(ರಾಜಸ್ತಾನದ ಪ್ರಸಂಗಗಳು ೨)
ಪ್ರವಾಸೋದ್ಯಮದ ಕುಹಕ ನಹಾರ್ ಗಡ್!
ನಾವು ಹೋದಲ್ಲೆಲ್ಲ ನಮ್ಮದೇ ಮನೆ ಹೊರುವ (‘ಹೋಂ ಅವೇ ಫ್ರಂ ಹೋಂ’) ಭ್ರಮೆಯವರಲ್ಲ. ಹಾಗಾಗಿ ಬೆಳಗ್ಗಿನ ತಿಂಡಿಗೆ ಭಿನ್ನ ರುಚಿ ಅರಸಿ, ಅದೇ ಕಟ್ಟಡದಲ್ಲಿ ಸ್ವತಂತ್ರವಾಗಿದ್ದ ‘ರಾವತ್ ಮಿಸ್ಟಾನ್ (ಮೃಷ್ಟಾನ್ನ) ಭಂಡಾರ’ ಆಯ್ದುಕೊಂಡೆವು, ಚೆನ್ನಾಗಿತ್ತು. ರಾಜಾಸ್ತಾನದ ಎರಡನೇ ದಿನದ ವೀಕ್ಷಣೆ ಮತ್ತು ರಾತ್ರಿವಾಸ ಜೈಪುರಕ್ಕೇ ಸೀಮಿತವಾದ್ದರಿಂದ ನಿಶ್ಚಿಂತೆಯಲ್ಲಿ ಸುತ್ತಾಟಕ್ಕೆ ಹೊರಟೆವು.
ಅಮೇರ್ ಕೋಟೆ ಸುತ್ತುವಾಗಲೇ ಅದರ ಹೊರವಲಯದ ಭಾರೀ ಗೋಡೆಯೊಂದು ಹೆಬ್ಬಾವಿನಂತೆ ಉದ್ದಕ್ಕೆ ಮೈ ಚಾಚಿಕೊಂಡು ಬಿದ್ದದ್ದನ್ನು ಗಮನಿಸಿದ್ದೆವು. ಅದು ಹೆಬ್ಬಾವು ಸದ್ಯವೇ ನುಂಗಿದ ಭಾರೀ ಕೊಳ್ಳೆಯಂತೆ, ಅಲ್ಲಲ್ಲಿ ಗುಡ್ಡದ ಚೂಪುಗಳಲ್ಲಿ ವಿಸ್ತರಿಸಿಕೊಂಡು ಬುರುಜೋ ಪುಟ್ಟ ಕೋಟೆಯಂಥಾ ರಚನೆಯನ್ನೋ ಮೆರೆಸಿತ್ತು. ಮಾರ್ಗದರ್ಶಿ “ಅದು ಜೈಪುರ ಕೋಟೆಯದ್ದೇ ತೀರಾ ಹೊರಗಿನ ಸುತ್ತು. ಸುಮಾರು ಹನ್ನೆರಡು ಕಿಮೀಯಷ್ಟು ಉದ್ದವಿರುವ ಇದು, ಚೀನಾ ಗೋಡೆಗೆ ಎರಡನೆಯ ಸ್ಥಾನದಲ್ಲಿದೆ…” ಎಂದೇ ಕಥಿಸಿದ್ದ. ಅದರ ಉದ್ದಕ್ಕೆ ನಡೆದು ನೋಡುವ ನನ್ನ ಉತ್ಸಾಹಕ್ಕೆ ಸಮಯದ ಕೊರತೆ ಕಾಡುವುದಿತ್ತು. ಹಾಗಾಗಿ ಎರಡನೇ ದಿನ ಆ ಮಹಾಗೋಡೆಯಲ್ಲಿ ಮುಖ್ಯವಾದ ಎರಡು ಅಂದರೆ, ನಹಾರ್ ಘಡ್ ಮತ್ತು ಜೈ ಘಡ್ ಗಳನ್ನೇ ಮೊದಲು ತೋರುವಂತೆ ಕಾರು ಚಾಲಕನಿಗೆ ಸೂಚಿಸಿದ್ದೆವು. ಅವೆರಡೂ ಬೆಳಿಗ್ಗೆ ಹತ್ತು ಗಂಟೆಗೆ ಮುನ್ನ ತೆರೆಯುವುದಿಲ್ಲ ಎಂದು ತಿಳಿದಿದ್ದುದರಿಂದ, ನಾವು ಹೋಟೆಲ್ ಬಿಡೋಣ ಮತ್ತು ತಿಂಡಿ ತಿನ್ನೋಣವನ್ನು ವಿಲಂಬಿತ್ ತಾಳದಲ್ಲೇ ಪೂರೈಸಿದೆವು.
ರಾಜಸ್ತಾನಿಗಳು ನಾಮಫಲಕಗಳಲ್ಲಿ ಬೆಟ್ಟದ ಮೇಲಿನ ಕೋಟೆಗಳನ್ನು ಸರಿಯಾಗಿಯೇ ‘ಘಡ್’ (ನಮ್ಮ ಜಮಾಲಾ ಗಡದಂತೇ) ಎಂದರೂ ಉಚ್ಚಾರಣೆಯಲ್ಲಿ ಘರ್ (=ಮನೆ?) ಎನ್ನುತ್ತಾರೆ! ನಾವು ಮೊದಲು ಪೇಟೆಯಿಂದ ಸುಮಾರು ಎಂಟು ಕಿಮೀ ದೂರದ ನಹಾರ್ ಘಡಕ್ಕೆ ಹೋದೆವು. ದಟ್ಟ ಕುರುಚಲು ಕಾಡಿನ ಆ ಪುಟ್ಟ ಗುಡ್ಡೆ ಪರಿಸರ ಅರಸರ ಮೃಗಯಾವಿಹಾರ ತಾಣ ಆಗಿತ್ತಂತೆ. ಶಬ್ದಾರ್ಥದಲ್ಲಾದರೂ ನಹಾರ್ ಘಡ್ ಅಂದರೆ ನಮ್ಮ ಹುಲಿಮನೆಯೇ! ಸದ್ಯ ಕೋಟೆಯೂ ಸೇರಿದಂತೆ ಆ ವಲಯವನ್ನು ನಹಾರ್ ಘಡ್ ಜೈವಿಕ ಉದ್ಯಾನವೆಂದೇ ವರ್ಗೀಕರಿಸಿದ್ದಾರೆ. ಕೋಟೆ ನಿರ್ಮಾಣಗೊಂಡ ಕಾಲದಲ್ಲಿ (ಕ್ರಿಶ ೧೭೩೪) ಅದರ ಸುತ್ತಣ ವನ್ಯ ಸೌಂದರ್ಯಕ್ಕೆ ಒಪ್ಪುವಂತೆ ‘ಸುಂದರ್ ಶಾನ್ ಘಡ್’ ಎಂದೇ ಹೆಸರಿಸಿದ್ದರಂತೆ. ಆದರೆ ಸ್ವಲ್ಪೇ ಕಾಲದಲ್ಲಿ, ಆ ಕೋಟೆಯಲ್ಲಿ ನಹಾರ್ ಸಿಂಗ್ ಭೋಮಿಯಾ ಎಂಬಾತನ ಪ್ರೇತದ ಕಾಟ ವಿಪರೀತವಾಯ್ತಂತೆ. ಆಗ ಭೂತ ಶಾಂತಿಗಾಗಿ ಅಲ್ಲೊಂದು ಪುಟ್ಟ ಆರಾಧನಾ ಕೇಂದ್ರವನ್ನು ರಚಿಸಿದ್ದರಿಂದ ಬಳಕೆಯಲ್ಲದು (ಇಂದು ವಾಸ್ತವದಲ್ಲೂ) ‘ನಹಾರ್ ಘಡ್’ ಎಂದೇ ಖ್ಯಾತವಾಗಿದೆ.
ನಾವು ನಹಾರ್ ಘಡವನ್ನು ಟಿಕೆಟ್ ಅಡ್ಡೆ ತೆರೆಯುವುದಕ್ಕೂ ತುಸು ಮುಂದಾಗಿಯೇ ತಲಪಿದ್ದೆವು. ಆದರೆ ಜೈಪುರದರಮನೆಯಲ್ಲಿ ಅಥವಾ ಅಂತರ್ಜಾಲದ ಮೂಲಕ ಮುಂದಾಗಿಯೇ ಟಿಕೆಟ್ ಖರೀದಿಸಿದವರು ಸಮಯದ ನಿರ್ಬಂಧವಿಲ್ಲದಂತೆ ಒಳ ಹೋಗುತ್ತಲೇ ಇದ್ದರು. ನಮ್ಮಂಥವರು ಟಿಕೆಟ್ ಅಡ್ಡೆ ತೆರೆಯುವವರೆಗೆ ಮಂಗಗಳ ಸಾಂಗತ್ಯದಲ್ಲಿ ದ್ವಾರಪಾಲಕರಾಗಿದ್ದೆವು.
ಕೋಟೆ ಸಾಕಷ್ಟು ವಿಸ್ತಾರವೇ ಇದೆ. ಇಲ್ಲೂ ಮಳೆ ನೀರುಳಿಸುವ ತಂತ್ರದ ಸೋಪಾನ ಸರಣಿಯ ಕೆರೆಯನ್ನು ಆಕರ್ಷಕವಾಗಿಯೇ ಕಡಿದು ರೂಪಿಸಿದ್ದಾರೆ. ಕೋಟೆಯ ಒಂದು ಮೂಲೆಯ ನಹಾರ್ ಮಂದಿರದ ಬಳಿ ಭಜಕರಿಂದ ನೈವೇದ್ಯವನ್ನು ಸಾಮದಲ್ಲೋ ಬೇಧದಲ್ಲೋ ಗಳಿಸಿಕೊಳ್ಳುವ ಕಪಿಸೈನ್ಯ ‘ಎಚ್ಚರಿಕೆ’ಯ ಫಲಕ ಗಳಿಸುವಷ್ಟು ಬಲವಾಗಿಯೇ ಇತ್ತು. (ನಾವು ಖಾಲೀ ಕೈಯವರಾದ್ದರಿಂದ ತನಿಖೆಗೆ ಒಳಗಾಗಲಿಲ್ಲ!) ಅಲ್ಲಿನ ನಾಮಾಂಕಿತ ಉದ್ಯಾನವನವನ್ನು ಮುಳ್ಳ ಪೊದರುಗಳು ಆಕ್ರಮಿಸಿದ್ದರೆ, ರೆಸ್ಟುರಾ ಬೀಗ ಜಡಿದು ಕುಳಿತಿತ್ತು. ಕೋಟೆಯ ಕೇಂದ್ರದಲ್ಲಿದ್ದ….
ಸಣ್ಣ ಅರಮನೆಯನ್ನು ಸುಸ್ಥಿತಿಯಲ್ಲೂ ಆಕರ್ಷಕವಾಗಿಯೂ ಇಟ್ಟುಕೊಂಡಿದ್ದರು. ಅದರ ಸಪುರದ ಓಣಿ, ಪುಟ್ಟ ಪುಟ್ಟ ಕೋಣೆಗಳಲ್ಲೆಲ್ಲ ಓಡಾಡಿದೆವು. ಎಲ್ಲೆಡೆಗಳಂತೆಯೇ ಇದ್ದ ಗೋಡೆಗಳ ತೆಳು ವರ್ಣ ಚಿತ್ರಗಳಲ್ಲದೆ, ವರ್ಣಮಯ ಗಾಜು ಅಳವಡಿಸಿದ್ದ ಬೆಳಕಿಂಡಿಗಳು ನಮ್ಮ ವಿಶೇಷ ಗಮನವನ್ನು ಸೆಳೆದವು. ಅದರ ತಾರಸಿಗೇರಿದ್ದೆವು. ಕೆಳಗಿನ ವಸತಿ ವಲಯಗಳಿಗೆ ಸಹಜ ಬೆಳಕು, ಗಾಳಿ ಒದಗುವಂತೆ ಮಾಡಿದ ಒಳ ಅಂಗಳಗಳನ್ನುಳಿದು ಮೇಲೆ ಓಡಾಡುವಾಗ ನಮಗೆ ಚದುರಂಗದ ಮನೆಯ ಜೀವಂತ ಕಾಯಿಗಳ ಮುದ ಬಂದಿತ್ತು. ಕೆಳಗೆ ಕೋಟೆಯ ಅಂಚುಗಳ ಭಾರೀ ಗೋಡೆಗಳಲ್ಲಿ ಬಂದೂಕೋ ಬಾಣವನ್ನೋ ತೂರಿಸಲೆಂದೇ ರೂಪಿಸಿದ್ದ ಕಿಂಡಿಗಳು, ತೋಪುಗಳಿಗೆಂದು ರೂಪಿಸಿದ್ದ ವಿರಳ ಕಿಟಕಿಗಳು ನಮ್ಮ ದೂರ ದೃಷ್ಟಿಗೆ ಚೌಕಟ್ಟು ಹಾಕುತ್ತವೆ. ಆದರೆ ಅರಮನೆ ತಾರಸಿಯಲ್ಲಿ ಎಲ್ಲವೂ ಮುಕ್ತ! ರಮ್ಯ ಜೈಪುರದ ಹಕ್ಕಿ ನೋಟದಲ್ಲೂ (ಅಭಯನ ಕುಟುಂಬದ್ದು ಸಿಂಹಾವಲೋಕನ!) ನಮ್ಮನ್ನು ಕಾಡುವ ಒಂದೇ ಬೇಸರದ ಸಂಗತಿ ಸಾರ್ವಜನಿಕರು ಎಸೆಯುವ ಕಸ! ಅಲ್ಲಿನ ಆಡಳಿತ ವ್ಯವಸ್ಥೆ ಕೋಟೆಯ ವಠಾರವನ್ನೆಲ್ಲ ಶುಚಿಯಾಗಿಯೇ ಉಳಿಸಿಕೊಂಡಿದ್ದಾರೆ. ಆದರೆ ಇಲ್ಲಿ ಕೇವಲ ದಿಟ್ಟಿಯಟ್ಟಬೇಕಾದ ಕೆಲವರು ಪೈಪೋಟಿಗೆಂಬಂತೆ ಎಸೆದ ಹಾಳಮೂಳ ದೊಡ್ಡ ಗೋಡೆಯಾಚಿನ ಆಳವನ್ನೂ ಮುಟ್ಟಿದ್ದು ಕಾಣುತ್ತದೆ!
ನಹಾರ್ ಗಢ್ ಅರಮನೆಯೊಳಗೆ ಸಹಜವಾಗಿಯೇ ಹಲವು ಪ್ರದರ್ಶನಯೋಗ್ಯ ಚರ ಸಂಗತಿಗಳೂ ಇದ್ದಿರಬೇಕು. ಇಂದು ಅವನ್ನೆಲ್ಲ ಕೋಟೆಯ ದ್ವಾರದ ಬಳಿಯ ಸಣ್ಣ ಕಟ್ಟಡವೊಂದಕ್ಕೆ ವರ್ಗಾಯಿಸಿದಂತಿದೆ. ಮೂಲದಲ್ಲಿ ಈ ಕಟ್ಟಡ ಕೋಟೆಯ ರಕ್ಷಣಾ ಠಾಣೆಯೋ ದಾಸ್ತಾನು ಮನೆಯೋ ಆಗಿದ್ದಿರಬಹುದು. ಆದರಿಂದು ‘ರಾಜ ದರ್ಬಾರ್’, ‘ಶೀಷ ಮಹಲ್’, ವ್ಯಾಕ್ಸ್ ಮ್ಯೂಸಿಯಂ, (ಮೇಣದ ಗೊಂಬೆಗಳ ನೆಲೆ), ಗುಡಿ ಕೈಗಾರಿಕೆಯ ಪ್ರದರ್ಶಿಕೆ ಎಂದೇನೆಲ್ಲಾ ಹೆಸರಿಸಿಕೊಂಡು, ಹೆಚ್ಚುವರಿ ಪ್ರವೇಶಧನ ವಸೂಲು ಮಾಡುತ್ತಿದೆ. (ಕೋಟೆ ಪ್ರವೇಶಕ್ಕೆ ತಲಾ ರೂ ಐವತ್ತಾದರೆ ಇದಕ್ಕೆ ರೂ ಮುನ್ನೂರು). ಮ್ಯೂಸಿಯಮ್ಮುಗಳನ್ನು ಹಿಂದೆ (ಮುಂದೆಯೂ) ಸಾಕಷ್ಟು ಕಂಡ (ಕಾಣಲಿದ್ದ) ನೆಪ ಹೂಡಿ ನಾನು, ದೇವಕಿ, ಬಾಲಬುದ್ಧಿಯೊಡನೆ ಅನಾಸಕ್ತಿಯೋಗಾಭ್ಯಾಸಿ ಆಭಾಳನ್ನು ಜತೆಗಿಟ್ಟುಕೊಂಡು ಹೊರಗುಳಿದೆವು. “ಅದೊಂದು ಕೊರತೆಯಾಯ್ತು” ಎಂಬ ಭಾವ ಮತ್ತೆ ಕಾಡದಂತೆ ಅಭಯ ರಶ್ಮಿಯರು, ದಂಡ ಕೊಟ್ಟು, ಒಳ ಹೋಗಿ ಬಂದರು! ನಮಗೇನೂ ನಷ್ಟವಾಗಲಿಲ್ಲ ಎನ್ನುವಂತೆ…
ಮೇಣದ ಗೊಂಬೆಗಳು ಕಳಪೆ ನಕಲುಗಳು. ಶೀಷಮಹಲ್ ಐತಿಹಾಸಿಕ ರಚನೆಯ ಆಧುನಿಕ ಮರು ರೂಪಣೆಯಷ್ಟೆ. ಅದು ಅಮೇರ್ ಕೋಟೆಯದ್ದಕ್ಕಿಂತ (ಮುಂದೆಯೂ ನಾವು ಕೆಲವು ನೋಡಿದವಕ್ಕೂ) ಮಹಾ ಉತ್ತಮವೇನೂ ಇರಲಿಲ್ಲ. ಒಳಗಿನ ‘ಕುಂಬಾರವಾಡಿ’ಯಲ್ಲಿ ಪ್ರವಾಸಿಗಳಿಗೂ ಸಣ್ಣದಾಗಿ ತೊಡಗಿಕೊಳ್ಳಲು ಅವಕಾಶವಿತ್ತಂತೆ. ಅದಕ್ಕೆ ಪುರಾವೆಯೆಂಬಂತೆ, ಹೊರ ಬಂದ ಕೆಲವು ಮಕ್ಕಳು ಪುಟ್ಟ ಮಣ್ಣಮುದ್ದೆಗಳನ್ನು (ಅವರ ಲೆಕ್ಕಕ್ಕೇನೋ ಶಿಲ್ಪ) ಹೆಮ್ಮೆಯಿಂದ ಹಿಡಿದುಕೊಂಡಿದ್ದುದನ್ನು ಕಂಡೆವು.
ನಾವು ಹೊರಗೆ ಇದ್ದಂತೇ ಅಂಗಳದಲ್ಲಿದ್ದ ಅಲಂಕಾರಿಕ ಸಾರೋಟು, ಒಂದಂಚಿನಲ್ಲಿ ಕುಂಬಾರನೊಬ್ಬ ಮಣ್ಣು ಹದಗೊಳಿಸುತ್ತಿದ್ದದ್ದನ್ನು ಸಮೀಪಿಸಿ ನೋಡಬಯಸಿದಾಗ, ಕಾವಲಿನವ ಟಿಕೆಟ್ ಗೂಡಿಗೆ ಕೈ ಮಾಡಿ, ಗುರ್ರೆಂದದ್ದು ನಿಜಕ್ಕೂ ಪ್ರವಾಸೋದ್ಯಮದ ಕುಹಕವೇ ಸರಿ. ದಿಡ್ಡೀ ಬಾಗಿಲಿನ ಇನ್ನೊಂದು ಮಗ್ಗುಲಿನಲ್ಲಿ ನಹಾರ್ ಗಢದ ಸ್ಥಳಪುರಾಣದ ಫಲಕ ಒಂದನ್ನು ಇಟ್ಟಿದ್ದಾರೆ. ಅದಕ್ಕೆ ತಾಗಿದಂತೆ ಸಣ್ಣ ಮಂಟಪ ಮಾಡಿ ಏನೋ ದೇವ ಬಿಂಬ ಇಟ್ಟು ದೀಪ ಹಚ್ಚಿದ್ದರು. ನಾವು ಮಂಗ ಮತ್ತು ಆಭಾಳನ್ನು ಸಮೀಕರಿಸಿ ನೋಡಿಕೊಂಡಿದ್ದಂತೆ, ಕೋಟೆಯ ಸಿಬ್ಬಂದಿಯೋರ್ವ ಕಾರ್ಯಾವಸರದಲ್ಲೇ ಮಂಟಪಕ್ಕೆ ಬಂದ. ಆತ ಕೈಯಲ್ಲಿದ್ದ ಒಂದು ತೊಟ್ಟೆಯ ಬಾಯಿ ಹರಿದು, ದೀಪಕ್ಕೆ ಎಣ್ಣೆಯನ್ನು ಹೊಯ್ದ. ಮತ್ತೊಂದು ತೊಟ್ಟೆಯನ್ನು ಹರಿದು, ಅಲ್ಲೇ ಅಲಂಕಾರಿಕ ಉದ್ಯಾನಕ್ಕೆ ಎಸೆದು (ಮಂಗಗಳಿಗೇನೋ ತಿನಿಸು), ಅನ್ಯ ಕಾರ್ಯ ನಿಮಿತ್ತ ಒಳ ಧಾವಿಸಿಯೇಬಿಟ್ಟ… ಎಣ್ಣೆ, ತಿನಿಸು ಓಕೇ ಹರಕು ತೊಟ್ಟೆ ಬೇಕೇ?
(ಮನೆ ಮನೆಯಲ್ಲಿ ನಿತ್ಯ ಬಕೆಟ್ ತುಂಬಾ ಕಸ ಉತ್ಪಾದಿಸುವ ನಾವು, ಅದನ್ನೆತ್ತಲಿಕ್ಕೆ ಜನ ಬೇರೇ ಇದ್ದಾರೆ ಎಂದೇ ನಿರ್ಧರಿಸಿಲ್ಲವೇ…)
ಜೈವಾನ್ ಎಂಬ ಮಹಾ ಫಿರಂಗಿ!
ಅಮೇರ್ ನ ದೀರ್ಘ ಕೋಟೆಯ ಇನ್ನೊಂದು ಅಂಗ ಜೈ ಘಡ್! ನಹಾರ್ ಘಡದಿಂದ ನಮ್ಮ ಕಾರು ಇಲ್ಲಿಗೇ ಬಂದಿತ್ತು. ಈ ಕೋಟೆಯೂ ನಹಾರ್ ಘಡದಷ್ಟೇ ದೊಡ್ಡದಿದ್ದಂತಿತ್ತು. ಇದಕ್ಕೆ ಹೊರಗೆ ವಾಹನಗಳು ತಂಗಲು ವಿಶೇಷ ಸ್ಥಳಾವಕಾಶ ಇಲ್ಲ. ಮಾರ್ಗ ಸೌಕರ್ಯ ಉಂಟೆಂದು ಒಳ ಹೋಗುವುದಿದ್ದರೆ ದರದಲ್ಲಿ ಪಾದಚಾರಿಗೂ ವಾಹನಕ್ಕೂ ಅಜಗಜಾಂತರ! ನಾವು ನಡೆದೇ ಹೋದೆವು.
ಎರಡೆರಡು ಮಹಾ ಗೋಡೆ ಹಾಗೂ ಮಹಾದ್ವಾರಗಳನ್ನು ಅಂಕಾಡೊಂಕಿನ ಏರು ದಾರಿಯಲ್ಲಿ ಹಾದು ಹೋದರೆ, ಎಡದ ಕವಲು ದಾರಿಯ ಸಣ್ಣ ಎತ್ತರದಲ್ಲಿ ಅರಮನೆ ಏನೋ ಶೋಭಾಯಮಾನವಾಗಿಯೇ ಕಾಣಿಸಿತು. ಪ್ರವಾಸಿಗರ ಸಂಚಾರವೇ ಇಲ್ಲದ ಆ ಪರಿಸರದಲ್ಲಿ ಕೇವಲ ಸಿಮೆಂಟ್, ಕಸ ಪೇರಿಸಿಕೊಂಡಿತ್ತು. ಓರೆಯಾದ ಬಾಗಿಲಿನಲ್ಲಿ ಇಣುಕಿದರೆ, ಅಂತರಂಗದಲ್ಲಿ ವರ್ತಮಾನ ಕಾಲದ ಕೂಲಿಯವರ ವಸತಿ ಸೌಕರ್ಯವಷ್ಟೇ ಕಾಣಿಸಿ, ನಿರಾಶೆಗೊಳಿಸಿತು. ಅದನ್ನು ಅಲ್ಲಿಗೇ ಬಿಟ್ಟು ಸಾರ್ವಜನಿಕ ಪ್ರವಾಹ ಸಾಗಿದ್ದ ಬಲ ಕವಲನ್ನೇ ಅನುಸರಿಸಿದೆವು.
ಪ್ರವಾಹ ಎಂದ ಕೂಡಲೇ ಭಾರೀ ಜನಸಂದಣಿ ಏನೂ ಅಲ್ಲಿರಲಿಲ್ಲ. ಇದ್ದದ್ದೆಲ್ಲ ಹೆಚ್ಚುವರಿ ಹಣ ಎಸೆದು, ಒಳ ನುಗ್ಗಿದ ಕಾರು ಬೈಕುಗಳದೇ ಹೊಗೆ, ಹಾರ್ನು, ಮೇಲಾಟ, ದಾಂಧಲೆ! ಈ ವಲಯದಲ್ಲಿ ನೂರಿನ್ನೂರು ಮೀಟರ್ ಉದ್ದಕ್ಕೆ ಸಾಗುವ ಗೋಡೆ/ಮಾರ್ಗದ ಎಡ ಮಗ್ಗುಲಿನ ಕೊಳ್ಳದಲ್ಲಿ, ಮೂಲ ಬೆಟ್ಟದ ಒಂದಷ್ಟು ಕಚ್ಚಾ ಭಾಗ ಹಾಗೇ ಉಳಿಸಿಕೊಂಡಿದ್ದಾರೆ. ಅಂದರೆ ರಾಜಸತ್ತೆಯೇ ಮುಂದುವರಿದಿದ್ದರೆ, ನಿಶ್ಚಯವಾಗಿ ಅಲ್ಲಿಗೂ ಅಭಿವೃದ್ಧಿಯ ಕಾರ್ಯಗಳು ಬರುತ್ತಿದ್ದವು. ಗೋಡೆ ಮತ್ತು ಎಡ ಹೊರಳಿ, ತೀವ್ರವಾಗಿ ಏರಿ, ವಲಯದ ಶಿಖರ ಪ್ರದೇಶವನ್ನೇ ಸೇರಿತು. ಅಲ್ಲಿನ ದೊಡ್ಡ ತಟ್ಟಿನಲ್ಲಿ, ಇಂದಿನ ಮಾಡಿನ ಅಡಿಯಲ್ಲಿ ವಿರಾಜಮಾನವಾಗಿತ್ತು, ಹಳೆಗಾಲದ ಭಾರೀ ಫಿರಂಗಿ – ಜೈವಾನ್! ಮಾರ್ಗದರ್ಶಿಯೊಬ್ಬ ಇನ್ಯಾರಿಗೋ ಜೈವಾನ್ ತೋಪ್ ಸಾಗಣೆ, ಅಲ್ಲಾ ಬಿಡಿ ಭಾಗಗಳಾಗಿ ತಂದು ಸ್ಥಳದಲ್ಲೇ ನಡೆಸಿದ ಜೋಡಣೆ, ಪ್ರಥಮ ಪ್ರಾಯೋಗಿಕ ಸ್ಫೋಟನೆಗಳ ರೋಚಕ ಕತೆಯನ್ನು ರಾಗವಾಗಿ ಬಿತ್ತರಿಸಿದ್ದ. ಅದನ್ನು ನಾನು ತುಸುವೇ ಕೇಳಿಸಿಕೊಂಡಂತೆ… ಆ ಮಹಾಯುಧದ ಮಹಾನ್ ಸದ್ದಿಗೆ ಯಾರೋ ಘನತೆವೆತ್ತವನೊಬ್ಬ ಶಾಶ್ವತ ಕಿವುಡನಾದನಂತೆ. ಅದರ ವರದಿಯನ್ನಷ್ಟೇ ಪರಾಂಬರಿಸಿದ ಮಹಾರಾಜರು, ಮಹಾಫಿರಂಗಿಯ ಬಳಕೆಯನ್ನು ಶಾಶ್ವತವಾಗಿ ನಿರ್ಬಂಧಿಸಿದರಂತೆ! ನನ್ನ ಮನಃಪಟಲದಲ್ಲಿ ಕಾಲ ಚಕ್ರ ಸ್ವಲ್ಪ ವರ್ತಮಾನಕ್ಕೆ ಹತ್ತಿರವಾದಂತೆ, ಎರಡನೇ ಜಾಗತಿಕ ಯುದ್ಧ ಕಾಲದಲ್ಲಿ, ಜಪಾನಿನ ಮೇಲೆರಗಿದ ಪರಮಾಣು ಬಾಂಬ್, ಅದರ ವಿಪರೀತಗಳನ್ನು ಪರಾಂಬರಿಸಿದ ಮಾನವಕೋಟಿ, ಅನಂತರದ ದಿನಗಳಲ್ಲಿ ಪರಮಾಣು ಅಸ್ತ್ರಕ್ಕೇ ವಿಧಿಸಿದ ನಿಷೇಧ, ಸಂವಾದಿಯಂತೇ ಕೇಳಿತ್ತು!!
‘ಜೈವಾನ್’ನಿಂದಲೂ ಆಚೆಗೂ ಹಬ್ಬಿದ ಗೋಡೆಯುದ್ದಕ್ಕೂ ಹಲವು ಮಾಮೂಲೀ (ದೊಡ್ಡವೇ) ಫಿರಂಗಿಗಳು ಸಜ್ಜಾಗಿ ನಿಂತದ್ದು ನೋಡಬಹುದು. ಆದರೆ ಅದರುದ್ದಕ್ಕೆ ಹೋಗಲು ಸಾರ್ವಜನಿಕರಿಗೆ ನಿಷೇಧ ಹಾಕಿದ್ದಾರೆ. ನಾವು ಕಾರಿನತ್ತ ಪಾದ ಬೆಳೆಸಿದೆವು
ಊಟ ಮಸ್ತ್ ಖಲಂದರ್!
ನಿನ್ನೆಯ ಹಾಗೇ ಇಂದೂ…. ಎರಡೆರಡು ಕೋಟೆ, ಅರಮನೆ, ರಾಜ ವೈಭವಗಳಲ್ಲಿ ಮುಳುಗಿದವರಿಗೆ ಸ್ವಂತದ ಹೊಟ್ಟೆ ತಾಳ ಕೇಳುವಾಗ ಅಪರಾಹ್ನ ಮೂರು ಗಂಟೆಯಾಗಿತ್ತು. ಸಾರಥಿಯಲ್ಲಿ “ಜೈ ಘರ್ ಕಾಡುದಾರಿ ಕಳೆದದ್ದೇ ಮೊದಲು ಸಿಗುವ ಹೋಟೆಲ್ ಮುಟ್ಟಿಸು ಮಾರಾಯಾ” ಎಂದೇನೋ ನಾವು ಹೇಳಿದ್ದಿರಬಹುದು. ಹಾಗೆಂದು ತನ್ನ ಕಂಪೆನಿಯ ಮತ್ತು ಘನತೆವೆತ್ತ ಅತಿಥಿಗಳ ಗೌರವಕ್ಕೆ ಕುಂದಾಗದಂತೆ ಆತ ಮುಟ್ಟಿಸಿದ್ದು ರಾಯಲ್ ರಾಜವಾಡಾ! ಹೋಟೆಲ್ಲಾದರೂ ಪ್ರವಾಸೀ ಶ್ರಾಯದ ಉತ್ತಮ ಫಸಲು ತೆಗೆಯುವ ಉತ್ಸಾಹದಲ್ಲಿ ತನ್ನದೇ ನೆಲ ಮಾಳಿಗೆ ಮಾತ್ರವಲ್ಲ ಬಗಲಿನ ಕಲ್ಯಾಣ ಮಂಟಪದಲ್ಲೂ (ಬ್ಯಾಂಕ್ವೆಟ್ ಹಾಲ್) ಮೇಜು ಕುರ್ಚಿ ಜೋಡಿಸಿಬಿಟ್ಟಿತ್ತು. ಅಂಥದ್ದರಲ್ಲೂ…
ಹೋಟೆಲ್ ಭರ್ತಿಯಾಗಿದ್ದುದಕ್ಕೆ, ಮೈಯೆಲ್ಲಾ ಸಂಕೋಚಿಸಿಕೊಂಡ ನೂಕಪ್ಪ (Usher) ಬಂದ. ಐದು ಹತ್ತು ಮಿನಿಟು ನಮ್ಮನ್ನು ಅಂಗಳದಲ್ಲೇ ಉಳಿಸಿ, “ಅಬ್ ಹೋಜಾಯೆಗಾ… ಹೋಜಾಯೇಗಾ…” ಮಂತ್ರ ಪಠಣ ಮಾಡಿದ. ಮತ್ತೆ ನಾವು ತಾಳ್ಮೆಗೆಟ್ಟು ಇನ್ನೊಂದೇ ಹೋಟೆಲ್ ಹುಡುಕಿ ಓಡಿ ಹೋಗದ ಎಚ್ಚರದಲ್ಲೋ ಏನೋ ನಮ್ಮನ್ನು ನೆಲ ಮಾಳಿಗೆಯ ಓಣಿಗೆ ಇಳಿಸಿಕೊಂಡ. ಅಲ್ಲಿ ಆ ಈ ಮೇಜು ತೋರಿಸಿ “…ಹೋ ಜಾಯೇಗಾ…” ಮಂತ್ರದ ಪುನರಪಿ ಪಠಣಂ ನಡೆಸಿದ. ಸ್ಥಳಾನುಕೂಲದ ಕೊರತೆ ಇದ್ದರೂ ಹೋಟೆಲ್ ಯಜಮಾನ, ಮೇಲಿನ ತನ್ನ ಗಲ್ಲಾದ ಒತ್ತಿನಲ್ಲೇ ಪುಟ್ಟ ಜನಪದ ಮೇಳವನ್ನೇ ಇರುಕಿಸಿಕೊಂಡಿದ್ದ. ಅದರ ಸರದಾರ ಪೆಟ್ಟಿಗೆ ಒತ್ತುತ್ತಾ, ಉಚ್ಚ ಕಂಠದಲ್ಲಿ “ಧನಾ ದನ್ ಮಸ್ತ್ ಖಲಂದರ್…” ಹಾಡುತ್ತಿದ್ದರೆ, ಬಾಲಕಲಾವಿದನ ಧೋಲಕ್ ಪೆಟ್ಟುಗಳೂ ಧನಾ ಧನಿಸಿದ್ದವು. ಹೊಟ್ಟೆಯ ತಾಳದಲ್ಲಿ ನಮಗೆಲ್ಲವೂ ನೂಕಪ್ಪನ “ಹೋ ಜಾಯೇಗಾ… ಹೋ ಜಾಯೇಗಾ ಮಂತ್ರದಂತೇ ಕೇಳಿಸಿದ್ದರೆ ಆಶ್ಚರ್ಯವೇನೂ ಇಲ್ಲ.
ಕಡೆಗೂ ನೂಕಪ್ಪನ ಗೃಧ್ರ ದೃಷ್ಟಿ ಯಾವುದೋ ಮೂಲೆಯ ಒಂದು ಮೇಜಿನ ಸದಸ್ಯರು ಏಳುತ್ತಿರುವುದು ಗುರುತಿಸಿತು. ಆತ ನಮ್ಮನ್ನು ಅಲ್ಲಿಗೇ ತಳ್ಳಿ, ಮೊದಲು ಹಿಂದಿನವರ ಉಚ್ಛಿಷ್ಟ ಸಹಿತ ಲೋಟ-ಬಟ್ಟಲುಗಳನ್ನು ಕಾಯಲು ಹಚ್ಚಿದ. ಮತ್ತೈದು ಮಿನಿಟಿನಲ್ಲಿ ಎಂಜಲೆತ್ತುವವನ ಉಸ್ತುವಾರಿಗೆ ಇಳಿಸಿದ. ಮತ್ತೈದು ಮಿನಿಟಿನಲ್ಲಿ ತಮ್ಮ ಪಾಕ ವೈಭವಗಳ ಪಟ್ಟಿಯೊಡನೆ ಬೇಡಿಕೆ ಸ್ವೀಕಾರದ ನಾಟಕವಾಡಿದ. ಮತ್ತೈದು ಮಿನಿಟಿನಲ್ಲಿ ಖಾಲಿ ತಟ್ಟೆ ಚಮಚಾಗಳನ್ನು ಕಟಕಟಾಯಿಸಿ, ಹೆಚ್ಚಿದ ನೀರುಳ್ಳಿ ಮತ್ತು ನಿಂಬೆ ಕಡಿಗಳ ಕೊಸರು ಬಟ್ಟಲನ್ನು ಒಪ್ಪಿಸಿ ಭರವಸೆಯನ್ನೇ ಕೊಟ್ಟ. ಹಾಗೂ ಹೀಗೂ ನಿಜ ತಿನಿಸುಗಳು ಬಂದು ನಾವು ಊಟ ಮುಗಿಸುವಾಗ, ಸಂಜೆಯ ಅಂದರೆ ನಿಜ ಚಾಪಾನದ ವೇಳೆಯೇ ಮೀರಿತ್ತು! ಮಾಂಸ ಹಳಸಿತ್ತು, ನಾಯಿ ಹಸಿದಿತ್ತು ಗಾದೆಯಂತಾಗದೇ ರಾಜವಾಡಾದ ಊಟ ಚೆನ್ನಾಗಿಯೇ ಇತ್ತು.
ಹಾಥೀ ಗಾಂವ್ ಅರ್ಥಾತ್ ಆನೆ ಹಳ್ಳಿ
ಮೂರೂವರೆ ದಶಕಗಳ ಹಿಂದೆ ನಾವು ಜೈಪುರಕ್ಕೆ ಬಂದಿದ್ದಾಗ, ಮರುಭೂಮಿಯ ಉರಿ ಬಿಸಿಲಿನಲ್ಲಿ, ಡಾಮರ್ ಕರಗಿದ ಜೈಪುರದ ಬೀದಿಯಲ್ಲಿ, ಮೋಟಾರ್ ವಾಹನಗಳೆಬ್ಬಿಸುತ್ತಿದ್ದ ಹೊಗೆ ದೂಳಿನಲೆಯಲ್ಲಿ ಮೋಜಿನ ಸವಾರಿ ಬಯಸಿದವರನ್ನು ಹೊತ್ತ ಆನೆಗಳು ನಡೆಯುವುದನ್ನು ಕಂಡು ನಾವು ಬೆಂಕಿಯಾಗಿದ್ದೆವು. ಹಾಗಾಗಿ ಕೆಲವೇ ವಾರಗಳ ಹಿಂದೆ ಪ್ರಜಾವಾಣಿಯಲ್ಲಿ, ಅಂಥಾ ಎಲ್ಲಾ ಸಾಕಾನೆಗಳಿಗೂ ಜೈಪುರದ ಹೊರವಲಯದಲ್ಲೇ ಕೇವಲ ಪ್ರಾಣಿ ಪ್ರೀತಿಯ ಮರುವಸತಿ ಕೊಟ್ಟ ಲೇಖನ ನೋಡಿದಾಗ ಮನಸಾ ಮೆಚ್ಚಿದ್ದೆ. ಮತ್ತೆ ಈ ಪ್ರವಾಸದ ಹೊಳಹು ಮೂಡಿದ ಮೇಲಂತೂ ಅದನ್ನು ಒಮ್ಮೆಯಾದರೂ ಕಣ್ತುಂಬಿಕೊಳ್ಳ ಬೇಕೆಂದೇ ಬಯಸಿದ್ದೆ. ಊಟ ಮುಗಿದದ್ದೇ ನಮ್ಮ ಘೋಷ “ಚಲೋ ಹಾಥೀ ಗಾಂವ್”.
ಜೈಪುರದ ವಿಸ್ತರಣೆಯಂತೇ ಇರುವ ಹಾಥೀ ಗಾಂವ್ ಅಥವಾ ಆನೆ ಹಳ್ಳಿ, ಪ್ರಾಣಿದಯೆ ಇರುವವರೆಲ್ಲ ಅವಶ್ಯ ನೋಡಬೇಕಾದ್ದೇ ಸಂಗತಿ. ಅಲ್ಲಿ ಪ್ರವೇಶಧನ ಕೊಟ್ಟು, ಒಳಗೆ ಅಧಿಕಾರಿಯೊಬ್ಬರಿಂದ ಇತರ ಸೇವಾ ವಿವರಗಳನ್ನೂ ಪಡೆದೆವು. ಅಧಿಕಾರಿಯ ಮಾತಿನಂತೆ, ಮೂವತ್ತು ಹೆಕ್ಟೇರ್ ವಿಸ್ತೀರ್ಣದ ವಠಾರದೊಳಗೆ, ಸುಮಾರು ೧೨೦ ಆನೆಗಳಿದ್ದವು. (ಮುಂದೆ ಮಾವುತನೊಬ್ಬ ೯೨ ಅಂದ, ಇಲಾಖೆಯದೇ ಅಂತರ್ಜಾಲ ೭೦ನ್ನಷ್ಟೇ ತೋರಿಸುತ್ತದೆ, ಬಿಡಿ). ಅವುಗಳಲ್ಲಿ ಹೆಚ್ಚಿನವು ಮುದಿ ಮತ್ತು ಅವಹೇಳನದ ದುಡಿಮೆಯಲ್ಲಿ ಬಳಲಿದ ವಿಕಲಾಂಗಿಗಳು. ಅವಕ್ಕೆಲ್ಲ ಬದುಕಿರುವಷ್ಟು ಕಾಲ ಖಾಯಂ ನೆಲೆಯೊಡನೆ ಮೇವು, ನೀರು, ಶುಶ್ರೂಷೆ ಮತ್ತು ಯುಕ್ತ ವ್ಯಾಯಾಮ ಕೊಡುವ ವ್ಯವಸ್ಥೆ ಅಲ್ಲಿತ್ತು. ಅವಕ್ಕೆ ಪೂರಕವಾಗಿ ನಿಯಂತ್ರಿತ ಕಾಡು, ಕೆರೆ, ಮಾವುತರ ವಸತಿ ಸೌಕರ್ಯಗಳೆಲ್ಲವೂ ವಠಾರದೊಳಗೇ ಸಜ್ಜುಗೊಳಿಸಿದ್ದರು.
ಆನೆ ಹಳ್ಳಿಯ ದರ್ಶನಾರ್ಥಿಗಳು ಕೊಡುವ ಪ್ರವೇಶಧನ, ಹೆಚ್ಚಿನ ಉತ್ಸಾಹಿಗಳು ಪಡೆಯುವ ಆನೆ ಸವಾರಿ (ಆನೆಗಳ ವ್ಯಾಯಾಮದ ಅಂಶವಾಗಿ ವಠಾರದೊಳಗೆ ಮಾತ್ರ), ಆನೆ ಸ್ನಾನ, ಆನೆ ಮೇವು, ಆನೆ ಅಲಂಕಾರವೇ ಮುಂತಾದ ಸೇವಾ ಶುಲ್ಕಗಳು ಈ ಸರಕಾರೀ ವ್ಯವಸ್ಥೆಗೆ ಪೂರಕ ಆದಾಯಗಳು. ನಾವು ಕೇವಲ ಪ್ರೇಕ್ಷಕರಾಗುಳಿದು, ವನ್ಯದ ಒಂದಂಶದ ದಾರಿಯಲ್ಲಿ ನಡೆದೆವು. ಎಲ್ಲೆಂದರಲ್ಲಿ ಸವಾರಿ ಪ್ರಿಯರನ್ನು ಹೊತ್ತು ಓಡಾಡುತ್ತಿದ್ದ ಆನೆಗಳೊಡನೇ ಕೆರೆ, ಹಾಳು ಬಿದ್ದ ಮಾವುತ ಮಕ್ಕಳ ಶಾಲೆಯನ್ನೂ (:-( ) ನೋಡಿ ಮರಳಿದೆವು.
ಮುದುಮಲೈ ವನಧಾಮದ ಭಾಗವಾದ ತೆಪ್ಪಕಾಡು, ಕುಶಾಲ ನಗರದ ಸಮೀಪದ ದುಬಾರೆ ಮತ್ತು ಶಿವಮೊಗ್ಗದ ಸಮೀಪದ ಗಾಜನೂರುಗಳಲ್ಲಿನ ಆನೆ ಶಿಬಿರಗಳನ್ನು ನೋಡಿದ ನನ್ನ ನೆನಪುಗಳಿಗೆ ಜೈಪುರದ ಹಾಥೀ ಗಾಂವ್ ಭಿನ್ನ ಮತ್ತು ಚೇತೋಹಾರಿ ಕಾಯಕಲ್ಪವನ್ನೇ ಒದಗಿಸಿತು.
ಜೈಪುರದ ಕೊನೆಯ ಇರುಳಿನ ಕತೆ…
ಅಮೇರ್ ಗೆ ಹೋದಾಗ, ಊಟಕ್ಕೆ ಮರಳಿದಾಗ, ನಹಾರ್ ಘಡ್ ಗೆ ಹೋಗುವಾಗ, ಜೈ ಘಡ್ ನಿಂದ ಮರಳುವಾಗ, ಹಾಥೀ ಗಾಂವ್ ಗೆ ಹೋಗುವಾಗಲೆಲ್ಲಾ ಅನಿವಾರ್ಯ ಮಾರ್ಗದ ಬದಿಯ ದೃಶ್ಯವಾಗಿ ಕಾಡಿದ್ದ ಜಲಮಹಲ್ಲನ್ನು ಈಗ, ಅಂದರೆ ಆನೆ ಹಳ್ಳಿಯಿಂದ ಮರಳುವಾಗ “ಒಮ್ಮೆಯಾದರೂ…” ಎನ್ನುವಂತೆ ಕಾರಿಳಿದು ನೋಡಿದೆವು.
ಸುವಿಸ್ತಾರ ಸರೋವರಕ್ಕೆ ಪ್ರಾಥಮಿಕವಾಗಿ ದಂಡೆಯ ಉದ್ದಕ್ಕೆ ದೃಶ್ಯಕ್ಕಡ್ಡಿಯಾಗದಂತೆ, ದೃಢ ಬೇಲಿ ಸಹಿತ ವಿಸ್ತಾರದ, ಚೊಕ್ಕ ನಡೆ ಹಾಸು ಮಾಡಿದ್ದಾರೆ. ಮತ್ತೆ ಅಕ್ರಮ ಪ್ರವೇಶಪಡೆಯಲೆಳಸುವ ವಾಹನಗಳಿಗೆ ತಡೆಯಾಗುವಷ್ಟೇ ಎತ್ತರದ ಪೌಳಿ ಕಟ್ಟಿ, ಜನಪ್ರವೇಶಕ್ಕಷ್ಟೇ ಒದಗುವಂತೆ ಅಲ್ಲಲ್ಲಿ ಇಮ್ಮೂಲೆಯ ಕಂಡಿ ಬಿಟ್ಟಿದ್ದಾರೆ. ಅನಂತರವೇ ಏನಿದ್ದರೂ ನಿಜದ ಪುಟ್ಟಪಥ, ವಾಹನ ತಂಗು ಅಂಕಣ ಮತ್ತು ಅಜ್ಮೀರಿನತ್ತ ಹರಿದಿರುವ ಚತುಷ್ಪಥ. ನಾವು ಕಂಡಂತೆ ನಗರ ಕಶ್ಮಲಗಳಿಂದ ದೂರವುಳಿದ ಸರೋವರದ ನೀರು ಸಾಕಷ್ಟು ಶುದ್ಧವಾಗಿಯೇ ಕಾಣುತ್ತಿತ್ತು. ಸಹಜವಾಗಿ ನೀರ ಹಕ್ಕಿಗಳಾಟ ನೋಡುವಂತಿತ್ತು. ಸರಸಿನ ನಡುವೆ ಸುದೂರಕ್ಕೆ ಮನೋಹರವಾಗಿ ಕಾಣುತ್ತಿದ್ದ ಅರಸರ ಕಾಲದ (ಜಲ-) ಮಹಲು, ಯಾರನ್ನೂ ಆಕರ್ಷಿಸುವಂತೆಯೇ ಇದೆ. ಕೊರೋನಾ ಪೂರ್ವ ಯುಗದಲ್ಲಿ, ಇಲ್ಲಿ ಪ್ರವಾಸಿಗಳಿಗೆ ನೌಕಾಯಾನ ಸೌಕರ್ಯವಿರುತ್ತಿತ್ತಂತೆ. ಆಗಲೂ ಮಹಲ್ಲಿಗೆ ಸಾರ್ವಜನಿಕ ಪ್ರವೇಶ ಇರಲಿಲ್ಲವಾದರೂ ದೋಣಿಗಳಲ್ಲಿ ಪ್ರದಕ್ಷಿಣೆ ಬರುವ ಸಂತೋಷ ಇತ್ತಂತೆ. ಕೊರೋನಾ ನಿರ್ಬಂಧ, ಹಿಂಬಾಲಿಸಿದಂತೆ ಬಂದ ಅತಿವೃಷ್ಟಿ ಜಲಮಹಲ್ಲಿನ ಅಂಗಳ ಸೇರಿದಂತೆ ಅರ್ಧ ನೆಲಮಾಳಿಗೆಯನ್ನೇ ಜಲಾಧಿವಾಸಕ್ಕಿಳಿಸಿದೆ. ಹಾಗಾಗಿ ಇಂದು ದೋಣಿಯಾನವೂ ರದ್ದಾಗಿದೆ. ನಾವು ದಂಡೆಯ ಉದ್ದಕ್ಕೆ ಐದು ಮಿನಿಟು ಕಾಲಾಡಿಸಿ, ಕತ್ತಲಾವಾರಿಸುತ್ತಿದ್ದುದರಿಂದ ಮತ್ತೆ ಕಾರೇರಿದೆವು. ಚಾಲಕನಲ್ಲಿ “ಇನ್ನೂ ಸುಮಾರು ಒಂದೆರಡು ಗಂಟೆ ನೋಡುವುದೇನಾದರೂ…” ಎಂದು ರಾಗ ತೆಗೆದೆವು.
ಶಾಲಾ ದಿನಗಳಿಂದಲೂ ‘ಪ್ರವಾಸ ಎಂದರೆ ತೀರ್ಥಯಾತ್ರೆ’ ಎಂದೇ ರೂಢಿಸಿದ ಬಾರತೀಯ ಮನಸ್ಸಿಗೆ ಸಹಜವಾಗಿ, ಚಾಲಕ ನಮ್ಮನ್ನು ಬಹಾಯಿ ಮಂದಿರದಲ್ಲಿಳಿಸಿದ. ಏರುತ್ತಿದ್ದ ಚಳಿಯಲ್ಲಿ ಪಾದರಕ್ಷೆ ಕಳಚಿ ಮಂದಿರದ ಥಣ್ಣನೆ ಅಮೃತಶಿಲಾ ಹಾಸಿನ ನೆಲಕ್ಕಿಳಿಯಲು ಮನಸ್ಸಿಲ್ಲದೇ ಮನಸ್ಸು ಮಾಡಿದೆವು. ಒಳಗೆ ದೂರ ದೂರದಲ್ಲಿ ಕುಳಿತು (ಏನನ್ನು?) ಧ್ಯಾನಿಸುತ್ತಿದ್ದ ಕೆಲವೇ ಮಂದಿಗೆ ತೊಂದರೆಯಾಗದಂತೆ ನಾವು ಸುಯ್ಯೆಂದು ಸುಳಿದ ಶಾಸ್ತ್ರ ಮಾಡಿ, ಪಾದರಕ್ಷೆ ತೊಡಲು ಹೊರ ಧಾವಿಸಿದ್ದೆವು. ಬೆಚ್ಚನೆ ಕಾಲ್ಚೀಲ ಧರಿಸಿ ಪಾದ ರಕ್ಷೆ ಏರಿಸುವಾಗ, ಮಂದಿರಕ್ಕೆ ಹಿನ್ನೆಲೆಯ ಭಿತ್ತಿಯಂತೇ ನಿಂತಿದ್ದ ಅಮೇರ್ ಕೋಟೆ ದೀಪಾಲಂಕಾರಗಳಲ್ಲಿ ಝಗಮಗಿಸಿ ನಮ್ಮ ಮನಸ್ಸನ್ನೂ ಬೆಚ್ಚಗಾಗಿಸಿತು. ಮಂದಿರದ ಆವರಣದಿಂದಾಚಿನ ಸಂತೆಯಲ್ಲೊಂದು ಚುಡು ಚುಡು ಚಾ ಹಾಕಿದೆವು. ಇನ್ನೂ ಹೆಚ್ಚಿನ ಬಿಸುಪನ್ನು ಸಾನುಕಂಪದಲ್ಲಿ (ಹೋಟೆಲ್) ಅನುಕಂಪವೇ ಒದಗಿಸಿತು; ವಾಸ್ತವ್ಯಕ್ಕೆ ಮರಳಿದೆವು.
ನಾನು ಹಿಂದಿನದಂತೇ ಸ್ನಾನ ಶೌಚಾದಿಗಳನ್ನು ಚುರುಕಾಗಿಯೇ ಮುಗಿಸಿ, ಹಿಂದಿನದಂತೇ ಮಧ್ಯಾಹ್ನದೂಟ ಹೆಬ್ಬಾವಿನ ತುತ್ತಿನಂತಿದ್ದುದಕ್ಕೆ, ಹಿಂದಿನದಂತೇ ನೀರಾಹಾರಿಯಾಗಿ ಹಾಸುಗೆ ಹೊದ್ದಿಕೆಗಳ ಆಳದಲ್ಲಿ ಹುಗಿದುಕೊಂಡೆ. ಉಳಿದವರಾದರೂ ಹಿಂದಿನದಂತೇ ಸ್ನಾನ ಶೌಚಾದಿಗಳ ಬೆನ್ನಿಗೆ ಹಿಂದಿನದಂತೇ ಊಟವನ್ನು ಕೋಣೆಗೇ ಬರಮಾಡಿಸಿಕೊಂಡು, ಜೈಪುರದ ಕೊನೆಯ ಇರುಳಿನ ರಮ್ಯ ಕನಸು ಕಟ್ಟಿಕೊಳ್ಳುವ ಅವಸರದಲ್ಲೇ ಮಲಗಿದರು.
(ಮುಂದುವರಿಯಲಿದೆ)





















































You seem to have revived your online chat outside FB. All the best