ಅಧ್ಯಾಯ ಮೂವತ್ಮೂರು
[ಡೇವಿಡ್ ಕಾಪರ್ಫೀಲ್ಡ್‍ನ ಜೀವನ ವೃತ್ತಾಂತ ಮತ್ತು ಅನುಭವಗಳು, ಕಾದಂಬರಿ. ಮೂಲ ಇಂಗ್ಲಿಷಿನಲ್ಲಿ ಚಾರ್ಲ್ಸ್ ಡಿಕನ್ಸ್, ಕನ್ನಡ ಭಾವಾನುವಾದ ಎ.ಪಿ. ಸುಬ್ಬಯ್ಯ]
ವಿ-ಧಾರಾವಾಹಿಯ ಮೂವತ್ತೈದನೇ ಕಂತು

ಈ ಸಮಯದಲ್ಲಿ ಡೋರಾಳ ಮೇಲಿನ ನನ್ನ ಪ್ರೇಮ ಏನೂ ಕಡಿಮೆಯಾಗಿರಲಿಲ್ಲ. ಅದು ಎಳೆಯುತ್ತಲೇ ಇತ್ತು. ನನ್ನ ದುಃಖಗಳಲ್ಲಿ, ಅಪಜಯಗಳಲ್ಲಿ, ಕಷ್ಟಗಳಲ್ಲಿ ಶಾಂತಿ ಕೊಡುತ್ತಿದ್ದ ಸಾಧನವೆಂದರೆ ಡೋರಾಳ ಚಿಂತನೆ ಒಂದು ಮಾತ್ರವಾಗಿತ್ತು. ದಿನದಿನದ ಜೀವನದ ಅನುಭವಗಳಲ್ಲಿ ಕಂಡು ಬರುತ್ತಿದ್ದ ಕಷ್ಟ ನಿಷ್ಠುರಗಳ ಕತ್ತಲು ಹೆಚ್ಚಿದಂತೆಲ್ಲ ಡೋರಾಳ ಪ್ರಭೆ ಹೆಚ್ಚೆಚ್ಚಾಗಿ ಶೋಭಿಸುತ್ತಿತ್ತು. ಈ ಲೋಕದ ಸಮಸ್ತ ಜನಗಳಿಗಿಂತ ಶ್ರೇಷ್ಠಳೇ ಡೋರಾ ಆಗಿದ್ದಳು. ಅವಳು ಈ ಲೋಕದವಳೇ ಅಲ್ಲದೆ, ದೈವಾಂಶ ಸಂಭೂತಳೇ ಅವಳೆಂದು ನಂಬಿ ಸಂತೋಷಿಸುತ್ತಿದೆನು. ಅವಳು ಪ್ರಪಂಚದ ಇತರರೆಲ್ಲಗಿಂತಲೂ ಮೇಲ್ತರಗತಿಯವಳೆಂಬುದರಲ್ಲಿ ನನಗೆ ಲವಲೇಶವೂ ಸಂಶಯವಿರಲಿಲ್ಲ. ಅವಳ ಚಿಂತನೆಯನ್ನು ಬಿಟ್ಟು ಇನ್ನು ಯಾವುದರಲ್ಲೂ ನಾನು ಮಗ್ನನಾಗಿರುತ್ತಿರಲಿಲ್ಲ. ಹಾಗೆ ಮಗ್ನನಾಗಿರಲು ಬಿಡುವೇ ಇರುತ್ತಿರಲಿಲ್ಲ. ಅವಳ ಚಿಂತನೆಯಲ್ಲಿ ನಾನು ಸದಾ ಮುಳುಗಿಕೊಂಡೇ ಇರುತ್ತಿದ್ದು ನನ್ನ ರಕ್ತ, ಅಸ್ತಿ, ಮಾಂಸಗಳೂ ಸಹ ಡೋರಾಳನ್ನು ಕುರಿತಾದ ಜ್ಞಾನದಿಂದ ಪೂರಿತವಾಗಿದ್ದುವು. ಡೋರಾಳು ಈ ಲೋಕದವಳಲ್ಲ – ದೇವಲೋಕದವಳು. ಅವಳು ಎಲ್ಲರಿಗಿಂತಲೂ ಮಿಗಿಲಾದವಳು, ಎಂಬ ನನ್ನ ಅಭಿಪ್ರಾಯವನ್ನು ತಪ್ಪೆಂದು ಕೇವಲ ಸಂಶಯದಿಂದ ಚರ್ಚಿಸಿದವರೊಡನೆ ನಾನು ಯುದ್ಧವನ್ನೇ ಮಾಡಲು ತಯಾರಿದ್ದೆ.

ನನ್ನ ಅನುಭವಗಳನ್ನೆಲ್ಲ ಬಾರ್ಕಿಸ್ ಪೆಗಟಿಗೆ ತಿಳಿಸಿದೆನು. ನನ್ನಂಥವರಿಗಲ್ಲದೆ ಇನ್ನು ಯಾರಿಗೆ ತಾನೆ ಮಿ. ಸ್ಪೆನ್ಲೋರವರ ಮಗಳು ಪತ್ನಿಯಾಗಬಲ್ಲಳೆಂದು ಅವಳು (ನನ್ನನ್ನು ಕುರಿತು) ಹೆಮ್ಮೆ ಪಟ್ಟುಕೊಂಡಳು. ಜತೆಯಲ್ಲೇ ಮಿ. ಸ್ಪೆನ್ಲೋರಂಥ ಸಂಬಂಧ ದೊರಕಬಹುದಾದುದಕ್ಕೆ ಸಂತೋಷಪಟ್ಟಳು. ನನ್ನ ವಕೀಲಿ ವೃತ್ತಿಯ ಸಂಬಂಧವಾಗಿ ನಾನು ಮಿ. ಸ್ಪೆನ್ಲೋರವರ ಸಮಕ್ಷಮದಲ್ಲಿ ಹೆಚ್ಚಾಗಿ ಇರುತ್ತಿದ್ದೆನು. ಈ ವಿಧದ ಒಡನಾಟದಲ್ಲಿ ನಾನು ಮಿ. ಸ್ಪೆನ್ಲೋರವರ ಆಫೀಸು, ಮರ್ಜಿ, ಠೀವಿಗಳನ್ನು ಕಂಡು ಹೆಮ್ಮೆಪಡುತ್ತಿದ್ದೆ. ಬಾರ್ಕಿಸ್ ಉಯಿಲನ್ನು ಜಾರಿಗೆ ತಂದು ಹಣದ ವಿಲೆವಾರಿ ಆದದ್ದೂ ನಮ್ಮ ಸ್ಪೆನ್ಲೋ ಕಂಪೆನಿಯಲ್ಲೇ. ಈ ಸಮಯದಲ್ಲೇ ಮಿ. ಮರ್ಡ್ಸ್ಟನ್ನರನ್ನು ಅನಿರೀಕ್ಷಿತವಾಗಿ ಕಂಡೆನು. ಒಂದು ಪುನರ್ವಿವಾಹದ ಲೈಸೆನ್ಸು ಸಂಬಂಧವಾಗಿ ಅವರು ನಮ್ಮಲ್ಲಿಗೆ ಬಂದಿದ್ದರು. ಈ ಸರ್ತಿ ಅವರು ಮದುವೆಯಾಗುತ್ತಿದ್ದುದೂ ಒಬ್ಬ ವಿಧವೆಯನ್ನೆಂದೂ ಆ ವಿಧವೆಗೂ ಸ್ವಲ್ಪ ಆಸ್ತಿಯಿತ್ತೆಂದೂ ತಿಳಿದೆನು. ಮಿ.ಸ್ಪೆನ್ಲೋರವರು ಇಂಥ ಎಲ್ಲ ವ್ಯವಹಾರಗಳಲ್ಲೂ ಮಿ. ಜಾರ್ಕಿನ್ಸರಿಗಿಂತ ಎಷ್ಟೆಷ್ಟೋ ಕರುಣಾಳುಗಳು – ದಾಕ್ಷಿಣ್ಯವಂತರು. ಬಾರ್ಕಿಸನ ಉಯಿಲಿನ ಬಗ್ಗೆ ಅವರು ಫೀಸು ತೆಗೆದುಕೊಳ್ಳುವಾಗ ಅವರ ಜತೆಗಾರ ಮಿ. ಜಾರ್ಕಿನರ ಕಾಠಿಣ್ಯ, ಕಾರ್ಪಣ್ಯ ಎಷ್ಟಿತ್ತೆಂಬುದರ ಅರಿವು ನನಗೆ ಆಗಿದೆ. ಸಮಾಜವೂ ಸರಕಾರವೂ ಈಗಿರುವಂತೆಯೇ ಇರುವಷ್ಟು ಕಾಲ ವಕೀಲರಾದವರು ಆ ರೀತಿ ಫೀಸು ತೆಗೆದುಕೊಳ್ಳಲೇ ಬೇಕಾಗುತ್ತದೆಂದೂ ಅವರ ಕ್ರಮ ಮರ್ಜಿಗಳೆಲ್ಲ ಆ ರೀತಿ ಇರಲೇಬೇಕೆಂದೂ ಅವರು ತಿಳಿಸಿದ್ದರು. ಅವರ ಅಗಲವಾದ ಮೇಜಿನ ಮೇಲೆ ಬಿದ್ದಿದ್ದ ದಪ್ಪ ದಪ್ಪದ ಪುಸ್ತಕಗಳೂ ರಿಕಾರ್ಡು ಕಟ್ಟುಗಳೂ ಮೊದಲಾದ ಅಮೂಲ್ಯ ವಸ್ತುಗಳ ಎದುರು ಕುಳಿತು ಠೀವಿಯಿಂದ ಅಧಿಕಾರ ಚಲಾಯಿಸುತ್ತಿದ್ದಾಗ ಅವರಷ್ಟು ಬುದ್ಧಿವಂತರೂ ಘನವಂತರೂ ಬೇರೊಬ್ಬರಿಲ್ಲವೆಂದು ನಾನು ತಿಳಿಯುತ್ತಿದ್ದೆನು. ಅಂಥ ಕಟುವಾದ ಕಾನೂನಿನ ಸಮಸ್ಯೆಗಳನ್ನು ಒಳಗೊಂಡ ಪುಸ್ತಕ, ರಿಕಾರ್ಡುಗಳ ಮಧ್ಯೆ ಅವರು ಸಮುದ್ರಮಧ್ಯದ ದೀಪಸ್ತಂಭದಂತೆ ರಾರಾಜಿಸುತ್ತಿದ್ದರು.

ಮಿ. ಸ್ಪೆನ್ಲೋರವರು ಹೀಗೆ ಅನೇಕ ವಿಷಯಗಳನ್ನು ನನಗೆ ತಿಳಿಸುತ್ತಲೂ ಹೇಳಿಕೊಡುತ್ತಲೂ ನನ್ನನ್ನು ಸಾಧಾರಣ ಅವರ ಆಪ್ತನಂತೆ ಮಾಡಿಕೊಂಡಿದ್ದರು. ಒಂದು ದಿನ ಅವರ ಮಗಳ ಜನ್ಮದಿನದ ನೆನಪು ಬಂದು ಆ ದಿನದಲ್ಲಿ ಸಮಾರಂಭವನ್ನು ಏರ್ಪಡಿಸಿ, ನನಗೂ ಆ ಸಮಾರಂಭಕ್ಕೆ ಆಮಂತ್ರಣವಿತ್ತರು. ನನಗೆ ಆಮಂತ್ರಣ ದೊರೆತ ಮೇಲಿನ ನನ್ನ ಮನಸ್ಸಿನ ಭಾವನೆಗಳನ್ನೆಲ್ಲ ವಿವರಿಸುವುದು ಅಸಾಧ್ಯ. ಆದರೂ ಕೆಲವೊಂದು ವಿಷಯಗಳನ್ನು ಮಾತ್ರ ಇಲ್ಲಿ ಹೇಳುತ್ತೇನೆ. ಕ್ರಯ ಬಾಳುವ ಒಂದು ಅಂಗವಸ್ತ್ರವನ್ನೂ ಹೊಸತಾದ ಒಂದು ಜತೆ ಬೂಟ್ಸುಗಳನ್ನೂ ಒಂದು ಕೈಬುಟ್ಟಿಯಲ್ಲಿ ಡೋರಾಳಿಗೆ ಅರ್ಪಿಸುವುದಕ್ಕಾಗಿ ಬಹು ಸುಂದರವಾದ ಹೂಗೊಂಚಲೊಂದು, ಕೆಲವು ಬಿರುಸು ಬಾಣಗಳೂ ಸ್ವಲ್ಪ ತಿಂಡಿ ಇತ್ಯಾದಿಗಳನ್ನೂ ತೆಗೆದುಕೊಂಡೆನು. ಅಲ್ಲದೆ ಆ ದಿನ ನಾನು ಮಿ. ಸ್ಪೆನ್ಲೋರವರ ಮನೆಗೆ ಹೋಗಲೋಸ್ಕರ ಠೀವಿಯ ಒಂದು ಕುದುರೆಯನ್ನು ಬಾಡಿಗೆಗೆ ತೆಗೆದುಕೊಂಡೆನು.

ಡೋರಾಳ ಜನ್ಮದಿನದ ಬೆಳಗ್ಗೆ ಚೆನ್ನಾಗಿ ದುಸ್ತು ಮಾಡಿ, ಕುದುರೆಯನ್ನೇರಿ ಮಿ. ಸ್ಪೆನ್ಲೋರವರ ನಾರ್ವುಡ್ಡಿನ ಮನೆ ಕಡೆಗೆ ಹೊರಟೆನು. ಪಾದಗಳ ಸೌಂದರ್ಯವನ್ನು ಹೆಚ್ಚಿಸುವುದಕ್ಕಾಗಿ ಅಳತೆಯಲ್ಲಿ ಚಿಕ್ಕದಾಗಿದ್ದ ಬೂಟ್ಸನ್ನು ನಾನು ಧರಿಸಿದ್ದು, ಆ ಬೂಟ್ಸಿನ ಬಾಧೆಯೊಂದಲ್ಲದಿದ್ದರೆ ಆ ಸವಾರಿ ಬಹು ಸೊಗಸಾಗಿತ್ತು. ಕೈದಿಗಳನ್ನೋ ಶತ್ರುಗಳನ್ನೋ ಹಿಂಸಿಸಲು ಪೂರ್ವ ಕಾಲದಲ್ಲಿ ಏರ್ಪಡಿಸಿಕೊಂಡಿದ್ದ ಸಾಧನಗಳಲ್ಲಿ ಒಂದು ಆಗಬಹುದಾದಂಥ ಬೂಟ್ಸುಗಳನ್ನು ಧರಿಸಿದುದರ ವೇದನೆ ಅಷ್ಟೊಂದಿತ್ತು. ಆದರೂ ಆ ವೇದನೆ, ನಾರ್ವುಡ್ಡಿಗೆ ಇದ್ದ ದೂರ ಎಲ್ಲವೂ ಬಹು ಅಲ್ಪವಾಗಿ ತೋರಿ, ನಾನು ಬಹು ಬೇಗನೇ ಮಿ.ಸ್ಪೆನ್ಲೋರವರ ಸ್ಥಳಕ್ಕೆ ತಲುಪಿದೆನು.

ಮಿ.ಸ್ಪೆನ್ಲೋರವರ ಆ ಸುಂದರ ಮಹಲೂ ಆ ಸಿಂಗಾರದ ಹೂದೋಟವೂ ಪ್ರಪಂಚದ ಅತ್ಯಂತ ರಮ್ಯ ಸ್ಥಳಗಳಲ್ಲಿ ಒಂದನೆಯದಾಗಿದ್ದುವು. ನಾನು ಮನೆಗೆ ತಲುಪುವ ಮೊದಲೇ ದೂರದಿಂದಲೇ ಡೋರಾಳನ್ನು ಕಂಡೆನು. ಅವಳನ್ನು ಕಂಡದ್ದರಿಂದ ನನ್ನ ಇರೋಣವನ್ನೇ ಮರೆಯ ತೊಡಗಿದೆ. ಆದರೂ ಸಮಾಜದ ನಿರ್ಬಂಧ, ನಿಯಮಗಳ ಭಯದಿಂದ, ನಾನು ಸೀದಾ ಮನೆಗೆ ಹೋದೆ. ಹೋದವನು ಬಲ ಬದಿಗೆ ತಿರುಗಿದಾಗ ಅಕಸ್ಮಾತ್ತಾಗಿ ಅವಳನ್ನು ಕಂಡವನಂತೆ ನಟಿಸಿ, ಅವಳನ್ನು ಪೂರ್ಣ ನೋಡಿದೆನು. ಆವರೆಗೆ ನನ್ನನ್ನು ಹಿಂಸಿಸುತ್ತಿದ್ದ ಬೂಟ್ಸುಗಳ ಇರೋಣವೇ ನನಗೆ ಈಗ ಮರೆತು ಹೋಯಿತು. ಡೋರಾಳ ಧ್ಯಾನ, ಅವಳನ್ನು ಏನೆಂದು ಮಾತಾಡಿಸುವುದು, ಹೇಗೆ, ಎಂಬ ಯೋಚನೆಗಳಿಂದ ಕೂಡಿ, ಡೋರಾಳ ಸಾಮೀಪ್ಯವನ್ನೇ ಪಡೆದೆನು.

ಹಸುರೆಲೆಗಳಿಂದ ತುಂಬಿ ಬೆಳೆದಿದ್ದ ವಿಶಾಲ ವೃಕ್ಷದಡಿಯ ತಂಪಿನ ನೆರಳಿನಲ್ಲಿ, ನೀಲಬಣ್ಣದ, ಮೈಗೊಪ್ಪುವ ಲಂಗವನ್ನು ಧರಿಸಿ, ರಕ್ತವರ್ಣದ ಉತ್ತರೀಯವನ್ನು ಹೊದೆದು, ಪುಷ್ಕಳವಾಗಿಯೂ ಮೃದುವಾಗಿಯೂ ಬೆಳೆದು ಚದರಿ ಬರುತ್ತಿದ್ದ ಗುಂಗುರು ತಲೆಗೂದಲನ್ನು ಒತ್ತಿಡುತ್ತಿದ್ದ ಟೊಪ್ಪಿಯನ್ನು ಧರಿಸಿ, ಸುಂದರವಾದ ಹಿನ್ನೆಲೆಯ ಮೇಲೆ ಚಿತ್ರಿಸಿದ್ದ ಒಂದು ಸುಂದರವಾದ ಹೂವಿನಂತೆ, ಡೋರಾ ಒಂದು ಆಸನದ ಮೇಲೆ ಕುಳಿತಿದ್ದಳು – ಕುಳಿತು ಶೋಭಿಸುತ್ತಿದ್ದಳು.

ಮೈಯಲ್ಲಿ ನಡುಗದಿದ್ದರೂ ಮನಸ್ಸಿನಲ್ಲೇ ಭಾವಪರವಶತೆಯಿಂದ ನಡುಗುತ್ತ, ನಾನು ತೆಗೆದುಕೊಂಡು ಹೋಗಿದ್ದ ನಜರನ್ನು ಬಗ್ಗಿ ನಿಂತು ಅವಳಿಗೆ ಸಮರ್ಪಿಸಿದೆ. ನಾನು ಅರ್ಪಿಸಿದ ಹೂಗೊಂಚಲನ್ನು ನೋಡಿ ಸಂತೋಷಿಸುತ್ತಾ ಅವಳು – “ಬಹು ಚಂದದ ಗೊಂಚಲಲ್ಲವೇ ಮಿ. ಕಾಪರ್ಫೀಲ್ಡ್, ಇದು” ಎಂದು ಕೇಳಿದಳು.

ಡೋರಾಳಿಂದ ಮೂರು ಮೈಲು ದೂರದಲ್ಲಿದ್ದಾಗಲೇ ಅವಳೊಡನೆ ಮಾತಾಡಲು ನಿಶ್ಚೈಸಿಕೊಂಡಿದ್ದ ಪ್ರೇಮಮಯ ವಚನಭಂಡಾರವೇ ಆಗ ನನ್ನಿಂದ ತೊಲಗಿ ಮಾಯವಾಯಿತು. ಅವಳ ಸಮೀಪದಲ್ಲಿ ನಾನು ಪ್ರತ್ಯೇಕ ಒಬ್ಬ ವ್ಯಕ್ತಿಯಾಗಿದ್ದು, ಆಲೋಚಿಸಿ ವರ್ತಿಸುವ ನನ್ನ ವ್ಯಕ್ತಿಯೇ ಕಾಣದೆ ಆಯಿತು. ನಾನೆಂಬುದೇ ಉಳಿಯದೆ ಅಲ್ಲಿದ್ದುದೆಲ್ಲ ಡೋರಾ ಮಾತ್ರವಾಗಿ ಹೋಯಿತು. ನಾ ಕೊಟ್ಟ ಹೂಗಳನ್ನು ಅವಳು ಒಮ್ಮೆ ತನ್ನ ಮೃದು ಕಪೋಲಗಳಿಗೆ ಒತ್ತಿಟ್ಟುಕೊಂಡು ನೋಡಿದಳು. ಅನಂತರ ತನ್ನ ಕೋಮಲ ನಾಸಿಕಕ್ಕೆ ಅಲಂಕಾರವಾಗಿರಿಸಿ ನೋಡಿದಳು. ಅನಂತರ ಅದನ್ನು ಆ ಸುಂದರ ನಾಸಿಕದಡಿ ಹಿಡಿಯುತ್ತಾ ಆಘ್ರಾಣಿಸುತ್ತಾ ಸುವಾಸನೆಯ ಸಂತೋಷದಿಂದ ತುಂಬಿದ ಕಣ್ಣುಗಳಿಂದ ನನ್ನನ್ನು ನೋಡಿದಳು. ಅವಳು ನನ್ನನ್ನು ನೋಡಿದ ಆ ಕಣ್ಣುಗಳನ್ನು ನಾನು ಕಂಡು ನನಗೆ ಆದ ಆನಂದಾತಿಶಯ ಅವರ್ಣನೀಯ. . ಆನಂದಾತಿಶಯದಿಂದ ನನ್ನ ಇರವೇ ನನಗೆ ಮರೆತು ಹೋಯಿತು. ನಾನು ಮೊಣಕಾಲನ್ನೂರಿಕೊಂಡು ಕತ್ತನ್ನು ಬಗ್ಗಿಸಿ, “ನನ್ನನ್ನು ದಯಮಾಡಿ ಈ ಕೂಡಲೇ ಸಂಹರಿಸಿ ನನ್ನ ಈಗಿನ ಆನಂದವು ಬದಲಾಗದಂತೆ ಅನುಗ್ರಹಿಸು ದೇವೀ” ಎಂದು ಹೇಳದಿದ್ದುದು ನನ್ನ ಪುಣ್ಯ! ಹಾಗೆ ಹೇಳಿಬಿಡಬೇಕೆಂದೇ ನನಗೆ ಬಹುವಾಗಿ ತೋರಿತು.

ಆ ಹೂಗೊಂಚಲನ್ನು ಡೋರಾ ತನ್ನ ಜಿಪ್ಪನ ಮೂಗಿಗೂ ಹಿಡಿದಳು. ಜಿಪ್ಪ್ ಅದನ್ನು ಮೂಸಿ ನೋಡಲಿಲ್ಲ. ಅದಕ್ಕಾಗಿ ಅದನ್ನು ಹೊಡೆದಳು. ನಾನೇ ಜಿಪ್ಪನಾಗಿ ಅವಳ ಮೃದು ಹಸ್ತದಿಂದ ಪೆಟ್ಟು ತಿನ್ನಬಹುದಿತ್ತಷ್ಟೆ, ಎಂದು ನಾನು ಜಿಪ್ಪನನ್ನೆ ಮಾತ್ಸರ್ಯದಿಂದ ನೋಡಿದೆನು. “ಮಿ.ಕಾಪರ್ಫೀಲ್ಡ್, ಮಿಸ್ ಮರ್ಡ್ಸ್ಟನ್ನಳು ಅವಳ ಅಣ್ಣನ ಮದುವೆಗಾಗಿ ರಜೆಯಲ್ಲಿ ಹೋಗಿದ್ದಾಳೆ – ಮೂರು ವಾರಗಳ ಒಳಗೆ ಬರುವ ಹಾಗಿಲ್ಲ. ಆ ಮಾರಿ ಹೋದದ್ದು ಬಹು ಸುಖವಾಯಿತು, ಅಲ್ಲವೇ?” ಎಂದು ಕೇಳಿದಳು ಡೋರಾ. ಈ ವಿಷಯವನ್ನೇ ಮಾತಾಡುತ್ತಾ ಮಿಸ್ ಮರ್ಡ್ಸ್ಟನ್ನಳ ಬದಲಿಗೆ ಬಂದಿದ್ದ ಮಿಸ್ ಜೂಲಿಯಾ ಮಿಲ್ಸಳ ಪರಿಚಯವನ್ನು ಮಾಡಿಕೊಟ್ಟಳು. ಅವಳು ಸಾಧಾರಣ ಇಪ್ಪತ್ತು ವರ್ಷ ಪ್ರಾಯವಾಗಿದ್ದವಳಂತೆ ತೋರುತ್ತಿದ್ದಳು. ಅವಳ ಹೆಚ್ಚಿನ ಪರಿಚಯ ಅನಂತರ – ಕ್ರಮೇಣವಾಗಿ – ಆದದ್ದಾದರೂ ಆಗಿನ ಮೊದಲಿನ ಪರಿಚಯದಲ್ಲೇ ಅವಳು ಮಿಸ್ ಮರ್ಡ್ಸ್ಟನ್ನಳಿಗಿಂತ ಎಷ್ಟೆಷ್ಟೋ ಸೌಮ್ಯ ಸ್ವಭಾವದವಳೆಂದು ತಿಳಿಯಿತು.

ಅನಂತರ ತಿಳಿದು ಬಂದ ಪ್ರಕಾರ, ಅವಳು ಒಬ್ಬ ವಿರಕ್ತೆಯಾಗಿದ್ದಳು. ಅವಳು ಓರ್ವ ಅಪರಿಚಿತನಲ್ಲಿ ತನ್ನ ಪ್ರೇಮವನ್ನು ವಿಶ್ವಾಸನ್ನೂ ಇಟ್ಟು, ಆತನ ವಿಶ್ವಾಸಘಾತದಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಈ ಜನ್ಮದಲ್ಲಿ ತಾನು ಮದುವೆಯಾಗುವುದಿಲ್ಲವಾಗಿ ಪ್ರತಿಜ್ಞೆ ಮಾಡಿದ್ದಳಂತೆ. ಆದರೂ ಪ್ರೇಮದ ಅನುಭವ ಅವಳಿಗೆ ಇದ್ದುದರಿಂದ ನಮ್ಮಲ್ಲಿ ಸಹಾನುಭೂತಿಯುಳ್ಳವಳಾಗಿದ್ದು, ನಮ್ಮ ಸ್ವಾಭಾವಿಕ ಮತ್ತು ಸಾಂಪ್ರದಾಯಿಕ ಪ್ರೇಮ ವಿಕಾಸಕ್ಕೆ ತುಂಬಾ ಸಹಕಾರಿಯಾಗಿದ್ದಳು. ನಾವು ಮೂವರೂ ಕುಳಿತು ಮಾತಾಡುತ್ತಿದ್ದಲ್ಲಿಗೆ ಮಿ. ಸ್ಪೆನ್ಲೋರವರು ಬಂದು ವನಭೋಜನಕ್ಕೆ ಹೋಗಲು ನಾವು ಸಿದ್ಧರಾಗಬೇಕೆಂದು ತಿಳಿಸಿದರು. ನಮಗೆ ವಿಶೇಷ ಸಿದ್ಧತೆಯೇನೂ ಅಗತ್ಯವಿಲ್ಲದಿದ್ದುದರಿಂದ ನಾವು ಆ ಕೂಡಲೇ ಹೊರಟೆವು.

ನಾವು ಹೋಗಬೇಕಾಗಿದ್ದ ಸ್ಥಳ ಮಿ. ಸ್ಪೆನ್ಲೋರವರ ಬಂಗಲೆಯಿಂದ ಕೆಲವು ಮೈಲು ದೂರದ ಒಂದು ಸಾರ್ವಜನಿಕ ವಿಹಾರ ಕ್ಷೇತ್ರವಾಗಿತ್ತು. ಮಿ. ಸ್ಪೆನ್ಲೋ, ಡೋರಾ ಮತ್ತು ಮಿಸ್ ಜೂಲಿಯಾ ಮಿಲ್ಸರು ಒಂದು ಕುದುರೆ ಸಾರೋಟಿನಲ್ಲಿ ಕುಳಿತು ಹೊರಟರು. ಮಿ.ಸ್ಪೆನ್ಲೋರವರು ಮುಂದೆ ಮುಖ ಹಾಕಿ ಸಾರೋಟಿನ ಮುಂಭಾಗದಲ್ಲೂ ಹಿಮ್ಮುಖವಾಗಿ ಹಿಂಬದಿಯಲ್ಲಿ ಡೋರಾಳೂ, ಮಿಸ್ ಮಿಲ್ಸಳೂ ಕುಳಿತಿದ್ದರು. ನಾನು ನನ್ನ ಕುದುರೆಯಲ್ಲಿ ಕುಳಿತು ಸಾರೋಟನ್ನು ಹಿಂಬಾಲಿಸಿ ಹೋದೆನು. ನಮ್ಮ ವನಭೋಜನದ ತಿಂಡಿ ತಿನಸು, ಸಂಗೀತದ ಸಾಹಿತ್ಯ ಮೊದಲಾದುವೆಲ್ಲ ಸಾರೋಟಿನಲ್ಲಿದ್ದುವು. ನಾನು ಡೋರಾಳನ್ನು ನೋಡಿಕೊಂಡೇ ಹಿಂಬಾಲಿಸಿದೆನು. ಹಾಗೊಂದು ನೋಡಿಯೂ ದಣಿಯದೆ, ನನ್ನ ಕುದುರೆಯನ್ನೇ ದಾಟಿ, ಆ ಸಾರೋಟಿಗೇ ಹಾರೋಣವೆಂಬಂತೆಯೇ ನನಗೆ ತೋರುತ್ತಿತ್ತು. ಅಂದಿನ ನನ್ನ ಕುದುರೆ ಸವಾರಿಯನ್ನು ನಾನೆಂದಿಗೂ ಮರೆಯೆನು – ಅಂಥ ಸವಾರಿಯನ್ನು ನಾನು ಇನ್ನೆಂದಿಗೂ ಮಾಡಲಾರೆನು. ಸವಾರಿಯ ಸಂತೋಷದಲ್ಲಿ ದಾರಿಯಲ್ಲಿ ಏಳುತ್ತಿದ್ದ ಧೂಳನ್ನೂ ಗ್ರಹಿಸಲಿಲ್ಲ. ರಸ್ತೆಯಲ್ಲಿ ಏಳುತ್ತಿದ್ದ ಧೂಳನ್ನು ತೋರಿಸಿ ಮಿ. ಸ್ಪೆನ್ಲೋರವರು ನಾನು ಸ್ವಲ್ಪ ಮುಂದೋ ಅಥವಾ ಇನ್ನು ಸ್ವಲ್ಪ ಹಿಂದೋ ಬಂದರೆ ಉತ್ತಮವಲ್ಲವೇ ಎಂದು ಬುದ್ಧಿವಾದ ಹೇಳಿದರು. ನಾನು ಧೂಳನ್ನು ಗಮನಿಸದಿದ್ದಂತೆಯೇ ಅವರ ಮಾತನ್ನು ಗಮನಿಸದೆ, ಸಾರೋಟನ್ನು ಹಿಂಬಾಲಿಸಿದೆನು. ನನ್ನ ದೃಷ್ಟಿಯಲ್ಲಿ ಸ್ಥಿರವಾಗಿ ಗೋಚರವಾಗಿದ್ದುದು ಡೋರಾಳೂ ಮತ್ತು ಅವಳ ಸುತ್ತಲೂ ಹರಡಿ ನನ್ನ ಮನಸ್ಸಿಗೂ ದೃಷ್ಟಿಗೂ ಅತುಳವಾದ ಆನಂದವನ್ನು ಕೊಡುತ್ತಿದ್ದ ಪ್ರೇಮದ ಪ್ರಭಾವಳಿ ಮಾತ್ರ!

ಕೊನೆಗೆ ನಾವು ಆ ಸ್ಥಳಕ್ಕೆ ತಲುಪಿದೆವು. ಆ ಸ್ಥಳ ಯಾವುದೆಂದು ನಾನು ಈಗ ಗುರುತಿಸಿ ಹೇಳಲಾರೆನು – ಆ ದಿನ ನನಗೆ ಆ ಸ್ಥಳ ಈ ಲೋಕದ್ದಾಗಿರಲಿಲ್ಲ. ಅರೆಬಿಯನ್ ನೈಟ್ಸಿನ ದಂತಕಥೆಗಳಲ್ಲಿ ಮಂತ್ರವಾದಿಯಿಂದ ನಿರ್ಮಿತವಾದ ಭವ್ಯ ಕ್ಷೇತ್ರ ಮಾತ್ರವಾಗಿತ್ತು. ನಾವು ಕುಳಿತ ಸ್ಥಳದಿಂದ ನೋಡಿದರೆ ನಮ್ಮ ದೃಷ್ಟಿ ತಲುಪುವವರೆಗೆ ಮೈದಾನ ಮತ್ತು ಚಿಕ್ಕ ಗುಡ್ಡಗಳ ಹಸುರು ದೃಶ್ಯಗಳನ್ನು ಕಾಣಬಹುದಿತ್ತು. ಆ ಪ್ರದೇಶವೆಲ್ಲಾ ಹಸುರು ಕಂಬಳಿಯಿಂದ ಆಚ್ಛಾದಿತವಾಗಿದ್ದಂತೆ ಬೆಳೆದಿದ್ದ ಹುಲ್ಲಿನಿಂದ ಹಸುರಾಗಿತ್ತು. ಬೆಟ್ಟದ ಇಳಿಜಾರಿನಲ್ಲಿ ಸುಂದರವಾದ ಮರದ ತೋಪುಗಳೂ ಕಂಡು ಬರುತ್ತಿದ್ದುವು.

ನಾವು ಹೋದ ಸ್ಥಳದಲ್ಲಿ ನಮ್ಮನ್ನೇ ಎದುರು ನೋಡುತ್ತಿದ್ದ ಕೆಲವು ಗೃಹಸ್ಥರೂ ಗೃಹಿಣಿಯರೂ ಕುಳಿತಿದ್ದರು. ಅವರೆಲ್ಲರೂ ನಮ್ಮ ಅಂದಿನ ಔತಣಕ್ಕೆ ಆಮಂತ್ರಿತರಾಗಿ ಬಂದಿದ್ದರು. ನಾವೆಲ್ಲಾ ಚೊಕ್ಕಟವಾದ ಮತ್ತು ಅನುಕೂಲ ತೋರಿದ ಒಂದು ಸ್ಥಳದಲ್ಲಿ ಭೋಜನಕ್ಕೆ ಕುಳಿತೆವು. ನಾವೂ ಬಂದ ಇತರರೂ ಸಮಾರಂಭ ನಮ್ಮೆಲ್ಲರದೂ ಎಂಬಂತೆ ತಿಂಡಿ ತಿನಿಸುಗಳನ್ನು ಬಡಿಸುವುದರಲ್ಲಿ, ಹಂಚುವುದರಲ್ಲಿ ಸಹಕರಿಸಿದೆವು. ಆದರೆ, ಅಲ್ಲಿಗೆ ಬಂದಿದ್ದವರ ಪೈಕಿ ಕೆಂಪು ಮೀಸೆಯ ಗೃಹಸ್ಥನೊಬ್ಬನು ನಮ್ಮ ಊಟ, ಮಾತು, ಹಾಸ್ಯ – ಎಲ್ಲದರಲ್ಲೂ ನನಗಿಂತ ಹಿರಿಯವನಂತೆ ವರ್ತಿಸಿ, ಆ ಕಾರಣವಾಗಿ ನನ್ನನ್ನು ಹಿಂದಿರಿಸಿ, ನನಗೆ ಬಹುವಾದ ಹಿಂಸೆಯನ್ನು ಕೊಡುತ್ತಿದ್ದನು. ಹಣ್ಣುಗಳ ಸಾಲಡ್ಡನ್ನು – ತಾನು ಅದರ ತಯಾರಿಯಲ್ಲಿ ಬಹು ನುರಿತವನೆಂದಂದುಕೊಂಡು, ತಾನೇ ತಯಾರಿಸಿ ನಮಗೆಲ್ಲರಿಗೂ ಬಡಿಸಿದನು. ನಾನು ಅದನ್ನು ತುದಿನಾಲಿಗೆಯಲ್ಲೂ ಮುಟ್ಟಲಿಲ್ಲ. ವೈನ್ ಹಂಚುವುದರಲ್ಲೂ ಹಣ್ಣು ಹಂಚುವುದರಲ್ಲೂ ಅವನೇ ಕೈ ಹಾಕುತ್ತಾ ಈ ರೀತಿ ಎಲ್ಲಾ ಕಡೆ – ಡೋರಾಳ ಸಮೀಪದಲ್ಲೂ – ಎಲ್ಲದರಲ್ಲೂ ಬುದ್ಧಿವಂತನಾಗಿ ಮೆರೆದನಲ್ಲದೆ (ಈಗ ಬರೆಯುವಾಗಲೂ ನನಗೆ ರೋಷವೇರುತ್ತದೆ!), ಅವನು ಡೋರಾಳ ಕಾಲು ಬುಡದಲ್ಲೇ ಒಂದು ತಟ್ಟೆ ತುಂಬ ತಿಂಡಿಯನ್ನು ಹಾಕಿಕೊಂಡು ಅವಳೊಡನೆ ಮಾತಾಡುತ್ತಾ ಕುಳಿತನು. ಆಗಲಂತೂ ನನಗೆ ಆದ ಹಿಂಸೆ, ಅವನ ಮೇಲಿನ ದ್ವೇಷ ವರ್ಣಿಸಲಸಾಧ್ಯ. ಆ ಕೆಮ್ಮೀಸೆಯವನನ್ನು ನನ್ನ ಆಜನ್ಮ ವೈರಿಯೆಂದೇ ನಿರ್ಧರಿಸಿದೆನು.

ನಾನು ಒಬ್ಬ ನೇರಳೆ ಬಣ್ಣದ ಲಂಗ ಧರಿಸಿದ್ದ, ಹೊಳೆಯುವ ಕಣ್ಣುಗಳೇ ಪ್ರಧಾನವಾಗಿ ಮುಖದಲ್ಲಿ ರಂಜಿಸಿ ತೋರಿಬರುತ್ತಿದ್ದ, ಮಿಸ್ ಸ್ಕಿಟಲ್ಸ್ ಎಂಬ ಹುಡುಗಿಯ ಜತೆಯಲ್ಲಿ ಕುಳಿತು ಊಟಮಾಡಿದೆ, ವೈನ್ ಕುಡಿದೆ, ಹಾಡಿದೆ, ಒಂದು ವಿಧದಲ್ಲಿ ಸಂತೋಷದಿಂದ ಹಾರಾಡಿದೆ – ಸ್ವಲ್ಪ ಉದ್ವೇಗದಿಂದಲೇ ಎಲ್ಲವನ್ನೂ ಮಾಡಿದೆ. ಆದರೆ ಈ ಎಲ್ಲಾ ಕಾರ್ಯಗಳಲ್ಲೂ ನನ್ನ ಅಂತರಂಗದಲ್ಲಿ ಮಾತ್ರ ಸದಾ ಜನ್ನ ಜತೆಯಲ್ಲಿದ್ದುದು ಡೋರಾಳೇ ಆಗಿದ್ದಳು. ನಾನು ವೈನ್ ಕುಡಿದಾಗಲೆಲ್ಲ ಡೋರಾಳ ಆರೋಗ್ಯವರ್ಧನೆಯನ್ನು ಬಯಸಿಯೇ ಕುಡಿದೆನು.

ಊಟ ಮುಗಿದನಂತರ ನಾವು ಅಲ್ಲೇ ಸ್ವಲ್ಪ ದೂರ ಬೇರೆ ಬೇರೆ ಚದರಿ ತಿರುಗಾಡಿದೆವು. ನಾನೊಬ್ಬನೇ ಇದ್ದ ಸ್ಥಳಕ್ಕೆ ಡೋರಾಳೂ ಮಿಸ್ ಜೂಲಿಯಾ ಮಿಲ್ಸಳೂ ಬಂದರು. ಮಿಸ್ ಮಿಲ್ಸ್ ನನ್ನನ್ನು ನೋಡಿ – “ಮಿ. ಕಾಪರ್ಫೀಲ್ಡ್, ಏನು, ಸ್ವಲ್ಪ ಬೇಸರದಲ್ಲಿರುವಂತೆ ತೋರುತ್ತೀರಿ” ಅಂದಳು. “ಇಲ್ಲ ಸಂತೋಷವಾಗಿಯೇ ಇದ್ದೇನೆ” ಎಂದು ಉತ್ತರವಿತ್ತೆ. “ನಿಮ್ಮ ಹಾಗೆಯೇ ಡೋರಾಳೂ ದುಃಖದಲ್ಲಿರುವಂತೆ ತೋರುತ್ತಾಳೆ” ಅಂದಳು ಮಿಸ್ ಮಿಲ್ಸ್. “ಇಲ್ಲ” ಅಂದಳು ಡೋರಾ. “ಹಾಗನ್ನಬಾರದು – ನೀವಿಬ್ಬರೂ ಎಳೆಯ ಪ್ರಾಯದವರು, ಅನುಭವವಿಲ್ಲದವರು” ಎಂದು ಹೇಳಿ, ಹಿಂದಿನ ಕಾಲದ ಅವಳ ಪ್ರೇಮಮಯ ಅನುಭವಗಳನ್ನು ನೆನಸಿಕೊಂಡು, ಅವಳ ಅನುಭವವನ್ನು ಲೋಕಕಲ್ಯಾಣಕ್ಕಾಗಿ ಜ್ಞಾನ ವೃದ್ಧೆಯಾದ ತಾನು ಒದಗಿಸುವುದು ಕರ್ತವ್ಯವೆಂದು, ಮಾತನ್ನು ಮುಂದುವರಿಸುತ್ತಾ – “ಈ ರೀತಿ ಮನವನ್ನು ಮರೆಮಾಚಿ ಹೃದಯವನ್ನು ಹಿಂಸಿಸಿಕೊಳ್ಳಬಾರದು. ಅರಳಲಿರುವ ಮೊಗ್ಗನ್ನು ಹೂವಾಗಲು ಬಿಡಬೇಕು. ಮೊಗ್ಗನ್ನು ಹಿಸುಕಿದರೆ ಹೂವಾಗದೆ ಉದುರುವುದು. ತಿಳಿನೀರಿನ ಒರತೆಯನ್ನು ಕೆಸರೆರಚಿ ಮುಚ್ಚದಿರಿ. ಮರುಭೂಮಿಯ ದಾಹದಲ್ಲಿ ದಣಿವಾರಿಸುವ ತಟಾಕವನ್ನು ಅಲಕ್ಷಿಸಬಾರದು. ನಿಮಗೆ ದೈವದತ್ತವಾಗಿ ಸ್ಫುರಿಸುವ ಪ್ರೇಮಭಾವವನ್ನು ವೃದ್ಧಿಸಿರಿ, ಅದರಿಂದ ಆನಂದಿಸಿರಿ, ಆನಂದದಿಂದ ಬಾಳಿರಿ. ಈವರೆಗೆ ಸಂದರ್ಭವಶದಿಂದ ಬೇರೆ ಬೇರೆಯಾಗಿದ್ದ ನೀವಿಬ್ಬರು ಈಗಲಾದರೂ ಕೂಡಿ ಆನಂದಿಸಿರಿ” ಎಂದು ಹೇಳಿ, ನಮ್ಮ ಜತೆಯನ್ನು ಬಿಟ್ಟು ಬೇರೆ ಕಡೆಗೆ ಹೊರಟಳು.

ಮಿಸ್ ಮಿಲ್ಸಳ ಪ್ರೇಮಾನುಭವವನ್ನು ಹೇಳುವಾಗ ಪದ್ಯರೂಪದಲ್ಲೋ ಸಾಹಿತ್ಯ ರೂಪದಲ್ಲೋ ಹೇಳುವ ಕ್ರಮ ಅವಳದು. ಅವಳಂಥ ಪರೋಪಕಾರಿ, ದೈವಿಕಶಕ್ತಿ ಸಂಪನ್ನೆ, ಮತ್ತೋರ್ವಳಿಲ್ಲವೆಂದು ತಿಳಿದೆ. ಡೋರಾಳೂ ನಾನೂ ಮಾತ್ರ ಅಲ್ಲಿ ಕುಳಿತಾಗ ನನಗೆ ಆದ ಅನುಭವವನ್ನು ವರ್ಣಿಸುವುದು ಅಸಾಧ್ಯ. ಪ್ರಥಮವಾಗಿ ಮರುಭೂಮಿಯ ಬಿಸಿಲಿನ ತಾಪದಂಥ ತಾಪವೇ ನನ್ನ ಪಾಲಿಗೆ ಬಂತು. ಡೋರಾಳ ಹಸ್ತವನ್ನು ಹಿಡಿದು ಮರ್ಯಾದೆ ಪೂರ್ವಕವಾಗಿ ಮುತ್ತಿಟ್ಟೆನು. ನಮ್ಮ ಪ್ರೇಮಪಥದಲ್ಲಿ ಆಚಾರ್ಯಸ್ವರೂಪಿಣಿಯಾಗಿ ಲಭಿಸಿದ್ದ ಮಿಸ್ ಜೂಲಿಯಾ ಮಿಲ್ಸಳಿಗೂ ಇದೇ ಕ್ರಮದ ಮರ್ಯಾದೆಯಿತ್ತೆನು. ಅನಂತರ ನಾನು ಡೋರಾಳ ಕೈಹಿಡಿದುಕೊಂಡು ಸೀದಾ ಸ್ವರ್ಗಕ್ಕೇ ತಲುಪಿದೆನು. ನಾವು ಇಬ್ಬರೇ ಜತೆಯಾಗಿಯೂ ತಿರುಗಾಡಿದೆವು, ಮಾತಾಡಿದೆವು, ನಕ್ಕೆವು – ಅಂತೂ ನಾವು ಇದ್ದುದು ಏಳನೇ ಸ್ವರ್ಗದಲ್ಲಿ!

ಇಷ್ಟರಲ್ಲೇ ಯಾರೋ ಡೋರಾಳನ್ನು ಕರೆದ ಹಾಗೆ ಕೇಳಿಸಿತು. ನಾವು ಅತ್ತ ಕಡೆ ಹೋದೆವು. ನಾವೆಲ್ಲರೂ ಒಟ್ಟು ಸೇರಿದ ಕೂಡಲೇ ಅಲ್ಲಿದ್ದವರು ಡೋರಾಳು ಪದ ಹಾಡಬೇಕೆಂದು ಒತ್ತಾಯಿಸಿದರು. ಹಾಡಲು ಜತೆಗೆ ಬೇಕಾಗಿದ್ದ ಗಿಟಾರ್ ವಾದ್ಯವು ಸಾರೋಟಿನಲ್ಲೇ ಉಳಿದದ್ದನ್ನು ತಿಳಿದು ಅದನ್ನು ತಾನು ತರುವುದಾಗಿ ಕೆಮ್ಮೀಸೆಯವನು ಹೊರಟನು. ನಾನಲ್ಲದೆ ಇತರರಿಗೆ ಅದು ಸರಿಯಾಗಿ ಸಿಕ್ಕಲಾರದೆಂದು ಡೋರಾಳೇ ಆಗ ನುಡಿದಳು. ಡೋರಾಳ ಮುಖದಿಂದಲೇ ಹೊರಟ ನನ್ನನ್ನು ಕುರಿತಾದ ಇಂಥ ಅಮೋಘ ಪ್ರಾಶಸ್ತ್ಯ ನನಗೆ ಸಿಕ್ಕಿದ ಮೇಲೆ ನನ್ನ ಕಾರ್ಯ ಕೇಳಬೇಕೇ? ಗಿಟಾರನ್ನು ತರಲು ನಾನು ಹೊರಟೆನು. ಅದು ಇದ್ದ ಸ್ಥಳ ನನಗೆ ಗೊತ್ತಿತು. ಡೋರಾಳ ದೃಷ್ಟಿಯಲ್ಲಿ ನಾನು ಮುಖ್ಯನಾದೆ. (ನನ್ನ ದೃಷ್ಟಿಯಲ್ಲಿ ಕೆಮ್ಮೀಸೆಯವನು ಇಷ್ಟರಲ್ಲೇ ಸತ್ತು ಮೂರು ದಿನಗಳಾಗಿದ್ದುವು!) ಗಿಟಾರಿನ ಪೆಟ್ಟಿಗೆಯ ಬಾಗಿಲನ್ನು ತೆರೆದದ್ದೂ ಗಿಟಾರನ್ನು ಡೋರಾಳ ಕೈಗೆ ಒಪ್ಪಿಸಿದ್ದೂ ನಾನು. ಡೋರಾಳ ಕರವಸ್ತ್ರ ಮತ್ತು ಕೈಚೀಲಗಳನ್ನು ಅವಳ ಅನುಕೂಲಕ್ಕಾಗಿ ಹಿಡಿದುಕೊಂಡು, ಮುಡಿಪನ್ನು ಕಾದು ಕುಳಿತಂತೆ ಅವಳನ್ನೇ ನೋಡುತ್ತಾ ಸಮೀಪದಲ್ಲಿ ಕುಳಿತ ಭಾಗ್ಯಶಾಲಿ ನಾನು. ಅವಳು ಹಾಡಿದ್ದು ನನಗಾಗಿ, ಅವಳ ಮಧುರಗಾನದ ಭಾವನೆಗಳನ್ನು ಸರಿಯಾಗಿ ಅರ್ಥಮಾಡಿದವನೂ ನಾನೊಬ್ಬ ಮಾತ್ರ. ಅಲ್ಲಿ ಯಾರೂ ಇದ್ದಿರಬಹುದು, ಯಾರೂ ಸಂಗೀತವನ್ನು ಕೇಳಿರಬಹುದು. ಆದರೆ ಅವಳ ಇಂಪಾದ ಸ್ವರ, ಸಂಗೀತ, ಸುಂದರ ಸ್ವರೂಪಗಳನ್ನು ನನ್ನ ಕಿವಿಗಳಿಂದ ಕೇಳಿ, ನನ್ನ ಕಣ್ಣುಗಳಿಂದ ನೋಡಿ, ನಾನು ತಿಳಿದಷ್ಟು ಇನ್ನು ಯಾರೂ ತಿಳಿಯಲಿಲ್ಲ.

ಡೋರಾಳು ಹಾಡಿದನಂತರ ಮಿಸ್ ಜೂಲಿಯಾ ಮಿಲ್ಸ್ ಹಾಡಿದಳು: `ಪ್ರೇಮಮಯ ನಾದಾ | ಜ್ಞಾಪಕದ ಕಂದರದಿ | ತುಸ ಕೇಳಿ ಅಡಗೀ’ ಎಂಬ ಪದವನ್ನು ಸಾಧಾರಣ ನೂರು ವರ್ಷದ ವಿರಕ್ತಳಂತೆ ಹಾಡಿದಳು. ಸಂಗೀತದ ನಂತರ ಚಹಾ ಸೇವಿಸಿದ್ದಾಯಿತು, ವೈನ್ ಕುಡಿದದ್ದಾಯಿತು. ಕೊನೆಗೆ ಅಲ್ಲಿಂದ ಹೊರಟೆವು. ಮಿ. ಸ್ಪೆನ್ಲೋರವರು ಸಾರೋಟಿನ ಒಂದು ಕರೆಯಲ್ಲಿ ಅಮಲು ಏರಿ ಮಲಗಿದ್ದರು. ಮಿಸ್ ಮಿಲ್ಸಳು ಸಾರೋಟಿನ ಮುಂಭಾಗದಲ್ಲಿ, ಮುಂದುಗಡೆಗೆ ಮುಖ ಹಾಕಿ ಕುಳಿತಳು. ಡೋರಾಳು ಹಿಂಬದಿ ಕುಳಿತು, ಹಿಂಬಾಲಿಸಿ ಬರುತ್ತಿದ್ದ ನನ್ನನ್ನೇ ಅರೆನಾಚಿಕೆಯಿಂದ ನೋಡುತ್ತಿದ್ದಳು. ಮಿ.ಸ್ಪೆನ್ಲೋರವರು ಕುಡಿದಿದ್ದ ವೈನಿನ ದ್ರಾಕ್ಷಿ ಬೆಳೆದಿದ್ದ ಮಣ್ಣಿಗೂ ದ್ರಾಕ್ಷಿಯನ್ನು ಹಣ್ಣಾಗಿಸಿದ ಬಿಸಿಲಿಗೂ ವೈನಿಗೆ ಅಮಲು ಕೂಡಿಸಿಟ್ಟ ವ್ಯಾಪಾರಿಗೂ ನನ್ನ ವಂದನೆಗಳನ್ನು ನಾನು ಅರ್ಪಿಸುತ್ತಾ ಸಾರೋಟನ್ನು ಹಿಂಬಾಲಿಸಿದೆನು. ನಾವು ರಾತ್ರಿಯಾಗುವ ಮೊದಲೇ ನಾರ್ವುಡ್ಡಿಗೆ ತಲುಪಿದೆವು. ನಾನು ಆ ರಾತ್ರಿ ಅಲ್ಲೇ ಇದ್ದೆ.

ಮರುದಿನ ಬೆಳಗ್ಗೆ ನಾನು ನನ್ನ ಮನೆಗೆಂದು ಹೊರಡುವ ಮೊದಲು ಮಿಸ್ ಜೂಲಿಯಾ ಮಿಲ್ಸಳನ್ನು ತನ್ನ ಮನೆಗೆ ಡೋರಾಳು ಬಂದು ಒಂದೆರಡು ದಿನ ಅಲ್ಲೇ ಇದ್ದು ಬರುವುದಾಗಿ ತಿಳಿಸಿದಳು. ಅಷ್ಟು ಅಲ್ಲದೆ, ನಾನು ಅವಳ ಮನೆಗೆ ಹೋದರೆ ಅವಳ ತಂದೆಯವರು ತುಂಬಾ ಸಂತೋಷಪಡುವರೆಂದೂ ತಿಳಿಸುತ್ತಾ ಡೋರಾ ಅವಳ ಮನೆಯಲ್ಲಿರುವ ದಿನಗಳಲ್ಲಿ ಅಲ್ಲಿಗೆ ಹೋಗುವಂತೆ ನನಗೆ ಆಮಂತ್ರಣವನ್ನಿತ್ತಳು. ಅನಂತರ ನಾನು ನನ್ನ ಮನೆಗೆ ಬಂದೆ. ಡೋರಾಳ ಸಮೀಪದಲ್ಲಿ ಕಳೆದಿದ್ದ ಹಿಂದಿನ ದಿನವನ್ನು ನೂರಾರು ಸರ್ತಿ ನೆನೆನೆನೆದು ಸಂತೋಷಪಟ್ಟೆನು.

ಮಿಸ್ ಜೂಲಿಯಾ ಮಿಲ್ಸ್ ಹೇಳಿದ ದಿನವೇ ನಾನು ಅವಳ ಮನೆಗೆ ಹೋದೆನು. ಅಲ್ಲಿ ಆ ದಿನ ಅವಳ ತಂದೆ ಮನೆಯಲ್ಲಿರಲಿಲ್ಲ. ಅದು ನಮಗೆ ತುಂಬಾ ಅನುಕೂಲವೇ ಆಯ್ತು. ನನ್ನನ್ನು ಮದುವೆಯಾಗುವ ವಿಷಯದವರೆಗೂ ಡೋರಾಳೊಡನೆ ಈ ದಿನ ಮಾತಾಡುವುದೆಂದು ನಿಶ್ಚೈಸಿಕೊಂಡಿದ್ದೆ ಮತ್ತೂ ಮಾತಾಡುವುದು ಹೇಗೆಂಬುದನ್ನೆಲ್ಲ ಮೊದಲೇ ನಿಶ್ಚೈಸಿಕೊಂಡಿದ್ದೆ.

ನಾನು ಅಲ್ಲಿ ಹೋದಾಗ ಡೋರಾಳು ಒಂದು ಸುಸಜ್ಜಿತವಾದ ಕೋಣೆಯಲ್ಲಿ ಕುಳಿತು ಹೂವಿನ ಗೊಂಚಲ ಚಿತ್ರ ಒಂದನ್ನು ಬರೆಯುತ್ತಿದ್ದಳು. ಚಿತ್ರದ ಗೊಂಚಲು ನಾನು ಅವಳಿಗೆ ನಜರಾಗಿ ಒಪ್ಪಿಸಿದ್ದ ಗೊಂಚಲನ್ನು ಸ್ವಲ್ಪ ಮಟ್ಟಿಗೆ ಹೋಲುತ್ತಿತ್ತು. ಡೋರಾಳನ್ನು ಕಂಡಿದ್ದ ಕ್ರಮ, ಸಂದರ್ಭ, ಎಲ್ಲ ಒಂದು ಶುಭ ಸೂಚನೆಯೆಂದು ಸಂತೋಷಪಟ್ಟೆ. ನಾನು ಮೊದಲು ಮಾತಾಡಬೇಕೇ ಅವಳು ನನ್ನನ್ನು ನೋಡಿದ ಮೇಲೆ ಮಾತಾಡಬೇಕೇ ಎಂದಾಲೋಚಿಸಿ ಮುಂದುವರಿಯುವುದರ ಮೊದಲು, ಡೋರಾಳೇ ನನ್ನನ್ನು ನೋಡಿ, ನಗುಮೊಗದಿಂದ – “ಮೊನ್ನೆ ನಿನ್ನ ಕುದುರೆಗೆ ತುಂಬಾ ಆಯಾಸವಾಗಿರಬೇಕಲ್ಲವೇ?” ಎಂದು, ಆ ದಿನದ ಸಂತೋಷದ ಕುದುರೆ ಸವಾರಿಯನ್ನು ನೆನೆಸಿ ಕೇಳಿದಳು. ಅವಳ ದಿವ್ಯ ಮುಖವನ್ನು ನೋಡಿ, ಅವಳ ಸ್ವರ ಕೇಳಿದೊಡನೆ, ಆಗಲೇ ನನ್ನ ಹೃದಯವನ್ನು ಅವಳೆದುರು ಬಿಚ್ಚಿಡಬೇಕೆಂದು ಉದ್ದೇಶಿಸಿ ನಾನಂದೆ – “ಸ್ವಲ್ಪ ಶ್ರಮವಾಗಿರಬಹುದು. ಶ್ರಮವನ್ನು ಶ್ರಮ ಮಾಡತಕ್ಕ ವಸ್ತು ವಿಶೇಷವು ಅದರ ಪಾಲಿಗೆ ಇರಲಿಲ್ಲ ತಾನೆ!” ಡೋರಾಳ ಸರಳ ಮುಖದಲ್ಲಿ ನಾನಂದ ಮಾತಿನ ಅರ್ಥ ಆದಂತೆ ತೋರಲಿಲ್ಲ. ಕೇವಲ ಹಸುಗೂಸಿನ ಸಂಶಯದಂತೆ ಅವಳು ಮುಖದಲ್ಲಿ ಸಂಶಯವನ್ನು ಸೂಚಿಸುತ್ತಾ – “ಆ ಹೊತ್ತು ಅದಕ್ಕೆ ಹುರುಳಿ ಕೊಟ್ಟಿರಲಿಲ್ಲವೇನು?” ಎಂದು ಕೇಳಿದಳು.

ಡೋರಾಳ ಈ ವಿಧದ ಎಳೆತನವನ್ನು ಕಂಡು ಇಂದು ಯಾವ ಪ್ರಸ್ತಾಪವೂ ಬೇಡವೆಂದೆನಿಸಿತು. ಆದರೂ ನನ್ನ ಮನಸ್ಸು ತಳಮಳವಾಗಿದ್ದುದರಿಂದ ಮಾತು ಮುಂದುವರಿಸಿ ಹೋಯಿತು – “ಕುದುರೆ ಮಟ್ಟಿಗೆ, ಹುರುಳಿ ಕೊಟ್ಟಾಗಿತ್ತು. ನನ್ನ ಶ್ರಮ ಪರಿಹಾರಕ್ಕೆ ನಿನ್ನ ದಿವ್ಯ ಮೂರ್ತಿ ನನ್ನೆದುರು ಇದ್ದಂತೆ, ಕುದುರೆಗೆ ಯಾವ ವಿಧದ ಆಕರ್ಷಣವೂ ಇರಲಿಲ್ಲವೆಂದು ಮಾತ್ರ ನಾನಂದದ್ದು” ಎಂದು ಅಂದೆನು. “ಇರಬಹುದು, ಆದರೆ ನೀನು ಮಿಸ್ ಸ್ಕಿಟಲ್ಸಳ ಹತ್ತಿರ ಕುಳಿತುಕೊಂಡಿದ್ದಾಗ ನನ್ನನ್ನು ಕುರಿತಾದ ಸಂತೋಷ ಎಲ್ಲಿ ಹೋಗಿತ್ತು? ನಿನಗೆ ಮನಬಂದಂತೆ ವರ್ತಿಸುವ ಹಕ್ಕೇನೋ ಇದೆ, ಆದರೆ…” ಎಂದು ಮಾತ್ರ ಹೇಳಿ, ನಾನು ಮಿಸ್ ಸ್ಕಿಟಲ್ಸಳ ಹತ್ತಿರ ಕುಳಿತಿದ್ದುದರ ಬೇಸರದಿಂದ, ಮುಖ ತಗ್ಗಿಸಿ, ಜಿಪ್ಪನನ್ನು ಕರೆದಳು.

ಡೋರಾಳು ಇಷ್ಟು ಹೇಳಿ ಪೂರೈಸುವಷ್ಟರಲ್ಲೇ ನಾನು ಹಾಗೆ ವರ್ತಿಸಿದ್ದು ಹೇಗೆಂಬುದನ್ನು ತರ್ಕಬದ್ಧವಾಗಿ ಹೇಳಲಾರೆನು. ಆದರೆ ನಾನು ಡೋರಾಳನ್ನು ಹಿಡಿದು ಎತ್ತಿಬಿಟ್ಟೆನು, ಏನೇನೋ ಮಾತಾಡಿದೆನು. ಆ ಶಬ್ದಗಳನ್ನೆಲ್ಲ ಹೇಳದಿರುವುದೇ ಲೇಸೆಂದು ತೋರುತ್ತದೆ. ಅವಳಿಲ್ಲದಿದ್ದರೆ ನಾನು ಬದುಕಿರಲಾರೆ. ಅವಳು ನನ್ನ ಆರಾಧ್ಯ ಪರಮಪೂಜ್ಯ ದೇವತೆ. ನನ್ನ ಜೀವನದ ಸರ್ವಸ್ವ ಎಂದು ಮೊದಲಾಗಿ ಹೇಳಿಬಿಟ್ಟೆ. ನನ್ನ ಈ ಮಾತುಗಳನ್ನು ಆಡುತ್ತಿದ್ದಾಗಲೆಲ್ಲ ಜಿಪ್ಪ್ ನನ್ನನ್ನು ನೋಡಿ ಬೊಗಳುತ್ತಲೇ ಇತ್ತು. ನನ್ನ ಮಾತುಗಳನ್ನು ಕೇಳುತ್ತಾ ಡೋರಾಳು ತಲೆತಗ್ಗಿಸಿ, ನಗಾಡುತ್ತಾ ಸಂತೋಷದಿಂದ ಕಣ್ಣೀರು ಸುರಿಸುತ್ತಾ ಕುಳಿತಿದ್ದಳು. ನಾನು ಅವಳು ಕುಳಿತಿದ್ದ ಸೋಫಾದ ಮೇಲೆಯೇ ಅವಳ ಜತೆಯಲ್ಲಿ ಕುಳಿತು ಮಾತಾಡಿದೆ. ಪತಿ – ಪತ್ನಿಯರಾಗುವ ವಾಗ್ದನವೂ ನಮ್ಮೊಡನೆ ನಡೆಯಿತು. ಅವಳ ಉಂಗುರ ಬೆರಳಿನ ಅಳತೆಯನ್ನು ಸಹ ನಾನು ತೆಗೆದುಕೊಂಡೆನು.

ಈ ರೀತಿಯ ಆನಂದಮಯ ಸಮಯವನ್ನು ಅಲ್ಲಿ ಕಳೆದು ತಿಂಡಿ, ಚಹವನ್ನೆಲ್ಲ ತಿಂದು ಕುಡಿದು, ಮಿಸ್ ಮಿಲ್ಸಳನ್ನು ತುಂಬಾ ವಂದಿಸಿ ನಾನು ನನ್ನ ಮನೆಗೆ ಬಂದೆನು. ಕೆಲವು ದಿನ ಕಳೆಯುವುದರ ಒಳಗೆ ಕಿಡಿಗಳನ್ನು ಇಟ್ಟು ಉಂಗುರವೊಂದನ್ನು ಅವಳಿಗೆ ಮಾಡಿಸಿ ಕೊಟ್ಟೆನು. ನನ್ನ ಈ ಹೊತ್ತಿನ ಚಿಕ್ಕ ಮಗಳ ಕೈಯ್ಯಲ್ಲಿರುವ ಕಿಡಿಯುಂಗುರವನ್ನು ನೋಡುವಾಗ ಡೋರಾಳಿಗೆ ಆ ದಿನ ಕೊಟ್ಟ ಉಂಗುರವೂ ಅವಳ ಬೆರಳೂ ಜ್ಞಾಪಕಕ್ಕೆ ಬರುತ್ತವೆ. ಇಂಥ ಪ್ರಸಂಗಗಳ ರುಚಿಯನ್ನು ಹೆಚ್ಚಿಸುವಂಥ ಚಿಕ್ಕ ಜಗಳವೂ ನಮ್ಮೊಡನೆ ಒಂದಾವೃತ್ತಿ ಆಯಿತು. ಉಂಗುರ ಕೊಟ್ಟ ಒಂದೆರಡು ವಾರಗಳೊಳಗೇ ಡೋರಾಳಿಂದಲೇ ಕಲ್ಪಿತವಾದ ಕಾರಣಗಳಿಂದ ಅವಳಿಗೆ ನನ್ನ ಮೇಲೆ ಸಿಟ್ಟಾಗಿ ನನ್ನ ಉಂಗುರ ವಾಪಾಸು ಬಂತು. ಆದರೆ, ಮಿಸ್ ಜೂಲಿಯಾ ಮಿಲ್ಸಾಳು ಎಲ್ಲವನ್ನೂ ತಿಳಿದು, ಸಂದರ್ಭಕ್ಕೆ ತಕ್ಕದಾಗಿ, ಸ್ವಾನುಭವದಿಂದ ಬೇಕಾದಂತೆ ಮಾತಾಡಿ ನಮ್ಮನ್ನು ರಾಜಿ ಮಾಡಿಸಿದಳು. ಈ ಜಗಳದಿಂದ ಪಾರಾದನಂತರ ನಾವು ಪರಸ್ಪರವಾಗಿ ದಿನಕ್ಕೆ ಒಂದು ಪತ್ರಕ್ಕೆ ಕಡಿಮೆಯಾಗದಂತೆ ಪತ್ರಗಳನ್ನು ಬರೆದುಕೊಳ್ಳುತ್ತಿದ್ದೆವು.

ನಮ್ಮಿಂದ ಸರಿದು, ಕಾಲವಶದಲ್ಲಿರುವ ಅಂದಿನ ದಿನಗಳನ್ನು ಗ್ರಹಿಸಿ ನೋಡಿದ್ದಾದರೆ, ಅಂತಹ ಮಿತಿ ಕಾಣದ ಆನಂದಮಯ ದಿನಗಳನ್ನು ಇನ್ನೆಲ್ಲಿಯೂ ಕಾಣೆ. ಆ ದಿನಗಳು, ಒಂದು ದೃಷ್ಟಿಯಿಂದ ವಿರಕ್ತ-ಹಾಸ್ಯದಂತೆ ತೋರಿದರೂ ಮತ್ತೆಲ್ಲ ದೃಷ್ಟಿಯಿಂದ ನನಗೆ ಪರಮಪೂಜ್ಯವೂ ಪರಮಪ್ರಿಯವೂ ಆಗಿ ಉಳಿದಿವೆ.

(ಮುಂದುವರಿದಿದೆ)