ಅಧ್ಯಾಯ ಐವತ್ತಾರು

[ಡೇವಿಡ್ ಕಾಪರ್ಫೀಲ್ಡ್‍ನ ಜೀವನ ವೃತ್ತಾಂತ ಮತ್ತು ಅನುಭವಗಳು, ಕಾದಂಬರಿ. ಮೂಲ ಇಂಗ್ಲಿಷಿನಲ್ಲಿ ಚಾರ್ಲ್ಸ್ ಡಿಕನ್ಸ್, ಕನ್ನಡ ಭಾವಾನುವಾದ ಎ.ಪಿ. ಸುಬ್ಬಯ್ಯ]
ವಿ-ಧಾರಾವಾಹಿಯ ಐವತ್ತೆಂಟನೇ ಕಂತು

ಅಯ್ಯೋ ಸ್ಟೀಯರ್ಫೋರ್ತ್, ಕಳೆದ ಸರ್ತಿ ನೀನು ನನ್ನನ್ನು ಬಿಟ್ಟು ಹೋಗುವಾಗ ಅದು ಕಡೇ ಸಾರಿಯ ಅಗಲುವಿಕೆಯೆಂದು ನಾನು ಗ್ರಹಿಸಿರಲಿಲ್ಲ! ನಿನ್ನ ಉತ್ತಮ ಗುಣಗಳನ್ನು ಮಾತ್ರ ನಾನು ಸದಾ ಗ್ರಹಿಸಿ ಸಂತೋಷಿಸುತ್ತಿದ್ದಾಗಲೇ “ನನ್ನ ಉತ್ತಮ ಗುಣಗಳ ಗಣನೆಯಿಂದ ಮಾತ್ರ ನನ್ನನ್ನು ನೆನೆಸು” ಎಂದು ನೀನು ನನಗೆ ಹೇಳಿದೆಯಲ್ಲಾ! ಅದು ಅಗತ್ಯವಿತ್ತೇ? ಇಂದು ಅವನ ಕಳೇಬರವನ್ನು ನೋಡುತ್ತಿರುವಾಗ ಅವನ ಸಹಸ್ರಾರು ಉತ್ತಮ ಗುಣಗಳು ಎದುರು ಬಂದು ನಿಲ್ಲದಿರುವುವೇ? ಈ ಗುಣಗಳನ್ನು ಹೊರತಾಗಿ ಇತರವುಗಳನ್ನು ನೆನಪಿಗೆ ತರಲು ಸಾಧ್ಯ ತಾನೆ ಆಗಬಹುದೇ? ಸ್ಟೀಯರ್ಫೋರ್ತನ ಶವವನ್ನು ಮಿ. ಓಮರರಿಂದ ತರಿಸಿಕೊಂಡ `ಕಾಫಿ’ನ್ನಿನಲ್ಲಿಟ್ಟು ಬಂಡಿಯ ಮೂಲಕ ಕಾಫಿನ್ನನ್ನು ಸ್ಟೀಯರ್ಫೋರ್ತನ ಮನೆಗೆ ಸಾಗಿಸಿದೆವು. ಯಾರ್ಮತ್ತಿನಲ್ಲಿ ಸ್ಟೀಯರ್ಫೋರ್ತನು ತುಂಬಾ ಪರಿಚಿತನೂ ಹೆಸರುವಾಸಿಯೂ ಆಗಿದ್ದುದರಿಂದ ಅನೇಕ ನಾವಿಕರು ಬಂಡಿಯ ಹಿಂದೆಯೇ ಬಹುದೂರ ಬಂದಿದ್ದರು. ಯಾರ್ಮತ್ತಿನಿಂದ ರಾತ್ರಿಯಲ್ಲಿ ಹೊರಟ ಬಂಡಿ ಬೆಳಗಾಗುವಾಗ ಲಂಡನ್ನಿನ ಹೈ ಗೇಟಿಗೆ ತಲುಪಿತು. ಹಿಂದಿನ ದಿನದ ಮೋಡಗಳೆಲ್ಲಾ ಮಾಯವಾಗಿ ಸೂರ್ಯ ಪ್ರಕಾಶಮಾನನಾಗಿಯೇ ಉದಯಿಸಿದ್ದನು. ಸ್ಟೀಯರ್ಫೋರ್ತನ ಮನೆಗೆ ಶವವನ್ನು ತಲುಪಿಸಿ, ಅವನ ತಾಯೊಡನೆ ಮಾತಾಡಿ ಬರಲು ಯಾರ್ಮತ್ತಿನಲ್ಲಿ ಇನ್ನು ಯಾರೂ ನನಗಿಂತ ಹೆಚ್ಚು ಆ ಮನೆಯ ಪರಿಚಿತರಿಲ್ಲವ್ದಿದ್ದುದರಿಂದಲೂ ನನಗೂ ಸ್ಟೀಯಫೋರ್ತನಿಗೂ ಮೊದಲೇ ಇದ್ದ ಸ್ನೇಹದ ಕಾರಣವಾಗಿಯೂ ನಾನು ಈ ಕೆಲಸವನ್ನು ಮಾಡಿದೆನು.

ನಮ್ಮ ಬಂಡಿಯನ್ನು ಗೇಟಿನ ಹೊರಗಡೆ ಬಿಟ್ಟು, ನಾನು ಮಾತ್ರ ಒಳಗೆ ಹೋಗಿ ಮನೆಯ ಕರೆಘಂಟೆಯನ್ನು ಮೃದುವಾಗಿ ಬಾರಿಸಿದೆನು. ಕೆಲಸದ ಹೆಂಗುಸು ಬಂದು ಬಾಗಿಲು ತೆರೆದಳು. ನನ್ನನ್ನು ನೋಡಿ ಅವಳಿಗೆ ಬಹು ಆಶ್ಚರ್ಯವೂ ಗಾಬರಿಯೂ ಆದಂತೆ ತೋರಿ –
“ನಿಮಗೇನು, ಅಸೌಖ್ಯವೇ ಸರ್?” ಎಂದು ಕೇಳಿದಳು.
“ಒಂದು ಗಹನವಾದ ಕಾರ್ಯದಲ್ಲಿ ಬಂದಿರುವೆನು – ಮಿಸೆಸ್ ಸ್ಟೀಯರ್ಫೋರ್ತಳಿಗೆ ನಾನು ಬಂದಿರುವುದಾಗಿ ತಿಳಿಸು” ಅಂದೆನು.

ಕೆಲಸದವಳು ಒಳಗೆ ಹೋಗಿ ತಿಳಿಸಿ ಬರುವವರೆಗೆ ನಾನು ಬೈಠಖಾನೆಯಲ್ಲೇ ಕುಳಿತಿದ್ದೆನು. ಬೈಠಖಾನೆಯಲ್ಲಿ ಮೊದಲಿನ ವೈಭವದ ಕುರ್ಚಿ, ಮೇಜು ಅಲಂಕಾರಗಳು ಯಾವುವೂ ಇರಲಿಲ್ಲ. ಮನೆಯೆಲ್ಲಾ ಶ್ಮಶಾನ ಸದೃಶವಾದ ನಿಶ್ಶಬ್ದತೆಯಿಂದ ತುಂಬಿತ್ತು. ಕೆಲಸದವಳು ಕೋಣೆಯಿಂದ ಕೋಣೆಗಾಗಿ ದಾಟಿ ಬೈಠಖಾನೆಗೆ ಪುನಃ ಬರುವಾಗ ಆಗುತ್ತಿದ್ದ ಕಾಲ ಸಪ್ಪಳವು ಮಧ್ಯ ರಾತ್ರಿಯ ನಿಶ್ಶಬ್ದ ಗಂಭೀರತೆಯಿಂದಲೇ ಹೊರಟು ಬರುತ್ತಿದ್ದಂತೆ ಕೇಳಿಸುತ್ತಿತ್ತು. ಆ ಶಬ್ದವನ್ನು ಆಲಿಸಬಾರದೆಂದು ಪ್ರಯತ್ನಿಸಿದರೂ ಶಬ್ದವು ಅದೇ ಗಂಭೀರತೆಯಿಂದ ಕೇಳಿಸುತ್ತಾ ಇದ್ದಾಗ, ಕೆಲಸದವಳು ಎದುರು ಬಂದು, ನಾನು ಮಿಸೆಸ್ ಸ್ಟೀಯರ್ಫೋರ್ತಳಿದ್ದಲ್ಲಿಗೆ ಹೋಗಬೇಕೆಂದು ಹೇಳಿ ನನ್ನನ್ನು ಕರೆದುಕೊಂಡು ಹೋದಳು. ನಾನು ಕೆಲಸದವಳನ್ನು ಹಿಂಬಾಲಿಸಿ ಮಹಡಿಗೆ ತಲುಪುವಾಗ ಆ ಮನೆಯ ಬಹು ಭಾಗವೆಲ್ಲ ಉಪಯೋಗಿಸದೇ ಉಳಿದಿದ್ದಂತೆ ತೋರುತ್ತಿತ್ತು.

ಮಿಸೆಸ್ ಸ್ಟೀಯರ್ಫೋರ್ತಳು ತನ್ನ ಮಗನು ಉಪಯೋಗಿಸುತ್ತಿದ್ದ ಕೋಣೆಯಲ್ಲಿ ಮಲಗಿದ್ದಳು. ಅಲ್ಲಿ ಸ್ಟೀಯರ್ಫೋರ್ತನ ಒಂದು ತೈಲ ಚಿತ್ರವೂ ಅವನ ವಿದ್ಯಾ ಪ್ರವೀಣತೆಗಾಗಿ ಪಡೆದಿದ್ದ ಪಾರಿತೋಷಕಗಳೂ ಅಲಂಕಾರಕ್ಕಾಗಿ ಇಡಲಾಗಿದ್ದುವು. ನಾನು ಆ ಕೋಣೆಗೆ ನುಗ್ಗುವಾಗ ಮಿಸ್ ಡಾರ್ಟಲ್ಲಳು ಮಿಸೆಸ್ ಸ್ಟೀಯರ್ಫೋರ್ತಳ ಸಮೀಪದಲ್ಲಿ ಒಂದು ಕುರ್ಚಿಯಲ್ಲಿ ಕುಳಿತಿದ್ದಳು. ನಾನು ಒಳನುಗ್ಗಿದ ಕೂಡಲೇ ಅವಳು ನನಗೆ ಒಂದು ಕುರ್ಚಿಯನ್ನು ತೋರಿಸಿ, ತಾನು ಹೋಗಿ ಮಿಸೆಸ್ ಸ್ಟೀಯರ್ಫೋರ್ತಳ ಹಿಂಬದಿ ನಿಂತು ನನ್ನನ್ನು ನೋಡತೊಡಗಿದಳು. ಮಿಸೆಸ್ ಸ್ಟೀಯರ್ಫೋರ್ತಳು ನನ್ನನ್ನು ನೋಡಿ –
“ಶೋಕವಸನವನ್ನು ಧರಿಸಿದ್ದು ಕಾಣುತ್ತದೆ – ಏನಾಗಿದೆ, ಕಾಪರ್ಫೀಲ್ಡ್” ಎಂದು ಕೇಳಿದಳು.
“ನನ್ನ ಪತ್ನಿಯು ಮೃತಪಟ್ಟಿರುವಳು” ಎಂದು ನಾನು ಮೆಲ್ಲಗೆ ಅಂದೆನು.
“ಇಷ್ಟು ಚಿಕ್ಕ ಪ್ರಾಯದಲ್ಲೇ ನಿನಗೆ ಆ ದುಃಖ ಬರಬಾರದಿತ್ತು. ಆದರೆ ಕಾಲನನ್ನು ಎದುರಿಸಲು ಸಾಧ್ಯವಿದೆಯೇ! ಸಮಯವೇ ಮನಸ್ಸಿಗೆ ಶಾಂತಿಯನ್ನೀಯಬೇಕು, ಅಷ್ಟೆ” ಎಂದು ಕನಿಕರದಿಂದ ಅವಳು ನುಡಿದಳು.
“ನಿಮ್ಮ ಅಭಿಪ್ರಾಯವು ನ್ಯಾಯವಾದುದು. ಆ ಮಾತು ಎಲ್ಲರಿಗೂ ಅನ್ವಯಿಸುವಂಥಾದ್ದು. ಎಂಥ ದುಃಖವನ್ನಾದರೂ ಮನುಷ್ಯನು ಸಹಿಸಲೇಬೇಕಷ್ಟೆ. ಮತ್ತೆ ಸಮಯವೇ ತಾನೆ ಶಾಂತಿ ತರುವಂಥಾದ್ದು” ಎಂದು ನಾನು ಹೇಳಿದೆ. ಹೇಳುತ್ತಿದ್ದ ಹಾಗೆ ನನ್ನ ಕಣ್ಣುಗಳಲ್ಲಿ ನೀರು ಬಂತು. ನನ್ನನ್ನು ನೋಡಿ ಮಿಸೆಸ್ ಸ್ಟೀಯರ್ಫೋರ್ತಳು ಗಾಬರಿಗೊಂಡಳು. ನಾನು ನನ್ನ ಕಂಠವನ್ನು ಸರಿಪಡಿಸಿಕೊಂಡು ಸ್ಟೀಯರ್ಫೋರ್ತನ ಹೆಸರನ್ನು ಉಚ್ಚರಿಸಲು ಪ್ರಯತ್ನಪಟ್ಟೆನು. ಕಂಠವು ನನ್ನ ಅಧೀನದಲ್ಲಿರಲಿಲ್ಲ. ನನ್ನನ್ನೇ ನೋಡುತ್ತಿದ ಮಿಸೆಸ್ ಸ್ಟೀಯರ್ಫೋರ್ತಳು ನಾನು ಉಚ್ಚರಿಸಲು ಪ್ರಯತ್ನಿಸುತ್ತಿದ್ದ ಹೆಸರನ್ನು ತಾನು ಬಾಯಲ್ಲಿ ಮೆಲ್ಲಗೆ ಉರುಹಾಕುತ್ತಾ –
“ನನ್ನ ಮಗನೇನು? ಅಸೌಖ್ಯವಾಗಿದ್ದಾನೆಯೇ?” ಎಂದು ಕೇಳಿದಳು.
“ಬಹುವಾಗಿ ಅಸೌಖ್ಯವಾಗಿದ್ದಾನೆ.”
“ನೀನು ನೋಡಿ ಬಂದಿರುವಿಯೇನು?”
“ಹೌದು.”
“ನಿಮ್ಮೊಳಗೆ ರಾಜಿಯಾಗಿದೆಯೇ?”

ರಾಜಿಯಾಗಿದೆ – ಅಥವಾ ಇಲ್ಲ, ಹೇಗೆ ಅಂದರೂ ನಾನು ಸತ್ಯವನ್ನೂ ಅಸತ್ಯವನ್ನು ಹೇಳಿದಂತಾಗುವುದಲ್ಲವೇ ಎಂದು ಗ್ರಹಿಸುತ್ತಿರುವಾಗಲೇ ಮಿಸೆಸ್ ಸ್ಟೀಯರ್ಫೋರ್ತಳು ಮಿಸ್ ಡಾರ್ಟಲ್ಲಳನ್ನು ನೋಡಿದಳು.

ನಾನು ಮಿಸ್ ಡಾರ್ಟಲ್ಲಳನ್ನು ನೋಡುತ್ತಾ ಸಾಧಾರಣ ತುಟಿಗಳಲ್ಲೇ ತೋರಿ ಮುಗಿಯುವಂತೆ “ಮೃತನಾಗಿದ್ದಾನೆ” ಅಂದೆನು. ಮಿಸೆಸ್ ಸ್ಟೀಯರ್ಫೋರ್ತಳು ಪೂರ್ಣ ಅರ್ಥ ಮಾಡಿಕೊಳ್ಳುವ ಮೊದಲು ಮಿಸ್ ಡಾರ್ಟಲ್ಲಳು ತನ್ನ ಮುಖಕ್ಕೆ ಕೈ ಮುಚ್ಚಿಕೊಂಡು ಅಳತೊಡಗಿದಳು. ಮಿಸೆಸ್ ಸ್ಟೀಯರ್ಫೋರ್ತಳು ಇದನ್ನೆಲ್ಲಾ ಕಂಡು – ನನ್ನ ಅತ್ಯಂತ ಪ್ರೀತಿಯ ಸ್ಟೀಯರ್ಫೋರ್ತನ ಮುಖದಂತೆಯೇ ಇದ್ದ ಅವಳ ಮುಖದಲ್ಲಿನ, ವಿಶಿಷ್ಟವಾದ ಭಾವನೆಗಳನ್ನೆಲ್ಲ ಮರೆಸಿಕೊಂಡು – ಸ್ತಂಭೀಭೂತಳಾಗಿ, ಒಂದು ಶಿಲಾ ಪ್ರತಿಮೆಯಂತೆ ನನ್ನನ್ನೇ ನೋಡತೊಡಗಿದಳು. ನಾನು ಮೆಲ್ಲಗೆ ಮಾತಾಡತೊಡಗಿದೆನು.

“ನಾವು ಇಲ್ಲೆ ಹಿಂದೆ ಮಾತಾಡಿದ ಪ್ರಕಾರ ಅವನು ಸಮುದ್ರ ಪ್ರಯಾಣದಲ್ಲಿದ್ದನು. ಅವನ ಹಡಗು ಬಿರುಗಾಳಿಯಲ್ಲಿ ಸಿಕ್ಕಿ…..” ಎಂದು ಹೇಳಿ, ನಾನು ಮಾತು ಮುಂದುವರಿಸುವಷ್ಟರಲ್ಲೇ –
“ಅಮ್ಮಾ ಡಾರ್ಟಲ್ಲ್, ಹತ್ತಿರ ಬಂದು ಕುಳಿತುಕೋ” ಎಂದು ಮಿಸೆಸ್ ಸ್ಟೀಯರ್ಫೋರ್ತಳು ಮಿಸ್ ಡಾರ್ಟಲ್ಲಳನ್ನು ಕರೆದಳು.

ಪುತ್ರವಿಯೋಗ ಶೋಕದಲ್ಲಿದ್ದ ಮಿಸೆಸ್ ಸ್ಟೀಯರ್ಫೋರ್ತಳನ್ನು ಹತ್ತಿರ ಬಂದು ಸಂತೈಸುವ ಬದಲು ಮಿಸ್ ಡಾರ್ಟಲ್ಲಳು, ಅಲುಗದೆ ನಿಂತುಕೊಂಡು, ನಿರ್ದಾಕ್ಷಿಣ್ಯವಾಗಿ ಜರೆಯತೊಡಗಿದಳು.
“ದುರಹಂಕಾರದಿಂದ ಮಗನನ್ನು ಸ್ವೇಚ್ಛಾವರ್ತನೆಗೆ ಬಿಟ್ಟು, ಈಗ ಸಾರ್ಥಕವಾಯಿತಷ್ಟೆ ಮಗನ ಮರಣದಿಂದ?” ಎಂದಂದಳು ಮಿಸ್ ಡಾರ್ಟಲ್ಲಳು.

ಮಿಸೆಸ್ ಸ್ಟೀಯರ್ಫೋರ್ತಳು ಸ್ವಲ್ಪ ಏಳಲು ಪ್ರಯತ್ನಿಸಿ, ಸ್ವಲ್ಪ ಎದ್ದು, ಅಲ್ಲಿಂದಲೇ ಹಾಸಿಗೆಗೆ ಬಿದ್ದು, ಮೊದಲಿನಂತೆಯೇ ಮಲಗಿದಳು. ಮಿಸ್ ಡಾರ್ಟಲ್ಲಳು ಮುಂದರಿಸಿ ಜರೆಯತೊಡಗಿದಳು.
“ಈಗ ನೋಡು ನಿನ್ನ ಹಟಮಾರಿತನ, ಕುಲಮದ, ಹೆಮ್ಮೆಗಳ ಕಾರಣವಾಗಿ ನಿನ್ನ ಮಗನೂ ಆ ಎಲ್ಲಾ ಗುಣಗಳನ್ನೂ ನಿನ್ನಿಂದಲೇ ಪಡೆದು, ಪ್ರಯೋಗಿಸಿ, ನನ್ನ ಮುಖದಲ್ಲಿನ ಶಾಶ್ವತವಾದ ಗಾಯವನ್ನು ಮಾಡಿದನು. ಆ ಗಾಯವನ್ನು ಇಲ್ಲಿ ನೋಡು – ಈಗಲೂ ಇದೆಯಷ್ಟೆ! ನಿನ್ನ ದುರ್ಗುಣಗಳಿಗೆ ತಕ್ಕಂತೆ ನಿನಗೆ ಮಗ ದೊರಕಿ, ನಿನ್ನ ಪ್ರೋತ್ಸಾಹ ಪೋಷಣೆಗಳಿಗೆ ತಕ್ಕಂತೆ ಬದುಕಿ, ಇಂದು ಆ ಗುಣಗಳ ಕಾರಣವಾಗಿಯೇ ಸತ್ತಿರುವನು” ಎಂದಂದಳು. ಅವಳ ಮುಖದ ಗಾಯವು ಈ ಸಮಯದಲ್ಲಿ ಎದ್ದು ಕಾಣುತ್ತಿತ್ತು.

ಮಿಸ್ ಡಾರ್ಟಲ್ಲಳ ವರ್ತನೆಯು ಬಹು ಅಸಹ್ಯವಾಗಿದ್ದರೂ ಅವಳ ಈ ವಿಧದ ವರ್ತನೆಯೆಲ್ಲ ದುಃಖಾತಿಶಯದಿಂದಲೇ ಆಗಿತ್ತು. ಹಾಗಾಗಿ ನಾನು ಸ್ವಲ್ಪ ಮೃದುವಾಗಿ ಅನ್ನತೊಡಗಿದೆ –
“ಅಮ್ಮಾ ಮಿಸ್ ಡಾರ್ಟಲ್, ಮಡಿದಿರುವ ಮಗನನ್ನು ಕುರಿತು ಮಾತೆಯ ಎದುರೇ ಈ ರೀತಿ ನೀನು ಮಾತಾಡಬಾರದಮ್ಮಾ” ಎಂದೆ.
ಮಿಸ್ ಡಾರ್ಟಲ್ಲಳಿಗೆ ಬಹಳ ಕೋಪ ಬಂತು. ನನ್ನ ಕಡೆಗೆ ಹಠಾತ್ತಾಗಿ ತಿರುಗಿ ನಿಂತು –
“ಮುಚ್ಚು, ನಿನ್ನ ಬಾಯಿ. ನೀನು ಈ ಮನೆಗೆ ಕಾಲಿಟ್ಟ ದಿನದಿಂದ ಇಲ್ಲಿ ಸುಖವಿಲ್ಲ. ಅಂದಿನಿಂದ ಅವನ ಸ್ವೇಚ್ಛಾಚಾರ ಹೆಚ್ಚಿತು. ತಾಯಿ-ಮಗನಿಗೆ ಇದ್ದ ಒಂದೇ ವಿಧದ ರೂಪ, ಗುಣ, ಶಿಕ್ಷಣಗಳ ಕಾರಣವಾಗಿ ಅವರೊಳಗೆ ಆಗಾಗ ಸ್ವಲ್ಪ ಘರ್ಷಣೆಗಳಾಗುತ್ತಿದ್ದುವಾದರೂ ಅವುಗಳಿಗಿಂತ ಹೆಚ್ಚಿನವೇನೂ ಈ ಮನೆಯಲ್ಲಿ ದುಃಖ ಪ್ರಸಂಗ ಬಂದದ್ದಿಲ್ಲ” ಎಂದು ಹೇಳುತ್ತಾ ಮಿಸ್ ಡಾರ್ಟಲ್ಲಳು, ಆ ಮನೆಯೊಳಗಿನ ಇಂದಿನ ದುಃಖಕ್ಕೆ ನಾನೇ ಕಾರಣವೆಂಬಂತೆ, ನನ್ನನ್ನೇ ದುರುದುರನೆ ನೋಡಿದಳು.

“ಮಿಸ್ ಡಾರ್ಟಲ್ಲಳೇ ಈ ದುಃಖಕ್ಕೆ ಯಾರು ಹೊಣೆ, ಎಷ್ಟು, ಎಂಬಿತ್ಯಾದಿಯನ್ನು ಈಗ ಮಾತಾಡುವುದು ಒಳ್ಳೆಯದಲ್ಲ – ಅದರಲ್ಲೂ ಮೃತಪಟ್ಟವನ ವೃದ್ಧ ಮಾತೆಯೊಡನೆ. ಈಗಲೇ ಮಾತಾಡಬಾರದಮ್ಮಾ” ಎಂದು ನಾನಂದೆನು.

ನನ್ನ ಮಾತುಗಳಿಂದ ಅವಳು ಎಳ್ಳಷ್ಟೂ ಶಾಂತಳಾಗಲಿಲ್ಲ. ಅವಳು ಪುನಃ ಅನ್ನತೊಡಗಿದಳು –
“ವೃದ್ಧ ಮಾತೆಯೊಡನೆ’ ಎಂದು ನೀನು ಹೇಳುತ್ತೀಯಷ್ಟೇ. ಆದರೆ, ಅವಳ ಮಗನಿಗೂ ನನಗೂ ಇದ್ದ ಪ್ರೇಮದ ಸಂಬಂಧ ಎಷ್ಟು, ಹೇಗೆ, ಇತ್ತೆಂಬುದನ್ನು ನೀನೇನಾದರೂ ತಿಳಿದಿದ್ದೀಯೇನು? ತಾಯಿ – ಮಗರಿಬ್ಬರೊಳಗೆ ಕೆಲವೊಮ್ಮೆ ಬಹಳವಾದ ಜಗಳವೇ ನಡೆಯುತ್ತಿತ್ತು. ಅಂಥಾ ಸಮಯದಲ್ಲಿ ಅವನು ಪ್ರೀತಿಯಿಂದ ತನ್ನ ದುಃಖದ ಹೊರೆಯನ್ನೆಲ್ಲ ನನ್ನೆದುರು ಬಿಚ್ಚಿ ಹಗುರು ಮಾಡಿಕೊಂಡು, ನನ್ನನ್ನು ಪ್ರೀತಿಸಿ ಸಂತೋಷಿಸುತ್ತಿದ್ದನು. ನಾನು ಅನೇಕ ವೇಳೆ ಅವನಿಗೆ ಮಾತೆಗಿಂತಲೂ ಪ್ರಿಯಳಾಗಿದ್ದೆನು. ಈ ಮಾತೆಯು ತನ್ನ ಮಗನ ಜೀವನದ ಮಾರ್ಗವನ್ನು ತಾನೇ ರಚಿಸಿಕೊಡಬೇಕೆಂದೂ ತನ್ನ ಮಗನು ಅತಿ-ಮಾನುಷ, ಅಥವಾ ಅನುಪಮ ಶಕ್ತಿಯುಳ್ಳವನೆಂದು ನಂಬಿ, ಅಂಥಾ ವರ್ತನೆಗೆ ಪ್ರೋತ್ಸಾಹವಿತ್ತು, ತನ್ನ ಮಗನನ್ನು ತಾನೇ ಹಾಳು ಮಾಡಿರುವಳು. ಅವಳಿಗೆ ಇಂದಿನ ದುಃಖವು ತನ್ನ ಕ್ರಿಯೆಯ ಪ್ರತಿಕ್ರಿಯೆಯಾಗಿಯೇ ದೊರಕಿದೆ. ಆದ್ದರಿಂದ ಅವಳನ್ನು ಕುರಿತು ನನಗೆ ಸಹಾನುಭೂತಿಯಿಲ್ಲ. ಈ ಸಮಯದಲ್ಲಿ ನನ್ನ ಪರಿಸ್ಥಿತಿಯನ್ನು ಯಾರಾದರೂ ಆಲೋಚಿಸುವವರು ಇದ್ದಾರೆಯೇ? ಅವನು ವರ್ಷಕ್ಕೆ ಒಮ್ಮೆಯಾದರೂ ನನ್ನ ಹತ್ತಿರ ಬಂದು ಮಾತಾಡುವುದಿದ್ದರೆ ನಾನು ನನ್ನ ಸರ್ವಸ್ವವನ್ನೂ ಪ್ರಾಣವನ್ನೂ ಕೊಡಲು ತಯಾರಿದ್ದ ನನ್ನ ಪ್ರೇಮದ ಭಂಗ ಇಂದು ಆಗಿದೆ. ಈಗ ವೃದ್ಧೆಯಾಗಿ ದೇಹಬಿಡಲಿರುವ ಈ ಮಾತೆಯು ಈವರೆಗಾದರೂ ಮಗನನ್ನು ಪಡೆದು ಸುಖಿಸಿರುವಳು. ನನ್ನ ಮಟ್ಟಿಗಾದರೆ ನಾನು ಪ್ರೀತಿಸಿದವನನ್ನು ಕಳೆದುಕೊಂಡು ನಾನು ಜೀವಂತಳಾಗಿರುವವರೆಗೆ ಇನ್ನೂ ಅನೇಕ ವರ್ಷಗಳವರೆಗೆ ಈ ದುಃಖವನ್ನು ಅನುಭವಿಸಬೇಕಷ್ಟೆ. ನಿಜವಾಗಿ ಗ್ರಹಿಸಿದರೆ ಪುತ್ರಶೋಕಕ್ಕಿಂತಲೂ ನನ್ನ ಶೋಕ ಹೆಚ್ಚು – ಗೊತ್ತಿದೆಯೇ? ನನ್ನ ಕಷ್ಟ ನಿಮ್ಮಂಥವರಿಗೆ ಅರ್ಥವಾಗಲಾರದು. ನಿನ್ನ ಪಾದಸ್ಪರ್ಷ ಈ ಮನೆಗೆ ಆಗಬಾರದಿತ್ತು – ಇಲ್ಲಿಂದ ಈ ಕೂಡಲೆ ನಡೆ!” ಎಂದು ಮಿಸ್ ಡಾರ್ಟಲ್ಲಳು ರೋಷಾವೇಶದಿಂದ ಹೇಳಿದಳು.

ಇಷ್ಟರಲ್ಲಿ ಮಿಸೆಸ್ ಸ್ಟೀಯರ್ಫೋರ್ತಳು ಸ್ಮೃತಿ ತಪ್ಪಿ, ಅವಳು ಉಸಿರಾಡುತ್ತಿದ್ದ ಒಂದು ಕುರುಹು ಹೊರತಾಗಿ, ಇನ್ನೆಲ್ಲ ವಿಧದಲ್ಲಿ ಮೃತಳಾಗಿದ್ದಳು. ಮಿಸ್ ಡಾರ್ಟಲ್ಲಳು ಅದನ್ನು ಕಂಡು ಅವಳನ್ನೆತ್ತಿ ತನ್ನ ಮೇಲೆ ಒರಗಿಸಿಕೊಂಡು ಮಂಚದ ಮೇಲೆಯೇ ಕುಳಿತಳು; ಮತ್ತು ಅಳತೊಡಗಿದಳು.

ಆಳುಗಳ ಮುಖಾಂತರ ನಾನು ಡಾಕ್ಟರನ್ನು ಬರಮಾಡಿಸಿದೆನು. ಡಾಕ್ಟರು ಬರುವಷ್ಟರೊಳಗೆ ಶವವನ್ನು ಮನೆಗೆ ಸಾಗಿಸಿಟ್ಟೆವು. ಡಾಕ್ಟರರು ಬಂದು ಏನೇನು ಪ್ರಯತ್ನ ಮಾಡಿದರೂ ಮಿಸೆಸ್ ಸ್ಟೀಯರ್ಫೋರ್ತಳಿಗೆ ಸ್ಮೃತಿ ಬರಲಿಲ್ಲ. ಆದರೆ, ಈಗ ಉಸಿರಾಡುವುದರ ಜತೆಗೆ ನರಳುತ್ತಿದ್ದಳು – ಇಷ್ಟಾದರೂ ಬದಲಾವಣೆ ಬಂದಿತ್ತು.

ನಾನು ಅಲ್ಲಿಂದ ಹೊರಟೆನು. ಮನೆಯಿಂದ ಹೊರಬರುವ ಮೊದಲು ಎಲ್ಲ ಕಿಟಕಿಗಳನ್ನೂ ಮುಚ್ಚುತ್ತಾ ಬಂದೆನು. ಅನಂತರ, ಕೊನೆಯದಾಗಿ ಸ್ಟೀಯರ್ಫೋರ್ತನ ಶವವಿದ್ದ ಕೋಣೆಯ ಕಿಟಕಿಗಳನ್ನೆಲ್ಲ ಮುಚ್ಚಿದೆನು. ನನ್ನ ಮನಸ್ಸಿನಲ್ಲಿ ಮೂಡಿದ್ದ ಅಂಧಕಾರವು ಮುಂದಕ್ಕೂ ಹೊರಹೊಮ್ಮಿ ಆ ಮನೆಯನ್ನೆಲ್ಲ ಅಂಧಕಾರಮಯವಾಗಿ ಮಾಡಿತ್ತು. ಕೊರಡಾಗಿ ಹೋಗಿದ್ದ ಅವನ ಕೈಯ್ಯನ್ನು ನನ್ನೆದೆಗೆ ಸ್ವಲ್ಪ ಹೊತ್ತು ಒತ್ತಿಟ್ಟುಕೊಂಡು ಕುಳಿತೆನು. ಆಗ ನನ್ನ ಪಾಲಿಗೆ ಬಾಹ್ಯ ಪ್ರಪಂಚವೆಲ್ಲ ನಾಶವಾಗಿತ್ತು. ನಾನೂ ನನ್ನ ದುಃಖ ಮಾತ್ರ ನನ್ನ ಜ್ಞಾನದಲ್ಲಿ ಉಳಿದಿದ್ದುವು. ಇಂಥ ಅಂಧಕಾರ, ಸರ್ವತ್ರದ ಶೂನ್ಯತೆಯ ನಡುವೆ ಆ ಮಾತೆಯ ನರಳುವಿಕೆಗೆ ಮತ್ತಷ್ಟು ಭೀಷಣವಾಗಿ ತೋರುತ್ತಿತ್ತು.