ಅಧ್ಯಾಯ ಹತ್ತೊಂಬತ್ತು
[ಡೇವಿಡ್ ಕಾಪರ್ಫೀಲ್ಡ್ನ ಜೀವನ ವೃತ್ತಾಂತ ಮತ್ತು ಅನುಭವಗಳು, ಕಾದಂಬರಿ. ಮೂಲ ಇಂಗ್ಲಿಷಿನಲ್ಲಿ ಚಾರ್ಲ್ಸ್ ಡಿಕನ್ಸ್, ಕನ್ನಡ ಭಾವಾನುವಾದ ಎ.ಪಿ. ಸುಬ್ಬಯ್ಯ]
ವಿ-ಧಾರಾವಾಹಿಯ ಇಪ್ಪತ್ತನೇ ಕಂತು
ಈ ತೆರನಾಗಿ ನಾನು ನನ್ನ ಹದಿನೇಳನೆಯ ವರ್ಷದಲ್ಲಿ ಕಾಲಿಟ್ಟೆನು. ಶಾಲೆಯನ್ನೂ ಡಾಕ್ಟರ್ ಸ್ಟ್ರಾಂಗರನ್ನೂ ಬಿಟ್ಟು ಹೊರಡಲು ನನಗೆ ದುಃಖವಾಯಿತೋ ಆಗಲಿಲ್ಲವೋ ಎಂಬುದು ನಿಶ್ಚೈಸಲಾಗದಿದ್ದ ಸಂಗತಿ. ನಮ್ಮ ಚಿಕ್ಕದೊಂದು ಪ್ರಪಂಚವೇ ಆಗಿದ್ದ ಶಾಲೆಯಲ್ಲಿ ನಾನು ಖ್ಯಾತಿ ಪಡೆದಿದ್ದೆ. ಡಾ. ಸ್ಟ್ರಾಂಗರ ನಂಬಿಕೆ ವಿಶ್ವಾಸಗಳಿಗೆ ಪಾತ್ರನಾಗಿ ಅವರ ಆತ್ಮೀಯನೇ ಆಗಿದ್ದೆ. ಹೀಗಿರುವಾಗ ಅಲ್ಲಿಂದ ಬಿಟ್ಟು ಹೊರಡುವುದೆಂದರೆ ಸ್ವಲ್ಪ ಬೇಸರದ ಸಂಗತಿ ನಿಜವಾಗಿತ್ತು. ಆದರೂ ನನ್ನ ಭವಿಷ್ಯವನ್ನು ನಿರ್ಮಿಸಿಕೊಳ್ಳುವ ಸಂಪೂರ್ಣ ಹಕ್ಕು ನನ್ನದಾಗಿತ್ತು. ಸಮಾಜದಲ್ಲಿ ಕಂಡು ಬರುವ ಸಹಸ್ರಾರು ತಪ್ಪುಗಳನ್ನು ತಿದ್ದಿ ಸಮಾಜವನ್ನು ಸರಿಪಡಿಸುವ ಹಕ್ಕು, ಶಕ್ತಿ, ಅವಕಾಶಗಳು ನನ್ನೆದುರಿಗೆ – ನನ್ನದಾಗಿ – ಕಾದು ನಿಂತಿರುವಾಗ ಶಾಲೆಯನ್ನು ಬಿಡುವುದು ದುಃಖಕ್ಕಿಂತಲೂ ಸಂತೋಷಕರ ಆಗಿತ್ತು. ನಾನಿನ್ನು ಯಾವ ವೃತ್ತಿಯನ್ನು ಕೈಗೊಳ್ಳಬೇಕು, ನನ್ನ ಗುರಿಯೇನು, ಎಂಬುದನ್ನು ಸ್ಪಷ್ಟವಾಗಿ ಆಗಲೇ ನಿಶ್ಚೈಸಿಕೊಳ್ಳಲಾರದವನೇ ಆಗಿದ್ದರೂ ನನ್ನ ತಾರುಣ್ಯ ಮತ್ತೂ ಸದ್ಯವೇ ವಿದ್ಯಾನಿಲಯದಿಂದ ಹೊರಬಂದ ಹೊಸ ಹುರುಪಿನ ಕಾರಣವಾಗಿ, ನಾನು ಯಾವ ಕೆಲಸವನ್ನು, ಎಲ್ಲಿಯೂ ಸಾರ್ಥಕವಾಗಿ ಮಾಡಿ ಪೂರೈಸಬಲ್ಲೆನೆಂದು ನನಗೆ ತೋರುತ್ತಿತ್ತು. ಪ್ರಪಂಚದ ಯಾವ ಭಾಗದಲ್ಲೇ ಆದರೂ – ನೆಲ, ಜಲ ಮಾರ್ಗಗಳಿಂದ ಪಯಣ ಬೆಳೆಸಿ – ಯಾವ ತರದ ಮಹತ್ವದ ಸಾಹಸ, ಶೋಧನೆ, ಅಥವಾ ಕಾರ್ಯಗಳನ್ನು ಕುರಿತು ಪ್ರವರ್ತಿಸಲೂ ಸಿದ್ಧನಾಗಿದ್ದೆ. ಮತ್ತೂ ಅಂಥ ಯಾವ ಕೆಲಸಗಳಿಗಾದರೂ ನಾನು ಸಂಪೂರ್ಣ ಶಕ್ತನೂ ಯೋಗ್ಯನೂ ಆಗಿದ್ದೇನೆಂದು ನಂಬಿದ್ದೆನು. ಅತ್ತೆಯ ಅಭಿಪ್ರಾಯದಲ್ಲಿ ಒಬ್ಬ ಯುವಕ ಸ್ವತಂತ್ರ ಜೀವನ ನಡೆಸಲು ದೇಶ ಸಂಚಾರ ಅಗತ್ಯವೆಂದು ಇತ್ತು. ಆದ್ದರಿಂದ ನಾನು ಒಂದು ತಿಂಗಳೋ ಅಥವಾ ಮೂರು ವಾರಗಳಷ್ಟು ಕಾಲದಲ್ಲೋ ಲಂಡನ್ ನಗರದಲ್ಲೂ ಮತ್ತು ನಮ್ಮ ದೇಶದ ಇತರ ಸ್ಥಳಗಳಲ್ಲೂ ತಿರುಗಿ ಬರಬೇಕೆಂದು ನಮ್ಮ ಅತ್ತೆ ಮತ್ತೂ ಮಿ. ಡಿಕ್ಕರು ಏರ್ಪಡಿಸಿದರು. ಈ ಪ್ರವಾಸ ಪ್ರಪಂಚವನ್ನೆಲ್ಲ ತಿರುಗಿದಷ್ಟೇ ಮಹತ್ವದ್ದೆಂದು ನನಗೆ ತೋರುತ್ತಿತ್ತು. ಅದಕ್ಕೆ ಅಗತ್ಯಬಿದ್ದ ಹಣ, ಕೈ ಪೆಟ್ಟಿಗೆ, ಮತ್ತಿತರ ವಸ್ತುಗಳನ್ನು ಅತ್ತೆ ನನಗೆ ಕೊಟ್ಟಳು. ಅಲ್ಲದೆ ನನ್ನನ್ನು ಕುರಿತು –
“ನಿನ್ನ ತಂದೆಯಲ್ಲಿ ಅನೇಕ ಸದ್ಗುಣಗಳಿದ್ದುವು. ಆದರೆ ಆ ಗುಣಗಳು ಅವನ ಜೀವನಕ್ಕೆ ಉಪಕಾರ ಗೈಯ್ಯಲಿಲ್ಲ. ಅವನ ಅನಿಶ್ಚಿತ ವ್ಯವಹಾರ ಧೋರಣೇ ಮತ್ತೂ ಆಲಸ್ಯ ಅವನನ್ನು ಅಂಥ ಕಷ್ಟ ಪರಿಸ್ಥಿತಿಗೆ ತಂದವು. ನೀನು ಎಚ್ಚರದಿಂದಿರು. ನಿನ್ನ ನಡೆನುಡಿಗಳು ಉತ್ತಮತರದ್ದಾಗಿರಲಿ. ನಿನ್ನ ವ್ಯಕ್ತಿತ್ವವನ್ನು ಬೆಳೆಸಿ ಕಾದುಕೊಂಡಿರು. ನಿನ್ನನ್ನು ಸತ್ಕಾರ್ಯಗಳಿಗೆ ಮಾತ್ರ ಇತರರು ಉಪಯೋಗಿಸಲು ಎಡೆ ಕೊಡು. ಅನ್ಯಥಾ ನಿನ್ನನ್ನು ಇತರರು ಉಪಯೋಗಿಸದಂತೆ ಜಾಗ್ರತನಾಗಿರು” ಎಂದು ಬುದ್ಧಿವಾದಗಳನ್ನು ಹೇಳಿ, ನನ್ನನ್ನು ಹರಸಿ ಕಳುಹಿಸಿಕೊಟ್ಟಳು.
ನನ್ನ ದೇಶಸಂಚಾರ ಪ್ರಾರಂಭದಲ್ಲೇ ಮಿ. ವಿಕ್ಫೀಲ್ಡರಿಗೆ ಈ ವರ್ತಮಾನಗಳನ್ನು ತಿಳಿಸುವುದು ನ್ಯಾಯವೆಂದು ನಾನು ಮಿ. ವಿಕ್ಫೀಲ್ಡರ ಮನೆಗೆ ಹೋದೆ. ಅಲ್ಲಿ ನಾನು ಮೊದಲು ಭೇಟಿಯಾದುದು ಏಗ್ನೆಸ್ಸಳನ್ನು. ನನ್ನನ್ನು ಕಂಡಕೂಡಲೇ ಅವಳು ಬಹಳ ಸಂತೋಷಪಟ್ಟು, ಒಂದು ಕುರ್ಚಿಯನ್ನು ಕೊಟ್ಟು ಕುಳಿತುಕೊಳ್ಳಲು ಹೇಳಿ, ನನ್ನೊಡನೆ ಮಾತನಾಡತೊಡಗಿದಳು – “ನೀನು ಇಲ್ಲಿಂದ ಹೋದಮೇಲೆ ಇದು ಮೊದಲಿನ ಮನೆಯೇ ಆಗಿರಲಿಲ್ಲ, ಕಾಪರ್ಫೀಲ್ಡ್” ಅಂದಳು ಏಗ್ನೆಸ್. “ನನಗೂ ಸಾಧಾರಣ ಅದೇ ನಮೂನೆಯ ಭಾವನೆ ತೋರುತ್ತದೆ, ಏಗ್ನೆಸ್. ನಾನು ನಿಮ್ಮ ಮನೆ ಬಿಟ್ಟನಂತರ ನಾನೊಬ್ಬ ಬೇರೆಯೇ ಮನುಷ್ಯನಂತೆ – ನನ್ನ ಬಲಗೈ ಕಳಕೊಂಡವನಂತೆ ತೋರುತ್ತಿದೆ, ಏಗ್ನೆಸ್” ಎಂದು ನಾನು ಹೇಳಿದೆ. “ಬಲಗೈ ಕಳೆದುಕೊಂಡವನಂತೆ! ಆ ಮಹತ್ವವಿಲ್ಲೇನಿದೆ?” ಎಂದು ವಿನೋದವಾಗಿ ವಿಚಾರಿಸಿದಳು. “ಮಹತ್ವವು ಇಲ್ಲಿಲ್ಲದಿದ್ದರೆ ಮತ್ತೆಲ್ಲಿರಬಲ್ಲುದು – ನಿನ್ನ ಬುದ್ಧಿಯ ಸಹಾಯವನ್ನು ಪಡೆದವರಿಗೆ ಮಾತ್ರ ಆ ವಿಷಯ ಗೊತ್ತು.” “ಏನು ಕಾಪರ್ಫೀಲ್ಡ್, ನನ್ನ ಪರಿಚಯವಾದವರಿಗೆಲ್ಲ ಈ ಹೊಗಳುವ ಬುದ್ಧಿ ಎಲ್ಲಿಂದ ಬಂತು!” ಎಂದು ಏಗ್ನೆಸ್ಸಳು ಪ್ರಶ್ನಿಸಿದಳು. “ನೀನು ಹಾಗೆ ಗ್ರಹಿಸಬಾರದು ಏಗ್ನೆಸ್. ನಿನ್ನ ಶಾಂತ ಸ್ವಭಾವ, ಬುದ್ಧಿಶಕ್ತಿ, ದಯಾಮಯ ನಡೆನುಡಿಗಳೆಲ್ಲ ನಿನ್ನ ಪರಿಚಯವಾದವರ ಮೇಲೆ ಪರಿಣಾಮಗಳನ್ನು ತಂದೇ ತರುವುವು. ಇದು ಮುಖಸ್ತುತಿಯ ಮಾತಲ್ಲ – ಇತರರು ಅನ್ನುವುದೂ ಮುಖಸ್ತುತಿಯಲ್ಲ. ಇನ್ನೂ ಮನಬಿಚ್ಚಿ ಹೇಳುವುದಾದರೆ, ಏಗ್ನೆಸ್, ನಿನ್ನನ್ನು ಸ್ಮರಿಸಿ, ನಿನ್ನ ಸಹಾಯ ತೆಗೆದುಕೊಂಡು ಮಾಡಿದ ಕಾರ್ಯವೆಲ್ಲ ಮಂಗಳಕರವಾಗುವುದು – ಯಶಸ್ವಿಯಾಗುವುದು – ಇದು ಸ್ವಾನುಭವ” ಎಂದು ನಾನು ಆವೇಶದಿಂದ ಉತ್ತರ ಕೊಟ್ಟೆನು.
ಏಗ್ನೆಸ್ಸಳು ಸ್ವಲ್ಪ ನಾಚಿಕೆಪಟ್ಟುಕೊಂಡಳು. ಅನಂತರ ನಗಾಡುತ್ತಾ “ಮಿಸ್ ಲಾರ್ಕಿನ್ಸಳನ್ನೂ ಇದೇ ರೀತಿಯಲ್ಲಿ ಹೊಗಳುತ್ತಿದ್ದೆಯಲ್ಲವೇ?” ಎಂದು ಕೇಳಿ, ನಾನು ಉತ್ತರ ಕೊಡುವ ಮೊದಲು, ಗಂಭೀರಭಾವವನ್ನು ತಂದುಕೊಂಡು – “ಕಾಪರ್ಫೀಲ್ಡ್, ನಾನೊಂದು ವಿಷಯವನ್ನು ನಿನ್ನಲ್ಲಿ ವಿಚಾರಿಸಬೇಕೆಂದಿರುವೆನು. ನೋಡು, ನನ್ನ ತಂದೆಯವರ ದೇಹ ಮತ್ತು ಮಾನಸಿಕ ಸ್ಥಿತಿಯಲ್ಲಿ ಏನಾದರೂ ವ್ಯತ್ಯಾಸವಾದದ್ದನ್ನು ಕಂಡಿರುವಿಯೇನು?” ಎಂದು ಕೇಳಿದಳು. “ಹೌದು, ಈ ಪ್ರಶ್ನೆಯು ನನ್ನ ಮನಸ್ಸಿನಲ್ಲಿಯೂ ಮೂಡಿದೆ. ಅವರು ಮೊದಲಿನ ಮಿ. ವಿಕ್ಫೀಲ್ಡರೇ ಅಲ್ಲವೆನ್ನುವಷ್ಟರ ವ್ಯತ್ಯಾಸವು ಅವರಲ್ಲಿ ಕಂಡು ಬರುತ್ತಿದೆ” ಎಂದು ನಾನು ಹೇಳಿದೆನು. “ನನ್ನ ಅಭಿಪ್ರಾಯವೂ ಹಾಗಿರುವುದರಿಂದಲೇ ಈ ವಿಷಯದಲ್ಲಿ ನಿನ್ನನ್ನು ಕೇಳಿದೆ. ಅವರು ಈಗೀಗ ವಿಪರೀತ ವೈನ್ ಕುಡಿಯುತ್ತಾರೆ. ಅಲ್ಲದೆ, ಹೀಗೆ ಕುಡಿಯುತ್ತಾ ಕೆಲಸ ಮಾಡುತ್ತಾ ಪುನಃ ಕುಡಿಯುತ್ತಾ ರಿಕಾರ್ಡುಗಳ ಪರಿಶೀಲನೆ, ರಿಕಾರ್ಡುಗಳ ತಯಾರಿಕೆ, ತಂದಿರಿಸಿರುವ ರಿಕಾರ್ಡುಗಳಿಗೆ ದಸ್ಕತ್ತು ಹಾಕುವುದು ಮೊದಲಾದ ಕೆಲಸವನ್ನು ಮಾಡುತ್ತಾರೆ. ಯಾವ ಹೊಸ ಆಲೋಚನೆ ಮಾಡುವ ಮೊದಲು ವೈನ್ ಕುಡಿಯಲೇ ಬೇಕಾದ ಪರಿಸ್ಥಿತಿ ತೋರುತ್ತದೆ. ತುಂಬಾ ಬುದ್ಧಿ ಉಪಯೋಗಿಸಬೇಕಾದ ವಕೀಲ ವೃತ್ತಿಯಲ್ಲಿ ಈ ರೀತಿ ವೈನನ್ನು ಆಧರಿಸಿ ಕೆಲಸ ಮಾಡುವುದು ಸರಿಯಾಗದು. ಕಾರ್ಯಗಳು ಕೆಡಬಹುದು. ಇನ್ನು ಉರೆಯಾಹೀಪನೋ, ಅವನು ಯಾವುದನ್ನೂ ಆಲೋಚಿಸದೆ ಅವರಿಂದ ಸದಾ ಕೆಲಸ ಮಾಡಿಸುತ್ತಾನೆ. ತಾನೂ ಅವರ ಕುರಿತಾದ ಕೆಲಸವನ್ನು ಮಾಡುತ್ತಿರುತ್ತಾನೆ” ಎಂದಷ್ಟು ಮಾತ್ರ ಹೇಳಿ, ಏಗ್ನೆಸ್ಸಳು ಸ್ವಲ್ಪ ಆಲೋಚಿಸುತ್ತಿರುವಂತೆ ತೋರಿದಳು. ನನ್ನೊಡನೆ ಎಲ್ಲವನ್ನೂ ಹೇಳಬಹುದೋ, ಹೇಳಬೇಕೋ ಎಂದು ಆಲೋಚಿಸುತ್ತಿದ್ದಂತೆ ತೋರಿದಳು. ಅನಂತರ ಮೆಲ್ಲಮೆಲ್ಲಗೆ, ದುಃಖಪೂರಿತವಾಗಿ ಹೇಳಿದಳು –
“ಒಂದು ದಿನ ಉರೆಯನ ಸೂಚನೆ, ಸಲಹೆಗಳ ಪ್ರಕಾರ ತಂದೆಯವರು ತಮ್ಮ ಆಫೀಸಿನಲ್ಲಿ ಕೆಲಸಮಾಡಿ, ಅಲ್ಲಿಂದ ಬಂದು ಇಲ್ಲಿ ಕುಳಿತದ್ದೇ ತಡ, ಅವರು ತಲೆ ಅಡಿಗೆ ಹಾಕಿಕೊಂಡು ಕಂಬನಿ ಸುರಿಸುತ್ತಿದ್ದರು.” ಏಗ್ನೆಸ್ಸಳು ಈ ಮಾತನ್ನು ಮುಂದುವರಿಸಿ ಹೇಳುವುದರ ಒಳಗೆ ಮಿ. ವಿಕ್ಫೀಲ್ಡರು ಅಲ್ಲಿಗೆ ಬಂದರು. ನಾವು ಬೇರೆ ವಿಷಯಗಳನ್ನು ಮಾತಾಡುತ್ತಾ ಸ್ವಲ್ಪ ಸಮಯ ಅಲ್ಲೇ ಇದ್ದೆವು. ಆ ದಿನ ರಾತ್ರಿ ಡಾ. ಸ್ಟ್ರಾಂಗರ ಮನೆಯಲ್ಲಿ ನಾವು ಕೆಲವರು ಕೂಡಿ ಆಗಬೇಕಾಗಿದ್ದ ವಿಶೇಷ ಕಾರ್ಯಗಳಿದ್ದುವು. ಆ ಕಾರ್ಯಗಳ ಜತೆಗೆ ಚಿಕ್ಕ ಒಂದು ಔತಣವನ್ನು ಏರ್ಪಡಿಸಿ ಮಿ. ವಿಕ್ಫೀಲ್ಡ್, ಏಗ್ನೆಸ್ ಮತ್ತೂ ನನ್ನನ್ನು ಆಮಂತ್ರಿಸಿದ್ದರು. ಡಾಕ್ಟರರ ಅತ್ತೆ ಮಿಸೆಸ್ ಮಾರ್ತಲ್ ಹೇಮಳೂ ಡಾಕ್ಟರರ ಮನೆಯಲ್ಲಿದ್ದಳು. ಡಾ. ಸ್ಟ್ರಾಂಗರು ತಮ್ಮ ವೃದ್ಧಾಪ್ಯದ ಕಾರಣವಾಗಿ ತಮ್ಮ ಕೆಲಸದಿಂದ ನಿವೃತ್ತಿ ಹೊಂದಿದ್ದರು.
ರಾತ್ರಿ ಭೋಜನವಾದನಂತರ ನಾವೆಲ್ಲಾ ಕುಳಿತು ನಮ್ಮ ಮುಖ್ಯ ಕಾರ್ಯಗಳನ್ನು ಕುರಿತು ಮಾತಾಡಿದೆವು. ಆಗಬೇಕಾಗಿದ್ದ ಕಾರ್ಯ ಮಿ. ವಿಕ್ಫೀಲ್ಡ್ ವಕೀಲರಿಂದ, ಡಾ. ಸ್ತ್ರಾಂಗರಿಗಾಗಿ ಎಂಬುದು ಸ್ಪಷ್ಟವಾಗಿತ್ತು. ಜೇಕ್ ಮಾಲ್ಡನ್ನನ ಅನಾರೋಗ್ಯ, ಅವನು ಇಂಡಿಯದಿಂದ ಹಿಂತಿರುಗಿ ಬಂದನಂತರ ಅವನಿಗೆ ಜೀವನ ವೃತ್ತಿಯನ್ನು ಒದಗಿಸುವುದು, ಡಾ. ಸ್ಟ್ರಾಂಗರ ಆಸ್ತಿ, ಹಣಕಾಸು ಮೊದಲಾದುವುಗಳನ್ನು ಕುರಿತಾದ ಒಂದು ವ್ಯವಸ್ಥಾಪತ್ರ – ಇವೇ ಮೊದಲಾದ ವಿಷಗಳನ್ನು ಅವರೆಲ್ಲರೂ ಕೂಡಿ ಮಾತಾಡಿದರು.
ಇದೇ ಸಂದರ್ಭದಲ್ಲಿ ಜೇಕ್ ಮಾಲ್ಡನ್ನನಿಂದ ಅನ್ನಿಗೆ ಬಂದಿದ್ದ ಪತ್ರವನ್ನು ನಾವೆಲ್ಲರೂ ಕೇಳುವಂತೆ ಅನ್ನಿ ಓದಬೇಕೆಂದು ಅನ್ನಿಯ ತಾಯಿ ಒತ್ತಾಯಪಡಿಸಿದಳು. ಅನ್ನಿ ಓದಲು ನಿರಾಕರಿಸಿದುದಕ್ಕೆ ಸಿಟ್ಟುಗೊಂಡು ಮಿಸೆಸ್ ಮಾರ್ತಲ್ ಹೇಮಳೆ ಆ ಪತ್ರವನ್ನು ದೊಡ್ಡದಾಗಿ ಓದಿದಳು. ಪತ್ರದಲ್ಲಿ ಡಾ. ಸ್ಟ್ರಾಂಗರನ್ನು ಕುರಿತು ಕರ್ತವ್ಯ ಲೋಪ, ವಚನಭ್ರಷ್ಟತನ ಮೊದಲಾದ ದೂಷ್ಯಗಳಿದ್ದುವು. ಈ ಒಕ್ಕಣೆಗಳನ್ನು ಕೇಳಿ ಮಿ. ವಿಕ್ಫೀಲ್ಡರು ಸ್ವಲ್ಪ ಕೋಪಗೊಂಡರು. ಅಷ್ಟೂ ಅಲ್ಲದೆ, ಆ ಪತ್ರದ ದೂಷಣೆಗಳಿಗೆ ಅನ್ನಿಯ ಸಂಕುಚಿತ ಬುದ್ಧಿಯೇ ಕಾರಣವೆಂಬಂತೆಯೂ ಸಂದರ್ಭಾನುಸಾರವಾಗಿ ಪ್ರಚ್ಛನ್ನವಾಗಿ ತೋರಿಸಿದರು.
ನಮ್ಮ ಕಾರ್ಯಗಳು ಮುಗಿದು ನಾವು ಹೊರಡುವ ಸಂದರ್ಭದಲ್ಲಿ ನಡೆದ ಒಂದು ಪ್ರಸಂಗ ಸ್ವಲ್ಪ ದುಃಖದ ವಿಷಯ. ನಾವು ಹೊರಡುವ ಸಮಯದಲ್ಲಿ, ಬೀಳ್ಕೊಡುವಾಗ ಅನ್ನಿ ಏಗ್ನೆಸ್ಸಳಿಗೆ ಹಸ್ತಲಾಘವನ್ನಿತ್ತಳು. ಆಗಲೇ ಎಚ್ಚತ್ತವರಂತೆ ತೋರುತ್ತಿದ್ದ ಮಿ. ವಿಕ್ಫೀಲ್ಡರು ಏಗ್ನೆಸ್ಸಳನ್ನು ಅನ್ನಿ ಆಲಂಗಿಸಲು ಎದುರು ಬರುವ ಮಧ್ಯೆ – ಅರಿಯದೆ ಬಂದವರಂತೆ ಪ್ರವೇಶಿಸಿ, ಆಲಿಂಗನವನ್ನು ತಡೆ ಹಿಡಿದು ಮಗಳನ್ನು ಕರೆದುಕೊಂಡು ಹೋದರು. ಆಗ ಅನ್ನಿಯ ಮುಖ ಹಿಂದೊಮ್ಮೆ – ಜಾಕ್ ಮಾಲ್ಡನ್ನನು ಪರದೇಶಕ್ಕೆ ಹೊರಡಲಿದ್ದ ದಿನ ರಾತ್ರಿ ಕಂಡಂತೆ ಕಳಂಕ, ಪಶ್ಚಾತ್ತಾಪಯುತವಾಗಿ ತೋರಿತು. ಆಗ ನನ್ನ ಮನಸ್ಸಿನಲ್ಲಿ ಡಾಕ್ಟರ್ ಸ್ಟ್ರಾಂಗರಿಗೆ ಅವರ ವಿದ್ಯಾಪಾಂಡಿತ್ಯಕ್ಕೆ ತಕ್ಕಷ್ಟು ಲೌಕಿಕಜ್ಞಾನವಿರಲಿಲ್ಲವೆಂಬ ಭಾವನೆ ಮೂಡಿತು. ಈ ಭಾವನೆಗೆ ಕಾರಣವೇನಿರಬಹುದೆಂದು ನಾನು ನಿರ್ಧರಿಸಲಾರೆನಾಗಿದ್ದರೂ ಆ ಭಾವನೆ ನನ್ನಲ್ಲಿ ಬಲವಾಗಿ ಬೇರೂರಿತು. ಆ ದಿನ ನಮ್ಮ ಮನೆಗೆ ಹಿಂತಿರುಗುವಾಗ ದಾರಿಯಲ್ಲಿ ಮಿ. ವಿಕ್ಫೀಲ್ಡರಿಗೆ ನಾನು ದೇಶಯಾತ್ರೆ ಮಾಡುವ ವಿಷಯವನ್ನು ತಿಳಿಸಿದೆನು.
ಮರುದಿನ ಬೆಳಗ್ಗೆ ನಾನು ಫಸ್ಟ್ ಕ್ಲಾಸ್ ಟಿಕೆಟ್ಟನ್ನು ತೆಗೆದುಕೊಂಡು ಲಂಡನ್ ಬಂಡಿಯನ್ನೇರಿ ನನ್ನ ಪ್ರವಾಸದ ಪ್ರಥಮ ಹಂತವನ್ನು ಪ್ರಾರಂಭಿಸಿದೆ. ನನ್ನ ಪ್ರಾಯ, ನನ್ನ ಬೆಳವಣಿಗೆಗಳನ್ನೆಲ್ಲ ಗ್ರಹಿಸಿಕೊಂಡು ಜನರು ನನ್ನನ್ನು ಹಗುರವಾಗಿ ಕಾಣಬಹುದೆಂಬ ಅಂತರಂಗದ ಸಂಶಯಯುತ ಭೀತಿ ನನ್ನನ್ನು ಬಾಧಿಸುತ್ತಿದ್ದ ಹಾಗೆಯೇ ಅಂದಿನ ಪ್ರಸಂಗವೂ ನಡೆಯಿತು. ನನ್ನ ಹಕ್ಕು, ಗೌರವಗಳನ್ನು ಕಾಯ್ದುಕೊಳ್ಳುವುದಕ್ಕಾಗಿಯೇ ನನ್ನ ನಡೆನುಡಿ, ಠೀವಿಗಳನ್ನು ಬದಲಾಯಿಸಿ ನಾನು ಫಸ್ಟ್ ಕ್ಲಾಸ್ ಸ್ಥಾನದಲ್ಲಿ ಕುಳಿತಿದ್ದರೂ ಬಂಡಿಯವನು ಮರ್ಯಾದೆ ರೂಪದಿಂದ ತೋರುವ ನಯಮಾತುಗಳಿಂದ ನನ್ನನ್ನು ಬಲಾತ್ಕರಿಸಿ, ನನ್ನನ್ನು ಇನ್ನೊಂದು ಸ್ಥಳದಲ್ಲಿ ಕುಳ್ಳಿರಿಸಿ, ನನ್ನ ಸ್ಥಾನವನ್ನು ಒಬ್ಬ ಕುದುರೆ ಸಾಕಣೆ ತಜ್ಞನಿಗೆ ಒದಗಿಸಿದನು. ಆ ದಿನ ಲಂಡನ್ನಿಗೆ ತಲುಪಿ, ರಾತ್ರಿ ಒಂದು ಹೋಟೆಲಿನಲ್ಲಿ ಉಳಿದುಕೊಂಡು ಅಂದೇ ಲಂಡನ್ನಿನಲ್ಲಿ ನಡೆಯುತ್ತಿದ್ದ `ಜೂಲಿಯಸ್ ಸೀಸರ್’ ನಾಟಕವನ್ನು ನೋಡಿದೆ. ಲೇಟಿನ್ ಭಾಷೆಯನ್ನಾಡುವ ರೋಮನ್ ಚಕ್ರವರ್ತಿಗಳೂ ಅವರ ಪರಿವಾರವೂ ನನ್ನ ಸಂತೋಷಕ್ಕಾಗಿ ಸಿಂಹಾಸವನ್ನೇರಿ, ಸಿಂಹಾಸನದಿಂದಿಳಿದು, ಅಂದಚಂದದ ಅಲಂಕಾರಗಳನ್ನು ಪ್ರದರ್ಶಿಸಿ, ತಕ್ಕ ಸಮಯದಲ್ಲಿ ಅದೃಶ್ಯರಾಗುವ ನಾಟಕವನ್ನು ತಿಳಿದು ಸಂತೋಷಿಸುವುದು ಅದೇ ಲೇಟಿನ್ ಭಾಷೆಯನ್ನು ಶಾಲೆಯಲ್ಲಿ ಅಭ್ಯಸಿಸುವುದಕ್ಕಿಂಥ ಎಷ್ಟೆಷ್ಟೋ ಸುಲಭವೆಂದು ತೋರಿತು. ನಾಟಕವನ್ನು ನೋಡಿ ಹಿಂತಿರುಗಿ ಹೋಟೆಲಿಗೆ ಬರುವಾಗ ಸ್ಟೀಯರ್ಫೋರ್ತನು ಜತೆ ಸಿಕ್ಕಿದನು. ಅವನು ಇದೇ ಹೋಟೆಲಿನ ಇನ್ನೊಂದು ಕೋಣೆಯಲ್ಲಿ ಇಳಿದಿದ್ದನು. ಅವನು ನನ್ನ ಕೋಣೆಯನ್ನು ನೋಡಿ ಸಿಟ್ಟುಗೊಂಡು, ಹೋಟೆಲಿನ ಯಜಮಾನನನ್ನು ಕರೆದು `ಫಸ್ಟ್ ಕ್ಲಾಸ್ ರೂಮ್’ ಎಂದು ಹೆಸರು ಕೊಟ್ಟು, ದುಡ್ಡು ಸೆಳೆದು `ಥರ್ಡ್ ಕ್ಲಾಸ್ ರೂಮ್’ ಕೊಡಬಾರದೆಂದು ಗದರಿಸಿದನು. ಅನಂತರ ನನ್ನನ್ನು ಇನ್ನೊಂದು ಸುಸಜ್ಜಿತವಾಗಿದ್ದ ಕೋಣೆಗೆ ಕರೆದುಕೊಂಡು ಹೋಗಿ ಬಿಟ್ಟರು. ನನ್ನನ್ನು ಹೋಟೆಲಿನವರು ವಂಚಿಸಿದ್ದ ಸಂಗತಿ ಆಗ ನನಗೆ ತಿಳಿಯಿತು.
ಆ ದಿನ ನಾನು ಸ್ಟೀಯರ್ಫೋರ್ತನಿಗೆ ನನ್ನ ದೇಶ ಸಂಚಾರದ ವಿಷಯ ತಿಳಿಸಿದೆನು. ಸ್ಟೀಯರ್ಫೋರ್ತನು ದೇಶಸಂಚಾರಕ್ಕೆ ಬೇಕಾದ ಅನುಭವಗಳು ಕೆಲವನ್ನು ತಿಳಿಸಿದನು. ಅವನ ನಡೆ, ನುಡಿ, ಲೋಕಾನುಭವ ಎಲ್ಲವೂ ಈ ಮೊದಲಿಗಿಂತಲೂ ಹೆಚ್ಚೇ ಆಗಿದ್ದುವು. ಅವನು ಹೋದಲ್ಲೆಲ್ಲಾ ಅವನೇ ಪ್ರಭುವಾಗಿ ಮೆರೆಸಬಲ್ಲ ಶಕ್ತಿಗಳು ಅವನಲ್ಲಿದ್ದುವು. ನನ್ನ ದೇಶಸಂಚಾರದಲ್ಲಿ ಸ್ಟೀಯರ್ಫೋರ್ತನ ಮನೆಗೆ ಹೋಗುವುದೂ ಒಂದು ಅಂಗವಾಗಿ ಸೇರಿಸಿಕೊಳ್ಳಬೇಕೆಂದು ಅವನು ಹೇಳಿದ್ದಕ್ಕೆ ನಾನು ಸಮ್ಮತಿಸಿ, ಮರುದಿನವೇ ಅವನಲ್ಲಿಗೆ ಹೋಗುವುದಾಗಿ ಹೇಳಿದೆನು.
(ಮುಂದುವರಿಯಲಿದೆ)