[ತಿಂಗಳ ಹಿಂದೆ ಗೆಳೆಯ ಕೆ.ಎಸ್.ನವೀನ್ ಚರವಾಣಿಸಿ “ಅನಂತರಾಮು ಜಿಟಿಎನ್ ಬಗ್ಗೆ ಬರೆದ ಲೇಖನ ನಿಮ್ಮಲ್ಲಿದೆಯೇ” ಕೇಳಿದ್ದರು. ನನ್ನಲ್ಲಿರಲಿಲ್ಲ, ನಾನು ನೋಡಿಯೂ ಇರಲಿಲ್ಲ. ಎರಡು ವಾರದ ಹಿಂದೆ ಮಾಯೆಯಲ್ಲಿ ಎಂಬಂತೆ ಸ್ವತ: ಅನಂತರಾಮು ಅವರೇ ನನ್ನನ್ನು ಮಿಂಚಂಚೆ ಮೂಲಕ, ಇದೇ ಮೊದಲು, ಸಂಪರ್ಕಿಸಿದರು, ಈ ಲೇಖನವನ್ನು ವಿಶ್ವಾಸಪೂರ್ವಕವಾಗಿ ಕಳಿಸಿದ್ದರು! ಅನಂತರ ತಿಳಿದಂತೆ ನಡೆದದ್ದಿಷ್ಟು: (ನನ್ನ ಮಗ) ಅಭಯಸಿಂಹ ಮತ್ತು ಗೆಳೆಯರು ತಮ್ಮ ಸಂಚಿ ಟ್ರಸ್ಟಿನ ಜ್ಞಾನಸರಣಿ ಭಾಷಣ ಮಾಲಿಕೆಯಲ್ಲಿ ಮೂರನೇ ವಿಷಯವಾಗಿ `ಕುದಿಯುತ್ತಿರುವ’ ಬೆಂಗಳೂರ ಕೆರೆಗಳನ್ನಾರಿಸಿಕೊಂಡಿದ್ದರು. ಇದಕ್ಕೆಂದು ಕನ್ನಡದ ಜನಪ್ರಿಯ ವಿಜ್ಞಾನ ಲೇಖಕರಾದ ನಾಗೇಶ ಹೆಗಡೆಯವರನ್ನು ವಾರದ ಹಿಂದೆಂದೋ ಸಂದರ್ಶಿಸಿದ್ದೂ ನನಗೆ ತಿಳಿದಿತ್ತು. ಅಂದು (೬-೬-೧೫) ಬೆಳಗ್ಗೆ ಅನಂತರಾಮು ಅವರನ್ನು ಸಂದರ್ಶಿಸಿದ್ದು ನನಗೆ ತಿಳಿದಿರಲಿಲ್ಲ. ಸಂದರ್ಶನ ಚೆನ್ನಾಗಿಯೇ ಆಯ್ತು. ಆಗ ಪ್ರಾಸಂಗಿಕವಾಗಿ ಅನಂತರಾಮು ಅವರಿಗೆ, ಅಭಯ ಜಿಟಿಎನ್ ಮೊಮ್ಮಗನೆಂದು ತಿಳಿಯಿತಂತೆ. ಆಗ ಅವರಿಗಾದ ಸಂತೋಷ ಸಂಜೆಯಾದರೂ ಮಾಸದೆ, ಒಂದೇ ಬೀಸಿನಲ್ಲಿ ನಮ್ಮಿಬ್ಬರಿಗೂ ಮಿಂಚಂಚೆ ಮೂಲಕ ಮಾತಿನ ಮಾಲೆ ತೊಡಿಸಿತ್ತು, ಈ ಲೇಖನದ ಕಾಣಿಕೆಯನ್ನು ಕೊಡಿಸಿತ್ತು.
ಈ ಲೇಖನದ ಮೂಲರೂಪ ೭-೭-೨೦೦೮ರ ತರಂಗ ವಾರಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಅದು ಹಾಗೇ ಹಳೆಯ ಸಂಚಿಕೆಯಲ್ಲಿ ಮಾಸಬಾರದು ಮತ್ತು ಸುಲಭವಾಗಿ ಸಾರ್ವಜನಿಕರಿಗೆ ಸಿಗುವಂತಾಗಬೇಕು ಎಂದು ನಾನು ಬಯಸಿದೆ, ಅನಂತರಾಮು ಅವರು ಪೂರ್ಣ ಅನುಮೋದಿಸಿದರು. ಮತ್ತೆ ತಮ್ಮ ಪೂರ್ವನಿರ್ಧರಿತ ಜವಾಬ್ದಾರಿಗಳ ನಡುವೆ ಬಿಡುವು ಮಾಡಿಕೊಂಡು, ಸಂತೋಷದಿಂದ ಪರಿಷ್ಕರಿಸಿಯೂ ಕೊಟ್ಟಿದ್ದಾರೆ.
ಜಿಟಿಎನ್ ತೀರಿಹೋದ ಏಳನೇ ವರ್ಷದ (೨೭-೬-೨೦೦೮) ಸ್ಮೃತಿದಿನಕ್ಕೆ ಆಕಸ್ಮಿಕವಾಗಿಯೇ ಒದಗಿದ ಈ ಸಂತೋಷಕ್ಕೆ ನಾನು ಅನಂತರಾಮು ಅವರಿಗೆ ಋಣಿ. – ಅಶೋಕವರ್ಧನ]
ಯೂರೋಪಿನ ಪ್ರವಾಸದಲ್ಲಿ ರೋಮ್ ನಗರ ನೋಡಿದ ಮೇಲೆ (೨೦೦೭), ಇಟಲಿಯ ಪೀಸಾ ಗೋಪುರದ ಮುಂದೆ ನಿಂತಿದ್ದೆವು. ಆ ಕ್ಷಣ ನನ್ನ ಕಣ್ಣ ಮುಂದೆ ಸುಳಿದದ್ದು ಗೋಪುರದ ಚರಿತ್ರೆಯಲ್ಲ, ಅದರ ಮೇಲಿಂದ ಗುಂಡುಗಳನ್ನು ಉರುಳಿಬಿಟ್ಟು ಗೆಲಿಲಿಯೋ ಮಾಡಿದನೆಂದು ಹೇಳಲಾದ ಪ್ರಯೋಗವೂ ಅಲ್ಲ, ನೆನಪಾದದ್ದು ಜಿ.ಟಿ.ಎನ್. ಯಾರೊಬ್ಬರಿಗೂ ಪೀಸಾ ಗೋಪುರ ನೋಡುತ್ತಲೇ ಅದು ವಾಲಿರುವುದು ನಿಚ್ಚಳವಾಗಿ ಕಾಣುತ್ತದೆ. ಜಿ.ಟಿ.ಎನ್. ಅವರಿಗೆ ಅದು ವಾಲು ಗೋಪುರವಲ್ಲ, ‘ಮಾಲು ಗೋಪುರ. ಈ ಪದದಲ್ಲಿ ವ್ಯಂಗ್ಯವಿಲ್ಲ, ವಿಡಂಬನೆಯಿಲ್ಲ ಅಥವಾ ಅದು ಮುದ್ರಣದೋಷದಿಂದ ಕೂಡಿದ್ದೂ ಅಲ್ಲ. ‘ಮಾಲು ಎಂದರೆ ‘ವಾಲು ಎಂಬ ಅರ್ಥವಿದೆ ಗೊತ್ತೆ? ಈ ಪದ ಬಳಸದೇ ಹೋದರೆ ಕನ್ನಡದಿಂದ ಅದು ಉತ್ಪಾಟನೆಯಾಗುತ್ತದೆ ಗೊತ್ತೆ? ಎಂದಿದ್ದರು.
ಪರಿಚಿತ ಶಬ್ದಕ್ಕಿಂತ ಅಪರಿಚಿತ ಶಬ್ದವನ್ನು ಜಿ.ಟಿ.ಎನ್. ತಮ್ಮ ಶಬ್ದ ಭಂಡಾರದಿಂದ ಎತ್ತಿ ತೆಗೆಯುತ್ತಿದ್ದರು. ಅವರೆಂದೂ ಸೂರ್ಯ ಭೂಮಿ ಪ್ರದಕ್ಷಿಣೆ ಮಾಡುತ್ತಾನೆ ಎಂದವರಲ್ಲ, ‘ಎಂಥದಯ್ಯಾ ಅದು, ಪ್ರದಕ್ಷಿಣೆ ಎಂಬುದಕ್ಕೆ ಧಾರ್ಮಿಕ ಲೇಪ ಬರುವುದಿಲ್ಲವೆ? ಪರಿಭ್ರಮಣೆ ಎಂದೇಕೆ ಲೇಖಕರು ಬಳಸುವುದಿಲ್ಲ? ಭೂಮಿ ಅದರ ಅಕ್ಷದ ಮೇಲೆ ಗಿರಿಕಿ ಹೊಡೆಯುತ್ತದೆ. ‘ತನ್ನ ಎನ್ನ ಬೇಡಿ, ‘ಅದರ ಎನ್ನಿ. ಸೂರ್ಯಮುಳುಗುತ್ತಾನೆ ಎನ್ನುವುದಕ್ಕಿಂತ ನೇಸರ ಕಂತುತ್ತದೆ ಎನ್ನುವುದು ಎಂಥ ಸುಂದರ ಶಬ್ದ. ಉತ್ತರ ದಕ್ಷಿಣ ಎಂದೇಕೆ? ಯಾಮ್ಯೋತ್ತರ ಎಂಬ ಪದವಿಲ್ಲವೆ? ಗೆಲಿಲಿಯೋ ಎಂಬುವನು ಎನ್ನುವುದೇಕೆ, ಎಂಬವನು ಎನ್ನುವುದು ಸರಿಯಾದ ಪ್ರಯೋಗವಲ್ಲವೆ? ಹೀಗೆ ಸಾಗುತ್ತಿತ್ತು ಚರ್ಚೆ ಜಿ.ಟಿ.ಎನ್. ಬಳಿ ಕುಳಿತಾಗಲೆಲ್ಲ. ವಿಜ್ಞಾನಕ್ಕೆ ಸಾಹಿತ್ಯದ ಬಡ್ತಿ ಕೊಟ್ಟ ವಂದ್ಯ ಜಿ.ಟಿ. ನಾರಾಯಣರಾವ್. ತಪ್ಪಿಯೂ ಅವರ ಬರಹದಲ್ಲಿ ಅಪಶಬ್ದ ಇಣುಕುತ್ತಿರಲಿಲ್ಲ. ಬೇಕಾದರೆ ನೀವು ಬಾಜಿಕಟ್ಟಬಹುದು.
ಏಕೋ ಏನೊ ಪ್ರೌಢಶಾಲೆ ಮತ್ತು ಕಾಲೇಜು ಅಧ್ಯಾಪಕರನ್ನು ಅವರ ಇನಿಷಿಯಲ್‌ಗಳಿಂದಲೇ ಗುರುತಿಸುವುದು ಎಲ್ಲ ಕಡೆಯೂ ರೂಢಿಯಾಗಿದೆ. ಗುಡ್ಡೆಹಿತ್ಲು ತಿಮ್ಮಪ್ಪಯ್ಯ ನಾರಾಯಣರಾವ್ ಎಂದರೆ ಜಿ.ಟಿ.ಎನ್; ಅವರ ಸರೀಕರಿಗೂ ಸಾವಿರಾರು ಶಿಷ್ಯರಿಗೂ, ಅಷ್ಟೇ ಏಕೆ ಆಪ್ತಮಿತ್ರರಿಗೂ ಈ ಉದ್ದನೆಯ ಹೆಸರು ತಬ್ಬಿಬ್ಬಾಗಬಹುದು. ಜಿ.ಟಿ.ಎನ್. ಎಂಬ ಮೂರಕ್ಷರ ಉಚ್ಚರಿಸಿದರಾಯಿತು, ಅವರನ್ನು ಬಲ್ಲವರ ಮೈಯಲ್ಲಿ ಮಿಂಚು ಹರಿಯುತ್ತದೆ. ಮಾಗಿದ ಬದುಕಿನಲ್ಲಿ, ವೃದ್ಧಾಪ್ಯದ ಅಂಚಿನಲ್ಲಿ ಇತ್ತೀಚೆಗಷ್ಟೇ ತಮ್ಮ ಆತ್ಮಕಥೆ ‘ಮುಗಿಯದ ಪಯಣ’ ಮುಗಿಸಿದ್ದರು. ತಮ್ಮ ೮೨ರ ಹರೆಯದಲ್ಲಿ ೨೦೦೮ರ ಜೂನ್ ೨೭ರಂದು ಮುಗಿಸೇಬಿಟ್ಟರು ಅವರ ಪಯಣವನ್ನು.
೧೯೭೦ರ ದಶಕದಲ್ಲಿ ಅವರು ಮೈಸೂರು ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ವಿಶ್ವಕೋಶ ವಿಭಾಗದಲ್ಲಿ ವಿಜ್ಞಾನದ ಸಂಪಾದಕತ್ವದ ಹೊಣೆಹೊತ್ತಿದ್ದರು. ನಾನು ಒಂದು ಪುಟ್ಟ ಲೇಖನ ಹಿಡಿದು ಹೋಗಿದ್ದೆ. ನಾಲ್ಕು ಸಾಲು ಕಣ್ಣಾಡಿಸಿ ‘ಅಲ್ಲಯ್ಯಾ, ನಿಸಾರ್ ಅವರ ಒಡನಾಟವಿರುವಾಗ ಯಾಕೆ ವಾಕ್ಯ ರಚನೆಯಲ್ಲಿ ಇಷ್ಟೊಂದು ಗೊಂದಲ? ಎಂದು ಗುಂಡುಹಾರಿಸಿದ್ದರು. ಮನೆಗೆ ಬಾ ಎಂದು ಮಜ್ಜಿಗೆಯ ಸತ್ಕಾರ ಮಾಡಿದ್ದರು. ಮುಂದೆ ಅವರ ‘ಅತ್ರಿ’ ಮನೆಯಲ್ಲಿ ಕಸ್ತೂರಿ ಸಂಪಾದಕ ಪಾ.ವೆಂ. ಆಚಾರ್ಯರನ್ನು ನನಗೆ ಪರಿಚಯಿಸುವ ಬದಲು ನನ್ನ ಕಡೆ ತಿರುಗಿ ‘ಇವರು ಗೊತ್ತಲ್ಲ’ ಎಂದು ಕೇಳಿ ಆ ಸಣಕಲ ಆಸಾಮಿಯನ್ನು ಇನ್ನಷ್ಟು ಸಂಕೋಚನಗೊಳಿಸಿದ್ದರು. ಅವರೋ ಖಂಡಗಳ ಅಲೆತ ಸಿದ್ಧಾಂತವನ್ನು ನನಗೇ ಒಪ್ಪಿಸಿ ನನ್ನನ್ನು ತಬ್ಬಿಬ್ಬು ಮಾಡಿದ್ದರು. ಅನಂತರ ಸತತ ಮೂರು ದಶಕಗಳ ಕಾಲ ಬೆನ್ನು ತಟ್ಟುತ್ತಲೇ ಹೋಗಿದ್ದರು. ಜಿ.ಟಿ.ಎನ್. ಕನ್ನಡ ಕಲಿಸುತ್ತಾರೋ ಅಥವಾ ವಿಜ್ಞಾನವನ್ನೋ ಎಂಬ ಅವರ ಅನೇಕ ಗೆಳೆಯರ ಟೀಕಾಸ್ತ್ರಗಳು ಅವರನ್ನೆಂದೂ ಘಾಸಿಮಾಡಲಿಲ್ಲ; ಅವರ ಸಹಜ ಸ್ವಭಾವವನ್ನು ಕೊಂಕಿಸಲಿಲ್ಲ. ತಮ್ಮ ಬರವಣಿಗೆ ಅಕ್ಕಚ್ಚಾಗಬಾರದು (ಕಲಗಚ್ಚು) ಎಂದು ಪದೇ ಪದೇ ಹೇಳುತ್ತಿದ್ದರು. ಸರಳತೆ ಎಂದರೆ ವಿಜ್ಞಾನದಲ್ಲಿ ಖಚಿತತೆ ಮತ್ತು ಅರ್ಥಸ್ಪಷ್ಟತೆಯನ್ನು ಗಾಳಿಗೆ ತೂರುವುದಲ್ಲ ಎಂದು ನೇರವಾಗಿ ನುಡಿಯುತ್ತಿದ್ದರು. ಕನ್ನಡ ವಿಶ್ವಕೋಶಕ್ಕೆ ಒಂದು ಘನತೆಯನ್ನು ತಂದುಕೊಟ್ಟ ಜಿ.ಟಿ.ಎನ್. ಅವರ ಸಂಪಾದಕತ್ವದಲ್ಲಿ ಯಾಚಿತವಾಗಿ ಬರುತ್ತಿದ್ದ ಲೇಖನವನ್ನು ಅವರು ತಿದ್ದುತ್ತಿದ್ದರೆಂದು ಹೇಳಿದರೆ ಅದು ಶುಷ್ಕ ಕಾಮೆಂಟ್ ಆಗಬಹುದು. ಅವರು ಲೇಖನಗಳನ್ನು ತಿದ್ದುತ್ತಿರಲಿಲ್ಲ, ತೀಡುತ್ತಿರಲಿಲ್ಲ, ಮರುಸೃಷ್ಟಿಸುತ್ತಿದ್ದರು. ಲೇಖನಗಳ ಗುಣಮಟ್ಟ ಕುಸಿಯದಂತೆ ನೋಡಿಕೊಳ್ಳಲು ಇಂಗ್ಲಿಷ್‌ನಲ್ಲಿ ಬರೆದ ವಿಜ್ಞಾನ ಲೇಖನಗಳನ್ನು ತಾವೇ ಅನುವಾದಿಸುವ ಹೊಣೆಗಾರಿಕೆಯನ್ನು ಮೇಲೆಳೆದುಕೊಂಡಿದ್ದರು. ಆದರೂ ಅವರು ಕಾಲನಿಷ್ಠ. ಗಂಟೆ ಒಂದಾಯಿತೆಂದರೆ ಅತಿಥಿಗಳಿಗೆ ಹೇಳಿ ಮೊದಲೇ ಖುರ್ಚಿ ಮೇಲೆದ್ದುಬಿಡುತ್ತಿದ್ದರು. ಅದು ಎಂದೂ ಅಗೌರವ ಸೂಚಕವಾಗಿರಲಿಲ್ಲ.
ಯಾವ ವಯೋಮಾನದವರಿಗೆ ಬರೆದರೂ ಸರಿಯೇ, ವಿಶ್ವಕೋಶಕ್ಕೊಂದು ಶಿಷ್ಟತೆ ಇರುತ್ತದೆ ಎನ್ನುವುದರತ್ತಲೇ ಅವರ ಗಮನ. ಹೀಗಾಗಿ ಮೈಸೂರು ವಿಶ್ವವಿದ್ಯಾನಿಲಯದ ಕನ್ನಡ ವಿಶ್ವಕೋಶದ ಯಾವ ಸಂಪುಟದ, ಯಾವ ವಿಜ್ಞಾನ ಲೇಖನವನ್ನು ನೋಡಿದರೂ ಅಲ್ಲಿ ಜಿ.ಟಿ.ಎನ್.ತನ ಮುಪ್ಪುರಿಗೊಂಡಿರುತ್ತದೆ. ಅವರ ಭಾಷೆ ಅದರಲ್ಲಿ ಛಾಪಾಗಿರುತ್ತದೆ. ಮಡಿಕೇರಿಯ ಮಡಿ-ಕೇರಿಯಲ್ಲಿ ಸೆಪ್ಟೆಂಬರ್ ೯, ೧೯೨೬ರಂದು ಜನಿಸಿದ ಜಿ.ಟಿ.ಎನ್. ಮಡಿಯನ್ನು ಕೇರಿಗೆ ತೂರಿದರು ಅಷ್ಟೇ.
ಆ ನೆಲದ ಕೆಚ್ಚು, ಜನರ ಆತ್ಮವಿಶ್ವಾಸ, ಸಾಧಿಸುವ ಛಲ ಸಹಜವಾಗಿಯೇ ಇವರಲ್ಲೂ ಎಳವೆಯಲ್ಲೇ ಮೈಗೂಡಿತ್ತು. ಕೊಡಗಿನ ಭಾಗಕ್ಕೆ ಎಸ್.ಎಸ್.ಎಲ್.ಸಿ.ಯಲ್ಲಿ ಮೊದಲ ಸ್ಥಾನ ಪಡೆದ ಜಿ.ಟಿ.ಎನ್. ಮಂಗಳೂರಿನ ಅಲೂಷಿಯಸ್ ಕಾಲೇಜು ವಿದ್ಯಾರ್ಥಿ, ಮುಂದೆ ಅವರು ಎಂ.ಎ. ಡಿಗ್ರಿ ಪಡೆದದ್ದು ಗಣಿತದಲ್ಲಿ, ಮದ್ರಾಸ್ ಕ್ರಿಶ್ಚಿಯನ್ ಕಾಲೇಜಿನಲ್ಲಿ. ಸಂಗೀತಕ್ಕೆ ಅವರು ತೆತ್ತುಕೊಂಡದ್ದೂ ಅಲ್ಲಿಯೇ. ಎಲ್ಲರಂತವರಲ್ಲ ಜಿ.ಟಿ.ಎನ್. ಮಡಿಕೇರಿಯ ಸರ್ಕಾರಿ ಕಾಲೇಜಿನಲ್ಲಿ ಸಹಕಾರ ಸಂಘ ಸ್ಥಾಪಿಸಿ, ಏಳುಬೀಳುಗಳನ್ನು ಕಂಡರು, ಕೊಡವಿಕೊಂಡೆದ್ದು ಬೀಳುಗಳನ್ನೇ ಏಳಿಸಿದರು. ಶಿಸ್ತಿಗೆ ಪಾರದರ್ಶಕತೆಗೆ (ಇದು ತಪ್ಪು ‘ಪಾರಕ ಎಂದರೆ ಸಾಲದೇ ಎನ್ನುತ್ತಿದ್ದರು ಜಿ.ಟಿ.ಎನ್.) ಹೊಸ ವ್ಯಾಖ್ಯೆ ಬರೆದ ಧೀಮಂತ. ಬೆಂಗಳೂರು ಸರ್ಕಾರಿ ಕಾಲೇಜಿನಲ್ಲಿ ಬೋಧಿಸುವಾಗಲೇ ಹನ್ನೆರಡನೇ ಮೈಸೂರು ಬ್ಯಟಾಲಿಯನ್ ಎನ್.ಸಿ.ಸಿ.ಯನ್ನು ಮುನ್ನಡೆಸಿದರು. ಅದರಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳಿಗೂ ರೋಮಾಂಚನ, ಸಹೋದ್ಯೋಗಿಗಳಿಗೂ ಮರೆಯಲಾರದ ನೆನಪುಗಳು. ಕವಿ ನಿಸಾರ್ ಅಹಮದ್ ಕೂಡ ಅಲ್ಲಿದ್ದರು. ಅವರ ಮಾತಿನಲ್ಲಿ : ಜಾಲಿ ಪಿಕ್‌ನಿಕ್ ಎಂದು ಮನವೊಲಿಸಿಕುದುರೆಮುಖದಡವಿ ಬೆಟ್ಟಗಳಲ್ಲಿಕೇಡೆಟ್ಟುಗಳ ಜೊತೆ ನನ್ನಕೂಲಿಯಂತಲಸಿ,ಹತ್ತು ದಿನ ಹಾಸಿಗೆ ಹಿಡಿಸಿದಮಹಾನುಭಾವ ಜಿ.ಟಿ.ಎನ್. (ಅನಾಮಿಕ ಆಂಗ್ಲರು) ಅವರ ವಿದ್ಯಾರ್ಥಿಗಳು ಈಗ ಅನೇಕ ಉನ್ನತ ಹುದ್ದೆಗಳಲ್ಲಿದ್ದರೂ ಜಿ.ಟಿ.ಎನ್. ಎಂಬ ಹೆಸರು ಕೇಳಿದೊಡನೆ ಅಟೆನ್ಷನ್ ಭಂಗಿಯಲ್ಲಿ ನಿಲ್ಲುತ್ತಾರೆ.
ಅವರು ಬರೀ ಗಣಿತವನ್ನಷ್ಟೇ ಕಲಿಸಲಿಲ್ಲ, ಕಾಣಿಸಿದ್ದು ಜೀವನದರ್ಶನವನ್ನು. ಕಲಿಸಿದ್ದು ಜೀವನ ಪ್ರೀತಿಯನ್ನು. ಆಕಾಶವೀಕ್ಷಣೆಗೆ ಹೊಸಬಗೆಯ ತಂತ್ರ ರೂಪಿಸಿದವರು ಇವರು. ಕೃಷ್ಣಪಕ್ಷದ ಇರುಳಲ್ಲಿ, ಮನೆಯಲ್ಲಿ ದೊಡ್ಡವರು. ಚಿಕ್ಕವರೆನ್ನದೆ ಟ್ರಾನ್ಸಿಸ್ಟರ್ ಸಮೇತ ಚಾವಣಿ ಮೇಲೇರುತ್ತಿದ್ದುದು ೭೦ರ ದಶಕದ ಪುಲಕ ತರುತ್ತಿದ್ದ ನೋಟ. ಜಿ.ಟಿ.ಎನ್. ಅವರ ಆಕಾಶವೀಕ್ಷಣೆಯ ರನ್ನಿಂಗ್ ಕಾಮೆಂಟರಿ ಶುರುವಾಗುತ್ತಿದ್ದುದೇ ಹೀಗೆ. ಅಲ್ಲೂ ಅಥಾರಿಟೇಟಿವ್ ಧ್ವನಿ. ನಕ್ಷತ್ರದ ಕಥೆ ಬಿಚ್ಚಿಕೊಳ್ಳುತ್ತಿದ್ದುದ್ದು ನಮ್ಮ ಪುರಾಣ, ಪುಣ್ಯಕಥೆಗಳ ಸ್ವಾರಸ್ಯಕರ ವಿವರಣೆಯೊಂದಿಗೆ. ಆ ಘಳಿಗೆಗಳನ್ನು ಕಣ್ಣಮುಂದೆ ತಂದುಕೊಳ್ಳುವವರು ಈಗಲೂ ನೂರಾರು ಮಂದಿ ಇದ್ದಾರೆ. ನಕ್ಷತ್ರ ವೀಕ್ಷಣೆ ಜಿ.ಟಿ.ಎನ್. ಮಟ್ಟಿಗೆ ಹವ್ಯಾಸವಲ್ಲ, ಪ್ರೀತಿಸಿ ಆರಿಸಿಕೊಂಡ ದಾರ್ಶನಿಕ ಪಥ. ಅವರು ಬರೆದ ‘ನೋಡೋಣು ಬಾ ನಕ್ಷತ್ರ ಕೃತಿಗೆ ಈಗಲೂ ಬೇಡಿಕೆ ಉಂಟು. ಆ ಕೃತಿಯನ್ನು ತಮ್ಮ ಪುಸ್ತಕ ಭಂಡಾರದಿಂದ ಎರವಲು ಕೊಡಲು ಯಾರೂ ಒಪ್ಪರು.
ಕನ್ನಡದ ಓದುಗರಿಗೆ ಇವರು ೮೦ಕ್ಕೂ ಮಿಕ್ಕಿ ಕೃತಿಗಳನ್ನು ನೀಡಿದ್ದಾರೆ. ಆರು ದಶಕಗಳ ಕಾಲದ ನಿರಂತರ ಮೆಹನತ್ತಿನ ಫಲ. ಒಂದೊಂದೂ ಕೃತಿ ಆಯಾ ವಿಷಯದ ಸಂಯುಕ್ ದರ್ಶನ ಮಾಡಿಸುವ ಕೃತಿ. ಮಗ ಆನಂದವರ್ಧನ ಅಪ್ಪನನ್ನು ಅಮೆರಿಕಕ್ಕೆ ಕರೆಸಿಕೊಳ್ಳಲು ಅನೇಕ ಶರತ್ತುಗಳನ್ನು ಒಪ್ಪಬೇಕಾಯಿತು. ಮೊದಲನೆಯದೇ ಚಿಕಾಗೋದಲ್ಲಿದ್ದ ನೋಬೆಲ್ ಪ್ರಶಸ್ತಿ ಪುರಸ್ಕೃತ, ಭಾರತ ಸಂಜಾತ ಖಗೋಳ ವಿಜ್ಞಾನಿ ಸುಬ್ರಹ್ಮಣ್ಯನ್ ಚಂದ್ರಶೇಖರ್ ಅವರ ಸಂದರ್ಶನ (೧೯೯೫). ಅದಕ್ಕಾಗಿ ಜಿ.ಟಿ.ಎನ್. ಮಾಡಿಕೊಂಡ ತಯಾರಿಯೇ ಒಂದು ರೋಚಕ ಅನುಭವ.
ಮೊದಲು `ಸುಬ್ರಹ್ಮಣ್ಯನ್ ಚಂದ್ರಶೇಖರ್’, ವೈಜ್ಞಾನಿಕ ಜೀವನ ಚರಿತ್ರೆಯನ್ನು ಬರೆದು ಪ್ರಕಟಿಸಿದರು. ಅದನ್ನು ಚಿಕಾಗೋದಲ್ಲಿ ಕೈಯಾರೆ ಸು. ಚಂದ್ರಶೇಖರ್ ಅವರಿಗೆ ಕೊಟ್ಟರು. ಹಾಗೇ ಅವರ ಜೀವನದರ್ಶನ ಕುರಿತಂತೆ ಅವರನ್ನು ಒಂದೂವರೆ ದಿನದ ಉದ್ದಕ್ಕೆ ಸಂದರ್ಶನ ನಡೆಸಿದರು. ಭಾರತಕ್ಕೆ ಮರಳಿದ ಮೇಲೆ ಆ ಸಂದರ್ಶನ ಮತ್ತು ಪ್ರವಾಸಕಥನ ಸೇರಿದಂತೆ ‘ಸಪ್ತಸಾಗರದಾಚೆಯೆಲ್ಲೋ’ ಎಂಬ ಇನ್ನೊಂದು ಕೃತಿಯೂ ಬಂತು.
ಕೇವಲ ಇಂಗ್ಲಿಷ್ ಬಲ್ಲವರಿಗಾಗಿ ಈ ಪ್ರವಾಸ ಕಥನದ ಸಂಕ್ಷಿಪ್ತ ರೂಪವನ್ನು – Crossing the dateline ಎಂಬ ಪುಸ್ತಕದಲ್ಲೂ ತಂದರು. ಜೀವನ ಚರಿತ್ರೆ ಎಂದರೆ ಉದ್ದಿಷ್ಟ ವ್ಯಕ್ತಿಯ ಜೀವನದ ಅನಾವರಣವಷ್ಟೇ ಅಲ್ಲ, ಬರಹಗಾರನ ನಂಬಿಕೆಗಳ ಅನಾವರಣ ಕೂಡ. ಜಿ.ಟಿ.ಎನ್. ತಮ್ಮ ಎಲ್ಲ ಕೃತಿಗಳಲ್ಲೂ ಕೃತಕೃತ್ಯರಾಗಿರುವುದು ಈ ಬಗೆಯ ಮೌಲ್ಯ ಪ್ರತಿಪಾದನೆಯಿಂದ. ಸಾಹಿತ್ಯ ಮತ್ತು ವಿಜ್ಞಾನ ಒಂದರೊಳಗೊಂದು ಮೇಳೈಸಬೇಕು ಎಂಬುದು ಅವರ ಬರವಣಿಗೆಯ ಮೂಲಮಂತ್ರ. ಇದನ್ನು ಅವರ ಮಾತುಗಳಲ್ಲೇ ಓದಬೇಕು :
‘ವಿಜ್ಞಾನದ ಜಟಿಲ ಪರಿಕಲ್ಪನೆಗಳನ್ನು ಜನಪ್ರಿಯ ಶೈಲಿಯಲ್ಲಿ ನಿರೂಪಿಸಲು ಒಬ್ಬ ಲೇಖಕನಿಗೆ ಸಾಹಿತ್ಯ ಕುರಿತಂತೆ ಸೃಜನಶೀಲ ಪ್ರಭುತ್ವ ಅಗತ್ಯ. ನಿಜಕ್ಕೂ ಒಬ್ಬ ಸಾಹಿತಿಗಿಂತ ಹೆಚ್ಚಿನದು ಇದಾಗಿರಬೇಕು.’
ಸೂತ್ರರೂಪದಲ್ಲಿ ಹೇಳುವುದಾದರೆ ಒಬ್ಬ ಜನಪ್ರಿಯ ವಿಜ್ಞಾನ ಲೇಖಕ ಚತುರ್ಥಾಂಶಗಳ ಸಂಕೀರ್ಣ ಸಂಯುಕ್ತವಾಗಿರಬೇಕು; ೧. ವಿಷಯ ಪ್ರಾವೀಣ್ಯ – ಆತ ತಾಕತ್ತಿನ ತಾಣದಿಂದ ಬರೆಯತಕ್ಕದ್ದು. ೨. ಭಾಷಾ ಪ್ರಭುತ್ವ – ಭಾಷೆಯ ಸಾಧ್ಯತೆ, ಸೀಮಿತತೆಗಳನ್ನು ನಿರಪೇಕ್ಷವಾಗಿ ಗ್ರಹಿಸಿ, ಅದರ ಜಾಯಮಾನಕ್ಕೆ ಒಪ್ಪುವಂತೆ ಹೊಸ ಪ್ರಯೋಗಗಳನ್ನು ಮಾಡಲು ಮತ್ತು ಭಾಷೆಗೆ ಹೊಸ ಆಯಾಮ ನೀಡಲು ಆತ ಶಕ್ತನಾಗಿರತಕ್ಕದ್ದು. ೩. ಪರಿಪೂರ್ಣ ನಿಷ್ಠೆ – ತಾನು ಕೈಗೊಂಡ ಕರ್ತವ್ಯ ಕುರಿತು ಉತ್ಸಾಹ-ಉಲ್ಲಾಸಗಳ ಸಾಕಾರಮೂರ್ತಿ ಆತನಾಗಿರತಕ್ಕದ್ದು. ೪. ಸಮಕಾಲೀನ ಪ್ರಜ್ಞೆ – ಆತನಿಗೆ ವರ್ತಮಾನ, ವಿಜ್ಞಾನ ಮತ್ತು ಸಾಹಿತ್ಯಗಳ ಸ್ಥಿತಿ-ಗತಿ ಬಗ್ಗೆ ಅರಿವು ಇರತಕ್ಕದ್ದು.
ಈ ಯಾವುದೋ ಒಂದರಲ್ಲಿ ಭರವಸೆ ಇಲ್ಲದಾತ ಜನಪ್ರಿಯ ವಿಜ್ಞಾನ ನಿರ್ಮಾಣ ಕಾರ್ಯದಿಂದ ದೂರವಿರುವುದು ಸರ್ವಕ್ಷೇಮ. ಆದರೆ ವಾಸ್ತವದಲ್ಲಿ ಹೀಗಾಗುತ್ತಿಲ್ಲ: ಅಗ್ಗದ ಇಂಗ್ಲಿಷ್ ಪುಸ್ತಕ ಅಥವಾ ಪಾಕ್ಷಿಕಗಳಿಂದ, ಇಲ್ಲವೇ ಅಂತರಜಾಲದಿಂದ ನೇರ ಕದ್ದು ಅರೆಬೆಂದ ಭಾವನೆಗಳನ್ನು ಅಪರಿಪೂರ್ಣವಾಗಿ ಗ್ರಹಿಸಿ, ತಮ್ಮ ಸೀಮಿತ ಕನ್ನಡ ಜ್ಞಾನದ ಮಿತಿಯೊಳಗೆ ಅವನ್ನು ಮನಬಂದಂತೆ ಹೊಸೆದು ಬೇಕಾಬಿಟ್ಟಿ ಮುದ್ರಿಸಿ ಕನ್ನಡ ಸೇವೆ ಒಪ್ಪಿಸುವುದೇ ನಿಯಮವಾಗಿದೆ! ಉದ್ದೇಶ ಪ್ರಚಾರ, ಪ್ರಶಸ್ತಿ, ಬಡ್ತಿ, ವಿದೇಶಯಾನ ಇತ್ಯಾದಿ -(ಜನಪ್ರಿಯ ವಿಜ್ಞಾನ ವಾಙ್ಮಯ ರಚನೆಯಲ್ಲಿ ಸಾಹಿತ್ಯದ ಪಾತ್ರ, ಪುಟ ೨೮೩, ವಿಜ್ಞಾನ ವರ್ತಮಾನ, ೨೦೦೭).
ಈ ಹಿನ್ನೆಲೆಯಲ್ಲಿ ಬಸವಣ್ಣ, ಡಿ.ವಿ.ಜಿ., ಪು.ತಿ.ನ., ಅಡಿಗ ಅವರ ಕಾವ್ಯ ಸಾಲುಗಳು ಎಲ್ಲ ಪುಸ್ತಕಗಳಲ್ಲೂ ಒಂದಲ್ಲ ಒಂದೆಡೆ ರಾರಾಜಿಸಿವೆ. ವಿಜ್ಞಾನಕ್ಕೊಂದು ಹೊಸಮಾರ್ಗ ತೋರಿಸಿಕೊಟ್ಟ ಬೆಳ್ಳಾವೆ ವೆಂಕಟನಾರಣಪ್ಪ, ಆರ್. ಎಲ್.ನರಸಿಂಹಯ್ಯ ಅವರ ನಂತರದ ಮೂರನೇ ಪೀಳಿಗೆಯ ಲೇಖಕರು ಜಿ.ಟಿ.ಎನ್. ಅವರ ಬರಹದ ಓಘ ಕಾವೇರಿಯ ಜಲಪಾತವಲ್ಲ, ಗೇರುಸೊಪ್ಪೆಯ ಜಲಪಾತ ಅದು. ಎಲ್ಲದರಲ್ಲೂ ಅಮಿತೋತ್ಸಾಹ ಮತ್ತೆ ನಿಸಾರರ ಸಾಲನ್ನೇ ಉಲ್ಲೇಖಿಸುವುದಾದರೆ
‘ಹೆರರಲ್ಲಿ ಸಕ್ಕರೆಯ ತುಣುಕು ಕಂಡರೂ ಕಬ್ಬಿನ ತೋಟ ಪತ್ತೆಹಚ್ಚಿ, ಹತ್ತುಕಡೆ ಸುದ್ದಿ ಬಿತ್ತುವವರು, ಎತ್ತರಕ್ಕೆತ್ತುವವರು.
ಇದಕ್ಕೊಂದು ಉದಾಹರಣೆ ಕೊಡಲು ಜಿ.ಟಿ.ಎನ್. ನನಗೆ ಬರೆದ ಪತ್ರವೊಂದನ್ನೇ ಉಲ್ಲೇಖಿಸಬೇಕಾಗಿರುವುದು ಅನಿವಾರ್ಯ. ಇದು ನನ್ನ ಆತ್ಮರತಿ ಸೂಚಕವಲ್ಲ. ಬದಲು ಜಿ.ಟಿ.ಎನ್. ಇತರರಲ್ಲೂ ಕಾಣುತ್ತಿದ್ದ ರೀತಿಯ ಬಿಂಬ ಎಂಬ ಕಾರಣಕ್ಕಾಗಿ ನಮೂದಿಸುತ್ತಿದ್ದೇನೆ. ೨೦೦೧ರ ಯುಗಾದಿ ವಿಶೇಷಾಂಕಕ್ಕೆಂದು ಸುಧಾ ಪತ್ರಿಕೆಗೆ ಸಾಲಿಗ್ರಾಮದ ವೈಜ್ಞಾನಿಕ ಇತಿಹಾಸ ಕುರಿತು ನಾನು ಬರೆದ ಲೇಖನವನ್ನು ಜಿ.ಟಿ.ಎನ್. ಓದಿ ಒಡನೆಯೇ ಪತ್ರ ಬರೆದರು.
ಪ್ರಿಯ ಶ್ರೀ ಅನಂತರಾಮುರವರಿಗೆ ವಂದನೆಗಳು.
ನಿಮ್ಮ ಪ್ರೀತಿಯ ಪತ್ರ ನನಗೆ ಭರವಸೆ ಮೂಡಿಸಿತು-ನನ್ನ ಬಗ್ಗೆ. ಇದೀಗ ತಾನೇ ನನ್ನ ಮಗನ ಮನೆಯಲ್ಲಿ (ಮಂಗಳೂರು-ಅತ್ರಿ) ಸುಧಾ ಯುಗಾದಿ ೨೦೦೧ ಸಂಚಿಕೆಯಲ್ಲಿ ಪ್ರಕಟವಾಗಿರುವ ಲೇಖನ ಓದಿದೆ-ಬಾಯಿ ಚಪ್ಪರಿಸಿಕೊಂಡು. ವಿಷಯ ಸ್ಪಷ್ಟತೆ, ಸಮೃದ್ಧ ಪೂರಕ ಮಾಹಿತಿಗಳ ಕಲಾತ್ಮಕ ನೇಯ್ಗೆ, ಇಡೀ ನಿರೂಪಣೆಯಲ್ಲಿ ಲಕಲಕಿಸುವ ಕಾವ್ಯಾತ್ಮಕತೆ, ಓದುತ್ತಿರುವಾಗಲೇ ಮನಸ್ಸು ಆ ದೃಶ್ಯಗಳನ್ನು ಕಲ್ಪಿಸಿಕೊಳ್ಳುವಂತೆ ಸಹಕರಿಸುವ ಶೈಲಿಯ ಮೋಡಿ– ಹಾರ್ದಿಕ ಧನ್ಯವಾದಗಳು. ಲಘು ಹಾಸ್ಯಮಿಶ್ರಣ, ಪದಗಳ ಮೇಲಿನ ಮಧುರಲಾಸ್ಯ-ಎಲ್ಲವೂ ನನಗೆ ಬಲು ಪ್ರಿಯವಾದುವು. ಅಲ್ಲಲ್ಲೇ ನನ್ನ ಹೆಂಡತಿಗೆ ಓದಿ ಹೇಳಿದೆ; ತಾಕತ್ತಿನ ತಾಣದಿಂದ ಬರೆದಿರುವ ಉತ್ತಮ ಲೇಖನವಿದು. ಈಗ ನೀವು ಶಿವಲಿಂಗದ ಬಗೆಗೆ ಇಂಥದೇ ಒಂದು ಲೇಖನ ಬರೆಯಬೇಕೆಂದು ಸೂಚನೆ. ಇಲ್ಲಿ ನಿಮ್ಮ ವಿಳಾಸವಿಲ್ಲ. ಮೈಸೂರಿಗೆ ಮರಳಿದ ಮೇಲೆ ಅಂಚೆಗೆ ಹಾಕುತ್ತೇನೆ.
ಇಂತುಜಿ.ಟಿ. ನಾರಾಯಣರಾವ್ ೧೭-೦೩-೨೦೦೧
ಕುಂಚಿಸಿಹನು ನಿಸರ್ಗಶಿಲ್ಪಿಯು ಕಸೂತಿಯ
ವಿ-ರಿಂಚ ಸೃಷ್ಟಿಯ ನಿರ್ಮಿಸಿದ ತೆರದಿ!
ಏನವನ ಸಂಚು? ಹುಲುಮಾನವಾ!
ತಳೆ ಮುಕ್ತ ದೃಷ್ಟಿಯ
ವಿ-ಪಂಚಿಸ್ವನವಾಲಿಸು ನಿಸರ್ಗದಾ ಅತ್ರಿಸೂನು
ಯಾರಿಗೇ ಪತ್ರ ಬರೆಯಲಿ, ಅವರು ಅತ್ರಿಸೂನು ಅಂಕಿತದಲ್ಲಿ ಈ ಬಗೆಯ ಪದ್ಯಗಳನ್ನು ಬರೆಯುತ್ತಿದ್ದರು.
೨೦೦೧ರಲ್ಲಿ ದೆಹಲಿ ಕನ್ನಡ ಸಂಘ ಜಿ.ಟಿ.ಎನ್. ಅವರ ಸಾಧನೆಗಾಗಿ ‘ಡಾ. ಶಿವರಾಮ ಕಾರಂತ’ ಪ್ರಶಸ್ತಿ ನೀಡಿದಾಗ ಅವರು ಹೇಳಿದ ಕೆಲವು ಮಾತುಗಳು : ‘ಪಾ.ವೆಂ. ಅವರಿಂದ ನೂಕುಬಲ ಪಡೆದೆ, ಆರ್.ಎಲ್.ಎನ್. ಪಥದಲ್ಲಿ ಕಾರಂತ ವಿಧಾನದಿಂದ ನಡೆದೆ. ದೇ.ಜ.ಗೌ. ನನ್ನನ್ನು ವಿಶ್ವಕೋಶದ ವಿಜ್ಞಾನ ಸಂಪಾದಕನಾಗಿ ಆಹ್ವಾನಿಸಿದಾಗ ನನ್ನೆದುರು ಅನಾವರಣಗೊಂಡದ್ದು ಅನಂತವಿಶ್ವ.’
ಇಲ್ಲಿ ಕಾರಂತ ವಿಧಾನವೆಂದರೆ ಅವರ ನಿಷ್ಠೆ ಮತ್ತು ಛಲ ಅಷ್ಟೇ. ಕಾರಂತರ ಬಗ್ಗೆ ಜಿ.ಟಿ.ಎನ್. ಎಂದೂ ಗೌರವ ತಳೆದಿದ್ದವರು. ಹಾಗೆಂದು ಅವರ ವಿಜ್ಞಾನ ಬರಹಗಳನ್ನು ಒಪ್ಪಿದವರಲ್ಲ. ಅದಕ್ಕೆ ಅವರದೇ ಆದ ಮಾನದಂಡಗಳನ್ನು ಅನ್ವಯಿಸುತ್ತಿದ್ದರು: ‘ಅಂದಾಜು ೧೯೫೦ರ ದಶಕದ ತನಕ, ಕನ್ನಡ ವಿಜ್ಞಾನ ವಾಙ್ಮಯ ಅಲ್ಲಿ ಇಲ್ಲಿ ಆಸಕ್ತರ ಆಡುಂಬೊಲವಾಗಿ ಬೆಳೆಯಿತು. ಆಸಕ್ತರ ಮಾತ್ರ ಏಕೆ? ಮಾರುಕಟ್ಟೆ ಬೇಡಿಕೆಗೆ ಅನುಗುಣವಾಗಿ ಸರಕು ಉತ್ಪಾದನೆ ಮತ್ತು ಪೂರೈಕೆ ಆಗುವ ವ್ಯಾಪಾರ ನಿಯಮ ಸರ್ವತ್ರ ಅನ್ವಯವಾಗುವುದೆಂಬುದನ್ನು ಮರೆಯಬಾರದು. ೧೯೩೦ರ ದಶಕದಲ್ಲಿ ಕೋಟ ಶಿವರಾಮ ಕಾರಂತರು ‘ಬಾಲಪ್ರಪಂಚ’ ಎಂಬ ಕಿರಿಯರ ಸಾಮಾನ್ಯ ವಿಶ್ವಕೋಶದ (ಈ ಮೂರು ಸಂಪುಟಗಳಲ್ಲಿ ವಿಜ್ಞಾನ ವಿಷಯಗಳೂ ಸೇರಿದ್ದುವು) ಮೂಲಕ ಹೊಸ ಹರವಿನ ಶೋಧ ಮಾಡಿದರು. ಮುಂದೆ ೧೯೫೦-೬೦ರ ದಶಕದಲ್ಲಿ ‘ವಿಜ್ಞಾನ ಪ್ರಪಂಚ ಹೆಸರಿನಲ್ಲಿ ನಾಲ್ಕು ಸಂಪುಟಗಳನ್ನು ಪ್ರಕಟಿಸಿದರು. ಆಧುನಿಕ ವಿಜ್ಞಾನ ಕುರಿತಂತೆ ಇಂಗ್ಲಿಷಿನಲ್ಲಿ ಪ್ರಕಟವಾಗಿದ್ದ ಜನಪ್ರಿಯ (ತಾಂತ್ರಿಕ ಅಲ್ಲ) ಕೃತಿಗಳನ್ನು ಓದಿ ತಮಗೆ ಅರ್ಥವಾದಷ್ಟನ್ನು (ಕಾರಂತರು ಮೂಲತಃ ಕಾದಂಬರಿಕಾರರು, ವಿಜ್ಞಾನದ ತಾಂತ್ರಿಕ ಭಾಷೆಗೆ ಪ್ರವೇಶ ಇದ್ದವರಲ್ಲ) ಕನ್ನಡ ವಾಕ್ಯಗಳಲ್ಲಿ ಬರೆದರು. ಏಕವ್ಯಕ್ತಿ-ಮಹಾಸಾಧನೆ ಮತ್ತು ಕಾರಂತರ ಹತ್ತು ಮುಖಗಳು ಎಂಬ ಭಾವುಕ ಕಾರಣಗಳಿಗಾಗಿ ಇದು ಪ್ರಸಿದ್ಧಿ ಗಳಿಸಿತು, ಅನೇಕ ಆವೃತ್ತಿಗಳನ್ನೂ ಕಂಡಿತು. ಆದರೆ ಭಾವುಕತೆ ಅಥವಾ ವ್ಯಕ್ತಿಗೌರವ ಎಂಬ ಜ್ಞಾತೃನಿಷ್ಠ ಕಾರಣಗಳು ವಿಜ್ಞಾನದ ಹಾದಿಯನ್ನು ಕಡೆಯುವುದಿಲ್ಲ, ನಿಯಂತ್ರಿಸುವುದೂ ಇಲ್ಲ. ಹೀಗಾಗಿ ಕಾರಂತರ ಪ್ರಯತ್ನ ಸಫಲವಾಗಲಿಲ್ಲ. ಮಾರ್ಗದರ್ಶಕವೂ ಆಗಲಿಲ್ಲ.ss(ವಿಜ್ಞಾನದ ಸಂವಹನ ಮಾಧ್ಯಮವಾಗಿ ಕನ್ನಡ, ಪುಟ ೨೬೦, ವಿಜ್ಞಾನ ವರ್ತಮಾನ)
ಕಾರಂತರಿಗೂ ತಮ್ಮ ಈ ಅಭಿಪ್ರಾಯಗಳನ್ನು ನಿವೇದಿಸುವ ಎದೆಗಾರಿಕೆ ಜಿ.ಟಿ.ಎನ್. ಅವರಿಗಿತ್ತು. ವಿಜ್ಞಾನ ಸಾಹಿತ್ಯದ ಕಸುವಿನ ಬಗ್ಗೆ ಪ್ರಸ್ತಾಪ ಬಂದಾಗಲೆಲ್ಲ ಜಿ.ಟಿ.ಎನ್. ಅವರಿಗೆ ಅಂಥ ತೃಪ್ತಿಕರ ಭಾವನೆಯಿರಲಿಲ್ಲ. ಕನ್ನಡದಲ್ಲಿ ವಿಜ್ಞಾನದ ಸಮೃದ್ಧ ಬೆಳೆ ಆಗುತ್ತಿದೆ. ಜೊಳ್ಳು ಹೆಚ್ಚು, ಗಟ್ಟಿ ಕಾಳು ಕಡಿಮೆ ಎಂದೇ ಹೇಳುತ್ತಿದ್ದರು. ಈ ಕೊರತೆ ಅವರಿಗೆ ಕೊನೆಯವರೆಗೂ ಇತ್ತು. ಮೈಸೂರಿನಲ್ಲಿ ವಿಶ್ವಮಾನವ ಪ್ರಶಸ್ತಿ ಪಡೆದಾಗಲೂ (೧೯೯೧) ಅವರು ನೇರವಾಗಿಯೇ ಹೇಳಿದ್ದರು; ‘ವಿಜ್ಞಾನ ಸಾಹಿತ್ಯ ರಚನೆಯಲ್ಲಿ ನನಗೆ ಸ್ಪರ್ಧಿಗಳೇ ಇಲ್ಲ. ಅದು ಅವರ ಆತ್ಮವಿಶ್ವಾಸವೋ, ಕನ್ನಡದ ಸ್ಥಿತಿಯೋ ಅಥವಾ ಎದೆಯೊಳಗಿನ ನೋವೋ ಏನಾದರೂ ಆಗಿರಬಹುದು.
‘ನಾಕ್ಷತ್ರಿಕ ಪಾಕಶಾಲೆಯಲ್ಲಿ ಗುರುತ್ವ ಎಂಬ ಬಾಣಸಿಗ ಬೈಜಿಕ ಕುಲುಮೆಯನ್ನು ಹೋಮಿಸಿ, ಪ್ರೋಟಾನ್, ನ್ಯೂಟ್ರಾನ್, ಎಲೆಕ್ಟ್ರಾನ್ ಕಣಗಳನ್ನು ಬೇಯಿಸಿ, ಭಕ್ಷ್ಯ ಭೋಜ್ಯಗಳನ್ನು ತಯಾರಿಸುತ್ತಾನೆ.’ ಇಂಥ ಮಹೋಪಮೆಗಳು ಜಿ.ಟಿ.ಎನ್. ಅವರಿಂದಲ್ಲದೆ ಬೇರೆ ಯಾರಿಂದ ಬರಬೇಕು? ‘ಶ್ರೀ ರಾಮಾಯಣ ದರ್ಶನಂನಲ್ಲಿ ವೈಜ್ಞಾನಿಕಾಂಶಗಳು ಎಂಬ ಲೇಖನವನ್ನು ಜಿ.ಟಿ.ಎನ್. ರಚಿಸಿದ್ದರು. ಇದು ಅವರ ಕಾವ್ಯ ಪ್ರೀತಿಯ ಪ್ರತೀಕ. ಲಾಸ್ಯ, ಲಾಲಿತ್ಯ ಗರಿಗೆದರಿದ ಅನುಭವ ಅವರ ಭಾಷೆ. ಅವರ ವಾಕ್ಯಗಳನ್ನು ಅರ್ಥೈಸಿಕೊಳ್ಳಲು ನಿಘಂಟು ಮೊರೆಹೋಗಬೇಕೆಂದು ಕುಚೋದ್ಯ ಮಾಡಿದವರು ಮರುಕ್ಷಣ ತಲೆದೂಗಿದ್ದೂ ಉಂಟು. ಹಿಂದೂ ಪತ್ರಿಕೆಗೆ ತಪ್ಪದೆ ಸಂಗೀತ ಕುರಿತು ವಿಮರ್ಶೆ ಬರೆಯುತ್ತಿದ್ದರು. ಸ್ಟಾರ್ ಆಫ್ ಮೈಸೂರು ಅವರನ್ನು ಬೆಂಬಿಡದೆ ಬರೆಸುತ್ತಿತ್ತು. ಕಸ್ತೂರಿ ಪತ್ರಿಕೆ ತಮ್ಮ ಲೇಖನದ ಪ್ರೂಫನ್ನು ಅವರಿಂದಲೇ ತಿದ್ದಿಸಿ, ಅನಂತರವಷ್ಟೇ ಪ್ರಕಟಿಸುತ್ತಿತ್ತು. ಪಾ.ವೆಂ. ಅವರಿಂದ ತೊಡಗಿ ಅರುಣ ನಾರಾಯಣರವರೆಗೆ ಇದೇ ಸಂಪ್ರದಾಯ ಬೆಳೆದುಬಂತು. ಈಗಿನ ಮೈಸೂರಿನ ವೀಣೆ ಶೇಷಣ್ಣ ಭವನದ ನಿರ್ಮಾಣದಲ್ಲಿ ಜಿ.ಟಿ.ಎನ್. ಪಾತ್ರ ದೊಡ್ಡದು. ಸುಶ್ರಾವ್ಯವಾಗಿ ಗಾಯಕರು ಮೈಮರೆತು ಹಾಡುತ್ತಿದ್ದಾಗ ಥಟ್ಟನೆ ಎಲ್ಲಿಂದಲೋ ಮಕ್ಕಳ ಅಳುವೋ, ಒಣಹರಟೆಯೋ ಸಭಿಕರಲ್ಲಿ ಕಂಡಾಗ, ‘ದಯವಿಟ್ಟು ಸಭಾಭವನದಿಂದ ನಿರ್ಗಮಿಸಿ’ ಎಂದು ಹೇಳುವ ತಾಕತ್ತು ಜಿ.ಟಿ.ಎನ್. ಅವರದು.
ನವಕರ್ನಾಟಕ ಸಂಸ್ಥೆ ಪ್ರಕಟಿಸಿದ ‘ವಿಜ್ಞಾನ ಪದವಿವರಣ ಕೋಶ’ ತಯಾರಿಕೆಯಲ್ಲಿ ನನಗೆ ಅವರ ಬಳಿ ಕುಳಿತು ಪದಗಳ ಅರ್ಥವಿವರಣೆ ಚರ್ಚಿಸುವ ಯೋಗ. ಕಣ್ಣನ್ನು ಅರೆಮುಚ್ಚಿ ಕಾಮ, ಫುಲ್‌ಸ್ಟಾಫ್, ಸೆಮಿ ಕೋಲನ್‌ಗಳೊಡನೆ ಅವರು ನೀಡುತ್ತಿದ್ದ ವಿವರಣೆ ಕಣ್ಣಿಗೆ ಕಟ್ಟಿದೆ. “ಉದ್ದುದ್ದ ವಾಕ್ಯ ಬೇಡ. ಲೆಟಸ್ ಸೇವ್ ಎ ಡಾಲರ್” ಎನ್ನುತ್ತಿದ್ದರು. ಉತ್ತಮ ವಿವರಣೆಯನ್ನು ನಾವು ಹೇಳಿದಾಗ “ಹೂ ಸೆಡ್ ಯು ಆರ್ ನಾಟ್ ಎ ಪೊಯೆಟ್” ಎನ್ನುತ್ತಿದ್ದರು. ‘ಪದವಿವರಣ ಕೋಶ’ ತಯಾರಿಸುವ ಗುಂಪಿನಲ್ಲಿದ್ದ ಎಂ.ಕೆ. ರಾಜಗೋಪಾಲ್ ಅವರೊಡನೆ ಸಂಗೀತ ಕುರಿತು ಮಧುರವಾದ ಸಂಭಾಷಣೆಯಲ್ಲಿ ತೊಡಗುತ್ತಿದ್ದರು. ನನ್ನೆಡೆಗೆ ತುಂಟ ನಗೆಬೀರಿ “ನೀನು ಗಾನಬಧಿರ” ಎಂಬ ಬಿರುದುಕೊಟ್ಟಿದ್ದರು. ಈಗ ಆ ಮಾತುಗಳು ಗಾಳಿಗೆ ಹಾರಿಹೋಗುವ ಮುನ್ನ ಎದೆಯಲ್ಲಿ ನೆಟ್ಟಿವೆ. ಮಧ್ಯೆ ಮಧ್ಯೆ ಅವರು ಹೇಳುತ್ತಿದ್ದ ರಾಮನ್ ಸಂದರ್ಶನದ ಕಥೆಯನ್ನು ನಾವು ಪಂಚತಂತ್ರದ ಕಥೆಯಂತೆ ಕೇಳುತ್ತಿದ್ದೆವು. ಭೌತವಿಜ್ಞಾನದ ಹಿನ್ನೆಲೆ ಇಲ್ಲದೆ ಸಂದರ್ಶನಕ್ಕೇಕೆ ಬಂದಿರಿ, ಆಚೆ ಹೋಗಿ ಎಂದು ನಿರ್ದಾಕ್ಷಿಣ್ಯವಾಗಿ ನುಡಿದ ರಾಮನ್, ಕೆಲವೇ ದಿನಗಳಲ್ಲಿ “ಕಮಿನ್ ಸರ್, ಯೂ ಆರ್ ಮೈ ಗೆಸ್ಟ್, ಪ್ಲೀಸ್ ಬೀ ಸೀಟೆಡ್” ಎಂದರಂತೆ. ರಾಮನ್ ಪರಿಣಾಮವನ್ನು ಕರತಲಾಮಲಕ ಮಾಡಿಕೊಂಡು ಹೋಗಿದ್ದರು ಜಿ.ಟಿ.ಎನ್. ಇಂಥ ಎಷ್ಟೋ ನೆನಪುಗಳು ಅವರ ಸತ್ಸಂಗದ ಆ ದಿನಗಳಿಂದ ಎದ್ದು ಈಗ ಕಾಡುತ್ತಿವೆ.
ನನ್ನ ಆತುರ, ಅಪ್ರಬುದ್ಧತೆಯಿಂದಾಗಿ ಜಿ.ಟಿ.ಎನ್.ಗೆ ಮಾರುದ್ದ ಕಾಗದ ಬರೆದು ಅವರ ‘ಮುಗಿಯದ ಪಯಣ ಆತ್ಮಕಥೆಯಲ್ಲಿ ಏನೇನು ಸಂಗತಿಗಳು ಬಿಟ್ಟುಹೋಗಿವೆ ಎಂದು ಪಟ್ಟಿಮಾಡಿ ಜೋರುಮಾಡಿದ್ದೆ. ಪದವಿವರಣ ಕೋಶ ರಚಿಸುವಾಗಿನ ಆ ನಾಲ್ಕಾರು ವರ್ಷದ ಸುದೀರ್ಘ ಅವಧಿಯ ಒಂದು ಸಂಗತಿಯೂ ದಾಖಲಾಗಿಲ್ಲ ಎಂದು ಹಲುಬಿದ್ದೆ. ಅವರ ಆತ್ಮಕಥೆಯಲ್ಲಿ ನಮ್ಮದು ಹೇಗೆ ಪ್ರಸ್ತುತವಾಗುತ್ತದೆ? ಎಂದು ಸಮಜಾಯಿಷಿ ಕೊಟ್ಟು ಅದೇ ಚಾಟಿಯನ್ನು ಬೀಸಿದ್ದರು. ಅವರ ಪತ್ರದ ಪೂರ್ಣಪಾಠ ಓದಿದರೆ ಜಿ.ಟಿ.ಎನ್. ಅವರ ನಿಲವು, ಅವರ ಜೀವನ ದೃಷ್ಟಿಯ ಕೆಲವು ಮಗ್ಗಲುಗಳಾದರೂ ಪರಿಚಯವಾಗುತ್ತವೆ ಎಂಬ ಕಾರಣಕ್ಕೆ ಆ ಪತ್ರವನ್ನು ಇಲ್ಲಿ ಯಥಾವತ್ತಾಗಿ ಕಾಣಿಸುತ್ತಿದ್ದೇನೆ. ಇದರಲ್ಲೇಕೆ ಮುಚ್ಚುಮರೆ?
ಪ್ರಿಯ ಶ್ರೀ ಅನಂತರಾಮು ಅವರಿಗೆ ವಂದನೆಗಳು. ನಿಮ್ಮ ಕಾಗದ (ದಿನಾಂಕ ೨೫-೦೩-೨೦೦೭) ನಿನ್ನೆ ಕೈಸೇರಿತು. ‘ಮುಗಿಯದ ಪಯಣ’ ವನ್ನು ಓದಿ, ಮುಗಿಸಿ ಅದರ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ವೈಜ್ಞಾನಿಕವಾಗಿ ವಿಶ್ಲೇಷಿಸಿ ಬರೆದಿದ್ದೀರಿ, ತುಸು ಚಾಟಿಯ ಚಬಕಿನ ಬರೆ ಕೂಡ ಕಾಸಿದ್ದೀರಿ! ಈ ವಾಚನ-ವಿಶ್ಲೇಷಣೆ-ವಿವೇಚಣೆ-ನಿರೂಪಣೆಗಳ ಹಿನ್ನೆಲೆಯಲ್ಲಿ ಮಿಡಿಯುತ್ತಿರುವ ಸಹೃದಯತೆಗೂ ಗುಣಸಂಪನ್ನಮತಿಗೂ ಮೊದಲು ಧನ್ಯವಾದ ಸಲ್ಲಿಸುತ್ತೇನೆ. ಈಗ ನೀವು ಎತ್ತಿರುವ ಸಂದೇಹ ಮತ್ತು ಆಕ್ಷೇಪಣೆಗಳಿಗೆ ಸಮಜಾಯಿಷಿ ಕೊಡಲು ಪ್ರಯತ್ನಿಸುತ್ತೇನೆ. ಆರಂಭದಲ್ಲೇ ಎಲ್ಲರಿಗೂ ತಿಳಿದಿರುವ ಒಂದು ಸಂಗತಿಯನ್ನು ಇಲ್ಲಿ ಸ್ಪಷ್ಟೀಕರಿಸುವುದು ಅವಶ್ಯ. ನೀವೇ ಅದನ್ನು ‘ಬದಲಾಗುವುದಿಲ್ಲ ಜಿ.ಟಿ.ಎನ್’ ಎಂಬ ನಿಸಾರ್-ಸಾಲನ್ನೂ ‘ಬದಲಾಗಬೇಕೇಕೆ ಜಿ.ಟಿ.ಎನ್?’ ಎಂಬ ನನ್ನ ಸವಾಲನ್ನು ಉದ್ಧರಿಸುವುದರ ಮೂಲಕ ವ್ಯಕ್ತಪಡಿಸಿದ್ದೀರಿ. ಆ ಸಂಗತಿ, ‘ಅವರವರ ದರುಶನಕೆ ಅವರವರ ಭಾವಕ್ಕೆ ಅವರವರಿಗೆಲ್ಲ ಶಿವ ನೀನೊಬ್ಬನೇ! ಇಲ್ಲಿ [ ಶಿವ] = [‘ಮುಗಿಯದ ಪಯಣ] ಎಂದಿಟ್ಟುಕೊಂಡು, ಈ ಚೌಕಟ್ಟಿನೊಳಗೆ ಲೇಖಕ ಸಂಗತವಾಗಿ ವ್ಯವಹರಿಸಿರುವನೇ, ಇಲ್ಲವಾದರೆ ಕಾರಣವೇನು ಎಂದು ಪರಿಶೀಲನೆ ಮಾಡುವುದು ಯುಕ್ತ ಎಂದು ಭಾವಿಸಿದ್ದೇನೆ.
ಒಂದನೆಯ ಬಿಕ್ಕಳಿಕೆ. ‘ಮುಚ್ಚುಮರೆಯಿಲ್ಲದೆಯೆ ಬಿಚ್ಚಿರುವೆ ಎಲ್ಲವನು-ಇದು ಯಾವ ಪುಟದಲ್ಲಿದೆ ಎಂಬುದನ್ನು ದಯವಿಟ್ಟು ತಿಳಿಸಿದರೆ ಉಪಕಾರ.ಎರಡನೆಯದು, ವಿದ್ಯಾರ್ಥಿ ದಿಶೆಯಲ್ಲಿ ಗೈದ ಸಾಧನೆ ಕುರಿತ ಆತ್ಮಪ್ರತ್ಯಯದ ಮಾತುಗಳು: ಈಗ ಬಾಲ್ಯ ಜೀವನದ ಪುಟಗಳನ್ನು ಮಗುದೊಮ್ಮೆ ವಿಮರ್ಶಾತ್ಮಕವಾಗಿ ಓದಿ ನೋಡಿದೆ. ನನ್ನ ‘ಸಾಧನೆ ಅಥವಾ ‘ವ್ಯಕ್ತಿತ್ವ ಕುರಿತು ನನಗಿರುವ ಅಭಿಪ್ರಾಯ ಒಂದೇ: ‘ಎನಗಿಂತ ಕಿರಿಯರಿಲ್ಲ.‘ಅರಿಕೆಯ ಪುಟ vii ರಲ್ಲಿ ಸ್ಫುಟೀಕರಿಸಿದ್ದೇನೆ: -ಘಟನೆಗಳಿಗೆ ಪ್ರಾಮುಖ್ಯ ನೀಡಬೇಕು, ಸ್ವವೈಭವೀಕರಣ ಎಲ್ಲಿಯೂ ಸಲ್ಲದು- ದಯವಿಟ್ಟು ಗಮನಿಸಿ. ಇಡೀ ಕೃತಿಯಲ್ಲಿ ‘ನಾನು’ ನಿಮಿತ್ತ ಮಾತ್ರ, ವಿವಿಧ ದೃಶ್ಯಗಳು ಅನಾವರಣಗೊಳ್ಳಲು ಕಾರಣನಾದ ಪಾತ್ರ ಎಂಬುದು ಪುಸ್ತಕದಲ್ಲಿ ಮಾತ್ರವಲ್ಲ ಇಡೀ ಬದುಕಿನಲ್ಲೇ ನನ್ನ ನಿಲವು. ಇಷ್ಟಾಗಿಯೂ ಓದುಗ ಬೇರೆಯೇ ಅಭಿಪ್ರಾಯ ತಳೆದಿರುವುದು ಸಾಧ್ಯ ಎಂಬುದು ನನಗೆ ತಿಳಿದಿದೆ. ಮೂರನೆಯದು, ದೇಜಗೌ ಕುರಿತ ನುಡಿಕಾಣ್ಕೆ. ನನ್ನ ವಾಸ್ತವ ಮತ್ತು ಸಮೀಪಾನುಭವವನ್ನು ನಿರ್ವಂಚನೆಯಿಂದ ನಿರೂಪಿಸಿದ್ದೇನೆ. ಈ ಬಗ್ಗೆ ಅಂದಾಗಲೀ ಇಂದಾಗಲೀ ಕಿಂಚಿತ್ತು ಅಳುಕು ಅಥವಾ ಸಂದೇಹ ಇಲ್ಲ. ಇಲ್ಲಾದರೂ ಘಟನೆಗೇ ಪ್ರಾಮುಖ್ಯ. ಹಾಮಾನಾ ಕುರಿತ ಮಾತು: ಅಹಿತ ವಾಸ್ತವತೆಯನ್ನು ಧ್ವನಿಮೂಲಕ ಸೂಚಿಸಿದ್ದೇನೆ. ಘಟನೆ ಕುರಿತಂತೆ ಒಳ್ಳೆಯದನ್ನು ಗುರುತಿಸಿ ಗೌರವಿಸಬೇಕು, ಒಳ್ಳೆಯದಲ್ಲದ ಮಾನವ ಸಹಜ ದೌರ್ಬಲ್ಯಗಳನ್ನು ತೇಲಿಸಿ ಓದುಗರ ವಿವೇಚನೆಗೆ ಬಿಡಬೇಕು ಎಂಬುದೇ ನನ್ನ ದೃಷ್ಟಿ. ಜೆಆರ್‌ಎಲ್‌ಅವರ ಆತ್ಮವೃತ್ತಾಂತವನ್ನು ಖರೀದಿಸಿ ಓದಿದ್ದೇನೆ. ‘ಮುಗಿಯದ ಪಯಣವನ್ನು ಖುದ್ದು ನಾನೇ ಅವರಲ್ಲಿಗೆ ಹೋಗಿ ಒಪ್ಪಿಸಿದ್ದೇನೆ. ರಾಮನ್-ಭೇಟಿ ಏರ್ಪಡಲು ನನಗೆ ಕುಮ್ಮಕ್ಕು ಕೊಟ್ಟವರು ಅವರು, ಮುಖತಃ ಭೇಟಿಯಾಗಿರದಿದ್ದ ಈ ಅನಾಮಧೇಯನ ಹೆಸರನ್ನು ದೇಜಗೌರಿಗೆ ಶಿಫಾರಸು ಮಾಡಿದವರೂ ಅವರೇ. ಆದರೆ ಪ್ರತ್ಯಕ್ಷ ಕಾರ್ಯ ರಂಗದಲ್ಲಿ – ಕನ್ನಡದಲ್ಲಿ ವಿಜ್ಞಾನ ವಾಙ್ಮಯ ನಿರ್ಮಾಣ ಮತ್ತು ಲೇಖಕರ ಅನ್ವೇಷಣೆ – ಕ್ರಮೇಣ ಒಂದು ಸಂಗತಿ ನನ್ನ ಅರಿವಿಗೆ ಬಂದಿತು: ಅವರು ಇತರರ ಅಭ್ಯುದಯವನ್ನು ಸಹಿಸುವವರಲ್ಲ! ಹೀಗಾಗಿ ನಾನು ಅವರಿಂದ ಮಾನಸಿಕವಾಗಿ ದೂರವಾದೆ. ಇನ್ನೊಮ್ಮೆ ಕಂಡಾಗ ನೀವು ಅಪೇಕ್ಷಿಸಿದರೆ ವಿವರಗಳನ್ನು ಹೇಳಬಲ್ಲೆ.
ಜ್ಞೇಯನಿಷ್ಠತೆಗೇ ( ಜ್ಞಾತೃನಿಷ್ಠತೆಗೆ ಅಲ್ಲ) ನಾನು ಶರಣಾಗುವಾತ. ಈ ಆತ್ಮವೃತ್ತಾಂತದಲ್ಲಿ ಕೆಎಲ್‌ಜಿಯವರ ಬಗ್ಗೆ ಪ್ರಸ್ತಾಪವಿಲ್ಲ. ಅವರ ವೈದುಷ್ಯಕ್ಕೆ ಮತ್ತು ಸಜ್ಜನಿಕೆಗೆ ಮಣಿಯುತ್ತೇನೆ ಆದರೆ ‘ಮುಗಿಯದ ಪಯಣ’ದಲ್ಲಿ ಅವು ಹೇಗೆ ಪ್ರಸ್ತುತ? ವರ್ತಮಾನ ಕಾಲದ ವಿಜ್ಞಾನ ಲೇಖಕರ ಬಗ್ಗೆ ನಾನು ಅಲಕ್ಷ್ಯ ಧೋರಣೆ ತಳೆದಿದ್ದೇನೆ. ನನ್ನನ್ನು ತೀರ ಹತ್ತಿರದಿಂದ ಬಲ್ಲ ನಿಮ್ಮಲ್ಲಿ ಈ ಭಾವನೆ ಹೇಗೆ ಛಳುಕಿತೋ ಆಶ್ಚರ್ಯ. ‘ಹೊಸ ಚಿಗುರುಗಳನ್ನು ಅರಸಿ ಹೋಗಿ ಹುರಿದುಂಬಿಸಿ ಬೆಳೆಸುವುದು ನನ್ನ ಆದ್ಯ ಕರ್ತವ್ಯವೆಂದು ಸದಾ ಭಾವಿಸಿ ಹಾಗೆ ನಡೆದಿದ್ದೇನೆ. ದಿವಂಗತ ಕೃಷ್ಣಾನಂದ ಕಾಮತ್, ಸಮಕಾಲೀನ ನಾಗೇಶ ಹೆಗಡೆ, ಬಿ.ಎಸ್. ಶೈಲಜಾ, ಟಿ.ಆರ್.ಅನಂತರಾಮು ಮೊದಲಾದವರ ಸಾಧನೆಗಳನ್ನು ಯಾದಿಮಾಡುವುದು ಪ್ರಸಕ್ತ ಪುಸ್ತಕದ ಉದ್ದೇಶವಲ್ಲ. ಇಷ್ಟಾಗಿಯೂ ಆ ಸಾಧಕರಿಗೆ ಅವರ ಸಿದ್ಧಿಗಳೇ ಪ್ರಸಿದ್ಧಿ ತಂದಿರುವಾಗ ಇಲ್ಲಿ ಅವನ್ನು ಪ್ರಸ್ತಾಪಿಸುವುದು ಅನಾವಶ್ಯಕ. ‘ಎನ್ಸಿಸಿ ದಿನಗಳು’, ‘ಸಿ.ವಿ.ರಾಮನ್’, ‘ರಾಮಾನುಜನ್’, ‘ಸಿಎನೆಸ್’ ಮೊದಲಾದ ಸಂಗತಿಗಳು ಪ್ರಸ್ತುತ ಪುಸ್ತಕದಲ್ಲಿ ಚರ್ವಿತಚರ್ವಣಗಳಲ್ಲವೇ? ನಾನು ವಿಧಿಸಿಕೊಂಡ ಚೌಕಟ್ಟಿನೊಳಗೆ ಅವು ಹೊಂದುತ್ತವೆಂಬ ನಿಲವೊಂದೇ ಇಲ್ಲಿಯ ನಿರ್ಣಾಯಕ. ಪತ್ರದ ಆರಂಭದಲ್ಲಿ ನೀವು ಬರೆದಿರುವ ಮೆಚ್ಚುನುಡಿಗಳೂ ಮುಂದೆ ‘ಎದೆ ತುಂಬಿ ಹಾಡಿರುವ ಬಿಚ್ಚುನುಡಿಗಳೂ ಒಂದೇ ಸಹೃದಯತೆಯ ಸೆಲೆಯಿಂದ ಬುಳುಬುಳಿಸಿರುವ ಎರಡು ಕವಲುಗಳೆಂದು ನನಗೆ ಗೊತ್ತಿದೆ. ನಿಮಗೆ ಹಾರ್ದಿಕ ಕೃತಜ್ಞತೆಗಳು. ‘ವಿಜ್ಞಾನ ಪದ ವಿವರಣ ಕೋಶ’ದ ಪರಿಷ್ಕೃತ-ವಿಸ್ತೃತ ಆವೃತ್ತಿಯ ಪ್ರಗತಿ ಕುರಿತು (ಅದರ ಪ್ರಧಾನ ಸಂಪಾದಕರಾಗಿರುವ) ನಿಮ್ಮಿಂದ ಎರಡು ಸಾಲುಗಳಿವೆಯೋ ಎಂಬ ಕುತೂಹಲದಿಂದ ಕಾಗದವಿಡೀ ಕಣ್ಣು ಹಾಯಿಸಿದೆ. ಹಳೆಯ ಪುಸ್ತಕಕ್ಕೆ ಅವಶ್ಯ ಸೇರ್ಪಡೆ ಮತ್ತು ತಿದ್ದುಪಡಿ ಆಗಬೇಕಾದ ಕೆಲವು ಹೊಸ ಪದಗಳನ್ನು ನಾನು ದಾಖಲಿಸಿದ್ದೇನೆ. ಮುದ್ರಣಪೂರ್ವ ಬೆರಳಚ್ಚು ಪ್ರತಿಯನ್ನು ನನಗೊಮ್ಮೆ ಕಳಿಸಿದರೆ ಸಂತೋಷವಾಗಿ ಈ ಕೆಲಸ ಮಾಡಬಲ್ಲೆ. ನಿಮ್ಮ ಹಾಗೂ ಪ್ರಕಾಶಕರ ಅನುಕೂಲ. ನಾನು ಬೆಂಗಳೂರಿಗೆ ಬರಲಾರೆ – ಆರೋಗ್ಯ ಅಷ್ಟು ಸೂಕ್ಷ್ಮವಾಗಿದೆ. ನಿಮಗೆಲ್ಲರಿಗೂ — ಸಂಸಾರ, ನವಕರ್ನಾಟಕ, ಇತರ ಸಾಮಾನ್ಯ ಮಿತ್ರರು – ಶುಭಕಾಮನೆಗಳು. ಇಂತಿ ವಂದನೆಗಳುಜಿ.ಟಿ.ನಾರಾಯಣರಾವ್
ಜಿ.ಟಿ.ಎನ್. ಶ್ರುತಗಾನ ಎಂಬ ಸಂಕಲಿತ ಕೃತಿಯಲ್ಲಿ ಪ್ರೊ. ಎಚ್.ಜಿ. ಸೂರ್ಯನಾರಾಯಣರಾವ್ ಎಂಬ ವಿದ್ವಾಂಸರ ಬಗ್ಗೆ ಕಾಣಿಸಿರುವ ನುಡಿಕಾಣಿಕೆ ಇದು: ‘ಸಂಗೀತ, ಸಾಹಿತ್ಯ ಮತ್ತು ಉಲ್ಲಾಸ ಹದವಾಗಿ ಬೆರೆತಾಗ ಮೈದಳೆವ ರಸಪಾಕ. ಸಂಸ್ಕೃತಿಯ ಸಾಕಾರ ಜಂಗಮರೂಪ. ನಮ್ಮ ಚಟುವಟಿಕೆಗಳ ನಿಕಷ: ‘ಎಚ್.ಜಿ.ಎಸ್. ಈ ನಿಲವನ್ನು, ಬರಹವನ್ನು ಅಥವಾ ವಾದವನ್ನು ಒಪ್ಪಿಯಾರೆ? ಎಂಬ ಮಟ್ಟ, ಇವರ ಬದುಕೇ ಒಂದು ಮಹಾಕಾವ್ಯ.
ಈ ಸುಂದರ ವಾಕ್ಯಪಂಕ್ತಿಯಲ್ಲಿ ‘ವಿಜ್ಞಾನ ಸಾಹಿತ್ಯ’ ಎಂಬ ಸೇರ್ಪಡೆಯನ್ನು ಹಾಗೂ ಎಚ್.ಜಿ.ಎಸ್. ಜಾಗದಲ್ಲಿ ಜಿ.ಟಿ.ಎನ್. ಎಂಬ ಪುಟ್ಟ ಬದಲಾವಣೆ ಮಾಡಿಕೊಂಡು ಜಿ.ಟಿ.ಎನ್. ಅವರ ಬದುಕನ್ನು ಕಾಣಲು ಬಯಸುತ್ತೇನೆ. ಇದೇನೂ ‘ವಾಕ್ಯಚೌರ್ಯ’ ಎನ್ನಿಸುವುದಿಲ್ಲ. ಬದಲು ಕೆರೆಯ ನೀರನು ಕೆರೆಗೆ ಚೆಲ್ಲುವ ಕಾಯಕ. ಆ ಗುಂಗಿನಲ್ಲೇ ಕೆಲಹೊತ್ತಾದರೂ ಇರಲು ಬಯಸುತ್ತೇನೆ.
(ತರಂಗ, ಜುಲೈ ೭ ೨೦೦೮ರಲ್ಲಿ ಪ್ರಕಟಗೊಂಡ ಲೇಖನದ ವಿಸ್ತೃತ ರೂಪ)
[ವಿ.ಸೂ: ಅನಂತರಾಮು ಹಾಗೂ ನಾಗೇಶ ಹೆಗಡೆಯವರ ಸಂದರ್ಶನಾಧಾರಿತ `ಜ್ಞಾನಸರಣಿ’ ಕಲಾಪದ ವಿಡಿಯೋ ಚಿತ್ರವನ್ನು ಇಲ್ಲಿ ನೋಡಿ, ಕೇಳಬಹುದು]
ಜಿಟಿನಾ ಓರ್ವ ಅಸಾಧ್ಯ ವ್ಯಕ್ತಿ. He wasa wonderful man. ಮಿತ್ರನಾಗಿ, ಜ್ಞಾನಿಯಾಗಿ, ಕಲಾಪ್ರೇಮಿಯಾಗಿ ಅವರ ಸತ್ಸಂಗ ನನ್ನ ಭಾಗ್ಯದಲ್ಲಿ ಒಂದು. ಅವರೋರ್ವ ಜಾಗೃತ ಚೈತನ್ಯ ವೈಚಾರಿಕರಾದರೂ ಕಲಾನಂದದಲ್ಲಿ ಅಷ್ಟೆ ಮುಳುಗಬಲ್ಲ ರಸಿಕ. ಅವರ ಬರಹಗಳು ಸಾಂದ್ರ, ವ್ಯವಸ್ಥಿತ, ಚೊಕ್ಕ, ಸುಂದರ.
ನನ್ನ ಕೆಲವು ಬರೆಹಗಳಿಗೆ, ಮುಖ್ಯವಾಗಿ ಯಕ್ಷಗಾನ ಪದಕೋಶಕ್ಕೆ ಅವರುನೀಡಿದ ಪ್ರಶಂಸೆ ಅವಿಸ್ಮರಣೀಯ.
ಹೌದು, ಜಿ ಟಿ ಎನ್ ಸ್ಮರಣೀಯರು. ಅವರೊಡನೆ ಮಾತಾಡುವಾಗ ಅಧ್ಯಾಪಕ ವೃತ್ತಿಯಲ್ಲಿ ಇರುವವರು ಏನೆಲ್ಲ ಮಾಡಬೇಕು , ಮಾಡಬಹುದು ಅಂತೆಲ್ಲ ಹೇಳಿದ್ದರು- ನನ್ನ ಉದ್ಯೋಗ ಜೀವನದ ಆರಂಭದಲ್ಲಿ. ಅವರು ಹೇಳಿದ್ದನ್ನೆಲ್ಲ ಅನುಷ್ಟಾನಿಸಲು ಆಗದ್ದರಿಂದ ಆನಂತರ ಅವರ ಭೇಟಿ ಆದಾಗ ಕೊಂಚ ಹಿಂಜರಿಕೆ ನನ್ನಲ್ಲಿದ್ದುದೂ ಸುಳ್ಳಲ್ಲ,-
ಜಿ.ಟಿ.ನಾ. ರವರ ಸ್ಮೃತಿ ನಮಗೆ ಆಗಾಗ ಉತ್ತಮ ವಿಚಾರಗಳಿಗಾಗಿ ಆಗುತ್ತಿರುತ್ತದೆ. ಅವರು ನಮ್ಮ ಮಕ್ಕಳ ಯಕ್ಷಗಾನ ಪ್ರದರ್ಶನಗಳ ಬಗ್ಗೆ ಬರೆದ ವಿಮರ್ಶೆಗಳು, ನಮ್ಮ ಸ್ನೇಹ ಶಾಲೆಯ ಆರಂಭದ ದಿನಗಳಲ್ಲಿ ಬಂದು ಪ್ರೋತ್ಸಾಹದ ಮಾತುಗಳನ್ನಾಡಿದ್ದು, ಅವರ ಸಾಹಿತ್ಯದ ಪುಸ್ತಕಗಳ ಸಂಗ ನಮಗೆ ಅವರ ಸ್ಮೃತಿಯ ನೆಲೆಗಳು.
ಜಿಟಿಎನ್ ಸ್ಮರಣೆಯ ಲೇಖನ ತುಂಬಿ ಹರಿದಿದೆ- ಮಾನ್ಸೂನಿನ ಗೋಕಾಕ ಜಲಪಾತದಂತೆ. ಅಭಿನಂದನೆಗಳು . ಹಿಂದಿನದುಚಂದದ ತೊರೆ. ಇಂದಿನದು ವೈಬವದ ಹೊಳೆ .
ಜಿಟಿಎನ್ ಕಣ್ಮರೆಯಾಗಿ ಏಳು ವರ್ಷಗಳಾದುವೆ?!
ಅವರ ಪ್ರೀತಿಯ ನೆನಪಿನ ಬಿಸಿ ಸದಾ ಹಿತಕರ.
ಓದಿ ಧನ್ಯನಾದೆ ಪುರ೦ದರ ವಿಠಲ ಸ್ಮರಿಸಿ ಕೃತಾರ್ಥನಾದೆ, ಬಾಲ್ಯದ ನೆನೆಪಿನ ಹೊಳೆಯಲ್ಲಿ ತೇಲಿಹೋದೆ … ಅಪ್ಪನನ್ನು ನನ್ನ ಮಕ್ಕಳಲ್ಲಿ ಕಾಣುವ ನಾನು ಪ್ರಾಥಸ್ಮರಣೀಯರ ಸಾಲಿಗೆ ಅವರನ್ನು ಸೇರಿಸಿಬಿಟ್ಟಿದ್ದೇನೆ …
ಅಸಾಮಾನ್ಯ ವ್ಯಕ್ತಿತ್ವ ಅವರದು.ವೈಜ್ಞಾನಿಕವೆನಿಸುವ ಚಿಂತನೆ ಮತ್ತು ತರ್ಕಬದ್ಧತೆ,ಶಬ್ದಗಳನ್ನೂ,ಅವುಗಳ ಅರ್ಥಗಳನ್ನೂ ತರ್ಕದ ಪರಡಿಯಲ್ಲಿ ಅಳೆದೇ ಸ್ವೀಕರಿಸುವ ಸೂಕ್ಷ್ಮತೆ,ಸಾಹಿತ್ಯಪ್ರೇಮ,ಸಂಗೀತಪ್ರೇಮ,ಹಾಸ್ಯಪ್ರಜ್ನೆ—ಒಂದೇ—ಎರಡೇ!! ಎಲ್ಲವೂ ವಿಶಿಷ್ಟ–ವಿಶೇಷ!
ಅಶೋಕ ಬಾವ, ನಾರಾಯಣ ಮಾವನನ್ನು ಮತ್ತೆ ಕಂಡಂತಾಯಿತು. ಅನಂತರಾಮು ಅವರ ಲೇಖನ ನೀಡುವ ಮೂಲಕ ನಿಜ ಬಗೆಯಲ್ಲಿ ನೆನಪು ಮಾಡಿಕೊಂಡಂತಾಯಿತು. ಓದುತ್ತಿದ್ದಂತೆ ನಿತ್ಯದ ಬದುಕಿನ ಓಟದಲ್ಲಿ ಮರೆಗೆ ಸಂದ ಅವರೊಂದಿಗೆ ಕಳೆದ ಕ್ಷಣಗಳ ನೆನಪುಗಳು ಭೋರ್ಗರೆದು ಬಂತು. ನನ್ನ ಬರಹಗಳಿಗೆ ಮೊದಲ ವಿಮರ್ಶಕ ಅವರಾಗಿದ್ದರು. ಕಾರ್ಡಿನಲ್ಲಿ, ಇನ್ಲೆಂಡ್ ಲೆಟರಿನಲ್ಲಿ ಬರುತ್ತಿದ್ದ ಆ ಪತ್ರಗಳಲ್ಲಿ ಅನಂತರಾಮು ಹೇಳಿದಂತೆ ಆರಂಭದಲ್ಲಿ ತುಸು ಹೊಗಳಿ, ನಂತರ ಚೆನ್ನಾಗಿ ಬರೆ ಕಾಸಿ, ಆ ನಂತರ ಬೆನ್ನು ತಟ್ಟಿ ಹುರಿದುಂಬಿಸುತ್ತಿದ್ದರು. ಎದುರಾದಾಗ ಓಂದಿಷ್ಟು ಹೆದರಿದರೂ ಅವರ ಪತ್ರಗಳಿಗೆ ಕಾಯುತ್ತಿದ್ದೆ. ಯಾವುದನ್ನೂ ಜತನವಾಗಿಡದ ನಾನು ಅವರ ಕೆಲವು ಪತ್ರಗಳನ್ನು ಮಾತ್ರ ಜಾಗೃತೆಯಿಂದ ಇರಿಸಿಕೊಂಡಿದ್ದೇನೆ – ಆಗೊಮ್ಮೆ ಈಗೊಮ್ಮೆ ಓದುತ್ತೇನೆ – ಸ್ಪೂರ್ತಿ ಪಡೆಯುವುದಕ್ಕೆ.
ಇಂದು ಜಿ ಟಿ ನಾ ಅವರ ಸ್ಮರಣ ದಿನವೆಂದು ನೀವು ನೆನಪಿಸಿದುದು ತುಂಬಾ ಒಳ್ಳೆಯದಾಯಿತು. ಒಬ್ಬರನ್ನು ನೆನಪಿಸಿಕೊಳ್ಳುವುದೆಂದರೆ ಅವರು ಬದುಕಿದ ರೀತಿ, ಅವರು ನಂಬಿದ ಮೌಲ್ಯಗಳು, ಅವರು ಮಾಡಿದ ಸಾಧನೆಗಳು ಇವೆಲ್ಲವನ್ನೂ ನೆನಪಿಗೆ ತಂದುಕೊಂಡು ಆ ಮೂಲಕ ನಮ್ಮ ಬದುಕನ್ನು ಹಸನಾಗಿಸಿಕೊಳ್ಳುವುದು. ಈ ಕೆಲಸವನ್ನು ಶ್ರೀ ಅನಂತರಾಮು ಅವರ ಲೇಖನವನ್ನು ಪ್ರಕಟಿಸುವ ಮೂಲಕ ನೀವು ಮತ್ತು ಲೇಖಕರಾದ ಅವರು ಸಮರ್ಪಕವಾಗಿ ಮಾಡಿದ್ದೀರಿ. ಅನಂತರಾಮು ಅವರು ಜಿಟಿನಾ ಅವರ ಸಂಕೀರ್ಣ ವ್ಯಕ್ತಿತ್ವವನ್ನು ಅವರ ನಯ-ಕಠೋರ ಹಾಗೂ ನಮ್ರತೆ-ಅಹಂ ಇವುಗಳಿಂದ ಕೂಡಿದ ಅತ್ಯಂತ ಸಂಕೀರ್ಣ ವ್ಯಕ್ತಿತ್ವವನ್ನು ಕಟ್ಟಿಕೊಟ್ಟಿದ್ದಾರೆ; ಅವರಿಗೆ ವಂದನೆಗಳು. ನನಗೆ ಜಿಟಿನಾ ಎಂದರೆ ಕೂಡಲೇ ನೆನಪಿಗೆ ಬರುವುದು ಅವರ ಎಂದಿಗೂ ಬತ್ತದ ಜೀವನೋತ್ಸಾಹ (ಪುತ್ತೂರಿನಲ್ಲಿ ರಾತ್ರಿ ಅವರು ಮಾಡಿದ ನಕ್ಷತ್ರ-ವಿವರಣೆಯನ್ನು ನಾನು ಎಂದಿಗೂ ಮರೆಯಲಾರೆ) ಮತ್ತು ತಮ್ಮ ನಂಬಿಕೆಗಳಲ್ಲಿ ಇದ್ದ ಅಗಾಧ ವಿಶ್ವಾಸ. ಈ ಎರಡು ಗುಣಗಳನ್ನು ನಾನು ಯಾವಾಗಲೂ ಅನುಸರಿಸಲು ಪ್ರಯತ್ನಿಸುವಂತೆ ಮಾಡುವುದು ಅವರ ’ಮುಗಿದ ಪಯಣ.’