ಅಧ್ಯಾಯ ಇಪ್ಪತ್ತೆರಡು
[ಡೇವಿಡ್ ಕಾಪರ್ಫೀಲ್ಡ್‍ನ ಜೀವನ ವೃತ್ತಾಂತ ಮತ್ತು ಅನುಭವಗಳು, ಕಾದಂಬರಿ. ಮೂಲ ಇಂಗ್ಲಿಷಿನಲ್ಲಿ ಚಾರ್ಲ್ಸ್ ಡಿಕನ್ಸ್, ಕನ್ನಡ ಭಾವಾನುವಾದ ಎ.ಪಿ. ಸುಬ್ಬಯ್ಯ]
ವಿ-ಧಾರಾವಾಹಿಯ ಇಪ್ಪತ್ನಾಲ್ಕನೇ ಕಂತು

ಸ್ಟೀಯರ್ಫೋರ್ತನೂ ನಾನೂ ಸಾಧಾರಣ ಎರಡು ವಾರಗಳವರೆಗೆ ಯಾರ್ಮತ್ತಿನಲ್ಲೇ ಇದ್ದೆವು. ನಾವು ಜತೆಯಿಂದ ತಿರುಗಾಡುವುದೂ ಇತ್ತು. ಒಬ್ಬಂಟಿಗರಾಗಿ ತಿರುಗಾಡುವುದೂ ಇತ್ತು. ಸ್ಟೀಯರ್ಫೋರ್ತನಿಗೆ ನಾವಿಕ ವೃತ್ತಿ ಉಲ್ಲಾಸ ಕೊಡತಕ್ಕ ಒಂದು ಹವ್ಯಾಸವೇ ಆಗಿತ್ತು. ಅವನು ಅದನ್ನೂ ಅಭ್ಯಾಸ ಮಾಡಿದನು. ಅವನು ನಾವಿಕರ ಜತೆಯಲ್ಲಿದ್ದಾಗ ಅವರಿಗಿಂತಲೂ ಒಬ್ಬ ದೊಡ್ಡ ನಾವಿಕನೇ ಆಗಿಬಿಡುತ್ತಿದ್ದನು. ಅವರ ಕುಟುಂಬಗಳಲ್ಲೇ ಜನಿಸಿದ ಒಬ್ಬ ನಾವಿಕನಂತೆ ಅವನು ಅವರೊಡನೆ ವ್ಯವಹಾರ ನಡೆಸುತ್ತಿದ್ದನು. ಮಿ. ಪೆಗಟಿ ಬಹು ಹೊಗಳುತ್ತಿದ್ದ `ಮೆಚ್ಚಿನ ಮನೆ’ ಎಂಬ ಹೆಸರಿನ ಹೋಟೆಲಿನಲ್ಲಿ ಅವನು ನಾವಿಕರಿಗೆಲ್ಲ ಔತಣ ಕೊಡಿಸುವುದೂ ಇತ್ತು. ಕೆಲವೊಮ್ಮೆ ಅವನು ಸಮುದ್ರದಲ್ಲಿ ತಾನೊಬ್ಬನೇ ಕುಳಿತು ದೋಣಿ ಬಿಟ್ಟುಕೊಂಡು ಹೋಗುವುದೂ ಇತ್ತು. ಇಂಥ ಸಂದರ್ಭಗಳಲ್ಲಿ ಸಮುದ್ರದ ಪ್ರಕೋಪಗಳಲ್ಲಿ ಸಿಕ್ಕಿ, ತನ್ನ ಚಮತ್ಕಾರ, ಶಕ್ತಿಗಳನ್ನು ಪ್ರಯೋಗಿಸಿ, ವಿಪತ್ತಿನಿಂದ ಪಾರಾಗಿ ಬಂದಿದ್ದ ಕಥೆಗಳನ್ನೂ ನನಗೆ ತಿಳಿಸುತ್ತಿದ್ದನು. ಈ ವಿಧವಾಗಿ ಅವನು ಅಲ್ಲಿ ತನ್ನ ಕಾಲವನ್ನು ಬಹು ಸಂತೋಷದಿಂದ ಕಳೆಯುತ್ತಿದ್ದನು.

ಸ್ಟೀಯರ್ಫೋರ್ತನು ಈ ವಿಧದ ಸಾಹಸಗಳಲ್ಲಿ ಕಾಲಕಳೆಯುತ್ತಿದ್ದಾಗ ನಾನು ಬ್ಲಂಡರ್ಸ್ಟನ್ನಿಗೆ ಹೋಗಿ ಅಲ್ಲಿ ನಮ್ಮ ಹಳೆ ಮನೆ, ಇಗರ್ಜಿ, ಇಗರ್ಜಿ ವಠಾರದಲ್ಲಿದ್ದ ನನ್ನ ತಂದೆ ತಾಯಿಯರ ಗೋರಿಗಳನ್ನೆಲ್ಲ ನೋಡಿ ಬಂದೆ. ನಮ್ಮ ಮನೆಯನ್ನು ಬಾಡಿಗೆಗೆ ಕೊಟ್ಟಿದ್ದರು. ಒಬ್ಬ ಹುಚ್ಚನನ್ನು ವೈದ್ಯಕೀಯ ಚಿಕಿತ್ಸೆಗಾಗಿ ನಮ್ಮ ಮನೆಯಲ್ಲಿಟ್ಟು ಸಾಕುತ್ತಿದ್ದರು. ಹೂದೋಟ, ಹಣ್ಣಿನ ತೋಟಗಳಲ್ಲೆಲ್ಲ ತುಂಬ ಕಳೆ ಬೆಳೆದಿತ್ತು. ನಮ್ಮ ಎಲ್ಮ್ ಮರಗಳ ಗೆಲ್ಲುಗಳನ್ನೆಲ್ಲ ಕಡಿದು, ಮರದ ಕಾಂಡಗಳು ಮಾತ್ರ ತೆಪ್ಪದಂತೆ ಕಾಣಿಸುತ್ತಿದ್ದುವು. ಮಿ. ಗ್ರೈಪರರ ಕುಟುಂಬ ಅಮೆರಿಕಕ್ಕೆ ಹೋಗಿ ಅಲ್ಲಿ ನೆಲೆಸಿರುವುದಾಗಿ ತಿಳಿದೆನು. ಡಾ. ಚಿಲ್ಲಿಪ್ಪರು ಅವರಿಗಿಂತ ಸ್ವಲ್ಪ ಹೆಚ್ಚು ಪ್ರಾಯವಾಗಿದ್ದ ಹೆಂಗುಸೊಬ್ಬಳನ್ನು ಮದುವೆಯಾಗಿ, ಅವರಿಗೊಬ್ಬ ಗಂಡು ಮಗ ಹುಟ್ಟಿದ್ದ. ಆ ಮಗುವನ್ನೂ ನಾನು ನೋಡಿ ಬಂದೆ. ಡಾಕ್ಟರರ ಮಗುವಾಗಿದ್ದರೂ ಅದು ಬಹು ಕೃಶವಾಗಿತ್ತು. ಅದರಲ್ಲಿ ಎದ್ದು ಕಾಣುವುದು ಮಗುವಿನ ಉಬ್ಬಿದ ಎರಡು (ಪೋಳೆ) ಕಣ್ಣುಗಳು. ತನ್ನಂಥ ಕೃಶದೇಹೀ ಮಗುವನ್ನು ಜನಿಸಲು ಎಡೆಕೊಟ್ಟದ್ದೇಕೆ ಎಂದು ಅದನ್ನು ನೋಡಿದವರನ್ನೆಲ್ಲ ಅದು ಪ್ರಶ್ನಿಸುತ್ತಿರುವಂತೆ ಮಗುವು ನಮ್ಮನ್ನು ನೋಡುತ್ತಿತ್ತು.

ಒಂದಾವೃತ್ತಿ ನಾನು ಸ್ಟೀಯರ್ಫೋರ್ತನನ್ನು ಯಾರ್ಮತ್ತಿನಲ್ಲಿ ಹಠಾತ್ತಾಗಿ ನೋಡಿ ಬರಬೇಕಾದ ಪ್ರಸಂಗ ಬಂತು. ಹಾಗೆ ನಾನು ಸ್ಟೀಯರ್ಫೋರ್ತನನ್ನು ನೋಡಲು ಹೋದಾಗ ಅವನು ಬಹು ಗಾಢವಾದ ಆಲೋಚನೆಯಲ್ಲಿ ಮಗ್ನನಾಗಿದ್ದನು. ಅವನ ಮನಸ್ಸಿನಲ್ಲಿ ಯಾವುದೋ ಒಂದು ಧರ್ಮ ಸಂಕಟವೋ ಅಥವಾ ವ್ಯಾಕುಲವೋ ಇದ್ದವನಂತೆ ಅವನು ತೋರಿದನು. ಇದೇ ಸಮಯದಲ್ಲಿ ಲಿಟ್ಮರನು ಅವನ ತಾಯಿಂದ ಒಂದು ಪತ್ರವನ್ನು ತಂದು ಸ್ಟೀಯರ್ಫೋರ್ತನಿಗೆ ಕೊಟ್ಟಿದ್ದ. ಆ ಪತ್ರದ ಕಾರಣವಾಗಿ ಅವನು ಆ ರೀತಿ ಇದ್ದನೋ ಏನೋ ಎಂದು ನಾನು ಹೇಳಲಾರೆ. ನನ್ನನ್ನು ಗುರುತಿಸಿದ ಕೂಡಲೆ ಅವನು ಮೊದಲಿನ ಸ್ಟೀಯರ್ಫೋರ್ತನೇ ಆಗಿ, ಸಂತೋಷದಿಂದ ಎಂದಿನಂತೆಯೇ ನನ್ನೊಡನೆ ಮಾತಾಡಿದನು. ಅಂತೂ ಆ ದಿನದ ನಾ ಕಂಡ ಅವನ ಮುಖ, ಲಿಟ್ಮರನು ಅಲ್ಲಿಗೆ ಬಂದ ಪ್ರಸಂಗ ಇವೆಲ್ಲ ನನ್ನ ಮನಸ್ಸಿನಲ್ಲಿ ಬಲವಾಗಿ ಚಿತ್ರಿತವಾಗಿವೆ.

ಸ್ಟೀಯರ್ಫೋರ್ತನು ಇತರ ಎಲ್ಲಾ ಗುಣಗಳಲ್ಲೂ ಅಪ್ರತಿಮನೇ ಆಗಿದ್ದಂತೆ, ಔದಾರ್ಯದಲ್ಲು ಅಪ್ರತಿಮನೇ ಆಗಿದ್ದನು. ಮಿ. ಪೆಗಟಿಯ ಆತಿಥ್ಯವನ್ನು ಮೆಚ್ಚಿಯೋ ಅಥವಾ ಮಿ. ಪೆಗಟಿಯ ಜೀವನ ಕ್ರಮಗಳನ್ನು ತಾನೂ ಅಭ್ಯಸಿಸಬೇಕೆಂದೋ ಅಥವಾ ಈ ಎರಡೂ ಸಂದರ್ಭಗಳನ್ನು ಒಂದೇ ಕಾರ್ಯದಿಂದ ನಿರ್ವಹಿಸಲೆಂದೋ ಅವನು ಮಿ. ಪೆಗಟಿಗೆ ಒಂದು ದೋಣಿಯನ್ನು ಉಚಿತವಾಗಿ ಕೊಟ್ಟನು. ಆ ದೋಣಿಗೆ ಮೊದಲಿದ್ದ `ಮರ್ತುಅವಿಹಾರಿ’ ಎಂಬ ಹೆಸರನ್ನು ಬದಲಾಯಿಸಿ, ಈ ಉಚಿತವಾದ ಕೊಡುಗೆಯ ಮೊದಲು `ಒಲವಿನ ಎಮಿಲಿ’ ಎಂದು ಹೆಸರಿಟ್ಟಿದ್ದನು. ಈ ದೋಣಿಯನ್ನು ಕೊಟ್ಟದ್ದನ್ನೂ ಮತ್ತು ಅದರ ಹೆಸರನ್ನೆಲ್ಲ ಹೇಳುವಾಗಲು ಸ್ಟೀಯರ್ಫೋರ್ತನ ಮುಖ ಹಿಂದೊಮ್ಮೆ ನಾನು ಕಂಡಿದ್ದಂತೆ ಒಂದು ಧರ್ಮಸಂಕಟದಲ್ಲೋ ವ್ಯಾಕುಲದಲ್ಲೋ ಇದ್ದಂತೆ ತೋರುತ್ತಿತ್ತು.

ಒಂದು ದಿನ ಸಂಜೆಯಲ್ಲಿ ಸ್ಟೀಯರ್ಫೋರ್ತನೂ ನಾನೂ ಸಮುದ್ರ ದಂಡೆಯಲ್ಲಿ ತಿರುಗಾಡುತ್ತಿದ್ದಾಗ ಎಮಿಲಿಯೂ ಹೇಮನೂ ಕೈ ಕೈ ಹಿಡಿದುಕೊಂಡು ನಮ್ಮ ಎದುರಿನಿಂದ ಬಂದು, ನಮ್ಮನ್ನು ದಾಟಿ ಹೋದರು. ನಮ್ಮನ್ನು ಕಂಡ ಮರುಕ್ಷಣ ಅವರ ನಡುಗೆ ಸ್ವಲ್ಪ ಬದಲಾಯಿತು. ಮಾತ್ರವಲ್ಲದೆ, ಅವರು ಕೈಯ್ಯನ್ನು ಬಿಟ್ಟು ಸ್ವಲ್ಪ ದೂರ ದೂರವಿದ್ದೇ ನಡೆಯುತ್ತಿದ್ದರು. ಇದನ್ನು ತೋರಿಸುತ್ತಾ ಸ್ಟೀಯರ್ಫೋರ್ತನು – “ನೋಡು ಕಾಪರ್ಫೀಲ್ದ್, ವೀರ ಯೋಧನು ರಮಣೀಮಣಿಯನ್ನು ರಕ್ಷಿಸುವ ಕ್ರಮ” ಎಂದು ಪರಿಹಾಸ್ಯ ಮಾಡಿದನು. ನಾನು ಯಾವ ಉತ್ತರವನ್ನು ಕೊಡಲಿಲ್ಲ. ಅಷ್ಟರಲ್ಲೇ ನಮ್ಮ ಎದುರಿನಿಂದಲೇ ಮೊದಲು ಹೋದವರಿಬ್ಬರನ್ನು ಬೆನ್ನಟ್ಟಿ ಬರುತ್ತಿದ್ದವಳಂತೆ, ಸಣ್ಣ ಪ್ರಾಯದ ಭಿಕ್ಷುಕಿಯಂತಿದ್ದ, ಕೃಶದೇಹಿ ತರುಣಿಯೊಬ್ಬಳು ಬಂದು ನಮ್ಮನ್ನು ದಾಟಿ ಅವಳ ದಾರಿಯಲ್ಲೆ ತ್ವರಿತದಿಂದ ಹೋದಳು. ಅವಳನ್ನು ಕಂಡು ನನಗೆ ಸ್ವಲ್ಪ ಭಯವೂ ಆಶ್ಚರ್ಯವೂ ಆಯಿತು.

ಮರುದಿನ ಬೆಳಗ್ಗೆ ನಾವು ಕಾಫಿತಿಂಡಿ ತೀರಿಸಿ ಕುಳಿತಿದ್ದಾಗ ಮಿಸ್ ಮೌಚರಳೆಂಬುವಳೊಬ್ಬಳು ಬಂದಿರುವುದಾಗಿ ಲಿಟ್ಮರನು ತಿಳಿಸಿದನು. ಮಿ. ಮೌಚರಳು ಬಂದು ಸ್ಟೀಯರ್ಫೋರ್ತನೊಡನೆ ಮಾತಾಡುವುದನ್ನು ಕಂಡಾಗ ಅವಳ ಪರಿಚಯ ಸ್ಟೀಯರ್ಫೋರ್ತನಿಗೆ ಮೊದಲೇ ಇದ್ದಿರಬೇಕೆಂದು ಗೊತ್ತಾಯಿತು. ಅವಳೊಬ್ಬ ಕ್ಷೌರಗಿತ್ತಿ. ನಡುಪ್ರಾಯದ ಹೆಂಗುಸು. ಲಕ್ಷಣವಾಗಿದ್ದಳು. ಆದರೆ ಅವಳು ಬಹು ಕುಳ್ಳಿ. ಸೊಂಟದಿಂದ ಮೇಲ್ಭಾಗ ಇತರರಷ್ಟೇ ಎತ್ತರವಾಗಿತ್ತು ಮತ್ತು ಸ್ಥೂಲವಾಗಿದ್ದ ಶರೀರದ ಭಾಗ ಅದಾಗಿತ್ತು. ಅವಳ ಕೈಕಾಲುಗಳೆಲ್ಲ ಬಹು ಗಿಡ್ಡವಾಗಿದ್ದುವು. ತನ್ನ ಚಿರಪರಿಚಿತ ಸ್ಟೀಯರ್ಫೋರ್ತನನ್ನು ಈ ಸ್ಥಳದಲ್ಲಿ ಕಂಡು ಬಹು ಆಶ್ಚರ್ಯದಿಂದ –

“ಅಪ್ಪಾ ಸ್ಟೀಯರ್ಫೋರ್ತ್, ಏನು ಹೊಸ ಸಂಗತಿ ನಡೆಯಲಿದೆ?” ಎಂದು ಕೇಳಿದಳು. ಸ್ಟೀಯರ್ಫೋರ್ತನಿಗೆ ಅವಳ – ಸಾಧಾರಣ ಎಲ್ಲ ಕ್ಷೌರಿಕರಂತೆ – ವಾಚಾಳಿತನ ಗೊತ್ತಿದ್ದುದರಿಂದಲೋ ಏನೋ ಅವಳ ಉತ್ಸಾಹವೆಲ್ಲಾ ಮಾತಾಡಿ ಮುಗಿಯಲೆಂದು ಮೌನವಾಗಿಯೇ ಕುಳಿತಿದ್ದನು. ಅವಳು ತನ್ನ ಪೂರ್ವದ ಉತ್ಸಾಹದಿಂದಲೇ – “ಪೋರಾ ಎತ್ತಲಿಂದ ಆಗಮಿಸಿದೆ – ಅದ್ಯಾವ ಹುಡುಗಿಗಾಗಿ? ರಕ್ತ ಕೆಂಪಿರುವವಳೇ? ಗುಲಾಬಿ ವರ್ಣದವಳೇ? ನಿನಗೆ ಯಾವ ಕ್ಷೌರ ಆಗಬೇಕು ಈಗ? ಮೀಸೆ ಬರಿಸಬೇಕೇ? ಗಡ್ಡ ಬೋಳಿಸಬೇಕೇ? ಕ್ರಾಪ್ ಆಗಬೇಕೇ? ರಶ್ಯದ ಚಕ್ರವರ್ತಿಯ ಮೀಸೆ ನಿನಗಿಡಬೇಕೇ? ಹೇಳು, ತಯಾರಿದ್ದೇನೆ” ಎಂದಂದಳು.

ಲಿಟ್ಮರನು ಕ್ಷೌರಕ್ಕಾಗಿ ಮೇಜು ಕುರ್ಚಿಗಳನ್ನು ಹತ್ತಿರವಿಟ್ಟು ಅವಳ ಕಾರ್ಯಕ್ಕೆ ಅಣಿ ಮಾಡಿಕೊಟ್ಟನು. ಮಿಸ್ ಮೌಚರಳು ಕುರ್ಚಿಗೆ ಹತ್ತಿ, ಕುರ್ಚಿಯಿಂದ ಮೇಜಿಗೆ ಹತ್ತಿ, ಮೇಜಿನ ಮೇಲೆ ನಿಂತು ಕುರ್ಚಿಯಲ್ಲಿ ಕುಳಿತ ಸ್ಟೀಯರ್ಫೋರ್ತನಿಗೆ ತನ್ನ ಕತ್ತರಿ, ಕತ್ತಿಗಳಿಂದ ಬಹು ಚುರುಕಾಗಿ ಕ್ಷೌರದ ಕೆಲಸ ಮಾಡತೊಡಗಿದಳು. ಆದರೆ ಅವಳ ಕಸಬಿನ ಪ್ರಚಾರ ಪ್ರಕಟಣೆಗಳನ್ನು ನನಗೆ ತೋರಿಸಲೋಸ್ಕರವೋ ಅಥವಾ ಸ್ವಾಭಾವಿಕವಾಗಿಯೋ ಕತ್ತರಿ ಕೆಲಸದ ಜತೆಗೆ ಅಷ್ಟೇ ಚುರುಕಿನಿಂದ ಮಾತನ್ನೂ ಆಡಲಾರಂಭಿಸಿದಳು. ಅವಳು ನನಗೆ ನಗೆಯಾಡುತ್ತಾ ಅನ್ನತೊಡಗಿದಳು –

“ನಾನು ಎಲ್ಲರಿಗೂ ಬೇಕಾದವಳು. ರಾಜ ಮಹಾರಾಜರಿಗೂ ಶ್ರೀಮಂತರಿಗೂ ವೃದ್ಧರಿಗೂ ತರುಣರಿಗೂ ಬೇಕಾದವಳು. ಮಣಿ ಮಂತ್ರೌಷಧಗಳನ್ನು ಸಂದರ್ಭಕ್ಕೆ ತಕ್ಕಂತೆ ಪ್ರಯೋಗಿಸಬಲ್ಲವಳು. ಎಂಥೆಂಥವರನ್ನು ಮಂತ್ರ ಶಕ್ತಿಯಿಂದ ವಶಪಡಿಸಿಕೊಡಬಲ್ಲೆ. ಕುರೂಪಿಗಳನ್ನು ಸ್ಫುರದ್ರೂಪಿಗಳನ್ನಾಗಿ ಮಾಡಬಲ್ಲೆ. ಕರಿಕೂದಲನ್ನು ಕೆಂಚು, ಕೆಂಚನ್ನು ಕರಿದು, ಬಿಳಿದನ್ನು ಕರೀದು ಮಾಡಬಲ್ಲೆ. ಮೀಸೆಯಿಲ್ಲದವರಿಗೆ ಮೀಸೆಯಿಡ ಬಲ್ಲೆ, ಸ್ಟಿಯರ್ಫೋರ್ತ, ನಿನ್ನ ದೃಷ್ಟಿ ಈಗ ಯಾವ ಮೋಹಿನಿಯ ಮೇಲಿದೆ? ನಿನ್ನ ತಲೆ ಕೂದಲು ಗುಂಗುರು ಗುಂಗುರಾಗಿರಬೇಕೇ? ಅಲೆಯಲೆಯಾಗಿರಬೇಕೇ? ಯಾವ ಹುಡುಗೀ ಮೇಲೆ ಕಣ್ಣಿಟ್ಟಿದ್ದೀ? ನಿನ್ನ ಹೊಸ ಸ್ನೇಹಿತನ ತಂಗೀನೇನಾದರೂ ನೋಡಿದ್ದೀಯೇ? ಯಾರದು, ಹೇಳು” ಎಂದು ಮೊದಲಾಗಿ ವಾಗ್ಝರಿಯನ್ನು ಸುರಿಸಿದಳು.

“ಯಾರ ಮೇಲೂ ಕಣ್ಣಿಡಲಿಲ್ಲ – ಒಬ್ಬ ನಾವಿಕ ಬಾಲಕಿಯ ರೂಪಕ್ಕೆ ಬೆರಗಾಗಿದ್ದೇನೆ ಅಷ್ಟೆ” ಅಂದನು ಸ್ಟೀಯರ್ಫೋರ್ತ್. “ಅವಳ ಹೆಸರೇನು? `ಪಾಲೀ’ ಎಂದಲ್ಲವೇ?” ಎಂದಂದುಕೊಂಡು ಪಾಲೀ ಹಕ್ಕಿ ನೋಡುವಂತೆ ನನ್ನನ್ನು ನೋಡಿದಳು. “ಪಾಲಿ ಅಲ್ಲ ಎಮಿಲಿ” ಅಂದನು ಸ್ಟೀಯರ್ಫೋರ್ತ್. “ಓಹೋ ಎಮಿಲಿ, ತಾನೆ – ಎಲ್ಲರಿಗೂ ಮಿಗಿಲಾದ ಎಮಿಲಿ. ಮಿಲಿಯ ಕೊಟ್ಟರೂ ದೊರಕದ ಎಮಿಲಿ. ಅವಳನ್ನು ಪ್ರೀತಿಸಿದಷ್ಟೇ ದ್ವೇಷಿಸುತ್ತಿದ್ದೀಯ ತಾನೆ? ಏಕೆಂದರೆ, ಅವಳು ಇನ್ನೊಬ್ಬನಲ್ಲಿ ಅನುರಕ್ತಳು. ಒಲವಿಗಾಗಿ ಹಲವು ಆಕರ್ಷಣೆಯನ್ನು ಪ್ರದರ್ಶಿಸಿ ಹಾರಿಸುವ ಎಮಿಲಿ, ನಿನ್ನ ಥಳುಕಿಗೆ ಬಳುಕಿ, ನಿನಗೆ ಬಲಿಯಾಗಲಿರುವ ಎಮಿಲಿ!” ಎಂದು ಕುಚೇಷ್ಟೆ, ವಿನೋದಗಳಿಂದ ಒಂದು ಕವಿತ್ವವನ್ನು ಮೆರೆಸಿದಳು, ಮಿಸ್ ಮೌಚರ್.

“ಹಾಗೇನೂ ಇಲ್ಲ. ಎಮಿಲಿ ಕಡೆಯವರೆಲ್ಲಾ ಯೋಗ್ಯ ಜನರು. ಅವರನ್ನು ಕುರಿತು ಹಗುರವಾಗಿ ಮಾತಾಡಬಾರದು. ಎಮಿಲಿಗೆ ಗಂಡನಾಗುವವನು ಅವಳಿಗೆ ತಕ್ಕಂಥವನಲ್ಲವೆಂಬುದು ಮಾತ್ರ ನನ್ನ ಅಭಿಪ್ರಾಯ” ಎಂದು ಹೇಳಿ, ಈ ವಿಷಯದಲ್ಲಿ ನನ್ನ ಅಭಿಪ್ರಾಯವೇನೆಂದು ಪ್ರಶ್ನಿಸುವವನಂತೆ ಸ್ಟೀಯರ್ಫೋರ್ತನು ನನ್ನ ಮುಖವನ್ನು ನೋಡಿದನು. ಮಿಸ್ ಮೌಚರ್ ಮತ್ತು ಲಿಟ್ಮರನೂ ಸಹ ನನ್ನನ್ನು ಅದೇ ರೀತಿಯಿಂದ ನೋಡಿದರು. ನಾನು ಉತ್ತರವೀಯದೆ ಮೌನವಾಗಿ ಕುಳಿತಿದ್ದೆ. ಕ್ರಮೇಣವಾಗಿ, ನಾನೊಬ್ಬ ತಿಳಿವಳಿಕೆಯಿಲ್ಲದ ಬಡಪಾಯಿ – ಲೋಕಾನುಭವ ಅತಿ ಸ್ವಲ್ಪ ಮಾತ್ರ ಇರುವವನು ಎಂಬ ಅಭಿಪ್ರಾಯ ಅವರೆಲ್ಲರಿಗೂ ಇದ್ದಂತೆ ಅವರ ಮುಖಗಳು ತೋರಿದುವು. ಲಿಟ್ಮರನ ಗಾಂಭೀರ್ಯದ ಹಿಂದೆ ನನ್ನ ಈ ನ್ಯೂನತೆಯನ್ನು ಕುರಿತಾದ ಪರಿಹಾಸ್ಯ ಅಡಗಿ ನಿಂತಿದ್ದಂತೆ ನಾನು ತಿಳಿದೆ!

ಸ್ಟಿಯರ್ಫೋರ್ತನ ಕ್ಷೌರವಾದೊಡನೆ, ಅಲ್ಲಿ ಕ್ಷೌರ ಬೇಕಾದವರು ಬೇರೆ ಯಾರೂ ಇಲ್ಲದಿದ್ದುದರಿಂದ ಮಿಸ್ ಮೌಚರಳು ತನ್ನ ಚಿಕ್ಕ ಕಾಲುಗಳಿಂದ ಪುಟಪುಟನೆ ನಡೆದು ಮಾಯವಾದಳು. ನಾನು ಆ ದಿನ ರಾತ್ರಿ ಬಾರ್ಕಿಸನ ಮನೆಯಲ್ಲಿರುವುದಾಗಿ ನಿಶ್ಚೈಸಿಕೊಂಡು ಅಲ್ಲಿಗೆ ಹೋದೆನು. ಹೇಮನು ಮನೆಯ ಹೊರಗೆ ನಿಂತಿದ್ದನು. ಮನೆಯ ಒಳಗಿನಿಂದ ಯಾರೋ ಮಾತಾಡುವುದು ಕೇಳಿಸುತ್ತಿತ್ತು. ಹೇಮನು ಒಬ್ಬನೇ ಹೊರಗೆ ನಿಂತಿದ್ದುದು ಏಕೆಂದು ವಿಚಾರಿಸಿದೆನು. ಒಳಗೆ ಮಾತಾಡುತ್ತಿದ್ದವರಿಗೆ ಸ್ವಲ್ಪ ಸಮಯ ಬೇಕಾಗಬಹುದೆಂದು ತಿಳಿಸುತ್ತಾ ಹೇಮನು ಕೆಲವು ವಿಷಯಗಳನ್ನು ಹೇಳಿದನು.

ಒಳಗೆ ಮಾರ್ಥ ಎಂಬ ಹೆಸರಿನ ಒಬ್ಬ ಹೆಂಗುಸಿನೊಡನೆ ಎಮಿಲಿ ಮಾತಾಡುತ್ತಿದ್ದುದೆಂದು ಹೇಳಿದನು. ಮಾರ್ಥಳೂ ಎಮಿಲಿಯೂ ಜತೆಯಲ್ಲೇ ಶಾಲೆಗೆ ಹೋದವರೂ ಜತೆಯಲ್ಲೇ ಓಮರರ ಅಂಗಡಿಯಲ್ಲಿ ಹೊಲಿಗೆ ಕೆಲಸ ಕಲಿತವರೂ ಆಗಿದ್ದರಂತೆ. ಮಾರ್ಥಳು ದುರ್ನಡತೆಗೆ ಬಿದ್ದು, ಈಗ ಎಲ್ಲರಿಂದಲೂ ತ್ಯಜಿಸಲ್ಪಟ್ಟು, ಅನಾಥಳೂ ದರಿದ್ರಳೂ ಆಗಿದ್ದಳಂತೆ. ಹೀಗಾಗಿ ಮಾರ್ಥಳು ಯಾರ್ಮತ್ತನ್ನೇ ಬಿಟ್ಟು ಲಂಡನ್ ಕಡೆಗೆ ಹೋಗಲಿರುವಳೆಂದೂ ಅವಳಿಗೆ ತನ್ನಿಂದ ಸಾಧ್ಯವಿದ್ದಷ್ಟು ಧನ ಸಹಾಯ ನೀಡಬೇಕೆಂದು ಎಮಿಲಿಯೊಡನೆ ಬೇಡಿಕೊಂಡಿದ್ದಳೆಂದೂ ಎಮಿಲಿಯ ಸಮಾಧಾನ ಸಂತೋಷಕ್ಕಾಗಿ ಹೇಮನು ಸ್ವಲ್ಪ ಹಣವನ್ನು ಮಾರ್ಥಳಿಗೆ ಕೊಡುವ ಬಗ್ಗೆ ಎಮಿಲಿಯ ವಶಕ್ಕೆ ಕೊಟ್ಟಿರುವನೆಂದೂ ಆ ಸಂಬಂಧವಾಗಿಯೇ ಅವರು ಮಾತಾಡುತ್ತಿದ್ದರೆಂದೂ ಹೇಮನು ಹೇಳಿದನು

ಸ್ವಲ್ಪ ಸಮಯದಲ್ಲಿ ಪೆಗಟಿ ಮನೆಯ ಬಾಗಿಲು ತೆರೆದು ನಾವಿಬ್ಬರೂ ಒಳಗೆ ಹೋಗಬೇಕಾಗಿ ತಿಳಿಸಿದಳು. ನಾವಿಬ್ಬರೂ ಒಳಗೆ ಹೋದೆವು. ಆಗ ನಾನು ಅಲ್ಲಿ ಕಂಡ ಸ್ತ್ರೀಯನ್ನು ಸ್ವಲ್ಪ ಮಟ್ಟಿಗೆ – ಒಂದು ವಿಧದಲ್ಲಿ – ಗುರುತಿಸಿದೆ. ಸ್ಟೀಯರ್ಫೋರ್ತನೂ ನಾನೂ ಸಮುದ್ರ ದಂಡೆಯಲ್ಲಿ ತಿರುಗಾಡುತ್ತಿದ್ದಾಗ ಹೇಮನನ್ನು ಎಮಿಲಿಯನ್ನೂ ಬೆನ್ನು ಹಿಡಿದು ಹೋಗಿದ್ದ ಸ್ತ್ರೀ ಇವಳೇ ಎಂಬುದನ್ನು ತಿಳಿದೆನು.

ನಾವು ಒಳಗೆ ಹೋದೊಡನೆ ಎಮಿಲಿ ಹೇಮನನ್ನು ನೋಡಿ – “ಮಾರ್ಥಳು ಲಂಡನ್ನಿಗೆ ಹೋಗಬೇಕೆಂದಿರುವಳು” ಅಂದಳು. “ಲಂಡನ್ನಿನಲ್ಲಿ ಮಾಡುವುದೇನಂತೆ” ಎಂದು ಹೇಮನು ಕೇಳಿದ. ಮಾರ್ಥಳು ಈ ಪ್ರಶ್ನೆಯಿಂದ ಬಹು ವೇದನೆ ಪಟ್ಟಿರುವಂತೆ ತೋರಿದಳು. ಹೇಮನಿಗೆ ಎಲ್ಲವೂ ಗೊತ್ತಿದ್ದೂ ಹೀಗೆ ಪ್ರಶ್ನಿಸಬಹುದೇ ಎಂಬಂತೆ ಹೇಮನನ್ನು ನೋಡುತ್ತಾ ಅವಳಂದಳು – “ಅಲ್ಲಿ ನನ್ನನ್ನು ಯಾರಿಗೂ ಗೊತ್ತಿಲ್ಲಾ… “ ಎಂದಷ್ಟೇ ಹೇಳಿ ಅತ್ತಳು. “ಅವಳು ನ್ಯಾಯವಾದ ರೀತಿಯಲ್ಲಿ ದುಡಿದು ಜೀವಿಸುವ ಸಂಕಲ್ಪ ಮಾಡಿರುವಳು. ಆ ವಿಷಯವನ್ನೆಲ್ಲ ಅವಳು ಅತ್ತೆ ಪೆಗಟಿಯವರ ಹತ್ತಿರ ಹೇಳಿರುತ್ತಾಳೆ. ಈಗ ಅವಳು ಕೇಳಿದಂತೆ ಅವಳಿಗೆ ಸ್ವಲ್ಪ ಹಣ ಕೊಡುತ್ತೇನೆ” ಎಂದು ಹೇಳುತ್ತಾ ಎಮಿಲಿ ಮಾರ್ಥಳಿಗೆ ತನ್ನ ಕೈಯ್ಯಲ್ಲಿದ್ದ ಹಣವನ್ನೆಲ್ಲ ಕೊಟ್ಟಳು.

ಮಾರ್ಥಳು ಅಳುತ್ತ ನಮಗೆಲ್ಲರಿಗೂ ನಮಸ್ಕರಿಸಿ ಅಲ್ಲಿಂದ ಹೋದಳು. ಮಾರ್ಥಳು ಹೋದನಂತರ ಎಮಿಲಿ ಬಿಕ್ಕಿ ಬಿಕ್ಕಿ ಅಳತೊಡಗಿದಳು. ಹೇಮನಿಗೆ ದುಃಖವಾಗಿ – “ಅಳಬೇಡ ಮುದ್ದೂ. ಅಳುವಷ್ಟರ ಸಂಗತಿ ಏನಾಗಲಿಲ್ಲವಲ್ಲಾ!” ಎಂದು ಹೇಳುತ್ತಾ ಅವಳ ತಲೆಯನ್ನು ಸವರುತ್ತಾ ಸಂತೈಸಲು ಪ್ರಯತ್ನಿಸಿದನು. “ಹೇಮ್, ನಿನಗೆ ನನ್ನ ಮನಸ್ಸಿನ ಪರಿಸ್ಥಿತಿ ತಿಳಿಯದು” ಎಂದು ಹೇಳಿ ಪೂರೈಸುವುದರೊಳಗೆ ಪುನಃ ಅಳತೊಡಗಿದಳು. ಮತ್ತು, ಅಳುವಿನ ಮಧ್ಯವೇ “ನಾನು ಇರಬೇಕಾದಷ್ಟು ಒಳ್ಳೆಯ ಹುಡುಗಿಯಲ್ಲ. ನಿಮ್ಮೆಲ್ಲರ ಪ್ರೀತಿ, ಆದರ, ಉಪಕಾರಗಳಿಗೆ ತಕ್ಕವಾದ ಕೃತಜ್ಞತೆಯಿಂದಿರುವವಳು ನಾನಲ್ಲ. ಇದನ್ನು ಗ್ರಹಿಸಿಯೇ ದುಃಖಿಸುತ್ತೇನೆ” ಅಂದಳು ಎಮಿಲಿ. “ಹಾಗೆ ನೀನನ್ನಬಾರದು ಎಮಿಲೀ. ನೀನು ನನ್ನನ್ನು ತುಂಬಾ ಪ್ರೀತಿಸುತ್ತಿದ್ದೀಯಾ. ಪ್ರೀತಿಗಿಂತ ಹೆಚ್ಚಿನದು ನಮಗೇನು ಬೇಕು. ನಿನ್ನ ಗುಣಗಳನ್ನೆಲ್ಲ ನಾ ಬಲ್ಲೆ. ನಿನ್ನಲ್ಲಿ ಯಾವ ದುರ್ಗುಣವೂ ಇಲ್ಲ. ಅರಿಯದ ಹಸುಳೆಯಾಗಿ ಏನೇನೋ ಕಲ್ಪಿಸಿಕೊಂಡು ಅಳುತ್ತಿರುವೆ – ದುಃಖಿಸಬೇಡ” ಅಂದನು ಹೇಮ್.

“ಇಲ್ಲ ಹೇಮ್, ನಿನಗೆ ಗೊತ್ತಿಲ್ಲ. ನಿನಗಿದ್ದಷ್ಟು ಸಮಾಧಾನ ಚಿತ್ತ ನನಗಿಲ್ಲ. ಕ್ಷಮಾಗುಣವೂ ನನಗಿಲ್ಲ. ನಿನ್ನಂತೆಯೇ ಸದ್ಗುಣಿಯಾಗಿರಬೇಕೆಂದು ನಾನು ಬಹುವಾಗಿ ಪ್ರಯತ್ನಿಸಿಯೂ ಸೋತಿದ್ದೇನೆ. ನನ್ನ ಮನಸ್ಸು ಬಹು ಚಂಚಲ. ಅದಕ್ಕಾಗಿಯೇ ದುಃಖಿಸುತ್ತೇನೆ” ಎಂದು ಹೇಳಿ, ಎಮಿಲಿ ನನ್ನನ್ನೂ ಪೆಗಟಿಯನ್ನೂ ನೋಡುತ್ತಾ – “ಅತ್ತೆ, ನಾನು ಉತ್ತಮ ಮಗಳಾಗುವಂತೆ ನನ್ನನ್ನು ಹರಸು. ಹೇಮ್, ನನ್ನ ಮನಸ್ಸಿನ ಚಾಂಚಲ್ಯದಿಂದ ನಿನ್ನ ದುಷ್ಟ ಪತ್ನಿಯಾಗದಿರುವಂತೆ ಉದ್ಧರಿಸು. ಮಿ. ಡೇವಿಡ್, ನೀವು ನನ್ನ ಬಾಲ್ಯದ ಸ್ನೇಹಿತರು – ಹಿಂದಿನ ನಮ್ಮ ಸ್ನೇಹವನ್ನು ನೆನೆದು ನನ್ನನ್ನು ಉದ್ಧರಿಸಿರಿ. ನನ್ನ ಮನಸ್ಸಿನಲ್ಲಿ ಇಂದು ಎದ್ದಿರುವ ಚಂಡಮಾರುತವನ್ನು ನಿಲ್ಲಿಸುವವರು ಯಾರೂ ಇಲ್ಲವೇ!” ಎಂದನ್ನುತ್ತಾ ವಿಪರೀತವಾಗಿ ಎಮಿಲಿ ಅತ್ತಳು. ತನ್ನ ಬಾಲ್ಯದ ಸ್ನೇಹಿತೆ – ಓಮರರಲ್ಲೂ ಶಾಲೆಯಲ್ಲೂ ಒಟ್ಟಿಗೆ ಕಲಿತವರು ಎಂಬುದಾಗಿ ಮಾರ್ಥಳನ್ನು ಗ್ರಹಿಸಿಯೇ ಎಮಿಲಿ ಹೀಗೆ ಅಳುವುದೆಂಬುದನ್ನು ಗ್ರಹಿಸಿ, ನಮಗೆ ತಿಳಿದ ದಾರಿಗಳಿಂದೆಲ್ಲ ಅವಳನ್ನು ಸಮಾಧಾನಪಡಿಸಲು ಪ್ರಯತ್ನಿಸಿದೆವು. ಕೊನೆಗೆ ಹೇಗೋ ಅವಳು ಸಮಾಧಾನ ಹೊಂದಿದಳು. ಅನಂತರ ಎಮಿಲಿ ಹೇಮನ ಜತೆಯಲ್ಲಿ ಮಿ. ಪೆಗಟಿಯ ಮನೆಯ ಕಡೆಗೆ ಹೋದಳು.

(ಮುಂದುವರಿಯಲಿದೆ)