ಅಧ್ಯಾಯ ನಲ್ವತ್ನಾಲ್ಕು
[ಡೇವಿಡ್ ಕಾಪರ್ಫೀಲ್ಡ್‍ನ ಜೀವನ ವೃತ್ತಾಂತ ಮತ್ತು ಅನುಭವಗಳು, ಕಾದಂಬರಿ. ಮೂಲ ಇಂಗ್ಲಿಷಿನಲ್ಲಿ ಚಾರ್ಲ್ಸ್ ಡಿಕನ್ಸ್, ಕನ್ನಡ ಭಾವಾನುವಾದ ಎ.ಪಿ. ಸುಬ್ಬಯ್ಯ]
ವಿ-ಧಾರಾವಾಹಿಯ ನಲ್ವತ್ತಾರನೇ ಕಂತು
ಡೋರಾಳನ್ನು ಪಡೆದು ನನ್ನವಳನ್ನಾಗಿ ಮಾಡಿಕೊಳ್ಳುವುದೇ ನನ್ನ ಜೀವನದ ಮುಖ್ಯ ಕೆಲಸವೆಂದು ಕೆಲಸ ಮಾಡಿ ಬಹು ಸಂತೋಷದಿಂದ, ಕೆಲವು ತಿಂಗಳನಂತರವಾದರೂ ಮದುವೆಯಾಯಿತು. ಮನೆಗೆ ಬಂದಿದ್ದ ನೆಂಟರಿಷ್ಟರೆಲ್ಲ ಅವರವರ ಮನೆಗೆ ಹೋದರು. ಡೋರಾಳನ್ನು ಬಯಸುವುದೂ ಅರಸುವುದೂ ಮುಗಿದು, ಪ್ರಯತ್ನಗಳ ಫಲ ಸಂಪೂರ್ಣ ದೊರಕಿ, ನಾನೂ ಡೋರಾ ಮಾತ್ರ ಜತೆಯಲ್ಲಿ ಕುಳಿತು ಮಾತಾಡುತ್ತಿದ್ದಾಗ – ನನ್ನ ಜೀವನದ ಬಹು ಮುಖ್ಯ ಕಸಬನ್ನೇ ಕಳೆದುಕೊಂಡವನಂತೆ – ಒಂದು ವಿಧದ ಶೂನ್ಯತೆಯೇ ನನ್ನ ಮನಸ್ಸಿನಲ್ಲಿ ಗೋಚರಿಸುತ್ತಿತ್ತು. ಕಳೆದು ಹೋಗಿದ್ದ ದಿನಗಳು ಕನಸಿನ ಚಿತ್ರಗಳಾಗಿ ಮಾತ್ರ ತೋರುತ್ತಿದ್ದುವು.
ಚಿಕ್ಕ ಪಕ್ಷಿಗಳೆರಡು ಮನುಷ್ಯರಂತೆ ಮನೆ ಮಾಡಿಕೊಂಡು ತಮ್ಮ ಗೃಹಕೃತ್ಯ ನಡೆಸಿದ್ದಿದ್ದರೆ ಅವುಗಳ ಅನುಭವದ ಕೊರತೆ ಎಷ್ಟಿರಬಹುದಿತ್ತೋ ಅಷ್ಟೇ ಕೊರತೆ ನಮ್ಮಿಬ್ಬರ ಇಂದಿನ ಗೃಹಕೃತ್ಯದಲ್ಲೂ ತೋರಿಬರುತ್ತಿತ್ತು. ಈ ಪ್ರಸಂಗವನ್ನು ಉದಾಹರಿಸಿಯೇ ಒಂದೆರಡು ಚಿಕ್ಕ ಸಂಗತಿಗಳನ್ನು ಇಲ್ಲಿ ಪ್ರಸ್ತಾಪಿಸುವೆನು.
ನಮ್ಮ ಮನೆ ಕೆಲಸಕ್ಕಾಗಿ ಮೇರಿ ಎನ್ನೆ ಎಂಬವಳೊಬ್ಬಳನ್ನು ನೇಮಿಸಿಕೊಂಡಿದ್ದೆವು. ಅವಳ ಅಣ್ಣ ಸಿಪಾಯಿಯೆಂದಂದುಕೊಂಡು ಮೇರಿ ಎನ್ನೆಯು ಡೋರಾಳನ್ನು ಹೆದರಿಸಿಕೊಂಡೇ ತನ್ನ ಕೆಲಸವನ್ನು ಮಾಡುತ್ತಿದ್ದಳು. ದಿನ ಕಳೆದಂತೆ ಕೆಲಸದವಳು ನಮ್ಮ ಅನುಕೂಲಗಳನ್ನು ಒದಗಿಸುವ ಬದಲು ಅನನುಕೂಲತೆಗಳನ್ನೇ ಹೆಚ್ಚಿಸತೊಡಗಿದಳು. ಅವಳಣ್ಣ ಸಿಪಾಯಿ ಹೌದಾಗಿದ್ದರೂ ಅವನು ಸೈನ್ಯದಿಂದ ತಪ್ಪಿಸಿಕೊಂಡು ಬಂದವನಾಗಿದ್ದನು. ಅಂಥವನನ್ನು ಮೇರಿ ಎನ್ನೆಯು ನಮಗೆ ಗೊತ್ತಾಗದಂತೆ ನಮ್ಮ ಮನೆಯಲ್ಲಿ ಅಡಗಿಸಿ ಆಶ್ರಯ ಕೊಟ್ಟಿದ್ದಳು. ಸೈನಿಕರು ಬಂದು ಅವನನ್ನು ಹುಡುಕಿ ಹಿಡಿದುಕೊಂಡು ಹೋದಾಗ ನಾವು ನೆರೆಕರೆಯವರ ಅಪಹಾಸ್ಯಕ್ಕೆ ಗುರಿಯಾದೆವು. ಮೇರಿ ಸರಕಾರಕ್ಕೆ ವಿರೋಧವಾಗಿ ವರ್ತಿಸಿಸುದರಿಂದ (ನಮ್ಮನ್ನು ತಪ್ಪಿತಸ್ಥರಾಗಿ ಗುರಿ ಮಾಡದಿದ್ದುದು ನಮ್ಮ ಪುಣ್ಯ!) ಅವಳನ್ನು ಕೆಲಸದಿಂದ ತೆಗೆಯಬೇಕಾಯಿತು. ಅವಳ ಆಖೈರು ಸಂಬಳವನ್ನು ನಾನು ಕೊಡುವಾಗ ಅವಳಲ್ಲಿ ಕಂಡು ಬಂದ ದೈನ್ಯ, ವಿನಯ, ದುಃಖಗಳಿಗಾಗಿ ನಾನೂ ಬೇಸರಪಟ್ಟೆನು. ಆದರೆ ಅವಳು ಹೋದನಂತರ ನಮ್ಮ ಮನೆಯನ್ನು ಪರೀಕ್ಷಿಸಿದಾಗ ಅವಳ ಸಂಬಳದ ಎಷ್ಟೆಷ್ಟೋ ಪಾಲು ಕ್ರಯಬಾಳುವ ವಸ್ತುಗಳನ್ನು ಅವಳು ಅಪಹರಿಸಿದ್ದಳೆಂದು ಗೊತ್ತಾಯಿತು. ಅವಳ ಅನಂತರ ಅನೇಕರನ್ನು ಕೆಲಸಕ್ಕೆ ಮಾಡಿಕೊಂಡು ನೋಡಿದೆನು – ಅವರೆಲ್ಲರೂ ನಮ್ಮ ಮನೆಯಿಂದ ಹಣ, ಬಟ್ಟೆ, ಮತ್ತಿತರ ವಸ್ತುಗಳನ್ನು ಕದಿಯುತ್ತಿದ್ದರು. ಇಷ್ಟು ಅಲ್ಲದೆ ನಮ್ಮ ಲೆಕ್ಕಕ್ಕೆ ನಾವು ಸಾಲ ತರುತ್ತಿದ್ದ ಅಂಗಡಿಯಿಂದ ನಮಗೆ ತಿಳಿಯದೆ ನಮ್ಮ ಲೆಕ್ಕಕ್ಕೆ ಸಾಲ ಪಡೆದೂ ನಮಗೆ ನಷ್ಟಪಡಿಸುತ್ತಿದ್ದರು. ಒಮ್ಮೆ ಅಂಗಡಿ ಲೆಕ್ಕವನ್ನು ನಾನು ತನಿಖೆ ಮಾಡಿ ನೋಡಿದಾಗ ಡೋರಾಳ ಬಗ್ಗೆ ಕೆಲವು ಬಾಟ್ಲಿ ಬ್ರೇಂದಿ, ವಿಸ್ಕಿ, ಮೊದಲಾದುವೂ ಅಂಗಡಿಯಿಂದ ನಮ್ಮ ಮನೆಗೆ ಬಂದದ್ದಾಗಿಯೂ ಕಂಡೆನು.
ನನಗೂ ಡೋರಾಳಿಗೂ ನಮ್ಮ ಮೊದಲನೇ ಜಗಳವು ಮೇರಿ ಎನ್ನೆ ಕಾಲದಲ್ಲಿ ನಡೆಯಿತು. ಒಂದು ದಿನ ಮಧ್ಯಾಹ್ನದ ಊಟವು ಅದು ಆಗಬೇಕಾಗಿದ್ದುದಕ್ಕಿಂತ ಒಂದು ಗಂಟೆ ತಡವಾಗಿ ಆಯಿತು. ಆ ದಿನ ನಾನು ಡೋರಾಳನ್ನು ಕರೆದಾಗ – “ಗಡಿಯಾರವು ಸ್ವಲ್ಪ ಮುಂದೆ ಇರಬೇಕು” ಎಂದು ಹೇಳಿ ಮನೆ ಗೋಡೆಯ ಗಡಿಯಾರವನ್ನು ನೋಡುತ್ತಾ ಉತ್ತರವಿತ್ತಳು. ಆ ಗಡಿಯಾರವು ಮುಂದಿರುವುದರ ಬದಲು ಹಿಂದೆಯೇ ಇದೆಯೆಂದು ನನ್ನ ಗಡಿಯಾರವನ್ನು ಡೋರಾಳಿಗೆ ತೋರಿಸಿದೆ. ಆ ಕೂಡಲೇ ಅವಳು ಬಂದು ನನ್ನ ತೊಡೆಯ ಮೇಲೆ ಕುಳಿತು, ನನ್ನ ಮೂಗಿನ ತುದಿಯಿಂದ ನೆಟ್ಟಗೆ ಹಣೆಯಲ್ಲೇ ಪೆನ್ಸಿಲಿನಿಂದ ಗೆರೆಯೆಳೆಯುತ್ತಾ ನಾನು “ಹಾಗೆಲ್ಲ ತಂಟೆ ಮಾಡಬಾರದು” ಎಂದು ನಗಾಡುತ್ತಾ ಹೇಳಿದಳು.
“ಅಮ್ಮಾ ಡೋರಾ, ನೀನು ಮೇರಿ ಎನ್ನೆಯನ್ನು ಸ್ವಲ್ಪ ಎಚ್ಚರಿಸಬೇಕು” ಅಂದೆನು.
“ಅದು ಅಸಾಧ್ಯ. ನಾನು ಬುದ್ಧಿಯಿಲ್ಲದವಳೆಂದು ಹೇಳಿ, ಅವಳೇ ನನ್ನನ್ನು ಗದರಿಸಿಯಾಳು” ಅಂದಳು ಡೋರಾ.
ನನಗೆ ಸ್ವಲ್ಪ ಸಿಟ್ಟು ಬಂತು. ಮನೆಕೆಲಸದ ಕಡೆಗೆ ಅವಳು ಸ್ವಲ್ಪ ನಿಗಾ ಕೊಡಬೇಕೆಂದು ಹೇಳಿದೆನು. ನನ್ನ ಮಾತನ್ನು ಎಳ್ಳಷ್ಟು ಗಮನಿಸದೆ, ಸೀದಾ ಎದ್ದು ಬಂದು, ಪೆನ್ಸಿಲ್ ತೆಗೆದುಕೊಂಡು, ತನ್ನ ಬಾಯಿಗೆ ಮುಟ್ಟಿಸಿ ಮುಟ್ಟಿಸಿ, ನನ್ನ ಮುಖದ ಮೇಲೆಲ್ಲಾ ಬಣ್ಣದ ಗೆರೆಯನ್ನು ಎಳೆಯುತ್ತಾ
“ನಿನ್ನ ಮುಖಾ ನೋಡಿದರೆ ನಗೆ ಬರುತ್ತದೆ. ನನ್ನದು ತಪ್ಪೂಂತ ಏನಾದರೂ ಹೇಳಬೇಡ” ಎಂದು ಹಾಸ್ಯಮಾಡಿ ನನ್ನ ಬಾಯಿ ಮುಚ್ಚಿಸಿದಳು.
ಸ್ವಲ್ಪ ಹೊತ್ತು ಕಳೆದು ಪುನಃ ಹೇಳಿದೆನು – “ನೋಡು ಡೋರಾ, ನೀನು ಮನೆ ಕೆಲಸದ ಕಡೆಗೆ ನಿಗಾ ಕೊಡದಿದ್ದರೆ, ನಾನೇ ಆ ಕೆಲಸವನ್ನೂ ಸಹ, ನನ್ನ ಇತರ ಕೆಲಸಗಳಿದ್ದ ಹಾಗೇ ಮಾಡಬೇಕಾಗುತ್ತದೆ. ಈ ಹೊತ್ತಿನ ಹಾಗೆ ಊಟ ತಡವಾದರೆ ನಾನು ಊಟ ಮಾಡದೇ ಹೋಗಬೇಕಾಗುತ್ತದೆ.”
ಡೋರಾಳು ಸ್ವಲ್ಪ ನಡುಗತೊಡಗಿದಳು. ಅನಂತರ ಅಳುತ್ತಾ ಅಂದಳು – “ನೀನು ನನ್ನನ್ನು ಬೈಯ್ಯುತ್ತೀಯಲ್ಲಾ?”
“ಬಯ್ಯೋದಲ್ಲವೇ ಡೋರಾ – ಚರ್ಚೆ ಮಾಡಿ ನಿನ್ನನ್ನು ಸರಿ ದಾರಿಗೆ ತರುವುದು.”
“ಚರ್ಚೆ ಅಂದರೂ ಬಯ್ಯೋದಂದರೂ ಒಂದೇ” ಎಂದನ್ನುತ್ತಾ ಅಳುತ್ತಾ ಅಳುವಿನ ಮಧ್ಯವೇ –
“ನೀನು ನನ್ನನ್ನು ಹಾಗಾದರೆ ಮದುವೆಯಾದದ್ದೇಕೆ? ಮೊದಲೇ ಹೇಳಬಾರದಿತ್ತೇ ನನಗೆ ಬುದ್ಧಿ ಕಡಿಮೆ, ಬೇಡಾಂತ?”
ಈ ಸಂದರ್ಭದಲ್ಲಿ ನಾನು ಬಗ್ಗಲೇ ಬೇಕಾಯಿತು. ನಾನು ಅವಳನ್ನು ಸಮಾಧಾನಪಡಿಸುವುದಕ್ಕಾಗಿ –
“ಮುದ್ದೂ…….” ಎಂದು ಮುಂದುವರಿಸುವ ಮೊದಲೇ ಅವಳು ಅನ್ನ ತೊಡಗಿದಳು…..
“ನಾನು ನಿನ್ನ `ಮುದ್ದು’ ಅಲ್ಲ. ಆಗಿದ್ರೆ ನೀನು ಚರ್ಚೆ ಹೀಗೊಂದು ಮಾಡುತ್ತಿರಲಿಲ್ಲ.”
“ಸ್ವಲ್ಪ ಕೇಳು ಡೋರಾ, ನಿನ್ನೆ ಊಟವಿಲ್ಲದೆ ಹೋದೆ; ಮೊನ್ನೆ ಬೆಳಗ್ಗೆ ಸ್ನಾನದ ನೀರು ಬಿಸಿಯಾಗಿರಲಿಲ್ಲ. ಇಂದು ಊಟ ತಡವಾಗಿದೆ – ಇದರಲ್ಲೆಲ್ಲಾ ಮನೆಯಲ್ಲಿರುವ ನೀನು ಸ್ವಲ್ಪವಾದರೂ ಮನಸ್ಸು ಹಾಕಬೇಡವೇ?” “ಕ್ರೂರಿ – ನಾನು ನಿನಗೆ ಬೇಡಾಂತ ಅಲ್ಲವೇ ಹೀಗೆಲ್ಲಾ ಮಾತಾಡುವುದು?” ಎಂದು ಹೇಳುತ್ತಾ ಬಿಕ್ಕಿ ಬಿಕ್ಕಿ ಅಳತೊಡಗಿದಳು. ಅಳುವುದನ್ನು ಕಂಡು ನಾನು ಅಲ್ಲಿಂದೆದ್ದು ಹೋದೆನು.
ಅತ್ತೆಯ ಮನೆ ನಮ್ಮ ಮನೆಗೆ ಬಹು ಸಮೀಪವಾಗಿತ್ತು. ಒಂದು ಚಿಕ್ಕ ಕಾಲು ದಾರಿಯಿಂದ ನಾವು ಅತ್ತಿತ್ತ ಹೋಗಿಬರುತ್ತಿದ್ದೆವು. ಒಂದು ಕೈ ಬೆಳಕು ಹಿಡಿದುಕೊಂಡು ರಾತ್ರಿಯಲ್ಲಾದರೂ ಹೋಗಿಬರಲು ಅನುಕೂಲವಾದಷ್ಟು ಸಮೀಪದಲ್ಲಿತ್ತು ಅತ್ತೆಯ ಮನೆ. ನಾನು ಬೇಸರದಿಂದ ಡೋರಾಳನ್ನು ಬಿಟ್ಟು ಹೋದನಂತರ ಅತ್ತೆ ನಮ್ಮ ಮನೆಗೆ ಬಂದಿರಬೇಕು. ನಾನು ಆಫೀಸಿನಿಂದ ಕೆಲಸ ತೀರಿಸಿಕೊಂಡು ಬರುವಾಗ ಡೋರಾ ಅಳುವುದನ್ನು ನಿಲ್ಲಿಸಿದ್ದಳು – ಅತ್ತೆ ಸಮಾಧಾನಪಡಿಸಿರಬೇಕು.
ಆ ದಿನ ಅತ್ತೆಯನ್ನು ಗುಟ್ಟಾಗಿ ಕರೆದು, ಅವಳು ಡೋರಾಳಿಗೆ ನಾಲ್ಕು ಬುದ್ಧಿವಾದ ಹೇಳಿ ಮನೆ ಕೆಲಸದಲ್ಲಿ ತರಬೇತು ಮಾಡಬೇಕೆಂದು ಕೇಳಿಕೊಂಡೆನು. ಆದರೆ ಅತ್ತೆಯ ಅಭಿಪ್ರಾಯ ಪ್ರಕಾರ ಅವಳು ತರಬೇತು ಮಾಡುವುದಕ್ಕಿಂತಲೂ ನಾನೇ ತರಬೇತು ಮಾಡುವುದು ಒಳ್ಳೆಯದೆಂದೂ ನನ್ನಿಂದ ಅಸಾಧ್ಯವಾದಾಗ ಮಾತ್ರ, ಮಧ್ಯಸ್ಥಿಕೆಯ ರೀತಿಯಲ್ಲಿ ಅವಳು ಪ್ರವೇಶಿಸುವುದು ಉತ್ತಮವೆಂದೂ ತಿಳಿದೆನು. ಅವಳು ಹೇಳಿದಳು – “ಟ್ರಾಟ್, ನೀನು ಅವಳಿಗೆ ಸಮಾಧಾನ ಹೇಳಿ, ಬುದ್ಧಿ ಹೇಳಿ, ಸರಿಪಡಿಸುವಾಗ, ಕೆಲವೊಮ್ಮೆ ಚಿಕ್ಕ ವಿವಾದಗಳೆದ್ದು ಬಂದರೂ ಅಂಥ ವಿವಾದಗಳು ನಿಮ್ಮಿಬ್ಬರ ಪ್ರೇಮದಿಂದ ಕ್ರಮೇಣವಾಗಿ ಶಾಂತವಾಗಿ ಇತ್ಯರ್ಥವಾಗಬಹುದು. ಇಲ್ಲಿ ನಿಮ್ಮಿಬ್ಬರೊಳಗೆ ಪ್ರೇಮದ ಬಾಂಧವ್ಯವಿದೆ, ಸಲಿಗೆಯಿದೆ. ನೀವು ಒಬ್ಬರನ್ನೊಬ್ಬರು ಹೆಚ್ಚು ಕಾಲ ಬಿಟ್ಟಿರಲಾರಿರಿ. ಅದರ ಬದಲು ನಾನು ಬುದ್ಧಿ ಹೇಳಿಯೋ ಅಥವಾ ಸಮಾಧಾನ ಮಾಡಲು ಪ್ರಯತ್ನಿಸಿಯೋ ಸೋತರೆ, ಸೋತು ಅವಳಿಗೆ ನನ್ನ ಮೇಲೆ ಸಿಟ್ಟಾದರೆ, ಅನಂತರ ಅವಳು ನಾನಿದ್ದಲ್ಲಿಗೇ ಬರಲಾರಳು. ಅವಳ ಸ್ವಭಾವ ಹಾಗೆ ತೋರುತ್ತದೆ. ಇದರಿಂದ ಕೊನೆಗೆ ನಮ್ಮ ಮೂವರೊಳಗೂ ಅಸಮಾಧಾನ ಮೂಡಬಹುದು. ನನ್ನ ಈ ಪ್ರಾಯದಲ್ಲಿ ಅಂಥ ಪರಿಸ್ಥಿತಿಯನ್ನು ತಂದುಕೊಳ್ಳಲು ನಾನು ತಯಾರಿಲ್ಲ. ನನ್ನ ಒಂದು ಕಾಲದ ದಾಂಪತ್ಯ ಜೀವನದ ಅನುಭವದ ಕಾರಣವಾಗಿ ಈವರೆಗೆ ನಾನು ಜನರಿಗೆಲ್ಲ ಒಂದು ವಿಧದ ನಿಷ್ಠುರಿಯಾಗಿ ಬೆಳೆದು ಬಂದಿದ್ದೇನೆ. ಹಿಂದಿನ ದಿನಗಳನ್ನು ಗ್ರಹಿಸಿ ನನ್ನ ಅಂದಿನ ವರ್ತನೆಗಳಿಗಾಗಿ ಕೆಲವೊಮ್ಮೆ ಪಶ್ಚಾತ್ತಾಪಪಡುತ್ತಲೂ ಇದ್ದೇನೆ. ಆದ್ದರಿಂದ ಇಂದು ಪುನಃ ನಾನು ಬಂಧುಗಳೊಳಗೆ ಕಠಿಣ, ನಿಷ್ಠುರ ಪ್ರಸಂಗ ಬರಬಹುದಾದಲ್ಲಿ ಕೈ ಹಾಕುವುದು ಅನುಚಿತ. ನಿನ್ನ ತಾಯಿಯು ಬಹು ಒಳ್ಳೆಯವಳಾಗಿದ್ದು, ಅನೇಕ ವಿಷಯಗಳಲ್ಲಿ ಡೋರಾಳಂತೆಯೇ ಹಸುಳೆಯಾಗಿಯೇ ಇದ್ದಳು. ಇಷ್ಟೆಲ್ಲ ತಿಳಿದಿದ್ದ ನಾನು ಆ ದಿನಗಳಲ್ಲಿ ನಾನು ನಡೆಯಬೇಕಾಗಿದ್ದಂತೆ ಅವಳೊಡನೆ ನಡೆದಿರುವುದಿಲ್ಲವೆಂದು ಈಗ ಬೇಸರಿಸುತ್ತೇನೆ. ನಿನ್ನ ಡೋರಾಳು ಸುಂದರಿ, ಸರಳೆ, ಇನ್ನೂ ಚಿಕ್ಕ ಹುಡುಗಿ. ಅವಳನ್ನು ಸಾವಧಾನದಿಂದ ದಾರಿಗೆ ತರುವಷ್ಟು ಬುದ್ಧಿ ಅನುಕೂಲಗಳು ನಿನ್ನಲ್ಲಿವೆ. ನಿನ್ನ ಪತ್ನಿಯನ್ನು ನೀನು ಸ್ವತಂತ್ರನಾಗಿ, ಇಚ್ಛಾಪೂರ್ವಕ ಆರಿಸಿಕೊಂಡಿರುವೆ. ನೀನು ಆರಿಸಿದುದರಲ್ಲಿ ತಪ್ಪೇನೂ ಆಗಿರುವುದಿಲ್ಲ. ಅವಳಲ್ಲಿರುವ ಗುಣಗಳಿಂದ ತೃಪ್ತನಾಗಿರುವುದು ನಿನ್ನ ಕರ್ತವ್ಯ. ಅವಳಲ್ಲಿ ಇಲ್ಲದ ಗುಣಗಳನ್ನು ಅಪೇಕ್ಷಿಸಿ, ಅವು ದೊರಕದೆ ನಿರುತ್ಸಾಹಿಯಾಗಿ, ನೀನು ಅವಳ ಮೇಲೆ ಕೋಪಿಸಿಕೊಳ್ಳಲು ನಿನಗೆ ಹಕ್ಕಿಲ್ಲ. ಇದ್ದ ಗುಣಗಳಿಂದಲೇ ನೀನು ತೃಪ್ತಿಪಟ್ಟುಕೊಂಡು ಬಾಳಬೇಕು – ಅಷ್ಟೆ.
ಅತ್ತೆ ಇದೇ ರೀತಿಯಲ್ಲಿ ಮಾತಾಡುತ್ತಾ ಬಹಳ ಹೊತ್ತು ಕುಳಿತಿದ್ದಳು. ಅನಂತರ ನಾನು ಅವಳನ್ನು ಅವಳ ಮನೆಗೆ ಕರೆದುಕೊಂಡು ಹೋಗಿ ಬಿಟ್ಟು ಬಂದೆನು. ನಾನು ವಾಪಾಸು ಮನೆಗೆ ಬರುವಾಗ ಡೋರಾಳು ಮನೆಯ ಮುಂಬಾಗಿಲಿನಲ್ಲಿ ಬಂದು ನಿಂತು ನನ್ನನ್ನು ನಿರೀಕ್ಷಿಸುತ್ತಿದ್ದಳು. ನನ್ನನ್ನು ಕಂಡೊಡನೆ –
“ಡೇವೀ” ಅಂದಳು.
“ಏನು ಮುದ್ದೂ, ಆಗ ನಿನಗೆ ಸಿಟ್ಟಾಯಿತೇ” ಎಂದಂದೆ ನಾನು.
“ಸಿಟ್ಟು ಬಂದು ಹೋಯಿತು, ಆದರೆ……” ಎಂದಂದು ಅವಳು ಮಾತು ಮುಂದುವರಿಸುವ ಮೊದಲು ನಾನಂದೆ –
“ನಿನಗೆ ಸಿಟ್ಟು ಬಂದರೂ ನನಗೆ ಸಿಟ್ಟು ಬರುವುದಿಲ್ಲ – ನನಗೆ ಬರುವುದು ದುಃಖ ಮಾತ್ರ.”
“ನೋಡು ಡೇವೀ, ನನಗೆ ಅನುಭವ ಕಡಿಮೆಯಾದ್ದಕ್ಕೆ ನಾನೇನು ಮಾಡುವುದು? ನಾನು ಏಗ್ನೆಸ್ಸಳ ಜತೆಯಲಿ ಬೆಳೆದಿದ್ದರೆ ಬುದ್ಧಿವಂತೆಯಾಗುತ್ತಿದ್ದೆ.”
“ಅದು ಹೌದು ಡೋರಾ, ನನ್ನ ಮುದ್ದೂ. ಏಗ್ನೆಸ್ಸಳು ನನ್ನ ಬುದ್ಧಿಯನ್ನೇ ಸರಿಪಡಿಸಿದ್ದಾಳೆ. ನಿನಗಂತೂ ಅವಳಿಂದ ತುಂಬಾ ಪ್ರಯೋಜನವಾಗದೆ ಇರದು. ಆದರೆ ಹೆದರಬೇಡ – ಅವಸರವಿಲ್ಲ. ನೀನಿನ್ನೂ ಚಿಕ್ಕವಳೇ ಅಷ್ಟೆ? – ದಿನ ಹೋದಂತೆ ಕಲಿಯುವೆ” ಎಂದು ನಾನು ಸಮಾಧಾನ ಹೇಳಿದೆ.
“ನನ್ನ ಹೆಸರು `ಡೋರಾ’ ಎಂದು ಬೇಡ – `ಬೇಬಿ’ ಎಂದೇಕೆ ಇಡಬಾರದು? ಹಾಗೆ ಹೆಸರಿಟ್ಟರೆ ನೀನು ನನ್ನನ್ನು ಕರೆಯುವಾಗಲೆಲ್ಲ ನನಗೆ ಬುದ್ಧಿಯಿಲ್ಲಾಂತ ಗೊತ್ತಾಗಿ, ನನ್ನನ್ನು ಬೈದು ಸರಿಪಡಿಸುವ ಬದಲು ಪ್ರೀತಿಯಿಂದ ಆಲೋಚಿಸಿ ಸರಿಪಡಿಸುವೆ. ಆ ಹೆಸರಿಟ್ಟು ನೋಡು” ಅಂದಳು ಡೋರಾ. ಅವಳ ಸರಳವಾದ ತರ್ಕ, ಮಿತಿಯಿಲ್ಲದ ಪ್ರೇಮ, ನನಗೆ ಸಹಾಯವಾಗಬೇಕೆಂಬ ಶ್ರದ್ಧೆ, ಇವನ್ನು ಕಂಡು ನಾನು ಬಹು ಸಂತೋಷಪಟ್ಟೆನು.
ನಮ್ಮ ಗೃಹಕೃತ್ಯದಲ್ಲಿ ಇನ್ನೂ ಇದೇ ತರದ ಅನೇಕ ಚಿಕ್ಕ ಚಿಕ್ಕ ಲೋಪ ದೋಷಗಳು ನಡೆದು ಬರುತ್ತಿದ್ದುವು. ಟ್ರೇಡಲ್ಸನನ್ನು ಕರೆದು ಒಂದು ದಿನ ಔತಣ ಏರ್ಪಡಿಸಿದಾಗ ಡೋರಾಳೇ ಸ್ವತಃ ಹೋಗಿ ತಂದು ಪಾಕಮಾಡಿದ್ದ ಆಯಿಸ್ಟರಿನಲ್ಲಿ (ಮೀನನ್ನು ಒಳಗೊಳ್ಳುವ ಮುತ್ತಿನ ಚಿಪ್ಪು) ಮೀನೇ ಇರಲಿಲ್ಲ. ಡೋರಾಳ ಹೆಡ್ಡತನವನ್ನು ಕಂಡು ಅಂಗಡಿಯವನು ಟೊಳ್ಳು ಆಯಿಸ್ಟರನ್ನು ಅವಳಿಗೆ ಮಾರಿರಬೇಕು! ಹೀಗೆಯೇ ಇನ್ನೊಂದು ಔತಣದಲ್ಲೂ ನಡೆಯಿತು. ಟ್ರೇಡಲ್ಸನಿಗೆ ಮತ್ತು ನನಗೆ ಚಿಕ್ಕ ಮೀನುಗಳ ಮೇಲೋಗರದ ಮೇಲೆ ಪ್ರೀತಿಯಿದೆ ಎಂಬುದನ್ನು ತಿಳಿದು ಡೋರಾಳು ಅವಳೇ ಅಂಗಡಿಗೆ ಹೋಗಿ ಮೀನು ತಂದು ಮೇಲೋಗರವನ್ನು ಮಾಡಿದಳು. ಆದರೆ, ಆ ಮೇಲೋಗರವನ್ನು ಊಟಕ್ಕೆ ಬಡಿಸಿದಾಗ, ಆ ಮೀನೆಲ್ಲ ಚಿಕ್ಕ ಮೀನುಗಳೇ ಪುಷ್ಟಿಯಾಗಿ ಬೆಳೆದು ದೊಡ್ಡದಾದವು ಎಂದು ಡೋರಾಳು ಗ್ರಹಿಸಿ ತಂದಿದ್ದ ದೊಡ್ಡ ಮೀನುಗಳಾಗಿದ್ದು, ಅಂದಿನ ಊಟ ವ್ಯರ್ಥವಾಯಿತು.
ನಮ್ಮ ಮನೆ ಚಿಕ್ಕದು. ಅದರಲ್ಲಿ ಎಲ್ಲಾ ಕಡೆಯಲ್ಲೂ ಪಾತ್ರೆ, ಬಟ್ಟೆ, ಪುಸ್ತಕ, ಆಟದ ಸಾಮಾನು ಮೊದಲಾದುವುಗಳು ಹರಗಣಗಳಾಗಿ ಬಿದ್ದಿರುತ್ತಿದ್ದುವು. ಈ ಕ್ರಮದ ಜತೆಗೆ ನಮ್ಮ ಊಟದ ಕೋಣೆಯಲ್ಲೇ ಜಿಪ್ಪನ ಮನೆಯೂ ಇರಲೇಬೇಕೆಂದು ಡೋರಾಳ ಏರ್ಪಾಡು. ನಮ್ಮ ಊಟದ ಮಧ್ಯೆ ಜಿಪ್ಪನು ಮೇಜನ್ನು ಹತ್ತಿ ಬಟ್ಟಲನ್ನು ತುಳಿದು ಬಾಲ ಅಲ್ಲಾಡಿಸುವುದೂ ಇತ್ತು. ಇನ್ನು, ಜಿಪ್ಪನನ್ನು ಹೆದರಿಸಿದರೆ ಡೋರಾಳನ್ನು ಹೆದರಿಸಿದ ಫಲವೇ ಆಗುತ್ತಿತ್ತು.
ನಮ್ಮ ಗೃಹಕೃತ್ಯಕ್ಕೆ ಸಂಬಂಧಿಸಿದ ಲೆಕ್ಕದ ಕಥೆ ಹೇಳಬೇಕೇ! ಇದರಲ್ಲಿ ಡೋರಾಳ ಶ್ರದ್ಧೆ ಏನೂ ಕಡಿಮೆಯಾಗಿರಲಿಲ್ಲ. ಅವಳೇ ಅಂಗಡಿಗೆ ಹೋಗಿ ಲೆಕ್ಕ ಬರೆಯಲೋಸ್ಕರ ಒಂದು ದೊಡ್ಡ ಪುಸ್ತಕವನ್ನು ತಂದಳು. ಪುಸ್ತಕವನ್ನು ಬಿಚ್ಚಿಟ್ಟು ನಾಲ್ಕೈದು ಲೇಖನಿಕೆಗಳನ್ನು ಶಾಯಿ ದೌತಿಯೊಳಗೆ ಅದ್ದಿ ಇಟ್ಟು, ಕುರ್ಚಿ ಮೇಜನ್ನೆಲ್ಲ ಸರಿಪಡಿಸಿಕೊಂಡು ಬರೆಯಲು ಪ್ರಾರಂಭಿಸಿದಳು. ಆ ದಿನದ ಅವಳ ಉತ್ಸಾಹವನ್ನು ನಾನು ಅಡಗಿ ನೋಡುತ್ತಾ ನಿಂತಿದ್ದೆ. ಅವಳು ನಾನು ಅಡಗಿ ನೋಡಿದ್ದನ್ನು ತಿಳಿದು ಅಂದಳು – “ಗೊತ್ತಾಯಿತು, ಗೊತ್ತಾಯಿತು, ಅಡಗಿ ಪರೀಕ್ಷಿಸುತ್ತೀಯಾ. ನೀನು ಬುದ್ಧಿವಂತಾಂತ ಗೊತ್ತುಂಟು. ನಾನೂ ನಿನ್ನ ಹಾಗಾಗಬೇಕೆಂದು ಕಲಿಯುತ್ತಾ ಇದ್ದೇನೆ, ನೋಡು!” ಈ ಮಧ್ಯೆ ಜಿಪ್ಪನನ್ನು ಕರೆದು – ನನಗೆ ಬುದ್ಧಿಯಿಲ್ಲವಂತೆ, ಹೌದೇ ಜಿಪ್?” ಎಂದು ಪ್ರಶ್ನಿಸಿದಳು. ಜಿಪ್ ಅದರ ರೂಢಿಯಂತೆ ಅವಳನ್ನು ನೆಕ್ಕಿ ಬಾಲ ಅಲ್ಲಾಡಿಸಿ, ಆವರೆಗೆ ಬರೆದಿಟ್ಟಿದ್ದ ಪುಟಗಳ ಮೇಲೆ ಅವನ ಹೆಜ್ಜೆಯ ಮುದ್ರೆಯನ್ನು ಒತ್ತಿದನು. ಲೆಕ್ಕವೆಲ್ಲ ಈ ಕ್ರಮದ್ದು – ಎಲ್ಲವೂ ಅಪೂರ್ಣ, ಚಿತ್ತು, ವಿಕಾರ!
ಪಾಕಶಾಸ್ತ್ರದ ಪುಸ್ತಕವನ್ನು ತಂದುಕೊಟ್ಟೆ. ಅಡಿಗೆಯನ್ನು ಅಭ್ಯಾಸ ಮಾಡಬೇಕೆಂದು ತಿಳಿಸಿದೆನು. ಅಡಿಗೆಯನ್ನೇನೋ ಮಾಡಿದಳು. ಆ ಪುಸ್ತಕದಲ್ಲಿ ಹೇಳಿದ ಪ್ರಕಾರ ಗಡಿಯಾರವಿಟ್ಟುಕೊಂಡು ಹುರಿದು, ಬೇಯಿಸಿ, ಒಗ್ಗರಣೆ ಹಾಕಿ, ಬೆಂಕಿ-ಕಾಲ-ಪ್ರಯತ್ನ ಈ ಮೂರನ್ನೂ ಶಾಸ್ತ್ರ ಪ್ರಕಾರವೇ ಮಾಡಿದಳು. ಆದರೆ ಯಾವುದರಲ್ಲೋ ತಪ್ಪಿಸಿಕೊಂಡು ಕೆಲವು ಹಸಿ, ಕೆಲವು ಸುಟ್ಟು, ಈ ರೀತಿ ಮಾಡಿದ ಪದಾರ್ಥ ಹಾಳಾಗಿತ್ತು. ಈ ರೀತಿ ಅವಳು ಮಾಡಿದಾಗಲೆಲ್ಲ ಸರ್ವಸಾಧಾರಣವಾಗಿ ಅಡಿಗೆಯು ಹಾಳೇ ಆಗಿರುತ್ತಿತ್ತು. ಆದರೆ ಸಂಗೀತ, ನೃತ್ಯ, ಚಿತ್ರ ಬರೆಯುವುದು ಇವುಗಳಲ್ಲಿ ಸ್ವಲ್ಪ ಪರಿಶ್ರಮ ತೆಗೆದುಕೊಳ್ಳುತ್ತಿದ್ದಳು. ಆದರೂ ಚಿತ್ರ ಬರೆಯುವ ಗದ್ದಲದಲ್ಲಿ ನಮ್ಮ ಲೆಕ್ಕ ಪುಸ್ತಕದಲ್ಲೂ ಚಿತ್ರವನ್ನು ಬರೆದು ಬಿಡುತ್ತಿದ್ದಳು ಮತ್ತು ಈ ಚಿತ್ರಗಳ ಪೈಕಿ ಜಿಪ್ಪನದೂ ಅನೇಕವಿರುತ್ತಿದ್ದುವು.
ಡೋರಾಳ ನನ್ನ ಮೇಲಿನ ಪ್ರೀತಿ ವಾತ್ಸಲ್ಯದಲ್ಲಿ ಏನೂ ಕೊರತೆಯಿರಲಿಲ್ಲ. ಈ ಗುಣದಿಂದಲೇ ಅವಳ ಚಿಕ್ಕ ಪುಟ್ಟ ಲೋಪದೋಷಗಳನ್ನು ಮರೆಯಿಸಿಬಿಡುತ್ತಿದ್ದಳು. ನಾನು ಬಹು ರಾತ್ರಿಯವರೆಗೂ ಕೆಲಸ ಮಾಡುವ ಕ್ರಮವಿತ್ತು. ಅವಳು ನಾನು ಮಲಗುವವರೆಗೂ ಕಾದು ಕುಳಿತು ನೋಡುತ್ತಿರುತ್ತಿದ್ದಳು. ನನ್ನ ಪ್ರಿಯ ಡೋರಾಳನ್ನು ನಾನು ಪ್ರೀತಿಯಿಂದ ಹೊರತಾಗಿ ಇತರ ಯಾವ ಭಾವನೆಗಳಿಂದಲೂ ಕಂಡಿರುವುದಿಲ್ಲ. ಅವಳಲ್ಲಿದ್ದ ಕೊರತೆಗಳಿಗಾಗಿ ನಾನು ಗುಪ್ತವಾಗಿ ದುಃಖಿಸುತ್ತಿದ್ದೆನಾದರೂ ಅವಳ ಮೇಲೆ ಎಂದೂ ಕೋಪಿಸಿಕೊಳ್ಳುತ್ತಿರಲಿಲ್ಲ. ನಮ್ಮ ಮನೆ, ನಮ್ಮ ಸ್ನೇಹಿತರು, ನೆಂಟರು ಎಂಬ ತಿಳಿವಳಿಕೆಯಿದ್ದು ನಮ್ಮೆಲ್ಲರನ್ನೂ ಅವಳು ತುಂಬಾ ಪ್ರೀತಿ, ವಿಶ್ವಾಸ, ಗೌರವಗಳಿಂದ ಕಾಣುತ್ತಿದ್ದಳು. ಅವಳ ಶಕ್ತಿ ಮೀರಿಯೇ ನಮ್ಮನ್ನು ಸಂತೋಷಪಡಿಸಲು ಕೆಲಸ ಮಾಡುತ್ತಿದ್ದಳು. ನನ್ನ ಅತ್ತೆಯಲ್ಲೂ ಅವಳಿಗೆ ತುಂಬಾ ಪ್ರೇಮವಿತ್ತು. ಅತ್ತೆಯೂ ಸಹ ನಾನು ಬೇರೆ ಡೋರಾಳು ಬೇರೆಯೆಂದು ಕಾಣದೆ ನಮ್ಮೀರ್ವರನ್ನು ಏಕಮಾನವಾದ ಪ್ರೀತಿಯಿಂದ ಕಾಣುವಳು. ಅತ್ತೆಗೆ ಡೋರಾಳ ಮೇಲಿದ್ದ ಪ್ರೀತಿ ಮತ್ತು ವಾತ್ಸಲ್ಯ ಶಬ್ದದಲ್ಲೇ ಎದ್ದು ಕಾಣುವಂತೆ ಅತ್ತೆ ಡೋರಾಳಿಗೆ ತನ್ನ ಕಡೆಯದೇ ಆದ ಒಂದು ಹೆಸರಿಟ್ಟು `ನವಕುಸುಮ’ ಎಂದು ಕರೆಯುತ್ತಿದ್ದಳು.
( ಮುಂದುವರಿಯಲಿದೆ)
BHARI CHENNAGIDE…
ಚೆನ್ನಾಗಿದೆ. ತುಂಬ ಹಿಂದೆ ಓದಿದ್ದು ನೆನಪಾಗಿ ಸಂತಸವಾಯಿತು.