(ಜಾತಿ ಮತಗಳ ಚಕ್ರಸುಳಿ ಮೀರಿ – ೩)

೧. ಕೈಮರದ ಅಡಿಯಲ್ಲಿ ‘ಕನ್ನಾಡಿಗ’ನ ಗೊಂದಲ

ಪದವಿಪೂರ್ವದ ಪರೀಕ್ಷೆಯಲ್ಲಿ ನಾನು ರಸಾಯನ ವಿಜ್ಞಾನ ಅಜೀರ್ಣ ಮಾಡಿಕೊಂಡು, ನ್ಯಾಶನಲ್ ಟ್ಯುಟೋರಿಯಲ್ಸ್‍ನಲ್ಲಿ ಶುಶ್ರೂಷೆ ಪಡೆದು ಸೆಪ್ಟೆಂಬರ್ ಪರೀಕ್ಷೆ ಎದುರಿಸಿದೆ. ಚೇತರಿಕೆಯ ಧೈರ್ಯ ಇದ್ದದ್ದಕ್ಕೆ, ಮುಂದಿನ ಶಿಕ್ಷಣ ವರ್ಷದವರೆಗೆ ಎಂಬಂತೆ, ಸುಲಭದಲ್ಲಿ ಜರ್ಮನ್ ಕಲಿತು ಬಿಡುತ್ತೇನೆಂದು ಗಯಟೆ ಸಂಸ್ಥೆಗೆ ಸೇರಿಕೊಂಡೆ. ಆದರೆ ವಾರಕ್ಕೆ ಎರಡೋ ಮೂರೋ ಗಂಟೆಯ ಪಾಠದಲ್ಲಿ ಕಾಗುಣಿತ, ವ್ಯಾಕರಣದ ಕಗ್ಗಂಟಿನಲ್ಲಿ ಸಿಕ್ಕಿ ಕಂಗಾಲಾದೆ. ಅಷ್ಟರಲ್ಲಿ ನನ್ನ ಅದೃಷ್ಟಕ್ಕೆ, ತಂದೆ ತನ್ನ ವೃತ್ತಿ ಜೀವನಕ್ಕೆ ಇನ್ನೊಂದೇ ಕ್ರಾಂತಿಕಾರಿ ತಿರುವು ತೆಗೆದುಕೊಂಡರು. ಅಧ್ಯಾಪನವನ್ನೂ ಬೆಂಗಳೂರನ್ನೂ ಬಿಟ್ಟು, ಮೈಸೂರಿನಲ್ಲಿ ಹೊಸ ಜವಾಬ್ದಾರಿ – ಕನ್ನಡ ವಿಶ್ವಕೋಶದ ವಿಜ್ಞಾನ ಸಂಪಾದಕತ್ವ! ನನ್ನ ಜರ್ಮನ್ ಸಂಕಟ ಸಹಜವಾಗಿ ಕಳಚಿಹೋಯ್ತು.

ಪದವಿಪೂರ್ವದ ಕಟ್ಟೆಪೂಜೆ ಮುಗಿದಿತ್ತು. ಇನ್ನು ಈ ವಿಜ್ಞಾನ ಕಲಿಕೆ ಸಾಕು, ಮುಂದೇನು? ನನಗೆ ಹೊಸ ಹೊಸತನ್ನು ನೋಡುವ, ಕಂಡದ್ದನ್ನು ಅಕ್ಷರಗಳಲ್ಲಿ ಹಿಡಿದಿಡುವ, ವಿಸ್ತರಿಸುವ ಚಪಲವಂತೂ ಧಾರಾಳ ಇತ್ತು. ಹಾಗಾಗಿ ಮೈಸೂರಿನಲ್ಲಿ ಮಹಾರಾಜಾ ಕಾಲೇಜ್ ಸೇರಿ, ಪತ್ರಿಕೋದ್ಯಮಿಯಾಗುವ ನಿಟ್ಟಿನಲ್ಲಿ ಯೋಚನೆ ಮಾಡಿದೆ. (ಅಲ್ಲಿ ಪತ್ರಿಕೋದ್ಯಮ ಒಂದು ವಿಷಯವಾಗಿದ್ದದ್ದು ನನಗೆ ತಿಳಿದಿರಲಿಲ್ಲ. ಹಾಗಾಗಿ) ಮುಖ್ಯ ಐಚ್ಛಿಕಗಳಲ್ಲಿ ಇಂಗ್ಲಿಷ್ ಕನ್ನಡಗಳನ್ನೇ ಲಕ್ಷ್ಯವಾಗಿಟ್ಟುಕೊಂಡೆ. ಪದವಿಪೂರ್ವ ಪರೀಕ್ಷೆಯ ಇಂಗ್ಲಿಷನ್ನು ನಾನು ಪ್ರಥಮ ದರ್ಜೆಯಲ್ಲಿ ದಾಟಿದ ಗರ್ವ ಮತ್ತೆ ಕನ್ನಡ ಹೇಗೂ ನಮ್ಮದೇ ಎಂಬ ಭಂಡ ಧೈರ್ಯ ಧಾರಾಳ ಇದ್ದಿರಬೇಕು. (ಐಚ್ಛಿಕಗಳಲ್ಲಿ ಎರಡು ಮುಖ್ಯ, ಒಂದು ಅಮುಖ್ಯ ಇದ್ದ ಕಾಲ.) ಕಾಲೇಜು ಅಧ್ಯಾಪಕರ ವೇಳಾಪಟ್ಟಿಯನ್ನು ಅಧ್ವಾನ ಮಾಡಿಟ್ಟುಕೊಂಡ ಕಾಲೇಜು ಅದನ್ನೇನೋ ಕೊಟ್ಟಿತು. ಅಮುಖ್ಯಕ್ಕೆ ಅರ್ಥ ಶಾಸ್ತ್ರವನ್ನು ಕಟ್ಟಿತು. ಪತ್ರಿಕೋದ್ಯಮ, ಭಾಷಾವಿಜ್ಞಾನ, ಮನೋವಿಜ್ಞಾನಕ್ಕೆಲ್ಲ ಅಸಾಧ್ಯ ಎಂದೇ ಸಾಧಿಸಿತು. ಮೂರು ವರ್ಷದ ಉದ್ದಕ್ಕೆ ಹಸಿರು ಮೇಯಲು ಹೊರಟ ಮಣಕ ಅರ್ಥಶಾಸ್ತ್ರದ ದಂಟೆ ಕುತ್ತಿಗೆಗೆ ಕಟ್ಟಿಕೊಂಡೇ ಮೈದಾನಕ್ಕಿಳಿಯಿತು!

ಮೈಸೂರಿಗೆ ಹೋದ ತಕ್ಷಣ ಪತ್ರಕರ್ತನಿಗೆ ಅವಶ್ಯ ಎಂದು ತರ್ಕಿಸಿ, ಓಬೀರಾಯನ ಕಾಲದ ಲ್ಯಾಂಡ್ಸ್‍ಡೌನ್ ಕಟ್ಟಡದ, ಅದುರುವ ಮಾಳಿಗೆಯ ಬೆರಳಚ್ಚು ಮತ್ತು ಗಿಡ್ಡಕೈ (ಟೈಪಿಂಗ್ ಅಂಡ್ ಶಾರ್ಟ್‍ಹ್ಯಾಂಡ್ ಯಾನೆ ಶೀಘ್ರಲಿಪಿ) ತರಗತಿಗಳಿಗೆ ಸೇರಿಕೊಂಡೆ. ವಾರ ಕಳೆದರೂ asdfg;lkjh, asdfg;lkjh… ಸಾಲುಗಟ್ಟಳೆ ಕುಟ್ಟುವುದಾಗುವಾಗ ತಾಳ್ಮೆಗೆಟ್ಟಿತು. ಶೀಘ್ರಲಿಪಿ ಅಥವಾ ಗೇಲಿಗನ್ನಡದಲ್ಲಿ ಹೇಳುವಂತೆ ಗಿಡ್ಡ ಕೈಯಲ್ಲಿ ಇಂಗ್ಲಿಶಿನದೋ ಕನ್ನಡದ್ದೋ ಬೇಧವನ್ನೂ, ಊಹನೆಯ ಗೀಚುಗಳನ್ನೂ ನೆನಪಿಡುವ ಸಂಕಟ ಬಂದಾಗ ಊಊದ್ದ ಕೈ ಸಾಕನ್ನಿಸಿತು.

ಮೈಸೂರಿಗೆ ನಾವು ಬಂದಿಳಿಯುವಾಗ ದೇ ಜವರೇಗೌಡರ ಪ್ರೇರಣೆಯಲ್ಲಿ ನಮ್ಮನ್ನು ಸ್ವಾಗತಿಸಿದವರು – ಮಹಾರಾಜಾ ಕಾಲೇಜಿನ ಖ್ಯಾತ ಕನ್ನಡ ಪ್ರಾಧ್ಯಾಪಕ ಕೆ. ರಾಘವೇಂದ್ರ ರಾವ್ (ಕೇಯಾರ್). ಅವರೋ ಅಪಾರ ಪ್ರೀತಿ, ಸೌಜನ್ಯಗಳಲ್ಲಿ ನಮಗೆ ಬಾಡಿಗೆ ಮನೆ ನಿಶ್ಚೈಸಿಟ್ಟು. ರೈಲ್ವೇ ನಿಲ್ದಾಣಕ್ಕೇ ಬಂದು ಕಾದಿದ್ದರು. ನಮ್ಮನ್ನು ಟಾಂಗಾಕ್ಕೇರಿಸಿ ಒಯ್ಯುತ್ತಿದ್ದಂತೆ ನನ್ನ ಓದಿನ ಬಯಕೆ ಕೇಳಿ, ಅವರದೇ ಶಿಷ್ಯತ್ವ ಪಡೆಯಲಿರುವವನೆಂದೂ ಸಂಭ್ರಮಿಸಿದರು! (ಹೀಗೂ ಅಧ್ಯಾಪಕರು ಇರುತ್ತಾರೋ ಎಂದು ನನಗೆ ಆಶ್ಚರ್ಯವಾಗಿತ್ತು.) “ಕಾಲೇಜಿನ ದಾಖಲಾತಿಗೆ ಇನ್ನೂ ಸಮಯವಿದೆ, ಮನೆಗೆ ಬಾ ಸಲಹೆ ಕೊಡುತ್ತೇನೆ” ಎಂದೂ ನನ್ನನ್ನು ಕಟ್ಟಿ ಬಿಟ್ಟರು. ಮೈಸೂರು ಸುತ್ತುವ ನನ್ನ ಉತ್ಸಾಹವನ್ನು ಹತ್ತಿಕ್ಕಿ, ಮಾರಣೇ ದಿನವೇ ನಾನು ಕರಕಮಲವನ್ನೇ (ಕುಮಾರ) ವ್ಯಾಸಪೀಠ ಮಾಡಿ “ಶ್ರೀವನಿತೆಯರಸನೆ ವಿಮಲ ರಾಜೀವಪೀಠನ ಪಿತನೆ…” ಪಾರಾಯಣ ಶುರು ಮಾಡಿದ್ದೆ.

ಮೈವಿವಿನಿಲಯದ ಇಂಗ್ಲಿಷ್ ಕನ್ನಡ ನಿಘಂಟು ಯೋಜನೆಯ ಸಂಪಾದಕರಾಗಿದ್ದ, ಮೂಲದಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರೇ ಆಗಿದ್ದ, ಮಹಾನ್ ಸಹೃದಯಿ ಎಚ್.ಜಿ ಸೂರ್ಯನಾರಾಯಣ ರಾಯರು ನನ್ನ ತಂದೆಗೆ ಆಪ್ತರು. ಅವರಿಗೆ ನನ್ನ ಇಂಗ್ಲಿಷ್ ಐಚ್ಛಿಕದ ಸುದ್ದಿ ಸಿಕ್ಕಿದ್ದೇ ತಡ, ಬಂದು ತಮ್ಮನ್ನು ನೋಡಲು ಪ್ರೀತಿಯ ಆದೇಶ ಹೊರಡಿಸಿದರು. ಅವರ ಮನೆಯ ಒಂದೆರಡು (ಪ್ರೀತಿಯ) ಪಾಠವನ್ನೂ ಅನುಭವಿಸಿದೆ. ಅಷ್ಟರಲ್ಲಿ ಮತ್ತೆ ನನ್ನ ಅದೃಷ್ಟ ಖುಲಾಯಿಸಿತು – ಕಾಲೇಜು ಶುರುವಾಯ್ತು, ದಾಕ್ಷಿಣ್ಯಗಳ ಸಂಕಲೆಗಳನ್ನು ಕಳಚಿಕೊಂಡೆ. ನನ್ನೊಳಗಿನ ಕನ್ನಡಿಗನಿಗೆ ಕುರಿತೋದುವುದು ಎಂದೂ ಹಿಡಿಸಲಿಲ್ಲ!

೨. ಮಹಾಠಕ್ಕ ಮತ್ತು ಚೂರಿಚಿಕ್ಕ ಪ್ರಸಂಗ

ದರೋಡೇ ಧನವಂತನ ಮುಖಸ್ತುತಿ ಮಾಡುವುದು ಕೇಳ್ತಾ ಇರ್ತೇವೆ “ಅಯ್ಯೋ ಇವರ್ ಎಸ್ಸೆಲ್ಸೀಂದ್ರೆ ಈಗಿನ್ ಎಂಎಸ್ಸಿಗ್ ಸಮ…”! ಅಂಥಲ್ಲೆಲ್ಲ ನನಗೆ ನೆನಪಾಗುವುದು ಎಸ್.ಎಲ್ ಭೈರಪ್ಪನವರ ಪ್ರೌಢಶಾಲಾ ದಿನಗಳ, ಅಂದರೆ ಸುಮಾರು ೧೯೫೦ನೇ ದಶಕದ (ನೋಡಿ: ಅವರ ಆತ್ಮಕಥನ – ಭಿತ್ತಿ) ಘಟನೆ. ಆಗ ‘ಮನೆಪಾಠ’ ನಡೆಸುತ್ತಿದ್ದ ಮಾಸ್ಟರರೊಬ್ಬರು, ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ಮುಗಿದದ್ದೇ ಕೆಲವು ದಿನ ಊರಿನಿಂದ ಕಣ್ಮರೆಯಾಗುತ್ತಿದ್ದರಂತೆ. ಹಿಂದಿನಿಂದ ತಿಳಿಯಿತಂತೆ – ಅವರು, ತನ್ನ ‘ಮನೆಪಾಠ’ದ ವಿದ್ಯಾರ್ಥಿಗಳ ಉತ್ತರಪತ್ರಿಕೆಯ ಜಾಡು ಹಿಡಿದು, ಧಾರಾಳ ಅಂಕ ತುಂಬಿಸಿ ಬರುತ್ತಿದ್ದರಂತೆ.

ಹಾಗೇ ಮಹಾರಾಜಾ ಕಾಲೇಜಿನಿಂದ (೧೯೭೨) ನಲ್ವತ್ತೆಂಟು ವರ್ಷಗಳ ಎತ್ತರದಲ್ಲಿ ಇಂದು ನನ್ನನ್ನು ಕಾಣುವ ಕೆಲವರು ಉದ್ಗರಿಸುವುದಿದೆ “ನಿಮ್ಕಾಲ ಬಿಡಿ, ಗೋಲ್ಡನ್ ಏಜೂ…” ವಾಸ್ತವದಲ್ಲಿ ಅಂಥ ಭ್ರಮೆ ಬೇಡ ಎನ್ನುವುದಕ್ಕೆ ಒಂದು ಉದಾಹರಣೆ – ಮಹಾರಾಜಾ ಕಾಲೇಜಿನ ವಿದ್ಯಾರ್ಥಿ ಸಂಘದ ಚುನಾವಣೆ! ನನ್ನ ನೆನಪು ಸರಿಯಿದ್ದರೆ, ಎಲ್ಲ ವಿದ್ಯಾರ್ಥಿಗಳೂ ಇಬ್ಬರನ್ನು – ತರಗತಿ ಹಾಗೂ ಕಾಲೇಜು ಪ್ರತಿನಿಧಿ, ಗೌಪ್ಯ ಮತ ಚಲಾಯಿಸಿ ಚುನಾಯಿಸಬೇಕಿತ್ತು. ಕರಪತ್ರಗಳ ಸುರಿಮಳೆ, ಭಿತ್ತಿಪತ್ರಗಳ ಹಾವಳಿ, ಕೊನೆಯಲ್ಲಿ ಕಾರಿನಲ್ಲಿ ಮೈಕ್ ಹಚ್ಚಿ ಬೊಬ್ಬೆ, ಯಾವ ‘ದೇಶ ಆಳುವವರ’ ಚುನಾವಣೆಗೂ ಕಡಿಮೆಯಿರಲಿಲ್ಲ. ಕೊನೆಯಲ್ಲಿ ಆ ವರ್ಷ ನಮಗೆ ದಕ್ಕಿದ ಪ್ರತಿನಿಧಿಗಳ ನಿಜ ನಾಮವೇನೇ ಇರಲಿ ಅನ್ವರ್ಥನಾಮಗಳು ಹೀಗಿದ್ದವು: ತರಗತಿ ಪ್ರತಿನಿಧಿ – ಮಹಾಠಕ್ಕ, ಕಾಲೇಜಿನ ಪ್ರತಿನಿಧಿ – ಚೂರಿಚಿಕ್ಕ! ನನ್ನ ಮಾತನ್ನು ಪುಷ್ಟೀಕರಿಸುವುದಕ್ಕೆ ಒಂದೊಂದೇ ಉದಾಹರಣೆ.

ಕಾಲೇಜು ವಿದ್ಯಾರ್ಥಿ ಸಂಘದ ಮತಚಲಾವಣೆ ಮುಗಿದು, ಪೆಟ್ಟಿಗೆಗಳೆಲ್ಲ ಪ್ರಾಂಶುಪಾಲರ ಕೊಠಡಿ ಸೇರಿ, ವ್ಯವಸ್ಥಿತವಾಗಿ ಎಣಿಕೆ ನಡೆದಿತ್ತು. ಕಾಲೇಜು ಮುಖ್ಯಸ್ಥನ ಸ್ಥಾನಕ್ಕೆ ವರಣಮಾಲೆಯನ್ನು ಹಿಡಿದ ವಿಜಯಲಕ್ಷ್ಮೀ ಇಬ್ಬರ ನಡುವೆ ಉಯ್ಯಾಲೆಯಲ್ಲಿದ್ದಳು. ‘ಚೂರಿಚಿಕ್ಕ’ ಪ್ರಾಂಶುಪಾಲರಿಗೇ ಚೂರಿ ತೋರಿಸಿ ಬೆದರಿಕೆ ಹಾಕಿ, ಮಾಲೆ ಹಾಕಿಸಿಕೊಂಡನಂತೆ! ಇಂದಿನ ಬೆಳೆಯ ಸಿರಿ ಅಂದಿನ ಮೊಳಕೆಯಲ್ಲೇ!! ಕಾಲೇಜಿನ ಶತಮಾನೋತ್ಸವ ಭವನದಲ್ಲಿ ವಿಶೇಷ ಸಮಾರಂಭ – ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಅದೇನೋ ಯೋಜನೆಯಡಿಯಲ್ಲಿ ಪುಸ್ತಕ ಪ್ರದಾನ. ವೇದಿಕೆಯ ಮೇಲೆ ಮುಖ್ಯ ಅತಿಥಿಗಳಿಂದ ಸಾಂಕೇತಿಕವಾಗಿ ಕೆಲವರಿಗಷ್ಟೇ ಪುಸ್ತಕದ ಕಟ್ಟನ್ನು ಕೊಡುವ ವ್ಯವಸ್ಥೆಯಾಗಿತ್ತು. ಮದುವೆಯಲ್ಲಿ ವರ, ಮಸಣದಲ್ಲಿ ಹೆಣ ಆಗುವ ಬಯಕೆಯ ಎಲ್ಲ ಪುಡಾರಿಗಳಂತೆ, ವೇದಿಕೆಯ ಮೇಲೆ ಪುಸ್ತಕದ ಕಟ್ಟು ಸ್ವೀಕರಿಸುವ ಓರ್ವ ಬಡವ (ಭಡವ?), ಜುಜುಬಿ ತರಗತಿ ಚುನಾವಣೆಗೆ ರಾಶಿ ಕರಪತ್ರಾದಿಗಳಿಗೆ ಹಣ ಚೆಲ್ಲಿದ, ಗೆದ್ದ ಮೇಲೆ ಕಾರ್ ಮೆರವಣಿಗೆ ನಡೆಸಿದ – ಠಕ್ಕ! ದಿನದ ಕೊನೇ ಪಾಠಾವಧಿ ಮುಗಿದು ನಾವೆಲ್ಲ ಶತಮಾನೋತ್ಸವ ಭವನದೆಡೆಗೆ ಹೊರಡುತ್ತಿರುವಾಗ, ಅಲ್ಲೇ ಠಕ್ಕ ವೇಷಪಲ್ಲಟ ನಡೆಸಿದ್ದ. ತನ್ನ ಕತ್ತಿನ ಒಂದೆಳೆ ಸರ, ವಾಚು, ಉಂಗುರಗಳನ್ನೆಲ್ಲ ತನ್ನ ನಿಜ-ಬಡ ಮಿತ್ರನಲ್ಲಿ ಇಟ್ಟುಕೊಳ್ಳಲು ಕೊಟ್ಟು, ಆತನ ಮಾಸಲು ಹಳೆಯ ಅಂಗಿಯನ್ನು ತತ್ಕಾಲೀನವಾಗಿ ಧರಿಸಲು ಎರವಲು ಪಡೆಯುತ್ತಾ ಇದ್ದ!

೩. ಸುಜನಾರಲ್ಲಿ ಕೊನೆಗೂ ಕ್ಷಮೆ ಕೇಳಲೇ ಇಲ್ಲ

ಮಹಾರಾಜಾ ಕಾಲೇಜಿನ ಕನ್ನಡ ವಿಭಾಗ ಮುಖ್ಯಸ್ಥ – ಎಸ್. ನಾರಾಯಣ ಶೆಟ್ಟಿ, ‘ಸುಜನಾ’ ಕಾವ್ಯನಾಮ ಖ್ಯಾತರು. ಕುವೆಂಪು ಆರಾಧಕ, ಸ್ವತಃ ಕವಿ, ದೊಡ್ಡ ವಿದ್ವಾಂಸ, ಉತ್ತಮ ಅಧ್ಯಾಪಕ. ಮೊದಲ ವರ್ಷದಲ್ಲಿ (೧೯೬೯-೭೦) ಅವರು ನಮಗೆ (೨೫-೩೦ ಮಂದಿಯಿದ್ದ ಒಂದೇ ವಿಭಾಗ) ಐಚ್ಛಿಕ ಕನ್ನಡದಲ್ಲಿ, ಕುವೆಂಪು ‘ಚಿತ್ರಾಂಗದ’ವನ್ನು ತೆಗೆದುಕೊಳ್ಳುತ್ತಿದ್ದರು. ವರ್ಷದ ಮೊದಲಲ್ಲೇ ಒಂದು ದಿನ, ಅವರು ತರಗತಿಗೆ ಬರುತ್ತಿದ್ದಂತೆ, ನನ್ನ ಹೆಸರು ಹೇಳಿ ಕರೆದು, “ಹೋ ರಾಜಾ, ನೀನು ನಾರಾಯಣರಾಯರ ಮಗಾ…” ಎಂದು ಹರ್ಷೋದ್ಗಾರ ತೆಗೆದದ್ದಲ್ಲಿ ನನ್ನ ಸಂಕೋಚ ನೆಗೆದು ಬಿದ್ದಿತ್ತು. ಅವರ ಬರಸೆಳೆದಪ್ಪುಗೆಗೆ ತೂರಾಡಿಹೋಗಿದ್ದೆ.

ಸುಜನಾರದ್ದು ಪಾಠಮಲ್ತು, ಕುವೆಂಪು ಭಾವಲಹರಿ. ಅವರು ಚಿತ್ರಾಂಗದ ಪುಟ ತೆರೆದರೂ ಮಸ್ತಕದ ನೆನಪೆಳೆದರೂ ಸಿಕ್ಕ ಕಾವ್ಯದ ಸಾಲನ್ನು ಚಿಮ್ಮು ಹಲಗೆ ಮಾಡಿ ರಸಗಂಗೆಗೆ ಧುಮುಕಿಬಿಡುತ್ತಿದ್ದರು. ಶಬ್ದ ಪ್ರಯೋಗದ ಲಯ ಹಿಡಿದು, ಭಾವ ಸ್ಫುಟವಾಗುವಂಥ ಅಮೋಘ ಈಜು ಅವರದು. ಆದರೆ ಅಷ್ಟೇ ಸುಲಭದಲ್ಲಿ ಯಾವುದೋ ಪದಪ್ರಯೋಗದ ವಿಸ್ಮಯ ಅಥವಾ ಸನ್ನಿವೇಶದ ದರ್ಶನದ ಸುಳಿಗೆ ಬಿದ್ದು ಕಳೆದೇ ಹೋಗುತ್ತಿದ್ದರು. ಸಮಗ್ರ ಕುವೆಂಪು ಕಾವ್ಯ ಸಮೀಕ್ಷೆ ಬಿತ್ತರಗೊಂಡು, ಕುವೆಂಪು ಪದತಲದ ಅಸಂಖ್ಯ ಆಖ್ಯಾಯಿಕೆಗಳ ಜಾಲ ಬಲಿದು ನಮ್ಮನ್ನೂ ದಿಕ್ಕೆಡಿಸಿ ಬಿಡುತ್ತಿದ್ದರು. ಇನ್ನೂ ಕಾವ್ಯಭವನದ ಹೊಸ್ತಿಲ ಕಟ್ಟೆ ದಾಟದ ಅರಸಿಕ ವಿದ್ಯಾರ್ಥಿವೃಂದ, ಟಿಪ್ಪಣಿ ಏನು ಹಾಕಿಕೊಳ್ಳುವುದು, ನೋಟ್ಸ್ ಹೇಗೆ ವಿಸ್ತರಿಸುವುದು, ಬಹಳ ಮುಖ್ಯವಾಗಿ – ಪರೀಕ್ಷೆಯಲ್ಲಿ ಏನುತ್ತರಿಸುವುದು, ಅರ್ಥವಾಗದೇ ಪರಡುತ್ತಿತ್ತು. ತರಗತಿಯ ಅವಧಿ ಮುಗಿದ ಗಂಟೆಯಷ್ಟೇ ಸತ್ಯವಾಗಿ, ಇನ್ನೊಂದೇ ತರಗತಿಗೆ ಓಡಬೇಕಾದ ಒತ್ತಡದಲ್ಲಿ ಒದ್ದಾಡುತ್ತಿದ್ದೆವು.

ಸುಜನಾರ ಸಮಯದ ಶಿಸ್ತು ಬಹಳ ಕಷ್ಟದ್ದು. ಅಂದಿನ ಮಹಾರಾಜ ಕಾಲೇಜು ಸಾವಿರ ಸಮೀಪದ ವಿದ್ಯಾರ್ಥಿ ಸಾಗರ. ಅದರ ಮೂವತ್ತಕ್ಕೂ ಹೆಚ್ಚಿನ ಕೋಣೆಗಳಲ್ಲಿ ಮೂರು ಹಂತಗಳ ಪಾಠ ಪ್ರವಚನ ನಡೆಯುತ್ತಿತ್ತು. ಹತ್ತೆಂಟು ಐಚ್ಛಿಕಗಳ ಮತ್ತು ಆರೇಳು ಭಾಷೆಗಳ ಮೇಳಾಮೇಳಿ ಪ್ರತಿ ಗಂಟೆಗೂ ಬದಲುತ್ತಲೇ ಇರುತ್ತಿತ್ತು. ಹಾಗೆ ನಾವು ಕನ್ನಡ ಐಚ್ಛಿಕದ ಅವಧಿಗೆ, ಕಾಲೇಜಿನ ವಿವಿಧ ಮೂಲೆಗಳಿಂದ ಹೊರಟು, ಮುಖ್ಯ ಕಟ್ಟಡದಿಂದಲೇ ಹೊರಗಿನೊಂದು ಕೋಣೆಗೆ ಓಡಿ ಹೋಗಿ ಸೇರಿಕೊಳ್ಳುತ್ತಿದ್ದೆವು. ಬೇರೆಲ್ಲ ಅಧ್ಯಾಪಕರೂ ಸಕಾಲಕ್ಕೇ ಹಾಜರಿರುತ್ತಿದ್ದರು. ಸುಜನಾ ಮಾತ್ರ ಹಾಗಲ್ಲ. ಕೆಲವೊಮ್ಮೆ ಸಕಾಲ, ಕೆಲವೊಮ್ಮೆ ‘ಲೆಟಾಫ್’ ಸುದ್ದಿ, ಮತ್ತೂ ಕೆಲವೊಮ್ಮೆ ಏನೂ ಇಲ್ಲ. ಈ ‘ಏನೂ ಇಲ್ಲ’ದ ಅವಧಿ ಭಾರೀ ಸಂಕಟದ್ದು. ನಮ್ಮಲ್ಲಿ ಕೆಲವರು ಅಲ್ಲೇ ಕಾಲ ಕಳೆಯುವುದಿತ್ತು. ಕೆಲವರು ಕುಶಿವಾಸೀ ಚದುರಿಯೂ ಹೋಗುತ್ತಿದ್ದರು. ಅಂಥಲ್ಲಿ ಎಷ್ಟೋ ಬಾರಿ ಸುಜನಾ ಕಾಲರ್ಧ ಗಂಟೆ ತಡವಾಗಿ (ಅಕಾಲ) ಎಲ್ಲಿಂದಲೋ ಸ್ಕೂಟರಿನಲ್ಲಿ ‘ಹಾರಿ’ ಬಂದು ಪಾಠಕ್ಕಿಳಿದುಬಿಡುತ್ತಿದ್ದರು. ಹೀಗೆ ಐದಾರು ತಿಂಗಳು ಕಳೆದರೂ ಚಿತ್ರಾಂಗದ ಐವತ್ತರವತ್ತು ಸಾಲಿನಿಂದ ಮುಂದೆ ಹೋಗಲೇ ಇಲ್ಲ. ಅದಕ್ಕೂ ಮುಖ್ಯವಾಗಿ, ನಮ್ಮ ಕಚ್ಚಾ ತಲೆಯೊಳಗೆ ಕುವೆಂಪು ಕಾವ್ಯ ಪ್ರತಿಷ್ಠೆಯೇ ಆಗಲಿಲ್ಲ.

ತರಗತಿಯಲ್ಲಿ ಕೃಷ್ಣಮ್ಮಾಚಾರ್ ಮತ್ತು ಎಚ್. ಗೋವಿಂದನ್ ನನ್ನ ಆತ್ಮೀಯ ಮಿತ್ರರು. ನಮ್ಮೂವರೊಳಗೇ ಗುಟ್ಟುಳಿಯುವಂತೆ, ನಾನು ಸುಜನಾರ ಮೇಲೊಂದು ಮೂಗರ್ಜಿ ಬರೆದೆ. ಯಾರೂ ಗಮನಿಸದ ವೇಳೆ ಅದನ್ನು ಪ್ರಾಂಶುಪಾಲರ ಅಂಚೆಪೆಟ್ಟಿಗೆ ಹಾಕಿಬಿಟ್ಟೆ. ಸಾರಾಂಶ ಇಷ್ಟೇ – ಪಾಠ ಸರಿ ಮಾಡುತ್ತಿಲ್ಲ, ತರಗತಿ ಸರಿ ತೆಗೆದುಕೊಳ್ಳುತ್ತಿಲ್ಲ – ನೊಂದ ಪ್ರಥಮ ಬೀಯೇ ಕನ್ನಡ ಐಚ್ಛಿಕ ವಿದ್ಯಾರ್ಥಿಗಳು. ಮಾರಣೇ ದಿನ ಸುಜನಾ ತರಗತಿ ಇತ್ತು. ಅವರ ಭಕ್ತಾಗ್ರೇಸರ, ನಮ್ಮ ತರಗತಿ ಪ್ರತಿನಿಧಿ ಬಸವಲಿಂಗಯ್ಯ ಉರಿ ಮುಸುಡು ಹೊತ್ತು ಬಂದ. ಸುಜನಾ ಕೆಂಡಾಮಂಡಲ ಕೋಪದಲ್ಲಿ ಆತನ ಬಳಿ “ಮೂಗರ್ಜಿ ಬರೆದ ಪಾಪಿ ಬಂದು ಕ್ಷಮೆ ಕೇಳದೇ ನಾನು ನಿಮ್ಮ ಕ್ಲಾಸಿಗೇ ಬರೋಲ್ಲ” ಹೇಳಿ ಕಳಿಸಿದ್ದರು. ಬಸವಲಿಂಗಯ್ಯ ‘ಪತ್ರಕರ್ತೃ’ವನ್ನು ವಾಚಾಮಗೋಚರ ಬಯ್ಯುತ್ತಾ ಭಾರೀ ವಿಚಾರಣೆ ನಡೆಸಿದ. ಕೊನೆಯಲ್ಲಿ “ಮೇಷ್ಟ್ರತ್ರ ಆ ಕಾಗ್ದಾ ಹಿಡ್ಕಂಬಂದು, ಎಲ್ಲರ ಹ್ಯಾಂಡ್ ರೈಟಿಂಗ್ ಟೆಸ್ಟ್ ಮಾಡಿ, ಬೋಳೀಮಗನ್ನಾ ಹಿಡೀದೇ ಹೋದ್ರೆ ನಾನು ಅಪ್ಪನಿಗೆ ಹುಟ್ಟಿದೋನಲ್ಲ…” ಎನ್ನುತ್ತಿದ್ದಂತೆ ಎಲ್ಲ ಮುಂದಿನ ಕೋಣೆಗಳಿಗೆ ಚದುರಿದ್ದೆವು.
ದುಷ್ಟತ್ರಯರು ಮತ್ತೊಂದು ಗುಪ್ತ ಸಮಾಲೋಚನೆ ನಡೆಸಿದೆವು. ನನ್ನ ಇನ್ನೊಂದೇ ಪತ್ರ ಪ್ರಾಂಶುಪಾಲರ ಡಬ್ಬಿ ಸೇರಿತು. ಸಾರಾಂಶ – ನ್ಯಾಯ ಕೇಳಿದ್ದಕ್ಕೆ ಬೇಟೆಯಾಡುತ್ತಿದ್ದಾರೆ, ಕಾಪಾಡಿ! ಪತ್ತೇದಾರೀ ಭಕ್ತಾಗ್ರೇಸರನಿಗೆ ನಮ್ಮ ಮೊದಲ ಪತ್ರ ಸಿಗಲೇ ಇಲ್ಲ.

ಎರಡೋ ಮೂರೋ ದಿನ ಕಳೆದು ಮತ್ತೆ ಸುಜನಾ ತರಗತಿ ಇದ್ದಂದು, ಅವರು ತಣ್ಣಗೆ ಬಂದರು. ಎಷ್ಟು ಬೇಕೋ ಅಷ್ಟೇ ಪಾಠ ಮಾಡಿದರು, ಕೊನೆಯಲ್ಲೊಂದಷ್ಟು ‘ಆಶೀರ್ವಾದ’ ಮಾಡಿಯೇ ಹೋದರು. ಮುಂದೆಯೂ ಕೆಲವು ಕಾಲ ನಮ್ಮ ತರಗತಿಯ ಮೇಲೆ ಅವರ ಅಸಮಾಧಾನ ಇದ್ದದ್ದು ಬಿಟ್ಟರೆ, ಬೇರೇನೂ ಆಗಲೇ ಇಲ್ಲ. ತಮಾಷೆ ಎಂದರೆ, ಆಗಲೂ ಮುಂದೆ ಮೂರು ವರ್ಷದುದ್ದಕ್ಕೂ ನಾನವರಿಗೆ ಎದುರು ಸಿಕ್ಕಾಗೆಲ್ಲ, ಅವರು ಅದೇ ಹಳೇ ಪ್ರೀತಿಯಲ್ಲಿ “ಓ ರಾಜಾ…” ಎಂದು ಬೆನ್ನು ಚಪ್ಪರಿಸುವುದನ್ನು ಬಿಡಲೇ ಇಲ್ಲ. ಅದು ನನ್ನನ್ನು ಒಳಗೇ ಕುಗ್ಗಿಸುತ್ತಾ ಇತ್ತು. ಮುಂದೊಂದು ದಿನ ‘ಸುಜನಾ ಕ್ಷಮಾಪಣಾ ಸ್ತೋತ್ರ’ ಪಠಿಸುವುದಾಗಿ ಯೋಚಿಸುತ್ತಲೂ ಇದ್ದೆ.

ನನ್ನ ಓದೆಲ್ಲ ಮುಗಿದು, ಮಂಗಳೂರಿನ ಪುಸ್ತಕದಂಗಡಿಯೂ ಸಾಕಷ್ಟು ಹಳತಾಗಿತ್ತು. ಸುಜನಾರ ಮಹಾಕಾವ್ಯ – ಯುಗಸಂಧ್ಯಾ, ಲೋಕಾರ್ಪಣ, ಅದಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಪುರಸ್ಕಾರ ಮತ್ತೂ ಹತ್ತೆಂಟು ಕಲಾಪ, ನೆಪಗಳಲ್ಲಿ ಅವರು ತಂದೆಗೆ ಸಿಕ್ಕಾಗೆಲ್ಲ, ನನ್ನನ್ನು ವಿಚಾರಿಸಿಕೊಳ್ಳುತ್ತಲೇ ಇದ್ದರು. ತಂದೆ ನನಗೆ ತಿಳಿಸುತ್ತಲೂ ಇದ್ದರು. ಹಾಗೆ ಒಮ್ಮೆ ನಾನು ತಂದೆಯ ಬಳಿ, ನನ್ನ ಮೂಗರ್ಜಿ ವಿಚಾರ ತಿಳಿಸಿದ್ದೆ. “ಅವರು ಮುಖತಃ ಸಿಕ್ಕಾಗ ಕ್ಷಮೆ ಕೇಳಿಬಿಡ್ತೇನೆ, ಪಾಪ” ಎಂದೂ ಹೇಳಿದ್ದೆ. ಸಂದರ್ಭಗಳು ವಂಚಿಸುತ್ತಲೇ ಇದ್ದವು.

ಒಮ್ಮೆ ಯಾವುದೋ ಸಾಹಿತ್ಯ ಸಭೆಗೆಂದು ಸುಜನಾ ಮಂಗಳೂರಿಗೇ ಬಂದಿದ್ದರು. ಅದು ಮುಗಿದ ಮೇಲೆ, ಬಹುಶಃ ಅವರ ಹಳೇ ಶಿಷ್ಯರೇ ಆದ, ಇಲ್ಲಿ ಸರಕಾರೀ ಕಾಲೇಜಿನ ಅಧ್ಯಾಪಕರಾಗಿದ್ದ ಸತ್ಯನಾರಾಯಣ ಮಲ್ಲಿಪಟ್ಟಣರನ್ನು ಹೊರಡಿಸಿದ್ದರು. “ನಮ್ಮ ನಾರಾಯಣ ರಾಯರ ಮಗನಂಗಡೀ ನೋಡ್ಬೇಕಪ್ಪಾ” ಎಂದು ನನ್ನಂಗಡಿಗೇ ಅನಿರೀಕ್ಷಿತವಾಗಿ ಬಂದಿದ್ದರು. ಪುಟ್ಟಪಥದಲ್ಲಿದ್ದಂತೇ ಬೋರ್ಡ್ ನೋಡಿ, ಗಟ್ಟಿ ಧ್ವನಿಯಲ್ಲಿ “ಮೈಸೂರಲ್ಲೂ ಅತ್ರೀ ಮಂಗಳೂರಲ್ಲೂ ಅತ್ರೀ…” ಹರ್ಷೋದ್ಗಾರ ತೆಗೆದಾಗ, ನನ್ನ ಮುಖವೆಲ್ಲಾ ಹಲ್ಲಾಗಿತ್ತು. ಅವರು ಒಳ ಬಂದು ಎಂದಿನಂತೆ ಅಪ್ಪಿ, ಒಳಗೆಲ್ಲ ಒಂದು ಸುತ್ತು ಹಾಕಿ, ತಮ್ಮ ಶಿಷ್ಯನ ಸಾಹಿತ್ಯ ಸೇವೆ ಕೊಂಡಾಡಿದಾಗ, ನನಗೆ ಮಾತೇ ಹೊರಡಲಿಲ್ಲ. ಇನ್ನು ಹಳೇ ಅಪರಾಧ ಒಪ್ಪಿಸಿ, ಕ್ಷಮೆ ಕೇಳುವುದೆಲ್ಲಿ?

ಮುಂದೊಂದು ದಿನ, ನನ್ನ ತಂದೆ ತೀರಿಹೋದರು. ನಾನು ಮೈಸೂರಿಗೆ ಧಾವಿಸಿದ್ದೆ. ತಂದೆ ಅಥವಾ ನಾವು ಬಯಸದಿದ್ದರೂ ಒಂದೆರಡು ಗಂಟೆಯ ಮಟ್ಟಿಗೆ ‘ಅತ್ರಿ’ ಮನೆಯಲ್ಲಿ ‘ಮೃತರ ದರ್ಶನಕ್ಕೆ’ ಅವಕಾಶ ಮಾಡಿದ್ದೆವು. ಹನ್ನೊಂದು ಗಂಟೆಯ ಸುಮಾರಿಗೆ ಒಂದು ಕೈಯಲ್ಲಿ ಊರೆಗೋಲು, ಇನ್ನೊಂದರಲ್ಲಿ ಸಹಾಯಕನ ತೋಳಿಗೆ ತೋಳು ಗಂಟು ಹಾಕಿದಂತೆ ಸುಜನಾ ಬಂದರು. ಹತ್ತಿಪ್ಪತ್ತು ವರ್ಷಗಳ ಮೇಲಿನ ದರ್ಶನ. ಪ್ರಾಯ ಸಹಜವಾದ ಬಳಲಿಕೆ, ಇಷ್ಟ-ವಿರಹದ ಸಂಕಟ ಸೇರಿಕೊಂಡಂತೆ ಕಂಡೆ. ನನ್ನ ಕೈಯಾಸರೆಯಲ್ಲೇ ಒಳಬಂದು ನೋಡಿದರು, ಬಳಲಿಕೆ ಹೆಚ್ಚಿದ್ದಕ್ಕೆ ಐದು ಮಿನಿಟು ಕುಳಿತಿದ್ದರು. ಏನೂ ನುಡಿಯದೆ, ಸಹಾಯಕನ ಮೇಲೆ ಭಾರ ಹೆಚ್ಚಿಸಿ, ಶೂನ್ಯ ನೋಡುತ್ತಾ ಹೋದರು. ನಾನಾದರೂ ಮಾತಾಡುವ ಸಮಯವೇ ಅದು? ಮತ್ತೂ ಮುಂದೊಂದು ದಿನ ಸುಜನಾ ತೀರಿಹೋದ ಸುದ್ದಿ ಬಂತು. ನನ್ನ ಕ್ಷಮಾಯಾಚನೆ ಉಳಿದೇಹೋಯ್ತು.

೪. ಪ್ರವಾಹದಲ್ಲಿ ನೆಲೆ ಕಂಡ ಕಡ್ಡಿ!

ಸ್ನಾತಕ ಓದಿನಲ್ಲಿ ಮೊದಲ ವರ್ಷದ ಪರೀಕ್ಷಾ ಫಲಿತಾಂಶಗಳಿಗೆ ಯಾವ ಮರ್ಯಾದೆಯೂ ಇರಲಿಲ್ಲ! ನಾನು ತರಗತಿಗಳನ್ನು ದೈಹಿಕವಾಗಿ ತಪ್ಪಿಸಿದ್ದು ಕಡಿಮೆ. ಹಾಗೇ ಪರೀಕ್ಷೆಯಲ್ಲಿ (೧೯೭೦) ಉಡಾಫೆ ಹೊಡೆದದ್ದು ಹೆಚ್ಚು. ಎರಡನೇ ವರ್ಷದ ಮೊದಲ ಒಂದೆರಡು ತಿಂಗಳವರೆಗೆ ತಂದೆ ನೆನಪಾದಾಗ ಮೊದಲ ವರ್ಷದ ಅಂಕಪಟ್ಟಿ ಕೇಳಿದ್ದಿತ್ತು. ನಾನು ಸುಳ್ಳು ಹೇಳಿ ತಪ್ಪಿಸಿದ್ದೆ. ಅವರು ನೇರ ಪರಿಚಿತ ಅಧ್ಯಾಪಕರಲ್ಲಿ ವಿಚಾರಿಸಿ ತಿಳಿಯಬಹುದಿತ್ತು. ಅವರು ವಾರದಲ್ಲಿ ಎರಡೋ ಮೂರೋ ಸಲ ನಮ್ಮ ಪಕ್ಕದ ಯುವರಾಜ ಕಾಲೇಜಿಗೆ ಪಾಠ ಮಾಡಲು ಸೈಕಲ್ಲೇರಿ ಬರುವುದೂ ಇತ್ತು. ಆಗಲೂ ವಿಚಾರಿಸಬಹುದಿತ್ತು. ಆದರೆ ಅವರು ಹಾಗೇನೂ ಮಾಡದೇ ಬಿಟ್ಟದ್ದು ಮರೆವೋ ಔದಾರ್ಯವೋ ನನಗೆ ತಿಳಿದಿಲ್ಲ.

ಎರಡನೇ ವರ್ಷಾಂತ್ಯಕ್ಕೆ ಪ್ರಥಮ ಭಾಷೆ ಇಂಗ್ಲಿಷ್, ದ್ವಿತೀಯ ಭಾಷೆ ಕನ್ನಡ ಮತ್ತು ಅಮುಖ್ಯ ಐಚ್ಛಿಕ ಅರ್ಥಶಾಸ್ತ್ರಗಳಿಗೆ ಅಂತಿಮ ಪರೀಕ್ಷೆ. ಅದರ ಗಾಂಭೀರ್ಯವನ್ನು ಲಘುವಾಗಿಸುವಂತೆ ನನ್ನ ಮೇಲೆ ಅಸ್ಸಾಂ ಶಿಬಿರದ ಆಮಿಷ ಎರಗಿಬಿಟ್ಟಿತ್ತು! ಪರೀಕ್ಷೆ ಬರೆದೆ, ಅಸ್ಸಾಂಗೆ ಹೋದೆ. ಶಿಬಿರದಿಂದ ಮರಳಿ ಸಂತೋಷದ ಶಿಖರದಲ್ಲಿದ್ದಾಗ ಬಂದ ಪರೀಕ್ಷಾ ಫಲಿತಾಂಶ ನನ್ನನ್ನು ಒಂದು ಮೆಟ್ಟಿಲು ಕೆಳಗಿಳಿಸಿತು. ಅರ್ಥಶಾಸ್ತ್ರದಲ್ಲಿ ಡುಮ್ಕಿ ಹೊಡೆದಿದ್ದೆ. ಸೆಪ್ಟೆಂಬರಿನಲ್ಲಿ ಪೂರೈಸಿಕೊಂಡೆ. ತಂದೆ ಅಸ್ಸಾಂ ಶಿಬಿರ ಮುಖ್ಯಸ್ಥರಿಗೆ, ನನ್ನ ವರದಿಯಾಧಾರದ ಮೇಲೆ ಅಭಿನಂದನ ಪತ್ರವನ್ನಷ್ಟೇ ಬರೆದರು.

ಅಂತಿಮ ವರ್ಷದಲ್ಲಿ ಮುಖ್ಯ ಐಚ್ಛಿಕಗಳು, ಮೂರು ವರ್ಷದ ಹೊರೆ ಹೊತ್ತ ವಿದ್ಯಾರ್ಥಿಗಳನ್ನು ನಾಲ್ನಾಲ್ಕು ಪತ್ರಿಕೆಗಳ ಸತ್ವ ಪರೀಕ್ಷೆಯನ್ನೇ ನಡೆಸಲಿದ್ದವು. ಬಹುತೇಕ ಸಹಪಾಠಿಗಳು ಭವಿಷ್ಯದ ಆತಂಕದಲ್ಲಿ ಕುಗ್ಗಿಹೋದ ಕಾಲ. ನಾನೋ ರಜಾವಧಿಯಲ್ಲಿ ಎನ್.ಸಿ.ಸಿಯಿಂದ ಏನೂ ದಕ್ಕುವುದಿಲ್ಲವೆಂದು ತಿಳಿದು, ಸೈಕಲ್ಲೇರಿ ಕೊಡಗು ಸುತ್ತುವ ಕನಸಿನಲ್ಲಿದ್ದೆ. ಕೊನೆಯ ಪರೀಕ್ಷೆ ಕಳೆದ ಮರುದಿನವೇ ಸೈಕಲ್ಲೇರಿದ್ದೆ. ಕೊನೆಯ ಗಳಿಗೆಯಲ್ಲಿ ಎಂಬಂತೆ ಗೆಳೆಯ ಶಂಕರಲಿಂಗೇ ಗೌಡ ಜತೆಗೊಟ್ಟಿದ್ದರು. ಪರೀಕ್ಷಾ ಫಲಿತಾಂಶ ಬಂದಾಗ ಯಾರದೋ ಪುಣ್ಯ ಎನ್ನುವಂತೆ, ನಾನೂ ಸ್ನಾತಕನಾಗಿದ್ದೆ.

ತಂದೆ ವಿಚಾರಿಸಿದ್ದರು – ಮುಂದೇನು? ಇಳಿ-ಹಳಿಯಲ್ಲಿ ಕುರುಡು ಕೊನೆಗೆ ನೂಕಿಬಿಟ್ಟ ರೈಲ್ವೇ ಡಬ್ಬಿಯಂತೆ, ಎಮ್ಮೆ ಎಂದೆ. ಮಾನಸಗಂಗೋತ್ರಿಯಲ್ಲಿ ಎರಡೂ ಭಾಷಾ ವಿಭಾಗಗಳಿಗೆ ಅರ್ಜಿ ಹಾಕಿದ್ದೆ. ಮೊದಲು ಇಂಗ್ಲಿಷ್ ‘YES’ ಎಂದಿತ್ತು. ಕನ್ನಡ ತಡವಾಗಿ ‘ಸರಿ’ ಎನ್ನುವಾಗ, ನಾನು ಅದರಿಂದ ದೂರ ಸರಿ-ದಾಗಿತ್ತು, ಇಂಗ್ಲಿಷ್ ತೀರ ಸೇರಿಯಾಗಿತ್ತು. ಮಾನಸ ಗಂಗೋತ್ರಿಯ ದಿನಗಳ ಕುರಿತು ನಾನಿಲ್ಲಿ ಹೊಸತೇನೂ ಹೇಳುವುದುಳಿದಿಲ್ಲ. ಎಮ್ಮೆ ಪ್ರಥಮ ವರ್ಷಾಂತ್ಯ ಸಮೀಪಿಸುತ್ತಿದ್ದಂತೆ ನನ್ನಲ್ಲಿ ಹಿಂದಿನ ವರ್ಷದ ಕೊಡಗು ಸುತ್ತಾಟಕ್ಕಿಂತ ಹೆಚ್ಚಿನದ್ದೇನಾದರೂ ಸಾಧಿಸಬೇಕೆಂಬ ತುಡಿತವಿತ್ತು. ಆಗ ಬಂದರು – ಡಿವಿಕೆ ಮೂರ್ತಿ – ಕನ್ನಡದ ಹಿರಿಯ ಪ್ರಕಾಶಕ, ನಮ್ಮ ಆಪ್ತ ಕುಟುಂಬ ಮಿತ್ರ. ಅವರು ಹೀಗೇ ವಿಚಾರಿಸಿ, ಕೊಟ್ಟ ಸವಾಲನ್ನು ಸಮರ್ಥವಾಗಿಯೇ ನಿರ್ವಹಿಸಿ ಯಶಸ್ವಿಯಾದೆ. ಅಂದರೆ ಸುಮಾರು ಒಂದೂವರೆ ತಿಂಗಳ ಅವಧಿಯಲ್ಲಿ ಮುಂಬೈ, ಪುಣೆ ಸುತ್ತಿ ಕನ್ನಡಿಗರ ಮನೆಮನೆಗೆ ಕನ್ನಡ ಪುಸ್ತಕ ಮಾರಿದ ರೋಚಕ ಅನುಭವ. ಅಸಂಖ್ಯ ದೊಡ್ಡ ಮನಸ್ಸುಗಳ ಪರಿಚಯ, ಸುಮಾರು ಹದಿನೈದು ಸಾವಿರ ರೂಪಾಯಿಗಳ ವಹಿವಾಟು (ಆ ಕಾಲಕ್ಕೆ ದೊಡ್ಡದೇ). ಎಮ್ಮೆ ಎರಡನೇ ವರ್ಷದುದ್ದಕ್ಕೆ ಮುಂಬೈ-ಪುಣೆಗಳ ಪುಸ್ತಕ ಸಂಬಂಧವನ್ನು ಅಂಚೆಯಲ್ಲಿ ಸಾಕಿದೆ. ಅರಿವಿಲ್ಲದೆ ನನ್ನ ವೃತ್ತಿ ಜೀವನಕ್ಕೇ ಬುನಾದಿ ಕಟ್ಟಿದ್ದೆ.

ಮೈಸೂರು ವಲಯದ ಅಂಚೆ ಕಛೇರಿಗಳ ಮುಖ್ಯಸ್ಥ – ಕೆ.ಎಸ್. ಭಟ್, ಐಪೀಯೆಸ್ (ಪೋಸ್ಟಲ್), ನಮ್ಮ ಕುಟುಂಬ ಮಿತ್ರರು. ಅವರೊಮ್ಮೆ ಕೇಳಿದರು “ಎಮ್ಮೆ ಆದ ಮೇಲೆ ಏನು?” ಭಾರತೀಯ ಸೈನ್ಯ, ಅಧ್ಯಾಪಕ, ಪತ್ರಿಕೋದ್ಯಮ, ಪುಸ್ತಕ ವ್ಯಾಪಾರೀ…. ಆಯ್ಕೆಗಳು ಹಲವಿದ್ದರೂ ನನ್ನ ಮನಸ್ಸು ಅಂತಿಮ ವರ್ಷದ ಪರೀಕ್ಷೆ ಮುಗಿದ ಮೇಲೆ ಹಿಂಬಾಲಿಸುವ ರಜಾಕಲಾಪದಿಂದಾಚೆಗೆ ಯೋಚಿಸಿಯೇ ಇರಲಿಲ್ಲ! ಕೆ.ಎಸ್. ಭಟ್ಟರು “ಸಾಹಸೀ ಪ್ರವೃತ್ತಿಗೆ ಐ.ಪಿ.ಎಸ್ (ಪೋಲಿಸ್ ಸರ್ವಿಸ್) ಸರಿ” ಎಂದದ್ದಷ್ಟೇ ತಲೆ ಹೊಕ್ಕಿತ್ತು. ಅರ್ಜಿ ತರಿಸಿ, ಗುಜರಾಯಿಸಿಬಿಟ್ಟೆ. ತಯಾರಿ ಕೇಳಬೇಡಿ.

ಅಂತಿಮ ಎಮ್ಮೆ ಲಿಖಿತ ಪರೀಕ್ಷೆ ಮುಗಿಯುತ್ತಿದ್ದಂತೆ “….ತೊರೆಯೆ ಪಠ್ಯ ರೇಜಿಗೆ, ಮತ್ತೆ ಬಂತು ಬೇಸಗೆ” ಪಲ್ಲವಿಸುತ್ತಲೇ ಇತ್ತು. ಅದಕ್ಕೆ ಸರಿಯಾಗಿ ಉಡುಪಿಯ ಕರೆ! “ಸಿಂಡಿಕೇಟ್ ಬ್ಯಾಂಕಿನ ಕೃಷಿ ಸಾಲ ಯೋಜನೆಯ ಅಧ್ಯಯನಕ್ಕೆ ಜರ್ಮನ್ ವಿವಿ ನಿಲಯದ ತಂಡವೊಂದು ಬರುವುದಿದೆ. ಸುಮಾರು ಒಂದೂವರೆ ತಿಂಗಳಿಗೆ ಅವರ ಕ್ಷೇತ್ರಕಾರ್ಯಕ್ಕೆ ದುಭಾಷಿಯಾಗಿ ಬರ್ತಿಯಾ?” ಕುಶಿ ಹರಿದಾಸ ಭಟ್ಟರ ಮಾತು ಮುಗಿಯುವುದರೊಳಗೆ ನಾನು ಉಡುಪಿ ಸೇರಿಯಾಗಿತ್ತು! ತಮ್ಮ ಕಾಲೇಜಿನ ನಾಲ್ಕೈದು ವಿದ್ಯಾರ್ಥಿಗಳ ಜತೆಗೆ ನನ್ನನ್ನೂ ಒಬ್ಬ ಇಂಗ್ಲಿಷ್ – ಕನ್ನಡ ದುಭಾಷಿ ಮಾಡಿದ್ದರು. ನನಗೆ ವಾಸಕ್ಕೆ ಎಂಜಿಎಂ ಕಾಲೇಜಿನ ಅತಿಥಿಗೃಹ. ಅಲ್ಲಾಗಲೇ ಇದ್ದ ಕವಿ ಗೋಪಾಲ ಕೃಷ್ಣ ಅಡಿಗರ ಮಗ – ಪ್ರದ್ಯುಮ್ನ ಮತ್ತು ನಾಟಕಕಾರ ಬಿವಿ ಕಾರಂತರ ತಮ್ಮ – ಕೃಷ್ಣ ಕಾರಂತರ ಪರಿಚಯ ನನಗೆ ಬೋನಸ್.

ಬೆಳಗ್ಗಿನಿಂದ ಸಂಜೆಯವರೆಗೆ ಜರ್ಮನ್ ಬಳಗದೊಡನೆ ವ್ಯಾನೋ ಕಾರೋ ಏರಿ ಓಡಾಟಗಳು. ಬ್ಯಾಂಕಿನ ಕೃಷಿ ಅಧಿಕಾರಿ ರಾಮಮೂರ್ತಿ ನಮ್ಮ ಮಾರ್ಗದರ್ಶಿ. ಉಡುಪಿಯ ಆಸುಪಾಸು, ಪಾಣಾಜೆಯ ಸುತ್ತುಮುತ್ತು ಎಂದು ಜಿಲ್ಲೆಯ ವಿವಿಧ ಮೂಲೆಗಳಲ್ಲಿ ಸುಮಾರು ಮೂರು ವಾರಗಳ ಕಾಲ ಸಂದರ್ಶನಗಳು. ಪುಟಗಟ್ಟಳೆ ಇಂಗ್ಲಿಷ್ ಪ್ರಶ್ನಾವಳಿಗಳನ್ನು ಸಾಲ-ಸಹಾಯ ಪಡೆದವರಿಗೆ ಕನ್ನಡದಲ್ಲಿ ಒಂದೊಂದಾಗಿ ಹೇಳಿ, ಬಂದ ಉತ್ತರವನ್ನು ಇವರಿಗೆ ಇಂಗ್ಲಿಷಿನಲ್ಲಿ ಹೇಳಿ, ಸ್ಪಷ್ಟೀಕರಣಗಳಿದ್ದರೆ ಅಳವಡಿಸಿಕೊಂಡು, ಕಲಮುಗಳನ್ನು ನಾವೇ ತುಂಬಿಕೊಟ್ಟೆವು. ಅನಂತರ ಅವರೇ ಕೊಟ್ಟ ಪುಟ್ಟ ಕಚೇರಿಯಲ್ಲಿ ಮತ್ತೊಂದೆರಡು ವಾರ ಕುಳಿತು ಎಲ್ಲವನ್ನೂ ವಿವಿಧ ವಿಷಯವಾರು ವಿಂಗಡಿಸಿ, ಪ್ರತ್ಯೇಕ ಕೋಷ್ಠಕಗಳನ್ನೂ ಮಾಡಿ ಕೊಟ್ಟೆವು. ಸಂಭಾವನೆ ನಾಮಕಾವಸ್ಥೆಯದ್ದಾದರೂ ಅನುಭವ ದೊಡ್ಡದು.

ಕರಾವಳಿಯ ಮಳೆ, ತೋಟ, ಗದ್ದೆ, ಕೃಷಿ ಎಂದು ಸುತ್ತಾಡಿ ತಲೆ ತುಂಬ ಗೊಬ್ಬರ ತುಂಬಿಕೊಂಡೇ ಮೈಸೂರಿಸಿದೆ. ನಿರುಮ್ಮಳವಾಗಿ ಎಮ್ಮೆ ಮೌಖಿಕ ಪರೀಕ್ಷೆ ಕೊಟ್ಟೆ! ಮತ್ತೆ ಮರಳಿದ್ದು ದಕ ಜಿಲ್ಲೆಗೇ ಪುಸ್ತಕದಂಗಡಿಯ ಸಾಕಾರಕ್ಕೆ. ಖಾಲೀ ಮಳಿಗೆ ಹುಡುಕುತ್ತ, ಶಾಲಾ ಕಾಲೇಜುಗಳ ಸಂಪರ್ಕ ಬೆಳೆಸುತ್ತ, ಎಡೆಯಲ್ಲಿ ಪ.ಘಟ್ಟದ ದಿಗ್ಗಜಗಳನ್ನು ಪರಿಚಯಿಸಿಕೊಳ್ಳುತ್ತಿದ್ದಂತೆ ಕಾಲಗತಿಗೆ ಇನ್ನೊಂದು ಅಮುಖ್ಯ ನಿಲ್ದಾಣ ಬಂದಿತ್ತು – ಐಪೀಯೆಸ್ ಲಿಖಿತ ಪರೀಕ್ಷೆ. ಎಂದಿನ ಪರೀಕ್ಷಾ ತಯಾರಿಯಲ್ಲೇ ಹರಕೆ ತೀರಿಸಿದೆ. ಮಾರ್ಚ್ ಸುಮಾರಿಗೆ ಯೂಪೀಎಸ್ಸಿಯಿಂದ ತೀರಾ ಬಡ ಅಂಕಪಟ್ಟಿ ಬರುವುದರೊಡನೆ ನನ್ನ ಅನಿಶ್ಚಿತತೆಗಳಿಗೆ ಸ್ಪಷ್ಟ ಕೊನೆಯ ತೆರೆ ಬಿತ್ತು.

೧೯೭೫ರ ಮಳೆಗಾಲ ‘ಅತ್ರಿ ಬುಕ್ ಸೆಂಟರ್’ ಕನಸಿಗೆ ಗಟ್ಟಿ ನೆಲೆಯನ್ನು ಒದಗಿಸಿತು. ಮುಂದಿನದು ಮೂವತ್ತಾರು ವರ್ಷಗಳ ದೀರ್ಘ ಕಥನ. ಅದರ ಧೋರಣಾತ್ಮಕ ಕಿರು ನೋಟಗಳನ್ನಷ್ಟೆ ನನ್ನ ‘ಪುಸ್ತಕ ಮಾರಾಟ ಹೋರಾಟ’ ಬಿಂಬಿಸುತ್ತದೆ. ನಿಜದ ‘ಮಹಾಪುರಾಣವನ್ನು’ ಇನ್ನೊಮ್ಮೆ ಎಂದಾದರೂ ಇಂಥದ್ದೇ ಮಾಲಿಕೆಯಲ್ಲಿ ನಾನು ಕೊಡಲೂಬಹುದು.

(ಮುಂದುವರಿಯಲಿದೆ)