(ನೀನಾಸಂ ಕಲೆಗಳ ಸಂಗಡ ಮಾತುಕತೆ – ೩)
ಅಂಗಳದ ‘ಅಸಂಗತ ಸಂಗತಿ’ಗಳ ಕಲೆ
ನೀನಾಸಂ ವಠಾರದಲ್ಲಿ ಹೀಗೇ ಕಣ್ಣೋಡಿಸಿದಾಗ ಉತ್ಸವ ಕಾಲವೆಂದು ನಾಟಕೀಯ ಸಂಭ್ರಮಗಳು ಕಾಣಿಸುವುದೇ ಇಲ್ಲ. ಆದರೆ ಪ್ರತಿ ಪರ್ವ ಕಾಲದಲ್ಲೂ ನವಿರಾದ ಸಣ್ಣ ಪುಟ್ಟ ಬದಲಾವಣೆಗಳಲ್ಲಿ ಸಂದೇಶವಂತೂ ಸ್ಪಷ್ಟವಿರುತ್ತದೆ. ಹಾಗೇ ಈ ಬಾರಿ, ಅಂಗಳದಲ್ಲಿ ಅಡಿಕೆ ಸೋಗೆ, ಹಾಳೆಗಳನ್ನು ಒಟ್ಟಾರೆ ಕಟ್ಟಿ ನವಿಲು ಮೂಡಿಸಿದ್ದರು. ನಿಮಗೆ ತಿಳಿದಿರಬಹುದು, ಸೋಗೆಬಾಲ ಎಂದೂ ನವಿಲಿಗೆ ಪರ್ಯಾಯ ನಾಮವಿದೆ. ಇನ್ನೊಂದೆಡೆ ಲಟಾರಿ ಬೈಕೊಂದರ ಟಾಂಕಿಗೆ ನೇರ ತೂತುಬಾವಿಯಿಂದ ನಲ್ಲಿ ಸಂಪರ್ಕ ಕೊಟ್ಟ ಹಾಗಿತ್ತು. ಇದು ದುಬಾರಿ ಪೆಟ್ರೊಲಿಗೆ ಕಂಗಾಲಾದ ಸಾಮಾನ್ಯನ ಆಶಯವೋ ಬೆಲೆ ಇಳಿಸುವೆನೆಂಬ ಆಶ್ವಾಸನೆ ಮಾತ್ರ ಕೊಡುತ್ತಿರುವ ಸರಕಾರದ ಅಣಕವೋ ಪರಿಸರ ಸ್ನೇಹೀ ತಂತ್ರಜ್ಞಾನದ ಸೂಚನೆಯೋ….
ನಿಮ್ಮನ್ನು ಯೋಚನೆಗೆ ಹಚ್ಚುವುದಂತೂ ಖರೆ. ಮರದ ಗುತ್ತಿ ಒಂದಕ್ಕೆ ಎರಡು ಸುಣ್ಣ ಬಳಿದ ಮಡಿಕೆಗಳನ್ನು ಬೋರಲು ಕಟ್ಟಿ, ಸರಳ ರೇಖೆಗಳಲ್ಲಿ ನಗು-ಅಳುವಿನ ಮುಖ ಕಾಣಿಸಿದ್ದು ರಂಗಶಾಲೆಯ ಸೂಚನೆಯಲ್ಲದೆ ಇನ್ನೇನು. ಅಂಗಳದ ಒಂದು ಮೂಲೆಯಲ್ಲಿ, ಗಾಳಿಗೆ ಅಡ್ಡಾತಿಡ್ಡಾ ತುಸು ಎತ್ತರಕ್ಕೇ ಮುರಿದು ಉಳಿದ ಇನ್ನೊಂದೇ ಮರದ ಗುತ್ತಿಗೆ, ಇದ್ದಂತೇ ಒರಟು ಕೆತ್ತನೆಯಲ್ಲಿ ಮನುಷ್ಯ ರೂಪ ಮೂಡಿಸಿದ್ದರು. ಇವಕ್ಕೆಲ್ಲ ಏನು ಅರ್ಥ ಕಟ್ಟಬೇಕೋ ನೀವೇ ಅಂದಾಜಿಸಿ.
ಆಪ್ತ ರಂಗಭೂಮಿಯ ಅಂಗಳದಲ್ಲಿನ ಪುಟ್ಟ ಮರದ ಮಣೆಯ ಮೇಲಂತೂ ಹೆಚ್ಚು ಕಮ್ಮಿ ನಿತ್ಯ ಹೊಸದಾಗಿಯೇ ಬಹು ರಂಗಿನ ರಂಗೋಲಿ ಅರಳುತ್ತಲೇ ಇತ್ತು. ವಿದ್ಯಾರ್ಥಿ ವಸತಿಯ ಎದುರಿನ ಮರದ ನಾಕೆಂಟು ಕೊಂಬೆಗಳಿಂದ ದಾರ ಇಳಿಸಿ ನೇಲಿಸಿದ ವಿವಿಧ ರಂಗುಗಳ ಪರ್ಲ್ ಪೆಟ್ ಬಾಟಲು ಆಧುನಿಕ ‘ರುಚಿ’ಗಳ ಅಣಕವೇ? ತ್ಯಾಜ್ಯಗಳ ವಿಲೇವಾರಿ ಪಾಠವೇ?….? ಆಪ್ತ ರಂಗಭೂಮಿಯ ಹೆಚ್ಚಾಗಿ ಬಳಕೆಯಾದ ತತ್ಕಾಲೀನ ಅಡ್ಡ ವೇದಿಕೆಗೆ ಹಿಂಪರದೆಯ ಮೇಲೆ, ಬಹುಶಃ ಕತ್ತರಿ ಕಲೆಯಲ್ಲಿ ಎರಡು ರಮಣೀಯ ಸೀಳು ಶಿಲ್ಪವನ್ನೇ ಮೂಡಿಸಿದ್ದರು. ಅವು ಮಂದ ಬೆಳಕಿನಲ್ಲಿ ಹಸಿರು ಸ್ವಯಂಪ್ರಭೆ ಬೀರುವುದು ಎಲ್ಲರನ್ನೂ ಆಕರ್ಶಿಸಿತ್ತು. ಹೀಗೆಲ್ಲ ಅನಾವರಣಗೊಂಡ ಸಂಗತಿಗಳನ್ನು ಸರಳ ಸೌಂದರ್ಯವೆಂದೋ ಕಸದಿಂದ ರಸವೆಂದೋ ಎಂದು ಹೇಳಿ ಮರೆತುಬಿಡುವುದು ಸಾಧ್ಯ. ಆದರೆ ಆ ಪರಿಸರ, ಬಳಸಿದ ಸಾಮಗ್ರಿ ಮತ್ತು ಪ್ರಸ್ತುತಿಯ ಸನ್ನಿವೇಶದಿಂದ ಅವು ನೋಟಕರಲ್ಲಿ ಉಂಟು ಮಾಡುವ ಪರಿಣಾಮವನ್ನು ಇಂದು ಬಹುಮಾನ್ಯತೆಯುಳ್ಳ ಕಲೆಯಾಗಿಯೇ ಗುರುತಿಸುತ್ತಾರೆ; ‘ಇನ್ಸ್ಟಾಲೇಶನ್ ಆರ್ಟ್’. ಇದನ್ನು ೨೦೧೯ರ ಸಂಸ್ಕೃತಿ ಶಿಬಿರದಲ್ಲಿ ಕನ್ನಡದ ಕರಾವಳಿಯವರೇ ಆದ, ಸದ್ಯ ಮುಂಬೈಯಲ್ಲಿ ವೃತ್ತಿಪರವಾಗಿ ನೆಲೆಸಿರುವ ಸುದರ್ಶನ ಶೆಟ್ಟಿ ( ಓದಿ – ಇನ್ನೊಂದು ಸಂಸ್ಕೃತಿ ಶಿಬಿರದ ನಿರೀಕ್ಷೆಯಲ್ಲಿ…) ತೋರಿಸಿದ್ದರು. ಈ ಬಾರಿ….
ನೀನಾಸಂ ವಠಾರದೊಳಗೆ ನಾನು ಚಿತ್ರ ಸಂಗ್ರಹ ಮಾಡುತ್ತಿದ್ದಾಗ ಗ್ರಂಥಾಲಯ ಕಟ್ಟಡದ ಹೊರಗೋಡೆಯ ಮೇಲೆ ‘ರಫ್ ಪುಸ್ತಕ’ದ ಒಂದಷ್ಟು ಗೀಚಿದ್ದ ಹಾಳೆಗಳನ್ನು ಶಿಸ್ತಿನಲ್ಲಿ ಪ್ರದರ್ಶನಕ್ಕೆ ಇಟ್ಟದ್ದು ಕಂಡಿದ್ದೆ.[alavadike 1] ಅವುಗಳ ಅರ್ಥ ಹೊಳೆಯದಿದ್ದರೂ ಪಟವನ್ನೇನೋ ತೆಗೆದುಕೊಂಡಿದ್ದೆ. ಆದರೆ ಶಿಬಿರ ಕಲಾಪದ ಒಂದು ಅವಧಿಯಲ್ಲಿ (೯/೧೧) ಆ ಪುಟಗಳ ಕರ್ತೃವೇ ಆದ ಬೆಂಗಳೂರಿನ ವೃತ್ತಿಪರ ಆರ್ಕಿಟೆಕ್ಟ್ ರವಿ ಕುಮಾರ್ ಕಾಶಿಯವರು “ಇದು ಇನ್ಸ್ಟಾಲೇಶನ್ ಕಲೆಯ ಪ್ರಾಥಮಿಕ ಹಂತ” ಎಂದೇ ವಿವರಿಸಿದರು.[alavadike 5] ಕಲಾವಿದನಿಗೆ ಎಂದೋ ಎಲ್ಲೋ ಮೂಡಿದ ಹೊಳಹುಗಳ ಅಂದಾಜು ರೇಖೆಗಳು ಮತ್ತು ಪೂರಕ ಟಿಪ್ಪಣಿಗಳು. ಅವು ವಿಕಾಸಗೊಳ್ಳುತ್ತ ಮೂಡುವ ಅಂತಿಮ ರೂಪ ಇನ್ನೊಂದೇ ಆಗಬಹುದು, ಪೂರ್ತಿ ಕಸದ ಬುಟ್ಟಿ ಸೇರಲೂ ಬಹುದು. ಅಷ್ಟಾಗಿ ಕಲಾವಿದನ ದೃಷ್ಟಿಯಲ್ಲಿ ಅದು ಪರಿಪೂರ್ಣ ಎನ್ನಿಸಿದರೂ ಲೋಕಮುಖದಲ್ಲಿ ಸೋಲಲೂ ಬಹುದು ಎಂದೂ ನಮ್ಮ ತಿಳಿವನ್ನು ವಿಸ್ತರಿಸಿದರು. ಈ ಕಲೆಯ ಕುರಿತು ರವಿಕುಮಾರ್ ಇಂಗ್ಲಿಷಿನಲ್ಲಿ ಹಿಂದೂ ಪತ್ರಿಕೆಗೆ ಬರೆದ ಲೇಖನಗಳೂ (ಕನ್ನಡದ ಬಹುಶಃ ವಿಕ ಪತ್ರಿಕೆಯಲ್ಲಿ, ಬರೆದ ಅಂಕಣ ಬರಹಗಳೂ ಪ್ರಕಟಿಸಿದ ಕೆಲವು ಪುಸ್ತಕಗಳೂ) ನನಗಿಂತ ಸಮರ್ಥವಾಗಿ ಹೇಳಬಲ್ಲವು, ಓದಿಕೊಳ್ಳಿ. (ನೋಡಿ: ರವಿಕುಮಾರ್ ಜಾಲತಾಣ )
ರವಿಕುಮಾರ್ ಆವಶ್ಯಕತೆಗಳಿಗೆ ಅನುಗುಣವಾಗಿ ಕೆಲವು ಸಂಗತಿಗಳನ್ನು ಕಲೆ ಹಾಕುತ್ತಾರೆ. ಹಾಗೇ ಸುಲಭ ಲಭ್ಯವಲ್ಲವಾದವನ್ನು ಸ್ವತಃ ಮಾಡುತ್ತಾರೆಂದು ಕೇಳಿದಾಗ ನನ್ನ ಕಿವಿ ನಿಮಿರಿತ್ತು. ಅದರಲ್ಲೂ ಅವರೊಂದು ‘ದೋಣಿ’ ಮಾಡಿದ್ದು, ಅದರ ವಿಕಾಸ ಪಥದ ವಿವರಗಳನ್ನು ಹೇಳುತ್ತಿದ್ದಾಗ, ನಾನು ಕೆತ್ತಿದ (ಇನ್ನೂ ಅಪೂರ್ಣ) ‘ದೋಣಿ’ ಮನಸ್ಸಿನಲ್ಲಿ ಮೇಲೆ ತೇಲಿತು. ಅದೂ ಸೇರಿದಂತೆ ನನ್ನ ಇತರ ಮರ ಕೆತ್ತನೆಯ ಕುರಿತು ಪರಿಚಯಿಸಿಕೊಳ್ಳುವ ತುಡಿತವೂ ಬಂತು. (ನೋಡಿ: ಗೌರೀಶಂಕರ) ಕಲಾಪ ಮುಗಿದ ಮೇಲೆ ನಾನವರನ್ನು ಮಾತಾಡಿಸಲು ಪ್ರಯತ್ನವನ್ನೂ ಪಟ್ಟೆ. ಅಷ್ಟರಲ್ಲಿ ಇನ್ಯಾರೋ ಬಂದು, ಇನ್ನೇನೋ ಕೇಳಿದಾಗ, ನನ್ನ ಸ್ವಭಾವ ಜನ್ಯ ಹಿಂಜರಿಕೆಯಲ್ಲಿ, ವಿವರಗಳು ಗಂಟಲಲ್ಲೆ ಉಳಿದುಹೋಯ್ತು!
ರಂಗದ ಮೇಲೆ ಓದು
ದೇವನೂರ ಮಹಾದೇವರ ಕಥಾ ಸಂಕಲನ, ಇದ್ದಂತೇ ನಾಟಕವೆಂಬಂತೆ ‘ತಿರುಗಾಟ’ದಲ್ಲಿ ಬಂದದ್ದು ನೋಡಿದ್ದೇನೆ. ಹಾಗೇ ಕುವೆಂಪು ಅವರ ಮಲೆಗಳಲ್ಲಿ ಮದುಮಗಳು ಸುದೀರ್ಘವಾಗಿ ಒಂದೇ ಓಟದಲ್ಲಿ ಕೆಲವು ನಾಟಕ ಮಂಚದ ಮೇಲೆ ಹಬ್ಬಿದ್ದನ್ನೂ ಅನುಭವಿಸಿದ್ದೇನೆ. ಅದೇ ಸರಣಿಯಲ್ಲಿ ಎಂಬಂತೆ, ಶಿಬಿರದಲ್ಲೂ ಎರಡು ರಂಗ ಪ್ರಸ್ತುತಿ ಇತ್ತು. ಒಂದು (೫/೧೧) ಎಕೆ ರಾಮಾನುಜನ್ ಅವರ ಕಾವ್ಯ ಪ್ರಸ್ತುತಿ. ಶ್ರೀಕಾಂತ ಮತ್ತು ಸೌಮ್ಯ ಭಾಗವತ್ ಚೆನ್ನಾಗಿಯೇ ಮಾಡಿದರು. ಇನ್ನೊಂದು (೯/೧೧) – ಚಿತ್ತಾಲರ ಕತೆಯಾದಳು ಹುಡುಗಿ. ರಂಗ ಪ್ರಸ್ತುತಿಯನ್ನು ಗಣೇಶ ಮಾಸ್ಟ್ರು ಮತ್ತು ವಿದ್ಯಾ ಹೆಗಡೆ ಚಂದಗಾಣಿಸಿದರು.
ಈ ‘ಓದು’ವಿನಲ್ಲಿ, ಪಠ್ಯದ ಅರ್ಥ ಸಂವಹನಕ್ಕೆ ನಾಟಕೀಯ ಸಂಭಾಷಣೆ ಹೊಸೆಯುವುದಿಲ್ಲ. ಪಠ್ಯ ಸೂಚಿಸುವ ಪರಿಸರ ಹಾಗೂ ಚಟುವಟಿಕೆಗಳ ಪ್ರಾತಿನಿಧಿಕ ದೃಶ್ಯ ಮತ್ತು ಶ್ರಾವ್ಯ ಸವಲತ್ತನ್ನೂ ಕೊಡುವುದಿಲ್ಲ. ಪಾತ್ರಧಾರಿಗಳು ಬಹುತೇಕ ಕುಳಿತಿದ್ದಂತೇ ಪುಸ್ತಕವನ್ನು ಹಿಡಿದು ಅರ್ಥ ಸ್ಪಷ್ಟವಾಗುವಂತೆ, ಭಾವ ಸ್ಫುಟಗೊಳ್ಳುವಂತೆ ಓದುತ್ತಾರೆ, ಅಷ್ಟೆ. ಧ್ವನಿಯ ಬಾಗು ಬಳುಕು, ಯುಕ್ತ ಪದ ವಿಂಗಡಣೆ ಮತ್ತು ಅರ್ಥಪೂರ್ಣ ಮೌನವೇ ಇದರ ಯಶಸ್ಸಿನ ಮೆಟ್ಟಿಲುಗಳು. ಪಠ್ಯದಲ್ಲೇ ಸಂಭಾಷಣೆ ಬಂದಾಗ, ಸಹಜವಾಗಿ ಇಬ್ಬರು ಹಂಚಿಕೊಂಡು ನಿಭಾಯಿಸಿದ್ದು ಮನನೀಯವಾಗಿತ್ತು. ಇದು ಒಂದು ರೀತಿಯಲ್ಲಿ ಸಿನಿಮಾದ ‘ಮೂಕ ನಾಯಕ’ನಿಗೆ ಮಾತು ಕೊಡುವ – ಡಬ್ಬಿಂಗ್ ಕಲಾವಿದರ, ಸೃಜನ ಕಾರ್ಯವಿದ್ದಂತೇ ಅನ್ನಿಸಿತು.
ಯಕ್ಷಗಾನ ತಾಳಮದ್ದಳೆಯಲ್ಲಿ, ಮುಖ್ಯವಾಗಿ ಉತ್ತರ ಕನ್ನಡದ ಅರ್ಥಧಾರಿಗಳು, ಕುಳಿತಂತೇ ಸೀಮಿತ ಆಂಗಿಕ ಅಭಿನಯಗಳನ್ನು ಅಳವಡಿಸುವುದಿದೆ. ಹಾಗೆಂದ ಮಾತ್ರಕ್ಕೆ ಕುಳಿತೇ ಇರಬೇಕೆನ್ನುವುದು ನಿಯಮವೇನೂ ಅಲ್ಲ ಎಂಬುದಕ್ಕೆ ಸಣ್ಣ ಉದಾಹರಣೆ: ವಿದ್ಯಾ ಮತ್ತು ಗಣೇಶ್, ಒಮ್ಮೆ ಓದುತ್ತಾ ಸಹಜವಾಗಿ ಕುರ್ಚಿ ಬಿಟ್ಟೆದ್ದು, ನೆಲದಲ್ಲಿ ಕುಳಿತು, ಸಹಜವಾಗಿ ಜತೆಗಿಟ್ಟುಕೊಂಡಿದ್ದ ಕುಡಿನೀರ ಬಾಟಲುಗಳಲ್ಲೇ (ಕತೆಯಲ್ಲಿ ಬರುವ) ಪಾನಗೋಷ್ಠಿಯ ನಟನೆಯನ್ನೂ ಸೇರಿಸಿಕೊಂಡಿದ್ದರು. ಆದರೆ ಅದನ್ನು ಮುಂದೆ ಚರ್ಚೆಯಲ್ಲಿ ಯಾರೋ ಸಣ್ಣದಾಗಿ ಆಕ್ಷೇಪದ ಧ್ವನಿಯಲ್ಲೇ ವಿಚಾರಿಸಿದರು. (ಕೆವಿ ಶಿಶಿರ ಭಾವ ಸೂಚಕ ಕೀಬೋರ್ಡ್ ವಾದನ ನಡೆಸಿದ್ದು ಉಲ್ಲೇಖಕ್ಕೆ ಸಿಗಲಿಲ್ಲ!) ಸಂಗೀತ ಕಚೇರಿಗಳಲ್ಲಿ ರಾಗ ತಾಳಗಳ ಪಲ್ಲಟ, ದುರಂತ ನಾಟಕದ ನಡುವೆ ನುಸುಳುವ ಹಾಸ್ಯ ಸನ್ನಿವೇಶ, ರಸಪಾಕದಲ್ಲೂ ಸಿಹಿ-ಕಹಿಯ ಮಿಶ್ರಣ ಮುಂತಾದ ಬುದ್ಧಿಪೂರ್ವಕ ವಿಷಯಾಂತರಗಳಂತೇ ಪಾನಗೋಷ್ಟಿಯ ಅಭಿನಯ ಸೇರಿತ್ತು. ನನಗಂತೂ ಸುಲಭದಲ್ಲಿ ಪರಿಣಾಮವನ್ನು ಶ್ರೀಮಂತಗೊಳಿಸಿರುವಾಗ, ಯಾಕಾಗದು ಎಂದೇ ಕಾಣಿಸಿತು.
ನಾಟಕದ ರಸಘಟ್ಟಿಯ ವಿನೂತನ ವಿಶ್ಲೇಷಣೆ
ಸಾಹಿತ್ಯಕೃತಿಯನ್ನು ಇದ್ದಂತೇ ಪ್ರಸ್ತುತಪಡಿಸಿದ ಮೇಲಿನೆರಡು ಕಲಾಪಗಳಿಗಿಂತ ಭಿನ್ನವಾದುದು ಡೆಸ್ಡೆಮೋನಾ ರೂಪಕಮ್ (೮/೧೧), ನಿರ್ದೇಶನ – ಅಭಿಷೇಕ್ ಮುಜುಂದಾರ್. ಇದನ್ನು ಪ್ರಸ್ತುತ ಪಡಿಸಿದವರು – ನಟರಾಜ ಹೊನ್ನವಳ್ಳಿ. ರಂಗದ ಮೇಲೆ ಮಾತು, ಹಾಡು, ಕುಣಿತ ಹಾಗೂ ಅಭಿನಯ ಸಹಿತ ಕೊಟ್ಟವರು ಕನ್ನಡದ ಖ್ಯಾತ ಭಾವಗಾನ ತಾರೆ ಎಂಡಿ ಪಲ್ಲವಿ ಮತ್ತು ಚಿತ್ರರಂಗದ ಸಂಗೀತ ನಿರ್ದೇಶಕಿ ಹಾಗೂ ಹಿನ್ನೆಲೆ ಗಾಯಕಿ ಬಿಂದುಮಾಲಿನಿ. ಇಲ್ಲಿ ಶೇಕ್ಸ್ಪಿಯರನ ಒಥೆಲ್ಲೋ ನಾಟಕದ ಡೆಸ್ಡೆಮೋನಾಳ ಹತ್ಯೆಯ ತುಣುಕನ್ನು ಪ್ರಾಯೋಗಿಕವಾಗಿಯೇ ಎತ್ತಿಕೊಂಡು, ಹೊಸತೇ ತುಲನಾತ್ಮಕ ಅಧ್ಯಯನ ನಡೆಸಿದರು. ಅದಕ್ಕೆ ಕೈಕೇಯಿ, ಯಲ್ಲಮ್ಮ, ಶಕುಂತಲೆ ಮೊದಲಾದವರ ಸಮಭಾವದ, ಕಾವ್ಯ ಕಥನಗಳ ನಾಟಕೀಯ ಅಭಿವ್ಯಕ್ತಿಯನ್ನೇ ಕಲಾವಿದೆಯರು ಅಳವಡಿಸಿಕೊಂಡರು. ಇಲ್ಲಿ ಭಾಷಾ ಬಿಗುಮಾನವಿಲ್ಲದೇ ಇಂಗ್ಲಿಷ್, ಕನ್ನಡ, ತಮಿಳು ಭಾಷಾ ವೈವಿಧ್ಯ ಸಹಜವಾಗಿ ಹರಿದು ಬಂದರೂ ಭಾವಸಂವಹನಕ್ಕೆ ಅಡ್ಡಿಯಾಗಲೇ ಇಲ್ಲ ಎನ್ನುವುದೂ ಪ್ರದರ್ಶನದ ಯಶಸ್ಸಿಗೆ ಸಾಕ್ಷಿ. ಅಷ್ಟೇ ಸಹಜವಾಗಿ ಕನ್ನಡದ ಚೌಡಿಕೆ, ಹರಿಕೀರ್ತನೆ, ಯಕ್ಷಗಾನವೇ ಮೊದಲಾದ ಕಲಾಪ್ರಕಾರಗಳ ಪ್ರಯೋಗಗಳೂ ಮಿಳಿತಗೊಂಡು ನಮ್ಮ ರಸಪ್ರಜ್ಞೆಗೆ ದೊಡ್ಡ ಕುಮ್ಮಕ್ಕನ್ನೇ ಕೊಟ್ಟವು. ಇವರ ಭಾವದ ಹರಿವಿನಲ್ಲಿ ನಾಟಕದಂತೆ ವಿವಿಧ ಅಂಕಗಳ ಪೋಣಿಕೆ, ಪ್ರವೇಶ ನಿಷ್ಕ್ರಮಣ, ವೇಷಭೂಷಣಗಳ ಹೊರೆ ವಿಶೇಷವಾಗಿ ಕಾಡಲೇ ಇಲ್ಲ. ತೀರಾ ಸರಳ ಆಭೂಷಣಗಳ ಬದಲಾವಣೆ, ಯಥೋಚಿತ ಪಾತ್ರ ಹಂಚಿಕೆ ಮತ್ತು ಅಭಿನಯಒಡಮೂಡಿತ್ತು. ಪ್ರಸ್ತುತಿಯ ಪ್ರವೇಶದಿಂದ ಮುಕ್ತಾಯದವರೆಗೆ ಒಂದೇ ರಸಧಾರೆಯ ವಿವಿಧ ಪಲುಕುಗಳಂತೆ ಮೆರೆದು ನಮ್ಮ ವಿಚಾರ ಪ್ರಜ್ಞೆಯನ್ನು ಕೆಣಕುತ್ತಲೇ ಭಾವಕೋಶವನ್ನೂ ತುಂಬಿದವು.
ಗದ್ಯವೇ ಇರಲಿ, ಪದ್ಯವೇ ಇರಲಿ, ಯುಕ್ತ ರಾಗಾವೇಶಗಳೊಂದಿಗೆ, ಕಲಾಪ್ರಕಾರ ಯಾವುದೇ ಇರಲಿ, ವೃತ್ತಿಪರ ವಿನಿಕೆಗೆ ಇನಿತೂ ಕುಂದಿಲ್ಲದಂತೆ ಒಬ್ಬರನ್ನೊಬ್ಬರು ಮೀರಿಸುವಂತೆ ನಿರ್ವಹಿಸಿದರು. (ಅನಿವಾರ್ಯವಾದ ಕೆಲವೇ ಪಕ್ಕವಾದ್ಯಗಳ ಧ್ವನಿಗಳು ಮಾತ್ರ ಹಿತವಾಗಿ ಹಿನ್ನೆಲೆಯಿಂದ ಸೇರಿಕೊಂಡವು. ಉದಾ: ಯಕ್ಷಗಾನದ ಭಾಗವತಿಕೆಯೊಡನೆ ಚಂಡೆ ಮದ್ದಳೆಯ ನಾದ) ಪಲ್ಲವಿಯವರ ಕನ್ನಡದ ‘ಸವಾಲಿಗೆ’ ಬಿಂದು ಮಾಲಿನಿಯವರ ತಮಿಳು ‘ಜವಾಬ್’, ಇಬ್ಬರೂ ಸ್ವತಃ ಚೌಡಿಕೆಯನ್ನು ನುಡಿಸಿದ್ದು, ಯಕ್ಷ ನಡೆಯನ್ನು ತೋರಿದ್ದು, ಹರಿದಾಸರ ಏಕತಾರಿಯನ್ನು ಮೀಟುತ್ತ ಚಿಟಿಕೆ ಹೊಡೆದದ್ದು, ಹೆಚ್ಚೇನು – ಒಂದು ಹಂತದ ವಾಗ್ಯುದ್ಧವನ್ನು ಇಬ್ಬರೂ ಕೇವಲ ತೀವ್ರ ಸ್ವರಪ್ರಸ್ತಾರಗಳಲ್ಲೇ ನಡೆಸಿದ್ದೆಲ್ಲಕ್ಕೆ ಒಂದೇ ಮಾತು – ಅದ್ಭುತ! ಚಿತ್ರಗ್ರಹಣಕ್ಕಿದ್ದ ‘ನಿಷೇಧ’ದಿಂದ, ಇಲ್ಲಿ ನಿಮಗೆ ರುಚಿ ಹತ್ತಿಸಲಿಕ್ಕಾದರೂ ಚಲಚಿತ್ರ ತುಣುಕುಗಳನ್ನು ಕೊಡಲಾಗದ್ದಕ್ಕೆ ವಿಷಾದಿಸುತ್ತೇನೆ. (ಬಹುಶಃ ಇದು ‘ಸಂಚಿ’ಯ ದಾಖಲೀಕರಣಕ್ಕೆ ಸೇರಲಿಲ್ಲ 🙁 ) ಪ್ರದರ್ಶನ ಮುಗಿದ ಮೇಲಿನ, ಅಂದರೆ ಕಲಾವಿದರೊಡನೆ ಸಂವಾದದ ಸಮಯದ ಒಂದು ಚಿತ್ರವನ್ನಷ್ಟೇ ಕೊಟ್ಟಿದ್ದೇನೆ.
ನಿಧಾನ ಕಿರುಚಿತ್ರ – ಪೆಡ್ರೋ
ಸಿನಿಮಾ ಇಂದು ಎಲ್ಲಾ ಕಲೆಗಳನ್ನೂ ಆಪೋಷನ ತೆಗೆದುಕೊಳ್ಳಬಲ್ಲ ಮಹಾ ‘ಪರೋಕ್ಷ ಕಲೆ’ ಎಂದೇ ನಾನು ಭಾವಿಸುತ್ತೇನೆ. ಅದು ಬೀರುವ ಆರ್ಥಿಕ ಅಥವಾ ಸಾಮಾಜಿಕ ಆಯಾಮಗಳನ್ನು ಪರಿಗಣಿಸುವಾಗ, ಕಲೆಗಳ ಸಂಗಡ ಮಾತುಕತೆಯ ಐದು ದಿನಗಳ ಮಿತಿಯೊಳಗೆ ಒಂದಾದರೂ ಸಿನಿಮಾ ಇರಲೇಬೇಕು ಎಂದು ಯೋಚಿಸುತ್ತಿದ್ದಂತೆ ಬಂತು – ಪೆಡ್ರೋ, ನಟೇಶ್ ಹೆಗಡೆಯವರ ಕಿರು ಚಿತ್ರ. ಅಘೋಷಿತ ಮಾನಸಿಕ ವಿಕ್ಷಿಪ್ತನೊಬ್ಬನನ್ನು ಕುರುಹುಳಿಯದಂತೆ ಕೊಲೆ ಮಾಡುವ ಕಥನದಲ್ಲಿ ಸಿನಿಮಾ ಬುದ್ಧಿಪೂರ್ವಕವಾಗಿಯೇ ‘ನಿಧಾನ ಗತಿ’ಯನ್ನು ಅನುಸರಿಸಿದಂತೆ ಅನ್ನಿಸಿತು. ಗಿರೀಶ್ ಕಾಸರವಳ್ಳಿಯವರ ಶಿಫಾರಸಿನ ಮೇಲೆ ನಾನು ಜಪಾನೀ ನಿರ್ದೇಶಕ ಶಿಂಡೋನ ‘ನೇಕೆಡ್ ಐಲ್ಯಾಂಡ್’ ನೋಡಿದ್ದು ನೆನಪಾಯ್ತು. ಅಲ್ಲಿ ಬರಗೆಟ್ಟ ದ್ವೀಪ, ಅಪಾರ ಶ್ರಮದ (ತೀರಾ ಸಣ್ಣ ಸಂತೋಷಗಳ) ಯಾಂತ್ರಿಕ ಬದುಕಿಗೆ ಸಿನಿಮಾ ನಿಧಾನಗತಿ ಅಪ್ಯಾಯಮಾನವಾಗಿ ಹೊಂದಿಕೊಂಡಿತು, ನನ್ನ ಹೃದಯ ಮುಟ್ಟಿತ್ತು. ಆದರೆ ಇಲ್ಲಿನ ಕಣ್ತುಂಬುವ ಹಸಿರು, ನೀರು, ವೈವಿಧ್ಯಮಯ ಬದುಕಿನ ನಡುವೆ ಚಿತ್ರದ ನಿಧಾನಗತಿ ನನಗೆ ಹಿಡಿಸಲೇ ಇಲ್ಲ.
ಚೌಡಿಕೆ ಮೇಳ
ಮಂಗಳೂರಿನಿಂದ ಹೋದ ರಾತ್ರಿ ‘ಆಹಾರ್ಯ’ದಲ್ಲಿ ಗಟ್ಟಿ ಊಟ ಮಾಡಿ, ಗಟ್ಟಿ ನಿದ್ರೆಗಿನ್ನು ಜಾರುತ್ತೇವೆ ಎನ್ನುವಾಗ ಬಾಗಿಲು ಟಕಟಕಾಯಿಸಿತು. ತೆರೆದಾಗ ಕಾಣಿಸಿದ ನರೆಗೂದಲ, ಪೊದರುಗಡ್ಡದ ವ್ಯಕ್ತಿ (ಹಿಂದಾಗಡೀಂದ ತಿಳೀತು – ಮಹದೇವ ಹಡಪದ) ವಿನಯದಲ್ಲಿ “ಸಾರ್ ಪಕ್ಕದ ಕೋಣೆಯಲ್ಲಿ ಚೌಡಿಕೆ ಮೇಳದವರಿದ್ದೇವೆ. ಸ್ವಲ್ಪ ಪ್ರ್ಯಾಕ್ಟೀಸ್ ಮಾಡ್ಕೊಂತೀವೀ…” ಕಲೆಗಳ ಸಂಗಡ ಇರಲು ಬಂದ ನಾವು ಒಪ್ಪದಿರಲು ಸಾಧ್ಯವೇ!
ಶಿಬಿರದ ಮೊದಲ ದಿನದ ಒಂದು ಕಲಾಪ್ರಕಾರವಾಗಿ ಚೌಡಿಕೆ ಪ್ರಸ್ತುತಗೊಂಡಿತು. ನಿರ್ವಹಣೆ ಮಹದೇವ ಹಡಪದ. ಹಿಂದೆ ಎಲ್ಲೋ ಈ ಜನಪದ ಭಕ್ತ ಕಲೆಯನ್ನು ನಾನು ಕಂಡು ಕೇಳಿದ್ದೆ. ಆ ನೆನಪಿಗೆ ವ್ಯತಿರಿಕ್ತವಾಗಿ ಇಲ್ಲಿ ಜನಪದೀಯ ಡಪ್ಪು, ತುಂತುಣಿ, ತಾಳಗಳಿಗೆ ಹೆಚ್ಚುವರಿಯಾಗಿ ಫ್ರೆಂಚ್ ಡ್ರಂ ಪ್ರವೇಶಿಸಿದಂತಿತ್ತು. ಡ್ರಂನ ಅಬ್ಬರಕ್ಕೆ ನಾಲ್ಕೂ ಗಾಯಕಿಯರ ಮೈಕ್ ಮುಂದಿನ ತಾರಸ್ವರದ ಹಾಡು ಮತ್ತು ಲಘು ಹೆಜ್ಜೆಗಾರಿಕೆ ಚಪ್ಪೆಯಾದಂತನ್ನಿಸಿತು. ಕೆಳಸ್ವರದ ಡಪ್ಪು, ತುಂತುಣಿಗಳ ಗೂಢ ಗುಂಜನಗಳು ಕೇವಲ ಶ್ರುತಿಯ ಸ್ಥಾನದಲ್ಲಿ ಉಳಿದಿತ್ತು. ಚೌಡಿಕೆ ತಂಡ ಸಂವಾದಕ್ಕೆ ಕುಳಿತಾಗ, ಪ್ರೇಕ್ಷಕರೋರ್ವರ ಕೋರಿಕೆಯ ಮೇರೆಗೆ ಡ್ರಂ ರಹಿತ ಗಾನ ಪ್ರಸ್ತುತಿ ನಡೆಯಿತು. ಆಗ ಪದಗಳು ಹೆಚ್ಚು ಕುಶಿ ಕೊಟ್ಟವು.
ಮಹದೇವ ಹಡಪದ ನೀನಾಸಂ ರಂಗಶಾಲೆಯ ಹಳೇ ವಿದ್ಯಾರ್ಥಿ, ಪ್ರಸ್ತುತ ಧಾರವಾಡದಲ್ಲಿ ಆಟಮಾಟ ಎಂಬ ರಂಗತಂಡವನ್ನು ಕಟ್ಟಿಕೊಂಡ ವೃತ್ತಿ ಕಲಾವಿದ. ಸಹಜವಾಗಿ ಅವರು ಸ್ವಂತ ವಲಯದ (ಉತ್ತರ ಕರ್ನಾಟಕ) ತಂಡವನ್ನು ತನ್ನ ಮಾತೃ ಸಂಸ್ಥೆ – ನೀನಾಸಂನಲ್ಲಿ, ಪ್ರಸ್ತುತ ಪಡಿಸುವ ಸಂಭ್ರಮದೊಡನೆ, ಒಳ್ಳೆಯ ಹಾಸ್ಯ ಪ್ರಜ್ಞೆ ಸೇರಿಸಿಕೊಂಡದ್ದಕ್ಕೆ ಕಲಾಪ ಆಪ್ತವಾಯ್ತು. ಯಲ್ಲಮ್ಮನ ಸಂಪ್ರದಾಯದ ಈ ಭಕ್ತಿ ರಸವಾಹಿನಿಯಲ್ಲಿ ತಾಜಾ ಗಡಸುತನವಿದೆ. ಆದರೆ ಅವನ್ನೇ ಎರಡು ದಿನ ಕಳೆದು ಬಂದ ಡೆಸ್ಡೆಮೋನಾ ರೂಪಕದ ಭಾಗವಾಗಿ, ಎಂಡಿ ಪಲ್ಲವಿ ಮತ್ತು ಬಿಂದು ಮಾಲಿನಿಯರು ಎತ್ತಿಕೊಂಡಾಗಿನ ಅನುಭವ ಹೆಚ್ಚು ಹೃದ್ಯವಾಯ್ತು. ಅವರು ಕೇವಲ ಡಪ್ಪು ತುಂತುಣಿಗಳೊಡನೆ, ತಮ್ಮ ಸಂಸ್ಕರಿತ ಕಂಠಶ್ರೀಗಳೊಂದಿಗೆ ಗಾಯನ ಪ್ರಸ್ತುತಪಡಿಸಿದ್ದರು ಎನ್ನುವುದೂ ಗಮನಾರ್ಹ. ಇದು ಆ ಜನಪದಕ್ಕೆ ದೂರನಾದ ನನ್ನ ದೋಷವೂ ಇರಬಹುದು, ಅಭಿಮಾನಿಗಳು ಕ್ಷಮಿಸಬೇಕು. (ಹಿಂದೊಮ್ಮೆ, ಯಕ್ಷಗಾನಕ್ಕೆ ಹೊಸಬನಾದ ಮಿತ್ರನನ್ನು ನಾನು ಬಹಳ ನಿರೀಕ್ಷೆಯೊಂದಿಗೆ ಆಟಕ್ಕೊಯ್ದಿದ್ದೆ. ಆತ “ಭಾಗವತನದ್ದು ಅಪಸ್ವರ, ಹಿಮ್ಮೇಳ ಬರೀ ಗದ್ದಲ…” ಎಂದು, ನನ್ನ ಉತ್ಸಾಹದ ಬುಗ್ಗೆಗೆ ಮುಳ್ಳು ಚುಚ್ಚಿದ್ದು ಮರೆತಿಲ್ಲ.)
ಹಿಂದೂಸ್ತಾನೀ ಸಂಗೀತ
ಶಿಬಿರದಲ್ಲಿ ಶಾಸ್ತ್ರೀಯ ಸಂಗೀತದ ಮೊದಲ ಅವಧಿಯಲ್ಲಿ (೬/೧೧), ಹಿಂದೂಸ್ಥಾನಿಯ ಪ್ರೌಢ ಗಾಯಕಿ ಪೂರ್ಣಿಮಾ ಭಟ್ ಕುಲಕರ್ಣಿಯವರು (ಬಸವರಾಜ ರಾಜಗುರು ಅವರ ಶಿಷ್ಯೆ), ಗೋಪಾಲ ಹೆಗಡೆಯವರ (ಶೇಷಗಿರಿ ಹಾನಗಲ್ಲರ ಶಿಷ್ಯ) ತಬ್ಲಾದಲ್ಲೂ ಭರತ್ ಹೆಗಡೆ (ವಸಂತ ಕನಕಾಪುರೆ ಅವರ ಶಿಷ್ಯ) ಹಾರ್ಮೋನಿಯದಲ್ಲೂ ಮೇಳೈಸಿದಂತೆ ಸುಮಾರು ಒಂದೂವರೆ ಗಂಟೆಯ ಉತ್ತಮ ಕಚೇರಿಯನ್ನೇ ಕೊಟ್ಟರು.
ಮುಂದುವರಿದಂತೆ, ಮುಖ್ಯವಾಗಿ ದೀಪಾ ಗಣೇಶ್ ಅವರು ನಡೆಸಿಕೊಟ್ಟ ಸಂವಾದದಲ್ಲಿ, ಪೂರ್ಣಿಮಾರ ಸ್ಪಷ್ಟ ನುಡಿಗಳಲ್ಲಿನ ನಿರಹಂಕಾರ ವಿದ್ವತ್ತು ಮತ್ತು ಪ್ರಚಾರ ದೂರ ಉಳಿದ ಸರಳತೆ ನನಗೆ ಬಹಳ ಹಿಡಿಸಿತು.
ಕಚೇರಿಗಳಲ್ಲಿ ಎಂದೂ ಮಾತಿನ ಸುಳಿಗೆ ಸಿಲುಕದ ತಬಲ್ಜೀಗಳನ್ನು ಇಲ್ಲಿ ಸಮರ್ಥವಾಗಿ ಪ್ರತಿನಿಧಿಸಿದವರು ಗೋಪಾಲ ಹೆಗಡೆ. ಅವರ ಸಂಕೋಚದ ಮಾತುಗಳಲ್ಲೂ ವಿದ್ವತ್ ಮತ್ತು ತಿಳುವಳಿಕೆಗಳ ಆಳ ಗಹನವಾಗಿತ್ತು. ಇವರ ಕಚೇರಿಯ ವೇಳೆಯಲ್ಲಿ ನಾನು ‘ಅಕ್ರಮ’ವಾಗಿಯೇ ಸಂಗ್ರಹಿಸಿದ ಕೆಲವು ಚಲಚಿತ್ರ ತುಣುಕುಗಳು, ನನ್ನ ಬರಿದೆ ಮಾತಿಗಿಂತ ಉತ್ತಮವೆನ್ನುವುದರಿಂದ, ಇಷ್ಟು ಸಾಕು.
(ಹೆಚ್ಚಿನ ಸಂತೋಷಕ್ಕೆ ಯೂ ಟ್ಯೂಬಿನಲ್ಲಿ ಪೂರ್ಣಿಮಾರ ಎಷ್ಟೂ ಕಚೇರಿ ಗಾಯನಗಳು ದೊರೆಯುತ್ತವೆ, ಕೇಳಿ)
ಟೈಮ್ ಪಾಸ್ ಕೋಲಾಟ
ಕರ್ನಾಟಕ ಸಂಗೀತ ಪ್ರಸ್ತುತಿಗೆ ಪಿಟೀಲು ವಾದನದಲ್ಲಿ ಅಂತಾರಾಷ್ಟ್ರೀಯ ಖ್ಯಾತಿಯನ್ನೂ ಗಳಿಸಿದ ‘ಮೈಸೂರು ಜೋಡಿ’ಯಲ್ಲಿ, ಕಿರಿಯ – ಮೈಸೂರು ಮಂಜುನಾಥ್ ಬಂದಿದ್ದರು. ನೀನಾಸಂ ಶಿಬಿರದಲ್ಲಿ ಇವರಿಗೆ ನಿಗದಿಯಾದದ್ದು ಒಂದೇ ಅವಧಿಯ (೯/೧೧) ಸೋದಾಹರಣ ಉಪನ್ಯಾಸ ಮಾತ್ರ. ಅವರ ಎರಡನೇ ಅವಧಿ, ಅದೇ ಸಂಜೆಯ ಮಹಾ ನಾಟಕ – ಆರೋಹದಲ್ಲಿ, ಮುಖ್ಯ ಪಾತ್ರಧಾರಿಯಾಗಿಯೇ ಸೇರಿಕೊಂಡಿತ್ತು. ದುರದೃಷ್ಟವಶಾತ್ ಇವರ ಉಪನ್ಯಾಸವನ್ನು ಸಕಾಲಕ್ಕೆ (ಹನ್ನೊಂದು ಗಂಟೆಗೆ) ಶುರು ಮಾಡುವುದಾಗಲಿಲ್ಲ. ಆಗ ಯಾರಿಗೂ ಸಮಯದ ಹೊರೆಯಾಗದಂತೆ ಅಲ್ಲೇ ಹೊರಗೆ, ಅಂದರೆ ಬಯಲು ರಂಗಭೂಮಿಯ ಅಂಗಳದಲ್ಲಿ ಕೋಲಾಟದ ಸೊಲ್ಲು ಕೇಳಿತ್ತು! ಹೌದು….
ಹಿಂದೆ (೨೦೧೯) ಸಂಸ್ಕೃತಿ ಶಿಬಿರಕ್ಕೆ ಬಂದಾಗಲೇ ಕೋಲಾಟ ಕಂಡಿದ್ದೆ. ಹಾಂ ಈ ಬಾರಿಯೂ ಹೆಚ್ಚು ಕಮ್ಮಿ ಪ್ರತಿ ದಿನ ಬೆಳಿಗ್ಗೆ, ಇನ್ನೂ ಮಂಜಿನ ಪೊರೆ ಹರಿದು ಸೂರ್ಯ ಕಣ್ಣು ಬಿಡುವ ವೇಳೆಗೇ ರಂಗಶಾಲೆಯ ವಿದ್ಯಾರ್ಥಿಗಳು, ಶಿವರಾಮ ಕಾರಂತ ರಂಗಮಂದಿರದ ಎದುರಿನ ಡಾಮರು ಅಂಗಳಕ್ಕೆ ರಾಶಿ ಕೋಲುಗಳೊಡನೆ ಬಂದಿರುತ್ತಿದ್ದರು. ಇದರ ಸ್ಪಷ್ಟ ಸುಳಿವಿದ್ದ (ಶಿಬಿರಕ್ಕೆಂದೇ ದೂರದೂರುಗಳಿಂದ ಬಂದ) ಹಳೇ ವಿದ್ಯಾರ್ಥಿಗಳೂ ಸೇರಿಕೊಳ್ಳುತ್ತಿದ್ದರು. ಯಾರೋ ಒಬ್ಬರು “ಕೋಲು ಕೋಲೆನ್ನಿರೋ….” ಸೊಲ್ಲು ತೆಗೆಯುತ್ತಿದ್ದಂತೆ ಉಳಿದವರು ಧ್ವನಿಗೂಡಿಸುತ್ತಾ ಕೋಲಿಗೆ ಕೋಲು ಕುಟ್ಟುತ್ತಾ ವೃತ್ತಾಕಾರದಲ್ಲಿ ಹೆಜ್ಜೆ ಹಾಕುತ್ತಿದ್ದರು. ತಡವಾಗಿ ಬಂದವರೂ ಆತುರಾತುರವಾಗಿ ಕೋಲೆತ್ತಿಕೊಂಡು ನಡುನಡುವೆ ಸೇರಿಕೊಳ್ಳುವುದು ನೋಡಿದಾಗ ಏನೋ ಅಮೃತ ಗಳಿಗೆ ಸೋರಿಹೋಗುತ್ತದೋ ಎಂದು ಭಾವಿಸುವ ಹಾಗಿರುತ್ತಿತ್ತು. ಇತರ ಶಿಬಿರಾರ್ಥಿಗಳು ಬೆರಗು, ಸಂತೋಷಗಳೊಡನೆ ನಿಂತು ನೋಡುತ್ತಿದ್ದರು, ಚಿತ್ರ, ಚಲಚಿತ್ರಗ್ರಹಣ ನಡೆಸುತ್ತಿದ್ದರು. ಆದರೆ ಇಲ್ಲಿ….
ನಿಗದಿತ ಸಂಗೀತ ಕಾರ್ಯಕ್ರಮದ ವಿಳಂಬ ಮಾಸುವಂತೆ, ಬಿಸಿಲ ವೇಳೆಯಾದರೂ ಕೆಲ ಹುಡುಗರು ಹೊರಗಿನ ಅಂಗಳದಲ್ಲಿ “ಕೋಲು ಕೋಲಣ್ಣೇ….” ಸೊಲ್ಲೆತ್ತಿ ಕೋಲು ಕುಟ್ಟ ತೊಡಗಿದ್ದರು. ಇದನ್ನು ಕೆಲ ಕಿರು ಹರಯದವರು ಭವನದ ಕಿಟಕಿ ನೋಟದಲ್ಲೇ ತೃಪ್ತಿ ಪಡೆಯುತ್ತಿದ್ದರು. ಆದರೆ ಕೊಯಂಬತ್ತೂರು ಕನ್ನಡ ಸಂಘದಿಂದ ಬಂದಿದ್ದ ಹಿರಿಯ ಮಹಿಳೆಯೊಬ್ಬರು ಅಂಗಳಕ್ಕೆ ಧಾವಿಸಿ ಕೋಲು ಜೋಡಿಸಿದ್ದು ನಿಜಕ್ಕೂ ಚೇತೋಹಾರಿಯಾಗಿತ್ತು. ಆ ಕೊನೆಯಲ್ಲಿ…
ಕರ್ನಾಟಕ ಸಂಗೀತ ಮತ್ತು ನಾಟಕೀಯ ಪ್ರಸ್ತುತಿ…
ಸುಮಾರು ಮುಕ್ಕಾಲು ಗಂಟೆ ತಡವಾಗಿ ಮೈಸೂರು ಮಂಜುನಾಥರ ಸೋದಾಹರಣ ಉಪನ್ಯಾಸವೇನೋ ಶುರುವಾಯ್ತು. ಆದರೆ ಅವರು ಸಮಯ ಮಿತಿಯ ಅರಿವಿದ್ದೂ ಯಾಕೋ ಪೀಠಿಕೆಯಲ್ಲೇ ಹೆಚ್ಚು ಕಾಲ ಕಳೆದರು. ಪಿಟೀಲು ಎಂದರೇನು, ವಿದೇಶೀ ವಾದ್ಯವೊಂದು ಭಾರತಕ್ಕೂ ಇಲ್ಲಿನ ಸಂಗೀತಕ್ಕೂ ಬಂದದ್ದು ಹೇಗೆ ಎಂಬಿತ್ಯಾದಿ ಕತೆಗಳ ರಂಗುಗಳಲ್ಲಿ ಬಹಳ ಸಮಯ ವಿನಿಯೋಗಿಸಿದ್ದು ಸರಿಯಾಗಲಿಲ್ಲ. ‘ಕಲೆಗಳೊಡನೆ ಮಾತುಕತೆ’ಗೆಂದೇ ಎಲ್ಲೆಲ್ಲಿಂದಲೋ ಪ್ರಯಾಣ, ಸಮಯ, ಶುಲ್ಕ ಕೊಟ್ಟು ಬಂದವರು ತೀರಾ ಸಾಮಾನ್ಯರಲ್ಲ ಎಂಬ ತಿಳುವಳಿಕೆಯೊಡನೆ ಮಂಜುನಾಥ್ ಮುಂದುವರಿಯಬೇಕಿತ್ತು. ಆದರೂ ಆ ಸಣ್ಣ ಅವಧಿಯಲ್ಲಿ, ಮಂಜುನಾಥ್ ಮೌಖಿಕ ಹಾಡಿಕೆಯಲ್ಲೂ ಸಾಕಷ್ಟು ಪರಿಣತಿ ಉಳ್ಳವರು ಎಂದು ಕಂಡದ್ದು, ಸಂಜೆಯ ಮಹಾನಾಟಕಕ್ಕೆ ಒಳ್ಳೆಯ ಪೀಠಿಕೆಯೇ ಆಯ್ತು!
ಬೆಂಗಳೂರಿನ ಭೂಮಿಜಾ ತಂಡದ, ಎಸ್. ಸುರೇಂದ್ರನಾಥ್ ನಿರ್ದೇಶನದ, ವಿಶಿಷ್ಟ ನಾಟಕ ಆರೋಹ. ಇದು ಬಹು ವಾದ್ಯಗಳ ಸಂಯೋಜನೆಯಲ್ಲಿ ಪ್ರೇಮ ಭಾವ ಪ್ರಚೋದಕವೆಂದೇ ಕರಪತ್ರ ಹೇಳಿತ್ತು. ನಾಟಕದೊಳಗಿನ ನಿರೂಪಕನ ಪಾತ್ರದಲ್ಲಿ, ಕಾಲಕಾಲಕ್ಕೆ ಮುಂಬರುತ್ತಿದ್ದ ಶ್ರೀನಿವಾಸ ಪ್ರಭುಗಳು ಗದ್ಯ, ಪದ್ಯ ಉದ್ಧರಣೆಗಳಿಂದ ನಮಗೆ ಕಥನವನ್ನು ಮನಗಾಣಿಸುತ್ತಿದ್ದರು. ಒಂದು ತರುಣ ಜೋಡಿಯ ಪ್ರೇಮ ಮತ್ತು ಅಗಲಿಕೆಯ ಭಾವವನ್ನೂ ಸಣ್ಣದಾಗಿ ಬೆಸೆದಿದ್ದರು. ಗಾನಮೇಳದ ಮುಖ್ಯ ಭೂಮಿಕೆಯಲ್ಲಿ ಮೈಸೂರು ಮಂಜುನಾಥ್, ಸುಮಾರು ಮೂವತ್ತರಷ್ಟು ವಿವಿಧ ವಾದ್ಯ ವಿಶಾರದರೊಡನೆ (ಇಪ್ಪತ್ತಕ್ಕೂ ಮಿಕ್ಕು ಪಿಟೀಲು ಅಲ್ಲದೆ ಕೊಳಲು, ಸಿತಾರ್, ಗಿಟಾರ್, ಸಾರಂಗಿ, ತಬ್ಲಾ, ಮೃದಂಗ, ಕೀ ಬೋರ್ಡ್…) ಯೋಜಿತ ಸಮೂಹ ವಾದನವನ್ನೇ ಮೆರೆಸಿದರು. ಆದರೆ ಆ ಗಾನಘೋಷದ ಅಬ್ಬರ ಮತ್ತು ವೇಗದಲ್ಲಿ ನನಗೆ ಪ್ರೀತಿ ಪ್ರೇಮಗಳ ಕೋಮಲ ಭಾವ ಎಲ್ಲೋ ಕಳೆದು ಹೋದಂತೇ ಅನ್ನಿಸಿತು.
ತಿರುಗಾಟಕ್ಕೆ ಹೊರಟು ನಿಂತ ‘ಇಫಿಜೀನಿಯಾ’.
ಯಕ್ಷಗಾನ ಮೇಳಗಳು ಸಾಂಪ್ರದಾಯಿಕ ಬೆಳಕಿನ ಹಬ್ಬದ ಕೊನೆಯಲ್ಲಿ, ಮೂಲ ನೆಲೆಯ ದೇವರೆದುರು ಸೇವೆಯಾಟ ಆಡಿ, ಹೊರ ಊರುಗಳಿಗೆ ಸಂಚಾರ ಹೊರಡುತ್ತವೆ. ನೀನಾಸಂ ಅದನ್ನೇ ತುಸು ಪರಿಷ್ಕರಿಸಿಕೊಂಡಿದೆ. ವಾರ್ಷಿಕ ವೈಚಾರಿಕ (ಬೆಳಕಿನ) ಹಬ್ಬ, ಅರ್ಥಾತ್ ‘ಸಂಸ್ಕೃತಿ ಶಿಬಿರ’ದಲ್ಲಿ ತನ್ನ ಹೊಸ ನಾಟಕಗಳ ಪ್ರಥಮ ಪ್ರದರ್ಶನಗಳನ್ನು ಕೊಡುತ್ತದೆ. ಮತ್ತೆ ತಂಡವನ್ನು ವೃತ್ತಿಪರ ‘ತಿರುಗಾಟ’ಕ್ಕೆ ಕಳಿಸುತ್ತದೆ. ಹಾಗೆ ನೀನಾಸಂ ತಿರುಗಾಟ – ೨೦೨೨ಕ್ಕೆಂದೇ ತಯಾರಾದ ಎರಡು ನಾಟಕಗಳಲ್ಲಿ ಒಂದು…. ಇಫಿಜೀನಿಯಾ, ಗ್ರೀಕ್ ಲೇಖಕ ಯೂರಿಪಿಡೀಸಿನ ಕೃತಿಯನ್ನು, ಕನ್ನಡಿಸಿದವರು ಮಾಧವ ಚಿಪ್ಪಳಿ, ನಿರ್ದೇಶಿಸಿದವರು ಬಿಯಾರ್ ವೆಂಕಟ್ರಮಣ ಐತಾಳ. ಇದು ಶಿಬಿರದ ಮೊದಲ ಸಂಜೆ (೫/೧೧) ಪ್ರದರ್ಶಿತಗೊಂಡಿತು. ಅನ್ಯ ದೇಶೀಯರಿಂದ ಹೆಲೆನ್ ಎಂಬಾಕೆಯ ಅಪಹರಣ, ಅಗಮೆಮ್ನೊನ್ ಎಂಬ ಪ್ರಾಂತೀಯ ಪ್ರಮುಖನಿಗೆ ವೈಯಕ್ತಿಕ ಸೋಲು ಎಂದನ್ನಿಸುತ್ತದೆ. ಆದರೆ ಆತ ಅದನ್ನು ರಾಷ್ಟ್ರೀಯ ಸಮಸ್ಯೆ ಎಂಬಂತೆ ಬಿಂಬಿಸಿ, ದೇಶವನ್ನೇ ಯುದ್ಧಕ್ಕಿಳಿಸುತ್ತಾನೆ. (ಕೊನೆಯಲ್ಲಿ ಗೆಲ್ಲುತ್ತಾನೆ, ಬಿಡಿ.) ಅದರ ರಾಜಕೀಯದ ಒಳಸುಳಿಗಳಲ್ಲಿ ಆತ ಪ್ರೀತಿಪಾತ್ರ ಮಗಳು – ಇಫಿಜೀನಿಯಾಳನ್ನೇ ಬಲಿ ಕೊಡುವ ವಿಕಟತೆಯೇ ನಾಟಕದ ವಸ್ತು.
ದೇಶ – ಗ್ರೀಸ್, ಕಾಲ – ಎರಡೂವರೆ ಸಾವಿರ ವರ್ಷಗಳ ಹಿಂದಿನದು. ಆದರೂ ಪ್ರಸಂಗ ಇಂದಿನ ಕರ್ನಾಟಕ ಮತ್ತು ಭಾರತದ ಪರಿಸ್ಥಿತಿಯ ಯಥಾವತ್ತು ದರ್ಶನ ಎಂಬಂತಿದೆ. ಶಕ್ತಿಯುತ ಮಾತು, ಹೆಚ್ಚಿನ ಬಲ ಕೊಟ್ಟಂತೆ ಬರುವ ಅಭಿನಯ, ಸರಳತೆಯಲ್ಲೂ ಕಣ್ತುಂಬಿ ಬರುವ ದೃಶ್ಯಗಳು ಒಟ್ಟು ಪ್ರದರ್ಶನವನ್ನು ಅವಿಸ್ಮರಣೀಯ ಅನುಭವವಾಗಿಸಿತು. ನಿರ್ದೇಶಕ ಐತಾಳರನ್ನು ಈಸ್ಕೈಲಸ್ಸಿನ ನಾಟಕಗಳಲ್ಲಿ ಬಹುವಾಗಿ ಪ್ರಭಾವಿಸಿದ್ದು ಒರೆಸ್ತಿಸ್ ತ್ರಿವಳಿಗಳಂತೆ. ಅದರ ಗುಂಗಿನಲ್ಲಿ ಹಿಂದೆ ಅವರು ರಂಗಕ್ಕೇರಿಸಿದ ‘ಒರೆಸ್ತಿಸ್ ಪುರಾಣ’ಕ್ಕೆ ನಿಸ್ಸಂದೇಹವಾಗಿ ಇಫಿಜೀನಿಯಾ ಇನ್ನೊಂದು ಅದ್ಭುತ ಸೇರ್ಪಡೆ. ಈ ನಾಟಕ ‘ತಿರುಗಾಟ’ದಲ್ಲಿರುವುದರಿಂದ ಇಲ್ಲಿ ನನ್ನ ಹೆಚ್ಚಿನ ಮಾತುಗಳು ಸರಿಯಲ್ಲ. ನಿಮ್ಮ ಅಥವಾ ಸಮೀಪದ ಊರುಗಳಲ್ಲಿ ಬಂದಾಗ ಅವಶ್ಯ ನೋಡಿ. (೨೦೨೩ರ ಜನವರಿ ೪,೫ ಉಡುಪಿ, ೬,೭ ಮಂಗಳೂರು ಮತ್ತು ೮,೯ ಪುತ್ತೂರು ಪ್ರದರ್ಶನಗಳಿವೆ) ಹಾಗೂ ತಪ್ಪಿದರೆ, ನಾನು ಈ ಮಾಲಿಕೆಯ ಮೊದಲಲ್ಲೇ ಬರೆದಂತೆ, ಪ್ರಕಟವಾದ ಕಾಲಕ್ಕೆ ಸಂಚಿ ಫೌಂಡೇಶನ್ನಿನ ಯೂ ಟ್ಯೂಬಿನಲ್ಲಾದರೂ ನೋಡಲು ಮರೆಯಬೇಡಿ.
ತಿರುಗಾಟದಲ್ಲಿರುವ ಇನ್ನೊಂದು
ಮುಕ್ತಧಾರಾ – ಮೂಲ ರವೀಂದ್ರನಾಥ ಟಾಗೋರ್, ಕನ್ನಡಿಸಿದವರು ಅಹೋಬಲ ಶಂಕರ, ನಿರ್ದೇಶಿಸಿದವರು ಪ್ರವೀಣ್ ಕುಮಾರ್ ಎಡಮಂಗಲ. ಇದು ಶಿಬಿರದ ಎರಡನೇ (೬/೧೧) ದಿನದ ಪ್ರದರ್ಶನಕ್ಕೆ ಬಂತು. ಇದು ರಾಜಮಹಾರಾಜರ ಕಾಲದ ಕತೆ. ದುಷ್ಟ ರಾಜಕಾರಣವೇ ಉದ್ದೇಶವಾಗಿ, ‘ಮುಕ್ತಧಾರ’ ಎಂಬ ನದಿಗೆ ಮೇಲ್ದಂಡೆಯ ಅರಸ ಅಣೆಕಟ್ಟು ತಂದು, ನೀರು ತಡೆಯುತ್ತಾನೆ. ಅದು ಪ್ರತ್ಯಕ್ಷವಾಗಿ ಕೆಳದಂಡೆಯ ಅನ್ಯ ದೇಶವಾಸಿಗಳ, ಒಟ್ಟಾರೆ ಕೃಷಿ ಮತ್ತು ಸಾಮಾಜಿಕ ಸ್ಥಿತಿಯಲ್ಲಿ ಉಂಟು ಮಾಡುವ ತಲ್ಲಣ ಅಸಾಧಾರಣವಾದದ್ದು. ಈ ಪಾರಿಸರಿಕ ಅಸಮತೋಲನಕ್ಕೆ ಬಾಯಿಯಾಗಿ ನಾಟಕದುದ್ದಕ್ಕೆ ಆಗಾಗ ಓರ್ವ ತಾಯಿಯ ನರಳಾಟ ಮತ್ತು ಭೀಕರ ಆಕ್ರಂದನ ನಮ್ಮನ್ನು ಕಾಡುತ್ತಲೇ ಇರುತ್ತದೆ. ನೆಪ – ಅಣೆಕಟ್ಟಿನ ನಿರ್ಮಾಣಕ್ಕೆ ಆಕೆಯ ಮಗನನ್ನು ಸೈನಿಕರು ಬಲವಂತದ ಕೂಲಿಯಾಗಿ ಸೆಳೆದುಕೊಂಡು ಹೋಗಿರುತ್ತಾರೆ. ಆದರೆ ‘ದುಷ್ಟ’ನ (ರಾಜ/ ಹಿರಣ್ಯಾಕ್ಷ?) ಆಪ್ತತೆಯಲ್ಲೇ ಇದ್ದ ‘ಶಿಷ್ಟ’ನ (ರಾಜಕುಮಾರ/ ಪ್ರಹ್ಲಾದ?) ಒತ್ತಡದಲ್ಲಿ ಅಣೆಕಟ್ಟು ನಷ್ಟವಾಗುತ್ತದೆ. ಸಾಮಾಜಿಕ ಸಂಕಟ ಪರಿಹಾರದೊಡನೆ ಪರಿಸರವೇ ವಿಜೃಂಭಿಸಿದಂತೆ ಕಟ್ಟೆಯೊಡೆದ ಸದ್ದಿನೊಡನೆ, ನೆಲ ನಡುಗಿದಂತೆ ಧುಮ್ಮಿಕ್ಕುವ ಜಲಪಾತ, ಪ್ರೇಕ್ಷಕನ ಕಟ್ಟಿಟ್ಟ ಆತಂಕಗಳಿಗೆ ರೋಮಾಂಚನಕಾರಿ ಬಿಡುಗಡೆಯನ್ನೇ ಕೊಡುತ್ತದೆ. (ಕಂಬ ಒಡೆದು ಬಂದ ನರಸಿಂಹ?) ಈ ಪ್ರಸಂಗ ಸುಮಾರು ನೂರಿಪ್ಪತ್ತೈದು ವರ್ಷಗಳ ಹಿಂದಿನದೇ ಆದರೂ ಮಹಾಕಾವ್ಯಗಳು ದೇಶ ಕಾಲವನ್ನು ಮೀರುತ್ತವೆ ಎನ್ನುವ ಮಾತಿಗೆ ಇದು ಇನ್ನೊಂದೇ ಸಾಕ್ಷಿಯಾಗುತ್ತದೆ. ನಾನಂತೂ ಇದನ್ನು ಕರ್ನಾಟಕ ತಮಿಳುನಾಡಿನ ನಡುವಣ ಕಾವೇರಿ ವಿವಾದಕ್ಕೂ ಅನ್ವಯಿಸಿಕೊಂಡೆ.
ಮರುದಿನದ ಸಂವಾದದಲ್ಲಿ ಮಾತಾಡಿದ ಕೆಲವರು ನೋಟಕ್ಕೆ ತೀರಾ ಸರಳವೆನ್ನುವಂತಿದ್ದ ರಂಗಸಜ್ಜಿಕೆಯನ್ನು ಅರ್ಥ ಮಾಡಿಕೊಂಡಂತಿರಲಿಲ್ಲ. ಇಡಿಯ ರಂಗ ಮಂಚದ ನೆಲದ ನಡುವಿನಲ್ಲಿ ಒಂದಕ್ಕೊಂದು ಅಡ್ಡಕ್ಕೆ ಮಲಗಿದ ಎರಡು ಕಿರುಪಥಗಳಷ್ಟೇ ರಂಗದಲ್ಲಿ ಚಟುವಟಿಕೆಯ ತಾಣ. ಬೆಳಕಿನ ತರಂಗಿತತೆಯಲ್ಲಿ, ನಟರ ಎಚ್ಚರದ ನಡೆಯಲ್ಲಿ, ಅಡ್ಡಪಥ – ಅಣೆಕಟ್ಟೆಯೇ ಆಗಿ, ಉಳಿದ ಸ್ಥಳ ಗಂಭೀರ ನೀರು ತುಂಬಿದ ಭಾವ ಸ್ಫುರಿಸುತ್ತಿತ್ತು. ಲಂಬಪಥ ನೀರಿನ ರಾಜಕೀಯದಲ್ಲಿ ಎರಡು ಸಮುದಾಯಗಳನ್ನು ಇಬ್ಭಾಗಿಸಿದ ರೇಖೆಯಾಗಿಯೇ ಭಾಸವಾಯ್ತು. ಮುಕ್ತಧಾರಾವೂ ತಿರುಗಾಟದಲ್ಲಿದೆ. ಮೊದಲೇ ಹೇಳಿದಂತೆ, ನಿಮ್ಮೂರಲ್ಲಿ ನೋಡಿ, ಅಲ್ಲದಿದ್ದರೆ ಸಂಚಿ ಫೌಂಡೇಶನ್ ಸಮಯ ಕಾದು ಅವಶ್ಯ ನೋಡಿ.
ಕೊರಿಯೋಲೇನಸ್ – ಊರವರ ಪ್ರಯೋಗ
ಈಚಿನ ಆರೇಳು ದಶಕಗಳಲ್ಲಿ ರಂಗಪ್ರಯೋಗಗಳಿಂದ ತೊಡಗಿ, ಸಾಹಿತ್ಯ, ಸಿನಿಮಾದಿ ಅನೇಕ ಕಲೆಗಳು ಹೆಗ್ಗೋಡೆಂಬ ಪಕ್ಕಾ ಹಳ್ಳಿಯ ಜನಪದದ ಭಾಗವೇ ಆಗಿವೆ. ಇದಕ್ಕೆ ಮೂಲ ಕಾರಣ, ಅಲ್ಲಿನ ಗ್ರಾಮೀಣ ಕಲಾಭಿವ್ಯಕ್ತಿಯ ವೇದಿಕೆ – ನೀಲ ಕಂಠೇಶ್ವರ ನಾಟ್ಯ ಸಂಘಕ್ಕೆ (ನೀನಾಸಂ), ಕೆವಿ ಸುಬ್ಬಣ್ಣ ಎಂಬ ಊರ ತರುಣನ ಮಾಯಾಸ್ಪರ್ಷ. ಕಾಲಕಟ್ಟಳೆಯಂತೆ ಆ ಸುಬ್ಬಣ್ಣ-ಶಕ್ತಿ ಭೌತಿಕವಾಗಿ ಮರೆಯಾದರೂ (೧೯೩೨-೨೦೦೫) ರಂಗಶಾಲೆ ಮತ್ತು ಊರ ಮಂದಿ ಮರೆತಿಲ್ಲ. ಅವರು ರೂಢಿಸಿದ ಕಲಾಪಗಳನ್ನು ಕಾಲದ ನಿಕಷಕ್ಕೊಡ್ಡಿ ಪರಿಷ್ಕರಿಸಿಕೊಳ್ಳುತ್ತ, ಪ್ರತಿ ವರ್ಷವೂ ಸುಬ್ಬಣ್ಣ ಸ್ಮೃತಿ ದಿನವನ್ನು ವಿಶಿಷ್ಟವಾಗಿಯೇ ಆಚರಿಸುತ್ತ ಬಂದಿದ್ದಾರೆ. ಅದೂ ನೀನಾಸಂ ಸಂಸ್ಕೃತಿಗೆ ಭಿನ್ನವಾಗಿಲ್ಲ ಎನ್ನುವುದು ಹೆಚ್ಚಿನ ಆಕರ್ಷಣೆ. ಸ್ಮೃತಿದಿನದಲ್ಲಿ ಯಾವುದೇ ಔಪಚಾರಿಕ ಆರಾಧನೆಗಳಿಲ್ಲ. ಹೆಗ್ಗೋಡು ಪರಿಸರದ ನೇರ ಸಾಮಾಜಿಕ ಹಿತಕ್ಕೆ ಸಹಕಾರಿಯಾದ ಚಟುವಟಿಕೆ ಮತ್ತು ಊರ ಮಂದಿಯಿಂದಲೇ ಒಂದು ನಾಟಕ; ಉಪಯುಕ್ತ ಹಾಗೂ ಅರ್ಥಪೂರ್ಣ. ಹಾಗೆ ಈ ಬಾರಿ ಸ್ಮೃತಿ ದಿನದಂದು (ಜುಲೈ ೧೬) ಊರಮಂದಿ ಪ್ರಯೋಗಿಸಿದ್ದ ನಾಟಕವನ್ನೇ ಶಿಬಿರದ ಮೂರನೇ ದಿನದ ಮಹಾನಾಟಕವಾಗಿ ಕೊಟ್ಟರು. ಅದೇ…
ವಿಲಿಯಂ ಶೇಕ್ಸ್ಪಿಯರನ ದುರಂತ ನಾಟಕ ಕೊರಿಯೋಲೇನಸ್ (೭/೧೧). ಕನ್ನಡಾನುವಾದ ಮತ್ತು ನಿರ್ದೇಶನ – ಕೆವಿ ಅಕ್ಷರ. ನೀನಾಸಂನ ಮುಖ್ಯ ಬೆಳೆ – ರಂಗ ಶಾಲಾ ವಿದ್ಯಾರ್ಥಿಗಳು. ಆದರೆ ಅವಕ್ಕೆ ಕೊಟ್ಟ ಎಲ್ಲ ಪೋಷಕಾಂಶಗಳ ಬಲ ಉಂಡ ಉಪ ಬೆಳೆ – ಈ ಊರ ಮಂದಿ. ಇವರಲ್ಲಿ ಹೆಚ್ಚಿನ ಮಂದಿ ಔಪಚಾರಿಕ ರಂಗ ತರಬೇತಿಯನ್ನು ಪಡೆದವರಲ್ಲ. ತಮ್ಮ ಅನ್ಯ ವೃತ್ತಿ ಹಾಗೂ ಕೌಟುಂಬಿಕ ಜವಾಬ್ದಾರಿಗಳ ನಡುವೆ ಸಮಯ ಹೊಂದಿಸಿಕೊಂಡು, ಆ ಒಂದು ಪ್ರಯೋಗಕ್ಕಾಗಿ, ತೀವ್ರ ತರಬೇತಿಗೆ ಒಡ್ಡಿಕೊಳ್ಳುತ್ತಾರೆ. ಈ ತಂಡ ಹೊರ ಸಂಚಾರ ಮಾಡುವುದು ತೀರಾ ಕಡಿಮೆ. (ನೀನಾಸಂ-ಸಂಚಿ ದಾಖಲೀಕರಣ ಇವನ್ನೂ ಒಳಗೊಳ್ಳುತ್ತಿರುವುದು ಕಲಾಸಕ್ತರ ಅದೃಷ್ಟ)
ಕ್ರಿ.ಪೂ ೫ನೇ ಶತಮಾನದಲ್ಲಿ (೨೦೦೦ ವರ್ಷಗಳ ಹಿಂದೆ) ನಡೆದಿರಬಹುದಾದ ಘಟನೆಯಾಧರಿಸಿ, ಶೇಕ್ಸ್ಪಿಯರ್ (೫೦೦ ವರ್ಷಗಳ ಹಿಂದಿನವ) ಕೊರಿಯೋಲೇನಸ್ ರಚಿಸಿದ. ಅಂಥದ್ದನ್ನು ಇಂದು ನಾವು ಕನ್ನಡಿಸಿ ನೋಡುತ್ತಿದ್ದೇವೆ ಎನ್ನುವಲ್ಲೇ ಅದರ ಸಾರ್ವಕಾಲಿಕ ಮೌಲ್ಯಗಳ ಮಹತ್ವವಿದೆ. ಆ ಹಳೆಗಾಲದಲ್ಲಿ ಗ್ರೀಸ್ ಪ್ರಜಾಸತ್ತಾತ್ಮಕ ಆಡಳಿತದಲ್ಲಿತ್ತು. (ಇಂದಿನ ಭಾರತಕ್ಕೆ ಅನ್ವಯಿಸಿ – ಮೋದಿ, ಶಾ..) ಆದರದು ನಿಜದಲ್ಲಿ ಕೇವಲ ಶ್ರೀಮಂತ ವರ್ಗದ ವಿಲಾಸೀ ಅಥವಾ ಮಹಾತ್ವಾಕಾಂಕ್ಷೀ ಕಣ್ಕಟ್ಟಾಗಿತ್ತು. (ಅದಾನಿ, ಅಂಬಾನಿ…) ಅವರು ಆಡಳಿತದ ಕೊರತೆಗಳನ್ನು ಮರೆಸಲು ರಟ್ಟೆ ಬಲವುಳ್ಳವರನ್ನು ಸಾಕುತ್ತಿದ್ದರು. ಮತ್ತೆ ಶ್ರೀಸಾಮಾನ್ಯರ ಅತಂತ್ರ ಬದುಕಿಗೆ ದೇಶಪ್ರೇಮದ ಭ್ರಮೆಯೂಡಿ, ನಿರಂತರ ಯುದ್ಧ ಮತ್ತು ಸಂಧಾನಗಳ ಮುಸುಕೆಳೆದು ಮಲಗಿಸಿಬಿಡುತ್ತಿದ್ದರು. ಹಾಗೆ ಈ ನಾಟಕದಲ್ಲಿ ಹೋರುವ ಎರಡು ದೇಶಗಳು – ರೋಮ್ ಮತ್ತು ವೋಲ್ಸೆ. ಅಲ್ಲಿ ಕ್ರಮವಾಗಿ ಮಾರ್ಸಿಯಸ್ ಮತ್ತು ಔಫೀಡಿಯಸ್ ವೀರ ಸೇನಾನಿಗಳು. (‘ಒಂದಾನೊಂದು ಕಾಲದಲ್ಲಿ’ ಚಿತ್ರದ ವೀರಭಂಟರನ್ನು ನೆನಪಿಸಿಕೊಳ್ಳಿ.) ಇವರಾದರೋ ಬಿರುದು, ಪದವಿಗಳ ಅಮಲಿನಲ್ಲಿ ದೇಶಭಕ್ತಿಗೂ ಎರವಾಗಬಲ್ಲರು. (ಮಾರ್ಸಿಯಸ್ ಪಡೆದ ಬಿರುದು – ಕೊರಿಯೊಲೇನಸ್. ಆತ ಯುದ್ಧ ಗೆದ್ದಾಗ ರೋಮಿನ ಸಂಸದನ ಪದವಿಯನ್ನೂ ದಕ್ಕಿಸಿಕೊಂಡಿದ್ದ.) ಪ್ರಸಂಗದ ಉತ್ತುಂಗದಲ್ಲಿ ಆಪ್ತ ಬಂಧುಗಳ (ತಾಯಿ, ಹೆಂಡತಿ, ಮಗ…) ನೆಪದಲ್ಲಿ ಮಾರ್ಸಿಯಸ್ಸಿಗೆ ತುಸು ನೈತಿಕತೆಯ (ಮಾನವೀಯತೆ) ಜಾಗೃತಿಯಾಗುತ್ತದೆ. ಆದರೆ ಔಫೀಡಿಯಸ್ಸಿನ ನೈತಿಕತೆಯ (ಮೈತ್ರೀಬಂಧ) ಕೊರತೆ, ಪರವಶತೆಯಲ್ಲಿದ್ದ ಮಾರ್ಸಿಯಸ್ಸನ ಕೊಲೆ ಮಾಡಿಸುತ್ತದೆ; ದುರಂತ ನಾಟಕಕ್ಕೆ ಪರದೆ ಬೀಳುತ್ತದೆ.
ಕೊರಿಯೊಲೇನಸ್ ಪ್ರಯೋಗ ಯಾವುದೇ ವೃತ್ತಿ ನಿರತ ತಂಡಕ್ಕೆ ಕಡಿಮೆಯಾಗದಷ್ಟು ಪರಿಣಾಮಕಾರಿಯಾಗಿ ಮೂಡಿತು. ಈಗಾಗಲೇ ಪ್ರದರ್ಶನವನ್ನು ನೋಡಿದವರಿಗೆ ನನ್ನ ವಿವರಣೆ ಬೇಕಿಲ್ಲ. ನೋಡದವರು, ಸದ್ಯೋಭವಿಷ್ಯತ್ತಿನಲ್ಲಿ ಸಂಚಿಯ ಯೂಟ್ಯೂಬಿನಲ್ಲಿ ನೋಡುತ್ತಾರೆ ಖಂಡಿತ. ಆಗ ಅವರ ಪ್ರತ್ಯಕ್ಷದರ್ಶನದ ಆನಂದಕ್ಕೆ ನನ್ನ ಮಾತಿನ ಬಡಿವಾರ ಹೊರೆಯಾಗಬಾರದು ಎಂಬ ಎಚ್ಚರದಲ್ಲಿ ಇಷ್ಟಕ್ಕೇ ಮುಗಿಸುತ್ತೇನೆ.
ಇಲ್ಲಿರುವುದು ಸುಮ್ಮನೆ
ಏಳೆಂಟು ವರ್ಷಗಳ ಹಿಂದೆ ನನ್ನ ಬೆಂಗಳೂರು ಸೈಕಲ್ ಸರ್ಕೀಟಿನಲ್ಲಿ ನಾಗೇಶ ಹೆಗಡೆಯವರ ಮನೆ ಹುಡುಕಿಕೊಂಡು ಹೋಗಿದ್ದೆ. ಅಲ್ಲಿ ನಾನು ನಿರೀಕ್ಷಿಸದ ಒಂದು ಯುವ ತಂಡ – ಲೋಕಚರಿತ, ಸ್ವಾಂತ ಸುಖಾಯ (ಪ್ರದರ್ಶನಕ್ಕಲ್ಲ), ಅನೌಪಚಾರಿಕ ಸಾಂಸ್ಕೃತಿಕ ಕಲಾಪ ನಡೆಸಿತ್ತು. ಅಷ್ಟೂ ಮಂದಿಯಲ್ಲಿ, ನನಗೆ ಪೂರ್ವಪರಿಚಯವಿದ್ದದ್ದು ಒಂದೇ ಮುಖ – ಗಿರಿಜಾ ಸಿದ್ಧಿ. ಇವರು ಬಹಳ ಹಿಂದೆ ನೀನಾಸಂ ತಿರುಗಾಟದಲ್ಲಿ ‘ಶಕುಂತಲೆ’ಯಾಗಿ ನನ್ನ ಮನಸ್ಸಿನಲ್ಲಿ ನೆಲೆಸಿದ್ದರು. ಅವರ ಗಂಡ, ತಂಡದ ನಾಯಕ – ಚೆನ್ನಕೇಶವರು, ನನಗೆ ಹೆಸರಿನಲ್ಲಷ್ಟೇ ಪರಿಚಯವಿದ್ದವರು. ‘ಲೋಕಚರಿತ’ ತಿಂಗಳಿಗೊಮ್ಮೆ ನಗರದೊಳಗೇ ಎಲ್ಲೋ ಒಟ್ಟಾಗುತ್ತಿತ್ತು. ಮತ್ತು ನಗರದ ಯಾಂತ್ರಿಕತೆಯಲ್ಲಿ ಕಳೆದುಕೊಂಡ ಆರೋಗ್ಯಕರ ಬೌದ್ಧಿಕ ಚೇತರಿಕೆಯನ್ನು ಸಾಂಸ್ಕೃತಿಕ ಕಲಾಪಗಳಲ್ಲಿ ಕಂಡುಕೊಳ್ಳುತ್ತಿತ್ತು.
ಮೊದಲ ಭೇಟಿಯ ಅಲ್ಪಾವಧಿಯಲ್ಲಿ, ಲೋಕಚರಿತ ತನ್ನೊಳಗೆ ಅಪ್ಪಟ ಬೆಂಗಳೂರಿಗರ ಶೋಧ ನಡೆಸಿತ್ತು! ಅಲ್ಲಿದ್ದ ಹೆಚ್ಚಿನವರು ವೃತ್ತಿಯ ಅನಿವಾರ್ಯತೆಯಲ್ಲಷ್ಟೇ ಬೆಂಗಳೂರಿಗರು. ಉಳಿದಂತೆ ರಾಗ ಒಂದೇ “ಇಲ್ಲಿರುವುದು ಸುಮ್ಮನೆ, ಅಲ್ಲಿರುವುದು (ಹೆಚ್ಚಾಗಿ ಕರ್ನಾಟಕದ ಯಾವ್ಯಾವುದೋ ಹಳ್ಳಿಯಲ್ಲೋ, ಊರಿನಲ್ಲೋ) ನಮ್ಮ ಮನೆ”. ಅನಂತರ ಇದ್ದ ಒಂದೆರಡು ವಾದ್ಯಗಳ ಸಾಂಗತ್ಯದಲ್ಲಿ, ರಂಗಗೀತೆಗಳನ್ನು ಹಾಡತೊಡಗಿದ್ದರು. (ಮುಂದೊಂದು ದಿನ ಅಭಯ, ಇವರ ರಂಗಗೀತೆಗಳಲ್ಲಿ ಒಂದಷ್ಟನ್ನು, ಪ್ರೊ| ಜೆ. ಶ್ರೀನಿವಾಸ ಮೂರ್ತಿಯವರ ಅದ್ಭುತ ವ್ಯಾಖ್ಯಾನಗಳ ಸಹಿತ ಸಂಚಿಗೆ ದಾಖಲಿಸಿಕೊಂಡ – ಕೇಳಿ:
ಇಂದು ಚೆನ್ನಕೇಶವ ನಮ್ಮೊಡನಿಲ್ಲ. ಆದರೆ ಅವರು ಎತ್ತಿದ ಅರಿವಿನ ದೀವಟಿಗೆ – ಲೋಕಚರಿತವನ್ನು, ದಿಟ್ಟವಾಗಿ ನಡೆಸುತ್ತಿರುವ ಗಿರಿಜಾ ಸಿದ್ಧಿ, ತನ್ನ ಎರಡನೇ ತವರಾದ ಹೆಗ್ಗೋಡಿಗೆ (ಇಂದು ಬೆಳೆದು ನಿಂತ ಮಗ – ಮಧುರ ಚೆನ್ನಿಗ ಸುಬ್ಬಣ್ಣನೊಡನೆ) ತಂಡವನ್ನು ಕರೆದುಕೊಂಡು ಬಂದಿದ್ದರು. ಶಿಬಿರದ ನಾಲ್ಕನೇ ದಿನದ (೮/೧೧) ಮಹಾನಾಟಕ – ಇಲ್ಲಿರುವುದು ಸುಮ್ಮನೆ, ಲೋಕಚರಿತದ್ದೇ ಪ್ರಯೋಗ. ನಾಟಕದ ಲೇಖಕ ವಿವೇಕ ಶಾನಭಾಗ, ನಿರ್ದೇಶಕ ಉಮೇಶ್ ಸಾಲಿಯಾನ್. ನನ್ನ ಲೋಕಚರಿತದ ಮೊದಲ ಭೇಟಿಯಲ್ಲಿ ಕೇಳಿದ್ದ, “ಇಲ್ಲಿರುವುದು ಸುಮ್ಮನೆ”ಯಲ್ಲಿ ವೃತ್ತಿಯ ಅನಿವಾರ್ಯತೆಯಲ್ಲಿ ಬೆಂಗಳೂರು ನೆಚ್ಚಿಕೊಂಡವರ ಹತಾಶೆಯ ಧ್ವನಿಯಿತ್ತು. ಆದರೆ ಪ್ರಸ್ತುತ ನಾಟಕದಲ್ಲಿ ಸ್ವಂತ ನೆಲ, ಮನೆ ಎಂದು ಮೋಹ ಕಟ್ಟಿಕೊಂಡವನಿಗೆ ಉಳಿಸಿಕೊಳ್ಳಲಾಗದ ನಿರಾಶೆ. ಗಮನಿಸಿ, ನಿರಾಶೆ ಪ್ರಯೋಗದ ವಿಮರ್ಶಾ ನುಡಿಯಲ್ಲ, ಕಥನದ ಆಂತರ್ಯ ಹುಟ್ಟಿಸಿದ ಭಾವ.
ನಾಟಕದ ನಾಯಕ ಮೂಲತಃ ಬೆಂಗಳೂರಿನವ, ವೃತ್ತಿತಃ ಅಮೆರಿಕಾವಾಸಿ. ಈತ ಬೆಂಗಳೂರಿನ ತನ್ನ ಪಿತ್ರಾರ್ಜಿತ ಮನೆಯನ್ನು ಕೇವಲ ತನ್ನ ಬಾಲ್ಯದ ಮಧುರ ನೆನಪುಗಳ ನೆಲೆಯಾಗಿ ಕಾಪಾಡಿಕೊಳ್ಳಲು, ಕಾವಲಿಗೆ ಜನ ಮಾಡಿ ಹೋಗಿರುತ್ತಾನೆ. ಆತ ರಜಾ ಕಾಲದಲ್ಲಿ ಅಮೆರಿಕದಲ್ಲಿರುವುದು ಸುಮ್ಮನೆ, ಬೆಂಗಳೂರಿನಲ್ಲಿದೆ ನನ್ನ ಮನೆ ಎಂದು ಬಂದಾಗ ಮನೆಯಿರಲಿ, ನಿಯುಕ್ತ ರಕ್ಷಕನೂ ಸುಲಭದಲ್ಲಿ ಸಿಕ್ಕುವುದಿಲ್ಲ. ಪತ್ತೇದಾರಿ, ಕಾನೂನು ಕ್ರಮ, ವಿಳಂಬದ್ರೋಹ ಎಂಬಿತ್ಯಾದಿ ಕೋಟಲೆಗಳನ್ನೆದುರಿಸಿಯೂ ಸೋಲುಂಟಾದಾಗ ಆತನಿಗೇನು ನಮಗೆಲ್ಲರಿಗೂ ಮೂಡುವ ನಿರಾಶಾ ಉದ್ಗಾರ ಒಂದೇ “ಇಲ್ಲಿರುವುದು ಸುಮ್ಮನೆ.”
ನಾಟಕ ಹಾಸ್ಯಪೂರ್ಣವಾಗಿ ಭೂ ಮಾಫಿಯಾದ ಕರಾಳ ಕತೆಯನ್ನು ಬಿಡಿಸಿಡುತ್ತದೆ. ಆದರೆ ಇಂಥದ್ದೇ ಪ್ರಸಂಗವೊಂದು ನನಗೆ ವಾಸ್ತವದಲ್ಲೇ ಅನುಭವಕ್ಕೆ ಬಂದಿರುವುದರಿಂದ, ಗಂಭೀರವಾಗಿಯೇ ಪ್ರಭಾವಿಸಿತು. (ಓದಿ: ಕಾಡಿನೊಳಗೊಂದು ಮನೆಯ ಮಾಡೀ…..)
ಕಾಣೆಯಾದ ಮನೆಯ ಕತೆಯನ್ನೂ ಮೀರಿ, ನಾಟಕದೊಳಗೇ ಈ ಉಕ್ತಿ ಅನ್ಯ ಧ್ವನ್ಯರ್ಥಗಳಲ್ಲಿ ತೆರೆದುಕೊಳ್ಳುವ ಚಂದ ಕಡಿಮೆ ಸ್ವಾರಸ್ಯದ್ದೇನಲ್ಲ. ಇಂದು ನಮ್ಮ ತರುಣ ಜನಾಂಗಕ್ಕಿರುವ ಅಮೆರಿಕಾ ಇಂಗ್ಲೆಂಡಾದಿ ವಿದೇಶಗಳ ಮೋಹದ ಪ್ರತಿನಿಧಿಯಾಗಿ ನಾಟಕದಲ್ಲೊಬ್ಬ (ತರುಣ-) ಗೃಹಿಣಿ ಬರುತ್ತಾಳೆ. ಈಕೆ ನಾಯಕನಿಗೆ ದೂರದ ಸಂಬಂಧಿ. ಸನ್ನಿವೇಶಗಳ ಫಿತೂರಿಯಲ್ಲಿ ನಾಯಕ ಇವರ ಮನೆಗೇ ಬರುತ್ತಾನೆಂದಾಗ ಗೃಹಿಣಿ ತೋರುವ ಸಂಭ್ರಮದಲ್ಲಿ ಅನುರಣಿಸುತ್ತದೆ “ಇಲ್ಲಿರುವುದು ಸುಮ್ಮನೆ”! ಇದು ಇಂದು ಪ್ರತಿ ಮನೆಯಲ್ಲೂ ಕಾಣಸಿಗುವ ಮತ್ತು ಹೇವರಿಕೆ ಮೂಡಿಸುವ ಸತ್ಯ. ಇನ್ನು ಕಾವಲಿನವ, ಖಾಲಿ ಮನೆಯನ್ನು ಎಂದೂ ವಾಸಕ್ಕೆ ಬಾರದವನ ಭಾವುಕತೆಗಾಗಿ ಕಾಪಾಡಿಕೊಳ್ಳುವುದೇ ಕರ್ತವ್ಯವಾದವನಿಗೆ ದೊಡ್ಡವರ ಕುರಿತು ಮೂಡುವ ತಾತ್ಸಾರದ ಧ್ವನಿಯೂ “ಈ ಮನೆ ಯಾಕೆ ಸುಮ್ಮನೇ”. ಆ ಮನೆಯನ್ನು ಬಡ ಬದುಕಿಗೊಂದು ಸೂರೆಂದಷ್ಟೇ ಹೇಗೋ ‘ಜೀರ್ಣಿಸಿಕೊಂಡ’ವರು, ಎಲ್ಲ ಕಳೆದುಕೊಳ್ಳುವ ಸ್ಥಿತಿ ಎದುರಾದಾಗ, ಇಲ್ಲಿರುವುದು ಸುಮ್ಮನೆ ಎನ್ನುವಂತಾಗುವುದು ಆತ್ಯಂತಿಕ ನೋವಿನ ಮಾತು. ಒಟ್ಟಾರೆ ನಾಟಕದ ಭಾವ ಮತ್ತು ಪ್ರಯೋಗ ಚೆನ್ನಾಗಿತ್ತು, ವಿಚಾರ ಪ್ರಚೋದಕವಾಗಿತ್ತು.
ಪ್ರದರ್ಶನೋತ್ತರದಲ್ಲಿ ಲೇಖಕ ವಿವೇಕ್, ಈ ನಾಟಕ ತನ್ನ ಮತ್ತು ಚೆನ್ನಕೇಶವರ ನಡುವಣ ಸುಮಾರು ನಾಲ್ಕೈದು ವರ್ಷಗಳ ಚರ್ಚೆಯ ಉತ್ಪನ್ನ ಎಂದಿದ್ದರು. ಅದಿಂದು ರಂಗಕ್ಕೆ, ಸಾರ್ವಜನಿಕ ವಿಚಾರ ರಂಗಕ್ಕೂ ಏರುವಂತಾದ ಕಾಲಕ್ಕೆ, ಚೆನ್ನಕೇಶವರೇ “ಇಲ್ಲಿರುವುದು ಸುಮ್ಮನೆ” ಎಂಬಂತೆ ನಡೆದು ಬಿಟ್ಟಿರುವುದು ನಿಜಕ್ಕೂ ವಿಷಾದದ ಸಂಗತಿ.
(ಮುಂದುವರಿಯಲಿದೆ)
ಚಂದದ ರಂಗ ಸಮೀಕ್ಷೆ ನನ್ನ ಗೆಳೆಯರೊಬ್ಬರು ಡೆಸ್ಡಿಮೊನಾ ಶಕುಂತಲಾ ತೌಲನಿಕ ಅಧ್ಯಯನ ಮಾಡಿ ಬರೆದ ಲೇಖನದ ನೆನಪು ಮರುಕಳಿಸಿತು