ಅಧ್ಯಾಯ ಮೂವತ್ತೊಂದು
[ಡೇವಿಡ್ ಕಾಪರ್ಫೀಲ್ಡ್‍ನ ಜೀವನ ವೃತ್ತಾಂತ ಮತ್ತು ಅನುಭವಗಳು, ಕಾದಂಬರಿ. ಮೂಲ ಇಂಗ್ಲಿಷಿನಲ್ಲಿ ಚಾರ್ಲ್ಸ್ ಡಿಕನ್ಸ್, ಕನ್ನಡ ಭಾವಾನುವಾದ ಎ.ಪಿ. ಸುಬ್ಬಯ್ಯ]
ವಿ-ಧಾರಾವಾಹಿಯ ಮೂವತ್ಮೂರನೇ ಕಂತು

ಯಾರ್ಮತ್ತನ್ನು ಬಿಟ್ಟು ಹೋಗಲು ಮೊದಲೇ ಬೇಸರಪಡುತ್ತಿದ್ದ ನಾನು ಪೆಗಟಿ ನನ್ನನ್ನು ಕೇಳಿಕೊಂಡ ಮೇಲಂತೂ ಅಲ್ಲಿಂದ ಹೊರಡುವುದನ್ನು ನಿಲ್ಲಿಸಿದೆನು. ಮಿ. ಬಾರ್ಕಿಸರ ಅಂತಿಮ ಕ್ರಿಯೆಯೆಲ್ಲ ಪೂರೈಸುವವರೆಗೆ ನಾನು ಅಲ್ಲೇ ಇದ್ದೆನು. ನನ್ನ ತಾಯಿಯ ಮೇಲಿನ ಪ್ರೇಮದಿಂದಾಗಿ ಪೆಗಟಿ ಬ್ಲಂಡರ್ಸ್ಟನ್ನಿನ ಇಗರ್ಜಿಯ ಶವ ಹೂಳುವ ಸ್ಠಳದಲ್ಲೇ ತನ್ನ ಬಗ್ಗೆಯೂ ಮಿ. ಬಾರ್ಕಿಸನ ಬಗ್ಗೆಯೂ ಸ್ವಲ್ಪ ಸ್ಥಳವನ್ನು ಹಣ ಕೊಟ್ಟು ಕಾದಿಡಿಸಿದ್ದಳು.

ಉತ್ತರ ಕ್ರಿಯೆಗೆ ನಾಲ್ಕಾರು ದಿನಗಳು ಬೇಕಾಗಿದ್ದುದರಿಂದ, ಆ ಕೆಲಸವನ್ನು ಓಮರ್ ಮತು ಜೋರಾಂ ಕಂಪೆನಿಯವರಿಗೆ ವಹಿಸಿಕೊಟ್ಟು, ಮಿ. ಬಾರ್ಕಿಸರ ಮನೆ ಕಡೆಯ ಕಾರ್ಯಗಳನ್ನು ಕುರಿತು ಮಿ. ಪೆಗಟಿ ಮತ್ತು ನಾನೂ ಗಮನ ಕೊಟ್ಟೆವು. ಮಿ. ಬಾರ್ಕಿಸರು ಉಯಿಲೇನಾದರೂ ಬರೆದಿಟ್ಟಿರುವರೋ ಎಂದು ಆ ಊರಿನ ಕೆಲವು ಗೃಹಸ್ಥರ ಸಮಕ್ಷಮದಲ್ಲಿ ನಾವು ಶೋಧಿಸುವಾಗ ಒಂದು ಉಯಿಲನ್ನೂ ಆ ಉಯಿಲಿಗೆ ಸಂಬಂಧಪಟ್ಟ ಚರಸ್ವತ್ತುಗಳನ್ನೂ ಕಂಡೆವು.

ಉಯಿಲಿನ ಒಕ್ಕಣೆ ಬಹು ಸ್ಪಷ್ಟವಾಗಿಯೂ ಸರಳವಾಗಿಯೂ ಇತ್ತು. ತನ್ನ ಕಾಯಕಷ್ಟದಿಂದ ಸಂಪಾದಿಸಿದ್ದ ಹಣ ಮತ್ತೂ ವಸ್ತುಗಳನ್ನು ಕುರಿತು ಅವರಿಗೆ ಇದ್ದ ಆಸೆ, ಆಸಕ್ತಿಗಳು ಉಯಿಲಿನಲ್ಲೂ ಅವರು ಕಾದು ಕಾಪಾಡಿಟ್ಟಿದ್ದ ಸಾಮಾನುಗಳಲ್ಲೂ ಕಾಣಬಹುದಾಗಿತ್ತು. ಅವರ ಬಾಹ್ಯ ಸ್ವರೂಪ ಸ್ವಲ್ಪ ಒರಟುತರದ್ದೇ ಆಗಿದ್ದರೂ ಅವರ ಅಂತರಂಗದ ವ್ಯಕ್ತಿತ್ವ ಬಹು ಯೋಗ್ಯ, ಸೌಮ್ಯ, ಸುಂದರತರದ್ದೇ ಆಗಿತ್ತು. ಪತ್ನಿಯ ಮೇಲಿನ ಅವರ ಪ್ರೇಮ, ನೆಂಟರಿಷ್ಟರ ಮೇಲಿನ ನಂಬಿಕೆ, ಮರ್ಯಾದೆ, ತನ್ನ ಮನಸ್ಸಿಗೆ ಒಪ್ಪಿದವರನ್ನು ಕುರಿತಾಗಿ ತೋರಿಸುತ್ತಿದ್ದ ಪ್ರೇಮ, ಔದಾರ್ಯ – ಇವೆಲ್ಲವೂ ಆ ಉಯಿಲಿನಲ್ಲಿ ಕಂಡು ಬರುತ್ತಿದ್ದುವು.

ಪೆಟ್ಟಿಗೆಯೊಳಗೆ ಈ ಮುಂದೆ ಕಾಣಿಸುವ ವಸ್ತುಗಳಿದ್ದುವು: ಕುದುರೆಯ ದುಡಿ-ಚೀಲದೊಳಗೆ ಹುಲ್ಲಿನಲ್ಲಿ ಸುತ್ತಿಟ್ಟಿದ್ದ ಚಿನ್ನದ ಗಡಿಯಾರ ಮತ್ತೂ ಸರಪಣಿ (ಈ ಗಡಿಯಾರ ಅವರ ಮದುವೆಯ ದಿನ ಮಾತ್ರ ಬೆಳಕನ್ನು ಕಂಡಿತ್ತಾಗಿ ತಿಳಿದೆನು), ನಿಂಬೆ ಹಣ್ಣಿನ ಆಕಾರ ಮತ್ತು ಗಾತ್ರದ ಒಂದು ಕರಡಿಗೆಯ ಒಳಗೆ ಚಿಕ್ಕ ತಟ್ಟೆ ಬಟ್ಟಲುಗಳು ತುಂಬಿಕೊಂಡಿದ್ದುವು. (ಇವು ನಾನು ಚಿಕ್ಕವನಾಗಿದ್ದಾಗ ನನಗೆ ಇನಾಂ ಕೊಡಬೇಕೆಂದು ಕ್ರಯಕ್ಕೆ ತಂದು, ಅನಂತರ ಹಣ ಕೊಟ್ಟು ತಂದದ್ದನ್ನು ಕಳೆದುಕೊಳ್ಳಲು ಮನಸ್ಸು ಬರದೆ, ಅಲ್ಲೇ ಉಳಿದವು ಆಗಿರಬೇಕು), ಎಂಬತ್ತೇಳು ಇಡೀ ಗಿನಿ ನಾಣ್ಯಗಳು ಅರ್ಧ ಗಿನಿ ಬೆಲೆಯ ಚಿಲ್ಲರೆ ನಾಣ್ಯಗಳು, ಇನ್ನೂರಹತ್ತು (ಬಹು ಚೊಕ್ಕಟವಾಗಿದ್ದ) ಪೌಂಡು (ಸರಕಾರದ) ನೋಟುಗಳು, ಒಂದು ಲಾಳ, ಒಂದು ಕರ್ಪೂರದ ತುಂಡು, ಉಜ್ಜಿ ನುಣುಪು ಮಾಡಲಾಗಿದ್ದ ಮುತ್ತಿನ ಚಿಪ್ಪು ಒಂದು. (ಮುತ್ತು ತಯಾರಿ ಕೆಲಸದಲ್ಲಿ ಅವರಿಗೆ ಒಂದಾವೃತ್ತಿ ಅಭಿರುಚಿಯುಂಟಾಗಿ, ಯಾವುದೋ ಕಾರಣದಿಂದ ಆ ಕೆಲಸವನ್ನು ಬಿಟ್ಟಿದ್ದರಾಗಿ ಊಹಿಸಿದೆವು). ಹೊಗೆ ಸೊಪ್ಪಿನ ಬೆಳ್ಳಿ ಕರಡಿಗೆ ಒಂದು. ಕೆಲವು ರಶೀದಿಗಳು ಮತ್ತು ಅವರ ಉಳಿತಾಯ ಮೂರು ಸಾವಿರ ಪವನುಗಳನ್ನು ತೋರಿಸುವ ರಿಕಾರ್ಡುಗಳು.

ಈ ಮೂರು ಸಾವಿರ ಪವನುಗಳಲ್ಲಿ ಒಂದು ಸಾವಿರ ಪವನಿನ ಬಡ್ಡಿ ಮಿ. ಪೆಗಟಿ ಬದುಕಿರುವವರೆಗೆ ಅವರಿಗೆ ಸಲ್ಲುತ್ತಿದ್ದು, ಅವರು ಮರಣಪಟ್ಟನಂತರ, ಎಮಿಲಿ, ನಾನು ಮತ್ತೂ ಅವರ ಪತ್ನಿ ಪೆಗಟಿ ಸಮಪಾಲಿನಿಂದ ಹಂಚಿಕೊಳ್ಳಬೇಕೆಂದೂ ಉಳಿದ ಎಲ್ಲಾ ಹಣ, ಮನೆ, ಮತ್ತೂ ವಸ್ತುಗಳು ಪೂರಾ ಪತ್ನಿ ಪೆಗಟಿಗೇ ಇರಬೇಕೆಂದೂ ಉಯಿಲಿನಲ್ಲಿತ್ತು. ಶವವನ್ನು ಹೂಳುವ ದಿನ ನಾನೂ ಬ್ಲಂಡರ್ಸ್ಟನ್ನಿಗೆ ಹೋಗಿದ್ದೆ. ಮಿ. ಓಮರರ ಕಡೆಯವರಿಂದ ಆ ಕೆಲಸ ನಡೆಯಿತು. ಅನಂತರ ಇತರ ಎಲ್ಲರೂ ಯಾರ್ಮತ್ತಿಗೆ ಹೋದರು. ನಾನು ಒಬ್ಬನು ಮಾತ್ರ ಹೋಗದೆ ಬ್ಲಂಡರ್ಸ್ಟನ್ನಿನ ಇಗರ್ಜಿ ವಠಾರದಲ್ಲಿ ಸ್ವಲ್ಪ ಹೊತ್ತು ಹಿಂದಿನ ದಿನಗಳನ್ನೆಲ್ಲಾ ನೆನೆದುಕೊಂಡು ನಿಂತಿದ್ದೆ.

ಸ್ವಲ್ಪ ಸಮಯಾನಂತರ ನಾನು ಯಾರ್ಮತ್ತಿನ ಕಡೆಗೆ ಹೊರಟೆ. ಬ್ಲಂಡರ್ಸ್ಟನ್ನಿನ ನೆನಪೇನೂ ಸಂತೋಷ ಪ್ರದವಾಗಿರಲಿಲ್ಲ. ಹಾಗೆಯೇ ಯಾರ್ಮತ್ತನ್ನು ಗ್ರಹಿಸುತ್ತಾ ಆ ಕಡೆ ನೋಡುವಾಗಲೂ ಮನಸ್ಸಿನಲ್ಲಿ ದುಃಖವೇ ಅಧಿಕವೆಂಬಂತೆ ಭಾಸವಾಗುತ್ತಿತ್ತು. ಬ್ಲಂಡರ್ಸ್ಟನ್ನಿಗೂ ಯಾರ್ಮತ್ತಿಗೂ ನಾನು ಬೆಳೆಯಿಸಿಕೊಂಡು ಬಂದಿದ್ದ ಸಂಬಂಧಗಳು ಹೇಗೆ ಒಂದೊಂದಾಗಿ ತುಂಡಾಗುತ್ತಾ ಬರುತ್ತಿವೆಯೆಂದು ದುಃಖದಿಂದಲೇ ಮನಸ್ಸಿನ ಪಟದಲ್ಲಿ ನೋಡುತ್ತಾ ದಾರಿ ನಡೆದೆನು. ನನ್ನೆದುರಿಗೆ ದೂರದಲ್ಲಿ ಯಾರ್ಮತ್ತು ಹರಡಿ ಬಿದ್ದಿರುವಂತೆ ತೋರುತ್ತಿತ್ತು. ಯಾರ್ಮತ್ತನ್ನೆಲ್ಲ ಒಂದು ಬಹು ದೊಡ್ಡ ಕಾರ್ಮುಗಿಲು ಎತ್ತರದಿಂದ ಮುಚ್ಚತೊಡಗಿತ್ತು. ನಾನು ನಡೆದು ಮುಂದುವರಿಯುತ್ತಿದ್ದ ಹಾಗೆಯೇ ಎತ್ತರದಲ್ಲಿದ್ದ ಆ ಕಾರ್ಮುಗಿಲು ಭೂತಳಕ್ಕೆ ಕ್ರಮೇಣವಾಗಿ ಇಳಿಯುತ್ತಲೂ ಇತ್ತು. ಅಂದಿನ ಸ್ಥಳ, ಘಟನೆಗಳು, ಆ ಕಾರ್ಮೋಡ – ಎಲ್ಲವೂ ನನಗೆ ವಿವರಿಸಲಸಾಧ್ಯವಾದ ಭಯವನ್ನುಂಟುಮಾಡಿದುವು.

ರಾತ್ರಿ ಸಮಯದಲ್ಲೇ ನಾನು ಯಾರ್ಮತ್ತಿಗೆ ತಲುಪಿದೆನು. ಆಗ ಸಮುದ್ರದ ಭಾಗದಲ್ಲಿ ಮಳೆ ಬರುತ್ತಿತ್ತು. ಅಸ್ತಂಗತನಾಗಲು ಸಮೀಪಿಸುತ್ತಿದ್ದ ಚಂದ್ರನ ಪ್ರಭೆ ಮೋಡಗಳ ಮಧ್ಯಕ್ಕಾಗಿ ಭೂಭಾಗಕ್ಕೆ ಬಂದು ಯಾರ್ಮತ್ತನ್ನು ಒಂದು ಭಯಾನಕ ಬೆಳಕಿನಿಂದ ಆಛ್ಛಾದಿಸಿತ್ತು. ಅಂದಿನ ಸಮಯ ಸನ್ನಿವೇಶಗಳ ಕಾರಣವಾಗಿ, ಏನೋ ಒಂದು ಭೀತಿ ನನ್ನ ಅಂತರಂಗವನ್ನು ಪ್ರವೇಶಿಸುತ್ತಿದ್ದಂತೆ ತೋರುತ್ತಿತ್ತು.

ನಾನು ಮಿ. ಪೆಗಟಿಯ ಮನೆಗೆ ಹೋದೆ. ಆ ಮನೆಯ ಪರಿಚಯ ನನಗೆ ತುಂಬಾ ಇದ್ದುದರಿಂದ ಬಾಗಿಲು ತಟ್ಟದೆಯೆ ನಾನು ಮನೆಯೊಳಗೆ ಪ್ರವೇಶಿಸಿದೆನು. ಅಲ್ಲಿ ಮಿಸೆಸ್ ಗಮ್ಮಿಜ್, ಮಿಸೆಸ್ ಬಾರ್ಕಿಸ್ ಪೆಗಟಿ, ಮಿ. ಪೆಗಟಿ ಎಲ್ಲರೂ ಹಿಂದೆ ಅವರವರು ಕುಳಿತಿದ್ದ ಸ್ಥಳಗಳಲ್ಲೇ ಕುಳಿತಿದ್ದರು. ಅಲ್ಲಿನ ಸಕಲ ವಸ್ತುಗಳೂ ನನ್ನ ಬಾಲ್ಯಕಾಲದಲ್ಲಿ ನಾನು ಕಂಡಂತೆಯೇ ಇದ್ದುವು. ಅವನ್ನು ಕಾಣುವಾಗ ಹಿಂದಿನ ಸಂತೋಷದ ದಿನಗಳ ನೆನಪು ಚೆನ್ನಾಗಿ ಉಂಟಾಯಿತು. ಅಲ್ಲಿ ಎಮಿಲಿ ಮತ್ತು ಹೇಮ್ ಇವರಿಬ್ಬರು ಮಾತ್ರ ಇರಲಿಲ್ಲ. ಅವರ ಬರೋಣವನ್ನೇ ಮಿ. ಪೆಗಟಿಯವರು ಎದುರು ನೋಡುತ್ತಾ ಕುಳಿತಿದ್ದರು. ಅವರು ಕೊಟ್ಟ ಆಸನದಲ್ಲಿ ನಾನು ಕುಳಿತು ಅವರೊಡನೆ ಮಾತಾಡತೊಡಗಿದೆನು. ನನ್ನನ್ನು ಉದ್ದೇಶಿಸಿ – “ನೀವು ಮೊದಲು ಬಂದಿರಿ. ಬಾಕಿಯವರು ಬರಲಿದ್ದಾರೆ” ಎಂದು ಮಿ. ಪೆಗಟಿ ಅಂದರು. ಆಗ ಮಿಸೆಸ್ ಗಮ್ಮಿಜ್ಜಳ ದುಃಖ ಯಾರ್ಮತ್ತಿಗಿಂತಲೂ ಹೆಚ್ಚಾಗಿಯೇ ಇತ್ತು. ಅದಕ್ಕಾಗಿಯೇ ಮಿ. ಪೆಗಟಿ ಏನೇನೋ ತಮಾಷೆಯ ಮಾತುಗಳನ್ನಾಡಿ, ತಮ್ಮ ಉತ್ಸಾಹ, ಹರ್ಷಿತ ಸ್ವಭಾವದಿಂದ, ಮಿಸೆಸ್ ಗಮ್ಮಿಜ್ಜಳನ್ನು ಸಮಾಧಾನಪಡಿಸಲು ಪ್ರಯತ್ನಿಸುತ್ತಿದ್ದರು. ಆದರೆ ರಾತ್ರಿ ಮುಂದುವರಿಯುತ್ತಾ ಹೋದರೂ ಹೇಮನಾಗಲೀ ಎಮಿಲಿಯಾಗಲೀ ಬರಲಿಲ್ಲ.

ತಾವು ನಿರೀಕ್ಷಿಸಿ, ನಿರೀಕ್ಷಿಸಿ ಹೊತ್ತು ದಾಟುತ್ತಿದ್ದುದರಿಂದ ಮಿ. ಪೆಗಟಿಗೂ ಅಸಮಾಧಾನವಾಗತೊಡಗಿತು. ಅವರು ಕಿಟಕಿಯ ಬಾಗಿಲನ್ನು ತೆರೆದು ಹೊರಗಿನ ವಿಶಾಲ ಪ್ರದೇಶವನ್ನೆಲ್ಲ ನೋಡಿದರು. ಅಲ್ಲಿ ಯಾರ ಬರೋಣವನ್ನೂ ಕಾಣದೆ, ಸರ್ವತ್ರ ಕತ್ತಲೆ ಮಾತ್ರ ಪಸರಿಸಿದ್ದುದನ್ನು ಕಂಡರು. ಈ ಕತ್ತಲೆ ನಿವಾರಣೆಗೆಂದು ಅವರು ಒಂದು ಮಯಣದ ಬತ್ತಿಯನ್ನು ಹತ್ತಿಸಿ, ಕಿಟಕಿಯ ಹೊಸ್ತಿಲಿನಲ್ಲಿಟ್ಟರು. ಮಿ. ಪೆಗಟಿಯವರಿಗೇ ಅಸಮಾಧಾನವಾಗುತ್ತಿದ್ದ ಸಮಯದಲ್ಲಿ ಮಿಸೆಸ್ ಗಮ್ಮಿಜ್ಜಳ ದುಃಖ ಮೊದಲಿಗಿಂತಲೂ ಹೆಚ್ಚಾಗತೊಡಗಿತು. ಮಿ.ಪೆಗಟಿಗೆ ಮಿಸೆಸ್ ಗಮ್ಮಿಜ್ಜಳ ದುಃಖಶಮನಕ್ಕಾಗಿಯೂ ಹಾಗೆ ಪರಿಚಿತನೂ ಸ್ನೇಹಿತನೂ ಆದ ನನ್ನ ಆಗಮನದ ಸಂತೋಷಕ್ಕಾಗಿಯೂ ತುಂಬಾ ಮಾತಾಡಬೇಕೆಂಬ ಉತ್ಸಾಹ ಹೆಚ್ಚಿತು. ಅವರು ಮಿಸೆಸ್ ಗಮ್ಮಿಜ್ಜಳನ್ನು ನೋಡಿ – “ಮಿಸೆಸ್ ಗಮ್ಮಿಜ್, ಬೇಸರಪಡಬೇಡಿ. ನನ್ನ ಈ ಕೆಲಸ ನೋಡಿ. ಈ ದೀಪ ಹೊತ್ತಿಸಿಟ್ಟ ಪ್ರಯೋಜನ ಏನೂಂತ ಗೊತ್ತಿದೆಯೆ, ನಿಮಗೆ? ರಾತ್ರಿಯ ಈ ಕತ್ತಲಲ್ಲಿ ಎಮಿಲಿ ಬರುವಾಗ ಅವಳ ದಾರಿಗೆ ಬೆಳಕಾಗಲೀ ಎಂತ ದೀಪ ಹಚ್ಚಿದ್ದೇನೆ. ದಾರಿ ಕಾಣೋದಕ್ಕೆ ಬೇಕಾದಷ್ಟು ಬೆಳಕಲ್ಲದಿದ್ದರೂ ಈ ಕಡೆ ನಮ್ಮ ಮನೆ ಉಂಟೂಂತ, ನೆಟ್ಟಗೆ ಬರೋದಕ್ಕೆ ಮಾರ್ಗವಾದರೂ ಆಗುತ್ತಷ್ಟೆ ಎಂತ ಹಚ್ಚಿದ್ದೇನೆ” ಎಂದಂದರು.

“ನೀನು ಚಿಕ್ಕ ಮಗುವಿನ ಹಾಗೆ ಮಾಡುತ್ತೀಯಲ್ಲ, ಅಣ್ಣಾ!” ಎಂದು ಪೆಗಟಿ ಹಾಸ್ಯ ಮಾಡಿದಳು. “ಕೆಲವು ವಿಷಯದಲ್ಲಿ ನಾನು ಮಗುವಾಗುವುದೂ ನಿಜ, ಕ್ಲೇರಾ ನಿನ್ನಣ್ಣ ಒಬ್ಬ ಮಗೂಂತ ಅಥವಾ ಸಮುದ್ರದ ಮುಳ್ಳು ಹಂದಿ ಮಗೂಂತ ಬೇಕಾದರೂ ಗ್ರಹಿಸಿಕೋ, ಬೇಕಾದರೆ. ಎಮಿಲಿ ಹತ್ತಿರ ನನ್ನ ಕ್ರಮವೇ ಹಾಗೆ, ಕ್ಲೇರಾ” ಎಂದು ಅದಕ್ಕೆ ಉತ್ತರವಿತ್ತರು ಮಿ. ಪೆಗಟಿ. ಹೀಗಂದುಕೊಂಡು, ಗಹಗಹಿಸಿ ನಗಾಡುತ್ತಾ ಮತ್ತೂ ಮಾತು ಮುಂದುವರಿಸಿದರು – “ನೋಡು ಕ್ಲೇರಾ, ಎಮಿಲಿಯನ್ನು ಗ್ರಹಿಸಿದರೆ ನಾನು ಮಗುವಿನ ಹಾಗೆಯೇ ಆಗಿಬಿಡುತ್ತೇನೆ. ಅವಳ ಹೇಟನ್ನು ಕಂಡರೂ ಅವಳ ಜಾಕೆಟ್ಟನ್ನು ಕಂಡರೂ ಅವಳದು ಏನನ್ನು ಕಂಡರೂ ನನಗೆ ಆಗುವ ಸಂತೋಷ ಅಷ್ಟಿಷ್ಟಲ್ಲ. ನನ್ನ ಮೊಣಕಾಲಿಗೆ ಮುಟ್ಟುವಷ್ಟು ಚಿಕ್ಕ ಮಗುವಾಗಿದ್ದಾಗಲೇ ನಾನು ಎಮಿಲಿಯೊಡನೆ ಆಟವಾಡಿದ್ದೇನೆ. ಅವಳು ಅಂದರೆ, ನನಗೆ ಎಲ್ಲಾ ಆಗಿಹೋಯಿತು! ಅವಳಿಗೂ ಹಾಗೆಯೇ, ನನ್ನನ್ನು ಕಂಡರೆ ಆಗುವ ಸಂತೋಷವೇ ಅಷ್ಟು ತುಂಬಾ! ಹಾಗಿರುವಾಗ ಒಂದು ದೀಪ ಉರಿಸಿಟ್ಟರೆ ಆಗುವ ತಪ್ಪು ಏನು? ಈ ದೀಪದಿಂದ ಹೊರಗಿನ ಮೈದಾನ ಮಾತ್ರ ಬೆಳಕಾಗುವುದಿಲ್ಲ, ನನ್ನ ಎಮಿಲಿಯ ಮನಸ್ಸೇ ಬೆಳಕಾಗುತ್ತೆ. ಅವಳು ಮದುವೆ ಆಗಿ ಹೋದರೂ ಈ ಬೆಳಕು ನನಗಾಗಿಯೂ ಅವಳಿಗಾಗಿಯೂ ಅಲ್ಲಿ ಉರೀತಿರಬೇಕು. ಎಮಿಲಿ ಆಡಿ ಬೆಳೆದ ಈ ಮನೆಯನ್ನು ಎಷ್ಟೇ ಐಶ್ವರ್ಯ ಬಂದರೂ ನಾನು ಬಿಡುವ ಹಾಗಿಲ್ಲ. ಅವಳು ಬೆಳಗಿಸಿದ ಮನೆ ಇದು. ಅವಳು ಗಂಡನ ಮನೆಯಲ್ಲಿ ಸಂತೋಷಪಟ್ಟರೆ, ಅವಳ ಸಂತೋಷಕ್ಕಾಗಿ ನಾವು ಈ ಮನೇಲಿ, ದೀಪ ಇಟ್ಟು, ಸಂತೋಷಪಡೋಣ – ಆ ದೀಪ ನಮ್ಮ ಎಮಿಲಿ! ಹೀಗೆ ಮಾತಾಡೋದೇನು ತಪ್ಪೇ? ಹಾಗೆ ಮಾತಾಡಿದರೆ ಮುಳ್ಳು ಹಂದಿ ಮಗುವಾಗಿ ಬಿಡ್ತೇನೇನು?” ಎಂದು ಆನಂದ ಪರವಶತೆಯಿಂದ ಮಿ. ಪೆಗಟಿ ಮಾತಾಡಿದರು. ಆನಂದಬಾಷ್ಪವನ್ನು ಸುರಿಸುತ್ತಾ –

“ದೀಪ ಹಚ್ಚಿದ ಚಮತ್ಕಾರ ಬೇಕಾದರೆ ನೋಡು – ಎಮಿಲಿ ಈಗಾಗಲೇ ದೀಪ ಕಂಡಿದ್ದಾಳೆ. ತನ್ನ ಮನೆ ಇದೂಂತ ಓಡಿ ಬರುತ್ತಿದ್ದಾಳೆ. ಅಕೋ ಬಂದಳು ಎಮಿಲಿ” ಎಂದು ಹೇಳಿ, ಹೊರಗಿನ ಕಾಲು ಸಪ್ಪಳ ಕೇಳಿ, ಎಮಿಲಿಯನ್ನು ಎತ್ತಿ ಅಪ್ಪಿಕೊಳ್ಳಲು ಕೈ ನೀಡುವಾಗ, ಹೊರಗಿನಿಂದ ಹೇಮನು ಅವಸರದಿಂದ ಒಳ ನುಗ್ಗಿದನು. ಹೇಮನು ಗಾಬರಿಯಾಗಿದ್ದನು. ಏನೂ ಮಾತಾಡದೆ, ಕೈ ಸನ್ನೆ ಮಾಡಿ ನನ್ನನ್ನು ಕರೆದುಕೊಂಡು ಹೊರಗೆ ಹೋದನು. ಹೇಮನನ್ನು ಕಂಡು ನಾನು ಗಾಬರಿಗೊಂಡೆ –

“ಏನು ಹೇಮ್, ಏನಾಗಿದೆ?” ಎಂದು ಪ್ರಶ್ನಿಸಿದೆ. “ಮಾಸ್ಟರ್ ಡೇವೀ” ಎಂದು ಮಾತ್ರ ಹೇಳಿ ಬಿಕ್ಕಿಬಿಕ್ಕಿ ಅತ್ತನು. “ಏನಾಯಿತು ಹೇಳು.” “ನನ್ನೆಮಿಲೀ – ಪ್ರಿಯ ಎಮಿಲೀ – ಹೃದಯ ದೇವತೇ – ಕಾಣುವುದಿಲ್ಲ – ಕಾಣುವುದಿಲ್ಲ. ಮಾತ್ರವಲ್ಲ – ಓಡಿಹೋಗಿದ್ದಾಳೆ – ಅವಳನ್ನು ಹಾರಿಸಿಕೊಂಡು ಹೋಗಿದ್ದಾರೆ” ಎಂದನ್ನುತ್ತಾ ಹೇಮನು ಅತ್ತನು. ಹೇಮನ ಪ್ರಲಾಪವನ್ನು ಕೇಳಿ ಒಳಗಿದ್ದವರೆಲ್ಲ ಹೊರಗೆ ಬಂದರು. ನಡೆದ ಸಂಗತಿಯನ್ನೆಲ್ಲ ಸೂಕ್ಷ್ಮವಾಗಿ ತಿಳಿದರು. ಅವರೂ ಬಿಕ್ಕಿ ಬಿಕ್ಕಿ ಅಳತೊಡಗಿದರು. ಎಲ್ಲರೂ ದುಃಖದ ವೇದನೆಯಲ್ಲಿ ನಡುಗುತ್ತಿದ್ದರು. ನಾವು ಮನೆ ಒಳಗೆ ಹೋದನಂತರ, ನಾನು ಓದಿ ಹೇಳಲೋಸ್ಕರ ಒಂದು ಪತ್ರವನ್ನು ನನಗೆ ಕೊಟ್ಟನು.

ನಾನು ಪತ್ರವನ್ನು ಓದುವಾಗ ಮಿ.ಪೆಗಟಿ ನನ್ನ ಎದುರೇ ಇದ್ದರು. ದುಃಖದ ಆವೇಶದಲ್ಲಿ ಅವರ ಶರಟು ಹೇಗೋ ಹರಿದುಹೋಗಿತ್ತು. ಅವರ ಉಬ್ಬಿದ ಎದೆ ಕಾಣುತ್ತಿತ್ತು. ಕಣ್ಣುಗಳು ಉಬ್ಬಿ ಹೊರಗೆ ಹೊರಟು ಬರುವಂತಿದ್ದುವು. ಬಾಯಿಯಿಂದ ರಕ್ತವು ತೊಟ್ಟಿಕ್ಕುತ್ತಾ ಎದೆಯ ಮೇಲೆ ಹರಿದು ಇಳಿಯುತ್ತಿತ್ತು. ಎರಡೂ ಕೈಗಳನ್ನು ಡೊಂಕಿಸಿಕೊಂಡು, ಮುಂದಕ್ಕೆ ಬಗ್ಗಿ, ಮಂಕನಂತೆ ನಿಂತಿದ್ದರು. ಪತ್ರದ ಒಕ್ಕಣೇ ಹೀಗಿತ್ತು. ನಾನು ಓದಿದ್ದನ್ನು ಮರಣದ ಸಾನ್ನಿಧ್ಯದಲ್ಲಿರುವ ನಿಶ್ಶಬ್ದದಿಂದ ಎಲ್ಲರೂ ಕೇಳಿದರು – “ನನಗೆ ಬುದ್ಧಿ ಬರುವ ಮೊದಲೇ ಪ್ರೀತಿಸಿ, ಈಗಲಂತೂ ನನ್ನ ಯೋಗ್ಯತೆಗೆ ಮೀರಿ ಪ್ರೀತಿಸುವ ನೀನು ಈ ಪತ್ರವನ್ನು ಓದುವಾಗ ನಾನು ಬಹುದೂರ ತಲುಪಿರುತ್ತೇನೆ.”

ನಾನು ಇಷ್ಟು ಓದುವಾಗ ಮಿ. ಪೆಗಟಿ ದುಃಖದ ಭ್ರಮೆಯಿಂದ – “ಬಹುದೂರ ತಲುಪಿರುತ್ತೇನೆ’ ಎಮಿಲೀ ನಿಲ್ಲು” ಅಂದರು. ನಾನು ಪತ್ರವನ್ನು ಮುಂದರಿಸಿ ಓದಿದೆ –

“ಬೆಳಗ್ಗೆ ನನ್ನ ಮನೆ, ನನ್ನ ಮಮತೆಯ ಮನೆಯನ್ನು ಬಿಡುವಾಗ ಒಂದು ಶಪಥ ಹಾಕಿಕೊಂಡಿದ್ದೇನೆ. ನಾನು ವಾಪಸ್ಸು ಬರುವುದಾದರೆ ಒಂದು ಕುಲೀನ ಸಂಸಾರದ ಗೃಹಿಣಿಯಾಗಿ, ಇಲ್ಲದಿದ್ದರೆ ನನ್ನ ಮುದ್ದಿನ ಮನೆಯನ್ನು ಮುಂದೆಂದೂ ಸೇರೆನು, ಎಂದು. ಕುಲೀನ ಗೃಹಿಣಿಯನ್ನಾಗಿ ಮಾಡುವ ಜವಾಬ್ದಾರಿ ಅವರದು, ಅವರನ್ನು ನಂಬಿದ್ದೇನೆ. ಎಷ್ಟೇ ಯಾರಲ್ಲಿ ನಂಬಿಕೆಯಿದ್ದರೂ ನಡೆದುಹೋದುದೆಲ್ಲವನ್ನು ಗ್ರಹಿಸಿ ದುಃಖಿಸುತ್ತೇನೆ. ದುಃಖದಿಂದ ನನ್ನ ಎದೆ ಒಡೆದುಹೋಗಿದೆ. ನಿಮಗೆ ನಾನು ಮಾಡಿರುವ ಅಪರಾಧ ಅಪಾರವಿದೆ. ನೀವು ಕ್ಷಮಿಸಿ ಪೂರೈಸದಷ್ಟು ಅಪರಾಧ ಮಾಡಿದ್ದೇನೆ. ನನ್ನ ಅಪರಾಧಕ್ಕಾಗಿ ನನ್ನನ್ನು ನೀವು ಶಿಕ್ಷಿಸುವ ಮನಸ್ಸಿರುವವರಲ್ಲವೆಂದೂ ನನಗೆ ಗೊತ್ತಿದೆ. ನೀವು ಸಹೃದಯರು, ಕ್ಷಮಾವಂತರು ಎಂಬ ನಿಮ್ಮ ಗುಣಕ್ಕಾಗಿಯೇ ನನ್ನ ದುಃಖ ಮತ್ತಷ್ಟು ಕಠಿಣವಾಗಿದೆ. ಆ ದುಃಖವೆಷ್ಟೆಂದು ನಾನು ಬರೆದು ಪೂರೈಸೆನು. ಪೆಗಟಿ ಮಾವನಿಗೆ ಹೀಗೆಂದು ತಿಳಿಸಬೇಕು: ಮಾವನನ್ನು ನಾನು ಈ ಹೊತ್ತು ಪ್ರೀತಿಸಿ, ಹಂಬಲಿಸಿ, ಅವನಿಗಾಗಿ ದುಃಖಿಸಿದಷ್ಟು – ಇದರ ಅರ್ಧ ಪಾಲು ಸಹ, ಇದಕ್ಕೆ ಮೊದಲು ಎಂದೂ ನಾನು ಪ್ರೀತಿಸಿರುವುದಿಲ್ಲ, ಹಂಬಲಿಸಿರುವುದಿಲ್ಲ, ದುಃಖಿಸಿರುವುದಿಲ್ಲ. ನನ್ನ ಪ್ರಿಯ ಮಾವ ನನ್ನ ಮೇಲೆ ಎಷ್ಟೊಂದು ಕರುಣೆಯನ್ನು ಧಾರೆ ಧಾರೆಯಾಗಿ ಎರೆದಿದ್ದಾನೆಂದು ಹಿಂತಿರುಗಿ ಆಲೋಚಿಸದಿರಲಿ. ಅವನು ಹಾಗೆ ಆಲೋಚಿಸಿ ದುಃಖಿಸುವನೆಂದು ನಾನು ಗ್ರಹಿಸಿ ಸಹಿಸಲಾರೆ. ದಯಮಾಡಿ ನನ್ನನ್ನು ಮರೆತುಬಿಡಲಿ. ನನ್ನನ್ನು ಸುಟ್ಟು, ಹೂಳಿ, ಪೂರೈಸಲಾಗಿದೆಯೆಂದು ದೃಢ ಮಾಡಿಕೊಂಡು ಶಾಂತನಾಗಲಿ. ನೀನು ಹಿರಿಯಾಸೆಗಳಿಲ್ಲದ ಒಬ್ಬ ಸರಳ ಬಾಲಿಕೆಯನ್ನು ಮದುವೆಯಾಗಿ ಸುಖವಾಗಿರು. ಅವಳು ಮಾವನ ಬಳಿಯ ನನ್ನ ಸ್ಥಾನವನ್ನು ಸೇರಲಿ.

“ನನ್ನನು ಕುಲೀನ ಗೃಹಿಣಿಯಾಗಿ ಅವನು ಮರಳಿ ತರದಿದ್ದರೆ ಇದೇ ನನ್ನ ಅಂತಿಮ ನಮಸ್ಕಾರ. ನಾನು ನನಗಾಗಿ ಅಲ್ಲದಿದ್ದರೂ ನನ್ನ ಇಂದಿನ ಉದ್ದೇಶ ಸಿದ್ಧಿಗಾಗಿಯೂ ನಿಮ್ಮೆಲ್ಲರ ಕ್ಷೇಮಕ್ಕಾಗಿಯೂ ದೇವರನ್ನು ಪ್ರಾರ್ಥಿಸುತ್ತೇನೆ. “ನನ್ನ ಅಂತಿಮ ಅಶ್ರುಬಿಂದುಗಳನ್ನೂ ನನ್ನ ಅನಂತ ನಮಸ್ಕಾರಗಳನ್ನೂ ಆಜನ್ಮ ಸ್ಮರಣೆಗಳನ್ನೂ ಮಾವನು ನನ್ನ ಮೇಲಿರಿಸಿರುವ ಪ್ರೀತಿಗಾಗಿ ಅವನ ಪಾದಗಳಿಗೆ ಸಮರ್ಪಿಸುವೆನು.” ಪತ್ರದಲ್ಲಿ ಇದ್ದದ್ದು ಅಷ್ಟೆ.

ನಾನು ಪತ್ರವನ್ನು ಓದಿ ಮುಗಿಸಿದರೂ ಮಿ. ಪೆಗಟಿ ಮೊದಲಿನಂತೆಯೇ ಮೌನವಾಗಿ, ಅಲುಗಾಡದೆ, ಮಂಕನಂತೆ ಸ್ವಲ್ಪ ಹೊತ್ತು ನಿಂತಿದ್ದನು. ಅನಂತರ ಹಠಾತ್ತಾಗಿ ವಿಚಾರಿಸಿದನು – “ಆ ಜನ ಯಾರು – ಅವಳನ್ನು ಅಪಹರಿಸಿದವರು?” ನಾನು ಗಾಬರಿಗೊಂಡೆನು. ಹೇಮನು ಈಗ ಮಾತಾಡಬೇಕೆಂದಿದ್ದನು. ಆದರೆ, ನನ್ನೆದುರು ಮಾತಾಡುವುದು ಸರಿಯಲ್ಲವೆಂದು ತಿಳಿದು, ನಾನು ಸ್ವಲ್ಪ ಸಮಯ ಹೊರಗೆ ಹೋದರಾಗಬಹುದೆಂದು ವಿನಯದಿಂದ ಸೂಚಿಸಿದನು. “ಆ ಜನ ಯಾರು…” ಎಂದು ಮಿ. ಪೆಗಟಿ ಅಂದಾಗಲೇ ಪ್ರಾರಂಭವಾಗಿದ್ದ ನನ್ನ ಹೆದರಿಕೆ ಹೇಮನ ಮಾತಿನಿಂದ ಹೆಚ್ಚಿತು. ಒಂದು ವಿದ್ಯುತ್ ಪ್ರವಾಹವು ದೇಹದಲ್ಲುಂಟಾಯಿತು. ನನ್ನ ಬುದ್ಧಿಯೇ ವಿಕಲ್ಪ ಹೊಂದುತ್ತಿದಂತೆ ಭಾಸವಾಯಿತು. ದೃಷ್ಟಿ ಮಂದವಾಯಿತು. ಹೇಮನಿಗೆ ಉತ್ತರ ಕೊಡಲು ನನಗೆ ಸ್ವರವೇ ಬರದಂತಾಯಿತು. ಇಷ್ಟರಲ್ಲಿ ಮಿಸೆಸ್ ಬಾರ್ಕಿಸ್ ಪೆಗಟಿ ಬಂದು ನನ್ನ ಹತ್ತಿರ ನಿಂತಳು. ನನಗೆ ಕಾಲುಗಳೇ ಬರದೆ ನಿಂತಲ್ಲೇ ನಿಂತುಬಿಟ್ಟೆ. ನಿರ್ವಾಹವಿಲ್ಲದೆ ಹೇಮನು ಮಾತಾಡಿದನು – “ಸ್ವಲ್ಪ ದಿನಗಳಿಂದೀಚೆಗೆ ಒಬ್ಬ ಗೃಹಸ್ಥನೂ ಅವನ ಆಳೂ ನಮ್ಮೂರಲ್ಲಿ ಗೂಢವಾಗಿ ಕೆಲವು ಕೆಲಸಗಳನ್ನು ಮಾಡಿಕೊಂಡಿದ್ದರು. ಆ ಆಳು ನಿನ್ನೆ ರಾತ್ರಿ ನಮ್ಮ ಹಸುಳೆ ಎಮಿಲಿಯ ಸಂಗಡ ಇದ್ದದ್ದನ್ನು ಕಂಡವರಿದ್ದಾರೆ. ಪೇಟೆ ಹೊರಗಡೆ ನಾರ್ವಿಜ್ ರಸ್ತೆಯಲ್ಲಿ ನವೀನ ಕ್ರಮದ ಒಂದು ಮುಚ್ಚಿದ್ದ ಕುದುರೆ ಗಾಡಿ ನಿಂತಿತ್ತು. ಈ ಮೊದಲು ಹೇಳಿದ ಆಳು ಆ ಗಾಡಿಯೊಳಗೆ ಹೋದದ್ದೂ ಹೊರಗೆ ಬಂದದ್ದೂ ಪುನಃ ಒಳಗೆ ಹೋದದ್ದೂ ಪುನಃ ಒಳನುಗ್ಗುವಾಗ ಎಮಿಲಿಯು ಅವನ ಜತೆಯಲ್ಲಿದ್ದದ್ದೂ ಬೆಳಗ್ಗೆ ಕಂಡವರಿದ್ದಾರೆ. ಆ ಗಾಡಿಯ ಒಳಗೇ ಇನ್ನೊಬ್ಬನಿದ್ದ. ಒಳಗಿದ್ದವನೇ ಆ ಜನ” – ಎಂದು ಹೇಮ್ ಹೇಳಿದನು.

“ದೇವರೇ! ದೇವರಿಲ್ಲವೆಂದರೂ ಸರಿ, ತಾನೆ! ಓ ದೇವರೇ ಆ ಜನ ಸ್ಟೀಯರ್ಫೋರ್ತ್ ಎಂದು ಮಾತ್ರ ಇನ್ನು ಹೇಳುವುದು ಬೇಡ” ಎಂದು ಮಿ. ಪೆಗಟಿ ಹೇಳುತ್ತಾ – ಆ ಕಲ್ಪನೆ, ಕಲ್ಪನೆ ಮಾತ್ರವಾಗಿ ಉಳಿಯಲಿ, ಮುಂದೆ ಬರುವುದು ಬೇಡ, ಎಂದು ಪ್ರಯತ್ನಿಸುವಂತೆ, ಮಿ. ಪೆಗಟಿ ಅದನ್ನು ಹಿಂದಕ್ಕೆ ತಳ್ಳುತ್ತಿರುವಂತೆಯೂ ಅದೇ ಮುಂದೊತ್ತಿ ಬರುತ್ತಿರುವುದನ್ನು ಅವರು ಪುನಃ ಪುನಃ ಹಿಂದೆ ತಳ್ಳುತ್ತಿರುವಂತೆಯೂ ತನ್ನ ಎರಡು ಕೈಗಳನ್ನು ಹಿಂದಕ್ಕೂ ಮುಂದಕ್ಕೂ ಬೀಸುತ್ತಿದ್ದರು.

ನಾನು ಹೆಣದಂತೆ ಸ್ತಬ್ದನಾಗಿ ಮೂಲೆಯಲ್ಲಿ ಕುಳಿತು ದುಃಖಿಸುತ್ತಲೂ ಪಶ್ಚಾತ್ತಾಪಪಡುತ್ತಲೂ ಇದ್ದೆ. ಮಿ. ಪೆಗಟಿ ಎಮಿಲಿಯನ್ನು ಅಗತ್ಯಬಿದ್ದರೆ ಪ್ರಪಂಚವಿಡೀ ಹುಡುಕಿ ಹಿಡಿಯಬೇಕೆಂದು ತನ್ನ ಕೋಟನ್ನು ಧರಿಸಿ ಹೊರಟರು. ಆದರೆ ಆಗ ನಾವೆಲ್ಲರೂ ಅಡ್ಡಗಟ್ಟಿ, ಅವರನ್ನು ಸಮಧಾನಪಡಿಸಲು ಪ್ರಯತ್ನಿಸುತ್ತಾ ಆ ರಾತ್ರಿಯೇ ಹೋಗದಂತೆ ನಿಲ್ಲಿಸಿದೆವು. ಮಿ. ಪೆಗಟಿ ದುಃಖ ಸಹಿಸಲಾರದೆ ಕೊನೆಗೆ ಅಳಲು ಪ್ರಾರಂಭಿಸಿದರು. ಅಳುತ್ತಾ ಅಳುತ್ತಾ ಅವರು ಸ್ವಲ್ಪ ಶಾಂತರೂ ಆಗತೊಡಗಿದರು. ಸ್ಟೀಯರ್ಫೋರ್ತನ ಪರಿಚಯವನ್ನು ನಾನು ಅವರಿಗೆ ಮಾಡಿಕೊಟ್ಟುದರ ದುಷ್ಟಫಲವನ್ನು ನೆನೆನೆದು ನಾನು ಅವರ ಪಾದಗಳಿಗೆರಗಿ ಕ್ಷಮೆಯನ್ನು ಯಾಚಿಸಬೇಕೆಂದು ನನಗೆ ತೋರಿತು. ದುಃಖ ಪಶ್ಚಾತ್ತಾಪಗಳು ನನ್ನನ್ನು ಅತಿಯಾಗಿ ಬಾಧಿಸಿದುವು. ಸ್ವಲ್ಪವಾದರೂ ಶಾಂತಿ ಸಿಗಬೇಕಾದರೆ ಅಳುವುದೊಂದೆ ಇರುವ ಮಾರ್ಗವೆಂದು ಪ್ರಕೃತಿದತ್ತವಾಗಿ ತೋರಿ ನಾನೂ ಅತ್ತೆನು.

(ಮುಂದುವರಿಯಲಿದೆ)