[ತೆಂಕು ತಿಟ್ಟಿನಲ್ಲೂ ಇಂಥ ಪ್ರಯತ್ನ ಕೆಲವು ವರ್ಷಗಳ ಹಿಂದೆಯೇ ನಡೆದು, ಯಶಸ್ಸು ಕಂಡದ್ದನ್ನು ಇಲ್ಲಿ ಸ್ಮರಿಸುವುದು ಅವಶ್ಯ. ಅದು ವಿದ್ಯಾ ಕೋಳ್ಯೂರು ಅವರ ಯಕ್ಷ ಮಂಜೂಷ ಮಾಡಿದ ಪ್ರಯೋಗ. ನಮ್ಮ ಸಾಂಪ್ರದಾಯಿಕ ಯಕ್ಷ-ಕಲಾ ತಂಡಗಳು ವಿಶ್ವಾದ್ಯಂತ ಪ್ರದರ್ಶನಗಳನ್ನು ಕೊಡುತ್ತಿದ್ದರೂ ಬಹುತೇಕ ಪ್ರೇಕ್ಷಕರು ವಲಸೆ ಹೋದ ಕನ್ನಡಿಗರೇ ಇರುತ್ತಾರೆ. ಆದರೆ ವಿದ್ಯಾ ತಮ್ಮ ಅಪ್ಪಟ ಕನ್ನಡ ತಂಡವನ್ನು, ಪೂರ್ಣ ಹಿಂದಿ ಭಾಷಿಕರಿಗಾಗಿಯೇ ಸಜ್ಜುಗೊಳಿಸಿದ್ದರು. ಅದರಲ್ಲಿ ಪ್ರಸಂಗ ಹಾಗೂ ಸಂಭಾಷಣೆಗಳನ್ನು ವಿದ್ವಾನ್ ಸರ್ಪಂಗಳ ಈಶ್ವರಭಟ್ಟರು ಅನುವಾದಿಸಿ ಕೊಟ್ಟಿದ್ದರು. ಹಿರಿಯ ಭಾಗವತ ಪುತ್ತಿಗೆ ರಘುರಾಮ ಹೊಳ್ಳರು, ಜಾಗಂಟೆ ಹಿಡಿದು, ಹಿಂದಿಯಲ್ಲಿ ಹಾಡುವ ಪ್ರಾರ್ಥನಾಗೀತೆಯ ಮಾದರಿಯನ್ನು ಇಲ್ಲಿ ಅನುಭವಿಸಿ: ಪ್ರಸಂಗ ಪಂಚವಟಿ]
ವಾರಣಾಸಿ ತಂಡಕ್ಕೆ ತರಬೇತಿಯ ಔಪಚಾರಿಕ ಸಮಾರೋಪ ಮತ್ತು ಪ್ರಥಮ ಸಾರ್ವಜನಿಕ ಪ್ರದರ್ಶನಾವಕಾಶವನ್ನು ಮೊನ್ನೆ (೧೨-೪-೨೨) ಎಂಜಿಎಂ ಕಾಲೇಜಿನಲ್ಲಿ ವ್ಯವಸ್ಥೆ ಮಾಡಿದ್ದರು. ಮೊದಲ ಸಭಾ ಕಲಾಪದಲ್ಲಿ ಪ್ರಸಂಗದ ಅನುವಾದಕಿ – ಮಾಧವಿ ಭಂಡಾರಿ ಹಾಗೂ ತಂಡದ ನಾಯಕ – ರಾಮ್ಜೀಯವರಿಗೆ ಸಮ್ಮಾನ ನಡೆಯಿತು. ಪ್ರದರ್ಶನದ ಕೊನೆಯಲ್ಲಿ ಗುರು ವಂದನೆಯ ಭಾಗವಾಗಿ ಬನ್ನಂಜೆ ಸಂಜೀವ ಸುವರ್ಣರಾದಿ ಹಿಮ್ಮೇಳಕ್ಕೂ ಸಮ್ಮಾನವಿತ್ತು. ಅಷ್ಟಕ್ಕೇ ನಿಲ್ಲದೆ, ವಾಸ್ತವದಲ್ಲಿ ‘ಗುರುಕುಲ’ದ ಭಾಗವಾಗಿಯೇ ಭಾಗಿಯಾಗುವ ಶ್ರೀಮತಿ ಬನ್ನಂಜೆ, ಅಂದರೆ ವೇದಾವತಿ ಹಾಗೂ ಅವರ ಮಗ ಶಂತನುವಿಗೂ ಆಗ ಸಮ್ಮಾನಿಸಿದ್ದು ಗಮನಾರ್ಹವಾಗಿತ್ತು.
ಕೀರ್ತಿಶೇಷ ಮಹಾ ವಿದ್ವಾಂಸ ಎಕೆ ರಾಮಾನುಜನ್ ಮುನ್ನೂರಕ್ಕೂ ಮಿಕ್ಕು ವೈವಿಧ್ಯಮಯ ರಾಮಾಯಣಗಳನ್ನು ಗುರುತಿಸಿರುವುದು ನಮಗೆಲ್ಲ ತಿಳಿದೇ ಇದೆ. ಅಂಥ ಒಂದು ಆವೃತ್ತಿಯ ಕತೆ, ವಾಲ್ಮೀಕಿ ರಾಮಾಯಣದ ಆಧಾರದಲ್ಲಿ ಹೇಳುವುದಿದ್ದರೆ ಉತ್ತರ ಕಾಂಡದ ಭಾಗ – ಚಿತ್ರಪಟ ರಾಮಾಯಣ. ಬಹು ಜನ ತಿಳಿದಂತೆ, ಗರ್ಭಿಣಿ ಸೀತೆಯನ್ನು ರಾಮ ತ್ಯಜಿಸಿದ್ದಕ್ಕೆ ಕಾರಣ – ಅಗಸನ ದೂಷಣೆ. ಆದರೆ ಅಲ್ಲಿ ಮೆರೆದದ್ದು ಪ್ರಜೆಗಳಿಗೆ ಒಳ್ಳೆಯ ಆದರ್ಶವಾಗುವ ಕಾರಣಕ್ಕಾಗಿ ರಾಜಾರಾಮನ ಕರ್ತವ್ಯ ನಿರ್ವಹಣೆ. ಆದರಿಲ್ಲಿ ಸೀತೆ ಆಕಸ್ಮಿಕಗಳ ಸುಳಿಯಲ್ಲಿ ವೈಯಕ್ತಿಕವಾಗಿ (ರಾಮವಲ್ಲಭೆಯಾಗಿ) ಮಾತ್ರ ಬಳಲಿದಳು. ಆದರೂ ಮತ್ತೆ ರಾಜಾ ರಾಮ ಆದರ್ಶ ರೂಪಿಸುವ ನಿಟ್ಟಿನಲ್ಲಿ ಹೇರಿದ ಶಿಕ್ಷೆ ನೈಚ್ಯಾನುಸಂಧಾನಕ್ಕೆ! ವಾರದ ಹಿಂದೆ ರಾಧಾಕೃಷ್ಣ ಕಲ್ಚಾರ್, ಪುತ್ತೂರಿನಲ್ಲಿ ಪ್ರಸ್ತುತ ಪಡಿಸಿದ ‘ರಾಮ ನಿವೇದನೆ’ಯಲ್ಲಿ (ಚಿಟಿಕೆ ಹೊಡೆದು ಕೇಳಿ) ಸೂಚಿಸಿದಂತೆ, ‘ಅತ್ಯಂತ ಧರ್ಮಾತ್ಮನಾದ್ದಕ್ಕೇ ಹೆಚ್ಚು ವಿವಾದಾತ್ಮಕನೂ ಆದವ ರಾಮ’ ಎನ್ನುವುದು ಹೀಗೂ ಸ್ಪಷ್ಟವಾಗುತ್ತದೆ.
ಬನ್ನಿ, ನಾನು ಅನುಭವಿಸಿದ ಕಥಾ ಸ್ವಾರಸ್ಯವನ್ನು, ಪ್ರದರ್ಶನದ ಸ್ಥಿರ ಹಾಗೂ ಚರ ಚಿತ್ರ ತುಣುಕುಗಳ ಜತೆಯಲ್ಲಿ, ನನ್ನ ಅನಿಸಿಕೆಗಳ ಕೂಟದಲ್ಲಿ ಹಂಚಿಕೊಳ್ಳಲು ಪ್ರಯತ್ನಿಸುತ್ತೇನೆ. ಪ್ರೇಕ್ಷಕರಿಗೆ ಯಕ್ಷ-ಮಾಧ್ಯಮದಲ್ಲಿ ಕಥಾಮುಖಕ್ಕೆ ಯುಕ್ತ ಮನೋಭೂಮಿಕೆಯನ್ನು ಕಲ್ಪಿಸಲು ಪೂರ್ವರಂಗ ಸಹಕಾರಿ. ಹೀಗೆ ಚುಟುಕದಲ್ಲಿ ದೀಪ ಸ್ಥಾಪನೆ, ಅದರ ಬೆನ್ನಿಗೆ ಕೋಡಂಗಿ ವೇಷ, ಬಾಲಗೋಪಾಲರು, ಹಾಗೂ ಸಭಾ ಹೊಗಳಿಕೆಗಳು ನಡೆಯಿತು. ಪ್ರಸಂಗ ರಾಮ ಕಥೆಯಾದ್ದರಿಂದ – ರಾಮ, ಲಕ್ಷ್ಮಣ ಮತ್ತು ಭರತರ ಒಡ್ಡೋಲಗದೊಡನೆ ಪ್ರದರ್ಶನ ತೊಡಗಿತು. ವನವಾಸ, ಪರ್ಯಾಯವಾಗಿ ರಾಮ – ರಾವಣ ಯುದ್ಧ ಮುಗಿದು, ರಾಮರಾಜ್ಯದ್ದೇ ಕಾಲ. ಅದೊಂದು ದೈನಂದಿನ ಕಲಾಪದಲ್ಲಿ, ಅಹವಾಲು ಹೊತ್ತ ವನಚರನ ಆಗಮನವಾಗುತ್ತದೆ. ಆತ ಕೃಷಿ ಸಮಾಜಕ್ಕೆ ವನ್ಯಮೃಗಗಳ ಉಪಟಳವನ್ನು ವಿವರಿಸಿ, ನಿಯಂತ್ರಿಸಲು ರಾಮನನ್ನು ಕೋರುತ್ತಾನೆ. ರಾಮ ಸಹಜವಾಗಿ ಬೇಟೆಗೆ ಹೊರಡುವ ಸೂಚನೆ ಕೊಡುತ್ತಾನೆ. ಅತ್ತ ಆ ಸುದ್ದಿ ಮುಟ್ಟಿದ ಕಿರಾತ ಪಡೆ ಸಂಭ್ರಮಿಸುತ್ತದೆ ಮತ್ತು ರಾಮ ಸಭೆಯಲ್ಲಿ ಹಾಜರಾಗುತ್ತದೆ. ರಾಮ ಬೇಟೆಗೆ ಹೊರಡುವ ಮುನ್ನ, ಕಿರಾತರಲ್ಲಿ ಪ್ರಾಣಿವಧೆಯನ್ನು ನಿರಾಕರಿಸಿ, ಅವುಗಳನ್ನು ಸಹಜ ನೆಲೆಗೆ – ಕಾಡಿಗೆ, ಅಟ್ಟುವ ಕಿವಿ ಮಾತು ಹೇಳುತ್ತಾನೆ. ಇದು ನನಗಂತು ಅನಪೇಕ್ಷಿತ ಆಧುನಿಕ ಪರಿಸರ ರಕ್ಷಣೆಯ ಸಂದೇಶದಂತೆ ಕೇಳಿಸಿತು!
ಕಾಡಿನ ಒಂದು ಭಾಗದಲ್ಲಿ ರಾಮಪಡೆಯ ಬೇಟೆ ತೊಡಗುತ್ತಿದ್ದಂತೆ ಇನ್ನೊಂದು ಮಗ್ಗುಲಿನಲ್ಲಿದ್ದ ಶೂರ್ಪನಖಿ ಜಾಗೃತಳಾಗುತ್ತಾಳೆ. ರಾವಣ ಕುಂಭಕರ್ಣರನ್ನು ಕಳೆದುಕೊಂಡ ಮತ್ತು ಲಂಕಾಪಟ್ಟ ಹಿಡಿದ ವಿಭೀಷಣನ ಕುಟುಂಬ ದ್ರೋಹಗಳಿಂದ ನೊಂದು, ರಾಮದ್ವೇಷದ ಕುಂಡವನ್ನು ಸದಾ ಕಾಪಿಟ್ಟುಕೊಂಡಿದ್ದ ಆಕೆ ಪ್ರಜ್ವಲಿಸುತ್ತಾಳೆ. ಹಿಂದೆ ಪಂಚವಟಿಯಲ್ಲಿ ಮಾಡಿದ್ದಂತೆ ಮತ್ತೊಮ್ಮೆ ಮಾಯಾಶಕ್ತಿಯಿಂದ ತನ್ನ ಘೋರ ರೂಪವನ್ನು, ಷೋಡಶಿಯ ಲಾವಣ್ಯಕ್ಕೆ ತಿರುಗಿಸುತ್ತಾಳೆ. ಆಕೆ ಮೊದಲು ಏಕಾಂತದ ವಿರಾಮದಲ್ಲಿದ್ದ ರಾಮನ ಬಳಿ ಸುಳಿಯುತ್ತಾಳೆ, “…ಆಲಿಂಗನ್ ಕರೋ” ಎಂದೇ ದುಂಬಾಲು ಬೀಳುತ್ತಾಳೆ. ರಾಮ ತಾಟಕಿ, ಶೂರ್ಪನಖಿಯರ ನೆನಪಿನಲ್ಲಿ ಇದೂ ಒಂದು ಮಾಯಾರೂಪೆಂದು ಸರಿಯಾಗಿಯೇ ಗ್ರಹಿಸಿ, ಘನವಾಗಿಯೇ ತಿರಸ್ಕರಿಸುತ್ತಾನೆ. ಮುಂದುವರಿದು ಆಕೆ ಲಕ್ಷ್ಮಣನ ಏಕಾಂತಕ್ಕೂ ಕಾಮಿಯಾಗಿಯೇ ದಾಳಿಯಿಡುತ್ತಾಳೆ. ಲಕ್ಷ್ಮಣನೂ ಕಡಿಮೆ ಅನುಭವದವನಲ್ಲವಷ್ಟೇ. ಈತ ಉಗ್ರವಾಗಿಯೇ ಅವಳನ್ನು ತಿರಸ್ಕರಿಸುವುದು ಮಾತ್ರವಲ್ಲ, ಜೀವಭಯವನ್ನೇ ಹುಟ್ಟಿಸುತ್ತಾನೆ. ಹಿಂದೆ ಕಿವಿ ಮೂಗನ್ನು ಆತನಿಂದಲೇ ಕೊಯ್ಯಿಸಿಕೊಂಡ ನೋವಿನ ಪುನರಾವರ್ತನೆಯಾಗದಂತೆ ಶೂರ್ಪನಖಿ ತಪ್ಪಿಸಿಕೊಂಡೇನೋ ಬರುತ್ತಾಳೆ. ಆದರೆ ಹೊಸದೇ ಹೊಳಹಿನೊಡನೆ, ತನ್ನ ಮೂವರು ಸಹಚರ ರಕ್ಕಸರನ್ನು ಆಹ್ವಾನಿಸಿತ್ತಾಳೆ. ಅವರಿಗೆ ರಾಮಪಡೆಯನ್ನು ಕಾಡಿನಲ್ಲಿ ತುಸು ದೀರ್ಘ ಕಾಲ ಉಳಿಯುವಂತಾಗಿಸಲು ಸ್ಪಷ್ಟ ಸೂಚನೆಗಳನ್ನು ಕೊಡುತ್ತಾಳೆ. ಆ ಪ್ರಕಾರ ಮೃಗಯಾವಿಹಾರಕ್ಕೆ ಬಂದ ಸೋದರರು, ಅನಿವಾರ್ಯವಾಗಿ ಯುದ್ಧವ್ಯಸ್ತರಾಗಿ ಕಾಲಕಳೆಯುವುದಾಗುತ್ತದೆ. ಏತನ್ಮಧ್ಯೆ ದಕ್ಕಿದ ಸಮಯದಲ್ಲಿ ಶೂರ್ಪನಖಿ ಮತ್ತೆ ಮಾಯಾವಿದ್ಯೆಯಿಂದ ಯೋಗಿನಿಯಾಗಿ ರೂಪಾಂತರಗೊಂಡು ಕರಾಮತ್ತು ತೋರುತ್ತಾ ಅಯೋಧ್ಯೆಯತ್ತ ಸಾರುತ್ತಾಳೆ. ಬಹುಶಃ ಮೊದಲು ಷೋಡಷಿಯ ವೇಷ ನಿರ್ವಹಿಸಿದ ವಿದ್ಯಾರ್ಥಿನಿಯೇ ಯೋಗಿನಿಯ ವೇಷವನ್ನೂ ಮಾಡಿರಬೇಕು. (ಕೊನೆಯಲ್ಲಿ ಕೌಸಲ್ಯಳೂ ಆಗುತ್ತಾಳೆ) ಈಕೆಯ ಪಾತ್ರಕ್ಕೆ ಅಭಿನಯಾವಕಾಶ ಹೆಚ್ಚಿದ್ದಂತೆ, ಆಕೆಯ ನಿರ್ವಹಣೆಯೂ ತುಂಬ ಆಕರ್ಷಕವಾಗಿಯೇ ಇತ್ತು. ಅಲ್ಲಿ ರಾಣೀವಾಸದಲ್ಲಿ ಆಕೆ ಮೊದಲು ಸೀತೆಯ ಆಪ್ತ ಸಖಿಯನ್ನು ವಂಚನೆಯಲ್ಲಿ ಒಲಿಸಿಕೊಳ್ಳುತ್ತಾಳೆ. ತತ್ಫಲವಾಗಿ ಸೀತೆಯ ಭೇಟಿಯನ್ನು ಸಾಧಿಸುತ್ತಾಳೆ.
ಯೋಗಿನಿ ರೂಪದ ಶೂರ್ಪನಖಿ, ವಂಚನೆಯ ಮುಂದುವರಿಕೆಯಲ್ಲಿ ಸೀತೆಯನ್ನು ತನ್ನ ತಿರುಪೆಗೆ ಸಹಕಾರಿಯಾಗುವಂತೆ ರಾವಣನ ಚಿತ್ರವೊಂದನ್ನು ಬರೆದು ಕೊಡುವಂತೆ ನಿರ್ಬಂಧಿಸುತ್ತಾಳೆ. ಸೀತೆ ತನ್ನ ಪಾತಿವ್ರತ್ಯದ ಕಾಠಿಣ್ಯದಲ್ಲಿ ರಾವಣನ ಮುಖದರ್ಶನ ತನಗೆಂದೂ ಆಗಿಲ್ಲ, ಏನಾದರೂ ಇದ್ದರೆ ಆತನ ಉಂಗುಷ್ಟವನ್ನಷ್ಟೇ ಕಂಡಿದ್ದೇನೆ ಎಂದು ನಿಜನುಡಿದು ತಪ್ಪಿಸಿಕೊಳ್ಳಲು ನೋಡುತ್ತಾಳೆ. ಆದರೆ ಯೋಗಿನಿ “ಅಷ್ಟಾದರೂ ಸರಿ” ಎಂದು ಜುಲುಮೆಯಲ್ಲೇ ಬರೆಸಿಕೊಂಡ ಪರಿ ನೋಡಿ:ಈಗ ತಂತ್ರಗಾತಿ ಸೀತೆಗೆ ಹೇಳುವಂತೆ, ತನ್ನ ಯೌಗಿಕ ಬಲದಿಂದ ಚಿತ್ರವನ್ನು ಪೂರ್ಣಗೊಳಿಸುತ್ತಾಳೆ. ಅಷ್ಟಕ್ಕೇ ಸುಮ್ಮನಾಗದೆ, ತನಗೆ ಆ ಭಾರೀ ಚಿತ್ರವನ್ನು ಹೊತ್ತು ಸಾಗುವುದು ಅಸಾಧ್ಯ ಎಂದೂ ಸೀತೆಗೆ ಬಿಂಬಿಸುತ್ತಾಳೆ. ಇದಕ್ಕೆ ಪರಿಹಾರವಾಗಿ, ಸೀತೆಯನ್ನೇ ಚಿತ್ರಕ್ಕೆ ‘ಜೀವಪ್ರದಾನಿಸು’ವಂತೆ ಒಪ್ಪಿಸುತ್ತಾಳೆ. ಪರಿಣಾಮದ ಪೂರ್ಣ ಅರಿವಿಲ್ಲದೇ ಸೀತೆ ಚಿತ್ರಕ್ಕೆ ಜೀವ ಊಡುತ್ತಾಳೆ. ಜೀವತಳೆದ ಚಿತ್ರವಾದರೋ ಎದುರಾದ ವ್ಯಕ್ತಿಯ ಚಲನವಲನಗಳ ಅನುಕರಣಕ್ಕಷ್ಟೇ ಸೀಮಿತವಿರುತ್ತದೆ. ಈ ಹಂತದಲ್ಲಿ ಯೋಗಿಣಿ ಚಿತ್ರವನ್ನು ಸೀತೆಯ ಅಂತಃಪುರದಲ್ಲೇ ಉಳಿಸಿ ಪಲಾಯನ ಮಾಡುತ್ತಾಳೆ. ಸೀತೆ ಅದೇ ಮೊದಲು, ಚಿತ್ರದಲ್ಲೇ ಆದರೂ ರಾವಣನ ನಿಜರೂಪ ಕಂಡ ಮತ್ತೆ ಆ ಚಿತ್ರವನ್ನು ತನ್ನಲ್ಲೇ ಉಳಿಸಿಕೊಂಡ ‘ಅಪರಾಧಗಳಲ್ಲಿ’ ತೀವ್ರ ವಿಷಾದಲ್ಲಿದ್ದಂತೇ…. ಅರಣ್ಯದಿಂದ ರಾಮ ಮರಳುತ್ತಾನೆ. ಸೀತೆ ಸಿಲುಕಿಕೊಂಡ ಹೊಸದೇ ಸಮಸ್ಯೆಯ ಸುಳಿ ರಾಮನ ರಾಜಧರ್ಮಕ್ಕೆ ಹೊಸದೇ ಸವಾಲಾಗುತ್ತದೆ. ಇಲ್ಲಿ ಆತ ಸೀತೆಯ ಚಾರಿತ್ರ್ಯವನ್ನು (ಅಗಸನಂತೆ) ಶಂಕಿಸದಿದ್ದರೂ ರಾಜಪತ್ನಿಯ ನೈತಿಕ ಪಾಪವನ್ನು ಪರಿಗಣಿಸುತ್ತಾನೆ.
ತಾಯಿ ಕೌಸಲ್ಯಾದಿಗಳ ಹಿತವಚನವನ್ನು ಒಪ್ಪದೆ ಕೇವಲ ರಾಜಧರ್ಮದ ನಿರ್ವಹಣೆಗಾಗಿ ಸೀತಾ ತ್ಯಾಗವನ್ನು ಆದೇಶಿಸುತ್ತಾನೆ ಮತ್ತು ನಿರ್ವಹಣೆಯನ್ನು ಲಕ್ಷ್ಮಣನಿಗೆ ಒಪ್ಪಿಸುತ್ತಾನೆ. ಸೀತೆ ವೈಯಕ್ತಿಕವಾಗಿ ಅಪರಾಧವನ್ನು ನಿರಾಕರಿಸಿದರೂ ಪಾತಿವ್ರತ್ಯದ ಛಲದಲ್ಲಿ (ಕರುಣಾಳು ರಾಘವನಲ್ಲಿ ತಪ್ಪಿಲ್ಲ) ಆಜ್ಞೆಯನ್ನು ಶಿರೋಧಾರ್ಯ ಮಾಡಿಕೊಳ್ಳುತ್ತಾಳೆ. “ಮಾತಾ ಚಲೋ ವನ್ ಕೇ ಓರ್…” ಎಂದ ಲಕ್ಷ್ಮಣನನ್ನು ಪ್ರಾಯಶಿತ್ತಮುಖಿಯಾಗಿ ಹಿಂಬಾಲಿಸುತ್ತಾಳೆ. ಆಜ್ಞಾಧಾರಕನಾದ ಲಕ್ಷ್ಮಣ ದಟ್ಟಾರಣ್ಯದೊಳಗೆ ಸೀತೆಯನ್ನು ಬಿಟ್ಟು, ಪ್ರತಿಯಾಗಿ ಆಕೆಯಿಂದಲೂ ರಾಮಕ್ಷೇಮದ ಕಾಳಜಿ ಪಾಠ ಹೊತ್ತು, ಅಯೋಧ್ಯೆಗೆ ಮರಳುತ್ತಾನೆ.ಕಾನನಾಂತರದಲ್ಲಿ ಭೀತಳಾದ ಸೀತೆಗೆ ಈಗ, ಹನುಮಂತನ ನೆನಪಾಗುತ್ತದೆ. ರಾಮರಾವಣ ಯುದ್ಧಾಂತ್ಯದ ಕಾಲದಲ್ಲಿ ಆತ “ಆಪತ್ಕಾಲದಲ್ಲಿ ನೆನೆದರೆ ಬರುವೆ” ಎಂದ ಮಾತನ್ನು ಮೊರೆಯಾಗಿಸಿ ಕರೆಯುತ್ತಾಳೆ. ಸಹಜವಾಗಿ ಹನುಮ ಪ್ರವೇಶಿಸುತ್ತಾನೆ. ಇತ್ತ ಆಕೆಯ ಹುಯ್ಯಲನ್ನು ಕೇಳಿಸಿಕೊಂಡ ವಾಲ್ಮೀಕಿಯ ಪ್ರವೇಶವೂ ಆಗುತ್ತದೆ. ವಾಲ್ಮೀಕಿ ತನ್ನ ಕಾವ್ಯನಾಯಕನ ಜೀವನದಲ್ಲಿ ಹಾಸುಹೊಕ್ಕಾಗುವ ತನ್ನ ಪಾತ್ರವನ್ನು ಮುಂಗಂಡವನಾದ್ದಕ್ಕೆ ತತ್ಕಾಲೀನ ಮಂಗಳವನ್ನೇ ಕೋರುತ್ತಾನೆ. ಅದೇ ಚಿತ್ರಪಟ ರಾಮಾಯಣದ ಪ್ರದರ್ಶನಕ್ಕೂ ಮಂಗಳವಾಕ್ಯಗಳಾಗುತ್ತವೆ. ಸುಮಾರು ಒಂದೂವರೆ ಗಂಟೆಗಳ ಪ್ರದರ್ಶನವನ್ನು ಎಲ್ಲೂ ಜಾಳುಬೀಳದಂತೆ ನಿರ್ವಹಿಸಿದ ವಿದ್ಯಾರ್ಥಿಗಳ ಪರಿಚಯ ಮತ್ತು ಅವರಿಗೆ ಗಣ್ಯರ ಮೂಲಕ ಪ್ರಮಾಣ ಪತ್ರ ವಿತರಣೆ ಚುಟುಕದಲ್ಲೇ ನಡೆಯಿತು.
ಈ ಹಿಂದೆ ಸ್ವತಃ ಬನ್ನಂಜೆಯವರೇ ಈ ಪ್ರಸಂಗದ ಮೂಲ (ಕನ್ನಡ) ಆವೃತ್ತಿಯನ್ನು ನೀನಾಸಂನ ೨೦೧೯-೨೦ರ ಸಾಲಿನ ವಿದ್ಯಾರ್ಥಿಗಳಿಗೆ ತುಸು ಭಿನ್ನವಾಗಿಯೇ ನಿರ್ದೇಶಿಸಿದ್ದನ್ನು ಆಸಕ್ತರು ಇಲ್ಲಿ ಪೂರ್ಣವಾಗಿ ನೋಡಬಹುದು. ಚಿತ್ರ ಪಟ ರಾಮಾಯಣ. ಕನ್ನಡಕ್ಕಾಗುವಾಗ ವಾಚಿಕಾಭಿನಯ ಸಹಜವಾಗಿ ವಿಸ್ತರಿಸುವುದಕ್ಕೋ ಎಂಬಂತೆ ಪ್ರದರ್ಶನ ಸುಮಾರು ಎರಡೂ ಕಾಲು ಗಂಟೆಗಳ ಉದ್ದಕ್ಕಿದೆ. ಅದೇನೇ ಇರಲಿ…ಯಕ್ಷಗಾನದಲ್ಲಿ ಹಿಂದಿಲ್ಲ, ಮುಂದೂ ಬಹುತೇಕ ಇಲ್ಲ ಎನ್ನುವ ಸ್ಥಿತಿಯ ಹಿಂದಿ ವಿದ್ಯಾರ್ಥಿಗಳನ್ನು, ತಮ್ಮ ‘ಗರಡಿ’ಯಲ್ಲಿ ಕೇವಲ ಒಂದು ತಿಂಗಳ ‘ವ್ಯಾಯಾಮ’ದಲ್ಲಿ ಈ ಮಟ್ಟಕ್ಕೇರಿಸಿ ನಿಲ್ಲಿಸಿದ ಬನ್ನಂಜೆ ಸಂಜೀವ ಸುವರ್ಣ ಬಳಗಕ್ಕೆ ಬಹುದೊಡ್ಡ ಅಭಿನಂದನೆಗಳು.
ಗುರು ಸಂಜೀವ ಸುವರ್ಣರು ನಿರ್ದೇಶಿಸಿದ “ಚಿತ್ರ ಪಟ ರಾಮಾಯಣ” ಪ್ರದರ್ಶನಕ್ಕೆ ಅನಿವಾರ್ಯ ಕಾರಣದಿಂದ ಗೆಳೆಯ ಅಶೋಕ ವರ್ಧನರ ಪ್ರೀತಿಯ ಕರೆಯನ್ನು ಒಪ್ಪಿಕೊಳ್ಳಲಾರದ ನಿರಾಸೆಗೆ ತಂಪೆರೆಯುವಂತೆ ಮೂಡಿ ಬಂದಿದೆ ಈ ಸವಿವರವಾದ ಮತ್ತು ಅನುಕ್ರಮಣಿಕೆಯ ನೆಲೆಯಲ್ಲಿ ಪ್ರಸಂಗದ ನಡೆಯನ್ನು ಸಮರ್ಥವಾಗಿ ಹಿಡಿದಿಡುವ ೨೧ ಚುಟುಕು ವಿಡಿಯೋಗಳು. ಅಬ್ಬಬ್ಬಾ ಅಶೋಕ ವರ್ಧನರ ಲೇಖನದ ಸಮಗ್ರತೆಗೆ ನನ್ನದೊಂದು ಪ್ರೀತಿಪೂರ್ವಕ ನಮಸ್ಕಾರ!!ಅನೇಕ ಚಮತ್ಕಾರಿಕ ಘಟನಾವಳಿಗಳ ಸುಂದರ ಸರಮಾಲೆಯಂತೆ ಪ್ರಸಂಗದ ನಡೆ ಇರುವುದೊಂದು ಹೆಗ್ಗಳಿಕೆಯೇ ಸರಿ. ಮೂಲದಲ್ಲಿ ಹೊಸ್ತೋಟ ಮಂಜುನಾಥ ಭಾಗವತರ ಕೃತಿಯಿದು ಎಂಬುದು ಇನ್ನೊಂದು ಹೆಮ್ಮೆ. ಇದನ್ನು ಭಾಷೆಯ ಗಡಿ ದಾಟಿಸಿ ನಟ, ನಟಿಯರನ್ನು ಪ್ರದರ್ಶನಕ್ಕೆ ಸಜ್ಜುಗೊಳಿಸಿ ನಿಭಾಯಿಸಿದ್ದು ಸುವರ್ಣರ ಕೈಚಳಕ. ಇದಕ್ಕೊಂದು ಮೆಚ್ಚುಗೆಯ ಚಪ್ಪಾಳೆ. ಒಟ್ಟಿನಲ್ಲಿ ಅವಕಾಶ ತಪ್ಪಿದರೂ ಆಸ್ವಾದಕ್ಕೆ ಈ ಮೂಲಕ ಕೊರತೆಯಾಗಲಿಲ್ಲ ಎನ್ನುವ ಸಮಾಧಾನದ ಜೊತೆಗೇ, ನೇರ ಭಾಗಿಯಾಗಿದ್ದರೆ ಎಷ್ಟು ಒಳ್ಳೆಯದಿತ್ತು ಎಂಬ ಹಪಹಪಿಸುವ ಸ್ಥಿತಿ!!
A meticulous write-up
ಉಡುಪಿಗೆ ಹೋಗಿ ನೋಡಲಾಗದ ನಮ್ಮಂತವರಿಗೆ ಅತ್ಯಂತ ಉಪಯುಕ್ತವಾಗುವ ಹಾಗೆ ಬರೆದಿದ್ದೀರಿ ಸರ್.ಚಿತ್ರ-ಪಟ ಗಳ ಯಕ್ಷ ರಾಮಾಯಣವನ್ನುದೃಶ್ಯಿಕೆಗಳನ್ನಾಗಿಸಿ ಪುನ: ಕಥನವಾಗಿಸಿದ ನಿಮಗೆ ವಂದನೆಗಳು ಸರ್..ನಿರ್ದೇಶಿಸಿದ ಗುರು ಸಂಜೀವ ಸುವರ್ಣರಿಗೆ ಎಂದಿನ ಹಾಗೆ ಗೌರವದಿಂದ ವಂದಿಸುವೆ.
ಒಂದು ತಿಂಗಳಲ್ಲಿ ಭಾಷೆಯ ತೊಡಕು ಇದ್ದರೂ ಅವರನ್ನು ತಯಾರಿ ಮಾಡಿದ್ದು ಬಹಳ ದೊಡ್ಡ ಕೆಲಸ.ಗುರುಗಳ ಸಾಮರ್ಥ್ಯ ಮತ್ತೊಮ್ಮೆ ಸಾಬೀತಾಯ್ತು.ಶಿಷ್ಯರು ಎನ್ ಎಸ್ ಡಿ ವಿದ್ಯಾರ್ಥಿಗಳೇ ಆದ್ದರಿಂದ ಅಭಿನಯ ಚೆನ್ನಾಗಿ ಮಾಡಿದ್ರು.ನಿಮ್ಮ ಚಿತ್ರ ವಿಡಿಯೋ, ವಿವರಣೆ ಮತ್ತೊಮ್ಮೆ ನೋಡಿದ ಹಾಗಾಯ್ತು
ಪ್ರಶಂಸನೀಯ ಹಿಂದೀ ಪ್ರಸಂಗ! ದಕ್ಷಿಣದವರ ಮೇಲೆ ಹಿಂದಿಯನ್ನು ಹೇರುತ್ತಿದ್ದಾರೆ ಎಂಬ ಕೂಗಿಗೆ ಉತ್ತರವಾಗಿ ಉತ್ತರದವರ ಮೇಲೆ ಯಕ್ಷಗಾನವನ್ನು ಹೊರಿಸಿ ಕಳಿಸುವುದು ಸರ್ವಥಾ ಯೋಗ್ಯಕ್ರಮ. ಯೂಪಿಯವರ ನೀರಸ ರಾಮಲೀಲೆಗೆ ಇದು ಹೊಸ ಆಯಾಮ ಕೊಟ್ಟೀತು. ಅಶೋಕ ವರ್ಧನ ಇದನ್ನು ಕನ್ನಡಲೋಕಕ್ಕೆ ತಿಳಿಸಲೆಂದು ಎಷ್ಟೊಂದು ಸಾಮಗ್ರಿಗಳನ್ನು ಇಲ್ಲಿ ಕೊಟ್ಟಿದ್ದಾರೆ. ಅವರ ಸಾಹಸವೂ ಅಷ್ಟೇ ಶ್ಲಾಘನೀಯ.
Very good review.I have witnessed this program.A highly successful performance in familiarising our Yakshagana form to the world of theatre, especially North India.Guru Sanjeeva has improved upon the vision of Dr. Karanth. ( HE SHOULD BE RECOMMENDED FOR THE AWARD OF SANGEETA NATAKA ACADEMY,DELHI)I appreciate Ashoka Vardhana's review.