ಅಧ್ಯಾಯ ಅರವತ್ತೆರಡು
[ಡೇವಿಡ್ ಕಾಪರ್ಫೀಲ್ಡ್‍ನ ಜೀವನ ವೃತ್ತಾಂತ ಮತ್ತು ಅನುಭವಗಳು, ಕಾದಂಬರಿ. ಮೂಲ ಇಂಗ್ಲಿಷಿನಲ್ಲಿ ಚಾರ್ಲ್ಸ್ ಡಿಕನ್ಸ್, ಕನ್ನಡ ಭಾವಾನುವಾದ ಎ.ಪಿ. ಸುಬ್ಬಯ್ಯ]
ವಿ-ಧಾರಾವಾಹಿಯ ಅರವತ್ನಾಲ್ಕನೇ ಕಂತು

ದಿನಗಳು ಉರುಳುತ್ತಾ ಉರುಳುತ್ತಾ ಕ್ರಿಸ್ಮಸ್ ಕಾಲ ಬಂತು. ಈ ಮಧ್ಯೆ ನಾನು ಏಗ್ನೆಸ್ಸಳನ್ನು ಆಗಿಂದಾಗ್ಗೆ ಕೇಂಟರ್ಬರಿಗೆ ಹೋಗಿ ನೋಡಿ ಬರುತ್ತಲೇ ಇದ್ದೆನು. ನನ್ನ ಸಾಹಿತೀ ವೃತ್ತಿಯಲ್ಲಿ ನನ್ನನ್ನು ಯಾರು ಎಷ್ಟೇ ಹೊಗಳಿ ಪ್ರೋತ್ಸಾಹಿಸಿದರೂ – ಒಮ್ಮೆಗೆ ಅಂಥಾ ಪ್ರೋತ್ಸಾಹ ನನ್ನನ್ನು ಎಷ್ಟೇ ಹುರಿದುಂಬಿಸಿದ್ದಿರಬಹುದಾದರೂ – ಆ ಹೊಗಳಿಕೆ ಪ್ರೋತ್ಸಾಹಗಳು ಏಗ್ನೆಸ್ಸಳ ಬರೇ ಒಂದು ಮಾತು ನನ್ನಲ್ಲಿ ಉಂಟು ಮಾಡುತ್ತಿದ್ದುದರಷ್ಟು ಪರಿಣಾಮವನ್ನು ಮಾಡುತ್ತಿರಲಿಲ್ಲ.

ನಾನು ವಾರಕ್ಕೊಮ್ಮೆ ಕೇಂಟರ್ಬರಿಗೆ ಹೋಗಿ ಬರುತ್ತಿದ್ದರೂ ನನ್ನ ಮನಸ್ಸು ಸುಖವಾಗುತ್ತಿರಲಿಲ್ಲ, ಅದಕ್ಕೆ ಶಾಂತಿಯಿರಲಿಲ್ಲ. ಇದಕ್ಕಾಗಿ ದೈಹಿಕ ಪರಿಶ್ರಮಗಳನ್ನು ಕೈಕೊಳ್ಳುತ್ತಿದ್ದೆನು. ಅದಕ್ಕಾಗಿ ಕುದುರೆ ಸವಾರಿ ಮಾಡುತ್ತಿದ್ದೆನು, ತುಂಬಾ ದೂರ ನಡೆಯುವುದೂ ಇತ್ತು. ಏನೇ ಮಾಡಿದರೂ ಮನಸ್ಸಿಗೆ ನೆಮ್ಮದಿಯಿರಲಿಲ್ಲ. ಏಗ್ನೆಸ್ಸಳು ನನ್ನ ಪತ್ನಿಯಾಗಬೇಕೆಂದು ನಾನು ಪರದೇಶದಲ್ಲಿದ್ದಾಗ ಉಂಟಾಗಿದ್ದ ಕಾಂಕ್ಷೆ ಈಗಲೂ ಹಾಗೆಯೇ ಇದ್ದು, ಅವಳಿಗೆ ನನ್ನ ಮನಸ್ಸನ್ನು ಬಿಚ್ಚಿ ತಿಳಿಸಬೇಕೆಂದು ಅದು ಒಂದು ಕಡೆಯಿಂದ ಒತ್ತಾಯಿಸುತ್ತಿದ್ದರೂ ಮತ್ತೊಂದು ಕಡೆಯಿಂದ, ಹೀಗೆ ತಿಳಿಸಿದ್ದಾದರೆ ನಮ್ಮ ಸಹೋದರ –ಸಹೋದರೀ ಭಾವಕ್ಕೆ ಸಹ ಭಂಗ ಬಂದು, ಕಾಂಕ್ಷೆಯಾಗಿ ಸಹ ಉಳಿಯದೇ ಹೋಗಬಹುದೆಂದು ಅದು ಹೆದರಿಸುತ್ತಲೂ ಇತ್ತು. ನಾನು ನನ್ನ ಕಾದಂಬರಿಗಳ ಕರಡು ಪ್ರತಿಗಳನ್ನು ಏಗ್ನೆಸ್ಸಳಿಗೆ ಓದಿ ಹೇಳುತ್ತಿದ್ದೆನು. ಆ ಕಾದಂಬರಿಗಳಲ್ಲಿ ತೋರುವ ನನ್ನ ಎಲ್ಲಾ ಭಾವನೆಗಳನ್ನು ಅವಳು ಅರಿತು, ಆನಂದಿಸಿ, ದುಃಖಿಸಿ, ನನ್ನನ್ನು ತುಂಬಾ ಪ್ರೋತ್ಸಾಹಿಸುತ್ತಿದ್ದಳು. ಡೋರಾಳಿಗೆ ಸಾಕಷ್ಟು ಬುದ್ಧಿಯೊಂದು ಇದ್ದಿದ್ದರೆ ನನ್ನ ಸಂತೋಷವನ್ನು ಎಷ್ಟೊಂದು ಹೆಚ್ಚಿಸಬಹುದಿತ್ತೆಂದು ಗ್ರಹಿಸುತ್ತಿದ್ದಂತೆಯೇ – ಇಷ್ಟೊಂದು ಬುದ್ಧಿ, ಜ್ಞಾನ, ಅನುಭವವುಳ್ಳ ಏಗ್ನೆಸ್ಸಳು ಸಹೋದರಿಯಂತಿರುವುದರ ಜತೆಗೆ ಪತ್ನಿಯೂ ಆಗಿದ್ದಿದ್ದರೆ ನನ್ನ ಬಾಳು ಎಷ್ಟೊಂದು ಸುಖ ಸಂತೋಷಮಯವಾಗಿರುತ್ತಿತ್ತೆಂದೂ ಗ್ರಹಿಸುತ್ತಿದ್ದೆನು.

ಆದರೆ, ನನ್ನ ಈ ಅಭಿಪ್ರಾಯಗಳನ್ನು ಏಗ್ನೆಸ್ಸಳಿಗೆ ತಿಳಿಸುವಷ್ಟು ನನಗೆ ಧೈರ್ಯವಿರಲಿಲ್ಲ. ನಾವಿಬ್ಬರೂ ಮುದುಕರಾದಾಗ ಈ ಸಂಗತಿಗಳನ್ನು ತಿಳಿಸುವುದೆಂದೂ ಆವರೆಗೆ ಮೌನವಾಗಿದ್ದು ಕಷ್ಟಗಳನ್ನು ಸಹಿಸುವೆನೆಂದೂ ನಿರ್ಧರಿಸಿದೆನು. ಅತ್ತೆಗೆ ನನ್ನ ಮನಸ್ಸಿನ ಮಾರ್ಗಗಳೂ ಅದರ ತರಂಗಗಳೂ ಅರ್ಥವಾಗುತ್ತಿದ್ದುವು. ಆದರೆ ತನ್ನ ಅಭಿಪ್ರಾಯವನ್ನು ನನಗೆ ತಿಳಿಸುವುದು ಹೇಗೆಂದು ಅವಳೂ ಹೆದರುತ್ತಿದ್ದಿರಬೇಕೆಂದು ನಾನು ಊಹಿಸುತ್ತಿದೆ. ಅವಳ ಮನಸ್ಸನ್ನು ನಾನು ಅರಿತಿದ್ದೆನು. ಈ ಕಾರಣಗಳಿಂದ ಕೆಲವೊಮ್ಮೆ, ನಾವು ಒಬ್ಬರನ್ನೊಬ್ಬರು ನೋಡಿಕೊಂಡು ಘಂಟೆಗಟ್ಟಲೆ ಮೌನವಾಗಿ ಕುಳಿತಿರುತ್ತಿದ್ದೆವು.

ನನ್ನ ಮಾನಸಿಕ ತಳಮಳ ವಿಪರೀತವಾಗಿದ್ದ ಒಂದು ದಿನ, ಅತ್ತೆಯು ಈ ವಿಷಯವನ್ನು ನನ್ನ ಮುಖ ನೋಡಿಯೇ ತಿಳಿದುಕೊಂಡು –
“ನಾಳೆ ದಿನ ನೀನು ಕೇಂಟರ್ಬರಿಗೆ ಹೋಗಲಿದೆಯೇ” ಎಂದು, ಏನಾದರೂ ಒಂದು ವಿಧದಿಂದ ನನ್ನೊಡನೆ ಪ್ರಸ್ತಾಪವೆತ್ತಲೋಸ್ಕರವೆನ್ನುವಂತೆ ಕೇಳಿದಳು. ನಾನಂದೆ –
“ಹೋಗಬೇಕು.”
“ಈ ಚಳಿಯಲ್ಲಿ? – ಹಿಮ ಸುರಿಯುತ್ತಿದೆ, ಹೀಗೊಂದು?”
“ಇಂಥ ಸಮಯದಲ್ಲೇ ವ್ಯಾಯಾಮವೋ ದೇಹ ಚಟುವಟಿಕೆಗಳೋ ಬೇಕು. ನನಗೆ ಕುದುರೆ ಸವಾರಿಯಿಂದ ತುಂಬಾ ಸುಖವಾಗುತ್ತದೆ.”
“ನೀನು ಹೋಗುವಾಗ್ಗೆ ಒಂದು ಶುಭವಾರ್ತೆಯನ್ನೇ ತಿಳಿದುಕೊಂಡು ಹೋಗು – ನಿನಗೆ ಶುಭವಾಗಲಿ!” ಎಂದು ಅತ್ತೆ ಹೇಳಿದಳು.
“ಏನು ಶುಭವಾರ್ತೆ?” ಎಂದನ್ನಬೇಕಾಯ್ತು ನಾನು.
“ಏಗ್ನೆಸ್ಸಳು ಮದುವೆಯಾಗಲು ನಿಶ್ಚೈಸಿರುವಳು” ಅಂದಳು ಅತ್ತೆ; ಮತ್ತೆ ಮಾತು ಮುಂದುವರಿಸಲಿಲ್ಲ. ನನಗೆ ಆಶ್ಚರ್ಯವಾಯಿತು, ದುಃಖವಾಯಿತು, ಸ್ವಲ್ಪ ಗಾಬರಿಗೊಂಡೆನು. ಆದರೆ, ನನ್ನ ಮನಸ್ಸಿನ ಸ್ಥಿತಿಗಳನ್ನು ಆಗಲೇ ಅತ್ತೆಗೆ ತಿಳಿಸದಿರುವುದು ಉತ್ತಮವೆಂದು ನಿಶ್ಚೈಸಿದೆನು. ಹಾಗಾಗಿ ನಾನು ಮೌನವಾಗಿ ಕುಳಿತೆನು.

ಮರುದಿನ ಬೆಳಗ್ಗೆ ಕೇಂಟರ್ಬರಿಗೆ ಹೊರಟೆನು. ಸರ್ವತ್ರ ಹಿಮವು ಆವರಿಸಿತ್ತು. ರಸ್ತೆಯ ಮೇಲೆಲ್ಲ ಮಂಜುಗಡ್ಡೆ ಮುಚ್ಚಿತ್ತು. ಕುದುರೆಯು ಕಲ್ಲಿನ ಮೇಲೆ ನಡೆಯುತ್ತಿದ್ದಂತೆ ಶಬ್ದ ಕೇಳಿಸುತ್ತಿತ್ತು. ಕುದುರೆಯೂ ಚಳಿಗಾಗಿ ಸಿಗಾರ್ ಸೇದುತ್ತಿದ್ದಂತೆ ಅದರ ಮೂಗಿನಿಂದ ಹೊಗೆಯಾಕಾರದಲ್ಲಿ ಉಸಿರು ಹೊರಬರುತ್ತಿತ್ತು. ರಸ್ತೆಯಲ್ಲಿ ಜನ, ವಾಹನಗಳ ಸಂಚಾರವಿರಲಿಲ್ಲ. ಒಂದು ಕಡೆ ಮಾತ್ರ ನನ್ನ ಎದುರಿನಿಂದ ಬರುತ್ತಿದ್ದ ಹುಲ್ಲಿನ ಗಾಡಿಯ ಕುದುರೆಗಳು ಏರಿಬರುತ್ತಿದ್ದ ರಸ್ತೆಯ ತುದಿಯಲ್ಲಿ ಸುಧಾರಿಸಿಕೊಳ್ಳಲು ನಿಂತಿದ್ದುವು. ಅವುಗಳು ಚಳಿಗಾಗಿ ತಮ್ಮ ಕತ್ತನ್ನೊಮ್ಮೆ ಕುಡುಗಿ ಬಂಡಿಯನ್ನೆಳೆಯುವಾಗ ಆದ ಘಂಟಾಮಣಿಗಳ ಶಬ್ದ, ಆ ಬೆಳಗ್ಗಿನ ಹವ, ಸನ್ನಿವೇಶದಲ್ಲಿ, ಬಹು ಇಂಪಾಗಿ ಕೇಳಿಸಿತು.

ನಾನು ಮಿ. ವಿಕ್ಫೀಲ್ಡರ ಮನೆಗೆ ಹೋಗುವಾಗ ಏಗ್ನೆಸ್ಸಳು ಒಂದು ಕುರ್ಚಿಯಲ್ಲಿ ಕುಳಿತು ಏನೋ ಒಂದು ಪುಸ್ತಕವನ್ನು ಓದುತ್ತಿದ್ದಳು. ನಾನು ಅಲ್ಲಿ ಕಂಡದ್ದು ಅವಳೊಬ್ಬಳನ್ನೇ ಆಗಿದ್ದುದರಿಂದ, ವಿಶೇಷ ಮಾತಾಡದೆ ಅವಳ ಸಮೀಪ ಹೋಗಿ, ಕಿಟಕಿಯ ಅಗಲವಾದ ಚಡಿಯಲ್ಲಿ ಕುಳಿತುಕೊಂಡೆನು. ನಾವು ಯಾವಾಗಲೂ ವಿಶೇಷ ಸಾಂಪ್ರದಾಯಿಕ ಮರ್ಯಾದೆಗಳನ್ನು ಪರಸ್ಪರವಾಗಿ ಮಾಡಿಕೊಳ್ಳುತ್ತಿರಲಿಲ್ಲ. ನಾವು ಅಂಥ ಸಂಬಂಧಕ್ಕಿಂತಲೂ ಹೆಚ್ಚಿನ ಸಮೀಪದವರಾಗಿದ್ದುದರಿಂದ, ಅವಳು ನನ್ನನ್ನು ನೋಡಿದೊಡನೆಯೇ

“ಟ್ರಾಟೂಡ್, ನೀನು ಯಾವುದೋ ಚಿಂತೆಯಲ್ಲಿರುವಂತೆ ತೋರುವೆಯಲ್ಲಾ?” ಎಂದು ಆಶ್ಚರ್ಯಚಕಿತಳಾಗಿ ಕೇಳಿದಳು. “ನಿನ್ನೊಡನೆ ಕೆಲವು ವಿಷಯಗಳನ್ನು ಮಾತಾಡಬೇಕೆಂದು ಬಂದಿರುತ್ತೇನೆ, ಸಮಯವಿದ್ದರೆ ಹೇಳು” ಎಂದಂದೆನು.

ಏಗ್ನೆಸ್ಸಳು ಪುಸ್ತಕವನ್ನು ಒಂದು ಕರೆಯಲ್ಲಿಟ್ಟು, ಪೂರ್ಣ ನನ್ನ ಕಡೆಗೆ ಮುಖ ಹಾಕಿ, ನನ್ನ ಮಾತನ್ನು ಅವಳು ಯಾವಾಗಲೂ ಕೇಳುವ ಶ್ರದ್ಧೆಯಿಂದ, ಕೇಳಲು ಅನುವಾಗಿ ಕುಳಿತಳು. ನಾನು ಕೇಳಿದೆ – “ನಾನು ನಿನ್ನನ್ನು ವಂಚಿಸಿರುವೆನೆಂದು ಎಂದಾದರೂ ಗಹಿಸಿರುವೆಯಾ?” “ಇಲ್ಲ.” “ನೀನು ನನ್ನ ಜೀವನ ಪಥಕ್ಕೆ ಒಂದು ಜ್ಯೋತಿಯಂತೆ ಇರುವೆ – ಎಂದಂದ ಪಕ್ಷಕ್ಕೆ ನಾನು ಠಕ್ಕು ಮಾತಾಡುತ್ತಿದ್ದೇನೆಂದು ಗ್ರಹಿಸುವೆಯಾ?” “ಇಲ್ಲ – ನಿನ್ನ ಭಾವನೆಯನ್ನು ನಿರ್ವಂಚನೆಯಿಂದ ತಿಳಿಸುತ್ತಿರುವೆಯೆಂದೇ ನಂಬುತ್ತೇನೆ. ನಾನು ಮಾತ್ರ ನಿನ್ನ ಅಭಿಪ್ರಾಯಕ್ಕೆ ತಕ್ಕಂಥ ಯೋಗ್ಯತೆಯುಳ್ಳವಳೋ ಅಲ್ಲವೋ ಎಂಬ ಪ್ರಶ್ನೆಯೇ ಬೇರೆ.” “ಅಷ್ಟೊಂದು ನಂಬಿಕೆ ನಿನಗೆ ನನ್ನಲ್ಲಿದ್ದರೆ ನಿನ್ನಂತರಂಗದಲ್ಲಿರುವ ಗುಟ್ಟನ್ನೇಕೆ ನನಗೆ ತಿಳಿಸುವುದಿಲ್ಲ?”

ನನ್ನ ಪ್ರಶ್ನೆಗೆ ಏಗ್ನೆಸ್ಸಳು ಉತ್ತರವೀಯಲಿಲ್ಲ. ಮುಖ ತಿರುಗಿಸಿ ಬೇರೇನನ್ನೋ ನೋಡತೊಡಗಿದಳು – ಸ್ವಲ್ಪ ಅಳು ಬರುತ್ತಿದ್ದಂತೆ ತೋರುತ್ತಿದ್ದಳು. “ಏಗ್ನೆಸ್, ನಿನ್ನ ಮನಸ್ಸು ಯಾರಲ್ಲಿ ಅನುರಕ್ತವಾಗಿರುವುದೆಂದು – ಹಾಗೆ ನೀನು ಅನುರಕ್ತಳಾಗಿರುವುದಾದ ಪಕ್ಷಕ್ಕೆ, ನಾನು ನಿನ್ನಿಂದಲೇ ತಿಳಿಯ ಬಯಸುತ್ತೇನೆ. ಇತರರಿಂದ ಅಂಥ ವರ್ತಮಾನವನ್ನು ಕೇಳಿದರೆ ನನಗೆ ದುಃಖವಾಗುವುದು. ನಮ್ಮೊಳಗೆ ಗುಟ್ಟು ಇರಬಾರದೆಂದೂ ಗುಟ್ಟು ಇಲ್ಲವೆಂದೂ ವರ್ತಿಸುವ ನಮಗೆ ಈ ವಿಷಯದಲ್ಲೂ ಗುಟ್ಟಿರಬಾರದು. ನಾನು ಡೋರಾಳನ್ನು ಕುರಿತು ಪಡುತ್ತಿದ್ದ ಅಭಿಪ್ರಾಯವನ್ನೂ ಅನಂತರ ನನ್ನ ಪ್ರೇಮದ ಬೆಳವಣಿಗೆಯನ್ನೂ ನಿನಗೆ ತಿಳಿಸಿ ನನ್ನ ಸಂತೋಷವನ್ನು ಹೆಚ್ಚಿಸಿಕೊಂಡಿದ್ದೇನೆ. ಈ ಕ್ರಮದಲ್ಲಿ ನಾನೇಕೆ ನಿನ್ನ ಅಂತರಂಗವನ್ನು ತಿಳಿದು ನಿನ್ನ ಸಂತೋಷದಲ್ಲಿ ಭಾಗಿಯಾಗಬಾರದು?” ಎಂದು ನಾನು ಪ್ರಶ್ನಿಸಿದೆ.

ಏಗ್ನೆಸ್ಸಳಿಗೆ ಕಣ್ಣೀರು ಬಂತು. ಅಳುತ್ತಾ ಎದ್ದಳು – “ಈ ಹೊತ್ತು ಬೇಡ, ಈಗ ಬೇಡ….” ಎಂದು ಹೇಳುತ್ತಾ ಹೊರಟು ಹೋಗಲು ಉದ್ಯುಕ್ತಳಾದಳು. “ಹೆದರಬೇಡ, ಏಗ್ನೆಸ್. ನಿನ್ನ ಹೃದಯವನ್ನು ಬೇರೊಬ್ಬನಿಗೆ ಒಪ್ಪಿಸಿದ್ದರೆ, ಆ ಸಂಗತಿಯನ್ನು ನಾನು ತಿಳಿದರೆ, ನಾನು ದುಃಖಪಡಬಹುದೆಂದು ಹೆದರಬೇಡ. ನೀನು ನನಗೆ ಸದಾ ಅತ್ಯಂತ ಪ್ರಿಯಳಾದ ಸಹೋದರಿಯೇ ಆಗಿ ಉಳಿಯುವೆ. ನಿನ್ನ ಮನಸ್ಸಿಗೆ ವೇದನೆಯಿಲ್ಲದಂತೆ ನನ್ನ ಬಾಳನ್ನು ನಡೆಸುವ ನಿರ್ಧಾರವನ್ನು ನಾನು ಮಾಡಿಕೊಳ್ಳಬಲ್ಲೆನು. ದಯಮಾಡಿ ತಿಳಿಸು” ಎಂದು ಉತ್ತರಕ್ಕಾಗಿ ಒತ್ತಾಯಿಸಿದೆನು. “ಟ್ರಾಟೂಡ್, ನೀನು ಇಷ್ಟನ್ನು ಸ್ಪಷ್ಟವಾಗಿ ತಿಳಿದಿರು: ನೀನು ಶಾಲೆಗೆ ಹೋಗುತ್ತಿದ್ದಾಗಿನಿಂದಲೂ – ಅಂದಿನಿಂದ ಇಂದಿನವರೆಗೂ, ಸದಾ ನಾನು ನಿನ್ನನ್ನು ಒಂದೇ ವಿಧದಿಂದ ಪ್ರೀತಿಸುತ್ತಿದ್ದೇನೆ. ನನ್ನ ಜೀವನದಲ್ಲಿ ನೀನು ಕೊಡತಕ್ಕ ಸಂತೋಷವನ್ನು ಇನ್ನು ಯಾರೂ ಕೊಡಲಾರರೆಂಬುದು ನನಗೂ ದೇವರಿಗೂ ಮಾತ್ರ ಗೊತ್ತು. ನಿನ್ನ ಮೇಲಿನ ನನ್ನ ಭಾವನೆಯೇ ನಾನು ಬದುಕುವುದರಲ್ಲಿನ ಸಂತೋಷ. ಆ ದಿವ್ಯ ಅನುಭವವೂ ನನ್ನ ಪ್ರೀತಿಯ ಸ್ಥಿರತೆಯೂ ನನ್ನಿಂದ ಎಂದೂ ಅಗಲಿ ಹೋಗಲಾರವು. ಆದ್ದರಿಂದ ನನ್ನ ಮನಸ್ಸು ಹೇಗಿದೆ, ಯಾರ ಮೇಲಿದೆ ಇತ್ಯಾದಿಗಳನ್ನು ಹೇಳದಿರಲು ಕಾರಣವೇ ಇಲ್ಲ. ಇದಕ್ಕಿಂತ ಹೆಚ್ಚೇನು ಹೇಳಲಿ!” ಎಂದು ನನ್ನ ಹೃದಯವೇ ಕರಗುವಂತೆ ಹೇಳಿದಳು.

“ಇಷ್ಟೊಂದು ಚಿಕ್ಕ ಪ್ರಾಯದಲ್ಲೇ ನೀನು ಇತರರಿಗಾಗಿ ಶ್ರಮಪಡುತ್ತಾ ಬಾಳುತ್ತಿರುವೆ. ನೀನೇ ಇತರರ ದುಃಖಗಳನ್ನು ವಿಚಾರಿಸಿ, ಅವರಿಗೆ ಸಹಾಯ ನೀಡುವ ನಿನ್ನ ಗುಣದ ಪ್ರಯೋಜನವನ್ನು ನಾನೂ ಸಹಸ್ರಾರು ವಿಧದಿಂದ, ಸಂದರ್ಭಗಳಲ್ಲಿ ಪಡೆದಿರುವೆನು. ಆದರೂ ನಿನ್ನ ಮನಸ್ಸು ಹೇಗಿದೆ – ನಿನ್ನಂತರಂಗದಲ್ಲಿ ದುಃಖವೇನಾದರೂ ಇದೆಯೋ ಎಂದು ವಿಚಾರಿಸಲು ನನಗೆ ಬುದ್ಧಿ ತೋಚಲಿಲ್ಲ. ನೀನು ಅಂದಿನಿಂದಲೂ ಒಂದೇ ರೀತಿಯಲ್ಲಿರುವೆ. ನನ್ನ ಮನಸ್ಸಿನ ಚಾಂಚಲ್ಯದ ಫಲವನ್ನು ಒಮ್ಮೆ ಅನುಭವಿಸಿ ಆಯಿತು. ನನ್ನ ಅಂಥ ಅನುಭವದ ಕಾರಣವಾಗಿ ಇನ್ನೊಮ್ಮೆ ನನ್ನ ಮನಸ್ಸು ಅಸ್ಥಿರವಾಗಲಾರದು. ನಿನ್ನನ್ನು ಸಹೋದರಿ ಎಂದು ಭಾವಿಸುವುದಕ್ಕಿಂತ – ಕರೆಯುವುದಕ್ಕಿಂತ, ಹೆಚ್ಚಿನದಾದ ಒಂದು ದೃಷ್ಟಿಯಿಂದ ಭಾವಿಸುವ – ಕರೆಯುವ, ಭಾಗ್ಯ ನನ್ನದಾಗಲು ನಿನ್ನಲ್ಲಿ ಎಡೆಯಿದೆಯೇ ಎಂದು ತಿಳಿಯಬೇಕೆಂಬುದು ನನ್ನ ಕಾಂಕ್ಷೆ. ಈ ಕಾಂಕ್ಷೆಯನ್ನು ಅಡಗಿಸಿಟ್ಟರೆ ನಾನು ಆತ್ಮವಂಚಕನಾಗುತ್ತೇನೆ. ಅಂದರೆ, ನನಗೆ ಮಾತ್ರವಲ್ಲ, ನನ್ನ ಆತ್ಮವೇ ಆಗಿರುವ ನಿನಗೂ ವಂಚಕನಾಗುತೇನೆ. ಅನುಕೂಲವಿದ್ದರೆ ನನ್ನ ಪ್ರಶ್ನೆಗೆ ದಯಮಾಡಿ ಉತ್ತರ ಕೊಡು” ಎಂದು ನಾನು ಹೇಳಿದೆನು.

ಏಗ್ನೆಸ್ಸಳು ಮೆಲ್ಲಗೆ ಅಳುತ್ತಲೇ ಇದ್ದಳು. ಆದರೆ ಆ ಅಳುವಿನಲ್ಲಿ ಸಂತೋಷವೂ ಅಡಗಿತ್ತು. ನಾನು ಮತ್ತೂ ಮಾತಾಡಿದೆನು. “ನಾನು ಡೋರಾಳನ್ನು ಪ್ರೀತಿಸುತ್ತಿದ್ದೆನು, ನಿಜ. ಆದರೆ, ಆಗಲೂ ನಿನ್ನ ಪ್ರೀತಿ, ಸ್ನೇಹಗಳು ಇಲ್ಲದಿದ್ದರೆ ನನ್ನ ಜೀವನವೇ ಅಪೂರ್ಣವಾಗಿರುತ್ತಿತ್ತೆಂಬುದು ನಿನಗೂ ಗೊತ್ತಿರಬೇಕು. ನಾನು ಪರದೇಶ ಸಂಚಾರಕ್ಕೆ ಹೊರಡುವಾಗ, ಪರದೇಶದಲ್ಲಿ ಇದ್ದಾಗ, ಮರಳಿ ಈ ದೇಶಕ್ಕೆ ಬರುವಾಗ, ನಿನ್ನ ಮನಸ್ಸನ್ನು ತಿಳಿಯಲು ತವಕಪಡುತ್ತಿದ್ದೆನು. ನಿನ್ನ ಸಹೋದರೀ ಬಾಂಧವ್ಯ ದೊರಕಿದ್ದೇ ಒಂದು ಪರಮಾನುಗ್ರಹವೆಂದು ತಿಳಿಯುತ್ತಿದ್ದವನಿಗೆ, ಅದಕ್ಕಿಂತಲೂ ಹೆಚ್ಚಿನ ಬಾಂಧವ್ಯವನ್ನು ಬಯಸಿ, ನಿನಗೆ ತಿಳಿಸಿ, ದೊರಕಿರುವುದನ್ನೇ ಕಳೆದುಕೊಳ್ಳುವ ಸಂಭವವನ್ನು ತಂದೊಡ್ಡಿಕೊಳ್ಳಬಾರದೆಂದು ಈವರೆಗೆ ಅಂತರಂಗದಲ್ಲೇ ಶ್ರಮಪಡುತ್ತಾ ನಿನ್ನನ್ನು ವಿಚಾರಿಸದೆ ಸುಮ್ಮನಿದ್ದೆ” ಎಂದೆನು

ಏಗ್ನೆಸ್ಸಳು ಎದ್ದು ಬಂದು ನನ್ನ ಹತ್ತಿರ ಕುಳಿತು, ನನ್ನ ಕೈ ಹಿಡಿದುಕೊಂಡು ನನ್ನ ಮುಖವನ್ನು ನೋಡಿ – “ನನ್ನ ಕಡೆ ಒಂದು ಒಗಟಿದೆ – ಏನೆಂದು ಗೊತ್ತಿದೆಯೇ?” ಎಂದು ಕೇಳಿದಳು. “ಇಲ್ಲ” ಅಂದೆ. “ನನ್ನ ಪ್ರೇಮವು ಇನ್ನು ಯಾರ ಮೇಲೂ ಎಂದೂ ನಿನ್ನ ಮೇಲೆ ಇದ್ದಂತೆ ಇರಲಿಲ್ಲ. ನಿನ್ನ ಮೇಲಿನ ನನ್ನ ಪ್ರೇಮವು ಒಂದೇ ವಿಧವಾಗಿ ಸ್ಥಿರವಾಗಿ ಇತ್ತು” ಅಂದಳು ಏಗ್ನೆಸ್. ಒಗಟು ಪರಿಹಾರವಾಯಿತಷ್ಟೆ! ಇನ್ನೇನು ಕೇಳಬೇಕೇ? ನಾವು ಬಹುವಾಗಿ ಆನಂದಿಸಿದೆವು. ಈ ನೂತನ ಆನಂದದ ಪರವಶತೆಯಲ್ಲಿ ಆನಂದಬಾಷ್ಪಗಳನ್ನು ಸುರಿಸುತ್ತಿದ್ದೆವು. ನಮ್ಮೀರ್ವರ ಹೃದಯಗಳು ಒಂದಾದುವು – ಎಂದೆಂದೂ ಎರಡಾಗದಂತೆ ಒಂದಾದವು. ಸಂಜೆಗೆ ನಾವಿಬ್ಬರೂ ಜೊತೆಯಾಗಿ ಅತ್ತೆಯ ಮನೆಗೆ ಹೋದೆವು. ಅತ್ತೆಗೆ ಆದ ಆನಂದ ಅಷ್ಟಿಷ್ಟಲ್ಲ. ನಮ್ಮಿಬ್ಬರನ್ನೂ ಅಪ್ಪಿಕೊಂಡು ಆನಂದಬಾಷ್ಪವನ್ನು ಸುರಿಸಿದರು. ಮಿ. ಡಿಕ್ಕರು ತುಂಬಾ ಸಂತೋಷಪಟ್ಟರು. ಏಗ್ನೆಸ್ ಮತ್ತು ನನ್ನೊಳಗೆ ನಡೆದಿದ್ದ ಮಾತುಗಳ ಸೂಕ್ಷ್ಮ ವಿಚಾರಗಳನ್ನೆಲ್ಲಾ ಅತ್ತೆಗೆ ತಿಳಿಸಿರುವೆನೆಂಬುದನ್ನು ಪ್ರತ್ಯೇಕ ಹೇಳಬೇಡವಷ್ಟೆ?

ಎರಡು ವಾರಗಳಲ್ಲಿ ನಮ್ಮ ಮದುವೆಯಾಯಿತು. ಟ್ರೇಡಲ್ಸ್, ಸೋಫಿ, ಮಿಸೆಸ್ ಮತ್ತು ಮಿ. ಸ್ಟ್ರಾಂಗರು ಮಾತ್ರ ನಮ್ಮ ಮದುವೆಗೆ ಆಮಂತ್ರಿತರಾಗಿ ಬಂದಿದ್ದರು. ಮದುವೆಯು ಆಡಂಬರವಿಲ್ಲದೆ ಜರುಗಿತು. ಬಂದಿದ್ದ ನೆಂಟರೆಲ್ಲಾ ಹೋದನಂತರ ಏಗ್ನೆಸ್ಸಳೂ ನಾನು ಕುದುರೆ ಸಾರೋಟಿನಲ್ಲಿ ಕುಳಿತು ಸವಾರಿ ಬಿಟ್ಟೆವು. ನನ್ನ ಉತ್ತಮ ಕಾರ್ಯಗಳೆಲ್ಲಕ್ಕೂ ಪ್ರೇರಕಳಾದ, ನನ್ನ ಜೀವನದ ಸರ್ವಸ್ವವಾದ – ನನ್ನ ಜೀವವೇ ಆಗಿರುವ, ಪ್ರಾಣಪ್ರಿಯೆ ಏಗ್ನೆಸಳನ್ನು ಅಪ್ಪಿ ಹಿಡಿದುಕೊಂಡು ನಾವು ಸವಾರಿ ಮಾಡಿದೆವು. ನಮ್ಮಿಬ್ಬರ ಪ್ರೇಮವು ಶಿಲಾಸದೃಶವಾದ ಸ್ಥಿರತೆಯಲ್ಲಿದೆಯೆಂಬುದು ಇಬ್ಬರಿಗೂ ಗೊತ್ತಿತ್ತು. ದಾರಿ ಸಾಗುತ್ತಾ ಏಗ್ನೆಸ್ಸಳು ಅಂದಳು – “ಇನ್ನೊಂದು ವಿಷಯವನ್ನು ತಿಳಿಸಲು ಬಾಕಿಯಿದೆ.” “ಏನದು?” “ಆ ಹೊತ್ತು ಡೋರಾಳು ನನ್ನನ್ನು ಮಹಡಿಯ ಮೇಲಕ್ಕೆ ಕರೆಸಿ ಏಕಾಂತದಲ್ಲಿ ಹೇಳಿದ್ದೇನೆಂದು ಗೊತ್ತಿದೆಯೇ?” ಅದೇನಿರಬಹುದೆಂದು ನಾನು ಊಹಿಸಿದ್ದೆನಾದರೂ ಅವಳ ಬಾಯಿಯಿಂದಲೇ ಕೇಳೋಣವೆಂದು, ಏಗ್ನೆಸ್ಸಳನ್ನು ಮತ್ತಷ್ಟು ಬಲವಾಗಿ ಅಪ್ಪಿಕೊಂಡು – “ಹೂಂ, ಏನೆಂದಳು ಡೋರಾ ಹೇಳು” ಅಂದೆನು. “ನಿನ್ನ ಹೃದಯದಲ್ಲಿ ಅವಳ ಸ್ಥಾನಕ್ಕೆ ನಾನು ತಪ್ಪದೆ ಸೇರಬೇಕೆಂದು ಕೇಳಿಕೊಂಡಿರುವಳು” ಅಂದಳು ಏಗ್ನೆಸ್. ಏಗ್ನೆಸ್ಸಳು ತನ್ನ ತಲೆಯನ್ನು ನನ್ನೆದೆಯಮೇಲಿಟ್ಟು ನನ್ನವಳೇ ಆದಳು. ನಾವಿಬ್ಬರೂ ಅಳುತ್ತಿದ್ದೆವು. ಜತೆಯಲ್ಲೇ ಆ ಅಳುವು ಆನಂದ ಪರವಶತೆಯಿಂದ ಬಂದದ್ದೆಂಬ ಪರಮಾನಂದ ನಮ್ಮದಾಗಿತ್ತು.

(ಮುಂದುವರಿಯಲಿದೆ)