ಅಧ್ಯಾಯ ಇಪ್ಪತ್ತೆಂಟು
[ಡೇವಿಡ್ ಕಾಪರ್ಫೀಲ್ಡ್‍ನ ಜೀವನ ವೃತ್ತಾಂತ ಮತ್ತು ಅನುಭವಗಳು, ಕಾದಂಬರಿ. ಮೂಲ ಇಂಗ್ಲಿಷಿನಲ್ಲಿ ಚಾರ್ಲ್ಸ್ ಡಿಕನ್ಸ್, ಕನ್ನಡ ಭಾವಾನುವಾದ ಎ.ಪಿ. ಸುಬ್ಬಯ್ಯ]
ವಿ-ಧಾರಾವಾಹಿಯ ಮೂವತ್ತನೇ ಕಂತು
ನಾನು ಗೊತ್ತುಮಾಡಿದ ಔತಣದ ದಿನ ಬಂತು. ನನಗೆ ಆವರೆಗೆ ಆಹಾರವಿದ್ದುದು, ಹೆಚ್ಚಿನ ಅಂಶ, ಡೋರಾ ಮತ್ತು ಕಾಫಿ ಮಾತ್ರ. ಮನಸ್ಸಿಗೆ ಸ್ವಾಸ್ಥ್ಯವಿಲ್ಲದಿದ್ದಾಗ ಜಠರಾಗ್ನಿ ಮಂದವಾಗುವುದೆಂಬ ಮಾತಿನ ಅನುಭವ ನನಗೆ ತುಂಬಾ ಆಗಿತ್ತು. ಡೋರಾಳನ್ನು ಮನಸ್ಸಿನಿಂದ ಮರೆಸಿ ಹಸಿವು ಎದುರು ಬರುವುದಾದರೆ, ಅಂಥ ಹಸಿವೆ ಡೋರಾಳಿಗೆ ಅಮಂಗಲವೆಂದೇ ನಾನು ನಂಬಿದ್ದೆ. ಆದರೂ ನಾನಾಗಿಯೇ ಆಮಂತ್ರಿಸಿದ್ದ ಅತಿಥಿಗಳ ಔತಣದ ಏರ್ಪಾಡುಗಳನ್ನು ಮಾಡುವುದು ನನ್ನ ಕರ್ತವ್ಯವೆಂದೇ ಆ ಏರ್ಪಾಡುಗಳನ್ನೆಲ್ಲ ಮಾಡಿದೆ. ಅತಿಥಿಗಳನ್ನು ಎದುರು ನೋಡುತ್ತಿದ್ದ ಹಾಗೆಯೇ ಅವರೆಲ್ಲರೂ ಕ್ಲುಪ್ತ ಸಮಯದಲ್ಲಿ ನನ್ನ ಮನೆಗೆ ಬಂದರು. ಮಿ. ಮೈಕಾಬರರು ಅವರ ಬಿಗಿಯಾದ ಇಜಾರು, ರಟ್ಟಿನಂಥ ಮತ್ತೂ ದೊಡ್ಡ ಶರ್ಟುಕಾಲರನ್ನು ಕಾಣಿಸಿಕೊಂಡು, ಬಹು ಹರ್ಷಪುಳಕಿತರಾಗಿ ಬಂದರು. ಅವರ ಹಿಂದಿನಿಂದ ಟ್ರೇಡಲ್ಸ್ ಬಂದನು. ಟ್ರೇಡಲ್ಸನ ಜತೆಯಲ್ಲಿ ಅವನ ಕೈಯ್ಯನ್ನು ಗೌರವಕ್ಕಾಗಿ ಆಧರಿಸಿಕೊಂಡು, ಮಿಸೆಸ್ ಮೈಕಾಬರರು ಬಂದರು. ಅವರೆಲ್ಲರನ್ನು ಸ್ವಾಗತಿಸಿ, ಮರ್ಯಾದೆಯಿಂದ ಕೂರಿಸಿ ಕುಶಲ ಪ್ರಶ್ನೆಗಳನ್ನು ಮಾಡಿದೆನು. ಮಿಸೆಸ್ ಮೈಕಾಬರರು ಊಟಕ್ಕೆ ಮೊದಲಿನ ಅಲಂಕಾರಗಳನ್ನು ಮಾಡಿಕೊಳ್ಳುವುದಕ್ಕಾಗಿ ಪಕ್ಕದ ಕೋಣೆಯಲ್ಲಿ ತಕ್ಕ ಏರ್ಪಾಡನ್ನು ಮಾಡಿದ್ದೆ. ನಾನು ಊಟದ ವ್ಯವಸ್ಥೆ ಮಾಡುತ್ತಿದ್ದ ಸಮಯದಲ್ಲಿ ಮಿಸೆಸ್ ಮೈಕಾಬರರು ಅಲಂಕಾರ ಮಾಡಿಕೊಳ್ಳತೊಡಗಿದರು. ನನ್ನ ಏರ್ಪಾಡನ್ನು ಮೆಚ್ಚಿ ಮಿಸೆಸ್ ಮೈಕಾಬರರು ಪತಿಯನ್ನು ಕರೆದು ಅವುಗಳನ್ನೆಲ್ಲ ತೋರಿಸಿದರು.
“ಈ ಏರ್ಪಾಡುಗಳನ್ನೆಲ್ಲ ನೋಡುವಾಗ, ನಮ್ಮ ಲಗ್ನದ ಮೊದಲಿನ ಪ್ರಣಯದ ದಿನಗಳು ನೆನಪಿಗೆ ಬರುತ್ತದಲ್ಲವೆ, ಎಮ್ಮಾ” ಎಂದಂದುಕೊಂಡರು ಮಿ. ಮೈಕಾಬರರು. ಅನಂತರ ಊಟವನ್ನು ಪ್ರಾರಂಭಿಸಿದೆವು. ಊಟದ ಮುಖ್ಯ ವಸ್ತುವಾಗಿದ್ದ `ಪಂಚ್’ ಪಾನೀಯವನ್ನು ತಯಾರಿಸುವ ಗೌರವವನ್ನು ಮಿ. ಮೈಕಾಬರರು ವಹಿಸಿಕೊಂಡರು. ಆ ಪಾನೀಯಕ್ಕೆ ಬೇಕಾದ ಸಕ್ಕರೆ, ಪರಿಮಳ ದ್ರವ್ಯ, ನಿಂಬೆಹಣ್ಣು, ಬ್ರಾಂದಿ, ಕುದಿಯುವ ನೀರು, ಆಗ ತಾನೆ ಸುಲಿದು ತೆಗೆದ ನಿಂಬೆ ಹಣ್ಣಿನ ಸಿಪ್ಪೆ ಇವೆಲ್ಲವನ್ನು, ಕ್ರಮ ಪ್ರಕಾರ ತೂಕ, ಅಳತೆ, ಹಾಳಿತಗಳಿಂದ ಬೆರೆಸಿ ತಯಾರಿಸುವ ಕೌಶಲ ಮಹತ್ವದ್ದೇ ಆಗಿದ್ದಂತೆ ಮಿ. ಮೈಕಾಬರರು ತೋರುತ್ತಿದ್ದರು. ಊಟ ಬಡಿಸಲು ಒಬ್ಬ ಕೆಲಸದ ಹುಡುಗಿಯನ್ನು ಗೊತ್ತುಮಾಡಿಕೊಂಡಿದ್ದೆ. ಅವಳು ಸಾರನ್ನು ತರುವಾಗ ಸ್ವಲ್ಪ ಅಂಶವನ್ನು ತಿಳಿಯದೆ ಮೈಗೆ ಸುರಿದುಕೊಂಡಳು. ಊಟದ ಮಟ್ಟಿಗೂ ಬಡಿಸೋಣದರ ಮಟ್ಟಿಗೂ ಅಂದಿನ ಔತಣ ಬಹು ಪರಿಷ್ಕಾರವಾಗಿಯೇ ನಡೆದಿದ್ದರೂ ಆ ಸಾರು ಚೆಲ್ಲಿದ ಮಟ್ಟಿಗೆ ಮಾತ್ರ ಸ್ವಲ್ಪ ಕೊರತೆಯೂ ನಡೆದಿತ್ತು. ನಾನು ಅತಿಥಿಗಳನ್ನು ಸಂತೋಷಪಡಿಸುತ್ತಾ ಉಪಚಾರಕ್ಕಾಗಿ ಬಡಿಸೋಣದರ ತಪ್ಪನ್ನು ಒಪ್ಪಿ ಕ್ಷಮೆ ಕೇಳಿಕೊಂಡೆನು. ಇದನ್ನು ಕೇಳಿ ಮಿ. ಮೈಕಾಬರರು ನನ್ನ ಸಮಾಧಾನಕ್ಕಾಗಿಯೂ ಅವರೆಲ್ಲರ ತೃಪ್ತಿ ಸಂತೋಷಗಳಿಗಾಗಿಯೂ ಕೆಲವು ಮಾತುಗಳನ್ನಾಡಿದರು –
“ನನ್ನ ಧರ್ಮಪತ್ನಿ ಎಮ್ಮನಿಗೂ ನನಗೂ ಇರುವ ಅನುಭವ ಮಿ. ಕಾಪರ್ಫೀಲ್ಡ್, ನಿಮಗಿರಲು ಸಾಧ್ಯವಿಲ್ಲ. ಎಂಥ ಶಿಸ್ತುಳ್ಳ ಸಂಸಾರದ ಔತಣಗಳಲ್ಲಾದರೂ ಅವುಗಳ ಪಾವಿತ್ರ್ಯವನ್ನು, ಅವುಗಳ ಪರಿಷ್ಕಾರತೆಯನ್ನೂ ಹೆಚ್ಚಿಸಿ ಬೆಳಗಿಸುವ ಶಕ್ತಿ, ಅರ್ಥಾತ್ ಆ ದೈವಿಕ ಶಕ್ತಿಯ ಪೂರ್ಣ ಸ್ವರೂಪಳಾದ `ಪತ್ನಿ’ ಎಂಬವಳಿಲ್ಲದಿದ್ದಲ್ಲಿ ಇಂಥಾ ಸಂದರ್ಭಗಳು ಬಂದೇ ಬರುವುವು. ಒಂದು ಅಗ್ಗಿಷ್ಟಿಕೆ, ಬಾಣಲೆ, ಮತ್ತಿತರ ವಸ್ತುಗಳನ್ನು ಇಲ್ಲಿ ತಂದುಕೊಟ್ಟರೆ, ನಾವು ಊಟಮಾಡುತ್ತ ಕಜ್ಜಾಯವನ್ನೂ ಬೇಯಿಸಿಕೊಳ್ಳಬಹುದು” ಎಂದಂದರು ಮಿ. ಮೈಕಾಬರರು.
ಇಂಥ ಕೆಲಸಗಳಲ್ಲಿ ತುಂಬಾ ಕೌಶಲವಿರುವ ಮಿ. ಮೈಕಾಬರರು, ಅವರು ಕೇಳಿದ ವಸ್ತುಗಳನ್ನು ಒದಗಿಸಿಕೊಟ್ಟ ಕೂಡಲೇ ಕಜ್ಜಾಯವನ್ನು ತಯಾರಿಸುತ್ತಲೂ ಬಡಿಸುತ್ತಲೂ ಬಂದರು. ಈ ವಿಧದಿಂದ ನಾವು ಊಟ, ಉಪಚಾರಗಳ ಸಂತೋಷ ಶಿಖರದಲ್ಲಿದ್ದಾಗಲೇ ಬಹು ಮೃದು ಹೆಜ್ಜೆಯಿಂದ ಲಿಟ್ಮರನು ಬಾಗಿಲ ಬಳಿ ಕಾಣಿಸಿಕೊಂಡನು. ಅವನ ಗಾಂಭೀರ್ಯವನ್ನು ಕಂಡು ನಮ್ಮ ಹರ್ಷೋದ್ಗಾರ ಒಂದು ಸ್ಥಿಮಿತಕ್ಕೆ ಬಂತು. ಲಿಟ್ಮರ್ ನಮ್ಮೆಲ್ಲರನ್ನೂ ಅಲ್ಲಿನ ವ್ಯವಸ್ಥೆಗಳನ್ನೂ ನೋಡುತ್ತಾ ಬಹು ವಿನಯದಿಂದ –
“ನನ್ನ ಅನಿರೀಕ್ಷಿತ ಪ್ರವೇಶದ ಬಗ್ಗೆ ನನ್ನನ್ನು ದಯಮಾಡಿ ಕ್ಷಮಿಸಬೇಕು, ಸರ್. ನಮ್ಮ ಯಜಮಾನರೇನಾದರೂ ಇಲ್ಲಿಗೆ ಬಂದಿರುವರೇ ಎಂದು ವಿಚಾರಿಸಿಕೊಳ್ಳಲು ಇಲ್ಲಿಗೆ ಬಂದೆ ಸರ್” ಎಂದನು. “ಸ್ಟೀಯರ್ಫೋತ್ ಇಲ್ಲಿಗೆ ಬರಲಿಲ್ಲ. ಅವರು ಆಕ್ಸಫರ್ಡಿನಲ್ಲಿದ್ದಾರೆಯೇ?” “ಅವರು ಎಲ್ಲಿರುವರೆಂದು ತಿಳಿಯಲು ನಾ ಬಂದದ್ದು, ಸರ್.” “ಅವರು ಆಕ್ಸಫರ್ಡಿಗೆ ಹೋಗುವರಾಗಿ ತಿಳಿಸಿದ್ದರು. ಅದು ಗೊತ್ತಿದೆಯೇ?” “ನಾನೇ ಬಡಿಸಿಬಿಡುತ್ತೇನೆ, ಸರ್” ಎಂದನ್ನುತ್ತಾ – ನನ್ನ ಪ್ರಶ್ನೆಗೆ ಉತ್ತರಕೊಡಬೇಕಾದುದನ್ನು ತಪ್ಪಿಸಿ, ಮಿ. ಮೈಕಾಬರರ ಕೈಯ್ಯಿಂದ ಪಾತ್ರೆ ತೆಗೆದುಕೊಂಡು, ಬಡಿಸುವುದಕ್ಕಾಗಿಯೇ ನಾವು ಅವನನ್ನು ಬರಮಾಡಿಕೊಂಡಿದ್ದಂತೆ ಲಿಟ್ಮರನು ನಮಗೆ ಬಹು ಎಚ್ಚರಿಕೆಯಿಂದ, ಪರಿಷ್ಕಾರತೆಯಿಂದ, ವಿನಯದಿಂದ – ಆದರೂ ಎದ್ದು ಕಾಣುವ ಗಾಂಭೀರ್ಯದಿಂದ ಬಡಿಸತೊಡಗಿದನು. ಅವನ ಯಜಮಾನನ ಕುರಿತಾಗಿದ್ದ ವಿಷಯಗಳ ಗೋಪ್ಯತೆಯನ್ನು ಅವನ ಉತ್ತರದಲ್ಲಿ- ಅಂತರ್ಗತವಾಗಿ – ನನಗೆ ತಿಳಿಸಿದ್ದ ಲಿಟ್ಮರನನ್ನು ನೋಡುತ್ತಿದ್ದ ಹಾಗೆಯೇ ನಾನು ಬಹು ಚಿಕ್ಕವನಾಗಿ ಹೋದೆನು. ನಮ್ಮ ಊಟವಾದನಂತರ ನಮ್ಮ ಎಂಜಲು, ಪಾತ್ರೆಗಳನ್ನೂ ಅನಗತ್ಯವಾಗಿದ್ದ ಇತರ ಎಲ್ಲಾ ವಸ್ತುಗಳನ್ನೂ ಹೊರಗೆ ತೆಗೆದುಕೊಂಡು ಹೋಗಿ ಇರಿಸಿ, ನಿಶ್ಶಬ್ದವಾಗಿ ಬಾಗಿಲ ಕಡೆಗೆ ಸರಿಯುತ್ತಾ ನಮಗೆ ನಮಸ್ಕರಿಸಿ ಲಿಟ್ಮರನು ಮಾಯವಾದನು.
ಲಿಟ್ಮರ್ ಹೋದನಂತರ ನಮ್ಮ ಹಿಂದಿನ ಉತ್ಸಾಹವೆಲ್ಲ ಬಂತು. ಮಿ. ಮೈಕಾಬರರು ಜೀವನದ ಅನೇಕ ಸಮಸ್ಯೆಗಳನ್ನು ಕುರಿತಾಗಿ ಮಾತಾಡಿದರು. ಒಬ್ಬ ಯೋಗ್ಯ ಪ್ರಜೆಯನ್ನು ಕುರಿತು ಸಮಾಜಕ್ಕೂ ಸರಕಾರಕ್ಕೂ ಇರುವ ಜವಾಬ್ದಾರಿಕೆಗಳು ಏನೆಂಬುದನ್ನು ವಿವರಿಸಿದರು. ಗಂಡನಿಗಿದ್ದಷ್ಟೆ ಸಂಸಾರದ ಸುಖದುಃಖಗಳ ಅನುಭವವಿದ್ದ ಮಿಸೆಸ್ ಮೈಕಾಬರರು ಇನ್ನೂ ಹೆಚ್ಚು ಮಾತಾಡಿದರು. ಅವರು ಉತ್ಸಾಹದಲ್ಲಿ ತನ್ನ ಪತಿಯನ್ನೂ ಮೀರಿಸುತ್ತಿದ್ದರು. `ನಮ್ಮ ಎಮ್ಮ ಹುಡುಗಿಯಾದರೂ ಹುಡುಗರಿಗಿಂತಲೂ ಹೆಚ್ಚಾದ ಬುದ್ಧಿಶಕ್ತಿ ಮತ್ತು ಕಾರ್ಯನಿರ್ವಹಣಾಶಕ್ತಿ ಉಳ್ಳವಳು’ ಎಂದು ಅವರ ತಂದೆ ಅವರನ್ನು ಕುರಿತಾಗಿ ಹೇಳುತ್ತಿದ್ದ ಮಾತುಗಳನ್ನು ಪುನಃ ಪುನಃ ನಮಗೆ ತಿಳಿಸುತ್ತಾ ಆ ಮಾತನ್ನು ನಿದರ್ಶನಗಳ ಮೂಲಕವೇ ರುಜುಪಡಿಸುತ್ತಿದ್ದರು. ಇದೇ ಧಾಟಿಯಿಂದ ಮಿಸೆಸ್ ಮೈಕಾಬರರು ಮಾತಾಡುತ್ತಾ – “ಸಮಾಜದಲ್ಲಿ ಉದ್ಭವಿಸಿ, ಸಮಾಜದ ಸ್ವಂತ ಒಂದು ಫಲದಂತಿರುವ ಮಿ. ಮೈಕಾಬರರವರನ್ನು ಕಾಪಾಡಿಕೊಂಡು, ಅವರ ಅಮೋಘ ಶಕ್ತಿಗಳನ್ನುಪಯೋಗಿಸಿಕೊಂಡು ಸಮಾಜ ಲಾಭ ಪಡೆಯಬಹುದು ಮತ್ತೂ ಸುಖ ಪಡೆಯಬಹುದು. ಅಥವಾ ಅದೇ ಸಮಾಜ ತನ್ನ ಬುದ್ಧಿ ಸಂಕುಚಿತತೆಯಿಂದ ತನ್ನದೇ ಒಂದಂಶವಾದವರನ್ನು ದುರ್ಲಕ್ಷಿಸಿ, ಅವರನ್ನೂ ಅವರ ಶಕ್ತಿಗಳನ್ನೂ ಸಾಯಿಸಿ ತನ್ನ ಕರ್ತವ್ಯಭ್ರಷ್ಟತೆಯಿಂದ ಸಮಾಜ ಶಿಥಿಲವಾಗುತ್ತಾ ಕೊನೆಗೆ ಲಯವಾಗಲೂಬಹುದು” ಎಂದರು. ಪತ್ನಿ ಈ ರೀತಿಯಲ್ಲಿ ಸಂದರ್ಭಗಳನ್ನು ವಿವರಿಸುತ್ತಿದ್ದಾಗ ಮಿ. ಮೈಕಾಬರರು ಸೊಂಟವನ್ನು ನೆಟ್ಟಗೆ ಮಾಡಿಕೊಂಡು, ಗಂಭೀರತೆಯನ್ನು ತಾಳಿ, ತನ್ನ ಶಕ್ತಿ ಎಷ್ಟಿದೆಯೆಂಬುದನ್ನು ಸಮಾಜ ಈಗಲಾದರೂ ಗ್ರಹಿಸಿ – ಈವರೆಗಿನ ಉಪೇಕ್ಷೆಯನ್ನು ತೊರೆದು, ಅಗತ್ಯವಿದ್ದ ರೀತಿಯಲ್ಲಿ ತನ್ನ ಶಕ್ತಿಯನ್ನು ಉಪಯೋಗಿಸಿಕೊಂಡು ತಾನು ನಾಶವಾಗುವುದನ್ನು ತಪ್ಪಿಸಿಕೊಳ್ಳುವುದೇ ಎಂದು ಪ್ರಶ್ನಿಸುತ್ತಿರುವಂತೆ ನಮ್ಮೆಲ್ಲರನ್ನು ನೋಡಿದರು.
ಮಿಸೆಸ್ ಮೈಕಾಬರರು `ಪಂಚ್’ ಪಾನೀಯವನ್ನು ಬೇಕಷ್ಟು ಕುಡಿದಿದ್ದರು. ಅವರ ಮಾತಿನ ಸ್ಫೂರ್ತಿ ಹೆಚ್ಚುತ್ತಿತ್ತು. ಅವರು ಮಾತನ್ನು ಮುಂದುವರಿಸುತ್ತಾ – “ಸಮಾಜದ ಜವಾಬ್ದಾರಿಯಿರುವಂತೆಯೇ ನಮ್ಮದೂ ಜವಾಬ್ದಾರಿಯಿದೆಯೆಂದು ನಾನು ಒಪ್ಪುತ್ತೇನೆ. ನಾವು ನಮ್ಮ ಕಡೆಯ ಜವಾಬ್ದಾರಿಯನ್ನು ಒಪ್ಪುತ್ತೇವೆ, ನಿರ್ವಹಿಸಿರುತ್ತೇವೆ. ನಾವು ಗೋಧಿಯ ವ್ಯಾಪಾರ ಮಾಡಿದೆವು, ಪ್ರಯೋಜನವಾಗಲಿಲ್ಲ. ಕಲ್ಲಿದ್ದಲಿನ ಕೈಗಾರಿಕೆಯನ್ನು ತೊಡಗಿದೆವು – ತೊಡಗಿದಂತೆಯೇ ಬಿಡಬೇಕಾದ ಪ್ರಸಂಗ ಬಂತು. ಸರಾಯಿ ಕಾರ್ಖಾನೆಗಳಿಗೆ ಹೋದೆವು. ನನ್ನ ಪತಿಯವರ ಅಮೂಲ್ಯ ಶಕ್ತಿ ಕೌಶಲಗಳನ್ನು ಪರೀಕ್ಷಿಸಿ ನೋಡುವಷ್ಟು ಮನಸ್ಸೂ ಸಹ ಕಾರ್ಖಾನೆ ಮಾಲೀಕರಿಗಿರಲಿಲ್ಲ. ಈ ರೀತಿ ಉದ್ಯೋಗನಿರತನಾಗಿರಲು ತಯಾರಿದ್ದರೂ ಉದ್ಯೋಗವೇ ದೊರಕದಿದ್ದರೆ ನಮ್ಮ ತಪ್ಪೇನು, ನಮ್ಮ ಗತಿಯೇನಾಗಬೇಕು? ನಾವು ಅಳಿಯಬೇಕೋ? ಉಳಿಯಬೇಕೋ? ಇದು ಒಂದು ವಿಧದ ಒಗಟೇ ಆಗಿದೆ. ಮಿ. ಮೈಕಾಬರರಂಥ ಚೈತನ್ಯ ಪುರುಷರಿನ್ನೊಬ್ಬರಿಲ್ಲ. ಚೈತನ್ಯ ಎಂದೂ ನಾಶವಾಗದಷ್ಟೆ. ಹಾಗಾದರೆ ಅಂಥ ಚೈತನ್ಯವನ್ನು ಉಪಯೋಗಿಸಲು ಅವಕಾಶ ಕೊಡದ ಸಮಾಜಕ್ಕೆ ನಾವು ಏನನ್ನಬೇಕು? ಮಿ. ಮೈಕಾಬರರು ಸಮಾಜಕ್ಕೆ ಈ ಪ್ರಶ್ನೆಯನ್ನು ಹಾಕುತ್ತಾರೆ – ಸಮಾಜವೇ ಎದುರು ಬಂದು ಉತ್ತರ ಕೊಡಲಿ” ಅಂದರು ಮಿಸೆಸ್ ಮೈಕಾಬರರು.
ಈ ಪ್ರಶ್ನೆ ಮಹತ್ತಾದದ್ದೆಂದು ನನಗೆ ತೋರಿತು. ನಾವು ಉತ್ತರ ಕೊಡಲಾರದೇ ಇದ್ದೆವು. ಇನ್ನೂ ಇದೇ ವಿಧದ ಗಹನವಾದ ವಿಷಯಗಳನ್ನು ಅವರು ಮಾತಾಡಿದರು. ಸಾರ್ವಜನಿಕ ಬಂಡವಾಳವೆತ್ತಿ ಒಂದು ವಿಧದ ಬೇಂಕ್ ವಹಿವಾಟು ನಡೆಸಲು ಮಿ. ಮೈಕಾಬರರು ನಿಶ್ಚೈಸಿರುವುದಾಗಿಯೂ ಅದರ ಪ್ರಾರಂಭದ ಖರ್ಚುಗಳ ಬಗ್ಗೆ ಪಾಲು ಬಂಡವಾಳದ ಮೇಲೆ ಡಿಸ್ಕೌಂಟ್ ಬಿಟ್ಟು ಅಂಥ ಡಿಸ್ಕೌಂಟನ್ನು ಉಪಯೋಗಿಸುವುದಾಗಿಯೂ ಮಿಸೆಸ್ ಮೈಕಾಬರರು ತಿಳಿಸಿದರು. ಈ ಮಾತುಗಳನ್ನು ಮೆಚ್ಚಿ ನಾವು ಕರತಾಡನ ಮಾಡಿದೆವು. ಅನಂತರ ಚಹ ಸೇವಿಸಿ, ಅವರ ದೊಡ್ಡ ನಿಲುವಂಗಿಯನ್ನು ಟ್ರೇಡಲ್ಸರ ಸಹಾಯದಿಂದ ತೊಟ್ಟುಕೊಂಡು, ಪತ್ನೀ ಸಮೇತರಾಗಿ ಮಿ. ಮೈಕಾಬರರು ಅವರ ಮನೆ ಕಡೆಗೆ ಹೊರಟು ಹೋದರು. ಮಿ. ಮೈಕಾಬರರಿಗೆ ಟ್ರೇಡಲ್ಸನು ನಿಲುವಂಗಿಯನ್ನು ತೊಡಿಸುತ್ತಿದ್ದಾಗಲೇ ಅವನಿಗೆ ಗೊತ್ತಾಗದಂತೆ, ಅವರು ನನಗೊಂದು ಪತ್ರವನ್ನು ತೆಗೆದು ಕೊಟ್ಟಿದ್ದರು. ಅಲ್ಲದೆ, ಅವರು ನಮ್ಮ ಮನೆಯಿಂದ ಹೋದನಂತರ ಮಾತ್ರ ಆ ಪತ್ರವನ್ನು ನಾನು ಓದಬೇಕೆಂದು ಅಂದಿದ್ದರು.
ಟ್ರೇಡಲ್ಸನು ನಮ್ಮ ಮನೆಯಿಂದ ಹೋಗುವ ಮೊದಲು ಅವನಿಗೆ ಗುಟ್ಟಾಗಿ, ಮಿ. ಮೈಕಾಬರರಿಗೆ ಹಣ ಸಾಲ ಕೊಡುವ ವಿಷಯದಲ್ಲಿ ಸ್ವಲ್ಪ ಎಚ್ಚರಿಕೆಯಿಂದಿರಬೇಕೆಂದು ನಾನು ಸೂಚನೆಯಿತ್ತೆನು. ಅವನು ಅವನ ಸರಳ ಸ್ವಭಾವಕ್ಕೆ ಸರಿಯಾಗಿ – “ಹಣವೇ ಇಲ್ಲದವನಿಗೆ ಸಾಲಕೊಟ್ಟು ಕಳೆದುಕೊಳ್ಳುವ ಭಯವೂ ಇರಬೇಕಾದ್ದಿಲ್ಲವಷ್ಟೆ!” ಎಂದಂದನು. “ಹಣವಿಲ್ಲದಿದ್ದರೂ ಹೆಸರಾದರೂ ಇದೆಯಲ್ಲ?” ಅಂದೆ, ನಾನು. “ಹೆಸರಿನ ಸಾಲವನ್ನು ಹೇಗೂ ಕೊಟ್ಟಾಗಿದೆ” ಎಂದು ಅವನು ಹೇಳಿ ನಗಾಡಿಕೊಂಡು ಹೊರಟು ಹೋದನು.
ಅವರೆಲ್ಲರೂ ಹೋಗಿ ಒಂದೆರಡು ನಿಮಿಷಗಳಾಗುವುದರೊಳಗೆ ಸ್ಟೀಯರ್ಫೋರ್ತನು ಬಂದನು. ಅವನು ಬಂದ ಮರುಕ್ಷಣವೇ ಏಗ್ನೆಸ್ಸಳ ದಿವ್ಯ ಮೂರ್ತಿಯೂ ನನ್ನೆದುರು ಬಂದು ನಿಂತಂತೆ ನನ್ನ ಮನಸ್ಸಿನಲ್ಲಿ ಹೊಳೆಯಿತು. ಆ ದಿವ್ಯ ದೇವತೆಯ ಸಾನ್ನಿಧ್ಯದಲ್ಲಿ ಸ್ಟೀಯರ್ಫೋರ್ತನು ತೇಜೋಹೀನನಾಗಿಯೂ ಅಮಂಗಲಕಾರಕನಾಗಿಯೂ ಅಪಾಯಕಾರಿಯಾಗಿಯೂ ಕಾಣತೊಡಗಿದನು. ನನ್ನ ಪರಮಮಿತ್ರನನ್ನು ಕುರಿತು ಮನಸ್ಸು ತುಂಬಾ ತರ್ಕಮಾಡತೊಡಗಿತು. ನನ್ನ ಈ ಭಾವನೆಗಳೆಲ್ಲ ಭ್ರಮೆಯಲ್ಲವೇ ಅನ್ಯಾಯವಲ್ಲವೇ ನಿರಾಧಾರವಾದವುಗಳಲ್ಲವೇ ಎಂದು ತರ್ಕಿಸಿ ಸಿದ್ಧಾಂತಕ್ಕೆ ಬರದೆ ಸೋತೆನು. ತರ್ಕದಿಂದ ಸಿದ್ಧಾಂತಪಡಿಸಲಾಗದ ಆದರೂ ಮನಸ್ಸಿನಲ್ಲಿ ಇದೆಯೆಂದು ತಿಳಿಯುವ ಕೊರತೆಗಳು ಸ್ಟೀಯರ್ಫೋರ್ತನಲ್ಲಿ ತೋರಿದುವು.
ಆದರೆ ಸ್ವಲ್ಪ ಹೊತ್ತು ಅವನೊಡನೆ ಮಾತಾಡುತ್ತಿದ್ದ ಹಾಗೆ ಆ ಭಾವನೆಗಳೆಲ್ಲ ಮಾಯವಾದುವು. ನನ್ನ ಅಭಿಪ್ರಾಯವನ್ನು ತಿದ್ದಿ, ಸರಿಪಡಿಸಿಕೊಂಡು, ಪಶ್ಚಾತ್ತಾಪಪಡುತ್ತಾ ಅಂತರಂಗದಲ್ಲೇ ಅವನ ಕ್ಷಮೆಯನ್ನೂ ಬೇಡಿದೆನು. ಅವನ ಅನೇಕ ಸಾಹಸಗಳನ್ನು ಬಹು ರಸವತ್ತಾಗಿ ತಿಳಿಸಿದನು. ಅವನದೊಂದು ನಾವೆಯೇ ಇದೆಯೆಂದೂ ಅದರಲ್ಲಿ ಪರೀಕ್ಷಾರ್ಥವಾಗಿ ಸಮುದ್ರ ಪ್ರಯಾಣ ಮಾಡಿ ನೋಡಿದನೆಂದೂ ಹೇಳಿದನು. ತನ್ನ ಸಮುದ್ರದ ಅನುಭವಗಳಿಗಾಗಿ ಸ್ವಲ್ಪ ಸಮಯ ತಾನು ಯಾರ್ಮತ್ತಿನಲ್ಲಿದ್ದುದಾಗಿಯೂ ತಿಳಿಸಿ, ಆಗಲೇ ಜ್ಞಾಪಕಕ್ಕೆ ಬಂದು ಪೆಗಟಿಯದೊಂದು ಪತ್ರ ನನಗೆ ಇದೆಯೆಂದು ಜೇಬಿನಲ್ಲಿ ಹುಡುಕತೊಡಗಿದನು. ನಾಲ್ಕಾರು ಪತ್ರಗಳನ್ನು ಒಂದೊಂದಾಗಿ ಓದಿ ನೋಡಿ ಕೊನೆಗೆ ಪೆಗಟಿಯ ಪತ್ರವನ್ನೇ ತೆಗೆದುಕೊಟ್ಟನು. ಒಂದು ಪತ್ರವನ್ನು ಅವಸರದಿಂದ ಓದುವಾಗ “…ಸ್ಟೀಯರ್ಫೋರ್ತ್ರಿಂದ ಬರಬೇಕಾದ ಮೊಬಲಗು…” ಎಂದಷ್ಟನ್ನು ಮಾತ್ರ ಓದಿ, ಅದನ್ನು ಬದಿಗಿಟ್ಟನು.
ಪೆಗಟಿಯ ಪತ್ರದಲ್ಲಿ ಬಾರ್ಕಿಸನ ಅಸೌಖ್ಯವನ್ನು ಕುರಿತಾಗಿ ಬರೆದಿದ್ದಳು. ಬಾರ್ಕಿಸನು ಹಾಸಿಗೆ ಹಿಡಿದಿದ್ದನು – ಬದುಕುವುದೇ ಕಷ್ಟವೆಂಬ ಪರಿಸ್ಥಿತಿಗೆ ತಲುಪಿದ್ದನು. ಈ ಪತ್ರ ಓದಿದನಂತರ ನಾನು ಯಾರ್ಮತ್ತಿಗೆ ಒಮ್ಮೆ ಹೋಗಿ ಬರುವುದು ಅಗತ್ಯವೆಂದು ಸ್ಟೀಯರ್ಫೋರ್ತನೊಡನೆ ಹೇಳಿದೆನು. ಸ್ಟೀಯರ್ಫೋರ್ತನು ಅರೆ ನಗೆ ನಕ್ಕು, “ಅದಕ್ಕೆಲ್ಲ ಗಾಬರಿಯಾಗಬಾರದು, ಡೆಯ್ಯಿ (ನನ್ನನ್ನು ಸಲಿಗೆಯಿಂದ ಕರೆಯುವಾಗ ಅವನು ಡೆಯ್ಯಿ ಎಂದು ಕರೆಯುತ್ತಿದ್ದನು). ಮರಣವೆಂಬುದು ದುಃಖದ ವಿಷಯ ಹೌದಾದರೂ ಅದು ಸೂರ್ಯನ ದಿನಂಪ್ರತಿಯ ಅಸ್ತಮಾನದಂತೆ ಉದಯಿಸಿದವನಿಗೆಲ್ಲ ಇರುವ ಒಂದು ಅಂತ್ಯ. ನಮ್ಮ ಸುತ್ತಲೂ ಸದಾ ಕಾಲವೂ ಒಬ್ಬರಲ್ಲದಿದ್ದರೆ ಒಬ್ಬರು ಸಾಯುತ್ತಲೇ ಇರುತ್ತಾರೆ. ಪ್ರತಿ ಮನೆ ಬಾಗಿಲಲ್ಲೂ ನಿಂತು ಕರೆಯುವ ಮರಣಕ್ಕೆ ಅಂಜಿದರೆ ಪ್ರಾಪಂಚಿಕ ಜೂಜಿನಲ್ಲಿ ಸೋಲಲೇಬೇಕಾಗುವುದು” ಎಂದು ಸ್ಟೀಯರ್ಫೋರ್ತನು ಹೇಳಿದನು. ಅವನು ಈ ರೀತಿ ಸಮಾಧಾನಚಿತ್ತದಿಂದ ಮಾತಾಡುತ್ತಿದ್ದರೂ ಅವನ ಮನಸ್ಸಿನಲ್ಲಿ ತುಂಬಾ ಕಳವಳವೋ ಉದ್ವಿಗ್ನತೆಯೋ ವ್ಯವಹಾರ ಗೊಂದಲವೋ ಇರಬೇಕೆಂಬಂತೆ ತೋರುತ್ತಿತ್ತು. ಅವನ ಎದುರಿದ್ದ ಅಗ್ಗಿಷ್ಟಿಕೆಯ ಕೆಂಡವನ್ನೇ ನೋಡುತ್ತಾ ಕೆಂಡಗಳನ್ನು ಕೆದರಿ, ಕಿಡಿ ಎಬ್ಬಿಸುತ್ತಾ ಕಾರ್ಯವೆಸಗೋಣಕ್ಕೂ ಆಲೋಚನೆಗೂ ಸಂಬಂಧವಿರದಂತೆ ವರ್ತಿಸುತ್ತಿದ್ದನು. ಜೂಜು – ಪ್ರಾಪಂಚಿಕ ಜೂಜು, ಎಂದಂಥ ವಿಷಯ ಏನಿರಬಹುದೆಂದು ಆಲೋಚಿಸಿ – “ಎಂಥ ಜೂಜು, ಜೀವನ ಜೂಜಾಗುವುದು ಹೇಗೆ?” ಎಂದು ನಾನು ಕೇಳಿದೆ. ಅದಕ್ಕೆ ಅವನು – “ಸುಖಪಡೆಯಲೋಸ್ಕರ ನಡೆಸುವ ಜೀವನವು ಒಂದು ಜೂಜು. ಆ ಜೂಜಿನಲ್ಲಿ ಓಡಿ ಗೆದ್ದವರಿಗೆ ಮಾತ್ರ ಸುಖ ಸಿಕ್ಕುವಾಗ, ಜೂಜಿನಲ್ಲಿ ಓಡುವವರು ಪಾದದಡಿಯ ಕ್ಷುದ್ರ ಜಂತುಗಳ ಸುಖವನ್ನು ವರ್ಣಿಸಲಾರರು. ನೋಡು, ಡೆಯ್ಯಿ, ಜೂಜಿನ ಕ್ರಮವೇ ಇದು. ಅನುಕೂಲವಿದ್ದರೆ ಯಾರನ್ನೂ ನೋಯಿಸದೆ ಜೂಜನ್ನು ನಡೆಸು. ಅನುಕೂಲವಿಲ್ಲವೆಂದಾದರೆ ಯಾರನ್ನೂ ಗಣನೆಗೆ ತಾರದೆ ತುಳಿದು ಮುಂದೋಡು. ಇದೇ ಪ್ರಪಂಚದಲ್ಲಿ ಬದುಕಿ ಸುಖ ಬಯಸುವವರ ಆದರ್ಶ ಧರ್ಮ. ಆ ಬಡ ಕುಟುಂಬದವರ ದುಃಖದ ಸಹಾನುಭೂತಿಯಿಂದ ನೀನು ಅವಸರಪಟ್ಟು ಯಾರ್ಮತ್ತಿಗೆ ಓಡುವುದು ಅನಗತ್ಯ. ಒಂದು ವೇಳೆ ನೀನು ಅಲ್ಲಿಗೆ ಹೋಗುವುದಾದರೂ ನಮ್ಮ ಮನೆಗೆ ಬಂದು ಒಂದು ದಿನವಾದರೂ ಇದ್ದು, ಅಲ್ಲಿಂದಲೇ ಯಾರ್ಮತ್ತಿಗೆ ಹೋಗು” ಎಂದಂದನು.
ಆ ದಿನ ಸ್ಟೀಯರ್ಫೋತನು ನನ್ನ ಮನೆಯಲ್ಲೇ ಊಟ ಮಾಡಿ, ಒಬ್ಬ ರಾಜನಿಗೂ ತೃಪ್ತಿಕೊಡಬಲ್ಲಂಥ ಊಟವನ್ನು ನಾನು ಕೊಟ್ಟೆನೆಂದು ಹೊಗಳಿಕೊಂಡು ಹೊರಟು ಹೋದನು. ಮಲಗುವ ಮೊದಲು ಅಂಗಿ ಬಿಚ್ಚುವಾಗ ಮಿ. ಮೈಕಾಬರರು ಕೊಟ್ಟಿದ್ದ ಪತ್ರ ಜ್ಞಾಪಕಕ್ಕೆ ಬಂತು. ಆ ಪತ್ರವನ್ನು ಅವರು ತಮ್ಮ ಮನೆಯಿಂದ ಹೊರಡುವ ಮೊದಲೇ ಬರೆದಿರಬೇಕೆಂದು ಪತ್ರ ಓದುವಾಗ ತಿಳಿಯಿತು. ಪತ್ರ ಹೀಗಿತ್ತು:-
ಸರ್,`ಮಿ. ಕಾಪರ್ಫೀಲ್ಡ್’ ಎಂದು ಧೈರ್ಯವಾಗಿ ನಿಮ್ಮನ್ನು ಸಂಬೋಧಿಸುವಷ್ಟೂ ನನಗೆ ಪುರುಷತ್ವವಿಲ್ಲ. ಈ ಕೆಳಗೆ ದಸ್ಕತ್ತು ಮಾಡುವ ವ್ಯಕ್ತಿಯು ಕಷ್ಟಗಳಿಂದ ನುಚ್ಚುನೂರಾಗಿದ್ದಾನೆಂಬುದನ್ನು ನಿಮಗೆ ತಿಳಿಸುವುದು ಉಚಿತವಾಗಿದೆ. ನಿಮ್ಮ ಮನೆ ಊಟದ ಮಧ್ಯೆ ದುಃಖದ ಮುಗಿಲು ಎದ್ದು ಗೋಚರಿಸಬಾರದೆಂದು ನಾನು ಪ್ರಯತ್ನಿಸುತ್ತಿದ್ದುದನ್ನು ನೀವು ಕಂಡಿರಲೂಬಹುದು. ಇರಲಿ, ಆಶಾರವಿಯು ದಿಗಂತದಲ್ಲಿ ಅಸ್ತಂಗತನಾದನು. ಈ ಬರಹಗಾರನು ಜೀವನ್ಮೃತನಾಗಿರುವನು.
ಬಾಡಿಗೆಯ ಬಾಕಿಗಳ ವಸೂಲಿಗಾಗಿ ವಾರಂಟು ತಂದಿರುವ ಕ್ರೋಧಾವಿಷ್ಟ – ಕುಡಿದು ಮತ್ತನಾಗಿರುವವನೆಂದರೂ ತಪ್ಪಾಗಲಾರದ ವ್ಯಕ್ತಿಯ ಸಮ್ಮುಖದಲ್ಲಿ ಇದನ್ನು ಬರೆಯುತ್ತಿದ್ದೇನೆ. ನಮ್ಮ ಮನೆ, ಮನೆಯೊಳಗಿನ ಎಲ್ಲಾ ಚರಸ್ವತ್ತುಗಳೂ ಜಪ್ತಾಗಿವೆ. ಜಪ್ತಾಗಿರುವ ಸ್ವತ್ತುಗಳಲ್ಲಿ ನಿರ್ದೋಷಿಯಾದ, ನನ್ನ ಸಾಲಗಳಿಗೆ ಎಳ್ಳಷ್ಟೂ ಸಂಬಂಧಿಸದ, ಮರ್ಯಾದಸ್ಥ ಮಿ. ಟ್ರೇಡಲ್ಸ್‍ರವರ ಸಕಲ ಚರಸ್ವತ್ತುಗಳೂ ಸೇರಿವೆ – ಇದೊಂದು ದುಃಖದ ವಿಷಯ. ಈ ಎಲ್ಲಾ ದುಃಖಗಳು ನನ್ನನ್ನು ಬಾಧಿಸುತ್ತಿರುವಾಗಲೇ – ನನ್ನ ದುಃಖಕ್ಕೆ ಮಿತಿಯಿರಬಾರದೆಂಬಂತೆ – ಎಲ್ಲದಕ್ಕಿಂತಲೂ ಅನಿರೀಕ್ಷಿತವಾದ ಒಂದು ಘಟನೆ ನಡೆದು ಹೋಗಿದೆ. ಅದನ್ನು ನಿಮಗೆ ತಿಳಿಸದೆ ಮನಸ್ಸು ಕೇಳದು: ಇದೇ ಮಿ. ಟ್ರೇಡಲ್ಸರವರು ನನಗೆ ಸಾಲ ಕೊಡುವುದಾಗಿ ವಾಗ್ದಾನ ಮಾಡಿದ್ದ ಪೌಂಡ್ ೨೩, ಶಿಲಿಂಗ್ ೪ ಮತ್ತು ಪೆನ್ಸ್ ೯ ೧/೨ಯನ್ನು ಈ ವರೆಗೂ ಕೊಡದೆ ನನ್ನನ್ನು ಕೊಂದಿರುವರು.
ಇನ್ನೂ ಒಂದು ಸಂಗತಿಯನ್ನು ತಿಳಿಸಬಯಸುತ್ತೇನೆ – ಸಾಧಾರಣ ಇಂದಿನಿಂದ ಆರು ಚಾಂದ್ರಮಾನ ಮಾಸಗಳೊಳಗೆ ನಮ್ಮ ಕುಟುಂಬದ ದುಃಖದ ಭಾರವನ್ನು ಹೆಚ್ಚಿಸಲು ಇನ್ನೊಂದು ಜೀವ ನಮ್ಮಲ್ಲಿ ಜನಿಸತಕ್ಕದ್ದಿದೆ.
ಇಂತೀದುಃಖಿ, ದರಿದ್ರ, ದಲಿತ, ಪಾಮರವಿಲ್ಕಿನ್ಸ್ ಮೈಕಾಬರ್
ಪತ್ರವನ್ನು ಓದಿದೆ. ಮಿ. ಮೈಕಾಬರರ ಸಾಲುಗಳ ಗೊಂದಲದಲ್ಲಿ ಸಿಕ್ಕಿಬಿದ್ದ ಸರಳ ಹೃದಯದ ಟ್ರೇಡಲ್ಸನ ಮೌನ ತ್ಯಾಗವೂ ಅರುವತ್ತು ವರ್ಷಗಳ ಕಾಲವಾದರೂ ಕಾದು ಕುಳಿತಿರಲು ತಯಾರಿದ್ದ ಅವನ ಇನಿಯಳ ಪವಿತ್ರ ಪ್ರೇಮವೂ ನನ್ನ ಮನಸ್ಸನ್ನು ನೋಯಿಸಿದುವು. ಆಲೋಚನಾ ಪರಂಪರೆಗಳಿಂದ ಆ ರಾತ್ರಿ ನನಗೆ ನಿದ್ರೆಯೇ ಬರಲಿಲ್ಲ.
(ಮುಂದುವರಿಯಲಿದೆ)