕೆಂಟು ಮೂಕಪೆಟ್ಟು ಕೊಟ್ಟು ಪರಾರಿಯಾಗುತ್ತಾರೆ.)

ಎನ್.ಸಿ.ಸಿಯ ದಿಲ್ಲಿ ಪ್ರಧಾನ ಕಛೇರಿ ವಿದ್ಯಾಸಂಸ್ಥೆಗಳ (ದಸರಾ, ಕ್ರಿಸ್ಮಸ್, ಬೇಸಗೆ…) ರಜಾದಿನಗಳ ಪರಿಗಣನೆಯಲ್ಲಿ, ವರ್ಷವಿಡೀ ಹಲವು ತೆರನ ವಿಶೇಷ ತರಬೇತಿ ಶಿಬಿರಗಳನ್ನು ದೇಶಾದ್ಯಂತ ನಡೆಸುತ್ತಿರುತ್ತದೆ. ಅವುಗಳಲ್ಲಿ ಪರ್ವತಾರೋಹಣ ಶಿಬಿರವನ್ನು ನನಗಾಗಿ ತರಿಸಿಕೊಡಬೇಕೆಂದು ನಾನು ಪುರುಷೋತ್ತಮ್ ಮತ್ತು ಬಟಾಲಿಯನ್ನಿನ ಅಧಿಕಾರಿಗಳಲ್ಲಿ ಸದಾ ಕೇಳುವುದಿತ್ತು. ಅವರೆಲ್ಲ ಏನೇನೋ ನೆಪ ಹೇಳಿ ಮುಂದೂಡುತ್ತಲೇ ಇದ್ದರು. ಬಹುಶಃ ಎರಡನೇ ವರ್ಷದಲ್ಲಿಂತ ನೆನಪು, ಕಾಲೇಜಿನ ಯಾವುದೋ ವಿಶೇಷ ಸಮಾರಂಭ. ಅದರಲ್ಲಿ, ಅದೇ ತಾನೇ ಎನ್.ಸಿ.ಸಿ ಮೂಲಕ ಪರ್ವತಾರೋಹಣ ತರಬೇತಿಯನ್ನು ಪೂರ್ಣಗೊಳಿಸಿ ಬಂದೊಬ್ಬ ಅಪರಿಚಿತ ಹಿರಿಯ ವಿದ್ಯಾರ್ಥಿಯನ್ನು ಸಮ್ಮಾನಿಸಿದರು. ನನಗೆ ಪರಮಾಶ್ಚರ್ಯ.

ನಾನು ಮೈಸೂರಿನ ದಖ್ಖಣ ಪರ್ವತಾರೋಹಣ ಸಂಸ್ಥೆಯಲ್ಲಿ ಸಾಕಷ್ಟು ಪಳಗಿ, ಗೌರವ ಶಿಕ್ಷಕನೇ ಆಗಿದ್ದೆ. ಸಣ್ಣ ಜಿದ್ದಿನಲ್ಲೇ ಇದ್ದಿರಬಹುದು, ‘ಹಿಮಾಲಯ ರಿಟರ್ನ್ಡ್‍’ನ್ನು ದಪಸಂಗೆ ಆಹ್ವಾನಿಸಿದೆ. ಆತ ಜಾಣ, ಕುಂಟು ನೆಪ ಹೇಳಿ ಜಾರಿಕೊಂಡ. ಆತ ನಿಜದಲ್ಲಿ, ಗಿರಿಧಾಮಕ್ಕೆ ಪ್ರವಾಸ ಮತ್ತು ಹಿಂಬಂದ ಮೇಲಿನ ಪ್ರದರ್ಶನಗಳಲ್ಲಷ್ಟೇ ಆಸಕ್ತ. ಅಲ್ಲಿ (ಬಹುಶಃ ಮನಾಲಿ) ಹುಸಿ ಕಾಯಿಲೆ ನೆಪಹೂಡಿ ದಿನಗಳೆದದ್ದೇ ಹೆಚ್ಚಂತೆ. ಮೂರು ವಾರಗಳ ಕೊನೆಯಲ್ಲಿ ಭಾಗವಹಿಸಿದ ಎಲ್ಲರಿಗೂ ಸಿಗುವ ಬ್ಲೇಝರ್ (ವಿಶೇಷ ಕೋಟು), ಹಿಮಗೊಡಲಿ ಬ್ಯಾಡ್ಜ್ ಮತ್ತು ಭಾಗವಹಿಸಿದ್ದಕ್ಕೊಂದು ಪತ್ರ (ಪಾರ್ಟಿಸಿಪೇಶನ್ ಸರ್ಟಿಫಿಕೇಟ್) ಹಿಡಿದುಕೊಂಡು ಬಂದಿದ್ದ.

ಮಹಾರಾಜಾದ ಮೂರು ವರ್ಷಗಳ ಕೊನೆಗೂ ನನಗೆ ಪರ್ವತಾರೋಹಣ ಶಿಬಿರ ದಕ್ಕಲೇ ಇಲ್ಲ. ಸೋಂಭೇರಿ ಅಧಿಕಾರವರ್ಗ ನನಗೆ ನಿತ್ಯ ಕಟ್ಟಳೆಯ ಕಂಬಳಿ ಮುಚ್ಚಿ, ನಡೆಸಿದ್ದು ಕಂಬಳಿ ಪೆರೇಡ್!

೨. ಓಟೀಯೂ ಮತ್ತು ಓಎಲ್‍ಕ್ಯೂ

ಹಿರಿಯ ಸೈನ್ಯಾಧಿಕಾರಿಯೊಬ್ಬರು ಕಾಲೇಜಿನ ಎನ್ಸಿಸಿ ವಿದ್ಯಾರ್ಥಿಗಳನ್ನುದ್ದೇಶಿಸಿ ಓಟೀಯೂ (ಆಫೀಸರ್ಸ್ ಟ್ರೇನಿಂಗ್ ಯೂನಿಟ್) ಕುರಿತು ಮಾತಾಡಿ ಹೋಗಿದ್ದರು. ಸಾರಾಂಶ ಇಷ್ಟು: ಯಾವುದೇ ಸ್ನಾತಕ ಓದಿನ ಪ್ರಥಮ ವರ್ಷದ ವಿದ್ಯಾರ್ಥಿ ಇದಕ್ಕೆ ಆಯ್ಕೆಯಾಗಬಹುದು. ಅಂಥವನ ಕಾಲೇಜ್ ಓದನ್ನು ಹೊಂದಿಸಿಕೊಂಡು, ಇದ್ದ ಊರಿನಲ್ಲೇ ಮೂರು ವರ್ಷ ಸಂಬಳ ಸಹಿತ ವಿಶೇಷ ತರಬೇತಿಯನ್ನು ಕೊಡುತ್ತಾರೆ. ಕೊನೆಯಲ್ಲಿ ಅಧಿಕಾರಿಯಾಗಿ ಸೈನ್ಯಕ್ಕೆ ಸೇರಿಸಿಕೊಳ್ಳುತ್ತಾರೆ. ನಾನಿದನ್ನು ಬಯಸಿ ಅರ್ಜಿ ಸಲ್ಲಿಸಿದ್ದೆ. ಪ್ರಾಥಮಿಕ ಆಯ್ಕೆಯನ್ನು ರಾಮನಗರದಲ್ಲಿ ವ್ಯವಸ್ಥೆ ಮಾಡಿದ್ದರು. ಎಲ್ಲೆಲ್ಲಿಂದೆಲ್ಲ ಬಂದ ನೂರಾರು ತರುಣರು ಸೇರಿದ್ದರು. ಮೊದಲು ಏನೋ ಸಣ್ಣ ಬರವಣಿಗೆ ಪರೀಕ್ಷೆ. ಯಾವ ತಯಾರಿಯೂ ಇಲ್ಲದೆ, ಏನೋ ಬರೆದಿದ್ದೆ. ಅನಂತರ ಮಾರ್ಗದಲ್ಲೇ ಎಲ್ಲರನ್ನೂ ಒಟ್ಟಾಗಿ ಬಿಟ್ಟು, ಸುಮಾರು ಐದೋ ಹತ್ತೋ ಕಿಮೀ ಓಟದ ಸ್ಪರ್ಧೆ ನಡೆಸಿದರು. ನಾನು ಎಂದೂ ಆಟೋಟ ಸ್ಪರ್ಧಾಭಾಗಿಯಾದದ್ದಿಲ್ಲ, ನಡಿಗೆ ಓಟ ಎಂದು ಅಭ್ಯಾಸ ಮಾಡಿದವನೂ ಅಲ್ಲ. ಆದರೂ ಓಟವನ್ನು ಪೂರೈಸಿದ ಮೊದಲ ಹತ್ತು ಮಂದಿಯೊಳಗಿದ್ದೆ.

ಮುಂದಿನ ಕೆಲವೇ ದಿನಗಳಲ್ಲಿ ಸೈನ್ಯ ಆಯ್ಕಾ ಕೇಂದ್ರದಿಂದ ಟೆಲಿಗ್ರಾಂ ಬಂತು. ಮೂರ್ನಾಲ್ಕು ದಿನದ ಅವಕಾಶವನ್ನಷ್ಟೇ ಕೊಟ್ಟು ಜಬ್ಬಲ್ ಪುರದ ಆಯ್ಕಾ ಕೇಂದ್ರದಲ್ಲಿ ಹಾಜರಿರಲು ಸೂಚನೆಗಳಿದ್ದವು. ನಮ್ಮ ಬಟಾಲಿಯನ್ ಕಛೇರಿಗೋಡಿದೆ. ನನಗೆ ಪ್ರಯಾಣದ ವಿವರ, ಪರೀಕ್ಷಾ ವಿಧಾನಗಳ ಬಗ್ಗೆ ಏನೇನೂ ಮಾಹಿತಿ ಇರಲಿಲ್ಲ. ಆದರೆ ನಮ್ಮ ದಂಡ ನಾಯಕ ನನಗೆ ಅಭಿನಂದನೆ ಹೇಳುವುದರಲ್ಲಿ, ಡ್ರೆಸ್ ಕೋಡ್ ಮತ್ತು ಓಎಲ್‍ಕ್ಯೂ (ಆಫೀಸರ್ ಲೈಕ್ ಕ್ವಾಲಿಟಿ!) ಬಗ್ಗೆ ವಿವರಣೆ ಕೊಡುವುದರಲ್ಲೇ ಉತ್ಸಾಹಿಯಾಗಿದ್ದ! ನಾನೂ ಎಂದಿನಂತೆ ವಿಶೇಷ ಯೋಚಿಸದೇ ರೈಲ್ವೇ ಟಿಕೇಟ್ ಕಾಯ್ದಿರಿಸಿ, ಬೂಟು, ಕೋಟು, ಟೈ ನಾಲ್ಕೈದು ದಿನದ ಪ್ರವಾಸಕ್ಕೆ ಹೊಂದಾಣಿಕೆ ನಡೆಸುತ್ತಿದ್ದಂತೆ ಹೊರಡುವ ದಿನ ಬಂದಿತ್ತು. ಬಹುಶಃ ಒಂದೂವರೆ ದಿನದ ಪ್ರಯಾಣ. ಆ ಬೆಳಿಗ್ಗೆ ಜಬ್ಬಲ್ ಪುರ ರೈಲ್ವೇ ನಿಲ್ದಾಣ ತುಂಬ ಭಾರತಾದ್ಯಂತದಿಂದ ಬಂದ ನೂರಿನ್ನೂರು ತರುಣರ ದಡಬಡ, ಸ್ವಾಗತಿಸಿ ಸೈನ್ಯ ಕೇಂದ್ರಕ್ಕೊಯ್ಯಲು ಬಂದಿದ್ದ ಅಧಿಕಾರಿಗಳ ಬೊಬ್ಬೆಯೋ ಬೊಬ್ಬೆ. ನಮ್ಮ ಟೆಲಿಗ್ರಾಂ ಆದೇಶವನ್ನಷ್ಟೇ ತನಿಖೆ ಮಾಡಿ, ನಿಂತಿದ್ದ ಹತ್ತೆಂಟು ಸೈನ್ಯದ ಲಾರಿಗೆ ಕ್ರಮವಾಗಿ ತುಂಬಿ, ಅಖಿಲ ಭಾರತ ಸೈನಿಕ ಆಯ್ಕಾ ಕೇಂದ್ರಕ್ಕೆ ಒಯ್ದು ಸುರಿದರು. ಅಲ್ಲಿ ಸಾಮೂಹಿಕ ವಾಸದ ಕೋಣೆ ತೋರಿಸಿ, ಕೇವಲ ಅರ್ಧ ಗಂಟೆಯ ಬಿಡುವು ಕೊಟ್ಟು, ಪ್ರಾಥಮಿಕ ಪರೀಕ್ಷೆ ಎದುರಿಸಲು ಸಭಾಭವನದಲ್ಲಿ ಹಾಜರಿರಲು ಆದೇಶ ಕೊಟ್ಟರು. ನಾನು ಒಂದು ಖಾಲಿ ಮಂಚದ ಮೇಲೆ ನನ್ನ ಬೆನ್ನ ಚೀಲ ಎಸೆದು, ಪ್ರಯಾಣದ ಕೊಳೆ ಕಳೆಯಲು ಧಾವಿಸಿದೆ. ಚುರುಕಾಗಿಯೇ ಹಿಂದೆ ಬಂದಾಗ ನನ್ನ ಚೀಲ ನೆಲದಲ್ಲಿ ಬಿದ್ದಿತ್ತು. ಧಡಿಯನೊಬ್ಬ ಮಂಚದ ಮೇಲೆ ತನ್ನ ಭಾರೀ ಪಿಟಾರಿ ಬಿಡಿಸಿ, ಹಾಸಿಗೆ ಹರಡಿ, ಸೋಪು, ಪೇಸ್ಟು, ಶಾಂಪು, ಶೇವು, ಟವೆಲು ಎಂದೆಲ್ಲ (ಓಎಲ್‍ಕ್ಯೂ?) ವೈಭವದಲ್ಲಿದ್ದ. ನಾನು ನನ್ನ ಚೀಲದ ಬಗ್ಗೆ ವಿಚಾರಿಸಿದ್ದಕ್ಕೇ ನನ್ನ ಮೇಲೆ ಏರಿ ಬರುವವನಿದ್ದ. ಅದೃಷ್ಟಕ್ಕೆ ಅಷ್ಟರಲ್ಲಿ ನಿಗದಿತ ಅರ್ಧ ಗಂಟೆ ಮುಗಿದು ಹೊರಗಿನಿಂದ ಖಡಕ್ ಕರೆ ಬಂತು, ನಾನು ಓಡಿದೆ. ಧಡಿಯ ಮತ್ತು ಅಂಥದ್ದೇ ಇನ್ನು ಕೆಲವರು ಬಚ್ಚಲು ಎಲ್ಲಿ ಎಂದು ಹುಡುಕುವುದರಲ್ಲಿದ್ದರು! ಏನು ಮಾಡಿದರೋ ತಿಳಿಯಲಿಲ್ಲ.

ವ್ಯವಸ್ಥಿತ ಬೆಂಚು, ಡೆಸ್ಕುಗಳ ಕೋಣೆಯಲ್ಲಿ ಕೂರಿಸಿ, ಹತ್ತತ್ತು ಮಿನಿಟಿನ ಎರಡು ಹೊಸ ನಮೂನೆ ಬರಹ ಪರೀಕ್ಷೆಗಳನ್ನು ಕೊಟ್ಟರು. ಒಂದೋ ಎರಡೋ ಪುಟದ ಪ್ರಶ್ನೆ/ಉತ್ತರ ಪತ್ರಿಕೆ ಇದ್ದಿರಬೇಕು. ಸಾಮಾನ್ಯ ಜ್ಞಾನದ್ದೊಂದು, ಮಾನಸಿಕ ಚುರುಕನ್ನು ಗ್ರಹಿಸುವುದಿನ್ನೊಂದು. ಸಮಸ್ಯೆ ನೋಡಿ, ಅಲ್ಲೇ ಇರುವ ಆಯ್ಕೆಗಳಲ್ಲಿ ಸರಿಯನ್ನು ಗುರುತಿಸುವುದಷ್ಟೇ ಕೆಲಸ. ಅದು ಮುಗಿದದ್ದೇ ಒಂದು ಗಂಟೆಯ ಉಪಾಹಾರದ ಬಿಡುವು ಕೊಟ್ಟರು. ಊಟದ ಮನೆಯಲ್ಲಿ ಮತ್ತೆ ಮೇಲಾಟ. ಪೂರಿ ಸಾಗು ಚಾ ಧಾರಾಳವೇ ಇದ್ದರೂ ಸಾಲಿನಲ್ಲಿ ನಿಂತು ಸಂಗ್ರಹಿಸುವ, ಧಾರಳವೇ ಇದ್ದ ಮೇಜು ಕುರ್ಚಿಗಳಲ್ಲಿ ಇಟ್ಟುಕೊಂಡು ಸೇವಿಸುವ ಸಮಾಧಾನ ಕೆಲವೇ ಮಂದಿಯಲ್ಲಿದ್ದಂತಿತ್ತು. ಅದು ಮುಗಿಸಿ ವಾಸದ ಕೋಣೆಗೆ ಹೋದರೆ, ಅಲ್ಲಿದ್ದ ಮಂಚಗಳಿಗಿಂತ ಹೆಚ್ಚಿಗೆ ಜನ. ಎಲ್ಲದರ ಮೇಲೂ ಅಧಿಕಾರ ಸ್ಥಾಪಿಸಿದ್ದ ದಾದಾಗಳನ್ನೇ ಕಂಡೆ. ನಾನು ರಾತ್ರಿ ಮಲಗಲು ಯಾವ ಮೂಲೆಯ ನೆಲವಾದೀತೂ ಎಂದು ಆಯುವುದಷ್ಟೇ ಉಳಿದಂತಿತ್ತು. ಆದರೆ ಅದೃಷ್ಟಕ್ಕೆ ಮತ್ತೆ ನಿಗದಿತ ಸಮಯಕ್ಕೆ, ಸಭಾಭವನಕ್ಕೆ ಕರೆ ಬಂತು. ನಮ್ಮ ಪ್ರಾಥಮಿಕ ಪರೀಕ್ಷೆಯ ಫಲಿತಾಂಶ ಪಟ್ಟಿ ದೊಡ್ಡದಾಗಿ ಪ್ರದರ್ಶಿಸಿದ್ದರು. ಉತ್ತೀರ್ಣರಾದ ಕೇವಲ ಹದಿನೈದಿಪ್ಪತ್ತು ಮಂದಿಯಲ್ಲಿ ನಾನೂ ಇದ್ದೆ. ಮತ್ತೆ ಸ್ಪಷ್ಟವಾಗಿ ಘೋಷಿಸಿದರು “ಆಯ್ಕೆಯಾಗದ ಮಂದಿ ಕೂಡಲೇ ‘ಹಿಂದಿರುಗುವ ಪ್ರಯಾಣಾದೇಶ’ ಸಂಗ್ರಹಿಸಿಕೊಳ್ಳಿ. ಇನ್ನರ್ಧ ಗಂಟೆಯಲ್ಲಿ ಅವರನ್ನು ರೈಲ್ವೇ ನಿಲ್ದಾಣಕ್ಕೆ ಬಿಡಲಾಗುತ್ತದೆ.”

ವಾಸದ ಕೋಣೆಯಲ್ಲಿ ಗೋಳೋ ಗೋಳು. ನನ್ನ ಚೀಲ ಎಸೆದಿದ್ದ ಧಡಿಯ ದಿಢೀರನೆ ನನ್ನತ್ತ ಧಾವಿಸಿ, ಅಪ್ಪಿ, ಕಣ್ಣೀರುಗರೆಯುತ್ತ, ಕ್ಷಮಾಯಾಚಿಸುತ್ತ ತನ್ನ ಸೋಲನ್ನು ಹೇಳಿದಾಗ ನಾನು ನಿಜಕ್ಕೂ ಹೆದರಿಹೋಗಿದ್ದೆ. ಎಲ್ಲ ಹೋದ ಮೇಲೆ, ಕೋಣೆಯೊಳಗೆ ಮೂರು ನಾಲ್ಕು ಮಂಚ ಖಾಲಿಯೇ ಉಳಿದಿತ್ತು!

ಆಯ್ಕೆಯಾಗಿದ್ದವರಿಗೆ ಮುಂದಿನ ಎರಡೋ ಮೂರೋ ದಿನ ಹಲವು ತರದ ದೈಹಿಕ, ಮಾನಸಿಕ, ಲಿಖಿತ ಮತ್ತು ಮೌಖಿಕ ಪರೀಕ್ಷೆಗಳನ್ನು ಮಾಡಿದರು. ಆ ಉದ್ದಕ್ಕೆ ವಠಾರದೊಳಗಿನ ನಮ್ಮ ವಿರಾಮದ ಚಟುವಟಿಕೆಗಳ ಮೇಲೂ ಗೃಧ್ರ ದೃಷ್ಟಿ ಇಟ್ಟಿದ್ದರು. ಕೊನೆಯಲ್ಲಿ ಅರ್ಧ ದಿನದ ಬಿಡುವು ಕೊಟ್ಟರು. ಬಹುಶಃ ಎಲ್ಲ ಪರೀಕ್ಷಕರೂ ಒಟ್ಟಾಗಿ ಕುಳಿತು, ನಮ್ಮ ಬಿಡಿ ವಹಿವಾಟುಗಳ ಜತೆ, ನಮ್ಮ ಅರ್ಜಿಯಲ್ಲಿ ನಮೂದಿಸಿದ ದಾಖಲೆಗಳನ್ನು ತೂಗಿ ನೋಡಿರಬೇಕು. ನಾವು ಕೆಲವರು, ಜಬ್ಬಲ್ ಪುರದ ಜೀವನಾಡಿಯಂತೇ ಭಾರೀ ಗದ್ದಲದೊಡನೆ ಓಡಾಡುತ್ತಿದ್ದ ಟಂಟಂ ಸರ್ವೀಸಿನ ಮಂದೆಯಲಿ ಒಂದಾದೆವು. ನಗರಕ್ಕೆ ತೀರಾ ಸಮೀಪದಲ್ಲೇ ಇದ್ದ ವಿಶ್ವಖ್ಯಾತ ಬೇಲಾ ಘಾಟ್ (ಅಮೃತಶಿಲಾ ಕೊರಕಲು) ಅರ್ಥಾತ್ ನರ್ಮದಾ ನದಿಯ ಉಗಮಸ್ಥಾನ ನೋಡಿದ್ದು, ನಿಜಕ್ಕೂ ಅವಿಸ್ಮರಣೀಯ. ಕೇಂದ್ರಕ್ಕೆ ಮರಳಿದಾಗ ಫಲಿತಾಂಶ ಘೋಷಿಸಿದ್ದರು. ಎರಡೋ ಮೂರೋ ಜನರನ್ನುಳಿದು, ನಾನೂ ಸೇರಿದಂತೆ ಎಲ್ಲರೂ ಅನುತ್ತೀರ್ಣರಾಗಿದ್ದೆವು.

ದೈಹಿಕ ಮತ್ತು ಮಾನಸಿಕ ಕಲಾಪಗಳಲ್ಲಿ ವೈಯಕ್ತಿಕವಾಗಿಯೂ ಗುಂಪಿನ ಭಾಗವಾಗಿಯೂ ನನ್ನ ಪಾತ್ರನಿರ್ವಹಣೆ ಬಗ್ಗೆ ನನಗೆ ತುಂಬಾ ತೃಪ್ತಿಯೇ ಇತ್ತು. ಸಮಯ ಪರಿಪಾಲನೆ, ಬಟ್ಟೆ ಹಾಗೂ ಸಾಮಾನ್ಯ ಶುಚಿತ್ವ ಮತ್ತು ಮುಖ್ಯವಾಗಿ ಊಟದಮನೆ ವರ್ತನೆಗಳು ಸೇರಿದಂತೆ ಒಟ್ಟಾರೆ ನಡವಳಿಕೆಯಲ್ಲಿ ನಾನು ಸೋತಿರಲಾರೆ. ಸಾಮಾನ್ಯ ಜ್ಞಾನ, ಇನ್ನೂ ಮುಖ್ಯವಾಗಿ ಕೇಂದ್ರದ ನಿರ್ದೇಶಕನೇ ಒಬ್ಬೊಬ್ಬನೊಡನೆಯೂ ಮುಚ್ಚಿದ ಕೋಣೆಯಲ್ಲಿ ನಡೆಸಿದ ಸುದೀರ್ಘ ಸಂದರ್ಶನದಲ್ಲಿ, ನಾನು ಮೊದಲೇ ನನ್ನ ಸೋಲನ್ನು ಕಂಡಿದ್ದೆ. ಹಿಂದಿರುಗಿದ ಮೇಲೆ ಮೈಸೂರಿನ ಬಟಾಲಿಯನ್ ಕಮಾಂಡರಿಗೆ ಹೇಳದುಳಿದ ಮಾತನ್ನು ಈಗ ಧಾರಾಳವಾಗಿ ಹೇಳಬಲ್ಲೆ. ಮೊದಲು ಆಫೀಸರ್ ಆಗುವ ಆಂತರಿಕ ಯೋಗ್ಯತೆ ಗಳಿಸಿ, ಓಎಲ್‍ಕ್ಯೂ ಅನುಸರಿಸುತ್ತದೆ! ನಾಯಕತ್ವ ಹೊರಗಿನಿಂದ ಹೇರುವುದಲ್ಲ, ಒಳಗಿನಿಂದ ಅರಳಬೇಕು.

೩. ಕಟುಕನಿಗೆ ನಾವೇ ತಲೆ ಒಪ್ಪಿಸಿಕೊಂಡಂತೆ…

೧೯೭೧ರ ಬೇಸಗೆ ರಜೆಯಲ್ಲಿ ನಮ್ಮ ೨ನೇ ಎನ್.ಸಿ.ಸಿ ಬಟಾಲಿಯನ್ನಿಗೆ ಬಂದ ಏಕೈಕ ವಿಶೇಷ ಶಿಬಿರ – ಬರಾಪಾನಿಯ ಅಖಿಲ ಭಾರತ ಅಧಿನಾಯಕತ್ವ ಶಿಬಿರ, (ಆಲಿಂಡಿಯಾ ಅಡ್ವಾನ್ಸ್ಡ್‍ಲೀಡರ್ಶಿಪ್ ಕೋರ್ಸ್) ನಾನು ಸೇರಿಕೊಂಡೆ. ಅಂದು ಅಸ್ಸಾಂ ರಾಜ್ಯದ ಭಾಗವೇ ಆಗಿದ್ದ ಶಿಲ್ಲಾಂಗಿಗೂ ಐದಾರು ಕಿಮೀ ಮೊದಲು ಸಿಗುವ ಹಳ್ಳಿ ಬರಾಪಾನಿ. ಅದಕ್ಕೆ ನಮ್ಮ ಬಟಾಲಿಯನ್ನಿನಿಂದ ನೇಮನಗೊಂಡ ಅಧಿಕಾರಿ – ಹಿರಿಯ ಸೈನಿಕ, ಸುಬೇದಾರ್ ಉದಯ ಸಿಂಗ್. ಸದಸ್ಯರು ಕರ್ನಾಟಕದ ವಿವಿಧ ಭಾಗಗಳ ಹದಿಮೂರು ಮಂದಿ ವಿದ್ಯಾರ್ಥಿಗಳು. ಮೈಸೂರಿನಿಂದಲೇ ಹೊರಡುವವರಲ್ಲಿ ಹೆಚ್ಚಿನ ಯೋಗ್ಯತೆಯವನು (ಜೂನಿಯರ್ – ಅಂಡರ್ ಆಫೀಸರ್) ನಾನಾದ್ದಕ್ಕೆ, ವಿದ್ಯಾರ್ಥಿ ನಾಯಕತ್ವ ನನಗೇ ಬಂದಿತ್ತು. ನನಗೆ ಹಿಂದೆ ರಾಜಾಸ್ತಾನ್ ಮತ್ತು ಜಬ್ಬಲ್‍ಪುರಕ್ಕೆ ಹೋದ ಅನುಭವದ ಬಲವಿತ್ತು. ಬಹುಶಃ ಉಳಿದೆಲ್ಲರಿಗೂ ಅದು ಪ್ರಥಮ ಅನುಭವ. ಮಂಡ್ಯದಲ್ಲಿ ಸೇರಿಕೊಂಡ ಮರಿಸೂಸೈ ತಂಡದ ಇನ್ನೊಬ್ಬ ಅಂಡರಾಫೀಸರ್. ಆದರೆ ಆತ ಲೋಕಜ್ಞಾನದಲ್ಲಿ ನನಗಿಂತ ಹಿಂದಿದ್ದುದರಿಂದ, ಪ್ರಯಾಣದಲ್ಲಿ ವಿಧೇಯ ಅನುಯಾಯಿಯೇ ಆಗಿದ್ದ.

ಮೈಸೂರಿನಿಂದ ಅಸ್ಸಾಂನ ಗೌಹಾತಿಯವರೆಗೆ, ಅಂದರೆ ಸುಮಾರು ಐವತ್ತು ಗಂಟೆಯ ಪ್ರಯಾಣಕ್ಕೆ ವಿದ್ಯಾರ್ಥಿಗಳಿಗೆಲ್ಲ ತೃತೀಯ ದರ್ಜೆಯ ರೈಲ್ವೇ ಟಿಕೇಟೇನೋ ಎನ್.ಸಿ.ಸಿ ಕೊಟ್ಟಿತ್ತು. ಸ್ಥಳದ ಖಾತ್ರಿ ಮಾತ್ರ ಇರಲಿಲ್ಲ. ನೇರ ರೈಲಿಲ್ಲದ್ದಕ್ಕೆ, ನಡುವೆ ಇಥಾರ್ಸಿಯ ರೈಲ್ವೇಮಹಾಸಂಗಮದಲ್ಲಿ ರೈಲು ಬದಲಿಸುವ ಅನಿವಾರ್ಯತೆಯೂ ಸೇರಿತ್ತು. ಸುಬೇದಾರರಿಗೆ ಸೈನ್ಯ ಯೋಗ್ಯತಾನುಸಾರ ಪ್ರಥಮ ದರ್ಜೆ ಮತ್ತು ಸ್ಥಾನ ಖಾತ್ರಿಯೂ ಸಿಕ್ಕಿತ್ತು. ಆದರೆ ತಂಡವನ್ನು ನಡೆಸಿಕೊಳ್ಳುವ ಅನುಭವದ ಹಿರಿತನದ ಬದಲು ನಿಷ್ಪ್ರಯೋಜಕ ಮುದಿತನವಿತ್ತು. ಟಿಕೇಟ್, ಚಾರ್ಟ್, ಭೋಗಿಗಳೆಲ್ಲವನ್ನು ಅರ್ಥ ಮಾಡಿಕೊಂಡು ಬಳಗಕ್ಕೂ ಸುಬೇದಾರಿಗೂ ನಿರ್ದೇಶಿಸುವುದರೊಡನೆ, ಸುಬೇದಾರರ ಹೊರೆ ಹೊತ್ತು ಹಾಕುವ ಕೂಲಿ ಕೆಲಸವೂ (ಗೆಳೆಯರು ಸಹಾಯ ಮಾಡುತ್ತಿದ್ದರು) ನನಗೆ ‘ಕರ್ತವ್ಯ’ವೇ ಆಗಿತ್ತು!

ರೈಲ್ವೇ ಮಹಾಸಂಗಮ ಇಥಾರ್ಸಿಯಲ್ಲಿ ಬದಲಿ ರೈಲಿಗೆ ಮೂರು ನಾಲ್ಕು ಗಂಟೆಯ ಬಿಡುವಿತ್ತು. ವಿದ್ಯಾರ್ಥಿ ವೃಂದಕ್ಕೆ ರೈಲ್ವೇ ಜಗುಲಿಯಲ್ಲೇ ಒಂದೆಡೆ ಹೊರೆಗಳನ್ನೆಲ್ಲ ಹಾಕಿ, ಸಮಯದ ಅಗತ್ಯಗಳನ್ನು ಪೂರೈಸಿಕೊಳ್ಳಲು ಬಿಟ್ಟೆ. ದೊಡ್ಡ ನಿಲ್ದಾಣಗಳಲ್ಲೆಲ್ಲ ಸೈನಿಕರಿಗೆ ಪ್ರತ್ಯೇಕ ವಿಶ್ರಾಂತಿ ಗೃಹಗಳಿರುತ್ತವೆ. ಹಾಗಾಗಿ ಮತ್ತೊಂದಿಬ್ಬರು ಮಿತ್ರರೊಡನೆ ಸುಬೇದಾರರನ್ನು ಹೊರೆ ಸಹಿತ ವಿಶ್ರಾಂತಿಗೃಹಕ್ಕೂ ಮುಟ್ಟಿಸಿದ್ದಾಯ್ತು. ಅನಂತರ ರೈಲ್ವೇ ಭೋಗಿಗಳ ನಿಯೋಜಕನ ಕಛೇರಿಗೆ ಹೋಗಿ, ನಮ್ಮ ಮುಂದಿನ ಪಯಣಕ್ಕೆ ಜೋಡಣೆಯಾಗಲಿದ್ದ ಭೋಗಿಗಳ ಸಂಖ್ಯೆಯನ್ನೂ ಅದರಲ್ಲಿ ಮುಂದಾಗಿ ಸ್ಥಳ ಕಾಯ್ದಿರಿಸಿದ ಸೀಟುಗಳ ಪಟ್ಟಿಯನ್ನೂ ಗುರುತು ಹಾಕಿಕೊಂಡೆ. (ಮೊಬೈಲ್, ಜೆರಾಕ್ಸ್‍ಗಳಿಲ್ಲದ ದಿನಗಳು.) ಮುಂದೆ ನಿಲ್ದಾಣದ ವಿಸ್ತಾರದಲ್ಲಿ ಕಂಬಿ, ಸಿಗ್ನಲ್ ತಂತಿ, ಕೊಳಚೆ ಚರಂಡಿಗಳ ಜಾಲದಲ್ಲಿ ಎಲ್ಲೆಲ್ಲಾ ಓಡಾಡಿ, ಮುಂದಿನ ಪಯಣಕ್ಕೆ ಜೋಡಣೆಯಾಗಲಿದ್ದ ಭೋಗಿಗಳನ್ನು ಕಂಡುಕೊಂಡೆವು. ಅವುಗಳ ಒಳ ಹೊಕ್ಕು, ಕಾಯ್ದಿರಿಸದ ಸೀಟುಗಳಲ್ಲೇ ನಮ್ಮ ಅಮುಖ್ಯ ಚೀಲಗಳನ್ನಿಟ್ಟು ಬಂದೆವು. ಯುಕ್ತ ಕಾಲಕ್ಕೆ ಅವೆಲ್ಲ ಜೋಡಣೆಗೊಂಡು ಯಾನಕಟ್ಟೆಗೆ ಬಂತು. ಮೊದಲು ಸುಬೇದಾರರನ್ನು ಖಾತ್ರಿಯೇ ಇದ್ದ ಅವರ ಸ್ಥಾನಕ್ಕೆ ಹೊರೆ ಸಹಿತ ಹೊತ್ತು ಹಾಕಿದೆವು. ಮತ್ತೆ ನಮ್ಮ ವ್ಯವಸ್ಥೆಯ ಸೀಟುಗಳಲ್ಲಿ ನಿಶ್ಚಿಂತೆಯಲ್ಲಿ ಕುಳಿತು ರೈಲು ಹೊರಡುವುದನ್ನು ಕಾಯುತ್ತಿದ್ದೆವು. ಆಗ ಹೊಸದೇ ಸಮಸ್ಯೆ, ಟಿಕೆಟ್ ತನಿಖಾಧಿಕಾರಿಯೊಬ್ಬನ ರೂಪದಲ್ಲಿ ಮೊಳೆಯಿತು. ಆತ “ಇವೆಲ್ಲ ಕಾಯ್ದಿರಿಸಿದ ಸೀಟುಗಳು…” ಎಂದು ನಮ್ಮವರನ್ನು ಎಬ್ಬಿಸತೊಡಗಿದ. ನಾನು ಗುರುತು ಮಾಡಿಕೊಂಡಿದ್ದ ಚೀಟಿ ತೋರಿಸಿ ಹಾಗಿಲ್ಲ, ನಾವು ಸ್ಪಷ್ಟ ಆಧಾರ ತೋರಿಸದೆ ಏಳುವುದಿಲ್ಲವೆಂದು ಪಟ್ಟು ಹಿಡಿದೆ. ನಮ್ಮ ತಂಡದಲ್ಲಿ ಸತ್ಯಕ್ಕೆ ಮುಖ ಕೊಡಲು ಹೆದರುವ ಮಂದಿ ಬಹಳಿದ್ದರು. ಅವರಲ್ಲಿ ಯಾರೋ ತನಿಖಾಧಿಕಾರಿ ಲಂಚಕ್ಕೊಲಿಯುವುದನ್ನು ಖಾತ್ರಿಪಡಿಸಿಕೊಂಡು, ನನ್ನನ್ನು ಓಲೈಸತೊಡಗಿದರು. ತನ್ನ ನೇತಾರಿಕೆಯನ್ನು ಸಾರುವವರಂತೆ ಸುಬೇದಾರ್ ಕೂಡಾ ಅಲ್ಲಿಗೆ ಬಂದು “ಅಶೋಕ್ ಭಾಯ್ ಸುಧಾರಿಸಿಕೋ…” ಎನ್ನಬೇಕೇ!

ಉದ್ದ ಕತೆಯನ್ನು ಸಣ್ಣ ಮಾಡುತ್ತೇನೆ. ಮುಂದಿನ ಸುಮಾರು ಒಂದೂವರೆ ದಿನದ ಪ್ರಯಾಣವನ್ನು ನಾನೊಬ್ಬನೇ ಸಾಮಾನ್ಯ ಭೋಗಿಯ ಓಣಿಯಲ್ಲಿ ಸುಧಾರಿಸಿದೆ. ಇತರ ಹನ್ನೆರಡು ಮಂದಿ ಅಧಿಕಾರಿಗೆ ಲಂಚ ಕೊಟ್ಟು, ನಾವೇ ಕಾಯ್ದಿರಿಸಿದ್ದ ಸೀಟನ್ನು, ಹೊಸದಾಗಿ ಗೆದ್ದವರಂತೆ ಅನುಭವಿಸಿದರು! ಬರೌನಿಯಲ್ಲಿ ಗಂಗಾನದಿಗೆ ಹಾಕಿದ್ದ ಹೊಸ ಸೇತುವೆ ಇನ್ನೂ ಸೇವಾಯೋಗ್ಯತೆ ಗಳಿಸಿರಲಿಲ್ಲ. ಹಾಗಾಗಿ ಎಲ್ಲ ರೈಲಿಳಿದು, ಗಂಟುಮೂಟೆ ಹೊತ್ತು, ಸೇತುವೆಯನ್ನು ನಡೆದು ದಾಟಿ, ಇನ್ನೊಂದು ದಂಡೆಯ ಬೇರೇ ರೈಲನ್ನು ಏರಬೇಕಾಯ್ತು. ಇದು ಮತ್ತೆ ನಮ್ಮಲ್ಲಿ ಸಮಾನತೆಯನ್ನು ತಂದಿತ್ತು! ನಮ್ಮ ಬಿಟ್ಟಿ ಚಾಕರಿಯಲ್ಲಿ ಸುಬೇದಾರ್ ಮಾತ್ರ ಫಸ್ಟ್ ಕ್ಲಾಸ್!! ಆದರೇನು, ರೈಲು ಎಲ್ಲರನ್ನೂ ಏಕಭಾವದಲ್ಲೇ ಗೌಹಾತಿ ತಲಪಿಸಿತು – ಲಟಕ್ ಲಟಕ್, ಪಟಕ್ ಪಟಕ್……..

೪. ಭಾರತೀಯತೆ? ಹುಳ ಹಿಡಿದ ಹಣ್ಣಿನ ಸಿಪ್ಪೆ – ದೇಶಭಕ್ತಿ!

ಉಮಿಯಮ್ ನದಿಗೆ ಕಟ್ಟಿದ್ದ ಭಾರೀ ಅಣೆಕಟ್ಟಿನಿಂದ ನಿಂತ ನೀರಸೂಚನೆಯೇ ಅಲ್ಲಿನ ಸ್ಥಳನಾಮ – ಬರಾಪಾನಿ. ಅಣೆಕಟ್ಟೆಯ ನೆರಳಿನ ವಿಸ್ತಾರವಾದ ಮೈದಾನದಲ್ಲಿ ಸುಮಾರು ಮೂವತ್ತು ಗುಡಾರಗಳದ್ದೇ ರಾಜ್ಯ ನಮ್ಮ ಶಿಬಿರ. ಅದು ಅಖಿಲ ಭಾರತದಿಂದ ಆಯ್ದ ಸುಮಾರು ನೂರಾಮೂವತ್ತು ಮಂದಿ ಮತ್ತು ಯುಕ್ತ ವ್ಯವಸ್ಥಾಪನೆಗಷ್ಟೇ ರೂಪುಗೊಂಡಿದ್ದ ತತ್ಕಾಲೀನ ‘ನಗರ’. ಅವುಗಳಲ್ಲಿ ಒಂದೇ ಅಳತೆಯ ಸುಮಾರು ಹದಿಮೂರು ಗುಡಾರಗಳನ್ನು, ಕೇಂದ್ರದಲ್ಲಿ ಒಂದಷ್ಟು ಅಂಗಳ ಉಳಿಯುವಂತೆ ಮಾಡಿ, ಇಂಗ್ಲಿಷಿನ U ಆಕಾರದಲ್ಲಿ ಹಾಕಿದ್ದರು. ಅವು ವಿದ್ಯಾರ್ಥಿ ವಾಸ್ತವ್ಯಕ್ಕೆ ಮೀಸಲು. ಉಳಿದವು ಸಿಬ್ಬಂದಿ ವಾಸ್ತವ್ಯ, ಕಛೇರಿ, ಸಭಾಭವನ, ಸಲಕರಣೆಗಳ ಸದನ, ಅಡುಗೆ, ಶೌಚ ಎಂದು ವಿವಿಧ ಆಕಾರಗಳಲ್ಲಿ, ಅಗತ್ಯಕ್ಕೆ ತಕ್ಕಂತೆ ಸ್ಥಾನಾಪನ್ನವಾಗಿದ್ದವು.

ಗೌಹಾತಿಯಿಂದ ವಿಶೇಷ ಬಸ್ಸುಗಳಲ್ಲಿ ನಾವು ಬಂದು ಇಳಿಯುತ್ತಿದ್ದಂತೆ, ಬಯಲಿನಲ್ಲೇ ವಿಶೇಷ ಸಭೆ ನಡೆಸಿದರು. ಸಾಮಾನುಗಳ ಹೊರೆಯನ್ನು ಹಿಂದಿಟ್ಟು, ಎಲ್ಲರೂ ಅವರವರ ರಾಜ್ಯಾನುಸಾರದ ಗುಂಪುಗಳಲ್ಲಿ ವ್ಯವಸ್ಥಿತವಾಗಿಯೇ ನಿಂತಿದ್ದೆವು. ಶಿಬಿರ ಮುಖ್ಯಸ್ಥ (ಬಹುಶಃ ಕ| ಹರ್ಷ) ಪುಟ್ಟ, ಸುಂದರ ಸ್ವಾಗತ ಭಾಷಣ ಮಾಡಿದರು. ಬಂದಿದ್ದ ಅಷ್ಟೂ ರಾಜ್ಯ, ಮತ್ತವುಗಳ ಪ್ರತಿನಿಧಿ ಸಂಖ್ಯೆಗಳನ್ನು ಮೊದಲಿಗೆ ಘೋಷಿಸಿದರು. ಮತ್ತೆ ಮುಂದಿನ ಮೂರು ವಾರಕ್ಕೆ (ಶಿಬಿರಾವಧಿ) ಆ ಭಿನ್ನತೆಗಳು ಕರಗಿ ಒಂದು ಭಾರತ, ಒಂದು ಸಾಧನೆಯಷ್ಟೇ ಉಳಿಯುವಂತಾಗಬೇಕು ಎನ್ನುವುದನ್ನೂ ಸ್ಪಷ್ಟಪಡಿಸಿದರು. ಅದಕ್ಕೆ ಪ್ರವೇಶಿಕೆಯಾಗಿ ತಾವು ಕೇವಲ ಗುಡಾರ ಸಂಖ್ಯೆಗಳನ್ನಷ್ಟೇ ನಮೂದಿಸಿರುವುದನ್ನು ಬೆಟ್ಟು ಮಾಡಿ ತೋರಿದರು. (ಕರ್ನಾಟಕ ಟೆಂಟ್, ಕೇರಳ ಟೆಂಟ್… ಎಂದಿಲ್ಲ.) ಅನಂತರ ಒಟ್ಟು ವಿದ್ಯಾರ್ಥಿ ಪಟ್ಟಿಯನ್ನಷ್ಟೇ ಎದುರಿಟ್ಟುಕೊಂಡು, ರಾಜ್ಯಗಳನ್ನು ಕಲಸುತ್ತ, ತಲಾ ಹತ್ತು ಮಂದಿಯನ್ನು ಒಂದೊಂದೇ ಗುಡಾರಕ್ಕೆ ನಿಯೋಜಿಸತೊಡಗಿದರು.

ಶಿಬಿರ ಮುಗಿದು ಮರಳಿದಾಗ ನನ್ನಪ್ಪ ವ್ಯವಸ್ಥೆಯನ್ನು ಮೆಚ್ಚಿ ಬರೆದ ಪತ್ರಕ್ಕೆ ಬಂದ ಉತ್ತರ

ಪಟ್ಟಿಯಲ್ಲಿ ಹತ್ತಿಪ್ಪತ್ತು ಹೆಸರು ಕಳೆಯುವಷ್ಟರಲ್ಲೇ ವಿದ್ಯಾರ್ಥಿ ವೃಂದದಲ್ಲಿ ಗೊಣಗಾಟಗಳು ಪ್ರತಿಭಟನೆಯ ಸ್ವರೂಪಕ್ಕೇ ಬೆಳೆದು ನಿಂತಿತ್ತು! ಬಹುಮತದ ವಾದವಿಷ್ಟೆ “ಎಲ್ಲ ಸರಿ, ವಾಸಕ್ಕೆ ಮಾತ್ರ ನಮ್ಮ ನಮ್ಮದೇ ರಾಜ್ಯದ ಗುಂಪುಗಳು ಬೇಕು”! ವರಿಷ್ಠರು ಬಹುತರದಲ್ಲಿ ಹೇಳಿ ನೋಡಿದರು. ಕೊನೆಗೆ, ಇವರು ಸೈನಿಕರಲ್ಲ, ಮೂರು ವಾರಗಳ ಮಟ್ಟಿಗೆ ಅದೂ ಎಲ್ಲ ನಾಗರಿಕ ರಕ್ಷಣಾ ಮಿತಿಯೊಳಗೇ ನಮ್ಮ ಅಧೀನದಲ್ಲಿರುವವರು ಎಂಬುದನ್ನು ಅರಿತೇ ಸೋಲೊಪ್ಪಿದರು. ಆದರೂ ಸಣ್ಣ ಆಸೆಯಲ್ಲಿ “ಸ್ವಯಂಸ್ಫೂರ್ತಿಯಿಂದ ಎಲ್ಲರೊಡನೆ ಒಂದಾಗುವವರು ಇದ್ದರೆ ಮುಂದೆ ಬನ್ನಿ” ಎಂದರು. ನನ್ನನ್ನೂ ಸೇರಿಸಿ ಏಳೆಂಟು ಮಂದಿ ಚುರುಕಾಗಿಯೇ ಮುಂಬಂದೆವು. ನಮ್ಮಲ್ಲಿ ಕೆಲವರು ಆಪ್ತ ಮಿತ್ರರನ್ನು ಪ್ರಭಾವಿಸಿ ಸೆಳೆದುಕೊಳ್ಳಲು ಪ್ರಯತ್ನಿಸಿದ್ದೂ ವಿಶೇಷ ಫಲಕೊಡಲಿಲ್ಲ. ಇಲ್ಲಿ ‘ಭಾರತ ಜನನಿಯ ತನುಜಾತೆ’ಯ ಪೌತ್ರರು, ಅಂದರೆ ಕರ್ನಾಟಕ ಮಾತೆಯ ಮಕ್ಕಳು ಏನು ಮಾಡಿದರು ನೋಡಿ.

ಶಿಬಿರದ ಅಖಿಲ ಭಾರತ ಸ್ವರೂಪಕ್ಕೆ ಸರಿಯಾಗಿ ಕರ್ನಾಟಕ ತಂಡದೊಳಗೆ (ಅಯೋಜಿತವಾಗಿ) ವಿವಿಧ ಊರು, ಧರ್ಮ, ಭಾಷೆಗಳ ಸದಸ್ಯರೇ ಇದ್ದೆವು. ಇಂದಿನ ನೆನಪಿನಲ್ಲಿ ಹೇಳುವುದಿದ್ದರೂ ಮಂಡ್ಯದ ಮರಿ ಸೂಸೈ – ಕ್ರಿಶ್ಚಿಯನ್, ತುಮಕೂರಿನ ಅಸ್ಲಾಂ ಮತ್ತು ಬಷೀರ್ – ಮುಸ್ಲಿಂ, ಉಳಿದಂತೆ ನಾನು, ಕೊಡಗಿನ ಅಶೋಕ್ ಮತ್ತು ಪೂವಯ್ಯ, ಕೊಳ್ಳೇಗಾಲದ ಕೋದಂಡರಾಮ್, ಸಿಂಗೇ ಗೌಡ ಮುಂತಾದವರು – ಏನೇನೋ ಬಿಡಿ. ಹದಿಮೂರರನ್ನು ಕಟ್ಟಿದ್ದ ಒಂದೇ ದುರ್ಬಲ ಎಳೆ – ಪರಸ್ಪರ ಸಂವಾದ ಭಾಷೆಯಾದ ಕನ್ನಡ. ನಿಜದಲ್ಲೂ ನಾವು ಅನಿವಾರ್ಯವಾಗಿ ಒಂದು ಗುಂಪಾಗಿದ್ದೆವೇ ವಿನಾ ಹೇಳಿಕೊಳ್ಳುವಂಥ ಏಕತೆ ನಮ್ಮೊಳಗಿರಲೇ ಇಲ್ಲ. ಆದರೂ ಕರ್ನಾಟಕದ ಹನ್ನೆರಡು ಮಂದಿ ಪ್ರತ್ಯೇಕತೆಯನ್ನೇ ಬಯಸಿದರು. ಸಾಲದ್ದಕ್ಕೆ, ಇಲ್ಲೂ ‘ಸಿಡಿದ’ ನನ್ನನ್ನು, ಇಥಾರ್ಸಿಯಲ್ಲಿ ಮಾಡಿದಂತೇ ತಮ್ಮ ಸೋಲಿಗೆ ಭಾಗೀದಾರನನ್ನಾಗಿಸಿಕೊಳ್ಳಲು ಒತ್ತಾಯವೂ ಮಾಡಿದರು. ವ್ಯವಸ್ಥಾಪಕ ವರ್ಗ ಗುಡಾರದ ಮಿತಿ ಹತ್ತೆಂದು ನೆನಪಿಸಿದರು. ಇವರು “ಹದಿಮೂರಾದರೂ ಅಡ್ಜಸ್ಟ್ ಮಾಡಿಕೊಳ್ತೇವೆ” ಎಂದು ನಿರ್ಲಜ್ಜವಾಗಿ ಹೇಳಿಕೊಂಡರು. ನಾನು ಮಾತ್ರ ಅವರೊಡನೆ ಹೋಗಲಿಲ್ಲ. ಕಡೆಗೂ ನೂರಾಮೂವತ್ತು ಮಂದಿಯಲ್ಲಿ, ಹತ್ತು ಮಂದಿಯ ಒಂದು ಗುಡಾರ ಭರ್ತಿಯಾಗುವಷ್ಟು ಭಾರತೀಯರು ಸಿಕ್ಕಲೇ ಇಲ್ಲ.

೫. ಮತ್ತೆ ಮತ್ತೆ ನಾಯಕತ್ವದ ಪ್ರಶ್ನೆ

ಎನ್.ಸಿ.ಸಿಯೊಳಗೆ ನಾಯಕತ್ವದ ಅಳತೆಗೋಲು ಬಿ ಮತ್ತು ಸಿ ಅರ್ಹತಾಪತ್ರ. ಇವಕ್ಕೆ ಕನಿಷ್ಠ ಸೇವಾನುಭವ ಮತ್ತು ಯುಕ್ತ ಪರೀಕ್ಷೆಗಳ ನಿರ್ಬಂಧವಿದೆ. ಕೇವಲ ಸೇವಾ ಹಿರಿತನ, ವಿಶಿಷ್ಟ ಸಾಧನೆಗಳನ್ನು ಗೌರವಿಸಲು ಐದಾರು ಪದವಿಗಳೂ ಇವೆ. ಆದರೆ ವಾಸ್ತವವೇ ಬೇರೇ. ಹದಿನೇಳು ವರ್ಷ ಎನ್.ಸಿ.ಸಿ ಅಧಿಕಾರಿಯಾಗಿ, ಅದರಲ್ಲೂ ತೀವ್ರವಾಗಿ ತೊಡಗಿಕೊಂಡ ಅನುಭವದ ಮುನ್ನೆಲೆಯಲ್ಲಿ, ನನ್ನ ತಂದೆಯ ಒಂದು ತೀರ್ಮಾನ – ಎನ್.ಸಿ.ಸಿ ಇಂದು ನಿವೃತ್ತ ಅಧಿಕಾರಿಗಳ ವಿಶ್ರಾಂತಿಧಾಮ! ಇದಕ್ಕೆ ಅಸ್ಸಾಂ ಶಿಬಿರಕ್ಕೆ ನಮಗೆ ಸಿಕ್ಕ ‘ನೇತಾರ’ – ಸುಬೇದಾರ್ ಉದಯಸಿಂಗ್ ಒಂದು ಉದಾಹರಣೆ ಮಾತ್ರ. [ತಂದೆಯ ‘ಎನ್.ಸಿ.ಸಿ ದಿನಗಳು’ ಪುಸ್ತಕದ ಪ್ರತಿಗಳು ನನ್ನಲ್ಲಿ ಲಭ್ಯ – ರೂ ೫೫] ಮಹಾರಾಜಾದಲ್ಲಿ ಎರಡನೇ ವರ್ಷಕ್ಕಾಗುವಾಗಲೇ ನಾನು ಎರಡೂ ಅರ್ಹತಾ ಪತ್ರಗಳೊಡನೆ ಜೂನಿಯರ್ ಅಂಡರಾಫೀಸರ್ ಪದಕ್ಕೇ ಏರಿ ಬಿಟ್ಟಿದ್ದೆ.

ಅಸ್ಸಾಂ ಶಿಬಿರಾವಧಿಯಲ್ಲಿ ಒಟ್ಟು ವಿದ್ಯಾರ್ಥಿ ಮುಖ್ಯಸ್ಥನ ಸ್ಥಾನಕ್ಕೆ, ಅಂದರೆ ಕ್ಯಾಂಪ್ ಸೀನಿಯರ್ ಅಂಡರ್ ಆಫೀಸರ್ ಎಂಬ ಗೌರವಕ್ಕೆ, ತಲಾ ಮೂರೋ ನಾಲ್ಕು ದಿನದ ಅವಕಾಶಗಳನ್ನಿಟ್ಟಿದ್ದರು. ಅದಕ್ಕಾಗಿ ಮೊದಲಲ್ಲೇ ತಂಡದ ಅಧಿಕಾರಿಗಳಿಂದ ಶಿಫಾರಸು ಸಹಿತ ಅಂಡರ್ ಆಫೀಸರ್‍ಗಳ ಪಟ್ಟಿ ಸಂಗ್ರಹಿಸಿದ್ದರು. ನಮ್ಮ ತಂಡದಲ್ಲಿ ಇಬ್ಬರಿದ್ದೆವು – ನಾನು ಮತ್ತು ಮರಿಸೂಸೈ. ಪ್ರಯಾಣದುದ್ದಕ್ಕೆ ನನ್ನನ್ನು ಬಳಸಿಕೊಂಡ ಸುಬೇದಾರ್, (ಇಥಾರ್ಸಿಯ ನನ್ನ ಅಶಿಸ್ತಿಗೆ ಶಿಕ್ಷೆ?) ಶಿಫಾರಸು ಬರೆಯುವಲ್ಲಿ ಮರಿಸೂಸೈಯನ್ನು ಮುಂದಿಟ್ಟೇ ಬರೆದು ಪಟ್ಟಿ ಕೊಟ್ಟರು. ಶಿಬಿರದ ಮೊದಲ ಅವಧಿ ಮಹಾರಾಷ್ಟ್ರಕ್ಕೆ ಸಂದಿತು. ಎರಡನೇ ಅವಧಿ ಕರ್ನಾಟಕವೆಂದು ಮರಿಸೂಸೈಗೆ ಬಂದಾಗ, ನನ್ನ ಬೇಸರ ಕೇಳಿದವರಿಲ್ಲ. ಅಲ್ಲಿ ಹತ್ತೆಂಟು ರಾಜ್ಯಗಳ, ಮೂವತ್ತಕ್ಕೂ ಮಿಕ್ಕು ಅಂಡರಾಫೀಸರ್‍ಗಳು ಇದ್ದ ಕಾರಣ, ಕರ್ನಾಟಕಕ್ಕೇ ಇನ್ನೊಂದು ಅವಕಾಶದ ನಿರೀಕ್ಷೆ ಯಾರಿಗೂ ಇರಲಿಲ್ಲ. ಆದರೆ ಶಿಬಿರದಲ್ಲಿನ ನನ್ನ ಚಟುವಟಿಕೆ ಗುರುತಿಸಿದ ವರಿಷ್ಠರು, ನಾಲ್ಕನೇ ಅವಧಿಗೆ ಮತ್ತೆ ಕರ್ನಾಟಕವೆಂದು ನನ್ನನ್ನೇ ನೇಮಿಸಿದ್ದರು! ಶಿಬಿರದ ಮೊದಲ ಹಲವು ದಿನಗಳು ನಮಗೆಲ್ಲ ನಿಜ ಯುದ್ಧದ ಪಾಠ, ಸಣ್ಣ ಪ್ರಯೋಗಗಳನ್ನು ಕೊಟ್ಟರು. ಕೊನೆ ಸಮೀಪಿಸುತ್ತಿದ್ದಂತೆ ಇಡೀ ಶಿಬಿರವನ್ನು ಎರಡು ಕಾಲ್ಪನಿಕ ದೇಶಗಳಾಗಿ ವಿಂಗಡಿಸಿ, ಗೌಪ್ಯದಲ್ಲಿ ಪ್ರತ್ಯೇಕ ಸೂಚನೆಗಳನ್ನು ಕೊಟ್ಟರು. ಪ್ರಥಮಾದ್ಯತೆಯ ಗುಂಪು – ನೀಲ್ ದೇಶ್, ಸುಮಾರು ಮೂವತ್ಮೂರು (ಪ್ಲಟೂನ್) ಆಯ್ದ ಸದಸ್ಯರ ತಂಡ. ಇದು ಕಣಿವೆಯಲ್ಲಿ ಸುಮಾರು ನಾಲ್ಕು ಕಿಮೀ ಕೆಳಗೆ, ಉಮಿಯಮ್ ನದಿಯ ಬಲ ದಂಡೆಗೆ ನಡೆದು, ರಕ್ಷಣಾತ್ಮಕ ವ್ಯೂಹ ರಚಿಸಿ, ವೈರಿ ಆಕ್ರಮಣವನ್ನು ಎದುರಿಸಬೇಕು. ಎರಡನೇ ಗುಂಪು – ಲಾಲ್ ದೇಶ್, ಉಳಿದೆಲ್ಲ ಹುಡುಗರದ್ದು (ಸುಮಾರು ನೂರರ ಮಂದೆ). ಇದು ಬಳಸು ದಾರಿಯಲ್ಲಿ, ಸುದೀರ್ಘ ನಡಿಗೆಯಲ್ಲಿ ವೈರಿಯನ್ನು ಅರಸುತ್ತ ಉಮಿಯಮ್ ನದಿಯ ಎಡ ದಂಡೆಯಿಂದಾಗಿ ನೀಲ್ ದೇಶದ ರಕ್ಷಣಾ ವ್ಯೂಹದ ಮೇಲೆ ಆಕ್ರಮಣ ನಡೆಸಬೇಕು. ನೀಲ್ ದೇಶದ ಮುಖ್ಯಸ್ಥನಾಗಿ ನನ್ನನ್ನು ಆರಿಸಿದರು. ಇದರಲ್ಲಿ ಕೆಲಸ ಜಾಸ್ತಿಯಿದ್ದುದರಿಂದ ಸದಸ್ಯರನ್ನು ಆಯ್ದುಕೊಳ್ಳುವ ಅವಕಾಶ ಪೂರ್ತಿ ನನಗೇ ಕೊಟ್ಟಿದ್ದರು. ನಾನು ಕರ್ನಾಟಕದೆಲ್ಲರಿಗು ಪ್ರಥಮ ಪ್ರಾಶಸ್ತ್ಯ ಕೊಟ್ಟೇ ಸಂಖ್ಯೆ ಭರ್ತಿ ಮಾಡಿಕೊಂಡಿದ್ದೆ. ಸುಮಾರು ಇಪ್ಪತ್ನಾಲ್ಕು ಗಂಟೆಗಳ, ನಿದ್ರಾರಹಿತ ಮತ್ತು ಭಾರೀ ಶ್ರಮದ ಕಾರ್ಯಾಚರಣೆ ನಮ್ಮದು. ಹೊಗೆ ಬಾಂಬು, ಬಿಡಿ ಬಿಡಿ ಮತ್ತು ನಿರಂತರ ಹುಸಿ ಗುಂಡಿನ ಶಬ್ದಗಳೊಡನೆ (ಇವನ್ನು ಮೌನ ವೀಕ್ಷಕರಾಗಿ ಜತೆಗೊಟ್ಟಿದ್ದ ಶಿಕ್ಷಕರೇ ನಿರ್ವಹಿಸಿದರು) ಮುಸ್ಸಂಜೆಗೆ ತೊಡಗಿದ ಅಂತಿಮ ಹೋರಾಟ, ಸುಮಾರು ಒಂದೆರಡು ಗಂಟೆ ರಾತ್ರಿಗೂ ಚಾಚಿಕೊಂಡ, ವಿವರಿಸಿ ಮುಗಿಯದ ಅದ್ಭುತ.

ಮೌನವೀಕ್ಷಕರಲ್ಲಿ ಶಿಬಿರ ವರಿಷ್ಠರೂ ಇದ್ದರು. ಎಲ್ಲ ಮುಗಿಸಿ, ಮೂಲ ಶಿಬಿರಕ್ಕೆ ಮರಳಿದ್ದೇ ಪೂರ್ಣ ಸಭೆ ಕರೆದಿದ್ದರು. ಅದರಲ್ಲಿ ಶಿಬಿರ ವರಿಷ್ಠ, ಇಡಿಯ ಅಣಕು ಯುದ್ಧವನ್ನು ತುಂಬ ಚೆನ್ನಾಗಿ ವಿಮರ್ಶಿಸಿದರು. ನಮ್ಮ ತಂಡಕ್ಕೆ ವಿಶೇಷ ಮೆಚ್ಚುಗೆ ನುಡಿಗಳನ್ನೇ ಕೊಟ್ಟರು. ಮುಂದೆ ಅಂಚೆಯಲ್ಲಿ ಮುದ್ರಿತ ಪ್ರಮಾಣಪತ್ರ ಕಳಿಸಿದಾಗ, ವ್ಯಕ್ತಿ ವಿಶೇಷ ನಮೂದಿಸಲಿದ್ದ ಸಣ್ಣ ಕಲಂ ಮೇರೆವರಿವಂತೆ ನನಗೆ ಪ್ರಶಂಸಾ ಮಾತುಗಳನ್ನೂ ಬರೆದಿದ್ದರು!ಅಸ್ಸಾಂ ರೈಲ್ವೇ ರಸ್ತೆಯ ಜಲಪೈಗುರಿ ನಿಲ್ದಾಣ – ಡಾರ್ಜಿಲಿಂಗ್ ಗಿರಿಧಾಮಕ್ಕೆ ಪ್ರವೇಶದ್ವಾರ. ಅಲ್ಲಿ ಸರ್ವೀಸ್ ಜೀಪ್ ಏರಿದರೆ, ಸುಮಾರು ಮೂರು ಗಂಟೆಯ, ಎಪ್ಪತ್ತು ಕಿಮೀನ ಏರು ದಾರಿಯ ಕೊನೆ ಡಾರ್ಜಿಲಿಂಗ್. ಬರಾಪಾನಿ ಶಿಬಿರ ಮುಗಿಸಿದ ಮರುಪ್ರಯಾಣದಲ್ಲಿ, ನಾವೆಲ್ಲ ಒಂದು ದಿನದ ಮಟ್ಟಿಗೆ ಜಲಪೈಗುರಿಯಲ್ಲಿ ‘ಬ್ರೇಕ್‍ಜರ್ನಿ’ (ಪ್ರತ್ಯೇಕ ಶುಲ್ಕವೇನೂ ಇಲ್ಲದ ರೈಲ್ವೇಯವರ ಅಧಿಕೃತ ವ್ಯವಸ್ಥೆ) ಮಾಡಿ, ಡಾರ್ಜಿಲಿಂಗ್ ಭೇಟಿ ಕೊಡುವುದನ್ನು ನಿಶ್ಚೈಸಿಕೊಂಡೆವು. ಪ್ರಯಾಣದ ಜಾಣತನಕ್ಕೆ ಸುಬೇದಾರ್ ಮತ್ತೆ ನನ್ನನ್ನೇ ನಾಯಕನನ್ನಾಗಿಸಿದ್ದರು. ನಾನು ಸುಬೇದಾರರಲ್ಲಿ ಡಾರ್ಜಿಲಿಂಗ್ ಭೇಟಿಯ ಕುರಿತು ಔಪಚಾರಿಕ ಅನುಮತಿ ಕೇಳಿದೆ. ಅವರು ಗಂಭೀರರಾಗಿ “ಅಸಾಧ್ಯ, ನನಗೆ ಊರಿಗೆ ತುರ್ತು ಮರಳಬೇಕು” ಎಂದರು.

ನಾನು “ಸರಿ, ನಮಗೆ ಅನುಮತಿ ಕೊಟ್ಟು, ನೀವು ಮುಂದೆ ಹೋಗಿ” ಎಂದೆ.ಆಗ ಅವರು ದೈನ್ಯದಲ್ಲಿ “ಡಾರ್ಜಿಲಿಂಗ್ ಜೀಪ್ ಸರ್ವೀಸ್ ಅಪಾಯಕಾರಿ. ನಿಮಗೆ ಹೆಚ್ಚು ಕಮ್ಮಿಯಾದರೆ ನನಗೆ ಶಿಕ್ಷೆಯಾಗುತ್ತದೆ” ಎಂದರು. ನಾನು ಬಿಗಿಯಾಗಿ “ನಾವೆಲ್ಲ ಪ್ರಾಯ ಪ್ರಬುದ್ದರು. ಜವಾಬ್ದಾರಿ ನಮ್ಮದೆಂದು ಪತ್ರ ಕೊಟ್ಟು, ಹೋಗುವುದು ಖಂಡಿತ” ಎಂದೆ. ಅವರು ಕೆರಳಿ “ನಿನ್ನ ಅಶಿಸ್ತಿಗೆ ಸೈನ್ಯದಲ್ಲಿ ‘ಕೋರ್ಟ್ ಮಾರ್ಶಲ್’ ಎದುರಿಸಬೇಕಾಗುತ್ತದೆ” ಎಂದರು. ನಾನು ನಗುತ್ತ ಹೇಳಿದೆ “ಸೈನ್ಯದ ಕಾನೂನು ನಮಗೆ ಲಗಾವಲ್ಲ. ಬೇಕಿದ್ದರೆ ಪತ್ರ ತೆಗೆದುಕೊಂಡು ಮೈಸೂರಿಗೆ ಹೋಗಿ. ನಾವು ಹೊರಟೆವು” ಎಂದು ಮುಗಿಸಿದೆ. ಆತ ಹೆಚ್ಚು ಕಮ್ಮಿ ಅಳುವಂತೆ “ಇಲ್ಲ ಕಾಯುತ್ತೇನೆ” ಎಂದು, ಪತ್ರ ಇಟ್ಟುಕೊಂಡು, ನಿಲ್ದಾಣದ ವಿಶ್ರಾಂತಿಗೃಹ ಸೇರಿಕೊಂಡರು. ನಾವು ಬೆಳಿಗ್ಗೆ ಒಂದೇ ಬಾಡಿಗೆ ಜೀಪಿನಲ್ಲಿ ಹೋದವರು, ಮೇಲೆ ಪೇಟೆಯಲ್ಲಿ ಅವರವರ ‘ಭಾವ’ಕ್ಕೆ ತಕ್ಕಂತೆ ಡಾರ್ಜಿಲಿಂಗ್ ಅನುಭವಿಸಿದೆವು! ಸಹಜವಾಗಿ, ಎಲ್ಲ ಚದುರಿಹೋದರೂ ಮರು ದಿನ ಬೆಳಗ್ಗಿನೊಳಗೆ ಮತ್ತೆ ರೈಲಿನಲ್ಲಿ ಸೇರಿಕೊಂಡೆವು. ಸುಬೇದಾರ್ ಜತೆಯೇ ಮೈಸೂರಿಗೆ ಮರಳಿದೆವು. (ದೂರು, ವಿಚಾರಣೆಗಳ ಮಾತು ಬರಲೇ ಇಲ್ಲ.)

ವಿಶೇಷ ಪ್ರಶಂಸೆ ಸಹಿತ ಪ್ರಮಾಣಪತ್ರ

(ಮುಂದುವರಿಯಲಿದೆ)