(ಕಸಂಮಾ ೨೦೨೫ ಭಾಗ ಮೂರು)
ಹಿಂದಿನ ಎರಡು ಭಾಗಗಳಲ್ಲಿ ಪ್ರಾಸಂಗಿಕವಾಗಿ ಉಲ್ಲೇಖಕ್ಕೆ ದಕ್ಕದ ರಂಗ ಪ್ರಸ್ತುತಿಗಳ ಕುರಿತು ಇಲ್ಲಿ ಹೇಳುತ್ತೇನೆ. ಅವುಗಳಲ್ಲಿ ಮೊದಲು ಹೇಳಲೇಬೇಕಾದವರು…
ವಿದ್ವತ್ ಮತ್ತು ಪ್ರಾಯದಲ್ಲಿ ಹಿರಿಯರಾಗಿಯೂ ಉತ್ಸಾಹದಲ್ಲಿ ಪುಟಿಯುತ್ತಿದ್ದ ಠುಮ್ರಿ ಗಾಯಕಿ ವಿದ್ಯಾರಾವ್:
ಇವರು ಸಂಕೋಚದಲ್ಲೇ “ಹಿರಿಯ ಕವಿ ಪಂಜೆ ಮಂಗೇಶ ರಾಯರ ಮೊಮ್ಮಗಳಾಗಿ, ಸಿನಿ-ನಟಿ ಅದಿತಿ ರಾವ್ ಅಮ್ಮನಾಗಿ, ನಾನೊಂದು ಇರುಕಿನಲ್ಲಿದ್ದೇನೆ…” ಎಂಬ ವಾಸ್ತವವನ್ನೇ ತಮಾಷೆಯಾಗಿಸಿ, ಸಂಗೀತ ಸಂವಾದಕ್ಕಿಳಿದರು. ಹಿರಿಯ ಠುಮ್ರೀ – ದಾದ್ರಾ (ಹಿಂದೂಸ್ತಾನೀ) ಗಾಯಕಿ ವಿದ್ಯಾರಾವ್ ಅವರಿಗೆ ಸುಯೋಗ್ಯ ಪೀಠಿಕೆ, ಮುಂದೆ ಅರ್ಥಪೂರ್ಣ ಸವಾಲುಗಳು, ಉತ್ತರಿಸುವಲ್ಲಿ ಪ್ರಾಯ ಸಹಜವಾದ ಮರೆವು ಕಾಡಿದಲ್ಲೆಲ್ಲ ಎತ್ತುಗಡೆಯ ನುಡಿಗಳನ್ನು ಪೋಣಿಸಿದವರು ದೀಪಾ ಗಣೇಶ್.
ನೀನಾಸಂ ಕಲೆಗಳ ಸಂಗಡ ಮಾತುಕತೆ ೨೦೨೨ರಲ್ಲಿ, ಹಿಂದೂಸ್ತಾನೀ ವಿದ್ವಾಂಸೆ ಪೂರ್ಣಿಮಾ ಭಟ್ ತನ್ನ ಪೂರ್ಣ ಸಂಗೀತ ಕಛೇರಿಯೊಡನೇ ಸಂವಾದ ನಡೆಸಿಕೊಟ್ಟಿದ್ದರು. ಆಗ ಪ್ರೇಕ್ಷಕರೊಬ್ಬರಿಂದ ಠುಮ್ರಿ ಕೋರಿಕೆ ಬಂದಿತ್ತು. ಆಗ ಪೂರ್ಣಿಮಾ ನಸುನಗುತ್ತಲೇ ನುಡಿದಿದ್ದರು (ನನ್ನದೇ ವಾಕ್ಯರಚನೆ) “ಸಾಂಪ್ರದಾಯಿಕ ಹಿಂದೂಸ್ತಾನೀ ಗಾನ ಭೈಠಕ್ಕುಗಳಲ್ಲಿ ಠುಮ್ರಿ ಹಾಡುವುದನ್ನು ಲಜ್ಜೆಗೇಡಿತನ ಎಂದೇ ಭಾವಿಸುತ್ತಾರೆ…” ಆದರೂ ಕೃಷ್ಣನಲ್ಲಿ ರಾಧೆಯ ಪ್ರೇಮ ಸಲ್ಲಾಪದ, ಆಕರ್ಷಕ ಹಾಡನ್ನು ಪ್ರಸ್ತುತಪಡಿಸಿ ನಮ್ಮೆಲ್ಲರನ್ನೂ ಭಾವಪರವಶಗೊಳಿಸಿದ್ದರು. (ಕೆಲವು ವಿಡಿಯೋ ತುಣುಕುಗಳ ಸಹಿತ ಟಿಪ್ಪಣಿಗೆ ನೋಡಿ: ನಾಟಕಗಳ ಬಹುರೂಪ ಮತ್ತು ಸಂಗೀತ ) ಆದರೆ….
ವಿದ್ಯಾ ರಾವ್ ಅವರ ಮಾತುಗಳನ್ನು ನಾನು ಗ್ರಹಿಸಿದಂತೆ (ಸ್ವಲ್ಪ ತಪ್ಪಿದ್ದರೆ ಕ್ಷಮಿಸಿ), ಹಿಂದೂಸ್ತಾನೀ ಗಾಯನದ ಪ್ರಧಾನ ಭೂಮಿಕೆ ರಾಗ ವಿಸ್ತಾರವನ್ನೇ ಲಕ್ಷ್ಯವಾಗಿರಿಸಿಕೊಳ್ಳುವ ಖಯಾಲ್, ದ್ರುಪದ್‍ಗಳದ್ದು. ಉಳಿದ ಶಾಖೆಗಳಲ್ಲಿ ಸಾಹಿತ್ಯ ಪ್ರಧಾನ. ಅವುಗಳಲ್ಲೂ ಠುಮ್ರಿಗಳಲ್ಲಿ ಪ್ರೇಮಭಾವ, ದಾದ್ರಾಗಳಲ್ಲಿ ಜನಪದೀಯ ಬಿರುಸು ಮತ್ತು ಭಜನ್‍ಗಳಲ್ಲಿ ಭಕ್ತಿಯ ಸೆಳಕುಗಳು ಹೆಚ್ಚು. ಠುಮ್ರಿಗಳ ಸಾಹಿತ್ಯ ಬಹುತೇಕ ಪುರುಷರನ್ನು ಆಕರ್ಷಿಸುವ ಭಾವವುಳ್ಳವುಗಳಾದ್ದರಿಂದ ವೇಶ್ಯಾಗೃಹಗಳಲ್ಲಿ ಅನುರಣಿಸುತ್ತಿದ್ದವು. ಸಹಜವಾಗಿ ಬಹಳ ನಿರುತ್ತೇಜಕ ಒತ್ತಡಗಳಲ್ಲೂ ಹಾಡಿಕೆಯ ಮೋಹವನ್ನೇ ಆಶಿಸಿ, ಬೆಂಬತ್ತಿ, ಮುಖ್ಯವಾಗಿ ವಿಖ್ಯಾತ ಗಾಯಕಿ ನೈನ ಕುಮಾರಿಯವರ ಮೂಲಕ ವಿದ್ಯಾರಾವ್ ಠುಮ್ರಿ ಒಲಿಸಿಕೊಂಡರು. ಮತ್ತು ತಮ್ಮ ಜೀವನದುದ್ದಕ್ಕೂ ಅದಕ್ಕೆ ಹತ್ತಿದ ಕಳಂಕವನ್ನೂ ತೊಡೆಯುತ್ತ ಬಂದಿದ್ದಾರೆ. ವಿದ್ಯಾರಾವ್ ಅಸಂಖ್ಯ ಸಂಗೀತ ಕಚೇರಿಗಳನ್ನು ಕೊಟ್ಟಿದ್ದಾರೆ. ಸಂಗೀತ ಶಾಸ್ತ್ರದ ಅಧ್ಯಾಪಕರಾಗಿ, ಲೇಖಕಿಯಾಗಿ (Heart to Heart- Remembering Nainaji ಇವರ ಒಂದು ಪುಸ್ತಕ) ನಟಿಯಾಗಿಯೂ ಸಾಕಷ್ಟು ಕೆಲಸಗಳನ್ನು ಮಾಡಿದ್ದಾರೆ.
ತಿರುಗಾಟದ ಎರಡು ನಾಟಕಗಳು:
ನೀನಾಸಂನ ವಾರ್ಷಿಕ ಶಿಬಿರ ಎಂದರೆ ಎರಡು ಹೊಸ ರಂಗ ಪ್ರಯೋಗಗಳು ಎಂದೇ ಅರ್ಥ. ಹಾಗೆ ಈ ಬಾರಿ ರಂಗವೇರಿದ ನಾಟಕಗಳಲ್ಲಿ ಮೊದಲನೆಯ ದಿನದ್ದು ಹೃದಯದ ತೀರ್ಪು, ನಿರ್ದೇಶಕ ಗಣೇಶ್ ಎಂ. ಕತೆ ಕನ್ನಡದ್ದೇ ಆದರೂ ಇಂಗ್ಲಿಷ್ ಅನುವಾದದಲ್ಲಿ ಲೇಖಕಿ ಬಾನು ಮುಷ್ತಾಕ್ ಅವರಿಗೆ ಬೂಕರ್ ಪ್ರಶಸ್ತಿ ಗೆದ್ದುಕ್ಪೊಟ್ಟ ಹಾರ್ಟ್ ಲ್ಯಾಂಪಿನ ಒಂದು ಎಸಳು. ಅದೇ ಸಂಕಲನದ ಇನ್ನೊಂದು ಕತೆ – ಎದೆಯ ಹಣತೆಯನ್ನು, ಇದೇ ನಿರ್ದೇಶಕರು ಮೂರು ತಿಂಗಳ ಹಿಂದೆಯೇ ರಂಗಕ್ಕೆ ತಂದಿದ್ದರು. ಆದರೀಗ ವಾರ್ಷಿಕ ಒಪ್ಪಂದದ ಮೇಲೆ ಬರುವ ಹೆಚ್ಚು ಪರಿಣತ ನಟರು, ಸಮಾನ ವಸ್ತುವಿನೊಡನೆ ಒಂದು ಪ್ರಯೋಗ ನಡೆಸಿದ ಅನುಭವದ ನಿರ್ದೇಶಕರು ಎಂದು ನನಗೆ ನಿರೀಕ್ಷೆ ಹೆಚ್ಚಿತ್ತು. ನಿರಾಶೆ ಮೂಡಿಸಿತು. ಸಾಮುದಾಯಿಕ ಒತ್ತಡಗಳನ್ನು ಮಾನವೀಯ ನೆಲೆಯಲ್ಲಿ ನಿರ್ವಹಿಸಲು ಹೊರಟು, ವಿಷಾದಕ್ಕಿಂತ ವಿನೋದಕ್ಕೆ ಒತ್ತು ಹೆಚ್ಚಾದಂತೆ ತೋರಿತು. ಇದು ವಸ್ತುವಿನ ಅಥವಾ ಅನ್ಯಮತದ ಮಿತಿ ಎಂದು ನನಗನ್ನಿಸಲಿಲ್ಲ. ‘ಜತೆಗಿರುವನು ಚಂದಿರ’ ಭಿನ್ನ ನಿರ್ದೇಶಕರುಗಳೊಡನೆ, ಹಲವು ಕಾಲ ಘಟ್ಟಗಳಲ್ಲೂ ರಂಗದಲ್ಲಿ ಮೆರೆದು, ನೋಡಿದೆಲ್ಲರ ಮನ ತಟ್ಟಿದ್ದನ್ನು ಇಲ್ಲಿ ನೆನೆಪಿಸಿಕೊಳ್ಳಬಹುದು.
ಮಲಯಾಳಂ ನಾಟಕಕಾರರಲ್ಲಿ ಕೀರ್ತಿಶೇಷ ಜಿ. ಮೋಹನ್ ಪಿಳ್ಳೆ ಹೆಸರಾಂತವರೇ. ಅವರ ‘ಅವತರಣಂ ಭ್ರಾಂತಾಲಯಂ’ (ಹುಚ್ಚಾಸ್ಪತ್ರೆಯ ಕತೆ) ನಾಟಕವನ್ನು ಕನ್ನಡಕ್ಕೆ ತಂದ ನಾ. ದಾಮೋದರ ಶೆಟ್ಟರೂ ಹಿರಿಯ ರಂಗ ಸಂಗಾತಿಯೇ. ಪ್ರಸ್ತುತ ಪ್ರಯೋಗಕ್ಕೆ ಪ್ರತಿಭಾ ಮುಪ್ಪುರಿ ಒದಗಿಸಿದವರು ಹಿರಿಯ ಮತ್ತು ಅನುಭವೀ ನಿರ್ದೇಶಕ ಶಂಕರ ವೆಂಕಟೇಶ್ವರನ್. ಶಂಕರ್ ಅನ್ಯ ಭಾಷಿಕರಾದರೂ ಈ ಹಿಂದೆ ನೀರಿನ ನಿಲುದಾಣ ಮತ್ತು ವ್ಹೆನ್ ದ ಡೆಡ್ ಅವೇಕನ್ ಎಂಬೆರಡು, ಬಹುತೇಕ ಮಾತಿಲ್ಲದ ಮತ್ತು ಅತಿ ನಿಧಾನಗತಿಯ ವಿಶಿಷ್ಟ ರಂಗ ಪ್ರಯೋಗಗಳನ್ನು ತಂದು ಕನ್ನಡಿಗರಿಗೆ ಪರಿಚಿತರೇ ಇದ್ದಾರೆ. ಆ ಎರಡೂ ಪ್ರಯೋಗಳನ್ನು ಮೀರಿದಂತೆ ಈ ಪ್ರಯೋಗದಲ್ಲಿ ಮಾತು, ಗತಿಗಳು ಧಾರಾಳ ಮತ್ತು ಚುರುಕೇ ಇವೆ. ಸಾಲದ್ದಕ್ಕೆ ಹುಚ್ಚಾಸ್ಪತ್ರೆಯ ಕಥಾ ವಸ್ತೂ ವಿಶಿಷ್ಟವೇ ಆಗಿದೆ. ಹಾಗಿದ್ದೂ ಈ ಪ್ರಯೋಗ ಪರಿಣಾಮ ಬೀರುವಲ್ಲಿ ವಿಫಲವಾಗಿದೆ.
ಪ್ರತಿ ಸಲದಂತೆ, ಸಣ್ಣ ರಂಗ ಪ್ರಸ್ತುತಿಗಳಿಗೆ ಅಲ್ಲಲ್ಲೇ, ದಿನದ ಕೊನೆಯ ಮಹಾಪ್ರಸ್ತುತಿಗಳಿಗೆ ಮರುದಿನದ ಮುಂಜಾನೆಯ ಮೊದಲ ಅವಧಿಯಲ್ಲಿ, ನಿರ್ದೇಶಕರು ಮತ್ತು ನಟರ ಸಮಕ್ಷಮದಲ್ಲೇ ಪ್ರತಿಕ್ರಿಯಾ ಅವಕಾಶಗಳು ಮುಕ್ತವಾಗಿದ್ದವು. ಈ ಬಾರಿ ಶಿಬಿರಾರ್ಥಿಗಳಲ್ಲಿ ಯುವ ಸಂಖ್ಯೆಯೂ ದೊಡ್ಡದೇ ಇತ್ತು. ಆದರೆ ಅರ್ಥಪೂರ್ಣ ಭಾಗೀದಾರಿಕೆ ಸಾಲದೆನ್ನಿಸಿತು. (ಹೃದಯ ತೀರ್ಪು ನಾಟಕದ ವಿಷಾದಪೂರ್ಣ ಸನ್ನಿವೇಶದಲ್ಲಿ ಸಣ್ಣದಾಗಿ ಮತ್ತು ಸಹಜವಾಗಿಯೇ ಸುಳಿದ ಬಾಲಭಾವಕ್ಕೆ ಬಹು ಮಂದಿಯ ನಗೆ ಚಪ್ಪಾಳೆಗಳು ಮೊರೆದವು. ಸಭಿಕರಲ್ಲಿ ಒಬ್ಬರಾಗಿ ಕುಳಿತಿದ್ದ ವಿದ್ಯಾ ಹೆಗಡೆ “ಛೆ ಇಲ್ಲಿ ನಗುವುದಲ್ಲ” ಎಂದು ಸಣ್ಣದಾಗಿಯೇ ಉದ್ಗರಿಸಿದ್ದರು!)
ಮಾತಿನ ಚಪ್ಪರ ಯಶಸ್ವಿಗೊಳಿಸಿದ ವನ ದಹನ
ನಾಲ್ಕನೇ ದಿನದ ಪೂರ್ವಾಹ್ನದ ಪರಿಣತರ ಮಾತುಗಳಲ್ಲಿ ನಾವೆಲ್ಲ ವನ್ಯ ಪರಿಸರವನ್ನು ಕಾಯ್ದುಕೊಳ್ಳುವ ಕಾಳಜಿ ಹೆಚ್ಚಿಸಿಕೊಂಡಿದ್ದೆವು. ಇನ್ನೂ ಹೆಚ್ಚಿನದ್ದರ ನಿರೀಕ್ಷೆಯಲ್ಲಿ, ಅನಿವಾರ್ಯವಾದ ಊಟವನ್ನಷ್ಟೇ ಮಾಡಿ ಬಂದರೆ, ಎದುರಾದ ಪ್ರಸಂಗ ವನದಹನದ್ದು. ವಿಹಾರಾರ್ಥ ಹೊರಟಿದ್ದ ದೇವರದೇವನಾದ ಶ್ರೀಕೃಷ್ಣ (ಗೋರಮನೆ ಮಂಜುನಾಥ) ಮತ್ತು ಮೂರು ರಾಯರ ಗಂಡ ಅರ್ಜುನರಿಗೆ (ಪವನ್ ಕಿರಣಕೆರೆ), ಅರಗಿಸಿಕೊಳ್ಳಲಾಗದಷ್ಟನ್ನು ತಿಂದು, ಅಜೀರ್ಣಪೀಡಿತನಾದ ಅಗ್ನಿ ಶರಣಾಗಿದ್ದ. ತನ್ನ ಪೀಡೆಗೆ ಅಪೂರ್ವ ಖಾಂಡವವನವನ್ನು, ಸಕಲ ಜೀವಾಜೀವಗಳ ಸಹಿತ ಭಕ್ಷಿಸುವುದೇ ಮದ್ದಾಗಿ ಕರುಣಿಸಲು ಒಪ್ಪಿಸಿದ್ದ. ಪರೋಕ್ಷ ಶುಲ್ಕವೆಂಬಂತೆ ಸುಯೋಗ್ಯ ಯುದ್ಧ ಸಾಮಗ್ರಿಗಳನ್ನೂ ಒದಗಿಸಿದ್ದ.
ನರನಾರಾಯಣರ ಒಪ್ಪಿಗೆಯೊಡನೆ ಅಗ್ನಿ ದಹನಕ್ರಿಯೆಗೆ ತೊಡಗಿದ್ದೇ ತೊಡಕಾಗಿ ಬಂದವ ದೇವೇಂದ್ರ (ರಾಧಾಕೃಷ್ಣ ಕಲ್ಚಾರ್). ಖಾಂಡವವನ ದೇವೇಂದ್ರನ ಗೆಳೆಯ ತಕ್ಷಕನ ವಾಸಸ್ಥಾನ. ಸಹಜವಾಗಿ ದೇವೇಂದ್ರ ಮಳೆಗರೆದು, ಅಗ್ನಿಯನ್ನು ನಿರುತ್ತೇಜನಗೊಳಿಸಲು ಪ್ರಯತ್ನಿಸಿದ. ಆದರೆ ಶಪಥಬದ್ಧವಾದ ಭಾವಜೋಡಿ ಬಾಣದ ಚಪ್ಪರದಲ್ಲಿ ನೀರನ್ನು ತಡೆದು, ಅತುಲ ಪರಾಕ್ರಮದಲ್ಲಿ ಯಾವುದೂ ಬದುಕುಳಿಯದ ಎಚ್ಚರವಹಿಸಿ, ವನದಹನ ಪೂರೈಸಿಕೊಟ್ಟರು. ಪ್ರತ್ಯಕ್ಷರಾದ ಮೂವರಿಗೆ ಬಡಗು ತಿಟ್ಟಿನ ರಾಗಗಳಲ್ಲಿ ಸೂಚನೆಗಳನ್ನು ಕೊಟ್ಟ ಭಾಗವತ (ಪರಮೇಶ್ವರ ಹೆಗಡೆ), ನಡೆ ತೋರಿದ ಮದ್ದಳೆಗಾರ (ನಾಗಭೂಷಣ), ಮತ್ತು ವೀರರಸ ಉಕ್ಕಿಸಿದ ಚಂಡೆಯವರಿಂದ (ಭಾರ್ಗವ) ಶಿಬಿರಾರ್ಥಿಗಳಿಗೆ ಹೊಸದೇ ರಸಭೋಜನವಾಯ್ತು.
ಮಹಾಭಾರತವೆಂಬ ಮಹಾಚಪ್ಪರದಡಿಯಲ್ಲಿ, ಪುರಾಣ ಕಾಲದ ಸವಾಲುಗಳಿಗೆ ಪರಿಹಾರವಾಗಿ ನಿಂತ ಮಂಟಪ – ಖಾಂಡವ ವನ ದಹನ. ಆದರೆ ಕಾಲಾಂತರದಲ್ಲಿ (ಅಂದರೆ ಇಂದಿನ ತುರ್ತಿಗೆ), ಸಂದರ್ಭೋಚಿತ ತಿದ್ದುಪಡಿಗಳನ್ನು ಸೇರಿಸುವ ಜವಾಬ್ದಾರಿಯಲ್ಲಿ, ಕೊನೆಯಲ್ಲಿ ಬಂದ ದೇವೇಂದ್ರ (ಅರ್ಥದಾರಿ) ಸೇರಿಸಿದ ವನ ಉಳಿಸಿಕೊಳ್ಳುವ ನುಡಿಯನ್ನು (ಮೂಲ ಪ್ರಸಂಗ ನ್ಯಾಯದಲ್ಲಿ ಪ್ರಕ್ಷಿಪ್ತ ಎನ್ನಿಸಿಕೊಂಡರೂ) ಪ್ರಜ್ಞಾವಂತರು, ಊಟಮುಗಿಸಿ ಎಲೆ ಬಿಟ್ಟೇಳುವಾಗ ಉಪ್ಪಿನ ಕಾಯಿ ನೆಕ್ಕಿಕೊಳ್ಳುವ ಸಂತೋಷದಲ್ಲೇ ಚಪ್ಪರಿಸಿಕೊಂಡೆವು. ದೃಢ ಕಥಾ ಹಂದರದ ಮೇಲೆ, ಕ್ಷಣ ಸ್ಪೂರ್ತಿಯ ಮಾತುಗಳನ್ನು, ಸಂದುಳಿಯದಂತೆ ಹೊದಿಸಿ ಕಟ್ಟಿದ ಮಂಟಪ (ತಾಳ ಮದ್ದಳೆ), ಕನಿಷ್ಠ ಆರು ದಶಕಗಳ ವೀಕ್ಷಣಾನುಭವವುಳ್ಳ ನನಗೇ ಹೊಸ ಸಂತೋಷವನ್ನು ಕೊಟ್ಟಿತು. ಇನ್ನು ಈ ರಂಗಪ್ರಕಾರ ಚಾಲ್ತಿಯಲ್ಲಿಲ್ಲದ ವಲಯಗಳಿಂದ ದೊಡ್ಡ ಸಂಖ್ಯೆಯಲ್ಲೇ ಬಂದಿದ್ದ ಶಿಬಿರಾರ್ಥಿಗಳಿಗೆ ಸುಮಾರು ಒಂದೂವರೆಗಂಟೆಯ ಈ ಕಲಾನುಭವ ಹುಟ್ಟಿಸಿದ ಬೆರಗು, ಸಂತೋಷಗಳು ಅದೆಷ್ಟು ದೊಡ್ಡದಿರಬಹುದು; ಕೊನೆಯಲ್ಲಿ ಮೊಳಗಿದ ಚಪ್ಪಾಳೆ ಕೆಲಕಾಲ ಕಡಿಯಲೇ ಇಲ್ಲ!
ಮರಾಠೀ ರಂಗಭೂಮಿಯೊಡನೆ ಸುಭದ್ರಾ ಪರಿಣಯ
ಕಳೆದ ವರ್ಷದ ಅಂದರೆ, ಮಾತುಕತೆ – ೨೪ರ ಸಮಾರೋಪ ನುಡಿಗಳನ್ನಾಡಿದ ಸುನೀಲ್ ಶಾನಭಾಗ್, ಅಂದಿನ ತಿರುಗಾಟದ ಒಂದು ನಾಟಕ – ಅಂಕದ ಪರದೆಯ ಮೂಲ ಲೇಖಕ ಭಡ್ಕಮ್ಕರ್ ಮತ್ತು ಅದರ ಕನ್ನಡ ರೂಪವನ್ನು ತಿರುಗಾಟಕ್ಕೆ ನಿರ್ದೇಶಿಸಿ ಕೊಟ್ಟ ಪನಾರಸೆಯವರೆಲ್ಲ ಮರಾಠೀ ರಂಗಭೂಮಿಯವರು. ಅಂದು ಅವರೆಲ್ಲ ಪ್ರಾಸಂಗಿಕವಾಗಿ ಉಲ್ಲೇಖಿಸುತ್ತಿದ್ದ ಮರಾಠಿಯ ಜನಪ್ರಿಯ, ಸಂಗೀತ ನಾಟಕ ತಂಡವೊಂದು ಈ ಬಾರಿ ನಾಲ್ಕನೇ ದಿನದ ಪ್ರಧಾನ ನಾಟಕವಾಗಿ ‘ಸಂಗೀತ ಸೌಭದ್ರ’ವನ್ನು (ಮರಾಠಿಯಲ್ಲೇ) ಪ್ರದರ್ಶಿಸಿದರು. ವಾಸ್ತವದಲ್ಲಿ ನಮಗೆಲ್ಲಾ ತಿಳಿದ ಸುಭದ್ರಾ ಪರಿಣಯದ ಪ್ರಸಂಗವೇ ಇದಾದ್ದರಿಂದ, ಸಂಭಾಷಣೆಯ ಸೂಕ್ಷ್ಮಗಳನ್ನುಳಿದು ಪ್ರದರ್ಶನವನ್ನು ಅನುಭವಿಸಲು ಏನೂ ತೊಂದರೆಯಾಗಲಿಲ್ಲ. ಪ್ರತಿ ಪಾತ್ರವೂ ಮಾತುಗಳನ್ನು ಗಾನವಾಗಿ ಹರಿಸುತ್ತಿದ್ದ ಪರಿ, ಕನ್ನಡದ ಕಂಪೆನಿ ನಾಟಕಗಳಂತೇ ಮನೋರಂಜಕವಾಗಿತ್ತು. ಕನ್ನಡದಲ್ಲೇ ಓದು, ರಂಗ ಪ್ರದರ್ಶನಗಳಲ್ಲಿ ಕಂಡ ಭಿನ್ನ ಪಾಠಾಂತರಗಳನ್ನು ಅರ್ಥೈಸಿಕೊಂಡ ಮನಸ್ಸಿಗೆ ಇಲ್ಲಿನ ರೂಪವೂ ಅಪ್ಯಾಯಮಾನವೇ ಆಗಿತ್ತು. ಈ ರಂಗಪ್ರಕಾರದ ಹೆಚ್ಚಿನ ತಿಳುವಳಿಕೆಗೆ….
ಮರುದಿನದ ಮೊದಲ ಕಲಾಪದಲ್ಲಿ, ನಾಟಕದ ಕುರಿತ ಪ್ರತಿಕ್ರಿಯೆಗಳ ಅವಧಿಯನ್ನು ಪ್ರಾತ್ಯಕ್ಷಿಕೆ ಮತ್ತು ಸಂವಾದ ಕಲಾಪವನ್ನಾಗಿಯೇ ರೂಪಿಸಿದ್ದು ಅರ್ಥಪೂರ್ಣವಾಗಿತ್ತು. ತಂಡದ ಪ್ರಧಾನ ಕಲಾವಿದ (ಕೃಷ್ಣ ಪಾತ್ರಧಾರಿ) – ಚಾರುದತ್ತ ಆಫಳೆ, ಹಾರ್ಮೋನಿಯಮ್ಮಿಗೆ ಮಂಡಳಿಯದೇ ಕಲಾವಿದ – ಸತೀಶ್ ಅರೇಕಲ್ ಮತ್ತು ತಬಲಾಕ್ಕೆ ನೀನಾಸಂನ ಬಹುವಾದ್ಯ ಪಂಡಿತ ಅರುಣ್ ಮಾಸ್ಟರ್ರನ್ನೇ ಬಳಸಿಕೊಂಡು ಕಲಾಪವನ್ನು ಹೃದ್ಯವಾಗಿಸಿದರು.
ಮರಾಠೀ ಜನಪದದಲ್ಲಿ ಈ ಸಂಗೀತ ನಾಟಕವಿರಲಿಲ್ಲ. ೧೮೮೦ರ ಸುಮಾರಿಗೆ ಸಾಂಗ್ಲಿಯಲ್ಲಿದ್ದ, ಕನ್ನಡ ಮೂಲದ ಅಣ್ಣಾ ಸಾಹೇಬ್ ಕಿರ್ಲೋಸ್ಕರರು ಇದನ್ನು ಹುಟ್ಟು ಹಾಕಿದರು. ಅವರಿಗೆ ದೊಡ್ಡ ಪ್ರೇರಣೆ ಸಿಕ್ಕಿದ್ದು ಸಾಂಗ್ಲಿಗೆ ಹೋಗಿದ್ದ ಯಕ್ಷಗಾನ ಪ್ರಯೋಗದಿಂದ ಎನ್ನುವುದು ಸಣ್ಣ ಮಾತಲ್ಲ. ಇಂದು ಮರಾಠೀ ಸಂಗೀತ ನಾಟಕಗಳಲ್ಲಿ ಹಾಡುಗಳಿಗೆ (ಯಕ್ಷಗಾನ ರಾಗಗಳಂತೆ) ಮಟ್ಟುಗಳ ಬಿಗಿತವಿಲ್ಲ. ಅದರಲ್ಲಿ ದಕ್ಷಿಣಾದಿ ಮತ್ತು ಉತ್ತರಾದಿ ರಾಗಗಳ ಪ್ರಯೋಗಗಳು ಧಾರಾಳ ಇವೆಯಂತೆ. ಉಳಿದಂತೆ ಹಿಮ್ಮೇಳ, ಅಭಿನಯ, ಚಲನೆ (ಕುಣಿತ ಬಹುತೇಕ ಇಲ್ಲವೇ ಇಲ್ಲ), ವೇಷ ಭೂಷಣ, ರಂಗ ಪರಿಕರಾದಿಗಳಲ್ಲೂ ಭಾರೀ ಮಡಿವಂತಿಕೆ ಇಲ್ಲ. ಆದರೂ ತಮ್ಮ ಯಶಸ್ಸಿಗೆ ಕಾರಣವನ್ನು ಚಾರುದತ್ತ ಆಫಳೆ ತಮ್ಮ ತರಬೇತಿನ ಶಿಸ್ತಿನಲ್ಲಿರುವುದನ್ನು ಸೋದಾಹರಣವಾಗಿ ವಿವರಿಸಿ, ಜನಮನ ಗೆದ್ದರು.
ಶಿಬಿರದ ಕೊನೆಯ ಕಲಾಪ:
ಶಿವರಾಮ ಕಾರಂತ ರಂಗ ಮಂದಿರದ ‘ಮಹಾ ಪ್ರದರ್ಶನ’ಗಳಲ್ಲಿ ಕೊನೆಯದು, ನಿರ್ದಿಗಂತ ನಿರ್ಮಿತ, ಕೇರಳದ ಲಿಟ್ಲ್ ಅರ್ತ್ ಸ್ಕೂಲ್ ಆಫ್ ಥಿಯೇಟರ್ ಅರ್ಪಿಸಿದ ನಾಟಕ “ಕುಹೂ…”. ಇದರ ಪ್ರಥಮ ಪ್ರದರ್ಶನವನ್ನು ನಾನು ವರ್ಷದ ಹಿಂದೇ ಮಂಗಳೂರಿನಲ್ಲಿ ನೋಡಿ, ತುಂಬಾ ಮೆಚ್ಚಿಕೊಂಡಿದ್ದೆ. (ಅಂದಿನ ಮೆಚ್ಚುನುಡಿ ಇಲ್ಲೇ ಪ್ರಕಟಿಸಿದ್ದೆ) ಇಲ್ಲದು ಹೆಚ್ಚಿನ ಪರಿಷ್ಕರಣಗಳೊಂದಿಗೇ ಬಂದು ಎಲ್ಲರ ಮೆಚ್ಚುಗೆಯನ್ನೂ ಗಳಿಸಿತು. ಆ ಕುರಿತು ನಾನು ಕೊಡಬಹುದಾದ ಮರುಮಾತನ್ನು ಮೀರಿದಂತೆ ಎಂ. ರಾಘವೇಂದ್ರರು ಪ್ರಜಾವಾಣಿ ವಿಮರ್ಶೆಯಲ್ಲಿ ದಾಖಲಿಸಿದ್ದಾರೆ, ಲಗತ್ತಿಸಿದ್ದೇನೆ.
ವಾಸ, ಬೆಳಗ್ಗಿನ ನಡಿಗೆ:
ನನಗೂ ಹೆಗ್ಗೋಡಿಗೂ ಮೊದಲು ಕೆವಿ ಸುಬ್ಬಣ್ಣ, ಅಕ್ಷರ ಪ್ರಕಾಶನ ಮತ್ತು ನೀನಾಸಂ ಎಂಬ ಮೂರು ಮುಖದ ಸಂಬಂಧವಿತ್ತು. ಮಗ ಅಭಯಸಿಂಹ ಶೈಕ್ಷಣಿಕವಾಗಿ ಸಮರ್ಥ ಸಿನಿಮಾ ನಿರ್ದೇಶಕನಾಗಿದ್ದುಕೊಂಡು, ಆತನ ಪಾಲುದಾರಿಕೆಯ ಸಂಚಿ ಫೌಂಡೇಶನ್ ನೀನಾಸಂ ಕಲಾಪಗಳ ದಾಖಲೀಕರಣಕ್ಕೊಪ್ಪಿಕೊಂಡು ನಡೆಯುವುದು ಶುರುವಾದ ಮೇಲೆ ನಮ್ಮ ಸಂಬಂಧ ಹೆಚ್ಚು ಗಾಢವಾಗಿದೆ. ಅಲ್ಲಿನ ವಿಶೇಷ ಕಲಾಪಗಳಿಗೆಲ್ಲ ನಾವು ‘ಗೌರವಾನ್ವಿತ ಅತಿಥಿ’ಗಳು. ಅವರು ನಮ್ಮ ಹಿರಿತನವನ್ನು ಗಮನಿಸಿ, ವಾಸ್ತವ್ಯಕ್ಕೆ ಸಾಗರದ ಹೆಚ್ಚಿನ ಸೌಕರ್ಯಗಳ ಹೋಟೆಲುಗಳನ್ನೇ ಕೊಡಲು ಮುಂದಾಗುತ್ತಾರೆ. ಆದರೆ ನಾವು ನೀನಾಸಂ ವಠಾರವನ್ನೇ ಬಯಸಿ, ಲಭ್ಯವನ್ನು ಪಡೆಯುತ್ತಲೇ ಇದ್ದೇವೆ. ವಠಾರದೊಳಗಿನ ಬಹುತೇಕ ನಲ್ವತ್ತೈವತ್ತು ವರ್ಷಗಳ ಸರಳ ರಚನೆಗಳಾದ ‘ಅಜ್ಜರ ಮನೆ’, ಪ್ರಕಾಶನದ ಒತ್ತಿನ ‘ಅತಿಥಿ ಗೃಹ’ಗಳಲ್ಲಿ ಒಂದೆರಡು ಬಾರಿ ಉಳಿದದ್ದಿತ್ತು. ಆದರೆ ಹೆಚ್ಚು ಬಳಸಿದ್ದು, ‘ಕಿರಂ ನಾಗರಾಜ’ರ ಕೋಣೆ. ಈ ಬಾರಿಯೂ ನಮಗದನ್ನೇ ಕೊಟ್ಟಿದ್ದರು. ಐವತ್ತು ವರ್ಷಗಳಿಗೂ ಮಿಕ್ಕ ಅದನ್ನು ಈ ಬಾರಿ ತುಸು ಪರಿಷ್ಕರಿಸಿದ್ದು ನಮಗೆ ಅನುಕೂಲವೇ ಆಯ್ತು.
ತಿಳುವಳಿಕೆಯ ಸಭಾಸದರಿಗಾಗಿ….:
“ತಂತ್ರಜ್ಞಾನದ ಸುಳಿಯಲ್ಲಿ ಸಾಹಿತ್ಯ, ಕಲೆಗಳಿಂದ ಯುವ ಜನತೆ ದೂರಾಗುತ್ತಿದ್ದಾರೆ” ಎಂಬ ಮಾತಿದೆ. ಅದನ್ನು ಈ ಬಾರಿ ನೀನಾಸಂ ಬಹು ಜಾಣ್ಮೆಯಲ್ಲಿ ನಿವಾರಿಸಿದೆ. ರಾಜ್ಯದಲ್ಲಿ ಈಗ ವ್ಯಾಪಕವಾಗಿರುವ ಹೆಚ್ಚಿನೆಲ್ಲಾ ರಂಗಶಿಕ್ಷಣ ಶಾಲೆಗಳ ಉನ್ನತ ಸ್ಥಾನಗಳಲ್ಲಿ ನೀನಾಸಂನ ಹಳೆ ವಿದ್ಯಾರ್ಥಿಗಳೇ ಇದ್ದಾರೆ. (ರಂಗಾಯಣ ಹಾಗೂ ಕೇಂದ್ರದ ರಾಷ್ಟ್ರೀಯ ನಾಟಕ ಶಾಲೆಗಳ ವಿವಿಧ ಶಾಖೆಗಳು, ಸಾಣೇಹಳ್ಳಿಯ ಶಿವಕುಮಾರ…, ಸಿರಿಗೆರೆಯ ಧಾತ್ರಿ… ಮೊದಲಾದ ಖಾಸಗಿ ನಾಟಕ ಶಾಲೆಗಳು…) ಅವರ ಮೂಲಕ ಅಲ್ಲಿನ ವಿದ್ಯಾರ್ಥಿಗಳನ್ನೂ ಶಿಬಿರಕ್ಕೆ ಆಹ್ವಾನಿಸುವ ಮೂಲಕ ಸೇರಿದ್ದ ಯುವ ಪಡೆ ದೊಡ್ಡದೇ ಇತ್ತು. ಮತ್ತೆ ಉಳಿದಂತೆ ನೀನಾಸಂ ಖ್ಯಾತಿಗೆ ಮಾರುಹೋಗಿ ಬರುವ ಹಿರಿಯರ ಸಂಖ್ಯೆಯೂ ಸಣ್ಣದೇನಲ್ಲ. ಭಾಗಿಗಳ ವಾಸಕ್ಕೆ ವಠಾರದ ಮೂರು ಸಮೂಹ ವಾಸ್ತವ್ಯಗಳಲ್ಲದೇ ಪಕ್ಕದ ಶಾಲೆ ಹಾಗೂ ಸಾಗರದ ಕೆಲವು ಹೋಟೆಲುಗಳನ್ನೂ ಹೊಂದಿಸಿಕೊಂಡಿದ್ದರು. ಕೆಲವರು ಆಸುಪಾಸಿನ ಹಳ್ಳಿಯ ಪರಿಚಿತರ ಆಶ್ರಯವನ್ನು ಒಪ್ಪಿಕೊಂಡದ್ದೂ ಇತ್ತು.
ಬೆಳಗ್ಗಿನ ಚಾರಣದಲ್ಲಿ…:
ಈ ಬಾರಿ ನಮ್ಮ ಆತ್ಮೀಯರೇ ಆದ (ಮೇಲು ಕೋಟೆಯ ಜನಪದ ಸೇವಾ ಟ್ರಸ್ಟ್) ಸಂತೋಷ ಕೌಲಗಿಯವರ ತಮ್ಮನ ಮಗಳು – ಗೌರಿ, ಪಪೂ ಕಾಲೇಜ್ ವಿದ್ಯಾರ್ಥಿನಿ, ನಮ್ಮ ಕೋಣೆಗೆ ಹೆಚ್ಚುವರಿ ಸಂಗಾತಿಯಾಗಿ ಸೇರಿಕೊಂಡಿದ್ದಳು. ಹಿಂದಿನೆಲ್ಲ ಶಿಬಿರಗಳಂತೇ ಈ ಬಾರಿಯೂ ಬೆಳಿಗ್ಗೆ ಎಲ್ಲರಿಗೂ ಮೊದಲೇ ನೀನಾಸಂ ವಠಾರ ಬಿಟ್ಟು, ದಿನಕ್ಕೊಂದು ದಾರಿಯಲ್ಲಿ ಸುಮಾರು ಎರಡು ಮೂರು ಕಿಮೀ ನಡೆದು, ದೇಹದ ಜಡ ಕಳೆದುಕೊಂಡು, ಸಕಾಲಕ್ಕೆ ಮರಳುವುದನ್ನು ನಡೆಸಿದೆವು. ಗೌರಿ ನಮಗೆ ಲವಲವಿಕೆಯ ಸಂಗಾತಿಯಾಗಿಯೂ ಒದಗಿದಳು. ಜತೆಗೇ ಗ್ರಾಮೀಣ ಪರಿಸರದ ಅಂಗವಾಗಿ ಬೀದಿನಾಯಿಗಳೊಡನೆ ಸಂವಾದದಲ್ಲಿ, ವಿವಿಧ ಹಕ್ಕಿ ಮಂಗಗಳಾದಿ ಜೀವ ವೈವಿಧ್ಯ ಗುರುತಿಸುವಲ್ಲಿ, ಕಾಡು ತೋಟಗಳನ್ನು ನಿರುಕಿಸುತ್ತ ಸರಕಾರೀ ಯೋಜನೆಗಳ ಹುಸಿಯನ್ನು ಗ್ರಹಿಸುವಲ್ಲಿ, ಆರಾಧನಾ ಸ್ಥಳ ಮತ್ತು ಐತಿಹಾಸಿಕ ಉಳಿಕೆಗಳ ಅಂತರ ಕಂಡುಕೊಳ್ಳುವಲ್ಲಿ ಮಾತ್ರವಲ್ಲದೆ ಭಾರೀ ಮರ, ವಿಸ್ತಾರ ಕೆರೆ ಎಂದೆಲ್ಲಾ ಜ್ಞಾನವೃದ್ಧಿಗೆ ಸಹಕಾರಿಯೇ ಆದಳು. ಗೌರಿಯ ಬಾಲ್ಯದ ಕೆಲ ವರ್ಷಗಳು ಹೆಗ್ಗೋಡಿನಲ್ಲೇ ಕಳೆದಿತ್ತಂತೆ. ಅಂದು ಅವಳ ಕುಟುಂಬ ಹಿಡಿದಿದ್ದ ಬಾಡಿಗೆ ಮನೆ, ಅಂದಿನದ ಖಾಸಾ ಗೆಳತಿಯ ಮನೆಗಳ ನೆನಪನ್ನು ಗೌರಿ ನವೀಕರಿಸಿಕೊಂಡಳು. ಶಿಬಿರಕ್ಕೆ ಗೌರಿಯ ಅಣ್ಣ – ಸುಮನಸ್ ಕೌಲಗಿ, ಕೆಲವು ಮಿತ್ರರೊಡನೆ ಬಂದು ಗಂಡಸರ ಸಮೂಹ ವಸತಿಯಲ್ಲಿದ್ದರು. ಅವರಲ್ಲೊಬ್ಬ – ಪ್ರೀತಮ್. ಆತನೂ ಒಂದೆರಡು ದಿನ ನಮಗೆ ಜತೆಗೊಟ್ಟದ್ದಿತ್ತು.
ಅಂಗಳ ಶೃಂಗಾರ ಮತ್ತು ಅಘೋಷಿತ ಕಲಾಪಗಳು:
ಗ್ರಂಥಾಲಯದ ಬಾಗಿಲಿನ ಎರಡು ಪಕ್ಕದ ಗೋಡೆಗಳ ಮೇಲೆ ಶಿಬಿರದ ಶೀರ್ಷಿಕೆಯನ್ನು ಆಕರ್ಷಕವಾಗಿ ಹಂಚಿ ಹರಡಿದ್ದರು. ನೀರ ಟಾಂಕಿಗೆ ಲಂಗ ಹ್ಯಾಟೂ ತೊಡಿಸಿದ್ದು, ಒಣ ಗೆಲ್ಲೊಂದಕ್ಕೆ ಪ್ರೇತಾತ್ಮಗಳನ್ನು ನೇತು ಹಾಕಿದ್ದು, ಗೋಡೆಗೆ ಅಲ್ಲಿ ಇಲ್ಲಿ ಸರಳ ಕಡ್ಡಿ ಚಿತ್ರಗಳಲ್ಲಿ ಅಂಚು ಕಟ್ಟಿ, ಒಂದೆರಡು ಕಡೆ ದಾಂಗುಡಿಸಿದ ಬಳ್ಳಿಗಳನ್ನು ಹಬ್ಬಿಸಿದ್ದು ಬಿಟ್ಟರೆ ಈ ಬಾರಿ ಹೆಚ್ಚೇನೂ ಮಾಡಿದಂತಿರಲಿಲ್ಲ. ಹಿತ್ತಲಿನ ಅಂಗಳದಲ್ಲೆದ್ದಿದ್ದ ಎರಡು ಹುತ್ತಗಳು ಮೌನದಲ್ಲಿ ಅಡಿಗರ ಕಾವ್ಯವೇ ಮೈದಳೆದಂತಿದ್ದರೆ (“ಹುತ್ತಗಟ್ಟದೆ ಚಿತ್ತ ಮತ್ತೆ ಕೆತ್ತೀತೇನು ಪುರುಷೋತ್ತಮನ…”), ವಠಾರವನ್ನು ಸುತ್ತುಗಟ್ಟಿದ್ದ ವಿದ್ಯುತ್ ಬೇಲಿ ಸಿಡಿಮಿಡಿಗುಟ್ಟುತ್ತಿತ್ತು. ಒಂದು ಗಿಡ ಯಥಾನುಶಕ್ತಿ ಹಳದಿ ಹೂ ಚೆಲ್ಲಿ ನಗುತ್ತಿತ್ತು. ಆದರೆ ಶಿಬಿರಾರ್ಥಿಗಳ ಬಲ ಹೆಚ್ಚಿದ್ದುದರಿಂದಾಗಿ ….
ಶಿವರಾಮ ಕಾರಂತ ರಂಗಮಂದಿರದ ಎದುರಿನ ಡಾಮರ್ ಅಂಗಳದಲ್ಲಿ ಎಂದಿನಂತೆ ಆರು ಗಂಟೆಯ ಸುಮಾರಿಗೆ ಚಟಕಟ ಸದ್ದಿನೊಡನೆ “ಕೋಲೂ ಕೋಲಣ್ಣ ಕೋಲು ಕೋಲೇ…” ಸೊಲ್ಲು ಮೊಳಗುತ್ತಿತ್ತು. ಅಲ್ಲಿ ಕುಣಿತದ ವೈವಿಧ್ಯ ಹೆಚ್ಚಿರಲಿಲ್ಲವಾದರೂ ಸೇರಿಕೊಳ್ಳುವ ಮತ್ತೆ ಸುಸ್ತಾಗಿ ಕಳಚಿಕೊಳ್ಳುವ ಮಂದಿ ಹೆಚ್ಚಾಗಿ, ಗದ್ದಲದ ಗಮ್ಮತ್ತು ದೀರ್ಘ ಕಾಲ ಅನುನರಣಿಸುತ್ತಿತ್ತು. ಈ ಬಾರಿ ಒಂದು ಗುಂಪು ಸಾಲದೆಂಬಂತೆ ಪಕ್ಕದಲ್ಲೇ ಇನ್ಯಾವುದೋ ನಾಟಕ ಶಾಲೆಯ ಯುವಕರು ಸುತ್ತುಗಟ್ಟಿ, ಕೋಲುಗಳಿಲ್ಲದೇ ಬರಿದೆ ಕೈ ತಟ್ಟಿ ಬೇರೇನೋ ಹಾಡು, ಆಟ ನಡೆಸಿದ್ದರು. ಇನ್ನು ತಿಂಡಿ ತಪ್ಪಿ, ಅಧಿಕೃತ ಕಲಾಪಕ್ಕೆ ತಡವಾಗುತ್ತದೆನ್ನುವವರೆಗೂ ಇವು ಪ್ರತಿ ಬೆಳಿಗ್ಗೆಯೂ ನಡೆಯಿತು. ಹಾಗೂ ಇವರ ಉತ್ಸಾಹ ಹಿಂಗಲಿಲ್ಲವೆನ್ನುವಂತೆ …
ಶಿಬಿರ ಕಲಾಪಗಳಲ್ಲಿ ಭೋಜನ ವಿರಾಮವಲ್ಲದೆ ಎರಡು ಚಾ ವಿರಾಮಗಳೂ ಇದ್ದವು. ಅಲ್ಲೂ ಬಿಸ್ಕತ್ತು ಮುಕ್ಕುತ್ತಲೇ ಚಾ ಸೀಪುತ್ತಲೇ ಯಾರೋ ತಾಸೆ ಬಡಿದು, ಕೊಳಲು ನುಡಿಸುತ್ತಿದ್ದರು. ನಾ ನೀ ಎಂದು ಯುವಕರು ನುಗ್ಗಿ ನೆಲ ದಮ್ಮಾಸು ಹಾಕುತ್ತಿದ್ದರು. ಇನ್ಯಾರೋ ಬರಿದೇ ಹಾಡು, ಬೀದಿ ನಾಟಕವಾಡಿದ್ದೂ ಇತ್ತು. ಇಂಥ ಸ್ವಾಂತ ಸುಖಾಯ ಆಟಗಳು ಒಟ್ಟಾರೆ ವಾತಾವರಣಕ್ಕೆ ಉತ್ಸವದ ಅಮಲೇರಿಸುತ್ತಿತ್ತು. ನಡುವೆ ಒಂದೆರಡು ಬಾರಿ ಊಟದ ಹೊತ್ತಿನಲ್ಲೋ ಬೆಳಗ್ಗಿನ ತಿಂಡಿಯ ಎಡೆಯಲ್ಲೋ ಸಣ್ಣದಾಗಿ ನಾಕೆಂಟು ದ್ವನಿಗಳು ಯಾರ್ಯಾರದ್ದೋ ವೈಯಕ್ತಿಕ ಹುಟ್ಟಬ್ಬದ ರಾಗ ತೆಗೆದದ್ದೂ ಕೇಳಿದ್ದೆ. ಅವೆಲ್ಲಕ್ಕೂ ಕಳಶಪ್ರಾಯವಾಗಿ…
ಶಿಬಿರದ ಕೊನೇ ದಿನದ ಎಲ್ಲ ಕಲಾಪಗಳು ಮುಗಿದು, ಸುಪ್ಪತ್ತಿಗೆ ಸೇರಿ “ನಾಳೆ ಮರಳಿ ಮನೆಗೇ…” ಕನಸಿನಲ್ಲಿ ನಾನು ತೇಲಿ ಸಾಗಿದ್ದೆ. ಸರೀ ಮಧ್ಯ ರಾತ್ರಿಯಲ್ಲಿ ಸ್ವಪ್ನನೌಕೆ ಒಡೆವಂತೆ “ಯಾಪೀ ಬಡ್ಡೇ ಥೂ ಯೂ…” ರಣಘೋಷ ನನ್ನನ್ನು ಬಡಿದೆಬ್ಬಿಸಿತ್ತು. ಗಡಿಬಿಡಿಯಲ್ಲಿ ಹೊರಗೋಡಿ ನೋಡಿದೆ. ಶಿವರಾಮ ಕಾರಂತ ರಂಗಮಂದಿರದ ಎದುರಿನ ಡಾಮರಂಗಳದಲ್ಲಿ ನೂರಾರು ಯುವ ರಂಗಕರ್ಮಿಗಳು ಹೊಸ ವರ್ಷಾಚರಣೆಯ ಹುಚ್ಚಿನಂತೇ ಸಿಳ್ಳೆ ಕೇಕೆಗಳೊಡನೆ ನಲಿದಿದ್ದರು. ನಿರೀಕ್ಷೆಯೇ ಇಲ್ಲದ ಯಾರೋ ನಿದ್ರಾಸುಂದರ ಗೆಳೆಯನನ್ನು ಎಳೆದು ತಂದು, ಕ್ಯಾಂಡಲ್ ಊದಿಸಿ, ಕೇಕ್ ಕತ್ತರಿಸಿ ಬೊಬ್ಬಿಟ್ಟಿದ್ದರು. ನನಗೂ ಒಂದು ಚೂರು ಕೊಡುವುದರಲ್ಲಿದ್ದರು, ನಾನು ನಾಚಿ ಕೋಣೆ ಸೇರಿ ಬಚಾವಾದೆ.
ಹಿಂದಿನ ಶಿಬಿರಗಳಲ್ಲಿ ಆಪ್ತ ರಂಗಭೂಮಿಯಲ್ಲಿ ಕಾಡುತ್ತಿದ್ದ ಸೆಕೆ (ಸಹಜವಾಗಿ ತೂಕಡಿಕೆ), ಈ ಬಾರಿ ದೂರವಾಗಿ, ಜಗನ್ನಾಥ ಸಭಾಂಗಣದ ವ್ಯವಸ್ಥೆ ನಿಜಕ್ಕೂ ಆಪ್ತವಾಯ್ತು. ಹೀಗೇ ಇದು ಹಿರಿಪ್ರಾಯದ, ಆರು ದಶಕಕ್ಕೂ ಮಿಕ್ಕು ಅನೂಹ್ಯ ಮತ್ತು ಅನನ್ಯ ರಂಗ ಇತಿಹಾಸಕ್ಕೆ ಸಾಕ್ಷಿಯಾಗಿರುವ ಶಿವರಾಮ ಕಾರಂತ ರಂಗಮಂದಿರವೂ ಮುಂದಿನ ಶಿಬಿರಕ್ಕೆ ಕಾಯಕಲ್ಪದಲ್ಲಿ ತೊಳಗಲಿದೆ ಎಂಬ ಸಂತಸದ ಸುದ್ದಿ ಹೊತ್ತು, ನಾವು ಮರು ಬೆಳಗ್ಗೆ ಹೆಗ್ಗೋಡು ಬಿಟ್ಟೆವು.
(ಸರಣಿ ಮುಗಿಯಿತು)
































0 Comments