‘ಜಿಟಿಎನ್’ ಎಂದೇ ಕರ್ನಾಟಕದ ಸಾರಸ್ವತ ಲೋಕಕ್ಕೆ ಚಿರಪರಿಚಿತರಾದ ಗುಡ್ಡೆ ಹಿತ್ಲು ತಿಮ್ಮಪ್ಪಯ್ಯ ನಾರಾಯಣರಾವ್ (ಗುತಿನಾ) ಹೆಸರಾಂತ ವಿಜ್ಞಾನ ಲೇಖಕರು.

ಮಡಿಕೇರಿಯ ಜಿ.ಟಿ.ನಾರಾಯಣರಾವ್‌ ಅವರು 1926ರ ಜನವರಿ 30ರಂದು ಜನಿಸಿದರು. ತಂದೆ ಗುಡ್ಡೆಹಿತ್ಲು ತಿಮ್ಮಪ್ಪಯ್ಯನವರು. ತಾಯಿ ವೆಂಕಟಲಕ್ಷ್ಮಿ. ರಾಯರು ಮದ್ರಾಸು ವಿಶ್ವವಿದ್ಯಾಲಯದಿಂದ 1947ರಲ್ಲಿ ಗಣಿತದಲ್ಲಿ ಎಂ.ಎ ಪದವಿ ಪಡೆದರು. ಮಂಗಳೂರು, ಮಡಿಕೇರಿ, ಬೆಂಗಳೂರುಗಳಲ್ಲಿ 1947ರಿಂದ 1969ರವರೆಗೆ ಕಾಲೇಜು ಉಪನ್ಯಾಸಕರಾಗಿದ್ದರು. 1969ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಆಹ್ವಾನ ಮನ್ನಿಸಿ ಕನ್ನಡ ವಿಶ್ವಕೋಶದ ವಿಜ್ಞಾನ ಸಂಪಾದಕರಾಗಿ ಸೇವೆ ಸಲ್ಲಿಸಿ 1986ರಲ್ಲಿ ನಿವೃತ್ತರಾದರು. ತರುವಾಯ ಪೂರ್ಣಕಾಲ ವಿಜ್ಞಾನ ವಾಙ್ಮಯ ರಚನೆಯಲ್ಲಿ ಮಗ್ನರಾದರು. ಶಾಸ್ತ್ರೀಯ ಸಂಗೀತ ಮತ್ತು ನೃತ್ಯಕ್ಕೆ ಸಂಬಂಧಿಸಿದಂತೆಯೂ ಆಳವಾದ ಜ್ಞಾನ ಹೊಂದಿದ್ದ ಜಿಟಿಎನ್‌ ಸಂಗೀತದ ಬಗ್ಗೆ ಕನ್ನಡ ಹಾಗೂ ಇಂಗ್ಲಿಷ್‌ ಎರಡೂ ಭಾಷೆಗಳಲ್ಲಿ ವಿದ್ವತ್ಪೂರ್ಣ ಲೇಖನಗಳನ್ನು ಬರೆದಿದ್ದಾರೆ. ಅವರ ಚಟುವಟಿಕೆಗಳಲ್ಲಿ ಎನ್‍ಸಿಸಿ ಪಾತ್ರವೂ ಮಹತ್ವಪೂರ್ಣವಾದದ್ದು.

ಜಿ.ಟಿ.ಎನ್ ವಿಜ್ಞಾನ ಸಾಹಿತ್ಯರಚನೆ ಆರಂಭಿಸಿದ ದಿನಗಳಲ್ಲಿ ವಿಷಯ ಸಂಗ್ರಹಣೆ ಮತ್ತು ಅದರ ಅಭಿವ್ಯಕ್ತಿಗಳೆರಡೂ ಈಗಿನಷ್ಟು ಸುಲಭವಿರಲಿಲ್ಲ. ಗೂಗಲ್ಲಿನಲ್ಲಿ ಬೇಕಾದ ಪದ ಟೈಪಿಸಿ ಅದಕ್ಕೆ ಸಂಬಂಧಿಸಿದ ನೂರಾರು ಪುಟ ಮಾಹಿತಿಯನ್ನು ಪಡೆಯಬಹುದಾದ ದಿನಗಳು ಅವಾಗಿರಲಿಲ್ಲ. ಗ್ರಂಥಾಲಯಗಳ ಕಪಾಟುಗಳೊಳಗೆ ನುಸುಳಿ ಆಕರ ಗ್ರಂಥಗಳ ಪರಿಶೀಲನೆ, ವಿದ್ವತ್ಪತ್ರಿಕೆಗಳ ಪರಾಮರ್ಶೆಗಳ ಬಳಿಕ ಕನ್ನಡದಲ್ಲಿ ಬರೆಯಲು ಕುಳಿತರೆ ಅಭಿವ್ಯಕ್ತಿಗೆ ಪದಗಳೇ ಇಲ್ಲವಲ್ಲ ಎಂದು ಹಳಹಳಿಸಬೇಕಾದ ದಿನಗಳವು. ತಮ್ಮ ಪೂರ್ವಸೂರಿಗಳಾದ ಬೆಳ್ಳಾವೆ ವೆಂಕಟನಾರಾಯಣಪ್ಪ, ನಂಗಪುರಂ ವೆಂಕಟೇಶ ಅಯ್ಯಂಗಾರ್, ಜಿ. ಹನುಮಂತರಾವ್, ಸಿ. ಎನ್. ಶ್ರೀನಿವಾಸ ಅಯ್ಯಂಗಾರ್, ಆರ್. ಎಲ್.‍ ನರಸಿಂಹಯ್ಯ ಮುಂತಾದವರು ಕಡಿದ ಹಾದಿಯನ್ನು ವಿಸ್ತಾರಗೊಳಿಸುತ್ತಾ ಸವಾಲನ್ನು ಎದುರಿಸಿದರು. ಜಿಟಿಎನ್ ಸೃಷ್ಟಿಸಿದ ‘ವಿಜ್ಞಾನ ಸಾಹಿತ್ಯ’ ಕೇವಲ ಕೌತುಕನ್ನು ನಿರೂಪಿಸುವ ಕೆಲಸಕ್ಕಷ್ಟೇ ಸೀಮಿತವಾಗಿರುವಂತದ್ದಲ್ಲ. ನಿರ್ದಿಷ್ಟ ಪರಿಕಲ್ಪನೆಗಳನ್ನು ವಿವರಿಸಿ ಮುಂದಿನ ಆಳ ಓದಿಗೆ ಒಂದು ಪೀಠಿಕೆಯನ್ನು ಒದಗಿಸುವಂತಹ ಸಾಹಿತ್ಯವದು. ಈ ದೃಷ್ಟಿಯಲ್ಲಿ ನೋಡಿದರೆ ಜಿಟಿಎನ್ ಅವರ ವಿಜ್ಞಾನ ಸಾಹಿತ್ಯವನ್ನು ಕೇವಲ ‘ಜನಪ್ರಿಯ ವಿಜ್ಞಾನ ಸಾಹಿತ್ಯ’ದ ಪರಿಧಿಗೆ ಸೀಮಿತಗೊಳಿಸುವುದು ಸೂಕ್ತವಾಗುವುದಿಲ್ಲ. ಅವರು ಕನ್ನಡದಲ್ಲಿ ವಿಜ್ಞಾನ ವಿಷಯಗಳ ಅಭಿವ್ಯಕ್ತಿಗೊಂದು ನುಡಿಗಟ್ಟನ್ನು ಸೃಷ್ಟಿಸುತ್ತಾ ಹೋದರು. ಜಿಟಿಎನ್ ಅವರು ಬರೆದಿರುವ ಸುಬ್ರಹ್ಮಣ್ಯನ್ ಚಂದ್ರಶೇಖರ್ ಅವರ ಜೀವನ ಚರಿತ್ರೆ ಅಥವಾ ಅವರೇ ಹೇಳಿಕೊಂಡಂತೆ ವೈಜ್ಞಾನಿಕ ಜೀವನ ಚರಿತ್ರೆ ಇದಕ್ಕೊಂದು ಒಳ್ಳೆಯ ಉದಾಹರಣೆ. ಚಂದ್ರಶೇಖರ್ ಅವರ ಸಂಶೋಧನೆಗಳ ಅತಿ ಸಂಕೀರ್ಣ ವಿವರಗಳನ್ನು ಅವರು ಕನ್ನಡದಲ್ಲಿ ಯಶಸ್ವಿಯಾಗಿ ಸಂವಹಿಸಿದ್ದಾರೆ.

ಮೈಸೂರು ವಿಶ್ವವಿದ್ಯಾಲಯದ ವಿಶ್ವಕೋಶದಲ್ಲಿರುವ ಬರೆಹಗಳಲ್ಲಿ ಕಾಣಬರುವ ನಿಖರತೆಯಲ್ಲಿ ಜಿಟಿಎನ್ ಅವರ ಶ್ರಮದ ಕೊಡುಗೆಯ ಪಾಲು ಬಹುದೊಡ್ಡದು. ನಾವಿಂದು ಸಲೀಸಾಗಿ ಬಳಸುವ ಯಂತ್ರಾಂಶ, ತಂತ್ರಾಂಶಗಳಂಥ ಪದಗಳು ಹುಟ್ಟಿಕೊಂಡದ್ದೇ ಈ ವಿಶ್ವಕೋಶದ ಪರಿಣಾಮವಾಗಿ. ಆಗ ಇವುಗಳನ್ನು ಯಾಂತ್ರಿಕಾಂಶ, ತಾಂತ್ರಿಕಾಂಶ ಎಂದು ಬಳಸಲಾಗಿತ್ತು. ಇಂಥ ಅನೇಕ ಉದಾಹರಣೆಗಳನ್ನು ಕೊಡುತ್ತಲೇ ಹೊಗಬಹುದು.

ಜಿಟಿಎನ್ ಅವರ ಬದುಕಿನ ಬಗ್ಗೆ ಬರೆಯುವುದೆಂದರೆ ಅವರ ವಿಜ್ಞಾನ ಸಾಹಿತ್ಯದ ಬಗ್ಗೆಯೇ ಬರೆಯಬೇಕಾಗುತ್ತದೆ. ಅವರೆಡೂ ಅಷ್ಟರ ಮಟ್ಟಿಗೆ ಮಿಳಿತವಾಗಿವೆ. ಸರ್ ಸಿ.ವಿ. ರಾಮನ್ ಅವರನ್ನು ಮೈಸೂರು ವಿಶ್ವವಿದ್ಯಾಲಯದ ವಿದ್ವತ್ಪತ್ರಿಕೆಯಾದ ‘ಪ್ರಬುದ್ಧ ಕರ್ಣಾಟಕ’ದ ಸ್ವರ್ಣ ಸಂಚಿಕೆಗಾಗಿ ಸಂದರ್ಶಿಸಲು ಹೋದಾಗಿನ ಅನುಭವವನ್ನು ಜಿಟಿಎನ್. ಬರೆದಿದ್ದಾರೆ. ಬದುಕಿನ ಬಗ್ಗೆ ಕೇಳಿದ ಪ್ರಶ್ನೆಯೊಂದಕ್ಕೆ ರಾಮನ್ “ಸ್ವಾಮೀ ನನ್ನ ವಿಜ್ಞಾನಜೀವನವೇ ಜೀವನ” ಎಂದಿದ್ದರಂತೆ. ‘ವಿಜ್ಞಾನ ಜೀವನ’ ಎಂದಿರುವಲ್ಲಿ ‘ವಿಜ್ಞಾನ ಸಾಹಿತ್ಯ’ ಎಂದು ಬದಲಾಯಿಸಿಕೊಂಡರೆ ಈ ಮಾತುಗಳು ಜಿಟಿಎನ್ ಅವರ ಬದುಕಿಗೂ ಹೊಂದುತ್ತದೆ.

ಜಿಟಿಎನ್ ವಿಜ್ಞಾನ ಸಾಹಿತ್ಯ ರಚನೆಯಲ್ಲಿ ತೊಡಗಿಕೊಂಡಿದ್ದೆಷ್ಟು ಉತ್ಕಟವಾಗಿತ್ತೋ ಸಂಗೀತ ರಸಾಸ್ವಾದನೆಯಲ್ಲಿದ್ದ ಅವರ ಆಸಕ್ತಿಯೂ ಅಷ್ಟೇ ಉತ್ಕಟವಾಗಿತ್ತು. ಅವರ ವಿಜ್ಞಾನದ ಬರಹಗಳನ್ನು ಓದುವಾಗ ಅವರ ಸಾಹಿತ್ಯಾಸಕ್ತಿಗಳು ಪ್ರತಿಫಲಿಸುತ್ತವೆ. ಬರಹದಲ್ಲಿ ಅಲ್ಲಲ್ಲಿ ಕಾಣಿಸಿಕೊಳ್ಳುವ ಅತ್ರಿಸೂನು ಉವಾಚಗಳು ಅವರೊಳಗಿನ ಕವಿತ್ವದ ಮೇಲೆ ಬೆಳಕು ಹರಿಸುತ್ತವೆ.

ನಾದನಾವೆಯನೇರಿ ಋತಚಿದ್ರಸಾಬ್ಧಿಯಲಿ
ವೇದಪುರುಷನ ತಾಣ ಶೋಧಿಸಲು ತೇಲಿದೆನು
ಮೋದಪ್ರಮೋದಗಳ ನಾಡಿನಿಂ ಜಿಗಿದಂತೆ
ವೇದವೇ ನಾವೆಯಲಿ ಲೀನಿಸಿತು ಅತ್ರಿಸೂನು||

ಕರ್ನಾಟಕ ಸಂಗೀತದ ಬಗ್ಗೆ ಅವರು ತಮ್ಮ ನಿಲುವು, ವಿಮರ್ಶೆಗಳ ಜೊತೆ ಜೊತೆಗೆ, ಹಲವಾರು ಕಲಾವಿದರ ಪರಿಚಯ ಹೊಂದಿರುವ ‘ಶ್ರುತಗಾನ’ ಮತ್ತು ‘ಸಂಗೀತ ರಸನಿಮಿಷಗಳು’ ಎಂಬ ಪುಸ್ತಕಗಳನ್ನೂ ಬರೆದಿದ್ದಾರೆ.

ವಿಶ್ವದ ಕತೆ, ಸೂಪರ್ನೋವಾ, ರಾಮನ್ ಸಂದರ್ಶನ, ಸುಬ್ರಹ್ಮಣ್ಯನ್ ಚಂದ್ರಶೇಖರ್ ಜೀವನ ಚರಿತ್ರೆ, ರಾಮಾನುಜನ್ ಬಾಳಿದರಿಲ್ಲಿ, ವಿಜ್ಞಾನ ಸಪ್ತರ್ಷಿಗಳು, ಐನ್ಸ್ಟೈನ್ ಬಾಳಿದರಿಲ್ಲಿ, ಕೊಪರ್ನಿಕಸ್ ಕ್ರಾಂತಿ, ಜಾತಕ ಮತ್ತು ಭವಿಷ್ಯ, ಎನ್ಸಿಸಿ ದಿನಗಳು, ನೋಡೋಣು ಬಾರಾ ನಕ್ಷತ್ರ – ಖಗೋಳವಿಜ್ಞಾನ ಕುರಿತ ಪುಸ್ತಕ, ಫರ್ಮಾ ಯಕ್ಷಪ್ರಶ್ನೆ, ವೈಜ್ಞಾನಿಕ ಮನೋಧರ್ಮ, ಆಕಾಶದಲ್ಲಿ ಭಾರತ, ಬಾನಬಯಲಾಟ ಗ್ರಹಣ, ‘ಮುಗಿಯದ ಪಯಣ- ಆತ್ಮಕಥೆ’. ದೇವ ಸ್ಮರಣೆ – ಬಾಗಲೋಡಿ ದೇವರಾಯ ಸ್ಮರಣ ಸಂಪುಟ (ಸಂಪಾದನೆ), ಸಂಗೀತ ರಸನಿಮಿಷಗಳು ಮುಂತಾದವು ಜಿಟಿಎನ್ ಅವರ ಪ್ರಮುಖ ಕೃತಿಗಳು.

‘ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ’, ‘ಕನ್ನಡ ಸಾಹಿತ್ಯ ಪರಿಷತ್ತಿನ ಎಚ್.ನರಸಿಂಹಯ್ಯ ಪ್ರಶಸ್ತಿ’, ‘ಕರ್ನಾಟಕ ವಿಶ್ವವಿದ್ಯಾಲಯದ ಮಾಳವಾಡ ಪ್ರಶಸ್ತಿ’, ‘ಕನ್ನಡ ವಿಜ್ಞಾನ ಪರಿಷತ್ತಿನ ಪ್ರಶಸ್ತಿ’ ಮತ್ತು ‘ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ’ ಮುಂತಾದ ಹಲಾವರು ಗೌರವಗಳು ಜಿಟಿಎನ್ ಅವರನ್ನು ಹುಡುಕಿಕೊಂಡು ಬಂದಿದ್ದವು. ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯವು ಅವರಿಗೆ ‘ಗೌರವ ಡಾಕ್ಟರೇಟ್’ ಪ್ರಶಸ್ತಿ ನೀಡಿ ಗೌರವಿಸಿತ್ತು.

ಜಿಟಿಎನ್ ಅವರು 2008ರ ಜೂನ್ 27ರಂದು ಮೈಸೂರಿನಲ್ಲಿ ನಿಧನರಾದರು. ಜಿಟಿಎನ್ ಅವರ ಮೃತದೇಹಕ್ಕೆ ಅಂತ್ಯಕ್ರಿಯೆ ಮಾಡದೆ ಅವರ ಇಚ್ಛೆಯಂತೆ ‘ಜೆಎಸ್ಎಸ್’ ಆಸ್ಪತ್ರೆಗೆ ದಾನ ಮಾಡಲಾಯಿತು.

ಅನುಬಂಧ

ಜಿಟಿ ಎನ್ ಕುರಿತು ಇದೇ ಜಾಲತಾಣದಲ್ಲಿ ಅನ್ಯ ಬರಹಗಳು:

ಜಿಟಿಎನ್ ನನಗೆ ದಕ್ಕಿದ್ದು 
ದೇಹದಾನ – ಅಶೋಕ ವರ್ಧನ
ಜಿಟಿಎನ್ ಕೆಲವು ನೆನಪುಗಳು – ಎವಿ ಗೋವಿಂದ ರಾವ್
ಜಿಟಿಎನ್ ಮುಗಿದ ಪಯಣ – ಟಿ ಆರ್ ಅನಂತರಾಮು
ಮರೆಯಲಾಗದ ಜಿಟಿಎನ್ – ಸಿಎನ್ ರಾಮಚಂದ್ರನ್
ಜಿಟಿಎನ್ಗೊಂದು ನುಡಿ ನಮನ – ಶ್ರೀಕಂಠ ಕುಮಾರ ಸ್ವಾಮಿ 
ಜಿಟಿ ಎನ್ ಆತ್ಮಕಥೆ – ಮುಗಿಯದ ಪಯಣ