ಜಿಎಸ್ ಜಯದೇವ ಅವರ ಸೋಲಿಗ ಚಿತ್ರಗಳು (ಪರಸ್ಪರ ಪ್ರಕಾಶನ) ಓದಿದಂದಿನಿಂದ ನನಗೆ ಅವರ ‘ಕಥಾನಾಯಕರು’ಗಳನ್ನೂ ಆ ಪರಿಸರವನ್ನೂ ಕಣ್ದುಂಬಿಕೊಳ್ಳುವ ತುಡಿತ ಹೆಚ್ಚಾಗಿತ್ತು. ಹಾಗೆ ಮಾರ್ಚ್ ೧೯ ರಿಂದ೨೨ರವರೆಗೆ, ನಾನು, ದೇವಕಿ, ಅನಿಲ್, ತಿರುಮಲೇಶ ಭಟ್ ಮತ್ತು ದಿಗಂತ, ಕಾರೋಡಿಸಿ ಕಂಡ ಕಥನ.
ಆರು ಗಂಟೆಗೆ ಹೊರಟ ನಾವು ಮಂಗಳೂರಿನಿಂದಲೇ ಭಟ್ಟರನ್ನೂ ಪಾಣೆಮಂಗಳೂರಿನಿಂದ ಅನಿಲ್, ದಿಗಂತರನ್ನೂ ಸೇರಿಸಿಕೊಂಡೆವು. ಸುಳ್ಯದಲ್ಲಿ ಕಾಫಿಂಡಿ ಮುಗಿಸಿ, ಮಡಿಕೇರಿಗೂ ಮೊದಲೇ ಸಿಗುವ ಕಾಟಗೇರಿಯವರೆಗೆ ನನಗೆ ಪೂರ್ಣ ಪರಿಚಿತ ದಾರಿ. ಮುಂದೆ ನನ್ನ ಅಂದಾಜಿಗೆ ಗೂಗಲ್ ಜಾಲಾಟದೊಂದಿಗೆ ಅನಿಲ್, ದೇವಕಿಯರ ಜಂಟಿ ಮಾರ್ಗ ನಿರ್ದೇಶನದಲ್ಲಿ ಕಾರೋಡಿತು. ಚಿರಿಪಿರಿ ಮಳೆ, ಉರಿಉರಿ ಬಿಸಿಲುಗಳ ಹಾಸುಹೊಕ್ಕಿನೊಡನೆ, ಘಟ್ಟನಾಡಿನ ಅಂಕುಡೊಂಕುಗಳಲ್ಲಿ ಬಳುಕಾಡಿ, ಏರಿಳುಕಲಲ್ಲಿ ಕುಸಿದೇಳುತ್ತಿದ್ದೆವು. ಹಾಡುಹಾಸ್ಯಗಳ ಶ್ರುತಿ ಇಳಿಸದೆ, ವಿಚಾರ ವಿನಿಮಯಗಳ ಮಥನ ಬಿಡದೆ ನಡೆದಿತ್ತು. ಜತೆಗೇ ಸುತ್ತಣ ಕೃಷಿ, ಮರ, ಹೂ ಹಕ್ಕಿಗಳಿಗೆ ಸ್ಪಂದಿಸುತ್ತಾ ಹನ್ನೊಂದು ಗಂಟೆಗೆ ಪೊನ್ನಂಪೇಟೆ ತಲಪಿದೆವು. ಮೊದಲೇ ನಿಶ್ಚೈಸಿಕೊಂಡಂತೆ, ಸರಕಾರೀ ಅರಣ್ಯ ಕಾಲೇಜಿನ ವಠಾರದೊಳಗಣ ವಸತಿ ಸಮೂಹದಲ್ಲಿ, ಪ್ರಾಂಶುಪಾಲ ಡಾ| ಜಡೇಗೌಡ ಮಾದೇಗೌಡರ ಮನೆ ಎದುರೇ ಕಾರಿಳಿದೆವು…..
ಸೋಲಿಗರ ಜಡೇಗೌಡ ಮಾದೇಗೌಡ
ಜಿಎಸ್ ಜಯದೇವರ ‘ಸೋಲಿಗ ಚಿತ್ರಗಳು’ ಪುಸ್ತಕದಲ್ಲಿ ನನ್ನನ್ನು ಹೆಚ್ಚು ಆಕರ್ಷಿಸಿದ ಹೆಸರು ಡಾ| ಜಡೇ ಗೌಡ ಮಾದೇಗೌಡ. “ಡಾ| ಸುದರ್ಶನ್ ವೈದ್ಯಕೀಯ ಪೆಟ್ಟಿಗೆ ಹಿಡಿದು ಮೊದಲು (ಬಿಳಿಗಿರಿರಂಗನ ಬೆಟ್ಟದ) ನಮ್ಮ ಪೋಡಿಗೆ (ಹಳ್ಳಿ) ಬಂದಾಗ, ಆರೆಂಟರ ಹರಯದ ನಮ್ಮ ಬಾಲರ ದಂಡು ಹೆದರಿ ಮರ ಹತ್ತಿತ್ತು…” ಎಂದೇ (೫೪ ವರ್ಷ) ಜಡೇಗೌಡರು ಜ್ಞಾಪಿಸಿಕೊಳ್ಳುತ್ತಾರೆ. ಬಿಳಿಗಿರಿ ರಂಗನ ಬೆಟ್ಟದಲ್ಲಿ ಡಾ| ಸುದರ್ಶನ್ ಕಟ್ಟಿದ ‘ವಿವೇಕಾನಂದ ಗಿರಿಜನ ಕಲ್ಯಾಣ ಕೇಂದ್ರ’, ಹ್ರಸ್ವದಲ್ಲಿ ವಿಜಿಕೆಕೆ, ಸೋಲಿಗರನ್ನು (ಪಕ್ಕಾ ಕಾಡು ಜನಾಂಗ) ಬದಲಾದ ಕಾಲಧರ್ಮಕ್ಕೆ ಗೌರವಯುತವಾಗಿ ಬೆಳೆದು ನಿಲ್ಲಿಸಿದ್ದಕ್ಕೆ ಒಂದು ಅಪ್ರತಿಮ ಸಾಕ್ಷಿ ಜಡೇಗೌಡರು. ಇಂದವರು ತೋಟಗಾರಿಕಾ ವಿಜ್ಞಾನದಲ್ಲಿ ಸ್ನಾತಕೋತ್ತರ ಹಾಗೂ ಸಂಶೋಧನಾ ಪದವಿಗಳನ್ನು ಪಡೆದರೂ ವೃತ್ತಿರಂಗದಲ್ಲಿ ಹುಟ್ಟೊಲವಿನ ಆಯ್ಕೆಯಾಗಿ ಹಿಡಿದುಕೊಂಡ ಅರಣ್ಯ ಕಾಲೇಜಿಗೆ ಪ್ರಾಂಶುಪಾಲರಾಗಿದ್ದಾರೆ.
ಜಡೇಗೌಡರು ಆರ್ಕಿಡ್ಡುಗಳ ಕುರಿತಂತೆ ದೇಶ ವಿದೇಶ ಖ್ಯಾತಿಯನ್ನೇ ಗಳಿಸಿದ್ದಾರೆ. ಮಣ್ಣಿನ ಅವಲಂಬನವಿಲ್ಲದೇ ನೀರು ಗೊಬ್ಬರಗಳ ಪ್ರತ್ಯಕ್ಷ ಉಪಯೋಗ ನೆಚ್ಚದೇ ಬೆಳೆದು, ವಿನ್ಯಾಸ, ಬಣ್ಣ ಮತ್ತು ಪರಿಮಳಗಳಲ್ಲಿ ಬಹುವ್ಯಾಪ್ತಿ ಪಡೆದ ಸಸ್ಯಗಳೇ ಆರ್ಕಿಡ್ಡುಗಳು. ಅವರು ಒಂದೆರಡು ದಿನಗಳಲ್ಲೇ ಜರ್ಮನಿಗೆ ಹೋಗಿ, ಅಂತಾರಾಷ್ಟೀಯ ಸಸ್ಯತಜ್ಞರ ಮೇಳದಲ್ಲಿ, ಆರ್ಕಿಡ್ಡುಗಳ ಕುರಿತು ಸಂಶೋಧನಾತ್ಮಕ ಪ್ರಬಂಧ ಮಂಡಿಸುವ ಸಿದ್ಧತೆಯಲ್ಲಿದ್ದರು. ಆದರೂ ಬೇಸರಿಸದೇ ನಮ್ಮನ್ನು ಸ್ವಾಗತಿಸಿದರು. ಅರಣ್ಯ ಕಾಲೇಜು ಯುಗಾದಿಯ ರಜೆಯಲ್ಲಿದ್ದರೂ ಕೋಣೆ ಕೋಣೆ ಸುತ್ತಿಸಿ, ಅಂಗಳದ ವಿವಿಧ ಚಪ್ಪರ ಅಂಕಣಗಳನ್ನೂ ತೋರಿಸಿ ವಿವರಿಸಿದರು.
ಆರ್ಕಿಡ್ಡುಗಳು ದೃಢ ನೆಲೆಯಾಗಿ ಜೀವಂತ ಮರಗಳಂತೇ ಕಲ್ಲು ಕೊರಡುಗಳನ್ನೂ ಆವರಿಸಿಕೊಳ್ಳಬಲ್ಲವು. ಗಮನಿಸಿ, ಇವು ನೆಲೆಸಿದ ಆಧಾರದ ಜೀವಸತ್ವ ಹೀರುವ ಬಂದಣಿಕೆಗಳು ಅಲ್ಲ. ಆರ್ಕಿಡ್ಡುಗಳ ಹರಿತ್ತು (ಹಸಿರು) ಬೆಳಕಿನ ಅನುಸಂಧಾನದಲ್ಲಿ ದ್ಯುತಿ ಸಂಶ್ಲೇಷಣೆ ನಡೆಸಿದರೆ, ಬೇರುಗಳು ಗಾಳಿಯಿಂದ ನೀರು ಮತ್ತು ಪೋಷಕಾಂಶಗಳನ್ನು ಸಂಗ್ರಹಿಸುತ್ತವೆ. ಹಾಗಾಗಿ ಅಲ್ಲಿನ ಪುಷ್ಪಕುಂಡಗಳಲ್ಲಿ ಹವಳದ ಗಿಟ್ಟೆಯೋ ಜೊಂಡೋ ತೆಂಗಿನಜುಂಗೋ ಬಿಗಿಯಾಗಿ ತುಂಬಿದ್ದರೂ ವಾತಾಯನಕ್ಕೆ ಧಾರಾಳ ಕಿಂಡಿಗಳೂ ಇವೆ. ಕೆಲವೊಂದು ಚಪ್ಪರದೊಳಗೆ ಗಾಳಿಯಲ್ಲಿ ತೇವಾಂಶ ಹೆಚ್ಚಿಸುವ ಸಲುವಾಗಿ ನೀರ ಸಿಂಪಡಿಕೆ ಯಂತ್ರವನ್ನೇ ಅಳವಡಿಸಿದ್ದರು. ಕಾಲೇಜಿನ ಕತ್ತಲ ಓಣಿಯಲ್ಲಿ ಪ್ರಯೋಗಾತ್ಮಕವಾಗಿ ವಿಶಿಷ್ಟ ಬೆಳಕಿನ ವ್ಯವಸ್ಥೆ ಮಾಡಿ, ಅರಳಿಸಿದ ವರ್ಣಮಯ ಹೂಗಳಂತೂ ಕಣ್ಣಿಗೆ ಹಬ್ಬವೇ ಸರಿ.
ಹೂಗಳಿದ್ದಲ್ಲಿ ಚಿಟ್ಟೆ, ಜೇನ್ನೊಣಗಳಿರಲೇ ಬೇಕಲ್ಲ. ಪಾತರಗಿತ್ತಿ ಉದ್ಯಾನ ಮತ್ತು ಜೇನು ಕೃಷಿ ಕಾಲೇಜಿನ ಅಂಗಗಳೇ ಆಗಿವೆ. ಅರಣ್ಯ ಕಾಲೇಜಿನ ಹೆಸರಿಗೊಪ್ಪುವಂತೆ ವಿಸ್ತೃತ ಅಂಗಳದಲ್ಲಿದ್ದ ವೈವಿಧ್ಯಮಯ ಮರಗಳ ತೋಪನ್ನು ನಾವು ಸ್ವತಂತ್ರವಾಗಿಯೇ ಸುತ್ತಾಡಿ ಕಂಡುಕೊಂಡೆವು. ಆ ನಡುವೆ ಅನ್ಯ ಕಾರ್ಯನಿಮಿತ್ತ ಅಲ್ಲಿಗೆ ಬಂದಿದ್ದ ಕಾಲೇಜಿನ ನಿವೃತ್ತ ಡೀನ್ ಕುಶಾಲಪ್ಪನವರ ಹೆಚ್ಚಿನ ಪರಿಚಯ ಲಾಭವೂ ನಮಗಾಯ್ತು. ಜಡೇಗೌಡರ ಪ್ರಬಂಧ ಹಾಗೂ ಪ್ರಯಾಣ ಸಿದ್ಧತೆಗೆ ನಾವು ಹೆಚ್ಚಿನ ಹೊರೆಯಾಗ ಬಯಸಲಿಲ್ಲ. ಸುಮಾರು ಒಂದೂವರೆ ಗಂಟೆಯಷ್ಟೇ ಸುತ್ತಾಡಿ, ಅವರ ವಿದೇಶಯಾನಕ್ಕೆ ಶುಭಕೋರಿ ವಿದಾಯ ಹೇಳಿದೆವು.
ಗ್ಯಾಸ್ ಟ್ರಬಲ್
ಪೊನ್ನಂಪೇಟೆ ಬಿಡುವ ಮೊದಲು ‘ಹೊಟ್ಟೆ ಗಟ್ಟಿಯಿದ್ದರೆ ಘಟ್ಟ ಹತ್ತಬಹುದು’ ಗಾದೆ ನೆನೆಸಿಕೊಂಡೆವು. ಬೆಳಿಗ್ಗೆ ಏಳೂವರೆಯ ಸುಮಾರಿಗೆ ‘ಉಪವಾಸ ಮುರಿದ’ವರು ಚಾ ಕುಡಿಯಲೂ ಪುರುಸೊತ್ತು ಮಾಡಿಕೊಂಡಿರಲಿಲ್ಲ. “ನಿಮಗೊಂದು ಚಾ ಕುಡಿಸಲೂ ಆಗಲಿಲ್ಲಾ…” ಎಂದು ಜಡೇಗೌಡರು ಮಾತಿನುಪಚಾರ ಕೊಟ್ಟದ್ದು ಅವರ ದೊಡ್ಡತನ. ಅರಣ್ಯ ಕಾಲೇಜು ಬಿಟ್ಟ ಮೇಲೂ ಅದನ್ನೇ ಒಪ್ಪಿ, ಮುಂದಿನೂರಿಗೆ ಹೋಗುವ ಸ್ಥಿತಿ ನಮ್ಮದಲ್ಲ. ಪೊನ್ನಂಪೇಟೆಯಲ್ಲೇ ಸಸ್ಯಾಹಾರಿ ಹೋಟೆಲ್ ಹುಡುಕಿದೆವು. ಇದ್ದ ಒಂದೆರಡು ಹೋಟೆಲ್, ಮೆಸ್ “ಗ್ಯಾಸಿಲ್ಲಾ ಸಾರ್…” ಎಂದು ನಿಷ್ಕ್ರಿಯವಾಗಿದ್ದವು. ಬಸ್ ನಿಲ್ದಾಣದೆದುರು ತೆರೆದಿದ್ದ ಏಕೈಕ ‘ವೆಜ್ ಅಂಡ್ ನಾನ್ ವೆಜ್’ ಹೋಟೆಲ್ ಅನಿವಾರ್ಯವಾಯ್ತು. ನನ್ನ ಮಾತಿನ ಒತ್ತು ಸಸ್ಯಾಹಾರಕ್ಕೇ ಇದ್ದುದು ನೋಡಿ ಹೋಟೆಲಿಗ “ನಾನ್ ವೆಜ್ ಬೇಕಂದ್ರೂ ಮಾಡಲು ಗ್ಯಾಸ್ ಶಾರ್ಟೇಜ್…” ಎಂದೇ ಧೈರ್ಯ ಹೇಳಿದ. ಮೊಳಕೆ ಹುರುಳಿ ಸಾರು, ಹಸಿಬಿಸಿ ಪಲ್ಯ, ಮಜ್ಜಿಗೆ ಉಪ್ಪಿನ ಕಾಯಿಯಲ್ಲಿ ನಾವು ಉದರ ಶಾಂತಿ ಮಾಡಿಕೊಂಡೆವು.
Save Animal Initiative ಅರ್ಥಾತ್ ‘ಸಾಯಿ’…
ಎನ್ನುವ ಒಂದು ಖಾಸಗಿ ವನಧಾಮ, ಕೊಡಗಿನ ದಕ್ಷಿಣ ಮೂಲೆಯಲ್ಲಿ ಸುಮಾರು ಮುನ್ನೂರು ಎಕ್ರೆ ವ್ಯಾಪಿಸಿದೆ ಎಂದು ಕೆಲವು ವರ್ಷಗಳಿಂದ ಕೇಳುತ್ತಲೇ ಇದ್ದೆ. ಅದು ನನಗಪರಿಚಿತರೇ ಆದ, ಉತ್ತರ ಭಾರತದ ಮಲ್ಹೊತ್ರಾ ದಂಪತಿಗಳ ಸಾಹಸವೆಂದೂ ಕೇಳಿದ್ದೆ. ಅದನ್ನು ಒಮ್ಮೆ ನೋಡಬೇಕೆನ್ನುವ ನನ್ನ ಆಶಯಕ್ಕೆ ನೀರೆರಚಿದಂತೆ ಈಚೆಗೆ ಆ ದಂಪತಿ, ವಯೋ ಸಹಜವಾಗಿ ತೀರಿಕೊಂಡ ಸುದ್ದಿಯೂ ಸಿಕ್ಕಿತ್ತು. ಈ ಪ್ರವಾಸದಲ್ಲಿ ಅದನ್ನು ಸೇರಿಸಿಕೊಂಡಿದ್ದೆ. ಗೂಗಲ್ ನಕ್ಷೆಯಲ್ಲಿ ಪೊನ್ನಂಪೇಟೆಯಿಂದ ಕೇವಲ ೨೫ ಕಿಮೀ ಎಂದೇನೋ ಇತ್ತು. ಆದರೆ ಹೆಚ್ಚಿನ ವಿವರಗಳಿಗೆ ನಾನವರ ಜಾಲತಾಣಕ್ಕೆ ಬರೆದದ್ದಾಗಲೀ ಅಲ್ಲೇ ಲಭ್ಯವಿದ್ದ ಎರಡು ಸ್ಥಿರವಾಣಿಗಳನ್ನು ಸಂಪರ್ಕಿಸಲು ಪ್ರಯತ್ನಿಸಿದ್ದಾಗಲೀ ಫಲಿಸಲಿಲ್ಲ. ಸಿಕ್ಕರೆ ನೋಡಿದ, ಅನುಕೂಲವಾದರೆ ರಾತ್ರಿಗುಳಿದ ಎಂದು ಯೋಚಿಸುತ್ತಾ…
ಶ್ರೀಮಂಗಲ, ಬಿರುನಾಣಿ ಮುಂದೆ ಕೆಲ ಕಾಫಿತೋಟಗಳನ್ನೂ ಹಲವು ಹೋಂ ಸ್ಟೇಗಳನ್ನೂ ಹಿಂದಿಕ್ಕಿದೆವು. ಗೂಗಲ್ ಮಾರ್ಗಸೂಚಿ ದಟ್ಟ ಕಾಡಿನೊಳಗೆ, ಕಚ್ಚಾ ದಾರಿಗಳಲ್ಲಾಡಿಸಿ, ಕೈಕೊಟ್ಟಿತು. ಆ ಕೊನೆಯಲ್ಲಿ ತೇರಾಳು ವಲಯದ ಇನ್ಯಾವುದೋ ಕಾಫಿ ತೋಟ ಸಿಕ್ಕಿತ್ತು. ಅವರಿಗೆ ವನಧಾಮದ ಕುರಿತು ಏನೂ ತಿಳಿದಿರಲಿಲ್ಲ. ನಾವು ಹುಡುಕಾಟ ಬಿಟ್ಟು, ಹಿಮ್ಮುಖರಾದೆವು. ಅಲ್ಲೊಂದೆಡೆ ಬತ್ತಿಹೋದ ಭಾರೀ ಮಳೆನೀರಗಟ್ಟೆಯ ಜೀರ್ಣೋದ್ಧಾರ ಮತ್ತು ಹೊಸತೇ ರೆಸಾರ್ಟ್ ನಿರ್ಮಾಣ ನಮ್ಮ ಗಮನ ಸೆಳೆಯಿತು. ಅದಕ್ಕೆ ಒಂದು ಸುತ್ತು ಹಾಕಿ ಮುಂದುವರಿದಂತೆ… ಒಂದು ಭರ್ಜರಿ ದೇವಳ ನಿರ್ಮಾಣಗೊಳ್ಳುತ್ತಿರುವುದನ್ನೂ ಕಂಡೆವು. ಅದರ ಸಾಕಷ್ಟು ವಿಸ್ತಾರದ ಆವರಣಕ್ಕೆ ಭದ್ರವಾದ ವಿದ್ಯುತ್ ಬೇಲಿಯೂ ಇತ್ತು. ಇದು ಯಾರೋ ತಮಿಳ ‘ಸ್ವಾಮಿ’ಯ ಕೆಲಸವೆಂದಷ್ಟೇ ತಿಳಿಯಿತು. ರೆಸಾರ್ಟಿನ ಹಿಂದೀ ದೇವಳದ ಮಲೆಯಾಳೀ ಕೂಲಿಯಾಳುಗಳಿಗೆ ಸಾಯಿ ವನಧಾಮ ಬಿಡಿ, ತಮ್ಮ ಕಂತ್ರಾಟುದಾರನ ವಿಚಾರ ಬಿಟ್ಟು ನಿರ್ಮಾಣದ ಕುರಿತೇ ಮಾಹಿತಿ ಇದ್ದಂತಿರಲಿಲ್ಲ. (ಜಾಣತನವೂ ಇರಬಹುದು, ಬಿಡಿ) ನಾವು ನಿರಾಶೆಯೊಡನೇ ತುಸು ಮುಂದೆ ಬಂದಾಗ…
ದಾರಿ ಬಿಟ್ಟು ಎಡ ಕವಲಿನ ಕೊನೆಯಲ್ಲೊಂದು ತುಸು ಹಳೆ ಮನೆ ಕಾಣಿಸಿತು. ಅದರ ಯಜಮಾನ – ಬಿಜು, ಸ್ವಚ್ಛ ಕನ್ನಡದಲ್ಲೇ ನಮ್ಮೆಲ್ಲ ಸಂದೇಹಗಳನ್ನು ಪರಿಹರಿಸಿದರು. ನವೀಕರಣಗೊಳ್ಳುತ್ತಿದ್ದ ರೆಸಾರ್ಟ್ ಅವರದೇ ಆಗಿತ್ತು. ಏಳುತ್ತಿದ್ದ ದೇವಳ ಯಾರೋ ತಮಿಳ ಸ್ವಾಮಿಗಳ ಸೊತ್ತಂತೆ. ಎರಡೂ ಬರಲಿರುವ ಮಳೆಗಾಲಕ್ಕೆ ಮುನ್ನ ‘ಜನಸೇವೆ’ಗೆ ಅರ್ಪಿಸಿಕೊಳ್ಳುವ ಅವಸರದಲ್ಲಿದ್ದವು! ಎಲ್ಲಕ್ಕೂ ಮುಖ್ಯವಾಗಿ ಬಿಜು, ಗೂಗಲ್ ನಕ್ಷೆಯ ತಪ್ಪನ್ನು ತಿದ್ದಿ, ಸಾಯಿಗೆ ಹೋಗುವ ಸರಿದಾರಿ ಹೇಳಿದರು. ಜತೆಗೇ “ಈಗ ಸಾಯಿ, ಸತ್ತೇ ಹೋಗಿದೆ. ಗೇಟಿಗೆ ಬೀಗ ಬಿದ್ದಿದೆ… ಬೇಕಾದರೆ ಹೋಗಿ ನೋಡಿಕೊ೧೧ಳ್ಳಿ….” ಎಂಬ ವಿಷಾದದ ಸುದ್ದಿಯನ್ನೂ ಕೊಟ್ಟರು. ಸರಿ ನೋಡಿಯೇ ಬಿಡೋಣವೆಂದು…
ಸಣ್ಣದೊಂದು ಆಸೆಯೊಡನೆ, ನಾವು ಪರಿಷ್ಕೃತ ದಾರಿ ಅನುಸರಿಸಿ, ಸಾಯಿಯ ಬೀಗ ಜಡಿದ ಗೇಟನ್ನು ಮುಟ್ಟಿದ್ದೆವು. ಅಲ್ಲಿ ಜನ ಬಿಟ್ಟು, ನುಸಿದಾರಿಯ ಕುರುಹೂ ಇರಲಿಲ್ಲ. ಗೇಟಿನಾಚಿನ ಕಚ್ಚಾ ದಾರಿಯೂ ಕಾಡುಮುಚ್ಚಿ ದುರ್ಗಮವಾಗಿತ್ತು. ಇನ್ನು ಒಳಗೆಲ್ಲೋ ಇರಬಹುದಾದ ಕಾವಲುಗಾರನನ್ನು ಹಿಡಿದು, ಒಲಿಸಿಕೊಂಡು, ಕಷ್ಟವಾದರೂ ಒಂದು ರಾತ್ರಿಯ ವನವಾಸ ಅನುಭವಿಸಿಯೇವು ಎಂದೆಲ್ಲ ಉಬ್ಬಿಸಿಕೊಂಡಿದ್ದ ನಮ್ಮ ಆಶಾಬುಗ್ಗೆಯ ಗ್ಯಾಸ್ ಸೋರಿಹೋಗಿತ್ತು!
ನಾಗರಹೊಳೆ ಗೇಟಿನಲ್ಲಿ ಮೇಲ್ಸಂಪಾದನೆ ?
ಪೊನ್ನಂಪೇಟೆಯ ಅರಣ್ಯ ಕಾಲೇಜಿನಲ್ಲಿ ನಮಗೆ ಸ್ವಾರಸ್ಯ ಉಳಿಯಲಿಲ್ಲ. ಸಾಯಿ ಅರಣ್ಯ ದಕ್ಕಲಿಲ್ಲ. ಸಹಜವಾಗಿ ರಾತ್ರಿ ವಾಸಕ್ಕೆ ಎರಡನೇ ದಿನದ ಗುರಿಯನ್ನೇ ಅಯ್ದುಕೊಂಡೆ. ೧೭೦ ಕಿಮೀ ದೂರದ ಚಾಮರಾಜನಗರದ ಜಿಎಸ್ ಜಯದೇವರಿಗೆ ಫೋನಿಸಿದೆ. ಅವರು “ಅವಶ್ಯ ಬನ್ನಿ. ನಮ್ಮಲ್ಲಿಗೆ ರಾತ್ರಿಯೂಟಕ್ಕೇ ಬನ್ನಿ, ಅತಿಥಿಗೃಹ ನಿಮ್ಮನ್ನೇ ಕಾದಿದೆ…” ಎಂದು ಪ್ರೀತಿಯ ಮುದ್ರೆಯನ್ನೇ ಒತ್ತಿದರು. ಹೆಚ್ಚಿನ ಅನುಕೂಲಕ್ಕೆ ಆಪ್ತ ಸಹಾಯಕ ಕೇತನ್ ದೇವಾಡಿಗರ ಚರವಾಣಿ ಕೊಟ್ಟರು. ಚಾಮರಾಜನಗರದೊಳಗೇ ಇರುವ ಅವರ ‘ದೀನಬಂಧು ಟ್ರಸ್ಟ್’ (ಅನಾಥರ ಸೇವೆಗೇ ಮೀಸಲಾದ) ಆಶ್ರಮದ ಗೂಗಲ್ ನಕ್ಷೆಯನ್ನೂ ಕಳಿಸಿದರು.
ಗಂಟೆ ಇನ್ನೂ ನಾಲ್ಕು, ದಿನದ ಬೆಳಕಾರುವುದರೊಳಗೇ ಚಾಮರಾಜನಗರ ಸಾಧಿಸುವ ಉತ್ಸಾಹದಲ್ಲೇ ಹೊರಟೆವು. ಆದರೆ ಘಟ್ಟ ಪ್ರದೇಶದ ಅಂಕು ಡೊಂಕುಗಳಲ್ಲಿ ಸುಮಾರು ಸಮಯ ಸೋರಿತ್ತು. ಟಿ. ಶೆಟ್ಟಿಗೇರಿಯಲ್ಲಿ ಟಿ ವಿರಾಮ ಮಾಡಿದ ಮೇಲೆ ಸಿಕ್ಕ ಬಯಲು ಸೀಮೆಯ ದಾರಿ, ಚಾ.ನಗರದ ಆಸೆಗೆ ಸ್ವಲ್ಪ ಕುಮ್ಮಕ್ಕೇನೋ ಕೊಟ್ಟಿತು. ಮುಂದೆ ಇಪ್ಪತ್ತು ಕಿಮೀನಲ್ಲಿ ನಾಗರಹೊಳೆ ವನಧಾಮದ ನಿಟ್ಟೂರು ಗೇಟ್ ಸಿಕ್ಕಿತು. ಅಲ್ಲಿ ನಿಯಮದಂತೆ, ನಮ್ಮ ಚಾಮರಾಜ ನಗರದ ಗುರಿ ಘೋಷಿಸಿ, ಯುಕ್ತ ಶುಲ್ಕ ಕೊಟ್ಟು, ಚೀಟಿ ಪಡೆದು, ಮುಂದುವರಿದೆವು. ತೇಪೆ ದಾರಿಯಾದರೂ ಅಧಿಕೃತ ವೇಗತಡೆಗಳಿಗೆ ಕೊರತೆಯಿರಲಿಲ್ಲ. ಅವು ವನ್ಯ ಮೃಗಗಳ ಇಚ್ಛಾನುಸಾರ ಓಡಾಟಕ್ಕೆ ಅನುಕೂಲ ಮಾಡಿಕೊಡಲು ಸರಿಯೇ ಇದೆ. ಸಹಜವಾಗಿ ನಮಗೆ ವನ್ಯ ಪ್ರದೇಶದ ಗೇಟಿನ ಅಲಂಕಾರಕ್ಕೆ ಬಳಸಿದ್ದ ಗೊಂಬೆಗಳಲ್ಲಿ (ಹುಲಿ, ಕರಡಿ, ಹದ್ದು…) ಕೆಲವಾದರೂ ನಮ್ಮೆದು ಸಜೀವ ನಿಲ್ಲುತ್ತವೆ ಎಂಬ ನಿರೀಕ್ಷೆ ನಮಗಿತ್ತು. ಆದರೆ ದಕ್ಕಿದ್ದು ಎರಡು ಮಂಗ, ನಾಲ್ಕು ಜಿಂಕೆ ಮಾತ್ರ. ವನಧಾಮದೊಳಗಿನ ಸುಮಾರು ಅರ್ಧ ದಾರಿಯಲ್ಲಿ ಸಿಕ್ಕ ಕೈಕಂಬ ಸೂಚಿಸಿದಂತೇ ಅಂದರೆ ಹೆಗ್ಗಡದೇವನಕೋಟೆ ದಾರಿಯನ್ನುದ್ದೇಶಿಸಿ ನಾವು ಬಲಕ್ಕೆ ಕವಲಾದೆವು.
ಅದುವರೆಗೆ ಸಾಧಾರಣ ಹರಕಾಗಿದ್ದ ದಾರಿ, ಮುಂದೆ ಸಾಕ್ಷಾತ್ ಅಮೆರಿಕಾ-ಇರಾನ್ ಯುದ್ಧಕಣವನ್ನೇ ಆವಾಹಿಸಿಕೊಂಡಿತ್ತು. ಮತ್ತಷ್ಟು ನಿಧಾನಿಗಳಾಗಿ, ಕಾರು ಮತ್ತು ಬೆನ್ನಹುರಿ ಹುಡಿಮಾಡಿಕೊಳ್ಳದೇ ವನಮೋಕ್ಷದ ಗೇಟ್, ಅಂದರೆ ಮೇಟಿಕುಪ್ಪೆ ಮುಟ್ಟಿದಾಗ ಹೊಸದೇ ಸಮಸ್ಯೆ ತೆರೆದುಕೊಂಡಿತು. ನಮ್ಮ ಚೀಟಿ ನೋಡಿದ ಕಾವಲುಗಾರ “ಓ ನೀವು ವೀರ್ನಸೊಳ್ಳಿಗೋಗಬೇಕು. ಇಲ್ಲಾದ್ರೆ ಒಂದ್ಸಾವ್ರ ರೂಪಾಯಿ ದಂಡ ಕಟ್ಟಬೇಕು….”
“ನಾವು ಸರಿಯಾಗಿಯೇ ಚಾಮರಾಜ್ನಗ್ರಾಂತ…”
“ಇಲ್ನೋಡಿ, ಕಂಪೂಟರ್ ಚೀಟೀಲೀ ವೀರ್ನೊಸಳ್ಳೀಂತ್ಲೇ ಕೊಟ್ಟವ್ರೆ! ಅಲ್ಲಿ ನೀವಾಗಿ ಮೇಟಿಕುಪ್ಪೆಂತ ಹೇಳ್ದೇ ಹೋದ್ರೇ ಅವರು ಮಾಮೂಲಿನಂತೆ ಹೆದ್ದಾರಿಗೇ (ಹುಣ್ಸೂರು, ಮೈಸೂರು-ಚಾನಗರ) ಕೊಡೋದು. ಇನ್ನೇನ್ಮಾಡಕ್ಕಾಗಲ್ಲಾ ಹಿಂದಕ್ಕೋಗಿ…” ಎಂದು ಆತ ಹೇಳುತ್ತಲೇ ಹೊಸ ಬಿಕ್ಕಟ್ಟನ್ನೂ ಉದ್ದುದ್ದ ಮಾತುಗಳಲ್ಲಿ ಬಿಡಿಸಿಟ್ಟ. ಮಾರ್ಗಕ್ರಮಣದಲ್ಲಿ ನಾವೇನೂ ಅನಾಚಾರ ಮಾಡಿರಲಿಲ್ಲ. ಕೆಟ್ಟ ದಾರಿ ಮತ್ತು ತಪ್ಪು ದಾರಿ ಅನುಸರಿಸಿದ ಪರಿಣಾಮದಲ್ಲಿ, ಅತ್ತಣ ಗೇಟ್ ತಲಪಿದರೂ ಚೀಟಿ-ನಿಗದಿತ ‘ನಿರ್ಗಮನ ಸಮಯ’ ಮೀರುತ್ತಿದ್ದೆವು. ಅದಕ್ಕೂ ತಪ್ದಂಡ ಸಾವಿರ ರೂಪಾಯಿ! ಇಷ್ಟರಲ್ಲಿ ನಮಗೆ ಕಾವಲುಗಾರನ ವಸೂಲಿ ವರಿಸೆ ಸ್ಪಷ್ಟವಾಗಿತ್ತು. ನಾವು ಧ್ವನಿ ಏರಿಸಲಿಲ್ಲ. ವಾಪಾಸು ಹೋಗಲ್ಲ, ದಂಡವನ್ನೂ ಕಟ್ಟಲ್ಲ ಎಂದಷ್ಟೇ ಪಟ್ಟು ಗಟ್ಟಿ ಮಾಡಿದೆವು. ನೆಟ್ಟೂ ಕಂಪೂಟ್ರೂ ಎಂದೇನೇನೋ ಆತ ಐದು ಮಿನಿಟು ಕೊಸರಾಡಿದ. ನಾವು ಜಗ್ಗಲಿಲ್ಲ. ಆತ ಎಲ್ಲ ನುಂಗಿಕೊಂಡವನಂತೆ ನಟಿಸಿ, ಹಾಗೇ ಬಿಟ್ಟ! (ಅನಂತರ ಅಭಯನಿಂದ ತಿಳಿಯಿತು – ಇದು ಅವರ ಮಾಮೂಲೂ ಢೋಂಗಿಯಂತೆ. ಒಮ್ಮೆ ಇವನನ್ನೂ ಹಿಂಡಲು ನೋಡಿ ಸೋತಿದ್ದರಂತೆ)
ಕಾಡು ಬಿಟ್ಟದ್ದೇ ದಾರಿ ಉತ್ತಮಗೊಂಡಿತ್ತು. ಸಂಜೆಯ ರಂಗಳಿಸಿ, ಸೂರ್ಯ ಕಾಣದ ಲೋಕಕ್ಕೆ ಜಾರುತ್ತಿದ್ದಂತೆ ನಾವು ಹೆಗ್ಗಡದೇವನ ಕೋಟೆ ಸೇರಿದ್ದೆವು. ಮತ್ತೆ ಕತ್ತಲಲ್ಲಿ ಎಂಬತ್ತು-ತೊಂಬತ್ತು ಕಿಮೀ ಓಡಿ, ಅವೇಳೆಯಲ್ಲಿ, ಜಯದೇವರ ವ್ಯವಸ್ಥೆಗೆ ಕನಿಷ್ಠ ಊಟದ ಹೊರೆಯಾದರೂ ತಪ್ಪಿಸಲು ನಾವು ಅಲ್ಲೇ ಹೋಟೆಲ್ ಹುಡುಕಿದೆವು. ಇಲ್ಲೂ ಗ್ಯಾಸ್ ಟ್ರಬಲ್! ಮಂಕಾಗಿ ತೆರೆದುಕೊಂಡಿದ್ದ ಒಂದು ಹೋಟೆಲ್ “ಬರೀ ಚಪಾತಿ, ರೈಸ್, ಮಜ್ಗೇ ಬೇಕಾದ್ರಿದೆ… ಮುದ್ದೆ-ಸಾರೋ ಊಟನೋ ಕೇಳ್ಬೇಡಿ…” ಎಂದದ್ದನ್ನೇ ಒಪ್ಪಿಕೊಂಡೆವು. ಸಿಕ್ಕಷ್ಟು ಚೆನ್ನಾಗಿಯೇ ಇತ್ತು. ಮತ್ತೆ….
ಕತ್ತಲ ದಾರಿಗೆ ಚಾಲನಾದಂಡವನ್ನು ಯುವಕ ಅನಿಲನಿಗೊಪ್ಪಿಸಿ, ನಾನು ಹಿಂದಿನ ಸಾಲಿಗೆ ಜಾರಿದೆ. ಆತ ಒತ್ತಿನಲ್ಲೇ ಕುಳಿತ ದೇವಕಿಯ (ಗೂಗಲ್) ಸಹಕಾರದಲ್ಲಿ, ಸಮರ್ಥವಾಗಿ ಕಾರೋಡಿಸಿ, ಒಂಬತ್ತು ಗಂಟೆಯ ಸುಮಾರಿಗೆ ‘ದೀನ ಬಂಧು’ ಸೇವಾಶ್ರಮಕ್ಕೇ ಮುಟ್ಟಿಸಿದ.
ದೀನಬಂಧು ಕುಟುಂಬದ ಯಜಮಾನ
ರಾಮಕೃಷ್ಣಾಶ್ರಮದ ಸೇವಾ ಮನೋಭಾವ, ತಂದೆ – ಜಿಎಸ್ ಶಿವರುದ್ರಪ್ಪನವರ ಕವಿ ಹೃದಯಗಳ ದಟ್ಟ ಪ್ರಭಾವದ ಜಿಎಸ್ ಜಯದೇವ (೩೦-೮-೧೯೫೧), ಅನಾಥ ಮಕ್ಕಳಿಗಾಗಿ ಕಟ್ಟಿದ ಸಂಸ್ಥೆ – ದೀನಬಂಧು ಟ್ರಸ್ಟ್ (೧೯೯೨). ಕಲಿಕೆ ಮತ್ತು ವೃತ್ತಿಯಿಂದ (ಪ್ರಾಧ್ಯಾಪಕ) ಪ್ರಾಣಿಶಾಸ್ತ್ರಜ್ಞನಾಗಿದ್ದವರು, ಸ್ವಯಂ ನಿವೃತ್ತಿಪಡೆದು, ಚಾಮರಾಜನಗರದಲ್ಲಿ ನೆಲೆಸಿ, ವೈಯಕ್ತಿಕ ಸಂಸಾರ ಕಟ್ಟದೇ ರೂಪಿಸಿದ ಮಹಾಮನೆ – ದೀನಬಂಧು, ಅನಾಥರಿಗೇ ಮೀಸಲಾದ ಸೇವಾಶ್ರಮ. ಇಲ್ಲಿ ಬಾಲರೆಲ್ಲರೂ ಜಯದೇವರ ಮನೆ ಮಕ್ಕಳು, ಅವರೆಲ್ಲರಿಗೂ ಜಯದೇವ ಸಕಲಪೋಷಣೆಯನ್ನೂ ಕೊಡುವ ಅಣ್ಣ ಮಾತ್ರ.
ದೀನಬಂಧು ಸೇವಾಶ್ರಮಕ್ಕೆ ನಾವು ಮುಟ್ಟಿದಾಗ, ‘ಮನೆ ಮಕ್ಕಳ’ ಸಹಜ ಓಡಾಟದ ನಡುವೆ ಜಯದೇವರು ಅದೇ ತಾನೆ ಊಟ ಮುಗಿಸಿ ಬರುತ್ತಿದ್ದರು. ಔಪಚಾರಿಕತೆಗಳ ಕಟ್ಟಿಲ್ಲದೆ ನಮ್ಮನ್ನು ನೇರ ಊಟದ ಮನೆಗೇ ಒಯ್ದು, ನಾವು ಊಟ ಮುಗಿಸಿಯೇ ಹೋಗಿದ್ದನ್ನು ಖಾತ್ರಿ ಪಡಿಸಿಕೊಂಡು, ಆಶ್ರಮದ್ದೇ ಶುದ್ಧ ಉತ್ಪನ್ನಗಳಾದ ಮಜ್ಜಿಗೆ, ಬಾಳೆಹಣ್ಣು ಕೊಟ್ಟು ಸ್ವಾಗತಿಸಿದರು. ಕೆಲವೇ ಕುಶಲೋಪರಿಯ ಮಾತುಗಳನ್ನಾಡಿದರು. ಆಪ್ತ ಸಹಾಯಕ ಕೇತನ್ ಮಾರ್ಗದರ್ಶನದಲ್ಲಿ, ವಠಾರದೊಳಗೇ ಇದ್ದ ಸರಳ, ಸುಂದರ, ಸುಸಜ್ಜಿತ ಅತಿಥಿ ಗೃಹಗಳಿಗೆ ಸೇರಿಸಿಬಿಟ್ಟರು. ದಿನಪೂರ್ತಿ ಪ್ರಯಾಣ, ವೀಕ್ಷಣೆ, ಸಂಭಾಷಣೆ, ಅಸಮರ್ಪಕ ಆಹಾರಾದಿಗಳಿಂದ ಬಳಲಿದ ದೇಹಗಳಿಗೆ, ಬಿಸಿನೀರ ಸ್ನಾನ, ಫ್ಯಾನ್ ಸಹಿತ ಸುಪ್ಪತ್ತಿಗೆ ಸಿಕ್ಕ ಮೇಲೆ ಕೇಳಬೇಕೇ.
ಸೂರ್ಯೋದಯಕ್ಕೆ ಮುನ್ನ ಸಜ್ಜುಗೊಂಡು, ಆಶ್ರಮದ ಹೊರ ವಲಯ, ಅಂದರೆ ಹೊಸದಾಗಿ ರೂಪುಗೊಳ್ಳುತ್ತಿರುವ ಸಿದ್ಧಾರ್ಥ ನಗರದ ಒತ್ತಿನ ಬಡಾವಣೆಯಲ್ಲಿ ಸಣ್ಣಕ್ಕೆ ಕೈಕಾಲಾಡಿಸಿದೆವು. ಎಲ್ಲಾ ಊರುಗಳಂತೆ ಅಸಹ್ಯ ಕಸಕೊಳಕಿನ ಹಿನ್ನೆಲೆಯಲ್ಲಿ ಸೂರ್ಯೋದಯದ ಕೆಂಪು ಚಂದಕ್ಕಿಂತಲೂ ಸೂರ್ಯನ ಕೋಪದಂತೇ ಭಾಸವಾಯ್ತು. ಆಶ್ರಮದ ಕಾಫಿ ಸಮಯಕ್ಕೆ ಹಾಜರಾದೆವು. (ಆರೂವರೆಗೆ ಕಾಫಿ, ಎಂಟೂವರೆಗೆ ತಿಂಡಿ ಸಹಿತ ಕಾಫಿ) ಅಲ್ಲಿ ಜಯದೇವ, ಕೇತನರೊಂದಿಗಿದ್ದ ರಾಮಕೃಷ್ಣ ನಮಗೆ ಹೊಸ ಪರಿಚಯ ಲಾಭ! ಮೂಲತಃ ದಕ ಜಿಲ್ಲೆಯವರೇ ಆದ ರಾಮಕೃಷ್ಣ – ಶಿಕ್ಷಣ ತಜ್ಞ. ಪ್ರಸ್ತುತ ಮೈಸೂರು ಹೊರವಲಯದಲ್ಲಿ ಕೃಷಿ ನಡೆಸಿದ್ದರೂ ಪುರುಸೊತ್ತು ಮಾಡಿಕೊಂಡು ದೀನಬಂಧುವಿನ ಸ್ವಯಂಸೇವೆಯಲ್ಲಿ ತೊಡಗುತ್ತಲೇ ಇರುತ್ತಾರೆ!
ಕೇತನ್ ನಮ್ಮನ್ನು ಬಡಾವಣೆಯ ಮಿತಿಯೊಳಗೇ ಇರುವ ದೀನಬಂಧುವಿನ ಇತರ ವಠಾರಗಳಿಗೆ ನಡೆಸಿದರು. ಜಯದೇವರು ಆರು ಅನಾಥ ಹುಡುಗರೊಂದಿಗೆ ಬಾಡಿಗೆ ಮನೆಯಲ್ಲಿ (೧೯೯೨) ಹುಟ್ಟುಹಾಕಿದ ದೀನಬಂಧು ಟ್ರಸ್ಟ್, ಇಂದು ಸ್ವಂತ ನೆಲ, ಕಟ್ಟಡ ಮತ್ತು ಸರಳ ಆವಶ್ಯಕ ಸೌಕರ್ಯಗಳೊಡನೆ ಗಳಿಸಿದ ಬಹುಮುಖೀ ಸಂಪತ್ತನ್ನು ಸೂಕ್ಷ್ಮವಾಗಿ ಪರಿಚಯಿಸಿದರು. ಜಯದೇವರು ಸ್ವಂತ ಸಂಪತ್ತು ಹಾಗೂ ದುಡಿಮೆಯನ್ನು ಪೂರ್ಣ ವಿನಿಯೋಗಿಸುವುದರೊಡನೆ, ದೇಶ ವಿದೇಶಗಳ ಸಮಾನ ಮನಸ್ಕರಿಂದಲೂ ಸೇವಾ ಮತ್ತು ಆರ್ಥಿಕ ದಾನಗಳನ್ನು ಪಡೆಯುತ್ತಲೇ ಸಂಸ್ಥೆ ಬೆಳೆಸಿದ್ದಾರೆ. ನಮ್ಮ ಸೀಮಿತ ಪರಿಚಯಕ್ಕೆ ಸಿಕ್ಕ ಸಣ್ಣ ನಿದರ್ಶನ – ಕೇತನ್ ದೇವಾಡಿಗ. ದಕ ಜಿಲ್ಲೆಯ ಕೇತನ್ ಶೈಕ್ಷಣಿಕವಾಗಿ ಇಂಜಿನಿಯರ್, ಉತ್ತಮಿಕೆಗಾಗಿ ವಿದೇಶೀ ತರಬೇತಿ ಪಡೆದೂ ಹುದ್ದೆ, ಸಂಸಾರಗಳ ಗೋಜಿಗಿಳಿಯದೆ, ಜಯದೇವರಿಗೆ ಪೂರ್ಣಾವಧಿಯ ಸಹಾಯಕರಾಗಿ ನೆಲೆಸುವಲ್ಲಿ ತೃಪ್ತಿ ಕಂಡುಕೊಂಡಿದ್ದಾರೆ!
ದೀನಬಂಧು ಟ್ರಸ್ಟಿನ ಭೌತಿಕ ಸಂಪತ್ತುಗಳ ಲೆಕ್ಕ ತೆಗೆದರೆ, ನಾವುಳಿದುಕೊಂಡ ಹುಡುಗರ ವಸತಿನಿಲಯ (೧೯೯೫) ಇವರ ಪ್ರಥಮ ಸಾಧನೆ. ಮುಂದುವರಿದಂತೆ ಹುಡುಗಿಯರಿಗೆ ಪ್ರತ್ಯೇಕ ವಠಾರ – ವಸತಿ, ಸಂಸ್ಥೆಗಳ ಸ್ವಯಂಸೇವೆ ಅಥವಾ ಸಂದರ್ಶನಕ್ಕಾಗಿ ಬರುವವರಿಗೆ ಅತಿಥಿ ಗೃಹ, ವಸತಿನಿಲಯದ ಮಕ್ಕಳೊಡನೆ ಊರಮಕ್ಕಳಿಗೂ (ಮಧ್ಯಾಹ್ನದ ಬಿಸಿಯೂಟ ಸಹಿತ) ಮುಕ್ತವಿರುವ ಒಂದರಿಂದ ಹತ್ತರವರೆಗಿನ (ಕನ್ನಡ ಮಾಧ್ಯಮ) ಶಾಲೆ, ಎಲ್ಲರಿಗೂ ವಸನ ಸಹಿತ ಶೈಕ್ಷಣಿಕ ಸವಲತ್ತುಗಳ ಪೂರೈಕೆ, ವಿಜ್ಞಾನ ವಠಾರ, ಸ್ವಾವಲಂಬನೆಗಾಗಿ ಸೀಮಿತ ಕೃಷಿ ಹಾಗೂ ಗೋ ಸಂವರ್ಧನೆ…. ‘ಮನೆಮಕ್ಕಳ’ ಆಸಕ್ತಿಯಾನುಸಾರ ಹೊರಗಿನ ಸಂಸ್ಥೆ ಅಥವಾ ಊರುಗಳಲ್ಲಿನ ಓದು, ತರಬೇತಿಗೂ ದೀನಬಂಧುವೇ ಆರ್ಥಿಕ ಬಲವನ್ನೂ ಕೊಟ್ಟು ಸ್ವತಂತ್ರ ವ್ಯಕ್ತಿಗಳನ್ನಾಗಿಸಿದ್ದಕ್ಕೆ ಲೆಕ್ಕವಿಲ್ಲ. ಆಶ್ರಮದ ಅಂಗಳದಲ್ಲಿರುವ ಕೃಷ್ಣ ಮುಂತಾದ ವಿಗ್ರಹಗಳ ಕೆತ್ತನೆ ಓರ್ವ ಮನೆಮಗನದ್ದೇ ಎಂದು ಜಯದೇವರು ಮೆಲುನುಡಿಯಲ್ಲಿ ಹೇಳುತ್ತಾರೆ! ಜಯದೇವರ ಸಾಧನಾ ಸಂಪುಟಕ್ಕೆ ಕೊನೆ ಪುಟವೇ ಇಲ್ಲ! ಇವೆಲ್ಲವನ್ನು ಚಾಮರಾಜನಗರಕ್ಕೆ ಹೋಗಿ ಕಂಡದ್ದಕ್ಕೇ ಮುಗಿಯಲಿಲ್ಲ…
ಬೌದ್ಧಿಕವಾಗಿ ಜಯದೇವ ಮತ್ತವರ ದೀನಬಂಧು ಟ್ರಸ್ಟಿನ ಪ್ರಭಾವ ಇಂದು ಕನ್ನಾಡಿನ ಮೇಲೇ ವ್ಯಾಪಕವಾಗಿ ಹರಡಿದೆ. ಅದನ್ನು ಅಳೆಯುವುದು ನನ್ನ ಸಾಮರ್ಥ್ಯಕ್ಕೆ ಮೀರಿದ ಮಾತು. ಆದರೆ ನಾನು ಓದಿಕೊಂಡಂತೆ ಅವರ ಪ್ರಜಾವಾಣಿ (ನಾನು ಕಾಣದ ಇತರ ಪತ್ರಿಕಾ) ಅಂಕಣಗಳು, ಅದಕ್ಕೂ ಹೆಚ್ಚಿಗೆ ಸಂಕಲನವಾಗಿಯೇ ಬಂದ ಅವರ ‘ಸೋಲಿಗ ಚಿತ್ರಗಳು’ ನನ್ನನ್ನು ಈ ಪ್ರತ್ಯಕ್ಷ ದರ್ಶನದ ಪಯಣಕ್ಕೆ ಪ್ರೇರಿಸಿದ್ದವು.
ಎಂಟೂವರೆಯ ಸುಮಾರಿಗೆ ನಾವು ನಿಜ ಶೈಕ್ಷಣಿಕ ಓಡಾಟ ಮುಗಿಸಿ, ಮೂಲನೆಲೆಗೆ ಮರಳಿ ಜಯದೇವರೂ ಸೇರಿದಂತೆ ಎಲ್ಲರೊಡನೆ ಬೆಳಗ್ಗಿನ ತಿಂಡಿಗೆ ಕುಳಿತೆವು. ವಾರದ ಪ್ರತಿ ದಿನಕ್ಕೊಂದರಂತೆ ಇಡ್ಲಿ, ದೋಸೆ, ಮುದ್ದೆ, ಉಪ್ಪಿಟ್ಟಾದಿ ತಿಂಡಿಗಳು ಬರುವ ಸರದಿಯಲ್ಲಿ ನಮಗೆ ಸಿಕ್ಕ ಪಡ್ಡು ಮತ್ತು ಉಪ್ಪಿಟ್ಟು, ಕಾಫಿ ಸ್ವಾದಿಷ್ಟವಾಗಿದ್ದವು. ಅವರು ಹಿಂದಿನ ರಾತ್ರಿ ಮತ್ತು ಬೆಳಿಗ್ಗೆಯೂ ಧಾರಾಳವಾಗಿ ಕೊಟ್ಟ ಪುಷ್ಟ ಬಾಳೆ ಹಣ್ಣು ಆಶ್ರಮದ್ದೇ ಸಾವಯವ ಕೃಷಿಯ ಫಲ. ಹಾಲು, ಮಜ್ಜಿಗೆಗಳಲ್ಲೂ ಆಶ್ರಮ ಸ್ವಯಂಪೂರ್ಣವಾಗಿರುವುದು ಸಾಮಾನ್ಯದ ಮಾತಲ್ಲ. ಇವೆಲ್ಲವನ್ನೂ ಕೇವಲ ಆತಿಥ್ಯದ ನೆಲೆಯಲ್ಲೇ (ಬಿಡಿಸಿ ಹೇಳುವುದಿದ್ದರೆ – ಉಚಿತವಾಗಿ) ನಮಗೆ ಕೊಟ್ಟಿದ್ದರು.
ನಾವು ದೀನಬಂಧು ವಠಾರಕ್ಕೆ ಪ್ರವೇಶಿಸಿದಲ್ಲಿನಿಂದ ವಿದಾಯ ಹೇಳುವವರೆಗೆ ಜಯದೇವರೊಡನೆ ಕಳೆದ ಸಮಯ ಸಣ್ಣದು. ಆಗಲೂ ಅವರಾಡುತ್ತಿದ್ದ ಮೆಲುನುಡಿಗಳೂ ಸ್ವಲ್ಪವೇ. ಆದರೆ ಅವು, ಜಯದೇವರು ಸ್ವಾನುಭವದ ನೆಲದಲ್ಲಿ, ರಾಜ್ಯಾದ್ಯಂತದ ಸರಕಾರೀ ಶಾಲಾ ಉಪಾಧ್ಯಾಯರೊಡನೆ ನಡೆಸಿದ ಅಸಂಖ್ಯ ಪ್ರಯೋಗಗಳನ್ನು ನಮಗೆ ಕನಕನ ಕಿಂಡಿಯಂತೇ ವಿಸ್ತೃತ ದರ್ಶನ ಮಾಡಿಸಿದವು. ನಾವು ಬಾಯ್ತಪ್ಪಿ ಕೇಳಿದರೂ ಪೂರಕವಾಗಿ ಅವರದೇ ಐದು ಪುಸ್ತಕಗಳನ್ನು ‘ಶುಭಾಶಯ’ಗಳೊಡನೆ ನಮಗೆ ಕೊಟ್ಟು, ನಮ್ಮ ಮುಂದಿನ ಕಲಾಪಕ್ಕೂ ಹಸನಾದ ವ್ಯವಸ್ಥೆ ಕಲ್ಪಿಸಿಯೇ ಬೀಳ್ಕೊಂಡರು.
ಬಿಳಿಗಿರಿಯ ಬನಕ್ಕೆ ದಾರಿ ಯಾವುದಯ್ಯಾ…
೧೯೭೦ರ ಸುಮಾರಿಗೆ ನಾನು ಗಿರೀಶ ಪುತ್ರಾಯ, ಸಾಮಾನ್ಯ ಸೈಕಲ್ಲಿನಲ್ಲಿ, ಒಂದೇ ಹಗಲಿನಲ್ಲಿ, ಮೈಸೂರಿನಿಂದ ಬಿಳಿಗಿರಿ ರಂಗನ ಬೆಟ್ಟಕ್ಕೆ ಹೋಗಿದ್ದೆವು. ಅದು ಅಂತರ್ಜಾಲಾಧಾರಿತ ನಕ್ಷೆಗಳ ಕಾಲವಲ್ಲ, ನಮ್ಮ ತಿಳಿವಳಿಕೆಯಂತೆ ನಂಜನಗೂಡು, ಚಾಮರಾಜನಗರಕ್ಕಾಗಿ ಕ್ಯಾತೇ ದೇವರಗುಡಿಯದೊಂದೇ (ಕೆ ಗುಡಿ) ದಾರಿ (೧೧೮ ಕಿಮೀ). ಚಾಮರಾಜನಗರ ನಮಗೆ ಕೇವಲ ದಾಟಿ ಹೋಗುವ ಒಂದು ಊರು ಮಾತ್ರ. (ನೋಡಿ: ಕರಿಗಿರಿಯ ಬಿಳಿಗಿರಿಗೆ )
[ನಡುವೆ ನನ್ನ ಮದುವೆಯ ಹೊಸತರಲ್ಲಿ, ಅಂದರೆ ೧೯೮೦ರ ದಶಕದಲ್ಲೊಂದು ದಿನ ದೇವಕಿಗೆ ತೋರಿಸಲು ಮತ್ತು ತಾಯಿಯ ಪ್ರೀತ್ಯರ್ಥ, ಮೈಸೂರಿನಿಂದ ನೇರ ಬಸ್ಸು ಹಿಡಿದು ಬಿಳಿಗಿರಿ ರಂಗನ ದರ್ಶನ ಮಾತ್ರ ಮಾಡಿ ರಾತ್ರಿಗೆ ಮರಳಿದ್ದೂ ಇದೆ, ಬಿಡಿ]
೨೦೧೫ರಲ್ಲಿ ಬೆಂಗಳೂರಿನ ಹತ್ತು ಮಂದಿಯ ತಂಡದೊಡನೆ, ಆಧುನಿಕ ಸೈಕಲ್ಲೇರಿ ಐದು ದಿನಗಳ ನೀಲಗಿರಿಯಾನದಲ್ಲಿ, ನೂರೆಂಬತ್ತು ಕಿಮೀ ಅಂತರದಲ್ಲಿ ಸಿಕ್ಕ ಚಾಮರಾಜ ನಗರ, ನಮ್ಮ ಮೊದಲ ರಾತ್ರಿಯ ತಂಗುದಾಣವಷ್ಟೇ ಆಗಿತ್ತು. ಅದನ್ನು ಮೀರಿ, ಅಲ್ಲಿ ಊರು ಜನ ನೋಡುವುದಿರಲಿ, ಯೋಚಿಸಲೂ ಸಮಯವಿರಲಿಲ್ಲ. ಮರು ಬೆಳಿಗ್ಗೆ ಸೂರ್ಯ ಏಳುವ ಮುನ್ನ ನಾವು ದಿಂಬಂ ಘಾಟಿಗಾಗಿ ಮೆಟ್ಟುಪಾಳ್ಯದತ್ತ ಪೆಡಲಿದ್ದೆವು. (ನೋಡಿ: ನೀಲಗಿರಿಯಾನ).
ಪ್ರಸ್ತುತ ಯಾನ ಸಾಹಸೋದ್ದೇಶದ್ದೇ ಅಲ್ಲ. ಮತ್ತೆ ಇಲ್ಲಿನ ಲಕ್ಷ್ಯವಾದರೂ ದೀನಬಂಧು ಟ್ರಸ್ಟ್ ನೆಪದಲ್ಲಿ, ಜಯದೇವರ ಅಸಾಮಾನ್ಯ ಸೇವೆಯ ಕಿಂಚಿದ್ ದರ್ಶನಕ್ಕಾಗಿ ಚಾಮರಾಜ ನಗರದಲ್ಲಿ ಒಂದು ರಾತ್ರಿ ಎಂದಷ್ಟೇ ಇತ್ತು. ಅಲ್ಲೂ ದೀನಬಂಧು ಟ್ರಸ್ಟಿನ ವ್ಯವಸ್ಥೆಗಳ ಬಗ್ಗೆ ತಿಳಿವಿರದ ನಾವು, ಊಟ ವಾಸಕ್ಕೆ ಹೋಟೆಲ್ಲಾದರೂ ಸರಿ ಎಂದೇ ಅಂದಾಜಿಸಿದ್ದೆವು. ಆದರೆ ಜಯದೇವರು ನಮ್ಮ ಸಕಲೋಪಚಾರ ಸಹಿತ ರಾತ್ರಿ ವಾಸಕ್ಕೂ ನೆಲೆ ಒದಗಿಸಿದರು. ಮುಂದುವರಿದು, ನಮ್ಮ ಮುಂದಿನ ಲಕ್ಷ್ಯ – ಬಿಳಿಗಿರಿ ರಂಗನ ಬೆಟ್ಟದೆತ್ತರಕ್ಕೂ ವಿಸ್ತರಿಸಿದ್ದು ಮರೆಯಲಾಗದ ಅನುಭವ.
ಬಿಳಿಗಿರಿ ರಂಗನ ಬೆಟ್ಟದಲ್ಲಿ ವನ್ಯ ಸಮುದಾಯಗಳ ಅಭಿವೃದ್ಧಿಯಲ್ಲಿ ಅಸಾಮಾನ್ಯ ಸಾಹಸ ಮೆರೆದ ಡಾ| ಸುದರ್ಶನರ ಸಾಧನೆಗಳ (ವಿವೇಕಾನಂದ ಗಿರಿಜನ ಕಲ್ಯಾಣ ಕೇಂದ್ರ- ವಿಜಿಕೆಕೆ) ಕಿಂಚಿದ್ ಪರಿಚಯ ಮಾಡಿಕೊಳ್ಳುವುದು ನನ್ನ ಎರಡನೇ ದಿನದ ಲಕ್ಷ್ಯ. ಅದರಲ್ಲಿ ಸುದರ್ಶನರ ಸಾಧನೆಯ ಪಥದ ಭಾಗವೇ ಆದ ದೊಡ್ಡ ಸಂಪಿಗೆಮರ ನೋಡಿ, ಆವರಿಸಿದ ಕಾಡಿನ ಘನತೆ ಅನುಭವಿಸಿ, ಅಲ್ಲೆಲ್ಲೋ (ಯಾವುದೋ ಪೋಡಿನಲ್ಲಿ) ರಾತ್ರಿ ಕಳೆವ ಅಂದಾಜೂ ಹಾಕಿದ್ದೆ. ಆ ಕುರಿತು ಯೋಜನಾ ಹಂತದಲ್ಲಿ ಜಯದೇವ ಹಾಗೂ ಸುದರ್ಶನರನ್ನು ಮಾತಾಡಿಸಿದ್ದೆ. ವನ್ಯ ಇಲಾಖಾ ಮಿತ್ರರನ್ನೂ ಸಂಪರ್ಕಿಸಿದ್ದೆ. ಆದರೆ ಎಲ್ಲರೂ ಹೇಳಿದ್ದು ಒಂದೇ ಮಾತು “ದೊಡ್ಡ ಸಂಪಿಗೆ ಮರದ ದರ್ಶನ, ವನ್ಯ ಚಾರಣ, ಶಿಬಿರಾದಿಗಳನ್ನು ವನ್ಯ ಇಲಾಖೆ ಸಾರ್ವಜನಿಕರಿಗೆ ಸಂಪೂರ್ಣ ನಿಷೇಧಿಸಿದೆ”.
ಐದು ದಶಕಗಳ ಹಿಂದೆ ನಾನು ಅನುಭವಿಸಿದ ಕ್ಯಾತೇ ದೇವರಗುಡಿ ಮಾರ್ಗವನ್ನು ಇಂದು ನವೀಕರಣಕ್ಕಾಗಿ ಪೂರ್ತಿ ಮುಚ್ಚಿದ್ದರು. ಹಾಗೆ ನಮಗುಳಿದ ಒಂದೇ ದಾರಿ ಯಳಂದೂರಿನದ್ದು. ಮತ್ತೆ ನಮ್ಮ ವನ್ಯ ಆಸಕ್ತಿಗೆ ಸಣ್ಣದಾಗಿ ಇಂಬುಗೊಡಲಿದ್ದ ಏಕೈಕ ಸವಲತ್ತು ‘ಕೆ.ಗುಡಿ ಜಂಗಲ್ ರಿಸಾರ್ಟಿ’ನ ಸಫಾರಿ. ಜಯದೇವರು ಮುಂದುವರಿದು “ಗಿರಿಯಲ್ಲಿ ರಾತ್ರಿ ಕಳೆಯಲು ಸರಕಾರೀ ಸಹಿತ (ಮಯೂರ) ಕೆಲವು ಖಾಸಗಿ ಹೋಟೆಲುಗಳೇನೋ ಇವೆ. ನಿಮಗೆ ಅನುಕೂಲ ಅನ್ನಿಸಿದರೆ, ಅಲ್ಲೇ ನನ್ನೊಂದು ಪುಟ್ಟ ತೋಟದ ಮನೆಯೂ ಇದೆ”. ಜಯದೇವರ ಕೊಡುಗೆ ನಮಗೆ ಮಹತ್ವದ್ದೇ ಆಗಿತ್ತು. ನಾವು ಅದಕ್ಕೊಪ್ಪಿದ್ದೇ ತಡ, ಜಯದೇವರು ತೋಟದ ಉಸ್ತುವಾರಿ – ಷಡಕ್ಷರಿಯವರಿಗೆ, ಫೋನಿಸಿ, ಆತ ನಮ್ಮ ದಾರಿ ಕಾಯುವಂತೇ ಮಾಡಿಬಿಟ್ಟರು. ನಾವು ಎರಡು ಯೋಚನೆಯಿಲ್ಲದೆ ಯಳಂದೂರು ದಾರಿ ಹಿಡಿದೆವು. ಯೋಜನಾ ಹಂತದಲ್ಲಿ, ಕೆ. ಗುಡಿದಾರಿಯಲ್ಲೇ ಹೋಗುವುದಿದ್ದರೆ, ನೋಡಬೇಕೆಂದು ಅಂದುಕೊಂಡಿದ್ದ ಚುಕ್ಕಿ ನಂಜುಂಡ ಸ್ವಾಮಿಯವರ ರೈತಾಪಿ ಮಂದಿಯ ಕ್ರಾಂತಿಗಳ ನೆಲೆ – ಅಮೃತ ಭೂಮಿ, ಗೆಳೆಯ ಎಚ್ಚೆಸ್ ಸುಧೀರ್ ಸೂಚಿಸಿದ್ದ ಕೃಷಿ ಪುನರ್ಚಿಂತನೆಯ ನೆಲೆ – ಪುನಾರ್ಚಿತ್, ಕೈ ಬಿಟ್ಟೆವು.
ಯಳಂದೂರು, ಮುಂದುವರಿದು ಬಹುತೇಕ ಅರಣ್ಯ ಇಲಾಖೆಯ ತಪಾಸಣಾ ಗೇಟಿನವರೆಗೂ ದಾರಿ ಬಯಲು, ಹೊಲಗಳ ನಡುವೆಯೇ ಸಾಗಿತ್ತು. ನಮ್ಮ ಓಟದ ದಿಕ್ಕಿಗೆ ಎರಡು ಹಂತದ ಮುಗಿಲುಚುಂಬೀ ಗೋಡೆಯಂತೇ ಇದ್ದ ಘಟ್ಟವನ್ನೇ ತುಡುಕಿದಾಗಲೂ ಘನ ವೃಕ್ಷಗಳು ಕಡಿಮೆಯೇ. ಕಲ್ಲು ಬೆಸೆದ ನೆಲದಲ್ಲಿ ಕುರುಚಲು, ವಿರಳ ಮರಗಳಷ್ಟೇ ಇದ್ದವು. ಏರಿಕೆ ಶುರುವಾದಂತೆ ದಾರಿಯ ಬಳುಕಾಟವಷ್ಟೇ ಕೆಂಪಗೆ ಕಾದ ದಾರಿಯ ಏಕತಾನತೆಯನ್ನು ಕಡಿಮೆ ಮಾಡಿತು. ನಾಗರ ಹೊಳೆಯ ಗೇಟ್ ಕೊಟ್ಟ ಹೊಸ ಅನುಭವದಲ್ಲಿ, ಇಲ್ಲಿ ವನ್ಯ ಇಲಾಖೆ ಕೊಟ್ಟ ಚೀಟಿಯನ್ನು ನಾವು ಹೆಚ್ಚು ಎಚ್ಚರದಲ್ಲೇ ಪಡೆದೆವು. ಆದರೆ ಇಲ್ಲಿ ವನಪ್ರವೇಶದ ವೇಳೆ, ದಿನಾಂಕಗಳ ನಮೂದಿದ್ದರೂ ನಿರ್ಗಮನಕ್ಕೆ ದಿನ, ಸಮಯದ ನಿರ್ಬಂಧವಿರಲಿಲ್ಲವೆಂದು ತಿಳಿದ ಮೇಲೆ ನಿರಾಳರಾದೆವು.
ಬೆಟ್ಟದ ಮಗ್ಗುಲು ಬದಲಿಸಿದಂತೆ ಒಂದೆರಡು ಹಳ್ಳಗಳೂ ಘನ ವೃಕ್ಷಗಳೂ ಸೇರಿ ನಮ್ಮ ಕಣ್ಣೂ ಮನಸ್ಸೂ ತಣಿಯಿತು. ಕೇತನ್ ಕೊಟ್ಟ ನಕ್ಷೆಯ ಬಲದಲ್ಲಿ ನಿಗದಿತ ಜೆಎಸ್ಸೆಸ್ ಸಂಸ್ಥೆಯ ಮಹಾದ್ವಾರ ಕಳೆದ ಕಿರಿದಂತರದಲ್ಲಿ ನಮ್ಮನ್ನೇ ಕಾದಿದ್ದ ಉಸ್ತುವಾರಿ ಷಡಕ್ಷರಿ, ಅನ್ಯ ಗೊಂದಲಗಳಿಲ್ಲದಂತೆ ನಮ್ಮನ್ನು ಜಯದೇವರ ಮನೆ ಮುಟ್ಟಿಸಿದರು.
ಬಿಳಿಗಿರೀಈಈಈ ರಂಗಯ್ಯಾಆಆಆ…
ಜಯದೇವರ ಕಾಫಿ ತೋಟದ ಅಂಚಿನ ಪುಟ್ಟ ಮನೆಗೆ ಇದ್ದದ್ದು ಒಂದು ತುಸು ದೊಡ್ಡ ವಾಸದ ಕೋಣೆ. ಮತ್ತೊಂದು ಸ್ನಾನ ಶೌಚಗಳ ಪುಟ್ಟ ಕೋಣೆ. ಓರ್ವ ವ್ಯಕ್ತಿಯ ದೈನಂದಿನ ಕನಿಷ್ಠ ಅಗತ್ಯಾನುಸಾರ ದೀಪ, ನಲ್ಲಿ, ಅಡುಗೆ ಅಂಕಣ, ಸೌರಾಧಾರಿತ ಬಿಸಿನೀರು, ಪುಟ್ಟ ಗ್ರಂಥಾಲಯ, ಕಪಾಟು… ಅಚ್ಚುಕಟ್ಟಾದ ಸೌಕರ್ಯಗಳು. ಹಾಸಿದರೆ ಪೂರ್ಣ ನೆಲ ಮುಚ್ಚುವ ದಪ್ಪ ಜಮಖಾನವನ್ನೂ (ನಮಗೆ ಮಲಗಲು) ನೋಡಿದ ಮೇಲೆ ಅದು ನಮಗೆ ಹೇಳಿ ಮಾಡಿಸಿದಂತಿತ್ತು. ಹೆಚ್ಚು ಸಮಯ ಕಳೆಯದೆ, ಉಸ್ತುವಾರಿಯ ಷಡಕ್ಷರಿಯವರಲ್ಲಿ “ಊರು ಸುತ್ತಿ, ಊಟ ಮುಗಿಸಿಯೇ ರಾತ್ರಿ ವಿಶ್ರಾಂತಿಗಷ್ಟೇ ಬರುತ್ತೇವೆ” ಹೇಳಿ ಹೊರಡಲಿದ್ದೆವು. ಆದರೆ ಆತ, ಬಯಲುಸೀಮೆಯ ಮುಗ್ದ, “ಕೆಲವೇ ದಿನಗಳ ಹಿಂದೆ ಸಮೀಪದಲ್ಲೇ ಚಿರತೆ ಮನುಷ್ಯನನ್ನು ಹೊಡೆದಿತ್ತು, ಈಚೆಗೆ ಆನೆ ನಮ್ಮ ವಿದ್ಯುತ್ ಬೇಲಿ ಸಹಿತ ಗೇಟನ್ನೇ ಮುರಿದಿತ್ತು….” ಎಂದು ಭಯ ತೋಡಿಕೊಂಡರು. ಅವರೆದುರು ನಮ್ಮ ವನ್ಯ ತಿಳಿವಳಿಕೆಯ ಪ್ರದರ್ಶನಕ್ಕಿಳಿಯದೆ, ಎಚ್ಚರಿಕೆ ವಹಿಸುತ್ತೇವೆಂದು ಭರವಸೆ ಕೊಟ್ಟೇ ಜಾರಿದೆವು.
ಜಯದೇವರು ಗ್ಯಾಸ್ ಟ್ರಬಲ್ ಅರ್ಥಮಾಡಿಕೊಂಡು ಊಟ ತಿಂಡಿಯ ಕುರಿತು ನಮ್ಮನ್ನು ಮೊದಲೇ ಎಚ್ಚರಿಸಿದ್ದರು. ಹಾಗಾಗಿ ಮನೆಗೆ ಸಮೀಪದ ಗಿರಿದರ್ಶಿನಿಗೆ ಹೋಟೆಲಿನಲ್ಲಿ ಐದೂಟ ಕಾಯ್ದಿರಿಸಿ, ದೇವಳದತ್ತ ಹೋದೆವು. ಅಲ್ಲಿ ಕಾರನ್ನೇನೋ ಕಷ್ಟದಲ್ಲಿ ನಿಲ್ಲಿಸಿದೆವು. ಆದರೆ ಒಳಗೆ ದೇವ ಬಿಂಬ ದರ್ಶನಕ್ಕೆ ನಿಂತ ಸರತಿ ಸಾಲು ನಮ್ಮ ಸಮಯದ ಒತ್ತಡಕ್ಕೆ ಒಲಿಯುವಂತೆ ಕಾಣಲಿಲ್ಲ. ಸಹಜವಾಗಿ ನಾವು ಬಿಂಬ ದರ್ಶನಕ್ಕೆ ಸೈಡ್ ಹೊಡೆದು, ದೇವಳದ ಹಿತ್ತಲಿನ ಕಮರಿಯಂಚಿಗೆ ಹೋಗಿ ಸಾಕ್ಷಾತ್ ಪ್ರಕೃತಿ ದೇವರನ್ನು ಧಾರಾಳ ಮನದುಂಬಿಕೊಂಡೆವು. ಮತ್ತೆ ಹೋಟೆಲಿಗೆ ಬಂದು, ಊಟದ ಶಾಸ್ತ್ರ ನಡೆಸಿದೆವು. ಹೆಚ್ಚೇನೂ ಇರಲಿಲ್ಲ, ಸಾಲದ್ದಕ್ಕೆ ಸಂಜೆ ಆರುಗಂಟೆಗೇ ತಾವು ಮುಚ್ಚುವುದಾಗಿಯೂ ಎಚ್ಚರಿಸಿದರು! ಮತ್ತಲ್ಲಿಂದ ಅರಣ್ಯ ಇಲಾಖಾ ಮಿತ್ರರ ಸೂಚನೆಯಂತೆ….
ಅರಣ್ಯ ಇಲಾಖೆಯ ವನದರ್ಶನ
ಕ್ಯಾತೆ ದೇವರಗುಡಿ ರಸ್ತೆಯಲ್ಲಿ ಸುಮಾರು ಹದಿನಾಲ್ಕು ಕಿಮೀ ಅಂತರದ ಅರಣ್ಯ ಇಲಾಖೆಯ ಜಂಗಲ್ ರಿಸಾರ್ಟನ್ನು ಸಕಾಲಕ್ಕೆ ಸೇರಿದೆವು. ನಿಜದ ಕ್ಯಾತೆ ದೇವರ ಗುಡಿ, ನಾನು ಹಿಂದೆ ಕಂಡಂತೆ, ಘಟ್ಟ ದಾರಿಯಲ್ಲಿ ಇನ್ನೂ ಕೆಲವು ಕಿಮೀ ಕೆಳಗೇ ಇದೆ. ಇಲ್ಲಿನ ಮೂಲ ರಚನೆ ಹಿಂದಿನ ಮೈಸೂರರಸರ ಬೇಸಗೆ ಅರಮನೆ. ಪುಟ್ಟ ಸುಂದರ ಉಪವನದಿಂದ ಸುತ್ತುವರಿದಿದ್ದ ಅರಮನೆ ಶಿಖರ ಸಾಲಿನ ಕಣಿವೆಯ ಅಂಚಿನಿಂದಲೇ ಸುಂದರ ದೃಶ್ಯ ಸಾಮ್ರಾಜ್ಯವನ್ನು ಆಳುತ್ತಿತ್ತು. ಆದರಿಂದು ಉಪವನ ಅಭಿವೃದ್ಧಿ ಹಾಗೂ ವಾಹನಗಳ ಓಡಾಟದಲ್ಲಿ ಅಳಿಸಿಹೋಗಿ, ಉಳಿದ ಅಂಗಳವಾದರೂ ನಿರ್ಮಾಣ ಕಸಗಳ ಕುಪ್ಪೆಯಾಗಿ ಶೋಭಿಸುತ್ತಿದೆ. ಅದರಿಂದಾಚೆಗಿದ್ದ ದಟ್ಟ ಬಿದಿರ ಕಾಡು ಇಂದು ಅವಶೇಷವನ್ನೂ ಕಾಣಿಸುತ್ತಿಲ್ಲ! (ಅಲ್ಲಿದ್ದ ಹಿರಿಯ ಇಲಾಖಾ ನೌಕರನೊಬ್ಬನಿಗೆ ನಾನು ಕಂಡಿದ್ದ ಬಿದಿರ ಕಾಡಿನ ಬಗ್ಗೆ ಹೇಳಿದೆ. ಆತ ಹುಬ್ಬೇರಿಸಿ “ಅಯ್ಯೋ ಆಗ ನಾ ಹುಟ್ಟೇ ಇರಲಿಲ್ಲ ಬುಡಿ” ಅಂದು ಮುಗಿಸಿದ)
ವನ್ಯ ಇಲಾಖೆ ಅರಮನೆ ಕಟ್ಟಡವನ್ನು ಕೇಂದ್ರವಾಗಿಟ್ಟುಕೊಂಡು, ಕಣಿವೆಯ ಮಗ್ಗುಲಿನ ಸಾಮಾನ್ಯ ಇಳುಕಲಿನಲ್ಲಿ ‘ಶುದ್ಧ ಅಂಗಳ’, ನಡೆ ಮಡಿ, ಅಲಂಕಾರಿಕ ಪಾತಿ, ದಾರಿ ದೀಪ… ಕೊಟ್ಟು ಅನೇಕ ಅಂಗಳಗಳನ್ನೇ ರೂಪಿಸಿದೆ. ಅವುಗಳಲ್ಲಿ ಆಧುನಿಕ ಸವಲತ್ತು ಸಜ್ಜಿತವಾದ, ಹೊರ ನೋಟಕ್ಕೆ ಜೋಪಡಿಯಂತಿರುವ ವಸತಿ (ಸೂಟು ಬೂಟಿನವರು ತಲೆಗೆ ಮುಟ್ಟಾಳೆ ಇಟ್ಟಂತೆ), ಊಟದ ಮನೆ, ಕೂಟದ ಮನೆಗಳನ್ನೂ ನಿಲ್ಲಿಸಿ, ವೈಭವದ ತಾರಾ ಹೋಟೆಲ್ ನಡೆಸಿದೆ!
ಮೇಲ್ಮೈಯಲ್ಲಿ ಮುಳ್ಳು, ಮರೆ, ಆನೆಗಳ ‘ಹಾವಳಿ’ ಉಂಟು ಮಾಡುವ ಸರ್ವವ್ಯಾಪೀ ಬಿದಿರಿನ ಸಂತಾನ ಪೂರ್ಣ ತೆಗೆದೇ ಬಿಟ್ಟಿದೆ. ನಾನು ಹಿಂದೆ ಕಾಣದ ಕೆರೆ ಕಾಣಿಸಿ, ವಿರಳ ಮರಗಳನ್ನಷ್ಟೇ ಉಳಿಸಿ, ನೆಲವನ್ನು ಬರಗೆಡಿಸಿದೆ. ದಾರಿಯ ದೂರದ ಕೊನೆಯಲ್ಲಿ ಗಿರಿಜನ ಮಕ್ಕಳ ಪ್ರಾಥಮಿಕ ಶಾಲೆಯಿದೆ. ಮತ್ತೆ ಎರಡೂ ಮಗ್ಗುಲಿನಲ್ಲಿ ಒಂದಷ್ಟು ಇಲಾಖಾ ರಚನೆ – ನೌಕರರ ವಸತಿ, ಆರೋಗ್ಯ ಕೇಂದ್ರ, ಮಾಹಿತಿ ಕೇಂದ್ರ, ಉಪಾಹಾರ ಕೇಂದ್ರ… ಸಂತೆ ಹರಡಿದೆ. ‘ಹಸುರೇ ಉಸಿರು’ ಘೋಷಣೆಗೆ ವ್ಯತ್ಯಯ ಬಾರದಂತೇ ಎಲ್ಲಕ್ಕೂ ಆಪ್ಕೋಲೈಟ್ ಹಸುರುಬಣ್ಣವನ್ನೇ ಬಳಿದಿದೆ! ಪರೋಪದೇಶ ಪಾಂಡಿತ್ಯದಲ್ಲಿ ಕೊರತೆಯಾಗದಂತೆ ಉದಾತ್ತ ವಾಕ್ಯಗಳ, ಚಿತ್ರ ಫಲಕಗಳನ್ನು ಧಾರಾಳ ಪ್ರದರ್ಶಿಸಿದೆ. ರಚನೆಗಳ ಔಚಿತ್ಯ, ಉಪಯುಕ್ತತೆ ನಿರ್ಮಾಣಕ್ಕಷ್ಟೇ, ನಿರ್ವಹಣೆಗಲ್ಲ ಎನ್ನುವಂತೆ ಅವುಗಳಲ್ಲಿ ಬಹುತೇಕ ರಚನೆಗಳು ಹಾಳುಸುರಿದಿವೆ.
ಮೂರು ಗಂಟೆಯ ಸುಮಾರಿಗೆ (ತಲಾ ರೂ.೪೫೦) ಹತ್ತು ಮಂದಿಯನ್ನು ಹೇರಿಕೊಂಡ ನಮ್ಮ ಸಫಾರಿ ಜೀಪ್ ಕಾಡಿನೊಳಗಿನ ಕಚ್ಚಾ ಮಾರ್ಗ ಸುತ್ತಾಟಕ್ಕೆ ಹೊರಟಿತು. ಮಳೆಗಾಲಕ್ಕೂ ಹೊಂದುವಂತೆ ಕಲ್ಲು ಕಡಿಗಳನ್ನು ಹುಗಿದ ಕಚ್ಚಾ ದಾರಿ. ಜೀಪಿನ ದಡಬಡದೊಡನೇ ಒಂದೆಡೆ ಚಾಲಕ, ಅಲ್ಲಿನ ಮೂಲವಾಸಿಗಳಾದ ಸೋಲಿಗರ ಮರುವಸತಿ ವ್ಯವಸ್ಥೆಯನ್ನು ಕೈ ಮಾಡಿ ತೋರಿದ. ಪೊದರು, ಕಾಡಿನೊಡನೆ ಸ್ಪರ್ಧಿಸುತ್ತ ಬೆಳೆದಂತಿದ್ದ ಕಾಫಿ, ಒಳ್ಳೇಮೆಣಸಿನ ಕೃಷಿ ಕಂಡೆವು. ಒಟ್ಟು ವನಧಾಮದೊಳಗೆ ಹರಡಿಕೊಂಡು, ಕುಶಿವಾಸೀ ಜೀವನ ನಡೆಸಿದ್ದ ಗಿರಿಜನರನ್ನು ಇಲ್ಲಿ ಒಟ್ಟು ಮಾಡಿದ್ದರು. ಯೋಗ್ಯತಾನುಸಾರ ಅವರೆಲ್ಲರಿಗೆ ಅಲ್ಲೇ ತಲಾ ಅರ್ಧ, ಒಂದು ಎಕ್ರೆ ಭೂಮಿ, ಪೂರಕವಾಗಿ ನೀರು, ವಿದ್ಯುತ್, ಅನುದಾನ ಮುಂತಾದ ಸೌಕರ್ಯಗಳನ್ನು ಕೊಟ್ಟು ಮರುವಸತಿ ಕಲ್ಪಿಸಿದ್ದರು.
ಕಾಡಿನೊಳಗಿನ ದಾರಿಯ ಎರಡೂ ಬದಿಗಳಲ್ಲಿ ಸಾಕಷ್ಟು ವಿಸ್ತಾರಕ್ಕೇ ಪೊದರು ಉದುರು, ಸೌದೆಗಳನ್ನು ಬಹುತೇಕ ನಿವಾರಿಸಿದ್ದು ಸ್ಪಷ್ಟವಿತ್ತು. ಇದು ಸಾರ್ವಜನಿಕ ಸಂಚಾರವೇ ಇಲ್ಲದ ವಲಯಗಳಲ್ಲಿ ಬೆಂಕಿಯ ಭಯಕ್ಕಿಂತಲೂ ವಿಹಾರಿಗಳ ನೋಟಕ್ಕೆ ಅನುಕೂಲ ಮಾಡಿದಂತಿತ್ತು. ಸುಮಾರು ಒಂದೂವರೆ ಗಂಟೆ ಸುತ್ತಿನಲ್ಲಿ, ಎರಡು ಮೂರು ಜಿಂಕೆ, ಮಂಗ ಬಿಟ್ಟು ನಮಗೇನೂ ದಕ್ಕಲಿಲ್ಲ. ಅಲ್ಲದಿದ್ದರೂ ಹೆಚ್ಚಿನ ಪ್ರಾಣಿಗಳು ಮಟಮಟ ಮಧ್ಯಾಹ್ನ ಕಾನನಾಂತರದ ನೆರಳಿನಲ್ಲೋ ನೀರ ತಟಾಕಗಳಲ್ಲೋ ವಿಶ್ರಮಿಸುತ್ತಲೂ ಇದ್ದಿರಬಹುದು, ಬಿಡಿ. ಕತ್ತಲು ಮುತ್ತುವ ಮುನ್ನ ಇನ್ನೇನಾದರೂ ಒಳ್ಳೇದು ನೋಡಿಯೇವೇ ಎಂದು ಕೊಂಡು ಕಾರನ್ನು ಮತ್ತೆ ಗಿರಿಯತ್ತ ಓಡಿಸಿದೆವು.
ಮ್ಯಾಗ್ಸೇಸೇ ಪುರಸ್ಕೃತರು
ವನದರ್ಶನದ ಮುಗಿಸಿ ಗಿರಿಗೆ ಮರಳುತ್ತಿದ್ದಂತೆ ದಾರಿಯ ಮಗ್ಗುಲಿನಲ್ಲಿ ವಿವೇಕಾನಂದ ಗಿರಿಜನ ಕಲ್ಯಾಣ ಕೇಂದ್ರದ (ವಿಜಿಕೆಕೆ) ವಠಾರ ಕಂಡು ಕಾರಿಳಿದೆವು. ಆದರಲ್ಲಿ ಮರ, ಕಸ ಕೂಡಿ, ಜನ ಬಳಕೆಗೆ ದೂರಾಗಿ ಕಟ್ಟಡಗಳು ಹಾಳುಬಿದ್ದಿರುವುದು ಕಂಡು ಬೆರಗಾಗಿ ನನ್ನ ನೆನಪಿನ ಪುಟಗಳ ದೂಳೊರಸಿದೆ…
೧೯೬೦ರ ದಶಕದಲ್ಲಿ ನಾನು ಬೆಂಗಳೂರಿನಲ್ಲಿ ಪ್ರೌಢಶಾಲಾ ವಿದ್ಯಾರ್ಥಿಯಾಗಿದ್ದಂತೆ, ಆದಿತ್ಯವಾರದ ಪೂರ್ವಾಹ್ನಗಳಲ್ಲಿ ರಾಮಕೃಷ್ಣಾಶ್ರಮದ ವಿವೇಕಾನಂದ ಬಾಲಕ ಸಂಘದ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಿದ್ದೆ. ಅಲ್ಲಿ ನಿತ್ಯ ಸಂಜೆ ಬರುವ ಇನ್ನೊಂದೇ ವಿಭಾಗದಲ್ಲಿ, ನನಗಿಂತ ತುಸು ಹಿರಿಯ, ಅದೇ ತಾನೆ ವೈದ್ಯಕೀಯ ಶಿಕ್ಷಣಕ್ಕೆ ಸೇರಿಕೊಂಡಿದ್ದ ಸುದರ್ಶನ್ ಎಂಬೊಬ್ಬನ ಮುಖ ಪರಿಚಯವಾಗಿತ್ತು. ಅಷ್ಟಕ್ಕೇ ನಿಲ್ಲದೆ, ಆತನ ಸೇವಾಶ್ರದ್ಧೆಯ ಕುರಿತು ಓರ್ವ ಗುರುಗಳಾದ ಸೋಮಸುಂದರಂ ಒಳ್ಳೆಯ ಮಾತುಗಳನ್ನಾಡಿದ್ದರು. ಮುಂದಿನ ದಿನಗಳಲ್ಲಿ ಶಿಕ್ಷಣ ಮುಗಿಸಿದ ಯುವ ಡಾ| ಸುದರ್ಶನ್, ಬಿಳಿಗಿರಿ ರಂಗನ ಬೆಟ್ಟಕ್ಕೆ ಹೋಗಿ ಗಿರಿಜನರ ಸೇವೆಗೇ ಮೀಸಲಾಗಿ ನಿಂತರು. ಅವರು ವಿಜಿಕೆಕೆ ಕಟ್ಟಿದ್ದೂ ಅವರಿಗೆ ಜತೆಗೊಡಲು ಸೋಮಸುಂದರಂ ಕೂಡಾ ಹೋದದ್ದೂ ಸುದರ್ಶನರ ಸೇವಾ ಪಾರಮ್ಯಕ್ಕೆ ಮ್ಯಾಗ್ಸೇಸೇ ಪ್ರಶಸ್ತಿ ಒಲಿದದ್ದೂ ಕೇಳುತ್ತಲೇ ಬಂಡೆ. ಆಗೆಲ್ಲ ನಾನವನ್ನು ಕನಿಷ್ಟ ಒಮ್ಮೆಯಾದರೂ ನೋಡಬೇಕಲ್ಲಾ ಎಂದು ಅಂದುಕೊಂಡದ್ದೇ ಬಂತು. ಈ ಬಾರಿ…
ಪೊನ್ನಂಪೇಟೆ, ಚಾಮರಾಜನಗರಗಳ ಭೇಟಿಯ ಪಟ್ಟಿ ಮಾಡುವಾಗ ಮೂರನೆಯ ಹೆಸರಾಗಿ ಸೇರಿದ್ದೇ ವಿಜಿಕೆಕೆ ಮತ್ತದರ ವನ್ಯ ಪರಿಸರ. ಯೋಜನಾ ಹಂತದಲ್ಲೇ ನಾನು ಸುದರ್ಶನರಿಗೆ ಫೋನಿಸಿದ್ದೆ. ಅವರು ದೂರದ “ಕೊಲ್ಕೊತ್ತಾದಲ್ಲಿದ್ದೇನೆ, ತಿಂಗಳ ಕೊನೆಗಷ್ಟೇ ಮರಳುತ್ತೇನೆ…” ಎಂದಿದ್ದರು. ಮತ್ತೆ ವನ್ಯ ಪರಿಸರ ಚಾರಣದ ಕುರಿತಂತೆ, ಜಯದೇವರ ಮಾತಿಗೆ ಬಲಕೊಡುವಂತೆ ಇಲಾಖೆಯ ಅಸಹಕಾರವನ್ನೂ ತಿಳಿಸಿದ್ದರು. ಇಲಾಖೆಯ ‘ಸದ್ಗುಣ’ವೇನೋ ಅನುಭವಿಸಿದ್ದಾಯ್ತು. ವಿಜಿಕೆಕೆ ಯಾಕೆ ಹೀಗೆ ಎಂದು ತಲೆ ತುರಿಸುವಾಗ, ಆ ವಠಾರದೊಳಗಿನ ಮರವೊಂದರ ಮರೆಯಲ್ಲಿ ಸುಮ್ಮನೇ ಕುಳಿತಿದ್ದ ವ್ಯಕ್ತಿಯೊಬ್ಬರು ಉದ್ಗರಿಸಿದರು. “ಕಾರು ತೆಗೆದುಕೊಂಡು ಒಳಗೆ ಹೋಗಿ, ಕ್ಯಾಂಪಸ್ಸು ಚೆನ್ನಾಗಿದೆ, ಜನ ಇದ್ದಾರೆ!” ನಿಜ….
ಗೇಟು ನುಗ್ಗಿ, ಸಪುರ ಓಣಿ ಹಾಯ್ದು ವಿಸ್ತಾರ ಮೈದಾನಕ್ಕಿಳಿಯುತ್ತಿದ್ದಂತೆ, ಸುತ್ತುವರಿದಂತಿದ್ದ ಒಂದು ದೊಡ್ಡ ಜಗುಲಿಯಲ್ಲಿ ಜೀವಕಳೆ ಇತ್ತು. ಅಲ್ಲಿನದೇ ಕೆಲವು ವಿದ್ಯಾರ್ಥಿಗಳು, ಬರಲಿದ್ದ ಎಸ್ಸೆಸ್ಸೆಲ್ಸಿ ಪರೀಕ್ಷಾ ಸಿದ್ಧತೆಯಲ್ಲಿದ್ದರು. ಕೇಂದ್ರದ ಕಚೇರಿ, ಉಸ್ತುವಾರಿ, ಸಹಾಯಕರೆಲ್ಲರೂ ಹಬ್ಬವೋ ಇನ್ನೊಂದೋ ನೆಪದಲ್ಲಿ ರಜೆಯಲ್ಲಿದ್ದರು. ಮಹಿಳಾ ವಸತಿಗಳಿಂದ ಬಂದ ಓರ್ವ ಅಧ್ಯಾಪಕಿ – ಚೈತ್ರಾ, ಬಂದು, ನಮ್ಮನ್ನು ವಠಾರದ ಒಳಗೆ ಓಡಾಡಿಸಿ ವಸತಿ ನಿಲಯಗಳಲ್ಲದೆ ಪ್ರಾಥಮಿಕ ಮತ್ತು ಪ್ರೌಢ ಶಾಲಾವಿಭಾಗಗಳು, ವಿಜ್ಞಾನ ವನ, ಮೈದಾನ, ಕೈ ಮಗ್ಗ, ವನೋತ್ಪತ್ತಿಗಳ ಮೌಲ್ಯವರ್ಧನ ವಿಭಾಗ, ಸುದರ್ಶನರದ್ದೇ ಮನೆ ಎಲ್ಲಾ ಮೇಲಿನಿಂದ ಮೇಲೆ ತೋರಿಸಿದರು. ಎಲ್ಲವೂ ಜಡವಾಗಿ ಕೆಲಕಾಲ ಕಳೆದಂತೇ ತೋರಿದಾಗ, ವರ್ತಮಾನಕ್ಕಿಂತ ಗತವೈಭವ ಹೇಳುತ್ತಿರಬೇಕೆಂದೇ ಅನ್ನಿಸಿತು. ಆಕೆ ದೂರದ ಬಯಲು ಸೀಮೆಯಿಂದ ಇಲ್ಲಿಗೆ ಬಂದು ಸೇರಿ ಮೂರು ವರ್ಷ ಕಳೆದರೂ ಪರಿಸರದ ತಿಳಿವಳಿಕೆ ತುಂಬಾ ಕಡಿಮೆಯಿದ್ದಂತಿತ್ತು. ಅದು ಪ್ರಾಮಾಣಿಕವೋ ಜಾಣತನವೋ ಎಂದು ಪರೀಕ್ಷಿಸುವ ಆವಶ್ಯಕತೆ ನಮಗಿರಲಿಲ್ಲವಾದ್ದರಿಂದ ನಾವು ಮತ್ತೆ ಕಾರೇರಿದೆವು. ಸೂರ್ಯ ಆಗಲೇ ರಂಗು ಪಡೆದು ನೆರಳು ಲಂಬಿಸಿತ್ತು.
ರಾಜ್ಯ ಪ್ರಶಸ್ತಿ ಪುರಸ್ಕೃತರು
ಸಫಾರೀ ಪಾರ್ಕಿನಲ್ಲಿ ಯಾರೋ ಹೇಳಿದ ಮಾತು ಕೇಳಿ, ತಿರುಮಲೇಶ ಭಟ್ಟರಿಗೆ ಪುನಃ ದೇವಳದ ಹಿತ್ತಲಿಗೆ ಹೋಗಿ, ಕಮರಿಗೆ ದೃಷ್ಟಿ ಹಾಯಿಸಿದರೆ ಕಾಡಾನೆ ದರ್ಶಿಸುವ ಬಯಕೆ ಮೂಡಿತ್ತು. ಆದರೆ ದಾರಿಯಲ್ಲಿ ಬಲ ಬದಿಗೆ ‘ಜಡೇ ರುದ್ರಸ್ವಾಮೀ ನರ್ಸರಿ’ ಎಂದು ದೊಡ್ಡದಾಗಿಯೂ ‘ರಾಮೇಗೌಡಾ ಸಸ್ಯಕಾಶಿ’ ಎಂದು ಸಣ್ಣದಾಗಿಯೂ ಬರೆದಿದ್ದ ನಾಮಫಲಕ ಕಾಣಿಸಿತು. ಕೂಡಲೇ ಜಯದೇವರು ಅಕ್ಟೋಬರಿನಲ್ಲೇ ಕಳಿಸಿದ್ದ ಸಂದೇಶ “ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಭಾಜನರಾದ ಸೋಲಿಗರ ರಾಮೇ ಗೌಡರಿಗೆ ಅಭಿನಂದನೆಗಳು” ನೆನಪಾಗಿ, ಗಕ್ಕನೆ ಕಾರು ನಿಲ್ಲಿಸಿ ನುಗ್ಗಿಯೇ ಬಿಟ್ಟೆವು.
ನಿತ್ಯ ರೋಮಾಂಚನದ ಕೇಶ ಸಂಪತ್ತಿನ, ೬೪ರ ಹರಯದ ರಾಮೇಗೌಡರೇ ಸಿಕ್ಕರು. ತೀರ್ಥಕ್ಷೇತ್ರ ಮತ್ತು ಗಿರಿಧಾಮದ ಆರಾಮ ಭಾವನೆಯನ್ನು ಕಿತ್ತೊಗೆಯುವ ತುರುಸಿನ ಕೃಷಿ ಕಾರ್ಯ ಅಲ್ಲಿ ನಡೆದಿತ್ತು. ನಾವು ಜಯದೇವರ ಹೆಸರು ಹೇಳಿ, “ಕೇವಲ ನೋಡಿ ಹೋಗುವುದಕ್ಕಷ್ಟೇ ಬಂದಿದ್ದೇವೆ” ಎಂದೇ ತಿಳಿಸಿದೆವು. ಆದರೂ ಆ ವಿನಯ ಸಂಪನ್ನ, ಬರುತ್ತಿದ್ದ ಫೋನನ್ನು ಸುಧಾರಿಸಿಕೊಳ್ಳುತ್ತಲೇ ನಮಗೆ ಅಂಕಣಗಳಲ್ಲಿನ ಸಸ್ಯ ವಿಶೇಷಗಳನ್ನು ತಿಳಿಸುತ್ತಾ ಹೊರಟರು. ಅವರ ಮೂರ್ನಾಲ್ಕು ಸಹಾಯಕರು ಬಿಡುವಿಲ್ಲದಂತೆ ತೊಟ್ಟೆಗಳಿಗೆ ಗೊಬ್ಬರದ ಮಣ್ಣು ತುಂಬುವುದು, ಬೀಜ ಬಿತ್ತುವುದು, ಕಳೆ ನಿವಾರಿಸುವುದು ಎಂದೆಲ್ಲಾ ಬಿಸಿಯಲ್ಲೇ ಇದ್ದರು. ಇನ್ನೊಂದೆಡೆ ಅವರ ಅಪೂರ್ಣ ಹೊಸಮನೆ ನಿರ್ಮಾಣದ ಕೆಲಸವೂ ನಡೆದಿತ್ತು. ಸಾಲದೆಂಬಂತೆ ಯಾರೋ ನಿಜ ಗಿರಾಕಿಗಳೇ ಬಂದಾಗ, ಅದುವರೆಗೆ ಸಂಕೋಚದಲ್ಲೇ ಜತೆಗೊಟ್ಟಿದ್ದ ನಾವು, ರಾಮೇ ಗೌಡರನ್ನು ಅತ್ತ ಸಾಗ ಹಾಕಿದೆವು. ನಮ್ಮದೇ ಸೀಮಿತ ಜ್ಞಾನಕ್ಕೆ ದಕ್ಕಿದಷ್ಟು ನೋಡಿ, ಗ್ರಹಿಸಿ, ದಾಖಲಿಸಿಕೊಂಡು ವಿದಾಯ ಹೇಳಿದೆವು. ನಾವು ಅಲ್ಲಿದ್ದ ಸಣ್ಣ ಸಮಯದಲ್ಲೂ ಅವರ ಚಟುವಟಿಕೆಯ ವ್ಯಾಪ್ತಿ ನೋಡಿ ನಿಜಕ್ಕೂ ಸಂತೋಷವಾಯ್ತು.
ನೆರಳು ಮಾಸಿತ್ತು. ಆನೆ ನೋಡುವ ಯೋಚನೆ ಬಿಟ್ಟು, ಚಾಚಟ ತೀರಿಸಲೆಂಬಂತೆ ಗಿರಿದರ್ಶಿನಿ ನೋಡಿದರೆ, ಆಗಲೇ ಬೀಗ ಬಿದ್ದಿತ್ತು. ಮುಂದೆ ಇದ್ದ ಏಕೈಕ ಆಸರೆ ‘ಸರ್ಕಾರೀ ಹೋಟೆಲ್ ಮಯೂರ’ಕ್ಕೆ ಹೋದೆವು. “ಕಾಫಿಗೆ ಜತೆಗೇನು…” ಕೇಳಿದ್ದಕ್ಕೆ ಒಳ್ಳೆಯ ಬಟಾಟೆ ಸೀಳ್ಹುರಿ ಕೊಟ್ಟರು. ರಾತ್ರಿಗೇನು ಎಂದಾಗ, “ಊಟ ಎಂದಿಲ್ಲ. ಏಳರಿಂದಾಚೆ ಒಂದೆರಡು ಗಂಟೆ ಕಾಲ ಮೊಸರನ್ನವೋ ಚಪಾತಿಯೋ ಕೊಡಬಹುದು” ಎಂಬ ಆಶ್ವಾಸನೆ ಸಿಕ್ಕಿತು. ಮತ್ತೆ ಹೆಚ್ಚು ಯೋಚನೆ ಬೆಳೆಸದಂತೆ ಷಡಕ್ಷರಿಯವರ ಆತಂಕಿತ ಫೋನ್ ಬಂತು “ಸಾರ್ ಕತ್ತಲಾಗುತ್ತಿದ್ದೆ, ಎಲ್ಲಿದೀರಾ…” ಅವರಿಗೆ ಧೈರ್ಯ ಕೊಟ್ಟು, ಮನೆ ಸೇರಿಕೊಂಡೆವು. ಬೇರೆ ಒಂದೆರಡು ಮನೆಗಳೂ ತೋಟವೂ ಸೇರಿದಂತೆ ವಿದ್ಯುತ್ ಬೇಲಿಯ ರಕ್ಷಣೆ ಕಲ್ಪಿಸಿದ್ದರು. ಹಾಗಾಗಿ ನಿಶ್ಚಿಂತೆಯಲ್ಲೇ ಜಗುಲಿಯ ಮೇಲೆ ಪಟ್ಟಾಂಗ ಹೊಡೆಯುತ್ತಾ ಸರತಿಯಲ್ಲಿ ಒಬ್ಬರಂತೆ ಸ್ನಾನ ಶೌಚಾದಿಗಳನ್ನು ಮುಗಿಸಿಕೊಳ್ಳುತ್ತಿದ್ದಂತೆ ‘ಊಟದ ಗಂಟೆ’ ಆಗಿತ್ತು. ಷಡಕ್ಷರಿಗೆ ಎರಡೆರಡು ಬಾರಿ ಧೈರ್ಯ ಹೇಳಿ, ಅರ್ಧ ಕಿಮೀ ಅಂತರದ ಮಯೂರಕ್ಕೆ ನಡೆದೇ ಹೋಗಿ ಊಟದ ಶಾಸ್ತ್ರ ಮುಗಿಸಿ ಮರಳಿದೆವು. ಮರುದಿನದ ಮಲೆ ಮಹದೇಶ್ವರ ಬೆಟ್ಟಗಳ ಭೇಟಿಯನ್ನೇ ಧ್ಯಾನಿಸುತ್ತಾ ಸುಖನಿದ್ರೆಗೊಳಗಾದೆವು.
ಮಲೆ ಮಾದೇಶ್ವರದಲ್ಲಿ ಬಳಲಿದ ಮನಸ್ಸು
ಬೆಳಿಗ್ಗೆ ಬಿಳಿಗಿರಿ ಘಾಟಿ ರಸ್ತೆಯ ಚಂದ ಮತ್ತು ಸೂರ್ಯೋದಯದ ಅಂದ ವಿರಾಮದಲ್ಲಿ ಗ್ರಹಿಸುವ ಆಸೆ ಹೊತ್ತಿದ್ದೆವು. ಆದರೆ ಇತ್ತ ಮಂಜೂ ಅಲ್ಲ, ಅತ್ತ ದೂಳೂ ಅಲ್ಲದ ಮಬ್ಬು ಕಾಡಿತು. ಯಳಂದೂರು ಬಸ್ ನಿಲ್ದಾಣದ ರಾಘವೇಂದ್ರ ಹೋಟೆಲ್ ಹೊಟ್ಟೆಯೇನೋ ತುಂಬಿಸಿತು, ಗುಣ ಮಾತ್ರ ಮಟ್ಟವಾಗಿತ್ತು! (ಹಿಂದಿನದ ದೀನಬಂಧುವಿನ ರುಚಿ, ಹಿತ ನೆನಪಾಗದಿರಲಿಲ್ಲ) ಅಲ್ಲಿವರೆಗಿನಂತೇ ಮುಂದೆಯೂ (ಕೊಳ್ಳೇಗಾಲಕ್ಕಾಗಿ) ಸುಮಾರು ಎಪ್ಪತ್ತು ಕಿಮೀ ಉದ್ದಕ್ಕೆ ದಾರಿ ಬಹುತೇಕ ನೇರ, ಮಟ್ಟಸ ಮತ್ತು ನುಣ್ಣಗಿತ್ತು. ಮಿಂಚಿನಂತೇ ಓಡಿದ್ದ ನಮ್ಮ ಕಾರಿಗೆ “ತಾಳು…” ಎಂದಿತ್ತು ಅರಣ್ಯ ಇಲಾಖೆಯ ತಾಳು ಬೆಟ್ಟ ಎಂಬ ಸ್ಥಳದ ತನಿಖಾ ಠಾಣೆ.
ತಾಳು ಬೆಟ್ಟದಿಂದ ಮಲೆ ಮಾದೇಶ್ವರನ ಪಟ್ಟಣಕ್ಕೆ “ಮಾರ್ಗದಲ್ಲಿ ಹದಿನೆಂಟೇ ಕಿಮೀ, ನಡೆದು ಹೋದರೆ ನಾಕೈದು ಗಂಟೆ” ಎನ್ನುತ್ತದೆ ಯಾಂಬು (ಮೆಟಾ ಏಐ). ವಾಹನಗಳು ಕನಿಷ್ಠ ಹದಿನೆಂಟು ಹಿಮ್ಮುರಿ ತಿರುವು ಸಹಿತ ನಿರಂತರ ಬಳಸು ದಾರಿ ಬಳಸಿದರೆ, ಪಾದಯಾತ್ರಿಗಳಿಗೆ ನೇರ ಜಾಡುಗಳೂ, ಮೆಟ್ಟಿಲ ಸಾಲುಗಳೂ ಇದ್ದಂತಿತ್ತು. ನಮ್ಮ ಯೋಜನೆ ನಡಿಗೆಗೆ ಪೂರಕವಾಗಿರಲಿಲ್ಲ. ಹಾಗೇ ಕಂಡಂತೆ, ಮೆಟ್ಟಿಲ ಸಾಲುಗಳ ನವೀಕರಣದ ಲಕ್ಷಣ ಅಲ್ಲಲ್ಲಿ ಕಾಣಿಸಿತು. ಕಾಲ್ದಾರಿ ವಾಹನ ದಾರಿ ದಾಟುವ ಕೆಲವೆಡೆಗಳಲ್ಲಿ ತತ್ಕಾಲೀನ ಕುಡಿ ನೀರಿನ ವ್ಯವಸ್ಥೆಯೂ ಇತ್ತು. ತಿರುಪತಿಯಾದಿ ಕೆಲವು ಸುಪ್ರಸಿದ್ಧ ಗಿರಿಕ್ಷೇತ್ರಗಳ ನೆನಪಿನಲ್ಲಿ ಹೇಳುವುದಾದರೆ, ಮಲೆ ಮಾದೇಶ್ವರನಿಗಿರುವ ಜನಪ್ರಿಯತೆಗೆ, ಅಲ್ಲಿ ಆಗಿರುವ ಜನಪರ ಅಭಿವೃದ್ಧಿ ತುಂಬಾ ಕಡಿಮೆಯೇ. ಗಿಡ ಮರಗಳ ನೆರಳಿಲ್ಲದ ಜಾಡಿಗೆ ಮಾಡಿಟ್ಟು, ಕೈ ತಾಂಗು ಕೊಟ್ಟಿಲ್ಲ. ಬಳಲಿದವರಿಗೆ ಚೇತರಿಕೆಗೆ ಜಾತ್ರಾ ಕಾಲಗಳಲ್ಲಿ ಹೇಗೋ ಗೊತ್ತಿಲ್ಲ. ಈಗಂತು ತಿನಿಸು ಪಾನೀಯಗಳ ಜೋಪಡಿ ಬಿಟ್ಟು, ಮಾರುವ ಒಂದು ಜನವೂ ನಮಗೆ ಕಾಣಿಸಲಿಲ್ಲ. ಸೂರ್ಯನುರಿಗೆ ತಲೆಯೊಡೆದು, ಮಳೆಗಾಳಿಯ ಹೊಡೆತಕ್ಕೆ ಮೈ ಹರಿದು, ಕಾಲು ಸೋತದ್ದಕ್ಕೆ ಕುಕ್ಕರುಬಡಿದು, ಬಳಲಿ ಮೈಚಾಚುವಂತಾದರೆ ಎದೆ ಬಡಿದುಕೊಂಡು ತಾರದಲ್ಲಿ ಹಾಡುವುದೊಂದೇ ದಾರಿ “ಶಿವಪ್ಪಾ ಕಾಯೋ ತಂದೇ…. ಮೂರುಲೋಕಾ ಸ್ವಾಮೀ ದೇವಾ…..”
ಮಾದೇಶನ ಸನ್ನಿಧಾನಕ್ಕಿನ್ನೂ ನಾಲ್ಕೈದು ಕಿಮೀ ದೂರವಿರುವಂತೇ ಏರುದಾರಿ ಬೆಟ್ಟ ಸಾಲಿನ ಶಿಖರ ಮುಟ್ಟುತ್ತದೆ. ಅಲ್ಲಿಂದಾಚೆ ಹಲವು ಶಿಖರಗಳು ಸುತ್ತುವರಿದ ಬೋಗುಣಿಯ ತಳದಲ್ಲಿ ದೇಗುಲದ ಪ್ರಥಮ ದರ್ಶನವಾಗುತ್ತದೆ. ಹಾಗೇ ಅದರ ಬಳಿಯ ಪುಟ್ಟ ಗುಡ್ಡದ ನೆತ್ತಿಯಲ್ಲಿ ನಿಂತ, ಹುಲಿಯೇರಿದ ಮಾದಪ್ಪನ ವಿಗ್ರಹವಂತೂ ಬಹು ನಾಟಕೀಯ ನಿರೀಕ್ಷೆಯನ್ನೇ ನಮ್ಮ ಮನದಲ್ಲಿ ಹುಟ್ಟು ಹಾಕಿತ್ತು.
ಹತ್ತೂವರೆ ಗಂಟೆಗೇ ನಾವು ಊರಿಗಿಳಿದೆವು. ಆದರೆ ಅಲ್ಲಿ ನಮಗೆ ನಿರಾಶೆಯೇ ಪ್ರಧಾನ ಶ್ರುತಿಯಾಯ್ತು. ಕಟ್ಟಡ, ದಾರಿಗಳೇನೋ ವಿಸ್ತಾರಕ್ಕೂ ಭವ್ಯವಾಗಿಯೂ ಹರಡಿಕೊಂಡಿವೆ. ಸರಕಾರೀ ವಸತಿ ಸೌಕರ್ಯದೊಡನೆ ಹಲವು ಮಠಗಳೂ (ಜೆಎಸ್ಸೆಸ್, ಆದಿ ಚುಂಚನಗಿರಿ…) ಖಾಸಗಿ ಹೋಟೆಲುಗಳೂ ಕಂಗೊಳಿಸುತ್ತವೆ. ಹಾಗೆಂದು ಮೊದಲು ಸರಕಾರೀ ಅನಂತರ ಆದಿಚುಂಚನಗಿರಿ ಮಠಗಳ ವ್ಯವಸ್ಥೆಯನ್ನು ನಾವು ನೇರ ಸಂಪರ್ಕಿಸಿದಾಗ ಕೇಳಿಸಿದ್ದು ಒಂದೇ ರಾಗ “ಆನ್ ಲೈನ್ ಮಾಡಿದ್ದೀರಾ? ಇಲ್ಲವಾದರೆ ಹನ್ನೆರಡು ಗಂಟೆಗೆ ಬನ್ನಿ, ನೋಡೋಣ”. ಮುಂಗಡ ಕೊಡುತ್ತೇವೆ, ಈಗ ಹೆಸರಾದರೂ ಬರೆದಿಟ್ಟುಕೊಳ್ಳಿ ಎಂದದ್ದಕ್ಕೂ ಉಡಾಫೆಯೇ ಉತ್ತರ. ಯಾರು, ಎಲ್ಲಿಂದ, ವಿಶ್ರಮಿಸುತ್ತೀರಾ ಎಂಬಂತ ಕನಿಷ್ಠ ಮಾತಿನುಪಚಾರಕ್ಕೂ ಕೊರತೆಯೇ ಎಂದು ನೊಂದುಕೊಂಡು, ನಾವು ಹೊರ ನಡೆದೆವು…
ಹುಲಿಯೇರಿದ ಮಾದಪ್ಪನ ವಿಗ್ರಹದ ಗುಡ್ಡೆ ಏರಲು ಹೋದೆವು. ಬುಡದಲ್ಲೇ ಅಡ್ಡಗಟ್ಟಿದ ಪೋಲಿಸಪ್ಪ “ಕನ್ಸ್ಟ್ರಕ್ಷನ್ ನಡೀತಿದೆ. ಯಾರನ್ನೂ ಬಿಡಲ್ಲ”. ನಾವು ಆತನಲ್ಲೇ ನಯವಾಗಿ ಅದರ ಇತಿಹಾಸ ಬೆದಕಿದಾಗ, ಮೆಲು ದನಿಯಲ್ಲಿ, “ಬಿಜೆಪಿ ಸರ್ಕಾರದ್ ಕಾಲಕ್ಕೇ ಎಲೆಕ್ಸನ್ ಅವ್ಸರಕ್ಕೇ ಭೂಮ್ಪೂಜೆ… ಉದ್ಘಾಟನೆ ಎಲ್ಲಾ ಆಯ್ತು. ಆದ್ರೆ ಕಳಪೆ ಕಾಮಗಾರಿ, ಸಿಡ್ಲು ಮಳೆ ಸೇರಿ ಬುಡ ಕುಸುದದೆ. ಸಿದ್ರಾಮಯ್ಯನೂ ಬಂದು ನೋಡವ್ರೆ. ಸದ್ಯ ಕೆಲ್ಸ ಏನೂ ಆಗ್ತಾ ಇಲ್ಲ. ಯಾರಾರ ಮನಸ್ಸು ಮಾಡಿ ಗಟ್ಟಿ ಹಿಡ್ದ್ರೂ ಇನ್ನೆರಡು ವರ್ಷನಾದ್ರೂ ಬೇಕು ಬಿಡಿ…” (ಲಗತ್ತಿಸಿದ ೨೦೨೨ರ ವಿಡಿಯೋದಲ್ಲೇ ಅರೆಬರೆ ಕೆಲಸವಾಗಿರುವುದು ನೋಡಿ: https://shorturl.at/bM8pq)
ದೇವ ಸಾನ್ನಿಧ್ಯ?
ಪ್ರಧಾನ ಆರಾಧ್ಯ ಮೂರ್ತಿಯ ದರ್ಶನಕ್ಕೇ ಹೋದೆವು. ದಾರಿ ಪಕ್ಕದಲ್ಲಿ ಬಿಗಿ ಸಾಲುಗಟ್ಟಿದ್ದ ವಾಹನಗಳ ಎಡೆಯಲ್ಲೆಲ್ಲೋ ಅಡ್ಡಾದಿಡ್ಡಿ ಜಾಗಕ್ಕೆ ನಮ್ಮ ಕಾರು ಗಿಡಿದು ನಡೆದೆವು. ಜಾತ್ರಾ ಸಂತೆಯಂತಿದ್ದ ಮಳಿಗೆ ಸಾಲು, ಕಲಾರಂಗವೆನ್ನುವ ಭವ್ಯ ಖಾಯಂ ಚಪ್ಪರಗಳನ್ನು ಹಾದು ದೇವಳದ ಅಂಗಳಕ್ಕಿಳಿದೆವು. ಜನ ಸಾಕಷ್ಟಿದ್ದರು. ಮೂರ್ನಾಲ್ಕು ಮಿನಿ ರಥಗಳು ಮಾದೇಶನ ಪ್ರಾತಿನಿಧಿಕ ಬಿಂಬ, ಅಲಂಕಾರ, ಅರ್ಚಕರೊಡನೆ ಸೇವಾಕರ್ತರನ್ನು ಕಾದು ನಿಂತಂತಿದ್ದವು. ದೊಡ್ಡ ರಥವೊಂದು ಹೇರಿಕೆಗಳನ್ನೆಲ್ಲ ಕಳಚಿದ ಮೂಲ ಸ್ಥಿತಿಯಲ್ಲಿ ನಿಂತು (ಬೆತ್ತಲೆ ಎನ್ನಿ), ಸಂದ ಮಹೋತ್ಸವದ ಕೊಳೆ ತೊಳೆಸಿಕೊಳ್ಳುತ್ತಿತ್ತು. ಜತೆಗೆ ಸಾಕಷ್ಟಿದ್ದ ಭಕ್ತಾದಿಗಳು, ಅಲೆಮಾರಿ ಮಾರಾಟಗಾರರು, ಬಿಕ್ಷುಕರು, ಸೇವಾ ಕಲಾಪಗಳು… ಸಾಂಗ ಸಾಗಿದ್ದವು. ಅವನ್ನೆಲ್ಲ ಅವಗಣಿಸಿ ನಾವು ‘ದರ್ಶನ’ದ ಯೋಚನೆ ಮಾಡಿದೆವು. ‘ಉಚಿತ’ ದರ್ಶನದಿಂದ ತೊಡಗಿ ರೂ ೨೫೦, ೫೦೦, ೧೦೦೦ದವರೆಗೂ ದರಪಟ್ಟಿ ಮತ್ತು ದ್ವಾರಗಳು ಕಾಣಿಸಿದವು. ಉಚಿತ ದರ್ಶನದ ಸರತಿ ಸಾಲು ನೋಡಿದ್ದೇ ನಾನು ಎಂದಿನಂತೆ “ದೇವಬಿಂಬಕ್ಕೆ ನಮ್ಮ ದರ್ಶನ ಭಾಗ್ಯವಿಲ್ಲ” ಎಂದಿದ್ದೆ. ಆದರೆ ದಿಗಂತ್ ಮತ್ತು ದೇವಕಿಯರು “ಕ್ಯೂ ಅಷ್ಟೇನೂ ದೊಡ್ಡದಿಲ್ಲಾ, ಹತ್ತಿಪ್ಪತ್ತು ಮಿನಿಟಿನಲ್ಲಿ ಬರ್ತೇವೆ…” ಎಂದು ಚಪ್ಪಲಿ ಉಸ್ತುವಾರಿ ನಮಗೆ ಬಿಟ್ಟು ನುಗ್ಗಿಯೇ ಬಿಟ್ಟರು. ಮತ್ತೆ ಕ್ಷಣವೊಂದು ಯುಗವಾಗಿ, ಸುಮಾರು ಎರಡು ಗಂಟೆಗಳ ಕಾಲ, ಅಂಗಳದ ಹೊರ ಅಂಚಿನ ನೆರಳ ತುಣುಕಿನಲ್ಲಿ, ನಾವು ಮೂವರು ಚಪ್ಪಲಿ ಕಾವಲುಗಾರರಾದ ತಪ್ಪಿಗೆ ಲೋಕಜ್ಞಾನ ಹೆಚ್ಚಿಸಿಕೊಂಡೆವು.
ರಥ ತೊಳೆದ ನೀರು ಮತ್ತು ಅಂಗಳ ಬಿಸಿಯೇರದಂತೆ ಕಾಲಕಾಲಕ್ಕೆ ಲಾರಿ ಹನಿಸುತ್ತಿದ್ದ ನೀರು ಬೀದಿಯ ಸುವಸ್ತುಗಳ ಸಹಿತ ರಥಬೀದಿಯಲ್ಲಿ ಹರಿದಿತ್ತು. ಆ ಪುಣ್ಯ ಪ್ರವಾಹ ವ್ಯರ್ಥವಾಗದಂತೆ ಅದರಲ್ಲೇ ಹರಕೆದಾರರಿಂದ ಉರುಳು ಸೇವೆ, ಪಾದ ನಮಸ್ಕಾರಗಳು ಸಾಗುತ್ತಲೇ ಇದ್ದವು. ಖಾಲಿ ಕಂಸಾಳೆ (ಹಿತ್ತಾಳೆಯ ದೊಡ್ಡ ಕೈತಾಳಗಳು) ಬಡಿದುಕೊಂಡೋ ಜತೆಗೇ ಎರಡೋ ಮೂರೋ ಮಂದಿ ಭಜನೆ ಮಾಡಿಕೊಂಡೋ ಪ್ರದಕ್ಷಿಣೆ ತೆಗೆಯುವವರೂ ಸಾಕಷ್ಟಿದ್ದರು. ಅದರಲ್ಲೂ ಒಂದು ಮೂವರ ತಂಡ, ಸ್ವಾಮಿ ಕಾರ್ಯ ಸ್ವಕಾರ್ಯ ಎನ್ನುವಂತೆ, ಸರತಿ ಸಾಲು ಹಿಡಿದವರ ಹೊರಗಿನಿಂದಲೇ ಕಾಡಿ (ಬಿಕ್ಷೆಯಲ್ಲ) ದಕ್ಷಿಣೆ ಸಂಗ್ರಹಿಸಿಕೊಳ್ಳುತ್ತಿದ್ದರು. ಅನೇಕ ಭಕ್ತರು ಅದ್ಯಾವುದೋ ಬರಿಗೋಲಿನ ತುದಿಗೆ ಬೆಂಕಿಯಂಟಿಸಿಕೊಂಡು ಪ್ರದಕ್ಷಿಣೆ ನಡೆಸಿದ್ದರು. ಕೋಲಿನ ತುದಿ ಹೊಗೆಯಾಡಿದರೆ, ದೇವಳದ ಹೊರ ಅಂಚಿನಲ್ಲೇ ಒಂದೆರಡು ಕಡೆ ಉರಿಸಿದ್ದ ದೀವಟಿಗೆಗಳಿಂದ ಮತ್ತೆ ಕೆಂಜ್ವಾಲೆ ಮುಡಿಸಿಕೊಂಡು ಮುಂದುವರಿಯುತ್ತಿದ್ದರು. ಸುತ್ತಿನ ಕೊನೆಯಲ್ಲಿ ಕೋಲನ್ನು ದೇವಳದ ಗೋಡೆಯಿಂದ ತುಸು ದೂರಕ್ಕಿಟ್ಟ ಕಬ್ಬಿಣದ ಮಂಚಕ್ಕೆ ಹಾಕಿ, ಉದ್ದಂಡ ನಮಸ್ಕಾರದೊಡನೆ ಮಾದಪ್ಪನಿಗೆ ಉಘೇ ಹಾಕುತ್ತಿದ್ದರು.
ಅಂದು ರಥಸೇವೆ ಕರ್ತವ್ಯಕ್ಕೆ ಎರಡೇ ವಾದ್ಯಗಾರರಿದ್ದಂತಿತ್ತು (ವಾಲಗ, ಡೋಲು). ಬಿಟ್ಟು ಬಿಟ್ಟು ಮಿನಿರಥಗಳು ‘ಉತ್ಸವ’ ಹೊರಟಾಗ, ಸರತಿಯಲ್ಲಿ ಒಂದು ವಾದ್ಯ, ವಿಲಂಬಿತ ಗತಿಯಲ್ಲಿ ತನ್ನಿರವನ್ನು ಸಾರುತ್ತ (ರಾಗ, ತಾಳ ಕೇಳಬೇಡಿ.) ಮುಂಚೂಣಿಯಲ್ಲಿರುತ್ತಿತ್ತು. ರಥಗಳ ಹಿಂದೆ ಹರಿಕೆದಾರ ಸಮುದಾಯದವರು ಅದೇನೋ (ಬೆಳ್ಳಿ?) ಕೊರಡನ್ನು ಹಿಡಿದುಕೊಂಡು ಅನುಸರಿಸಿದ್ದರು. ಆಗೀಗ ಎದುರಾದ ಅನ್ಯ ಭಕ್ತರು ಹಣವೋ ಧಾನ್ಯದ ಉಂಡೆಯನ್ನೋ ರಥಕ್ಕೆ ಎಸೆಯುವುದಿತ್ತು. ರಥದ ಮೇಲಿದ್ದ ಅರ್ಚಕರು ಪಾಪ, ಕಂಬದ ಮರೆಯಲ್ಲೋ ಮುಖ ಹಿಂದೆ ತಿರುಗಿಸಿಯೋ ಪೆಟ್ಟು ತಿನ್ನದಿರುವ ದಾರಿ ಹುಡುಕುತ್ತಿದ್ದರು. ಬೀದಿಯಲ್ಲಿ, ಬಿಡು ಸಮಯಗಳಲ್ಲಿ ಕೆಲವು ಮಕ್ಕಳು ಅದೇನೋ ಪುಟ್ಟ ಪೊಟ್ಟಣಗಳನ್ನು (ವಿಭೂತಿ, ದೂಪ…) “ತಗಳಿ ಅಮ್ಮಾ, ತಗಳಿ ಸಾರ್…” ಎಂದು ಜುಲುಮೆ ವ್ಯಾಪಾರ ಮಾಡುತ್ತಿದ್ದರು. ರಥ ಬಂದಾಗ ಅವರೂ ಇತರ ಅಲೆಮಾರಿಗಳೂ ರಥದ ಹಿಂದು ಮುಂದೋಡಿ ಭಕ್ತರು ಎಸೆದು ಬಿದ್ದುದರಲ್ಲಿ ಅಮೂಲ್ಯದವನ್ನು ಹೆಕ್ಕಿಕೊಳ್ಳುತ್ತಿದ್ದರು.
ನಮ್ಮ ಬೆನ್ನ ಹಿಂದೆ ಪ್ರಸಾದರೂಪೀ ಲಾಡು ಮತ್ತೇನೇನೋ ಮಾರುವ ಅಡ್ಡೆಗಳಿದ್ದವು. ಅವರು ಅನ್ಯಪಾವತಿಗಳಿಗೆ ನಗದೇ ‘ನಗದು ಮಾತ್ರ’ ಸ್ವೀಕರಿಸುತ್ತಿದ್ದರು. ಆಗೀಗ ಅದರ ಸರತಿ ಸಾಲಿನಿಂದ ಸಿಡಿದವರಲ್ಲಿ ಒಂದಿಬ್ಬರು ಅನಿಲ್ ಮತ್ತು ತಿರುಮಲೇಶರ ಬಳಿ “ಐನೂರು ರೂಪಾಯಿ ಕ್ಯಾಶ್ ಕೊಡಿ ಸಾರ್, ನಿಮ್ಕಾತೆಗೆ ಫೋನ್ಪೇ ಮಾಡ್ತೀನೀ…” ಎಂದು ಕಾಟ ಕೊಟ್ಟಿದ್ದರು. (ನಾನು ವಾಟೆಸೊಪ್ಪಿನಂತೇ ಫೋನ್ ಪೇಯಿಂದಲೂ ಮುಕ್ತ.) ಇವರು ಮನವಿಯ ಸಾಚಾಸಾಚಗಳನ್ನು ಅಳೆಯುವ ಗೋಜಿಗಿಳಿಯದೆ ನಿರಾಕರಿಸುತ್ತಲೇ ಇದ್ದುದರಿಂದ ನಮ್ಮನ್ನು ಹೊಸ ವ್ಯಾಜ್ಯಗಳೇನೂ ಕಾಡಲಿಲ್ಲ.
ನಿಂತಲ್ಲಿ ನಿಲ್ಲಲಾರದ ನಾನು, ನಿಧಾನಕ್ಕೆ ಕಾಲಾಡಿಸುತ್ತ ದರ್ಶನಾರ್ಥಿಗಳ ಸರತಿ ಸಾಲಿನ ತನಿಖೆಗೆ ಇಳಿದೆ. ಸಾಲು ಅಂಗಳದ ಚಪ್ಪರದಡಿಯಲ್ಲಿ ಮೂರು ಸುತ್ತು, ಮೇಲ್ಜಗುಲಿಯಲ್ಲಿ ಎರಡು ಸುತ್ತಾಗಿ ದೇವಳದ ಎದುರಿನ ಬಾಗಿಲು ತಲಪಿತ್ತು. ನಡುವೆ ಎಲ್ಲೋ ಒಮ್ಮೆ, ಅದರಲ್ಲಿದ್ದಂತೇ ದೇವಕಿ ಫೋನ್ ಕರೆ ಮಾಡಿ ತಮ್ಮ ಅಸಹಾಯಕತೆಯನ್ನು ತೋಡಿಕೊಂಡಳು. ನೂಕು, ಕಿಷ್ಕಿಂದೆ, ಸೆಕೆ, ವಾಸನೆ, ಬಳಲಿದವರ ಉದ್ಗಾರಗಳ ನಡುವೆ ನಿಧಾನದ ಏಕಮುಖ ಚಲನೆಯಲ್ಲಿದ್ದರು. ಒಮ್ಮೆ ಸೇರಿಕೊಂಡ ಮೇಲೆ, ಬೇಡವೆನ್ನಿಸಿದರೂ ಹಿಂದೆ ಸರಿಯುವಂತಿಲ್ಲ, ಹೊರ ಬೀಳುವಂತಿಲ್ಲ, ಗರ್ಭಗುಡಿ ಎದುರು ದೇವರೇ ಗತಿ ಕಾಣಿಸಬೇಕಿತ್ತು!
ಪ್ರಸಾದ ಕೊಟ್ಟಿಗೆಯ ಪಕ್ಕದ ಜಿಂಕ್ ಶೀಟಿನ ಕೊಟ್ಟಿಗೆಯೊಳಗೆ ಕಾಲು ಗಿಡ್ಡದ ಆನೆಯೊಂದು ಬಹುಕಾಲದಿಂದ ಬೆಂದುಕೊಂಡಿದ್ದುದ್ದು ತಡವಾಗಿ ನಮ್ಮ ಗಮನಕ್ಕೆ ಬಂತು. ಎಷ್ಟೊತ್ತಿಗೋ ಒಮ್ಮೆ ಮಾವುತ ಬಂದು, ಅದನ್ನು ಕೆಲ ಹೊತ್ತು ಹೊರ ತಂದು, ಉರಿಬಿಸಿಲಿನಲ್ಲಿ ‘ಡೂಟಿ’ ಮಾಡಿಸಿದ. ಭಕ್ತಾದಿಗಳು ಅವನ ಕೈಗೆ ಹಣ ಕೊಟ್ಟದ್ದೇ ಆನೆ ಮೊದಲು ಭಕ್ತರಿಗೆ ಕಣ್ಣಿಗೊತ್ತಿಕೊಳ್ಳಲು ಸೊಂಡಿಲು ಚಾಚುತ್ತಿತ್ತು, ಮತ್ತೆ ಬಾಗಿದ ಅವರ ತಲೆಗೊಂದು ಹಗುರದ ಸೊಂಡಿಲ ಮೊಟಕೂ ನೀಡುತ್ತಿತ್ತು. ಭಕ್ತರ ಧನ್ಯತಾ ಭಾವ, ಅಳುಕು, ಮಕ್ಕಳ ಹೆದರಿಕೆಯ ಬೊಬ್ಬೆ, ಉಲ್ಲಾಸದ ಕೇಕೆ ಎಲ್ಲಕ್ಕೂ ಆನೆ ನಿರ್ಲಿಪ್ತವಾಗಿದ್ದು, ಹಗುರಕ್ಕೆ ಕಿವಿಯಾಡಿಸುತ್ತ, ಬಳಲಿಕೆಗೋ ನೆಲದ ಬಿಸಿಗೋ ಸರತಿಯ ಮೇಲೆ ಒಂದು ಕಾಲು ಎತ್ತಿ ಹಿಡಿಯುತ್ತ ನಿಂತೇ ಇತ್ತು. ಸೂರ್ಯ ನಡು ನೆತ್ತಿಯಿಂದಲೂ ಆಚೆಗೆ ಸರಿಯುತ್ತಿದ್ದಂತೆ, ಮಾವುತ ಆನೆಯನ್ನು ಮತ್ತೆ ಕೊಟ್ಟಿಗೆ ಸೇರಿಸಿ, ಕಾಲಿಗೆ ಸರಪಳಿ ಬಿಗಿದು, ತನ್ನ ಹೊಟ್ಟೆಪಾಡಿಗೆಂಬಂತೆ ಹೋದ. ಹೆಸರಿಗೆ ಮಾತ್ರ ಗಜರಾಜ. ಬೆಳಿಗ್ಗೆಯೇ ಮೇವೆಂದು ಎಸೆದಿದ್ದ, ಮೂರ್ನಾಲ್ಕು ಎಲೆಗಳಷ್ಟೇ ಅಂಟಿ ಉಳಿದಿದ್ದ ಒಂದು ಗೆಲ್ಲನ್ನು ಅದು ನಿಸ್ಸಹಾಯಕತೆಯಲ್ಲಿ ಆಗೀಗ ಸೆಳೆದು, ಬೆನ್ನು ಕಾಲಿಗೆ ಕಾಟಕೊಡುತ್ತಿದ್ದ ಹುಳುಗಳನ್ನೋಡಿಸುವಂತೆ ಅಪ್ಪಳಿಸಿಕೊಳ್ಳುತ್ತಿತ್ತು….
ಬೇಸರ ಕಳೆಯುವಂತೆ ಒಮ್ಮೆ ನಾನು, ತಿರುಮಲೇಶರು ಕಲಾರಂಗದ ಅಂಚಿನ ಮಳಿಗೆಗಳ ಮಣಿ ಸರಕುಗಳನ್ನೆಲ್ಲ ನೋಡುತ್ತಾ ಹೋಗಿ ಎರಡು ಚಾ ಹಾಕಿ ಮರಳಿದೆವು. ಮತ್ತೂ ಉದಾಸೀನವಾದಾಗ ನಾನೊಬ್ಬನೇ ದೇವಳದ ಎದುರಿಗೇ ಹೋದಾಗ, ಮುಖ್ಯ ದ್ವಾರದ ಮೇಲೆ ಕೂರಿಸಿದ್ದ ನಂದಿ ಕಂಡೆ. ಅದರ ದರ್ಶನಕ್ಕೆ ಸರತಿ ಸಾಲಿಲ್ಲದೇ ಏರುತ್ತಿದ ಮಂದಿಯೊಂದಿಗೆ ನಾನೂ ಹತ್ತಿದ್ದೆ. ಮೇಲೆ ತೀರ್ಥದ ಉದ್ಧರಣೆಯನ್ನೋ ವಿಭೂತಿಯ ಚಿಟಿಕೆಯನ್ನೋ ಹಿಂದಿಟ್ಟು, ದಕ್ಷಿಣೆಗೆ ಎಡಗೈ ಚಾಚುತ್ತಿದ್ದ ಅರ್ಚಕರಿಬ್ಬರಿಗೆ ನಾನು ಕುತೂಹಲದ ದೃಷ್ಟಿಯೂ ಹರಿಸದೇ ಇಳಿದು ಬಂದೆ. ಅಂತೂ ಇಂತೂ…
ಒಂದು ಗಂಟೆಯ ಸುಮಾರಿಗೆ ದೇವಕಿ ದಿಗಂತರು ಬಿಂಬ ದರ್ಶನದಿಂದ ಕಳೆ (ಕೊಳೆ?) ಏರಿಸಿಕೊಂಡು ಮರಳಿದರು. ಮತ್ತೆ ದೇವಳದ ದಾಸೋಹಕ್ಕೆ ಸರತಿ ಸಾಲು ಹಿಡಿಯಲು ಹೆದರಿ, ಸಿಕ್ಕ ಒಂದು ಹೋಟೆಲಿಗೆ ನುಗ್ಗಿದೆವು. ಅಲ್ಲಿ ಗ್ಯಾಸ್ ಟ್ರಬಲ್ಲಿನ ಸೀಮಿತ ಊಟಕ್ಕೇ ತೃಪ್ತರಾಗುತ್ತಿದ್ದಂತೆ ಎದ್ದ ದೊಡ್ಡ ಪ್ರಶ್ನೆ – ಮುಂದೇನು? ಯೋಜನೆಯಂತೇ ಉಳಿದಿದ್ದ ಒಂದೂವರೆ ದಿನಕ್ಕೆ ಹೊಸ ಕಲಾಪ ಹುಡುಕುವುದೇ ಎಲ್ಲ ಸಾಕೆಂದು ಮರಳುವುದೇ?
ಮರಳಿ ಮಂಗಳೂರಿಗೆ…
ಮಾದೇಶ್ವರನ ಊರಲ್ಲಿ ವಸತಿ ಸಿಕ್ಕರೂ ನಮಗೆ ನಿಂತು ನೋಡುವುದೇನೂ ಉಳಿದಿರಲಿಲ್ಲ. ಅನ್ಯ ಪ್ರಾಕೃತಿಕ ಆಕರ್ಷಣೆ ಎಂದು ಹೊಗೇನಕಲ್ ಜಲಪಾತವೇನೋ ಕರೆದಿತ್ತು. ಆದರೆ ಎಂಬತ್ತೆಂಟು ಕಿಮೀ ಓಟದ ಕೊನೆಯಲ್ಲಿ, ಬೇಸಗೆಯ ತೀವ್ರತೆಗೆ ಪಾತವೇನೋ ಖಂಡಿತಾ ಇರುತ್ತದೆ. ಅದರಲ್ಲಿ ಜಲ ಇರಬಹುದೇ, ಸಂದೇಹ. ಹಾಗೆ ಹೋದರೆ ರಾತ್ರಿ ಉಳಿಯುವುದೆಲ್ಲಿ ಎಂಬ ಸಂದಿಗ್ದ. ಕೊನೆಯಲ್ಲಿ ಮರುದಿನದ ಮಂಗಳೂರೋಟಕ್ಕೆ ಹೆಚ್ಚುವ ದಾರಿಯನ್ನೂ ಯೋಚಿಸಿ ಎಲ್ಲ ಒಕ್ಕೊರಲಿನಲ್ಲಿ ಮಂಗಳೂರು ಚಲೋ ಎಂದಿದ್ದೆವು. ದಿನವಿಡೀ ಅರ್ಥಹೀನ ಬಳಲಿದ ಮನಸ್ಸು, ಕಾಯುತ್ತಿದ್ದ ಬಿಸಿಲು ಅನುಭವಿಸಿದ್ದು ಸಾಕೆನಿಸುತ್ತಿದ್ದಂತೆ, ನೆನೆಸಿತೆಮ್ಮ ಮನಂ, ಕಡಲ ಸುವಾಸಿತ ತಂಬೆಲರಂ!
ಮಲೆ ಬಿಡುವಾಗ ಗಂಟೆ ಎರಡಾಗಿತ್ತು. ಗೂಗಲ್ ಅಂದಾಜಿನಲ್ಲಿ ಮುನ್ನೂರೆಂಬತ್ತೆಂಟು ಕಿಮೀ, ಓಟದ ಸಮಯ ಎಂಟೂವರೆ ಗಂಟೆ. ಅಂದರೆ ರಾತ್ರಿ ಹತ್ತೂವರೆಗೆ ಮಂಗಳೂರು ಮುಟ್ಟುವುದು ತುಂಬ ತಡವೇನಲ್ಲ. ನನಗೆ ರಾತ್ರಿ ಕಾರು ಚಾಲನೆ ಸ್ವಲ್ಪ ಕಷ್ಟ. ಆದರೆ ಈ ಭಯವಲ್ಲದೆಯೂ ನಮ್ಮಲ್ಲಿ ಬದಲೀ ಚಾಲಕತ್ವಕ್ಕೆ ದೇವಕಿಯನ್ನುಳಿದು ಮೂವರೂ ಒತ್ತಾಯಿಸುವವರೇ ಇದ್ದರು. ಅವರೆಲ್ಲರ ಉತ್ಸಾಹ ಸರಿಯಾದರೂ ದೀರ್ಘ ಚಾಲನದ ಅನುಭವ (ನನಗಿಂತ) ಕಡಿಮೆಯೇ ಇತ್ತು. ಎಳೆ ಹರಯದವರಿಗೆ ಕತ್ತಲಿನ ರಗಳೆಗಳನ್ನು ಕಾಲಮಿತಿಯಲ್ಲಿ ನಿಭಾಯಿಸುವ ಒತ್ತಡ ಹಾಕುವುದಕ್ಕೆ ನನಗೆ ಪೂರ್ಣ ಒಪ್ಪಿಗೆಯಿರಲಿಲ್ಲ. ಹಾಗಾಗಿ ನಾವು ಮೈಸೂರು ದಾಟುವ ಮೊದಲೇ ಕತ್ತಲಾದರೆ, ಅಲ್ಲಿನ ನಮ್ಮನೆ – ಅತ್ರಿಗೆ, ಅಕ್ಷರಶಃ ಅ-ತಿಥಿಗಳಾಗುವುದೆಂದೇ ಮನದಲ್ಲಿ ಗಟ್ಟಿ ಮಾಡಿಕೊಂಡಿದ್ದೆ.
ಮಲೆಗೇರುವ ಅವಸರದಲ್ಲಿ ತಪ್ಪಿಸಿಕೊಂಡಿದ್ದ ಒಂದೆರಡು ದೃಶ್ಯಗಳ ಪಟಗ್ರಹಣಕ್ಕಷ್ಟೇ ನಿಂತದ್ದು ಬಿಟ್ಟರೆ, ಕೊಳ್ಳೇಗಾಲದವರೆಗೆ ಓಟ ನಿರಂತರ. ನಡುವೆ ಎಲ್ಲೋ ಸಣ್ಣ ಚಾ ವಿರಾಮ. ಮುಂದೆ ತಿ.ನರಸೀಪುರ, ನಂಜನಗೂಡು ಹಾದು ಮೈಸೂರು ಮುಟ್ಟಿದಾಗ, ಸೂರ್ಯ “ಇನ್ನೂ ನಾನಿದ್ದೇನೆ” ಎಂದ. ಮತ್ತೆ ನಾನು ತಡವರಿಸಲಿಲ್ಲ. ಬೈಲು ಕೊಪ್ಪದವರೆಗೂ ನಾನು ಪೀಠ ಬಿಡಲಿಲ್ಲ. ಅನಿಲ್ ಚಾಲನಾ ದಂಡ ವಹಿಸಿಕೊಂಡ. ಕುಶಾಲ ನಗರದಲ್ಲಿ (ಗ್ಯಾಸ್ ಟ್ರಬಲ್ ಅಲ್ಲೂ ಬಿಟ್ಟಿಲ್ಲ) ಅಲ್ಲಿ ಊಟದ ಶಾಸ್ತ್ರ ಮುಗಿಸಿಕೊಂಡೆವು. ಮತ್ತೆ ಅನಿಲ್ ದಿಗಂತರ ಇಳಿದಾಣವೇ ಆದ ಬಂಟ್ವಾಳ ಜೋಡುಮಾರ್ಗದವರೆಗೂ ಅನಿಲ್ ಯಾವ ಗೊಂದಲಗಳಿಲ್ಲದೇ ಕಾರೋಡಿಸಿದ. ಅವರನ್ನು ಬೀಳ್ಕೊಂಡು, ಮುಂದಿನ ಹಾದಿಗೆ ಮತ್ತೆ ನಾನೇ ಕಡಿವಾಣ ಕೈಗೆತ್ತಿಕೊಂಡೆ. ಪಂಪ್ವೆಲ್ಲಿನಲ್ಲಿ ತಿರುಮಲೇಶ ಭಟ್ಟರನ್ನಿಳಿಸಿ, ಮನೆ ಸೇರುವಾಗ (ಚಾ ಮತ್ತೆ ಊಟದ ವಿರಾಮ ಸೇರಿಸಿ) ಗೂಗಲ್ ಭವಿಷ್ಯ ಹುಸಿಯಾಗದಂತೆ ಗಂಟೆ ಹನ್ನೊಂದು.
ಗಹನ ಕಾಡುಗಳನ್ನೂ ಗಗನಚುಂಬೀ ಬೆಟ್ಟಗಳನ್ನೂ ಹಂಬಲಿಸಿ ದಾರಿ ಗುರುತಿಸಿಕೊಂಡವರು ನಾವು. ಆದರೆ ಒದಗಿದ್ದು, ಹುಟ್ಟಿನ ಆಕಸ್ಮಿಕ ಮತ್ತು ಸಮುದಾಯದ ಮಿತಿಗಳನ್ನು ಮೀರಿದ ಬೌದ್ಧಿಕ ಗಹನತೆ ಸಾಧಿಸಿದ್ದ, ಸೋಲಿಗರ ಡಾ| ಜಡೇ ಗೌಡ ಮಾದೇ ಗೌಡರ ಸಂಪರ್ಕ. ಹಾಗೇ ಪಾರಂಪರಿಕ ಜ್ಞಾನದ ಸದ್ವಿಕಾಸ, ಶೈಕ್ಷಣಿಕ ಸಾಧನೆಯ ಮೆಟ್ಟಿಲು ಹತ್ತದೆಯೂ ಸಾಧ್ಯ ಎಂಬುದಕ್ಕೆ ಸಾಕ್ಷಿಯಾಗಿ ಸಿಕ್ಕ ಇನ್ನೋರ್ವ ಸೋಲಿಗ ಪ್ರತಿಭೆ ರಾಮೇಗೌಡ, ಪರಿಚಯಗಳು ಮರೆಯುವಂತವಲ್ಲ. ಇಂಥ ಬೆಳೆಯ ಕುಡಿಗಳನ್ನು ಹೆಕ್ಕಿ, ಮಹದೆತ್ತರಕ್ಕೆ ಪೋಷಿಸಿದ ಜಯದೇವರ ಎತ್ತರ ನಮಗೆ ಊಹಾತೀತ. ತುಸು ನಿರಾಶೆ ಬೆರೆತರೂ ನಮ್ಮ ಅಂದಾಜಿಗೆ ಪೂರ್ಣ ಮೋಸವಾಗದ ಸಾಯಿ ವನಧಾಮದ ಪರಿಸರ, ನಾಗರಹೊಳೆ ಉದ್ಯಾನದ ಒಂದು ಓಟ, ಬಿಳಿಗಿರಿ ಹಾಗೂ ಮಲೆ ಮಹದೇಶ್ವರ ಬೆಟ್ಟಗಳ ವರ್ತಮಾನಗಳನ್ನು ನಾವು ಮೆಚ್ಚದಿದ್ದರೂ ವಾಸ್ತವಿಕ ಅನುಭವಗಳಿಂದ ನಮ್ಮ ಪ್ರವಾಸ ಫಲಪ್ರದವೇ ಆಗಿ ಮುಗಿದಿತ್ತು.























































































ನಿಮ್ಮೊಂದಿಗೇ ಗಿರಿಧಾಮ ಸುತ್ತುತ್ತಿದ್ದ ನನಗೂ ಕಾದಂಬರಿಯೊಂದು ಮುಗಿದಾಗ ಬೀಳುವ ಪೂರ್ಣ ವಿರಾಮ ದಂತೆ ಒಂದು ನಿಟ್ಟುಸಿರು ಹೊರಬಿತ್ತು. ಧನ್ಯೋಸ್ಮಿ
ಮುಂದೆ? ನಿರೀಕ್ಷೆ ಯಲ್ಲಿರುತ್ತೇನೆ .
ಶಿರಡಿಗೆ ಹೋದಾಗ ಸಾಯಿಬಾಬಾ ನೋಡಲು ಹೋಗದೆ ನಾನೂ ನಮ್ಮ ಗುಂಪಿನ ಚಪ್ಪಲಿ,ಬ್ಯಾಗು, ಮೊಬೈಲ್ ಎಲ್ಲವನ್ನೂ ಬರೋಬ್ಬರಿ ನಾಲ್ಕೂವರೆ ಗಂಟೆಗಳ ಕಾಲ ಕಾದಿರುವೆಒಳಗೆ ಹೋದವರಿಗೇ ಟೆನ್ಷನ್ ಆಗಿತ್ತು.ಹೊರಗೆ ಕುಳಿತ ನನಗೆ ಭಕ್ತಾದಿಗಳನ್ನು ಗಮನಿಸುತ್ತಾ ಸಮಯ ಸರಿದಿದ್ದೇ ಗೊತ್ತಾಗಿರಲಿಲ್ಲ
1990ರ ಆಸುಪಾಸಿನಲ್ಲಿ ನಾನು ಹೈಸ್ಕೂಲ್ ಓದುತ್ತಿದ್ದೆ. ಆಗ ಗೆಳೆಯನೊಬ್ಬನಿಂದಾಗಿ ವಿವೇಕಾನಂದ ಗಿರಿಜನ ಕಲ್ಯಾಣ ಕೇಂದ್ರದ ಪರಿಚಯ ಆಯಿತು. ಇಲ್ಲಿಗೆ ಬಂದು ಶಾಲಾ ಮಕ್ಕಳ ಡಾರ್ಮಿಟರಿ ಯಲ್ಲಿ ಒಂದೆರಡು ದಿನ ತಂಗಿ ಹೋಗುತ್ತಿದ್ದೆವು. ಆಗ ಜಯದೇವ ಸರ್ ಪರಿಚಯ ಆಯಿತು. ಮೈಸೂರಿನಿಂದ ಈ ಕಾಡಿಗೆ ಬರುತ್ತಿದ್ದ ನಮ್ಮ ಆಸಕ್ತಿಯನ್ನು ಗಮನಿಸಿ ನಮ್ಮೊಂದಿಗೆ ಸಮಯ ಕಳೆಯುತ್ತಿದ್ದರು. ನಮಗೆ ಅಲ್ಲಿ ಪಕ್ಷಿ ವೀಕ್ಷಣೆಯನ್ನು ಸಹ ಹೇಳಿಕೊಡುತ್ತಿದ್ದರು. A ದಿನಗಳನ್ನು ಮರೆಯಲು ಸಾಧ್ಯವೇ ಇಲ್ಲ. ನಮ್ಮ ಬಳಿ ಎಂದೂ ಹಣ ಕೇಳದೇ ಊಟ ವಸತಿ ಕೊಟ್ಟ ಸಂಸ್ಥೆ ಅದು. ಡಾ ಸುದರ್ಶನ್ ಮತ್ತು ಜಯದೇವ್ ಸಾರ್ ಅವರೊಂದಿಗಿನ ಒಡನಾಟ ನಮ್ಮಲ್ಲಿ ಹೊಸ ಚಿಂತನೆಗಳನ್ನೇ ಹುಟ್ಟುಹಾಕಿತು. Ashoka Vardhana ಸರ್, ನಿಮ್ಮ ಬರಹಗಳು ಹೊಸ ಲೋಕಕ್ಕೆ ಕೊಡೊಯ್ಯುತ್ತಿವೆ. ಹಳೆಯದೆಲ್ಲ ನೆನಪಾಯಿತು. ಅದಕ್ಕೆ ಹಂಚಿಕೊಂಡೆ.
ಜಯದೇವ ಸರ್ ಅವರದು ನಿಜಕ್ಕೂ ಅದ್ಭುತ ಸಾಧನೆ..
2007ರಿಂದ2010ರ ವರೆಗೆ ನಾನು ಚಾಮರಾಜನಗರ ಲೀಡ್ ಬ್ಯಾಂಕ್ ಜಿಲ್ಲಾ ವ್ಯವಸ್ಥಾಪಕನಾಗಿದ್ದಾಗ, ನಬಾರ್ಡ್ ಎಜಿಎಂ ವಿನಯ್ ಅವರ ಜೊತೆ ಆಗಾಗ ಅವರ ದೀನಬಂಧು ಮಕ್ಕಳ ಮನೆಗೆ ಭೇಟಿ ಕೊಡುತ್ತಲೇ ಇದ್ದದ್ದು ಈಗ ಆಪ್ತನೆನಪು.
ಮಾನವತೆಯ ದೀಪ ಹಚ್ಚು
ಅಂಧಕಾರವು ತೊಲಗಲಿ
ಎಂದು ಬರೆದು ನಮ್ಮ ಭಾವ ಬೆಳಗಿದ ಜಿ.ಯಸ್ಸೆಸ್ ಅವರ ಕವಿತೆಯೇ ಜಯದೇವರ ರೂಪದಲ್ಲಿ ಕೃತಿಯಾಗಿ ಬೆಳಗುತ್ತಿರುವಂತೆ ಕಂಡಿತು.❤️