ನಶಿಸುತ್ತಿರುವ ನಮ್ಮ ಸುತ್ತಣ ಸಾಂಸ್ಕೃತಿಕ ಚಹರೆಗಳಿಗೆ ಕನಿಷ್ಠ ಮೂರು ಆಯಾಮದ (ದೃಶ್ಯ, ಧ್ವನಿ, ಸಾಹಿತ್ಯ) ವಸ್ತುನಿಷ್ಠ ದಾಖಲೀಕರಣವನ್ನು ಕೊಡಬೇಕು. ಅವು ವಿದ್ಯುನ್ಮಾನ ಮಾಧ್ಯಮದಲ್ಲಿ ಆಸಕ್ತರಿಗೆ ಸಾರ್ವಕಾಲಿಕವಾಗಿಯೂ ಉಚಿತವಾಗಿಯೂ ದೊರಕುವಂತೆ ಮಾಡುವುದು ಸಂಚಿ ಟ್ರಸ್ಟಿನ ಘನ ಉದ್ದೇಶ. [ನಮ್ (ಎನ್.ಎ.ಎಂ) ಇಸ್ಮಾಯಿಲ್, ಜಿ.ಎ. ಅಭಯಸಿಂಹ ಮತ್ತು ಎಚ್.ಎಲ್. ಓಂಶಿವಪ್ರಕಾಶ್ ಇದರ ವಿಶ್ವಸ್ಥರು.] ಅದರ ಅಂಗವಾಗಿ ತೊಡಗಿದ ಭಾಷಣ ಮಾಲಿಕೆ `ಜ್ಞಾನ ಸರಣಿ.’ ಇಂಗ್ಲಿಷ್ ಜಾಲಿಗರಿಗೆ ಆಪ್ತವಾದ ಟೆಡ್-ಟಾಕ್ಸ್ ಈ ಕನ್ನಡದ ಜ್ಞಾನಸರಣಿಗೆ ಸ್ಫೂರ್ತಿ. ಇದರಲ್ಲಿ ಮೊದಲ ಕಲಾಪ ನಡೆಸಿಕೊಟ್ಟವರು ಅಂತಾರಾಷ್ಟ್ರೀಯ ಖ್ಯಾತಿಯ ವನ್ಯವಿಜ್ಞಾನಿ ಡಾ| ಉಲ್ಲಾಸ ಕಾರಂತ. ಖ್ಯಾತ ಅಂತಾರಾಷ್ಟ್ರೀಯ ಚಿತ್ರ ನಿರ್ಮಾತೃ ಶೇಖರ ದತ್ತಾತ್ರಿ, ಕೆಲವು ದಶಕಗಳಿಂದ ಕಾರಂತರ ಅಧ್ಯಯನ ಹಾಗೂ ಕ್ಷೇತ್ರ ಕಾರ್ಯಗಳ ಸಮರ್ಥ ದಾಖಲೀಕರಣವನ್ನು ನಡೆಸುತ್ತ ಬಂದಿದ್ದಾರೆ. ಅಯಾಚಿತವಾಗಿ ಅವರು ಉಲ್ಲಾಸರ ಮಾತುಗಳಿಗೆ ಪೂರಕ ಸಾಮಗ್ರಿ ಒದಗಿಸುವುದರೊಡನೆ, ಸಂದರ್ಭಕ್ಕೆ ಔಚಿತ್ಯಪೂರ್ಣ ಕೆಲವು ಮಾತುಗಳನ್ನೂ ಆಡಿದ್ದು ಕಲಾಪಕ್ಕೆ ಹೆಚ್ಚಿನ ಘನತೆಯನ್ನು ಕೊಟ್ಟಿತು. (೧೫-೨-೧೫ರ ಸಂಜೆ, ಬೆಂಗಳೂರಿನ ಬಾದಾಮಿ ಹೌಸಿನ ಸಭಾಂಗಣ.)

ಔಚಿತ್ಯದ ಮೇರೆ ಹರಿದುಕೊಂಡ ಪ್ರಾರ್ಥನೆ, ಸ್ವಾಗತ, ಉದ್ಘಾಟನೆ, ಪರಿಚಯ, ಪ್ರಾಸ್ತಾವಿಕ ಇತ್ಯಾದಿ ವಿಂಗಡಣೆಗಳನ್ನು ಇಲ್ಲಿ ಸರಿಯಾಗಿಯೇ ಕೈಬಿಟ್ಟಿದ್ದರು. ವಿಷಯ ಗಾಂಭೀರ್ಯಕ್ಕೆ ಬಹುತೇಕ ಹೊರೆಯೇ ಆಗುವ ವ್ಯಕ್ತಿಗಳಿಗೂ ಅಂದರೆ, ಸ್ವಾಗತಕಾರ, ಉದ್ಘಾಟಕ, ಅಧ್ಯಕ್ಷ, ಅತಿಥಿ ಮುಂತಾದವರಿಗೆ, ಇಲ್ಲಿ ಅವಕಾಶವಿಲ್ಲ. ಇಸ್ಮಾಯಿಲ್ ಕೆಳಗೆ ನಿಂತು, ಕೈಯಲ್ಲಿ ಮೈಕ್ ಹಿಡಿದು ನೇರ ಕಲಾಪ ಆರಂಭಿಸಿದರು. ಲೆಕ್ಕ ಹಾಕಿದಂತೆ ನಾಲ್ಕೇ ಮಾತುಗಳಲ್ಲಿ ಸರಣಿಯ ಆಶಯ, ಮಾತುಗಾರರ ಸೂಕ್ಷ್ಮ ಪರಿಚಯ ಮತ್ತು ಸಭಿಕರ ಪಾಲುಗಾರಿಕೆಯನ್ನು ವಿಷದಪಡಿಸಿದರು. ಅದೇ ನೆಲೆಯಲ್ಲಿ ಎರಡೂ ಸಂಪನ್ಮೂಲ ವ್ಯಕ್ತಿಗಳು ಕಲಾಪ ನಿರ್ವಹಿಸಿದರು. ವೇದಿಕೆಯ ಹಿನ್ನೆಲೆಯಲ್ಲಿದ್ದ ದೊಡ್ಡ ಪರದೆಯ ಮೇಲೆ ಮಾತಿಗೆ ಪೂರಕವಾದ ಚಿತ್ರ, ಮಾಹಿತಿಗಳನ್ನು ಕಾಲಕಾಲಕ್ಕೆ ಮೂಡಿಸುವ ವ್ಯವಸ್ಥೆ ಹಾಗೂ ಎರಡು ಕ್ಯಾಮರಾಗಳಲ್ಲಿ ಕಲಾಪವನ್ನು ವಿಡಿಯೋ ದಾಖಲೀಕರಣಗೊಳಿಸುವ ಕೆಲಸಗಳನ್ನು ಅಭಯ ಪೂರೈಸಿದ. ಕೊನೆಯಲ್ಲಿ ಸಂಪನ್ಮೂಲರನ್ನು ಕಿರುಸ್ಮರಣಿಕೆಯೊಡನೆ ಅಭಿನಂದಿಸುವ ಸಂತೋಷ ಓಂಶಿವಪ್ರಕಾಶರದಿತ್ತು.

ಶೇಖರ್ ದತ್ತಾತ್ರಿ – ಒಲವು ಮತ್ತು ಸ್ವಂತ ಪ್ರತಿಭೆಯಿಂದ ವನ್ಯಜೀವಿ ಚಿತ್ರ ನಿರ್ಮಾಣವನ್ನೇ ವೃತ್ತಿಯಾಗಿಸಿಕೊಂಡವರು. ಇವರ ತಂದೆ ಕನ್ನಾಡಿನವರೆ ಆದರೂ ವೃತ್ತಿ ಅಗತ್ಯಗಳಿಗಾಗಿ ನೆಲೆಸಿದ್ದು ತಮಿಳುನಾಡಿನಲ್ಲಿ. ಸಹಜವಾಗಿ ಶೇಖರ್ ಬಾಲ್ಯ ಹಾಗೂ ಕಲಿಕೆಗಳು ನಡೆದದ್ದು ತಮಿಳುನಾಡಿನಲ್ಲಿ; ಕನ್ನುಡಿ ದೂರವಾಗಿ. ಶೇಖರ್ ಸ್ವತಃ ಕ್ಯಾಮರಾ ಹಿಡಿದು ವೃತ್ತಿರಂಗದಲ್ಲಿ ಮುಂದುವರಿದಂತೆ ಸಾಕ್ಷ್ಯ ಚಿತ್ರ ನಿರ್ಮಾಣದ ಆರ್ಥಿಕ ಅಥವಾ ವ್ಯಾವಹಾರಿಕ ಜಿಡುಕುಗಳಲ್ಲಿ ತನ್ನ ನಿಜ ಒಲವು ಬಳಲುತ್ತಿದೆ ಎಂದು ಕಂಡುಕೊಂಡರು. ಹಾಗಾಗಿ ವಾಣಿಜ್ಯ ಆಮಿಷಗಳನ್ನು (ಹಣಾ ಮಾಡಬೇಕು ಎನ್ನುವುದನ್ನು) ಮೀರಿ, ಅಂತಾರಾಷ್ಟ್ರೀಯ ಖ್ಯಾತಿಗಳನ್ನು (ಪ್ರಶಸ್ತಿ, ಮನ್ನಣೆಗಳ ಗಲ್ಲಿಗಳಲ್ಲಿ ಸುತ್ತುವುದು) ಅಡವಿಟ್ಟು, ವನ್ಯ ಸಂರಕ್ಷಣೆ ಮತ್ತದಕ್ಕೆ ಪ್ರೇರಣಾ ಸಿನಿಮಾಗಳ ಸಂಕೀರ್ಣತೆಯನ್ನು ಸಾಧಿಸಿದ್ದು ಶೇಖರ್ ಹೆಚ್ಚುಗಾರಿಕೆ. (ಪತ್ರಕರ್ತತನದಿಂದ ಬಹಳ ಮೇಲೇರಿದ ಸಾಯಿನಾಥ್ ಹಾಗೆ.) ಸುಮಾರು ಎರಡು ವರ್ಷಗಳ ಕಾಲ ಇವರು ಚೆನ್ನೈಯಲ್ಲಿ ವನ್ಯಾಸಕ್ತರ ಕೂಟವನ್ನು ನಿಯತವಾಗಿ ಸಂಘಟಿಸಿ, ಗಂಭೀರ ಚಟುವಟಿಕೆಗಳನ್ನು ನಡೆಸಿದ್ದನ್ನೂ ಇಲ್ಲಿ ಸ್ಮರಿಸಿದರು. ಪ್ರಾಣಿಸಂಗ್ರಹಾಲಯ ಅಥವಾ ವನಧಾಮಗಳಿಗೆ ಕೊಡುವ ನಿರಂತರ ಭೇಟಿ ಯಾರನ್ನೂ ವನ್ಯವಕ್ತಾರನನ್ನಾಗಿಸುವುದಿಲ್ಲ. ಅಧ್ಯಯನ ರಹಿತ ಸಂಗ್ರಹ ಅಥವಾ ಬಾಧ್ಯತೆಯಿಲ್ಲದ ಪ್ರೀತಿಯ ಕುರಿತು ಶೇಖರ್ ಸಾರ್ವಜನಿಕರನ್ನು ಎಚ್ಚರಿಸಿದರು. (ಕಾಡಿನರಹಸ್ಯ ಎನ್ನುವುದೊಂದು ಪಕ್ಕಾ ವಾಣಿಜ್ಯ ಸಿನಿಮಾ – ಗಮನಿಸಿ, ಸಾಕ್ಷ್ಯ ಚಿತ್ರವಲ್ಲ; ಹಣಗಳಿಕೆಗಾಗಿಯೇ ಮಾಡಿದ `ಕಾಗಕ್ಕ ಗುಬ್ಬಕ್ಕ ಕತೆ’. ಇದರ ನಟ, ನಿರ್ಮಾತೃ ಎಂ.ಪಿ. ಶಂಕರ್. ಮುಂದೊಂದು ಕಾಲದಲ್ಲಿ ನಾಗರಹೊಳೆಯನ್ನು ಬರಗಾಲ ಕಾಡಿತ್ತು. ಆಗ ಇದೇ ಎಂ.ಪಿ. ಶಂಕರ್, ಕಾಡಾನೆಗಳಿಗೆ ತಾನು ಟ್ಯಾಂಕರ್ ನೀರು ಕೊಡುತ್ತೇನೆ. ಸರಕಾರ ಅನುಮತಿ ಕೊಡಬೇಕೆಂದು ಹಕ್ಕೊತ್ತಾಯ ನಡೆಸಿದ್ದು ನೆನೆಸಿಕೊಳ್ಳಿ!)

ಕುದುರೆಮುಖ ಗಣಿಗಾರಿಕೆಯ ವಿರುದ್ಧ ಕೆ.ಎಂ. ಚಿಣ್ಣಪ್ಪನವರ ನೇತೃತ್ವದಲ್ಲಿ ವೈಲ್ಡ್ ಲೈಫ್ ಟ್ರಸ್ಟ್ ಕಾನೂನು ಸಂಘರ್ಷ ನಡೆಸಿದಾಗಂತೂ ಶೇಖರ್ ತಯಾರಿಸಿದ `ಮೈಂಡ್ಲೆಸ್ ಮೈನಿಂಗ್’ ಸಾರ್ವಜನಿಕ ವಲಯದಲ್ಲಿ (ವಿರೋಧಿಗಳಿಂದಲೂ) ಅದ್ಭುತ ಸಾಕ್ಷ್ಯಚಿತ್ರವೆಂದು ಖ್ಯಾತವಾದ್ದು ಮಾತ್ರವಲ್ಲ ನ್ಯಾಯಾಲಯದಲ್ಲೂ ಬಲವತ್ತರವಾದ ಸಾಕ್ಷಿಯಾಗಿಯೂ ಒದಗಿದ್ದನ್ನು ಯಾರೂ ಮರೆಯಲಾರರು. ವನ್ಯಸಂರಕ್ಷಣೆಯಲ್ಲಿ ಶೇಖರ್ ಮತ್ತು ಉಲ್ಲಾಸರ ಎರಡು ದಶಕಕ್ಕೂ ಮಿಕ್ಕ ಒಡನಾಟದ ಒಂದು ಉಪೋತ್ಪನ್ನವಾಗಿ, ಉಲ್ಲಾಸರ ಸಂಶೋಧನೆಯನ್ನು ಕೇಂದ್ರೀಕರಿಸಿಕೊಂಡು ಮಾಡಿದ ಸಣ್ಣ ಸಾಕ್ಷ್ಯಚಿತ್ರ – ಹುಲಿಗಳೊಡನೆ ಕಾಲು ಶತಮಾನ. ದನ್ನು ಸಭೆಗೆ ಪ್ರದರ್ಶಿಸುವ ಉತ್ಸಾಹದಲ್ಲೇ ಶೇಖರ್ ಬಂದಿದ್ದರು. ಆದರೆ ದುರದೃಷ್ಟಕರವಾಗಿ ಸಭಾಭವನದ ತಾಂತ್ರಿಕ ಕೊರತೆಗಳಿಂದ ಅದು ಸಾಧ್ಯವಾಗಲಿಲ್ಲ.

ಉಲ್ಲಾಸ ಕಾರಂತ ಮೊದಲಲ್ಲೇ ವನ್ಯಸಂಪತ್ತಿನ (ಅದರಲ್ಲೂ ಮುಖ್ಯವಾಗಿ ಪ್ರಾಣಿಸಂಪತ್ತು) ಕುರಿತಂತೆ ಭಾರತದ ಭಾಗ್ಯವನ್ನು ಕೊಂಡಾಡಿದರು. ಅಷ್ಟೇ ಮುಕ್ತವಾಗಿ ಇಲ್ಲಿನ ಸಮಾಜದಲ್ಲಿ ಸೇರಿಬಂದಿರುವ ಜೀವ ಕಾರುಣ್ಯ ಅಥವಾ ಸಹಬಾಳ್ವೆಯ ಕ್ರಮವನ್ನೂ ಎತ್ತಿ ಆಡಿದರು. ಆದರೆ ಮುಂದುವರಿದಂತೆ ಎದುರಾಗುವ ವಾಸ್ತವಿಕ ಸತ್ಯಗಳನ್ನು ಎದುರಿಸಲು ಕೇವಲ ಭಾವನಾತ್ಮಕ ಪ್ರೀತಿ ಸಾಕಾಗುವುದಿಲ್ಲ. ವೈಚಾರಿಕ ಸತ್ಯಗಳಿಗೆ ಅದು ಮೌಢ್ಯದ ಮುಸುಕು ಎಳೆಯುತ್ತದೆ. ಕಾಲಪ್ರೇರಣೆಯಲ್ಲಿ ನಿರಂತರ ಚಲನಶೀಲವಾದ ಲೌಕಿಕ ಸತ್ಯಗಳಿಗೆ ನೆಲೆನಿಂತ ಶಾಸ್ತ್ರಾಧಾರ ಪರಿಹಾರವಲ್ಲ. ಪ್ರಯೋಗದ ನಿಕಷಕ್ಕೆ ಉಜ್ಜಿ, ಆಯಾ ಕಾಲದ ತಿಳುವಳಿಕೆಗಳನ್ನು ಪ್ರಚುರಿಸುವ, ಬದಲಾವಣೆಯನ್ನು ಸೋಲೆಂದು ಕಾಣದೆ, ಸವಾಲೆಂದೇ ಮುಂದುವರಿಯುವ ವೈಜ್ಞಾನಿಕ ಅಧ್ಯಯನದ ಆವಶ್ಯಕತೆಯನ್ನು ವಿಷದಪಡಿಸಿದರು. ಮನುಷ್ಯ ಶಾಸನಗಳು ಸಮಾಜಕೇಂದ್ರವಾಗಿ ರೂಪುಗೊಳ್ಳುವುದು ಅನಿವಾರ್ಯವಾದರೂ ಪ್ರಾಕೃತಿಕ ಸತ್ಯವನ್ನು ಮರೆಯದೆ, ಕಾಲಕ್ಕನುಗುಣವಾದ ತಿದ್ದುಪಡಿ ಅಥವಾ ಹೊಸರೂಪವನ್ನು ಪಡೆಯುವುದು ಅವಶ್ಯ. ಇದರಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಪಾತ್ರ ಬಹುಮುಖ್ಯವಾದದ್ದು. ಯಾವುದೇ ತಾರ್ಕಿಕ ಮನಸ್ಸಿಗೆ ತಟ್ಟುವ ಉದಾಹರಣೆಯಾಗಿ ಹೇಳಿದರು – ಶುದ್ಧ ಕಾಡು ಮತ್ತು ಮನುಷ್ಯ ಬಳಕೆಯ ನೆಲದ ಅನುಪಾತ ಇಂದು ೪ : ೯೬ ಆಗಿದೆ. ಇಷ್ಟುದ್ದಕ್ಕೂ ಹಗುರಾಗದ ಮನುಷ್ಯನ ಸಮಸ್ಯೆಗಳನ್ನು ಇನ್ನೂ ಮುಂದುವರಿಸುವುದು ನ್ಯಾಯವೇ? ಹಾಗೆ ಮಾಡಿ ಆ ೪% ಅಳಿಸಿಹೋದಮೇಲೆ ಹಿಂದೆ ಕರೆಸಿಕೊಳ್ಳುವ ಸಾಮರ್ಥ್ಯ ನಮಗಿದೆಯೇ? `ತಾಜ್ ಮಹಲ್ ಪುಡಿ ಮಾಡಿ, ಹೊಸದು ಕಟ್ಟಬಹುದು. ಒಂದು ಜೀವಜಾತಿ, ಉದಾಹರಣೆಗೆ ಹುಲಿ ನಾಶವಾದರೆ ಮತ್ತೆ ಹುಲಿಯನ್ನು ತರಲಾಗದು’ – ಯಾವ ಕಾಲಕ್ಕೂ ನೆನಪಿಡಬೇಕಾದ ಮಾತು.

ತೋರಗಾಣ್ಕೆಯ ಅಥವಾ ನೇರ ಉಪಯೋಗದ ಸಂಬಂಧಗಳನ್ನು (ಹಾಲು, ಮಾಂಸ ಇತ್ಯಾದಿ) ತಳುಕು ಹಾಕಿ ಶಾಸ್ತ್ರನೆಲೆಯಲ್ಲಿ ಕೆಲವೇ ಜೀವಿಗಳನ್ನು ಪುರಸ್ಕರಿಸುವುದು ಸರಿಯಲ್ಲ. ವಾಸ್ತವಿಕ ನೆಲೆಯಲ್ಲಿ ಇದು ಉಳಿದ ಜೀವಿಗಳನ್ನು ತಿರಸ್ಕರಿಸುವ ಪರಿಸ್ಥಿತಿ ವಿಕಸಿಸುತ್ತಿರುವುದನ್ನು ಉಲ್ಲಾಸ್ ತೀರಾ ಅಪಾಯಕರವೆಂದೇ ಹೇಳಿದರು. ಉಲ್ಲಾಸರ ಈ ಮಾತುಗಳು ಇಂದಿನ ಗೋಸಂರಕ್ಷಣೆಯ ವಿಪರೀತವನ್ನು ಖಂಡಿಸುತ್ತದೆ. ಜತೆಗೇ ಪ್ರಾಕೃತಿಕವಾದೆಲ್ಲವನ್ನೂ ತಾಂತ್ರಿಕ ಸಿದ್ಧಿಯಲ್ಲಿ ಮೀರಬಲ್ಲೆವು ಎಂಬ ಹುಸಿ ಅಹಂಕಾರವನ್ನೂ ಸ್ಪಷ್ಟ ಮಾತುಗಳಲ್ಲಿ ನಿರಾಕರಿಸುತ್ತದೆ. ಈ ನೆಲೆಯಲ್ಲಿ ಅವರ ಹುಲಿ ಸಂಶೋಧನೆ ನಡೆದು ಬಂದ ದಾರಿ (ಸೂಕ್ಷ್ಮವಾಗಿ ಅವರೇ ಹೇಳಿಕೊಂಡರು) ಮತ್ತೆ ಮತ್ತೆ ಮನನ ಮಾಡಬೇಕಾದ ವಿಚಾರ. ಆ ಕಾಲ್ಪನಿಕ ಪಿರಮಿಡ್ಡಿನ ಶಿಖರದಲ್ಲಿರುವ ಒಂದು ಹುಲಿಯ ಉಳಿವಿಗಾಗಿ ಎರಡನೆಯ ಸ್ತರದಲ್ಲಿ ಐದುನೂರು ಬಲಿಪಶು ಎಂದರೆ ಲೆಕ್ಕ ಮುಗಿಯುವುದಿಲ್ಲ. ಯಾವುದೇ ಪೂರ್ವಾಗ್ರಹರಹಿತ ತರ್ಕ ಅದನ್ನು ಮುಂದುವರಿಸುತ್ತದೆ ಮತ್ತು ಅವುಗಳ ತಳದಲ್ಲಿ ಅದೇ ಪ್ರಮಾಣದಲ್ಲಿ ವಿಸ್ತರಿಸುವ ಹಸುರು, ವಾಯು, ನೀರು, ಸಮೃದ್ಧಿಗಳೆಲ್ಲ ಸಾಮಾಜಿಕ ಆವಶ್ಯಕತೆಗಳೇ ಎಂದು ಮನಗಾಣಿಸುತ್ತದೆ. ಭಾರತ ಜಗತ್ತಿನಲ್ಲೆಲ್ಲೂ ಇಲ್ಲದ ಜೀವವೈವಿಧ್ಯದ ತಾಣವೆಂತೋ ಅಂತೇ ಅವುಗಳ ಸಹಜೀವನದಲ್ಲೂ ಅದ್ವಿತೀಯ ಸಾಮರಸ್ಯವನ್ನು ಸಾಧಿಸಿದ ದೇಶವೆನ್ನುವುದನ್ನು ನಾವು ಮರೆಯಬಾರದು. ಆನೆಯಲ್ಲಿ ಗಣೇಶ, ಹುಲಿಯಲ್ಲಿ ದೇವೀ ಮುಂತಾಗಿ ಗೌರವಿಸುವ ಪರಂಪರೆ ಇಲ್ಲಿನ ವನ್ಯಸಂರಕ್ಷಣೆಯನ್ನು ಅನ್ಯ ದೇಶಗಳಿಂದ ಹೆಚ್ಚು ಸುಲಭಸಾಧ್ಯವನ್ನಾಗಿಸಿದೆ. ವನ್ಯಪ್ರೀತಿಯ ಭಾವುಕ ಬಿಂಬವನ್ನು ತಿಳುವಳಿಕೆಯ ಹೊನಲಿನಲ್ಲಿ ತೊಳೆದು, ವೈಜ್ಞಾನಿಕ ಹೊಳಪು ಕೊಡುವಂತಾಗಬೇಕು.

ಸಾಮಾನ್ಯರು ತಪ್ಪಾಗಿ ಭಾವಿಸಿದಂತೆ ವಿಜ್ಞಾನಿ ಉಲ್ಲಾಸ ಕಾರಂತ ಬರಿಯ ಹುಲಿಯ ವಕ್ತಾರ ಅಲ್ಲ. ಜೀವವೈವಿಧ್ಯದ ಆ ಉನ್ನತ ಸಂಕೇತದಡಿಯಲ್ಲಿ, ದೇಶದ ಉದ್ದಗಲಕ್ಕೆ ವ್ಯಾಪಿಸಿದ ವನ್ಯಸಂರಕ್ಷಣೆಯ ಗಟ್ಟಿ ಧ್ವನಿ ಎನ್ನುವುದು ಅವರ ಮಾತುಗಳಲ್ಲಿ ಸ್ಪಷ್ಟವಿತ್ತು. ಕಳ್ಳಬೇಟೆ, ವನ್ಯಪರಿಸರ ನಾಶಗಳ ಒತ್ತಡದಡಿಯಲ್ಲಿ ಎರಡು ದಶಕಗಳ ಹಿಂದೆ ಇನ್ನೇನು ಹುಲಿ ಅಳಿದೇ ಹೋಗುತ್ತದೆ ಎಂದು ತರ್ಕಿಸಿದ್ದ ಲೆಕ್ಕಗಳನ್ನು ಮೀರಿ ಇಂದು ಅವುಗಳ ಸಂಖ್ಯಾವೃದ್ಧಿಯಾಗಿದೆ. ರಶ್ಯದ ಬರಡು ವಿಸ್ತಾರಗಳಲ್ಲಿ ವಿರಳವಾಗಿ ವ್ಯಾಪಿಸಿದ ಹುಲಿ, ಭಾರತದ ಸಮೃದ್ಧ ಸಂಕುಚಿತಗಳಲ್ಲಿ (ವನ್ಯಪ್ರದೇಶಗಳಲ್ಲಿ) ಹೆಚ್ಚಿನ ಸಂಖ್ಯೆಯಲ್ಲಿರಬಲ್ಲುದು ಎನ್ನುವುದು ಇಂದು ವೈಜ್ಞಾನಿಕ ಅಧ್ಯಯನಗಳು ಸ್ಪಷ್ಟಪಡಿಸಿವೆ.

ಅನಿವಾರ್ಯ ನಗರೀಕರಣ ಅಥವಾ ಆಧುನೀಕರಣ ನಿಸ್ಸಂದೇಹವಾಗಿ ವನ್ಯದ ಮೇಲೆ ಒತ್ತಡ ತಂದಂತೆಯೇ ಪರೋಕ್ಷವಾಗಿ ವನ್ಯದ ಮೇಲಿನ ಒತ್ತಡ ಇಳಿಸಿದ ಪರಿಯನ್ನೂ ಉಲ್ಲಾಸರ ಅಧ್ಯಯನ ಮುಕ್ತವಾಗಿ ಗುರುತಿಸುತ್ತದೆ. ಉದಾಹರಣೆಗೆ ಕಾಡುಗಳಿಗೆ ಸೌದೆಗಾಗಿ ಮುಗಿಬೀಳುತ್ತಿದ್ದ ಜನ ಇಂದು ಸುಲಭ ಸರಳ ಪರ್ಯಾಯ ಇಂಧನಗಳನ್ನು ಪಡೆದು ತೃಪ್ತರಿದ್ದಾರೆ; ಕಾಡು ಮುಕ್ತವಾಗಿದೆ. ಗೊಡ್ಡು, ಕುಂಟ ರಾಸು ಸಾವಿರವನ್ನು ಕಾಡಿಗೆ ಹೊಡೆಯುತ್ತ ಬಿಟ್ಟಿಮೇವು, ಗೊಬ್ಬರಲಾಭ ಎನ್ನುವ ಮಟ್ಟದಿಂದ ಪಶುಸಂಗೋಪನೆ ಉನ್ನತೀಕರಣಗೊಂಡಮೇಲೆ ವನ್ಯ ಚರಾವು ಮುಕ್ತವಾಗಿದೆ. ನೇರ ಸಂಶೋಧನಾ ವಲಯದಲ್ಲಂತೂ ತ್ರಿವಿಕ್ರಮ ಹೆಜ್ಜೆಗಳನ್ನೇ ಕಾಣುತ್ತೇವೆ. ಅರಿವಳಿಕೆ ಪ್ರಯೋಗ, ರೇಡಿಯೋಸಲಕರಣೆಗಳು, ಕ್ಯಾಮರಾಸೆರೆ, ಗಣಕ ಇತ್ಯಾದಿ ಒಂದು ಮುಖ. ಅನುಷ್ಠಾನ ಹೇಗೇ ಇರಲಿ, ತಾತ್ತ್ವಿಕವಾಗಿ ಜಗತ್ತಿನಾದ್ಯಂತ ಆಡಳಿತ ವ್ಯವಸ್ಥೆಗಳಲ್ಲಿ ಮೂಡಿದ ವನ್ಯ ಜಾಗೃತಿ ಮತ್ತು ರಕ್ಷಣಾಕ್ರಮಗಳ ಸಾಧನೆಯಂತೂ ಬಹಳ ದೊಡ್ಡ ಮುಖ. ಬೇಲಿ, ಕಂದಕ, ದಾರಿ, ವಾಹನ ಸೌಲಭ್ಯ, ಚುರುಕಿನ ಸಂಪರ್ಕ ಸಾಧನಗಳು, ನಿಯತ ಪಹರೆ, ಬೆಂಕಿ ನಿಯಂತ್ರಣ ಇತ್ಯಾದಿ ವಿಶ್ವಸನೀಯವಾಗಿ ವಿಕಸಿಸುತ್ತಿದೆ. ಜನರ ಆಹಾರಶೈಲಿ ಹಾಗೂ ಮನರಂಜನಾ ಮಾಧ್ಯಮಗಳ ಪಲ್ಲಟದಿಂದ ಬೇಟೆಯ ಹುಚ್ಚುಗಳೂ ವಿರಳವಾಗಿವೆ. ಬಹುಶಃ ಇಂಥವುಗಳ ಮೊತ್ತದಲ್ಲಿ ಉಲ್ಲಾಸ್ ಇಂದು ವನ್ಯದ ಕುರಿತಂತೆ ಹೆಚ್ಚು ಆಶಾವಾದಿಯಾಗಿದ್ದಾರೆ. ಸರಕಾರೀ ಅಂಕಿಸಂಕಿಗಳ ಉತ್ಪ್ರೇಕ್ಷೆಯನ್ನು ಸತರ್ಕ ಅಲ್ಲಗಳೆದರೂ ರಕ್ಷಿತ ವನ್ಯ ವಲಯಗಳ ಹೊರಗೆ ವರದಿಯಾಗುತ್ತಿರುವ ಚಿರತೆ ಚಟುವಟಿಕೆಗಳನ್ನು ಉಲ್ಲಾಸ್ ವಿಶೇಷವಾಗಿ ಪರಿಗಣಿಸುತ್ತಾರೆ. ರಣಥೊಂಬರ, ಪನ್ನ, ಕುದುರೆಮುಖಗಳಂಥ ವನ್ಯವಲಯದಲ್ಲಿ ಅಪೂರ್ವವಾಗಿ ಚೇತರಿಸಿದ ಹುಲಿ ಚಟುವಟಿಕೆಗಳನ್ನು ಉಲ್ಲಾಸ್ ಧಾರಾಳವಾಗಿ ಉದಾಹರಿಸುತ್ತಾರೆ.

ಮನುಷ್ಯ ಸಂಪರ್ಕದೊಡನೆ ನಡೆವ ವನ್ಯ ಸಂಘರ್ಷಗಳ ಕುರಿತು ಉಲ್ಲಾಸ್ ಭಾವುಕತೆಯನ್ನು ಖಡಕ್ ಮಾತುಗಳಲ್ಲಿ ನಿರಾಕರಿಸುತ್ತಾರೆ. ಮನುಷ್ಯ ಮತ್ತು ವನ್ಯಜೀವಿಯ ಸಹಜೀವನ, ಶುದ್ಧ ಕಾಡುಗಳಲ್ಲಿನ ಸಂತುಲಿತ ನಿರ್ವಹಣೆ ಮುಂತಾದ ಕಲ್ಪನೆಗಳನ್ನು ಪ್ರಯೋಗದ ನಿಕಷಕ್ಕೆ ಉಜ್ಜಿ ಕಸದ ಬುಟ್ಟಿಗೆಸೆಯುತ್ತಾರೆ. ಇದರಿಂದ ಉಲ್ಲಾಸರನ್ನು ತಪ್ಪು ಕಣ್ಣುಗಳಿಂದ ನೋಡುತ್ತಿದ್ದವರಿಗೆ ಆಘಾತವೇ ಆದರೆ ಆಶ್ಚರ್ಯವಿಲ್ಲ. “ನರಭಕ್ಷಣೆಯನ್ನು ರೂಢಿಸಿಕೊಂಡ ಹುಲಿಯನ್ನು ಗುಂಡಿಕ್ಕಿ” – ಇದು ಉಲ್ಲಾಸ್ ಹೇಳುವ ಮಾತು! ಅದೇ ರೀತಿಯಲ್ಲಿ ಬಲೆ, ಪಂಜರ, ಅರಿವಳಿಕೆ ಪ್ರಯೋಗದ ಬಳಸು ದಾರಿಗಳಲ್ಲಿ ಸೆರೆಹಿಡಿದು, ಅನ್ಯ ವನ್ಯವಲಯಗಳಲ್ಲಿ ಬಂಧಮುಕ್ತಗೊಳಿಸುವ ಕ್ರಮವನ್ನೂ ಉಲ್ಲಾಸ್ ಒಪ್ಪುವುದಿಲ್ಲ. ಮೃಗಗಳಲ್ಲಿ ರುಚಿಬೇಧ ಗುರುತಿಸುವ ಕುರಿತಂತೆ ನಡೆದ ಅಧ್ಯಯನ ಕಡಿಮೆ. ಆದರೆ ಆಕಸ್ಮಿಕವಾಗಿಯೇ ಮನುಷ್ಯನನ್ನು ಬಲಿಪಶುವನ್ನಾಗಿ ಗುರುತಿಸಿದ ಪ್ರಾಣಿ ಅದನ್ನು ರೂಢಿಸಿಕೊಳ್ಳಬಹುದು. ಅಥವಾ ಒಮ್ಮೆ ಸೆರೆಸಿಕ್ಕು, ಬಂಧ ಮುಕ್ತವಾಗುವವರೆಗಿನ ಅಂತರದಲ್ಲಿ ಜನ್ಮತಃ ಬಂದ ಮನುಷ್ಯ ಭಯವನ್ನು ಕಡಿಮೆ ಮಾಡಿಕೊಂಡ ಪ್ರಾಣಿ ಬದಲಾದ ಸ್ಥಳದಲ್ಲಿ ನರಬೇಟೆಗೆಳೆಸುವುದು ತಪ್ಪಾಗದು. ಮನುಷ್ಯನ ದೌರ್ಬಲ್ಯ ಅಥವಾ ದೇಹಭಾಷೆ `ನರಭಕ್ಷಕ’ಕ್ಕೆ ಒಲಿದಿರುವ ಫಲವೇ ಹೊರತು `ರಕ್ತದ ರುಚಿ’ ಅಲ್ಲ, ಎನ್ನುವುದು ಉಲ್ಲಾಸ್ ಮಾತುಗಳಲ್ಲಿ ತುಂಬ ಸ್ಪಷ್ಟವಾಗಿತ್ತು. (ತಮಾಷೆ ಎಂದರೆ ಮರುದಿನದ ಪ್ರಜಾವಾಣಿ ವರದಿ, ಉಲ್ಲಾಸ್ ಮಾತಿನಲ್ಲಿ `ರಕ್ತದರುಚಿ’ಯನ್ನು ಕಾಣಿಸಿತ್ತು!) ಪ್ರಾಣಿಸಂಗ್ರಹಾಲಯಗಳ ವಿಸ್ತರಣೆ ಎಂದೂ ವನ್ಯಪ್ರೇಮ ಅಥವಾ ಜೀವವೈವಿಧ್ಯದ ಸಂಕೇತವಲ್ಲ. ಮನುಷ್ಯ ಸಂಪರ್ಕಕ್ಕೆ ಬಂದೆಲ್ಲಾ ವನ್ಯಪ್ರಾಣಿಗಳಿಗೆ ಪುನರ್ವಸತಿ ಕಲ್ಪಿಸುವ ವ್ಯರ್ಥ ಖರ್ಚಿನ ಬದಲು ಅವು ಸ್ವಂತಂತ್ರವಾಗಿ ಸ್ವಕ್ಷೇತ್ರದಲ್ಲಿ ನೆಲೆಸುವ ಪರಿಸರ ಕಲ್ಪಿಸುವುದೊಂದೇ ಉಲ್ಲಾಸ ಕಾರಂತರ ಲಕ್ಷ್ಯ.

***

ಇದೀಗ ಸಂಚಿ ಟ್ರಸ್ಟ್ ತನ್ನ ಯೋಜನೆಯಂತೇ ಸಭೆಯಲ್ಲಿದ್ದು ನಾನು ಗ್ರಹಿಸಿದ ಅಂಶಗಳಲ್ಲಿ ತಪ್ಪು, ಗೊಂದಲ ನುಸುಳಿದ್ದರೆ ಪೂರ್ಣ ನಿವಾರಿಸುವಂತೆ ನೇರ ಉಲ್ಲಾಸ ಕಾರಂತ ಹಾಗೂ ಶೇಖರ ದತ್ತಾತ್ರಿಯವರ ಮುಖದಿಂದಲೇ ಕೇಳುವ, ಕೊನೆಯಲ್ಲಿ ಪ್ರೇಕ್ಷಕರೊಡನೆ ನಡೆದ ಅರ್ಥವತ್ತಾದ ಸಂವಾದದ ತುಣುಕುಗಳ ಸಹಿತ ಸಾರ್ವಜನಿಕಗೊಳಿಸಿದೆ. ಜ್ಞಾನಸರಣಿಯ ಆಶಯ ಒಳ್ಳೆಯದಿದ್ದಂತೇ ನಿರ್ವಹಣೆಯೂ ಇರಲೇಬೇಕಿತ್ತು. ಆದರೆ ಸಂಚಿಯ ಸದಾಶಯ, ಪೂರ್ವಸಿದ್ಧತೆಗಳೆಲ್ಲ ಕೆಲವು ತಾಂತ್ರಿಕ ಕೊರತೆಗಳಿಂದಾಗಿ ಸೊರಗಿದೆ. ಸದಾಶಯದ ಮೊದಲ ಕಲಾಪವೇ ಹೀಗಾದುದಕ್ಕೆ ಟ್ರಸ್ಟಿಗೆ ತೀವ್ರ ವಿಷಾದವಿದೆ. ಈ ಅನುಭವವನ್ನು ಸಂಚಿ ಟ್ರಸ್ಟ್ ತನ್ನ ಮುಂದಿನ ಕಲಾಪಗಳಲ್ಲಿ ಖಂಡಿತವಾಗಿ ಮೆಟ್ಟುಗಲ್ಲಾಗಿಸಿಕೊಂಡು ಉತ್ತಮಿಸಲಿದೆ.

ನಿರೀಕ್ಷಿಸಿ– ಮಾರ್ಚ್ ೧೪ರಂದು ಪ್ರೊ| ಷ. ಶೆಟ್ಟರ್ ಜ್ಞಾನಸರಣಿಯ ಎರಡನೇ ಉಪನ್ಯಾಸವನ್ನು ನೀಡಲಿದ್ದಾರೆ.