ಅಧ್ಯಾಯ ಐವತ್ತೈದು

[ಡೇವಿಡ್ ಕಾಪರ್ಫೀಲ್ಡ್‍ನ ಜೀವನ ವೃತ್ತಾಂತ ಮತ್ತು ಅನುಭವಗಳು, ಕಾದಂಬರಿ. ಮೂಲ ಇಂಗ್ಲಿಷಿನಲ್ಲಿ ಚಾರ್ಲ್ಸ್ ಡಿಕನ್ಸ್, ಕನ್ನಡ ಭಾವಾನುವಾದ ಎ.ಪಿ. ಸುಬ್ಬಯ್ಯ]

ವಿ-ಧಾರಾವಾಹಿಯ ಐವತ್ತೇಳನೇ ಕಂತು

ನನ್ನ ಜೀವನದಲ್ಲೆಲ್ಲ ಅತಿ ಪ್ರಾಮುಖ್ಯವಾದ, ಎಂದೂ ಮರೆಯಲಾರದ, ಬಹು ಭಯಂಕರವಾದ, ಒಂದು ಘಟನೆಯನ್ನು ಸದ್ಯ ತಿಳಿಸಲಿದ್ದೇನೆ. ಈವರೆಗೆ ನಾನು ಬರೆಯುತ್ತಾ ಬಂದಿರುವ ನನ್ನ ಜೀವನ ವೃತ್ತಾಂತದ ಎಲ್ಲಾ ಭಾಗಕ್ಕೂ ಒಂದಲ್ಲದಿದ್ದರೆ ಇನ್ನೊಂದು ವಿಧದಲ್ಲಿ, ಸಂಬಂಧವಿರುವ ಈ ಘಟನೆ ನನ್ನ ಚರಿತ್ರೆಗೆಲ್ಲಕ್ಕೂ ಅದರ ಪ್ರಭಾವವನ್ನು ಬೀರಿದೆ. ವಿಶಾಲವಾದ ಬಯಲು ಪ್ರದೇಶದಲ್ಲೊಂದು ಎತ್ತರದ ಗೋಪುರವಿದ್ದರೆ ಅದರ ನೆರಳು ಅತ್ಯಂತ ದೂರದ ಗಡಿಯವರೆಗೂ ಬಿದ್ದೇ ಬೀಳುವಂತೆ, ನನ್ನ ಬಾಲ್ಯದ ವೃತ್ತಾಂತವನ್ನು ಬರೆಯುವಾಗಲೂ ಅನಂತರದ ಘಟನೆಗಳನ್ನು ಬರೆಯುವಾಗಲೂ ಮುಂದೆ ಈ ಭಯಾನಕ ಪ್ರಸಂಗವನ್ನು ಬರೆಯುವುದಿದೆಯಲ್ಲಾ ಎಂಬ ಅನುಭವ, ಆ ನೆರಳಿನಂತೆಯೇ ನಾನು ಉದ್ದೇಶಪಡದೇ ಈ ಎಲ್ಲಾ ಬರವಣಿಗೆಯಲ್ಲೂ ತನ್ನ ಪ್ರಭಾವವನ್ನು ಸ್ವಲ್ಪವಾದರೂ ಬೀರಿರಲೇಬೇಕು.

ಈ ಘಟನೆ ನಡೆದು ಅನೇಕ ವರ್ಷಗಳು ಕಳೆದನಂತರವೂ ಇದನ್ನು ಕನಸಿನಲ್ಲಿ ಕಂಡು ಬೆಚ್ಚಿ ಎದ್ದದ್ದಿದೆ. ಶಾಂತಮಯವಾದ ಕೋಣೆಯಲ್ಲಿ ಒಂಟಿಗನಾಗಿ ಕುಳಿತಾಗಲೂ ಕೆಲವೊಮ್ಮೆ ಇದನ್ನೇ ಕಂಡು ಗಾಬರಿಗೊಂಡಿದ್ದೇನೆ. ಕೆಲವು ಸಂದರ್ಭ, ಸನ್ನಿವೇಶಗಳಲ್ಲಿ ವಿಶೇಷ ಕಾರಣವಿಲ್ಲದೆ, ಮನಸ್ಸಿನಲ್ಲಿ ಅಸ್ಪಷ್ಟವಾಗಿ ಮೂಡಿ, ಅನಂತರ ಸ್ಪಷ್ಟವಾಗಿ ತೋರುತ್ತಾ ಮನಸ್ಸನ್ನೇ ವಿಕಲ್ಪಗೊಳಿಸುವ ನೆನಪೆಂದರೆ ಈ ಪ್ರಕೃತಿ ಪ್ರಕೋಪ. ಬಿರುಗಾಳಿ ಬೀಸುತ್ತಿರುವುದನ್ನು ಎಂದು ನೋಡಿದರೂ ಕಾರ್ಮುಗಿಲು ಮುಚ್ಚಿರುವ ಸಮುದ್ರ ದಂಡೆಯನ್ನು ಎಂದು ನೋಡಿದರೂ ಆಗ ಎಲ್ಲಾ ಈ ನೆನಪು ಪ್ರತ್ಯಕ್ಷ ಘಟನೆಯೇ ಆಗಿ ತೋರಿ, ನನ್ನ ಬುದ್ಧಿಯನ್ನೇ ಭ್ರಮಾನ್ವಿತವಾಗಿ ಮಾಡಿಬಿಡುತ್ತದೆ. ಘಟನೆ ಎಂದೋ ಕಳೆದುಹೋಗಿ, ನಾನಿಂದು ಇದನ್ನು ಬರೆಯುತ್ತಿರುವೆನಾದರೂ ಹಿಂದೆ ಹೀಗೆ ಅದು ನಡೆದಿತ್ತೆಂದು ನೆನಪಿನಿಂದ ಎತ್ತಿ ತೆಗೆಯುವ ಅಗತ್ಯ ನನಗೆ ತೋರುವುದಿಲ್ಲ. ನಾನು ಈ ಘಟನೆಯನ್ನು ಈಗಲೇ ಪ್ರತ್ಯಕ್ಷ ಕಾಣಬಲ್ಲೆ. ನಾನದನ್ನು ಕಂಡು ಈಗಲೂ ಹೆದರುತ್ತೇನೆ!

ಪ್ರವಾಸಿಗಳು ದೇಶ ಬಿಡುವ ಸಮಯ ಸಮೀಪಿಸಿತು. ಎಮಿಲಿಗೆ ನಾನು ತಿಳಿಸಬೇಕೆಂದು ಹೇಮನು ನನ್ನೊಡನೆ ಹೇಳಿದ್ದ ಮಾತುಗಳನ್ನು ಮುಖತಃ ತಿಳಿಸಲು ನನಗೆ ಅನುಕೂಲವಾಗಲಿಲ್ಲ. ಆದರೆ ಹೇಮನ ಮಾತುಗಳನ್ನೇ ಒಂದು ಪತ್ರವಾಗಿ ನಾನೇ ಬರೆದು ಮಿ. ಪೆಗಟಿ ಮುಖಾಂತರ ಎಮಿಲಿಗೆ ಕಳುಹಿಸಿಕೊಟ್ಟೆನು. ನನ್ನ ಪತ್ರಕ್ಕೆ ಎಮಿಲಿಯಿಂದ ಮರುಟಪಾಲಿನಲ್ಲೇ ಉತ್ತರವೂ ಬಂತು. ಎಮಿಲಿಯ ಉತ್ತರ ಹೀಗಿತ್ತು:

“ನಿನ್ನ ಆಶೀರ್ವಾದಪೂರ್ವಕವಾಗಿ ಕಳುಹಿಸಿದ ಪತ್ರವು ತಲುಪಿತು. ನಾನು ನನ್ನ ವಿನಮ್ರ ವಂದನೆಗಳನ್ನು ಮಾತ್ರ ನಿನಗೆ ಅರ್ಪಿಸಬಲ್ಲೆನೇ ಹೊರತು, ನಿನ್ನ ಮತ್ತು ಅವನ ಕರುಣೆಗೆ ತಕ್ಕಂತೆ, ಪ್ರತಿಯಾಗಿ, ಬೇರೆ ಏನನ್ನೂ ಕಳುಹಿಸಲಾರೆ.

“ನಿನ್ನ ಪತ್ರದ ಮಾತುಗಳು ಎಷ್ಟೊಂದು ಪ್ರಿಯವಾದುವು ಎಂದು ಹೇಳಿ ತೀರದು. ಆ ಪತ್ರವನ್ನು ನನ್ನ ಹೃದಯದ ಸಮೀಪವಾಗಿ ಸದಾ ಕಾದಿಟ್ಟುಕೊಂಡಿರುವೆನು. ಪತ್ರದ ಕೆಲವು ವಿಷಯಗಳು ಮುಳ್ಳಿನಂತೆ ನನಗೆ ಚುಚ್ಚುವುವು. ಅಂಥ ಅಂತರಂಗದ ಚುಚ್ಚುವಿಕೆಯಿಂದ ನನ್ನಲ್ಲುಂಟಾಗುವ ಆನಂದವೆಷ್ಟೆಂಬುದನ್ನು ನಾನು ಮಾತ್ರ ತಿಳಿಯಬಲ್ಲೆನು. ನಿಮ್ಮಿಬ್ಬರ ಕರುಣಾಮಯ ಹೃದಯದ ಅನುಭವವನ್ನರಿತಿರುವ ನಾನು ಕರುಣಾ ಮತ್ತು ದಯಾಮಯನಾದ ದೇವರು ಹೇಗಿರಬಹುದೆಂದು ಊಹಿಸಿಯೇ ಆನಂದಿಸುತ್ತೇನೆ. ನಾನು ಈವರೆಗೆ ದೇವರನ್ನು ಪ್ರಾರ್ಥಿಸಿದುದರ ಫಲವಾಗಿ ಆ ಪತ್ರವು ನನಗೆ ಲಭಿಸಿತೆಂದು ನಂಬಿದ್ದೇನೆ.

“ದೇವರು ನಮ್ಮ ಮೇಲೆ ದಯವಿಡಲಿ, ನಮಗೆ ಮನಃಶಾಂತಿಯನ್ನು ಕೊಡಲಿ ಎಂದು ಸದಾ ಪ್ರಾರ್ಥಿಸುತ್ತಿದ್ದೇನೆ.
“ಪರಲೋಕದಲ್ಲಿ ದೇವರು ನನ್ನನ್ನು ಕ್ಷಮಿಸಿದರೆ ಪುನಃ ಬಾಳಿಕೆಯಾಗಿ ಜನಿಸಿ ನಿಮ್ಮ ಪಾದಗಳನ್ನೇ ನಾನು ಸೇರುವೆನು. ಅನಂತ ವಂದನೆಗಳು, ಅನಂತ ಪ್ರಣಾಮಗಳು!”

ಈ ಪತ್ರವನ್ನು ತೆಗೆದುಕೊಂಡು ಹೋಗಿ ಹೇಮನಿಗೆ ನಾನೇ ಕೊಟ್ಟು ಅವನೊಡನೆ ಮಾತಾಡಿ ಬರುವುದು ಒಳ್ಳೆಯದೆಂದು ನಾನು ಯಾರ್ಮತ್ತಿಗೆ ಹೊರಟೆನು. ನಮ್ಮ ಬಂಡಿ ಇಪ್ಸ್‍ವಿಚ್ಚಿಗೆ ತಲಪುವಾಗಲೇ ಸಂಜೆಯಾಗಿತ್ತು. ಆಕಾಶದಲ್ಲಿ ನಾನಾ ಬಣ್ಣದ ಮೋಡಗಳು ಜತೆ ಸೇರತೊಡಗಿದ್ದುವು. ಗಾಳಿಯೇನೋ ಸ್ತಬ್ದವಾಗಿತ್ತು. ಬಂಡಿ ಮುಂದುವರಿದ ಹಾಗೆ ಬಣ್ಣದ ಮೋಡಗಳೆಲ್ಲಾ ಸಾಧಾರಣ ಕಪ್ಪು ಹೆಚ್ಚಾದ ಬೂದು ಬಣ್ಣಕ್ಕೆ ತಿರುಗತೊಡಗಿದುವು. ಬಲವಾದ ಬಿರುಗಾಳಿಯ ಪೂರ್ವ ಸಿದ್ಧತೆಗಾಗಿ ಪ್ರಕೃತ ಗಾಳಿ ಸ್ತಬ್ಧವಾಗಿರುವುದೆಂದು ಬಂಡಿಯವನು ಹೇಳಿದನು. ಬಂಡಿಯಲ್ಲೇ ರಾತ್ರಿ ಪ್ರಯಾಣ ಮಾಡುವುದು ಸ್ವಲ್ಪ ಹೆದರಿಕೆಯ ಸಂಗತಿಯೆಂದು ನಾನು ಬಂಡಿಯವನೊಂದಿಗೆ ಹೇಳಿದೆನು. ಸ್ವಲ್ಪ ಮಾತಾಡುತ್ತಾ ಮುಂದರಿದರೆ ಅಷ್ಟಾದರೂ ಸಂತೋಷವೆಂದು ನಾನು ಬಂಡಿಯವನೊಡನೆ ಮತ್ತೂ ಮಾತಾಡತೊಡಗಿದೆ –
“ಆಕಾಶದಲ್ಲಿ ಸ್ವಲ್ಪ ವಿಶೇಷವಿರುವಂತೆ ತೋರುತ್ತದಲ್ಲವೇ?”
“ಹೌದು ಸರ್, ಈ ರೀತಿ ಆಕಾಶ ಆದದ್ದು ನಾನೆಂದೂ ನೋಡಿರುವುದಿಲ್ಲ. ಸಮುದ್ರದಲ್ಲಿ ಉತ್ಪಾತ ಏಳುವಂತೆ ಕಾಣುತ್ತೆ, ಸರ್.” ಎಂದನು ಬಂಡಿಯವನು. ಅದಕ್ಕಿಂತ ಹೆಚ್ಚು ಮಾತಾಡಲು ಬಂಡಿಯವನಿಗೆ ಉತ್ಸಾಹವಿರಲಿಲ್ಲ.

ನಮ್ಮ ಬಂಡಿ ಸ್ವಲ್ಪ ದೂರ ಹೋಗುತ್ತಾ ಇದ್ದ ಹಾಗೆಯೇ ಗಾಳಿ ಬೀಸಲಾರಂಭಿಸಿತು. ಬೂದು ಬಣ್ಣದ ಮೋಡಗಳೆಲ್ಲ ಕಪ್ಪಾಗತೊಡಗಿದುವು. ಸೂರ್ಯ ಅಸ್ತಂಗತನಾಗತೊಡಗಿದ್ದನು. ಅಸ್ತಮಿಸುವ ಸೂರ್ಯನ ಬೆಳಕು ಕರಿಮೋಡಗಳ ಅಂಚಿನಿಂದ ಹೊರಹೊಮ್ಮುವಾಗ, ಕ್ರೂರ ಮೋಡಗಳು ತತ್ಕಾಲ ಅರೆನಗೆ ನಕ್ಕರೂ ಸೂರ್ಯಾಸ್ತಮಾನವನ್ನೇ ತಮ್ಮ ಪರಾಕ್ರಮವನ್ನು ತೋರಿಸಲು ಕಾಯುತ್ತಿರುವಂತೆ ತೋರುತ್ತಿದ್ದುವು. ಇತ್ತ, ಪ್ರಪಂಚದಲ್ಲಿ ಯಾರಿಗೆ ಏನಾದರೂ ತನ್ನ ಕಾರ್ಯ ಸಾಧಿಸುವ ದಿನಮಣಿಯು ಅಸ್ತಂಗತನೇ ಆದನು. ಅಷ್ಟಾದದ್ದೇ ತಡ – ಗಾಳಿ ರಭಸದಿಂದ ಬೀಸಲಾರಂಭಿಸಿತು. ಮುಗಿಲುಗಳ ಸಾಂದ್ರತೆ ಹೆಚ್ಚಿತು. ಭೂಭಾಗದ ಮೋಡಗಳೆಲ್ಲ ಸಮುದ್ರದ ಮೇಲೆ ಕ್ರೋಢೀಕರಿಸಿದುವು. ಗಾಳಿ ಹೊಸ ಹೊಸ ಮೋಡದ ರಾಶಿಗಳನ್ನು ಎಳೆದೊಯ್ದು ಒಂದೇ ಕಡೆ ಶೇಖರಿಸತೊಡಗಿತು. ಕೊನೆಗೆ ಭೂಮಿ ಆಕಾಶಗಳ ಗಡಿ ಕಾಣದಂತೆ ಸರ್ವತ್ರ ಮೋಡಗಳೇ ತುಂಬಿದುವು. ನಮ್ಮ ಬಂಡಿಗೆ ಸಮುದ್ರಕ್ಕೂ ಮಧ್ಯೆ ಮೋಡಗಳದೇ ಒಂದು ಪ್ರದೇಶವಿದ್ದಂತೆಯೂ ತೋರುತ್ತಿತ್ತು. ಈ ಪ್ರದೇಶದಲ್ಲಿ ಹಿಡಿಸದ ಮೋಡಗಳು ಆಕಾಶದವರೆಗೆ ಎದ್ದು, ಕ್ರಮೇಣವಾಗಿ ಸಮುದ್ರದ ಮೇಲೆ ತಮ್ಮ ಅಪರಿಮಿತ ಭಾರವನ್ನೇ ಹೊರಿಸಿ, ಸಮುದ್ರವೂ ತುಳುಕಿ ಉಕ್ಕತೊಡಗಿತು. ಕೊನೆಕೊನೆಗೆ ಸಮುದ್ರದ ಕಡೆ ಯಾವುದೂ ಸ್ಥಿರವಾಗಿರದೆ, ಅಲ್ಲೋಲಕಲ್ಲೋಲವಾಗಿ, ಗಡಿಯಿಲ್ಲದೆ, ಮೇರೆಯಿಲ್ಲದೆ, ನಾವು ನೋಡುತ್ತಿದ್ದವರ ಮನಸ್ಸಿನ ಭ್ರಮೆಯೋ ಅದು, ಹಾಗೂ ಆಗುವುದಿರಬಹುದೇ ಎಂದು ಭಯಪಡುವ ರೀತಿಯಲ್ಲಿ ಸರ್ವತ್ರ ಚಲನೆ, ಅಸ್ಥಿರ, ಭಯ, ಭ್ರಮೆಯೇ ಪಸರಿಸಿದುವು.

ಇದೇ ಸಮಯದಲ್ಲಿ ಮಳೆಯೂ ಸುರಿಯಲಾರಂಭಿಸಿತು. ಮಳೆ ಹನಿಗಳು ತಂತಿಯ ಚಾಟಿಯಿಂದ ನಮ್ಮನ್ನು ಹೊಡೆದಂತೆ ನಮ್ಮ ಮೇಲೆ ಸುರಿಯಲಾರಂಭಿಸಿದುವು. ಸಮುದ್ರದ ಎಡೆಬಿಡದ ಘೋಷ, ಗಾಳಿಯ ಅಬ್ಬರ, ನೀರಿನ ಪೆಟ್ಟು, ಇವನ್ನೆಲ್ಲಾ ಕೇಳಿ, ಅನುಭವಿಸುತ್ತಾ ರಾತ್ರಿಯಲ್ಲೇ ನಾವು ಯಾರ್ಮತ್ತಿಗೆ ತಲುಪಿದೆವು.

ಆ ರಾತ್ರಿ ನಾನು ಒಂದು ಹೋಟೆಲಿನಲ್ಲಿ ಮಲಗಿ ನಿದ್ರಿಸಿದೆನು. ಮರು ದಿನ ಬೆಳಗ್ಗೆ ಎದ್ದು ನೋಡುವಾಗಲೂ ಸಮುದ್ರ ಆಕಾಶಗಳು ಹಿಂದಿನ ದಿನವಿದ್ದಂತೆಯೇ ಇದ್ದುವು. ಹಿಂದಿನ ದಿನದ ರೌದ್ರ ಎಳ್ಳಷ್ಟೂ ಕಡಿಮೆಯಾಗಿರಲಿಲ್ಲ. ಜನರು ತಂತಮ್ಮ ಮನೆಗಳಿಂದ ಹೊರಟು ರಸ್ತೆಯಲ್ಲಿ ಗುಂಪು ಗುಂಪಾಗಿ ಸೇರುತ್ತ ವರದಿಗಳನ್ನು ಹೇಳುತ್ತಲೂ ಕೇಳುತ್ತಲೂ ಇದ್ದರು. ಒಂದು ಇಗರ್ಜಿಯ ಗೋಪುರವು ಮುರಿದು, ಒಂದಂಶ ಕೆಳಗೆ ಬಿದ್ದೇ ಹೋಗಿತ್ತಂತೆ. ಕೆಲವು ಕಡೆಗಳಲ್ಲಿ ರಸ್ತೆಯ ಸಾಲು ಮರಗಳು ಬೇರು ಸಹಿತ ಮಗುಚಿ ರಸ್ತೆಗೆ ಅಡ್ಡವಾಗಿ ಬಿದ್ದಿದ್ದುವಂತೆ. ಇನ್ನು ಯಾವ ಹೊತ್ತಿಗೆ, ಯಾವ ಕಟ್ಟಡ ಕುಸಿದು ಬೀಳಬಹುದೆಂದು ಹೇಳಲು ಧೈರ್ಯವಿಲ್ಲದೆ, ತಮಗೆ ಭದ್ರವೆಂದು ತೋರುವ ಕಟ್ಟಡಗಳ ಮರೆಯಲ್ಲಿ ನಿಲ್ಲುವುದು ಉತ್ತಮವೆಂದು ಜನರು ಮಾತಾಡಿಕೊಳ್ಳುತ್ತಿದ್ದರು. ಮುದುಕಿಯರು ಚಿಕ್ಕ ಬಾಲಕರೂ ತ್ರಾಣವಿರುವವರನ್ನು ಆಶ್ರಯಿಸಿ ಬಹು ಗಾಬರಿಯಿಂದ ವರ್ತಮಾನಗಳನ್ನು ಕೇಳುತ್ತಿದ್ದರು. ಕಿರಿಯರಂತೂ ಹಿರಿಯರು ಹೇಳಿಕೊಳ್ಳುತ್ತಿದ್ದ ಮಾತುಗಳನ್ನು ಕೇಳುತ್ತಾ ಹಿರಿಯ ಮುಖದಲ್ಲಿ ತೋರಿಬರುತ್ತಿದ್ದ ಹೆದರಿಕೆ, ಆಶ್ಚರ್ಯ, ದುಃಖ ಮೊದಲಾದ ಚಿಹ್ನೆಗಳನ್ನು ತಾವು ತಮ್ಮ ಮುಖದಲ್ಲೂ ತೋರ್ಪಡಿಸಿಕೊಂಡು ನಿಂತಿದ್ದರು. ಈ ದಿನವೆಲ್ಲಾ ಹೇಮನನ್ನು ಕಾಣಲು ನನಗೆ ಅನುಕೂಲವಾಗಲಿಲ್ಲ. ಹೇಮನು ಒಂದು ಹಡಗದ ರಿಪೇರಿ ಕೆಲಸಕ್ಕಾಗಿ ನೆರೆಯ ಒಂದು ಬಂದರಕ್ಕೆ ಹೋಗಿದ್ದನಾಗಿ ತಿಳಿದೆನು. ಈ ದಿನವೆಲ್ಲಾ ಹಿಂದಿನ ದಿನದಂತೆಯೇ ಕಳೆಯಿತು. ನಾನು ಈ ದಿನವೂ ಹೋಟೆಲಿಗೆ ಹೋಗಿ ಮಲಗಿ ನಿದ್ರಿಸಿದೆನು.

ಈ ದಿನ ರಾತ್ರಿ ಕಳೆಯುತ್ತಾ ಹೋದ ಹಾಗೆ, ಗಾಳಿಯ ಆರ್ಭಟ ಜೋರಾಯಿತು. ಕೊನೆಗೆ ಆರ್ಭಟೆಯೂ ರಭಸವೂ ಹೆಚ್ಚುತ್ತಾ ಯಾರ್ಮತ್ತನ್ನೇ ಕಿತ್ತೊಗೆಯುವಂತೆ ಬೀಸತೊಡಗಿತು. ಗಾಳಿಯ ಜತೆಗೆ ಮಳೆ ಮಿಂಚು ಸಿಡಿಲುಗಳು ಸೇರಿದುವು. ಆದರೆ, ನಾನು ಹೆಚ್ಚು ಬಳಲಿದ್ದುದರಿಂದ, ಇಂಥ ಶಬ್ದ, ಅಲುಗಾಟಗಳ ಮಧ್ಯವೇ ನನಗೆ ನಿದ್ರೆ ಬಂತು. ಸಮುದ್ರದ ಘೋಷ, ಗಾಳಿಯ ಆರ್ಭಟ, ಸಿಡಿಲಿನ ಶಬ್ದಗಳನ್ನು ಕೇಳುತ್ತಾ ಇದ್ದ ಹಾಗೆ ಬಂದ ನಿದ್ರೆಯಲ್ಲಿ – ಅವೆಲ್ಲವೂ ಎಡೆಬಿಡದೆ ನಡೆಯುತ್ತಲೇ ಇದ್ದಿರಬೇಕಾದುದರಿಂದ, ಈ ಶಬ್ದಗಳಿಗೆ ಸಂಬಂಧಪಟ್ಟು ಆಗಿರುವ ಕನಸುಗಳನ್ನು ಕಂಡೆನು. ನಾನೂ ನನ್ನ ಸ್ನೇಹಿತರೂ ಸೇರಿ ಬಿರುಗಾಳಿ ಜಡಿಮಳೆಗಳ ಎದುರೇ ಶತ್ರುಗಳ ಕೋಟೆಗೆ ಫಿರಂಗಿ ಹೊಡೆಯುತ್ತಿದ್ದಂತೆ ಸ್ವಪ್ನವನ್ನು ಕಂಡೆನು. ಈ ಯುದ್ಧದ ಮಧ್ಯೆ ಆವೇಶದಿಂದ ನಾನು ಪ್ರವೇಶಿಸಿರುವಾಗಲೇ ಯಾರೋ ನನ್ನನ್ನು ಕರೆದಂತೆ ಕೇಳಿಸಿತು. ಕರೆದವರು ನಮ್ಮ ಜತೆಯ ಯುದ್ಧ ಭಾಗಿಗಳೋ ಇತರರೋ ಎಂದು ಸ್ಪಷ್ಟಪಡಿಸಿಕೊಳ್ಳುವುದರಲ್ಲಿ ನನಗೆ ಎಚ್ಚರಿಕೆಯಾಯಿತು. ಆಗ ಬೆಳಗ್ಗೆ ಒಂಬತ್ತು ಘಂಟೆಯಾಗಿತ್ತು. ನನ್ನ ಕೋಣೆಯ ಬಾಗಿಲನ್ನು ಯಾರೋ ತಟ್ಟುತ್ತಿದ್ದರು.
“ಏನು ವಿಶೇಷ?” ಎಂದು ವಿಚಾರಿಸಿದೆನು.
“ಯಾರ್ಮತ್ತಿನ ಸಮೀಪದಲ್ಲಿ ಒಂದು ಹಡಗು ಪುಡಿಯಾಗುವ ಸಂಭವವಿದೆ” ಅಂದರು ಹೊರಗಿನವರು.
ನಾನು ಗಾಬರಿಯಿಂದ ಅಂಗಿ ತೊಟ್ಟುಕೊಂಡು ಹೊರಗೆ ಬಂದು ಕೇಳಿದೆ –
“ಯಾವ ಹಡಗಪ್ಪಾ, ಯಾರದು?”
“ಸ್ಪೆಯಿನ್ ಅಥವಾ ಪೋರ್ಚುಗಲ್ಲಿನ ಒಂದು ಸ್ಕೂನರಿನಂತೆ ತೋರುತ್ತದೆ. ವೈನ್, ಹಣ್ಣು-ಹಂಪಲು ತುಂಬಿಕೊಂಡು ಬಂದ ಹಡಗಾಗಿರಬೇಕು. ಈಗಲೇ ಮುಳುಗುವಂತಿದೆ, ನೋಡಬೇಕಾದರೆ ಬೇಗ ಬನ್ನಿ” ಎಂದಂದನು ಹೊರಗಿನವನು.

ಈ ವರ್ತಮಾನವಿತ್ತ ವ್ಯಕ್ತಿಗೆ ಗಾಬರಿಯಿಂದ ಹುಚ್ಚೇ ಹಿಡಿದಿತ್ತು. ಇದೇ ವರ್ತಮಾನವನ್ನು ಅನೇಕ ಜನರಿಗೆ ದಾರಿಯುದ್ದಕ್ಕೂ ಕರೆದು ಹೇಳುತ್ತಾ ಅವನು ಸಮುದ್ರದ ಕಡೆಗೆ ಓಡಿದನು.

ನನ್ನ ಎದುರಿದ್ದ ಜನರೆಲ್ಲರೂ ಒಂದೇ ದಿಕ್ಕಿಗೆ – ಸಾಧಾರಣ, ಓಡಿಕೊಂಡೇ ಹೋಗುತ್ತಿದ್ದರು. ನಾನೂ ಅವರ ಜತೆಯಲ್ಲೇ ಹೋದೆ. ಎಲ್ಲರೂ ಒಂದೇ ಕಡೆ ಗುಂಪಾಗಿ ಸೇರಿಕೊಂಡು ಸಮುದ್ರದ ಕಡೆಗೆ ನೋಡುತ್ತಿದ್ದರು. ಸಮುದ್ರವು ಪ್ರಕ್ಷುಬ್ದವಾಗಿತ್ತು. ರಾತ್ರಿಯೆಲ್ಲಾ ಬೀಸಿಕೊಂಡೇ ಇರುತ್ತಿದ್ದ ಗಾಳಿ ಈಗ ಸ್ವಲ್ಪ ವಿರಾಮ ತೆಗೆದುಕೊಂಡಿದ್ದಂತೆ ಸ್ತಬ್ದವಾಗಿತ್ತು. ಬಿರುಗಾಳಿಯ ಹೊಡೆತಕ್ಕೆ ಪ್ರಕ್ಷುಬ್ದವಾಗಿದ್ದ ಸಮುದ್ರ ರೌದ್ರ ತಾಳಿ, ತಾನೇ ತಾನಾಗಿ, ಸಮುದ್ರದ ದಂಡೆ, ಯಾರ್ಮತ್ತ್, ಮತ್ತು ಸಮೀಪದ ಸ್ಥಳಗಳನ್ನೆಲ್ಲ ಕಂಪಿಸಬೇಕೆನ್ನುವಂತೆ ತಾಂಡವವಾಡುತ್ತಿತ್ತು. ಹಿಂದಿನ ಎರಡು ದಿನಗಳ ಕ್ರೋಧವನ್ನೆಲ್ಲ ಕ್ರೋಢೀಕರಿಸಿ ಇಂದು ಸಮುದ್ರದ ಬದಿಗೆ ಹೊಡೆಯುವುದಕ್ಕಾಗಿ ಎನ್ನುವಂತೆ, ಸಮುದ್ರ ಅಳತೆ ಮೀರಿ ಉಬ್ಬಿ, ಅಲೆಗಳಿಂದ ಕಂಪಿಸುತ್ತಾ ನೊರೆ ಕಾರುತ್ತಾ ಆವೇಶಗೊಂಡು ಆವೇಶಕ್ಕೇರುತ್ತಾ ಏರಿದ ಮರುಕ್ಷಣವೇ ಕೆಳಗಿಳಿಯುತ್ತಾ ಹಿಂದೆ ಏರುತ್ತಿದ್ದ ಅಲೆಯನ್ನು ಮತ್ತಷ್ಟು ಎತ್ತಿ, ಭಯಂಕರವಾಗಿ ತೋರಿ, ಭಯಂಕರ ಕ್ರಿಯಾ ಮಾರ್ಗವನ್ನೇ ಹಿಡಿದಿತ್ತು. ಅಲೆಗಳು ಭೋರ್ಗರೆಯುವ ಶಬ್ದ, ಗಾಳಿಯು ಅಲೆಗಳು ನಡುವೆ ಸಿಕ್ಕಿ ರೋದಿಸುವ ಶಬ್ದ, ನನ್ನ ಸುತ್ತಲಿನ ಜನಸಂದಣಿಯ ಮಾತು ಕಥೆಗಳ ಶಬ್ದಗಳಿಂದಲೂ ಕಣ್ಣೆದುರಿನ ಭಯಂಕರ ದೃಶ್ಯದಿಂದಲೂ ನಾನು ಗಾಬರಿಗೊಂಡು, ಜನಸ್ತೋಮದ ತಿಕ್ಕಾಟ ಒತ್ತಾಟದಲ್ಲಿ ನನ್ನ ನಿಲುವೇ ಸ್ಥಿರವಾಗಿರದೆ – ಆದರೂ ಪ್ರಯತ್ನದಿಂದ ಸ್ಥಿರಪಡಿಸಿಕೊಳ್ಳುತ್ತಲೂ ನನ್ನ ಪಕ್ಕದಲ್ಲಿದ್ದ ಒಬ್ಬ ನಾವಿಕನೊಡನೆ ಅಪಾಯಕ್ಕೀಡಾಗಿದ್ದ ಸ್ಕೂನರ್ ಎಲ್ಲಿದೆಯೆಂದು ಕೇಳಿದೆನು. ಬಾಣದ ಚಿತ್ರವನ್ನು ಮುಂಗೈಯಲ್ಲಿ ಮಚ್ಚೆ ಹಾಕಿಸಿಕೊಂಡಿದ್ದ ತನ್ನ ಕೈಯನ್ನು ನೀಡಿ ಆ ನಾವಿಕ ನಮ್ಮ ಎಡ ದಿಕ್ಕಿನಲ್ಲಿ ಅಲೆಗಳ ಮಧ್ಯೆ ಸಿಕ್ಕಿಕೊಂಡಿದ್ದ ಸ್ಕೂನರನ್ನು ತೋರಿಸಿದನು. ಆ ಹಡಗು ನಮಗೆ ಬಹು ಸಮೀಪವಾಗಿದ್ದು, ಬಹು ಸ್ಪಷ್ಟವಾಗಿಯೇ ಕಾಣುತ್ತಿತ್ತು. ಹೀಗೊಂದು ಸಮೀಪದಲ್ಲೂ ಸ್ಪಷ್ಟವಾಗಿಯೂ ಅದು ಇದ್ದದ್ದು ಮತ್ತು ನಮಗೆ ಕಂಡದ್ದು ನನಗೆ ಆಶ್ಚರ್ಯದ ಸಂಗತಿಯಾಗಿತ್ತು. ಹಡಗು ಅಷ್ಟು ಸಮೀಪದಲ್ಲಿದ್ದೂ ಅಲೆಗಳ ಅಪಾಯದಿಂದ ಅದನ್ನು ತಪ್ಪಿಸಲು ನಮ್ಮಿಂದ ಸಾಧ್ಯವಿಲ್ಲವೆಂದು ಅಲ್ಲಿನ ಜನರು ಮಾತಾಡಿಕೊಳ್ಳುತ್ತಿದ್ದುದನ್ನು ಕೇಳಿ ನನಗೆ ಬಹಳ ಆಶ್ಚರ್ಯವಾಯಿತು. ಕ್ರೋಧಾವೇಶದಲ್ಲಿ ನಲಿಯುತ್ತಿದ್ದ ಸಮುದ್ರಕ್ಕೆ ತನ್ನ ಶಕ್ತಿಯನ್ನು ಸ್ಥಳ-ಸಂದರ್ಭ, ದೂರ-ಸಾಮೀಪ್ಯ, ಮೊದಲಾದುವುಗಳಿಂದ ಈಗ ಸರಿಪಡಿಸಿಕೊಳ್ಳುವ ಅಗತ್ಯವಿರದೆ, ಕೇವಲ ತನ್ನ ಸ್ವಾಭಾವಿಕವಾದ ಏರಿಳಿತಗಳ ರಭಸದ ಶಕ್ತಿಯು ಮಾತ್ರ ಈ ಚಿಕ್ಕ ಹಡಗಿಗೆ ಸಾಕೆಂದು ಸಮುದ್ರವೇ ತಿಳಿದಿದ್ದಂತೆ, ಬಹು ಕ್ರೂರ ಕಠೋರವಾಗಿ ತೋರುತ್ತಿತ್ತು. ಈ ಸ್ಥಿತಿಯನ್ನು ಕಂಡೇ ಕೆಲವರು ವೃದ್ಧರು ಹಡಗು ಒಂದರೆಕ್ಷಣದಲ್ಲೇ ಪುಡಿಪುಡಿಯಾಗುವುದೆಂದೂ ಮಾತಾಡಿಕೊಳ್ಳುತ್ತಿದ್ದರು. ಪರಿಸ್ಥಿತಿ ಬಹು ಹದಗೆಟ್ಟಿತ್ತೆಂದೂ ಹಡಗಿನ ರಕ್ಷಣೋಪಾಯವೇ ಇಲ್ಲವೆಂದೂ ಜನರಂದುಕೊಳ್ಳುತ್ತಿದ್ದರು.

ನಾನು ನೋಡುತ್ತಿದ್ದ ಹಾಗೆಯೇ ನಮಗೆ ಸಂಫೂರ್ಣ ತೋರುವಂತೆ ಹಡಗು ಅಲೆಗಳ ತುದಿಯಲ್ಲಿ ಮೇಲೆದ್ದು ನಿಂತಿತು. ಹೀಗೆದ್ದು, ಒಂದರಕ್ಷಣ ಅಲೆಗಳ ನೊರೆಯಲ್ಲಿ ಅಲುಗಾಡಿ, ಮರುಕ್ಷಣದಲ್ಲಿ ಕೆಳಗಿಳಿಯಿತು. ಈ ರೀತಿಯ ಅಲುಗಾಟದಲ್ಲಿ ಅದರಲ್ಲಿದ್ದ ಎರಡು ಸ್ತಂಭಗಳ ಪೈಕಿ ಒಂದು ಮುರಿದು ಧಕ್ಕೆಯ ಮೇಲೆ ಬಿದ್ದಿತು. ಆ ಬಿದ್ದ ಸ್ತಂಭದ ಜತೆಯಲ್ಲೇ ತುಂಬಾ ಹಾಯಿ, ಹಗ್ಗ ಮತ್ತಿತರ ಅನೇಕ ವಸ್ತುಗಳೂ ಕೆಳಬಿದ್ದುವು. ಹಡಗಿನಲ್ಲಿದ್ದವರು ಆ ಕೂಡಲೇ ಕತ್ತಿ ಕೊಡಲಿಗಳಿಂದ ಈ ಭಾಗವನ್ನೆಲ್ಲ ಕಡಿದು ಸಮುದ್ರಕ್ಕೆ ಎಸೆದರು. ಆ ಜನರು ಜೀವದಾಸೆ ಬಿಟ್ಟು, ಮಹಾ ಪರಾಕ್ರಮದಿಂದ, ಅತ್ಯಂತ ಕಷ್ಟದ ಕೆಲಸಗಳನ್ನೂ ಮಾಡುತ್ತಿದ್ದುದು ನಮಗೆಲ್ಲ ಸ್ಪಷ್ಟವಾಗಿ ಕಾಣುತ್ತಿತು. ಈ ಜನರ ಮಧ್ಯದಲ್ಲಿ ಗುಂಗುರು ತಲೆಕೂದಲಿನ ಸುಂದರ ಯುವಕನೊಬ್ಬನು ಅಂಥಾ ಭಯಾನಕ ಸನ್ನಿವೇಶದಲ್ಲೂ ಗಾಂಭೀರ್ಯದಿಂದ ಅಲ್ಲಿನ ಕೆಲಸಗಳನ್ನು ಮಾಡುತ್ತಿದ್ದುದನ್ನು ಕಂಡೆನು. ನಾನು ಹೀಗೆ ಸಮುದ್ರದ ಕಡೆ ನೋಡುತ್ತಿದ್ದ ಹಾಗೆಯೇ ಸಮುದ್ರದ ಮಹಾ ರವವನ್ನೇ ಮೀರಿಸುವಷ್ಟರ ಜೋರಾಗಿ ದಡದಲ್ಲಿ ಸೇರಿದ್ದ ಜನಸ್ತೋಮದ ರೋದನ ಶಬ್ದವೂ ಕೇಳಿಸಿತು. ಇದೇನೆಂದು ಜನರ ಕಡೆ ನೋಡಿ, ಅಂತರಂಗದಲ್ಲೇ ರೋದನದ ಕಾರಣವನ್ನು ತಿಳಿಯುತ್ತಾ ಸಮುದ್ರದ ಕಡೆ ನೋಡುವಾಗ ಪರ್ವತಾಕಾರದ ಅಲೆಯೊಂದು ಹಡಗಿನ ಮೇಲ್ಭಾಗವನ್ನು ಭೇದಿಸಿ, ಸಿಡಿಮದ್ದಿನಿಂದ ಆಗಬಹುದಾಗಿದ್ದ ಸ್ಫೋಟದಂತೆಯೇ ಮರದ ತೊಲೆ, ಹಲಗೆ ಮೊದಲಾದುವುಗಳನ್ನು ಹಾರಿಸಿ, ಹಡಗಿನಲ್ಲಿದ್ದವರ ಪೈಕಿ ಹೆಚ್ಚಿನವರನ್ನು ನೀರಿಗೆಳೆದು ಹಾಕಿತು. ಈ ಅನಾಹುತದಿಂದ ಹಡಗಿನ ಸ್ವಲ್ಪ ಅಂಶವೇ ಮಾಯವಾಯಿತು.

ಹಡಗಿನ ಎರಡನೇ ಸ್ತಂಭವೊಂದು ಉಳಿದ ಹಾಯಿ ಹಗ್ಗಗಳ ಸಮೇತ ನೆಟ್ಟಗೆ ನಿಂತು ಕೊಂಡಿತ್ತು. ನಾವು ಒಮ್ಮೆಯಾದರೂ ಅದನ್ನು ನೋಡಬೇಕೆಂದು ಉದ್ದೇಶಿಸಿ ಮೇಲೆದ್ದಂತೆ, ಹಡಗಿನ ಉಳಿದ ಅಂಶವು ಅಲೆಗಳ ಮೇಲೆ, ನಾವು ನೋಡುತ್ತಿದ್ದ ಹಾಗೆಯೇ ಎದ್ದು ನಿಂತು ಮರುಕ್ಷಣದಲ್ಲಿ ಕೆಳಗಿಳಿಯಿತು. ಪುನಃ ಏರಲೂ ತೊಡಗಿತು. ಇಂಥ ಪ್ರಸಂಗಗಳಲ್ಲೇ ಹಡಗು ಇಬ್ಭಾಗವಾಗುವುದೆಂದು ಮೊದಲಿನ ಪರಿಚಿತ ನಾವಿಕನು ಹೇಳಿದನು.

ಮಾನುಷಕೃತ ವಸ್ತುಗಳು ಪ್ರಕೃತಿ ಪ್ರಕೋಪದೆದುರು ಎಷ್ಟೊಂದು ಅಶಕ್ತವೆಂದು ಅಲ್ಲಿನ ದೃಶ್ಯದಿಂದ ತಿಳಿಯಬಹುದಾಗಿತ್ತು. ಈ ರೀತಿಯ ದುಃಖದಿಂದ ನಾವು ಹಡಗನ್ನು ನೋಡುತ್ತಿದ್ದ ಹಾಗೆಯೇ ಏರಿದ್ದ ಹಡಗು ಹಠಾತ್ತಾಗಿ ಕುಸಿಯಿತು. ಕುಸಿದ ರಭಸಕ್ಕೆ ಹಡಗಿನಲ್ಲಿದ್ದವರಲ್ಲಿ ನಾಲ್ಕು ಜನರ ಹೊರತಾಗಿ ಉಳಿದವರೆಲ್ಲ ನೀರು ಪಾಲಾದರು. ಗುಂಗುರು ತಲೆಕೂದಲಿನ ಯುವಕನು ಈಗ ಮತ್ತಷ್ಟು ಸ್ಪಷ್ಟವಾಗಿ ತೋರುತ್ತಿದ್ದನು. ಅವನ ತಲೆಯಲ್ಲಿ ತುಂಬಾ ಕ್ರಯ ಬಾಳುವ ಉತ್ತಮ ತರದ್ದೆಂದು ತೋರುವ ಕೆಂಪು ಕುಲಾವಿಯೊಂದು ತೋರಿಬರುತ್ತಿತ್ತು.

ಉಳಿದಿದ್ದ ಆ ಸ್ತಂಭದಲ್ಲಿ ತೂಗಾಡುತ್ತಿದ್ದ ದೊಡ್ಡ ಘಂಟೆಯು ಹಡಗಿನ ಎಲ್ಲಾ ಚಲನೆಗಳಲ್ಲೂ ಘಂಟಾನಾದವನ್ನು ಸಾರುತ್ತಲೇ ಇತ್ತು. ಮೃತಿ ಹೊಂದಿದ ಪ್ರತಿ ನಾವಿಕನ ಪರಲೋಕ ಮಾರ್ಗದರ್ಶನಕ್ಕಾಗಿ, (ಮರಣ ದುಃಖಶಮನಾರ್ಥವಾಗಿ ಬಾರಿಸಲ್ಪಡುವ) ಇಗರ್ಜಿ ಘಂಟೆಯಂತೆ ಈ ಘಂಟೆ ತನ್ನ ರವವನ್ನು ಎಡೆಬಿಡದೆ ಸಾರುತ್ತಿತ್ತು. ಹಡಗಿನಲ್ಲಿದ್ದವರು ಒಬ್ಬೊಬ್ಬರೆ ಆಗಿ ಕಣ್ಮರೆಯಾಗುತ್ತಿದ್ದ ಭಯಂಕರ ದೃಶ್ಯವನ್ನು ನೋಡುತ್ತಿದ್ದ ಜನರು ಅಳುತ್ತಾ ಅತ್ತಿತ್ತ ಚದರುತ್ತಾ ತಮ್ಮ ಕಣ್ಣೆದುರೇ ತಮ್ಮಂತೆಯೇ ಜೀವದಿಂದಿರುವವರನ್ನು ಹಾಗೊಂದು ನೀರು ಪಾಲಾಗಲು ಬಿಡಬೇಕೇ ಎಂದು ಒಬ್ಬರನ್ನೊಬ್ಬರು ಪ್ರಶ್ನಿಸುವವರಂತೆ ಪರಸ್ಪರ ನೋಡತೊಡಗಿದರು. ಹೆಂಗುಸರು, ಗಂಡುಸರು, ಮುದುಕರು, ಮಕ್ಕಳೆನ್ನದೆ ಎಲ್ಲರೂ ರೋದಿಸತೊಡಗಿದರು. ಸಮುದ್ರವು ನಿರ್ದಯವಾಗಿ, ನಿರ್ದಾಕ್ಷಿಣ್ಯದಿಂದ ಕ್ರೂರವಾಗಿ ಉಬ್ಬತೊಡಗಿತು. ಹಡಗಿನಲ್ಲಿದ್ದವರ ರಕ್ಷಣೆಗೆ ಎಲ್ಲರಿಗೂ ಗೊತ್ತಿದ್ದ ಮಾರ್ಗ ಒಂದೇ – ಅಂದರೆ, ದಡದಿಂದ ಹಡಗಿನವರೆಗೆ ಬಲವಾದ ಒಂದು ಹಗ್ಗವನ್ನು ತಲುಪಿಸುವುದು – ಎಂದು ಜನರು ಮಾತಾಡುತ್ತಾ ಈ ಕಾರ್ಯವನ್ನು ಮಾಡುವವರು ಯಾರೆಂದು ಪ್ರಶ್ನಿಸತೊಡಗಿದರು.

ಜನರ ಈ ಪ್ರಶ್ನೆ, ಈ ಗೋಳು ನಡೆಯುತ್ತಿದ ಹಾಗೆಯೇ ಜನರು ಸ್ವಲ್ಪ ಚದರಿ ನಿಂತು, ಅಳುವುದನ್ನು ನಿಲ್ಲಿಸಿ, ಯಾರೋ ಒಬ್ಬ ವೀರ ನಾವಿಕನಿಗೆ ದಾರಿಬಿಟ್ಟರು. ಆ ಜನ ಮಧ್ಯದಲ್ಲಿ ವೀರ ಯೋಧನಂತೆ, ದೃಢಕಾಯನಾದ ಹೇಮನು ನಿಶ್ಚಿತ ಉದ್ದೇಶ, ಗುರಿ, ದೃಷ್ಟಿಗಳನ್ನು ಮುಖದಲ್ಲಿ ತೋರಿಸುತ್ತಾ ಎದುರು ಬಂದು ನಿಂತನು. ಮತ್ತು ಹಡಗಿಗೂ ದಂಡೆಗೂ ಸಂಬಂಧ ಕಟ್ಟಲು ಬೇಕಾಗಿದ್ದ ಹಗ್ಗವನ್ನು ತರಲು ಆಜ್ಞೆಯಿತ್ತನು. ನನ್ನ ಸಮೇತವಾಗಿ ಬಹು ಜನರು ಅಂಥ ಸಾಹಸವನ್ನು ಅವನು ಕೈಕೊಳ್ಳಬಾರದೆಂದು ಅವನನ್ನು ಕೇಳಿಕೊಂಡೆವು. ಆದರೆ ಅವನ ಮುಖದಲ್ಲಿ ತೋರುತ್ತಿದ್ದ ದೃಢ ಸಂಕಲ್ಪದ ಎದುರು ನಮ್ಮ ಕೇಳಿಕೆಗಳು ನಿಷ್ಫಲವಾದುವು. ಹಗ್ಗವನ್ನು ತಂದುಕೊಟ್ಟರು. ಹಗ್ಗದ ಒಂದು ತುದಿಯನ್ನು ತನ್ನ ಸೊಂಟಕ್ಕೆ ಸುತ್ತಿಕೊಂಡನು. ಅನಂತರ ಹಗ್ಗದ ಸ್ವಲ್ಪ ಅಂಶವನ್ನು ಸಡಿಲವಾಗಿ ಹಿಡಿದುಕೊಂಡು – ಜನರು ಅಳುತ್ತಲೂ ಹೊಗಳುತ್ತಲೂ ಇದ್ದಂತೆಯೇ ಹೇಮನು ಅಲೆಗಳ ಇಳಿತವನ್ನು ಕಾದು, ಅವು ಇಳಿಯಲು ಪ್ರಾರಂಭವಾದೊಡನೆ ಸಮುದ್ರಕ್ಕೆ ಹಾರಿದನು. ಹೀಗೆ ಅವನು ಹಾರಿ ಸ್ವಲ್ಪ ದೂರ ಹೋಗುವಷ್ಟರಲ್ಲಿ ಏನೋ ಅಚಾತುರ್ಯವಾಗಿರಬೇಕು, ನಮಗೆ ಅದೆಲ್ಲ ಅರ್ಥವಾಗಲಿಲ್ಲ. ಅವನನ್ನು ಹಿಂದಕ್ಕೆ, ದಡಕ್ಕೆ ಎಳೆದರು. ಅವನ ಮುಖದಲ್ಲಿ ರಕ್ತ ಸುರಿಯುತ್ತಿತ್ತು. ರಕ್ತ ಸ್ರಾವವನ್ನು ಗಣನೆಗೆ ತರದೆ, ದಡದಲ್ಲಿದ್ದವರಿಗೆ ಕೆಲವು ಸೂಚನೆಗಳನ್ನು ಕೊಟ್ಟು, ಹೇಮನು ಪುನಃ ಸಮುದ್ರಕ್ಕೆ ಹಾರಿ ಈಜಿಕೊಂಡು ಮುಂದೆ ಸಾಗಿದನು.

ಹೇಮನು ಸಮುದ್ರಕ್ಕೆ ಹಾರಿದ ನಂತರ ನಾವು ಹಡಗಿನ ಕಡೆ ನೋಡುವಾಗ ಆ ಗುಂಗುರು ಕೂದಲಿನವನೊಬ್ಬನ ಹೊರತು ಇತರರೆಲ್ಲರೂ ಸಮುದ್ರಗತವಾಗಿದ್ದರು. ಇತ್ತ ಹೇಮನು ಏರುವ ಅಲೆಗಳ ಶಿಖರದಲ್ಲಿ ಹಗುರವಾಗಿ ಏರುತ್ತಾ ಅವು ಇಳಿಯುವಾಗ ಪಾತಾಳಕ್ಕೇ ಇಳಿಯುತ್ತಿರುವಂತೆ ಹಠಾತ್ತಾಗಿ ಇಳಿಯುತ್ತಾ ಮುಂದೆ ಮುಂದೆ ಸಾಗಿ, ಕೊನೆಗೆ ಆ ಗುಂಗುರು ಕೂದಲಿನವನ ಬಹು ಸಮೀಪಕ್ಕೆ ತಲುಪಿದ್ದನ್ನು ಕಂಡೆವು. ಕೊನೆಯ ಒಂದು ಅಲೆಯ ಮೇಲೇರಿದ್ದ ಹೇಮನು ಇಳಿಯುವಾಗ ಗುಂಗುರು ಕೂದಲಿನವನನ್ನು ಮುಟ್ಟಿರಬೇಕೆಂಬಂತೆಯೇ ತೋರಿದನು. ನಾವೆಲ್ಲಾ ಉಸಿರನ್ನೇ ಕಟ್ಟಿ, ಏಕಾಗ್ರತೆಯಿಂದ ಅತ್ತ ಕಡೆಯೇ ನೋಡುತ್ತಿದ್ದೆವು. ಅಷ್ಟರಲ್ಲೇ ದಡದ ಜನರೆಲ್ಲಾ ಏಕಕಂಠದಿಂದ ರೋದಿಸಿದರು. ಹಡಗಿನ ಹಿಂಬದಿಯಿಂದ ಉಬ್ಬಿ ಬರುತ್ತಿದ್ದ ಬೃಹದಾಕಾರದ ಒಂದು ಅಲೆಯು ಆಗಲೇ ಆ ಹಡಗನ್ನೂ ಹೇಮನನ್ನೂ ಎಲ್ಲವನ್ನೂ ಆವರಿಸಿ ಧ್ವಂಸ ಮಾಡಿತು. ಆ ಸ್ಥಳದಲ್ಲಿ ಯಾರು ಎಂದೂ ಇಲ್ಲದಂತೆ ತೋರಿಸಿ, ನೊರೆ ಕಾರುತ್ತಿದ್ದ ಅಲೆಗಳು ಮೃತ್ಯು ತಾಂಡವಗೈದವು.

ದಂಡೆಯ ಜನರು ಹಗ್ಗವನ್ನೆಳೆಯುತ್ತಾ ಹೇಮನನ್ನು ದಡಕ್ಕೆ ತಂದರು. ದೃಢಕಾಯ, ವೀರ ಹೇಮನು ಮಡಿದಿದ್ದನು. ಜೀವ ಸಂಗ್ರಹಕ್ಕಾಗಿ ನಮಗೆ ಗೊತ್ತಿದ್ದ ಚಿಕಿತ್ಸೆಗಳನ್ನೆಲ್ಲ ಮಾಡಿ ನೋಡಿದೆವು – ಹೇಮನು ಏಳಲಿಲ್ಲ! ಅವನ ಕರುಣಾಪೂರ್ಣ ಹೃದಯ ಕ್ರೂರ ಅಲೆಗಳಿಂದ ಶಾಶ್ವತವಾಗಿ ನಿಲ್ಲಿಸಲ್ಪಟ್ಟಿತ್ತು. ಈ ದುಃಖವನ್ನು ಸಹಿಸದೆ ನಾನು ಜನರಿಂದ ದೂರ ಸರಿದು ಒಂದೆಡೆ ಕುಳಿತು ದುಃಖಿಸತೊಡಗಿದೆನು.

ಹೀಗೆ ನಾನು ಕುಳಿತಿದ್ದಲ್ಲಿಗೆ, ಸ್ವಲ್ಪ ಹೊತ್ತಿನಲ್ಲೇ ನನ್ನ ಪರಿಚಿತ ನಾವಿಕನೊಬ್ಬನು ಬಂದು ನಾನು ಸ್ವಲ್ಪ ದೂರ ಅವನ ಜತೆಯಲ್ಲಿ ಸಮುದ್ರದ ದಂಡೆಯಲ್ಲೇ ಹೋಗಬೇಕೆಂದು ಬಹು ಮೃದುವಾಗಿ, ದುಃಖದಿಂದ ಹೇಳಿಕೊಂಡನು. ಅವನು ಹೆಚ್ಚೇನೂ ಮಾತಾಡದಿದ್ದರೂ ಅವನ ಮುಖ ಮಾತಾಡಿತು. ನಾನು ವಿಚಾರಿಸಿದೆನು –
“ಯಾರದಾದರೂ ಶವ ಬಂದಿದೆಯೇ?”
“ಹೌದು, ಒಂದು ಬಂದಿದೆ.”
“ಆ ಶವದ ಗುರುತು ನನಗೆ ಇದೆಯೆಂದು ಗ್ರಹಿಸಿರುವಿಯೇನು?” ಅವನು ಉತ್ತರವೀಯಲಿಲ್ಲ.

ನನ್ನ ಹಳೆ ನೆನವರಿಕೆಗಳೆಲ್ಲ ಎದ್ದು ಬಂದು ನನ್ನನ್ನು ಹೆದರಿಸಿದುವು. ಅವನು ನನ್ನನ್ನು ಸಮುದ್ರದ ದಂಡೆಯಲ್ಲೇ ಸ್ವಲ್ಪ ದೂರ ಕರೆದುಕೊಂಡು ಹೋದನು.

ಕೊನೆಗೆ, ನಾವು – ಎಮಿಲಿಯೂ ನಾನೂ ಚಿಕ್ಕವರಾಗಿದ್ದಾಗ ನಲಿದಾಡಿದ್ದ ಸ್ಥಳಕ್ಕೆ ತಲಪಿದೆವು. ಹಿಂದೆ ಮನೆಯಾಗಿ ಮೆರೆದಿದ್ದ ಆ ದೋಣಿಯ ಕೆಲವು ತುಂಡುಗಳು ಬಿರುಗಾಳಿ ಹೊಡೆತಕ್ಕೆ ಹರಡಿಬಿದ್ದಿದ್ದುವು. ತಾನು ಗಾಸಿಗೊಳಿಸಿದ್ದ ಸಂಸಾರದ ಬೀಡಾಗಿದ್ದ ದೋಣಿಯ ಅವಶೇಷಗಳೆಡೆಯಲ್ಲಿ – ತೋಳಿನ ಮೇಲೆ ತಲೆಯನ್ನಿಟ್ಟು, ಬೋರ್ಡಿಂಗಿನಲ್ಲಿ ಮಲಗುತ್ತಿದ್ದ ಹಾಗೆಯೇ – ಆತ ಮಲಗಿದ್ದನು!