“ನಾನು ಜಯಂತ್+ಅ, ಜಯಂತ! ಏಗ್ನೆಸ್ (ಮಹಿಳಾ) ಕಾಲೇಜಿನ ಕೆಮಿಸ್ಟ್ರಿ ಅಧ್ಯಾಪಕ. ನಮ್ಮದು ಮಹಿಳಾ ಕಾಲೇಜಾದ್ದರಿಂದ ಬರಿಯ ಹೆಸರು ಕೇಳಿದವರು ‘ಜಯಂತಿ’ ಮಾಡಿಬಿಡ್ತಾರೆ…” ಎಂದು ನನ್ನಂಗಡಿಯ ಹೊಸ ಕಾಲದಲ್ಲಿ ಬಂದಿದ್ದವರು (೧೯೭೬ರ ಸುಮಾರಿಗೆ) ಮುಕ್ತ ನಗೆಯೊಡನೆ, ನಾಲ್ಕು ಹನಿ ಕಣ್ಣೀರು ಒರೆಸಿಕೊಳ್ಳುತ್ತ ಪರಿಚಯಿಸಿಕೊಂಡಿದ್ದರು. ಹೌದು, ಜಯಂತರಿಗೆ ಧಾರಾಳ ನಗೆಯೊಡನೆ ಕಣ್ಣೀರು ಬರುವ ಸಣ್ಣ ದೈಹಿಕ ಕೊರತೆಯಿತ್ತು. ಆದರೆ ಅವರ ಪರಿಚಯ ಬೆಳೆದಂತೆ, ಮೃದು ಮಾತು, ವೈವಿಧ್ಯಮಯ ಆಸಕ್ತಿ ಮತ್ತು ತನಗೆ ತಿಳಿದದ್ದನ್ನೆಲ್ಲ ಎಲ್ಲರಲ್ಲಿ ಹಂಚಿಕೊಳ್ಳುವಲ್ಲಿ ಇದ್ದ ಆನಂದವನ್ನು ಕಂಡಾಗ, ಅದು ಆನಂದಾಶ್ರುವೇ ಇರಬೇಕು!

ಜಯಂತರ ಕೌಟುಂಬಿಕ ಹಿನ್ನೆಲೆ ಹಣಕಾಸಿನದ್ದಲ್ಲ. ಹಾಗಾಗಿ ಅವರು ಗಳಿಸಿದ ವಿದ್ಯಾ ಯೋಗ್ಯತೆಗೆ ದಕ್ಕಿದ ವೃತ್ತಿ ಭದ್ರತೆಯಲ್ಲಿ ‘ನಾನು, ನನ್ನ ಸಂಸಾರ’ ಎಂದು ಬೆಚ್ಚಗುಳಿದು ಬಿಡಬಹುದಿತ್ತು. ಆದರೆ ಅವರು ಹಾಗೆ ಮಾಡಲಿಲ್ಲ. ಜಯಂತರು ವೃತ್ತಿ, ಮದುವೆ, ಮಕ್ಕಳು ಎಂದು ತೊಡಗಿಕೊಂಡ ಕಾಲಕ್ಕೇ ಕೌಟುಂಬಿಕ ಗೊಂದಲಗಳಲ್ಲಿ, ಸ್ವಂತ ಮನೆಯಿಂದಲೇ ಹೊರಬೀಳಬೇಕಾಯ್ತು. ಬಹುತೇಕ ಊರ ಹೊರಗೇ (ಸರೀಪಳ್ಳ) ಎಂಬಂತೆ ನಿವೇಶನ ಕೊಂಡು, ಸರಳ ಮನೆ ಕಟ್ಟಿಸಿ ನೆಲೆಸಿದರು. ಆ ಸರಳತೆಯ ಭಾಗವೇ ಎನ್ನುವಂತೆ, ಜಯಂತ ಎಂದೂ ಸ್ವಂತ ವಾಹನ ಇಟ್ಟುಕೊಳ್ಳಲೇ ಇಲ್ಲ. ಇವರ ಕಾಲೇಜಿನ ಓಡಾಟಕ್ಕೆ, ಹೆಂಡತಿ ನವರತ್ನರ ಮನೆಯ ದೈನಂದಿನ ಅಗತ್ಯಗಳ ಪೂರೈಕೆಗೆ, ಮಕ್ಕಳಿಬ್ಬರ ವಿದ್ಯಾಭ್ಯಾಸಕ್ಕೆ ಮತ್ತು ಎಲ್ಲರ ನೂರೆಂಟು ಹವ್ಯಾಸಗಳಿಗೂ ಒಟ್ಟಾರೆ ಕುಟುಂಬ ನೆಚ್ಚಿದ್ದು ನಡಿಗೆ ಅಥವಾ ಸಾರ್ವಜನಿಕ ಸಾರಿಗೆ! ಹೀಗೆ ಜಯಂತರಿಗೆ ನಡಿಗೆ ಅನಿವಾರ್ಯ ಕರ್ಮವೇ ಆಗಿದ್ದರೂ ಎಲ್ಲೋ ಕೇಳಿ ನನ್ನಲ್ಲಿಗೆ ಬಂದಿದ್ದರು. ನಡಿಗೆಯೇ ಜೀವಾಳವಾದ ಚಾರಣ, ಪರ್ವತಾರೋಹಣ ಮತ್ತು ಪ್ರಾಕೃತಿಕ ಶೋಧನೆಯ ಭಾಗವಾಗುವುದಕ್ಕೆ!

೧೯೭೦ರ ದಶಕದ ಕೊನೆಯ ಪಾದದಲ್ಲಿ ನಾನು ಆರೋಹಣ ಪರ್ವತಾರೋಹಿಗಳು ಸಾಹಸಿಗಳು ಎಂಬ ಔಪಚಾರಿಕ ಕೂಟ ಕಟ್ಟಿದ್ದೆ. (ಒಂದೇ ವರ್ಷದಲ್ಲಿ ಹೆಸರು ಮಾತ್ರ ಉಳಿಸಿಕೊಂಡು, ಸಂಘಟನೆ ಬರ್ಖಾಸ್ತೂ ಮಾಡಿದೆ!) ಗೆಳೆಯರಾದ ಪಂಡಿತಾರಾಧ್ಯ, ರಾಘವೇಂದ್ರ ಉರಾಳ, ಶರತ್, ಸುಬ್ರಾಯ ಕಾರಂತರೇ ಮೊದಲಾದ ಹತ್ತು ಹನ್ನೆರಡು ಮಂದಿಯಂತೆ (ವಾರ್ಷಿಕ ಶುಲ್ಕ ಹತ್ತು ರೂಪಾಯಿ ಕಟ್ಟಿ) ಜಯಂತ ಕೂಡಾ ಸದಸ್ಯರಾದರು, ಸಹೋದ್ಯೋಗಿ ರೋನಾಲ್ಡ್ ಮಸ್ಕರೇಞಸರನ್ನೂ ಸೇರಿಸಿದ್ದರು ಎಂದು ನೆನಪು. ಕದ್ರಿ ದೇವಳದ ಹಿತ್ತಿಲಿನ ಮುರಕಲ್ಲ ಗುಂಡುಗಳ ಮೇಲೆ ಊರಿದ ನಮ್ಮ ವಾಮನಪಾದ ೧೯೮೦ರ ಕೊನೆಯಲ್ಲಿ ನಡೆದ ಅಪೂರ್ವ ಪರ್ವತಾರೋಹಣ ಸಪ್ತಾಹಕ್ಕಾಗುವಾಗ ಜಿಲ್ಲೆಯಾದ್ಯಂತ ವಿಸ್ತರಿಸಿದ ತ್ರಿವಿಕ್ರಮ ನಡೆಯಾಗಿತ್ತು.

ಪರ್ವತಾರೋಹಣ ಸಪ್ತಾಹದ ಕೊನೆಯ ಕಲಾಪ – ನಿಶಾಚಾರಣ ಮತ್ತು ಶಿಖರಾರೋಹಣ. ಇತರ ಮಿತ್ರರಂತೆ ಜಯಂತರೂ ವೃತ್ತಿಗೆ ಏಳೂ ದಿನ ರಜೆ ಮಾಡಿ, ಸಪ್ತಾಹದ ಉದ್ದಕ್ಕೂ ಸಕ್ರಿಯರಾಗಿದ್ದರು. ಆದರೆ ಉಜಿರೆಯಲ್ಲಿ ನಿಶಾಚಾರಣಕ್ಕೆ ತೊಡಗುವಾಗ ಅವರು ನಾಪತ್ತೆಯಾದಂತಿತ್ತು. ಜಯಂತ, ಮೂರ್ತಿ ಚಿಕ್ಕದು, ಕೀರ್ತಿ (ಜಯಂಟ್ – Giant) ದೊಡ್ಡದು ಎನ್ನುವುದಕ್ಕೆ ನಿದರ್ಶನ – ಸಣ್ಣಾಳು. ನೂರರ ಸಮೀಪದ ನಿಶಾಚಾರಣಿಗರ ಎಡೆಯಲ್ಲಿ ಇವರನ್ನು ಹುಡುಕುವುದಾದರೂ ಎಲ್ಲಿ ಎನ್ನುವಾಗ ಕಾಣಿಸಿದವರು ‘ಚಿಕ್ಕೇ ಗೌಡ’. ದಗಳೆ ಇಜಾರ ಮತ್ತು ಪೂರ್ಣತೋಳಿನ ಅಂಗಿ ಹಾಕಿ, ತಲೆಗೆ ಮಂಗನತೊಪ್ಪಿ ಎಳೆದು ನಡೆದಿದ್ದ ಅನ್ವರ್ಥನಾಮಕ ‘ಚಿಕ್ಕೇಗೌಡ’ರನ್ನು ಕಣ್ಣರಳಿಸಿ ನೋಡಿದಾಗ ಕಂಡದ್ದು ಜಯಂತ. ನಾನು “ಭೋ ಸ(ಚ)ಳಿ ಚಿಕ್ಕೇಗೌಡ್ರೇ. ಒಂದ್ ಬೀಡಿ ಹಚ್ಕಳೀ” ಎಂದೇನೋ ತಮಾಷೆ ಮಾಡಿದ್ದೆ! (ಪೂರ್ಣ ಓದಿಗೆ ನೋಡಿ: ಯಶಸ್ಸಿನ ಉತ್ತುಂಗದಲ್ಲಿ….)

ಸಪ್ತಾಹ ಕಾಲದಲ್ಲಿ ನಾವು ಜಿಲ್ಲೆಯ ವಿವಿಧ ಊರುಗಳು ಬರುವಂತೆ ಏಳು ಕಾಲೇಜುಗಳನ್ನಷ್ಟೇ ಆಯ್ದುಕೊಂಡಿದ್ದೆವು. ಮಂಗಳೂರಿನಲ್ಲಿ ಅಲೋಶಿಯಸ್ ಕಾಲೇಜನ್ನು ಆಯ್ದುಕೊಂಡಿದ್ದೆವು. ಆದರೆ ಸಪ್ತಾಹ ಕಳೆದು ಒಂದೆರಡು ವಾರದಲ್ಲೇ, ಜಯಂತ ಮತ್ತು ರೋನಾಲ್ಡರ ಉತ್ಸಾಹದಲ್ಲಿ ಏಗ್ನೆಸ್ಸಿನಲ್ಲೂ ಆರೋಹಣದ ವಿಶೇಷ ಕಲಾಪವೊಂದನ್ನು ನಡೆಸಲೇ ಬೇಕಾಯ್ತು. ಮುಂದೆ ಮಹಿಳಾ ಕಾಲೇಜಿನ ನೂರೆಂಟು ಭಯಗಳನ್ನು ಉತ್ತರಿಸಿ, ಅಲ್ಲಿನ ಕೆಲವು ಆಸಕ್ತ ವಿದ್ಯಾರ್ಥಿನಿಯರಿಗಾಗಿ ಕೊಡಂಜೆ, ಜಮಾಲಾಬಾದ್ ಸಾಹಸಯಾನವನ್ನೂ ಮಾಡಬೇಕಾಯ್ತು. ಜಯಂತರು ಸಮಯಾನುಕೂಲ ನೋಡಿಕೊಂಡು ನಮ್ಮೊಡನೆ ಹಲವು ಸಾಹಸ ಯಾನಗಳಲ್ಲಿ ಭಾಗವಹಿಸಿದ್ದರು. ಒಮ್ಮೆ ನಾನು ಕೊಡಚಾದ್ರಿಯ ಶಿಖರದ ಕಡಿದಾದ ಮೈಯಲ್ಲಿ (ಚಿತ್ರಮೂಲಕ್ಕಾಗಿ ಬೆಳಕಲ್ ತೀರ್ಥದವರೆಗೆ) ಇಳಿಯುವ ಯೋಜನೆ ಹಾಕಿದ್ದೆ. ಆದರೆ ಕಡೇ ಗಳಿಗೆಯಲ್ಲಿ ನನಗೆ ಅನ್ಯ ಕಾರ್ಯ ಒತ್ತಡದಲ್ಲಿ ಭಾಗವಹಿಸುವುದು ಅಸಾಧ್ಯವಾಯ್ತು. ಆಗ ಜಯಂತರು ನಾಯಕತ್ವ ವಹಿಸಿ, ಸಾಹಸಯಾನ ಯಶಸ್ವಿಯಾದದ್ದು ನಿಜಕ್ಕೂ ಅಸಾಮಾನ್ಯ ಸಾಧನೆ. (ನೋಡಿ: ಬೆಳ್ಳಿಧಾರೆಯಗುಂಟ ಇಳಿಯುವ ನಂಟೇ?) ಅಂದು ಆ ತಂಡದ ಓರ್ವ ಸದಸ್ಯನಾಗಿದ್ದ ಹರೀಶಪೇಜಾವರರಿಗೆ ಇಂದಿಗೂ ಅದನ್ನು ಕಥಿಸುವುದೆಂದರೆ ಎಲ್ಲಿಲ್ಲದ ರೋಮಾಂಚನ!

ಆರೋಹಣದ ಗುಹಾಶೋಧನೆಯ ಕೆಲ ಸಂದರ್ಭಗಳಲ್ಲಿ ಜಯಂತರ ಪಾತ್ರ ಅದ್ವಿತೀಯವೇ ಸರಿ. ಮುಚ್ಚೂರು ಸಮೀಪದ ನೆಲ್ಲಿತೀರ್ಥ ಗುಹೆಯೊಳಗಿನ ಒಂದು ಉದಾಹರಣೆ ನೋಡಿ. ಅಲ್ಲಿನ ಭಕ್ತರ ಗುಹಾ ದರ್ಶನ ಸುಮಾರು ಇನ್ನೂರು ಮೀಟರ್ ಒಳಗಿನ ತೀರ್ಥದ ಕೊಳದಲ್ಲಿ ಸ್ನಾನ ಮತ್ತು ಅಲ್ಲೇ ಮೇಲೆ ನಿಂತ ಶಿವಲಿಂಗಕ್ಕೆ ಅಭಿಷೇಕದೊಡನೆ ಮುಗಿಯುವುದಿತ್ತು. ಆದರೆ ನಮ್ಮ ತಂಡ ಶಿವಲಿಂಗದ ಹಿಂದಕ್ಕೆ ಬಹಳ ಸಪುರವಾಗಿ ಮುಂದುವರಿದ ಗುಹೆ, ಮತ್ತದರ ಕೆಲವು ಕವಲುಗಳನ್ನೂ (ನೋಡಿ: ಗುಹಾ ವಿವಾದಕ್ಕೆ ಮಂಗಳ?) ಒಟ್ಟು ಸುಮಾರು ನೂರಿನ್ನೂರಡಿಗೂ ಮಿಕ್ಕು ಉದ್ದ) ಹೊಕ್ಕು ತಾರ್ಕಿಕ ಕೊನೆ ಕಂಡಿತ್ತು. ಇಂಥ ಸಾಧನೆಗಳಲ್ಲಿ ಕೊನೆಯ ಹಂತಗಳಲ್ಲಿ ದೈಹಿಕವಾಗಿ ಸಣ್ಣಾಳು ಜಯಂತರಲ್ಲದಿದ್ದರೆ ನಮ್ಮ ಸಾಧನೆ ಅಪೂರ್ಣವೇ ಆಗುತ್ತಿತ್ತು. ಕಾಸರಗೋಡು ಜಿಲ್ಲೆಯ ಆದೂರು ಸಮೀಪದ ಗುಹಾಶೋಧನೆಯೂ ಇಂತದ್ದೇ ಇನ್ನೊಂದು ಅಪೂರ್ವ ರೋಮಾಂಚಕಾರಿ ಕಥನ ಎನ್ನುವುದನ್ನು ನೀವು ಪ್ರತ್ಯೇಕ ಓದಿ ತಿಳಿದುಕೊಳ್ಳಬಹುದು – ನೆಲ್ಲಿತಟ್ಟುತೀರ್ಥ

ಜಯಂತರಿಗೆ ಕುಟುಂಬ ಮೂಲದಲ್ಲಿ ಸಂಗೀತದ ಹಿನ್ನೆಲೆ ಹಾಗೂ ಸಂಸ್ಕಾರ ಚೆನ್ನಾಗಿಯೇ ಇತ್ತು. (ಜಯಂತರು ಸಣ್ಣ ಮಟ್ಟಿನ ಕರ್ನಾಟಕ ಸಂಗೀತದ ಪಿಟೀಲು ವಾದಕರೇ ಆಗಿದ್ದರು.) ಅದನ್ನು ಅವರು ತಮ್ಮ ಮಿತಿಯಲ್ಲಿ ಸದಾ ಉಜ್ವಲಗೊಳಿಸಿಟ್ಟುಕೊಂಡಿದ್ದರು. ಅವರ ದೊಡ್ಡ ಮಗಳ ಹೆಸರೂ ಸಂಗೀತ. ಮತ್ತು ಅವಳ ಮದುವೆಯನ್ನು ಕುಟುಂಬದವರೇ ಪಾಲುಗೊಂಡಂತೆ ವಿವಿಧ ಸಂಗೀತ ಲಹರಿಗಳಲ್ಲೇ ನಡೆಸಿದ್ದು ಒಂದು ವಿಶಿಷ್ಟ ಅನುಭವ! ಅದಲ್ಲದೇ ಊರಿನ ಬಹುತೇಕ ಸಂಗೀತ ಕಛೇರಿ, ನೃತ್ಯ ನಾಟಕ ಪ್ರದರ್ಶನಗಳು ಜಯಂತರ ಪೂರ್ಣ ಕುಟುಂಬದ ಹಾಜರಿಯಿಲ್ಲದೇ ನಡೆದುದೇ ಇಲ್ಲ ಎಂದರೆ ಅತಿಶಯೋಕ್ತಿಯಲ್ಲ. ಕೆಲವಕ್ಕೆ ಗೈರುಹಾಜರಿ ಮತ್ತು ಕೆಲವೊಮ್ಮೆ ಪ್ರದರ್ಶನಗಳ ನಡುವೆ ಎದ್ದು ಹೋದರೆ, ಅದು ಇವರ ಕುಟುಂಬಕ್ಕೆ ಸಾರ್ವಜನಿಕ ಸಾರಿಗೆ ನಂಬಿ ಮರಳಿ ದೂರದ ಮನೆ ಸೇರಿಕೊಳ್ಳುವ ಸಮಯ ಮೀರುತ್ತ ಬಂದಿರಬೇಕೆಂದೇ ಗ್ರಹಿಸಬೇಕು, ಕಲಾ ಅಗೌರವದಿಂದ ಎಂದು ಅಲ್ಲ!

ಜಯಂತರು ಸ್ವಲ್ಪ ನನ್ನ ತಂದೆಯ ಪ್ರೇರಣೆಯಿಂದ, ಬಹ್ವಂಶ ಸ್ವಾಧ್ಯಯನದಿಂದ ಆಕಾಶ ವೀಕ್ಷಣೆಯನ್ನು ತುಂಬ ಗಾಢ ಹವ್ಯಾಸವಾಗಿ ಹಚ್ಚಿಕೊಂಡಿದ್ದರು. ಅದನ್ನು ಸಾರ್ವಜನಿಕದಲ್ಲಿ ಪ್ರಸರಿಸುವಲ್ಲಿ ಇನ್ನಿಲ್ಲದ ಉತ್ಸಾಹ ತಳೆದಿದ್ದರು. (ಇವರಿಗೆ ಸಮಭುಜವಾಗಿ ಸಹಕರಿಸುತ್ತಿದ್ದವರಲ್ಲಿ ಗೆಳೆಯ ರೋಹಿತ್ ರಾವ್ ಹೆಸರು ಉಲ್ಲೇಖನೀಯ) ಪಿಲಿಕುಳದ ತಾರಾಲಯ ಸಲಕರಣೆಗಳ ಅದ್ದೂರಿ, ವೈಭವದ ಪರಿಸರ, ಅಬ್ಬರದ ಪ್ರಚಾರ, ಖ್ಯಾತನಾಮರನ್ನು ತರಿಸುವ ಆರ್ಥಿಕ ಸೌಕರ್ಯಗಳೆಲ್ಲ ಇರುವ ವ್ಯವಸ್ಥೆ. ಆದರೂ ಆಸಕ್ತರು ತಾರಾಲಯದ ಸಮಯ ಕಾದು, ಅಲ್ಲಿಗೇ ಹೋಗಿ, ಔಪಚಾರಿಕ ಶುಲ್ಕ ಕೊಟ್ಟು ಮತ್ತು ಅವರು ಹೇರುವ ಕಟ್ಟುಪಾಡುಗಳನ್ನು ಅನುಸರಿಸಿ ಅನುಭವಿಸಬೇಕು. ಜಯಂತರು ಕೆಲ ಸಂದರ್ಭಗಳಲ್ಲಿ ತಾರಾಲಯದ ಸವಲತ್ತುಗಳಿಂದ ಪ್ರಯೋಜನ ಪಡೆದದ್ದು ಇದ್ದರೂ ಅಲ್ಲಿಗೆ ಸಂಪನ್ಮೂಲ ವ್ಯಕ್ತಿಯಾಗಿ ಹೋದದ್ದೇ ಹೆಚ್ಚು. ಅದಕ್ಕೂ ಮಿಗಿಲಾಗಿ ಜಯಂತರು ತಾರಾಲಯದ ಎಲ್ಲಾ ಔಪಚಾರಿಕತೆಗಳನ್ನು ಕಳಚಿ, ಆಸಕ್ತರು ಕರೆದಲ್ಲಿಗೆ ತಮ್ಮದೇ ಮುಕ್ಕಾಲಿ, ದುರ್ಬೀನು ಹೊತ್ತುಕೊಂಡು ಹೋಗಿ ಉಚಿತ ಪಾಠ ಮಾಡುತ್ತಿದ್ದರು. ಅಲ್ಲದೆಯೂ ಪರ್ವ ಕಾಲಗಳಲ್ಲಿ (ಉಲ್ಕೆಗಳ ಮಳೆ, ಗ್ರಹಣಗಳು ಇತ್ಯಾದಿ) ಯಾವುದೇ ಸಾರ್ವಜನಿಕ ಮೈದಾನಗಳಲ್ಲಿ, ತನ್ನದೇ ಮಿತಿಯಲ್ಲಿ ಆಕಾಶವೀಕ್ಷಣೆಯನ್ನು ನಡೆಸುತ್ತಿದ್ದ ಉತ್ಸಾಹಿ ಜಯಂತ.

ಈಚೆಗೆ (೨೬-೫-೨೧) ರಾತ್ರಿ ‘ಕೆಂಪು ಚಂದ್ರ’ ಬಂದಿದ್ದ. ಅದೇ ಹಗಲು ಅನಿರೀಕ್ಷಿತವಾಗಿ ಸೂರ್ಯನಿಗೆ ಕಾಮನಬಿಲ್ಲಿನ ಬಳೆಯೂ ಒದಗಿತ್ತು. ಆದರೆ ಈ ಬಾರಿ, ಇಂಥ ವಿಶ್ವವ್ಯಾಪಾರದ ವೇಳೆಯಲ್ಲೆಲ್ಲ, ತನ್ನದೇ ವ್ಯ/ಅ-ವಸ್ಥೆಯಲ್ಲಿ (ಅವಸ್ಥೆ? ಹೌದು! ಬೋಳು ಮೈದಾನದಲ್ಲಿ ಮುಕ್ಕಾಲಿ ಹೂಡಿ, ದುರ್ಬೀನು ಏರಿಸುತ್ತಿದ್ದರು. ಮತ್ತೆ ಸ್ವಂತದ ಶೀತಬಾಧೆಯನ್ನು ನಿವಾರಿಸಲು ತಲೆಗೆ ಮುಂಡಾಸು ಕಟ್ಟಿ, ರಾತ್ರಿಯಿಡೀ ನಿದ್ದೆಗೆಡುವುದರೊಡನೆ ನಿಂತೇ ಆಕಾಶಕಾಯಗಳನ್ನು ತೋರುತ್ತಾ ವಿವರಣೆ ಕೊಡುವುದು ಸಾಮಾನ್ಯ ಕೆಲಸವಲ್ಲ!), ‘ಉಚಿತ ಮಳಿಗೆ’ ತೆರೆಯುತ್ತಿದ್ದ ಜಯಂತ ಕಾಲಸಂದು ಹದಿಮೂರು ದಿನವಾಗಿತ್ತು! ಆಕಾಶ ಹನಿಗಣ್ಣಾಗಿದೆ.
ಜಯಂತರು ಪ್ರಾಯ ಸಹಜವಾಗಿ ಕಾಲೇಜಿನಿಂದ ನಿವೃತ್ತರಾಗಿದ್ದರು. ಆದರೂ ಈಚೆಗೆ ಏಗ್ನೆಸ್ ಕಾಲೇಜಿನ ಒಂದು ಪರಿಸರ ವಿಚಾರಗೋಷ್ಠಿಯ ಪ್ರಾಸ್ತಾವಿಕ ನುಡಿಗೆ ನನ್ನನ್ನು ಸಿಕ್ಕಿಸಿ ಹಾಕಿದ್ದರು. ದಿನಪೂರ್ತಿ ನಡೆದ ಗೋಷ್ಟಿಯ ಉದ್ದಕ್ಕೂ ಅವರು ಕುಳಿತು, ಕೊನೆಗೆ ಸಮಾರೋಪ ಭಾಷಣವನ್ನೂ ಮಾಡಿದ್ದರು. ಮೂರ್ನಾಲ್ಕು ತಿಂಗಳ ಹಿಂದೆ, ಒಂದು ಬೆಳಿಗ್ಗೆ ನಾನು ‘ಅಶೋಕವನ’ದಿಂದ ಮಂಗಳೂರಿಗೆ ಬರುತ್ತಿದ್ದೆ. ಜತೆಯಲ್ಲಿ ದೇವಕಿ ಮತ್ತು ವೆಂಕಟ್ರಮಣ ಉಪಾಧ್ಯರೂ ಇದ್ದರು. ಆಗ ಯಾವ ಪೂರ್ವಸೂಚನೆಯಿಲ್ಲದೆ, ಆದರೆ ಎಂದಿನ ಅನೌಪಚಾರಿಕತೆಯಲ್ಲಿ ಜಯಂತರ ಚರವಾಣಿ ಕರೆ (ಆಮಂತ್ರಣವೂ ಹೌದು) ಬಂದಿತ್ತು. “ಇಂದು ಮಧ್ಯಾಹ್ನದ ಸಂತೋಷ ಊಟಕ್ಕೆ ನೀವು ನಮ್ಮನೆಗೆ ಬರಬೇಕು. ನೆಪ ಸಣ್ಣದು – ಆರೋಹಣದ ಮಿತ್ರರೆಲ್ಲ ಸೇರಿ ಹರಟುವುದು”. ನನಗೆ ಭಾಗವಹಿಸುವುದು ಸಾಧ್ಯವಾಗಲಿಲ್ಲ. ಅನಂತರ ಎರಡು ವಾರದ ಹಿಂದೆ, ರೋಹಿತ್ ಅಷ್ಟೇ ಅನಿರೀಕ್ಷಿತವಾಗಿ “ಜಯಂತರು ಇನ್ನಿಲ್ಲ” ಎಂದರು. ಆದರೆ ಈ ಬಾರಿಯೂ ನನಗೆ ಅವರ ಮನೆಗೆ ಹೋಗುವುದಾಗಲಿಲ್ಲ; ಕೊರೋನಾ ನಿರ್ಬಂಧಗಳು! ನುಡಿ ತರ್ಪಣವನ್ನಾದರೂ ಬರೆಯೋಣವೆಂದು ಕುಳಿತೆ. ಜಯಂತ ನೆನಪುಗಳ ಮಹಾಪೂರದಲ್ಲಿ ಸುಸಂಬದ್ಧವಾಗಿ ಕೆಲವನ್ನಾದರೂ ಹಿಡಿದಿಡುವಲ್ಲಿ ಇದೇ ಮೊದಲು ಎನ್ನುವಂತೆ ಬಳಲಿದೆ. ಜಯಂತರು ಇದ್ದಿದ್ದರೆ, ಖಂಡಿತಕ್ಕೂ ನಕ್ಕು ಹನಿಗಣ್ಣಾಗುತ್ತಿದ್ದರು. ಪ್ರಶಸ್ತಿ, ಪ್ರಚಾರಗಳನ್ನು ಅವರು ಬದುಕಿದ್ದಾಗಲೇ ಬಯಸಲಿಲ್ಲ. ಇನ್ನು ಈಗ ಒಂದು ಸ್ಮರಣಿಕೆಯೇ!