(ನೀನಾಸಂ ಕಸಂಮಾ -೨೦೨೫ ಭಾಗ ಎರಡು)
ನೀನಾಸಂ ತನ್ನ ವಠಾರದಲ್ಲಿ ಹಿಂದಿನಿಂದಲೂ ‘ಅಭಿವೃದ್ಧಿಗೆ’ ಕನಿಷ್ಠ ಸೌಕರ್ಯ ಹೆಚ್ಚಳದ ಕಡಿವಾಣ ಹಾಕುತ್ತಲೇ ಬಂದಿದೆ. ಆ ನಿಟ್ಟಿನಲ್ಲಿ ಈ ಬಾರಿಯ ಮುಖ್ಯ ಬದಲಾವಣೆ – ಶಿಬಿರದ ಬಹುತೇಕ ಕಲಾಪಗಳಿಗೆಲ್ಲ ಒಡ್ಡಿಕೊಳ್ಳುತ್ತಿದ್ದ ಆಪ್ತರಂಗಭೂಮಿ. ಅಲ್ಲಿ ನೂರಿನ್ನೂರು ಮಂದಿಯ ಕಲಾಪ ಎಂದರೇ ಸೆಕೆ. ಅದರಲ್ಲೂ ಹಲವು ಬಾರಿ ಅನಿವಾರ್ಯವಾಗಿ ಮುಚ್ಚಿದ ಕಿಟಕಿಯೊಡನೆ ಕಲಾಪಗಳಿದ್ದಾಗಂತೂ ಇದ್ದ ಒಂದೆರಡು ಬಡ ಫ್ಯಾನುಗಳು ಸೋತು ನಿಟ್ಟುಸಿರು ಬಿಟ್ಟಂತೇ ಭಾಸವಾಗುತ್ತಿತ್ತು. ಆದರೆ ಈ ಬಾರಿ….
ಜಗನ್ನಾಥ ಸಭಾಂಗಣವೆಂಬ ಪರಮಾಪ್ತ ರಂಗ: ಆಪ್ತರಂಗಭೂಮಿಯ ಮೂಲ ವಿನ್ಯಾಸವನ್ನು ಬದಲಿಸದೇ ಸಂದುಗಳ ಬಂದೋಬಸ್ತು ಮಾಡಿ, ನಾಲ್ಕು ಹವಾನಿಯಂತ್ರಕಗಳನ್ನು ಅಳವಡಿಸಿದ್ದರು. ಧ್ವನಿ ಬೆಳಕುಗಳ ನಿಯಂತ್ರಣ ಕೊಠಡಿ, ಶೌಚ ವ್ಯವಸ್ಥೆಯ ಸಾಮರ್ಥ್ಯಗಳನ್ನು ಹೆಚ್ಚಿಸಿದ್ದಾರೆ. ಕಲಾಪಗಳ ಮಧ್ಯಂತರಗಳಲ್ಲಿ ಹೊರಗೆ ಕಾಲಿಟ್ಟರೆ ಮಳೆಯೋ ಬಿಸಿಲೋ ಕಾಡುತ್ತಿದ್ದಕ್ಕೂ ಚೊಕ್ಕ ಮರೆ ಕಟ್ಟಿದ್ದಾರೆ. ಇವೆಲ್ಲಕ್ಕೆ ಉದಾರ ದಾನಿಯನ್ನು (ಮಂಗಳೂರು ಗಣೇಶ ಬೀಡಿಗಳು) ಗುರುತಿಸಿ, ಪ್ರೇರಿಸಿ, ಕೊನೆಮುಟ್ಟಿಸಿದವರು ಜಯರಾಮ ಪಾಟೀಲ್! ದಾನ ಕೊಟ್ಟ ಸಂಸ್ಥೆಯ (ಮಂಗಳೂರು ಗಣೇಶ ಬೀಡಿ, ಮೈಸೂರು) ಪರವಾಗಿ ‘ಜಗನ್ನಾಥ (ಶೆಣೈ) ಸಭಾಂಗಣ’ ಎಂದೇ ನಾಮಕರಣಗೊಂಡ ಆಪ್ತ ರಂಗಭೂಮಿ ಈ ಬಾರಿಯ ಶಿಬಿರಕ್ಕೆ ಪರಮಾಪ್ತವಾಗಿಯೇ ಒದಗಿತು.
ಶಿಬಿರದ ಮೊದಲ ಕಲಾಪವೇ ಜಗನ್ನಾಥ ಸಭಾಂಗಣದ ಲೋಕಾರ್ಪಣ.
ಅಲ್ಲಿ ಹೊಸ ರೂಪ ಪಡೆದ ಮುಖ್ಯ ಗೋಡೆಗಳನ್ನು ನೀನಾಸಂ ರಂಗಶಿಕ್ಷಣ ಸಂಸ್ಥೆಯ ಅಧ್ಯಾಪಕರೂ ಆಗಿರುವ ಮಂಜು ಕೊಡಗು ಅವರು ಕೈಯಾರೆ ಹದ ಬರಿಸಿದ ಆವೆ ಮಣ್ಣಿನಲ್ಲಿ ಮೂಡಿಸಿದ ಉಬ್ಬುಚಿತ್ರ ಹಾಗೂ ರೇಖಾ ಚಿತ್ರಗಳು ಹಿತಮಿತವಾಗಿ ಆವರಿಸಿದ್ದವು. ಮಂದಿರದ ಎದುರಿನ ಮೋಟುಗೋಡೆಯ ಮೇಲೆ ಮೂಡಿಸಿದ್ದ ನಾಮಫಲಕದ ಎದುರು ರಂಗೋಲಿ ಹರಿವಾಣ ಇಟ್ಟು, ಸರಳ ಅಲಂಕಾರಗಳ ಮುನ್ನೆಲೆ ಮೂಡಿಸಿದ್ದರು. ಶಿಬಿರದ ಆಶಯ ಭಾಷಣಕ್ಕೆಂದೇ ಬಂದಿದ್ದ ಹರೀಶ ತ್ರಿವೇದಿಯವರು ಯಾವ ಠಕ್ಕುಗಳೂ ಇಲ್ಲದೇ (ಚಪ್ಪಾಳೆ ಜಂಗುಳಿ, ನಿರ್ವಾಹಕ, ಮಾಲೆ ಸ್ಮರಣಿಕೆಗಳ ಅರ್ಪಣೆ, ಸ್ವಾಗತ, ಅಧ್ಯಕ್ಷ, ಅತಿಥಿ, ಉಪಸ್ಥಿತಿ, ಪರಿಚಯ….ಇಲ್ಲ, ಇಲ್ಲ) ಅಲ್ಲೊಂದು ದೀಪ ಬೆಳಗಿ, ಒಳ ಬಂದು ನಿಂತದ್ದೇ ಆಶಯ ಭಾಷಣಕ್ಕೆ….
ಆಶಯ – ಅನುವಾದ ಮತ್ತು ರೂಪಾಂತರ :
ದಿಲ್ಲಿ ವಿವಿ ನಿಲಯದ ನಿವೃತ್ತ ಇಂಗ್ಲಿಷ್ ಪ್ರಾಧ್ಯಾಪಕ ಹರೀಶ್ ತ್ರಿವೇದಿ, “ಶೇಕ್ಸ್ಪಿಯರ್ ನಾಟಕಗಳಲ್ಲಿ ಒಂದೂ ಸ್ವಂತ ಕತೆಯಿಲ್ಲ….” ಎಂದೇ ತೊಡಗಿದ್ದರು. “ಅವನದೇನಿದ್ದರೂ ಅನುವಾದ ಮತ್ತು ರೂಪಾಂತರ…” ಎನ್ನುವುದರೊಡನೆ ಬಹು ವಿವರಗಳಲ್ಲಿ, ಸ್ವಾರಸ್ಯಕರ ವಿಶ್ಲೇಷಣೆ ನಡೆಸಿದರು.
ಈ ಸಾಧಾರಣೀಕರಣದ ಹಿನ್ನೆಲೆಯಲ್ಲಿ ಅವರದೇ ವಸಾಹತುಶಾಹಿಯ ಕುರಿತ ವಿಸ್ತೃತ ಅಧ್ಯಯನವಿತ್ತು. ಮತ್ತು ಅವರ ಹೆಂಡತಿಯ (ಕ್ಷಮಿಸಿ, ಅವರ ಹೆಸರು ನನಗೇನು, ಮೆಟಾ ಯಾಂಬುಗೂ ತಿಳಿದಿಲ್ಲ) ಶೇಕ್ಷ್ಪಿಯರ್ ಕೃತಿಗಳ ಅನುವಾದ ಮತ್ತು ರೂಪಾಂತರಗಳ ಕುರಿತೇ ನಡೆಸಿದ್ದ ವಿಶೇಷ ಅಧ್ಯಯನದ ಬಲವೂ ಇತ್ತು. ಯಾವುದೇ ಮಹಾಕಾವ್ಯ, ಉದಾಹರಣೆಗೆ ಮಹಾಭಾರತ ರಾಮಾಯಣಾದಿಗಳನ್ನೇ ಶುದ್ಧ ವ್ಯಾಸಕೃತ (ಸೂಕ್ತಂಕರ್?), ಶುದ್ಧ ವಾಲ್ಮೀಕಿಕೃತ (ಪುಣೆ ಇನ್ಸ್ಟಿಟ್ಯೂಟ್?) ಎಂದು ತಿಣುಕಾಡಿದರೆ ಸುಸಂಗತ ರೂಪಾಂತರವೊಂದನ್ನು ಕಾಣಬಹುದೇ ಹೊರತು ನಿಜ ಮೂಲ ಅಲ್ಲ ಎಂಬ ತಿಳುವಳಿಕೆ ಇತ್ತು. ೧೮ನೇ ಶತಮಾನದಲ್ಲಿ ಆರ್ಥಿಕ ಕಾರಣಗಳಿಗಾಗಿ ಹುಟ್ಟಿಕೊಂಡ ಬ್ರಿಟಿಷ್ ಕೃತಿಸ್ವಾಮ್ಯ ಕಾನೂನು, ಹುಟ್ಟಿಸಿದ ಭ್ರಮೆಯಷ್ಟೇ ‘ನಿಜ ಮೂಲ’, ಎಂದು ತ್ರಿವೇದಿ ಮನಗಾಣಿಸಿದರು. ಒಂದು ಕಾಲಘಟ್ಟದಲ್ಲಿ ಮತ್ತು ಒಂದು ಭಾಷೆಯಲ್ಲಿ ‘ಸೃಜನಶೀಲ’ ಎಂದೆನ್ನಿಸಿಕೊಂಡವರಿಗೆ ದಕ್ಕಿದ ಸತ್ಯವನ್ನು, ಇನ್ನೊಂದೇ ಕಾಲ ಹಾಗೂ ಭಾಷಾ ಹದಕ್ಕೆ ಎಷ್ಟು ಪ್ರಾಮಾಣಿಕವಾಗಿ ‘ಅನುವಾದ’ ಮಾಡಿದರೂ ಅದು ವಾಸ್ತವದಲ್ಲಿ ‘ರೂಪಾಂತರ’ವೇ ಆಗಿರುತ್ತದೆ. ಈ ಮಾತಿಗೆ ಪೂರಕವೆನ್ನುವಂತೆ…
ಗಮಕ: ಕುಮಾರವ್ಯಾಸ ಭಾರತದ ದ್ರೌಪದೀ ಸ್ವಯಂವರದ ಕೆಲವು ಪದ್ಯಗಳ ಗಮಕ ಪ್ರಸ್ತುತಿ ನಡೆಯಿತು. ಗದುಗಿನ ನಾರಣಪ್ಪ, ಕುಮಾರವ್ಯಾಸನೆಂಬ ತನ್ನ ಕಾವ್ಯನಾಮದಲ್ಲೂ ಭಾರತ ಕಥಾಮಂಜರಿ ಅಥವಾ ಕೃಷ್ಣ ಕತೆ ಎಂಬ ಆಶಯದಲ್ಲೂ ಸ್ಪಷ್ಟವಾಗಿ ರೂಪಾಂತರವನ್ನೇ ಘೋಷಿಸಿಕೊಂಡಿದ್ದಾನೆ.
ಗಮಕಿ ನಿರ್ಮಲರ ಪ್ರಸ್ತುತಿ ಮತ್ತು ಅದರ ಕುರಿತು (ಅವರ ಗಂಡ) ಪ್ರಸನ್ನರ ವ್ಯಾಖ್ಯಾನಗಳು ಸಾಮಾನ್ಯವಾಗಿದ್ದವು. ಇದಕ್ಕೆ ಎರಡು ಸಣ್ಣ ಸ್ಪಷ್ಟೀಕರಣಗಳು: ಗಮಕ ವಾಚನದಲ್ಲಿ ರಾಗ ವಿಸ್ತರಣೆಗೆ ಸಿಕ್ಕಿದ ಒತ್ತು, ಅರ್ಥಸ್ಫುಟತೆಗೆ ದಕ್ಕಲಿಲ್ಲ. ವ್ಯಾಖ್ಯಾನದ ಒಂದು ಎಳೆಯನ್ನಷ್ಟೇ ಹಿಸಿಯುತ್ತೇನೆ – ‘ದರ್ಬೆಯ ಗೂಡು’ ಎನ್ನುವುದನ್ನು ಪ್ರಸನ್ನರು ‘ಯಜ್ಞ ಕಾರ್ಯಕ್ಕೆ ಒದಗುವ ಗರಿಕೆ, ಸಮಿತ್ತಿನಂತ ಸಾಹಿತ್ಯ’ ಎಂದಷ್ಟೇ ಹೇಳಿದರು. ಆದರೆ ನನ್ನ ಸೀಮಿತ ತಿಳಿವಳಿಕೆಯಲ್ಲಿ, ಅದು ಬ್ರಾಹ್ಮಣ ಪುರುಷನ ‘ವಿವಾಹ ಪ್ರಶಸ್ತಿ’. ಹೆಚ್ಚಾಗಿ ವಾಟೆ ಅಥವಾ ಬಿದಿರಿನ ಗಜ ಉದ್ದದ ಗೂಡಿನಲ್ಲಿ, ದಂಪತಿಯ ವಿವಾಹವಿಧಿಯ ಅಂಗವಾಗಿ ನಡೆಯುವ ಹೋಮದ ಸುತ್ತು ಇರಿಸಿದ ದರ್ಬೆಗಳಿರುತ್ತವೆ. ನಮ್ಮಲ್ಲಿ ಅದಕ್ಕೆ ‘ಔಪಾಸನ’ ಎಂದೇ ಹೆಸರಿದೆ. ಇದು ವ್ಯಕ್ತಿಯ ಮರಣ ಪರ್ಯಂತ ಎಲ್ಲ ಪರ್ವಕಾಲಗಳಲ್ಲೂ ಪ್ರಸ್ತುತಪಡಿಸಲೇಬೇಕಾದ ಪವಿತ್ರ ದಾಖಲೆ. ಪುರುಷನ ಶವದಹನ ಕಾಲದಲ್ಲಿ ಔಪಾಸನ ಚಿತೆಗೇರುವುದು ಶಾಸ್ತ್ರವೇ ಆಗಿದೆ. (ಮಹಿಳೆಗೂ ಈ ಗೌರವದಲ್ಲಿ ಪಾಲಿದೆಯೇ – ನನಗೆ ತಿಳಿದಿಲ್ಲ)
ಎಂದಿನಂತೆ ಶಿಬಿರದ ಮೊದಲಲ್ಲೇ ಸಂಘಟಕರು ಐದೂ ದಿನಗಳಿಗೆ ಒದಗುವಂತೆ ಆಯ್ದ ಪದ್ಯ, ಕತೆ, ಸಾಹಿತ್ಯಗಳ ಪುಟಗಳ ಛಾಯಾ ಪ್ರತಿಗಳನ್ನು, (ಹಲವು ಇಡೀ ಪುಸ್ತಕಗಳನ್ನು) ಇಂಗ್ಲಿಷ್ ಅನುವಾದದ ಸಹಿತ ಶಿಬಿರಾರ್ಥಿಗಳಿಗೆ ಒದಗಿಸಿದ್ದರು. ಗಮಕಿಗಳು ಆ ಪಠ್ಯವನ್ನು ಅನುಸರಿಸಿದರೂ ಪಠ್ಯಕ್ಕೆ ಪೂರ್ಣ ನಿಷ್ಠರಾಗಿರಲಿಲ್ಲ. ಹಾಗೆಂದು ವ್ಯಾಖ್ಯಾನದಲ್ಲಿ, ಒಂದು ಪದ್ಯದ್ದಾದರೂ ಪೂರ್ಣ ವಸ್ತುನಿಷ್ಠ ವಿಶ್ಲೇಷಣೆಯನ್ನೂ ಕೊಡಲಿಲ್ಲ.
ಅನುವಾದ ಕುರಿತ ಜಿಜ್ಞಾಸೆ: ತ್ರಿವೇದಿಯವರು ಕೊಟ್ಟ ಬೆಳಕಿನಲ್ಲಿ, ರೂಪಾಂತರಿತ ಕುಮಾರವ್ಯಾಸ ಭಾರತ ಮತ್ತದರ ಇಂಗ್ಲಿಷ್ ಭಾಷಾಂತರದ ತುಲನಾತ್ಮಕ ನೋಟವನ್ನು ಇನ್ನೊಂದೇ ಅವಧಿಯ ಕಲಾಪ ನಮಗೆ ಒದಗಿಸಿತು. ಇಲ್ಲಿ ‘ಅನುವಾದ’ಕ್ಕೆ ಪದ್ಯಗಳನ್ನು ಆಯ್ದುಕೊಳ್ಳುವಲ್ಲಿ ಸಹಕರಿಸಿದ ವಿದ್ವಾಂಸ – ಕೃಷ್ಣಮೂರ್ತಿ ಹನೂರರು (ಮೈವಿವಿ ನಿಲಯದ ವಿಶ್ರಾಂತ ಕನ್ನಡ ಪ್ರಾಧ್ಯಾಪಕ), ವಿಶ್ಲೇಷಣೆ ನಡೆಸಿದರು.
ಕುಮಾರವ್ಯಾಸನ ಅನನ್ಯತೆಯನ್ನು ಸ್ಪಷ್ಟಪಡಿಸುವ, ಹಲವು ಉದಾಹರಣೆ ಮತ್ತು ವಿವರಣೆಗಳೊಡನೆ ಸುಂದರವಾಗಿಯೂ ಸುದೀರ್ಘವಾಗಿಯೂ ವ್ಯಾಖ್ಯಾನಿಸಿದರು. ಅದಕ್ಕೆ ಯಾವ ಇನ್ನೊಂದು ರೂಪದಲ್ಲೂ (ಅನುವಾದ) ಪೂರ್ಣ ನ್ಯಾಯ ಸಿಗುವುದು ಅಸಾಧ್ಯ ಎಂದೇ ಮುಗಿಸಿದರು. ನಿಜದಲ್ಲಿ ಗಮಕಕ್ಕೂ ಹನೂರರೇ ವ್ಯಾಖ್ಯಾನ ನಡೆಸಬಾರದಿತ್ತೇ ಎಂದು ನನಗೇನು, ಬಹುಮಂದಿಗೂ ಅನ್ನಿಸಿರಬೇಕು.
ಕುಮಾರವ್ಯಾಸ ಭಾರತದ್ದೇ ಇಂಗ್ಲಿಷ್ ಅನುವಾದವನ್ನು ಚರ್ಚೆಗೆ ಎತ್ತಿಕೊಂಡವರು ರಾಜೇಂದ್ರ ಚೆನ್ನಿ, ಕುವೆಂಪು ವಿವಿ ನಿಲಯದ ಇಂಗ್ಲಿಷ್ ಪ್ರಾಧ್ಯಾಪಕ ಮತ್ತು ಕನ್ನಡದಲ್ಲೂ ಹೆಸರಾಂತ ವಿದ್ವಾಂಸ. ಇವರು ಹನೂರರ ಮಾತುಗಳನ್ನು ಪೂರ್ಣ ಅನುಮೋದಿಸುತ್ತಲೇ ಇಂಗ್ಲಿಷ್ ಭಾಷಾನುವಾದದ ಅನಿವಾರ್ಯತೆಯನ್ನು ಮನಗಾಣಿಸಿದರು.
ಶ್ರಯುನಾ, ಅಭಿಷೇಕ್ : ‘ಕ್ರಿಯಾಶೀಲ ಬರವಣಿಗೆಯಲ್ಲಿ ಸಂಶೋಧನೆ’ ಎಂಬ ವಿಷಯದ ಮೇಲೆ ಇಬ್ಬರು ಪ್ರತಿಭಾವಂತರು ತಮ್ಮ ಈಚಿನ ಪ್ರಕಟಿತ (ಇಂಗ್ಲಿಷ್) ಕೃತಿಗಳ ಆಧಾರದಲ್ಲಿ ವಿಚಾರ ಮಂಡನೆ ಮತ್ತು ಸಂವಾದ ನಡೆಸಿಕೊಟ್ಟರು. ಮೊದಲಿಗೆ, ಶ್ರಯುನಾ ಭಟ್ಟಾಚಾರ್ಯ ಮತ್ತವರ ಪುಸ್ತಕ Desparetly seeking Sharukh. ಅವರು ಜನಸಾಮಾನ್ಯರ ಆರ್ಥಿಕತೆಯ ಕುರಿತು ಅಂಕಿಸಂಕಿಗಳಾದಿ ಮಾಹಿತಿ ಸಂಗ್ರಹಕ್ಕೆ ಕ್ಷೇತ್ರಕಾರ್ಯಕ್ಕಿಳಿದಿದ್ದರು. ಆಗ ನೇರ ವಿಷಯಕ ಪ್ರಶ್ನೆಗಳಿಗೆ ಸಾಮಾನ್ಯರಲ್ಲಿ ಹುಟ್ಟುವ ಗೊಂದಲ ಮತ್ತು ಅಸಹಕಾರವನ್ನು ನಿವಾರಿಸಲು, ಅವರಲ್ಲಿ ಬಹುತೇಕರಿಗೆ ಪ್ರಿಯವಾದ ಶಾರುಕ್ ಖಾನ್ ಸಿನಿಮಾಗಳನ್ನು ಸಲಕರಣೆಗಳಾಗಿ ಬಳಸಿಕೊಂಡಿದ್ದನ್ನು ಮಾತಿನಲ್ಲಿ ವಿಸ್ತರಿಸಿದಂತಿತ್ತು. ೧೯೬೯ರಷ್ಟು ಹಿಂದೆ, ನಾನು ಮಹಾರಾಜ ಕಾಲೇಜಿನ ಬೀಯೇ ಸೇರಿದಾಗ, ಇಷ್ಟಪಟ್ಟು ಹಿಡಿದ ಇಂಗ್ಲಿಷ್ ಮತ್ತು ಕನ್ನಡ ಪ್ರಧಾನ ಐಚ್ಛಿಕಗಳಿಗೆ, ಕಾಲೇಜಿನ ಟೈಮ್ ಟೇಬಲ್ ಹೊಂದಾಣಿಕೆಯ ಅನಿವಾರ್ಯತೆಯಲ್ಲಿ ನನಗೆ ಗಂಟು ಬಿದ್ದ ಅಮುಖ್ಯ ಐಚ್ಛಿಕ – ಅರ್ಥಶಾಸ್ತ್ರ. ನಾನದನ್ನು ವ್ಯರ್ಥಶಾಸ್ತ್ರ ಎಂದೇ ಕಂಡವ. ಹಾಗಾಗಿಯೋ ಏನೋ ಅರ್ಥಶಾಸ್ತ್ರದ್ದೇ ಭಾಗವಾಗಿ ಶ್ರಯುನಾ ನಡೆಸಿದ ಸಂಶೋಧನೆ ನನಗೆ ಕುತೂಹಲ ಮೂಡಿಸಲಿಲ್ಲ, ಕ್ಷಮಿಸಿ.
ಅಭಿಷೇಕ್ ಚೌಧುರಿ ಮತ್ತವರ ಪುಸ್ತಕ Belivers Dilemma. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರ ವ್ಯಕ್ತಿ ಮತ್ತು ಸಾಧನೆಗಳ ಕುರಿತು ಅಸಂಖ್ಯ ಸಾಧಾರ ಕೃತಿಗಳು ಪ್ರಕಟವಾಗಿವೆ. ಆದರೆ ಅಭಿಷೇಕ್ ಪಕ್ಷನಿಷ್ಠೆಯಲ್ಲಿ ತಲೆತೊಳೆದುಕೊಂಡವರಿಂದ ಹೊರಗೆ, ಜನ ಸಾಮಾನ್ಯರ ಅಭಿಪ್ರಾಯಗಳನ್ನು ಸಂಗ್ರಹಿಸಿ, ಅಟಲರ ಭಿನ್ನ ಜೀವನಚಿತ್ರ ರೇಖಿಸಿದ್ದ ತಮ್ಮ ಪ್ರಯತ್ನವನ್ನು ವಿವರಿಸಿದರು. ವಾಜಪೇಯಿಯವರನ್ನು ಯಾರೂ ಎಷ್ಟು ಉದಾತ್ತ ಪುರುಷನೆಂದು ವ್ಯಾಖ್ಯಾನಿಸಿದರೂ ಇಂದಿನ ‘ಹಿಂದೂತ್ವ’ದ ಬೆಳಕಿನಲ್ಲಿ ಅವರಿಗೂ ಒಂದು ಪಾಲಿದ್ದೇ ಇದೆ ಎಂದು ನನಗನ್ನಿಸುವುದರಿಂದ, ಅಭಿಷೇಕರ ಶ್ರಮ ನನ್ನ ಕುತೂಹಲಕ್ಕೆ ತುತ್ತಾಗಲಿಲ್ಲ.
ನಾಲ್ಕು ಪುಸ್ತಕ ಮತ್ತು ಪ್ರಸ್ತುತಿಗಳು: ಮೊದಲೇ ಹೇಳಿದಂತೆ, ಶಿಬಿರಾರ್ಥಿಗಳಿಗೆ ಮುಂದಾಗಿ ಕೊಟ್ಟ ಸಾಹಿತ್ಯಗಳಲ್ಲಿ, ನನಗೆ ಗಮನಾರ್ಹವಾಗಿ ಕಾಣಿಸಿದ ಪುಸ್ತಕಗಳು ನಾಲ್ಕು: ಸೋಲಿಗ ಚಿತ್ರಗಳು (ಜಿ.ಎಸ್ ಜಯದೇವ), ಬುದ್ಧಚರಣ (ಎಚ್.ಎಸ್. ವೆಂಕಟೇಶಮೂರ್ತಿ), ಮಾಯದ ಕನ್ನಡಿ (ಕೆ.ವಿ ಅಕ್ಷರ) ಮತ್ತು ಯೂರಿಪಿಡಿಸನ ಮೂರು ನಾಟಕಗಳು (ಕನ್ನಡಕ್ಕೆ ಮಾಧವ ಚಿಪ್ಪಳಿ). ಆ ನಾಲ್ಕೂ ಕೃತಿಗಳ ಅನುಷ್ಠಾನ ಅಥವಾ ಚರ್ಚಾವಕಾಶವನ್ನು ತೆರೆದಿಟ್ಟಂತೆ (ದಿನ ಸಂದ ವೆಂಕಟೇಶಮೂರ್ತಿಯವರನ್ನುಳಿದು) ಮೂರೂ ಲೇಖಕರೂ ಶಿಬಿರ ಕಲಾಪಗಳಲ್ಲಿ ಭಾಗಿಯಾಗಿದ್ದರು ಕೂಡಾ.
ಬುದ್ಧ ಚರಣ ಮತ್ತು ದಾಸ್ತಾಂಗೋಯಿ: ಕವಿ ವೆಂಕಟೇಶಮೂರ್ತಿಯವರ ಇಪ್ಪತ್ತು ವರ್ಷಗಳ ತಪಸ್ಸಿನ ಫಲ ಬುದ್ಧ ಚರಣ. ಕಾವ್ಯಕ್ಕೆ ಮುನ್ನುಡಿಯಂತೇ ಡಾ| ಆರ್ ಲಕ್ಷ್ಮೀನಾರಾಯಣರು ಸುವಿಸ್ತಾರವಾಗಿ ಬರೆದ ‘ಸಹೃದಯ ಸ್ಫುರಣ’ ನನಗೆ ಬುದ್ಧ ಕಥನವನ್ನು ಸವಿಯುವಂತಾಗಿಸಿತು. ಕಾವ್ಯದ ಓದು ನಾನು ಮಾಡಲೇ ಇಲ್ಲ. ಆದರೆ ಅದರ ಸ್ವಾರಸ್ಯವನ್ನೂ ಶಿಬಿರಾರ್ಥಿಗಳಿಗೆ, ತನ್ನದೇ ಪಠ್ಯದೊಡನೆ ರಂಗಪ್ರಸ್ತುತಿಯಾಗಿಸಿದ್ದು ಮುಂಬೈಯ ದಾಸ್ತಾಂಗೋಯಿ ತಂಡ.
ದಾಸ್ತಾಂಗೋಯಿ – ಉರ್ದುವಿನಲ್ಲಿ ಪ್ರಚಲಿತವಿರುವ ಕಥನ ಕಲೆ. ಸಹಜವಾಗಿ ಕಲಾವಿದರಾದ ಪೂನಂ ಗಿರ್ಧಾನಿ ಮತ್ತು ರಾಜೇಶ್ ಸರಳವಾದ ವೇಷ, ರಂಗಸಜ್ಜಿಕೆಯ ಪೂರಕ ವಾತಾವರಣದಲ್ಲಿ, ಮಿತವಾದ ದೇಹಭಾಷೆಯೊಡನೆ, ಗದ್ಯ ಕಥನವನ್ನು ಮನೋಜ್ಞವಾಗಿ ನಡೆಸಿದರು. ಅವರೀ ಕಥನಕ್ಕೆ ಭಾರತಾದ್ಯಂತ, ನೂರಕ್ಕೂ ಮಿಕ್ಕು ಕೇಂದ್ರಗಳಲ್ಲೂ ಯಶಸ್ಸು ಕಾಣಿಸಿದ್ದಾರೆ. ಅದೇ ಧನ್ಯತೆಯೊಡನೆ ಇಲ್ಲೂ ಕಥನ ಮುಗಿಸಿ, ಅವರು ನೇಪಥ್ಯಕ್ಕೆ ಹೋಗಿದ್ದರು. ಇನ್ನೇನು ಸಂವಾದಕ್ಕೆ ತೆರೆದುಕೊಳ್ಳಲು ಬರುತ್ತಾರೆ ಎನ್ನುವ ಹೊತ್ತಿಗೆ, ಅನಿರೀಕ್ಷಿತ ಮತ್ತು ಅನಾವಶ್ಯಕ ಪ್ರಸಂಗವೊಂದು ತೆರೆದುಕೊಂಡಿತು…
ಬುದ್ಧ ಕಥನದ ದಾಸ್ತಾಂಗೋಯಿಯನ್ನು ಈ ಜೋಡಿಗೆ ಕೆಲ ಕಾಲದ ಹಿಂದೆ ನಿರ್ದೇಶಿಸಿದವರು ಮೆಹಮೂದ್ ಫರೂಕಿ. ಈಚೆಗೆ ಫರೂಕಿಯವರ ಚಾರಿತ್ರ್ಯಕ್ಕೆ ಅತ್ಯಾಚಾರದ ಆರೋಪ ಅಂಟಿಕೊಂಡಿದೆ. ಅವರಾಗಲೀ ಕುಕೃತ್ಯದ ಸುಳಿವಾಗಲೀ ಹೆಗ್ಗೋಡಿಗಿರಲಿಲ್ಲ. ಆದರೆ ಅದರ ನೆನಪು ಹೊತ್ತ ಪ್ರೇಕ್ಷಾವರ್ಗದ ಕಲಾವಿದೆಯೋರ್ವಳು, ಒಮ್ಮೆಗೇ ವೇದಿಕೆಗೆ ಧಾವಿಸಿ, ಮೈಕ್ ಎಳೆದುಕೊಂಡು, ಭಾವುಕ ಪ್ರತಿಭಟನಾ ನುಡಿಗಳನ್ನು ಹರಿಸಿದಳು. ಪೂನಂ ರಾಜೇಶ್ ಜೋಡಿಗೇನೂ ಸಂಬಂಧಿಸದ ಪಾಪ ಕಲ್ಪದ ಹೊರೆಯಲ್ಲಿ, ಬುದ್ಧ ಕಥನದ ಸುಂದರಸೌಧ ಕುಸಿದಿತ್ತು. ಕಲಾಪ ಸಂವಾದರಹಿತವಾಗಿ, ತುಸು ವಿಷಾದದೊಡನೇ ಮುಗಿದಿತ್ತು.
ಸೋಲಿಗ ಚಿತ್ರಗಳು: ಲೇಖಕ ಜಿ.ಎಸ್. ಜಯದೇವರು ಶೈಕ್ಷಣಿಕವಾಗಿ ವಿಜ್ಞಾನ ಸ್ನಾತಕೋತ್ತರ ಪದವೀಧರರಾಗಿ ಕೆಲಕಾಲ ಅಧ್ಯಾಪನವನ್ನೂ ನಡೆಸಿದವರು. (ಮಹಾಕವಿ ಜಿಎಸ್ ಶಿವರುದ್ರಪ್ಪನವರ ಮಗ.) ಆದರೆ ಬಹುಬೇಗನೆ ತಾಪೇದಾರಿ ಮತ್ತು ಸಾಂಸಾರಿಕ ನೆಲೆಯ ವೈಯಕ್ತಿಕ ಜೀವನಗಳನ್ನು ನಿರಾಕರಿಸಿ, ಸಮಾಜಸೇವಾ ಆದರ್ಶಕ್ಕೆ ತೆತ್ತುಕೊಂಡವರು. ಆ ಕಾಲಕ್ಕೆ (೧೯೮೦ರ ದಶಕ) ಬಿಳಿಗಿರಿ ರಂಗನ ಬೆಟ್ಟದಲ್ಲಿ ಡಾ| ಸುದರ್ಶನ್ ನೇತೃತ್ವದಲ್ಲಿ, ಸೋಮಸುಂದರಂ ಸಹಭಾಗಿತ್ವದಲ್ಲಿ ನಡೆದಿದ್ದ ಗಿರಿಜನ ಕಲ್ಯಾಣದೊಡನೆ ತಮ್ಮನ್ನೂ ಗುರುತಿಸಿಕೊಂಡರು.
ತಪ್ಪಲಿನ ಚಾಮರಾಜನಗರದಲ್ಲಿ ತಮ್ಮದೇ ದೀನಬಂಧು ಆಶ್ರಮ ಸಂಘಟಿಸಿ, ಅನಾಥ ಹಾಗೂ ಗಿರಿಜನ ಮಕ್ಕಳ ಶಿಕ್ಷಣ, ಆರೋಗ್ಯ ಮತ್ತು ಸಂಸ್ಕೃತಿಯ ಜವಾಬ್ದಾರಿ ಹೊತ್ತು ಯಶಸ್ವಿಯಾಗಿದ್ದಾರೆ. ತಮ್ಮ ಪ್ರಯೋಗ ಫಲಗಳು ಇತರರಿಗೆ ಪ್ರೇರಕವೂ ಮಾರ್ಗದರ್ಶಕವೂ ಆಗುವಂತೆ ಜಯದೇವರು ಕಾಲಕಾಲಕ್ಕೆ ಪತ್ರಿಕಾ ಲೇಖನಗಳ ಮೂಲಕ ಹಂಚಿಕೊಳ್ಳುತ್ತ ಬಂದಿದ್ದಾರೆ. ಅಂಥದ್ದೇ ಬಿಡಿ ಅನುಭವಗಳ ವಿಸ್ತೃತ ಸಂಕಲನ – ‘ಸೋಲಿಗ ಚಿತ್ರಗಳು’. ಇದು ಉನ್ನತ ಮಾನವೀಯ ಮೌಲ್ಯಗಳ ಲಲಿತ ಪ್ರತಿಪಾದನೆಯೇ ಆಗಿದೆ. ಶಿಬಿರದ ಒಂದು ಅವಧಿಯಲ್ಲಿ, ಅಹಮಿಕೆಯ ಸೋಂಕು ಇಲ್ಲದ, ಸೌಮ್ಯ ಮಾತಿನ ಜಯದೇವರು ಸ್ವತಃ ಭಾಗವಹಿಸಿ, ಮೂಲಸ್ರೋತಕ್ಕೆ ಹೆಚ್ಚಿನ ನುಡಿ ಮೆರುಗು ಕೊಟ್ಟರು.
ಮಾಯದ ಕನ್ನಡಿ: ಸಾಹಿತ್ಯ, ಸಂಸ್ಕೃತಿ, ಕಲೆ ಮುಂತಾದವು ಕೇವಲ ಶಬ್ದಾರ್ಥಕ್ಕೆ ಸೀಮಿತವಾಗಬೇಕಿಲ್ಲ. ಅದು ಆರೋಗ್ಯಪೂರ್ಣ ಸಮಾಜದ ಯಾವುದೇ ಮೌಲಿಕ ಕಲಾಪಕ್ಕೂ ಅನ್ವಯಿಸುತ್ತದೆ ಎನ್ನುವುದನ್ನು ನೀನಾಸಂ ಕಲೆಗಳ ಸಂಗಡ ಮಾತುಕತೆಯ ಶಿಬಿರ ತೋರಿಕೊಡುತ್ತದೆ. ಅಂಥದ್ದೇ ವಿಸ್ತೃತ ನೋಟವನ್ನು, ಕೆವಿ ಅಕ್ಷರ ತಮ್ಮ ‘ಮಾಯದ ಕನ್ನಡಿ’ ಲೇಖನ ಸಂಕಲನದಲ್ಲೂ ಕೊಟ್ಟಿದ್ದಾರೆ.
ಇಲ್ಲಿನ ಮೊದಲ ಪ್ರಬಂಧವೂ ಆದ ಮಾಯಾಕನ್ನಡಿ, ಅಕ್ಷರ ರಂಗಾಭ್ಯಾಸಿಯಾಗಿ ಕೇರಳದ ದೈವಾರಾಧನೆಯಾದ ತೆಯ್ಯಂ ನೋಡಲು ಹೋದ ಸಣ್ಣ ಪ್ರವಾಸ ಕಥನವನ್ನೂ ಒಳಗೊಂಡಿದೆ. ಅಲ್ಲಿ ಪಾತ್ರಿಯ ಕಣ್ಣೋಟ ಮಾಯಾಕನ್ನಡಿಯಾಗಿ ವಿಸ್ತರಿಸಿದ್ದನ್ನು ಕಾಣಬಹುದು. ಹೀಗೇ ಕೃಷಿಕನಾದ ಅಕ್ಷರ, ಅಡಿಕೆ ಬೆಳೆಯ ಅನಿವಾರ್ಯ ಸಂಗಾತಿಯಾದ ಮದ್ದು – ಮೈಲ್ ತುತ್ತು, ಹಿಂದೆ ಹರಳಾಗಿ ಬರುತ್ತಿದ್ದ ಕಾಲದಲ್ಲಿ ತೋರುತ್ತಿದ್ದ ಮೋಹಕ ವರ್ಣ, (ಕಾಲಧರ್ಮದಲ್ಲಿ ಈಗ ಅದೂ ರೆಡಿ-ಟು-ಯೂಸ್ ಆಗಿ, ಬಣ್ಣ ಕಳೆದುಕೊಂಡಿದೆ) ನೀಲಿಮೆಯ ವಿಸ್ತಾರಕ್ಕೂ ಅನ್ವಯಿಸುತ್ತಾರೆ. ಕೊರೋನಾ, ಆದಿಶಂಕರ, ಪ್ರಜ್ಞೆ ಎಂದಿತ್ಯಾದಿ ಇಪ್ಪತ್ತು ವೈವಿಧ್ಯಮಯ ವಿಷಯಗಳ ಮೇಲೆ, ಸ್ವಾನುಭವ ಬೆರೆತ ಪ್ರಬಂಧಗಳು ಇಲ್ಲಿವೆ.
ಮಾಯಾ ಕನ್ನಡಿಯಲ್ಲಿ ಮಾಜೀ ಪುಸ್ತಕೋದ್ಯಮಿಯಾಗಿ ನನ್ನನ್ನು ವಿಶೇಷ ಆಕರ್ಷಿಸಿದ ಪ್ರಬಂಧ – ಕನ್ನಡ ಪುಸ್ತಕ ಪುರುಷ; ಹಿಡಿಯದ ಹಾದಿಗಳು. ನಾನು ಪುಸ್ತಕೋದ್ಯಮಕ್ಕೆ ಇಳಿಯುವುದಕ್ಕೂ ಹಿಂದಿನಿಂದ (೧೯೫೭) ಪ್ರಕಾಶನ ರಂಗದಲ್ಲಿರುವ ಅಕ್ಷರ ಪ್ರಕಾಶನ, ಇಂದಿನವರೆಗೆ ಉಳಿದ ಮತ್ತು ಮುಂದಕ್ಕೂ ಕ್ರಿಯಾತ್ಮಕವಾಗಿಯೇ ಬಾಳುವ ತತ್ವಕ್ಕೆ ಇಲ್ಲೊಂದು ಇಣುಕು ನೋಟವಿದೆ. ಕೇವಲ ವೃತ್ತಿ, ಹೊಟ್ಟೆಪಾಡೆಂದಲ್ಲದೆ, ನಾನೂ ಮೂವತ್ತಾರು ವರ್ಷಗಳ (೧೯೭೫-೨೦೧೨) ಕಾಲ ನಡೆಸಿದ ಪುಸ್ತಕೋದ್ಯಮಕ್ಕಿದು ಸಂವಾದಿಯಾಗಿದೆ. ಇದರಲ್ಲಿ ಸಾಮಯಿಕವಾಗಿ ಅಕ್ಷರ ನನ್ನ ನಿಲುವನ್ನೂ ಉಲ್ಲೇಖಿಸಿದ್ದಾರೆ. ಇಷ್ಟಾಗಿಯೂ ಪ್ರಸ್ತುತ ಲೇಖನ, ಇಂದಿನ ಕನ್ನಡ ಪುಸ್ತಕೋದ್ಯಮದ ಓರ್ವ ಮಹಾ ಖಳನಾಯಕ ಸಂಸ್ಥೆ ಪ್ರಕಟಿಸಿದ ಪ್ರಬಂಧ ಸಂಕಲನದ ಭಾಗವಾಗಿ ರೂಪುಗೊಂಡು, ಮೊದಲು ಬೆಳಕು ಕಂಡದ್ದು ನನಗಂತೂ ಬಹಳ ಮೋಜಿನ ಸಂಗತಿ. ಈ ಪುಸ್ತಕಕ್ಕೆ ಸೇರಬಹುದಾಗಿದ್ದ ಇನ್ನೊಂದೇ ಪ್ರಬಂಧವೋ ಎನ್ನುವಂತೆ….
ಕೆವಿ ಅಕ್ಷರ ಶಿಬಿರದ ಒಂದು ಅವಧಿಯಲ್ಲಿ ಪುತಿನರಸಿಂಹಾಚಾರ್ಯರ ಹರಿಚರಿತೆ ಮಹಾಕಾವ್ಯದ ಸಣ್ಣ ಭಾಗವನ್ನು ವಿಶ್ಲೇಷಿಸಿದರು. ಪುರಾಣ ಖ್ಯಾತರೇ ಆದ ಬುದ್ಧ, ರಾಮರನ್ನು ಸರಿಯಾಗಿಯೇ ಹಿಂಬಾಲಿಸಿದಂತೆ ಅಕ್ಷರ ಕೃಷ್ಣನನ್ನು ಹಿಡಿದರೂ ‘ಕೃಷ್ಣ ನೀ ಹಳೆಯವನಲ್ಲ’ ಎಂದೇ ಕೃಷ್ಣ-ನ್ಯಾಯ ಮಂಡಿಸಿದ್ದರು. ಕೊನೆಯಲ್ಲಿ ತಾನು ಪುತಿನ ಕಾವ್ಯಗಳ ಕುರಿತು ವಿಸ್ತೃತ ಅಧ್ಯಯನದೊಡನೆ ಸ್ವತಂತ್ರ ಪುಸ್ತಕವನ್ನು ತರುವ ಸೂಚನೆಯನ್ನೂ ಕೊಟ್ಟರು.
ಯೂರಿಪಿಡೀಸನ ಮೂರು ನಾಟಕಗಳು: ಹೆಗ್ಗೋಡಿನಲ್ಲಿ ವಾರ್ಷಿಕವಾಗಿ ಜುಲೈಯಲ್ಲಿ ನಡೆಯುವ ಕೆವಿ ಸುಬ್ಬಣ್ಣ ಸ್ಮರಣೆಯಂದು (೧೯೩೨-೨೦೦೫) ಊರವರು ಅರ್ಥಾತ್ ನೀನಾಸಂನ ಮೂಲ ಪ್ರೇರಕರು, ತಮ್ಮದೇ ಒಂದು ನಾಟಕ ಪ್ರಸ್ತುತಪಡಿಸುತ್ತ ಬಂದಿದ್ದಾರೆ. ಹಾಗೇ ಮೂರು ತಿಂಗಳ ಹಿಂದೆ ಮೊದಲ ಪ್ರದರ್ಶನ ಕಂಡ ನಾಟಕ – ಮೀಡಿಯಾ, ಶಿಬಿರದ ಮೂರನೇ ದಿನದ ಸಂಜೆ ನಮ್ಮನ್ನೂ ರಂಜಿಸಿತು. ಇದನ್ನು ನಿರ್ದೇಶಿಸಿದವರು ಮಂಜು ಕೊಡಗು. ಸ್ತ್ರೀಮೋಹ, ಅಧಿಕಾರ ಮೋಹಗಳ ಜಾಲದಲ್ಲಿ ಚಾಣಾಕ್ಷೆ ಮೀಡಿಯಾ, ನಾಟಕದಲ್ಲಿ ದುರಂತ ನಾಯಕಿಯಾಗುತ್ತಾಳೆ. ತುಂಬ ಅಚ್ಚುಕಟ್ಟಾದ, ಶಕ್ತಿಯುತವಾದ ರಂಗಪ್ರಸ್ತುತಿಗೆ ಕಿರೀಟವಿಟ್ಟಂತೆ ಮೀಡಿಯಾ ಪಾತ್ರದಲ್ಲಿ ವಿದ್ಯಾ ಹೆಗಡೆಯೂ (ಶ್ರೀಮತಿ ಅಕ್ಷರ) ಮೆರೆದಿದ್ದಾರೆ.
ಶಿಬಿರದ ಮೊದಲಲ್ಲಿ ಐದು ದಿನಗಳಲ್ಲಿ ಪ್ರದರ್ಶನಗೊಳ್ಳಲಿರುವ ಎಲ್ಲ ನಾಟಕಗಳ ಕಥಾ ಸಾರಾಂಶವನ್ನೊಳಗೊಂಡ ಪರಿಚಯ ಪತ್ರವನ್ನು ಕೊಟ್ಟಿದ್ದರು. ಅದನ್ನು ಮೀರಿ, ಈ ಬಾರಿ ಮೀಡಿಯಾ ಸೇರಿದಂತೆ ‘ಯೂರಿಪಿಡೀಸನ ಮೂರು ನಾಟಕಗಳು’ (ಕನ್ನಡಕ್ಕೆ: ಮಾಧವ ಚಿಪ್ಪಳಿ, ೨೦೨೨) ಪುಸ್ತಕವನ್ನೇ ಕೊಟ್ಟಿದ್ದರು. ಸುಮಾರು ಇಪ್ಪತ್ತಾರು ಪುಟಗಳ ಪ್ರಸ್ತಾವನೆ ಸಹಿತ ಒದಗಿರುವ ಪುಸ್ತಕವನ್ನು ನಾನಿನ್ನೂ ಓದಿಲ್ಲ. ಆದರೆ ಎಂದಿನಂತೆ ಸದ್ಯೋಭವಿಷ್ಯತ್ತಿನಲ್ಲಿ ಸಂಚಿ ಫೌಂಡೇಶನ್ ‘ಮೀಡಿಯಾ’ ರಂಗ ಪ್ರದರ್ಶನವನ್ನೂ ಸಮರ್ಥ ವಿಡಿಯೋ ರೂಪಾಂತರದಲ್ಲಿ, ಸಾರ್ವಜನಿಕ ಉಚಿತ ವೀಕ್ಷಣೆಗೆ ಒದಗಿಸಲಿದೆ. ಆಗ ಈ ಪುಸ್ತಕದ ಓದು ಮತ್ತು ಪ್ರದರ್ಶನದ ನೆನಪಿನ ಸಹಿತ ಅದನ್ನು ಅನುಭವಿಸುವಲ್ಲಿ ನನಗೆ ಹೆಚ್ಚಿನ ಸಂತೋಷ ಸಿಗುವುದರಲ್ಲಿ ಸಂದೇಹವಿಲ್ಲ.
ಕೆಲವು ಸಾಹಿತ್ಯಕ ವ್ಯಾಖ್ಯಾನಗಳು: ಗುಲ್ಬರ್ಗಾ ಕೇಂದ್ರೀಯ ವಿವಿ ನಿಲಯದ ಪ್ರಾಧ್ಯಾಪಕ ವಿಕ್ರಮ್ ವಿಸಾಚೀ, ವೆಂಕಟೇಶ ಮೂರ್ತಿಯವರ ಬುದ್ಧ ಚರಣ ಮಹಾಕಾವ್ಯವನ್ನಿಟ್ಟುಕೊಂಡು, ಕಿರಿದರಲ್ಲಿ ವಿವರಣೆ ಕೊಟ್ಟರು.
ತುಮಕೂರು ವಿವಿ ನಿಲಯದ ಪ್ರಾಧ್ಯಾಪಕ ನಿತ್ಯಾನಂದ ಶೆಟ್ಟಿ ಡಿವಿಜಿ, ಮಾಸ್ತಿ ಮತ್ತು ಕುವೆಂಪು ಕಂಡ ರಾಮನ ಭಿನ್ನ ಗುಣ ಮೌಲ್ಯಗಳನ್ನು ಒರೆಗೆ ಹಚ್ಚಿದರು.
ಅದರ ಕೊನೆಯಲ್ಲಿ ಕೀರ್ತಿ ಶೇಷ ಶೇಣಿಗೋಪಾಕೃಷ್ಣ ಭಟ್ಟರು (ತಾಳಮದ್ದಳೆಯೊಂದರಲ್ಲಿ) ಪ್ರಾಸಂಗಿಕವಾಗಿ ರಾಮ ಪಾತ್ರದ ಸಂಕೀರ್ಣತೆಯನ್ನು ತನ್ನ ವಚೋವಿಲಾಸದಲ್ಲಿ ಮೆರೆಸಿದ್ದರ ಧ್ವನಿಮುದ್ರಣ ಕೇಳಿಸಿ ರೋಮಾಂಚನವನ್ನೇ ಮಾಡಿದರು.
ಶಿಬಿರದ ಇನ್ನೊಂದು ಮುಖ:
ಸ್ವತಃ ಕೃಷಿಕನಾಗಿ, ತನ್ನ ಸಾಹಿತ್ಯ ಮತ್ತು ಕಲಾಪ್ರೇಮವನ್ನು ಗ್ರಾಮೀಣ ಚಟುವಟಿಕೆಗಳ ಜತೆಗೇ ಗುರುತಿಸಿಕೊಂಡವರು ಕೆವಿ ಸುಬ್ಬಣ್ಣ. ಅವರ ಆಶಯಕ್ಕೆ ಸರಿಯಾಗಿ ನೇರ ಪ್ರಯೋಗರಂಗದಿಂದಲೇ ಬಂದ ಕೆಲವು ಪರಿಸರಾತ್ಮಾಕರ ಚಿಂತನೆಗಳೂ ಶಿಬಿರದಲ್ಲಿ ಸಂಯೋಜಿತವಾಗಿದ್ದವು, ಅವುಗಳಲ್ಲಿ….
ನಂಜುಂಡ ಸ್ವಾಮಿ ಮತ್ತು ಅಮೃತಭೂಮಿ: ಕರ್ನಾಟಕದ ರೈತ ಚಳವಳಿಯಲ್ಲಿ ತಾತ್ವಿಕದಷ್ಟೇ ಕ್ರಿಯಾತ್ಮಕ ಹೋರಾಟಗಳಲ್ಲೂ ಮುಂಚೂಣಿಯಲ್ಲಿದ್ದು ಕೀರ್ತಿಶೇಷರಾದವರು (೧೯೩೬-೨೦೦೪) ಪ್ರೊ| ನಂಜುಂಡಸ್ವಾಮಿ. ಅವವರ ಕ್ರಾಂತಿ ಪಂಜನ್ನು ಅಷ್ಟೇ ಶಕ್ತಿಯುತವಾಗಿ ಹಿಡಿದು ನಡೆದಿದ್ದಾರೆ ಅವರ ಮಗಳು ಚುಕ್ಕಿ ನಂಜುಂಡಸ್ವಾಮಿ. ಪರಂಪರಾಗತ ಅನುಭವಕ್ಕೆ, ತಮ್ಮ ಚಾಮರಾಜನಗರದ ಪ್ರಯೋಗರಂಗ – ‘ಅಮೃತಭೂಮಿ’ ನೆಲದ ಅನುಭವಗಳನ್ನೂ ಸೇರಿಸಿ, ನಡೆಸಿರುವ ರೈತ ಚಳವಳಗಳ ವಿಸ್ತೃತ ಚಿತ್ರಣವನ್ನು ನಮ್ಮೆದುರು ಬಿಡಿಸಿಟ್ಟರು. ಇವರಿಗೆ ಹೋಲಿಕೆಯಲ್ಲಿ…
ಪುನರ್ಜೀವನ ಟ್ರಸ್ಟ್: ಮುಂಬೈಯಿಂದ ಬಂದಿದ್ದ ಹೇಮಲತಾ ಜೈನ್ ಕಲಿಕೆ ಮತ್ತದಕ್ಕೆ ಸಂಬಂಧಿಸಿದ ಸಂಶೋಧನಾ ಅಗತ್ಯಗಳಿಗಾಗಿ ನಡೆಸಿದ ಕ್ಷೇತ್ರ ಕಾರ್ಯಾನುಭವಗಳ ನಿರೂಪಣೆ ತುಸು ನೆಲದೂರದ್ದು ಅನ್ನಿಸಿತು. ಹೇಮಲತಾ ಮರೆವಿಗೆ ಸಲ್ಲುತ್ತಿರುವ ಗ್ರಾಮೀಣ ಕಲೆಗಳ ಪುನರುಜ್ಜೀವನದ ಸಲುವಾಗಿ ಕಟ್ಟಿದ ಪುನರ್ಜೀವನ ಟ್ರಸ್ಟಿನ ಕಲಾಪಗಳು ಮುಂದೆ (ಹನಿ ಹನಿಗೂಡಿದರೆ ಹಳ್ಳ – ಗಾದೆ) ಹಳ್ಳವಾಗಬಹುದಾದ ಹನಿಯ ಆಶಯವನ್ನು ಬಿಂಬಿಸಿದವು. ಟ್ರಸ್ಟ್ ಸದ್ಯ ಗ್ರಾಮೀಣ ಕೈಮಗ್ಗದ ಬಟ್ಟೆಗಳ ಬಣ್ಣಗಾರಿಕೆಯಲ್ಲಿ ಕೈಗೊಂಡ ಪರಿಸರಸ್ನೇಹೀ ಕ್ರಮಗಳ ಕಥನ ಸ್ವಾರಸ್ಯಕರವಾಗಿತ್ತು. (ಬಹುಶಃ ಇದಕ್ಕಾಗಿ ಅವರಿಗೆ ಡೆಕ್ಕನ್ ಹೆರಾಲ್ಡ್ ಪತ್ರಿಕೆಯ ಛೇಂಜ್ ಮೇಕರ್ಸ್ ಪ್ರಶಸ್ತಿಯೂ ಸಂದಿದೆ)
ಗಜಾನನ ಶರ್ಮ: ಶರಾವತಿ ನದಿಗೆ ಮಡೆನೂರು ಅಥವಾ ಹಿರೇಭಾಸ್ಕರ ಅಣೆಕಟ್ಟು ಮೊದಲನೇದು. ಅದು ಸಾಲದೆಂದು ಇನ್ನೂ ಕೆಳಪಾತ್ರೆಯಲ್ಲಿ ಎದ್ದ ಭಾರೀ ಅಣೆಕಟ್ಟು ಲಿಂಗನಮಕ್ಕಿ. ಇವು ತನ್ನ ಬಾಲ್ಯದ ಪರಿಸರ ಮತ್ತು ಕುಟುಂಬವನ್ನು ಅಳಿಸಿದಂತೇ ಮುಂದುವರಿದ ದಿನಗಳಲ್ಲಿ ವಿದ್ಯಾಭ್ಯಾಸ, ವೃತ್ತಿ ಹಾಗೂ ಕುಟುಂಬ ಸ್ಥಿರತೆಗೆ ಪೂರ್ಣ ಆಧಾರವಾಯ್ತು ಎನ್ನುವುದನ್ನು, ಬಹು ಸುಂದರವಾದ ಕಾದಂಬರಿಯಾಗಿಯೇ (ಪುನರ್ವಸು) ಬರೆದು ಕಾಣಿಸಿದವರು ಗಜಾನನ ಶರ್ಮ. ಕರ್ನಾಟಕ ಸರಕಾರದ ಎಲೆಕ್ಟ್ರಿಕಲ್ ಇಂಜಿನಿಯರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಶರ್ಮರು, ಶಿಬಿರದ ನಾಲ್ಕನೇ ದಿನದ ಮೊದಲ ಗೋಷ್ಠಿಯನ್ನು ಉದ್ದೇಶಿಸಿ ಮಾತಾಡಲು ಕಾರಣ – ಶರಾವತಿ ಪಂಪ್ಡ್ ಸ್ಟೋರೇಜ್! ಇದನ್ನವರು ಸರಕಾರದ ಹಂಗು ಹರಿದು, ಜೀವನಾನುಭವದ ಬೆಳಕಿನಲ್ಲಿ ಸಾರ್ವಜನಿಕ ಹಿತಕ್ಕಾಗಿ ಬಳಸಿಕೊಂಡದ್ದು ಸ್ಪಷ್ಟವಿತ್ತು.
ಕರ್ನಾಟಕಲ್ಲಿ ಇಂದು ವಿದ್ಯುಚ್ಛಕ್ತಿ ಕೊರತೆಯಿಲ್ಲ, ಭಾರೀ ಮಿಗತೆ ಇದೆ. ಹಾಗೆಂದು ಅದನ್ನು ಭಾರಿಯಾಗಿ ದಾಸ್ತಾನಿಡುವ ವ್ಯವಸ್ಥೆ, ಇಂದು ಜಾಗತಿಕವಾಗಿಯೇ ಸಾಧ್ಯವಾಗಿಲ್ಲ. ಬದಲಿಗೆ, ತಯಾರಿಯ ಮೂಲವಾದ ನೀರು, ಪರಮಾಣು, ಉಷ್ಣ, ಸೌರ ಮತ್ತು ವಾಯು ಬಲಗಳ ಸಮತೋಲನದಲ್ಲಿ ಸಾಧಿಸುವುದೇ ‘ಪಂಪ್ಡ್ ಸ್ಟೋರೇಜ್’ ತತ್ವ. ಕೆಲವು ಅನ್ಯದೇಶಗಳಲ್ಲಿ ಇದು ಈಗಾಗಲೇ ಪ್ರಾಯೋಗಿಕ ಯಶಸ್ಸನ್ನೂ ಕಂಡಿದೆ.
ಪಂಪ್ಡ್ ಸ್ಟೋರೇಜಿನ ಮುಖ್ಯ ವ್ಯವಸ್ಥೆಯೆಂದರೆ ಪ್ರಾಕೃತಿಕ ತೀವ್ರ ಇಳುಕಲಿನಲ್ಲಿ, ಭೂಗರ್ಭದಲ್ಲೇ ಅಳವಡಿಸಿದ ಭಾರೀ ಕೊಳವೆಗಳು. ಇದರ ಕೆಳಕೊನೆಯಲ್ಲಿನ ಇಮ್ಮುಖ ಕ್ರಿಯಾ ಯಂತ್ರಗಳು, ವಿದ್ಯುಚ್ಛಕ್ತಿ ಕೊರತೆ ಕಾಲದಲ್ಲಿ, ನೀರಿಳಿಸಿಕೊಂಡು ಜಲವಿದ್ಯುತ್ ಕೊಡುತ್ತವೆ. ಮಿಗತೆ ಕಾಲದಲ್ಲಿ ಅದೇ ನೀರನ್ನು, ದೇಶಾದ್ಯಂತದ ವಿದ್ಯುಜ್ಜಾಲದ (ಗ್ರಿಡ್) ವಿದ್ಯುಚ್ಛಕ್ತಿ ಬಳಸಿ ಮತ್ತೆ ಮೇಲಿನ ದಾಸ್ತಾನಿಗೇ ಪಂಪ್ ಮಾಡುತ್ತದೆ. ಇದು ಭಾರೀ ನೆಲ ಕಾಡು ನುಂಗುವುದಿಲ್ಲ, ಹೊಸ ನೀರೂ ಕೇಳುವುದಿಲ್ಲ. ಆದರೆ ಈಗಾಗಲೇ ಅನೇಕ ಸುರಂಗಗಳಿಂದ ಘಾಸಿಗೊಂಡು, ಹಲವು ಅಣೆಕಟ್ಟೆ ಮತ್ತು ಜಲಾಶಯದ ಹೊರೆ ಹೊತ್ತಿರುವ ಪಶ್ಚಿಮ ಘಟ್ಟವನ್ನು, ಮುಖ್ಯವಾಗಿ ಶರಾವತಿ ಕಣಿವೆಯನ್ನು ಪಂಪ್ಡ್ ಸ್ಟೋರೇಜಿನ ಹೆಸರಿನಲ್ಲಿ ಬಳಲಿಸುವುದು ಸರಿಯಲ್ಲ. ಈಗಾಗಲೇ ಕಿಮೀಗಟ್ಟಳೆ ಪಾತಾಳ ಮುಟ್ಟಿ ಹಾಳು ಬಿದ್ದಿರುವ ಕೋಲಾರ ಗಣಿಯಂಥ ಪ್ರದೇಶಗಳಲ್ಲಿ ಅಳವಡಿಸಬಹುದು, ಎಂಬ ಪರಿಣಾಮಕಾರಿ ಪರ್ಯಾಯವನ್ನೂ ಸೂಚಿಸಿ, ಗಜಾನನ ಶರ್ಮ ಮಾತು ಮುಗಿಸಿದರು.
ಶಿವಾನಂದ ಕಳವೆ: ಅರಣ್ಯ ಇಲಾಖೆ ಕೇವಲ ಪರ್ಮಿಟ್ಟುಗಳ ವಿತರಣಾಕೇಂದ್ರ. ನಿಜದ ವನ್ಯ ಜ್ಞಾನ, ಸಂಶೋಧನೆ ಸಹಿತ ಸಂರಕ್ಷಣೆ ಅಲ್ಲಿ ನಡೆಯುತ್ತಿಲ್ಲ. ಈ ಮಹಾ ಕೊರತೆಯನ್ನು ಸಣ್ಣದಾಗಿ ತುಂಬಿ ಕೊಡುತ್ತಿರುವ ಅಸಂಖ್ಯ ಖಾಸಗಿ ಪ್ರಯತ್ನಗಳಲ್ಲಿ ಶಿಖರಪ್ರಾಯವಾಗಿ ನಿಂತಿದೆ ಶಿರಸಿ ಸಮೀಪದ ಕಾನ್ಮನೆ ಎಂಬ ನಿಸರ್ಗ ಜ್ಞಾನಕೇಂದ್ರ. ಇದರ ರೂವಾರಿ ಮತ್ತು ಬಹುಸಂಪನ್ಮೂಲ ನಿರ್ವಾಹಕ ಶಿವಾನಂದ ಕಳವೆ. ಇವರು ಮೂಲತಃ ಕೃಷಿಕನಾದರೂ ಲೇಖನ, ಪಟಗ್ರಹಣ, ಕೃಷಿರಂಗದ ವ್ಯಾಪಕ ಪರಿಚಯಗಳನ್ನು ಜೀವನದ ಗೀಳಾಗಿಯೇ ಹಚ್ಚಿಕೊಂಡಿದ್ದಾರೆ. ದೇಸೀ ಸಸ್ಯ ತಳಿಗಳ ಗುರುತಿಸುವಿಕೆ, ಸಂಗ್ರಹ, ರಕ್ಷಣೆ, ಪ್ರಸರಣೆ, ಕೆರೆಗಳ ಹೂಳೆತ್ತುವಿಕೆ, ಮತ್ತೆಲ್ಲದರ ಪ್ರಾಯೋಗಿಕ ಶಿಕ್ಷಣ ಮತ್ತು ಯಶಸ್ಸು ಶಿವಾನಂದರ ವೈಶಿಷ್ಟ್ಯ. ಅದಕ್ಕೆ ನನ್ನದೇ ಒಂದು ಅನುಭವ: ೧೯೮೦ರ ದಶಕದಲ್ಲಿ, ಮರಗಳನ್ನು ಉಳಿಸಲು ‘ಅಪ್ಪಿಕೋ’ ಚಳವಳಿಯನ್ನು ನಡೆಸಿದ್ದ ಪಾಂಡುರಂಗ ಹೆಗಡೆ ಮತ್ತು ಶಿವಾನಂದ ಕಳವೆಯವರಿಗೆ ಯಾವುದೋ ಸಣ್ಣ ಪುರಸ್ಕಾರದ ಹಣ ಬಂದಿತ್ತು. ಇವರು ಅದಕ್ಕೆ ತಮ್ಮದಷ್ಟು ಹಣ ಸೇರಿಸಿ, ಹೆಚ್ಚುವರಿ ಅಗತ್ಯಕ್ಕೆ ಗ್ರಾಮೀಣ ಜನರ ಸಹಕಾರವನ್ನೇ ಬಳಸಿಕೊಂಡು, ನೀರ್ನಳ್ಳಿಯಲ್ಲಿ ’ಕನ್ನಡ ಪರಿಸರ ಲೇಖಕರ ಕಮ್ಮಟ’ವನ್ನೇ ನಡೆಸಿದ್ದರು. ಸಣ್ಣಪುಟ್ಟ ಪರ್ವತಾರೋಹಣ ಲೇಖನಗಳಲ್ಲಷ್ಟೇ ಇದ್ದ ನನ್ನನ್ನು. ಇತರ ಕೆಲವು ಮಂದಿಗಳೊಡನೆ ಇವರು ಗುರುತಿಸಿ, ಕರೆಸಿಕೊಂಡು, ಉಪಯುಕ್ತ ಕಲಾಪಗಳನ್ನು ನಡೆಸುವುದರೊಡನೆ ಎರಡೋ ಮೂರೋ ದಿನಗಳ ಆತಿಥ್ಯವನ್ನೂ (ಎಲ್ಲ ಉಚಿತ) ಕೊಟ್ಟದ್ದು ಮರೆಯುವಂತೇ ಇಲ್ಲ. ಶಿವಾನಂದರ ತಿರುಗಾಟ ಮತ್ತು ಚಟುವಟಿಕೆಗಳ ಫಲಾನುಭವ ಹೆಗ್ಗೋಡಿಗೆ ಹೊಸತಲ್ಲ. ಅದರ ಸಣ್ಣ ದರ್ಶನವನ್ನು, ಹೆಗ್ಗೋಡಿಗೆ ಹೊಸಬರಾದ ಕ.ಸಂ.ಮಾ-೨೫ರ ಶಿಬಿರಾಥಿಗಳಿಗೆ ಶಿವಾನಂದರು ಮಾಡಿಕೊಟ್ಟದ್ದು ವಿಶೇಷ. ಶರ್ಮರ ಮಾತಿನ ಬೆನ್ನಿಗೆ, ಕಳವೆಯವರ ಮಾತು ಕಳೆಗಟ್ಟಿತ್ತು.
ಸುಮನಸ್ ಕೌಲಗಿ: ನನ್ನ ಪುಸ್ತಕ ವ್ಯಾಪಾರೀ ದಿನಗಳಲ್ಲಿ (೧೯೭೫-೨೦೧೨) ಜನಪದ ಸೇವಾ ಟ್ರಸ್ಟ್, ಮೇಲುಕೋಟೆ ಅಂದರೆ ಹಿರಿಯ ಗಾಂಧೀವಾದಿ ಸುರೇಂದ್ರ ಕೌಲಗಿ ಮತ್ತವರ ಹಿರಿಯ ಮಗ – ಫುಕುವೋಕಾನ ಪುಸ್ತಕವನ್ನು ‘ಒಂದು ಹುಲ್ಲಿನ ಕ್ರಾಂತಿ’ ಎಂದು ಅನುವಾದಿಸಿ, ಪ್ರಕಟಿಸಿದ ಸಂತೋಷ ಕೌಲಗಿಯವರಷ್ಟೇ ಆಗಿತ್ತು. ಅವರ ಕಲಾಪಗಳ ಪ್ರತ್ಯಕ್ಷ ದರ್ಶನ ಮತ್ತು ಸೂಕ್ಷ್ಮ ಪರಿಚಯಕ್ಕಾಗಿ ಎರಡು ವರ್ಷದ ಹಿಂದೊಮ್ಮೆ ನಾನು ಮೇಲುಕೋಟೆಗೇ ಹೋಗಿದ್ದೆ. ಆಗ ಅದೇ ಮೊದಲು, ಸಂತೋಷರ ಹಿರಿಯ ಮಗ ಸುಮನಸ್ ಕೌಲಗಿಯನ್ನೂ ಪರಿಚಯಿಸಿಕೊಂಡಿದ್ದೆ. ಊರಿನ ಅನಾಥಾಶ್ರಮವಲ್ಲದೆ, ಮೂರು-ನಾಲ್ಕು ಕಿಮೀ ಹೊರಗೆ ‘ಹೊಸ ಜೀವನ ದಾರಿ’, ಖಾದಿ ಮತ್ತು ಕೈಮಗ್ಗದ ವ್ರತ, ‘ವನಜೀವನ ಕಲಿಕೆ’, ‘ನೆನೆ ಬನ’ ಮುಂತಾದ ಹೆಸರಿನಲ್ಲಿ ನಡೆಸಿರುವ ಚಟುವಟಿಕೆಗಳನ್ನು ಕಣ್ಣಾರೆ ಕಂಡಿದ್ದೆ. ಪ್ರೌಢಶಾಲಾ ವಿದ್ಯೆಯವರೆಗೆ ‘ಮನೆಯ ಪಾಠಶಾಲೆ’ ನೆಚ್ಚಿದ ಸುಮನಸ್, ಆಕ್ಸ್ಫರ್ಡ್ ವಿವಿನಿಲಯದ ಸಂಶೋಧನಾ ಪದವಿಯನ್ನು ಗಳಿಸಿದ್ದರು. ಆದರೂ ವಿದ್ಯೆಯ ಅನ್ವಯ ಹಾಗೂ ಜೀವನ ಧರ್ಮಕ್ಕೆ ಮರಳಿ ಮೇಲುಕೋಟೆಗೇ ಬಂದದ್ದು ನನಗೆ ಭಾರೀ ಆಶ್ಚರ್ಯವನ್ನೇ ಉಂಟುಮಾಡಿತ್ತು. (ಹೆಚ್ಚಿನ ಆಸಕ್ತಿ ಇದ್ದವರು, ಇಲ್ಲೇ ನವಂಬರ್ ೨೦೨೪ರ ನನ್ನ ಲೇಖನವನ್ನು ಹುಡುಕಿಕೊಳ್ಳಿ.) ಸುಮನಸರಿಗೆ, ಸ್ವಂತ ಶ್ರಮದ ಜತೆಗೆ, ಕೌಲಗಿ ಕುಟುಂಬದ ಮೂರನೇ ತಲೆಯಾಗಿಯೂ ಹೆಚ್ಚಿನ ಅನುಭವ ಮೊತ್ತದ ವಕ್ತಾರಿಕೆ ಸಹಜವಾಗಿ ಒದಗಿರುವುದರಿಂದ ಕಲಾಪ ಚಂದವಾಯ್ತು.
ವೈಯಕ್ತಿಕ: ಅಸಾಮಾನ್ಯ ಅನುಭವಿ, ಮಹಾನ್ ಲೇಖಕ – ಜೆಯ ಮೋಹನ್
ಕಸಂಮಾ – ೨೦೨೪ರಲ್ಲಿ ‘ಆನೆ ಡಾಕ್ಟರ್ ಮತ್ತಿತರ ಕತೆಗಳು’ ಎಂದೊಂದು ತಮಿಳು ಮೂಲದಿಂದ ಅನುವಾದಗೊಂಡ ಸಂಕಲನದ ಪ್ರತಿಗಳನ್ನು ಭಾಗಿಗಳಿಗೆಲ್ಲ ಮೊದಲೇ ಕೊಟ್ಟಿದ್ದರು. ಶಿಬಿರದ ಒಂದು ಅವಧಿಯಲ್ಲಿ ಆ ಲೇಖಕ ಮತ್ತು ಪುಸ್ತಕದ ಕುರಿತು ಟಿಪಿ ಅಶೋಕರು ವಿಸ್ತಾರವಾಗಿ ಪರಿಚಯಿಸಿದ್ದರು. ಹಿಂಬಾಲಿಸಿದಂತೆ ಇಬ್ಬರು ಪರಿಣತರು ಅದರ ಒಂದು ಕತೆಯ ವಾಚಿಕಾಭಿನಯವನ್ನೂ ಕೊಟ್ಟಿದ್ದರು. ಆ ಕೊನೆಯಲ್ಲಿ ನಾನು, ಸಂಕಲನದ ಪೂರ್ಣ ಓದನ್ನೂ ಮಾಡಿ ಅಪಾರ ಬೆರಗು, ಮೆಚ್ಚಿಗೆಯೊಡನೆ ಫೇಸ್ ಬುಕ್ಕಿನಲ್ಲಿ ಒಂದು ಟಿಪ್ಪಣಿಯನ್ನೂ ಬರೆದಿದ್ದೆ.
(ಈ ಫೇಸ್ ಬುಕ್ ಲಿಂಕ್ ಓದಿ) ಅವೆಲ್ಲಕ್ಕೆ ಶಿಖರಪ್ರಾಯವಾಗಿ ಈ ಬಾರಿ ಸ್ವತಃ ಜೆಯ ಮೋಹನ್ ಬಂದು, ಒಂದು ಅವಧಿಯಲ್ಲಿ ವೇದಿಕೆಯ ಮೇಲೆ ಸಂವಾದಕ್ಕೆ ಒಡ್ಡಿಕೊಂಡರು. ಸುಮಾರು ಎರಡು ದಿನಗಳ ಕಾಲ, ಶಿಬಿರದಲ್ಲೇ ಉಳಿದು, ಎಲ್ಲರೊಡನೆ ಸೌಮ್ಯ, ಸರಳತೆಯಲ್ಲೇ ಒಡನಾಡಿದ್ದು ಅವಿಸ್ಮರಣೀಯ.
ಜೆಯ ಮೋಹನ್ ಹುಟ್ಟಾ ಮಲೆಯಾಳಿಯಾದರೂ ಬಳಕೆಯಲ್ಲಿ ತಮಿಳಿಗ. ಅವರ ಕೃತಿಗಳ ಇಂಗ್ಲಿಷ್ ಅವತರಣಿಕೆಗೆ ಶ್ರಮಿಸುತ್ತಿರುವ ಸುಚಿತ್ರಾ ಕೂಡಾ ಜತೆಗೊಟ್ಟದ್ದರಿಂದ, ನಮ್ಮ ಹೆಚ್ಚಿನ ಕುತೂಹಲಗಳಿಗೆ ಅವರೂ ಬಾಯಿಯಾದರು.
ಜೆಯ ಮೋಹನ್ನರ ಮಗನೂ ಲೇಖಕ, ಮಗಳು ಲೇಖಕಿ ಮಾತ್ರವಲ್ಲದ ಪ್ರಕಾಶಕಿ ಕೂಡಾ. ಮೋಹನ್ನರ ವೆನ್ಮುರಸು (ಮಹಾಭಾರತ) ಜಾಗತಿಕ ಮಟ್ಟದಲ್ಲಿ ಗಾತ್ರದಲ್ಲೂ ಮಾರಾಟದಲ್ಲೂ ಅದ್ವಿತೀಯವೆನ್ನಿಸಿದೆ. ಅದಕ್ಕೆ ಪೂರ್ವಸಿದ್ಧತೆಯಲ್ಲಿ ಇವರು ಸಾಕಷ್ಟು ಪ್ರವಾಸ, ಸಂಪರ್ಕಗಳ ಮೂಲಕ ಸುಮಾರು ಮುನ್ನೂರರಷ್ಟು (ಹಲವು ಭಾಷೆಗಳಲ್ಲಿ) ಮಹಾಭಾರತದ ವಿವಿಧ ರೂಪಾಂತರಗಳನ್ನು ಸಂಗ್ರಹಿಸಿ, ಓದಿಸಿ/ ಓದಿ ಅರ್ಥೈಸಿಕೊಂಡರು. ಆ ನೆಲೆಯಲ್ಲಿ ಅವರು ಮಹಾಭಾರತದ ಗದ್ಯ ರೂಪಾಂತರಗಳಲ್ಲಿ ಸರ್ವ ಪ್ರಥಮ ಸ್ಥಾನವನ್ನು ಕನ್ನಡದ ಪರ್ವಕ್ಕೂ (ಎಸ್.ಎಲ್ ಭೈರಪ್ಪ) ಕಾವ್ಯದಲ್ಲಿ ಕರ್ಣಾಟ ಭಾರತ ಕಥಾಮಂಜರಿಗೂ (ಕುಮಾರವ್ಯಾಸ) ಕೊಟ್ಟದ್ದು ಅದ್ಭುತ, ಪರಮಾದ್ಭುತ!
ಜೆಯ ಮೋಹನರ ತಾಯಿ ಸಾಂಪ್ರದಾಯಿಕ ಒತ್ತಡಗಳಲ್ಲಿ ಔಪಚಾರಿಕ ಶಿಕ್ಷಣಾಕಾಂಕ್ಷೆಯನ್ನು ಹತ್ತಿಕ್ಕಿಕೊಂಡವರು. ಆದರೆ ಸ್ವಯಂಶಿಕ್ಷಣದಲ್ಲಿ ಅಪಾರ ಓದು ಮತ್ತು ಅಗಾಧ ಗ್ರಂಥ ಸಂಗ್ರಹ ಮಾಡಿಕೊಂಡದ್ದು ಮೋಹನರಿಗೆ ಬಹುದೊಡ್ಡ ಪ್ರೇರಣೆಯೇ ಆಗಿತ್ತು. ಇವರು ಶಾಲಾ ದಿನಗಳಲ್ಲಿ ಅನಿವಾರ್ಯತೆಗೆಂಬಂತೆ ವಿರಳ ಸಾರ್ವಜನಿಕ ಬರವಣಿಗೆ ನಡೆಸಿದರೂ ಡೈರಿ ದಾಖಲಿಸುವ ಗೀಳು ಮಾತ್ರ ಸುಮಾರು ನಾಲ್ಕು ದಶಕಗಳಿಗೂ ಮಿಕ್ಕು ಅಖಂಡವಾಗಿಯೇ ನಡೆಸಿದ್ದಾರೆ. ಮೋಹನ್ನರ ಅಪ್ಪ, ಮೂರು ಮದುವೆಯಾದ ಲೆಕ್ಕದಲ್ಲಿ, ಮೋಹನ್ನರದು ಮೂರು ಅಮ್ಮಂದಿರೂ ಅನೇಕ ಸೋದರರೂ ಇದ್ದ ದೊಡ್ಡ ಕುಟುಂಬ. ಆದರೂ ಹದಿ ಹರಯದಲ್ಲೇ ಆಪ್ತ ಗೆಳೆಯನ ಮರಣ, ಮುಂದುವರಿದು ತಂದೆ ತಾಯಿಯರ ಆತ್ಮಹತ್ಯೆಯಂಥ ದುರ್ಭರ ಪ್ರಸಂಗಗಳು ಮೋಹನ್ನರನ್ನು ದಿಕ್ಕೆಡಿಸಿ, ಮನೆ ಬಿಟ್ಟೋಡಿಸಿತ್ತು. ಸುಮಾರು ಎರಡು ವರ್ಷಗಳ ಕಾಲ ಇವರು ಭಾರತದಲ್ಲಿ ಎಲ್ಲೆಂದರಲ್ಲಿ, ಭಿಕ್ಷುಕನಾಗಿ ಸುತ್ತಿದರಂತೆ. ಮರಳಿ ಮನೆಗೆ ಬಂದ ಮೇಲೆ, ಹಲವು ವೃತ್ತಿಗಳ ಅನುಭವ, ವಿವಿಧ ಸಾಮಾಜಿಕ, ಅಧ್ಯಾತ್ಮಿಕ ಸೆಳೆತಗಳ ತುಯ್ದಾಟವಿದ್ದಂತೆ, ಒಂದು ಅಮೃತಗಳಿಗೆಯಲ್ಲಿ ಲೇಖಕನಾಗಿ ತೊಡಗಿಕೊಂಡವರು ಇಂದಿಗೂ (ಅರವತ್ಮೂರರ ಹರಯದಲ್ಲೂ) ಲೇಖನಿಗೆ ವಿರಾಮ ಕೊಟ್ಟೇ ಇಲ್ಲ. ಇವರು ಮುಖ್ಯವಾಗಿ ತಮಿಳು ಮತ್ತೆ ಮಲೆಯಾಳಗಳಲ್ಲಿ ಅನೇಕ ಸಾಹಿತ್ಯ ಪ್ರಕಾರಗಳಲ್ಲಿ (ಕತೆ, ಕಾದಂಬರಿ, ಪುರಾಣ, ಜೀವನ ಚರಿತ್ರೆ, ತತ್ವಶಾಸ್ತ್ರ, ಸಿನಿಮಾ ಕತೆ…) ಕೃತಿ ರಚಿಸಿದ್ದಾರೆ. ಅವರ ಕೃತಿಗಳು ಈಚೆಗೆ ಅನ್ಯರಿಂದ ಇಂಗ್ಲಿಷ್ ಮತ್ತಿತರ ಭಾಷೆಗಳಿಗೂ ಬರುತ್ತಿರುವುದರಿಂದ ಇವರ ಓದುಗ ಸಾಮ್ರಾಜ್ಯ ಬಹಳ ದೊಡ್ಡದು. ಕನ್ನಡದಲ್ಲಿ ಸದ್ಯ ‘ಬಹುವಚನ’ದ ಆನೆ ಡಾಕ್ಟರ್ ಮತ್ತಿತರ ಕತೆಗಳು ಅಲ್ಲದೆ, ತಮಿಳಿನ ‘ಇಜಂ ಉಲಗಂ’, (ಇಂಗ್ಲಿಷ್ ಭಾಷಾಂತರದ Abyss) ‘ತಳಾತಳ’ ಛಂದ ಪ್ರಕಾಶನ ಪ್ರಕಟಿಸಿದೆ. ಕೀರ್ತಿ ಲೋಕದಲ್ಲಿ…
ಇವರ ವಿಚಾರ ಕಮ್ಮಟಗಳು, ಸತ್ಸಂಗಾದಿಗಳು ಬಹುಜನಪ್ರಿಯವಾಗಿವೆ. ಆದರೂ ಸಮ್ಮಾನ, ಪ್ರಶಸ್ತಿಗಳಿಂದ ಇವರೆಷ್ಟು ದೂರ ಎನ್ನುವುದಕ್ಕೆ ಒಂದೇ ಸಾಕ್ಷಿ – ಭಾರತ ಸರಕಾರದಿಂದ (ಈಚಿನ ದಿನಗಳಲ್ಲಿ ಒತ್ತಿ ಹೇಳಬೇಕಾದಂತೆ) ಅಯಾಚಿತ ಪದ್ಮಶ್ರೀ ಬಂದದ್ದನ್ನೂ ಸವಿನಯ ನಿರಾಕರಿಸಿದ ಧೀಮಂತ. ಭೀಕರ ಸತ್ಯದ ‘ತಳಾತಳ’ಕ್ಕಿಳಿವ ಕಾದಂಬರಿ
ಮೋಹನ್ ಹತ್ತೊಂಬತ್ತರ ಹರಯದಲ್ಲಿ, ಅಸಾಧ್ಯ ಮಾನಸಿಕ ಬಳಲಿಕೆಯಲ್ಲಿ ಮನೆ ಬಿಟ್ಟೋಡಿದ್ದರಂತೆ. ಸುಮಾರು ಎರಡು ವರ್ಷ ಕಾಲ, ಗೊತ್ತು ಗುರಿಯಿಲ್ಲದೆ ಭಾರತಾದ್ಯಂತ ಭಿಕ್ಷುಕನಾಗಿಯೇ ಸುತ್ತಾಡಿದ್ದರಂತೆ. ಅನಂತರ ಸಿಕ್ಕ ಮಾನಸಿಕ ಸ್ಥಿಮಿತದೊಡನೆ ಊರಿಗೆ ಮರಳಿ, ವೃತ್ತಿ, ಸಂಸಾರ, ಅಪ್ರತಿಮ ಲೇಖನಗಳೊಡನೆ ಮೂರ್ನಾಲ್ಕು ದಶಕಗಳ ಕಾಲ ಬೆಳೆದರು. ಈ ಹಂತದಲ್ಲಿ ತನ್ನ ಭಿಕ್ಷುಕ ವೃತ್ತಿಯ ಅನುಭವಗಳನ್ನು ನೆನಪುಗಳಿಂದಲೇ ಜೋಡಿಸಿ ರಚಿಸಿದ ತಮಿಳು ಕಾದಂಬರಿ ‘ಇಜಂ ಉಲಗಂ’. ಅದನ್ನು ತಳಾತಳವೆಂದು, ಅಪ್ಪಟ ಕನ್ನಡದ್ದೇ ಕತೆಯೆಂಬಷ್ಟು ಶಕ್ತಿಯುತವಾಗಿ ಕನ್ನಡಿಸಿದವರು ಶಾಂತಿ ಕೆ ಅಪ್ಪಣ್ಣ. (ಛಂದ ಪ್ರಕಾಶನದ ಪ್ರಕಟಣೆ)
ತರಹೇವಾರಿ ಭಿಕ್ಷುಕರನ್ನು ‘ಜಾನುವಾರು’ಗಳಂತೇ ಸಾಕಿ, ಭಾರೀ ಜನಸಂದಣಿಯ ಸ್ಥಳಗಳಲ್ಲಿ ‘ಮೇಯಲು’ ಬಿಟ್ಟು, ಸಹಜವೆನ್ನುವಂತೆ ‘ಹಾಲು ಕರೆಯುವ’ (ಗಳಿಕೆಯನ್ನು ಕಸಿದುಕೊಳ್ಳುವ) ಕ್ರೌರ್ಯದ ಕತೆ – ತಳಾತಳ. ಅಂಥಾ ಓರ್ವ ಯಜಮಾನ – ಪಂಡಾರಂ ಎಂಬಾತನ ದೈವ ಭಕ್ತಿ, ಕುಟುಂಬ ಪ್ರೀತಿ, ವೃತ್ತಿನಿಷ್ಠೆ, ಕಾಮವಾಸನೆ, ಭಿಕ್ಷುಕ ಮಂದೆ, ಅದರ ವರ್ತನೆ…. ಎಲ್ಲವನ್ನೂ ಸಾಮಾನ್ಯರು ಅರಗಿಸಿಕೊಳ್ಳಲು ಕಷ್ಟವಾಗುವಷ್ಟು ವಿವರಗಳಲ್ಲಿ ಕಾದಂಬರಿ ಹೇಳುತ್ತದೆ. ಅಂತರ್ಜಾಲದಲ್ಲಿ ಭೀಕರ ಚಿತ್ರ ಪ್ರದರ್ಶನಕ್ಕೆ ಮುನ್ನ ಬರುವ, “ವಿಸೂ: ದುರ್ಬಲ ಹೃದಯಿಗಳು ನೋಡಬೇಡಿ” ಇಲ್ಲಿ ಬೇಕಿತ್ತು. ಪಳನಿಯ ಒಂದು ದಿನದ ಜಾತ್ರಾ ಸನ್ನಿವೇಶದ ಹಿಂದುಮುಂದಿನಲ್ಲಷ್ಟೇ ನಡೆಯುವ ಕತೆಯಿದು. ಯಾವುದೇ ಮುಚ್ಚುಮರೆಯಿಲ್ಲದ ಸಹಜ ಸಂಭಾಷಣೆಗಳಲ್ಲೇ ಅರಳುವ ಕಥಾನಕ ಸರಾಗ ಓದಿಸಿಕೊಳ್ಳುತ್ತದೆ. ಇವುಗಳ ಹಿನ್ನೆಲೆಯಲ್ಲಿ ನನ್ನ ನೆನಪಿನಾಳದ ಮೂರು ಸಂಗತಿಗಳನ್ನು ಇಲ್ಲಿ ಹೇಳಲೇಬೇಕು.
೧. ನನ್ನ ಬಾಲ್ಯದಲ್ಲಿ, ಅಂದರೆ ೧೯೫೦ರ ದಶಕ ಕೊನೆಯಲ್ಲಿ ಅಮ್ಮ “ಜಾತ್ರೆ, ಸಂತೆಗಳಲ್ಲಿ ಮಕ್ಕಳನ್ನು ಕದ್ದು, ಅಂಗವಿಕಲರನ್ನಾಗಿಸಿ, ಭಿಕ್ಷುಕರನ್ನಾಗಿ ದುಡಿಸಿಕೊಳ್ಳುವವರಿರುತ್ತಾರೆ, ಜಾಗ್ರತೆ ಜಾಗ್ರತೆ” ಎಂದು ಹೇಳುತ್ತಿದ್ದಳು.
೨. ೧೯೬೦ರ ದಶಕದಲ್ಲಿ ನಾನು ಮಾಗಡಿ ಬಳಿಯ ಬೆಗ್ಗರ್ಸ್ ಕಾಲನಿಯ ವಠಾರದಲ್ಲಿ ಅನ್ಯ ಕಾರಣಗಳಿಗಾಗಿ ಹತ್ತು ದಿನ ಕಳೆದಿದ್ದೆ. ಅದು ಭಿಕ್ಷುಕರ ಗೌರವಪೂರ್ಣ ಮರುವಸತಿಗೆಂದೇ ಸರಕಾರ ಮಾಡಿದ ವ್ಯವಸ್ಥೆ. ಅದು ಎಲ್ಲೆಲ್ಲಿನ ಭಿಕ್ಷುಕರನ್ನು ಬಲವಂತವಾಗಿ ಸೇರಿಸಿಕೊಂಡು, ಅಶನ ವಸನದೊಡನೆ ವೃತ್ತಿ ಕೌಶಲ್ಯ ಕೊಟ್ಟು ನಾಗರಿಕತೆಗೆ ಮರಳಿಸುವ ಉದಾತ್ತ ಯೋಚನೆಯಿಂದ ರೂಪುಗೊಂಡಿತ್ತು. ಆದರೆ ಮುಂದಿನಗಳಲ್ಲಿ, ಅಲ್ಲಿನ ಅಧಿಕಾರಿ ವರ್ಗ, ಬಹುತೇಕ ಸರಕಾರೀ ವ್ಯವಸ್ಥೆಗಳಂತೇ ಅನುದಾನ, ಸವಲತ್ತುಗಳನ್ನು ನುಂಗಿದ್ದಲ್ಲದೇ ಸದಸ್ಯರನ್ನು ಅನಧಿಕೃತವಾಗಿ ಭಿಕ್ಷಾಟನೆಗೆ ಬಿಟ್ಟು, ಹೆಚ್ಚುವರಿ ಆದಾಯ ಮಾಡಿಕೊಳ್ಳುತ್ತಿದ್ದಾರೆಂದು ಪತ್ರಿಕೆಗಳಲ್ಲಿ ಓದಿದ್ದೇನೆ.
೩. ೧೯೭೦ರ ದಶಕದಲ್ಲಿ ನಾನು ಮಂಗಳೂರಿನಲ್ಲಿ ನೆಲೆಸಿದ ಹೊಸತರಲ್ಲಿ, ಕಾರ್ಕಳ ಸಮೀಪದ ಅತ್ತೂರು ಇಗರ್ಜಿಯ ವರ್ಷಾವಧಿ ‘ಜಾತ್ರೆ’ (ಜನವರಿ ೨೬ರ ಆಸುಪಾಸು) ಭಾರೀ ಜನಸಂದಣಿ ಆಕರ್ಷಿಸುತ್ತಿದ್ದದ್ದು ಗಮನಿಸಿದೆ. ಕುತೂಹಲಕ್ಕೆ ಒಂದೆರಡು ವರ್ಷ ನಾನೂ ಕೆಲವು ಮಿತ್ರರೊಡನೆ ಹೋದದ್ದಿತ್ತು. ಅಲ್ಲಿ ಬಸ್ಸಿಳಿದು ಇಗರ್ಜಿಗೆ ನಡೆವ ಸುಮಾರು ಒಂದು ಕಿಮೀ ಮಾರ್ಗದ ಬದಿಗಳಲ್ಲಿ ಭೀಕರ ಸ್ವರೂಪದ ಭಿಕ್ಷುಕರು ಕಿಕ್ಕಿರಿದು, ಕರೆ ಮಾಡುತ್ತಿದ್ದರು. ವರ್ಷದ ಉಳಿದ ದಿನಗಳಲ್ಲಿ, ಈ ವಲಯದಲ್ಲೆಲ್ಲೂ ಕಾಣಿಸದ ಅಷ್ಟೊಂದು ಮಂದಿ ಭಿಕ್ಷುಕರು ಆ ದಿನಗಳಲ್ಲಿ ಎಲ್ಲಿಂದ ಬರುತ್ತಿದ್ದರೆಂದು ಅಂದು ನಾನು ಯೋಚಿಸಿಯೇ ಇರಲಿಲ್ಲ. ಈ ಮೂರು ನೆನಪುಗಳ ಮುನ್ನೆಲೆಯಲ್ಲಿ….
ನೀನಾಸಂ ಶಿಬಿರದ ಸಂವಾದದಲ್ಲಿ ಜೆಯ ಮೋಹನರಿಗೆ “ನಿಮ್ಮ ಎರಡು ವರ್ಷಗಳ ಭಿಕ್ಷಾವೃತ್ತಿಯ ವಿವರಗಳನ್ನು ದಾಖಲಿಸಿಕೊಂಡಿದ್ದೀರಾ” ಎಂದೊಂದು ಪ್ರಶ್ನೆ ಬಂದಿತ್ತು. ಅದಕ್ಕವರು ಸಣ್ಣದಾಗಿ ನಕ್ಕು “ನಾನು ಭಿಕ್ಷಾವೃತ್ತಿಯಿಂದ ಹೊರ ಬಂದೇನು ಅಥವಾ ಸಂಶೋಧನಾ ಪ್ರಬಂಧವೊಂದನ್ನು ಬರೆಯಬೇಕು ಎಂಬ ಯೋಚನೆಯೊಡನೆ ಭಿಕ್ಷುಕನಾದವನೇ ಅಲ್ಲ…” ಎಂದಿದ್ದರು. ಹಾಗಿರುವಾಗ ಆ ಕ್ರೂರ ವ್ಯವಸ್ಥೆಯನ್ನೇ ನಿರಾಕರಿಸುವಂತೆ, ಸಾಮಾನ್ಯರ ಆಸಕ್ತಿಯನ್ನು ಪೂರೈಸುವ ಕಾದಂಬರಿ ರೂಪದ ಬದಲಿಗೆ, ಸಮಾಜ ಶಾಸ್ತ್ರಿಗಳಿಗೆ ಒಗ್ಗುವ ಸಣ್ಣ ಪ್ರಬಂಧವಷ್ಟೇ ಬರೆದಿದ್ದರೆ ಸಾಕಾಗುತ್ತಿರಲಿಲ್ಲವೇ?
ಮೋಹನರ ಕತೆಯೊಂದರ ಕನ್ನಡ ಅನುವಾದದ ವಾಚಿಕಾಭಿನಯವನ್ನು ಕಲಾವಿದರಿಬ್ಬರು ಚನ್ನಾಗಿಯೇ ಪ್ರಸ್ತುತಪಡಿಸಿದರು.
ಸಮಾರೋಪ: ಈ ಬಾರಿ ಶಿಬಿರದ ಭಾಗವಾಗಿ ರಂಗವೇರಿದ ಚಟುವಟಿಕೆಗಳಿಗೆ ಹೋಲಿಕೆಯಲ್ಲಿ, ಭಾಷಣ ಸಂವಾದಗಳು ಹೆಚ್ಚಾದಂತೆ ನನಗನ್ನಿಸಿತು.
ಬಿಡಿಸಿ ಹೇಳುವುದಿದ್ದರೆ, ಸಾರ್ವಜನಿಕರಿಗೂ ತೆರೆದ ಐದು ನಾಟಕಗಳನ್ನುಳಿದು ಕಲಾಚಟುವಟಿಕೆಗಳು ಕಡಿಮೆಯಾಯ್ತು. ಅದೇ ತ್ರಿವೇದಿ, ಹನೂರು, ಚೆನ್ನಿ, ಮೋಹನ್, ಶ್ರಯುನಾ, ಅಭಿಷೇಕ್, ವಿದ್ಯಾ, ಹೇಮಲತಾ, ಚುಕ್ಕಿ, ಜಯದೇವ್, ಕೌಲಗಿ, ಶರ್ಮ, ಕಳವೆ, ನಿತ್ಯಾನಂದ, ವಿಕ್ರಂ, ಅಕ್ಷರ, ಸತೀಶ್, ವಿಜಯ್… ಮುಂತಾದವರಲ್ಲಿ ವಿಷಯ ಹಾಗೂ ಅನುಭವ ವೈವಿಧ್ಯಗಳಿದ್ದರೂ ನನಗೆ ಒಂದು ಹಂತದಲ್ಲಿ ಕಾಲೇಜು ಪ್ರವಚನಗಳ ಏಕತಾನತೆಯನ್ನೇ ಮೂಡಿಸಿತು.
ನೀನಾಸಂ ಶಿಬಿರಗಳಲ್ಲಿ ನಿರ್ವಹಣೆ, ಸ್ವಾಗತ, ಭಾಗಿಗಳ ಅನಿಸಿಕೆ, ವಂದನಾರ್ಪಣೆಯಂಥ ವೇಳೆಗಳೆವ ಕಲಾಪಗಳು ಇರುವುದಿಲ್ಲ, ಇದ್ದರೂ ಚುಟುಕಾಗಿರುತ್ತದೆ. ಹಾಗೇ ದಿನದ ಕೊನೆಯ ಕಲಾಪವಾಗಿ ನೀನಾಸಂ ಕಸಂಮಾ – ೨೫ರ ಸಭಾ ಕಲಾಪಗಳಿಗೆ ದೀಪ ಬೆಳಗಿ ನಾಂದಿ ಹಾಡಿ, ಐದು ದಿನಗಳ ಉದ್ದಕ್ಕೂ ಕ್ರಿಯಾತ್ಮಕವಾಗಿ ಭಾಗಿಯಾದ ಸತೀಶ್ ಅಡೇಕರ್ (ಮರಾಠೀ ರಂಗಭೂಮಿಯ ಹಿರಿಯ ವಿದ್ವಾಂಸ) ಮತ್ತು ಕನ್ನಡದವರೇ ಆದ ಎಸ್ ಆರ್ ವಿಜಯಶಂಕರ್ (ಇಂಗ್ಲಿಷ್ ಪ್ರಾಧ್ಯಾಪಕ, ಕನ್ನಡ ವಿಮರ್ಶಕ) ಸಮಾರೋಪದ ನುಡಿಗಳನ್ನಾಡಿದ್ದು ಅರ್ಥಪೂರ್ಣವಾಗಿತ್ತು.
(ಮುಂದುವರಿಯಲಿದೆ)

























0 Comments