ಅಧ್ಯಾಯ ನಲ್ವತ್ತೆರಡು
[ಡೇವಿಡ್ ಕಾಪರ್ಫೀಲ್ಡ್ನ ಜೀವನ ವೃತ್ತಾಂತ ಮತ್ತು ಅನುಭವಗಳು, ಕಾದಂಬರಿ. ಮೂಲ ಇಂಗ್ಲಿಷಿನಲ್ಲಿ ಚಾರ್ಲ್ಸ್ ಡಿಕನ್ಸ್, ಕನ್ನಡ ಭಾವಾನುವಾದ ಎ.ಪಿ. ಸುಬ್ಬಯ್ಯ]
ವಿ-ಧಾರಾವಾಹಿಯ ನಲ್ವತ್ನಾಲ್ಕನೇ ಕಂತು
ಡೋರಾಳನ್ನು ನಾನು ಮದುವೆಯಾಗುವುದರಲ್ಲೂ ಸ್ಪೆನ್ಲೋ ಸಹೋದರಿಯವರು ನಮ್ಮ ಮದುವೆಗೆ ಸಮ್ಮತಿ ಕೊಡುವುದರಲ್ಲೂ ಉಭಯ ಪಕ್ಷದವರಿಗೂ ತುಂಬಾ ಜವಾಬ್ದಾರಿಕೆಯಿದೆಯೆಂಬುದನ್ನು ನಾನು ಸಂಪೂರ್ಣ ಅರಿತಿದ್ದೆನು. ಅಂದರೆ, ನಾನು ಹಣ ಸಂಪಾದಿಸಬೇಕೆಂಬುದನ್ನು ತಿಳಿದಿದ್ದೆ. ಇದಕ್ಕಾಗಿಯೇ ನಾನು ಶೀಘ್ರಲಿಪಿಯನ್ನು ಬಹು ಶ್ರಮಪಟ್ಟು ಅಭ್ಯಾಸಮಾಡುತ್ತಿದ್ದೆನು. ಬಹು ಕಷ್ಟವಾದ ಈ ಶೀಘ್ರ ಲಿಪಿಗಾಗಿ ನಾನು ಎಷ್ಟೊಂದು ಶ್ರಮಪಟ್ಟಿರುತ್ತೇನೆಂಬುದನ್ನು ಬರೆದರೆ ಅದೊಂದು ಹೆಗ್ಗಳಿಕೆಯಾಗಿ ತೋರಬಹುದು. ನಾನು ನನ್ನ ಇತರ ಎಲ್ಲ ವ್ಯಾಸಂಗಗಳಲ್ಲೂ ಹಿಡಿದಿರುವ ಕಾರ್ಯಗಳಲ್ಲೂ ಇದೇ ರೀತಿಯಾಗಿ ಪರಿಶ್ರಮಿಸುತ್ತಾ ಯಶಸ್ವಿಯಾಗಿಯೇ ಮುಂದುವರಿಯುತ್ತಿದ್ದೆನು. ನನ್ನ ಜನ್ಮದತ್ತವಾದ ಗುಣಗಳೂ ಶಕ್ತಿಗಳೂ ವಿಶೇಷವೇನಿರದಿದ್ದರೂ ಹಿಡಿದ ಕೆಲಸವನ್ನು ಎಡೆಬಿಡದೆಯೂ ಮನಃಪೂರ್ವಕವಾಗಿಯೂ ಪರಿಷ್ಕಾರವಾಗಿಯೂ ಮಾಡುವ ಹಟ ನನಗೆ ಸದಾ ಇತ್ತು. ನಾನು ನನ್ನ ಕಾರ್ಯಗಳಲ್ಲಿ ಎಷ್ಟು ಕೃತಕಾರ್ಯನೋ, ಸಾರ್ಥಕ್ಯ ಪಡೆದವನೋ ಆಗಿರುವುದೆಲ್ಲ ಈ ಶಕ್ತಿಯಿಂದ ಎಂದು ನನ್ನ ನಂಬಿಕೆ. ಅಭಿವೃದ್ಧಿ ಶಿಖರವನ್ನು ಏರಲಿರುವ ಏಣಿಗೆ, ಬುದ್ಧಿ ಶಕ್ತಿ ಮತ್ತು ಉತ್ತಮ ಸಂದರ್ಭ ಎಂಬೆರಡು ಸರಳ ತೋಳುಗಳಾದರೆ, ಅವಿಶ್ರಾಂತ ದುಡಿಮೆಯೇ ಆ ಏಣಿಯ ಮೆಟ್ಟಲುಗಳು ಎಂದು ನನ್ನ ಅಭಿಪ್ರಾಯ. ಯಾವ ಕೆಲಸ ಮಾಡುವುದಾದರೂ ಅರೆಮನಸ್ಸಿನಿಂದ ಮಾಡದೆ ನಮ್ಮ ಸಂಪೂರ್ಣ ಶಕ್ತಿ ಮನಸ್ಸುಗಳನ್ನು ಉಪಯೋಗಿಸಿ ಮಾಡಿದರೇನೇ ಮಾಡಿದ ಕೆಲಸ ಪರಿಪೂರ್ಣವಾಗುವುದು. ಈ ಅಭಿಪ್ರಾಯಾನುಸಾರವಾಗಿಯೇ ನಾನು ಡೋರಾಳನ್ನು ಪಡೆಯಲು ಬೇಕಾದ ಅರ್ಹತೆ ಸಂಪಾದನೆಗಾಗಿ ನನ್ನ ಸರ್ವಶಕ್ತಿಯನ್ನೂ ಉಪಯೋಗಿಸಿ ದುಡಿಯುತ್ತಿದ್ದೆನು. ಆದರೆ ನನ್ನಲ್ಲಿ ಇಂಥ ಗುಣಗಳನ್ನು ಪ್ರಚೋದಿಸಿ, ಸಂದರ್ಭಾನುಸಾರ ಪ್ರಶಂಸಿಸಿ, ಅಗತ್ಯಬಿದ್ದಲ್ಲಿ ತಿದ್ದಿ ಸರಿಪಡಿಸಿ, ಅಭಿವೃದ್ಧಿಗೆ ತಂದವಳು ಏಗ್ನೆಸ್ಸಳು ಎಂದು ನನ್ನ ಅಂತರಾತ್ಮ ಸದಾ ತಿಳಿಯುತ್ತಿತ್ತು.
ಡಾಕ್ಟರ್ ಸ್ಟ್ರಾಂಗರ ಮನೆಗೆ ಮಿ. ವಿಕ್ಫೀಲ್ಡರೂ ಏಗ್ನೆಸ್ಸಳೂ ಬಂದು ಎರಡು ವಾರಗಳ ಕಾಲ ಸುಖವಾಗಿ ಇದ್ದು ಹೋಗಬೇಕೆಂಬ ಏರ್ಪಾಡು ಏಗ್ನೆಸ್ಸಳೂ ನಾನೂ ಕೂಡಿ ಮಾಡಿದ್ದೆವು. ಮಿ. ವಿಕ್ಫೀಲ್ಡರ ಮಾನಸಿಕ ಸ್ಥಿತಿಗೂ ಅವರ ದೇಹಾರೋಗ್ಯಕ್ಕೂ ಈ ತೆರನಾದ ಸ್ಥಳ ಬದಲಾವಣೆ ಅಗತ್ಯವೆಂದು ನಮಗೆ ತೋರಿದ್ದರಿಂದಲೇ ಆ ಏರ್ಪಾಡನ್ನು ಮಾಡಿದ್ದು. ಈ ಪ್ರಕಾರ ಅವರಿಬ್ಬರೂ ಡಾ| ಸ್ಟ್ರಾಂಗರ ಮನೆಗೆ ಬಂದಿದ್ದರು. ಆದರೆ ಇದೇ ಸಂದರ್ಭದಲ್ಲಿ ತನಗೆ ಒಬ್ಬಂಟಿಯಾಗಿರಲು ತುಂಬಾ ಬೇಸರವಾಗುತ್ತದೆಂದು, ಉರೆಯನ ತಾಯಿಯೂ ಕೇಂಟರ್ಬರಿಯನ್ನು ಬಿಟ್ಟು, ಲಂಡನ್ನಿಗೆ ಬಂದು, ಡಾ| ಸ್ಟ್ರಾಂಗರ ಮನೆ ಸಮೀಪವೇ ಒಂದು ಬಾಡಿಗೆ ಮನೆ ಮಾಡಿಕೊಂಡು ಅಲ್ಲಿ ನಿಂತಳು. ತಾಯಿಯನ್ನು ನೋಡಲೋಸ್ಕರ ಉರೆಯನೂ ಆಗಿಂದಾಗ್ಗೆ ಲಂಡನ್ನಿಗೆ ಬಂದು ಹೋಗುತ್ತಿದ್ದನು.
ನಾನು ಡಾ| ಸ್ಟ್ರಾಂಗರ ಮನೆಯಲ್ಲಿ ಇಂಥ ಒಂದು ದಿನವಿದ್ದಾಗ ಉರೆಯ ಡಾ| ಸ್ಟ್ರಾಂಗರ ಮನೆಗೆ ನನ್ನೊಡನೆ ಮಾತಾಡಲೆಂದೇ ಬಂದನು. ಅವನ ಸಂಪರ್ಕವನ್ನು ದೂರ ಮಾಡಬೇಕೆಂದು ನಾನು ಎಷ್ಟೆಷ್ಟು ಪ್ರಯತ್ನಿಸಿದರೂ ಉರೆಯ ಅಷ್ಟಷ್ಟೇ ತಗ್ಗಿ ಬಗ್ಗಿ, ಹಟದಿಂದ ನನ್ನ ಹತ್ತಿರ ಮಾತಾಡತೊಡಗಿದನು. ಹಾಗಾಗಿ, ಸಭ್ಯತೆಗಾಗಿ, ನಿರ್ವಾಹವಿಲ್ಲದೆ, ಅವನೊಡನೆ ಸ್ವಲ್ಪ ಮಾತಾಡಬೇಕಾಯಿತು. ಅವನ ಮುಖ್ಯ ಉದ್ದೇಶ ಸಾಧನೆಗೆ ಸಂಬಂಧಿಸಿದ ಮಾತುಗಳನ್ನಷ್ಟೇ ಹೇಳಬಯಸುತ್ತೇನೆ. ಅವನು ನನ್ನನ್ನು ನೋಡಿ –
“ಮಿ. ಕಾಪರ್ಫೀಲ್ಡ್, ನಾವೂ ಇತ್ತ ಕಡೆ, ಬಂದಿದ್ದೇವೆ. ನಮ್ಮ ಮನೆ ಸಮೀಪದಲ್ಲಿದೆ” ಅಂದನು.
“ನಿನಗೆ ಕುಷಿ ಕಂಡಲ್ಲಿರಲು ನಿನಗೆ ಹಕ್ಕಿದೆಯಷ್ಟೆ. ನನಗೇನು ಸಂಬಂಧ, ಅದರಲ್ಲಿ “ ಎಂದು ನಾನಂದೆನು.
“ನಾವು ಕುಷಿ ಕಂಡು ಬಂದದ್ದು ಮಾತ್ರವಲ್ಲ, ಉದ್ದೇಶಪೂರ್ವಕವಾಗಿಯೇ ಬಂದಿದ್ದೇವೆ.”
“ಉದ್ದೇಶವೇನಿದ್ದರೂ ನನಗೇನು ಸಂಬಂಧ?”
“ನೀವು ನನ್ನ ಬಾಲ್ಯದ ಸ್ನೇಹಿತರು. ನಿಮ್ಮಲ್ಲಿ ಅಂಥ ಉದ್ದೇಶ ತಿಳಿಸುವ ಮನಸ್ಸಿದ್ದರೆ ತಪ್ಪಾಗಲಾರದಷ್ಟೆ! ನೋಡಿ, ನಾವು ಯಾರನ್ನು ಪ್ರೀತಿಸುತ್ತೇವೋ ಅವರನ್ನು ಕುರಿತಾಗಿ ಕಾವಲು ಇರಿಸುವುದು ಸರಿಯಲ್ಲವೇ?”
ಈ ಕಾವಲು ಏಗ್ನೆಸ್ಸಳನ್ನು ಕುರಿತಾಗಿ ಎಂದು ನನಗೆ ಗೊತ್ತಿತ್ತಾದರೂ ಅರಿಯದವನಂತೆಯೇ – ನನಗೆ ಬಂದಿದ್ದ ಸಿಟ್ಟನ್ನು ತಡೆಹಿಡಿದುಕೊಂಡು ಕೇಳಿದೆ –
“ಯಾರಿಗೋಸ್ಕರ ಕಾವಲು? ನನಗಾಗಿ ಅಲ್ಲವಷ್ಟೆ!”
“ಅಲ್ಲ, ಅಲ್ಲ, ನಿಮಗಾಗಿ ಖಂಡಿತವಾಗಿಯೂ ಅಲ್ಲ. ಒಬ್ಬ ಹೆಂಗುಸಿಗಾಗಿ”
“ಯಾವ ಹೆಂಗುಸಿಗಾಗಿ? ಹೆಸರು?” ಎಂದು ನನಗೆ ಆಶ್ಚರ್ಯ ತೋರಿಯೇ ಕೇಳಿದೆ.
“ಹೇಳುವುದೇ ಬೇಡವೋ ಎಂದು ಹೆದರುತ್ತಿದ್ದೇನೆ, ಮಿ. ಕಾಪರ್ಫೀಲ್ಡ್. ಆದರೆ ನಮ್ಮ ಬಾಲ್ಯದ ಸ್ನೇಹಕ್ಕಾಗಿ, ನಿಮ್ಮಲ್ಲಿ ಮಾತ್ರ ಹೇಳುತ್ತೇನೆ” ಎಂದು ಹೇಳಿ, ಅತ್ತಿತ್ತ ನೋಡಿ, ಸಮೀಪದಲ್ಲಿ ಯಾರೂ ಇಲ್ಲವೆಂದು ಗೊತ್ತಾದಮೇಲೆ, ಮೆಲ್ಲಗೆ –
“ಗಂಡಸಿಗೆ ಹೆದರಿ ನಾನು ಕಾವಲಿರುವುದಲ್ಲ, ಹೆಂಗುಸಿಗೆ ಹೆದರಿ, ಮಿಸೆಸ್ ಸ್ಟ್ರಾಂಗಳಿಗೆ ಹೆದರಿ, ಅವಳು ನನ್ನ ವಿರೋಧಿಯೆಂದು ಗ್ರಹಿಸಬೇಕಾಗಿದೆ” ಅಂದನು ಉರೆಯನು.
“ಡಾಕ್ಟರರ ಪತ್ನಿ ನಿನ್ನ ವಿರೋಧಿಯಾಗುವುದು ತಾನೆ ಹೇಗೆ? ಎಂದು ಹೇಗೂ ಮಾತು ಪ್ರಾರಂಭಿಸಿದ ಮೇಲೆ ನಾನು ಕೇಳಬೇಕಾಯಿತು.
“ಆ ಸಂಗತಿ ಹೇಳುತ್ತೇನೆ ಕೇಳಿ. ಡಾ| ಸ್ಟ್ರಾಂಗರ ಪತ್ನಿಯು ನನ್ನನ್ನು ಎಂದೂ ತಕ್ಕಷ್ಟು ಗೌರವದಿಂದ ಕಂಡವಳಲ್ಲ. ನನ್ನಂಥ ಬಡನೌಕರನು ಹೆಂಗಸರನ್ನು ಮೆಚ್ಚಿಸಲಾರ. ನಾನು ಬಡವನಾದರೂ ನನಗೆ ಕಣ್ಣಿದೆ, ಬುದ್ಧಿ ಇದೆ, ಮರ್ಯಾದೆ ಇದೆ. ಅಡಗಿ ನಡೆಯಬಹುದಾದ್ದನ್ನು ಪರೀಕ್ಷಿಸಿ ತಿಳಿಯುವ ಶಕ್ತಿಯಿದೆ. ಡಾಕ್ಟರರ ಪತ್ನಿಯು ಮಿ. ವಿಕ್ಫೀಲ್ಡರ ಮನೆಗೆ ಬಂದಿರುವುದೂ ಏಗ್ನೆಸ್ಸಳು ಡಾಕ್ಟರರ ಮನೆಗೆ ಹೀಗೆ ಇದ್ದು ಬರುವುದೂ ಸರಿಯಲ್ಲವೆಂದೇ ನನ್ನ ಅಭಿಪ್ರಾಯ. ಹಿಂದೆ ನಾನು ಮಿ. ವಿಕ್ಫೀಲ್ಡರ ಗುಮಾಸ್ತನಾಗಿದ್ದಾಗ ನಡೆದು ಹೋಗುತ್ತಿದ್ದ ಈ ವಿಧದ ಒಬ್ಬರು ಇನ್ನೊಬ್ಬರ ಮನೆಗೆ ಹೋಗಿ ಇದ್ದು ಬರುವ ಕ್ರಮವನ್ನು ಈಗ ನಾನು ಒಪ್ಪಲಾರೆನು. ನಾನು ಈಗ ಮಿ. ವಿಕ್ಫೀಲ್ಡರಂತೆಯೇ ವಕೀಲನಾಗಿದ್ದೇನೆ. ನನಗೂ ಮರ್ಯಾದೆಯಿದೆ, ಹೃದಯವಿದೆ. ನನಗೆ ಎಲ್ಲಾ ಗೊತ್ತಿದೆ, ಕಣ್ಣಿದೆ!” ಎಂದಷ್ಟೇ ಹೇಳಿ, ಅವನ ಮುಖವನ್ನು ಕೆಂಪು ಮಾಡಿಕೊಂಡು, ಅವನು ಏನನ್ನೋ ಕಂಡು ಕೋಪಿಸಿಕೊಂಡಿದ್ದ ಕಣ್ಣುಗಳನ್ನೇ ನನಗೆ ತೋರಿಸುತ್ತಿರುವವನಂತೆ ಆ ಕೆಂಪಾದ ಕಣ್ಣುಗಳಿಂದ ನನ್ನನ್ನೇ ನೋಡಿದನು.
“ಇದರಿಂದೆಲ್ಲ ಏನು ಹೇಳಿದ ಹಾಗಯ್ತು? ಮತ್ತು ನನ್ನ ಹತ್ತಿರ ಹೇಳುವುದೇಕೆ?” ಎಂದು ನಾನು ಕೇಳಿದೆನು. “ನಿಮಗೆ ಸಂಬಂಧವಿಲ್ಲವೆಂದು ತೋರಬಹುದು ನಿಜ. ಆದರೆ ಕೇಳು, ಇನ್ನು ಮರೆಮಾಚದೆ ತಿಳಿಸುವೆನು. ಮಿಸೆಸ್ ಸ್ಟ್ರಾಂಗಳು ನಮಗೆಲ್ಲ ತೋರುವಂಥ ಶುದ್ಧ ಹೆಂಗುಸಲ್ಲ. ಅವಳು ಮಿ. ಜೇಕ್ ಮಾಲ್ಡನ್ನನ ಅತಿ ದೊಡ್ಡ ಏನನ್ನಲಿ? – ಸ್ನೇಹಿತಳೇ? ಹಿತಳೇ? ಯಾವುದೇ ಇರಲಿ, ಅವಳೊಬ್ಬ ಅವನ ಪ್ರೀತಿಯ ವಸ್ತು. ಹೀಗೆ ಕುಲೀನರೆಂಬವರ ಮನೆಯ ವಾತಾವರಣ ಕೆಟ್ಟಿರುವಾಗ ನನ್ನ ಏಗ್ನೆಸ್ಸಳು ಅಂಥ ಮನೆಯಲ್ಲಿ, ಮಿಸೆಸ್ ಸ್ಟ್ರಾಂಗಳ ಸಂಪರ್ಕದಲ್ಲಿ ಇರುವುದಾದರೆ ಸಂಬಂಧಪಟ್ಟ ನನ್ನ ಕಡೆಯ ಕಾವಲು ಅಗತ್ಯವಲ್ಲವೇನು? ಏಗ್ನೆಸ್ಸಳು ಅಲ್ಲಿರುವುದು ಒಳ್ಳೆಯದಲ್ಲ – ನಾನು ಆಕ್ಷೇಪಿಸುವೆನು, ಅಡ್ಡ ಬರುವೆನು, ಖಂಡಿತವಾಗಿಯೂ ತಡೆದು ನಿಲ್ಲಿಸುವೆನು” ಎಂದು ಬಹು ಉದ್ವೇಗದಿಂದ ಉರೆಯ ಹೇಳಿದನು. ನಾವು ಇಷ್ಟು ಮಾತಾಡುತ್ತಿದ್ದಾಗ ಜೇಕ್ ಮಾಲ್ಡನ್ನನು ಗೇಟನ್ನು ದಾಟಿ ನಮ್ಮ ಮನೆ ಕಡೆಗೆ ಬರುತ್ತಿದ್ದನು. ಉರೆಯ ಓಡಿ ಹೋಗಿ ಅಡಗಿಕೊಂಡನು. ನಾನು ನನ್ನಷ್ಟಕ್ಕೆ ಬೇರೆ ಕಡೆ ಹೋದೆನು.
ಈ ಸಂಗತಿ ನಡೆದ ಮೂರನೆ ದಿನ ನಾನು ಡೋರಾಳ ಮನೆಗೆ ಹೋದೆನು. ಹೋಗುವಾಗ ನನ್ನ ಜತೆಯಲ್ಲಿ ಏಗ್ನೆಸ್ಸಳನ್ನು ಕರೆದುಕೊಂಡು ಹೋದೆನು. ಡೋರಾಳ ಮನೆಯಲ್ಲಿ ನಮಗೆ ಚಹದ ಏರ್ಪಾಡು ಇತ್ತು. ಏಗ್ನೆಸಳೂ ಡೋರಾ ನಾನೂ ಜತೆಯಲ್ಲಿ ಕುಳಿತು ಚಹ ಸೇವಿಸುವಾಗ ಡೋರಾಳಿಗೂ ಏಗ್ನೆಸ್ಸಳಿಗೂ ಪರಿಚಯ ಬೆಳೆಯಿತು. ಇದಕ್ಕೆ ಹಿಂದೆ ನಾನು ಡೋರಾಳೊಡನೆ ಏಗ್ನೆಸ್ಸಳನ್ನು ಹೊಗಳಿ ಮಾತಾಡಿದಾಗಲೆಲ್ಲ ಏಗ್ನೆಸ್ಸಳನ್ನು ಕುರಿತು ಡೊರಾ ಹೆದರಿಕೊಂಡೇ ಇರುತ್ತಿದ್ದಳು. ಆದರೆ ಇಂದಿನ ಅವರಿಬ್ಬರ ಭೇಟಿಯಲ್ಲಿ ಏಗ್ನೆಸ್ಸಳು ಡೋರಾಳ ಸ್ನೇಹಿತಳೇ ಆಗಿಬಿಟ್ಟಳು. ಚಹ ಸೇವನೆಗೆ ಮೊದಲು ಸಾಂಪ್ರದಾಯಕವಾದ ಉಪಚಾರದ ಮಾತುಗಳನ್ನು ಮಾತ್ರ ಮಾತಾಡಿ, ಸ್ವಲ್ಪ ಹೆದರಿಕೊಂಡೇ ಇರುತ್ತಿದ್ದ ಡೋರಾ ಚಹ ಸೇವನೆಯಾದನಂತರ ಸಂಪೂರ್ಣ ಬದಲಾಗಿದ್ದಳು. ಏಗ್ನೆಸ್ಸಳ ಎದುರೇ ಡೋರಾ ನನ್ನನ್ನು ನೋಡಿ –
“ನೀನು ಹೇಳುತ್ತಿದ್ದ ಹಾಗಿಲ್ಲ ಏಗ್ನೆಸ್ಸಳು” ಅಂದಳು.
“ಹಾಗಾದರೆ ಟ್ರಾಟೂಡ್ ನನ್ನನ್ನು ಹಾಗೊಂದು ದೂರಿರಬೇಕಲ್ಲವೆ” ಎಂದು ನಗಾಡುತ್ತಾ ಏಗ್ನೆಸ್ಸಳು ಕೇಳಿದಳು.
ಅದಕ್ಕೆ ಡೊರಾಳು ಏಗ್ನೆಸ್ಸಳಿಗೆ ಉತ್ತರವಾಗಿ –
“ಇಲ್ಲ, ಇಲ್ಲ – ಅವನಿಗೆ ನಿನ್ನನ್ನು ಹೊಗಳಿದಷ್ಟು ಸಾಲದು. ನಿನ್ನ ಬುದ್ಧಿ ಎಷ್ಟೊಂದು ಎಂಬುದನ್ನು ಆಗಾಗ ನನ್ನಲ್ಲಿ ಹೊಗಳುತ್ತಾ ಕೊನೆಗೆ ನಾನು ನಿನ್ನಂಥವಳೆದುರು ಬಂದು ಮಾತಾಡುವುದು ಹೇಗೆಂದೇ ನಾನು ಹೆದರುತ್ತಿದ್ದೆ” ಅಂದಳು ಡೋರಾ.
“ಏಗ್ನೆಸ್ಸಳು ಯಾರನ್ನೂ ಸಮಾಧಾನಗೊಳಿಸಬಲ್ಲಳು. ಅವಳು ಇದ್ದಲ್ಲಿ ಶಾಂತಿ, ಸಮಾಧಾನ, ಧೈರ್ಯ ಉಂಟಾಗುವುದು. ಅವಳು ಇದ್ದಲ್ಲಿ ಜಯವಿದೆ. ಅವಳು ನನ್ನ ಶುಭ ದೇವತೆ, ರಕ್ಷಣಾ ದೇವತೆ. ನಿನಗೂ ಅವಳು ಹಾಗೆಯೇ ಆಗಲೆಂದೇ ನಾನು ಅವಳ ಪರಿಚಯವನ್ನು ಮಾಡಿಸುತ್ತಿದ್ದೇನೆ. ನೀನು ಅವಳೊಡನೆ ಇಷ್ಟು ಸಂತೋಷದಿಂದಿರುವುದನ್ನು ಕಂಡು ನನಗೆ ಪರಮಾನಂದವಾಗಿದೆ” ಎಂದು ನಾನು ಹೇಳಿದೆ. ಹೀಗೆಲ್ಲಾ ಮಾತಾಡಿಕೊಂಡು ನಾವು ಬಹು ಸಂತೋಷದಿಂದ ಅಂದಿನ ಭೇಟಿ ಪರಿಚಯಗಳ ಕಾಲವನ್ನು ಕಳೆದೆವು. ಆ ದಿನ ನಾವು ಡೋರಾಳ ಮನೆಯನ್ನು ಬಿಟ್ಟು ಹೊರಡುವಾಗ, ಡೋರಾಳು ಬಂದು ನನ್ನನ್ನು ಅಪ್ಪಿ ಹಿಡಿದುಕೊಂಡು –
“ಏಗ್ನೆಸ್ಸಳಂಥವಳು ನನ್ನ ಜತೆಯಲ್ಲಿದ್ದಿದ್ದರೆ ನಾನು ಇನ್ನೂ ಬುದ್ಧಿವಂತಳಾಗುತ್ತಿದ್ದೆನಲ್ಲವೇ?” ಎಂದು ಕೇಳಿದಳು.
“ಈಗ ನಿನಗೆ ಏನು ಬುದ್ಧಿವಂತಿಕೆಗೆ ಕೊರತೆ ಬಂದಿದೆ ಡೋರಾ? ದಿನ ಹೋದಂತೆ, ಅನುಭವದಿಂದ, ಇನ್ನೂ ಬುದ್ಧಿವಂತಳಾಗುವೆ” ಎಂದು ನಾನು ಸಮಾಧಾನ ಹೇಳಿದೆ.
“ಆದರೂ ಜೂಲಿಯಾ ಮಿಲ್ಸಳ ಬದಲು ಏಗ್ನೆಸ್ಸಳು ನನ್ನ ಜತೆಯಲ್ಲಿದ್ದಿದ್ದರೆ?” ಎಂದು ಹೇಳಿ, ಸ್ವಲ್ಪ ಆಲೋಚನೆ ಮಾಡುತ್ತಾ ನಾನು ಮಾತಾಡುವ ಮೊದಲೇ ಕೇಳಿದಳು –
“ಏಗ್ನೆಸ್ಸಳು ನಿನಗೇನಾಗಬೇಕು?” ಎಂದು ಕೇಳಿದಳು.
“ನಮಗೆ ರಕ್ತ ಸಂಬಂಧವಿಲ್ಲ. ಆದರೆ ಅಣ್ಣ ತಂಗಿಯರಂತೆ ಬಾಲ್ಯದಲ್ಲಿ ಜತೆಯಲ್ಲೇ ಬೆಳೆದವರು” ಎಂದೆ.
“ಹಾಗಾದರೆ ಅಂಥವಳ ಜತೆಯಲ್ಲಿದ್ದೂ ನನ್ನನ್ನೇಕೆ ಪ್ರೀತಿಸಿದೆಯೋ ಆಶ್ಚರ್ಯ!” ಎಂದು ಸ್ವಲ್ಪ ಅಸಮಾಧಾನವೋ ಆಶ್ಚರ್ಯವೋ ಆದವಳಂತೆ ಹೇಳಿಕೊಂಡಳು.
ಆಗ ನಾನು ಹೇಳಿದೆ –
“ನಿನ್ನನ್ನು ಕಂಡು ಪ್ರೀತಿಸದಿರುವುದು ಸಾಧ್ಯವೇ ಮುದ್ದೂ?”
“ನನ್ನನ್ನು ಕಾಣದೇ ಇದ್ದಿದ್ದರೆ ಏನು ಮಾಡುತ್ತಿದ್ದೆ?”
“ನಾವು ಜನಿಸದೇ ಇದ್ದಿದ್ದರೆ? – ಎಂಬುದೇ ಅದಕ್ಕೆ ಉತ್ತರ ಡೋರಾ” ಎಂದು ನಾನು ಉತ್ತರ ಕೊಡಬೇಕಾಯಿತು. ಅವಳ ಮನಸ್ಸಿನಲ್ಲಿ ಏನೇನೋ ಆಲೋಚನೆಗಳು ಮೂಡಿರಬೇಕು. ಆ ಆಲೋಚನೆಗಳನ್ನು ಮಾತುಗಳಲ್ಲಿ ಹೇಳಲು ತಿಳಿಯದೆ, ಮಾತಿಗಿಂತ ಮುತ್ತೇ ಉತ್ತಮವೆಂದು, ಲೆಕ್ಕ ಮಾಡಿ `ಒಂದು, ಎರಡು, ಮೂರು’ ಎಂದನ್ನುತ್ತಾ ನನ್ನನ್ನು ಚುಂಬಿಸಿದಳು. ಇಷ್ಟೆಲ್ಲಾ ಆದಮೇಲೆ ನಾವು ಡಾಕ್ಟರ್ ಸ್ಟ್ರಾಂಗರ ಮನೆಗೆ ಹೊರಟೆವು.
ನಾವು ಡಾಕ್ಟರರ ಮನೆಗೆ ಸಮೀಪಿಸಿ ಬಂಡಿಯಿಳಿದು ಒಳರಸ್ತೆಯಲ್ಲಿ ನಡೆಯತೊಡಗಿದಾಗ ನಾನಂದೆ – “ಏಗ್ನೆಸ್, ನೀನು ಡೋರಾಳ ಹತ್ತಿರ ಕುಳಿತು ಮಾತಾಡಿದ್ದರಿಂದ ಉಂಟಾಗಿರುವ ಪರಿಣಾಮವನ್ನು ನೋಡುವಾಗ ನೀನು ನನ್ನ ರಕ್ಷಣಾ ದೇವತೆ ಮಾತ್ರವಲ್ಲ, ಅವಳ ರಕ್ಷಣಾ ದೇವತೆಯೂ ಆಗಿರುವೆಯೆಂದು ತಿಳಿಯುವೆನು.” “ನಾನೊಬ್ಬ ನಿಶ್ಶಕ್ತ ದೇವತೆ ಮಾತ್ರ! ಆದರೆ ನಿಮ್ಮ ಶುಭವನ್ನೂ ಹಿತವನ್ನೂ ಸದಾ ಬಯಸುತ್ತಿರುವ ದೇವತೆಯೇನೋ ಹೌದು!” ಎಂದು ನಮ್ರವಾಗಿ, ಗಂಭೀರ ಸ್ವರದಿಂದ, ಹೇಳಿದಳು. ಅವಳ ಈ ಮಾತು, ಆಗಿನ ಆ ಸ್ವರ ನನ್ನ ಅಂತರಂಗವನ್ನೇ ಸ್ಪರ್ಷಿಸಿದುವು. ನಾನು ನನ್ನ ಅಂತರಂಗದಲ್ಲೇ ಏಗ್ನೆಸ್ಸಳಿಗೆ ಏನೋ ಒಂದು ವೇದನೆಯಿರಬೇಕೆಂದು ತಿಳಿಯತೊಡಗಿದೆನು. ಅಂಥ ದುಃಖ ಅವಳಿಗೆ ಏನಿರಬಹುದೆಂದು ತಿಳಿಯಲಿಚ್ಛಿಸಿ – “ಏಗ್ನೆಸ್, ನೀನು ಇಂದು ಡೋರಾಳ ಜತೆಯಲ್ಲಿ ಕುಳಿತು ಮಾತಾಡುತ್ತಿದ್ದಾಗ ನಿನ್ನಲ್ಲಿ ತೋರಿ ಬರುತ್ತಿದ್ದಷ್ಟು ಉತ್ಸಾಹವನ್ನು ನಾನು ನಿನ್ನಲ್ಲಿ ಹಿಂದೆಂದೂ ಕಂಡಿರುವುದಿಲ್ಲ. ನಿನ್ನ ಉತ್ಸಾಹವನ್ನು ಕಂಡು ನನಗೆ ತುಂಬಾ ಸಂತೋಷವಾಯಿತು. ನೀನು ಈಗೀಚೆಗೆ ನಿಮ್ಮ ಮನೆಯಲ್ಲೂ ಸಹ ಮೊದಲಿಗಿಂತಲೂ ಹೆಚ್ಚು ಸುಖಿಯಾಗಿರುವಿಯೇನು?” ಎಂದು ಕೇಳಿದೆ. “ನಾನು ನನ್ನ ಮಟ್ಟಿಗೆ ಸುಖವಾಗಿದ್ದೇನೆ, ಸಂತೋಷದಿಂದಲೂ ಇದ್ದೇನೆ, ಅದು ನನ್ನ ಸ್ವಭಾವ” ಎಂದು ಅವಳು ಉತ್ತರವಿತ್ತಳು.
ಅವಳ ಸ್ವಭಾವ ದೈವಿಕ ಸ್ವಭಾವವೆಂದೇ ನಾನವಳ ಮುಖ ನೋಡುವಾಗ ತಿಳಿದೆನು. ರಾತ್ರಿಯ ನಕ್ಷತ್ರಗಳ ಬೆಳಕಿನಲ್ಲೇ ಆಗ ನಾನವಳನ್ನು ನೋಡುತ್ತಿದ್ದೆನಾದರೂ ಆ ದೈವಿಕ ಪ್ರಭೆಯನ್ನು ಆಗ ಕಂಡೆನು. ಅವಳ ಉತ್ತರ ಬಹು ಚುಟುಕಾಗಿದ್ದರೂ ಆ ಉತ್ತರದ ಹಿಂದೆ ಅಡಗಿದ್ದ ಭಾವನೆಗಳು ತುಂಬಾ ಇರಬೇಕೆಂದು ನಾನು ಊಹಿಸುತ್ತಿದ್ದೆನು. ಹೀಗೆ ಸ್ವಲ್ಪ ದೂರ ಮೌನವಾಗಿಯೇ ನಾವು ನಡೆಯುತ್ತ ಸಾಗುತ್ತಿದ್ದಾಗ ಅವಳಾಗಿಯೇ ಅಂದಳು – “ಮನೆಯಲ್ಲಿ ಹೊಸ ಬದಲಾವಣೆಯೇನೂ ಆಗಿರುವುದಿಲ್ಲ” ಅವಳ ಮಾತಿನ ಮರ್ಮವನ್ನು ನಾನು ಅರ್ಥಮಾಡಿದೆ, ಹಾಗಾಗಿ ಅವಳನ್ನು ಪ್ರಶ್ನಿಸಿದೆ – “ಆ ರಾತ್ರಿ ಅವನು ಎತ್ತಿದ ಪ್ರಸ್ತಾಪ ಪುನಃ ಬಂತೇ? ನಿನಗೆ ಬೇಸರವಾಗುವುದಿದ್ದರೆ ಹೇಳಬೇಡ. ನಾನು ಕೇಳುತ್ತಿರಲಿಲ್ಲ – ಆದರೆ, ನೀನು ನಿನ್ನ ತಂದೆಯ ಹಿತಕ್ಕಾಗಿ ಎಂಥ ತ್ಯಾಗವನ್ನಾದರೂ ಮಾಡುವೆಯೆಂದೇ ನನ್ನ ಅಂಜಿಕೆ.” “ಟ್ರಾಟೂಡ್, ನೀನು ಹೆದರಬೇಡ. ಸತ್ಯವೂ ನ್ಯಾಯವೂ ಎಂದಾದರೂ ಗೆದ್ದೇ ಗೆಲ್ಲುವವು. ಎಂಥ ಪ್ರಸಂಗ ಬಂದಾಗ್ಯೂ ನೀನು ಅಂಜುತ್ತಿರುವ ಕಾರ್ಯವನ್ನು ನಾನು ಮಾಡುವುದಿಲ್ಲವೆಂದು ಭರವಸೆ ಕೊಡುವೆನು. ಆ ವಿಷಯಕ್ಕೆ ನಾನೆಂದೂ ಬಗ್ಗುವವಳಲ್ಲ. ನಿನ್ನ ಸಹಾಯ ಅಗತ್ಯಬಿದ್ದಾಗ ದಾಕ್ಷಿಣ್ಯ ಬಿಟ್ಟು ಸಹಾಯ ಕೇಳುವೆನು” ಅಂದಳು ಏಗ್ನೆಸ್. ಹೀಗೆ ಮಾತಾಡುತ್ತಾ ನಾವು ಡಾ| ಸ್ಟ್ರಾಂಗರ ಮನೆಗೆ ತಲುಪಿದೆವು. ಏಗ್ನೆಸ್ಸಳು ಮಿಸೆಸ್ ಸ್ಟ್ರಾಂಗರ ಕೋಣೆ ಕಡೆಗೆ ಹೋದಳು. ನಾನೊಬ್ಬನೇ ನನ್ನ ಮಲಗುವ ಕೋಣೆ ಕಡೆಗೆ ಹೊರಟೆನು. ಹೀಗೆ ಹೋಗುವಾಗ ನಾನು ಡಾ| ಸ್ಟ್ರಾಂಗರ ಆಫೀಸಿನ ಬಾಗಿಲನ್ನು ದಾಟಿಕೊಂಡು ಹೋಗಬೇಕಾಗಿತ್ತು. ಆಗ ಅವರ ಆಫೀಸಿನಿಂದ ಬೆಳಕು ಬರುತ್ತಿದ್ದುದನ್ನು ಕಂಡು, ಆ ದಿನ ನಾನು ನನ್ನ ಕೆಲಸದ ಬಗ್ಗೆ ಹೋಗದೆ ಗೈರುಹಾಜರಾಗಿದ್ದುದಕ್ಕಾಗಿ ಕ್ಷಮೆ ಕೇಳೋಣವೆಂದು ಅವರ ಆಫೀಸಿಗೆ ಹೋದೆನು.
ಅವರ ಆಫೀಸಿನಲ್ಲಿ ಡಾಕ್ಟರ್ ಸ್ಟ್ರಾಂಗರು ತನ್ನ ಮುಖಕ್ಕೆ ಎರಡು ಕೈಗಳನ್ನು ಮುಚ್ಚಿಕೊಂಡು ಆರಾಮ ಕುರ್ಚಿಯಲ್ಲಿ ಕುಳಿತಿದ್ದರು. ಮಿ. ವಿಕ್ಫೀಲ್ಡರು ಪಕ್ಕದ ಮತ್ತೊಂದು ಕುರ್ಚಿಯಲ್ಲಿ ಕುಳಿತು ಜೋಲು ಮುಖದಿಂದ ಡಾ| ಸ್ಟ್ರಾಂಗರನ್ನು ನೋಡುತ್ತಿದ್ದರು. ಉರೆಯ ಒಂದು ಖಾಲಿ ಕುರ್ಚಿಯ ಬೆನ್ನನ್ನು ಹಿಡಿದು ನಿಂತು ಡಾಕ್ಟರ್ ಸ್ಟ್ರಾಂಗರನ್ನೇ ನೋಡುತ್ತಿದ್ದನು. ಅವರೊಳಗೆ ಗುಪ್ತವಾದುದೋ ಗಹನವಾದುದೋ ಏನೋ ಕೆಲವು ಮಾತುಗಳು ನಡೆಯುತ್ತಿದ್ದು, ಆಗ ತಾನೇ ಮಾತನ್ನು ನಿಲ್ಲಿಸಿದ್ದಂತೆ ತೋರಿತು. ಇದನ್ನು ಕಂಡು ನಾನು ಅಲ್ಲಿ ನಿಲ್ಲುವುದು ಮರ್ಯಾದೆಯಲ್ಲವೆಂದು ಹೊರಟೆನು. ಆದರೆ ಡಾ| ಸ್ಟ್ರಾಂಗರು ನನ್ನನ್ನು ನಿಲ್ಲಲು ಒತ್ತಾಯಿಸಿದರು. ಅವರ ದಾಕ್ಷಿಣ್ಯಕ್ಕಾಗಿ ನಾನು ಅಲ್ಲಿ ನಿಂತೆನು. ಉರೆಯ ನಮ್ಮೆಲ್ಲರನ್ನೂ ಒಂದಾವೃತ್ತಿ ನೋಡಿ –
“ಈ ವಿಷಯವು ಎಲ್ಲರಿಗೂ ದುಃಖಕರವಾದುದು. ಆದರೆ ನಾವು ಇಷ್ಟು ಮಾತಾಡಿರುವಾಗ ಉಳಿದ ಅಂಶವನ್ನು ಮರೆಮಾಚಿಡುವುದು ಧರ್ಮವಲ್ಲ. ಅಡಗಿಸಿಡುವುದರಿಂದ ಯಾರಿಗೂ ಸುಖವಿಲ್ಲ. ಈ ಸಂಗತಿಯು ಮಿ. ಕಾಪರ್ಫೀಲ್ಡರಿಗೂ ಗೊತ್ತಿದೆ” ಎಂದು ಅಂದನು.
“ಯಾವ ವಿಷಯ?” ಎಂದು ನಾನು ಈ ಸಂದರ್ಭದಲ್ಲಿ ಕೇಳಬೇಕಾಯಿತು.
“ಮೊನ್ನೆ ನಿಮ್ಮೊಡನೆ ಮಾತಾಡಿದ್ದು – ವಿವರಿಸುವುದು ಬೇಸರದ ಕೆಲಸವಾದರೂ ಹೇಳಬೇಕೆಂದು ಅಪೇಕ್ಷೆ ಪಟ್ಟರೆ ಹೇಳುವೆನು. ಮಿಸೆಸ್ ಸ್ಟ್ರಾಂಗರ ಮತ್ತು ಮಿ. ಜೇಕ್ ಮಾಲ್ಡನ್ನರವರನ್ನು ಕುರಿತು ಊರಿಗೂರೇ ಮಾತಾಡುತ್ತಿರುವ ವಿಷಯ ಎಂದು ವಿವರಿಸಿದ ಉರೆಯ.
“ಮೊನ್ನೆ ನೀನಾಗಿಯೇ ನನ್ನ ಹತ್ತಿರ ಏನೇನೋ ಹೇಳಿದೆ. ನಿನ್ನ ಬಾಯಿಯಿಂದ ಮೊನ್ನೆ ಕೇಳಿದ್ದೇ ಮೊದಲು ಕೇಳಿದ ವರ್ತಮಾನ, ನನಗೆ ಗೊತ್ತೂ ಅಷ್ಟೇ!” ಇದು ನನ್ನ ಉತ್ತರವಾಗಿತ್ತು.
“ನಿಜ, ನಿಮಗೆ ನಾನು ಸ್ಪಷ್ಟವಾಗಿ ತಿಳಿಸಿಲ್ಲ. ಆದರೆ ತಿಳಿವಳಿಕೆಯುಳ್ಳ ನೀವು ಅರ್ಥಮಾಡಿರಬೇಕೆಂದು ನಂಬಿದ್ದೇನೆ. ಈ ವಿಷಯವು ನಿಮಗೆ ಗೊತ್ತಿಲ್ಲದಿದ್ದರೂ ಚಿಂತೆಯಿಲ್ಲ. ಮಿ. ವಿಕ್ಫೀಲ್ಡರಿಗೆ ಈ ವಿಷಯ ಗೊತ್ತಿದೆಯಷ್ಟೇ – ಅಲ್ಲವೇ ಪಾರ್ಟ್ನರ್?” ಎಂದು ಉರೆಯನು ಬಹು ಸಲಿಗೆಯ ಮಾತುಗಳಿಂದ, ಅಡಗಿ ಗೋಚರಿಸುತ್ತಿದ್ದ ಅಧಿಕಾರವಾಣಿಯಿಂದ, ಮಿ. ವಿಕ್ಫೀಲ್ಡರನ್ನೇ ವಿಚಾರಿಸಿದನು.
“ಈ ಪ್ರಶ್ನೆಗೆ ಉತ್ತರಕೊಡುವು ಬಹು ಕಷ್ಟದ ಸಂಗತಿ. ಆದರೆ, ಉರೆಯ ಹೇಳುವ ಮಾತುಗಳು ಸ್ವಲ್ಪ ಮಟ್ಟಿಗೆ ಸತ್ಯವೇ ಹೌದು” ಎಂದು ಮಿ. ವಿಕ್ಫೀಲ್ಡರು ಹೇಳಿದರು.
“ಪಾರ್ಟ್ನರ್, ದಯಮಾಡಿ ಹೇಳಿ: ಜೇಕ್ ಮಾಲ್ಡನನ್ನನ್ನು ಇಂಡಿಯಕ್ಕೆ ಕಳುಹಿಸಲು ನಿಮಗೊಂದು ಗುಪ್ತ ಉದ್ದೇಶವಿರಲಿಲ್ಲವೇ? ಡಾಕ್ಟರರ ಮನೆಗೆ ನಿಮ್ಮ ಮಗಳು ಏಗ್ನೆಸ್ಸಳನ್ನು ಕಳುಹಿಸಲು ನೀವು ಹಿಂಜರಿಯುತ್ತಿರಲಿಲ್ಲವೇ? ತಿಳಿಸಿರಿ” ಅಂದನು ಉರೆಯ.
ಈ ಮಾತುಗಳನ್ನು ಕೇಳಿದಾಗ ಮಿ. ವಿಕ್ಫೀಲ್ಡರ ಸ್ಥಿತಿ ಬಹು ಕರುಣಾಜನಕವಾಗಿತ್ತು. ಪ್ರಾಯ ಹೋಗಿ, ಅನೇಕ ವಿಧದ ದುಃಖಗಳಿಗೊಳಗಾಗಿದ್ದ ಅವರು ಈಗ ತನ್ನ ಗುಮಾಸ್ತ ಉರೆಯನ ಪರಿಪೂರ್ಣ ಅಧಿಕಾರ ಬೆದರಿಕೆಯೊಳಗಿರುವಂತೆ ತೋರಿದರು. ಈ ವರೆಗೆ ಅವರನ್ನು ಇಂಥ ಸಲಿಗೆಯ ಮಾತುಗಳಿಂದ ಅಥವಾ ಅಧಿಕಾರವಾಣಿಯಿಂದ, ಮಾತಾಡಿಸಿದವರಿರಲಿಲ್ಲ. ಡಾ| ಸ್ಟ್ರಾಂಗರು ಅವರ ಬಾಲ್ಯದ ಸ್ನೇಹಿತರೇ ಆಗಿದ್ದರು. ಅಂಥ ಗೌರವಯುತ ಸ್ನೇಹಿತರಿಗೇ ಅಪಮಾನಕರವಾದ ಮಾತುಗಳನ್ನು ಇಂದು ಅವರು ಆಡಬೇಕಾದ ಪ್ರಸಂಗ ಉರೆಯನ ಬೆದರಿಕೆಯ ಕಾರಣವಾಗಿ ಅವರಿಗೆ ಬಂದೊದಗಿದೆ. ಅವರು ಈ ದುಃಖ, ಹಿಂಸೆಗಳನ್ನು ಸಹಿಸಲಾರದೆ, ಕಣ್ಣೀರು ಸುರಿಸದಿದ್ದರೂ, ಅಳುತ್ತಾ ಹೇಳಿದರು –
“ಡಾಕ್ಟರ್ ಸ್ಟ್ರಾಂಗರೇ ನಾವು ಬಾಲ್ಯದಿಂದಲೂ ಸ್ನೇಹಿತರು, ನಿಮ್ಮನ್ನು ಕುರಿತಾದ ನನ್ನ ಎಲ್ಲಾ ಕಾರ್ಯಗಳಲ್ಲೂ ಎಲ್ಲಾ ಊಹನೆಗಳಲ್ಲೂ ಮಾತಿನಲ್ಲೂ ನಿಮ್ಮ ಸುಖ, ನಿಮ್ಮ ಮಾನಮರ್ಯಾದೆ, ಕೀರ್ತಿಗಳ ರಕ್ಷಣೆಯೇ ನನ್ನ ಮುಖ್ಯ ಉದ್ದೇಶವನ್ನಾಗಿಟ್ಟುಕೊಂಡಿದ್ದೆನು. ಈ ಉದ್ದೇಶದ ಸಾಧನೆಗಾಗಿ ಇತರರಿಗೆ ತೋರುವಾಗ ನಿಮಗೆ ಅಪಮಾನಕರವೆಂದು ತೋರುವಂಥ ಕೆಲವು ಕಾರ್ಯಗಳನ್ನು ನಾನು ಮಾಡಿರಬಹುದು. ನಿಮ್ಮ ಪತ್ನಿಯ ಸಮೀಪದ ಬಂಧುವೂ ಬಾಲ್ಯದ ಸ್ನೇಹಿತನೂ ಆಗಿರುವ್ ಜೇಕ್ ಮಾಲ್ಡನ್ನನು ನಿಮ್ಮ ಪತ್ನಿಯ ಸಮೀಪ ಇರುವುದನ್ನು ನಾನು ಅಂತರಂಗದಲ್ಲೇ ವಿರೋಧಿಸುತ್ತಿದ್ದೆನು. ಅವನಿಗೆ ದೂರ ದೇಶದಲ್ಲಿ ವೃತ್ತಿಯನ್ನು ಕಲ್ಪಿಸಿಕೊಡುವುದರಲ್ಲೂ ನನ್ನ ಉದ್ದೇಶವು ಅವರಿಬ್ಬರು ದೂರದೂರ ಇರಬೇಕೆಂಬುದೇ ಆಗಿತ್ತು. ನನ್ನ ಅಭಿಪ್ರಾಯದಂತೆಯೇ ನಿಮ್ಮದೂ ಇರಬೇಕೆಂದೂ ನೀವು ನಿಮ್ಮ ಅಭಿಪ್ರಾಯವನ್ನು ಸ್ಪಷ್ಟವಾಗಿ ನನಗೆ ತಿಳಿಸಲು ಅಳುಕುತ್ತಿದ್ದೀರೆಂದೂ ನಾನು ಗ್ರಹಿಸಿಕೊಂಡಿದ್ದೆನು. ಅದಕ್ಕಿಂತ ಹೆಚ್ಚು ನಾನು ಏನೂ ಹೇಳಲಾರೆ.”
ಉರೆಯ ಇದೇ ವಿಷಯವನ್ನೆತ್ತಿಕೊಂಡು ತುಂಬಾ ಅಬದ್ಧವಾಗಿ ಮಾತಾಡಿದನು. ಮಿಸೆಸ್ ಸ್ಟ್ರಾಂಗಳು ಜೇಕ್ ಮಾಲ್ಡನ್ನನಲ್ಲಿ ಅನುರಕ್ತಳಾಗಿರುವಳೆಂಬುದೇ ಅವನ ಒಂದನೆ ಆರೋಪ. ಆದರೆ, ಈ ವಿಷಯದಲ್ಲಿ ಉರೆಯನಿಗೆ ಪ್ರವೇಶಕ್ಕೆ ಎಷ್ಟು ಎಡೆಯಿತ್ತೆಂಬುದು ಸಂಶಯದ ವಿಷಯ. ಮಿಸೆಸ್ ಸ್ಟ್ರಾಂಗಳ ಸಮೀಪದಲ್ಲಿ – ತಾನು ಪ್ರೀತಿಸುತ್ತಿದ್ದ, ಏಗ್ನೆಸ್ಸಳು ಒಬ್ಬಂಟಿಗಳಾಗಿ ಇರಬಾರದು ಎಂಬ ಒಂದು ಬಹು ಚಿಕ್ಕ ವಿಷಯವನ್ನು, ತಾನು ಮಿ. ವಿಕ್ಫೀಲ್ಡರ ಸರಿಸಮಾನ, ಸಹಭಾಗಿಯಾದ ವಕೀಲ, ಎಂಬ ದುರಹಂಕಾರದಿಂದ ದೊಡ್ಡದು ಮಾಡಿಕೊಂಡು, ಅವನಿಗೆ ನಮ್ಮೆಲ್ಲರ ಮೇಲಿದ್ದ ದ್ವೇಷದ ಸೇಡು ತೀರಿಸಿಕೊಳ್ಳಲೋಸ್ಕರ ಮಾತ್ರ ಅವನು ಹಾಗೆ ಮಾತಾಡಿದನೆಂದು ನಾನು ಊಹಿಸಿದೆನು. ಶ್ರೀಮಂತ-ಬಡವ, ಕುಲೀನ-ಹೀನ, ಎಂಬ ಸಾಮಾಜಿಕ ಪಕ್ಷದ್ವೇಷವೇ ಅವನ ಈ ತೆರನಾದ ಮಾತುಗಳಿಗೆ ಮೂಲವಾಗಿತ್ತು. ಪ್ರತಿಷ್ಟಿತಾ ಸಂಸಾರದ ಮಧ್ಯೆ ತಾನು – ಒಂದು ಕಾಲದಲ್ಲಿ ದೀನನೂ ದರಿದ್ರನೂ ಆಗಿದ್ದವನು, ಸ್ವಸಾಮರ್ಥ್ಯದಿಂದ ಅಭಿವೃದ್ಧಿ ಪಥದಲ್ಲಿ ಸಾಗುತ್ತಿರುವುದಾಗಿ ಗ್ರಹಿಸುತ್ತಿದ್ದ ಅವನ ದುರಹಂಕಾರವೇ ಈ ಮಾತಿಗೆ ಕಾರಣವಾಗಿತ್ತು.
ಡಾಕ್ಟರ್ ಸ್ಟ್ರಾಂಗರು ಉರೆಯನ ಮಾತುಗಳಿಂದ ತುಂಬಾ ದುಃಖಿತರಾದರು, ಉದ್ವಿಗ್ನರೂ ಆದರು. ಅವರ ಮೈ ನಡುಗುತ್ತಿತ್ತು. ಅವರ ಕಣ್ಣುಗಳಿಂದ ಒಂದೊಂದು ತೊಟ್ಟು ಕಣ್ಣೀರು ಬರುತ್ತಿತ್ತು. ಒಂದು ಕುರ್ಚಿಯನ್ನು ಹಿಡಿದುಕೊಂಡು ಬಹುವಾದ ಬಳಲಿಕೆಯಲ್ಲೂ ಇದ್ದವರಂತೆ ಮಾತಾಡಿದರು.
ಡಾಕ್ಟರ್ ಸ್ಟ್ರಾಂಗರು ಹೇಳಿದರು – “ನಾನೊಬ್ಬ ಹಗಲುಕನಸು ಕಾಣುವ ವೃದ್ದ. ನನ್ನ ಜೀವಮಾನವನ್ನೆಲ್ಲ ಈ ವಿಧದ ಜೀವನಕ್ರಮದಿಂದ ವಿದ್ಯಾರ್ಜನೆಯಲ್ಲಿ ಕಳೆಯುತ್ತಾ ಬಂದಿರುತ್ತೇನೆ. ನನಗಿಂತ ಎಷ್ಟೆಷ್ಟೋ ಚಿಕ್ಕ ಪ್ರಾಯದವಳನ್ನು ನಾನು ಮದುವೆಯಾಗುವಾಗ ಗೃಹಸ್ಥರೇ ನನ್ನಾಣೆಯಿಟ್ಟು ಹೇಳುತ್ತೇನೆ, ಕೇಳಿ – ಬಡವಿಯೂ ಎಳೆಪ್ರಾಯದವಳು ಸುಂದರಿಯೂ ಆಗಿರುವ ನನ್ನ ಪತ್ನಿಯು ಇತರ ಯಾರಾದರೊಬ್ಬರ ಕೈ ಹಿಡಿದು ಜೀವನದಲ್ಲಿ ಕಷ್ಟ ಅನುಭವಿಸುವ ಬದಲು, ದ್ರವ್ಯಾನುಕೂಲವೂ ಸ್ಥಾನಮಾನಗಳ ಅನುಕೂಲವೂ ಉಳ್ಳ ನನ್ನನ್ನು ಸೇರಿ ಸುಖವನ್ನೂ ನೆಮ್ಮದಿಯನ್ನೂ ಪಡೆಯಲಿ ಎಂಬುದೇ ನನ್ನ ಮುಖ್ಯ ಉದ್ದೇಶವಾಗಿತ್ತು. ಈ ಉದ್ದೇಶವೇ ನಾನು ಅವಳನ್ನು ಮದುವೆಯಾಗಲು ನನ್ನನ್ನು ಪ್ರೇರೇಪಿಸಿತು. ನನ್ನ ಅಂತರಂಗದಲ್ಲೇ ಆಗಿಂದಾಗ್ಗೆ ಕಂಡು ಬರುತ್ತಿದ್ದ ಮತ್ತೊಂದು ವಿಷಯವನ್ನು ಇದೇ ಮದುವೆಗೆ ಸಂಬಂಧಿಸಿರುವುದನ್ನು ತಿಳಿಸುವೆನು, ಕೇಳಿ. ನಾನು ಆಯುಸ್ಸು ತೀರಿಯೇ ಮೃತನಾದಾಗ್ಯೂ ಆ ಕಾಲದಲ್ಲೂ ನನ್ನ ಪತ್ನಿಗೆ ಪ್ರಾಯವೂ ಸೌಂದರ್ಯವೂ ಉಳಿದಿರುವುದು ನಿಜವಾಗಿರುವುದರಿಂದ, ಅವಳು ಆವರೆಗೆ ನನ್ನ ಜತೆಯಲ್ಲಿದ್ದು ಪಡೆಯುವ ಜೀವನ ಮಾರ್ಗದ ಅನುಭವಗಳಿಂದ ತನ್ನ ಮುಂದಿನ ಜೀವನದ ಸುಖಗಳು ಏನು, ಹೇಗೆ ಇರಬೇಕೆಂಬುದನ್ನು ಅವಳೇ ಸಾಧಿಸಿಕೊಳ್ಳಬಲ್ಲಳೆಂದೂ ನಂಬಿಕೊಂಡಿದ್ದೇನೆ. ಈ ಅಭಿಪ್ರಾಯಗಳೆಲ್ಲ ಏನೇ ಇದ್ದರೂ ನಾನಿಂದು ನನ್ನ ಕನಸುಗಳಿಂದ ಎಚ್ಚತ್ತಿರುತ್ತೇನೆ. ನನ್ನ ಪತ್ನಿಯನ್ನು ಯಾವ ಸಂದರ್ಭದಲ್ಲೂ ದೂರಲು ಕಿಂಚಿತ್ತಾದರೂ ಎಡೆಯಿಲ್ಲ. ಪ್ರಾಯ, ಬುದ್ಧಿ, ಅನುಭವವಿದ್ದ ನಾನು ಅಷ್ಟೊಂದು ಚಿಕ್ಕ ಪ್ರಾಯದವಳನ್ನು ಮದುವೆಯಾಗಿ, ಅವಳ ಸ್ವಾಭಾವಿಕವಾದ ಅಭಿರುಚಿಗಳನ್ನು ಕುಂಠಿತ ಮಾಡುತ್ತಿದ್ದುದು ನನ್ನ ತಪ್ಪಲ್ಲವೇ? ಅವಳ ಬಾಲ್ಯದ ಸ್ನೇಹಿತ ಜೇಕ್ ಮಾಲ್ಡನ್ನನ ಸಂಬಂಧ ಹೇಗಿರಬಹುದಾಗಿತ್ತೆಂದು ಊಹಿಸಿ ಚಿಂತೆಪಡುವುದೂ ಕೇವಲ ಸ್ವಾಭಾವಿಕ. ಆದ್ದರಿಂದ ಅವಳನ್ನು ಕುರಿತು ಯಾವ ಹೇಯ ಹೀನ ಭಾವನೆಗಳನ್ನಾಗಲೀ ಪ್ರಚಾರವನ್ನಾಗಲೀ ಯಾರೂ ಮಾಡಬಾರದೆಂದು ಕೇಳಿಕೊಳ್ಳುತ್ತೇನೆ. ಅವಳಲ್ಲಿ ನಾನು ಕೋಪಿಸಿಕೊಳ್ಳುವುದರ ಬದಲು ನಾನವಳ ಕ್ಷಮೆಯನ್ನು ಯಾಚಿಸುವುದೇ ನ್ಯಾಯ. ನನ್ನ ಈಗಿನ ಆರೋಗ್ಯ ಪರಿಸ್ಥಿತಿ ಮೊದಲಿದ್ದಷ್ಟು ಉತ್ತಮವಾಗಿಲ್ಲ. ಅವಳ ಹೆಸರು ಹಾಳಾಗದಂತೆ ಅವಳನ್ನು ಕಾಪಾಡುವುದಕ್ಕಾಗಿಯೂ ಉಳಿದಿರುವ ನನ್ನ ಆಯುಸ್ಸನ್ನು ಶಾಂತವಾಗಿ ಕಳೆಯುವುದಕ್ಕಾಗಿಯೂ ನಾವು ಜನ ಸಂದಣಿಯಿಂದ ದೂರದಲ್ಲಿರುವ ಪ್ರದೇಶದಲ್ಲಿ ವಾಸಮಾಡುವ ಆಲೋಚನೆಯಲ್ಲಿದ್ದೇವೆ. ದೇವರು ಇಷ್ಟಪಟ್ಟಿದ್ದಾದರೆ ಅವಳ ನವಜೀವನ ಸುಖಕ್ಕೆ ಅನುಕೂಲವಾಗುವಂತೆಯೇ ನಾನು ದೈವಾಧೀನನಾಗಲೂಬಹುದು. ನಿಮ್ಮ ಯಾರ ಮೇಲೂ ನನಗೆ ಕೋಪವಿಲ್ಲ. ಮಿ. ವಿಕ್ಫೀಲ್ಡರು ನನ್ನ ದುಃಖದಲ್ಲಿ ಭಾಗಿಯಾದುದರಿಂದ ನಮ್ಮ ಸ್ನೇಹದ ಕಟ್ಟನ್ನು ಮತ್ತಷ್ಟು ಬಿಗಿದಿರುವರು. ಈ ದುಃಖ ಪ್ರಸಂಗದಲ್ಲೂ ಇದೊಂದು ಸಂತೋಷವೇ ಸರಿ.”
ಡಾಕ್ಟರ್ ಸ್ಟ್ರಾಂಗರ ಈ ಅಂತಃಕರಣಪೂರ್ವಕವಾದ, ದುಃಖಪೂರಿತ ಮಾತುಗಳನ್ನು ಕೇಳಿ ನಾವು ಮಾತಾಡದಂತೆ ಮೂಕರೇ ಆಗಿಹೋಗಿದ್ದೆವು. ಉರೆಯ ನಿರೀಕ್ಷಿಸುತ್ತಿದ್ದಂಥ ಪರಿಣಾಮ ಇಂದಿನ ನಮ್ಮ ಮಾತುಗಳಿಂದ ಅಲ್ಲಿ ಆಗಲಿಲ್ಲವೆಂಬ ಅವನ ಅಸಮಾಧಾನ ಅವನ ಮುಖದಲ್ಲಿ ತೋರುತ್ತಿತ್ತು. ಈ ಮಾತುಗಳನಂತರ ಯಾರೂ ಏನೂ ಮಾತಾಡದೆ ಅವರವರು ಅವರವರ ಮನೆಕಡೆಗೆ ಹೊರಟೆವು. ನಾನೂ ಉರೆಯನೂ ಜತೆಯಲ್ಲೇ ಹೊರಟು ದಾರಿ ನಡೆಯುತಿದ್ದಾಗ ಉರೆಯ ನನ್ನ ಹತ್ತಿರ ಮಾತಾಡತೊಡಗಿದನು.
“ನಾನು ಗ್ರಹಿಸಿದಂತೆ ಸಂಗತಿಗಳು ಮುಂದುವರಿಯಲಿಲ್ಲ, ಮಿ. ಕಾಪರ್ಫೀಲ್ದ್. ಡಾ| ಸ್ಟ್ರಾಂಗರು ಅವರ ಪತ್ನಿಯು ದೋಷಗಳನ್ನು ಕಾಣುವ ಮಟ್ಟಿಗೆ ಸಂಪೂರ್ಣ ಅಂಧರೇ ಆಗಿಬಿಟ್ಟಿದ್ದಾರೆ. ಹೇಗಿದ್ದರೂ ಅವರ ಹೆಂಡತಿಯ ಗುಟ್ಟು ಬಯಲಿಗೆ ಬಿತ್ತಷ್ಟೆ!” ಅಂದನು ಉರೆಯ.
ತನ್ನ ದುಷ್ಟ ಪ್ರವೃತ್ತಿಗಳಲ್ಲಿ ಅವನು ನನ್ನನ್ನು ಅನಾವಶ್ಯಕವಾಗಿ ಎಳೆದುಕೊಳ್ಳುತ್ತಿದ್ದನೆಂದು ನನಗೆ ಮೊದಲೇ ಗೊತ್ತಾಗಿತ್ತು. ಡಾಕ್ಟರ್ ಸ್ಟ್ರಾಂಗರನ್ನು ಕುರಿತು ಅಪಮಾನಾಸ್ಪದವಾಗಿ ಅವನು ಆಡಿದ್ದ ಮಾತುಗಳು ನನಗೆ ತುಂಬಾ ವೇದನೆಯನ್ನುಂಟುಮಾಡಿದ್ದುವು. ನನಗೆ ಕೋಪ ಮೆಲ್ಲಗೆ ಏರತೊಡಗಿತ್ತು. ಉರೆಯನ ಈ ಮಾತುಗಳನ್ನು ಕೇಳಿದಾಗಲಂತೂ ನನ್ನ ಕೋಪ ಬಹುವಾಗಿ ಏರಿತ್ತು. ನಾನು ಅವನನ್ನು ಕುರಿತಾಗಿ – “ಮೂರ್ಖಾ, ನೀನಂತೂ ನಿನ್ನ ದುಷ್ಟ ಕಾರ್ಯಗಳನ್ನು ಕೈಕೊಳುತ್ತಿದ್ದೀಯಾ. ನನ್ನನ್ನೂ ಅವುಗಳಲ್ಲಿ ಸೇರಿಸಿಕೊಳ್ಳಲು ಹವಣಿಸುತ್ತಿದ್ದೀಯಾ ಅಲ್ಲವೇ?” ಎಂದನ್ನುತ್ತ ಅವನ ಉದ್ದವಾದ ಕೆನ್ನೆಗಳು ನನ್ನ ಕೈಯ್ಯನ್ನು ಆಕರ್ಷಿಸುತ್ತಿದ್ದುದನ್ನು ತಡೆಯಲಾರದೆ, ಅವನ ಕೆನ್ನೆಗೆ ಒಂದು ಬಲವಾದ ಪೆಟ್ಟನ್ನು ಕೊಟ್ಟುಬಿಟ್ಟೆನು. ನನ್ನ ನಾಲ್ಕೂ ಬೆರಳುಗಳ ಗುರುತು ಅವನ ಕೆನ್ನೆಯಲ್ಲಿ ಕಾಣಿಸಿತು. ಉರೆಯನು ಮಾತ್ರ ಏನೂ ಸಿಟ್ಟುಗೊಳ್ಳಲಿಲ್ಲ. ಅವನು ತನ್ನ ಕೈಯಿಂದ ಕೆನ್ನೆಯನ್ನು ಉಜ್ಜಿಕೊಳ್ಳುತ್ತಾ ಮಾತಾಡತೊಡಗಿದನು.
“ನಾನು ಏನೂ ಮಾಡದೆ ನೀನು ನನಗೆ ಹೊಡೆದುಬಿಟ್ಟೆ. ನೀನು ನನ್ನನ್ನು ಎಂದೂ ಪ್ರೀತಿಸಿದ್ದಿಲ್ಲ. ಅದರ ಬದಲು ಸದಾ ದ್ವೇಷಿಸುತ್ತಲೇ ಇದ್ದೆ. ಆದರೂ ನಿನ್ನ ತಪ್ಪಿಗಾಗಿ ನಾನು ನಿನ್ನನ್ನು ಕ್ಷಮಿಸುವೆನು. ಅಷ್ಟು ಮಾತ್ರವಲ್ಲ, ನಿನಗೆ ಎದುರು ನಿಲ್ಲದೆ ನಿನ್ನ ಅನುವ್ರತನಾಗಿ ನಡೆಯುವೆನು. ನಾನು ಹೀಗೇಕೆ ನಡೆಯುವೆನೆಂದು ನೀನು ಆಶ್ಚರ್ಯಪಡಬಹುದು. ಅದಕ್ಕೆ ಕಾರಣವಿದೆ, ನನ್ನ ಸ್ವಭಾವವೇ ಹಾಗೆ. ನಾನು ದೀನತೆಯಿಂದ ಮೇಲೆ ಬಂದವನು, ನಾನಾಗಿಯೇ ಉದ್ಧರಿಸಿಕೊಂಡವನು. ತಾಳ್ಮೆಯೇ ನನ್ನಂಥವರಿಗಿರುವ ಬದುಕಿನ ಮಾರ್ಗ. ಆದರೆ ಕಾಪರ್ಫೀಲ್ಡ್, ತಿಳಿದಿರು – ನಿನ್ನ ಇಂದಿನ ವರ್ತನೆಗೆ ತಕ್ಕ ಪ್ರತಿಕ್ರಿಯೆ ಇದ್ದೇ ಇದೆ” ಎಂದು ಉರೆಯ ಹೇಳಿದನು.
“ನಿನ್ನ ದುಷ್ಟ ಕಾರ್ಯಗಳ ಪ್ರತಿಕ್ರಿಯೆಯೇ ನಿನ್ನನ್ನು ನಾಶಮಾಡಲಿ” ಎಂದಷ್ಟು ಮಾತ್ರ ನಾನು ಹೇಳಿ, ನಾನು ನನ್ನ ಮಾರ್ಗದಲ್ಲಿ ಮುಂದುವರಿಸಿದೆ. ಉರೆಯನನ್ನು ನಾನು ಹೊಡೆದ ವರ್ತನೆ, ನನ್ನ ದೃಷ್ಟಿಯಲ್ಲೇ ನನ್ನನ್ನು ಹಗುರಮಾಡಿತು. ಅಲ್ಲದೆ ನ್ಯಾಯಾನ್ಯಾಯಗಳ ಪ್ರತಿಕ್ರಿಯೆಯನ್ನು ಕುರಿತಾಗಿ ನಾನು ಚಿಂತಿಸದಿದ್ದರೂ ಉರೆಯನ ದುಷ್ಟಚಟಗಳನ್ನೆಲ್ಲ ಗ್ರಹಿಸುತ್ತಾ ಹೋದ ಹಾಗೆ ನನಗೆ ಸ್ವಲ್ಪ ಹೆದರಿಕೆಯೂ ಆಯಿತು. ಅವನು ಕಾರ್ಯಜಾಣನಾಗಿದ್ದುದರಿಂದ ಮುಂದೆ ಯಾವುದೋ ಒಂದು ಭಯಂಕರವಾದ ದುಷ್ಕೃತ್ಯವನ್ನೆಸಗಲೋಸ್ಕರವೇ ಇಂದು ಈ ವಿಧದ ಕಠೋರ-ಶಾಂತತೆಯನ್ನು ತಾಳಿದ್ದಾನೆಂದೂ ನಾನು ನಿಶ್ಚೈಸಿಕೊಂಡೆನು. ಹಿಂದೆ ಉರೆಯನ ಮೇಲೆ ಅನೇಕ ಸಾರಿ ಸಿಟ್ಟು ಬಂದಿದ್ದರೂ ಆಗೆಲ್ಲ ತಾಳ್ಮೆಯಿಂದಿದ್ದ ನಾನು ಇಂದೇಕೆ ಈ ರೀತಿ ವರ್ತಿಸಿದೆ – ಕೈ ಮುಂದೆ ಮಾಡಿದೆ, ಎಂದು ನನ್ನನ್ನೇ ನಾನು ವಿಚಾರಿಸತೊಡಗಿದೆನು. ವಿಚಾರಿಸಿದ್ದಕ್ಕೆ ಕಾರಣವೂ ತಿಳಿಯಿತು. ಹಿಂದೆ ನಾನು ದುಡುಕಿ ನಡೆದರೆ ಏಗ್ನೆಸ್ಸಳಿಗೆ ತೊಂದರೆಯಾಗಬಹುದೆಂದು ಹೆದರುತ್ತಿದ್ದುದರಿಂದ ತಾಳ್ಮೆ ತಾನಾಗಿಯೇ ಸಿದ್ಧವಾಗುತ್ತಿತ್ತು. ಇಂದಾದರೆ – ತನ್ನ ತಂದೆಗಾಗಿ ತಾನು ಎಂಥ ತ್ಯಾಗವನ್ನಾದರೂ ಮಾಡಲು ಸಿದ್ಧವಿದ್ದರೂ ಆ ಒಂದು ವಿಷಯದಲ್ಲಿ ಅಂಥ ತ್ಯಾಗ ಅಸಾಧ್ಯವೆಂದು ಏಗ್ನೆಸ್ಸಳು ನನಗೆ ಇತ್ತಿದ್ದ ಭರವಸೆಯೇ ನನಗೆ – ಈ ರೀತಿ ಉರೆಯನನ್ನು ಹೊಡೆಯಲು ಧೈರ್ಯಕೊಟ್ಟಿತ್ತೆಂದು ತಿಳಿದೆನು.
ಆ ರಾತ್ರಿ ಸುಖವಾದ ನಿದ್ರೆ ಬರಲಿಲ್ಲ. ಮಿಸೆಸ್ ಸ್ಟ್ರಾಂಗಳು ಡಾಕ್ಟರರ ಹತ್ತಿರ ಕ್ಷಮಾಯಾಚನೆ ಮಾಡುತ್ತಿದ್ದಂತೆಯೂ ಉರೆಯನ ದುಷ್ಟ ಕಾರ್ಯಗಳಲ್ಲಿ ನಾನು ಬೆರೆತುಹೋಗಿದ್ದಂತೆಯೂ ಸ್ವಪ್ನಗಳನ್ನು ಕಂಡೆನು. ಈ ಎಲ್ಲಾ ವಿಷಯಗಳನ್ನೂ ನಾನು ಅತ್ತೆಗೆ ತಿಳಿಸಿದೆನು. ಅತ್ತೆಗೆ ಸಿಟ್ಟೂ ದುಃಖವೂ ಬಂತು. ಆದರೂ ಈ ವಿಷಯ ಬಹು ಗೋಪ್ಯವಾಗಿರತಕ್ಕದ್ದೆಂದು ನಿಶ್ಚಯ ಮಾಡಿಕೊಂಡೆವು. ಮಿ. ಡಿಕ್ಕರು ಎಂದಿನಂತೆಯೇ ತಮ್ಮ ಚಿಕ್ಕ ಮಿದುಳಿನಿಂದಾದಷ್ಟು ಸಹಾಯವನ್ನು ಡಾಕ್ಟರರ ಡಿಕ್ಷನರಿ ಕೆಲಸದಲ್ಲಿ ಒದಗಿಸುತ್ತಿದ್ದರು. ಡಾಕ್ಟರ್ ಈಗೀಗಲಂತೂ ಮಿ. ಡಿಕ್ಕರ ಹತ್ತಿರ ಮೊದಲಿಗಿಂತಲೂ ಹೆಚ್ಚಾಗಿಯೇ ಮಾತಾಡುತ್ತಿದ್ದರು. ಇದನ್ನು ಕಂಡು ಅತ್ತೆಗೆ ಆಗುತ್ತಿದ್ದ ಸಂತೋಷ ಅಷ್ಟಿಷ್ಟಲ್ಲ. ಮಿ. ಡಿಕ್ಕರ ಯೋಗ್ಯತೆ ಈ ಮೊದಲು ಅತ್ತೆಗೆ ಮಾತ್ರ ಗೊತ್ತಿದ್ದುದು ದಿನ ಹೋದಂತೆ ಡಾಕ್ಟರ್ ಸ್ಟ್ರಾಂಗರಂಥ ವಿದ್ಯಾಸಂಪನ್ನರಿಗೂ ಗೊತ್ತಾದುದೇ ಆವಳ ಸಂತೋಷಕ್ಕೆ ಕಾರಣ. ಮಿ. ಡಿಕ್ಕರು ಇಷ್ಟು ಮಾತ್ರವಲ್ಲ, ಈಗ ಜನರಿಗೆ ಗೊತ್ತಾಗಿರುವುದಕ್ಕಿಂತಲೂ ಹೆಚ್ಚು ಗೊತ್ತಾಗಬಲ್ಲ ಅದ್ಭುತ ಕಾರ್ಯವನ್ನೇ ಮಾಡಲಿರುವರೆಂದು ಹೇಳುತ್ತಾ ಅಂಥಾ ಕಾರ್ಯವನ್ನೂ ಮಿ. ಡಿಕ್ಕರಿಂದ ನಿರೀಕ್ಷಿಸುತ್ತಿದ್ದಳು.
ನಾನು ಡಾ| ಸ್ಟ್ರಾಂಗರ ಮನೆಯಲ್ಲಿ ಎಂದಿನಂತೆ ನನ್ನ ಕೆಲಸವನ್ನು ಮಾದುತ್ತಿದ್ದಾಗ ಟಪಾಲಿನವನು ಒಂದು ಪತ್ರವನ್ನು ತಂದು ಕೊಟ್ಟನು. ಅದು ಮಿ. ಮೈಕಾಬರರ ಪತ್ನಿಯದಾಗಿತ್ತು. ಪತ್ರವು ಹೀಗಿತ್ತು:
ಕೇಂಟರ್ಬರಿ, ಸೋಮವಾರ ಸಂಜೆ.
ಈ ಪತ್ರ ನನ್ನಿಂದ ಬರುವ ಸಂದರ್ಭವೂ ಪತ್ರದೊಳಗಣ ವಿಷಯವೂ ನಮ್ಮಿಬ್ಬರೊಳಗೆ ಮಾತ್ರ ಗುಟ್ಟಾಗಿರಬೇಕೇ ಹೊರತು ಇತರ ಯಾರಿಗೂ ತಿಳಿಯಬಾರದೆಂದು ನಾನು ಮೊದಲಾಗಿ ತಿಳಿಸುವಾಗಲಂತೂ ನಿಮಗೆ ಮತ್ತಷ್ಟು ಆಶ್ಚರ್ಯವಾಗಬಹುದು. ಮಿ. ಮೈಕಾಬರರಿಗೂ ನನಗೂ ಇರುವ ಪ್ರೇಮ ಎಷ್ಟೆಂಬುದು ನಿಮಗೆ ಗೊತ್ತಿದೆಯಷ್ಟೆ (ನಾನೆಂದಿಗೂ ಅವರಿಂದ ಅಗಲಿ ಇರಲಾರೆ!) ಆದರೆ ಇತ್ತೀಚೆಗೆ ಸ್ವಲ್ಪ ಸಮಯದಿಂದ ಅವರು ನನ್ನಲ್ಲೇ ವಿಶ್ವಾಸವಿಲ್ಲದವರಂತೆ ವರ್ತಿಸುತ್ತಿದ್ದಾರೆಂದು ಬರೆಯುವುದೇ ಬಹು ದುಃಖದ ಸಂಗತಿ. ಅವರು ಮೌನವಾಗಿರುತ್ತಾರೆ. ಅವರ ಕಾರ್ಯಗಳೆಲ್ಲ ಬಹು ರಹಸ್ಯತರದ್ದಾಗಿರಬೇಕೆಂದು ನಾನು ಊಹಿಸಬೇಕಾಗಿದೆ. ಹಗಲೆಲ್ಲ ಅವರು ಆಫೀಸು ಕೆಲಸದಲ್ಲೇ ಅಲ್ಲೇ ಇರುತ್ತಾರೆ. ರಾತ್ರಿ ಮನೆಗೆ ಬರುತ್ತಾರಾದರೂ ರಾತ್ರಿ ಊಟ ಮಾಡಿ ಮೂಕರಂತೆಯೇ ಕುಳಿತಿರುತ್ತಾರೆ. ಈಗ ಅವರು ಪೂರ್ವದ ಮಿ. ಮೈಕಾಬರರ ಛಾಯೆ ಮಾತ್ರ ಆಗಿರುತ್ತಾರೆ. ಅವರ ಸಂತೃಪ್ತಿ, ಹರ್ಷಯುತ ಸ್ವಭಾವವು ಇಂದು ದುಃಖನಿರಾಶಾಪೂರಿತವಾಗಿ ಉಳಿದಿದೆ. ಅವರ ಮಕ್ಕಳಿನ ಮೇಲಿನ ಪ್ರೇಮವೇ ಅವರಿಗೆ ಕಡಿಮೆಯಾಗಿದೆ. ಹಣದ ಸಂಕಟಗಳ ಅತ್ಯುಗ್ರ ಸ್ಥಿತಿಯಲ್ಲಿ ಅವರಿದ್ದಾಗ ಸಹ ಈಗ ಅವರಿದ್ದಂತೆ ಇರಲಿಲ್ಲ. ಕೇವಲ ಇಂದು ಪೆನ್ನಿ ಬೇಕೆಂದು ಕೇಳಿದರೂ ಅದನ್ನು ಕೊಡುವಾಗಲೂ ಅತ್ಯಂತ ಕ್ರೋಧಾವಿಷ್ಟರಾಗುತ್ತಾ ತನ್ನನ್ನು ತಾನೇ ನಾಶಪಡಿಸಿಕೊಂಡುಬಿಡುವರಾಗಿ ಹೇಳಿ ಹೆದರಿಸುತ್ತಾರೆ. ಈ ದುಃಖ ನಿವಾರಣೆಗೆ ತಕ್ಕಂಥ ಸಹಾಯವನ್ನು ನೀವು ದಯಮಾಡಿ ನಮಗೊದಗಿಸಿ, ಈ ವರೆಗೆ ನೀವು ನಮಗೆ ಮಾಡುತ್ತ ಬಂದಿರುವ ಉಪಕಾರಗಳ ಸಂಖ್ಯೆಗೆ ಮತ್ತೊಂದನ್ನು ಸೇರಿಸುವ ಪುಣ್ಯ ನಿಮಗಿರಲಿ.
ದುಃಖಿತೆಯೂ ಆರ್ತಳೂ ಆದ
ಎಮ್ಮ ಮೈಕಾಬರ್
ಸಂಸಾರದ ಅನುಭವ ತುಂಬಾ ಇದ್ದ ಮಿಸೆಸ್ ಮೈಕಾಬರಳಿಗೆ ಬುದ್ಧಿ ಹೇಳಲು ಅಥವಾ ಅವರಿಬ್ಬರ ಮಧ್ಯೆ ಪ್ರವೇಶಿಸಿ ವ್ಯವಸ್ಥೆಗಳನ್ನು ಸರಿಪಡಿಸಲು ನನಗೆ ಶಕ್ತಿ ಸಾಲದೆಂದು ಗೊತ್ತಿತ್ತು. ಹಾಗಾಗಿ, ಅವರು ಅವರ ಪತಿಯನ್ನು ಅನುಸರಿಸಿ, ಪ್ರೇಮಪುರಸ್ಸರವಾಗಿ ಮಾತಾಡಿ, ಬಂದಿರುವ ಪರಿಸ್ಥಿತಿಯನ್ನು ಸುಧಾರಿಸಿಕೊಳ್ಳಬೇಕೆಂದು ಮಾತ್ರ ಸಲಹೆಯಿತ್ತು ಅವರ ಪತ್ರಕ್ಕೆ ಉತ್ತರವನ್ನು ಕಳುಹಿಸಿದೆನು. ಅಂತೂ ನಾನು ಈ ಹೊಸ ವಿಷಯವನ್ನು ತಿಳಿದು ತುಂಬಾ ಯೋಚನಾಪರನಾದೆನು.
(ಮುಂದುವರಿಯಲಿದೆ)