(ಜಾತಿ ಮತಗಳ ಚಕ್ರಸುಳಿ ಮೀರಿ – ೫)

ಸಾಂದರ್ಭಿಕ ಚಿತ್ರ

೧. ಬ್ರಾಹ್ಮಣ ಭೋಜನದಲ್ಲಿ ವೀರಪ್ಪ ಗೌಡರು! 

ವೈಜ್ಞಾನಿಕ ಮನೋಧರ್ಮವನ್ನು ಸ್ವಂತ ಜೀವನಕ್ಕಳವಡಿಸಿಕೊಂಡೇ ಇತರರಿಗೆ ಮಾತು, ಬರಹಗಳಲ್ಲಿ ಪ್ರಚಾರ ಮಾಡಿದವರು ನನ್ನ ತಂದೆ – ಜಿಟಿನಾ. ಅವರಿಗೆ ಮುತ್ತಜ್ಜನಿಂದ ಶ್ಲೋಕಗಳ ಪಾಠವಾದ್ದಕ್ಕೆ, ಏಳರ ಪ್ರಾಯದಲ್ಲಿ ಉಪನಯನದ ಮುದ್ರೆ ಬಿದ್ದಿತ್ತು. ಮುಂದೆ ಹುಡುಗ ವೇದ ಮಂತ್ರಗಳಿಗೆ ಏರುತ್ತ, ಬಾಲಶಂಕರನೇ ಆಗಬೇಕೆಂಬ ನಿರೀಕ್ಷೆ ಅವರಪ್ಪಮ್ಮಂದಿರದ್ದಿತ್ತು. ಆದರೆ ಹನ್ನೊಂದರ ಪ್ರಾಯದಲ್ಲಿ ಇವರಲ್ಲಿ ‘ಬುದ್ಧ’ನೆದ್ದಿದ್ದ. (ಹೆಚ್ಚಿನ ವಿವರಗಳಿಗೆ ಶಾಲೆ ತೊಡಿಸಿದ ಕಡಿವಾಣ)

ನನ್ನ ಬಾಲ್ಯದಲ್ಲಿ ಪರಿಚಿತ ಸಮಾಜದ ನಿರೀಕ್ಷೆಯ ‘ಅಶೋಕನ ಉಪನಯನ’, ‘ಗಣಪತಿ ಮದುವೆ’ ಆಗಿತ್ತು. ಆದರೆ ಮಗನ ಮೇಲೆ ಅಮ್ಮನ ಹಕ್ಕನ್ನು ತಂದೆ ತಡವಾಗಿಯಾದರೂ ಮನ್ನಿಸಬೇಕಾಯ್ತು. (ನನ್ನನ್ನೂ ಒಪ್ಪಿಸಲಾಯ್ತು!) ನಾನು ಪ್ರಥಮವೋ ದ್ವಿತೀಯವೋ ಬೀಯೆಯಲ್ಲಿದ್ದಂತೆ, ನಂಜನಗೂಡಿನ ಕ್ಷೇತ್ರ ಪುರೋಹಿತರೊಬ್ಬರ ಮನೆಯಲ್ಲಿ ‘ಸಂಪೂರ್ಣ ಉಪನಯನ’ದ (ಪ್ಯಾಕೇzoo) ಒಪ್ಪಂದ ಮಾಡಿ ಬಂದರು. ಪುರೋಹಿತರು ಸಂಪ್ರದಾಯದ ಠಕ್ಕು ಮಾತಾಡಿ, ಆದಿತ್ಯವಾರದ ಮುಹೂರ್ತವೇ ಇಲ್ಲವೆಂದರು. (ಆದಿತ್ಯವಾರಗಳಂದು ದೇವಾಲಯದ ಬಿಜಿನೆಸ್ ಅವರಿಗೆ ಬಿಡಲಾಗದಷ್ಟು ಜೋರಿರುತ್ತಲ್ಲಾ!) ಪಂಚಾಂಗ, ಮುಹೂರ್ತ ತಂದೆ ಅರಿದು ಕುಡಿದವರೇ! ಆದರೂ “ಆಯ್ತು, ಒಂದು ದಿನ ಆಫೀಸಿಗೆ ರಜೆ” ಎಂದು ಒಪ್ಪಿಯೇ ಬಂದಿದ್ದರು. ಆ ‘ಶುಭ’ದಿನದಂದು ಅವರು ಕಚೇರಿಗೆ ರಜೆ, ನಾನು ಕಾಲೇಜಿಗೆ ಚಕ್ಕರ್. ಆನಂದನಂತ ಎಂದಿನಂತೆ ಶಾಲೆಗೆ ಹೋದರು. ನಾವು ಮೂವರು + ಅಮ್ಮನ ನೆರೆಮನೆ ಗೆಳತಿ – ಆನಂದಮ್ಮ, ನಂಜನಗೂಡಿಗೆ ಹೋದೆವು. ಕಲಾಪಗಳು ನಡೆದವು.

ಆಯ್ದ ಮೂರೋ ನಾಲ್ಕೋ ಮಂದಿ ಸಹೋದ್ಯೋಗೀ ಆಪ್ತರಿಗೆ ‘ಬ್ರಾಹ್ಮಣ ಭೋಜನ’ದ ಸಮಯಕ್ಕಷ್ಟೇ ಬರುವಂತೆ ತಂದೆ ಹೇಳಿಕೆ ಕೊಟ್ಟಿದ್ದರು. ಅಂತೆಯೇ ಅವರು ಸಕಾಲಕ್ಕೆ ಬಂದಿದ್ದರು. ಪುರೋಹಿತರು ‘ಬ್ರಾಹ್ಮಣ ಭೋಜನ’ವನ್ನು ಘೋಷಿಸಿದಾಗ, ಕನ್ನಡ ವಿಶ್ವಕೋಶದ ಮಾನವಿಕ ವಿಭಾಗದ ಸಂಪಾದಕ ಎಚ್ಚೆಸ್ಕೆ (ಅಯ್ಯಂಗಾರ್), ಸಾಹಿತ್ಯ ವಿಭಾಗದ ಎನ್. ಪ್ರಹ್ಲಾದ ರಾವ್ (ಮಾಧ್ವ) ಸಹಜವಾಗಿಯೇ ಊಟಕ್ಕೆದ್ದರು. ಆದರೆ ಆಡಳಿತ ವರಿಷ್ಠರಾಗಿದ್ದ ಕೆ.ಟಿ. ವೀರಪ್ಪನವರು (ಗೌಡರು) ಸಂಕೋಚಿಸಿದರು. ಆದರೆ ತಂದೆಯದೋ ಪ್ರಹ್ಲಾದರಾಯರದೋ ಕಿವಿ ಮಾತಿನಂತೆ, ಮತ್ತೆ ನಿರ್ವಿಕಾರವಾಗಿ ಬಂದು ಪಂಕ್ತಿಯಲ್ಲಿ ಕುಳಿತರು. ಪರಿಶಿಂಚನಾದಿ ‘ಪೂರ್ವರಂಗ’ವನ್ನು ಇತರರನ್ನನುಕರಿಸಿ, ‘ಬ್ರಾಹ್ಮಣ ಭೋಜನ’ ಸಾಂಗವಾಗಿಸಿದರು. (ನನ್ನ ಜನಿವಾರ ಒಂದು ವಾರಕ್ಕೂ ಬಾಳಿಕೆ ಬರಲಿಲ್ಲ!)

ಹೀಗೇ ಆನಂದನಂತರಿಗೂ ಮುಂದೆಂದೋ ಶಾಸ್ತ್ರ ಆಗಿರಬೇಕು. ಮನೆ ಮರ್ಯಾದೆಯಂತೆ ನಾನು (ಮಂಗಳೂರಿನಲ್ಲಿದ್ದೆ) ಭಾಗವಹಿಸಲಿಲ್ಲ! ಅಭಯನ ಕಾಲಕ್ಕಾಗುವಾಗ ದೇವಕಿ ನನ್ನಷ್ಟೇ ‘ನಂಬಿಕಸ್ಥ’ಳಾದ್ದರಿಂದ ಅವನ ಉಪನಯನದ ಸೊಲ್ಲೇ ಏಳಲಿಲ್ಲ. ಅವನ ಮದುವೆಯ ಕಾಲಕ್ಕೆ ಹೆಣ್ಣಿನ ಕಡೆಯವರಿಗೆ ಮುಂದಾಗಿಯೇ ತಿಳಿಸಿದ್ದೆವು. ಅವರದ್ದೇನೂ ಅಭ್ಯಂತರವಿರಲಿಲ್ಲ. ಆದರೆ ಅವರು ಮದುವೆ ಮಾತ್ರ ಸಾಂಪ್ರದಾಯಿಕ ಕ್ರಮದ್ದೆಂದರು, ಒಪ್ಪಿದೆವು. ಪುರೋಹಿತರಿಗೆ ಉಪನಯನದ ವಿಚಾರ ಹೇಳಲಿಲ್ಲ. ‘ನಟಭಯಂಕರ’ ಅಭಯ ಪುರೋಹಿತರಿತ್ತ ಸೂಚನೆಗಳನ್ನು ಚಾಚೂ ತಪ್ಪದೆ ಅಭಿನಯಿಸಿದ್ದರಿಂದ ಮದುವೆ ಸಾಂಗವಾಯ್ತು! ಕೀರ್ತಿಶೇಷ ಮೈಕೆ ಶಂಕರನಾರಾಯಣ ಭಟ್ಟರು – ನನ್ನ ಪುತ್ತೂರು ಅಜ್ಜನ ಆಪ್ತ ಪುರೋಹಿತರು, ಪ್ರಾಮಾಣಿಕ ವೈದಿಕರು. ಒಮ್ಮೆ ಹೇಳಿದ್ದಿತ್ತು “ನಾವು ನಡೆಸುವ ಮದುವೆಗಳು ವೈದಿಕ ಎನ್ನುವುದು ತಪ್ಪು. ಅವು ನಿಜದಲ್ಲಿ ಕೇವಲ (ಸಂಸ್ಕೃತದಲ್ಲಿ) ಕ್ರಿಯಾಸೂಚನೆಗಳು ಮತ್ತು ಕೆಲವು ಪ್ರಾರ್ಥನೆಗಳು.”

ಮೈಸೂರಿಗೆ ಬಂದ ಕೆಲವೇ ದಿನಗಳಲ್ಲಿ ನನಗೆ ನಿಜದ ಉಪನಯನ (= ಕನ್ನಡಕ) ಬಂದಿತ್ತು. “ಅದಲ್ಲ, ಅಂತಃಚಕ್ಷುವಿನ ದ್ವಾರ ತೆರೆಯಲು, ಭೂಮಿಗೆ ಬಂದ ಜಂತು ಮನುಷ್ಯ ಎನ್ನಿಸಿಕೊಳ್ಳುವ ಎರಡನೇ ಜನ್ಮ (ದ್ವಿಜ) ತಳೆಯಲು ಅವಶ್ಯ ವೈದಿಕ ಕರ್ಮವೇ ಉಪನಯನ” ಎನ್ನುವವರೇ ಬಹುಸಂಖ್ಯಾತ ‘ಕುಲಜರು’. ಹಾಗೇ ಅವರೆಲ್ಲ ಆಂತರ್ಯದಲ್ಲಿ ಒಪ್ಪುವ ಅಷ್ಟೇ ಸತ್ಯ – ವರ್ತಮಾನದ ಶೇಕಡಾ ತೊಂಬತ್ತೊಂಬತ್ತು ‘ದ್ವಿಜ’ರ ಜನಿವಾರಗಳು ಬ್ರಾಹ್ಮಣತ್ವದ ನಿರುಪಯುಕ್ತ ಸಂಕೇತಗಳು.

೨. ಸಾವಿರಾರು ಮಾಯಾ ಜಿಂಕೆಗಳು!

ಉದಯವಾಣಿ ಪತ್ರಿಕೆಯನ್ನು ಹುಟ್ಟಿನಿಂದಲೇ ಎತ್ತಿ ಆಡಿಸಿದವರಲ್ಲಿ ಕುಶಿ ಹರಿದಾಸ ಭಟ್ಟರು ಮುಖ್ಯರು. ಅವರ ಬಹುಶ್ರುತತ್ವದ ಒಂದು ಸಣ್ಣ ಅಭಿವ್ಯಕ್ತಿಯಾಗಿ ‘ಲೋಕಾಭಿರಾಮ’ ಎಂಬ ಅಂಕಣವನ್ನೂ ಅದಕ್ಕೆ ಬರೆಯುತ್ತಿದ್ದರು. ಉದಯವಾಣಿ ವರ್ಷಕ್ಕೊಮ್ಮೆ ದೀಪಾವಳಿ ಸಂಚಿಕೆ ಹೊರಡಿಸುವ ಕಾಲಕ್ಕೆ, ಕುಶಿಯವರು ಅದಕ್ಕೊಂದು ವಿಶೇಷ ಲೇಖನವನ್ನೂ ಸಿದ್ಧಪಡಿಸುವುದಿತ್ತು. ಆ ಕಾಲದಲ್ಲಿ ಉದಯವಾಣಿಯ ಬಹುದೊಡ್ಡ ಶಕ್ತಿ – ಅತ್ಯಾಧುನಿಕ ಮುದ್ರಣ ಸೌಲಭ್ಯ. ಇದರ ಪೂರ್ಣ ಲಾಭ ಓದುಗರಿಗೆ ದಕ್ಕುವಂತೆ ಕುಶಿಯವರು ಸಚಿತ್ರ ಲೇಖನವನ್ನೇ ಕೊಡುತ್ತಿದ್ದರು ಮತ್ತೂ ಅದಕ್ಕಾಗಿ ಸ್ವತಃ ಕ್ಯಾಮರಾ ಹಿಡಿದು ಊರು ಸುತ್ತುವುದೂ ಇತ್ತು. ಅಂಥದ್ದೇ ಯೋಜನೆಯಲ್ಲಿ ಅದೊಂದು ದಿನ ಕುಶಿಯವರು ಉಡುಪಿಯಿಂದ (ಬಾಡಿಗೆ) ಕಾರು ಮಾಡಿಕೊಂಡು ಮೈಸೂರಿಗೆ ಬಂದಿದ್ದರು. ಮೈಸೂರಿನಲ್ಲೇ ಇದ್ದ ಅವರ ಭಾವ (ಹೆಂಡತಿ ತಮ್ಮ) ಖ್ಯಾತ ಶಾಸನ ತಜ್ಞ ಕೆವಿ ರಮೇಶ್ ಮನೆಯಲ್ಲಿ ಯಾನ-ಜಡವನ್ನು ಕಳೆದದ್ದೇ “ನಾರಾಯಣರಾಯರಲ್ಲಿಗೆ…” ಎದ್ದೇ ಬಿಟಿದ್ದರು. ಕರೆಗಂಟೆ ಉತ್ತರಿಸಿದವ ನಾನು. ಕುಶಿಯವರ ಸಾಧನೆ, ಆಸಕ್ತಿಗಳ ಕುರಿತು ಅಂದು ನನ್ನ ತಿಳುವಳಿಕೆ ತುಂಬ ಸಣ್ಣದು. ಆದರೆ ಮುಖಪರಿಚಯ ಮತ್ತು ಕುಟುಂಬಮಿತ್ರನೆಂಬ ಅರಿವು ದೊಡ್ಡದಿತ್ತು. ಅವರು ಒಳಗೆ ಬರುತ್ತಿದ್ದಂತೆ “ಹೌದನಾ ಪರ್ವತಾರೋಹಿ, ನಮಗೆ ರಂಗನತಿಟ್ಟಿಗೆ ನಾಳೆ ಮಾರ್ಗದರ್ಶಿಯಾಗಿ ಬರ್ತಿಯಾ?” ಕೇಳಿದ್ದರು.

ನಾನಿನ್ನೂ ಮೈಸೂರಿಗೆ ಹೊಸಬ “ದಾರಿ ಗೊತ್ತಿಲ್ಲ” ಎಂದೆ. ನಗಾಡಿದರು, “ದಾರಿ ಯಾರೂ ಹೇಳ್ತಾರೆ, ನಮಗೊಂದು ಗಟ್ಟಿ ಜನ ಬೇಕು” ಎಂದ ಮೇಲೆ, ನಾನು ಹನುಮನೇ! ಹೋದೆವು, ಅಂಥ ಖಗ ಸಂಪತ್ತು ನಾನು ಅದೇ ಮೊದಲು ನೋಡಿದ್ದು. ಕಾವೇರಿ ದಂಡೆಯಲ್ಲಿ ಸುತ್ತಾಡಿದೆವು. ಅವರು ಸಾಕಷ್ಟು ಚಿತ್ರಗ್ರಹಣ ನಡೆಸಿರಬೇಕು. ಒಂದು ದಿಕ್ಕಿನಲ್ಲಿ ಕಾವೇರಿಗೆ ಸೇರುವ ಸಣ್ಣ ತೊರೆಯೊಂದನ್ನು ದಾಟುವುದು ಅವರಿಗೆ ಅಸಾಧ್ಯವಿತ್ತು. ನಾನು (ಹನುಮನಲ್ಲವೇ!) ಲಂಘಿಸಿದೆ. ಅವರ ಕ್ಯಾಮರಾ ಹೊತ್ತು, ಆ ದಿಕ್ಕಿನ ಚಿತ್ರ ತೆಗೆದೆನೋ ಕೇವಲ ಕಂಡದ್ದರ ನುಡಿಚಿತ್ರ ಕೊಟ್ಟೆನೋ ನೆನಪಿಲ್ಲ. ಅಲ್ಲೆಲ್ಲೋ ಮೊಣಕಾಲ ಮಟ್ಟಕ್ಕೆ ನಾನೊಮ್ಮೆ ಗೊಸರಿನಲ್ಲಿ ಸಿಕ್ಕಿಕೊಂಡರೂ ಪಾರಾಗಿ ಬಂದದ್ದು ಕುಶಿಯವರಿಗೆ ರೋಮಾಂಚಕವೇ ಆಗಿ ಕಂಡಿರಬೇಕು! ಹಾಗಾಗಿ ಅದೇ ಸಲವೋ ಇನ್ನೊಮ್ಮೆಯೋ ನೆನಪಿಲ್ಲ, ಇನ್ನೊಂದೇ ಯೋಜನೆಯಲ್ಲಿ ಕುಶಿಯವರು ನನ್ನನ್ನು ಬಂಡಿಪುರ ವನಧಾಮಕ್ಕೂ ಕರೆದೊಯ್ದರು. ಆ ಬಾರಿ ಕೆವಿ ರಮೇಶ್ ಕೂಡಾ ಜತೆಗಿದ್ದರು. ‘ಅಭಯಾರಣ್ಯ’ ಎಂಬ ವ್ಯವಸ್ಥೆಯನ್ನು ಅದೇ ಮೊದಲು ನಾನು ನೋಡಿದ್ದು. ಇಲಾಖೆ ಅವರಿಗೆ ಒಂದು ಪುಟ್ಟ ಮನೆ (ಡಾರ್ಮಿಟರಿ) ಕಾಯ್ದಿರಿಸಿತ್ತು. ಮನೆಯೊಳಗೆ ಇಲಾಖೆಯ ವಿಶೇಷ ಸೂಚನೆ ಇತ್ತು “ರಾತ್ರಿ ಅಂಗಳದಲ್ಲಿ ನಡೆಯುವ ಜಿಂಕೆ ಜಾತ್ರೆ ನೋಡಲು ಮರೆಯದಿರಿ”! ನಮಗೆ ನಂಬಿಕೆ ಇಲ್ಲದಿದ್ದರೂ ಅಪರಾತ್ರಿಯಲ್ಲಿ ಒಂದೆರಡು ಬಾರಿ ಎದ್ದು ಕಿಟಕಿಯ ಪಾರದರ್ಶಕ ಗಾಜಿಗೆ ಕಣ್ಣು ಹಚ್ಚಿದ್ದೆವು. ಮಂಕು ಬೆಳಕಿನಲ್ಲಿ ಏನೂ ಕಾಣಿಸಲಿಲ್ಲ. ಬಾಗಿಲು ತೆರೆದು ತನಿಖೆ ಮಾಡಲು ಧೈರ್ಯವಿರಲಿಲ್ಲ. (ನಮ್ಮನ್ನು ಉಂಡು ಸಂತಸದಿಂದಿರಲು ದುಷ್ಟ ವ್ಯಾಘ್ರ ಹೊಂಚುತ್ತಿದ್ದರೆ!) ಬೆಳಗ್ಗಿನ ಜಾವ ಭಂಡ ಧೈರ್ಯದಲ್ಲಿ ಮೆಲ್ಲನೆ ಬಾಗಿಲು ತೆರೆದೇ ಬಿಟ್ಟೆವು. ಅರುಣರಾಗದಲ್ಲಿ, ಮಂಜಿನ ಮಾಯೆಯಲ್ಲಿ ಎಲ್ಲೆಲ್ಲೂ ಜಿಂಕೆಗಳೇ! ಜಗುಲಿಯಲ್ಲಿ, ಅಂಗಳದಲ್ಲಿ, ಮಂಜುಗಣ್ಣಿನಲ್ಲಿ ತೂಕಡಿಸಿದ್ದ ನಮ್ಮ ಕಾರಿನ ಮರೆಯಲ್ಲಿ, ದಿಟ್ಟಿ ಹರಿಯುವ ದೂರಕ್ಕೂ ಜಿಂಕೆಗಳೋ ಜಿಂಕೆಗಳು. (ನಿಶಾಚರಿ ಮಾಂಸಾಹಾರಿಗಳಿಂದ ರಕ್ಷಣೆ ಬಯಸಿ ಅವು ಮನುಷ್ಯ ವಸತಿಗಳ ಸಮೀಪದಲ್ಲಿ ವಿಶ್ರಾಂತಿ ಪಡೆಯಲು ಸೇರುತ್ತವೆ ಎಂದು ನನಗೆ ಅಂದು ತಿಳಿದಿರಲಿಲ್ಲ.) ಕ್ಯಾಮರಾಕ್ಕೆ ಮಾತ್ರ ಎಲ್ಲ ರಾಮಬಾಣ ತಪ್ಪಿಸಿದ ಮಾಯಾ ಜಿಂಕೆಗಳೇ; ಒಂದೂ ಸರಿ ಸಿಕ್ಕಲಿಲ್ಲ! ವಾಸ್ತವ ರಾಮಾಯಣದಲ್ಲಿ (ಪವಾಡಗಳಿಲ್ಲದ) ಸೀತೆಗೆ ಕಂಡ ಜಿಂಕೆಯೂ ಹೀಗೇ ಬಂದದ್ದು ಇರಬಹುದಲ್ಲವೇ?!

೩. ನಂಜನಗೂಡಿನಲ್ಲಿ ಪ್ರಸಾದ ತಪ್ಪಿಸಿದ್ದು!

ಮಡಿಕೇರಿಯಿಂದ ನನ್ನ ಚಿಕ್ಕಜ್ಜಿ – ಭಾಂತೆಮ್ಮ, ಮೈಸೂರಿಗೆ ಬಂದಿದ್ದಾಗ ನನ್ನಮ್ಮ ಅವರಿಗೆ ನಂಜುಂಡೇಶ್ವರನ ದರ್ಶನ ಮಾಡಿಸಲು ಹೊರಟಳು. ನಾನವರಿಗೆ ಧೈರ್ಯಕ್ಕೆ ಜನ. ರೈಲೇರಿ ಹೋಗಿಬರುವುದಾಗಲೀ ಹೆಚ್ಚೇನೂ ದೂರವಿರದ ದೇವಳಕ್ಕೆ ನಡೆಯುವುದಾಗಲೀ ಒಳಗೆ ನಂಜುಂಡೇಶ್ವರನ ಮೂರ್ತಿ ದರ್ಶನವಾಗಲೀ ಸಮಸ್ಯೆಯಾಗಲಿಲ್ಲ. “ದೇವಳದ ಕಚೇರಿಯಲ್ಲಿ ಅನುಮತಿ ಪತ್ರ ಪಡೆದವರಿಗೆ, ಉಚಿತ ಪ್ರಸಾದರೂಪದ ಊಟವಿದೆ” ಎಂದು ಅರ್ಚಕರು ಹೇಳಿದರು. ಆದರೆ ಕಚೇರಿಯಲ್ಲಿ ಅದು ಕೇವಲ ಬ್ರಾಹ್ಮಣ ಭೋಜನ ಎಂದು ತಿಳಿಯಿತು. ನಾನು ಅನುಮತಿ ಪತ್ರಕ್ಕಿಟ್ಟ ಬೇಡಿಕೆಯನ್ನು ಹಿಂತೆಗೆದುಕೊಂಡೆ. ನಾವು ಮೈಸೂರಿನ ಮನೆಗೇ ಮರಳಿ ಊಟ ಮಾಡುವ ಹಾಗಾಯ್ತು.
ಅಮ್ಮ ಮತ/ಧರ್ಮಬೇಧವನ್ನು ಎಂದೂ ಒಪ್ಪಿದವಳಲ್ಲ. ಮತ್ತೆ “ಸಾರ್ವಜನಿಕ ಸಂಸ್ಥೆಯೊಂದು ಸಣ್ಣ ಸಮುದಾಯವೊಂದನ್ನು ಗುರುತಿಸಿ, ಹೆಚ್ಚೆನ್ನುವಂತೆ ನೋಡುವುದು ಸರಿಯಲ್ಲ” ಎನ್ನುವ ನನ್ನ ತೀರ್ಮಾನವನ್ನೂ ಒಪ್ಪಿಕೊಂಡಳು. ಆದರೂ “ನಾವು ಬಯಸದೇ ಪಡೆದ ಜನ್ಮಕ್ಕೆ, ಅಯಾಚಿತವಾಗಿ ಒದಗುತ್ತಿದ್ದ ಪ್ರಸಾದವನ್ನು (ಊಟ) ಅಶೋಕ ತಪ್ಪಿಸಿದ” ಎನ್ನುವ ಸಣ್ಣ ಕೊರಗು ಅಮ್ಮನಿಗೆ ಕೊನೆಯವರೆಗೂ ಉಳಿದಿತ್ತು!

೪. ಕಾಗದ ಮೆಂತೆ ಗೊಜ್ಜಿನ ವಿನಾಯಕ 

“ಕಾಗದ ಚೂರುಗಳನ್ನು ನೆನೆಸಿ, ಮೆಂತೆ ಬೆರೆಸಿ ಬೀಸಿ, ತಕ್ಕ ಆಕೃತಿಗೆ ತಟ್ಟಿ, ಬಿಸಿಲಿನಲ್ಲಿ ಒಣಗಿಸಿ, ತಾನೇ ಮಾಡಿದ ಹ್ಯಾಟು ನಿನ್ನ ಮೋದೂರಜ್ಜ ಹಾಕುತ್ತಿದ್ದರು” ಅಮ್ಮ ಹೇಳಿದ್ದು ನೆನಪಿತ್ತು. ಚೀನಾ ಆಕ್ರಮಣದ ಬೆಳಕಿನಲ್ಲಿ (೧೯೬೦ರ ದಶಕದಲ್ಲಿ) ನನಗೆ ‘ಯುದ್ಧಸನ್ನದ್ಧ’ನಾಗುವ ಹುಕಿ ಬಂದಿರಬೇಕು. ಎರಡು ದಿನ ಕಾಗದ ನೆನೆಸಿಟ್ಟು, ತುಸು ನೆನೆಸಿದ ಮೆಂತೆಯೊಡನೆ ಕಡೆವ ಕಲ್ಲಿಗೆ ಹಾಕಿದೆ. ಬಹಳ ಶ್ರಮದಲ್ಲಿ ಬೀಸಿ ಗೊಜ್ಜು ಮಾಡಿದೆ. ನನ್ನ ತಲೆ ಹಿಡಿಸುವ ಸ್ಟೀಲ್ ಪಾತ್ರೆಯನ್ನು ಅಚ್ಚಿನಂತೆ ಬಳಸಿ ಶಿರಸ್ತ್ರಾಣ, ರೀಪುಗಳ ಕಟ್ಟೆ ಮಾಡಿ ಎದೆಗವಚಗಳ ರೂಕ್ಷ ರೂಪ ಬರಿಸಿ ಒಣಗಲು ಇಟ್ಟೆ. ಅವು ಗಟ್ಟಿಯಾಗಿ ಸಿಕ್ಕಾಗ ಯಾಕೋ ಬಿಕ್ಷಾಪಾತ್ರೆ, ಹಗುರ ಹಲಿಗೆ ತುಂಡನ್ನಿಸಿರಬೇಕು, ನನ್ನ ಉತ್ಸಾಹದ ಬುಗ್ಗೆ ಚಿಮ್ಮುವುದು ನಿಂತಿತ್ತು. ಅಮ್ಮ “ಮೊದಲೇ ಹೇಳಿದ್ದರೆ, ನನ್ನ ಅಕ್ಕಿ ಕೇರುವ ಮೊರಕ್ಕಾದರೂ ಬಳೀಬಹುದಿತ್ತು” ಎಂದು ವಿಷಾದಿಸಿದ್ದೇ ಬಂತು.
ಮೈಸೂರಿನಲ್ಲಿ ಪರಿಚಯಕ್ಕೆ ಬಂದ ಪರ್ವತಾರೋಹಿ ಮಿತ್ರ – ಗಿರೀಶಪುತ್ರಾಯನ ವಾಸದ ಮನೆಗೆ ಮೊದಲ ಬಾರಿ ಹೋಗಿದ್ದೆ. ಅಲ್ಲಿ ಅಂಗಳದಲ್ಲಿ, ಮನೆಯೊಳಗೆಲ್ಲ ಕಾಗದ ಗೊಜ್ಜಿನ ಆಳೆತ್ತರದ ವಿವಿಧ ಮೂರ್ತಿಗಳು ತಯಾರಾಗುತ್ತಿದ್ದವು! ಗಿರೀಶ (ನೋಡಿ: ಕರಿಗಿರಿಯ ಬಿಳಿಗಿರಿಗೆ) ಬಾಲ್ಯದಲ್ಲೇ ಅಪ್ಪನನ್ನು ಕಳೆದುಕೊಂಡು, ಬಡ ಅಮ್ಮ ಮತ್ತು ಕೆಲವು ಬಂಧುಗಳ ಔದಾರ್ಯದಲ್ಲಿ ಬೆಳೆದಿದ್ದ. ಗಿರೀಶನ ಕಾಲೇಜ್ ಓದಿಗೆ ಮೈಸೂರಿನಲ್ಲಿ ಸಿಕ್ಕ ನೆಲೆಯಿದು. ಮನೆಯ ಯಜಮಾನ ಎಂ.ಎಸ್. ಆಚಾರ್ ಆತನ ದೂರದ ಮಾವ. ಆಚಾರರದ್ದು ಮನೆಯಲ್ಲ – ಧರ್ಮ ಛತ್ರ ಮತ್ತು ಅಂಗಳದ ಅಂಗುಲವನ್ನೂ ಬಿಡದ ಕಲಾಶಾಲೆ

ಉಡುಪಿಯ ಪಣಿಯಾಡಿ ಪಂಚಾಂಗ ಶ್ರೀನಿವಾಸ ಉಪಾಧ್ಯಾಯರ ಮೊಮ್ಮಗ, ಮುಖ್ಯಪ್ರಾಣೋಪಾಧ್ಯಾಯರ ಮಗ – ಶ್ರೀನಿವಾಸ ಆಚಾರ್ (ಎಮ್.ಎಸ್. ಆಚಾರ್), ತಂದೆಯೊಡನೆ ಬಾಲ್ಯದಲ್ಲೇ ಮೈಸೂರಿಗೆ ವಲಸೆ ಬಂದವರಂತೆ. ಮನೆಯವರು ಸಾಂಪ್ರದಾಯಿಕವಾಗಿ ಸಂಸ್ಕೃತ ಪಾಠಶಾಲೆಗೆ ಹಾಕಿದ್ದರಂತೆ. ಕಲಿಕೆ ಸಿನಿಮಾ ಶೋಕಿಯಲ್ಲಿ ತೇಲಿಹೋಯ್ತಂತೆ. ಆದರೆ ಕಲಿಕೆ ಜಯಚಾಮರಾಜೇಂದ್ರ ಕಲಾಶಾಲೆಗೆ ಬದಲಿದಾಗ, ಐದು ವರ್ಷದ ಸಿದ್ಧಿಯನ್ನು ನಾಲ್ಕಕ್ಕೇ ಮುಗಿಸಿದ ಪ್ರತಿಭೆ ಆಚಾರರದ್ದು. ಗುರು ವೇಲಾಯುಧಾಚಾರ್ಯರ ಪಟ್ಟಶಿಷ್ಯನಾಗಿ, ಮಣ್ಣು ಕಲ್ಲಿನ ಶಿಲ್ಪಗಳು, ಚಿತ್ರ ವರ್ಣಗಾರಿಕೆಗಳ ತಳಹದಿಯಲ್ಲಿ ಏನೂ ಮಾಡಬಲ್ಲ ಪರಿಣತಿಯೊಡನೆ ವೃತ್ತಿರಂಗಕ್ಕಿಳಿದರು (೧೯೨೯).

ಮೊದಲು ವೃತ್ತಿ ನಾಟಕ ಕಂಪೆನಿಗಳ ವಿವಿಧ ವಿನ್ಯಾಸಗಳ ಫರದೆಗಳು, ನಟರ ತೊಡವುಗಳ ತಯಾರಿಯಲ್ಲಿ ತೊಡಗಿಕೊಂಡರಂತೆ. ಪಳಗಿದಂತೆ, ಸ್ವತಃ ನೃತ್ಯನಾಟಕಗಳ ಸಾಧನೆಗೂ ಮನಮಾಡಿದರು. ಪೂರಕವಾಗಿ ಹಿಂದೆ ಉಡಾಫೆ ಮಾಡಿದ್ದ ಕಾವ್ಯಪುರಾಣಗಳ ಅಧ್ಯಯನ ಮಾಡಿ ಬೆಳೆದು, ನಾಟಕ ಕಂಪೆನಿಯ ಉಸ್ತುವಾರಿಗೇ ಇಳಿದಿದ್ದರು. ಆದರೆ ಆಡಳಿತದ ಹೊರೆಯಲ್ಲಿ ಬಳಲಿ, ಶಿಖರಚ್ಯುತರಾಗಿ ಯಾರಿಗೂ ಹೇಳದೆ ದೇಶಾಂತರ ಹೋದರಂತೆ. ಆರು ತಿಂಗಳ ಕಾಲ ಕೊಲ್ಲೂರಿನಲ್ಲಿ ಹೆಚ್ಚು ಕಮ್ಮಿ ತಪಸ್ಸನ್ನೇ ಮಾಡಿದರಂತೆ. ಆಗ ಈಸಬೇಕು, ಇದ್ದು ಜೈಸಬೇಕು ಎಂಬ ಅರಿವು ಮೂಡಿತು. ಮೊದಲು ಸುಮಾರು ಹತ್ತು ತಿಂಗಳು ಧರ್ಮಸ್ಥಳದಲ್ಲಿ ಮಂಜಯ್ಯ ಹೆಗ್ಗಡೆಯವರ ಬಳಿ ಕಲಾಕಾಯಕ ನಡೆಸಿ ಮತ್ತೆ ಮೈಸೂರಿಗೆ ಬಂದಾಗ ವ್ಯಾನಿಗನ್ ಅಂಡ್ ವ್ಯಾನಿಗನ್ ಕಂಪೆನಿ ಇವರನ್ನು ಬರಮಾಡಿಕೊಂಡಿತು. ಸತ್ತ ಪ್ರಾಣಿಗಳ ಚರ್ಮಕ್ಕೆ ಒಳಗಿನಿಂದ ರೀಪು, ಕಾಗದ ಗೊಜ್ಜಿನ ದೃಢತೆ ಕೊಟ್ಟು, ಹೊರಗಿನ ನಷ್ಟ ಅಂಗಗಳ ಮರುಪೂರಣದಲ್ಲಿ ‘ಜೀವ’ ತುಂಬುವ ಅಸಾಧಾರಣ ಸಾಧನೆ ಇವರದು. (ಟ್ಯಾಕ್ಸಿಡರ್ಮಿ)

ಆಚಾರರ ಮನೆ ಧರ್ಮಛತ್ರ! ಎಲ್ಲ ಸಾಂಪ್ರದಾಯಿಕ ಕಲಾಪಗಳೊಡನೆ ದಾನಧರ್ಮ, ದಿನಗೂಳು, ವಾರಾನ್ನಗಳವರಿದ್ದಂತೆ ಆಶ್ರಯ ಕೇಳಿ ಬಂದ ಬಾದರಾಯಣ ಬಂಧುಗಳಿಗೂ ಆಚಾರರ ಮನೆ ಮುಕ್ತವಿರುತ್ತಿತ್ತು. ಹೀಗೆ ಹೆಚ್ಚಿದ ಖರ್ಚು, ಜವಾಬ್ದಾರಿಗಳ ಪೂರೈಕೆಗೆ, ಮುಂದೊಂದು ಕಾಲದಲ್ಲಿ ಕಂಪೆನಿಯಿಂದ ನಿವೃತ್ತಿ ಪಡೆದು ಮನೆಯಲ್ಲಿ ಎಲ್ಲರನ್ನೂ ಒಳಗೊಂಡಂತೆ ಕಾಯಕವನ್ನು ವಿಸ್ತರಿಸಿದರು. ನಾನು ಮೊದಲು ಕಂಡಾಗ, ಅವರ ಮನೆ ಬರಲಿದ್ದ ಚೌತಿಯ ವಿವಿಧ ಬೇಡಿಕೆಗಳಿಗೆ ದುಡಿದಿತ್ತು. ಅಲ್ಲದಿದ್ದರೂ ಮಣ್ಣಿನ, ಖಾಯಂ ನೆಲೆಯಲ್ಲಿ ಕಲ್ಲು, ಸಿಮೆಂಟಿನ, ಕೇವಲ ಮೆರವಣಿಗೆ, ಪ್ರದರ್ಶನಕ್ಕೆ ಒಗ್ಗುವಂಥ ಕಾಗದದ ಗೊಜ್ಜಿನ ಮೂರ್ತಿಗಳು, ವೃಂದಾವನ, ಮುಗಳಿ ಮುಂತಾದ ಆಕೃತಿಗಳೆಂದು ಆಚಾರರ ನೇತೃತ್ವದ ಆ ಕಲಾಶಾಲೆಯ ಸಾಧನೆ ಅಸಾಧಾರಣ. ಆ ಬೆರಗಿನಲ್ಲೇ ಅವರನ್ನು ಸಣ್ಣದಾಗಿ ಸಂದರ್ಶಿಸಿ, ಕೆಲವು ಚಿತ್ರಗಳನ್ನೂ ತೆಗೆದು (೧೯೭೩) ನನ್ನ ‘ಛಾಯಾಚಿತ್ರ ಕಥೆ’ಯಲ್ಲಿ ‘ಭಾಗ ಒಂದು’ ಎಂದೇ ದಾಖಲಿಸಿಕೊಂಡಿದ್ದೆ. ಮುಂದೆ ಇನ್ನಷ್ಟು ಕಲಾವಿವರಗಳಲ್ಲಿ ಕಾಣುವ, ಸಂದರ್ಶನ ವಿಸ್ತರಿಸುವ ಬಯಕೆ ಇತ್ತು. ಆದರೆ ನನ್ನ ಆಸಕ್ತಿಯ ಕುದುರೆ ಮಂಗಳೂರ ದಿಕ್ಕು ಹಿಡಿದುದರಿಂದ, ಸಂದರ್ಶನದ ಲಹರಿ ಬಿಟ್ಟೇ ಹೋಯ್ತು. ಗಿರೀಶನಾದರೂ ಮಲಪ್ರಭಾ ಗ್ರಾಮೀಣ ಬ್ಯಾಂಕಿನ ನೌಕರಿಯಲ್ಲಿ ಧಾರವಾಡದತ್ತ ಸಾಗಿ ಸಂಪರ್ಕದೂರನೂ ಆಗಿ ಹೋದ.

೫. ಪೆನ್ನು ಕಾಗದಗಳ ಕಸರತ್ತಿನಲ್ಲಿ ಚೊಚ್ಚಲ ಹೆರಿಗೆ!

ಪತ್ರಿಕೋದ್ಯಮ ಇಲಾಖೆಯ ಮೇಲೆ ನನಗೆ ಭಾರೀ ಕಣ್ಣಿತ್ತು. ಅದರಲ್ಲೂ ಮುಖ್ಯವಾಗಿ ನನ್ನ ಅನುಭವಾಧಾರಿತ ಬರವಣಿಗೆಯ ಹುಚ್ಚಿಗೆ, ಪತ್ರಿಕೋದ್ಯಮ ಇಲಾಖೆಯ ಪ್ರಯೋಗ ಪತ್ರಿಕೆ ಧಾರಾಳ ಅವಕಾಶಗಳನ್ನು ಕೊಡುತ್ತಿತ್ತು. (ದೊಡ್ಡ ಪತ್ರಿಕೆ, ಪ್ರಚಾರ ಇವೆಲ್ಲ ನನಗಲ್ಲ ಎನ್ನುವ ಕೀಳರಿಮೆಯೂ ಕಾರಣವಿದ್ದಿರಬಹುದು.) ಭಾರತೀಯ ಪತ್ರಿಕೋದ್ಯಮ ಶಾಸ್ತ್ರದ ಮೂಲ ಪುರುಷರೆಂದೇ ಖ್ಯಾತರಾದ ನಾಡಿಗ್ ಕೃಷ್ಣಮೂರ್ತಿಯವರನ್ನು ನಾನು ಅಲ್ಲಿ ಸಹಜವಾಗಿ ಭೇಟಿಯಾಗಿದ್ದೆ. ಅವರು ಸ್ನಾತಕೋತ್ತರ ಇಲಾಖೆ ರೂಪಿಸಿ ಮಾನಸಗಂಗೋತ್ರಿಗೆ ಹೋದ ಮೇಲೆ ಸೈಯದ್ ಇಕ್ಬಾಲ್ ಖಾದ್ರಿ, ಇನ್ನೋರ್ವ ಅಧ್ಯಾಪಕ ಭಂಡಾರ್ಕರ್ (ಹೆಸರು ಮರೆತಿದ್ದೇನೆ) ಮತ್ತು ಅಲ್ಲಿನ ಕೆಲವು ವಿದ್ಯಾರ್ಥಿಗಳ ಪರಿಚಯವನ್ನೂ ನಾನು ಬೆಳೆಸಿಕೊಂಡಿದ್ದೆ. ಈಶ್ವರ ದೈತೋಟ (ಮತ್ತು ಶ್ರೀಧರ್) – ಆ ಇಲಾಖೆಯ ಪ್ರತಿಭಾನ್ವಿತ ವಿದ್ಯಾರ್ಥಿ, ನನಗೆ ಅಂದಿನಿಂದ ಇಂದಿನವರೆಗೂ ತುಂಬಾ ಆತ್ಮೀಯರು. ಇವರು ಪತ್ರಕರ್ತರಾಗಿಯೂ ಹೆಸರಾಂತವರೇ. ಈಶ್ವರ್ ನನಗಿಂತ ಒಂದು ವರ್ಷ ಹಿರಿಯ, ಪತ್ರಿಕೋದ್ಯಮ ಸ್ನಾತಕೋತ್ತರ ಪದವಿಯ ಪ್ರಥಮ ತಂಡದ ಸದಸ್ಯರೂ ಹೌದು.

ಇಲಾಖೆಯ ಬಹುತೇಕ ವಿದ್ಯಾರ್ಥಿಗಳು, ಕಾಲೇಜಿನ ಅಧಿಕೃತ ಕಾರ್ಯಕ್ರಮಗಳ ವೇಳೆ ಮುಂದಿನ ಸಾಲಿನಲ್ಲಿ ಕುಳಿತು, ವೇದಿಕೆಯಿಂದ ಬಂದ ಸೀನು, ಕೆಮ್ಮುಗಳನ್ನೂ ಟಿಪ್ಪಣಿ ಮಾಡಿಕೊಳ್ಳುತ್ತಿದ್ದರು. ಮತ್ತೆ ಪ್ರಯೋಗ ಪತ್ರಿಕೆಯಲ್ಲಿ ಆ ಟಿಪ್ಪಣಿಗಳನ್ನು ಆಚೀಚೆ ಮಾಡಿ, ಒಂದಷ್ಟು “ಹೇಳಿದರು, ಮಾಡಿದರು, ಮುಂದುವರಿಸುತ್ತಾ….” ಶಬ್ದಗಳನ್ನು ತುರುಕಿಬಿಡುತ್ತಿದ್ದರು. ನಾನವರನ್ನು ಕೆಣಕುವುದಿತ್ತು, “ಬನ್ನಿ, ಬೆಟ್ಟದಲ್ಲಿ ನಾಲ್ಕು ಬಂಡೆ ಏರಿ, ಪಾಂಡವಪುರಕ್ಕೆ ಸೈಕಲ್ ಮೆಟ್ಟಿ, ದಸರಾ ಪ್ರದರ್ಶನ ಕಟ್ಟಡದ ಗೋಡೆ ಹಾರಿ, ಕಪಿಲಾ ನದಿ ದಂಡೆಯಲ್ಲಿ ನಡೀರಿ …..ಮತ್ತ್ ಬರೀರಿ.” ನಾನಂತೂ ಮುಖ್ಯವಾಗಿ ಅಂಥ ಹಲವು ಅನುಭವಗಳನ್ನು ಬರಹದಲ್ಲಿ ರೂಪಿಸುತ್ತಿದ್ದೆ. ಉಳಿದಂತೆ ವಿಡಂಬನೆ, ವಿಮರ್ಶೆಗಳಲ್ಲೂ ಕೈಯಾಡಿಸುವುದಕ್ಕೆ ಇಲಾಖೆಯ ಪ್ರಯೋಗ ಪತ್ರಿಕೆ ಧಾರಾಳ ಅವಕಾಶ ಕೊಡುತ್ತಿತ್ತು.

ಪತ್ರಿಕೋದ್ಯಮದ ಅಧ್ಯಾಪಕರು “ವಿದ್ಯಾರ್ಥಿ ಸಂಪಾದಕರುಗಳಿಗೆ ಚೌಕಟ್ಟಿನ ಹೊರಗೆ ‘ಪ್ರಯೋಗ’ ನಡೆಸಲು ನಿಮ್ಮ ವಿಷಯ ವೈವಿಧ್ಯ ಅನುಕೂಲವಾಗುತ್ತದೆ” ಎಂಬರ್ಥದಲ್ಲಿ ಹೇಳಿದ್ದರು. ‘ಮೊದಲೇ ಮಂಗ, ಮೇಲೆ ಕಳ್ಳು ಕುಡಿಸಿ, ಚೇಳು ಕಡಿಸಿ…’ ಲೋಕೋಕ್ತಿಯಂತೆ ನನ್ನ ಮೇಲೆ ಪರಿಣಾಮ ಆಗಿರಬೇಕು. ಹಾಗೆ ಅನುಭವವನ್ನು ಬರೆಯುವ ಹುಚ್ಚು ಹೆಚ್ಚಿದ್ದಕ್ಕೇ ಇರಬೇಕು, ನಮ್ಮ ದಪಸಂ (ದಖ್ಖಣ ಪರ್ವತಾರೋಹಣ ಸಂಸ್ಥೆ) ತಂಡ ತಾತಾರ್ ಹತ್ತಿ ಬಂದ ಎರಡೇ ದಿನಕ್ಕೆ ನಾನು (ಸ್ನಾತಕ ಎರಡನೇ ವರ್ಷದಲ್ಲಿದ್ದೆ) ‘ತಾತಾರ್ ಶಿಖರಾರೋಹಣ’ ಪುಸ್ತಕ ಬರೆದು ಮುಗಿಸಿದ್ದೆ. (ನೋಡಿ: ತಾತಾರ್ ಶಿಖರಾರೋಹಣ). ‘ತಾತಾರ್ ಶಿಖರಾರೋಹಣ’ – ನನ್ನ ಹಸ್ತಪ್ರತಿಯನ್ನು ಪುಸ್ತಕವಾಗಿಸಲು ದಪಸಂನ ಗೌರವ ಅಧ್ಯಕ್ಷ, ಜಾವಾ ಮೋಟಾರ್ ಸೈಕಲ್ ಕಂಪೆನಿಯ ಅಧ್ಯಕ್ಷ – ಎಫ್.ಕೆ. ಇರಾನಿ ಹಣ ಕೊಡುತ್ತೇನೆ ಎಂದರು. ಆದರೆ “ಮೊದಲೊಬ್ಬ ಹಿರಿಯ ಕನ್ನಡ ಸಾಹಿತಿ ಮತ್ತು ಪುಸ್ತಕ ವಿತರಕ ಇದಕ್ಕೆ ಶಿಫಾರಸು ಪತ್ರ ಕೊಡಬೇಕು” ಎಂದಿದ್ದರು. ತಂದೆಯ ಸಹೋದ್ಯೋಗಿ ಮಿತ್ರ, ಕನ್ನಡ ವಿಶ್ವಕೋಶದ ಸಾಹಿತ್ಯ ವಿಭಾಗದ ಸಂಪಾದಕ, ಖ್ಯಾತ ಪ್ರಬಂಧಕಾರ (ಮುತ್ತಿನಹಾರ, ಲೇಖನ ಕಲೆ, ಅಮಲಿನ ವಚನಗಳು ಮುಂತಾದ ಪುಸ್ತಕಗಳ ಲೇಖಕ) – ಎನ್. ಪ್ರಹ್ಲಾದ ರಾವ್ ತುಂಬ ಪ್ರೀತಿಯಿಂದ ಹಸ್ತ ಪ್ರತಿ ಓದಿ, ವಿಸ್ತೃತ ಶಿಫಾರಸು ಪತ್ರವನ್ನೇ ಬರೆದು ಕೊಟ್ಟಿದ್ದರು. ಅವರು ಹಾಗೆ ಶಿಫಾರಸು ಬರೆದದ್ದರ ಪ್ರಾಮಾಣಿಕತೆಯನ್ನು ಪುನಃ ಸಮರ್ಥಿಸುವಂತೆ, ಮುಂದೊಂದು ದಿನ ಅವರು ಅಂಚೆ ತೆರಪಿನ ವಿದ್ಯಾರ್ಥಿಗಳಿಗೆ ಪ್ರಬಂಧ ಲೇಖನದ ಪಾಠ ಮುದ್ರಿಸುವಾಗ ನನ್ನ ಪುಸ್ತಕದಿಂದಲೇ ಉದಾಹರಣೆಗಳನ್ನು ಬಳಸಿದ್ದರು ಕೂಡಾ. (ತಾತಾರ್ ಕಥನದಲ್ಲಿ ಒಂದು ಅಡುಗೆಯ ರುಚಿಯನ್ನು ಹೇಳುವ ಉತ್ಸಾಹದಲ್ಲಿ ನಾನು ‘ಸಾಕ್ಷಾತ್ ನಳಕೂಬರನೇ ಬಂದಂತಿತ್ತು’ ಎಂದೇನೋ ಬಳಸಿದ್ದೆ. ಪ್ರಹ್ಲಾದ ರಾವ್ ಅದನ್ನು ನಳ ವಲಲ ಎಂದು ತಿದ್ದಿಸಿದ್ದು ನೆನಪಿದೆ!)

‘ತಾತಾರ್ ಶಿಖರಾರೋಹಣ’ ಪುಸ್ತಕವನ್ನು ಕುಲಪತಿ ದೇಜಗೌ ಔಪಚಾರಿಕ ಸಭೆಯಲ್ಲಿ, ಮುಕ್ತ ಕಂಠದ ಹೊಗಳಿಯೊಡನೆ ಲೋಕಾರ್ಪಣ ಮಾಡಿದ್ದರು. ೮೪ ಪುಟಗಳ ೨೧ ಚಿತ್ರಗಳ ಕೇವಲ ಎರಡೂವರೆ ರೂಪಾಯಿ ಬೆಲೆಯ ಪುಸ್ತಕದ ಸಾವಿರ ಪ್ರತಿಗಳನ್ನು ಪ್ರಕಟಿಸಿದ್ದೆವು. ಖ್ಯಾತ ಪ್ರಕಾಶಕ ಡಿವಿಕೆ ಮೂರ್ತಿಯವರು ಮೊದಲೇ ಕೊಟ್ಟ ಮಾತಿನಂತೆ, ಅರೆವಾಸಿ ಪ್ರತಿಗಳನ್ನು ನಗದು ಕೊಟ್ಟು ಕೊಂಡು, ರಾಜ್ಯಾದ್ಯಂತ ವಿತರಣೆ ನಡೆಸುವುದಾಗಿ ವಹಿಸಿಕೊಂಡರು. ಕೆಲವು ನೂರು ಪ್ರತಿಗಳು ನಮ್ಮ ಸಂಸ್ಥೆಯೊಳಗೇ ವಿತರಣೆಯಾಗಿದ್ದಿರಬೇಕು. ಅಷ್ಟಾಗಿಯೂ ಮುಂದೆ (೧೯೭೫) ನಾನೇ ಪುಸ್ತಕ ವ್ಯಾಪಾರಿಯಾದಾಗಲೇ ನಿಜವಾಗಿ ಆ ಪ್ರತಿಗಳಿಗೆ ಮಾರಿಹೋಗುವ ಯೋಗ ಬಂತು. ಅವು ಒಂದು ಹಂತದಲ್ಲಿ ಮುಗಿಯಿತು ಎಂದನ್ನಿಸಿದಾಗ, ಡಿವಿಕೆಯವರ ದಾಸ್ತಾನಿನಲ್ಲಿ ಉಳಿದಿದ್ದ ಎಪ್ಪತ್ತಕ್ಕೂ ಮಿಕ್ಕ ಪ್ರತಿಗಳನ್ನು ನನಗೆ ಉಚಿತವಾಗಿಯೇ ಕೊಟ್ಟುಬಿಟ್ಟರು. ಹಾಗೆ ಎಲ್ಲ ಮಾರಿ ಮುಗಿಯುವ ಕಾಲಕ್ಕೆ ವರ್ಷಗಳು ಕನಿಷ್ಠ ಹತ್ತಾದರೂ ಸಂದಿರಬೇಕು! ಇದು ನಿಸ್ಸಂದೇಹವಾಗಿ ಮುಂದೆ ನಾನು ಪುಸ್ತಕ ಪ್ರಕಾಶನವನ್ನು ಶುರು ಮಾಡುವ ಕಾಲಕ್ಕೆ ದೊಡ್ಡ ಅನುಭವನಿಧಿಯನ್ನೇ ಕಟ್ಟಿಕೊಟ್ಟಿತು ಎಂದರೆ ಅತಿಶಯೋಕ್ತಿಯಾಗದು.

೬. ಶಿವರಾಮ ಕಾರಂತ

ಪುತ್ತೂರಿನ ನನ್ನಜ್ಜ – ಎ.ಪಿ.ಸುಬ್ಬಯ್ಯರ ಸಾಹಿತ್ಯಾಸಕ್ತಿ, ಊರಿನವರೇ ಆಗಿದ್ದ ಶಿವರಾಮ ಕಾರಂತರ ಆತ್ಮೀಯತೆಯನ್ನು ಸಹಜವಾಗಿ ಗಳಿಸಿತ್ತು. ಅದು ಅಲ್ಲಿಗೇ ನಿಲ್ಲದೆ ಪರಸ್ಪರ ವಿಸ್ತೃತ ಕುಟುಂಬ ಮೈತ್ರಿಗೂ ವ್ಯಾಪಿಸಿತ್ತು. (ಇಂದು ಉಲ್ಲಾಸ, ಕೃತಿ ಕಾರಂತರ ಮೂಲಕ ನನಗೂ ಅಭಯನಿಗೂ ಅಂದರೆ ನಾಲ್ಕನೇ ತಲೆಮಾರಿಗೂ ಹರಿದಿದೆ.) ಕಾರಂತರು ಊರಲ್ಲಿದ್ದ ಪ್ರತಿ ಸಂಜೆ ಬಾಲವನದ ದೂರದಿಂದ ನಡೆದುಕೊಂಡು ಪೋಲೀಸ್ ವಸತಿಗಳ ತಲೆಯಲ್ಲಿದ್ದ ನನ್ನ ಸೋದರ ಮಾವನ ಕಚೇರಿಗೆ (ಒಂದನೇ ಮಾಳಿಗೆಯಲ್ಲಿತ್ತು) ಬರುತ್ತಿದ್ದರು. ಅದರ ಜಗುಲಿಯಲ್ಲಿ ಕುರ್ಚಿ ಹಾಕಿ, ಅವರನ್ನೇ ಕಾದಿರುತ್ತಿದ್ದ ನನ್ನಜ್ಜನೊಡನೆ ಹತ್ತಿಪ್ಪತ್ತು ಮಿನಿಟು ಪಟ್ಟಾಂಗ ನಡೆಸಿ ಮುಂದುವರಿಯುತ್ತಿದ್ದರು. ಕಾರಂತರ ಕಾರಿನ ಚಾಲಕ ಆನಂದ ಖಾಯಂ ಎನ್ನುವಂತೆ, ಹತ್ತು ಗಂಟೆಯ ಸುಮಾರಿಗೆ ಅಜ್ಜನ ಮನೆಗೆ ಬಂದು ಬಾಲವನಕ್ಕೆಂದೇ ಮಜ್ಜಿಗೆ ಒಯ್ಯುತ್ತಿದ್ದರು. ನನ್ನ ಒಬ್ಬ ಚಿಕ್ಕಮ್ಮ – ಲಲಿತಾಂಬಿಕ, ಕಾರಂತರ ಹಿರಿ ಮಗಳು ಮಾಲವಿಕಾರ ಸಹಪಾಠಿ, ಆತ್ಮೀಯ ಗೆಳತಿ. ನನ್ನ ರೈತಾಪಿ ಸೋದರ ಮಾವಂದಿರು ಕುಶಿ ಬಂದಾಗ ಹಣ್ಣೋ ತರಕಾರಿಯೋ ಕಾರಂತರ ಮನೆಗೆ ಮುಟ್ಟಿಸುವುದೂ ಇತ್ತು. ಇವೆಲ್ಲವುಗಳ ವಿಸ್ತರಣೆ ಎನ್ನುವಂತೇ ನನ್ನ ತಂದೆಗೂ (ಸುಬ್ಬಯ್ಯರ ಹಿರಿ ಅಳಿಯ,) ಕಾರಂತರ ಒಡನಾಟವಿತ್ತು. ಅಷ್ಟೇ ಅಲ್ಲ, ಉಡುಪಿಯ ಕುಶಿ ಹರಿದಾಸ ಭಟ್, ಬೆಂಗಳೂರಿನ (ಮೂಲದಲ್ಲಿ) ಗುಂಡ್ಮಿ ರಾಮಕೃಷ್ಣ ಐತಾಳ ಮುಂತಾದ ಸಂಘಟಕರ ಕೂಟದ ಭಾಗವಾಗಿ ‘ಅಭಿಮಾನಿ ಬಳಗ’ದಲ್ಲೇ ಇದ್ದರು. ನಾವು ಮೈಸೂರಿಗೆ ಹೋದ ಮೊದಲ ದಿನಗಳಲ್ಲಿ ಕಾರಂತರು ಹೆಚ್ಚು ಕಡಿಮೆ ಪ್ರತಿ ತಿಂಗಳು ಎನ್ನುವಂತೆ ಮೈವಿವಿನಿಲಯದ ಇಂಗ್ಲಿಷ್ ಕನ್ನಡ ನಿಘಂಟಿನ ಪರಿಷ್ಕರಣ ಸಭೆಗೆ ಬರುತ್ತಿದ್ದರು. ಅವರು ರೈಲ್ವೇ ನಿಲ್ದಾಣದ ಸಮೀಪದಲ್ಲಿದ್ದ ಮೋಡರ್ನ್ ಹೋಟೆಲಿನಲ್ಲಿ ಉಳಿದುಕೊಳ್ಳುತ್ತಿದ್ದರು. ಆದರೆ ಪ್ರತಿ ಸಲವೂ ಅವರನ್ನು ಕನಿಷ್ಠ ಒಂದು ಊಟಕ್ಕಾದರೂ ನಮ್ಮನೆಗೆ ಕರೆಸಿಕೊಳ್ಳುತ್ತಿದ್ದರು.

ಆ ದಿನಗಳಲ್ಲಿ ಒಂದು ಮಳೆಗಾಲದ ಅಬ್ಬರದಲ್ಲಿ, ಕಾರಂತರ ಕಾರು ಮಾಸಿಕ ಸಭೆಗೆಂದು ಮೈಸೂರು ತಲಪಿದ ಮೇಲೆ, ಸಂಪಾಜೆ ಘಾಟಿ ಕುಸಿತದಿಂದ ಮುಚ್ಚಿ ಹೋದ ಸುದ್ದಿ ಬಂದಿತ್ತು. ಅದೇ ಸಮಯಕ್ಕೆ ಕಾರಂತರಿಗೆ ಪುತ್ತೂರಿನಲ್ಲಿದ್ದ ತಮ್ಮ ಎರಡನೇ ಮಗಳು – ಕ್ಷಮಾರನ್ನು, ಮೈಸೂರಿಗೆ ಕರೆಸಿಕೊಳ್ಳುವ ತುರ್ತು ಮೂಡಿತ್ತು. ಆಗ ಅವರಿಗೆ ಸಹಾಯಕ್ಕೊದಗುವ ಅವಕಾಶ ನನ್ನದಾಯ್ತು. ಅವರದೇ ಕಾರಿನಲ್ಲಿ ಭೂ ಕುಸಿತದ ಸ್ಥಳದವರೆಗೆ ಹೋಗಿ, ಮುಂದೆ ನಾನೊಬ್ಬನೇ ನಡೆದು ಅತ್ತ ದಾಟಿ, ಸಿಕ್ಕ ವಾಹನ ಹಿಡಿದು, ರಾತ್ರಿಗಾದರೂ ಪುತ್ತೂರು ತಲಪಬೇಕು. ಮತ್ತೆ ಅವರ ಮನೆಗೆ ಸುದ್ದಿ ಮುಟ್ಟಿಸಿ, ಮರು ದಿನ ಆದಷ್ಟು ಬೇಗನೇ ಹೊರಟು, ಅದೇ ವ್ಯವಸ್ಥೆಯಲ್ಲಿ ಕ್ಷಮಾರನ್ನು ಮೈಸೂರಿಗೆ ಮುಟ್ಟಿಸಬೇಕು. ಆದರೆ ನನ್ನ ಅದೃಷ್ಟಕ್ಕೆ, ಕಾರು ಸಂಪಾಜೆ ಘಾಟಿ ಮುಟ್ಟುವಾಗ ಕುಸಿತದ ಸ್ಥಳ ತೆರವಾಗಿತ್ತು, ನನ್ನೊಳಗಿನ ‘ಸಾಹಸಿ’ ಚಾಲಕ ಆನಂದರಿಗೆ ಸಂಗಾತಿಯಷ್ಟೇ ಆಗಿದ್ದ.

ಕಾರಂತರ ತಿಂಗಳ ಇಂಕನಿ ಸಭೆ ಒಂದೆರಡು ದಿನ ನಡೆಯುತ್ತಿತ್ತು. ಆ ಸಮಯದ ಸಂಜೆ ಬಿಡುವುಗಳಲ್ಲಿ ತಂದೆ ಕಾರಂತರನ್ನು ಮಿತ್ರ ಬಳಗದೊಡನೆ ಸಂವಾದಕ್ಕೆಂಬಂತೆ ನಮ್ಮ ಮನೆಗೇ ಕರೆಸಿಕೊಳ್ಳುತ್ತಿದ್ದರು. ಅದರಲ್ಲಿ ನನಗೆ ಸ್ಮರಣೀಯವಾಗುಳಿದ ಕಲಾಪ – ಅವರದೇ ಗೀತ ನಾಟಕಗಳ ವಾಚನ. “ಸಾವು ಕಾಣದ ಮನೆಯ ಸಾಸಿವೆಯು ಬೇಕೆನಗೆ…” ಎಂಬ ಗೌತಮಿಯ ಆರ್ತನಾದ, ಊರಿನ ‘ಸೂರಕ್ಕ’ ಸೂಚನೆಯಿಲ್ಲದೆ ಕಾಣೆಯಾದಾಗ ಹಬ್ಬಿದ ಗಾಳಿವಾರ್ತೆಗಳ (ವಾಟ್ಸಪ್? ಫೇಕು? ವೈರಲ್!) ವೈಖರಿಗಳನ್ನು ಕಾರಂತರ ಧ್ವನಿಯಲ್ಲಿ ಕೇಳಿದ್ದು, ನನ್ನ ಸ್ಮೃತಿಪಟಲದಿಂದ ಈಗಲೂ ಆಗಾಗ ಮೇಲೆದ್ದು ಕಾಡುತ್ತಿರುತ್ತವೆ. ಬಾಡಿಗೆ ಮನೆಯ ಎದುರಿನ ಎರಡು ಮೂರು ಕೋಣೆಗಳಲ್ಲಿ ಹತ್ತಿಪ್ಪತ್ತಕ್ಕೂ ಮಿಕ್ಕು ತಂದೆಯ ಗೆಳೆಯರು ನೆಲದಲ್ಲಿ ಕಾರಂತರನ್ನು ಸುತ್ತುವರಿದಂತೆ ಕುಳಿತು ಆಸ್ವಾದಿಸುತ್ತಿದ್ದ ಪರಿ ಕಣ್ಣಿಗೆ ಕಟ್ಟುತ್ತದೆ.

ಮನೆಯ ಕಲಾಪಗಳಿಗೆ ಮೈಕ್, ಹಾರತುರಾಯಿ, ಠಕ್ಕು ಮಾತುಗಳೇನೂ ಇರುತ್ತಿರಲಿಲ್ಲ. ಅಮ್ಮ ಏನಾದರೂ ಲಘು ತಿನಿಸು, ಪಾನೀಯದ ವ್ಯವಸ್ಥೆ ಮಾಡುತ್ತಿದ್ದಳು. ಅದನ್ನು ಸವಿಯುವಲ್ಲೂ ಇತರ ಮಾತುಕತೆಗಳಲ್ಲೂ ಮತ್ತಷ್ಟು ಕಾರಂತ ಸಂವಾದದ ಸ್ವಾರಸ್ಯ ಇರುತ್ತಿತ್ತು. ಅವನ್ನೆಲ್ಲ ಆ ಕಾಲಕ್ಕೆ ದಾಖಲಿಸಿಡದ ಬಗ್ಗೆ ನನಗೆ ವಿಷಾದವಿದೆ. ಆದರೂ ಕಾರಂತರು ಊಟ, ತಿನಿಸುಗಳಲ್ಲಿ ಸದಾ ಮಿತಾಹಾರಿ. ಆದರೂ ಅವರಿಗೆ ಊಟಕ್ಕಿಡುವಾಗ ಅಮ್ಮ ದೊಡ್ಡ ತಟ್ಟೆಯನ್ನೇ ಇಡುತ್ತಿದ್ದಳು. ಕಾರಂತರು ಮಣೆಯಲ್ಲಿ ಕೂರುತ್ತಿದ್ದಂತೇ ಉದ್ಗರಿಸಿದ್ದರು “ಓ ನನಗೆ ಮಣೆ ಬೇಡ. ನಾನು ತಟ್ಟೆಯೊಳಗೇ ಕುಳಿತು ಊಟ ಮಾಡುತ್ತೇನೆ!”

ತಾಯಿ ಸಭೆಗೆ ಏನೋ ತಿಂಡಿ ಕೊಡುವಾಗ ಗುಂಡ್ಮಿ ಚಂದ್ರಶೇಖರ ಐತಾಳರು “ಬೇಡ ಬೇಡ” ಎಂದು ಸಂಕೋಚ ಮಾಡಿದರು. ಕಾರಂತರು ಸಟ್ಟಂತ “ದಾಕ್ಷಿಣ್ಯ ಮಾಡಬೇಡಿ, ನಿಮ್ಮನೇಂತ ತಿಳಿದುಕೊಳ್ಳಿ. ತಿಂಗಳ ಬಾಡಿಗೆ ನಾರಾಯಣ ರಾಯರೇ ಕೊಡ್ತಾರೆ” ಎಂದಾಗ ಹಲವರ ಬಾಯಿ ತಿನಿಸೆಲ್ಲ ಕಾರಂಜಿಯಾಗಿ ರಟ್ಟಿತ್ತು

(ಮುಂದುವರಿಯಲಿದೆ)