ಗುರಿಯಷ್ಟೇ ದಾರಿಯೂ ಮುಖ್ಯ…
ಕಾಲತಪ್ಪಿದ ಮಳೆರಾಯನಿಗೆ ಹೆದರಿ ನಾವಿಬ್ಬರು (ದೇವಕಿ ಸಹಿತ) ಈ ವರ್ಷವೂ ಕಾರು ಹೊರಡಿಸಿದ್ದೆವು. ಅನಿವಾರ್ಯವಾಗಿ ಉರಿಸುವ ಪೆಟ್ರೋಲಿಗೆ ಸ್ವಲ್ಪವಾದರೂ ನ್ಯಾಯ ಸಲ್ಲಿಸಲು, ಕಾರು ತುಂಬುವ ಜವಾಬ್ದಾರಿಯನ್ನು ರಘು ಅವರಿಗೇ ವಹಿಸಿದ್ದೆ. ಹಾಗೆ ದಕ್ಕಿದವರು – ನನಗೆ ಪೂರ್ವ ಪರಿಚಯದ ವಿಲ್ಸನ್ ಕಟೀಲು ಮತ್ತು ಕಳೆದ ಸ್ಮೃತಿ ಹಬ್ಬದಲ್ಲಿ ಕೇವಲ ಮುಖಪರಿಚಯವಾಗಿದ್ದ ರಮ್ಯಾ ಮೂರ್ನಾಡು. ಇಬ್ಬರೂ ಅವರ ಹೆಸರುಗಳೇ ಸೂಚಿಸುವಂತೆ, ಆಯಾ ಊರಿನಿಂದ ಮಂಗಳೂರಿಗೆ ಬಂದು, ನಿಶ್ಚಿತ ವೇಳೆಯಲ್ಲಿ ಕಾರು ಸೇರಿ, ಮಾರ್ಗಕ್ರಮಣಕ್ಕಿಳಿದೆವು.

ನಾನು ಸದಾ ‘ಹೆದ್ದಾರಿ ದರೋಡೆ’ (ಟೋಲ್) ವಿರೋಧೀ. ಅದರೊಡನೆ ಮಾರ್ಗಕ್ರಮಣದಲ್ಲಿ ನಾವೀನ್ಯತೆಗಾಗಿ ತುಸು ದಾರಿ ಬದಲಾವಣೆ ಮಾಡಿಕೊಂಡಿದ್ದೆ. ಮೊದಲು ಮೂಡಬಿದ್ರೆಯಲ್ಲಿ ಕಾಫಿಂಡಿ. ಮುಂದೆ ಕಾರ್ಕಳ, ಮತ್ತೂ ಮುಂದೆ ಹೆಬ್ರಿ ಎಂದೇ ಸಾಗಿದ್ದೆವು. ನಡುವೆ ದಾರಿಯ ಉನ್ನತೀಕರಣದ ಭೀಕರತೆಯಲ್ಲಿ ಭೂಮಿ ಬೋಳಿಯಾಗಿ, ಮಹಾತೊಡೆಗಳನ್ನು ಚೆಲ್ಲಿ ರಕ್ತಸಿಕ್ತೆಯಾಗಿ ಬಿದ್ದದ್ದು ನೋಡಿ ನಮ್ಮ ಕಣ್ಣೇನು ಪೂರ್ಣಮನವೇ ಉರಿದಿತ್ತು. ಹಾಗಾಗಿ ನೇತ್ರ ಶಾಂತಿಗೆಂಬಂತೆ ವರಂಗದಲ್ಲಿ ಐದು ಮಿನಿಟು ವಿರಮಿಸಿದ್ದೆವು. ಅಲ್ಲಿನ ಜೈನ ಬಸದಿ ಮತ್ತು ಮಠದಂಗಳದ ಗಂಧಶಾಲಿಯ ಹಸಿರು ನಮಗೆ ಚೇತೋಹಾರಿ ಸ್ವಾಗತ ಕೋರಿತು. ಆಚಿನ ಸುಮನೋಹರ ತಾವರೆಕೊಳದ ನಡುವಣ ಚತುರ್ಮುಖ ಬಸದಿ, ಅತಿ ಜನಪ್ರಿಯತೆಯ ಅವಲಕ್ಷಣಗಳ ಬಾಧೆಯಿಲ್ಲದೇ ಪ್ರೀತಿಯ ಕಂಪು ಸೂಸಿತು. ಹಿನ್ನೆಲೆಯ ಮಹಾಘನ – ಪಶ್ಚಿಮ ಘಟ್ಟದ ಭಾಗವೇ ಆದ ವಾಲಿಕುಂಜವಂತೂ ದೃಢತೆಯ ಸಂಕೇತವೇ ಆಗಿ ಕಂಗೊಳಿಸಿತು. ಸಂದೇಶ ಹೊತ್ತ ತಂಪುಗಾಳಿ ನಮ್ಮ ಮುಂದಿನ ದಾರಿಗೆ ಶುಭ ಹಾರೈಸಿತ್ತು. ಇನ್ನೇನು ಮೋಡ ಸಂದೋಹ ಆಶೀರ್ವಾದ ಕವಚ ತೊಡಿಸಲು ಬರುತ್ತದೆನ್ನುವಾಗ, ಹೆದರಿ ಮತ್ತೆ ಕಾರು ಸೇರಿ ಮುಂದೋಡಿದೆವು.

ದೂರ ಓಟದವರು ಅಷ್ಟಾಗಿ ಬಯಸದ ಮತ್ತೆ ಇದುವರೆಗೆ ನಾನಂತೂ ಅನುಭವಿಸಿರದ ದಾರಿ ಹೆಬ್ರಿ – ಅಮಾಸೆಬೈಲಿನ ಸುಮಾರು ೨೫ ಕಿಮೀ. ಅದರಲ್ಲಿ ನಾನು ಯೋಜನಾ ಹಂತದಲ್ಲೇ ಕೆಲವು ವೀಕ್ಷಣಾ ತಾಣ ಮತ್ತು ಪುಟ್ಟ ಜಲಪಾತಗಳನ್ನು ಗುರುತು ಹಾಕಿಕೊಂಡಿದ್ದೆ. ದಾರಿ ದಟ್ಟ ಕಾಡಿನೊಳಗೆ ತಣ್ಣಗೆ, ನುಣ್ಣಗೆ, ನುಲಿದಾಡುತ್ತ ನಿಜಕ್ಕೂ ರಂಜಿಸಿತು. ಆದರೆ ಜತೆಗೇ ಜಿಮಿಗುಟ್ಟುವ ಮಳೆ ಸೇರಿ ನಮ್ಮ ಸಮಯಮಿತಿಯೂ ವಿಶೇಷ ಕುಗ್ಗಿತು ಮತ್ತು ಅನ್ಯ ಸುತ್ತಾಟಗಳನ್ನು ನಿರಾಶೆಗೊಳಿಸಿತು. ನಾವು ಎಲ್ಲೂ ನಿಲ್ಲದೇ ಶಂಕರನಾರಾಯಣ, ಸಿದ್ಧಾಪುರ ಮಾರ್ಗವಾಗಿ ಹುಲಿಕಲ್ ಘಾಟಿಯನ್ನೇರಿ, ಬಸ್ ನಿಲ್ದಾಣ ಅಥವಾ ಹೋಟೆಲ್ ಶಬರಿ ಅಂಗಳದಲ್ಲಿ ನಿಂತೆವು.

 

ಕನ್ನಡಿಗರು ಮೂತ್ರ ವಿಸರ್ಜಿಸಬಾರದು!
ಅಲ್ಲೊಂದು ದ್ವಿಭಾಷಾ ತುಕ್ಕು ಹಿಡಿದ ಬೋರ್ಡು ಎದುರಾಯ್ತು “ಮೂತ್ರ ವಿಸರ್ಜಿಸಬಾರದು. Way to toilet”! ನಾವು ಮನೋಭಿತ್ತಿಯಲ್ಲಿ ಅದಕ್ಕೆ “ಇಲ್ಲಿ…” ಸೇರಿಸಿದ್ದಲ್ಲದೆ, ನಮಗೆ ಇಂಗ್ಲಿಷೂ ತಿಳಿದ ಕಾರಣದಿಂದ, ಜಲಗಂಡದಿಂದ ಬಚಾವಾದೆವು. ಮತ್ತೆ ಚಾ ಏರಿಸಿ ಹೊರಡುವಾಗ, ಹೊಟೆಲ್ ಯಜಮಾನರಿಗೆ ಬೋರ್ಡ್ ತಿದ್ದಲು ಸೂಚಿಸಿಯೇ ಬಂದೆವು. ಆದರೂ ನನ್ನ ತಲೆಯೊಳಗೆ ನಗೆ ಚಕ್ರ ತಿರುಗುತ್ತಲೇ ಇತ್ತು. ಯಜಮಾನರೇನೋ ‘ಇಲ್ಲಿ’ ಸೇರಿಸಿಯಾರು. ಆದರೆ ಸ್ಥಳೀಯ ಪೋಕರಿ, ‘ಲ’ ಒತ್ತು ಕೆರೆಸಿ ತೆಗೆದರೇ?! ವಿದ್ಯಾಗಣಪನ ವಾಹನಕ್ಕೆ (ಸಾಕ್ಷರ ಇಲಿಗೆ) ಅವಮಾನವಾಗದೇ? ಅದರ ಮೇಲೆ, ಶನಿ ವಾಹನ – (ಬೀದಿ) ನಾಯಿ, ನಿರಕ್ಷರಕುಕ್ಷಿ, ಎಂದಿನಂತೆ ಕಂಬಕ್ಕೆ ಕಾಲೆತ್ತದಿದ್ದೀತೇ?

 

ಹೋಟೆಲ್ ಶಬರಿಯಲ್ಲಿ ಚಾ ಕುಡಿದು, ನಗರ, ನಿಟ್ಟೂರುಗಳನ್ನು ಮಿಂಚಿನಂತೆ ಹಾದು ತುಮರಿ ಸೇರಿದೆವು. ತನ್ನ ಹಾಲಕೆರೆ ಹೋಟೆಲಿನೆದುರು ಅತಿಥಿಗಳನ್ನು ಪ್ರೀತಿಯಿಂದ ಬರಮಾಡಿಕೊಳ್ಳುತ್ತಿದ್ದ ರಘು ಹಾಲಕೆರೆಯವರ ಸ್ವಾಗತದ ಉಪಚಾರಗಳನ್ನೂ ಮೀರಿ, ನೇರ ಊಟಕ್ಕೇ ಕುಳಿತಾಗ ಗಂಟೆ ಒಂದೂ ಮುಕ್ಕಾಲಾಗಿತ್ತು.

ಶಿಬಿರದ ಶಿಖರೋಪನ್ಯಾಸಗಳು
ಶರಾವತಿ ಹಿನ್ನೀರಿನ ಸೆರೆಯಾಳು ತುಮರಿ. ಈ ದಿನಮಾನಕ್ಕೆ ಸಹಜವೆನ್ನುವಂತೆ ಇಲ್ಲೂ ಪ್ರತಿ ಮೂರರಲ್ಲಿ ಇಬ್ಬರು ಚರವಾಣಿ ದಾಸರೇ. ಆದರೆ ಹಾಗೆ ಇತರರ ಸಂಪರ್ಕದಲ್ಲಿರುವಷ್ಟೂ ಮಂದಿ, ಮಾತಿನ ನಡುನಡುವೆ ದಿಕ್ಕೇಡಿಗಳಂತೆ ಓಡಾಡುತ್ತಾ “ಥತ್ ಇವನ…” ಎಂದು ಬಯ್ಯುವುದು ಮಾತ್ರ ತುಮರಿಯದೇ ವೈಶಿಷ್ಟ್ಯ. ಗಾಬರಿಯಾಗಬೇಡಿ, ಅದಕ್ಕೆ ಕಾರಣ “…ಔಟ್ ಆಫ್ ಕವರೇಜ್”; ಇಲ್ಲಿ ಮಾಮೂಲು! ಇಲ್ಲಿ ಬಿಎಸ್ಸೆನ್ನೆಲ್ ಸಂಪರ್ಕ ಇದ್ದುದರಲ್ಲಿ ಉತ್ತಮವಂತೆ. ಹಾಗಿದ್ದೂ ಎಲ್ಲೆಲ್ಲಿನ ಸಾಹಿತಿ ಕಲಾಕಾರರನ್ನು ಹೊಂದಿಸಿಕೊಂಡು ತನ್ನ ತಂದೆ – ಕೀರ್ತಿಶೇಷ ಹಾಲಕೆರೆ ಮಂಜುನಾಥ ಭಟ್ಟರ, ಸ್ಮೃತಿದಿನವನ್ನು ಸತತ ಹನ್ನೆರಡನೇ ವರ್ಷದಲ್ಲೂ ಯಶಸ್ವಿಯಾಗಿಸಿದವರು ಹಾಲಕೆರೆ ರಾಘವೇಂದ್ರ ಉರುಫ್ ರಘು.

ವಾಸ್ತವದಲ್ಲಿ ತುಮರಿಯ ವಾರ್ಷಿಕ ಸಾಂಸ್ಕೃತಿಕ ಕಲಾಪಗಳು ಹಾಮ ಭಟ್ಟರದೇ ಕನಸು. ಅಲ್ಲಿನ ಸಾಂಸ್ಕೃತಿಕ ಜಾಗೃತಿಗಾಗಿ ಭಟ್ಟರು ತನ್ನ ಸಮಯ, ಶ್ರಮ ಮತ್ತು ಹಣದೊಡನೆ ಊರವರ ಬೆಂಬಲವನ್ನು ಸಂಘಟಿಸಿದ್ದರು. ಹಾಗೆ ಅಭಿರುಚಿ ಬಳಗ ಎಂಬ ಸಾಂಸ್ಕೃತಿಕ ಸಂಸ್ಥೆಯೊಡನೇ ಶಾಂತವೇರಿ ಗೋಪಾಲಗೌಡ ರಂಗಮಂದಿರವನ್ನೂ ಕಟ್ಟಿದ್ದರು. ರಘು ಏನಿದ್ದರೂ ತಂದೆಯ ಜನ್ಮದಿನದ ಸ್ಮರಣೆಯನ್ನಷ್ಟೇ ನೆಪ ಮಾಡಿ, ಪರಂಪರೆಗೆ ಹೊಸ ಅರ್ಥ ತುಂಬುವಂತೆ ಕಲಾಪಗಳನ್ನು ಸಂಯೋಜಿಸುತ್ತಿದ್ದಾರೆ. ಬಂದಷ್ಟೂ ಮಂದಿಗೆ ಉಚಿತ ಊಟ ವಾಸವನ್ನು ತನ್ನದೇ ಹಾಲಕೆರೆ ಹೋಟೆಲಿನಲ್ಲೂ ಸಾಂಸ್ಕೃತಿಕ ಚಟುವಟಿಕೆಗಳನ್ನು ರಂಗ ಮಂದಿರದಲ್ಲೂ ಕೊಡುತ್ತಾರೆ.

ಕಳೆದ ವರ್ಷದಂತೇ (ವಿವರಗಳಿಗೆ ನೋಡಿ : https://athreebook.com/2022/12/10/way-to-tumari/) ಈ ಬಾರಿಯೂ ಮೂರು ದಿನಗಳ ವಿಷಯ ಮತ್ತು ವ್ಯಕ್ತಿಗಳ ಸಂಘಟನೆಗೆ ಅವರಿಗೊದಗಿದ ದೊಡ್ಡ ಸಂಪನ್ಮೂಲ ವ್ಯಕ್ತಿ – ಸುರೇಶ ಕಂಜರ್ಪಣೆ. ಓದಿನ ಯೋಗ್ಯತೆಯಲ್ಲಿ ಒಂದಷ್ಟು ಕಾಲ ಇಂಗ್ಲಿಷ್ ಅಧ್ಯಾಪಕನಾಗಿ ದುಡಿದವರಿವರು. ಆದರೆ ತನ್ನ ತಿಳುವಳಿಕೆ ಹಾಗೂ ಸಾಧನೆಗೆ ವಿದ್ಯಾ ಸಂಸ್ಥೆಗಳ ಕೊಠಡಿ ಸಣ್ಣದಾಯ್ತೆಂದೋ ಸ್ವಯಂ ನಿವೃತ್ತಿ ತೆಗೆದುಕೊಂಡು, ಸಾಹಿತ್ಯದಷ್ಟೇ ವಿಸ್ತೃತವಾಗಿ ಸಾಮಾಜಿಕ ಚಟುವಟಿಕೆಗಳಲ್ಲೂ ಅಪಾರ ದುಡಿಯುತ್ತಾರೆ ಮತ್ತಷ್ಟೇ ಪ್ರಭಾವಿಯಾಗಿ ಬರೆಯುತ್ತಾರೆ. ಭಾಷಣಕ್ಕಿಳಿದರೆ ಇವರು ಕೆಲವೊಮ್ಮೆ ಭಾವಲಹರಿಯಲ್ಲಿ ಕೆಳದನಿಗೆ ಬಂದು ಅಥವಾ ಮೈಕ್ ತಪ್ಪಿ, ನಮ್ಮನ್ನು ತಲಪದಿರುವುದು ಅಕ್ಷಮ್ಯ.

 

ಅಪರಾಹ್ನ ಮೂರೂವರೆಗೆ ನಡೆಯಬೇಕಿದ್ದ ಉದ್ಘಾಟನ ಕಲಾಪ ಇಪ್ಪತ್ತು ಮಿನಿಟು ತಡವಾಗಿ ತೊಡಗಿತ್ತು. ಅಂಥದ್ದರಲ್ಲೂ ಅತಿಥಿಗಳ ಪಟ್ಟಿಯಲ್ಲಿದ್ದ ವಸುಂಧರಾ ಕೆ.ಎಂ ಮತ್ತು ಮರ್ಸಿ ಮಾರ್ಗರೆಟ್, ಮೊದಲೇ ಹೇಳಿದ ತುಮರಿ ಚಕ್ರವ್ಯೂಹ ಬೇಧಿಸಲಾಗದೇ ಅನುಪಸ್ಥಿತರಿದ್ದರು (ಇಬ್ಬರೂ ಶಿಬಿರವನ್ನು ತಡವಾಗಿ ಸೇರಿಕೊಂಡರು). ಪ್ರಾರ್ಥನೆಯ ನೆಪದಲ್ಲಿ ಶ್ರೀಮತಿ ವೀಣಾ ರಘು, ಸುಶ್ರಾವ್ಯವಾಗಿ ಶ್ರೀಗೌರಿಯ ಕವಚವನ್ನು ಸಭೆಗೆ ಆವಾಹಿಸಿದರು. ಮುಖ್ಯ ಅತಿಥಿಯಾಗಿದ್ದ ವಿಷ್ಣುನಾಥ್ – ರಘುವಿನ ತಂಗಿಯ (ಹಾಮ ಕನಕ) ಗಂಡನಾದರೂ (ಭಾವ) ಕೇರಳದ ಕುಂಡರ ಎಂಬಲ್ಲಿನ ಎಮ್ಮೆಲ್ಲೆ. ಅದಕ್ಕೂ ಮುಖ್ಯವಾಗಿ ಬಹು ಜವಾಬ್ದಾರಿಯುತ ಜನಸೇವಕ. ಅಧ್ಯಕ್ಷತೆಯನ್ನು ವಹಿಸಿದವರು ಒಂದು ಲೆಕ್ಕದಲ್ಲಿ ಊರವರೇ ಆದ ನಿವೃತ್ತ ಪ್ರಾಂಶುಪಾಲ – ಜಯಪ್ರಕಾಶ ಮಾವಿನಕುಳಿ. ಊರ ಗಣ್ಯರೇ ಆದ ವೆಂಕಟಗಿರಿ ಭಟ್ ಮತ್ತು ಲೋಕಪಾಲ ಜೈನ್ ಇತರ ಅತಿಥಿ ಗಣ್ಯರು. ಕೆಳಮನೆ ಕೃಷ್ಣಮೂರ್ತಿ (ತುಮರಿಯ ಕಿನ್ನರಮೇಳದ ಕಿಟ್ಟಣ್ಣನೆಂದೇ ಖ್ಯಾತರು) ಹಾಮ ಭಟ್ಟರ ಸಂಕ್ಷಿಪ್ತ ಪರಿಚಯದೊಡನೆ ಸಮರ್ಥ ಸಭಾ ನಿರ್ವಹಣೆ ನಡೆಸಿದರು. ಸಮಯದ ಔಚಿತ್ಯಕ್ಕೆ ಬಹುತೇಕ ಹೊಂದುವಂತೆ ಇದ್ದ ಶುಭಾಶಯಗಳ ಹೊರೆಯಲ್ಲಿ ತುಸು ಹೆಚ್ಚು ಅನ್ನಿಸಿದ್ದಿದ್ದರೆ ಅಧ್ಯಕ್ಷ ಭಾಷಣ ಮಾತ್ರ.

 

ಗಾಂಧಿ, ನೆಹರು
ಮಹಾತ್ಮಾ ಗಾಂಧಿಯನ್ನು ಗೋಡ್ಸೆಗೆ ಅಧೀನವಾಗಿಸುವ, ಜವಾಹರಲಾಲ್ ನೆಹರೂವನ್ನು ತಪ್ಪು ಗೆರೆಯಾಗಿ ಕಾಣಿಸುವ ಮತ್ತು ಭಾರತ ಎಂಬ ಪ್ರಜಾಪ್ರಭುತ್ವ ರಾಷ್ಟ್ರಕ್ಕೆ ‘ಸಂವಿಧಾನ’ದ ಮೂಲಕ ಜಾತ್ಯಾತೀತ ಹಾಗೂ ಸರ್ವ ಸಮಾನತೆಯ ಭದ್ರ ಅಡಿಪಾಯ ನಿರ್ಮಿಸಿದ ಬಿಯಾರ್ ಅಂಬೇಡ್ಕರನ್ನು ನಗಣ್ಯವಾಗಿಸುವ ಭೀಕರ ಆಡಳಿತದಲ್ಲಿ ನಾವಿದ್ದೇವೆ. ಅವನ್ನು ವ್ಯರ್ಥ ವ್ಯಕ್ತಿ ಸಹಸ್ರನಾಮವೋ ಬಯ್ಗುಳಾಷ್ಟಕದಲ್ಲೋ ಕಳೆದುಹಾಕುವುದಲ್ಲ. ಬದಲಿಗೆ ಈ ಶಿಬಿರದಲ್ಲಿ ನಮ್ಮೊಳಗಿನ ಗಾಂಧಿ, ನೆಹರು ಮತ್ತು ಅಂಬೇಡ್ಕರ್ ವಿಚಾರಗಳಿಗೆ ಅಧ್ಯಯನಶೀಲರಿಂದ ಒಪ್ಪ ಕೊಡಿಸುವಂತ ಸಂವಾದ ಸರಣಿಯನ್ನೇ ಹಮ್ಮಿಕೊಂಡಿತ್ತು. ಅದರಲ್ಲಿ ಮೊದಲ ಅವಧಿಯ ಕಲಾಪ…

ಹೆಚ್. ಆರ್ ಸ್ವಾಮಿ ಮತ್ತು ಸುಧೀರ್ ಕುಮಾರ್ ಮುರೊಳ್ಳಿ ತುಂಬಾ ಚೆನ್ನಾಗಿ ನಡೆಸಿಕೊಟ್ಟರು. (ಅದರಲ್ಲಿ ಮೂರನೆಯವರಾಗಬೇಕಿದ್ದ ಸುಬ್ಬು ಹೊಲೆಯಾರ್ ಗೈರು ಹಾಜರಿಗೂ ‘ತುಮರಿ ಪರಿಣಾಮ’ವೇ ಕಾರಣವಿರಬಹುದು) ಮೂಲ ಯೋಜನೆಯಲ್ಲಿ, ಮೂವರೂ ಒಬ್ಬೊಬ್ಬ ಮಹಾತ್ಮರನ್ನು ವಹಿಸಿಕೊಂಡು, ತಮ್ಮ ಅನುಭವಗಳನ್ನು ವಿಸ್ತರಿಸುವುದಿತ್ತು. ಆದರೆ ಒಬ್ಬರ ಗೈರುಹಾಜರಿಯನ್ನು ನೆಪ ಮಾಡಿ, ಶಾಣ್ಯಾ ಸಂಯೋಜಕ ಸುರೇಶರು ವಿದ್ವಾಂಸರಿಬ್ಬರನ್ನೂ ಅನೌಪಚಾರಿಕತೆಗೆ ಎಳೆದರು. ನನ್ನ ಅಜ್ಞಾನದಿಂದ ಅದುವರೆಗೆ ನನಗೆ ಅಪರಿಚಿತರಾಗುಳಿದಿದ್ದ ಮಹಾತ್ಮ – ಹೆಚ್. ಆರ್. ಸ್ವಾಮಿಯವರನ್ನು, ನಿವೃತ್ತ ಪ್ರಾಂಶುಪಾಲ ಎಂದರೆ ಕೇವಲ ಹೊಟ್ಟೆಪಾಡಿನ ಮಾತಾದೀತು. ಹುಟ್ಟಿನ ಆಕಸ್ಮಿಕದಲ್ಲಿ ಹಿಂದುಳಿದ ಸಮುದಾಯವೊಂದರ ಸದಸ್ಯನಾದರೂ, ಪ್ರತಿಪಾದಿಸಿದ ವಿಚಾರ ಮತ್ತು ಸಮಾಜಕ್ಕೆ ತೆತ್ತುಕೊಂಡ ಪರಿಯಲ್ಲಿ ಮೌಲಿಕ ಶಿಖರವನ್ನೇ ಕಂಡು ನಮಗೂ ಉಣಿಸಿದರು – ಹೆಚ್. ಆರ್. ಸ್ವಾಮಿ. ಕಳೆದ ವರ್ಷ ಹೀಗೇ ಹಾಮ ಭಟ್ಟ ಸ್ಮೃತಿ ಕಲಾಪ ಮುಗಿಸಿ ಮರಳುವ ದಾರಿಯಲ್ಲಿ ತೀರಾ ಆಕಸ್ಮಿಕವಾಗಿ ನನ್ನ ಪರಿಚಿತವಲಯಕ್ಕೆ ಸಿಕ್ಕ ಸುಧೀರ್ ಕುಮಾರ್ ಮುರೊಳ್ಳಿ, ಕೊಪ್ಪ ವಲಯದ ಓರ್ವ ಉದ್ಯಮಿ, ರಾಜಕಾರಣಿ ಎಂದಷ್ಟೇ ತಿಳಿದುಕೊಂಡಿದ್ದೆ (ನನ್ನ ಅಜ್ಞಾನ). ಆದರೆ ಇಬ್ಬರೂ ಎಂಥಾ ಘನ ಘಟಗಳೆಂದು ಹಾಮ ಭಟ್ಟ ಸ್ಮೃತಿ ಕಲಾಪ ನಮಗೆಲ್ಲರಿಗೂ ಮನವರಿಕೆ ಮಾಡಿತ್ತು. ಕ್ಷಮಿಸಿ, ಅವರ ಭಾವಗಳನ್ನಷ್ಟೇ ನಾನು ಸ್ವಾಂಗೀಕರಿಸಿಕೊಂಡೆ. ಹಾಗೆಂದು ನನ್ನದೇ ಮಾತುಗಳಲ್ಲಿ ಹೇಳಲು ನಾನು ಅಸಮರ್ಥ.

 

ದಿನದ ಕೊನೆಯ ಕಲಾ ಪ್ರಸ್ತುತಿ – ನಿರ್ದಿಗಂತ ಕಲಾಕೂಟದ ಹೆಸರಿನಲ್ಲಿ ಪ್ರಕಾಶ್ ರಾಜ್/ರೈ ನಿರ್ಮಿಸಿದ, ಶ್ರೀಪಾದ ಭಟ್ಟರು ಸಂಯೋಜಿಸಿ, ನಿರ್ದೇಶಿಸಿದ ನಾಟಕ – ಗಾಯಗಳು. ಇದನ್ನು ಎರಡು ದಿನಗಳ ಹಿಂದಷ್ಟೇ ಮಂಗಳೂರಿನಲ್ಲಿ ನಾನು ನೋಡಿ ಟಿಪ್ಪಣಿಸಿದ್ದ (೨೮-೯-೨೦೨೩) ಮಾತುಗಳನ್ನೇ….

ಮಾಯದ ಗಾಯಗಳು ಮಾಸಲಿ
ಗಾಯಗಳು – ನಾಟಕ, ಶ್ರೀಪಾದ ಭಟ್ಟರ ನಿರ್ದೇಶನದ ಒಂದು ಅದ್ಭುತ ಪ್ರಸ್ತುತಿ. ಪೌರಾಣಿಕ, ಐತಿಹಾಸಿಕ, ವಾರ್ತಮಾನಿಕ ಕಥನಗಳಿಂದ ಹಿಂಸೆ ಕೇಂದ್ರಿತವಾದ ತುಣುಕುಗಳನ್ನಷ್ಟೇ ಹೆಕ್ಕಿದ್ದಾರೆ ಶ್ರೀಪಾದ ಭಟ್ಟರು. ಆ ತುಣುಕುಗಳಿಗಾಗಿ ಅವರು ಸಿದ್ಧ ನಾಟಕ (ಕುವೆಂಪು). ಕವನ (ಜಯಂತ ಕಾಯ್ಕಿಣಿ….), ಕಾದಂಬರಿ (ಹನೂರು) ಮುಂತಾದವನ್ನು ತಡಕಿದ್ದಾರೆ ಮತ್ತು ಅವುಗಳನ್ನು ಒಂದು ಮೈಗೆ ಬೆಸೆಯುವಲ್ಲಿ ಸುಧಾ ಆಡುಕಳರೂ ಸೇರಿದ್ದಾರೆ ಎಂದೂ ಕೇಳಿದ್ದೇನೆ (ಕ್ಷಮಿಸಿ, ವಿವರಣಾತ್ಮಕ ಕರಪತ್ರ ನನಗೆ ಸಿಕ್ಕಿಲ್ಲ. ಹಾಗೇ ಅನ್ವಯಾನುಸಾರ ಪೂರ್ಣ ಪತ್ತೆ ಮಾಡುವ ಶಕ್ತಿಯೂ ನನಗಿಲ್ಲ). ಪರಿಣಾಮದಲ್ಲಿ ರಾಜ್ಯ, ಕೋಶ, ಧರ್ಮ, ಬಂಧು ಎಂಬಿತ್ಯಾದಿ ವಿಚಾರಗಳನ್ನು ಮೀರಿ ಉಳಿದದ್ದು ಗಾಯಗಳು ಮಾತ್ರ. ಕಾಲ ಸಂದಂತೆ ದೈಹಿಕ ಗಾಯಗಳು ಮಾಸಿದರೂ ತೋರ್ಗಾಣ್ಕೆಯ ವೈಚಾರಿಕತೆಯನ್ನು ಮೀರಿ ಯುಗಾಂತರಗಳಿಗೆ ಉಳಿದು ಬೆಳೆಯುವ ಮಾನಸಿಕ ಘಾಸಿಯನ್ನು ಈ ರಂಗ ಪ್ರಸ್ತುತಿ ತುಂಬಾ ಶಕ್ತಿಯುತವಾಗಿ ತೋರಿಸಿದೆ. ಪ್ರದರ್ಶನದ ಯಶಸ್ಸಿಗೆ ಬೆಳಕು, ಧ್ವನಿ ವೈಭವ, ಗಂಭೀರವಾದ (ಕಾಡುವ) ರಾಗ ಸಹಿತದ ಹಿನ್ನೆಲೆ ಗಾಯನ ಮತ್ತು ಸರಳವಾದರೂ ಕೊರತೆ ಮೂಡಿಸದ ರಂಗ ಪರಿಕರಗಳು ಸಮರ್ಥವಾಗಿ ಮೇಳೈಸಿದ್ದವು. ಎಲ್ಲಕ್ಕೂ ಪೂರ್ಣ ಜೀವ ತುಂಬಿದ ನಟವೃಂದ ಇದೊಂದು ಸಮಗ್ರ ಪ್ರದರ್ಶನ ಎಂದೇ ಸಾರಿತು. ಅಷ್ಟಾಗಿಯೂ ಪ್ರೇಕ್ಷಕರು ಭಾವೋದ್ವೇಗದಲ್ಲಿ ಮುಳುಗಿ ಹೋಗದಂತೆ ಉಳಿಸಿದ್ದು ನಡುನಡುವೆ ಮಿಂಚಿದ ನಗೆಚಾಟಿಯಿಂದ ಎನ್ನುವುದನ್ನೂ ಮರೆಯಲಾಗದು. ಸಣ್ಣ ಉದಾಹರಣೆ, ಪ್ರದರ್ಶನದ ಅಂಗವಾಗಿ ತಲೆಬುರುಡೆ ಹಿಡಿದ ಹ್ಯಾಮ್ಲೆಟನದೇ ಭಂಗಿ ಮತ್ತು ಮಾತೂ ಬಂದಿತ್ತು. (ಅದೆಷ್ಟು ಸವಕಲೆನಿಸಿದರೂ) ವರ್ತಮಾನದ ಧರ್ಮೋರಾಜಕೀಯಕ್ಕೆ ಸಮೀಕರಿಸಿಕೊಂಡ ನಾವು ಮನದಲ್ಲಿ ಪೂರ್ಣ ಅನುಮೋದಿಸುವವರೇ ಇದ್ದೆವು. ಆದರೆ ಉಳಿಸಿದ್ದು ನಟನಾ ಕೌಶಲ್ಯ; ಬಿಗುಮೊಗದ ಮೇಲೆ ನಗೆಮಿಂಚು ತುಳುಕಿತ್ತು.

ಹಳೆ ಗಾಯಗಳು ಮಾಸಲಿ, ಇನ್ನಾದರೂ ಗಾಯಗಳಾಗದ ಎಚ್ಚರ ಉಳಿಯಲಿ. ಅದ್ಭುತ ಪ್ರದರ್ಶನಕ್ಕೆ ಕಾರಣರಾದ ಪ್ರಕಾಶ್ ರಾಜ್/ರೈ ಬಳಗ – ನಿರ್ದಿಗಂತಕ್ಕೂ ಸೂತ್ರಧಾರರಾದ ಶ್ರೀಪಾದ ಭಟ್ಟರಿಗೂ ಅನಂತಾನಂತ ವಂದನೆಗಳು.

ದಿನಪೂರ್ತಿ ನಡೆದ ಶಿಬಿರ ಕಲಾಪದಲ್ಲಿ…
ಮಳೆ ವಿರಳವಾಯ್ತು, ಶನಿ-ಆದಿತ್ಯವಾರಗಳ ರಜಕ್ಕೆ ಗಾಂಧಿ ಜಯಂತಿಯ ರಜೆ ಸೇರಿತೆಂದು ಸಿಗಂದೂರೇಶ್ವರಿ ಪ್ರವಾಸೀ ಪ್ರವಾಹಪೀಡಿತಳಾಗಿದ್ದಳು. ಆದರೆ ಅದಕ್ಕೆ ನಲುಗಿದ್ದು ನಮ್ಮ ಹಾಮ ಭಟ್ಟ ಸ್ಮೃತಿ ಶಿಬಿರ. ಮೊದಲ ದಿನವಾದರೋ ಸಂಜೆ ಉದ್ಘಾಟನೆ ಮತ್ತೆ ಔಪಚಾರಿಕ ಕಲಾಪ ಎಂದೆಲ್ಲ ಜಾರಿಕೊಂಡ ಹಲವರು ಆದಿತ್ಯವಾರ ಸೇರಿಕೊಳ್ಳಲು ಹೊರಟಂತಿತ್ತು. ಅವರಲ್ಲಿ ಮುಖ್ಯವಾಗಿ ದಿನದ ಮೊದಲ ಕಲಾಪದ ಭಾಗವೇ ಆದ ಕೆವಿ ಅಕ್ಷರ ಕೂಡಾ ಇದ್ದರು. ಹಾಗೆ ಶರಾವತಿ ಸಾಗರದ ಎದುರು ದಂಡೆಯಲ್ಲಿ ಸಿಕ್ಕಿಬಿದ್ದವರ ಕರೆ ಬರುತ್ತಲೇ ಇತ್ತು. ಇಂಥಾ ಸಂದರ್ಭಗಳಲ್ಲೆಲ್ಲಾ…

 

ಹತ್ತೆಂಟು ಪ್ರಯತ್ನಗಳಲ್ಲಿ, ಸಂಭಾಷಣೆಯ ತುಂಡುಗಳನ್ನು ಬೆಸೆದು, ಪ್ರತಿ ಸಲವೂ ಇಲ್ಲಿಂದ ವಾಹನ ಕಳಿಸಿ (ತುಮರಿಯಿಂದ ಕಳಸವಳ್ಳಿ ಹೊಳೆಬಾಗಿಲು/ ಕಡವಿನ ಕಟ್ಟೆಗೆ ಐದು ಕಿಮೀ ದೂರವಿದೆ) ಕರೆಸಿಕೊಳ್ಳಬೇಕಾದ ಅನಿವಾರ್ಯತೆ ಸಂಕಟಕ ರಘುವಿನದ್ದು! ಆಗೆಲ್ಲ ಸೋರಿಹೋಗುತ್ತಿದ್ದ ಸಮಯಕ್ಕೆ ಮುಲಾಮು ಹಚ್ಚಿದವರಲ್ಲಿ ಎದ್ದು ಕಂಡವರು ಬಿಟ್ಟೀ ಚಾಲಕನಾಗಿ ಒದಗಿದವರು ಪುತ್ತೂರಿನಿಂದ ಸಾಹಿತ್ಯಾಸಕ್ತಿಗೆ ಬಂದ ಗೆಳೆಯ ಪ್ಯಾಟ್ರಿಕ್ ಸಿಪ್ರಿಯಾನ್ ಮಸ್ಕರೇಞಸ್. ಉಳಿದಂತೆ ಕರೋಕೇ ಬಲದ ಗಾನಾಸುಮ ಹಾಗೂ ತಂಬೂರಿ ಮೀಟುವ ನಾದಮಣಿ ಮೈಕ್ ಹಿಡಿದೂ ಕೊರತೆ ನೀಗುವ ಪ್ರಯತ್ನ ಮಾಡಿದರು. ಇನ್ನು ಬಹುಮಂದಿ ಕವಿಸಮಯಕ್ಕೆಂದೇ ಬಂದ ಯುವ ಉತ್ಸಾಹಿಗಳು. ಅವರು ಪರಸ್ಪರ ಪರಿಚಯ ವಿಸ್ತರಣೆಯಲ್ಲಿ ಸಮಯದ ಪರಿವೆಯಿಲ್ಲದೇ ಕಚಪಿಚ ನಡೆಸಿ, ಸ್ವಂತೀ ಮತ್ತು ವಿವಿಧ ಗುಂಪೀ ಪಟಗಾರಿಕೆಗಳಲ್ಲಿ ಮೆರೆಯುತ್ತಲೇ ಇದ್ದರು. ಅದನ್ನೇ ಸುರೇಶ್ ಮಾತಿನಲ್ಲಿ ಸಂಗ್ರಹಿಸುವುದಾದರೆ, ಹಲ್ಲುಜ್ಜುವಲ್ಲಿಂದ ತೊಡಗಿ, ಹೋಟೆಲಿನ ಬಾಲ್ಕನಿ, ಅಂಗಳ, ಊಟದ ಮನೆಗಳಿಗೆಲ್ಲ ವ್ಯಾಪಿಸಿ, ತುಮರಿಯ ಪುಟ್ಟ ಪೇಟೆಯ ದಾರಿಯುದ್ದಕ್ಕೆ ಹರಿದು ತಡರಾತ್ರಿಯಲ್ಲಿ ಮರಳಿ ಹಾಸಿಗೆ ಸೇರುವವರೆಗೂ ನಡೆದಿತ್ತು. ಟೀ, ತಿಂಡಿ, ಊಟಗಳ ಜತೆಗೂ ಹೊರಗೆ ಮಳೆ ಸಿಕ್ಕರೆ ದಾರಿ ಪಕ್ಕದ ಅಂಗಡಿಯಲ್ಲೂ ಮೀನೂಟದ ಇನ್ನೊಂದೇ ಹೋಟೆಲಿನಲ್ಲೂ ರುಚಿಕಟ್ಟಾಗಿ ಸೇರಿಕೊಂಡಿತ್ತು.

ಎರಡನೇ ದಿನದ ಮೊದಲ ವಿಷಯ ಮತ್ತೆ ಗಾಂಧಿ, ನೆಹರು, ಅಂಬೇಡ್ಕರೇ ಇತ್ತು. ಇಂದಿನ ರಾಜಕಾರಣ, ಇತಿಹಾಸದ ತೀವ್ರ ಅವಹೇಳನ ಮತ್ತದರಲ್ಲೂ ಭಾರೀ ಸುಳ್ಳನ್ನೇ ತಮ್ಮ ನೂಕು ಶಕ್ತಿಯಂತೆ ಬಳಸುತ್ತಿದ್ದಾರೆ. ಅದಕ್ಕೆ ಪ್ರತಿರೋಧವಾಗಿ ಈ ಜಾಗೃತಿಯ ಕಲಾಪಗಳು ಅವಶ್ಯವೇ ಇರಬಹುದು. ಅದಕ್ಕೆಂದೇ ಬಂದಿದ್ದ ಸವಿತಾ ನಾಗಭೂಷಣ, ಮುಕುಂದ ರಾಜ್ ಮತ್ತು ಕೆವಿ ಅಕ್ಷರ ಚೆನ್ನಾದ ಪ್ರಸ್ತುತಿಗಳನ್ನೇ ಕೊಟ್ಟರು.

 

ಮುಂದೆ (ಊಟದ ಬಿಡುವು ಕಳೆದೂ) ಸಂಜೆಯವರೆಗೂ ಕವಿಗೋಷ್ಠಿ. ನಾನು ಮುದ್ದಣನ ಮನೋರಮೆಯ “ಪದ್ಯಂ ವಧ್ಯಂ”ನ್ನು ಅನುಮೋದಿಸುವ ಪೈಕಿ. ಹಾಗಾಗಿ ಇದ್ದುದರಲ್ಲಿ ಸುರೇಶ್ ಸೂಚಿಸಿದಂತೆ, ಪ್ರತಿಯೊಬ್ಬ ಕವಿ ತಮ್ಮ ‘ಪದ್ಯ ಹುಟ್ಟಿದ ಹಿನ್ನೆಲೆ’ ತಿಳಿಸುವಂತಾದದ್ದು ನನಗೆ ತುಸು ಆಕರ್ಷಣೆಯನ್ನು ಕೊಟ್ಟಿತ್ತು. ಆದರೂ ಕೆಲವೊಮ್ಮೆ ಕವಿಗಳು ಕೊನೆಯಲ್ಲಿ ತಮ್ಮ ಕವನಗಳ ಭಾವಾರ್ಥವನ್ನೂ ವಿಸ್ತರಿಸಿದ್ದರೆ ಅನುಕೂಲವಾಗುತ್ತಿತ್ತು ಎಂದನ್ನಿಸಿದ್ದು ಸುಳ್ಳಲ್ಲ.

 

ದಿನದ ಕೊನೆಯ ಕಲಾಪ – ಭ್ರಮರಿ ಶಿವಪ್ರಕಾಶ ಅವರ ಏಕವ್ಯಕ್ತಿ ಪ್ರಸ್ತುತಿ – ಕುಮಾರವ್ಯಾಸ ನೃತ್ಯ ಭಾರತ. ಹನ್ನೆರಡು ವರ್ಷಗಳ ಹಿಂದೆಯೇ ಈ ಪ್ರಯೋಗದ ಪೂರ್ಣ ಪ್ರಸ್ತುತಿಯನ್ನು ಮಂಗಳೂರಿನಲ್ಲಿ, ನೋಡುವ ಸದವಕಾಶ ನನಗೆ ಒದಗಿತ್ತು. ಅಂದು, ಕೌರವ ಪಾಂಡವರ ದಾಯಾದಿ ದ್ವೇಷದ ಮೊಳಕೆ, ಹಿಡಿಂಬೆಯ ಕಾಮ, ಕೀಚಕನ ಪ್ರಣಯ ಭಿಕ್ಷೆ, ಕೃಷ್ಣ ಸಂಧಾನದ ವಿಶ್ವರೂಪ ಮತ್ತು ಯುದ್ಧಾನಂತರದ ಗಾಂಧಾರಿ ವಿಲಾಪ ಎಂದು ಐದು ಭಾಗಗಳಲ್ಲಿ ಪ್ರಯೋಗವಾಗಿತ್ತು. ತುಮರಿಯಲ್ಲಿ ಎರಡು ತುಣುಕನ್ನು ಬಿಟ್ಟಿದ್ದರು (ದ್ವೇಷದ ಮೊಳಕೆ ಮತ್ತು ಕೀಚಕನ ಭಿಕ್ಷೆ). ಮತ್ತು ಹಿಂದಿದ್ದ ಸಜೀವ ಹಿಮ್ಮೇಳ ಇಲ್ಲಿ ಕೇವಲ ಧ್ವನಿಮುದ್ರಣವಾಗಿತ್ತು. (ನನಗೆ ತಿಳಿದಂತೆ) ಅಂದು ಗಮಕ ಮತ್ತು ಭಾವಾರ್ಥಗಳಲ್ಲಿ ಜೀವ ತುಂಬಿದ ಚಂದ್ರಶೇಖರ ಕೆದಿಲಾಯರು ಮತ್ತು ಕಲಾಪಕ್ಕೆ ಸ್ಪೂರ್ತಿ ಹಾಗೂ ಭರತವಾಕ್ಯಗಳ ನಿರೂಪಣೆಗೆ ಜೀವ ತುಂಬಿದ, ಭ್ರಮರಿಯವರ ತಂದೆ – ಉದ್ಯಾವರ ಮಾಧವಾಚಾರ್ಯರು ಇಂದು ಕೀರ್ತಿ ಶೇಷರೇ ಆಗಿರುವುದು ವಿಷಾದದ ಸಂಗತಿ.

 

ಶಾಂತವೇರಿ ಗೋಪಾಲ ಗೌಡ ರಂಗಮಂದಿರದ ನಿಸ್ತೇಜ ಪರಿಸರದಲ್ಲೂ ಭ್ರಮರಿಯವರ ಚೈತನ್ಯಪೂರ್ಣ ನಾಟ್ಯ ಪ್ರಸ್ತುತಿ, ಹಿಮ್ಮೇಳದ ಉತ್ತಮ ಗುಣಮಟ್ಟ, ಹೃಸ್ವಗೊಂಡ ಪ್ರದರ್ಶನಕ್ಕೆ ಕೊರತೆ ಬಾರದ ಹೊಂದಾಣಿಕೆ ಮತ್ತು ನಿರ್ವಹಣೆಗಳೆಲ್ಲ (ಬಹುಶಃ ಭ್ರಮರಿಯವರ ಮಗನೇ) ಬಹಳ ಚೊಕ್ಕವಿದ್ದು, ಪ್ರದರ್ಶನ ಕಳೆಗಟ್ಟಿತ್ತು. ಆದರೆ ವೈಯಕ್ತಿಕವಾಗಿ ನನಗೆ ಹನ್ನೆರಡು ವರ್ಷಗಳ ಹಿಂದಿನ ಅನಿಸಿಕೆಯನ್ನು ಮಾತ್ರ ಪರಿಷ್ಕರಿಸಿಕೊಳ್ಳುವ ಅವಕಾಶ ದಕ್ಕಲೇ ಇಲ್ಲ, ಕ್ಷಮಿಸಿ. (ನೋಡಿ: https://athreebook.com/…/01/kumaravyasa-nruthya-bharatha/)

ಅನಿಸಿಕೆಗಳ ಹುಸಿಯಲ್ಲಿ ಬಡವಾದ ಅನುಭವ
ಮೊದಲ ದಿನ ಬಂದದ್ದೇ ತಿಳಿಯಲಿಲ್ಲ ಎನ್ನುವಾಗ ನಾಳೆ (ಮೂರನೇ ದಿನ) ಹೊರಡಬೇಕಲ್ಲಾ ಎನ್ನುವ ಕಳವಳ ಹಾಲಕೇರಿ ಹೋಟೆಲಿನ ಓಣಿ, ಕೋಣೆಗಳಲ್ಲಿ ಸಾಂಕ್ರಾಮಿಕವಾಗಿತ್ತು. ಬಹುಶಃ ನಾವಿಬ್ಬರೇ ತಣ್ಣಗೆ ಕೋಣೆ ಸೇರಿ ನಿದ್ರೆಯ ಠಕ್ಕು ಮಾಡಿದವರಿರಬೇಕು. ಬಹುಮಂದಿ ಹೋಟೆಲಿನದೇ ದೊಡ್ಡ ಕೋಣೆ, ಬಾಲ್ಕನಿ ಎಂದು ಸೇರಿ ಅನುಭಾವ, ಜನಪದ, ಭಾವಗೀತೆ ಎಂದೆಲ್ಲ ವ್ಯಾಪಕವಾಗಿ ರಾಗ ತೆಗೆದಿದ್ದರು. ನಾದ, ಗಾನಸುಮಾ, ಪ್ರವರ, ಸಿಪ್ರಿಯಾನ್, ಗಿರಿಧರ್ ಮೊದಲಾದವರು ಕಿಡಿ ಹತ್ತಿಸಿದರೂ ಸಂಗೀತ ಸಂಭ್ರಮ ಸಮೂಹದ್ದೇ ಆಗಿತ್ತು. ಅವರಿಗೆ ಇಂದು ನಾಳೆಯಾದದ್ದು ತಿಳಿಯುವಾಗ ಗಂಟೆ ಎರಡು ಕಳೆದಿತ್ತಂತೆ. ಮತ್ತೂ ಕೆಲವರು ಬಾಲ್ಕನಿ, ಮೆಟ್ಟಿಲ ಸಾಲುಗಳಲ್ಲಿ ಮುಂದುವರಿಸಿದ ಲೋಕಾಭಿರಾಮವನ್ನು ನಿಲ್ಲಿಸಲು ಉದಯರವಿಯೇ ಹಕ್ಕಿ ದೂತರನ್ನಟ್ಟಿದ್ದನಂತೆ! ಸಹಜವಾಗಿ ….

ಕೊನೆಯ ದಿನದ ಆರಂಭವೇ ಜೂಗರಿಸಿತ್ತು. ಎಲ್ಲರೂ ಸ್ನಾನ, ಕಾಫಿಂಡಿಗಳನ್ನು ಅರೆಮನಸ್ಸಿನಲ್ಲಿ ನಡೆಸುತ್ತ, ತಂತಮ್ಮ ನೆಲೆಗಳಿಗೆ ಮರಳುವ ಲೆಕ್ಕಾಚಾರಕ್ಕಿಳಿದಿದ್ದರು. ದಿನದ ಕಲಾಪಪಟ್ಟಿಯಲ್ಲಿ ಮೊದಲಿಗಿದ್ದ (೯.೩೦ಕ್ಕೆ) ಗಾಂಧಿಸ್ಮೃತಿಯನ್ನು ಹಿಂದಿಕ್ಕಿ, ಅಪರಾಹ್ನ ನಡೆಯಬೇಕಿದ್ದ ‘ಚಿಟ್ಟೆ’ ಸಭಾಭವನದಲ್ಲಿ ಸಜ್ಜಾಗುತ್ತಿತ್ತು. ಆ ಲೆಕ್ಕದಲ್ಲಿ, ಊಟಕ್ಕೂ ಮೊದಲೇ ನಡೆಯ ಬೇಕಿದ್ದ ನನ್ನ ‘ಏಕವ್ಯಕ್ತಿ ಪ್ರಲಾಪ’ವನ್ನು ಅನಿರ್ದಿಷ್ಟವಾಗಿ ಮುಂದೂಡಿದ್ದರು. ನಾನು ತೀವ್ರ ಅಸಹನೆಯೊಡನೆ ಮಧ್ಯಾಹ್ನದ ಊಟ ಮುಗಿದದ್ದೇ ಮರಳುವ ಯೋಚನೆ ಮಾಡಿಕೊಂಡೇ ವಿಚಾರಿಸಿದೆ. ಅದೃಷ್ಟಕ್ಕೆ, ಚಿಟ್ಟೆಯ ಬೆನ್ನಿಗೇ ನನ್ನನ್ನು ತಗುಲಿಸಿದರು.

 

ಬೇಲೂರು ರಘುನಂದನರ ರಚನೆ, ಕೃಷ್ಣಮೂರ್ತಿ ಕವತ್ತಾರು ನಿರ್ದೇಶನ ಮತ್ತು ಗೋಕುಲ ಸಹೃದಯ ಎಂಬ ಬಾಲಕನ ಏಕವ್ಯಕ್ತಿ ರಂಗಪ್ರಸ್ತುತಿ – ಚಿಟ್ಟೆ. ಮಕ್ಕಳ ನಾಟಕವೆಂಬ ವಿಶೇಷಣ ಮತ್ತು ಶಾಲೆಗಳಿಗೆ ಗಾಂಧೀ ಜಯಂತಿಯ ಬಿಡುವು ಲೆಕ್ಕ ಹಾಕಿ, ರಘು ಊರ ಶಾಲೆಗಳಿಗೂ ಭಾಗಿಯಾಗಲು ಕರೆ ಕಳಿಸಿದ್ದರು. ಹಾಗೆ ವಿಲಂಬಿತ ಗತಿಯಲ್ಲಿ ಪ್ರಾಥಮಿಕದಿಂದ ಪ್ರೌಢಶಾಲೆಯವರೆಗಿನ ನೂರಕ್ಕೂ ಮಿಕ್ಕು ಮಕ್ಕಳು ಹರಿದುಬಂದಿದ್ದರು. ಅವರು ಸೇರುತ್ತಿದ್ದಂತೆ ಅಸಂಗತ ಗದ್ದಲವೇಳದಂತೆ, ಸಮೂಹ ಧ್ವನಿ ಕಸರತ್ತಿಗಿಳಿಸಿದ ನಾದ ಮಣಿನಾಲ್ಕೂರರ ಚಾಲಾಕು ನಿಜಕ್ಕೂ ಅರ್ಥಪೂರ್ಣವಾಗಿತ್ತು. ‘ಚಿಟ್ಟೆ’ ನಮ್ಮ ನಿರೀಕ್ಷೆಯಂತೆ ಪರಿಸರದ್ದೋ ಬಾಲ ಹೃದಯಸ್ಪಂದನದ್ದೋ ಕತೆಯಾಗಿರಲಿಲ್ಲ. ಬಾಲನೋರ್ವನ ಉತ್ಪ್ರೇಕ್ಷಿತ ಓಡಾಟಗಳಲ್ಲಿ ‘ಹಸಿವಿಗಾಗಿ ಕದ್ದರೆ ಪಾಪವಿಲ್ಲ’ ಎಂಬ ನೀತಿಪಾಠವಷ್ಟೇ ಆಯ್ತು.

ನಾನು ವಾಗ್ಮಿಯಲ್ಲ, ಭಾಷಣಪ್ರಿಯ ಮೊದಲೇ ಅಲ್ಲ. ಆದರೆ ಎರಡು ತಿಂಗಳ ಮೊದಲೇ ರಘು ಪೀಠಿಕೆ ಹಾಕಿ, ಮತ್ತೆ ಕಾಲಕಾಲಕ್ಕೆ ಒತ್ತಾಯ ಹೇರಿದಾಗ ಹೀಗೊಂದು ಭಾವಲಹರಿ ಬಂತು. ಎಲ್ಲೆಲ್ಲಿನ ಲೇಖಕರು, ಪ್ರಕಾಶಕರು ಒಟ್ಟಾಗಿ ಸಾಹಿತ್ಯ ಕಲಾಪಗಳಲ್ಲೇ ತೊಡಗುವ ವಾತಾವರಣಕ್ಕೆ ನನ್ನ ಅನುಭವ ವಿಸ್ತರಣ ಅವಶ್ಯ. ಹಾಗಾಗಿ ಎರಡು ವಾರಗಳ ಕಾಲ ಅಳೆದೂ ಸುರಿದೂ ಗಟ್ಟಿ ಪ್ರಬಂಧವನ್ನೇ ಸಿದ್ಧಪಡಿಸಿದ್ದೆ. ನಾನು ಪ್ರಬಂಧದ ಮೊದಲ ನುಡಿಗಳಲ್ಲಿ ಸ್ಪಷ್ಟ ಪಡಿಸಿದಂತೆ, ಅದು ನನ್ನ ಆತ್ಮಕಥೆಯಲ್ಲ. ಬದಲಿಗೆ ನನ್ನ ಪುಸ್ತಕೋದ್ಯಮದ ಅನುಭವದ ನೆಲೆಯಲ್ಲಿ, ಲೇಖಕ, ಪ್ರಕಾಶಕ ಮತ್ತು ಓದುಗರಿಗೊಂದು ದಿಕ್ಸೂಚಿಯಾಗಿತ್ತು. ಆದರೆ ಅಲ್ಲಿ ಬಂದಿದ್ದ ಬಹುತೇಕರಿಗೆ ತಮ್ಮನ್ನು ಪ್ರಸಿದ್ಧಿಸಿಕೊಳ್ಳುವುದಷ್ಟೇ ಮುಖ್ಯ ಎನ್ನುವಂತಿತ್ತು. ನಾನು ಹತಾಶೆಯಲ್ಲೇ ‘ಚಿಟ್ಟೆ’ ಕಾಲದಲ್ಲಿ, ನನ್ನ ಪ್ರಕಾಶನದ ಹತ್ತಾರು ಪುಸ್ತಕಗಳ ‘ಪ್ರದರ್ಶನ, ಮಾರಾಟ’ದ ಹರಕೆ ನಡೆಸಿದೆ. ವಾಸ್ತವದಲ್ಲಿ ಇಂದು ಆ ಪುಸ್ತಕಗಳ ಮಾರಾಟದಿಂದ ನನಗೇನೂ ಆಗಬೇಕಿಲ್ಲ. ಪ್ರಬಂಧದಲ್ಲೇ ಹೇಳಿದಂತೆ ಅವು ಶಾಶ್ವತ ಸಾಹಿತ್ಯ. ಇನ್ನೂ ಸ್ಪಷ್ಟವಾಗಿ ಹೇಳುವುದಿದ್ದರೆ ಡೆಡ್ ಸ್ಟಾಕ್! (ನನ್ನ ಪ್ರಬಂಧಕ್ಕೆ ಸೇತು: https://athreebook.com/…/05/the-struggle-in-bookselling/)

ನಾನು ಸುಮಾರು ಹನ್ನೆರಡೂವರೆಗೆ ತೊಡಗಿ ಅರ್ಧ ಗಂಟೆಯೊಳಗೆ ಪ್ರಬಂಧವನ್ನು ಓದಿ ಮುಗಿಸಿದೆ. ಯಾರಲ್ಲೂ ಸಂದೇಹವಿರಲಿಲ್ಲ, ಸಂಭಾಷಣೆ ನಡೆಯಲಿಲ್ಲ. ಹೋಟೆಲಿಗೆ ಮರಳಿ ಊಟ ಮುಗಿಸಿ, ಕೋಣೆ ಖಾಲಿ ಮಾಡಿದೆವು. ದಿನದ ಕೊನೆಯ ಕಲಾಪವಾದ ನೀನಾಸಂ ನಾಟಕ – ರಕ್ತಾಕ್ಷಿ, ನೋಡುವ ಬಯಕೆಯನ್ನು ಮುಂದೂಡಿ, ಮಂಗಳೂರ ದಾರಿ ಹಿಡಿದೆವು.

ಹೋಗುವ ದಾರಿಯಲ್ಲಿ ಜತೆಗೊಟ್ಟಿದ್ದ ವಿಲ್ಸನ್ ಮೊದಲೇ “ನಿಮಗೆ ಜತೆ ಕೊಡಲಾಗುತ್ತಿಲ್ಲ” ಎಂದಿದ್ದರು. ರಮ್ಯರನ್ನು ನಾವೇ ವಿಚಾರಿಸಿ, ಇನ್ನೇನೋ ದಾರಿ ಕಂಡುಕೊಂಡಿದ್ದಾರೆಂದೂ ತಿಳಿದೆವು. ಆದರೆ ಹೊಸ ಪರಿಚಯದ ಗೋಪಾಲ ತ್ರಾಸಿಯವರು “ನೀವು ಬೈಂದೂರು ದಾರಿ ಹಿಡಿದರೆ, ನನಗೆ ಮುಂಬೈ ರೈಲು ಹಿಡಿಯುವುದು ಸುಲಭವಾಗುತ್ತದೆ” ಎಂದದ್ದನ್ನು ಸಂತೋಷದಲ್ಲೇ ಒಪ್ಪಿಕೊಂಡೆ. ಹಾಗೇ ಒಂದೂ ಮುಕ್ಕಾಲರ ಸುಮಾರಿಗೆ ತುಮರಿ ಬಿಟ್ಟು, ಮೂರೂವರೆಗೆ ತ್ರಾಸಿಯವರನ್ನು ಬೈಂದೂರಿನಲ್ಲಿಳಿಸಿ, ಐದೂವರೆಗೆ ಮಂಗಳೂರಿನಲ್ಲಿದ್ದೆವು. ಹೆದ್ದಾರಿ ದರೋಡೆಯನ್ನು ಆದಷ್ಟೂ ನಿರಾಕರಿಸುವ ನನ್ನ ಪ್ರಯತ್ನಕ್ಕೆ ಸೋಲಾದರೂ (ಒಟ್ಟು ಸುಂಕ ರೂ ೨೧೫) ಪ್ರಯಾಣ ತುಂಬಾ ಚುರುಕಾಗಿಯೂ ನಿರಾತಂಕವಾಗಿಯೂ ಮುಗಿದಿತ್ತು.

ಪ್ರಿಯ ರಘೂ… (ಹಾಲ್ಕೆರೆ)
ನಿಮ್ಮ ‘ಹಾಮ ಭಟ್ಟ ಸ್ಮೃತಿ’ ಸಂಭ್ರಮದ ಯೋಚನೆ ತುಂಬಾ ಉದಾತ್ತವಾದದ್ದು. ಅದಕ್ಕೆ ನೀವು ಹಾಕುವ ಪ್ರೀತಿ, ಹಣ, ಶ್ರಮವೂ ಅಷ್ಟೇ ದೊಡ್ಡದು. ಇದು ಮನೆಯದ್ದೇ ಕಲಾಪ ಎನ್ನುವಂತೆ ಭಾಗವಹಿಸಿದ ನಿಮ್ಮ ಅಮ್ಮ (ಪ್ರಾಯದ ಬಳಲಿಕೆಯನ್ನು ಮೀರಿ ಎಲ್ಲವನ್ನೂ ಗ್ರಹಿಸಲು ಅವರು ಪಡುತ್ತಿದ್ದ ಪಾಡಂತೂ ಥೇಟ್ ನನ್ನಮ್ಮನದೇ ನೆನಪು ಹುಟ್ಟಿಸುತ್ತಿತ್ತು), ಹೆಂಡತಿ ವೀಣಾ, ಭಾವ ವಿಷ್ಣುನಾಥ್, ಅಭಿರುಚಿ ಬಳಗದ ಲೋಕಪಾಲ್, ಹೋಟೆಲಿನ ಗಣಪತಿಯೇ ಮೊದಲಾದವರು ತೆತ್ತುಕೊಂಡದ್ದು ಖಂಡಿತಕ್ಕೂ ಸಣ್ಣದಲ್ಲ. ಆದರೆ ನಮ್ಮ ಲೆಕ್ಕದಲ್ಲಿ, ಫಲಿತಾಂಶ ತುಂಬಾ ಜಾಳುಜಾಳು. ಹೊರಗಿನ ಎಲ್ಲರಿಗೂ (ನಮ್ಮಂತವರನ್ನೂ ಸೇರಿಸಿ) ಭಾಗೀದಾರಿಕೆಯ ಅವಕಾಶ ಮುಕ್ತವೇ ಇರಲಿ. ಆದರೆ ಕನಿಷ್ಠ ಶುಲ್ಕ ಮತ್ತು ಸಮಯ ಪರಿಪಾಲನೆಯೊಡನೆ ಎಲ್ಲ ಕಲಾಪಗಳಿಗೂ ಹಾಜರಿಯನ್ನು ಕಡ್ಡಾಯ ಮಾಡಲೇಬೇಕು. ಬಹುಶಃ ಇದಕ್ಕೆ ನೀವು ಹೆಗ್ಗೋಡಿನ ಅನುಭವಗಳನ್ನು ಮಾರ್ಗದರ್ಶಿಯನ್ನಾಗಿ ಸ್ವೀಕರಿಸಬಹುದು. ಅನುಭವ ಮತ್ತು ಅನಿಸಿಕೆಗಳ ತೋಲನದಲ್ಲಿ ನನ್ನದು ಸದಾ ಕಠಿಣ ಆಯ್ಕೆಯೇ. ಎರಡೂವರೆ ದಿನಗಳ ಕಲಾಪಗಳಲ್ಲಿ ವ್ಯರ್ಥ ಕಳೆದ ಸಮಯಕ್ಕೆ ನಾನು ಭಾವನಾತ್ಮಕ ಅನಿಸಿಕೆಗಳನ್ನು ಹೇರುವ ತಪ್ಪು ಮಾಡಲಾರೆ, ಕ್ಷಮಿಸಿ.