ಯಕ್ಷಗಾನ ಕಲಾರಂಗ, ಉಡುಪಿ ತನ್ನ ನಲ್ವತ್ತನೇ ವಾರ್ಷಿಕೋತ್ಸವವನ್ನು ಪ್ರಥಮ ಬಾರಿಗೆ ಉಡುಪಿಯಿಂದ ಹೊರಗೆ, ಅದೂ ಕರ್ನಾಟಕದ ರಾಜಧಾನಿಯಲ್ಲೇ ನಡೆಸುವುದಿತ್ತು. ಹಿಂದೆ ಅವರ ಕೆಲವು ಉಡುಪಿ ವಾರ್ಷಿಕೋತ್ಸವಗಳಿಗೆ ನಾನು ಹಾಜರಿ ಹಾಕಿದ್ದಿದೆ. ಆದರೆ ಈ ಬಾರಿ ಬೆಂಗಳೂರೆಂದ ಕೂಡಲೇ ನಾನು ಆಸಕ್ತಿ ಕಳೆದುಕೊಂಡೆ.
ಯಕ್ಷಗಾನ ಕಲಾರಂಗ ಸಾರ್ವಜನಿಕ (ಮತ್ತು ಆಂಶಿಕ ಸರಕಾರೀ) ಪೋಷಣೆಯಿಂದಷ್ಟೇ ಬೆಳೆದ ಸಂಸ್ಥೆ. ಹಾಗಾಗಿ ತನ್ನ ಕಲಾಪಗಳನ್ನು ರಾಜ್ಯದ ರಾಜಧಾನಿಯಲ್ಲೇ ಪ್ರದರ್ಶಿಸಿ, ಅಹವಾಲುಗಳ ಕುರಿತು ಸರಕಾರದ ಮೇಲೆ ಹೆಚ್ಚಿನ ಪ್ರಭಾವ ಬೀರುವ ಅನಿವಾರ್ಯತೆ ಕಂಡುಕೊಂಡಿರಬೇಕು. ಇದಕ್ಕೆ ಪೂರಕವಾಗಿ ಕಲಾರಂಗಕ್ಕೆ ಪ್ರಥಮ ಬಾರಿಗೆ, ತನ್ನ ಕುರಿತೊಂದು ಸಾಕ್ಷ್ಯಚಿತ್ರ ನಿರ್ಮಿಸಬೇಕೆನ್ನಿಸಿತು. ಮತ್ತು ನಮ್ಮ ಯಾವ ಸೂಚನೆ ಇಲ್ಲದೆಯೂ (ನಮ್ಮ ಮಗ) ಅಭಯಸಿಂಹನನ್ನು ಬೆಂಗಳೂರಿನಿಂದ ಕರೆಸಿಕೊಂಡು ವಹಿಸಿತು. ಒಂದೇ ವಾರದೊಳಗೆ ತಯಾರಾಗುವ ಈ ಚಿತ್ರವೂ ಬೆಂಗಳೂರಿನಲ್ಲಿ ಬಿಡುಗಡೆಗೊಳ್ಳಲಿದೆ ಎಂದಾದಾಗ ನನ್ನ ಕುತೂಹಲ ಕೆರಳಿತು.
ಯಕ್ಷಗಾನ ಕಲಾರಂಗ ಮೂಲತಃ ಸದಭಿರುಚಿಯ ಯಕ್ಷಗಾನವನ್ನು ಸಂಘಟಿಸಿ, ವೀಕ್ಷಿಸುವ ಉತ್ಸಾಹದಿಂದಲೇ ತೊಡಗಿತ್ತು. ಆದರೆ ಸಾಧನೆಯ ದಾರಿಯಲ್ಲಿ ಮೊಳೆತ ಸಮಸ್ಯೆಗಳನ್ನು ಅಂದಂದಿನ ಕಲಾಪದ ಅಗತ್ಯಕ್ಕಷ್ಟೇ ಪರಿಹರಿಸುವ ಬದಲು ಮೂಲ ಯಕ್ಷಪರಿಸರವನ್ನೇ ಬಲಪಡಿಸತೊಡಗಿದ್ದು ಇದರ ಹೆಚ್ಚುಗಾರಿಕೆ. ಅದರಲ್ಲಿ ಪ್ರದರ್ಶನಗಳ ಪರಿಷ್ಕಾರದೊಡನೆ ಶಿಕ್ಷಣ, ವಿಮರ್ಶೆ ಮತ್ತು ವ್ಯಾಪ್ತಿಯನ್ನು ಹೆಚ್ಚಿಸಿದ್ದು ಒಂದು ಮುಖ. ಒಟ್ಟಾರೆ ಯಕ್ಷ-ಕಲಾವಿದರಿಗೆ ಪ್ರಶಸ್ತಿ, ಬಹುಮಾನ, ವಿಮೆ, ಆರ್ಥಿಕ ಸಹಾಯ, ಮಾಹಿತಿ, ಓಡಾಟ ಸೌಲಭ್ಯವೆಲ್ಲ ಕಲ್ಪಿಸಿದ್ದು ಇನ್ನೊಂದು ಮುಖ. ಸನ್ನಿವೇಶಗಳ ಜಾಲದಲ್ಲಿ, ಯಕ್ಷಗಾನದಿಂದ ಹೊರಗೆ, ಸಾರ್ವಜನಿಕ ವಿದ್ಯಾಕ್ಷೇತ್ರದಲ್ಲಿ ಬಡ ವಿದ್ಯಾರ್ಥಿಗಳ ಶೈಕ್ಷಣಿಕ ಉನ್ನತಿಗಾಗಿ ವಿಸ್ತರಿಸಿಕೊಂಡದ್ದಂತೂ ಅಸಾಮಾನ್ಯ ಮುಖ. ಅಷ್ಟಾಗಿಯೂ ಇದು ಯಾವುದೇ ವ್ಯಕ್ತಿ ಕೇಂದ್ರಿತವಾಗಿ ಬೆಳೆದದ್ದಿಲ್ಲ. ಇಲ್ಲಿನ ಔದಾರ್ಯ ಅನ್ಯ ಲಾಭೋದ್ದೇಶದ ಯಾವುದೇ ಸಂಸ್ಥೆಯ ಮುಖವಾಡವೂ ಅಲ್ಲ. ಕೇವಲ ಸಾರ್ವಜನಿಕ ಸಹಾಯ ನಂಬಿ ಯಶಸ್ವಿಯಾಗಿ, ಶಿಸ್ತುಬದ್ಧವಾಗಿ ನಡೆದು ಬಂದಿರುವ ಕಲಾರಂಗದ ಸಾಧನೆಗೆ ಸಾಟಿಯಾಗಿ ಇನ್ನೊಂದು ಸಂಸ್ಥೆಯನ್ನು ನಾನಂತೂ ನೋಡಿಯೇ ಇಲ್ಲ.
ಲೆಕ್ಕ ತಪಾಸಣೆಗೆ ಬಿಲ್ಲು ರಸೀದಿಗಳ ಸಾಕ್ಷಿ ಸ್ಪಷ್ಟವಿದ್ದರೆ ಸಾಕು. ಆದರೆ ಕಲಾತ್ಮಕ ದಾಖಲೀಕರಣ ಅಥವಾ ಸಮರ್ಥ ಸಾಕ್ಷ್ಯಚಿತ್ರಕ್ಕೆ ಅದೇ ಬಿಲ್ಲು ರಸೀದಿಗಳು ಒದಗಿಸಿದ ಅಮೂರ್ತ ಸಂತೃಪ್ತಿಯನ್ನು ಕಾಣಿಸುವ ಹೊಣೆಯಿರುತ್ತದೆ. ಅಂತಿಮ ಲೆಕ್ಕ ಪತ್ರ ಎಲ್ಲವನ್ನು ಸಮದೂಗಿಸಿದರೆ, ಉತ್ತಮ ಸಾಕ್ಷ್ಯಚಿತ್ರ ಅಧ್ಯಯನ ಮತ್ತು ಬೆಳವಣಿಗೆಗೆ ವಿಸ್ತೃತ ದಿಗಂತವನ್ನು ಕಾಣಿಸುತ್ತದೆ. ಈ ವಿಚಾರವನ್ನು ಬಹಳ ಹಿಂದೆಯೇ ಕುಶಿ ಹರಿದಾಸ ಭಟ್ಟರು ಮನಗಂಡದ್ದಕ್ಕೇ ಉಡುಪಿಯಲ್ಲಿ ಪ್ರಾದೇಶಿಕ ರಂಗ ಕಲೆಗಳ ಕೇಂದ್ರ ಕಟ್ಟಿದ್ದು ನಮಗೆ ಕಂಡು ಬರುತ್ತದೆ. ಆದರೆ ತನ್ನುದ್ದೇಶವನ್ನು ಯಶಸ್ವಿಯಾಗಿ ನಡೆಸುತ್ತಲೇ ಬಂದ ಯಕ್ಷಗಾನ ಕಲಾರಂಗಕ್ಕೆ ದಾಖಲೀಕರಣದ ಯೋಚನೆ ಬರುವಾಗ ನಾಲ್ಕು ದಶಕಗಳೇ ಕಳೆದು ಹೋಗಿದೆ. ಸಾಲದ್ದಕ್ಕೆ ಅದರ ಪದಾಧಿಕಾರಿಗಳ ನಿರ್ಮೋಹದಿಂದ ಹಣಕಾಸಿನ ವಿವರಗಳಿದ್ದಷ್ಟು ಸ್ಫುಟವಾಗಿ ಅದರ ಐತಿಹಾಸಿಕ ದಾಖಲೆಗಳನ್ನು ಉಳಿಸಿದವರೂ ಇಲ್ಲ. ಅವ್ಯವಸ್ಥಿತ ಪತ್ರಿಕಾ ವರದಿಗಳ ರಾಶಿ, ಯೋಜನಾಬದ್ಧವಲ್ಲದ ಚಿತ್ರ, ಚಲಚಿತ್ರಗಳ ಸಂಗ್ರಹ, ಕ್ಷೀಣಿಸುವ ಪದಾಧಿಕಾರಿಗಳ ನೆನಪನ್ನಷ್ಟೇ ಆಧರಿಸಿ, ಒಂದು ವಾರದ ಕಾಲಮಿತಿಯೊಡನೆ ಅಭಯ ಮಾಡಿದ ಸಾಕ್ಷ್ಯಚಿತ್ರದ ಬಗ್ಗೆ ನಮಗಂತೂ ಎಲ್ಲಿಲ್ಲದ ಕುತೂಹಲ ಬಲಿತದ್ದರಿಂದ ನಾವು ಬೆಂಗಳೂರಿಸಿದೆವು.
ಅಪರಾಹ್ನ ಎರಡರಿಂದ ತೊಡಗಿ ರಾತ್ರಿ ಎಂಟೂವರೆಯವರೆಗೆ ಕಲಾಪಗಳಿದ್ದುವು. ಮೊದಲು ಎರಡು ಗಂಟೆ ತೆಂಕು ತಿಟ್ಟಿನ ಆಟ, ಪ್ರಸಂಗ ಪಂಚಶರ ಪಂಚಶಿರ. ಅನಂತರ ಒಂದೂವರೆ ಗಂಟೆಯ ಸಭಾ ಕಲಾಪ. ಕೊನೆಯಲ್ಲಿ ಎರಡೂವರೆ ಗಂಟೆಯ ಬಡಗು ತಿಟ್ಟಿನ ಆಟ, ಪ್ರಸಂಗ ಶ್ರೀಕೃಷ್ಣ ಸಂಧಾನ. ಅದು ಆದಿತ್ಯವಾರವಾದರೂ ಬೆಂಗಳೂರಿನ ಗಜಿಬಿಜಿ ನಮ್ಮನ್ನು ಹಿಂಸಿಸಿತ್ತು. ಮಗನ ಮನೆಯಿಂದ ಸುಮಾರು ಆರು ಕಿಮೀ ದೂರದ ರವೀಂದ್ರ ಕಲಾಕ್ಷೇತ್ರಕ್ಕೆ ಹೋಗಲು ಸುಮಾರು ನಡೆದು, ಎರಡು ಸಿಟಿ ಬಸ್ ಬದಲಾಯಿಸಿ, ಒಂದೂವರೆ ಗಂಟೆಯನ್ನೇ ಕಳೆದಿದ್ದೆವು. ನಮ್ಮ ಅದೃಷ್ಟಕ್ಕೆ ಔಪಚಾರಿಕತೆಗಳನ್ನು ಮುಗಿಸಿ, ಯಕ್ಷಗಾನ ಆಗ ತಾನೇ ಪೂರ್ವರಂಗದ ತೆರೆಮರೆಯ ಕುಣಿತಕ್ಕೆ ಸಜ್ಜಾಗಿತ್ತು.
ಆಶ್ಚರ್ಯಕರವಾಗಿ ಬಡಗುತಿಟ್ಟಿನ ಅಗ್ರಮಾನ್ಯ ಗುರು ಬನ್ನಂಜೆ ಸಂಜೀವ ಸುವರ್ಣ, ಯಾವ ತೋರಿಕೆಗಳಿಲ್ಲದೆ ಓರ್ವ ತೆರೆ ಹಿಡಿಯುವವನ (ಮುಂದುವರಿದಂತೆ ಆಟದುದ್ದಕ್ಕೂ ವೇಷಧಾರಿಗಳ ಸಹಾಯಕನಂತೆಯೂ) ಕೆಲಸ ನಡೆಸಿದ್ದರು. ಏನಿದು ಚೋದ್ಯ ಎಂದು ಯೋಚನೆ ಬೆಳೆಸದಂತೆ ಮರುಕ್ಷಣದಲ್ಲಿ ಅದ್ಭುತಗಳ ಸರಣಿಯಲ್ಲಿ ಮೊದಲನೆಯದಾಗಿ ಎಂಬಂತೆ ತೆರೆಯನ್ನು ಅರ್ಧಕ್ಕೆ ಕೆಳಗೆ ಜಗ್ಗಿ ನಿಂತವರು ದೇವೇಂದ್ರ ಸೇರಿದಂತೆ ಎಂಟು ದೇವತೆಗಳು (ಅಷ್ಟ ದಿಕ್ಪಾಲರು). ತೆಂಕು ತಿಟ್ಟಿನ ಎಂಟೂ ಮಕುಟಧಾರೀ ವೇಷಗಳು ಬಹು ಚೊಕ್ಕವಾದ ಹಾಗೂ ಶಿಸ್ತುಬದ್ಧವಾದ ನಡೆಕೊಟ್ಟರು. ಹಿಮ್ಮೇಳದಲ್ಲಿ ವಿಲಂಬ ಗತಿಗೆ ಹೆಸರಾದ ಬಲಿಪಶೈಲಿಯ ಮುಂದುವರಿಕೆಯೇ ಆಗಿರುವ ಬಲಿಪ ಶಿವಶಂಕರರ ಭಾಗವತಿಕೆ, ನಾದ ಸುಖವನ್ನು ಕೊಡುವ ಕೃಷ್ಣಪ್ರಕಾಶ ಉಳಿಯತ್ತಾಯರ ಮದ್ದಳೆ, ವೇಷದ ಗತಿಗೆ ಒತ್ತು ಕೊಡುವ ಮುರಾರಿ ಕಡಂಬಳಿತ್ತಾಯರ ಚಂಡೆ ಮೇಳೈಸು ಎನ್ನುವುದಕ್ಕೆ ನಿಜಾರ್ಥವನ್ನು ತೋರಿಸಿದುವು. ಯಕ್ಷಗಾನ – ಸ್ವತಂತ್ರ ಗಾನಪದ್ಧತಿಯಲ್ಲ, ಅದು ಹಿಮ್ಮೇಳ, ಅಂದರೆ ಅದರ ರಾಗ, ಸಾಹಿತ್ಯ, ನುಡಿಕೆಗಳೆಲ್ಲ ಮುಮ್ಮೇಳದ ಕಲಾಪಗಳಿಗೆ ನಿಷ್ಠವಾಗಿಯೇ ವಿಸ್ತರಿಸಬೇಕು ಎನ್ನುವುದಕ್ಕೆ ಇಲ್ಲಿ ಇನ್ನೊಂದು ಬಲು ಸುಂದರ ನಿದರ್ಶನ – ಅಪ್ಸರೆಯ ಪ್ರವೇಶ. ನಾನು ಕಂಡಂತೆ ಇದುವರೆಗಿನ ಆಟಗಳಲ್ಲಿ ದೇವೇಂದ್ರ ಮಾತುಗಳಲ್ಲಷ್ಟೇ “ರಂಭಾದಿ ತರುಣಿಯರ ನರ್ತನ”ದ ಉಲ್ಲೇಖ ಮಾಡುತ್ತಾನೆ. ಆದರೆ ಇಲ್ಲಿ ಪದ್ಯದ ಆ ಭಾಗವನ್ನು ಸಾಭಿನಯ ಅಪ್ಸರೆಯೋರ್ವಳು ಪ್ರವೇಶಿಸಿ, ನರ್ತಿಸಿ, ನಿರ್ಗಮಿಸಿದ ಚಂದ, ದಿಕ್ಪಾಲರು ಅದನ್ನು ಸವಿಯುವ ಅಂದ, ಒಟ್ಟಾರೆ ಈ ಪ್ರದರ್ಶನಕ್ಕೆ ಒದಗಿದ ನಿರ್ದೇಶನದ ಸಾಮರ್ಥ್ಯಕ್ಕೂ ಸಾಕ್ಷಿ ನುಡಿಯುವಂತಿತ್ತು.
ಹೀಗೇ ಮುಂದೆ ಐದು ಬಣ್ಣದ ವೇಷಗಳ ಪ್ರವೇಶ, ದೇವ ದಾನವ ಯುದ್ಧಗಳನ್ನು ವಿಶೇಷವಾಗಿ ಎತ್ತಿ ಆಡಬಹುದಾದರೂ ಒಟ್ಟಾರೆ ಪ್ರದರ್ಶನ ತನ್ನ ಸಾಂಪ್ರದಾಯಿಕತೆಯೊಳಗಿನ ನಾವೀನ್ಯದ ಸಾಧ್ಯತೆಯನ್ನು ಅನಾವರಣ ಮಾಡುತ್ತಾ ಹೋಗುವಲ್ಲಿ ಪ್ರೇಕ್ಷಕರನ್ನು ಅನಿಮಿಷರನ್ನಾಗಿಸಿತ್ತು. ವಿದ್ಯುದ್ದೀಪದ ಆವಿಷ್ಕಾರಕ್ಕಿಂತಲೂ ಮೊದಲ ಕಾಲದ ಯಕ್ಷ-ಪ್ರದರ್ಶನಗಳಲ್ಲಿ ಬೆಳಕಿನ ಸ್ರೋತ ಸಣ್ಣದು, ಧ್ವನಿವರ್ಧಕವಿಲ್ಲ, ಪ್ರೇಕ್ಷಕ ವರ್ಗ ಕಿರಿದು ಮತ್ತು ಅಲ್ಲೂ ಗ್ರಹಣ ಸಾಮರ್ಥ್ಯ ಭಕ್ತಿಮೂಲದ್ದು. ಅವೆಲ್ಲವನ್ನು ಅರ್ಥಪೂರ್ಣವಾಗಿ ವಿಸ್ತರಿಸಿದ, ಮೌಲ್ಯವೃದ್ಧಿಸಿದ ಈ ಪ್ರಯೋಗದಲ್ಲಿ ಶತಮಾನಗಳ ಜಡವನ್ನು ಕೊಡಹಿ ತೆಂಕು ತಿಟ್ಟು ದೃಢವಾಗಿ ಎದ್ದು ನಿಂತಂತಾಗಿದೆ. ಈ ವಿಸ್ತರಣೆಯನ್ನೂ ಸಹಜವಾಗಿ ಸಾಂಪ್ರದಾಯಿಕ ಭಾಗವತಿಕೆ ಮೆರೆಸಿದೆ.
ಶಾಸ್ತ್ರೀಯ ಸಂಗೀತ, ಭಾವಗಾಯನ, ಸಿನಿ-ಸಾಂಗು ಮೊದಲಾದವುಗಳ ಎರವಲು, ಅಪಭ್ರಂಶಗಳ ಹೊರೆಯಿಲ್ಲದ ಬಲಿಪ ಶಿವಶಂಕರರ ಭಾಗವತಿಕೆ – ಯಕ್ಷಗಾಯನ ಶುದ್ಧ ರಂಗಸಂಗೀತ ಎನ್ನುವುದನ್ನು ಪುನಃಸ್ಥಾಪಿಸಿದೆ. (ವೇಷಧಾರಿಗೆ ಭಾವಾಭಿನಯ ವಿಸ್ತರಣೆಗೇನೂ ಇಂಬಿಲ್ಲದೆ ಬರುವ ಭಾಗವತನ ಸ್ಥಾನದಲ್ಲಿ ಕುಳಿತ ಹಾಡುಗಾರನ ಮನೋಧರ್ಮ, ಇತರ ತಾಳವಾದ್ಯಗಳ ನುಡಿಗಳೋ ಇಲ್ಲಿ ಕಾಡಲಿಲ್ಲ. ಇನ್ನೊಂದೇ ಮುಖದಲ್ಲಿ ನೋಡುವುದಾದರೆ ಹಿಮ್ಮೇಳ ಮುಮ್ಮೇಳಗಳ ಸುಸಾಂಗತ್ಯಕ್ಕೆ ಈ ಪ್ರಯೋಗ ಅತ್ಯುತ್ತಮ ನಿದರ್ಶನವಾಗಿಯೇ ಹೊರಹೊಮ್ಮಿದೆ.
“ಇದು ಬರಿಯ ಆಂಗಿಕದ್ದಾಯಿತು, ವಾಚಿಕ ಹೇಗೆ” ಎಂದು ಯಾರೂ ಮೂಗೆಳೆಯದಷ್ಟು ಔಚಿತ್ಯಪೂರ್ಣವಾಗಿ ವೇಷಧಾರಿಗಳು ಸಂಭಾಷಣೆಯನ್ನು ಹಂಚಿಕೊಂಡು ನಡೆಸಿದರು. ಪ್ರೇಕ್ಷಕ ವರ್ಗ ಎನ್ನುವುದಕ್ಕಿಂತಲೂ ಹೆಚ್ಚಾಗಿ ಭಕ್ತವರ್ಗವನ್ನು ಉದ್ದೇಶಿಸಿ ಹೊರಟಿರಬಹುದಾದ ಈ ಕಲಾ ಪ್ರಕಾರ ಮಾತುಗಾರಿಕೆಯಲ್ಲಿ ಧ್ವನಿಯ ಮಹತ್ತ್ವಕ್ಕಿಂತಲೂ ಅರ್ಥವಿವರಣೆಗೂ ಕಥಾನಿರೂಪಣೆಯ ನೆಪದಲ್ಲಿ ಮತಪ್ರಚಾರಕವೂ ಆಗುವುದನ್ನು ಕೇಳಿದ್ದೇವೆ. ಆದರೆ ಇಲ್ಲಿ ಬಿಗಿಯ ನಾಟಕೀಯತೆ ಒದಗಿತ್ತು. ಮಾತು – ಮಿತವ್ಯಯದೊಡನೆ ಗೆಳೆತನ ಮಾಡಿದ ಶ್ರೀಮಂತನಂತಿತ್ತು. ಪಂಚಶರನಾದ ಮನ್ಮಥ ಲೋಕಕಲ್ಯಾಣಕ್ಕಾಗಿ ದೇಹಾರ್ಪಣೆಗೈದು, ಪಂಚಶಿರನೆಂದೂ ಖ್ಯಾತನಾದ ಪರಮಶಿವನಲ್ಲಿ ಒಂದಾಗುವುದರೊಡನೆ ಪ್ರಸಂಗ ಮುಗಿದಾಗ ನನಗಂತೂ ನಭೂತೋ ಎನ್ನುವ ಅನುಭವ. ಈ ಪ್ರಯೋಗ ನಿಸ್ಸಂದೇಹವಾಗಿ ತೆಂಕುತಿಟ್ಟು ಯಕ್ಷಗಾನವನ್ನು ಹಿಂದೆಂದೂ ಕಾಣದ ಎತ್ತರದಲ್ಲಿಟ್ಟು ತೋರಿಸಿದೆ.
ಬಡಗು ತಿಟ್ಟಿನ ಯಕ್ಷಗಾನವನ್ನು ಉಡುಪಿಯ ಯಕ್ಷಗಾನ ಕೇಂದ್ರದ ಹೆಸರಿನಲ್ಲಿ ಗುರು ಬನ್ನಂಜೆ ಸಂಜೀವ ಸುವರ್ಣರು ಅದ್ಭುತವಾಗಿ ಪುನಾರಚಿಸುತ್ತ ಬರುತ್ತಿರುವುದನ್ನು ಕಂಡಾಗೆಲ್ಲಾ ತೆಂಕುತಿಟ್ಟಿಗೆ ಈ ಭಾಗ್ಯವಿಲ್ಲ (ಅಥವಾ ಯೋಗ್ಯತೆ ಇಲ್ಲ?) ಎಂದೇ ನಾನು ಭ್ರಮಿಸಿದ್ದೆ. ಆದರೆ ಇಲ್ಲಿ ನಿರ್ದೇಶಕ ಪೃಥ್ವೀರಾಜ ಕವತ್ತಾರು (ಬನ್ನಂಜೆ ಸಂಜೀವ ಸುವರ್ಣರ ಸಹಕಾರದೊಡನೆ ಎಂದು ಆಮಂತ್ರಣದಲ್ಲಿ ಉಲ್ಲೇಖವಿರುವುದೂ ಗಮನಾರ್ಹ) ಅದನ್ನು ಹುಸಿಗೊಳಿಸಿದ್ದಾರೆ. ಬಹಿರಂಗವಾಗಿ ಹೆಸರು ಹೇಳಿಸಿಕೊಳ್ಳಲು ಇಚ್ಛಿಸದ ಪೃಥ್ವೀ ವೃತ್ತಿಯಲ್ಲಿ ಉದಯವಾಣಿಯ ಸಮರ್ಥ ಉಪಸಂಪಾದಕನಾಗಿರುವುದರ ಜತೆಗೆ, ಕಲಾಪ್ರೀತಿಗಾಗಿ ತೆಂಕುತಿಟ್ಟಿನ ಯಕ್ಷಗಾನದೊಡನೆ ತೇಯ್ದುಕೊಂಡದ್ದು ಸ್ವಲ್ಪವಲ್ಲ. ಮನೋಹರ ಉಪಾಧ್ಯರ ನೇತೃತ್ವದಲ್ಲಿ ನಾವು ವಿಡಿಯೋ ದಾಖಲೀಕರಣ ಮಾಡಿದ ದೀವಟಿಗೆ ಬೆಳಕಿನ ಕುಂಭಕರ್ಣ ಕಾಳಗದ ನೇಪಥ್ಯದಲ್ಲಿ, ಕಲಾವಿದರೊಡನೆ ನಮಗಿದ್ದ ಒಂದೇ ಬಲವಾದ ಸೇತು ಮತ್ತಿದೇ ಪೃಥ್ವೀ. ಉಳಿದಂತೆಯೂ ಇವರ ಅಸಂಖ್ಯ ಯಕ್ಷಪ್ರಯೋಗಗಳನ್ನು ಕಂಡ ನೆನಪಲ್ಲಿ ತೆಂಕು ತಿಟ್ಟಿಗೂ ಭವ್ಯ ಭವಿಷ್ಯವುಂಟೆಂದು ಈಗ ಯಾರೂ ಭರವಸೆ ತಾಳಬಹುದು. ತೆಂಕು ತಿಟ್ಟಿನ ಕುರಿತು `ಒಡವೆ ಇದ್ದೂ ಬಡವೆ’ ಎಂದ ರಾಘವ ನಂಬಿಯಾರ್ ನುಡಿಯನ್ನು ಹುಸಿಯಾಗಿಸುವಲ್ಲಿ ಪೃಥ್ವೀ-ಪ್ರಯೋಗಗಳು ನಿರಂತರವಾಗಲಿ ಎಂದು ಹಾರೈಸುತ್ತೇನೆ.
ಸಭಾಕಲಾಪ ಸಮಯದ ಮಿತಿಯನ್ನು ಉಲ್ಲಂಘಿಸಿದ್ದು ಸರಿಯಾಗಲಿಲ್ಲ. ತನ್ನ ಕಾರ್ಯಕ್ಷೇತ್ರವಾದ ಉಡುಪಿಯನ್ನು ಪ್ರಥಮ ಬಾರಿಗೆ ಬಿಟ್ಟು ಅದೂ ರಾಜ್ಯದ ರಾಜಧಾನಿ ಬೆಂಗಳೂರಿಗೇ ಬಂದದ್ದಕ್ಕೆ ಈ ಸಡಿಲು ಅನಿವಾರ್ಯವಾದದ್ದೂ ಇರಬಹುದು. ಇದನ್ನು ಮುಂಗಂಡು `ನಮ್ಮವರೇ’ ಆದ ಪ್ರಮೋದ್ ಮಧ್ವರಾಜ್, ರಘುಪತಿ ಭಟ್, ಮಂಟಪ ಪ್ರಭಾಕರ ಉಪಾಧ್ಯರ ಮಾತುಗಳನ್ನು ಬಿಡಬಹುದಿತ್ತು. ಕಸಾಪ ಮತ್ತು ಅಕಾಡೆಮಿ ಅಧ್ಯಕ್ಷರ ಭಾಷಣಗಳಂತೂ ತೀರಾ ಅನಪೇಕ್ಷಿತವಾಗಿಯೇ ತೋರಿತು. (ಬಹುತೇಕ ಇವೆಲ್ಲವೂ ಆಮಂತ್ರಣದಲ್ಲಿತ್ತು ಎನ್ನುವುದೇ ನನಗಪಥ್ಯ.) ಸಭಾನಿರ್ವಹಣೆ, ಸ್ವಾಗತ, ಪ್ರಸ್ತಾವನೆ ಮೊದಲಾದ ಔಪಚಾರಿಕತೆಗಳ ಭಾರ ಹೆಚ್ಚಾಯ್ತು. (ಉದಾಹರಣೆಗೆ – ಕಲಾರಂಗದ ವಿವಿಧ ಕಲಾಪಗಳನ್ನು ಸ್ವಾಗತಕಾರರು, ಪ್ರಸ್ತಾವಕರು ಮತ್ತು ನಿರ್ವಹಣಾ ಹಂತದಲ್ಲೂ ಚೂರುಪಾರು ಹಾಡಿದ್ದೇ ಹಾಡಿದಂತಾಯ್ತು. ಸಾಲದ್ದಕ್ಕೆ ಸಾಕ್ಷ್ಯಚಿತ್ರದಲ್ಲೂ ಎಲ್ಲರಿಗೆ ಉಚಿತವಾಗಿ ಕೊಟ್ಟ ಸ್ಮರಣ ಸಂಚಿಕೆ – ಕಲಾಂತರಂಗದಲ್ಲೂ ಅದು ಬಂದದ್ದೇ ಇತ್ತು.) ಸಮ್ಮಾನಗಳು, ಬಿಡುಗಡೆಗಳು, ಸ್ಮರಣಿಕೆಗಳು ಎಂದೆಲ್ಲಾ ಹೆಸರಿನಲ್ಲಿ ಉಬ್ಬರಿಸಿದ ಸಮಯಮಿತಿ ಕಲಾರಂಗದ ಅಚ್ಚುಕಟ್ಟುತನದ ನಿಜಖ್ಯಾತಿಗೆ ಹೊಂದಲಿಲ್ಲ. ಸಾಕ್ಷ್ಯಚಿತ್ರಕ್ಕೆ ಜೀವಂತ ಸಾಕ್ಷಿಗಳ ಕೊರತೆ ಕಾಡಿತು. ಸಮ್ಮಾನಿತ (೧೭ವಿವಿಧ ಪ್ರಶಸ್ತಿ), ಪುರಸ್ಕೃತ (೨ ಗಣಕ) ಮತ್ತು ನಿಧಿ ಸ್ಥಾಪನ (ಬಹುಶಃ ೨ – ಕೋಳ್ಯೂರು ಮತ್ತು ಇನ್ನೊಬ್ಬರದು) ಔಪಚಾರಿಕತೆಗಳು ಮಾತ್ರ ಸನ್ನಿವೇಶಕ್ಕೆ ತಕ್ಕಂತೆ ಆತ್ಮೀಯತೆ ಕಳೆದುಕೊಳ್ಳದೆ ಚುರುಕಾಗಿತ್ತು. ಸಚಿವೆ ಉಮಾಶ್ರೀ ಮತ್ತು ಇಲಾಖಾ ಕಾರ್ಯದರ್ಶಿ ಶಾಲಿನಿ ರಜನೀಶ್ ಸಂದರ್ಭಕ್ಕೆ ತಕ್ಕ ಹಾಗೂ ತುಂಬ ಸರಿಯಾದ ಮಾತುಗಳನ್ನೇ ಆಡಿದ್ದು ಸಮಾಧಾನ ತಂದಿತು. ಆಶೀರ್ವಚನ ನೀಡಿದ ಪೇಜಾವರಶ್ರೀಗಳ ಹಾಸ್ಯಪ್ರಜ್ಞೆ (“ಸಭೆಯಲ್ಲಿ ಎರಡು ಶ್ರೀಗಳಿದ್ದಾರೆ. ಒಂದು ನಾನು ಮತ್ತೊಂದು ಉಮಾಶ್ರೀ.”) ಅನಿರೀಕ್ಷಿತವಿತ್ತು ಮತ್ತು ಸರ್ವಜನ ಮಾನ್ಯವಾಯ್ತು!
ದಿನದ ಮೂರನೇ ಕಲಾಪವಾಗಿ ಬಡಗು ತಿಟ್ಟಿನ ಆಟವಿತ್ತು. ಪ್ರಸಂಗ ಶ್ರೀಕೃಷ್ಣ ಸಂಧಾನ, ತಾಳಮದ್ದಳೆಗೆ ಹೆಸರಾದದ್ದು. ಇದರಲ್ಲಿ ಮೇಳ ವೃತ್ತಿಯಲ್ಲಿ ಪರಸ್ಪರ ದೂರವಿರುವ ಖ್ಯಾತನಾಮರೇ ಭಾಗವಹಿಸಿದ್ದರು. ಬಹುಶಃ ಅದು ಗುಣಕ್ಕಿಂತ ಹೆಚ್ಚು ದೋಷಕ್ಕೆ ಕಾರಣವಾಯ್ತು. ಪೂರ್ವ ನಿಶ್ಚಯದಂತೆ ಎರಡೂವರೆ ಗಂಟೆಯ ಮೊದಲ ಸಮಯಮಿತಿಯ ಮೇಲೆ ಸಭಾಕಲಾಪದಲ್ಲಿ ಕಳೆದ ಸಮಯಕ್ಕೂ ಪರಿಹಾರ ಕೊಡುವ ಜವಾಬ್ದಾರಿ ಈ ಪ್ರದರ್ಶನಕ್ಕಿತ್ತು. ಹಾಗಿರುವಾಗ ಇತರ ನಾಟಕೀಯ ಕಲಾಪಗಳನ್ನು (ನಾಲ್ವರಲ್ಲಿ ಧರ್ಮರಾಯ ಮತ್ತು ಕೃಷ್ಣರ ಮೊದಲ ಸುತ್ತಿನ ವಿಚಾರಣೆ) ನಿವಾರಿಸಿಕೊಂಡರೂ ಭೀಮ ದ್ರೌಪದಿಯರ ಸಂಭಾಷಣೆ ಲಂಬಿಸಿದ್ದು ಸರಿಯಾಗಲಿಲ್ಲ.
ಯಕ್ಷಗಾನ ಮೇಳ ಕಲೆ – ವ್ಯಕ್ತಿ ಪ್ರಾಬಲ್ಯದಿಂದ ಪ್ರದರ್ಶನವನ್ನು ಗೆಲ್ಲಲಾಗದು ಎನ್ನುವುದಕ್ಕೆ ಇದು ನನಗೊದಗಿದ ಎರಡನೇ ಉದಾಹರಣೆಯಾಯ್ತು. (ನಾನನುಭವಿಸಿದ ಮೊದಲ ಉದಾಹರಣೆಗೆ ಇಲ್ಲಿ ಚಿಟಿಕೆ ಹೊಡೆಯಿರಿ)
* * * * *
ಈ ಬಾರಿ ಯಕ್ಷಗಾನ ಕಲಾರಂಗ ಒಮ್ಮೆಗೆ ಮೂರು ಆಮಂತ್ರಣಗಳ ಸಮುಚ್ಚಯವನ್ನೇ ಕಳಿಸಿತ್ತು. ಅದರಲ್ಲಿ ಮೇಲೆ ಹೇಳಿದ ಪ್ರಶಸ್ತಿ ಪ್ರದಾನ ಸಮಾರಂಭದಂತೆಯೇ ಇನ್ನೊಂದು – ಯಕ್ಷ-ಶಿಕ್ಷಣದ ಫಲಿತಾಂಶ ಪರೀಕ್ಷೆ. ಇದೂ ವಾರ್ಷಿಕ ವಿಧಿಯೇ ಆಗಿದೆ. ಉಡುಪಿ ಜಿಲ್ಲಾದ್ಯಂತ ವಿವಿಧ ಶಾಲೆಗಳಲ್ಲಿ ಮಕ್ಕಳ ತಂಡ ಕಟ್ಟಿ, ಅಲ್ಲಿಗೆ ಕಲಾರಂಗದ ವತಿಯಿಂದ ಯಕ್ಷ-ಗುರುವನ್ನಟ್ಟಿ, ನಿಯತವಾಗಿ ತರಬೇತಿ ಕೊಡುವ ಅಸಾಧಾರಣ ಕಾಯಕ. ಕೊನೆಯಲ್ಲಿ (ಈ ಬಾರಿ ಡಿಸೆಂಬರ್ ಮೊದಲ ವಾರದಿಂದ ತೊಡಗಿದಂತೆ) ಸುಮಾರು ಮೂರು ವಾರಗಳ ಕಾಲ ನಿತ್ಯ ಉಡುಪಿಯ ರಾಜಾಂಗಣದಲ್ಲಿ ಎರಡು-ಮೂರು ತಂಡಗಳ ಪರಿಪೂರ್ಣ ಪ್ರದರ್ಶನ.
ನೂರಕ್ಕೂ ಮಿಕ್ಕ ಶಾಲಾ ಹೆಸರುಗಳ ಪಟ್ಟಿಯನ್ನಷ್ಟೇ ನೋಡಿದರೆ ಸಾಕು – ಶ್ರಮ, ಹಣ, ತೊಡಗಿರಬಹುದಾದ ಗುರು ಹಾಗೂ ಶಿಷ್ಯ ವೃಂದ, ತರಬೇತಿಯ ಅವಧಿ, ಸಾಗಣೆ, ವೇಷಭೂಷಣ, ಭದ್ರತೆ, ಪ್ರದರ್ಶನ ವ್ಯವಸ್ಥೆಯೇ ಮೊದಲಾದ ಸಾವಿರಕ್ಕೂ ಮಿಕ್ಕ ಸಮಸ್ಯೆಗಳ ಲೆಕ್ಕ ಹಾಕಲು! ಯಕ್ಷಗಾನ ಕಲಾರಂಗದ ಗುರುವೃಂದದ ಶ್ರದ್ಧೆಯನ್ನೊಮ್ಮೆ ಕಂಡ (ಯಕ್ಷ ನೃತ್ಯ ಶಿಬಿರಕ್ಕೆ ಇಲ್ಲಿ ಚಿಟಿಕೆ ಹೊಡೆಯಿರಿ) ನಾನಂತೂ ಮಂಗಳೂರು ಉಡುಪಿಯ ಅಂತರವೊಂದಲ್ಲದಿದ್ದರೆ ನಿತ್ಯ ರಾಜಾಂಗಣದಲ್ಲೇ ಸಂಜೆ ಕಳೆಯುತ್ತಿದ್ದೆ!
* * * * *
ಕಲಾರಂಗ ಕೊಟ್ಟ ಮೂರನೆಯ ಆಮಂತ್ರಣ ಈ ಬಾರಿಯ ವಿಶೇಷ – ಬಣ್ಣದ ಬಿನ್ನಾಣ. ಯಕ್ಷಗಾನದ ಪೌರಾಣಿಕ ಕಥನಗಳಲ್ಲಿ ಸಮಸ್ಯಾತ್ಮಕ ಅತಿಮಾನುಷರಿಲ್ಲದೆ ಸ್ವಾರಸ್ಯವಿಲ್ಲ. ಈ ಅತಿಮಾನುಷರಲ್ಲಿ ಬಹು ದೊಡ್ಡ ಪಾಲು ಎಲ್ಲರಿಗೂ ಗೊತ್ತಿರುವಂತೇ ರಾವಣ, ಕುಂಭಕರ್ಣ, ಶೂರ್ಪನಖೆ, ತಾರಕ, ಶುಂಭ, ಮಹಿಷ, ನರಕ ಮುಂತಾದ ರಕ್ಕಸರದು. ಉಳಿದಂತೆ ಪ್ರಾಣಿಪ್ರಪಂಚದ ವಿಸ್ಮಯಗಳೇ ಆದ ವಾನರ, ಸಿಂಹ, ಕೋಣ, ಕರಡಿ ಇತ್ಯಾದಿ. ಪಾತ್ರದ ಗುಣಾಧಾರಿತ ಬಣ್ಣಗಾರಿಕೆಯನ್ನು ತುಂಬ ಚೆನ್ನಾಗಿ ವಿಕಸಿಸಿಕೊಂಡು ಬಂದಿರುವ ಯಕ್ಷಗಾನ ಈ ಅತಿಮಾನುಷರಿಗೆ ವಿಶಿಷ್ಟ ಸ್ಥಾನವನ್ನೇ ಕಲ್ಪಿಸಿದೆ. ಎಲ್ಲಾ ವೇಷಗಳಲ್ಲೂ ಬಣ್ಣಗಾರಿಕೆ ಇದ್ದರೂ ಅತಿಮಾನುಷರನ್ನಷ್ಟೇ `ಬಣ್ಣದ ವೇಷ’ ಎಂದು ಗೌರವಿಸಿದೆ. ಜನಪದರು ತಮ್ಮ ನಿತ್ಯ ಒಡನಾಟದ ಸಾಮಗ್ರಿಗಳಲ್ಲಿ ಈ ವೇಷಗಳನ್ನು ರೂಪಿಸಿದ, ಅದರಲ್ಲೂ ಕೇವಲ ಮುಖವರ್ಣಿಕೆಯನ್ನು ಕಂಡ ಬಗೆಯನ್ನು ವಿವರಗಳಲ್ಲಿ ನೋಡುವ ಕಲಾಪವಾಗಿ ಬಣ್ಣದ ಬಿನ್ನಾಣವನ್ನು ಯೋಜಿಸಿದ್ದರು.
ಕಾರ್ಕಳ ಮೂಲದ ಡಾ| ಪದ್ಮನಾಭ ಕಾಮತ್, ವೃತ್ತಿಯಲ್ಲಿ ಮಂಗಳೂರಿನ ಕೆ.ಎಂ.ಸಿಯ ಹೃದಯ ತಜ್ಞ. ಆದರೆ ಇವರ ನಾಡಿಯಲ್ಲಿ ತೆಂಕು ತಿಟ್ಟಿನ ಯಕ್ಷಗಾನಕ್ಕೆ, ಅದರಲ್ಲೂ ಬಣ್ಣದ ವೇಷಕ್ಕೆ ವಿಶೇಷ ಮಿಡಿತವಿತ್ತು. ಅವರಿವರು ಹೇಳಿದ್ದು ಕೇಳಿದಂತೆ, ಕಾಮತರು ವೃತ್ತಿಯ ಬಿಸಿಯ ನಡುವೆಯೂ ಅಪರಾತ್ರಿಯ ಯಾವ ಪ್ರಹರದಲ್ಲಿ ಯಾವುದೋ ಮೇಳದ ಎಲ್ಲಿನದೋ ಆಟದಲ್ಲಿ ಬಣ್ಣದ ವೇಷ ಬರುತ್ತದೆ ಎಂದು ಸರಿಯಾಗಿ ಅಂದಾಜಿಸಿಯೇ ಕಾರೋಡಿಸಿ, ನೋಡಿ, ಮರಳುವಷ್ಟು ಮರುಳರಂತೆ! ಇಂಥಾ ಕಾಮತರು ಪೃಥ್ವೀಗೆ ಬರುತ್ತಿರುವ ಬಣ್ಣದ ಮಹಾಲಿಂಗರ ಜನ್ಮ ಶತಾಬ್ದಿಯನ್ನು ನೆನಪಿಸಿದರು. ನಿಮಗೆಲ್ಲ ತಿಳಿದಂತೆ, ಕಳೆದ ಆರೇಳು ದಶಕಗಳಲ್ಲಿ ತೆಂಕಿನ ಬಣ್ಣದ ವೇಷದಲ್ಲಿ ಪರಮ ಸಿದ್ಧಿಯನ್ನು ಗಳಿಸಿ, ಇತಿಹಾಸಕ್ಕೆ ಸಂದು ಹೋದ ಮಹಾನ್ ಕಲಾವಿದ ಬಣ್ಣದ ಮಹಾಲಿಂಗ. ಕಾಮತ್ತರು ಅಷ್ಟಕ್ಕೇ ನಿಲ್ಲದೆ, ಈ ನೂರನ್ನು ಬಣ್ಣದ ವೇಷದ ಮುಖವರ್ಣಿಕೆಯ ಕುರಿತೊಂದು ಕಮ್ಮಟ ನಡೆಸುವ ಮೂಲಕ ಅರ್ಥಪೂರ್ಣವಾಗಿ ಸಂಭ್ರಮಿಸಲು ಆಶಿಸಿದರು. ಪೃಥ್ವೀ ತನ್ನ ಬಹುಮುಖೀ ಆಸಕ್ತಿ ಹಾಗೂ ಸಂಪರ್ಕದ ಬಲದಲ್ಲಿ ಇಡೀ ದಿನದ ಕಲಾಪವನ್ನೂ ಸೂಕ್ತ ಕಲಾವಿದರನ್ನೂ ನಿಶ್ಚೈಸಿದರು. ಸಂಘಟನಾತ್ಮಕ ಬಲ ಕೊಡಲು ಯಕ್ಷಗಾನಕಲಾರಂಗ ಹಿಂದೇಟು ಹಾಕಲಿಲ್ಲ. ಬೆಂಗಳೂರಿನ ದೂರಕ್ಕೆ ಹೋಗಿ ಭರ್ಜರಿ ವಾರ್ಷಿಕೋತ್ಸವ ನಡೆಸಿದ `ಬಣ್ಣ’ ಕಳಚುವ ಮೊದಲು, ಅಂದರೆ ಒಂದೇ ವಾರದಲ್ಲಿ (೧೬-೧೧-೧೪) ಇನ್ನೊಂದೇ ಭಾರೀ ಹೊಣೆ. ಮರುದಿನದಿಂದಲೇ ವಾರಪರ್ಯಂತ ತಮ್ಮದೇ ವಿದ್ಯಾಪೋಷಕ್ ವಿಭಾಗದ ಬಹುಮುಖ್ಯ ಕಲಾಪ – ದೊಡ್ಡ ವಿದ್ಯಾರ್ಥಿ ಸಮೂಹಕ್ಕೆ ಸನಿವಾಸ ಶಿಬಿರ, ಅದೂ ಮಂಗಳೂರಿನಲ್ಲಿ ನಡೆಸಬೇಕಾದ ಹೊರೆಗೂ ಮುನ್ನಾದಿನ ಹೀಗೊಂದು ಅದ್ಭುತ! ಹೌದು, ಅದ್ಭುತ ಎನ್ನುವಂತೇ ಉಡುಪಿಯ ರಾಜಾಂಗಣದಲ್ಲಿ ದಿನಪೂರ್ತಿ ಬಣ್ಣದ ಬಿನ್ನಾಣವನ್ನು ನಡೆಸಿಯೇ ಬಿಟ್ಟರು.
ಬಣ್ಣದ ವೇಷದ ಕುರಿತಂತೆ ಬಹಳ ಹಿಂದೆ ಮುಳಿಯ ಮಹಾಬಲ ಭಟ್ಟರು ಕಟೀಲಿನಲ್ಲೂ ಚಂದ್ರಶೇಖರ ದಾಮ್ಲೆ (ಮತ್ತು ಬಳಗ?) ಸುಳ್ಯದಲ್ಲೂ ಹೀಗೇ ವಿಶೇಷಪಟ್ಟ ಕಲಾಪಗಳನ್ನು ನಡೆಸಿದ್ದು ಕೇವಲ ಪತ್ರಿಕಾ ಸುದ್ದಿಯಾಗಿ ನನ್ನ ನೆನಪಿನಲ್ಲಿದೆ. ಅಂದು ಒಲವಿದ್ದರೂ ಭಾಗಿಯಾಗುವ ಬಿಡುವಿಲ್ಲದ್ದಕ್ಕೆ ಈ ಬಾರಿ ಉಡುಪಿಯಲ್ಲಿ ಸಮೃದ್ಧ ನಷ್ಟಭರ್ತಿಯಾಯ್ತು.
ರಾಜಾಂಗಣದ ನಿಶ್ಚಿತ ವೇದಿಕೆಯನ್ನೇ ನಿರಾಕರಿಸಿ, ಸಭಾಗೃಹದ ನಡುವೆ ಅಡ್ಡಕ್ಕೆ ಕಟ್ಟಿದ ರಂಗಮಂಚ ಪರೋಕ್ಷವಾಗಿ ಬಣ್ಣದ ವೇಷಧಾರಿಯ ಚೌಕಿಯ ಸ್ಥಾನವನ್ನೇ ಕಲ್ಪಿಸಿದಂತಿತ್ತು. ಮತ್ತದರ ಹಿನ್ನೆಲೆ ಸೇರಿದಂತೆ ಮೂರೂ ಬದಿಗಳಿಂದ ಆವರಿಸಿದಂತೆ ವ್ಯವಸ್ಥೆ ಮಾಡಿದ್ದ ಬಣ್ಣಗಾರಿಕೆಯ ಅಂಕಣ ಸಂಘಟಕರ ಹೆಚ್ಚುಗಾರಿಕೆಯೇ ಸರಿ. ಇಡಿಯ ಕಲಾಪಕ್ಕೆ ಪ್ರೇರಣೆ ಕೊಟ್ಟ ಡಾ| ಪದ್ಮನಾಭ ಕಾಮತ್, ಹಲವು ಮೇಳಗಳ ಯಜಮಾನರೇ ಆದ ಕಿಶನ್ ಹೆಗ್ಡೆ ಉದ್ಘಾಟನಾ ಕಲಾಪದ ಮುಖ್ಯರು. ಮಾತುಗಳು ಔಚಿತ್ಯಪೂರ್ಣವಾಗಿದ್ದುವು. ಸಿನಿಮಾ ಮತ್ತು ಇತರ ರಂಗಕಲೆಗಳಲ್ಲೂ (ನೃತ್ಯ, ನಾಟಕ) ಬಳಕೆಯಾಗುವ ಬಣ್ಣಗಾರಿಕೆಗೂ ಅಪ್ಪಟ ಜನಪದ ಮೂಲದ ಯಕ್ಷಗಾನದ ಬಣ್ಣಗಾರಿಕೆಗೂ ಇರುವ ಅಂತರವನ್ನು ಮೊದಲಲ್ಲಿ ಸ್ಪಷ್ಟಪಡಿಸುವಂತೆ ನಾಟಕರಂಗದ ಪ್ರಸಾದನ ತಜ್ಞ ಪುರುಷೋತ್ತಮ ತಲವಾಟ ಮಾತಾಡಿದರು. ಅವರು ಬಹುಮುಖ್ಯವಾಗಿ ಎರಡು ಅಂಶಗಳಲ್ಲಿ ಯಕ್ಷಗಾನ-ಪ್ರಸಾದನ ಇತರೆಲ್ಲಾ ಪ್ರದರ್ಶನ ಕಲೆಗಳ ಬಣ್ಣಗಾರಿಕೆಗೆ ಎಂದೂ ನಿಲುಕಲಾಗದ ಎತ್ತರದಲ್ಲಿದೆ ಎನ್ನುವುದನ್ನು ವಿಶದಪಡಿಸಿದರು. ೧. ಯಕ್ಷಗಾನದಲ್ಲಿ ಪ್ರಸಾದನ ಸಾಮಗ್ರಿಗಳೆಲ್ಲ ಗ್ರಾಮೀಣಪರಿಸರದ ನಿತ್ಯ ಬಳಕೆಯ ಸಂಗತಿಗಳು ಮತ್ತು ಸಹಜವಾಗಿ ನಿರಪಾಯಕಾರಿಗಳು, ಆರೋಗ್ಯ ಸ್ನೇಹಿಗಳು. ೨. ಯಕ್ಷಗಾನದಲ್ಲಿ ಪ್ರತಿಯೊಬ್ಬ ವೇಷಧಾರಿಯೂ ಅವರವರ ಪ್ರಸಾದನ ತಜ್ಞರು; ಮೇಳ ಸ್ವಯಂಪೂರ್ಣ. ಇದು ಪರೋಕ್ಷವಾಗಿ ಇಂದು ಹೊರಗೆ ಲಭ್ಯವಾದ ಸುಲಭ ಸಾಮಗ್ರಿಗಳಿಗೆ ಚೌಕಿಯಲ್ಲಿ ಅವಕಾಶ ಕೊಡುವ ಕ್ರಮದ ಕಟುಟೀಕೆಯೂ ಸರಿ. ಹೋಲಿಕೆಯಲ್ಲಿ ಇತರ ರಂಗಪ್ರಕಾರಗಳು ಗಳಿಸುತ್ತಿರುವ ಸುಲಭ ಹಣ ಮತ್ತು ಅಗ್ಗದ ಪ್ರಚಾರದಲ್ಲಿ ಒಮ್ಮೊಮ್ಮೆ ಅನಾಥಪ್ರಜ್ಞೆ ಕಾಡಬಹುದಾದ ಯಕ್ಷಗಾನ ಕಲಾವಿದರ ಬಹುದೊಡ್ಡ ಮಾನಸಿಕ ಎತ್ತುಗಡೆಯೂ ಹೌದು.
ಪೂರ್ವಾಹ್ನದ ಮೂರನೆಯ ಕಲಾಪವಾಗಿ ಬಣ್ಣದ ವೇಷದ ಕುರಿತೇ ವಿಸ್ತೃತ ಚರ್ಚಾಗೋಷ್ಠಿಯನ್ನೇ ಹಮ್ಮಿಕೊಂಡಿದ್ದರು. ಆದರೆ ಇದರ ಕಲಾಪ ಭಾಗಿಗಳು ಸ್ವತಃ ಮಾತುಗಳಲ್ಲೂ ನಿವೇದಿಸಿಕೊಂಡಂತೆ ಬಣ್ಣದ ವೇಷದ ಕುರಿತು ಅಧ್ಯಯನ ಬಲವಾಗಲೀ ಅಭ್ಯಸಿಸಿದ ಅನುಭವ ಸಂಗ್ರಹವಾಗಲೀ ಇದ್ದವರಲ್ಲ. ಚರ್ಚೆಯ ನಿರ್ವಾಹಕ ಎಂ.ಎಲ್ ಸಾಮಗ – ಖ್ಯಾತ ರಾಜವೇಷಧಾರಿ ಮತ್ತು ಅರ್ಥಧಾರಿ, ಕೋಳ್ಯೂರು ರಾಮಚಂದ್ರರಾವ್ – ಖ್ಯಾತ ಸ್ತ್ರೀವೇಷಧಾರಿ, ಬಲಿಪ ನಾರಾಯಣ ಭಟ್ – ಹಿರಿಯ ಭಾಗವತರು. ಇದ್ದುದರಲ್ಲಿ ಕೋಟ ಶ್ರೀಧರ ಹಂದೆಯವರು ಮಕ್ಕಳ ಮೇಳದ ಸರ್ವಾಂಗೀಣ ರೂವಾರಿ ಎನ್ನುವ ನಿಟ್ಟಿನಲ್ಲಿ ಬಣ್ಣಗಾರಿಕೆಗೆ ಹೊರಗಿನವರಲ್ಲ. ಆದರೆ ಅವರು ಇಲ್ಲಿ ಚರ್ಚೆಯ ಮುಖ್ಯ ಕಣವಾದ ತೆಂಕುತಿಟ್ಟಿನ ಬಣ್ಣದ ವೇಷಕ್ಕೆ ನ್ಯಾಯ ಒದಗಿಸಲಾಗದ ಬಡಗು ತಿಟ್ಟಿನವರಾಗಿದ್ದರು. ಹೀಗಾಗಿ ಚರ್ಚೆ ಮಾತುಗಾರರ ತಪ್ಪೊಪ್ಪಿಗೆಯಲ್ಲೇ ವೇಳೆಗಳೆಯಿತು, ಕಳೆಗಟ್ಟಲಿಲ್ಲ. ಶ್ರೀಕೃಷ್ಣ ಮಠದ ಉದಾರ ಭೋಜನದೊಡನೆ ಅಪರಾಹ್ನದ ಕಲಾಪಗಳು ತೊಡಗಿದವು. ಮೊದಲೇ ಹೇಳಿದಂತೆ, ಇಡಿಯ ಸಭಾಭವನವನ್ನು ಬಳಸಿಕೊಂಡು, ಇಂಗ್ಲಿಷಿನ U ಆಕಾರದಲ್ಲಿ, ನಾಲ್ಕಡಿ ಎತ್ತರಕ್ಕೆ ಬಲವಾದ ಲೋಹದ ಪೈಪ್ ಕಟ್ಟಿದ್ದರು. ಅದರ ಹಿನ್ನೆಲೆಯಲ್ಲಿ ಕಲಾವಿದರಿಗೆ ಕುಳಿತು ಕಲಾಪ ನಡೆಸಲು ಯುಕ್ತ ಅಂತರವಿರುವಂತೆ ನೋಡಿಕೊಂಡು ಪೈಪಿನಲ್ಲಿ ಬಲ್ಬ್ಗಳನ್ನು ನೇತು ಹಾಕಿ ಬೆಳಕಿನ ವ್ಯವಸ್ಥೆಯೂ ಮಾಡಲಾಗಿತ್ತು.
ಪೈಪಿನ ಮೇಲೆ ಪ್ರತಿ ಕಲಾವಿದನ ಹೆಸರು ಹಾಗೂ ಆತ ತನ್ನ ಮುಖದ ಮೇಲೆ ಮೂಡಿಸಲಿದ್ದ ಪಾತ್ರದ ಹೆಸರಿನ ಉಲ್ಲೇಖವಿತ್ತು. ಪ್ರಸಾದನ ಸಾಮಗ್ರಿಗಳನ್ನು (ಮುಂದೆ ಅಗತ್ಯಕ್ಕೆ ತಕ್ಕಂತೆ ಕೆಲವರಿಗೆ ಮಾತ್ರ ವೇಷಭೂಷಣಗಳನ್ನೂ) ಅಗತ್ಯಕ್ಕೆ ತಕ್ಕಂತೆ ವಿತರಿಸಲು ಸಕಲ ಸರಂಜಾಮುಗಳೂ ಸಿದ್ಧವಿದ್ದವು. ಯಾವ ಔಪಚಾರಿಕ ಬಂಧಗಳೂ ಇಲ್ಲದೆ ಏಕಕಾಲದಲ್ಲಿ ಇಪ್ಪತ್ತೈದಕ್ಕೂ ಮಿಕ್ಕು ಬಣ್ಣದ ವೇಶಧಾರಿಗಳು ಮುಖವರ್ಣಿಕೆಯನ್ನು `ಬರೆಯ’ತೊಡಗಿದರು.
ಬಹುಶಃ ಕಾಳಿಂಗ ನಾವುಡರಿಂದ ತೊಡಗಿದಂತೆ ಯಕ್ಷಗಾಯನ ಹಿಮ್ಮೇಳದಿಂದ ಮುನ್ನೆಲೆಗೆ ಬೆಳೆಯಲು ತೊಡಗಿದ್ದಿರಬೇಕು. ರಂಗಸಂಗೀತ, ಸಿನಿಹಾಡುಗಳೆಲ್ಲದರ ಕೆಟ್ಟ ಅನುಕರಣೆಗಳು ಸಾಲದೆಂಬಂತೆ ಮುಮ್ಮೇಳವನ್ನು ದಿಕ್ಕೆಡಿಸುವ, ಪ್ರೇಕ್ಷಕರು ಗರಬಡಿದು ಶಿಳ್ಳೆ-ಚಪ್ಪಾಳೆಯಿಕ್ಕುವ (ಉಸಿರು ಸಿಕ್ಕಿ ಸಾಯಲಿಲ್ಲವಲ್ಲಾ ಎಂಬ?) ಅನಿವಾರ್ಯತೆಗೆ ಮುಟ್ಟುವ ಅಪಲಾಪಗಳು ಭಾಗವತಿಕೆಯಲ್ಲಿ ಇಂದು ತಿಟ್ಟುಬೇಧ ಮರೆತು ವ್ಯಾಪಿಸಿವೆ. ಇದಕ್ಕೆ ಪೂರಕವಾಗಿ ಮೂರು ಮದ್ದಳೆ, ಆರು ಚೆಂಡೆ ಹುಡಿ ಹಾರಿಸಿದ (ಬೇ)ತಾಳವಾದ್ಯ ಪ್ರಚಂಡರೂ ಇದ್ದಾರೆ. ಮೊದಲೇ ಮಂಗ, ಮೇಲೆ ಕಳ್ಳು ಕುಡಿಸಿ, ಚೇಳು ಕುಟುಕಿಸಿದಂತೆ ಕೇವಲ ಯಕ್ಷಗಾನ ವೈಭವಗಳನ್ನು ಆಯೋಜಿಸುವುದೂ ಇಂದು ಕಡಿಮೆಯೇನಿಲ್ಲ. ಆದರೆ ಈ ಎಲ್ಲ ಸರ್ಕಸ್ಸುಗಳು ಕಲಾವಿವೇಚನೆಯ ಕುದಿಯನ್ನನುಭವಿಸಿ, ಔಚಿತ್ಯದ ಜರಡಿ ಹಾಯ್ದು, ಶಿಸ್ತುಬದ್ಧ ಅಭ್ಯಾಸದ ಒಪ್ಪವಡೆದು, ಯುಕ್ತ ಪಾತ್ರೆಯಲ್ಲಿ ಬಂದಾಗ ಮಾತ್ರ ಸೇವ್ಯ ಎನ್ನುವುದು ಮರೆತೇ ಹೋದಂತಿದೆ. ಅಪಸ್ವರ, ಅಪಶ್ರುತಿ, ಬೇತಾಳಗಳು `ಜನಪದ’ದ ಗುರಾಣಿಯನ್ನು ತೋರಿ, ಶಿಳ್ಳೆ-ಚಪ್ಪಾಳೆಗಳ ಗದ್ದಲವನ್ನೇ ಸರ್ವಮಾನ್ಯತೆಯ ಪ್ರಮಾಣವಾಗಿ ಸಾರಿ ಮೆರೆಯುತ್ತಿರುವುದು ಯಕ್ಷಗಾನ ಹಿಮ್ಮೇಳದ ದುರಂತವೇ ಸರಿ. ಸ್ಥಾನಮಹತ್ವವನ್ನು ಮರೆಯದೆ ಯಕ್ಷಗಾಯನವನ್ನು ಮೆರೆಸುವ ಬೆರಳೆಣಿಕೆಯ ಭಾಗವತರಂತೆ, ಪಕ್ಕ ವಾದ್ಯಗಾರರೂ ಇದ್ದಾರೆ ಎನ್ನುವುದಕ್ಕೆ ಸಾಕ್ಷಿಯಾಗಿ ಸುಮಾರು ಒಂದು ಗಂಟೆ ಅವಧಿಯ ಕೇವಲ ಯಕ್ಷ ತಾಳವಾದ್ಯ ಕಛೇರಿ ಅಥವಾ ಶಾಸ್ತ್ರೀಯ ಸಂಗೀತ ಭಾಷೆಯಲ್ಲಿ ಹೇಳುವುದಾದರೆ ತನಿ ಆವರ್ತ ವೇಷಧಾರಿಗಳು ಬಣ್ಣ ಬರೆಯುತ್ತಿದ್ದ ಕಾಲಕ್ಕೆ ವೇದಿಕೆಯ ಮೇಲೆ ಸುಂದರವಾಗಿ ನಡೆದಿತ್ತು. ಕೇವಲ ತಾಳ ಸೌಕರ್ಯಕ್ಕೆ ಜಾಗಂಟೆ ಹಿಡಿದು ರಜನೀಶ, ಮದ್ದಳೆಯಲ್ಲಿ ಕೃಷ್ಣಚೈತನ್ಯ ಪದ್ಯಾಣ, ಚಂಡೆಯಲ್ಲಿ ಲಕ್ಷ್ಮೀನಾರಾಯಣ ಮತ್ತು ಚಕ್ರತಾಳದಲ್ಲಿ ಶಿವರಾಮ ಕಲಾಪವನ್ನು ಚಂದಗಾಣಿಸಿದರು.
ಬಣ್ಣಗಾರಿಕೆಯ ವೀಕ್ಷಣೆಯನ್ನು ಹೆಚ್ಚು ಕುತೂಹಲಕಾರಿಯನ್ನಾಗಿಸುವಂತೆ ವೇಷಗಳ ಚಿತ್ರ ತೆಗೆಯುವ ಸ್ಪರ್ಧೆಯನ್ನು ಉಡುಪಿಯ ಛಾಯಚಿತ್ರಗಾರರ ಸಂಘದ ಸಹಯೋಗದೊಡನೆ ಉಚಿತವಾಗಿಯೇ ಸಂಯೋಜಿಸಿದ್ದರು. ಸಹಜವಾಗಿ ಕಳಪೆ ಮೊಬೈಲಿನಿಂದ ಹಿಡಿದು ಮೂರುಮೊಳದುದ್ದದ ಫಿರಂಗಿಯಂಥ ಕ್ಯಾಮರಾ ಹಿಡಿದವರೂ ಎಲ್ಲೆಲ್ಲೂ ಬಲಿ ಬರುತ್ತಿದ್ದರು.
ಸದಾ ಚೌಕಿಯ ಮರೆಯಲ್ಲಿ, ಕೇವಲ ಅಷ್ಟೇನೂ ಆಸಕ್ತರಲ್ಲದ ಸಹೋದ್ಯೋಗಿಗಳ ಒತ್ತಿನಲ್ಲಿ, ರಾತ್ರಿಯ ಯಾವುದೋ ಪ್ರಹರದಲ್ಲಿ ರಂಗಕ್ಕೇರುವ ವಿರಾಮದಲ್ಲಿ ಪಟ್ಟಾಂಗ ಹೊಡೆಯುತ್ತ ಬಣ್ಣ, ವೇಷ ಕಟ್ಟುತ್ತಿದ್ದ ಕಲಾವಿದರಿಗಿದು ಹೊಸದು. ಹೆಚ್ಚು ಕಡಿಮೆ ಪ್ರತಿಯೊಬ್ಬನೂ ಕ್ಯಾಮರಾ ಕಣ್ಣೊಳಗಿಂದ ತನ್ನನ್ನೇ ದುರುಗುಟ್ಟಿ ನೋಡುವುದು, ರಂಗದ ಕಟ್ಟುಪಾಡಿಲ್ಲದ ಸ್ಥಿತಿಯಲ್ಲಿ ತನ್ನ ಪ್ರತಿ ಖಾಸಾ ಚಲನೆಯೂ ವಿಶಿಷ್ಟ ಚೌಕಟ್ಟುಗಳಲ್ಲಿ ದಾಖಲಾಗುವುದು ತುಸು ಮುಜುಗರ ತರುವುದಿರಬಹುದು. ಆದರೆ ರಂಗದ ಮೇಲೆ ಎಷ್ಟೋ ಬಾರಿ ಕ್ಷಣಾರ್ಧದಲ್ಲಿ ಸಂದುಹೋಗುವ ತನ್ನ ಶ್ರಮಕ್ಕಿಲ್ಲಿ ಸೂಕ್ಷ್ಮ ವಿವರಗಳಲ್ಲೂ ಮೆಚ್ಚಿಕೊಳ್ಳುವ ಸಹೃದಯರಿದ್ದಾರೆ ಎಂಬ ಭಾವ ಸಂಭ್ರಮವನ್ನೇ ಉಂಟುಮಾಡುತ್ತಿದ್ದಿರಬೇಕು. ಚಿತ್ರಗ್ರಾಹಿಗಳು ಕಲಾವಿದರ ಮೈ ಕೈಯನ್ನು ಮುಟ್ಟುತ್ತಿರಲಿಲ್ಲವಾದರೂ ಅಕ್ಷರಶಃ ಯಾವುದೇ ಕೋನ, ವಿವರಗಳನ್ನು ಬಿಡದಂತೆ ಕ್ಯಾಮರಾ ಕ್ಲಿಕ್ಕಿಸುವುದು ನಡೆದಿತ್ತು. ಮುಡಿಯನ್ನು ನೆತ್ತಿಯಲ್ಲಿ ಗಂಟಿಕ್ಕಿದಲ್ಲಿಂದ ತೊಡಗಿ, ತೆಂಗಿನ ಕಡ್ಡಿಯಿಂದಿಟ್ಟ ಅಕ್ಕಿ ಮಣ್ಣಿಯ ಪ್ರತಿ ಬೊಟ್ಟು ಅನೂಹ್ಯ ಕಲ್ಪನೆಯ ಚುಟ್ಟಿಯಾಗಿ ಬೆಳೆಯುತ್ತಲಿತ್ತು. ಬಣ್ಣದ ಕಣ್ಣು ಹಣೆಗೇರಿ, ಹತ್ತಿಯ ಮುದ್ದೆ ಮೂಗಾಗಿ, ಕೋರೆದಾಡೆ ಕಪೋಲದಲ್ಲಿ ಮೂಡಿ, ರಕ್ತಸಿಕ್ತ ಕಿಸವಾಯಿ ಮುಖವೆಲ್ಲ ವ್ಯಾಪಿಸಿದ್ದಿತ್ತು. ನಿಜವ್ಯಕ್ತಿಯ ಚಹರೆಗಳೆನ್ನಿಸಿದ ಮೀಸೆ, ಹುಬ್ಬುಗಳೆಲ್ಲ ನಾಗಮುಖದ ಬಹುರಾಗರಂಜಿತ ವಕ್ರ ರೇಖೆಗಳಲ್ಲಿ ಸೇರಿಹೋದ ಚಂದ, ನುಣ್ಣನೆ ಕ್ಷೌರ ಕಂಡ ಗಲ್ಲಕ್ಕೆ ಮುಳ್ಳ ಸರಣಿಯೇ ಮುತ್ತಿದ ನೋಟ, ಬಡಕಲು ರೆಪ್ಪೆಗೂದಲೂ ಹತ್ತಿಬೊಟ್ಟು ಹೊತ್ತು ಪಿಳಕುನೋಟ ತೋರ್ಪಡಿಸಿದ್ದು, ಹತ್ತೆಂಟು ತೊಡವುಗಳು ಕಂಠದಿಂದ ನೆತ್ತಿಯವರೆಗೆ ವ್ಯಾಪಿಸಿ ಬಡಕಲು ಮನುಷ್ಯನನ್ನು ಅತಿಮಾನುಷಕ್ಕೆ ಮುಟ್ಟಿಸುವ ಕುಸುರಿಗೆಲಸದ ಈ ಪ್ರದರ್ಶನ ನೋಡನೋಡುತ್ತಾ ಲೆಕ್ಕವಿಲ್ಲದಷ್ಟು ಬಾರಿ ಮೇಲೆಕೆಳಗೆ ಓಡಾಡಿ ಕಾಲು ಸೋತದ್ದಿರಬಹುದು, ಮನಸ್ಸು ದಣಿದದ್ದಿಲ್ಲ.
ಕಮ್ಮಟ ಕೇವಲ ಮುಖವರ್ಣಿಕೆಗೆ ಮಾತ್ರ ಸೀಮಿತವಿದ್ದುದರಿಂದ ಸಂಜೆಯಾಗುತ್ತಿದ್ದಂತೆ ಒಂದೊಂದೇ ವೇಷ ಪೂರ್ಣಗೊಂಡು ಪ್ರದರ್ಶನಕ್ಕಣಿಯಾದವು. ಕಲಾವಿದರನ್ನು ಸರದಿಯ ಮೇಲೆ ವೇದಿಕೆಗೆ ತಂದು ಕುಳ್ಳಿರಿಸಿ, ಔಪಚಾರಿಕವಾಗಿ (ಕ್ಯಾಮರಾ ಹಾಗೂ ಬರಿಗಣ್ಣಿನ) ನೋಟಕರಿಗೊಡ್ಡಿ, ಸಣ್ಣ ಮಟ್ಟದ ವ್ಯಕ್ತಿ, ಪಾತ್ರ ಪರಿಚಯವನ್ನು ಮಾಡಿಸಿದರು. ಇಲ್ಲಿ ಪರಂಪರೆಯ ಪ್ರವಾಹದಲ್ಲೇ ಸ್ವಂತ ತಿಳುವಳಿಕೆ ಮತ್ತು ತಾಕತ್ತಿನಲ್ಲಿ ಗ್ರಹಿಸಿದ್ದನ್ನು, ವೃತ್ತಿರಂಗದಲ್ಲಿ ಅನುಕೂಲ, ಅಗತ್ಯಗಳಿಗೆ ತಕ್ಕಂತೆ ಪರಿಷ್ಕರಿಸಿ ಸಿದ್ಧಿಸಿದ್ದನ್ನು ಮುಖದ ಮೇಲೆ ಮೂಡಿಸಿಕೊಂಡು ಬಂದಿದ್ದ ಕಲಾವಿದರೇ ಮಾತಾಡಿದ್ದರೆ ಹೆಚ್ಚು ಔಚಿತ್ಯಪೂರ್ಣವಾಗುತ್ತಿತ್ತು. ನಿರ್ವಾಹಕರಾಗಿ ವೇದಿಕೆಯೇರಿದ್ದ ಎಂ.ಎಲ್ ಸಾಮಗರೇನೋ ಪ್ರೇಕ್ಷಕರ ವಕಾಲತ್ತು ವಹಿಸಿದಂತೆ ಕಲಾವಿದರನ್ನು ಮಾತಾಡಿಸುವುದು ಸರಿಯಾಗಿಯೇ ಇತ್ತು. ಆದರೆ ಹಿರಿಯ ಹಾಗೂ ಗೌರವಾನ್ವಿತ ಕಲಾವಿದರೇ ಆಗಿರುವ ಸೂರಿಕುಮೇರು ಗೋವಿಂದ ಭಟ್ಟರು ವಿವರಣಕಾರರಾಗಿ ರಂಗ ಆಕ್ರಮಿಸಿದ್ದು ಅನಪೇಕ್ಷಣೀಯವಾಗಿತ್ತು. ಬೆಳಗ್ಗಿನ ಚರ್ಚಾಗೋಷ್ಟಿಯಲ್ಲಿ ಇವರಂತೆಯೇ ಹಿರಿತಲೆಮಾರಿನವರಾಗಿದ್ದೂ ಬಲಿಪ, ಕೋಳ್ಯೂರಾದಿಗಳು ತೋರಿದ ಅನನುಭವದ ಹಿಂಜರಿಕೆ (ಅಥವಾ ವಿನಯ?) ಗೋವಿಂದ ಭಟ್ಟರಲ್ಲಿರಲಿಲ್ಲ. ವಿಶ್ವರಂಗಭೂಮಿಯ ಮುನ್ನೆಲೆಯಲ್ಲಿ ಬಣ್ಣದ ವೇಷ ಯಕ್ಷಗಾನದ ಬಹುದೊಡ್ಡ ಸಂಪತ್ತಾದರೂ ನಿತ್ಯ ರಂಗದಲ್ಲಿ ರಾಜವೇಷಗಳಿಗೆ ಎರಡನೆಯವೇ ಆಗಿರುತ್ತವೆ. ಪ್ರಸಂಗದ ನಡೆಯಲ್ಲಿ ಇದು ಸಮರ್ಥನೀಯವೇ ಆದರೂ ಕಲಾವಿದರ ಪ್ರಜ್ಞೆಗೂ ಅದು ಇಳಿಯುವಂತಾಗಿರುವುದು ಸರಿಯಲ್ಲ. ಇಂದಿಲ್ಲವಾದ ಹಿರಿಯ ಕಲಾವಿದರ ಉಲ್ಲೇಖವೂ ಇಲ್ಲೇ ಯಾರದೋ ಮಾತುಗಳಲ್ಲಿ ಬಂದದ್ದು ನೆನಪಿಗೆ ಬರುತ್ತದೆ – “ನಾನು ಹತ್ತಿಮುದ್ದೆಯ ಮೂಗಿಟ್ಟು ಅರಬ್ಬಾಯಿ ಕೊಡುವ ರಾವಣನಲ್ಲ, ಭುವನತಲ್ಲಣ…” ಗೋವಿಂದ ಭಟ್ಟರ ವಿಶ್ಲೇಷಣೆಗಳಾದರೂ ಈ `ವರ್ಗ ಸಂಘರ್ಷ’ವನ್ನು ಮೀರಿದ ನೆಲೆಯಲ್ಲಿರಲಿಲ್ಲ. ಯಕ್ಷ ಕಲಾವಿದರೆಲ್ಲ ಒಂದು ಮಿತಿಯ ವಾಚಿಕಾಭಿನಯದಲ್ಲಿ ಪಳಗಿದವರೇ ಆದ್ದರಿಂದ, ಕನಿಷ್ಠ ಅವರವರ ಕೈಕೆಲಸದ ಮುಖವರ್ಣಿಕೆಯನ್ನು ವಿವರಿಸುವಲ್ಲಿ ಎಡವುತ್ತಿರಲಿಲ್ಲ ಎನ್ನುವ ವಿಶ್ವಾಸ ನನ್ನದು. ಹಾಗೆ ಕೇಳುವ ಅವಕಾಶ ತಪ್ಪಿಹೋದದ್ದಕ್ಕೆ ವಿಷಾದವೂ ನನಗುಳಿಯಿತು.
ಕೇವಲ ಮಾದರಿಗೆಂಬಂತೆ ಒಂದೆರಡು ಬಡಗು ತಿಟ್ಟಿನ ಬಣ್ಣದ ವೇಷದ ಕಲಾವಿದರೂ ಕಮ್ಮಟದಲ್ಲಿ ಮುಖವರ್ಣಿಕೆ ಬರೆದು ಭಾಗವಹಿಸಿದ್ದರು. ಅದರ ಔಚಿತ್ಯವನ್ನು ವಿವರಿಸುವಲ್ಲಿ ಸಂಜೀವ ಸುವರ್ಣರ ಸಹಕಾರವನ್ನು ಕೋರಿದ್ದಕ್ಕೆ ಅವರು ವೇದಿಕೆ ಏರಿದ್ದರು ಮತ್ತು ಕೊಟ್ಟ ವಿವರಣೆಯಾದರೂ ನಿರೀಕ್ಷೆಯ ಹಿತಮಿತವನ್ನು ಮೀರಲಿಲ್ಲ.
ದಿನದ ಕೊನೆಯ ಕಲಾಪವಾಗಿ ಕೆಲವು ಕಲಾವಿದರು ವೇಷಭೂಷಣಗಳನ್ನೂ ಪೂರ್ಣಗೊಳಿಸಿ, ಪಾತ್ರ ಸೂಕ್ತ ಪ್ರಸಂಗಗಳ ತುಣುಕನ್ನು ರಂಗದ ಮೇಲೆ ಪೂರ್ಣ ಹಿಮ್ಮೇಳದೊಡನೆ ಅಭಿನಯಿಸಿಯೂ ತೋರಿಸಿದರು. ಈ ಪ್ರಾತ್ಯಕ್ಷಿಕೆಗಳಿಗೆ ಭಾಗವತರಾಗಿ ಬಲಿಪ ನಾರಾಯಣ ಭಟ್ಟ್ ಮತ್ತು ಕುರಿಯ ಗಣಪತಿ ಶಾಸ್ತ್ರಿಗಳಿದ್ದರೆ ಮದ್ದಳೆಯಲ್ಲಿ ಚೈತನ್ಯ ಕೃಷ್ಣ ಪದ್ಯಾಣ ಹಾಗೂ ಚಂಡೆಯಲ್ಲಿ ಪದ್ಯಾಣ ಶಂಕರನಾರಾಯಣ ಭಟ್ಟರೂ ಸಹಕರಿಸಿದರು. ರುದ್ರಭೀಮ, ತಾರಕಾಸುರ, ಅಜಮುಖೀ, ಗರುಡ, ಕಾಳಿಂಗ, ಸಿಂಹ, ವರಾಹ, ತ್ರಿಪುರಾಸುರರಾದಿ ವೇಷಗಳು ಸುಮಾರು ಆರು ಪ್ರಸಂಗ ತುಣುಕುಗಳನ್ನು ಎಂದಿನ ವಾಚಿಕಾಭಿನಯದ ಹೊರೆಯನ್ನು ಹಗುರಮಾಡಿಕೊಂಡು ಪ್ರಸ್ತುತಪಡಿಸಿದ್ದು ಚೆನ್ನಾಗಿಯೇ ಮೂಡಿತ್ತು. ಬಣ್ಣದ ಬಿನ್ನಾಣವನ್ನು ದಿನವಿಡೀ ವಿವರಗಳಲ್ಲಿ ಉಣಬಡಿಸಿಯೂ ಮಾತಿನವಕಾಶವಿರಲಿ, ಅಪರಿಚಿತರಿಗೆ ಕನಿಷ್ಠ ಮುಖಪರಿಚಯವಾದರೂ ಆಗುವಂತೆ ರಂಗದ ಮೇಲೂ ಕಾಣಿಸಿಕೊಳ್ಳದ ಪೃಥ್ವೀರಾಜ ಕವತ್ತಾರರ ಔಚಿತ್ಯಪ್ರಜ್ಞೆಗೆ ದೊಡ್ಡ ಸಾಕ್ಷಿಯಂತೆಯೂ ಇತ್ತು.
ಕಮ್ಮಟದ ಕೊನೆಯಲ್ಲಿ ಹಿಮ್ಮೇಳ ಸಹಿತ ಮೂಡಿದ ಪ್ರಾತ್ಯಕ್ಷಿಕೆಗಳ ಕೆಲವು ವಿಡಿಯೋ ತುಣುಕುಗಳು:
ತ್ರಿಪುರಾಸುರರು:
ಸಿಂಹ ವೇಷ:
ಗರುಡ, ಕಾಳಿಂಗ:
ಅಜಮುಖಿ, ತಾರಕಾಸುರ:
ರುದ್ರ ಭೀಮ:
Olleya dakhalathiya kelasa kalarangakuu Abhayanigu abhinandane.Pradarshana matthu samveshagala visuals bekagitthu.
ಇಂದು ತೆಂಕು ಈ ಭಾಗದಿಂದ ಹೊರಗೆ ಪ್ರಸಿದ್ಧವಾಗಿರುವದು ತನ್ನ ಬಣ್ನದ ವೇಷಗಳಿಂದಲೇ ಅಂದರೆ ಹೆಚ್ಚು ಸೂಕ್ತವೇನೋ. ಇದಕ್ಕೆ ಕಾರಣ ರಾತ್ರಿಯಿಡೀ ಬಣ್ಣ ಹಚ್ಚಿ ಬೆಳಿಗ್ಗಿನ ಜಾವದಲ್ಲಿ ಬಂದು ಅಬ್ಬರಿಸುವ ಈ ಕಲಾವಿದರೆಲ್ಲರೂ ಎರಡನೆ ವೇಷಧಾರಿಗಳಾಗಿದ್ದುರಂದಿಲೇ. ಇವರೆಲ್ಲ ಈ ರಂಗವನ್ನು ಆಳಲಿಲ್ಲ. ಆದರೆ ಈ ಮಾಧ್ಯಮವನ್ನು ಆರಾಧಿಸಿದವರು. ಹಾಗಾಗಿಯೇ ಇವರು ಪರಂಪರೆಯನ್ನು ಮೀರದೇ ತೆಂಕಿನ ಸೊಗಸನ್ನು ಉಣಿಸಿದ್ದಾರೆ. ಬಣ್ನದಲ್ಲಿಯೇ ಹುದುಗಿ ಹೋದ ಇವರನ್ನು ಪರಿಚಯಿಸುವತ್ತ ದುಡಿದ ಕಲಾರಂಗ ಮತ್ತು ಪ್ರಥ್ವೀರಾಜ ಕವತ್ತಾರರು ಅಭಿನಂದನೀಯರು. ಆದರೆ ಯಕ್ಷಗಾನದಲ್ಲಿ (ತೆಂಕು ಮತ್ತು ಬಡಗು) ಪ್ರಧಾನ ವೇಷಧಾರಿಗಳಾದವರು ಈ ರಂಗವನ್ನು ಆಳಿದುದರ ಪರಿಣಾಮವಾಗಿ ಜನಪ್ರಿಯತೆಗೆ ಮೊರೆಹೊದುದರಿಂದ ಈ ರಂಗದ ಅನೇಕ ಮಹತ್ವದ ಅಂಶಗಳೆಲ್ಲ ಕಣ್ಮರೆಯಾದದ್ದನ್ನು ಗಮನಿಸಬಹುದು. ಈ ನಿಟ್ತಿನಲ್ಲಿ ನೀವು ಗೋವಿಂದ ಭಟ್ಟರ ವಿವರಣೆಯನ್ನು ಸರಿಯಗಿಯೇ ಗ್ರಹಿಸಿದ್ದೀರಿ. ಕಲಾವಿದ ಪರಿಣಾಮದಲ್ಲಿ ಗೆದ್ದು ಮಾಧ್ಯಮದಲ್ಲಿ ಸೋತಾಗ ವಿಮರ್ಶಕ ಎಚ್ಚರಿಸಲೇ ಬೇಕು.
ಬಹಳ ಸೊಗಸಾಗಿ ಬರೆದಿದ್ದೀರಿ. ಕಾರಣಾಂತರಗಳಿಂದ ಭಾಗವಹಿಸಲು ಸಾಧ್ಯವಾಗದೇ ಇದ್ದವರಿಗಾಗಿ ಒಂದು ಒಳ್ಳೆಯ ಲೇಖನ.
ಗಿರೀಶ್, ಬಜಪೆ
ಬಹಳ ಸೊಗಸಾಗಿದೆ. ಒಳ್ಳೆಯ ದಾಖಲೀಕರಣ. ಕಲಾರಂಗದ ಕೆಲಸಗಳು ನಿಜಕ್ಕೂ ಅನನ್ಯ. ಆ ಅನನ್ಯತೆಯನ್ನು ಬಹಳ ಚೆನ್ನಾಗಿ ವಿಶ್ಲೇಷಿಸಿದ್ದೀರಿ.
thank u sri AshokVardhana fantastic , you are doing wonderful job.
i feel i am lucky to get your excellent emails of Yakshagaana in particular i appreciate your strenuous effort in capturing these excellent bits which are masterly edited
my hearty congratulations
i am forwarding these to the like minded friends and relatives who are much interested in India and Abroad