ಅಧ್ಯಾಯ ಮೂವತ್ತೊಂಬತ್ತು
[ಡೇವಿಡ್ ಕಾಪರ್ಫೀಲ್ಡ್ನ ಜೀವನ ವೃತ್ತಾಂತ ಮತ್ತು ಅನುಭವಗಳು, ಕಾದಂಬರಿ. ಮೂಲ ಇಂಗ್ಲಿಷಿನಲ್ಲಿ ಚಾರ್ಲ್ಸ್ ಡಿಕನ್ಸ್, ಕನ್ನಡ ಭಾವಾನುವಾದ ಎ.ಪಿ. ಸುಬ್ಬಯ್ಯ]
ವಿ-ಧಾರಾವಾಹಿಯ ನಲ್ವತ್ತೊಂದನೇ ಕಂತು
ನಾನು ಈ ರೀತಿ ಸದಾ ಆಲೋಚನಾಪರನಾಗಿರುವುದನ್ನು ಕಂಡು ಅತ್ತೆಗೆ ತುಂಬಾ ಅಸಮಾಧಾನವಾಗತೊಡಗಿತ್ತು. ಅವಳು ಒಂದು ದಿನ, ಹಠಾತ್ತಾಗಿ, ಏನೋ ಒಂದು ಮಹತ್ವದ ಕೆಲಸ ಮರೆತುಹೋಗಿದ್ದುದನ್ನು ಜ್ಞಾಪಿಸಿಕೊಂಡಂತೆ, ನನ್ನನ್ನು ಕರೆದು, ನಾನು ಡೋವರಿಗೆ ಹೋಗಿ ಕೆಲವು ಕೆಲಸಗಳನ್ನು ಮಾಡಿ ಬರಬೇಕೆಂದು ಹೇಳಿದಳು. ಡೋವರಿನಲ್ಲಿ ಅವಳ ಮನೆಯನ್ನು ಬಾಡಿಗೆಗೆ ವಹಿಸಿಕೊಂಡಿದ್ದ ಒಕ್ಕಲಿನಿಂದ ಅವಧಿಯನ್ನು ಇನ್ನೂ ಮುಂದುವರಿಸಿದ ಒಂದು ಬಾಡಿಗೆ ಚೀಟನ್ನು ಬರೆಸಿಕೊಂಡು ಬರಬೇಕೆಂಬುದೂ ಜೇನೆಟ್ಟಳನ್ನು ಕುರಿತಾದ ಕೆಲವು ಕೆಲಸಗಳೂ ಅವುಗಳಲ್ಲಿ ಮುಖ್ಯವಾದವುಗಳಾಗಿದ್ದುವು. ಮೇಲಿಂದ ಮೇಲೆ ನೋಡಿದರೆ ಈ ಕೆಲಸಗಳು ಮುಖ್ಯವೆಂದು ತೋರಿಬರಬಹುದಾದರೂ ಅತ್ತೆಯ ಉದ್ದೇಶವೇ ಬೇರೆ ಇತ್ತೆಂದು ನಾನು ಊಹಿಸಿದೆನು. ಸ್ಥಳ ಮತ್ತು ಕೆಲಸಗಳನ್ನು ಸ್ವಲ್ಪ ಬದಲಿಸುವುದರಿಂದ ನನಗೆ ಮನಸ್ಸಿನ ಸ್ವಲ್ಪ ಶಾಂತಿ ಉಂಟಾಗುವುದೆಂದೇ ಅತ್ತೆ ಈ ಏರ್ಪಾಡನ್ನು ಮಾಡಿರಬೇಕು.
ಡೋವರಿಗೆ ಹೋಗುವುದರಲ್ಲಿ ನನಗೂ ತುಂಬಾ ಸಂತೋಷವಿತ್ತು. ಅತ್ತೆಯ ಕೆಲಸವನ್ನು ನಾನು ಹೇಗೂ ಮಾಡತಕ್ಕವನೇ ಇದ್ದುದರ ಜತೆಗೆ ಕೇಂಟರ್ಬರಿಯಲ್ಲಿದ್ದ ಏಗ್ನೆಸ್ಸಳನ್ನು ನಾನು ದಾರಿಯಲ್ಲಿ ನೋಡಿ ಬರುವ ಸಂದರ್ಭವೂ ನನಗೆ ದೊರಕಿತು. ಮಿ. ಸ್ಪೆನ್ಲೋರವರ ನಿಧನದಿಂದ ಅವರ ಜತೆಕೂಟವು ಹೀನಸ್ಥಿತಿಗೆ ಬಂದಿತು. ಇದೇ ಸಮಯದಲ್ಲಿ ಒಳವಕೀಲರ – ದಲ್ಲಾಳಿ ವಕೀಲರ, ಸಂಖ್ಯೆ ಏರುತ್ತಾ ಬಂದು ವಕೀಲರ ಸಂಪಾದನೆ ಕಡಿಮೆಯಾಗುತ್ತಾ ದಲ್ಲಾಳಿಗಳ ಸಂಪಾದನೆ ಹೆಚ್ಚುತ್ತಾ ಬಂದಿತ್ತು. ಹೀಗಾಗಿ, ನನಗೆ ಬೇಕಾದಷ್ಟು ಸಮಯದ ಅವಕಾಶವಿದ್ದುದರಿಂದ, ಡಾ| ಸ್ಟ್ರಾಂಗರಿಂದ ಮೂರು ದಿನದ ರಜೆ ಪಡೆದುಕೊಂಡು ನಾನು ಡೋವರಿಗೆ ಹೋದೆನು.
ಡೋವರಿನಲ್ಲಿ ಮೊದಲು ಒಕ್ಕಲಿನ ಬಾಡಿಗೆ ಚೀಟನ್ನು ಬರೆಸಿಕೊಂಡೆನು. ಅನಂತರ ಜೇನೆಟ್ಟಳೊಡನೆ ವಿಚಾರಿಸಿ ಅವಳ ಕೆಲವು ಚರಿತ್ರೆಗಳನ್ನು ತಿಳಿದು, ನನ್ನ ಕಡೆಯ ಕೆಲಸವನ್ನು ಮಾಡಿ ಪೂರೈಸಿದೆನು. ಜೇನೆಟ್ಟಳು ಒಬ್ಬ ನಾವಿಕನನ್ನು ಮದುವೆಯಾಗುವ ಆಲೋಚನೆಯಲ್ಲಿದ್ದಳು. ಆದರೆ ಆ ನಾವಿಕ ಸಾಕಷ್ಟು ಯೋಗ್ಯನಲ್ಲವೆಂಬುದು ವಿಚಾರಣೆಯಿಂದ ಖಚಿತವಾಯಿತು. ಈ ಎಲ್ಲ ವಿಷಯವನ್ನು ಜೇನೆಟ್ಟಳೊಡನೆ ಮಾತಾಡಿ, ಆ ನಾವಿಕನನ್ನು ಜೇನೆಟ್ಟಳು ಮದುವೆಯಾಗದಂತೆ ಮಾಡಿದೆ. ಜೇನೆಟ್ಟಳೂ ಸಂದರ್ಭಗಳನ್ನು ನ್ಯಾಯವಾಗಿ ಅರ್ಥಮಾಡಿ ನಾವಿಕನನ್ನು ತಿರಸ್ಕರಿಸಿದಳು. ಅನಂತರ ಜೇನೆಟ್ಟಳು ಡಾ| ಸ್ಟ್ರಾಂಗರ ಮನೆಗೆಲಸಕ್ಕೆ – ನನ್ನ ಸಲಹೆ, ಶಿಫಾರ್ಸು ಪ್ರಕಾರ ಸೇರಿದಳು. ಹೆಂಗುಸರು ಮದುವೆಯಾಗದಿರುವುದೇ ಲೇಸೆಂಬ ಅತ್ತೆಯ ಅಭಿಪ್ರಾಯವನ್ನು ಅಂಗೀಕರಿಸಿ ಜೇನೆಟ್ಟಳು ತನ್ನ ಮದುವೆಯನ್ನು ನಿಲ್ಲಿಸಿದ್ದೆಂದು ಅತ್ತೆ ಗ್ರಹಿಸಿ ಸಂತೋಷಪಟ್ಟಳು.
ಡೋವರಿನಿಂದ ಕೇಂಟರ್ಬರಿಗೆ ನಾನು ನಡೆದೇ ಹೋದೆನು. ಮಿ.ವಿಕ್ಫೀಲ್ಡರ ಮನೆಗೆ ಹೋಗುವಾಗ ಅವರ ಆಫೀಸ್ ಬಾಗಿಲು ತೆರೆದಿತ್ತು. ಹಿಂದೆ ಉರೆಯಾಹೀಪನು ಗುಮಾಸ್ತನಾಗಿ ಕುಳಿತಿದ್ದ ಸ್ಥಳದಲ್ಲಿ ಕಪ್ಪು ಕೋಟನ್ನು ಧರಿಸಿ, ಕನ್ನಡಕವನ್ನಿಟ್ಟುಕೊಂಡು ಜಡ್ಜನೊಬ್ಬನು ತನ್ನ ಗದ್ದುಗೆಯಲ್ಲಿ ಕುಳಿತಿರುವ ಠೀವಿಯಲ್ಲಿ, ಮಿ. ಮೈಕಾಬರರು ಕುಳಿತು ಏನೋ ಬರೆಯುತ್ತಿದ್ದರು.
ನನ್ನನ್ನು ಕಂಡ ಕೂಡಲೇ ಅವರು ಬಹು ಸಂತೋಷಪಟ್ಟರು. ಉರೆಯನ ಪರಿಚಯವನ್ನು ನನಗೆ ಮಾಡಿಕೊಡುವುದಾಗಿ ತಿಳಿಸಿದರು. ಉರೆಯನ ಪರಿಚಯವು ನನಗೆ ಮೊದಲೇ ಇದೆಯೆಂದು ಹೇಳಿ, ಅವರ ಸಂಸಾರದ ಯೋಗಕ್ಷೇಮವನ್ನೂ ಈ ಹೊಸ ವೃತ್ತಿಯಲ್ಲಿನ ಅವರ ಅನುಭವ, ಅಭಿಪ್ರಾಯಗಳನ್ನೂ ವಿಚಾರಿಸಿದೆನು. ಆದರೆ ನನ್ನ ವಿಚಾರಣೆಯಿಂದ ಅವರು ಸ್ವಲ್ಪ ಗಾಬರಿಗೊಂಡಿದ್ದಂತೆ ತೋರಿದರು. ಉರೆಯನ ಪರಿಚಯವು ನನಗೆ ಮೊದಲೇ ಇದ್ದದ್ದೂ ಅವರ ವೃತ್ತಿಯ ಮರ್ಮವನ್ನು ವಿಚಾರಿಸಿದ್ದೂ ಅವರನ್ನು ಗಾಬರಿಗೊಳಿಸಿರಬೇಕೆಂದು ಊಹಿಸಿದೆನು. ಸ್ವಲ್ಪ ಗಾಬರಿಯಿಂದಲೇ ಅವರು ಉತ್ತರ ಕೊಟ್ಟರು. “ಮಿ. ಕಾಪರ್ಫೀಲ್ಡ್, ಕೆಲಸವೇನೋ ಚೆನ್ನಾಗಿಯೇ ಇದೆ. ಆದರೆ ಮನಸ್ಸಿನ ವಿಹಾರಕ್ಕೆ ಈ ವೃತಿಯಲ್ಲಿ ಎಡೆಯಿಲ್ಲ. ಕಾರ್ಯರಂಗಕ್ಕೆ ಇಳಿದು, ಅತಿ ಚಿಕ್ಕ ವಿಷಯಗಳಿಗೆ ಸಹ ಗಮನವಿಟ್ಟು ಶ್ರಮಪಡಬೇಕಾದ ಶ್ರಮ ಜೀವನದ ಕೆಲಸವಿದು. ಈ ಕೆಲಸದಲ್ಲಿ ಯಾರಿಗೂ ನಮ್ಮ ಮನಮೆಚ್ಚುವಂತೆ, ಸೊಗಸಾಗಿ, ದೀರ್ಘವಾಗಿ ಪತ್ರ ಬರೆಯಲನುಕೂಲವಿಲ್ಲ. ಅದರ ಬದಲು ಪತ್ರಗಳನ್ನು ಕಾನೂನು ಬದ್ಧವಾಗಿಯೂ ಶಬ್ದಗಳನ್ನೂ ಅಭಿಪ್ರಾಯಗಳನ್ನೂ ತೂಕಮಾಡಿ, ಅಗತ್ಯವಿದ್ದಂತೆ ಕತ್ತರಿಸಿ, ಚುಟುಕಾಗಿ, ಗೂಢವಾಗಿ, ಮಾತ್ರ ಬರೆಯಬೇಕು. ನಮ್ಮಂಥಾ ಸಾಹಿತ್ಯ, ಕಲೆ ಮೊದಲಾದುವುಗಳ ಪ್ರೇಮಿಗಳಿಗೆ ಈ ವೃತ್ತಿಯು ತಕ್ಕದಾದದ್ದಲ್ಲ” ಅಂದರು ಮಿ. ಮೈಕಾಬರರು.
ಅನಂತರ ತಮ್ಮ ಸಂಸಾರದ ಕೆಲವು ವಿಷಯಗಳನ್ನು ಪ್ರಸ್ತಾಪಿಸಿದರು. ಉರೆಯನು ತನ್ನ ತಾಯಿಯ ಸಮೇತನಾಗಿ ಮಿ. ವಿಕ್ಫೀಲ್ಡರ ಮನೆಗೆ ಬಂದು ನೆಲಸಿದನಂತರ, ಖಾಲಿಬಿದ್ದ ಉರೆಯನ ಮನೆಗೆ ಮಿ. ಮೈಕಾಬರರು ಸಂಸಾರ ಸಮೇತರಾಗಿ ಹೋಗಿ ನೆಲೆಸಿರುವರಾಗಿ ತಿಳಿಸಿದರು. ನಾನು ಅವರ ಮನೆಗೆ ಹೋಗಿ ಅವರ ಪತ್ನಿಯವರೊಡನೆ ಮಾತಾಡಿ ಹೋಗಬೇಕೆಂದೂ ನನ್ನನ್ನು ಕೇಳಿಕೊಂಡರು. ಅವರ ಈ ಎಲ್ಲಾ ಮಾತುಗಳಲ್ಲೂ ಮೊದಲಿನ ಸರಳತೆಯಿರಲಿಲ್ಲ – ಮಾತುಗಳನ್ನು ಬಹು ಎಚ್ಚರದಿಂದ ಆಡುತ್ತಿದ್ದರು. ಒಂದು ಹೊಸ ಶಿಸ್ತನ್ನು ಅಭ್ಯಾಸ ಮಾಡುತ್ತಿದ್ದವರಂತೆ ತೋರುತ್ತಿದ್ದರು. ಅವರಲ್ಲು ಉಂಟಾಗಿದ್ದ ಬದಲಾವಣೆಯನ್ನು ನಾನು ಕಂಡಿರಬೇಕೆಂದು ತಿಳಿದೂ ನಾಚಿಕೆಪಡುತ್ತಿದ್ದಂತೆ ತೋರುತ್ತಿದ್ದರು. ಅವರ ವೃತ್ತಿಯ ಪ್ರಧಾನ ಲಕ್ಷಣ ಗೋಪ್ಯತೆಯೆಂದು ತಿಳಿಸುತ್ತಾ ಉರೆಯ ಅವನ ವೃತ್ತಿಯಲ್ಲಿ ತುಂಬಾ ಬುದ್ಧಿವಂತನೂ ನುರಿತವನೂ ಎಂದು ಹೊಗಳಿದರು. ಉರೆಯ ಅವರಿಗೆ ಸಂಬಳವನ್ನು ಪ್ರತಿ ತಿಂಗಳಲ್ಲೂ ತಪ್ಪದೆ ಕೊಡುತ್ತಿದ್ದನು. ಮಾತ್ರವಲ್ಲದೆ, ಅಗತ್ಯ ಬಿದ್ದಾಗ ಸಂಬಳವನ್ನು ಮುಂದಾಗಿಯೇ ಕೊಡುತ್ತಿದ್ದನು. ಈ ವಿಷಯಗಳನ್ನೆಲ್ಲಾ ಹೇಳುತ್ತಾ ಅವರು ಮಿ. ವಿಕ್ಫೀಲ್ಡರನ್ನು ಕುರಿತೂ ತಮ್ಮ ಅಭಿಪ್ರಾಯವನ್ನು ಪ್ರಸ್ತಾಪಿಸಿದರು.
“ಮಿ. ವಿಕ್ಫೀಲ್ಡರು ಬಹು ಘನವಂತರು ನಿಜ. ಆದರೆ, ಕೇವಲ ಸಂಪ್ರದಾಯವಾದಿಗಳು. ಹೊಸ ಪರಿಸ್ಥಿತಿಗೆ ತಕ್ಕಂತೆ ತಮ್ಮ ಕ್ರಮ, ಶಿಸ್ತುಗಳನ್ನು ಬದಲಾಯಿಸಿಕೊಳ್ಳಲು ಅಸಮರ್ಥರು” ಅಂದರು ಮಿ. ಮೈಕಾಬರರು. “ಉರೆಯನೇ ಅವರನ್ನು ಹಾಗೆ ಮಾಡಿದ್ದಿರಬೇಕು” ಎಂದು ನಾನಂದೆನು. ನನ್ನ ಮಾತನ್ನು ಕೇಳಿ ಅವರು ಸ್ವಲ್ಪ ಗಾಬರಿಗೊಂಡಂತೆ ತೋರಿದರು. ಏನು ಉತ್ತರಕೊಡುವುದೆಂದು ಗ್ರಹಿಸುತ್ತಿರುವವರಂತೆ ಸ್ವಲ್ಪ ಹೊತ್ತು ಸುಮ್ಮನಿದ್ದು, ಕೊನೆಗೆ – “ಮಿ. ಕಾಪರ್ಫೀಲ್ಡ್, ನನ್ನ ಒಂದು ಮಾತನ್ನು ದಯಮಾಡಿ ಕೇಳಬೇಕು. ನಾನು ಈ ಆಫೀಸಿನಲ್ಲಿ ಒಬ್ಬ ಜವಾಬ್ದಾರಿಯಿರುವ ಅಧಿಕಾರಿಯಾಗಿದ್ದೇನೆ. ನಾನು ಮೊದಲೇ ಅಂದಿರುವಂತೆ ಇಲ್ಲಿ ಗೋಪ್ಯತೆ ಬಹು ಮುಖ್ಯ. ಮನಸ್ಸಿನಲ್ಲಿ ಇದ್ದುದನ್ನು ಬಿಚ್ಚಿ ಮಾತಾಡಲು ಅನುಕೂಲವಿಲ್ಲ. ಬಹು ಬುದ್ಧಿವಂತಳಾಗಿರುವ ನನ್ನ ಪತ್ನಿಯೊಡನೆ ಸಹಾ ನಾನು ಹೇಳದಿರುವಷ್ಟರ ಗುಟ್ಟಿನ ಸಂಗತಿಗಳು ಇಲ್ಲಿಗೆ ಬರುತ್ತವೆ. ಈ ಮಾತುಗಳನ್ನಾಡಿದೆನೆಂದು ದಯಮಾಡಿ ಬೇಸರಿಸಬೇಡಿ. ನಿಮ್ಮನ್ನು ಅಪಮಾನಗೊಳಿಸಲು ಈ ರೀತಿ ನಾನು ಮಾತಾಡುತ್ತಿರುವುದಲ್ಲ” ಎಂದು ಹೇಳಿದರು.
ಮಿ. ಮೈಕಾಬರರು ಯಾವುದೋ ಒಂದು ನಿರ್ಬಂಧದಲ್ಲಿದ್ದಾರೆಂದು ನಾನು ಊಹಿಸಿದೆನು. ಅವರ ಮಾತು, ಅಭಿಪ್ರಾಯಗಳನ್ನು ಸಮರ್ಥಿಸಿಯೇ ನಾನು ಮಾತನಾಡಿ, ಅನಂತರ ಏಗ್ನೆಸ್ಸಳನ್ನು ನೋಡಲು ಮನೆಯ ಒಳಗೆ ಹೋದೆನು. ಏಗ್ನೆಸ್ಸಳು ಒಂದು ಮೇಜದ ಎದುರು ಕುಳಿತು ಏನೋ ಬರೆಯುತ್ತಿದ್ದಳು. ನನ್ನನ್ನು ಕಂಡು ಸಂತೋಷಪಟ್ಟಳು. ಅವಳು ಹಿಂದೆ ತನ್ನದಾಗಿ ಉಪಯೋಗಿಸುತ್ತಿದ್ದ ಕೋಣೆಯಲ್ಲೇ ಈಗ ಕುಳಿತಿದ್ದಳು. ನಾನು ಅವಳ ಸಮೀಪಕ್ಕೆ ಹೋಗಿ ಮೊದಲು ಕುಳಿತಿರುತ್ತಿದ್ದಂತೆಯೇ ಅವಳ ಸಮೀಪದಲ್ಲೇ ಕುಳಿತು ಮಾತನಾಡತೊಡಗಿದೆನು. ಅನೇಕ ವಿಷಯಗಳನ್ನು ಪೂರ್ವದ ಸ್ನೇಹ ಸಲಿಗೆಗಳಿಂದಲೇ ಮಾತಾಡಿದೆವು. ಹೀಗೆ ಮಾತಾಡುತ್ತಾ ನಾನಂದೆ – “ಏಗ್ನೆಸ್, ನಾನು ನಿನ್ನ ಸಮೀಪಕ್ಕೆ ಬಂದಾಗ ನನ್ನ ಮನಸ್ಸಿನ ಪರಿಸ್ಥಿತಿಯೇ ಪರಿವರ್ತನಗೊಳ್ಳುತ್ತಿದೆ. ಆ ಪರಿವರ್ತನೆಯೂ ಉತ್ತಮತರದ್ದು, ಉಲ್ಲಾಸ ಉತ್ಸಾಹಪೂರಿತವಾದುದು. ನಿನ್ನ ಸಮೀಪದಲ್ಲಿ ಮಾತಾಡುತ್ತಿರುವಾಗಲೆಲ್ಲ ನನ್ನ ಮನಸ್ಸು ಪರಿಪೂರ್ಣ ಶಕ್ತಿಯುತವೂ ಉತ್ಸಾಹಪೂರಿತವೂ ಆಗಿದ್ದು, ನಿನ್ನಿಂದ ದೂರ ಸರಿದ ಹಾಗೆಲ್ಲ ಅದು ಅಪೂರ್ಣವೂ ನಿಶ್ಶಕ್ತವೂ ಆಗುತ್ತದೆ. ನಾನು ಹಿಂದೆ ನಿನ್ನ ಸಮೀಪದಲ್ಲಿ ಇರುತ್ತಿದ್ದಾಗಲೆಲ್ಲ ನಾನು ಆಲೋಚಿಸಿ ನಿರ್ಧರಿಸಬೇಕಾದುದನ್ನೆಲ್ಲ ನೀನೇ ಆಲೋಚಿಸಿ ನಿರ್ಧರಿಸಿ ಬಿಡುತ್ತಿದ್ದೆ. ನನ್ನ ಮನಸ್ಸಿನ ಭಾರವನ್ನು ಹಗುರಪಡಿಸಿಬಿಡುತ್ತಿದ್ದೆ. ಈಗ ನನ್ನ ದುಃಖಗಳನ್ನೆಲ್ಲ ನಿನ್ನ ಸಮೀಪಕ್ಕೆ ಹೊತ್ತು ತಂದಿರುತ್ತೇನೆ” ಅಂದೆನು.
“ಕಾಪರ್ಫೀಲ್ಡ್, ನನ್ನ ಗುಣ ಹಾಗಿರಲಿ. ನನ್ನ ಬಹು ಸ್ವಲ್ಪ ಗುಣವನ್ನಾದರೂ ಮಹತ್ವದ್ದೆಂದೇ ಗ್ರಹಿಸಿ ಸಂತೋಷಿಸುವುದೇ ನಿನ್ನದೊಂದು ವಿಶೇಷ ಗುಣ. ನನ್ನಲ್ಲಿರುವ ಮಹತ್ವ ಏನೆಂಬುದನ್ನು ಬೇಕಾದರೆ ಮತ್ತೆ ನೋಡೋಣ. ನಿನ್ನ ಕಷ್ಟಗಳೂ ದುಃಖಗಳೂ ಏನೆಂಬುದನ್ನು ಮೊದಲು ತಿಳಿಸು” ಅಂದಳು ಏಗ್ನೆಸ್. “ನಾನು ನಿನ್ನನ್ನು ಮುಖಸ್ತುತಿ ಮಾಡುತ್ತಿಲ್ಲ, ಏಗ್ನೆಸ್. ಆ ಹೊತ್ತು ನೀನು ನಮ್ಮ ಮನೆಗೆ ಬರುವ ಮೊದಲು ನನ್ನ ಮನಸ್ಸಿನಲ್ಲಿ ತರ್ಕದಿಂದ ಗೊತ್ತು ಹಚ್ಚಲಾಗದಿದ್ದ – ಆದರೂ ನಿಜವಾಗಿಯೂ ಇದ್ದ, ಹೆದರಿಕೆಗಳು ನೀನು ಬಂದೊಡನೆ ಮಾಯವಾದುವು. ಈ ಮೊದಲು, ಏಗ್ನೆಸ್, ನನ್ನ ಮನಸ್ಸನ್ನೇ ನಾನು ಅರ್ಥಮಾಡಲಾರದಂಥ ಸ್ಥಿತಿಯಲ್ಲಿದ್ದೆ. ಆದರೆ, ಈಗ ಇಲ್ಲಿಗೆ ಬರುವ ಮೊದಲಿನ ಸ್ಥಿತಿಗಿಂತ ಉತ್ತಮ ಸ್ಥಿತಿಗೆ ಬಂದಿದ್ದೇನೆ. ಜೀವಿಸಿರುವುದಕ್ಕೆ ಆಸಕ್ತಿಯೂ ಜೀವನದಲ್ಲಿ ಉತ್ಸಾಹವೂ ಈಗ ಚುರುಕುಗೊಂಡಿವೆ. ನಿನ್ನಿಂದ ದೂರವಿದ್ದಾಗ ಬಹು ಚಿಕ್ಕ ವಿಷಯಗಳಲ್ಲೂ ಸಹ ನಾನು ಗಾಬರಿಯಾಗುವುದಿದೆ. ಆದರೆ ಮನೆಬಿಟ್ಟು, ದಾರಿತಪ್ಪಿ, ಊರೆಲ್ಲಾ ಅಲೆದು, ಮನೆಯನ್ನು ಗುರುತಿಸಿ, ಹಿಂದೆ ಮನೆಗೆ ಬಂದಾಗ ಆಗುವ ಶಾಂತಿ, ಸುಖ ನೆಮ್ಮದಿಯ ಉತ್ಸಾಹವೂ ಬುದ್ಧಿ ಚುರುಕೂ ನಿನ್ನ ಬಳಿಗೆ ಬಂದಾಗ ಕಂಡು ಬರುತ್ತವೆ.”
ಏಗ್ನೆಸ್ಸಳು ಮೌನವಾಗಿಯೇ ಕುಳಿತಿದ್ದಳು. ಅವಳ ಮುಖವೇ ಮಾತಿನಷ್ಟೇ ಸ್ಪಷ್ಟವಾದ ಉತ್ತರವನ್ನು ಕೊಡುತ್ತಿತ್ತು. ನನ್ನನ್ನು ಆಶೀರ್ವದಿಸಿ, ಉತ್ತಮನಾಗಿಸುವ ದೈವಿಕ ಪ್ರಭೆ ಅವಳ ಮುಖದಲ್ಲಿತ್ತು. ಅವಳು ತನ್ನ ಹಸ್ತವನ್ನು ನೀಡಿದಳು. ಅವಳು ಆಡಿದ್ದ ಮಾತುಗಳು, ಆ ಮಾತಿನ ಸ್ವರ, ನೀಡಿದ್ದ ಹಸ್ತ, ಪ್ರಸನ್ನ ಮುಖ ಇವೆಲ್ಲವುಗಳ ಸಮ್ಮಿಶ್ರಣದಿಂದ ಆದ ಭಾವ – ನನ್ನನ್ನು ದೇವಸನ್ನಿಧಿಯಲ್ಲಿ ತೋರಿ ಬರುವಂಥ ಭಾವಪರವಶತೆಗೆ ಮುಟ್ಟಿಸಿತು. ನಾನು ಮೂಕನಂತೆ ಅವಳನ್ನು ನೋಡುತ್ತಾ ಕುಳಿತೆನು.
“ನೀನು ಭಾವಪರವಶನಾಗಿ ಕುಳಿತಂತೆ ಕಾಣುತ್ತದೆ. ಕಾಪರ್ಫೀಲ್ಡ್, ನಿನ್ನ ಕಷ್ಟಗಳು ಏನೆಂದು ತಿಳಿಯಬೇಕೆಂಬ ಮನಸ್ಸು ನನಗಿದೆ – ಆಕ್ಷೇಪವಿಲ್ಲದಿದ್ದರೆ ತಿಳಿಸು” ಅಂದಳು ಏಗ್ನೆಸ್. “ಆಕ್ಷೇಪವೇ ಅದರಲ್ಲೂ ಏಗ್ನೆಸ್ಸಳಿಗೆ ನನ್ನ ಮನಸ್ಸನ್ನು ಬಿಚ್ಚಿ ತೋರಿಸಲು ಆಕ್ಷೇಪವೇ? ಎಲ್ಲವನ್ನೂ ಹೇಳುವೆನು” ಎಂದು ಉದ್ವೇಗದಿಂದ ನಾನು ಮಾತಾಡತೊಡಗಿದೆನು. ನನ್ನ ಜೀವನದ ಕ್ರಮಗಳಲ್ಲು ಉಂಟಾಗಿದ್ದ ಬದಲಾವಣೆ, ಮಿ. ಸ್ಪೆನ್ಲೋರವರ ಮರಣ, ನಮ್ಮ ಬಡತನ, ಡೋರಾಳನ್ನು ಕುರಿತಾದ ನನ್ನ ದುಃಖ, ಇವೆಲ್ಲವನ್ನೂ ತಿಳಿಸಿ ಅವಳ ಅಭಿಪ್ರಾಯ ಮತ್ತೂ ಬುದ್ಧಿವಾದಗಳನ್ನು ಯಾಚಿಸಿದೆನು. ಡೋರಾಳ ಅತ್ತೆಯಂದಿರ ಜೀವನದ ಸೂಕ್ಷ್ಮಪರಿಚಯ, ಅವರ ಸ್ವಭಾವ, ಇವೆಲ್ಲವನ್ನೂ ಅವಳಿಗೆ ತಿಳಿಸಿದೆನು.
ಏಗ್ನೆಸ್ಸಳು ಸ್ವಲ್ಪ ನಗಾಡುತ್ತಾ – ಇವುಗಳಲ್ಲಿ ಕೆಲವು ಸಂಗತಿಗಳ ಮಟ್ಟಿಗೆ ತನಗಿಂತಲೂ ಡೋರಾಳೇ ಪ್ರೇರಕಳೂ ಮಾರ್ಗದರ್ಶಕಳೂ ಆಗಬೇಕೆಂದನ್ನುತ್ತಾ, ನನಗೆ ಈ ತೆರನಾಗಿ ಬುದ್ಧಿ ಹೇಳಿದಳು – “ನೋಡು, ಕಾಪರ್ಫೀಲ್ಡ್, ನಿನ್ನ ಕಾರ್ಯಗಳು ಯಶಸ್ವಿಯಾಗುವುದರ ಜತೆಯಲ್ಲೇ ನಿನ್ನ ಘನಸ್ಥಿಕೆಯೂ ಏರಬೇಕು, ಕೊನೆಯ ಪಕ್ಷ ಉಳಿಯಬೇಕು. ನಿನಗೂ ಡೋರಾಳಿಗೂ ನಡೆದಿದ್ದ ಅನುರಾಗದ ಮತ್ತೂ ಮಾತು ಕಥೆಗಳನ್ನು ಕುರಿತು ಮಿ ಸ್ಪೆನ್ಲೋ ಸಹೋದರಿಯವರಿಗೆ ಒಂದು ಪತ್ರವನ್ನು ಬರೆದು ತಿಳಿಸು. ಇತರರ ಮುಖಾಂತರ ಇಂಥ ವಿಷಯದಲ್ಲಿ ಸಂಧಾನ ನಡೆಸುವುದು ಭೂಷಣವಲ್ಲ.” ಆಗ ನಾನು “ನನ್ನ ಘನಸ್ಥಿಕೆಯನ್ನೋ ಯೋಗ್ಯತೆಯನ್ನೋ ಕಾದುಕೊಳ್ಳುತ್ತಿರುವ ನಿನ್ನ ಸ್ನೇಹಪರ ಸಹಾಯಗಳಿಗಾಗಿ ನಾನು ತುಂಬಾ ಋಣಿಯಾಗಿರುವೆನು. ಆದರೆ ಡೋರಾಳು ನನ್ನ ಪತ್ರದ ವರ್ತಮಾನವನ್ನು ತಿಳಿದು ಗಾಬರಿಗೊಂಡು ಅಳಲಾರಂಭಿಸಿದರೆ ಮಾಡುವುದೇನು?” ಎಂದು ಕೇಳಿದೆ.
“ಹಾಗಾಗಲಾರದು. ನಿನ್ನ ಪತ್ರದಲ್ಲೇ ಅಗತ್ಯವುಳ್ಳ ಎಚ್ಚರಿಕೆಗಳನ್ನು ಬರೆದು ತಿಳಿಸು. ಡೋರಾಳ ಮನಸ್ಸು, ಮಾತಾಡುವ ಸಂದರ್ಭ, ಇವನ್ನೆಲ್ಲಾ ನೋಡಿಕೊಂಡು ಅವಳೊಡನೆ ಮಾತಾಡಬೇಕೆಂದೂ ತಿಳಿಸು. ಮತ್ತೂ ಆ ಸಹೋದರಿಯರು ಒಪ್ಪುವುದಾದರೆ, ಯಾವುದಾದರೂ ನಿಯಮ ನಿರ್ಬಂಧಗಳನ್ನೇ ಬೇಕಾದರೆ ನೀನೊಪ್ಪಿಕೊಂಡು, ನೀನು ಅವರ ಮನೆಯಲ್ಲೇ ಡೋರಾಳ ಹತ್ತಿರ ಮಾತಾಡ ಬಯಸುವೆಯಾಗಿ ತಿಳಿಸಿ, ಇದಕ್ಕೆ ಬೇಕಾದ ಅನುಕೂಲವನ್ನು ಕಲ್ಪಿಸಿಕೊಡಬೇಕೆಂದೂ ಅಂಥ ಎಲ್ಲದರ ವಿಷಯ ಉತ್ತರ ಬರೆಯುವಾಗ ಡೋರಾಳನ್ನು ವಿಚಾರಿಸಿಕೊಂಡೇ ಉತ್ತರ ಬರೆಯಬೇಕೆಂದೂ ಅವರಿಗೆ ತಿಳಿಸು” ಎಂದು ಏಗ್ನೆಸ್ಸಳು ತುಂಬಾ ಅಲೋಚಿಸಿ, ಸಮಾಧಾನವಾಗಿ ನನಗೆ ಬೋಧಿಸಿದಳು.
ಏಗ್ನೆಸ್ಸಳು ಹೇಳಿದ್ದು ನ್ಯಾಯವೆಂದು ನನಗೂ ತೋರಿತು. ನಾನು ಪತ್ರ ಬರೆಯುವುದಕ್ಕಾಗಿ ಅವಳ ಮೇಜನ್ನು ಏಗ್ನೆಸ್ಸಳು ಬಿಟ್ಟುಕೊಟ್ಟಳು. ಆ ದಿನ ಮಧ್ಯಾಹ್ನದನಂತರ ಬಹು ಹೊತ್ತಿನವರೆಗೆ ನಾನು ಪತ್ರ ಬರೆಯುವ ಕೆಲಸದಲ್ಲೇ ಇದ್ದೆನು. ಆದರೆ ಪತ್ರ ಬರೆಯಲು ಪ್ರಾರಂಭಿಸುವ ಮೊದಲು ಇದೇ ಮನೆಯಲ್ಲಿದ್ದ ಉರೆಯನನ್ನೂ ಅವನ ತಾಯಿಯನ್ನೂ ನೋಡಿ ಮಾತಾಡಿ ಬರುವ ಕಟ್ಟು ಕಟ್ಟಳೆಯನ್ನು ತೀರಿಸಿಬಿಡೋಣವೆಂದು ಉಪ್ಪರಿಗೆಯಿಂದಿಳಿದು ಉರೆಯನ ಆಫೀಸಿಗೆ ಹೋದೆನು. ಉರೆಯ ಅವನ ಹೊಸ ಸ್ಥಾನಕ್ಕೆ ಸರಿಯಾದ ಉಡುಪನ್ನು ಧರಿಸಿಕೊಂಡು ಅವನ ಆಫೀಸಿನಲ್ಲಿ ಕುಳಿತಿದ್ದ. ಅವನ ಸಮೀಪದಲ್ಲಿ ಮಿ. ವಿಕ್ಫೀಲ್ಡರು ಪ್ರಾಯದಿಂದಲೂ ದುಃಖದಿಂದಲೂ ಜರ್ಝರಿತರಾಗಿ ಕುಳಿತಿದ್ದರು. ಉರೆಯ ಅಧಿಕಾರಕ್ಕೆ ಬಂದನಂತರ ಆ ಆಫೀಸನ್ನು ನಾನು ಪ್ರಥಮವಾಗಿ ನೋಡಿದ್ದು ಆ ದಿನವೇ ಆಗಿತು. ಆ ಆಫೀಸು, ಹೊರಗಿನ ಹೂದೋಟ ಎಲ್ಲವೂ ದೀನ ದರಿದ್ರತೆ ಅಲಕ್ಷ್ಯದ ಬಣ್ಣದಿಂದ ಮುಚ್ಚಿಹೋಗಿದ್ದುವು.
ಮಿ. ವಿಕ್ಫೀಲ್ಡರ ಕ್ಷೇಮ ಸಮಾಚಾರವನ್ನು ವಿಚಾರಿಸಿದೆನು. ಸ್ವಲ್ಪ ಹೊತ್ತು ನಮ್ಮ ಮಾತುಗಳು ಸಾಗುತ್ತಾ ಮಿ. ವಿಕ್ಫೀಲ್ಡರು ನಾನು ಅವರ ಮನೆಯಲ್ಲಿ ಆ ಹೊತ್ತು ನಿಲ್ಲಬೇಕೆಂದು, ಉರೆಯನ ಅನುಮೋದನೆಯನ್ನು ಬಯಸುತ್ತಿರುವಂತೆ ಅವನನ್ನೇ ನೋಡುತ್ತ ನನ್ನನ್ನು ಆಮಂತ್ರಿಸಿದರು. ಉರೆಯ ನಮ್ರವಾಗಿಯೇ ತನ್ನ ಅನುಮೋದನೆಯನ್ನು ಕೊಟ್ಟನು. ಅನಂತರ ಉರೆಯನ ಮತ್ತು ಅವನ ತಾಯಿಯ ಯೋಗಕ್ಷೇಮವನ್ನು ವಿಚಾರಿಸಿಕೊಂಡು, ಏಗ್ನೆಸ್ಸಳ ಕೋಣೆಗೆ ಹೋದೆನು. ಆ ಕೋಣೆಯಲ್ಲೇ ಕುಳಿತು ಮಿಸ್ ಸ್ಪೆನ್ಲೋ ಸಹೋದರಿಯವರಿಗಿದ್ದ ಪತ್ರವನ್ನು ಬರೆದೆನು. ಆ ಪತ್ರವನ್ನು ಏಗ್ನೆಸ್ಸಳಿಗೆ ಓದಿ ಹೇಳಿ, ಅವಳೊಡನೆ ಮಾತಾಡಬೇಕೆಂದು ಉದ್ದೇಶಿಸಿ, ಓದುವ ಮೊದಲು ಉರೆಯನ ತಾಯಿ ತನ್ನ ಹೊಲಿಗೆ ಸಾಹಿತ್ಯಗಳ ಸಮೇತವಾಗಿ ನಾವು ಕುಳಿತಿದ್ದ ಕೋಣೆಗೆ ಬಂದಳು. ಬಂದವಳೊಡನೆ ನಾನು ಮಾತಾಡಬೇಕೆನ್ನುವಷ್ಟರಲ್ಲೇ – “ಒಬ್ಬಳೆ ನನ್ನ ಕೋಣೆಯಲ್ಲಿ ಕುಳಿತಿರಲು ಬೇಸರವಾಗಿ ನೀವುಗಳೆಲ್ಲಾ ಇರುವಲ್ಲಿ ಬಂದುಬಿಟ್ಟೆ” ಎಂದು ನಮಗೆ ಸಮಾಧಾನ ಹೇಳಿದಳು. ಆಗ ನಾನು ಪ್ರಶ್ನಿಸಿದೆ – “ಕ್ಷೇಮವೇ ಮಿಸೆಸ್ ಹೀಪ್?” “ನಮ್ಮದೇನು ಕ್ಷೇಮ – ಬಡವರದು. ಇದ್ದ ಮಟ್ಟಿಗೆ ಕ್ಷೇಮ” ಅಂದಳು ಮಿಸೆಸ್ ಹೀಪ್. “ಉರೆಯನ ಹತ್ತಿರ ಈಗ ತಾನೆ ಮಾತಾಡಿ ಬಂದೆ; ಕ್ಷೇಮ ಎಂದು ತಿಳಿಸಿದ. ಸಂತೋಷ, ಮಿಸೆಸ್ ಹೀಪ್” ಅಂದೆ ನಾನು. “ಎಂಥ ಕ್ಷೇಮ! ಮಿ. ವಿಕ್ಫೀಲ್ಡರ ದಯೆಯಿಂದ ನಾಲ್ಕು ಪೆನ್ಸು ಹಣ ಸಂಪಾದಿಸಿದರೆ ಕ್ಷೇಮವಾಯಿತೆ? ಉರೆಯನು ಇರಬೇಕಾದಷ್ಟು ಕ್ಷೇಮದಲ್ಲಿಲ್ಲ ಮಿ. ಕಾಪರ್ಫೀಲ್ಡ್” ಅಂದಳು. “ನನಗೆ ಹಾಗೆ ತೋರುವುದಿಲ್ಲ.” “ಮಾತೆಯ ದೃಷ್ಟಿಯಿಂದ ನೀವು ನೋಡಲಾರಿರಿ ತಾನೆ? ಅವನಿಗೆ ಒಂದು ಮನೋರೋಗವಿದೆ – ತಾಯಿಯ ಹೃದಯಕ್ಕೆ ಮಾತ್ರ ತಿಳಿಯುವ ರೋಗ. ಇದರಿಂದ ಅವನು ದಿನೇ ದಿನೇ ಕೃಶನಾಗುತ್ತಿದ್ದಾನೆ” ಎಂದು ಮಾತೆಯ ದೃಷ್ಟಿ ವೈಶಿಷ್ಟ್ಯವನ್ನು ವಿವರಿಸಿ ನುಡಿದಳು.
ಆ ಮಾತೆಯ ದೃಷ್ಟಿ ಮಗನೊಬ್ಬನ ಹೊರತಾಗಿ ಇತರರಿಗೆ ಮಾರಿಯ ದೃಷ್ಟಿಯೇ ಆಗಿತ್ತೆಂದು ನನಗೆ ಗೊತ್ತಿದ್ದಿದ್ದರೂ ಸಭ್ಯಾಚಾರಕ್ಕಾಗಿ – “ನಿಮ್ಮ ಮಾತು ನಿಜವಿರಬಹುದು. ನಮಗೆಲ್ಲಾ ಗೋಚರಿಸದಿದ್ದರೂ ನಿಮಗೆ ಗೊತ್ತಾಗಬಹುದು. ಅದೆಂಥ ರೋಗ?” ಎಂದು ನಾನು ಕೇಳಿದೆನು. “ಇದೆ, ರೋಗವೇನೋ ಇದೆ. ಚಿಂತಿಸಿ, ಚಿಂತಿಸಿ ಬಡವಾಗುತ್ತಿದ್ದಾನೆ. ಮಿಸ್ ವಿಕ್ಫೀಲ್ಡಳು ಆ ಸಂಗತಿ ಕಂಡಿಲ್ಲವೇ” ಎಂದನ್ನುತ್ತಾ ಏಗ್ನೆಸ್ಸಳನ್ನು ನೋಡಿದಳು. “ಇಲ್ಲ, ಅವನು ಸುಖವಾಗಿಯೇ ಇದ್ದಾನೆ” ಎಂದು ಏಗ್ನೆಸ್ಸಳು ಸ್ಪಷ್ಟವಾಗಿ, ಗಂಭೀರವಾಗಿ, ಪುನಃ ಉರೆಯನ ತಾಯಿ ಆ ಮಾತನ್ನೆತ್ತದಂತೆ, ಹೇಳಿದಳು. ಅಷ್ಟು ಅಲ್ಲದೆ, ಸ್ವಲ್ಪ ಜಿಗುಪ್ಸೆಯಿಂದಲೇ ಎಂಬಂತೆ ಏಗ್ನೆಸ್ಸಳು ಅಲ್ಲಿಂದೆದ್ದು ಹೊರಗೆ ಹೋದಳು. ಆ ದಿನವಿಡೀ ಮಿಸೆಸ್ ಹೀಪಳು ಒಂದಲ್ಲದಿದ್ದರೆ ಮತ್ತೊಂದು ನೆಪದಿಂದ ಏಗ್ನೆಸ್ಸಳಿಗೆ ಪಹರೆ ಕುಳಿತಿರುತ್ತಿದ್ದಳು. ಅಷ್ಟೂ ಅಲ್ಲದೆ, ನಾನೂ ಏಗ್ನೆಸ್ಸಳು ತಿರುಗಾಡಲು ಹೋಗಬೇಕೆಂದಿದ್ದುದನ್ನು ಉಪಾಯದಿಂದ ತಡೆ ಹಿಡಿದು ನಾನೊಬ್ಬನೆ ತಿರುಗಾಡಲು ಹೋಗುವಂತೆಯೇ ಮಾಡಿದಳು.
ಹೀಗೆ ನಾನು ರೇಮ್ಸ್ ಗೇಟ್ ರೋಡಿನಲ್ಲಿ ಏಕಾಂಗಿಯಾಗಿ ತಿರುಗಾಡುತ್ತ ಹೋಗಿ, ಒಂದು ಜನಸಂದಣಿ ಕಡಿಮೆಯಿದ್ದ ಚಿಕ್ಕ ರಸ್ತೆಯಲ್ಲೇ ಹೋಗುತ್ತಿದ್ದಾಗ, ಹಿಂದಿನಿಂದ ಯಾರೋ ಹಿಂಬಾಲಿಸಿ ಬರುತ್ತಿದ್ದುದನ್ನು ತಿಳಿದೆನು. ಅದು ಉರೆಯನೇ ಇರಬೇಕೆಂದೇ ಇಂಗಿತದಿಂದ ತಿಳಿದು ಏನೂ ಅರಿಯದವನಂತೆ ನಾನು ಜೋರಾಗಿ ನಡೆದರೂ ಆ ಹಿಂಬಾಲಕನು ನನ್ನನ್ನು ಗುರುತಿಸಿ ಮಾತಾಡಿದನು. ಅವನು ಉರೆಯನೇ ಆಗಿದ್ದನು. ನನ್ನ ಹತ್ತಿರ ಬಂದ ಕೂಡಲೇ ನನಗೆ ಹಸ್ತಲಾಘವವನ್ನಿತ್ತು, ಸಲಿಗೆಯಿಂದ ಮಾತಾಡತೊಡಗಿದನು. ಅವನ ಬೆವರು ಕೈ, ಕೃತಕ ಸ್ನೇಹದ ವರ್ತನೆ, ಅವನ ತಾಯಿ ಆ ದಿನವೇ ಏಗ್ನೆಸ್ಸಳಿಗೆ ಪಹರೆ ಕುಳಿತು ಕೊಟ್ಟಿದ್ದ ಹಿಂಸೆ – ಇವೆಲ್ಲವನ್ನೂ ಗ್ರಹಿಸಿ ನನಗೆ ಉರೆಯನ ಮೇಲೆ ತುಂಬಾ ಕೋಪ ಬಂದಿತು. ಇನ್ನಷ್ಟು ಸಲಿಗೆಗೆ ಎಡೆ ಸಿಕ್ಕದಂತೆ, ಸ್ವಲ್ಪ ಕಠಿಣವಾಗಿಯೇ ನಾನು ಪ್ರಶ್ನಿಸಿದೆನು – “ನನ್ನ ಹತ್ತಿರ ನಿನಗೇನಾಗಬೇಕು?” “ನೀನು ಒಬ್ಬನೇ ಹೋಗುತ್ತಿದ್ದುದನ್ನು ನೋಡಿ ಬಂದೆನು – ಹಳೆ ಸ್ನೇಹಿತನಲ್ಲವೇ?” “ಅದೆಲ್ಲಾ ಮತ್ತೆ. ದಿನವಿಡೀ ಬೇಡದ ಜನರ ಜತೆಯಲ್ಲಿ ಸಿಕ್ಕಿ ಬೇಸತ್ತು, ಈಗಲಾದರೂ ಒಬ್ಬಂಟಿಗನಾಗಿ ತಿರುಗಾಡಬೇಕೆಂದು ಬಂದಿರುತ್ತೇನೆ. ಆದ್ದರಿಂದ…” ಎಂದು ನಾನು ಮಾತು ಮುಂದರಿಸುವುದರ ಮೊದಲೇ ಉರೆಯನು – “ಯಾರ ಜತೆ – ನನ್ನ ತಾಯಿ ಮತ್ತು ಏಗ್ನೆಸ್ಸಳ ಜತೆ ತಾನೆ?” “ಹೌದು, ನಿನ್ನ ತಾಯಿಯ ಜತೆಯಲ್ಲಿ ಕುಳಿತೂ ಮಾತು ಕೇಳಿಯೂ ಸಾಕಾಗಿದೆ” ಅಂದೆನು ನಾನು. “ಹಾಗನ್ನಬಹುದೇ ಕಾಪರ್ಫೀಲ್ಡ್ – ಅಲ್ಲ, ಮಿ. ಕಾಪರ್ಫೀಲ್ಡ್? ತಾಯಿಯ ಮಾತು ಬಡವರ ಮಾತು, ನಿಮ್ಮಂಥವರಿಗೆ ರುಚಿಸದು. ಆದರೂ ಬಡವರೂ ಬದುಕಬೇಡವೇ? ಬದುಕುವ ಪ್ರಯತ್ನಕ್ಕಾಗಿ ತಾಯಿಯು ಎರಡು ಮಾತು ಮಾತಾಡಿರಬೇಕು. ಅಷ್ಟೆ.” “ಹಾಗಂದರೆ ಏನು ಹೇಳಿದ ಹಾಗಾಯಿತು, ನನಗೆ ಅರ್ಥವಾಗುವುದಿಲ್ಲ ಉರೆಯ.” “ತಿಳಿಸಬೇಕೇ, ಮಿ.ಕಾಪರ್ಫೀಲ್ಡ್? ಕೇಳಿ, ನಾವು ಸದ್ಯ ದೀನರು, ಬಡವರು. ಆದರೆ, ಹೃದಯಕ್ಕೆ ಈ ಭೇದಭಾವಗಳಿಲ್ಲವಷ್ಟೆ. ನಾನು ಏಗ್ನೆಸ್ಸಳನ್ನು ಪ್ರೀತಿಸುತ್ತಿದ್ದೇನೆ. ನಾನು ಬಡವನಾದರೂ ಪ್ರೀತಿಯೆಂಬುದು ನನ್ನ ಹೃದಯದಲ್ಲು ಇದೆ. ನನ್ನ ಎದುರಾಗಿ ನೀನು ಏಗ್ನೆಸ್ಸಳ ಹತ್ತಿರ ಸ್ನೇಹ ಸಲಿಗೆಯಿಂದ ಮಾತಾಡುತ್ತಿದ್ದರೆ ನನಗೆ ಏಗ್ನೆಸ್ಸಳು ಲಭಿಸಲು ಸಾಧ್ಯವಿದೆಯೇ – ಗ್ರಹಿಸಿ ನೋಡು. ಅದಕ್ಕಾಗಿ, ಬಡವಿ, ನನ್ನ ತಾಯಿಯು ಅವಳಿಗೆ ತಿಳಿಯುವ ಕ್ರಮದಲ್ಲಿ ಪಹರೆ ಕುಳಿತಿದ್ದಳು” ಎಂದು ಹಾವು ಬಳುಕಿದಂತೆ ಬಳುಕುತ್ತಾ ಹೆಣಮುಖದ ಉರೆಯ ಹೇಳಿದನು.
ಇಷ್ಟರಲ್ಲೇ ನನ್ನ ಕೋಪದ ಸ್ಥಾಯಿಯು ಏರತೊಡಗಿತ್ತು. ಆದರೂ ಕೋಪವನ್ನು ತಡೆದುಕೊಂಡು ಕೇಳಿದೆನು – “ಹಾಗಾದರೆ ನಿಮ್ಮ ಪಹರೆ ಅಂದ ಪಕ್ಷಕ್ಕೆ ನಿರ್ಬಂಧವೇ ತಾನೆ? – ಏಗ್ನೆಸ್ಸಳ ಸ್ವಂತ ಮನೆಯಲ್ಲೇ ಅವಳ ಮೇಲೆ ನಿರ್ಬಂಧವೇನು?” “ನಮ್ಮಂಥ ಬಡವರು ಹೇಗೆ ತಾನೆ ನಿರ್ಬಂಧ ಹಾಕಬಲ್ಲೆವು? ನಿಮ್ಮಂಥವರು ಈ ರೀತಿ ಆರೋಪಣೆ ಮಾಡಬಾರದು, ಮಿ. ಕಾಪರ್ಫೀಲ್ಡ್.” “ಮಾತಿನಲ್ಲಿ ಬಡತನ ದೀನತನಗಳನ್ನು ನುಡಿಯುತ್ತಾ ಕಾರ್ಯಗಳಲ್ಲಿ ಮತ್ತೊಂದು ವಿಧವಾಗಿ, ಕ್ರೂರವಾಗಿ ವರ್ತಿಸುವುದನ್ನು ನಾನು ಸಹಿಸೆನು. ಈ ಸಂಬಂಧವಾಗಿ ಕೆಲವು ಗುಟ್ಟುಗಳನ್ನು ನಿನಗೆ ಹೇಳಿ ನಿನ್ನನ್ನು ಸರಿ ದಾರಿಗೆ ತರಬಹುದಾದರೂ ಆ ಕರ್ತವ್ಯ ನನ್ನದಲ್ಲ. ಅಥವಾ ನಾನು ಪ್ರಯತ್ನಿಸಿದರೂ ಸಾರ್ಥಕವಾಗಲಾರದೆಂದು ನನ್ನ ನಂಬಿಕೆ. ನಿನಗೆ ಬುದ್ಧಿ ಹೇಳುವುದಕ್ಕಿಂತ ಆ ಜೇಕ್ ಕೆಚ್ಚನಿಗೆ ಹೇಳುವುದು ಉತ್ತಮ” ಎಂದಂದೆನು ನಾನು. “ಯಾರಿಗೆ ಯಾರಿಗೆ?” ಎಂದು ತನ್ನ ಕತ್ತನ್ನು ಉದ್ದ ಮಾಡಿಕೊಂಡು ಉರೆಯನು ಕೇಳಿದನು. “ಜೇಕ್ ಕೆಚ್’ ಅಂದರೆ ಕತ್ತಿಗೆ ನೇಣು ಹಾಕಿ ತೂಗಹಾಕುತ್ತಾನಲ್ಲ, ಜೈಲಿನಲ್ಲಿ, ಅವನು” ಅಂದೆ ನಾನು. ಜೇಕ್ ಕೆಚ್ಚನ ನೆನಪು ತಾನಾಗಿಯೇ ನನ್ನಲ್ಲಿ ಸ್ಫುರಿಸಿದ್ದು, ನನ್ನ ಎದುರೇ ಇದ್ದ ಉರೆಯನ ಹೆಣಮುಖವೇ ಆ ಪಾಶಿಗಾರನ ಹೆಸರನ್ನು ನನ್ನ ಆಲೋಚನೆಗೆ ತಂದಿರಬೇಕು.
“ಆ ತಮಾಷೆಯಲ್ಲಾ ಹಾಗಿರಲಿ ಮಿ. ಕಾಪರ್ಫೀಲ್ಡ್. ನನಗೆ ನೀನು ತಿಳಿಸಲು ಬಯಸಿರುವ ಗುಟ್ಟೇನು, ದಯಮಾಡಿ ತಿಳಿಸಿಬಿಡು” ಎಂದು ಉರೆಯ ಅಂಗಲಾಚಿ ಬೇಡಿಕೊಂಡನು. “ನಾನು ಮಿ. ವಿಕ್ಫೀಲ್ಡಳನ್ನು ಸಹೋದರಿಯಂತೆ ಮಾತ್ರ ಕಾಣುತ್ತಾ ಮಾತಾಡುತ್ತಾ ಇದ್ದೇನೆ. ನನ್ನ ಪ್ರೇಮವು ಇನ್ನೊಬ್ಬ ಚಿಕ್ಕ ಪ್ರಾಯದ ಕುಲೀನ ಬಾಲಿಕೆಯ ಮೇಲೆ ನೆಲೆಸಿದೆ, ಉರೆಯಾ. ಮಿಸ್ ವಿಕ್ಫೀಲ್ಡಳನ್ನು ಮಾತ್ರ ದೇವರು ರಕ್ಷಿಸಲಿ” ಎಂದು ನಾನು ಉತ್ತರವಿತ್ತೆನು. “ರಕ್ಷಿಸಲಪ್ಪಾ ರಕ್ಷಿಸಲಿ! ಅದು ನಿಜವೇ? ನೀನು ಇನ್ನೊಬ್ಬಳನ್ನು ಪ್ರೀತಿಸುತ್ತಿರುವುದು ನಿಜವಾದರೆ ನಿನಗೆ ಅನೇಕ ವಂದನೆಗಳು” ಎಂದನ್ನುತ್ತಾ ಮೈ ಕೈ ಡೊಂಕಿಸಿಕೊಂಡು, ಆಕಾಶದಲ್ಲಿ ಎದ್ದು ಬಂದಿದ್ದ ಚಂದ್ರನ ಬೆಳಕಿನಲ್ಲಿ ತನ್ನ ಹೆಣ ಮುಖವನ್ನು ತಿರಿಚುತ್ತ ನನ್ನನ್ನು ಪುನಃಪುನಃ ವಂದಿಸಿದನು. ಅಂಥ ಗೌರವಾನ್ವಿತೆ, ದೇವಕನ್ಯೆಯಂತೇ ರೂಪ ಗುಣಸಂಪನ್ನೆಯಾಗಿರುವ ಏಗ್ನೆಸ್ಸಳ ಮೇಲೆ ನೀಚ, ಕ್ರೂರಿ, ರಾಕ್ಷಸಾಧಮ ಉರೆಯ ತನ್ನ ಅನುರಾಗದ ದೃಷ್ಟಿಯನ್ನಿಟ್ಟದ್ದು ತಿಳಿದು ನನಗೆ ಆದ ವೇದನೆಯೂ ಕೋಪವೂ ಅಷ್ಟಿಷ್ಟಲ್ಲ. ಆದರೂ ಕೋಪವನ್ನು ತಡೆ ಹಿಡಿದು – “ಆದರೆ ಉರೆಯಾ, ಸ್ಥಾನಮಾನಗಳ ಯೋಗ್ಯತೆಯಲ್ಲಿ ನಿನಗೂ ಏಗ್ನೆಸ್ಸಳಿಗೂ ಇರುವ ಅಂತರ ಈಗ ನಿನಗೂ ಆ ಚಂದ್ರನಿಗೂ ಇರುವಷ್ಟೇ ಇದೆಯೆಂಬುದನ್ನು ನೀನು ಮರೆತಿರುವೆಯೇನು? ಏಗ್ನೆಸ್ಸಳು ನಿನಗೆ ಎಂದೂ ಲಭಿಸಲಾರಳು – ಇದನ್ನು ತಿಳಿದಿರು” ಎಂದು ಮಾತ್ರ ಹೇಳಿದೆನು.
ಇದಕ್ಕೆ ಉರೆಯ ಸುದೀರ್ಘವಾಗಿ ನನಗೆ ಉತ್ತರವಿತ್ತನು. ಮಿ. ವಿಕ್ಫೀಲ್ಡರ ಮತ್ತು ಏಗ್ನೆಸ್ಸಳ ಹಿತವನ್ನು ಗ್ರಹಿಸಿ, ಅವನ ಉತ್ತರವನ್ನು ಕೇಳಿದೆ. ಉರೆಯ ಹೇಳತೊಡಗಿದನು. “ನಿಮ್ಮ ಅಭಿಪ್ರಾಯಗಳನ್ನೆಲ್ಲ ನಾ ಬಲ್ಲೆ, ಮಿ. ಕಾಪರ್ಫೀಲ್ಡ್. ನಿಮ್ಮ ಉನ್ನತಿ, ನಮ್ಮ ಹೀನತೆಯನ್ನು ನಾನು ಬಲ್ಲೆ. ಆದರೆ ನಮಗೂ ಸ್ಥಾನಮಾನಗಳು ಬೇಕೆಂದು ಬಯಸುವುದು ಸ್ವಾಭಾವಿಕವಲ್ಲವೇ? ಅಂಥ ಸ್ಥಾನಮಾನಗಳು ದೊರಕಬೇಕಾದರೆ ಉನ್ನತಿಯವರ ಸಂಬಂಧ ಸಂಪರ್ಕಗಳಿಂದ ಮಾತ್ರ ಸಾಧ್ಯವಷ್ಟೆ. ನನ್ನ ಕುಟುಂಬದ ಚರಿತ್ರೆಯನ್ನು ನೀನು ತಿಳಿದಿರಲಾರೆ – ಸ್ವಲ್ಪ ಕೇಳು. ನನ್ನ ತಂದೆಯೂ ತಾಯಿಯೂ ಧರ್ಮಛತ್ರದ ಅನ್ನ ಉಂಡು, ಅನಾಥ ಬಾಲಕರ ಶಾಲೆಗೆ ಹೋಗಿ, ಕೆಳತರಗತಿಯ ವಿದ್ಯೆ ಮಾತ್ರ ಕಲಿತವರು. ನಾನೂ ಸಹ ಅನಾಥಾಲಯದಲ್ಲೇ ಬೆಳೆದು ಶಾಲೆಗೆ ಹೋದವನು. ನಮ್ರತೆ, ವಿನೀತತೆ, ಹೀನತಾ ಭಾವಗಳನ್ನು ಶಿಸ್ತು ನಿಯಮ ಪ್ರಕಾರ ನಮಗೆಲ್ಲರಿಗೂ ಎಲ್ಲ ಕಡೆಗಳಲ್ಲೂ ಹಗಲಿರುಳು ಕಲಿಸುತ್ತಿದ್ದರು. ಉದ್ಯೋಗಸ್ಥನೊಬ್ಬನನ್ನು ಕಂಡರೆ ಟೊಪ್ಪಿ ತೆಗೆದು, ತಲೆ ತಗ್ಗಿಸಿ ನಿಲ್ಲಬೇಕು. ಅವನಿಗಿಂತ ಮೇಲಿನವನೊಬ್ಬನನ್ನು ಕಂಡರೆ ಚರಂಡಿಯಲ್ಲಿ ನಿಂತು ಅವನಿಗಾಗಿ ನಾವು ರಸ್ತೆಯನ್ನು ಪೂರ್ಣ ಬಿಟ್ಟು ಕೊಡಬೇಕು. ನಮ್ಮ ಅನಾಥಾಲಯಕ್ಕೆ ಬರುವ ಯಾರನ್ನು ಕಂಡರೂ `ಅವರೆಲ್ಲರಿಗಿಂತಲೂ ನಾನು ಹೀನನು, ದೀನನು, ದರಿದ್ರನು. ಅವರೆಲ್ಲರೂ ನನಗಿಂತ ಸರ್ವವಿಧದಲ್ಲೂ ಉತ್ತಮರು’ ಎಂಬ ಭಾವನೆಯನ್ನು ತಾಳುವಂತೆ ನಮಗೆ ಸತತವೂ ಅಭ್ಯಾಸ ಮಾಡಿಸಿರುವರು. ಆ ಭಾವನೆಯು ನಮ್ಮ ಅಸ್ತಿ, ಮಾಂಸ, ರಕ್ತದಲ್ಲಿ ಬೆರೆತು ಹೋಗಿದೆ – ಬೇಕೆಂದೇ ಬೆರೆಸಿರುವರು. ನಮ್ಮ ಅನಾಥಾಲಯಕ್ಕೆ ಬಂದವರ ಎದುರು ನಿಂತರೆ, ನಗಾಡಿದರೆ, ನಾವು ಸುಖವಾಗಿದ್ದೇವೆಂದು ಕಾಣಿಸಿಕೊಂಡರೆ, ಅವರ ಮನ ನೋಯುವುದೆಂದು ನಮ್ಮನ್ನು ಅಧಿಕಾರಿಗಳು ಹೆದರಿಸಿ (ನಾವು ಹೆದರಿ) ಬೆಳೆದವರು. ಈ ಕಾರಣಗಳಿಂದ, ಅಂಥ ಮರೆಯಲಾರದ, ಮಾಸಲಾರದ ಭಾವನೆಗಳನ್ನು ಬದಿಗಿಟ್ಟು, ಸ್ವಾಭಾವಿಕವಾದ ಜೀವನದ ಅಭಿಲಾಷೆಗಳನ್ನು ಈಡೇರಿಸಿಕೊಳ್ಳಲು ನಮಗೆ ನಿಮಗಿಂತ ಹೆಚ್ಚು ಕಷ್ಟ. ವಿನೀತತೆಯ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದುದಕ್ಕಾಗಿಯೇ ನನ್ನ ತಂದೆಗೆ ಶ್ಮಶಾನದ ಪಾರುಪತ್ಯ ದೊರಕಿತ್ತು. ತಂದೆಯವರ ಆದರ್ಶ ವಾಕ್ಯಗಳೇ `ತಾಳ್ಮೆಯೂ ವಿನೀತತೆಯೂ ಎಂದೂ ಸೋಲವು’ ಎಂಬವು. ಮಿ.ಕಾಪರ್ಫೀಲ್ಡ್, ಈ ಎಲ್ಲಾ ಸಂಗತಿಯನ್ನೂ ದಯಮಾಡಿ ಗ್ರಹಿಸಿ, ನಾನು ತಿಂದ ಆಹಾರ, ಕುಡಿದ ನೀರು ಬಡವರದು, ದೀನ ದರಿದ್ರರಿಗೆ ತಕ್ಕದಾದದ್ದು. ಕಲಿತ ವಿದ್ಯೆ, ನನ್ನ ಸ್ಥಾನಕ್ಕೆ ತಕ್ಕಷ್ಟು ಮಾತ್ರ. ಲೇಟಿನ್ ಭಾಷೆಯನ್ನು ನೀನು ನನಗೆ ಕಲಿಸುವುದಾಗಿ ಹೇಳಿದ್ದಕ್ಕೆ ಆ ಹೊತ್ತು ನಾನು ಆ ವಿದ್ಯೆ ಬೇಡವೆಂದದ್ದೂ ಈ ಕಾರಣದಿಂದಲೇ. ನನ್ನ ತಂದೆಯವರು ಸದಾ ಎಚ್ಚರಿಸುತ್ತಿದ್ದರು – ‘ನಿನಗಿಂತ ಮೇಲಿನವರಿಗೆ ನಿನ್ನ ಉನ್ನತಿಯು ಅಸಹ್ಯವಾಗುವುದು. ಮತ್ತು ಅವರ ಅಸಹ್ಯವೇ ನಿನ್ನನ್ನು ಪಾತಾಳಕ್ಕೂ ಅಟ್ಟಿಬಿಡುವುದು!’ ಎಂದು. ನಾನು ಆ ಕಾರಣದಿಂದ ಲೇಟಿನ್ ಭಾಷೆಯನ್ನು ಕಲಿಯಲಿಲ್ಲ.” ಉರೆಯ ಈ ಮಾತುಗಳನ್ನಾಡುವಾಗ ಅವನ ದೀನ ಹೀನತೆಯ ಭಾವದೊಂದಿಗೆ ದ್ವೇಷ ಮತು ಕ್ರೋಧವೂ ಬೆರೆತಿತ್ತು. ಇಷ್ಟೂ ಅಲ್ಲದೆ ಅವನ ಮಾತಿನಲ್ಲಿ ಸೇಡು ತೀರಿಸಿಕೊಳ್ಳುವ ಕಾಂಕ್ಷೆಯೂ ಅಹಂಕಾರ, ಧೈರ್ಯ, ವೈರ ಎಲ್ಲವೂ ಬೆರೆತಿದ್ದುವು. ಅವನು ಪುನಃ ಹೇಳತೊಡಗಿದನು – “ಮಿ. ಕಾಪರ್ಫೀಲ್ಡ್, ಈಗ ನೀನು ಒಂದು ವಿಷಯವನ್ನು ಮರೆತಂತಿದೆ. ಅಥವಾ ಅದನ್ನೇ ನಾನು ಸ್ಪಷ್ಟವಾಗಿ ನಿನಗೆ ತಿಳಿಸಲಿಚ್ಛಿಸುತ್ತೇನೆ. ಅದೇನೆಂದರೆ, ನನಗೆ ಈ ಹೊತ್ತು ಶಕ್ತಿ ಬಂದಿದೆ. ಅಧಿಕಾರ ದೊರಕಿದೆ. ನನ್ನ ವಿರೋಧಿಗಳಿಗೆ ತಕ್ಕ ಶಾಸ್ತಿ ಮಾಡುವ ಶಕ್ತಿ ನನ್ನಲ್ಲಿದೆ.”
ಈ ಮಾತುಗಳಿಂದ ಉರೆಯನ ನಿಜ ಸ್ವರೂಪ ದರ್ಶನವು ನನಗೆ ಆಯಿತು. ಮಿ. ವಿಕ್ಫೀಲ್ಡರ ಮೇಲೆ ಅವನಿಗೆ ಮಹತ್ತರವಾದ ಅಧಿಕಾರವಿದೆಯೆಂದು ನಾವು ಊಹಿಸಬೇಕೆಂದೇ ಅವನ ಮಾತಿನಲ್ಲಿ ಈ ವಿಧದ ಎದೆ ನಮಗೆ ಕೊಡುತ್ತಿದ್ದನು. ಅಷ್ಟೂ ಅಲ್ಲದೆ ಏಗ್ನೆಸ್ಸಳ ಹಿತಚಿಂತಕರನ್ನೂ ಸಹ ವಕ್ರ ರೀತಿಯಿಂದ ಹೆದರಿಸಿ, ಏಗ್ನೆಸ್ಸಳ ಮತ್ತು ಮಿ. ವಿಕ್ಫೀಲ್ಡರ ಸಹಾಯಕ್ಕೆ ಬರದಂತೆ ಮಾಡುವ ಉದ್ದೇಶವೂ ಅವನಲ್ಲಿದ್ದಿರಬೇಕೆಂಬುದು ನಿಸ್ಸಂಶಯ. ಅವನ ಮಾತುಗಳಿಗೆ ತಕ್ಕದಾದ ಉತ್ತರವನ್ನು ನಾನು ಕೊಡಲು ಇಷ್ಟಪಡುತ್ತಿದ್ದರೂ ಮಿ. ವಿಕ್ಫೀಲ್ಡ್ ಮತ್ತು ಏಗ್ನೆಸ್ಸರಿಬ್ಬರಿಗಾಗಿ ನಾನು ಬಹು ಸಮಾಧಾನದ ನಾಲ್ಕು ಮಾತುಗಳನ್ನು ಮಾತ್ರ ಆಡಿ, ಅವನ ಜತೆಯಿಂದ ತಪ್ಪಿಸಿಕೊಂಡು, ನನ್ನ ತಿರುಗಾಟ ಮುಗಿಸಿ ಮಿ. ವಿಕ್ಫೀಲ್ಡರ ಮನೆಗೆ ಬಂದೆನು.
ಆ ದಿನ ನಾನು ಅಲ್ಲೇ ಇರಬೇಕೆಂದು ಮಿ. ವಿಕ್ಫೀಲ್ಡರು ಇಷ್ಟಪಟ್ಟ ಪ್ರಕಾರ, ಅಲ್ಲೇ ಇದ್ದೆ. ರಾತ್ರಿ ಊಟವಾದನಂತರ ಉರೆಯ, ಮಿ. ವಿಕ್ಫೀಲ್ಡ್ ಮತ್ತೂ ನಾನು ಮಾತ್ರ ಬೈಠಖಾನೆಯಲ್ಲಿ ಕುಳಿತು ಮಾತನಾಡುತ್ತಿದ್ದೆವು. ಮಿ. ವಿಕ್ಫೀಲ್ಡರು ಸ್ವಲ್ಪ ಸ್ವಲ್ಪವಾಗಿ ವೈನ್ ಕುಡಿಯುತ್ತಿದ್ದರು. ಉರೆಯನೂ ಸಹ ಸ್ವಲ್ಪ ಸ್ವಲ್ಪ ಕುಡಿಯುತ್ತಿದ್ದನು. ಮಾತೂ ವೈನೂ ಮುಂದುವರಿದ ಹಾಗೆ, ಉರೆಯ – ಸಂಪ್ರದಾಯಕ್ಕನುಸಾರವಾಗಿ ಮಾತ್ರವಲ್ಲದೆ, ಇನ್ನೊಂದು ಉದ್ದೇಶವಿರುವವನಂತೆ ತೋರುತ್ತಾ ತನ್ನ ಗ್ಲಾಸಿಗೆ ಸ್ವಲ್ಪ ವೈನ್ ಹಾಕಿಕೊಂಡು, ನನ್ನನ್ನು ನೋಡುತ್ತಾ – “ನನ್ನ ಪ್ರಿಯ ಮಿತ್ರರಾದ ಮಿ. ವಿಕ್ಫೀಲ್ಡರೇ ಮಾಸ್ಟರ್ ಕಾಪರ್ಫೀಲ್ಡರ ಆರೋಗ್ಯವರ್ಧನೆಗಾಗಿ ವೈನ್ ಕುಡಿಯೋಣ” ಎಂದು ಹೇಳಿ ಗ್ಲಾಸಿನಲ್ಲಿದ್ದ ವೈನನ್ನು ಕುಡಿದನು. ಅನಂತರ ಇದೇ ಕ್ರಮದಲ್ಲಿ ನನ್ನತ್ತೆ, ಮತ್ತಿತರ ಕೆಲವರ ಹೆಸರನ್ನೆತ್ತಿ ವೈನನ್ನು ಕುಡಿದನು. ಪುನಃ ಗ್ಲಾಸಿಗೆ ವೈನ್ ಹಾಕಿಕೊಂಡು – “ಮಿ. ವಿಕ್ಫೀಲ್ಡ್, ಈ ತೈಲ ಚಿತ್ರದ ಗೃಹಿಣಿಯು ಮಹಾ ವ್ಯಕ್ತಿಯು. ಅವಳ ಸ್ಮರಣೆಗಾಗಿ ಇದನ್ನು ಸೇವಿಸುವೆನು” ಎಂದು ಹೇಳಿ ಅದನ್ನು ಕುಡಿದನು.
ಮಿ. ವಿಕ್ಫೀಲ್ಡರು ದುಃಖದಿಂದ ತನ್ನ ಪತ್ನಿಯ ತೈಲಚಿತ್ರ ನೋಡುತ್ತಾ ಉರೆಯನ ಬಹು ಸಲಿಗೆಯ ಮಾತುಗಳನ್ನು ಸಹಿಸಲಾರದೆ, ಮುಖ ತಗ್ಗಿಸಿ, ತಲೆಗೆ ಕೈ ಇಟ್ಟುಕೊಂಡು ಕುಳಿತರು. ಉರೆಯ ವೈನನ್ನು ಪುನಃ ಗ್ಲಾಸಿಗೆ ಹಾಕಿ ಹಿಡಿದುಕೊಂಡು – “ಏಗ್ನೆಸ್ – ಮಿ. ವಿಕ್ಫೀಲ್ಡರ ಮಗಳು, ಸ್ತ್ರೀಯರಲ್ಲಿ ಪರಮ ಪವಿತ್ರಳು, ಅಂಥವಳ ಪಿತನಾಗಿರುವುದೇ ಭಾಗ್ಯ, ಆದರೆ, ಅಂಥವಳ ಪತಿಯಾಗಲು ಹಕ್ಕು. …” ಎಂಬಷ್ಟು ಉರೆಯ ಉಚ್ಚರಿಸುವಾಗಲೇ ಮಿ. ವಿಕ್ಫೀಲ್ಡರು ಮಹಾ ಆರ್ತತೆಯ ಸ್ವರದಿಂದ “ಅಯ್ಯೋ” ಎಂದು ಕೂಗಿಯೇ ಬಿಟ್ಟರು. ಆದರೆ ಉರೆಯನು ಸ್ವಲ್ಪವೂ ತನ್ನ ಠೀವಿಯನ್ನು ಬದಲಿಸದೆ – “ಗಂಡಸಾದ ನನಗೆ ಇತರರಿಗಿರುವಷ್ಟೇ – ಏಕೆ, ಅದಕ್ಕಿಂತಲೂ ಹೆಚ್ಚು – ಇದ್ದೇ ಇದೆ” ಎಂದು ಗದರಿಸಿದನು.
ಮಿ. ವಿಕ್ಫೀಲ್ಡರ ಕೋಪವೂ ದುಃಖವೂ ಹೆಚ್ಚಾಗತೊಡಗಿತು. ಅವರ ಈ ಸ್ಥಿತಿ ಅಪಾಯಕರವೆಂದು ಗ್ರಹಿಸಿ, ನಾನು ಅವರಿಗೆ ಸಮಾಧಾನ ಹೇಳತೊಡಗಿದೆನು. ನನ್ನ ಮಾತನ್ನು ಕೇಳುತ್ತಾ – “ನೋಡು, ಅವನನ್ನು ನೋಡು – ಆ ಕ್ರೂರಿ, ಹಿಂಸಕಾರಿ, ಉರೆಯನನ್ನು ನೋಡು. ಯಾರಿಗಾಗಿ ನಾನು ನನ್ನ ಜೀವ ಮತ್ತು ಮರ್ಯಾದೆಗಳನ್ನು ಕಾಪಾಡಿಕೊಂಡು ಬದುಕಿದ್ದೇನೋ ಆ ಮುದ್ದು ಮಗಳ ಮೇಲೆ ಆ ಪಾಪಿಯ ದೃಷ್ಟಿ ಬಿದ್ದದ್ದು ನೋಡು” ಎಂದು ಗದ್ಗದ ಕಂಠದಿಂದ ವಿಕ್ಫೀಲ್ಡರು ಅಂದರು.
“ನಿಮ್ಮ ಮನೆ, ನಿಮ್ಮ ಹೆಸರು, ನಿಮ್ಮ ಮರ್ಯಾದೆ, ನಿಮ್ಮ ಮನಶ್ಶಾಂತಿ ಎಲ್ಲವನ್ನೂ ಕಾಪಾಡಿಕೊಂಡು ಬಂದಿರುವವನು ನಾನು. ಅಂಥ ನಿಮ್ಮ ಹಿತಚಿಂತಕನ ಮಾತೇ ನಿಮಗೆ ದುಃಖಕರವಾದರೆ, ಸದ್ಯ ಆ ವಿಷಯವೇ ಬೇಡ, ನಾನು ಪ್ರಸ್ತಾಪಿಸುವುದಿಲ್ಲ. ಬಡವನಾದ ನಾನು ಮುಂದರಿದ ಹಾಗೆಯೇ ಹಿಂದೆ ಸರಿಯಲೂ ಸಿದ್ಧನಾಗಿರುವೆನು” ಎಂದು ಕುತಂತ್ರಿ ಉರೆಯ ನಯ ವಿನಯದಿಂದ ಹೇಳಿ ಶಾಂತನಾಗಿ ಕುಳಿತುಬಿಟ್ಟನು. “ನಾನು ನಿನ್ನ ಮುಷ್ಠಿಯೊಳಗಿದ್ದೇನೆಂದು ನೀನು ಈ ರೀತಿ ಮಾಡುತ್ತಿರುವೆ. ನಿನ್ನಂಥವನ ಅಡಿಯಾಳಾಗಿ ಹೋದ ನನಗೆ ಇನ್ನು ಇತರರ ಅಧಿಕಾರಕ್ಕೊಳಪಡುತ್ತಾ ಮರ್ಯಾದೆ ಹೋಗುವುದೆಂದು ಇದೆಯೇ?” ಎಂದು ದುಃಖದಿಂದ ಹೇಳಿಕೊಂಡರು ಮಿ. ವಿಕ್ಫೀಲ್ಡ್. ಮಿ. ವಿಕ್ಫೀಲ್ಡ್ ಮಾತನ್ನು ಮುಂದುವರಿಸಿ ಏನೋ ಒಂದು ವಿಧದ ಸ್ಫೋಟನವನ್ನೇ ತಂದು ಬಿಡುವವರಂತೆ ತೋರುತ್ತಿದ್ದರು. ಬಂದದ್ದೆಲ್ಲ ಬರಲಿ, ಉರೆಯನ ಬೆದರಿಕೆಗೆ ಬಗ್ಗ ಬಾರದೆಂಬಂತೆ ಅವರಿರುವಂತೆ ತೋರಿದರು. ಆಗ ಉರೆಯ ಹೇಳಿದನು – “ಮಿ. ಕಾಪರ್ಫೀಲ್ಡ್, ನೀನು ಅವರ ಹಿತಚಿಂತಕನಾಗಿರುವವನಾದರೆ, ಮಿ. ವಿಕ್ಫೀಲ್ಡರು ಬಾಯಿ ಮುಚ್ಚಿಕೊಳ್ಳುವಂತೆ ಮಾಡು. ಇಲ್ಲದಿದ್ದರೆ ಅವರ ಸರ್ವನಾಶ ನಿಶ್ಚಯ. ನಿದ್ರಿಸಿರುವ ನಾಯನ್ನು ಎಬ್ಬಿಸಿ ಕಚ್ಚಿಸಿಕೊಳ್ಳಬಾರದೆಂಬ ಅಭಿಪ್ರಾಯವನ್ನು ಅವರಿಗೆ ತಿಳಿಸು.” “ಮಿ. ಟ್ರಾಟೂಡ್, ನಾನು ಮೈಮರೆತು ಕಷ್ಟಕ್ಕೆ ಈಡಾಗಿದ್ದೇನೆ. ಮೈ ಮರೆತಂದಿನಿಂದ ನಾನು ಹಣ, ಮಾನ ಮರ್ಯಾದೆಗಳಲ್ಲೆಲ್ಲ ಅಧೋ ಮುಖವಾಗಿ ಇಳಿಯುತ್ತಿದ್ದೇನೆ. ನಾನೇಕೆ, ಹೇಗೆ, ಹೀಗಾಗಿರುವೆನೆಂದು ಇತರರಿಗೆ ತಿಳಿಸಲು ಅಂಜುತ್ತೇನೆ. ನನಗಿದ್ದ ಒಂದು ದುಃಖದ ಶಮನಕ್ಕಾಗಿ ಮೈಮರೆತು ಸಂಗ್ರಹಿಸಿಕೊಂಡಿರುವ ಇನ್ನೊಂದು ದುಃಖವನ್ನು ನಾನು ಅನುಭವಿಸಿಯೇ ತೀರಬೇಕು. ನಾನು ಇದರಿಂದ ಪಾರಾಗುವಂತಿಲ್ಲ” ಎಂದನ್ನುತ್ತಾ ಮಿ. ವಿಕ್ಫೀಲ್ಡರು ಅತ್ತರು.
ಇಷ್ಟೆಲ್ಲಾ ನಡೆಯುತ್ತಿದ್ದಾಗ ಏಗ್ನೆಸ್ಸಳು ಹಠಾತ್ತಾಗಿ ನಾವು ಇದ್ದ ಕೋಣೆಗೆ ಬಂದು ತಂದೆಯನ್ನು ಸಮಾಧಾನ ಮಾಡುತ್ತಾ ತನ್ನ ಕೋಣೆಗೆ ಕರೆದುಕೊಂಡು ಹೋದಳು. ಅವಳ ಮುಖ ನೋಡಿದಾಗ ಅವಳು ಅತ್ತುಕೊಂಡೇ ಇದ್ದಂತೆ ತೋರಿದಳು. ನಮ್ಮ ಕೋಣೆಯಲ್ಲಿ ನಡೆದುದನ್ನೆಲ್ಲಾ ಅವಳು ಹೇಗೋ ನೋಡಿಯೂ ಕೇಳಿಯೂ ಇರಬೇಕೆಂದು ನಾನು ಊಹಿಸಿದೆನು. ಮರುದಿನ ಬೆಳಗ್ಗೆ ನಾನು ಎಲ್ಲರೂ ಏಳುವ ಮೊದಲೇ ಎದ್ದು ಬಂಡಿ ನಿಲ್ದಾಣಕ್ಕೆ ಹೋಗಿ ನಮ್ಮ ಮನೆ ಕಡೆಯ ಬಂಡಿಯನ್ನೇರಿದೆನು. ಎಲ್ಲೋ ಏತಕ್ಕೋಸ್ಕರವಾಗಿಯೋ ನಿಂತಿದ್ದ ಉರೆಯ ತನ್ನ ಬಾಯೊಳಗಿದ್ದ ಏನನ್ನೋ ಜಗಿಯುತ್ತಾ ಬಾಯಿ ಚಪ್ಪರಿಸುತ್ತಾ ನನ್ನ ಬಂಡಿಯ ಬಳಿಗೆ ಬಂದನು. ನನ್ನನ್ನು ನೋಡಿ – “ಮಿ. ಕಾಪರ್ಫೀಲ್ಡ್, ವೈನಿನ ಮತ್ತತೆಯಿಂದ ನಾವು ನಿನ್ನೆ ಸ್ವಲ್ಪ ದಾರಿ ತಪ್ಪಿ ಮಾತಾಡಿದೆವು. ಆದ್ರೆ ನಾನು ಮಿ. ವಿಕ್ಫೀಲ್ಡರೊಡನೆ ಕ್ಷಮೆ ಬೇಡಿಕೊಂಡು ಸ್ನೇಹವನ್ನು ಸರಿಪಡಿಸಿಕೊಂಡಿದ್ದೇನೆ. ಕ್ಷಮಾಯಾಚನೆ ನಮ್ಮಂಥ ಬಡವರಿಗೆ ಬಹು ಸ್ವಾಭಾವಿಕ. ನಾನು ಹೇಳಿದ ಮಾತುಗಳೇನೋ ಯಥಾರ್ಥವಾದವುಗಳೇ ಹೌದು. ಆದರೆ ಅವನ್ನು ಅಷ್ಟು ಅವಸರದಿಂದ ಅಡಬಾರದಿತ್ತು. ಬೆಳೆಯದ ಫಲವನ್ನು ಕೊಯ್ಯಲು ಪ್ರಯತ್ನಿಸಿದರೆ ಸಿಕ್ಕುವ ಫಲ ಇಂಥಾದ್ದೇ. ಎಲ್ಲವೂ ಬೆಳೆಯಲಿ, ಹಣ್ಣಾಗಲಿ. ಆಗ ತಾವಾಗಿಯೇ ಉದುರಿ ನಮ್ಮ ಕೈಗೆ ದೊರಕುವುವು. ಆಗ – ಈಗ ಮುಚ್ಚಿರುವ ಬಾಯ್ದೆರೆದು ಹಣ್ಣನ್ನು ನುಂಗಿದರಾಯ್ತು!” ಎಂದಂದುಕೊಂಡು, ನನಗೆ ನಮಸ್ಕರಿಸಿ, ಭಯಂಕರವಾದ ಉರೆಯ ನಿರೀಕ್ಷಿಸುತ್ತಿದ್ದ ಹಣ್ಣನ್ನೇ ಜಗಿದು ಸವಿನೋಡುತ್ತಿದ್ದವನಂತೆ ಬಾಯಿ ಆಡಿಸುತ್ತಾ ಹೊರಟುಹೋದನು.
(ಮುಂದುವರಿಯಲಿದೆ)