ಅರ್ಥಪೂರ್ಣ ಜಿಟಿನಾ ಜನ್ಮ ಶತಾಬ್ದಿ

Apr 27, 2026 | 0 comments

ಗದ್ಯಲಹರಿ

(ವಿಸೂ: ಲೇಖನ ‘ಜಿಟಿನಾ ಕೈ ಬರಹ’ ಲಿಪಿಯಲ್ಲಿದೆ)

ಜೀವನಬದ್ಧತೆಗೆ ಸಾಹಿತ್ಯ, ಭಾವಸಂಸ್ಕಾರಕ್ಕೆ ಸಂಗೀತ, ಸಾರ್ವಜನಿಕ ಹಿತಕ್ಕೆ ಸಂಘಟನೆ ಮತ್ತು ಅನುಷ್ಠಾನದಲ್ಲಿ ಶಿಸ್ತೇ ವೈಜ್ಞಾನಿಕ ಮನೋಧರ್ಮ. ಹೀಗೇ ಸ್ವಂತ ಬದುಕನ್ನು ನಡೆಸಿ, ಸಾರ್ವಜನಿಕಕ್ಕೆ ಬಹುವಿಧದಲ್ಲಿ ದಾಖಲಿಸಿಯೂ ಕೊಟ್ಟವರು ಜಿಟಿ ನಾರಾಯಣ ರಾವ್ (೩೦-೧-೧೯೨೬ ರಿಂದ ೨೭-೬-೨೦೦೮). ಅವರು ಮರಣಿಸಿದಂದು, ಅವರ ಮಾತುಗಳನ್ನು ಪಾಲಿಸುವಂತೇ ನಾವು, ಅಂದರೆ ಹೆಂಡತಿ ಲಕ್ಷ್ಮೀ ದೇವಿ ಮತ್ತು ಮಕ್ಕಳಾದ ಅಶೋಕಾನಂದನಂತರು ಪೂರ್ಣ ಮನಸ್ಸಿನಿಂದ ದೇಹವನ್ನು ವೈದ್ಯಕೀಯ ಕಾಲೇಜಿಗೆ ದಾನವಾಗಿಸಿದೆವು. (ನೋಡಿ: ದೇಹದಾನ) ಮುಂದುವರಿದು, ರೂಢಮೂಲವಾದ  ಕರ್ಮಾಂತರ ಕಲಾಪಗಳನ್ನೂ ಕೈ ಬಿಟ್ಟೆವು. ಆದರೆ ಅಳಿಸಲಾಗದ ನಮ್ಮ ನೆನಪಿನ ಕಾಲ ಮಾಪಕವು “ಬದುಕಿದ್ದರೆ ನೂರನೇ ಹುಟ್ಟಿದ ದಿನ…” ಸಮೀಪಿಸುತ್ತಿರುವುದನ್ನು ಎಚ್ಚರಿಸಿದಾಗ…

 

ಆರೆಂಟು ತಿಂಗಳ ಹಿಂದೆಯೇ ಗಣಕ ತಜ್ಞ ಓಂಶಿವಪ್ರಕಾಶ್ ಆಯ್ದ ಗೆಳೆಯರ ಕೂಟ (ಅರುಣ್ ಸಿ.ಕಲ್ಲಪ್ಪನವರ್, ಪ್ರಶಾಂತ್ ಪಂಡಿತ್, ಪ್ರೇಮ್ ಕುಮಾರ್, ಕೃಷ್ಣ ಕುಮಾರ್, ಭೀಮರಾಜ್ ಎಸ್. ಕೊಟಬಾಗಿ) ಕಟ್ಟಿ, “ನಾವು ಜಿಟಿಎನ್ ಕೈ ಬರಹವನ್ನು ಗಣಕಕ್ಕೆ ಅಳವಡಿಸುತ್ತೇವೆ…” ಎಂದು ತೊಡಗಿಕೊಂಡಿದ್ದರು. ಕಳೆದ ನವೆಂಬರ್ ಸುಮಾರಿಗೆ, ಕೆಲಸ ಪೂರೈಸಿ, ಲೋಕಾರ್ಪಣಕ್ಕೆ ನಮ್ಮಲ್ಲಿ ದಿನ ಕೇಳಿದರು. ಆಗ ಮನದಲ್ಲಿ ಅನುರಣಿಸಿದ್ದು ತಂದೆಯದೇ ಅತ್ರಿಸೂನು ಉವಾಚದ ನುಡಿ – ಸಾಹಿತ್ಯವೆನ್ನೊಡಲು. ತಂದೆಯ ಹುಟ್ಟಿನ ನೂರನೇ ದಿನವನ್ನೇ (೩೦-೧-೨೬) ಲಿಪಿ ಬಿಡುಗಡೆಗೆ ದಿನವಾಗಿ ಅಂದಾಜಿಸಿದೆವು. ವಚನದ ಇನ್ನೊಂದು ನುಡಿ “ವಿಜ್ಞಾನವೆನ್ನಶನ.” ಅಂಥಾ ಪ್ರಾತಿನಿಧಿಕ ನುಡಿನಮನ ಕೊಡಲು ಪ್ರಖ್ಯಾತ ವಿಜ್ಞಾನ ಸಂವಾಹಕರೇ ಆದ ನಾಗೇಶ ಹೆಗಡೆಯವರನ್ನು (ನಮ್ಮ ಮಗ) ಅಭಯಸಿಂಹ ಸೂಚಿಸಿದ. ಇವೆರಡಕ್ಕೆ (ಸಂಗೀತವೆನ್ನುಸಿರು) ಉಸಿರೂದುವಂತೆ ಸಂಗೀತಕ್ಕೆ ವಿದ್ವಾನ್ ಟಿಎಂ ಕೃಷ್ಣರನ್ನು ನಾನು ನೆಚ್ಚಿದೆ.

ಸ್ಥಳದ ನಿಷ್ಕರ್ಷೆಯಲ್ಲಿ ತಂದೆಯ ಉತ್ಕರ್ಷ ಹಾಗೂ ಕೊನೆಯ ದಿನಗಳನ್ನು ಕಂಡ ಮೈಸೂರು ಪ್ರಥಮ ಸ್ಥಾನದಲ್ಲಿತ್ತು. ಹಿರಿಮಗ ಮತ್ತು ಅವರ ಕೃತಿಗಳ ಪ್ರಕಾಶಕ ಎಂಬ ನೆಲೆಯಲ್ಲಿ ನಾನು ಮಂಗಳೂರಿನ ಪ್ರಸ್ತಾವವೇನೋ ಮಾಡಿದೆ. ಆದರೆ ನನ್ನ ಆರ್ಥಿಕ ಮಿತಿ ಮತ್ತು ಸಾಮಾಜಿಕ ಸಂಘಟನಾ ದೌರ್ಬಲ್ಯಗಳನ್ನು ಸರಿಯಾಗಿಯೇ ಅಭಯ ಗುರುತಿಸಿದ್ದ. ಮೇಲೆ ಮೊಮ್ಮಗನೆಂಬ ಹಕ್ಕಿನಲ್ಲಿ ಒಟ್ಟಾರೆ ಕಲಾಪವನ್ನು ಬೆಂಗಳೂರಿಗೇ ಎಳೆದುಕೊಂಡ. ಆತ ವೃತ್ತಿಪರ ಸಿನಿಮಾ ನಿರ್ದೇಶಕನ ನೆಲೆಯಲ್ಲಿ ಕಟ್ಟಿಕೊಂಡ ‘ಸಿನೆ-ಸೋಲ್ಸ್’ (ಚಿತ್ರಾತ್ಮ ಎನ್ನಿ!) ಸಂಸ್ಥೆಯ ಆರ್ಥಿಕ ಹಾಗೂ ಸಂಘಟನಾ ಅನುಭವ ಬಳಸಿದ.

ಅತ್ರಿಸೂನು ವಚನದ ಕೊನೆಯ ಚರಣಕ್ಕೊಪ್ಪುವಂತೆ (ನಿರಪೇಕ್ಷ, ನಿಸ್ವಾರ್ಥ, ನಿರ್ಮೋಹ ಸೇವೆ ಗುರಿ), ಅಭಯ ಮಿತ್ರರಾದ ಓಂಶಿವಪ್ರಕಾಶ್ ಮತ್ತು ಇಸ್ಮಾಯಿಲ್ಲರೊಡನೆ ಕಟ್ಟಿಕೊಂಡ, ಉದಾತ್ತ ಸೇವೆಗೇ ಮೀಸಲಾದ ಸಂಚಿ ಪ್ರತಿಷ್ಠಾನವನ್ನೇ ಮುಂದಿಟ್ಟ. ಅದಕ್ಕೆ ಹೆಚ್ಚಿನ ಬಲ ಕೊಟ್ಟದ್ದು ಬೆಂಗಳೂರು ಇಂಟರ್ನ್ಯಾಶನಲ್ ಕೇಂದ್ರ (ಬಿಐಸಿ). ಸಾಂಸ್ಕೃತಿಕ ಕಲಾಪಗಳಿಗೇ ಮೀಸಲಾದ ಬಿಐಸಿ, ಸಭಾಭವನವನ್ನು ತನ್ನೆಲ್ಲ ಸವಲತ್ತುಗಳೊಡನೆ ಉಚಿತವಾಗಿ ಕೊಟ್ಟು, ಕಲಾಪವನ್ನು ತನ್ನದೇ ಎನ್ನುವಂತೆ ನಡೆಸಿಕೊಂಡಿತು. ಇದಕ್ಕೆ ಕಾರಣ ಕರ್ತ – ಪ್ರಜಾವಾಣಿ ಬಳಗದ ಮುಖ್ಯಸ್ಥರಾದ ಕೆ ಎನ್ ಶಾಂತಕುಮಾರ್.

ಅಭಯ ನವೆಂಬರ್ ಸುಮಾರಿಗೇ ಟಿಎಂಕೆ ಸಂಪರ್ಕಕ್ಕಿಳಿದ. ಅವರು ತನ್ನ ‘ವಿ ದ ಪೀಪಲ್’ ಪುಸ್ತಕದ ಲೋಕಾರ್ಪಣೆ, ಸಂವಾದ ಸರಣಿ ಮತ್ತು ದೇಶ ವಿದೇಶಗಳ ಸಂಗೀತ ಕಛೇರಿಗಳ ಸಂಮರ್ದದಲ್ಲಿ ಏಪ್ರಿಲ್ವರೆಗೆ ಕಾಯಬೇಕೆಂದರು. ಹುಟ್ಟು ಆಕಸ್ಮಿಕ, ಮುಹೂರ್ತ ಎನ್ನುವುದು ಕೇವಲ ಲೌಕಿಕ ಅನುಕೂಲಗಳಿಗೆ ಇಟ್ಟ ಹೆಸರು ಎಂದೇ ತಂದೆ ಹೇಳುತ್ತಿದ್ದರು ಮತ್ತು ಪುರಂದರದಾಸ ವಾಣಿಯನ್ನೂ  (ಇಂದಿನ ದಿನವೇ ಶುಭದಿನವೂ ಇಂದಿನ ವಾರ…) ಉದ್ಧರಿಸುತ್ತಿದ್ದರು. ನಾವು ಟೀಎಂಕೆ ಕೊಟ್ಟ ಏಪ್ರಿಲ್ ಹದಿನೆಂಟು, ಎರಡೂವರೆ ತಿಂಗಳು ತಡವಾದ ದಿನವನ್ನು, ಸಂತೋಷದಲ್ಲೇ ಒಪ್ಪಿಕೊಂಡೆವು. ನಾಗೇಶ ಹೆಗಡೆಯವರು ಕೇವಲ ತನ್ನ ಆರೋಗ್ಯದ ನೆಪಕ್ಕೆ ತುಸು ಹಿಂಜರಿದರೂ ಸಂತೋಷದಲ್ಲೆ ಒಪ್ಪಿಕೊಂಡರು. ಆ ಪ್ರಕಾರ (೨೦೨೬ರ) ಏಪ್ರಿಲ್ ಹದಿನೆಂಟರ ಸಂಜೆ…

ವೇದಿಕೆಯ ಕಲಾಪದ ಪೂರ್ವಾರ್ಧದಲ್ಲಿ ಎನ್ನೇಯಂ ಇಸ್ಮಾಯಿಲ್, ಏಕೈಕ ನಿರೂಪಕನಾಗಿ ಜಿಟಿನಾ ಸಂಕ್ಷಿಪ್ತ ಪರಿಚಯ ನೀಡಿದರು. ಜಿಟಿಎನ್ ಕೈಬರಹದ ಶೈಲಿಯನ್ನು ಗಣಕಕ್ಕೆ ಒಗ್ಗಿಸಿದ ಸಂಚಯದ (ಓಂ ಶಿವಪ್ರಕಾಶ್ ಬಳಗ) ಸಾಧನೆಯನ್ನು ಚುಟುಕದಲ್ಲಿ ವಿವರಿಸಿದರು. ಅದನ್ನು (ಜತೆಗೇ ವೆಸ್ಲಿ ಪ್ರೆಸ್ಸಿನ ಕನ್ನಡ ಶೈಲಿಯನ್ನೂ) ಕೆಎನ್ ಶಾಂತಕುಮಾರ್ ಲೋಕಾರ್ಪಣ ಮಾಡಿದರು. ಅವರು ಮೊದಲೇ ಘೋಷಿಸಿಕೊಂಡಂತೆ, ಸಭೆಗೆ ಮಾತಿನ ಹೊರೆ ಹೊರಿಸಲಿಲ್ಲ. ಆದರೆ ಇಸ್ಮಾಯಿಲ್ ಪ್ರಾಸಂಗಿಕವಾಗಿ, ಪ್ರಜಾವಾಣಿಯ ಲಿಪಿಯ ಆಯ್ಕೆಯಲ್ಲಿ ಶಾಂತಕುಮಾರರ ಮಹತ್ವವನ್ನು ಎತ್ತಿ ನುಡಿದದ್ದು ಮಹತ್ವದ್ದೇ ಆಗಿತ್ತು. ಅದಕ್ಕೆ ಹೆಚ್ಚುವರಿಯಾಗಿ ನನ್ನ ಒಂದು ಮಾತನ್ನು ಇಲ್ಲಿ ಸೇರಿಸಲೇ ಬೇಕು. ೧೯೬೫ರ ಹಿಂದು ಮುಂದಿನ ದಿನಗಳಲ್ಲಿ ಪ್ರಜಾವಾಣಿ ಬಳಗದ ಸುಧಾ ವಾರಪತ್ರಿಕೆಯ ಪ್ರಕಟಣೆ ಶುರುವಾಗಿತ್ತು. ಅದರ ಪ್ರಧಾನ ಸಂಪಾದಕರ (ಇ.ಆರ್ ಸೇತುರಾಂ ಮುಂದೆ ಎಂಬಿ ಸಿಂಗ್) ಪ್ರೇರಣೆಯಲ್ಲಿ, ತಂದೆ ತಿಂಗಳಿಗೊಂದರಂತೆ ಆಯಾ ತಿಂಗಳ ಆಕಾಶದ ‘ಜೀವಂತ’ ವಿವರಗಳನ್ನು ರೇಖಾಚಿತ್ರ ಸಹಿತ ಲೇಖಿಸುತ್ತಿದ್ದರು. ಇದು ಕೆಲ ವರ್ಷಗಳ ಕಾಲ ನಡೆದು, ತಂದೆಗೆ ತಾರಾಮೌಲ್ಯ ಕೊಟ್ಟದ್ದು ಪ್ರಜಾವಾಣಿ ಬಳಗವೇ ಎನ್ನುವುದು ಇಲ್ಲಿ ಸ್ಮರಣಾರ್ಹ.

ನುಡಿ ತರ್ಪಣದಲ್ಲಿ ನಾಗೇಶ ಹೆಗಡೆಯವರು, ಜಿಟಿನಾ ಜತೆಗಿನ ತಮ್ಮ ಕೆಲವು ಸ್ವಾನುಭವಗಳನ್ನು ಬೆಸೆದು, ಸಂದರ್ಭಕ್ಕೆ ಒಪ್ಪುವಂತೆ ವೈಜ್ಞಾನಿಕ ಮನೋಧರ್ಮವನ್ನು ಪ್ರಸರಿಸುವ ಮಾತುಗಳನ್ನಾಡಿದರು.

ಟಿ.ಎಂ ಕೃಷ್ಣರದ್ದು ಬರಿಯ ಸಂಗೀತವಲ್ಲಾ

ಕರ್ನಾಟಕ ಸಂಗೀತದ (ವೃತ್ತಿಪರ) ವಿದ್ವಾಂಸ, ಅದ್ಭುತ ಶಾರೀರದ ಹಾಡುಗಾರ, ಸಂಶೋಧಕ, ವಾಗ್ಮಿ, ಲೇಖಕ, ಸರಳ, ಸಜ್ಜನಿಕೆಯ ಟಿ.ಎಂ ಕೃಷ್ಣರನ್ನು ನಾನು ಮೊದಲು ಕಂಡದ್ದು ಉಡುಪಿಯಲ್ಲಿ. ಅಂದು ಯಕ್ಷಕಲಾವಿದ ಬನ್ನಂಜೆ ಸಂಜೀವ ಸುವರ್ಣರ ಅಭಿನಂದನಾ ನುಡಿಗಳನ್ನು ಆಡಿ, ಹಿಂಬಾಲಿಸಿದಂತೆ ಪೂರ್ಣ ಮಟ್ಟದ ಸಂಗೀತ ಕಚೇರಿಯನ್ನೂ ನಡೆಸಿದ್ದರು. (ನೋಡಿ: ಕರುಣ ಸಂಜೀವ) ಕೃಷ್ಣ ಶಿಷ್ಯ ಬಳಗದೊಂದಿಗೆ ಹೆಗ್ಗೋಡಿಗೆ ಬಂದು, ನೀನಾಸಂ ಶಿಬಿರದಲ್ಲಿ ಪೂರ್ಣ ಪ್ರಮಾಣದ ಪ್ರಾತ್ಯಕ್ಷಿಕೆ ಸಹಿತ ಕಲಾನುಭವದ ವಿಶ್ಲೇಷಣೆ ನಡೆಸಿದಾಗ, ಶಿಬಿರಾರ್ಥಿಯಾಗಿ ನಾನೂ ಅನುಭವಿಸಿ ಬೆರಗಾಗಿದ್ದೆ. (ಅದ್ವಿತೀಯ ದಿನಗಳ ಚಿತ್ರಣ) ಮುಂದುವರಿದ ದಿನಗಳಲ್ಲಿ ಮಾಳದ ಮೂಲೆಯ ಮಣ್ಣಪಾಪು ಮನೆಯಲ್ಲಿ ಟೀಎಂಕೆ ಜನಪದ ಕಲಾವಿದರ ಡೊಳ್ಳನ್ನು ಆಸ್ವಾದಿಸಿದ್ದು, ಕೋವಿಡ್ ನಿರ್ಬಂಧದ ದಿನಗಳಲ್ಲಿ ಯೂಟ್ಯೂಬಿನಲ್ಲಿ ಹರಿಸಿದ ಪ್ರಯೋಗಗಳು, ಭಿನ್ನಲಿಂಗಿಗಳ ಸಂಗದಲ್ಲಿ (ಜೋಗಪ್ಪ) ಕಚೇರಿ ನಡೆಸಿದ್ದು, ತನ್ನ ಕಚೇರಿಗಳಲ್ಲಿ ಮಹಿಳಾ ಪಕ್ಕವಾದ್ಯಗಾರರನ್ನು ಗೌರವಪೂರ್ಣವಾಗಿ ಒಳಗೊಂಡದ್ದು, ಜಾತ್ಯಾತೀತತೆ ಸಾರಲು “ಇಸ್ಲಾಂ ಹಾಗೂ ಕ್ರಿಶ್ಚಿಯನ್ ಭಕ್ತಿ ಗೀತೆಗಳನ್ನು” ತನ್ನ ಹಾಡಿಕೆಗೆ ಅಳವಡಿಸಿಕೊಂಡದ್ದು… ನನ್ನ ಅನುಭವದ ಪಟ್ಟಿ ಸಾಕಷ್ಟು ದೊಡ್ಡದೇ ಆಗಿತ್ತು.

(೨೮-೮-) ೨೦೨೨ರಲ್ಲಿ ಟೀಎಂಕೆ ಮಂಗಳೂರಿಗೇ ಬಂದು, ಶ್ರೀ ನಾರಾಯಣ ಗುರುಗಳ ಕಾವ್ಯ ರಚನೆಗಳನ್ನು ಅದೇ ಮೊದಲೆನ್ನುವಂತೆ ಪೂರ್ಣಾವಧಿಯ ಸಂಗೀತ ಕಚೇರಿಯಲ್ಲೇ ಬಳಸಿ, ವೈದ್ಯ ಗೆಳೆಯ ಶ್ರೀನಿವಾಸ ಕಕ್ಕಿಲ್ಲಾಯರ ವೈಚಾರಿಕ ಆರಾಧನೆಗೆ ಬಲ ಕೊಟ್ಟದ್ದು ಚಿರಸ್ಮರಣೀಯ. ಕೃಷ್ಣ ಇವುಗಳನ್ನು ಕ್ಷಣಿಕ ಆವುಟಗಳಂತೆ (ಸ್ಟಂಟ್) ನಡೆಸುವುದಿಲ್ಲ, ವೈಚಾರಿಕ ಮಥನದ ಫಲಗಳಂತೇ ಪ್ರಸ್ತುತಪಡಿಸುತ್ತಾರೆ. ಮೃದಂಗವನ್ನು ಸಂಗೀತ ಕಚೇರಿಗಳ ಒಂದು ಪಕ್ಕ ವಾದ್ಯವೆಂದು ಪಕ್ಕಕ್ಕೆ ಸರಿಸದೇ ಕೃಷ್ಣ, ವಾದ್ಯ ತಯಾರಕರ ಬೆಂಬತ್ತಿ ‘ಸೆಬಾಸ್ಟಿಯನ್ ಅಂಡ್ ಸನ್ಸ್’ (ಇಂಗ್ಲಿಷ್) ಪುಸ್ತಕವನ್ನೇ ಬರೆದದ್ದು ಅಪೂರ್ವ ಸಾಧನೆಯೇ ಸರಿ. ಕಲಾ ಸಾಧನೆಯನ್ನು ಲಿಂಗ, ಮತ, ಆರಾಧನೆಯೇ ಮೊದಲಾದ ಕಟ್ಟುಪಾಡುಗಳಿಂದ ಕೃಷ್ಣ ಮುಕ್ತಗೊಳಿಸಿದಷ್ಟು ಇನ್ಯಾರೂ ಮಾಡಿಲ್ಲ. ಇವುಗಳ ಮುನ್ನೆಲೆಯಲ್ಲೇ ಜಿಟಿನಾ ಜನ್ಮ ಶತಾಬ್ದಿಗೆ ಟಿಎಂ ಕೃಷ್ಣರ ಸಂಗೀತ ಕಚೇರಿ ನಮ್ಮೆಲ್ಲರ ಅನಿವಾರ್ಯ ಆಯ್ಕೆಯೇ ಆಗಿತ್ತು.

ಟೀಎಂಕೆ ತನ್ನ ಫೇಸ್ ಬುಕ್ ಗೋಡೆಯಲ್ಲಿ, ಸದಾ ತನ್ನ ಕಲಾಪಗಳ ಮುನ್ನೋಟ ಕೊಡುತ್ತಿರುತ್ತಾರೆ. ಹಾಗೆ ಅವರ ಏಪ್ರಿಲ್ಲಿನ ಪ್ರಕಟಣೆಯಲ್ಲಿ, ಜಿಟಿನಾ ಜನ್ಮ ಶತಾಬ್ದಿಯ ಸಂಗೀತ ಕಚೇರಿಯೇನೋ ಸರಿಯಾಗಿಯೇ ಬಂತು. ಜತೆಗೇ ಎರಡು ದಿನ ಮೊದಲು, ಅಂದರೆ  ಏಪ್ರಿಲ್ ೧೬ರಂದು, ಗಯಟೆ ಇನ್ಸ್ಟಿಟ್ಯೂಟಿನಲ್ಲಿ, ಅವರದೇ ಹೊಸ ಪುಸ್ತಕ – ವಿ ದ ಪೀಪಲ್ ಸಂವಾದದ ನಮೂದೂ ಇತ್ತು. ಅಷ್ಟರೊಳಗೇ ಆ ಪುಸ್ತಕವನ್ನು ನಾನು ಕೊಂಡು ಬಹುತೇಕ ಓದಿದ್ದರಿಂದ, ಆ ಸಭೆಗೂ ಹೋಗಿದ್ದೆ.

ಗಯಟೇ ಇನ್ಸ್ಟಿಟ್ಯೂಟಿನಲ್ಲಿ ಇಂಟಾಚ್ (INTACH > Indian national trust for art and cultural Heritage) ತೀರಾ ಅನೌಪಚಾರಿಕವಾಗಿಯೇ ‘ವಿ ದ ಪೀಪಲ್’ ಪುಸ್ತಕದ ಲೇಖಕ ಟಿಎಂ ಕೃಷ್ಣರ ಸಂವಾದವನ್ನು ನಡೆಸಿಕೊಟ್ಟಿತ್ತು.  ಮೊದಲ ಸುಮಾರು ಒಂದು ಗಂಟೆಯ ಕಾಲ ಕೃಷ್ಣರೊಡನೆ ವೇದಿಕೆ ಹಂಚಿಕೊಂಡ ವಕೀಲ ರವಿ, ಹೊಗಳು ಸಾಹಿತ್ಯವಲ್ಲದ ಕಿರು ಪ್ರಶ್ನೆಗಳನ್ನೇ ಒಡ್ಡಿ, ಕೃಷ್ಣರಿಂದ ಹೆಚ್ಚಿನ ವಿಶ್ಲೇಷಣಾತ್ಮಕ ವಿವರಣೆಗಳನ್ನು ಕೊಡಿಸಿದರು. ಮುಂದೆ ಸುಮಾರು ಮುಕ್ಕಾಲು ಗಂಟೆಯ ಕಾಲ ಶ್ರೋತೃಗಳಿಂದಲೂ ಬಂದ ಗಂಭೀರ ಸಂದೇಹಗಳನ್ನು ಕೃಷ್ಣ ಸವಿನಯ ಸಮಾಧಾನಿಸಿದರು.

ವಿ ದ ಪೀಪಲ್ ಭಾರತದ ಧ್ವಜ (ತ್ರಿವರ್ಣ), ಗೀತ (ಜನಗಣ ಮನ), ಧ್ಯೇಯ (ಸತ್ಯಮೇವ ಜಯತೆ) ಸಂಕೇತ (ಚಕ್ರ ಸಹಿತ ಸಿಂಹ ಮುಖಗಳು) ಮತ್ತು ಸಂವಿಧಾನದ ಪ್ರಸ್ತಾವನೆಗಳನ್ನು ಬಹು ವಿವರಗಳಲ್ಲಿ ಪ್ರಸ್ತುತಪಡಿಸುತ್ತದೆ. ಅಭಿವೃದ್ಧಿಪರ ಎಂದೇ ಹೆಸರಾಂತ ಭಾರತ, ಈಚಿನ ಹನ್ನೆರಡು ವರ್ಷಗಳಲ್ಲಿ ಧರ್ಮಕಾರಣಕ್ಕಿಳಿದು ತೀವ್ರ ಹಿಮ್ಮುಖ ನಡೆಯಲ್ಲಿದೆ. ಭಗವಾಧ್ವಜ, ವಂದೇ ಮಾತರಂ, ಪರಮತ ದ್ವೇಷ, ಧರ್ಮದಂಡ ಮತ್ತು ಮನುವಾದ ಆಕ್ರಮಿಸುತ್ತಿದೆ. ಟೀಎಂಕೇ ಪುಸ್ತಕ ಸ್ಪಷ್ಟ ದಾಖಲೆಗಳೊಡನೆ (ಪುಸ್ತಕದ ಕೊನೆಯ ಸುಮಾರು ಎಪ್ಪತ್ತಕ್ಕೂ ಮಿಕ್ಕು ಪುಟಗಳಲ್ಲಿ ಆಕರಗಳೂ ಅಡಿಟಿಪ್ಪಣಿಗಳೂ ಇಡಿಕಿರಿದಿವೆ) ಅಂಥವನ್ನೆಲ್ಲಾ ಇನ್ನೂ ಹೆಚ್ಚಿನ ವಿವರಗಳಲ್ಲೇ ವಿಮರ್ಶೆಗೊಡ್ಡಿ ಸತ್ಯ ಪ್ರಕಾಶಿಸುತ್ತದೆ. ಸ್ವಾರಸ್ಯಕರ ಓದನ್ನೇ ಕೊಡುತ್ತದೆ. ಎರಡು ಸಣ್ಣ ನಿದರ್ಶನಗಳನ್ನೇ ತುಸು ವಿಸ್ತರಿಸುವುದಾದರೆ…

“ಕೇಸರಿ, ಬಿಳಿ, ಹಸಿರು ಮೂರು ಬಣ್ಣ ನಡುವೆ ಚಕ್ರವು…” ಎಂದೇ ನಾವು ಹಾಡಿಕೊಂಡು ಬೆಳೆದವರು. ತಿರಂಗಾ ಎಂದೇ  ಖ್ಯಾತವಾದ ನಮ್ಮ ರಾಷ್ಟ್ರಧ್ವಜ ನಿಜದಲ್ಲಿ ಚತುರಂಗಿ. ಇದರ ನಡುವಣ ಚಕ್ರದ ನೀಲಿಗೂ ದೊಡ್ಡ ಕತೆ, ಚರ್ಚೆಯನ್ನು ಕೃಷ್ಣ ಸ್ವಾರಸ್ಯಕರವಾಗಿ ಕೊಡುತ್ತಾರೆ. ಭಾರತ ಒಂದು ದೇಶವಾಗಿ  ಸ್ವಾತಂತ್ರ್ಯ ಪಡೆಯುವುದಕ್ಕೂ ಸುಮಾರು ನೂರು ವರ್ಷಗಳ ಹಿಂದಿನಿಂದಲೇ ತೊಡಗಿದ ರಾಷ್ಟ್ರಧ್ವಜದ ಕಲ್ಪನೆ ಬಣ್ಣ, ಆಕಾರ, ಚಿತ್ತಾರ, ಎಲ್ಲಕ್ಕೂ ಮುಖ್ಯವಾಗಿ ವಿಚಾರಗಳಲ್ಲಿ ಪಕ್ವಗೊಂಡು ಈ ನೆಲೆ ಕಂಡಿದೆ. ಇದು ಸ್ವಾತಂತ್ರ್ಯ ಹೋರಾಟದ ವಿಜಯ ಪತಾಕೆ, ಭಾರತ ಎಂಬ ಸಾರ್ವಭೌಮನ ಗರ್ವದ ನಿಶಾನಿ, ಬಹುಮತೀಯ ಸಮನ್ವಯದ, ಭೌಗೋಳಿಕ ಮತ್ತು ಭಾಷಿಕ ವಿಭಿನ್ನತೆಗಳ ಒಕ್ಕೂಟದ ಸಂಕೇತ ಎಂಬೆಲ್ಲ ಅವಸ್ಥಾಂತರಗಳನ್ನು ಒಳಗೊಂಡೇ ಹಾರುತ್ತಿದೆ; ರಾಜಕೀಯ ಎಲ್ಲೆಗಳನ್ನು ಮೀರಿ ಲೋಕ ಶಾಂತಿಯನ್ನೇ ಸಾರುತ್ತಿದೆ.

ಜನಗಣಮನ ಅಧಿನಾಯಕ…. ಠಾಗೋರ್ ಪ್ರಣೀತ ಕವನ ಇಂದು ನಮ್ಮ ಏಕೈಕ ರಾಷ್ಟ್ರಗೀತೆ. ವಂದೇ ಮಾತರಂ… ಬಂಕಿಂ ಚಂದ್ರರು ರಚಿಸಿ, (ಮುಂದೆ ತಮ್ಮ ಕಾದಂಬರಿಯ ಭಾಗವಾಗಿಯೂ ಬಳಸಿದ) ಸ್ವಾತಂತ್ರ್ಯ ಹೋರಾಟಕ್ಕೆ ಭಾವುಕ ಮನಸ್ಸುಗಳನ್ನು ಒಲಿಸಿ, ಹೋರಾಟಕ್ಕೆ ಕುಮ್ಮಕ್ಕು ಕೊಟ್ಟ ಗೀತೆ. ಠಾಗೋರ್ ಕವನವನ್ನು ಬ್ರಿಟಿಷ್ ರಾಜಕುಮಾರನ ಸ್ತೋತ್ರವಾಗಿ ಬರೆದರು ಎಂದೋ ವಂದೇ ಮಾತರಂನ ಉಳಿದ ಚರಣಗಳು ಜಾತ್ಯಾತೀತತೆಯನ್ನು ನಿರಾಕರಿಸುತ್ತವೆ ಎಂದೋ ಮೂಡಿದ ಮಾತುಗಳನ್ನು ಪುಸ್ತಕ ಸಾಧಾರ ಚರ್ಚಿಸುತ್ತದೆ, ನಿರ್ಣಯವನ್ನು ಪೂರ್ಣ ಸಮರ್ಥಿಸುತ್ತದೆ. ಅಷ್ಟಾಗಿಯೂ ಸಂಸ್ಕೃತ ಭೂಯಿಷ್ಟ ಬಂಗಾಳಿ ಭಾಷೆಯ ಜನಗಣಮನ ಸಾಮಾನ್ಯರಿಗೆ ಎಟುಕದಿದ್ದರೆ ಎಂಬ ಸಂಶಯದಲ್ಲಿ ಸುಭಾಷ್ಚಂದ್ರ ಬೋಸರಿಗೆ ಬಂದಿತ್ತಂತೆ. ಅವರ ಪ್ರೇರಣೆಯಲ್ಲಿ ಅದೇ ಹಾಡಿಕೆಗೆ ಒಗ್ಗುವಂತೆ ಮೂಡಿದ ಸರಳ ಹಿಂದಿ ಪರ್ಯಾಯವನ್ನೂ (ಶುಭ್ ಸುಖ್ ಚೈನ್ ಕೀ ಬರ್ಖಾ… ಪುಸ್ತಕದಲ್ಲಿದೆ) ಸಂವಾದದಲ್ಲಿ ಸಾಹಿತಿ ಕೃಷ್ಣ ಸಣ್ಣದಾಗಿ ಎತ್ತಿ ಆಡಿದರು. ಜಿಟಿನಾ ಜನ್ಮ ಶತಾಬ್ದಿಯ ಪೂರ್ಣ ಮಟ್ಟದ ಸಂಗೀತ ಕಚೇರಿಯಲ್ಲಿ ಅದನ್ನೇ “ಜಿಟಿನಾ ಕುಟುಂಬದ ಬೇಡಿಕೆಯ ಮೇರೆಗೆ” ಸಂಗೀತ ವಿದ್ವಾನ್ ಟಿಎಂ ಕೃಷ್ಣ ಪಕ್ಕವಾದ್ಯಗಳ ಮೇಳದಲ್ಲಿ ಹಾಡಿಯೂ ರಂಜಿಸಿದರು.

ಅಭಯ ಟೀಎಂಕೆಗೆ ಸಂಗೀತ ಕಚೇರಿ ಕೋರಿ ಬರೆದ ಸಣ್ಣ ಪತ್ರದಲ್ಲಿ ಕೊಟ್ಟಿದ್ದ ಜಿಟಿನಾ ಸಾಹಿತ್ಯ ಪ್ರೇಮ, ವೈಜ್ಞಾನಿಕ ಜೀವನಶೈಲಿ ಮತ್ತು ಸಂಗೀತ ಪ್ರಿಯತೆಗಳನ್ನು ಒತ್ತಿ ಹೇಳಿದ್ದ. ಅದಕ್ಕೆ ಹೊಂದುವಂತೆ ಕೇವಲ ನಿಮ್ಮ ಸಂಗೀತ ಹಮ್ಮಿಕೊಳ್ಳುತ್ತಿದ್ದೇವೆ, ಎಂದೂ ಸೂಚಿಸಿದ್ದ. ಹಾಗಾಗಿ ಯೋಜಿತ ಸುಮಾರು ಒಂದೂವರೆ ಗಂಟೆಯ ಕಚೇರಿ, ಎರಡೂವರೆ ಗಂಟೆಗೆ ಲಂಬಿಸಿತ್ತು.ಕೊಟ್ಟ ಕೃತಿಗಳಲ್ಲಾದರೂ ಸಂಗೀತದ ವ್ಯಾಕರಣ ವಿಸ್ತರಣೆಗಿಂತ ಭಾವಪೂರೈಕೆ ಹೆಚ್ಚಿತ್ತು. ಕನ್ನಡದ ವಚನ, ಎರಡು ಹಿಂದೀ ರಚನೆಗಳು ಮತ್ತು ಪರ್ಯಾಯ ರಾಷ್ಟ್ರಗೀತೆಗಳೂ ಕೂಡಿ ಕಚೇರಿ ಪೂರ್ಣಗೊಂಡಾಗ, ಭವನ ತುಂಬಿ ತುಳುಕುತ್ತಿದ್ದ ಶ್ರೋತೃಗಳು ಎದೆದುಂಬಿ, ನಿಂತು, ಕೆಲವು ಮಿನಿಟುಗಳ ಕಾಲ ಕರತಾಡನ ನಡೆಸಿದ್ದರು.

ಜಿಟಿ ನಾರಾಯಣ ರಾವ್ ಜನ್ಮ ಶತಾಬ್ದಿಯ ನಮ್ಮ ಕಾರ್ಯಕ್ರಮವೇನೋ ಭವನದ ಮಿತಿಯಲ್ಲಿ ಸುಮಾರು ಇನ್ನೂರು ಮಂದಿಯ ಸಮಕ್ಷಮದಲ್ಲಿ ನಡೆಯಿತು. ಆದರೆ ವಿಸ್ತೃತ ಮಂದಿಗೂ ಸಾರ್ವಕಾಲಿಕ ಲಭ್ಯತೆಗೂ ಒದಗುವಂತೆ ಸಂಚಿ ಪ್ರತಿಷ್ಠಾನ ಅವನ್ನು ಅತ್ಯುತ್ತಮ ಗುಣಮಟ್ಟದ ದಾಖಲೀಕರಣಕ್ಕೊಳಪಡಿಸಿದೆ. ಇನ್ನು ಅದನ್ನು ಅನುಭವಿಸುವ, ಇಷ್ಟ ಮಿತ್ರ ಬಂಧು ಬಾಂಧವರೊಡನೆ ಹಂಚಿಕೊಳ್ಳುವ ಅವಕಾಶಕ್ಕೆ ಇಲ್ಲಿ ಚಿಟಿಕೆ ಹೊಡೆಯಿರಿ.

 

(ವಿಸೂ: ಇಲ್ಲಿ ೨ ಗಂಟೆ ಹನ್ನೊಂದು ಮಿನಿಟಿನ ಅವಧಿಯ ೭ ಸಂಗೀತ ಕೃತಿಗಳು ಮತ್ತು ೪೬ ಮಿನಿಟಿನ ಗದ್ಯವೂ ಕ್ರಮವಾಗಿ ತೆರೆದುಕೊಳ್ಳುತ್ತದೆ)