(ಚಕ್ರೇಶ್ವರ ಪರೀಕ್ಷಿತ – ೪)
ಕೆತ್ತಿ ಹೋದ ಕಲ್ಲು: ಹೆಸರು ಅಮೃತ ನಗರ, ಆಚೆ ಕೊನೆಯಲ್ಲಿ ಮೃತ ನಗರ ಕ್ಷಮಿಸಿ, ಮಾತಿನ ಅಲಂಕಾರಕ್ಕೆ ಹೇಳುತ್ತಿಲ್ಲ. ಮೂಡಬಿದ್ರೆ ದಾರಿಯಲ್ಲಿ ಕುಖ್ಯಾತವೇ ಆದ ಕೆತ್ತಿಕಲ್ಲಿನ ನೆತ್ತಿಯಲ್ಲಿ ಪುಟ್ಟ ವಸತಿ ವಠಾರದಲ್ಲಿ ನಿನ್ನೆ ಸಂಜೆ ನನ್ನ ಸೈಕಲ್ ಸರ್ಕೀಟು ಕಂಡ ಮನಕಲಕಿದ ವಾಸ್ತವವಿದು.
ಸೈಕಲ್ಲೇರಿ ಅದೇ ಕುಲಶೇಖರ, ಕುಡುಪು, ವಾಮಂಜೂರು ದಾರಿಗಾಗಿ ಗುರುಪುರಕ್ಕೆಂದೇ ಹೊರಟಿದ್ದೆ. ಪಿಲಿಕುಳ ಕವಲು ಎಡಕ್ಕೇ ಬಿಟ್ಟು ಮುಂದುವರಿದಂತೆ ಪಿರಿಪಿರಿ ಮಳೆ ಹಿಡಿದುಕೊಂಡಿತು. ಮೊನ್ನೆ ಹೀಗೇ ನಂತೂರು, ಕಾವೂರು, ಕೂಳೂರು ನೆನೆದುಕೊಂಡೇ ಹೋಗಿದ್ದೆ. ಕೆಲವರು ಮಳೆ ಕಂಡಾಗ ಹೌಹಾರುವ ಕ್ರಮ ನೋಡಿದಾಗ ಗೆಳೆಯ ವೆಂಕಟ್ರಮಣ ಉಪಾಧ್ಯರ ಮಾತು “ಅದ್ ನೀರು, ಸುಡೂಕ್ ಬೆಂಕಿಯಲ್ಲ ಕಾಣಿ” ನೆನಪಾಗುತ್ತದೆ. ಬಚ್ಚಲುಮನೆಯಲ್ಲಿ ಗಂಟೆಗಟ್ಟಳೆ ಶಿಖನಖಾಂತ “ಗೋವಿಂದಾನೆ ಗೋವಿಂದ” ಮಾಡುವಾಗ ಬಾರದ ಶೀತಜ್ವರ ಮಳೆಯಲ್ಲಿ ನೆಂದರೆ ಬರುತ್ತದೆಂಬರ ಭ್ರಮೆ ನನಗಿಲ್ಲ. ಆದರೆ ಇಂದು ಹಾಗಲ್ಲ. ನನಗೊಂದು ಲಕ್ಷ್ಯವಿತ್ತು; ಗುರುಪುರ ಸೇತುವೆಯ ಚಿತ್ರ-ದಾಖಲೆ. ಜಡಿಮಳೆ ಹಿಡಿದರೆ ಪ್ಲ್ಯಾಸ್ಟಿಕ್ ಕಳಚಿ ಕ್ಯಾಮರಾ ತೆಗೆಯುವುದಸಾಧ್ಯ. ಬದಲಿಗೆ ಇದು ನೋಡುವಾಂತ ಒಮ್ಮೆಲೇ ಎಡ ದಾರಿಗೆ ನುಗ್ಗಿದೆ ಬೋರ್ಡು ಹೇಳಿತು – ಅಮೃತ ನಗರ.
ಕೆಲವು ವರ್ಷಗಳ ಹಿಂದೆ ಒಮ್ಮೆಲೆ ಕೆತ್ತಿಕಲ್ಲು ರಾಷ್ಠ್ರವ್ಯಾಪೀ ಸುದ್ದಿ ಮಾಡಿತ್ತು. ಕರಾವಳಿ ವಲಯದ ಎಲ್ಲ ಪದವುಗಳಂತೆ ಈ ವಾಮಂಜೂರು ಪದವೂ ವಿಸ್ತಾರವಾಗಿ ಕರಿಗಟ್ಟಿದ್ದ ಮುರಕಲ್ಲಿನದೇ ಹರಹು. ವಸತಿ ಒತ್ತಡದಲ್ಲಿ ನಾಗರಿಕತೆ ಇಲ್ಲೂ ಪದವಿನ ಪೂರ್ವ ಅಂಚಿನವರೆಗೆ ದೃಢ ನೆಲ ನಂಬಿ ಸೈಟು, ಮನೆಯೆಂದು ಹರಡಿಕೊಂಡಿತ್ತು. ಆ ಮಳೆಗಾಲದಲ್ಲಿ ಒಮ್ಮೆಗೇ ಗುಡ್ಡೆ ನೆತ್ತಿಯಿಂದ ನೂರಿನ್ನೂರು ಅಡಿ ಕೆಳಗಿನವರೆಗೂ ಅಂದರೆ, ಕೆತ್ತಿಕಲ್ಲು ವಲಯದಲ್ಲಿ ಹಾದು ಹೋಗುವ ಮೂಡಬಿದ್ರೆ ದಾರಿಯೂ ಸೇರಿದಂತೆ ಸರಿ ಸುಮಾರು ಅರ್ಧ ಗುಡ್ಡೆಯೇ ಪೂರ್ವ ದಿಕ್ಕಿಗೆ ಕುಸಿಯತೊಡಗಿತ್ತು. ಟನ್ಗಟ್ಟಲೆ ತೂಕದ ಕಲ್ಲ ಹೋಳುಗಳು, ಮಣ್ಣು, ಕುರುಚಲು ಕಾಡು, ಮನೆ, ದಾರಿ ಎಲ್ಲವೂ ಗುರುಪುರ ನದಿಯ ಕಣಿವೆಯತ್ತ ಉರುಳಿ, ತೆವಳಿ ಸರಿಯತೊಡಗಿತ್ತು. ಇದರ ಗತಿ ನಿಧಾನಕ್ಕಿದ್ದುದರಿಂದ ಬಹುಶಃ ಮನುಷ್ಯ ಜೀವಹಾನಿಯೇನೂ ಆಗಲಿಲ್ಲ. ಆದರೆ ಅದೆಷ್ಟೋ ಮಂದಿಯ ಜೀವನಹಾನಿ, ಮೂಡಬಿದ್ರೆಯ ಬಹುದೊಡ್ಡ ಸಂಪರ್ಕ ಮಾರ್ಗನಾಶ ಉಪೇಕ್ಷಿಸುವ ಹಾಗಿರಲಿಲ್ಲ. ಪ್ರಜಾಪ್ರತಿನಿಧಿಗಳು, ದೇಶಾದ್ಯಂತ ಪರಿಣತರು ಬಂದರು, ಹೋದರು. ನೂರು ಸಾವಿರ ಊಹೆ, ಸಲಹೆ, ಆಶ್ವಾಸನೆಗಳು ಹರಿದವು, ಮರೆತರು. ಕೆಲವು ಕಾಲ ಕಳೆದು ಗಟ್ಟಿಯಾಗಿ ಆದದ್ದು ಒಂದೇ – ಅಲೆಯಲೆಯಾಗಿಯಾದರೂ ಮೂಡಬಿದ್ರೆ ಸಂಪರ್ಕ ರಸ್ತೆಯ ಪುನಃ ಸ್ಥಾಪನೆ. ಪ್ರಕೃತಿ ಸಹಜ ಕ್ರಿಯೆಯಲ್ಲಿ ತನ್ನ ದೊಡ್ಡ ಗಾಯ ಗೊಂದಲಗಳನ್ನು ಮಳೆಯಲ್ಲಿ ತೊಳೆದು, ಕುರುಚಲು ಹಸಿರಿನ ಪಟ್ಟಿ ಎಳೆದು ಮರೆಸಿತು. ಮುಂದಿನ ವರ್ಷಗಳ ಮಳೆಗಾಲಗಳಲ್ಲಿ ನೆತ್ತಿಯಿಂದ ವಿಶೇಷ ಕುಸಿತ ಆಗದಿದ್ದರೂ ಆ ವಲಯದ ಅಸ್ಥಿರತೆ ಇಂದಿಗೂ ಮುಂದುವರಿದಿದೆ. (ಈ ವರ್ಷದ ಕುಸಿತ ಗಮನಿಸಿ) ಪಿಲಿಕುಳದ ಸರೋವರದ ಭಾರದಿಂದ ಆಂತರ್ಯದ ಸೇಡಿಮಣ್ಣು ಕುಸಿದು, ತೊಳೆದು ಹೋಗುವಾಗ ಕುಸಿತ ಸಹಜ ಎನ್ನುವ ದೊಡ್ಡ ಊಹಾವರದಿ ಬಿಟ್ಟರೆ ಸ್ಪಷ್ಟ ಕಾರಣ, ಅದಕ್ಕೆ ಮದ್ದು, ಎಲ್ಲಕ್ಕೂ ಮುಖ್ಯವಾಗಿ ಸೊತ್ತು ಹಾನಿಯಾದವರಿಗೆ ವ್ಯವಸ್ಥೆ ಏನೇನೂ ಆದಂತಿಲ್ಲ.
ಪಚ್ಚನಾಡಿಯಲ್ಲಿ ತಿಪ್ಪೆ ಸಾರಿಸಿದ್ದಾರೆ:
ಡೋಲಾಯಮಾನವಾದ ಮಳೆ, ಖಚಿತವಾಗಿ ಆವರಿಸತೊಡಗಿದ್ದ ಕತ್ತಲು ನಿವಾರಿಸುವ ದೃಷ್ಟಿಯಲ್ಲಿ ವಾಪಾಸು ಹೊರಟೆ. ಹೋದ ದಾರಿಯಲ್ಲೇ ಮರಳಬಾರದೆಂಬ ಯೋಚನೆಯಂತೆ ಪಚ್ಚನಾಡಿಯಲ್ಲಿ ಬಲಕ್ಕೆ ಹೊರಳಿ ಪದವಿನಂಗಡಿ ದಾರಿ ಹಿಡಿದೆ. ಒಂದು ಕಾಲದಲ್ಲಿ ಮಂಗಳೂರ ಮಹಾನರಕವೇ ಇಲ್ಲಿದೆ ಎಂಬಂತೆ ಭಾರೀ ಗುಡ್ಡೆ ಬಿದ್ದಿದ್ದ ಕಸಕುಪ್ಪೆಗೆ ಈಗ ಮೋಸದ ಮುಸುಕೆಳೆದಿದ್ದಾರೆ. ಕಸದಿಂದ ರಸ ಯೋಜನೆಯ ಎರಡು ಬೋರ್ಡುಗಳಲ್ಲಿ ಒಂದು ಪೂರ್ಣ ಸತ್ತಿದೆ. ಅಂತರ್ಜಾಲದಲ್ಲಿ ದೃಶ್ಯ, ಶ್ರಾವ್ಯ ಕೊಡುವ ಸಾಧ್ಯತೆಯಿದ್ದಂತೆ ಘ್ರಾಣ ಸೌಕರ್ಯವಿರುತ್ತಿದ್ದರೆ ಖಂಡಿತವಾಗಿಯೂ ನಿಮ್ಮ ಹೊಟ್ಟೆ ತೊಳಸುವ ಕೆಲಸವನ್ನೂ ನಾನಿಲ್ಲೇ ಪ್ರಸರಿಸುತ್ತಿದ್ದೆ! ಪದವಿನಂಗಡಿ, ಮೇರೀಹಿಲ್, ಯೆಯ್ಯಾಡಿಗಾಗಿ ಪೆಡಲಾವರ್ತ ಏರಿಸುತ್ತಾ ಕದ್ರಿಗುಡ್ಡೆಯಿಂದ ಕಂಬಳರಸ್ತೆಗೆ ಬಿರಿಬಿಗಿ ಮಾಡುತ್ತಾ ಅರೆಚಂಡಿಯಲ್ಲಿ ಮನೆ ಸೇರಿದೆ.
ವಾಸ್ಕೋ-ಡ-ಗಾಮಾ!:
ವಿಶೇಷಪಟ್ಟ ದಿನಗಳಲ್ಲದ ನಿತ್ಯದಲ್ಲಿ ನಮ್ಮ ಪ್ರಾತರ್ವಿಧಿಗಳನ್ನು ಹಿಂದೆ ಮುಂದೆ ಮಾಡಿಕೊಂಡು ಸಾಮಾನ್ಯರು ಹೇಳುವ `ಮಾರ್ನಿಂಗೋ ಈವ್ನಿಂಗೋ ವಾಕ್ ಟೈಮಿ’ಗೆ ನನ್ನ ಸರ್ಕೀಟನ್ನು ಹೊಂದಿಸುವ ಪ್ರಯತ್ನ ಮಾಡಲಿಲ್ಲ. ಮಳೆಗಾಲ ಬೇರೆ ಇದ್ದುದರಿಂದ ಉಳಿದಂತೆ ದಿನದ ಯಾವುದೇ ಹೊತ್ತು, ಮಳೆ ತುಸು ದೂರವಿದೆ ಎಂದನ್ನಿಸಿದಾಗ ನಾನು ಸರ್ಕೀಟ್ ಹೊರಟದ್ದುಂಟು. ಕೆಲವೊಮ್ಮೆ ನನ್ನ ಅಂದಾಜೂ ಹವಾಮಾನ ಇಲಾಖೆಯ ವರದಿಯಂತೆ ಸೋತು, ದಾರಿಯಲ್ಲಿ ಮಳೆ ಕಾಡುವುದಿತ್ತು. ಆಗ ನಾನು ಉದ್ದೇಶಿಸಿದ ಉಪೋತ್ಪತ್ತಿಗಳ ಕುರಿತಂತೆ ರಾಜಿಮಾಡಿಕೊಳ್ಳುವುದು ಅನಿವಾರ್ಯವಾಗುತ್ತಿತ್ತು. ಉದಾಹರಣೆಗೆ – ಕಟೀಲಿನ ತಾಳಮದ್ದಳೆ, ಪುರಭವನದ ಲಂಡನ್ ಯಕ್ಷಗಾನ ಸ್ಪರ್ಧೆ, ಗುರುಪುರ ಸೇತುವೆಯ ಚಿತ್ರಗ್ರಹಣ ಮುಂತಾದವಲ್ಲಿ ಕೆಲವನ್ನು ಕೈಬಿಟ್ಟದ್ದುಂಟು.
ಹೀಗೇ ಆಕಾಶರಾಯರ ದುಗುಡ ಯಾವತ್ತು ಹರಿಯುತ್ತೋ ಎಂಬ ಹೆದರಿಕೆಯಲ್ಲೇ ಅದೊಂದು ದಿನ ಸೈಕಲ್ ಸರ್ಕೀಟಿಗಿಳಿದಿದ್ದೆ. ಯಾವುದಕ್ಕೂ ಇರಲಿ ಎಂದು ನನಗೆ ಅಂದ ಕಾಲತ್ತಿಲೆ ಕುಶಿ ಹರಿದಾಸಭಟ್ಟರು ಜಪಾನಿನಿಂದ ತಂದು ಕೊಟ್ಟಿದ್ದ ಹಸುರು ಜರ್ಕಿನ್ (ಸುಮಾರು ಎರಡೂವರೆ ದಶಕ ಹಳತಾದರೂ ಮಾಸಿಲ್ಲ, ಹರಿದಿಲ್ಲ, ಬಿಸುಪಿನಲ್ಲಿ ಕೊರಗಿಲ್ಲ!) ಏರಿಸಿಕೊಂಡಿದ್ದೆ. ಜನ-ವಾಹನ, ಹಂಪು-ಡಂಪು, ಕಲ್ಲು-ಕೆಸರುಗಳೆಂದು ಚಕ್ರ-ಚಿತ್ತ ಕ್ಷಣಕ್ಷಣಕ್ಕು ಬದಲಿದಂತೆ, ನನ್ನ ತಲೆಯೊಳಗೂ ವಿಚಾರ ಚಕ್ರ ತಿರುಗುತ್ತಿತ್ತು. ಪಂಪ್ವೆಲ್, ಪಡೀಲ್ ಕಳೆದು ಕಣ್ಣೂರು ಬಂದಾಗ ಒಮ್ಮೆಗೆ ವಾಸ್ಕೋಡಗಾಮನ ದೆವ್ವ ನನ್ನನ್ನು ಮೆಟ್ಟಿರಬೇಕು. (ಕೇರಳದ ಕಣ್ಣೂರಿಗೆ ವಾಸ್ಕೋಡಗಾಮಾ ಮೊದಲು ಬಂದದ್ದಲ್ಲವೇ!) `ಮಂಗಳೂರಿನ ಗಿರಿಧಾಮ ಬೋರುಗುಡ್ಡೆ’ (ಹಿಂದಿನ ಯಾವುದೋ ಸೈಕಲ್ ಸರ್ಕೀಟಿನಲ್ಲಿದೆ) ನಿಮಗೆ ನೆನಪಿರಬೇಕು. ಅಂದು ನಾನು ಆ ದಾರಿಯಲ್ಲೇ ಮುಂದುವರಿದಿದ್ದರೆ ಕಣ್ಣೂರಿಗೇ ಬರುತ್ತಿದ್ದೆನೇನೋ ಎಂದು ಶೋಧಿಸುವ ಉತ್ಸಾಹ ಉಕ್ಕಿತು. ಹೆದ್ದಾರಿ ಬಿಟ್ಟು ಎಡಕ್ಕೆ ಹೊರಳಿ ಜನವಸತಿಯ ನಡುವಣ ಹೆಚ್ಚು ಬಳಕೆಯ ಗಲ್ಲಿಯುದ್ದಕ್ಕೆ ಸೈಕಲ್ ಹೊಡೆದೆ. ಶಾಲೆ, ಮನೆ, ಸಣ್ಣಪುಟ್ಟ ಅಂಗಡಿಗಳ `ನಾಗರಿಕತೆ’ಯ ಉದ್ದಕ್ಕೂ ದಾರಿ ಕಾಂಕ್ರೀಟಿನದ್ದೇ ಇತ್ತು. ಗುಡ್ಡ ಸಾಲಿನ ನೇರ ಬುಡ ಮುಟ್ಟುವಲ್ಲಿಗೆ, ಮನೆಮಠಗಳೂ ಮುಗಿದಲ್ಲಿ ಅದು ಕೃತಕೃತ್ಯವಾದಂತಿತ್ತು.
ಬೋರುಗುಡ್ಡೆ ಸಂಪರ್ಕ ಹೀಗೆ ಅಸಾಧ್ಯ ಎನ್ನುವುದು ಸ್ಪಷ್ಟವಾಗಿತ್ತು. ಬದಲು ಮುಂದುವರಿದ ಹರಕು ಜಾಡಾದರೂ ಹೋಗುವುದು ಎಲ್ಲಿಗೆ ಎಂದು ಹೊಸ ಕುತೂಹಲದಲ್ಲಿ ಹಿಂಬಾಲಿಸಿದೆ. ಅದು ಐವತ್ತಡಿಯ ದಿಬ್ಬ ಏರಿ, ರೈಲ್ವೇ ಹಳಿ ಅಡ್ಡ ಬಂದಾಗ ವಿರೋಧಿಸದೆ, ವಿನೀತವಾಗಿ ಮಗ್ಗುಲಲ್ಲೇ ಸಾಗಿತ್ತು. ಜಲ್ಲಿಕಿತ್ತ ಆ ಕಚ್ಚಾ ಮಾರ್ಗ ರೈಲ್ವೇ ಹಳಿ ಹಾಸುವ ಕಾಲದ ನಿರ್ಮಾಣವಿರಬೇಕು. ಅವರಿವರನ್ನು ವಿಚಾರಿಸಿದೆ. ಅದರಲ್ಲಿ ಕಷ್ಟದಲ್ಲಿ ಮುಂದುವರಿದರೆ ಒಂದು ಕಿಮೀ ಅಂತರದಲ್ಲಿ ಅಡ್ಯಾರ್ ಕಟ್ಟೆ ಸಿಗುತ್ತದೆ. ಮತ್ತೆ ಒಳ್ಳೇ ದಾರಿಯಲ್ಲೇ ಇತ್ತ ಪದವಿನೆತ್ತರಕ್ಕೂ ಏರಿ ಮಲ್ಲೂರಿಗೆ ಹೋಗಬಹುದು ಅಥವಾ ಅತ್ತ ಹೆದ್ದಾರಿಗೆ ಮರಳಬಹುದು. ಆದರೆ ಎಂದೂ ಹಿಂದೆ ಬರುವ ಸ್ವಾತಂತ್ರ್ಯ ನನಗಿದ್ದೇ ಇದೆ ಎಂಬ ಧೈರ್ಯದಲ್ಲಿ ನುಗ್ಗಿದೆ. ಚಿರಿಪಿರಿ ಮಳೆ ಎಂದಿನಂತೆ ವೈಪರ್ ಇಲ್ಲದ ನನ್ನ ಕನ್ನಡ(ಕ) ದೃಷ್ಟಿಗೆ ತೊಂದರೆ ಕೊಟ್ಟರೂ ಗಡಿಬಿಡಿ ಮಾಡುವಂತದ್ದೇನೂ ಇರಲಿಲ್ಲ. ಮೈ ಹೊರಗಿನ ಮಳೆಗಿಂತಲೂ ಹೆಚ್ಚಿಗೆ ತುಳಿತದ ಶ್ರಮಕ್ಕೆ ಬೆವರಿ ಒಳಗಿನಿಂದಲೇ ಚಂಡಿಯಾಗುವುದೂ ನಾನು ಕಂಡದ್ದೇ ಇತ್ತು. ದಾರಿಯ ಅವಶೇಷವನ್ನು ಹುಲ್ಲು ಪೊದರು ಸಾಕಷ್ಟು ಆವರಿಸಿದ್ದರೂ ಪಾದಚಾರಿಗಳ ಸಪುರ ಮುಕ್ತ ಜಾಡು ಸೈಕಲ್ಲಿಗೆ ಸಾಕಿತ್ತು. ಒಂದೆರಡು ಕಡೆ ಮಾತ್ರ ಗೊಸರು, ನಿಗೂಢ ಆಳದ ಕೆನ್ನೀರು ಮಡುಗಟ್ಟಿತ್ತು. ನನ್ನ ಕಣ್ಣಂದಾಜಿನಲ್ಲೇ ಅವನ್ನು ಹಾಯಿಸಿದ್ದು ತಪ್ಪಾಗಲಿಲ್ಲ! ಹೀಗೆ ಇನ್ನೂ ಅರ್ಧ ಕಿಮೀ ಹೋಗಿರಲಿಲ್ಲ – ಹಿಂದಿನ ಚಕ್ರ ಠುಸ್ಸೆಂದಿತು.
ಅನುಭವ ಪಾಠದಲ್ಲಿ ಮತ್ತೊಂದು ಅಧ್ಯಾಯ ಎಂದುಕೊಂಡೆ. ಮತ್ತಷ್ಟು ಬೆವರುತ್ತ, ಹ್ಯಾಪ್ಮೋರೆ ಹೊತ್ತುಕೊಂಡು, ಸೈಕಲ್ ನೂಕುತ್ತ ಬಂದ ದಾರಿಯಲ್ಲೇ ಮರಳಿದೆ. ಹೆದ್ದಾರಿ ಬದಿಯ ಮಾಜೀ ಚೆಕ್-ಪೋಸ್ಟಿನ ಬಳಿ ಮೃತ ಚಕ್ರಗಳಿಗೆ ಜೀವವೂಡುವ ಸಂಜೀವಿನಿ, ಅಲ್ಲ ಸಂಜೀವ – ದೊಡ್ಡ ವಾಹನ ಚಕ್ರಗಳ ಪ್ಯಾಚಪ್ಪ ಸಿಕ್ಕರು. “ಇಲ್ಲಿಲ್ಲ, ಸೈಕ್ಲ್ ಪ್ಯಾಚ್ ಮಾಡುದಿಲ್ಲ” ಎಂದೇ ಕೊಸರಾಡಿದರು. ಅವರ ವಾದ ಸರಿಯೇ ಇತ್ತು. ಆ ವಠಾರದಲ್ಲಿ ನೂರೆಂಟು ಬಾಲ-ಸೈಕಲ್ವಾಲರಿದ್ದರು. ಅವರ ಪುಟ್ಟ ಚಕ್ರ ಕಳಚು, ರಿಪೇರಿ ಮಾಡು ಎಂದು ತೊಡಗಿದರೆ ಇವರ ದೊಡ್ಡ ಕೆಲಸಗಳೆಲ್ಲಾ ಪ್ಯಾಚೇ. ಆದರೆ “ನನ್ನ (ಹೊಸ ತಲೆಮಾರಿನ) ಸೈಕಲ್ ಹಾಗಲ್ಲ, ನೋಡಿ”, ಎಂದು ನಾನು ಮಾತಿನಲ್ಲಿ ಹೇಳುತ್ತಿದ್ದಂತೆ, ಒಂದು ತೋರು ಬೆರಳಿನಲ್ಲಿ ಹಿಂದಿನ ಚಕ್ರದ ಯಾಕ್ಸೆಲ್ಲನ್ನು ಹಿಡಿದಿಟ್ಟ ಒಂದು ಕ್ಲಿಪ್ ತಪ್ಪಿಸಿದೆ. ಕ್ಷಣಾರ್ಧದಲ್ಲಿ ಇಡಿಯ ಹಿಂದಿನ ಚಕ್ರ ಸ್ವತಂತ್ರವಾಗಿ ಹೊರಗೆ ಬಂದಿತ್ತು! (ಹಿಂದಾದರೆ, ಸೈಕಲ್ ಬುಡದಲ್ಲಿ ಅಂಡುಮಣೆ ಇಟ್ಟು ಕುಳಿತುಕೊಳ್ಳುವಲ್ಲಿಂದ ತೊಡಗಿ ಯಾಕ್ಸೆಲ್ಲಿಗೆ ಆಚೀಚೆ ಸ್ಪ್ಯಾನರಿನಲ್ಲಿ ಹಿಡಿ, ಎದುರುಬದಿರಾಗಿ ತಿರುಗಿಸು, ಚೈನ್ ತಪ್ಪಿಸು, ಬ್ರೇಕ್ ಸಡಿಲಿಸು, ಫೋರ್ಕ್ ಒಂದಕ್ಕೆ ಕಾಲು ಕೊಟ್ಟು, ಇನ್ನೊಂದನ್ನೆಳೆದು ಚಕ್ರ ಜಾರಿಸು – ಎಲ್ಲ ಇಲ್ಲಿ ಅನಗತ್ಯ) ಮತ್ತೆ ಟ್ಯೂಬಿನಲ್ಲಿ ಗಾಳಿ ಕಡಿಮೆಯಾದ ಸ್ಥಿತಿಯಾದ್ದರಿಂದ, ಟಯರಿಗೆ ನಾನೇ ಎರಡು ಹೆಬ್ಬೆರಳ ಅಮುಕು ಬಲ ಕೊಟ್ಟದ್ದೇ ಸಾಕಾಯ್ತು – ಟಯರು ರಿಮ್ಮು ಬಿಟ್ಟು ದೂರ ಸರಿದಿತ್ತು!! (ಹಿಂದಾದರೆ – ಒಂದು ಲಿವರನ್ನು ರಿಮ್ಮಿನ ಸಂದಿಗೆ ಹುಶಾರಾಗಿ ಚುಚ್ಚಿ, ಮೀಟಿ, ಕಡ್ಡಿಗೆ ಸಿಕ್ಕಿಸಿಟ್ಟು, ಇನ್ನೊಂದು ಲಿವರಿನಲ್ಲಿ ಟಯರಿನ ಸುತ್ತೂ ಬಿಡಿಸಿ ಕೊಡುವ ರಗಳೆ, ಇಲ್ಲಿ ಇಲ್ಲವೇ ಇಲ್ಲ) ಹನುಮ ಬೆಟ್ಟವನ್ನೇ ಇಳಿಸಿದ ಮೇಲೆ ಸಂಜೀವ ಪ್ರಭಾವಕ್ಕೆ ವಿಳಂಬವಾಗಲಿಲ್ಲ. ಬರಿಯ ತೇಪೆ ಕೆಲಸ ಕೂಡಲೇ ಮುಗಿಸಿ ಕೊಟ್ಟರು. ವೆಚ್ಚ ಬರಿಯ ಇಪ್ಪತ್ತು ರೂಪಾಯಿ, ಬಿಚ್ಚಿ ಜೋಡಿಸಿದ ಕೂಲಿ ನನ್ನದೇ! ಸೈಕಲ್ಲಿನೊಡನೆ ಬಂದ ಪುಸ್ತಕದಲ್ಲಷ್ಟೇ ಕಂಡದ್ದನ್ನು ಪ್ರಾಯೋಗಿಕವಾಗಿ ಮಾಡಿ, ತಿಳಿದ ಅನುಭವ ಶ್ರೀಮಂತಿಕೆಯೊಡನೆ ಮರಳಿ ಮನೆ ಸೇರಿದೆ.
ಶೇಡಿಗುಮ್ಮೆ ಕೃಷ್ಣ ಭಟ್ ಸಂಸ್ಮರಣಾ ತಾಳಮದ್ದಳೆ
“ಮುಖ ಮಾತ್ರ ಹರಿದಿರಬೇಕು. ತಲೆಯಂಚಿಗೆ ಹಗ್ಗ ಪೋಣಿಸಿದರೂ ಕತ್ತು ಬೆಸೆದಿರಬೇಕು. ಕತ್ತಿನ ಸೀಳು ಎದೆ ಮಟ್ಟಕ್ಕೆ ಸಾಕು, ಪೂರ್ಣ ಕೂಡದು. ಕೈ ಮೊಂಡಾದರೂ ಚಿಂತೆಯಿಲ್ಲ, ಬೆನ್ನು ವಿಸ್ತಾರ ಬೇಕು. ಮೊಣಕಾಲಿನಿಂದ ಕೆಳಗೆ ತುಂಡಾಗಬೇಕು, ಇದ್ದೂ ಪ್ರಯೋಜನವಿಲ್ಲ. ಹೀಗೊಂದು ರಾಣೀಕೋಟು (ರೈನ್ ಕೋಟ್) ನಿಮ್ಮಲ್ಲಿದೆಯೇ” ಎಂದು ಮಂಗಳೂರಿನ ಅಂಗಡಿ ಅಂಗಡಿ ಸುತ್ತಿ, ಏನೋ ಒಂದು ಸಂಪಾದಿಸಿದ್ದೆ. ಅದನ್ನು ಪ್ರಥಮ ಬಾರಿಗೆ ಧರಿಸಿ ಇನ್ನೂ ಪಿಟಿಪಿಟಿ ಪೀಠಿಕೆಯಲ್ಲೇ ಇದ್ದ ಮಳೆಯಲ್ಲಿ ಕೂಳೂರು, ಪಣಂಬೂರೆಂದು ಸೈಕಲ್ಲೇರಿ ಧಾವಿಸಿದೆ. ಸುಮಾರು ಹತ್ತು ದಿನದ ಹಿಂದೆ ಮಿಂಚಂಚೆಯಲ್ಲಿ ನೋಡಿದ್ದ ಆಮಂತ್ರಣವೊಂದರ ಅಸ್ಪಷ್ಟ ನೆನಪು ತಲೆಯೊಳಗೆ ಧಿಗಿಣ ಹಾಕತೊಡಗಿತು. ಕುಳಾಯಿ ವಿಷ್ಣುಮೂರ್ತಿ ದೇವಳ, ಶೇಡಿಗುಮ್ಮೆ ಕೃಷ್ಣ ಭಟ್ಟ ಸಂಸ್ಮರಣ ತಾಳಮದ್ದಳೆ, ಪ್ರಸಂಗ ಭರತಾಗಮನ ಮತ್ತು ಪಾದುಕಾಪ್ರದಾನ, ಕಲಾವಿದರು – ಬಲಿಪ, ಜೋಶಿ, ಕುಂಬಳೆ. ಆದರೆ ಸಮಯದ ವಿಭಾಗದಲ್ಲಿ `ಅಪರಾಹ್ನ ಮೂರಕ್ಕೆ ಸರಿಯಾಗಿ’ ಎಂದಿತ್ತು. ನಾನು ಮನೆ ಬಿಡುವಾಗಲೇ ಮೂರಾಗಿದ್ದುದಕ್ಕೆ ಅಪರಾಧೀ ಪ್ರಜ್ಞೆಯಲ್ಲಿ ದಮ್ಮು ಕಟ್ಟಿ ಮೆಟ್ಟಿದ್ದೆ. ಹೋಗೋಗುತ್ತಾ ಮಳೆ ಬಿಡಿ, ಹೆದ್ದಾರಿ ವಾಹನಸಂಚಾರದ ಸೀರ್ಪನಿಗಳೂ ಇಲ್ಲದೆ ರಾಣೀಕೋಟಿನ ಒಳಗಿಂದೊಳಗೇ ಬೆವರಿ ಚಂಡಿಯಾದದ್ದಷ್ಟೇ ಲಾಭ.
ಕುಳಾಯಿಯಲ್ಲಿ ಹೆದ್ದಾರಿ ಬದಿಯಲ್ಲೇ ಶ್ರೀ ವಿಷ್ಣುಮೂರ್ತಿ ದೇವಳದ ಮಹಾದ್ವಾರ ಕಾಣಿಸಿತು. ಹುಡುಕಾಟದ ಅಗತ್ಯವೇ ಇಲ್ಲದಂತೆ ಪಕ್ಕದಲ್ಲೇ ಇದ್ದ ಸಭಾಭವನದಲ್ಲಿನ ಸಭಾ ಸಂಭ್ರಮ ನನ್ನನ್ನು ಸೆಳೆದದ್ದೂ ಆಯ್ತು. ಇನ್ನೇನು ಅಲ್ಲಿನ ಲಘೂಪಹಾರದ ಹಂಗಿಗೆ ಸಿಕ್ಕಬೇಕೆನ್ನುವಷ್ಟರಲ್ಲಿ ನನಗೆ ಹಂತಹಂತದ ಜ್ಞಾನೋದಯವಾಯ್ತು – ಆ ಸಭೆ ವಿಶುಕುಮಾರ್ ಸಂಸ್ಮರಣೆ, ಸಮ್ಮಾನ ಸಲ್ಲುತ್ತಿದ್ದದ್ದು ಗೆಳೆಯ ಮುದ್ದು ಮೂಡುಬೆಳ್ಳೆಯವರಿಗೆ ಮತ್ತು ಸಭಾಭವನವೂ ವಿಷ್ಣುಮೂರ್ತಿ ದೇವಳದ ಮಹಾದ್ವಾರದ ಪಕ್ಕದ ಬ್ರಹ್ಮಶ್ರೀ ನಾರಾಯಣಗುರುಗಳದ್ದು; ವಿಷ್ಣುಮೂರ್ತಿ ದೇವರದ್ದೇ ಅಲ್ಲ! ಸೈಕಲ್ಲಿಳಿಯದೆ ಒಳಗಿನ ದಾರಿಯಲ್ಲಿ ಮುಂದುವರಿದು ನಿಜ ಲಕ್ಷ್ಯವನ್ನೇ ಸೇರುವಾಗ ಗಂಟೆ ಮೂರೂವರೆ. ಆದರೆ ನನ್ನ ನಿರೀಕ್ಷೆ ಮೀರಿ, ನಿರ್ವಾಹಕ ಅದೇ ತಾನೆ “ವೇದಿಕೆಯ ಮೇಲಿನ ಗಣ್ಯರಿಗೆ ವಂದಿಸಿ, ಸಂಸ್ಮರಣಾ ಭಾಷಣಕ್ಕೆ ಪ್ರಭಾಕರ ಜೋಷಿಯವರಿಗೆ ಮೈಕ್” ಬಿಟ್ಟುಕೊಟ್ಟದ್ದು ಕೇಳಿತು! ಜೋಶಿ, ನಿರ್ವಾಹಕ, ಕುಂಬಳೆ ಸುಂದರರಾವ್, ನಿರ್ವಾಹಕ, ವಂದನಾರ್ಪಣೆ, ಲಘೂಪಹಾರ ಸೇವನೆ, ಪಾತ್ರ ಪರಿಚಯ ಮುಗಿದು ಬಲಿಪ ಭಾಗವತರು ಶ್ರುತಿ ಚಾಲೂ ಮಾಡುವಾಗ ಗಂಟೆ ನಾಲ್ಕೂ ಕಾಲಿನಿಂದ ಮುಂದೆ ಹೋಗಿತ್ತು!
ಸಾರ್ವಜನಿಕ ಸ್ಥಳಗಳಲ್ಲಿ ನನ್ನ ಸೈಕಲ್ಲಿನ ಭದ್ರತೆಗೆ ಎರಡು ತೆರನ ಆತಂಕಗಳನ್ನು ನಾನು ಅಂದಾಜಿಸಿದ್ದೆ. ಕಳವು – ಸಾಮಾನ್ಯ ಸೈಕಲ್ಲುಗಳ ಹಾಗೆ ಎಲ್ಲೆಂದರಲ್ಲಿ ಬೀಗ ಹಾಕಿ ಬಿಟ್ಟು ನಡೆದರೆ ಕೇವಲ ಹದಿನೈದೇ ಕೇಜಿ ತೂಕದ ಸೈಕಲ್ಲನ್ನು ಯಾರೂ ಭುಜಕ್ಕೇರಿಸಿ ಕದ್ದೊಯ್ಯಬಹುದು. ಅದನ್ನು ಮುಂಗಂಡೇ ಉದ್ದ ಸರಪಳಿಯ ಬೀಗವನ್ನೇ ಖರೀದಿಸಿದ್ದೆ. ಇದರಿಂದ ಸೈಕಲ್ ಬಿಟ್ಟು ಹೋಗುವಲ್ಲಿನ ಯಾವುದೋ ಕಂಬ ಅಥವಾ ಕಿಟಕಿ ಸರಳಿನಂಥ ಘನ ಆಧಾರಗಳನ್ನು ಸೇರಿಸಿ ಬೀಗ ಹಾಕುವುದು ಸಾಧ್ಯವಿತ್ತು. ಇನ್ನೊಂದು ಕೆಟ್ಟ ಕುತೂಹಲ – ಕಡಿಮೆ ಆತಂಕದ್ದೇ ಆದರೆ ಉಪೇಕ್ಷಿಸುವಂತದ್ದಲ್ಲ. ಸೈಕಲ್ ವ್ಯಾಮೋಹವಿರುವ ತರುಣ ಜನಾಂಗ ನಾನು ಸೈಕಲ್ ಹಿಡಿದು ನಿಂತಿದ್ದಾಗಲೂ “ಹೇ, ಗೇರ್ ಸೈಕಲ್ಲೂ” ಎಂದು ಹತ್ತಿರ ಬರುವುದಿತ್ತು. ಇವರು ನಮ್ಮ ದಾಕ್ಷಿಣ್ಯದ ಮಿತಿ ನೋಡಿಕೊಂಡು (ಕೆಟ್ಟ ಬುದ್ಧಿ ಇಲ್ಲದಿದ್ದರೂ) ನೋಡಿ, ಮುಟ್ಟಿ, ಹಗುರಕ್ಕೆ ಬೆಲ್ ಕಿಣಿಕಿಣಿಸಿ, ಬ್ರೇಕಿನ ಲಿವರುಗಳ ಮೃದುಭಾವವನ್ನು ನಾಲ್ಕೆಂಟು ಸಲ (ಟಕಟಕಾಂತ ಒತ್ತಿ ಬಿಟ್ಟು) ಅನುಭವಿಸಿ, ಕೊನೆಯದಾಗಿ ಏನೋ ಭಾರೀ ಚಮತ್ಕಾರದ ನಿರೀಕ್ಷೆಯೊಡನೆ ಗೇರಿನ ನಾಲ್ಕೂ ಸ್ವಿಚ್ಚುಗಳನ್ನು ತಟಪಟ ಮಾಡುವುದುಂಟು, ಬಿಟ್ಟಿ ಸವಾರಿ ಕೇಳುವುದಕ್ಕೂ ಹಿಂಜರಿಯುವುದಿಲ್ಲ. ಇಲ್ಲಿ ಯಾವುದೇ ಹಂತದಲ್ಲಿ ಗ್ರಹಚಾರ ಕೆಟ್ಟರೆ, ಕುತೂಹಲಿಗಳು ಜಾಸ್ತಿಯಾದರೆ ಲಿವರ್, ತಂತಿ ತುಂಡಾಗಬಹುದು. ನಾನು ಬಿಟ್ಟು ಹೋದಲ್ಲಿ ಅಂಥ ಜನ ಬಂದರೆ, ಹಾಳು ಮಾಡಿದರೆ ಕಂಬಕ್ಕೆ ಬಂಧಿಸಿದ ಸರಪಳಿ ಬೀಗ ಏನೂ ಮಾಡಲಾರದು! ಆದರೆ ಕುಳಾಯಿಯಲ್ಲಿ ನನ್ನ ಅದೃಷ್ಟಕ್ಕೆ ಸಭೆ ದೇವಳದ ಹೊರಾಂಗಣದಲ್ಲಿ, ಖಾಯಂ ಮಾಡಿನಡಿಯಲ್ಲೇ ನಡೆಯುತ್ತಿತ್ತು. ಹಾಗಾಗಿ ಸೈಕಲ್ ನನ್ನ ಕಣ್ಣಳವಿಯಲ್ಲೇ ಇತ್ತು. ಇನ್ನೂ ಸಂತೋಷದ ಸಂಗತಿ ಎಂದರೆ ಗಲ್ಲಿ ತುಂಬುವ ಇನ್ನೋವಾ, ಡಸ್ಟರ್ ಮುಂತಾದ ಭಾರೀ ಕಾರು, ಒಂಟೆಡುಬ್ಬ ಆನೆಗಾತ್ರಗಳ ವಿಚಿತ್ರ ವರ್ಣಸಂಯೋಜನೆಗಳ ಬೈಕ್ ಯುಗದಲ್ಲಿ ಕೆಸರು ಮೆತ್ತಿಕೊಂಡ ಬಡಕಲು ಸೈಕಲ್ ಯಾರ ಗಮನವನ್ನೂ ಸೆಳೆಯಲಿಲ್ಲ. ನನಗೆ ನಿಶ್ಚಿಂತೆಯಲ್ಲಿ ತಾಳಮದ್ದಳೆ ಅನುಭವಿಸಲು ಸಾಧ್ಯವಿತ್ತು. ಆದರೆ…
ಮೂರಕ್ಕೆ ತೊಡಗುವ ತಾಳಮದ್ದಳೆ ಸುಮಾರು ಎರಡರಿಂದ ಮೂರು ಗಂಟೆಯ ಕಲಾಪವಾದೀತೆಂದು ನಾನು ನಂಬಿದ್ದೆ. ಆದರಿಲ್ಲಿ ಭಾಗವತರು ಶ್ರೀಕಾರಕ್ಕಿಳಿಯುವಾಗಲೇ ಒಂದೂಕಾಲು ಗಂಟೆ ತಡ. ಹಾಗೂ ದಶರಥ ನಿಧನದ ವಾರ್ತೆ, ಭರತಾಗಮನ ಮತ್ತೆ ಭರತ ವನಗಮನ ನಡೆದು ಕಥೆ ಪಂಚವಟಿ ತಲಪುವಾಗ ಐದೂವರೆ ಗಂಟೆಯಾಗಿತ್ತು. ಆಗ ಪ್ರವೇಶ ಕೊಟ್ಟ ಲಕ್ಷ್ಮಣನಾದರೋ ಭರತಾಗಮನದ ಕುರಿತು ಸ್ವಗತದಲ್ಲಿ ಶಂಕೆಗಳನ್ನು ವಿಸ್ತರಿಸಲು ಮಂಥರೆ ದೂಷಣೆಯಿಂದ ತೊಡಗಿದಾಗ ನನಗೆ ಆತಂಕವಾಯ್ತು. ಸಮಯದ ಮಿತಿ ನನ್ನ ನಿರೀಕ್ಷೆಯನ್ನು ವಿಪರೀತ ಮೀರುವುದು ನಿಶ್ಚಯವಿತ್ತು. ಅಂದರೆ ಭಾಗವತರು ಮಂಗಳಪದ ಹಾಡುವಾಗ ಕತ್ತಲು ಖಚಿತ. ಅದಕ್ಕೆ ಎಂದೂ ಸುರಿಯಬಹುದಾದ ಮಳೆ ಸೇರಿಕೊಳ್ಳಲೂಬಹುದು. ಆಗ ಹೆದ್ದಾರಿಯಲ್ಲಿ ನನ್ನ `ಮರಳಿ ಮಂಗಳೂರು’ ಯೋಚನೆ ಮನೆಗೇ ಮುಗಿದೀತೆಂಬ ಧೈರ್ಯವಿರಲಿಲ್ಲ. ಮರುದಿನದ ಪತ್ರಿಕೆಗಳ ಮುಖಪುಟದಲ್ಲಿ – ನಾನು ಹೆದ್ದಾರಿ ದುರಂತದ ಸುದ್ದಿಯಾಗಿ ಬೀಳಬಹುದು, ಅಲ್ಲವಾದರೆ ನರಸಿಂಗ ಹೋಮಕ್ಕೆ ಗಿರಾಕಿ ಕುದುರುವ ಸಾಧ್ಯತೆಯೂ ತಳ್ಳಿಹಾಕುವಂತದ್ದಲ್ಲ! ಪಾದುಕಾಪ್ರದಾನದ ಭಾವಲಹರಿಯಲ್ಲಿ ಮುಳುಗುವ ಆಸೆಯನ್ನು ಹತ್ತಿಕ್ಕಿ, ಸಭಾತ್ಯಾಗ ಮಾಡಿದೆ. ಸೂರ್ಯ ಸ್ನಾನದ ಮನೆ ಸೇರುವ ಮೊದಲು, ಮಳೆಯ ತೆರೆ ಇಳೆಗೆ ಜಾರುವ ಮೊದಲು ನಾನು ಸ್ವಸ್ಥ ಮನೆಗೆ ಮರಳಿದ್ದೆ.
ಮಂಗಳೂರಿನ ದೊಡ್ಡಾಲ!!
ಇಂದಿನ ಸೈಕಲ್ ಸರ್ಕೀಟನ್ನು ಜ್ಯೋತಿವೃತ್ತದಿಂದ ಪೂರ್ವಾಭಿಮುಖವಾಗಿ ತೊಡಗಿಸಿದೆ. ನಮ್ಮೂರಿನ ಪ್ರಾಕೃತಿಕ ಓರೆಕೋರೆಗಳನ್ನು ಒಪ್ಪಿಕೊಂಡು ಹೇಳುತ್ತೇನೆ – ಜ್ಯೋತಿ ಕಳೆದ ಮೇಲೆ ಒಂದೇ ದಾರಿಯಲ್ಲಿ, ಸರೂತ (ತತ್ಸಮ – ಸ್ಟ್ರೈಟ್!) ಹೋದೆ! ಬಲ್ಮಠ, ಕಂಕನಾಡಿ, ಜೆಪ್ಪು, ಮೋರ್ಗನ್ಸ್ ಗೇಟ್ ಮತ್ತೂ ನೇರ ನುಗ್ಗಿದಲ್ಲಿ ನೀವು ಗೊತ್ತಿಲ್ಲದೇ ಹಾಕುವ ಪ್ರದಕ್ಷಿಣೆ ಸಲ್ಲುವುದೇ ಮಂಗಳೂರಿನ ದೊಡ್ಡಾಲಕ್ಕೆ! (ನೆನಪಿಸಿಕೊಳ್ಳಿ -ಬೆಂಗಳೂರಿನ ದೊಡ್ಡಾಲ) `ಮಂಗಳೂರು ಕ್ಲಬ್ಬಿ’ನ ಈ ಕೊನೆಯಲ್ಲಿ ಯಾಕೋ ಏನೋ ದಾರಿ ಒಮ್ಮೆಲೆ ಸುಮಾರು ನೂರು ಮೀಟರ್ ಉದ್ದಕ್ಕೆ ವಿಸ್ತಾರ ನಡುಗಡ್ಡೆ ಬಿಟ್ಟು ಎರಡಾಗಿ ಆ ಕೊನೆಯಲ್ಲಿ ಮತ್ತೆ ಸೇರಿಕೊಂಡಿದೆ. ನಡುವಣ ಮಟ್ಟಸ ದಿಬ್ಬಕ್ಕೆ ಸುತ್ತಲೂ ಕಲ್ಲಿನಲ್ಲಿ ಅಂಚು ಕಟ್ಟಿ ಮಾನ್ಯತೆ ಕಲ್ಪಿಸಿದ್ದಾರೆ. ಅದರ ಉದ್ದಗಲಕ್ಕೆ ಬಹುತೇಕ ಪೂರ್ಣ ಎನ್ನುವಂತೆ ಜಟಿಲ ಆಲದ ಬೀಳಲುಗಳ ಸಾಮ್ರಾಜ್ಯ ನೆಲೆಸಿದೆ. (ಕಸ ಕೊಳಕು ಪೇರಿದ್ದು ನಾನು ಪ್ರತ್ಯೇಕ ಹೇಳುವುದಿಲ್ಲ ಬಿಡಿ) ಮರದ ಮೂಲ ಒಂದೇ ಅಲ್ಲದಿರಬಹುದು, ಮತ್ತೆ ಈ ಬೀಳಲುಗಳ ವ್ಯಾಪ್ತಿಯನ್ನು ಮೀರುವಲ್ಲಿ ನಗರದೊಳಗೇ ಅನ್ಯ ಆಲವೂ ಇರಬಹುದು. ಆದರೆ ಅವು ನನ್ನ `ಚಕ್ರವರ್ತಿ’ ಪೀಠಕ್ಕೆ ಅಹವಾಲು ತರುವಲ್ಲಿಯವರೆಗೆ ಇದನ್ನು ಕುಶಿಪಟ್ಟು ನಾಮಕರಿಸಿದ್ದೇನೆ `ಮಂಗಳೂರಿನ ದೊಡ್ಡಾಲ.’ ಚಕ್ರ ಅಲ್ಲಿಗೇ ನಿಲ್ಲಲಿಲ್ಲ…
ಕೆಲವು ಕರ್ಕೆರೆಗಳು:
ತುಳುವೆರೆ ಬಾಯಲ್ಲಿನ “ಅಶೋಕೆರೆ”ಗೆ, ಮುಂದೆ ಮೊದಲು ಕಂಡದ್ದು `ಗುಜ್ಜರಕೆರೆ’, ಕೊನೆಯಲ್ಲಿ `ಎಮ್ಮೆಕೆರೆ’. ದೊಡ್ಡಾಲದಿಂದ ಮರಳುವಲ್ಲಿ ಎಡಕ್ಕೆ ಕವಲುವ ರಸ್ತೆಯಲ್ಲಿ, ಒಂದು ದೀರ್ಘ ಇಳಿಜಾರಿನ ಕೊನೆಯಲ್ಲಿದೆ – ಗುಜ್ಜರಕೆರೆ. ಸುವಿಸ್ತಾರವಾದ ಕೆರೆಪಾತ್ರೆ, ನಾಲ್ಕೂ ದಿಕ್ಕಿಗೆ ಹಂತಹಂತವಾಗಿ ಕಟ್ಟಿಕೊಟ್ಟ ಅಂಚು ಎಲ್ಲಾ ಸರಿ, ಆದರೆ ಮಳೆಗಾಲದ ಉತ್ತುಂಗದಲ್ಲೂ ಕಳೆ, ಗೊಸರು ಮಾತ್ರ ಇದರ ಸಂಪತ್ತು ಎಷ್ಟು ಸರಿ?! ಲಗತ್ತಿಸಿದ ಇಂದಿನ ವಿಜಯಕರ್ನಾಟಕದ ಕಿರುವರದಿ ನೋಡಿ – ಸದ್ಯದ ಕಾಮಗಾರಿ ವೆಚ್ಚ ರೂ. ೧.೮೯ ಕೋಟಿ!! ಕಿಸೆಯಲ್ಲಿದ್ದ ಹಣವೆಲ್ಲ ಪರ್ಸ್ ಕೊಳ್ಳಲು ಹೂಡುವ ಜಾಣತನ. ಅಲ್ಲಿಗೇ ಮುಗಿಯಲಿಲ್ಲ ಎನ್ನುತ್ತದೆ ಪತ್ರಿಕಾ ವರದಿ: ನೀರ ಕಾಳಜಿಯಿಲ್ಲದ ಕೆರೆ ಅಭಿವೃದ್ಧಿಯ ಬೆನ್ನಿಗೆ ಜನಪ್ರೀತಿಯಿಲ್ಲದ ಪ್ರವಾಸೋದ್ಯಮವೆಂಬ ಕೇಡು ಹಣಿಕುತ್ತಿದೆ!
ಗೇರ್ ಸೈಕಲ್ಲಿನಲ್ಲಿ ಪೆಡಲ್ ತುಳಿಯುವ ವೇಗಕ್ಕೂ ಕ್ರಮಿಸುವ ದೂರಕ್ಕೂ ನೇರ ಸಂಬಂಧವಿಲ್ಲ. ಗುಜ್ಜರಕೆರೆಯಿಂದ ಕಾಸಿಯಾ ಶಾಲೆಯತ್ತಣ ಚಡಾವು ಏರುವಾಗ ಕೆಳ ಗೇರು ಹಾಕಿದೆ. ಈ ವ್ಯವಸ್ಥೆಯಲ್ಲಿ ತುಳಿಯುವ ಶ್ರಮ ಕಡಿಮೆಯಾಗುವುದರಿಂದ ನೋಡುವವರಿಗೆ ನನ್ನ ಕಾಲಿನ ಆವರ್ತ ಬಲು ಜೋರು, ಪ್ರಗತಿ ಮಾತ್ರ ನಿಧಾನ; ನಮ್ಮಾ ಐದು ವರ್ಷಕ್ಕೊಮ್ಮೆ ಬದಲಾಗುವ ದೊರೆಗಳ ಧೋರಣೆಯ ಹಾಗೇ. ಸರಕಾರಕ್ಕೂ ಇದಕ್ಕೂ ವ್ಯತ್ಯಾಸ ಒಂದೇ – ಇದು ಸ್ವಂತ ದೇಹಶ್ರಮ, ಅದು ಸಾರ್ವಜನಿಕ ಹಣ; ಪ್ರಚಾರ ಭರ್ಜರಿ ಪ್ರಗತಿ ನಿಧಾನ! ದುರಂತ ಎಂದರೆ ಅಲ್ಲೂ ಚಕ್ರ ವಿರಮಿಸುವುದಿಲ್ಲ.
ಮಂಗಳಾದೇವಿಯಿಂದ ಮುಂದುವರಿದು ಶ್ರೀರಾಮಕೃಷ್ಣ ಆಶ್ರಮದ ಹಿತ್ತಿಲು ಎನ್ನಬಹುದಾದಲ್ಲಿ ಇನ್ನೊಂದು ಐತಿಹಾಸಿಕ ಖ್ಯಾತಿಯುಳ್ಳ ಕೆರೆ ಕಂಡೆ – ಎಮ್ಮೆಕೆರೆ; ಸ್ಥಿತಿ ಗುಜ್ಜರಕೆರೆಗೂ ಹೀನ! ಇದಕ್ಕೆ ಲಗತ್ತಿಸಿದಂತೆ ವಿಸ್ತಾರ ಮೈದಾನವೂ ಇದೆ. ಎರಡೂ ಕೆರೆಗಳು ವಿವಿಧ ಸರಕಾರಗಳ ಪಾರಿಸರಿಕ ಖಯಾಲಿಯಲ್ಲಿ ಅನೇಕ ಕಂತ್ರಾಟುಗಳಿಗೆ (ಹೂಳೆತ್ತುವುದು, ದಂಡೆ ಬಿಗಿಗೊಳಿಸುವುದು, ಸುಂದರೀಕರಣ ಇತ್ಯಾದಿ) ಅಕ್ಷಯವಾದರೂ ಶುದ್ಧ ನೀರೊಂದನ್ನು ಬಿಟ್ಟು ಎಲ್ಲವನ್ನೂ ತುಂಬಿಕೊಂಡಂತ್ತಿದ್ದುದು ನಿಜವಾಗಿಯೂ ವಿಷಾದನೀಯ. ಈಚೆಗೆ ಎಮ್ಮೆಕೆರೆಯ ಪರಿಸರದಲ್ಲೇ ಸುಸಜ್ಜಿತ ಈಜುಕೊಳ ನಿರ್ಮಿಸುವ ಸುದ್ದಿ ಮಾಧ್ಯಮದಲ್ಲಿ ತೇಲುತ್ತಿದೆ. ಅಂತರ್ಜಾಲದ `ಮುಖಪುಸ್ತಕ’ದಲ್ಲಿ ನನಗೊಂದು ವ್ಯಂಗ್ಯ ಚಿತ್ರ ನೋಡಿದ್ದು ನೆನಪಿಗೆ ಬರುತ್ತದೆ. ಪಥಿಕ ದೊಡ್ಡ ಮರದ ನೆರಳಲ್ಲಿ ವಿಶ್ರಮಿಸಿರುತ್ತಾನೆ. ವ್ಯವಸ್ಥೆ ಅಭಿವೃದ್ಧಿಯ ಹೆಸರಿನಲ್ಲಿ ಅವನನ್ನು ತತ್ಕಾಲೀನವಾಗಿ ದೂರಮಾಡಿ, ಆ ಮರವನ್ನು ಕಡಿದು, ಸಿಗಿದು, ಬಡಿದು, ಪುಟ್ಟ ಮಾಡು ಮಾಡುತ್ತದೆ. ಅದೇ ಪಥಿಕ ಮರಳಿ ಅಲ್ಲಿಗೆ ಬರುವಾಗ ನೆರಳಿಗೆ ಸುಂಕ ಕೀಳುವ ಸ್ಥಿತಿ ಏರ್ಪಾಡಾಗಿರುತ್ತದೆ! ಕೆರೆ ಕೊಟ್ಟು ಕೊಳ ಕೊಳ್ಳುವುದು – ಇದ್ದ ಗುಣವನ್ನು ಕಳೆದ ಮದ್ದಿನಂತೆ.
ಅಭಿವೃದ್ಧಿ ಎನ್ನುವುದು ಪ್ರಾಕೃತಿಕ ಅವಹೇಳನವಾಗಬಾರದು. ವಿವೇಚನಾವಂತ ಜನ ಆಡಳಿತದ ದಕ್ಷತೆಯನ್ನು `ಸೂಳೀಕೇರಿಯ ತಿಮ್ಮಣ್ಣಹಟ್ಟಿ’ಯಂದಿರು ಕೊಳೆಯುವಾಗ ಮಾಡುವ ವೆಚ್ಚದಲ್ಲಿ, ತೋರುವ `ಕಳಕಳಿ’ಯಲ್ಲಿ ಅಳತೆ ಮಾಡುವುದಿಲ್ಲ. ಅಂಥವನ್ನು ಮುಂಗಾಣುವ `ಎಚ್ಚರ’ದಲ್ಲಿ (ಗಮನಿಸಿ, ಇದಕ್ಕೆ ಹೆಚ್ಚು ಹಣ ಬೇಡ), ನಿರಾಕರಿಸುವ ಕಾಳಜಿಯಲ್ಲಿ ನಿರೀಕ್ಷಿಸುತ್ತಾರೆ. ಅಧಿಕಾರವರ್ಗ ಒಂದು ವರ್ಗಾವಣೆಯ ಅವಧಿಯನ್ನು (ಸಾಮಾನ್ಯವಾಗಿ ಮೂರು ವರ್ಷ), ಚುನಾಯಿತ ಪ್ರತಿನಿಧಿಗಳು ಒಂದು ಚುನಾವಣಾ ಅವಧಿಯನ್ನು (ಸಾಮಾನ್ಯವಾಗಿ ಐದು ವರ್ಷ) ಲಕ್ಷಿಸಿ ಯೋಜನೆಗಳನ್ನು ಹೊಸೆಯುವುದರಿಂದ ಇಂದು ಗುಜ್ಜರಕೆರೆ ಎಮ್ಮೆಕೆರೆಯೇನು ಅರಬ್ಬೀ ಸಮುದ್ರವೂ ಅಂಡು ಅದ್ದಿ ತೊಳೆಯುವಷ್ಟಕ್ಕೇ ಉಳಿಸಿದ್ದೇವೆ ನಾವು! ಪ್ರಾಕೃತಿಕ ಸಂಪತ್ತನ್ನು ಕ್ಷಣಿಕ ಉಪಯುಕ್ತ ನೆಲೆಯಲ್ಲಿ (ಪ್ರಯೋಸೋದ್ಯಮ?), ಹಾಕಿದ ಹಣದ ಮೊತ್ತದಲ್ಲಿ (ಸಾವಿರಾರು ಕೋಟಿಯ ನೇತ್ರಾವತಿ ನದಿ ತಿರುವು) ನಿರ್ಧರಿಸುವುದಲ್ಲ. ಪ್ರಾಕೃತಿಕ ಸತ್ಯಗಳನ್ನು ಅನಾವರಣಗೊಳಿಸಿ, ಅನುಸರಿಸಿ ವಿಕಸಿಸುವುದೊಂದೇ ಪರಮಪಥ.
ಜಲಮೂಲಗಳ ಅವಹೇಳನದ ವಿಷಾದ ಹೊತ್ತು ನಿಧಾನಕ್ಕೆ ನೆಹರೂ ಮೈದಾನದಂಚಿಗೆ ಬಂದು ಫುಟ್ಬಾಲ್ ಪಂದ್ಯ ವೀಕ್ಷಿಸುತ್ತ ನಿಂತೆ. ಮಿಲಾಗ್ರಿಸ್ ಮತ್ತು ಭಾರತ್ ಪ.ಪೂ ಕಾಲೇಜಿನ ತಂಡಗಳು ಹೋರುತ್ತಿದ್ದುವು. ಇತ್ತಂಡವೂ ತಮ್ಮ ಗೋಲಿನ ರಕ್ಷಣೆಯಲ್ಲಿ ತೋರುವ ಆತಂಕದ ಒದೆತ ಕಂಡೆ, ಗೋಲಾದರೆ ಆಕಸ್ಮಿಕ ಅನ್ನಿಸಿತು. ಯೋಗ್ಯ ಫಲಿತಾಂಶದ ದಿಶೆಯಲ್ಲಿ ಆಟ ಬೆಳೆಸುವವರು ಇಲ್ಲೂ ಇಲ್ಲ ಎಂಬ ನಿರಾಸೆಯಲ್ಲಿ ಮನೆಗೆ ಮರಳಿದೆ. ಗುಜ್ಜರಕೆರೆ, ಎಮ್ಮೆಕೆರೆ, ಈಜುಕೆರೆ, ಅಶೋಕೆರೆಗೆ ಉಳಿದದ್ದು ಅಯ್ಯೋ ಕರ್ಕರೆ.
ಅಡ್ಯಾರ್ ಕಟ್ಟೆ:
ನಿನ್ನೆ ಏರುಹಗಲಿನಲ್ಲಿ ಬಿಸಿಲು ಕಾದಿತ್ತು. ಸರಿ ಬಿಸಿ ರೋಡಿಗೇ (ಬಂಟ್ವಾಳ ಜೋಡುಮಾರ್ಗಕ್ಕೇ) ಲಗ್ಗೆ ಹಾಕುವುದೆಂದುಕೊಂಡೆ. ಆದರೆ ಸೈಕಲ್ ರಿಪೇರಿಯಲ್ಲಿ ತುಸು ವೇಳೆ ಕಳೆದುಹೋಯ್ತು. ಇನ್ನು ಕತ್ತಲೆಗೆ ಮುನ್ನ ಮರಳಲಾದೀತೇ ಎಂಬ ಸಂಶಯ-ಕೀಟ ತಲೆ ಕೊರೆಯುತ್ತಿದ್ದಂತೇ ಪೆಡಲಾವರ್ತ ಏರಿಸಿದ್ದೆ. ಇಲ್ಲಿನ ಮುಷ್ಕರ-ಜನಪದದಲ್ಲಿ “ಹತ್ತು ನಂಬ್ರ ಪಡೀಲ್, (ವಿರೋಧಿಯ ಹೆಸರು, ಉದಾಹರಣೆಗೆ ನನ್ನ ಹೆಸರೇ ಇರಲಿ -) ಅಶೋಕನಿಗೆ ಸಡೀಲ್” ಸಾಕಷ್ಟು ಕೇಳಿದ್ದೇನೆ. ಆದರೆ ನಿನ್ನೆ ನನ್ನ ಸವಾರಿ “ಪಂಪ್ವೆಲ್ ಕಳ್ದು ಪಡೀಲ್” ಆದರೂ ಮನೋಸ್ಥಿತಿ “ಸಡೀಲ್” ಆಗಲಿಲ್ಲ. ಕಣ್ಣೂರು ಕಳೆಯುತ್ತಿದ್ದಂತೆ ಆಕಾಶರಾಯ ಕಣ್-ಪನಿ ಹಾಕತೊಡಗಿದ. ಹನಿ ದಪ್ಪವಾಗುತ್ತಿದ್ದಂತೆ ಅಡ್ಡಿ-ಯಾರದೂ ಇಲ್ಲದ ಕಟ್ಟೆಯೂ (ಅಡ್ಯಾರ್ ಕಟ್ಟೆ) ಕಳೆದಿತ್ತು. ಹಾಗಾಗಿ ವಳಚಿಲ್ಲಿನಲ್ಲಿ ನನ್ನ ನಿರ್ಧಾರವನ್ನು ಒಳದಾರಿಗೆ ಒಲಿಸಿದೆ. ಜೋಡುಮಾರ್ಗ ಕೈಚೆಲ್ಲಿ, ಮೇರ್ಲಪದವು ಏರತೊಡಗಿದೆ.
ಶ್ರೀನಿವಾಸ ಮತ್ತು ಎಕ್ಸ್ಪರ್ಟ್ ಸಂಸ್ಥೆಗಳ ಸಂಜೆಯ ಬಿಡು-ಸಮಯ. ಬಸ್ಸು ಕಾದವರು, ರಿಕ್ಷಾಕ್ಕೆ ಜಲೋದರ ಹಿಡಿದಂತೆ ತುಂಬಿದವರು, ಹಿಮ್ಮುರಿ ತಿರುವುಗಳ ನಡುವೆ ನೇರ ಜಾಡರಿಸಿ ನಡೆದು ಬರುವವರಿಗೆಲ್ಲ ನಾನೊಂದು ವಿಚಿತ್ರ. ಸಾಂಪ್ರದಾಯಿಕ ಜುಬ್ಬಾ ಪ್ಯಾಂಟು, ತಲೆಗೆ ಮಾತ್ರ (ಅನ್ಯರಿಗೆ ಕಾಣುವಂತೆ ಫ್ಯಾಶನಬಲ್) ಬಣ್ಣಬಣ್ಣದ ಹಾಳೆಪಡಿಗೆಯಂಥ ಹಳೆಮೆಟ್ಟು (ಹೆಲ್ಮೆಟ್). ಪ್ಯಾಂಟಿನ ಕಾಲುಗಳನ್ನು ಅಸಮವಾಗಿ ಮೇಲಕ್ಕೆ ಸುರುಳಿ ಸುತ್ತಿ – ಕಾಣಲು ಗಮಾರ, ಏರಿದ್ದು ಆಧುನಿಕ ಗೇರ್ ಸೈಕಲ್. (ಚರ್ಮಕ್ಕಂಟಿದಂಥ ಮುಕ್ಕಾಲು ಪ್ಯಾಂಟ್, ಅದೇ ಬಿಗಿಯ ವರ್ಣಮಯ ಬನಿಯನ್ ಲೋಕರೂಢಿ!) ಜೋಲಾಡುವ ಮೀಸೆಯ `ಅಜ್ಜೆರ್’ಗೆ ಅಸಾಧ್ಯ ಗುಡ್ಡೆಯನ್ನು ಕುಳಿತು ಪೆಡಲೊತ್ತಿಯೇ ಉತ್ತರಿಸುವ ಛಲ ಬೇರೆ, ಎಂದೆಲ್ಲಾ ಕಂಡಿರಬಹುದು. ಅಣಕದ ಕೇಕೆ ಹಾಕಿದರು, ಪ್ರೋತ್ಸಾಹಕ ಉಘೇ ಕೊಟ್ಟರು, (ಎಲ್ಲೋ ವಿದೇಶೀ ಪ್ರಾಣಿ ಇರಬೇಕು ಎಂಬ ಸದರದಲ್ಲಿ) “ಹಾಯ್, ಬಾಯ್, ವೇರ್ ಕಮ್, ವೇರ್ ಗೋ” ವಿಚಾರಣೆಯನ್ನೂ ನಡೆಸಿದರು. ಬಸಿಯುವ ಬೆವರು, ಕಟ್ಟಿದ ದಮ್ಮಿನ ನಡುವೆಯೂ ಪೊದೆ ಮೀಸೆಗಳು ನಗೆ ಹೂತುಹಾಕದಂತೆ ಹಲ್ಲು ಕಾಣಿಸಿ ನಗುತ್ತಾ ಕೈ ಬೀಸಿ ಸ್ಪಂದಿಸುತ್ತಾ ಸಾಗಿದೆ. ನನ್ನ ಕನ್ನಡದ ಉಲಿ ಕೇಳಿದಾಗಂತೂ ಅವರಿಗೆಲ್ಲ ಆಕ್ಷರ್ಯವೋ ಆಕ್ಷರ್ಯ.
ವಿದ್ಯೋದ್ದಿಮೆಗಳನ್ನು ದಾಟಿ, ಮೇರ್ಲಪದವು ಹಾದು ಮತ್ತೊಂದೇ ಕ್ರಿಶ್ಚಿಯನ್ ಪ್ರೌಢಶಾಲೆಯನ್ನೂ ಕಳೆದ ಮೇಲೆ ಬಲಕ್ಕೆ ಹೊರಳುತ್ತದೆ ನೀರ್ಮಾರ್ಗದ ಮುಖ್ಯ ರಸ್ತೆ. ಆದರೆ ನೇರಕ್ಕೂ ಒಂದು ಸುಸ್ಥಿತಿಯ ಡಾಮರು ಮಾರ್ಗ ಕಂಡಾಗ ಕುತೂಹಲ ನನ್ನನ್ನು ಅತ್ತ ಎಳೆಯಿತು. ಮತ್ತೆ ಅಂಕಾಡೊಂಕು, ಗುಡ್ಡೆಯಿಳಿ, ಗುಡ್ಡೇರು ಎನ್ನುತ್ತಿದ್ದಂತೆ ಇನ್ನೊಂದು ಕವಲು. ವಿಚಾರಿಸಿದೆ – ಬಲಕ್ಕೆ ನೀರ್ಮಾರ್ಗ, ಎಡಕ್ಕೆ ಅಡ್ಯಾರ್ ಕಟ್ಟೆ. ಹನಿ ಮಳೆ ಮುಂದುವರಿದಿತ್ತು, ಹೆದ್ದಾರಿಗೇ ಮರಳಲು ಮನಸ್ಸು ಮಾಡಿದೆ. ವಳಚ್ಚಿಲ್ ಗುಡ್ಡೆಯನ್ನು ಸಂಕ್ಷಿಪ್ತ ಓಟದಲ್ಲಿ ತೀವ್ರವಾಗಿ ಏರಿದ್ದನ್ನು ಇಲ್ಲಿ ಬಲು ದೀರ್ಘ ಇಳಿಜಾರುಗಳಲ್ಲಿ ಮುಗಿಸಿದೆ. ರೈಲ್ವೇ ಹಳಿ ದಾಟುವ ನೂರಿನ್ನೂರು ಮೀಟರಿನಷ್ಟು ಮಾತ್ರ ಗೊಸರೆದ್ದ ಕಚ್ಚಾ ಮಾರ್ಗ. (ಮೂರು ದಿನದ ಹಿಂದೆ ಕಣ್ಣೂರಿನಿಂದ ರೈಲ್ವೇ ಹಳಿಗೇರಿದ್ದಾಗ ಚಕ್ರ ಠುಸ್ಸಾಗದಿದ್ದರೆ ನಾನು ಇಲ್ಲಿಗೇ ಬರುತ್ತಿದ್ದೆ) ಮತ್ತಿನಷ್ಟೂ ಹಳೆಗದ್ದೆಗಳು ವಸತಿ ವಠಾರಗಳಾಗುತ್ತಿವೆ, ಗದ್ದೆಯ ಬದುವಂತೂ ದೃಢ ಕಾಂಕ್ರೀಟ್ ಹಾಸನ್ನೇ ಹೊದ್ದು, ಸವಾರಿ ಸುಖದ ಲೆಕ್ಕದಲ್ಲಿ ನಿಶ್ಚಿಂತೆ! (ಗದ್ದೆಯ ಲೆಕ್ಕ ಕೇಳಬೇಡಿ)
ಹೆದ್ದಾರಿ ಬಂತು. ಬಲಕ್ಕೆ ಹೊರಳುವ ಮೊದಲು ಹೊಳೆಯಂಚು ನೋಡುವ ಉತ್ಸಾಹ ಹೆಚ್ಚಿ, ರಸ್ತೆಯಾಚೆಯೂ ಇದ್ದ ಕಿರು ಕಾಂಕ್ರೀಟ್ ರಸ್ತೆಯಲ್ಲಿ ಮುಂದುವರಿದೆ. ಗಲ್ಲಿಮಾರ್ಗ ಇದ್ದ ನೂರಿನ್ನೂರು ಮೀಟರಿನಲ್ಲೇ ಎರಡು ಬಾರಿ ಅತ್ತಿತ್ತ ತಿರುಗಾಡಿಸಿ ಹೊಳೆಬದಿ ಕಾಣಿಸಿತು. ಸುತ್ತಣ ಮಣ್ಣು ಕೊರೆಕೊರೆದು ಹೋಗಿ, ದಿಬ್ಬದ ಮೇಲೇ ನಿಂತಂತಿರುವ ಭಾರೀ ಮಳೆಮರ (ಬುಡ ಸಹಿತ ಮಗುಚುವಲ್ಲಿ ಇದರ ಖ್ಯಾತಿ ಅಪಾರ) ಶೋಭಾಯಮಾನವಾಗಿತ್ತು. ಹಿಂದೊಮ್ಮೆ ಅದರ ಬೇರಗಟ್ಟೆಗಳ ನಡುವಣ ನೀರು ಕೆಸರಿನ ನೆಲದಲ್ಲೇ ನಾವು ದೋಣಿಯೇರಿದ್ದು ನೆನಪಾಯ್ತು. ಇಂದು ಆ ಮಹಾಮರದ ಬಡ ಒಕ್ಕಲಿನಂತೇ ತೋರುವ, ಒಡಕು ಕಲ್ನಾರು ಶೀಟ್ ಹೊದಿಸಿ ಮಾಡಿದ ಪುಟ್ಟ ಮಂಟಪ, ಬೇಲಿ ಸಹಿತ ದೋಣಿಗಟ್ಟೆ ಇತ್ತು. ಮಂಟಪ ತುಂಬಾ ಜನ ಕಾತರದ ಕಣ್ಣಾಗಿ ನದಿ ಮಧ್ಯೆ ಬರುತ್ತಿರುವ ದೋಣಿ ನೋಡುತ್ತಿದ್ದರು. ಪಶ್ಚಿಮದಿಂದ ದಟ್ಟ ಕರಿನೆರಳು ಆಕಾಶ-ಭೂಮಿ ಒಂದು ಮಾಡುವ ಪರದೆ ಎಳೆದಂತೆ ಮೇಲೇರಿ ಬರುತ್ತಾ ಇತ್ತು. ಮುರುಕು ಮಂಟಪಕ್ಕೆ ಪಶ್ಚಿಮದ ಗಾಳಿ, ಇರಿಚಲು ತಡೆಯಲು ಯಾರೋ ಉದಾರವಾಗಿ ಕಟ್ಟಿದ್ದ ಸಿಲ್ಪಾಲಿನ್ ಶೀಟು ಗಾಳಿಗೆ ಬಡಕೊಳ್ಳುತ್ತಿತ್ತು – “ಬೇಗ ಬೇಗಾ.” (ಸಿಟಿ ಬಸ್ ನಿರ್ವಾಹಕರ “ಬೇಕ ಬೇಕಾ” ಕೇಳಿ ಕೆಪ್ಪಾದ ಮಂದಿಗೆ ಇದು ಅರ್ಥವಾಗಿರಲಾರದು) ಅಂಬಿಗ ಅನುಭವಿ, ಸಕಾಲಕ್ಕೆ ದಡ ಸೇರಿಸಿದ. ಜನ ದಡಬಡ ಮಂಟಪದ ಒತ್ತಡ ಹೆಚ್ಚಿಸುತ್ತಿದ್ದಂತೆ ಅಪ್ಪಳಿಸಿತು ಮಳೆ. ಮರ ತಲೆಗೆದರಿ ಅಪಾಯಕಾರಿಯಾಗಿ ಹೊಯ್ದಾಡುತ್ತಿತ್ತು. ನಿತ್ಯ ಸಾಗು(ಯು?)ವ ಜನ ಜಾತ್ಯಾತೀತವಾಗಿ, ಪಕ್ಷಾತೀತವಾಗಿ, ಲಿಂಗಬೇಧದ ಹುಯ್ಲಿಲ್ಲದೆ ಪಿಟಿಪಿಟಿ ಕಣ್ಣು ಬಿಡುತ್ತಲಿದ್ದರು.
ಪಾಣೆಮಂಗಳೂರು ಕಳೆದ ಮೇಲೆ ಉಳ್ಳಾಲದವರೆಗೂ ನೇತ್ರಾವತಿಯ ಇದ್ದಂಡೆಯ ಸಾವಿರಾರು ಸಾಮಾನ್ಯರ ಸಂಪರ್ಕ ಸಮಸ್ಯೆಗೆ ಹಲವು ಮುಖಗಳಲ್ಲಿ ಇಂದು ಸುಲಭವಾಗಿ ಒದಗುತ್ತಿರುವುದು ಇಂಥವೇ ಅಪರಿಪೂರ್ಣ ದೋಣಿಸೇವೆ ಮಾತ್ರ. ಸ್ಮಶಾನ ವೈರಾಗ್ಯದಂತೇ ಪ್ರತಿ ಮಳೆಗಾಲದಲ್ಲಿ ಆಡಳಿತಕ್ಕೆ ವಕ್ಕರಿಸುವ ರೋಗ – ಸೇತು ನಿರ್ಮಾಣ ಘೋಷಣೆ, ಈ ವರ್ಷವೂ ಕೇಳುತ್ತಿದೆ. ಬಡಜೀವನಗಳು ತೊಳೆದು ಹೋಗಬೇಕು, ದೋಣಿ ಮಗುಚಿಯೋ ಮತ್ತೊಂದರಲ್ಲೋ ಜೀವಗಳೇ ಜಲಸಮಾಧಿ ಕಾಣಬೇಕು – ಅದುವರೆಗೆ ಈ ರೋಗ ಪ್ರಕಟವಾಗುವುದೇ ಇಲ್ಲ. “ವಿದ್ಯಾ ಮತ್ತು ಉದ್ಯಮಕ್ಷೇತ್ರಕ್ಕೆ ಅವಶ್ಯ ಪರ್ಯಾಯ, ದುರ್ಲಭವಾಗುವ ಪೆಟ್ರೋ ಉತ್ಪನ್ನಗಳ ಉಳಿತಾಯಕ್ಕೆ, ಅದರಿಂದ ಪರಿಸರ ಸಂರಕ್ಷಣೆಗೆ, ಮಾನವ ಶ್ರಮ ಮತ್ತು ಸಮಯವರ್ಧನೆಗೆಲ್ಲಾ ಒಂದೇ ಮದ್ದು, ಬಲು ಪರಿಣಾಮಕಾರಿ ಚಿಕಿತ್ಸೆ – ಸೇತುಬಂಧ. ಅದು ತೂಗು ಸೇತುವೆಯಿರಬಹುದು, ಚತುಷ್ಪಥಕ್ಕೆ ಹೊಂದುವ ಕಾಂಕ್ರೀಟಿನದ್ದೇ ಇರಬಹುದು, ಜಪಾನ್ ತಜ್ಞರನ್ನು ಕರೆಸಿ ಸುರಂಗ ಮಾರ್ಗವೂ ಆಗಬಹುದು…” ಇವೆಲ್ಲಾ ರೋಗ ಲಕ್ಷಣಗಳು, ತೀವ್ರತೆಯ ಪರಿಣಾಮಗಳು. ನಾನೇನೂ ಹೊಸದು ಹೇಳುತ್ತಿಲ್ಲ, ಹೊಸೆದೂ ಹೇಳುತ್ತಿಲ್ಲ – ಇದು ಪ್ರತಿ ವರ್ಷವೂ ಮರುಕಳಿಸುವ ರೋಗ.
ಅಲ್ಲಿದ್ದವರ ಪುಣ್ಯಫಲ ಎಷ್ಟು ಸಂದಿತೋ ತಿಳಿದಿಲ್ಲ – ಕಾಲೇ ಗಂಟೆಯಲ್ಲಿ ಮಳೆಯಬ್ಬರ ಇಳಿಯಿತು, ಹೊಳೆಯುಕ್ಕಲಿಲ್ಲ, ಮರ ಉರುಳಲಿಲ್ಲ. ಇನ್ನು ನನ್ನ ರಾಣೀಕೋಟು ಸುಧಾರಿಸೀತೆಂದು ಏರಿಸಿ, ಅದೃಷ್ಟವನ್ನು ನೆನೆದುಕೊಂಡು ಮತ್ತೆ ಕಣ್ಣೂರು, ಪಂಪ್ವೆಲ್… ಮನೆ.
[ಬಾಲ್ಯಕಾಲದ ಕಥಾಶ್ರವಣದ ಕೊನೆಯಲ್ಲಿ ಕೇಳಿದಂತೇ ಈ ಬಾರಿಯೂ ನಾನೇನೋ ಕಥೆಯನ್ನು ಅಂತರ್ಜಾಲದ ಕಾಡಿಗೆ ಬಿಟ್ಟು ಸುಖವಾಗಿ ಮನೆ ಸೇರಿದ್ದೇನೆ. ಆದರೆ ಓದಿದ ನಿಮ್ಮಲ್ಲಿನ ಇಂಥ ಕಥೆಗಳು ಕಾಡು ಕಾಣದೇ ನಿಮ್ಮನ್ನು ಕಾಡುತ್ತಿರಬೇಕಲ್ಲಾ? ಇಲ್ಲಿನ ಪ್ರತಿಕ್ರಿಯಾ ಅಂಕಣದಲ್ಲಿ ಕಥಿಸಿ ಹಗುರಾಗಿ]
ಸುಂದರವಾದ ಚಿತ್ರಗಳು. ಉತ್ತಮ ಬರವಣಿಗೆ, ನಿಮ್ಮೊಡನೆಯೆ ಸೈಕಲ್ ಯಾನ ಮಾಡಿದಂತಾಯಿತು. ಧನ್ಯವಾದಗಳು.
ನಮ್ಮ ಸುತ್ತು ಮುತ್ತಲು ಎಷ್ಟೊಂದು ಸ್ತಳ “ಪುರಾಣಗಳಿವೆ” ಎಂದು ನಿಮ್ಮ ಸೈಕಲ್ “ಪ್ರಯಾಣ” ಗಳಿಂದ ತಿಳಿಯುತ್ತದೆ. ನಾನೇ ಸೈಕಲ್ ಮೇಲೆ ಇದ್ದಂತೆ ಭಾಸವಾಯಿತು !!
ನಡೆದು ನೋಡು ಕೊಡಗಿನ ಬೆಡಗ ಎಂಬ ಮಾತನ್ನು ಬದಲಾಯಿಸಿ ತುಳಿದು ನೋಡು ಊರಿನ ಬೆಡಗ ಎನ್ನಬೇಕು. ಕಾಲಚಕ್ರಕ್ಕೆ ಹಿಂದಿಯಲ್ಲಿ ಪ್ರೇಮಚಂದ್ ಪೈರ್ ಗಾಡಿ ಎಂಬ ಪದ ಬಳಸಿರುವುದು ನೆನಪಾಯಿತು. ‘ಅವಸರವೂ ಸಾವಧಾನದ ಬೆನ್ನೇರಿ’ದಂತೆ ಸೈಕಲ್ ಗಾಮಿಯಾದರೆ.ಮಂದಗಾಮಿ, ತೀವ್ರಗಾಮಿಗಳಿಂದ ಬೇರಾಗಬಹುದು. ನನಗೂ ಸೈಕಲ್.ಎಲ್ಲಿಯಾದರೂ ಬೀಗ ಹಾಕಿಟ್ಟು ಹೋದರೂ ಉಳಿದ ಭಾಗಗಳ ಸುಸ್ಥಿತಿಯ ಖಾತ್ರಿ ಇರುವುದಿಲ್ಲ.ಎಂಬ ಆತಂಕವಿರುತ್ತದೆ. ಸಂತೆಯೊಳಗೊಂದು ಸೈಕಲ್ ನಿಲ್ಲಿಸಿ ಅಂಜಿದೊಡೆಂತಯ್ಯಾ?
ಈ ಪುಟ ಮೊಬೈಲಿಗೂ ಹೊಂದಿಕೊಳ್ಳುತ್ತೆ ಅನ್ನೋದು ಸಂತೋಷದ ವಿಷಯ. ಆದರೆ, ಮೊಬೈಲಿನಲ್ಲಿ ಮುಂದೆ ಓದಿ ಅನ್ನೋ ಕೊಂಡಿಯನ್ನು ಒತ್ತಿದರೆ ಮತ್ತೆ ಮತ್ತೆ ಅದೇ ಪುಟ ತೆರೆದುಕೊಳ್ತಾ ಇದೆ. ಮುಂದೆ ಓದಲಾಗುತ್ತಿಲ್ಲ 🙁