ಜಿಟಿನಾರಾಯಣ ರಾಯರ ‘ಮುಗಿಯದ ಪಯಣ’ ವಿ-ಧಾರಾವಾಹಿಯ ಕಂತು ಹದಿನೈದು
ಅಧ್ಯಾಯ ಇಪ್ಪತ್ತೇಳು

ಈಗ ಸಹಕಾರ ಸಂಘ ಪ್ರಕರಣದಿಂದ ಕಾಲೇಜಿಗೆ ಮರಳೋಣ (೧೯೫೪). ಹೊಸ ಪೀಳಿಗೆಯ ಯುವ ಉತ್ಸಾಹೀ ಉಪನ್ಯಾಸಕರ ತಂಡ, ಕಾಲೇಜಿನ ಸರ್ವಾಂಗ ಸುಂದರ ಅಭಿವೃದ್ಧಿಯೊಂದನ್ನೇ ದೃಷ್ಟಿಯಲ್ಲಿಟ್ಟುಕೊಂಡು ಅಚ್ಯುತನ್ ಪಿಳ್ಳೆಯವರ ಆದರ್ಶ ಮಾರ್ಗದರ್ಶನದಲ್ಲಿ ಕ್ರಿಯಾಶೀಲವಾಗಿದ್ದಾಗಲೇ ಒಬ್ಬಿಬ್ಬ ಪ್ರಾಧ್ಯಾಪಕರು (ಇವರ ನಾಯಕರನ್ನು ಕ್ಯಾಶಿಯಸ್ ಎಂದು ಕರೆಯೋಣ) ಮುಸುಕಿನೊಳಗೆ ಏನನ್ನೋ ಹೊಸೆಯುತ್ತಿದ್ದುದು ಆಗ ಈಗ ಚುಚ್ಚು ನುಡಿಗಳಲ್ಲೋ ಕೆಲಸಗಳ್ಳತನದಲ್ಲೋ ಪ್ರಕಟವಾಗುತ್ತಿತ್ತು: ಪುರಂದರದಾಸರೆಂದಿರುವಂತೆ, “ನಿಂದಕರಿರಬೇಕಿರಬೇಕು ಹಂದಿಯಿದ್ದರೆ ಕೇರಿ ಹ್ಯಾಂಗೆ ಶುದ್ಧಿಯೋ ಹಾಂಗೆ.”

೧೯೫೪ರ ಮಾರ್ಚ್ ತಿಂಗಳಿನಲ್ಲಿ ಕಾಲೇಜಿನ ಪ್ರಥಮ ವಾರ್ಷಿಕ ದಿನಾಚರಣೆಗೆ ಭರದಿಂದ ಏರ್ಪಾಡು ಮುಂದುವರಿಯಿತು. ವಿದ್ಯಾಸಚಿವ ಮುಖ್ಯ ಅತಿಥಿ. ಒಟ್ಟಂದವನ್ನು ಲಕ್ಷ್ಯದಲ್ಲಿಟ್ಟುಕೊಂಡು ಬಿಡಿ ವಿವರಗಳನ್ನು (ಕ್ಯಾಶಿಯಸ್‌ರ ಹೊರತಾಗಿ) ಎಲ್ಲರ ಪೂರ್ಣಭಾಗಿತ್ವದೊಡನೆ ನಿರ್ವಹಿಸಲಾಯಿತು. ಮದುವೆಗೆ ಅತಿಥಿಗಳನ್ನು ಆಹ್ವಾನಿಸುವ ಆತ್ಮಿಯತೆಯಿಂದ ನಾವು ಎಲ್ಲ ಪೋಷಕರಿಗೂ ಗಣ್ಯರಿಗೂ ಅವರಿದ್ದಲ್ಲಿಗೇ ಹೋಗಿ ಕರೆಯೋಲೆ ಕೊಟ್ಟು ಬಂದಿದ್ದೆವು.

ಕೊನೆಗೂ ಬಂದಿತು ides of March. ಅಪರಾಹ್ಣ ೪ ಗಂಟೆಗೆ ಸಮಾರಂಭ ಶುರುವಾಗಬೇಕಿತ್ತು. ವಿದ್ಯಾರ್ಥಿಗಳ ಸೌಕರ್ಯಾರ್ಥ ೩ ಗಂಟೆಗೇ ತರಗತಿಗಳನ್ನು ಕೈದುಮಾಡುವ ಯೋಚನೆ ಪ್ರಾಂಶುಪಾಲರದು. ಆ ವೇಳೆಗೆ ಸ್ಥಳೀಯ ರಾಜಕೀಯ ಹವೆ ವಿನಾ ಕಾರಣ ವಿದ್ಯಾಸಚಿವರಿಗೆ ಪ್ರತಿಕೂಲವಾಗಿತ್ತು. ಏಕೆಂದರೆ ಇವರು ‘ನಮ್ಮವರಲ್ಲ!’ ಸ್ಥಳಿಯನಾದ ನನಗೆ ಈ ಅಧೋಪ್ರವಾಹದ ಅರಿವು ಚೆನ್ನಾಗಿ ಗೊತ್ತಿತ್ತು. ಧೈರ್ಯ ತಳೆದು ಪ್ರಾಂಶುಪಾಲರಿಗೆ ಹೇಳಿದೆ, “ಮಂತ್ರಿಗಳ ಆಗಮನದ ತನಕವೂ ತರಗತಿಗಳನ್ನು ಕೈದುಮಾಡುವುದು ಬೇಡ. ಅದು ವೃಥಾ ತೊಂದರೆಗೆ ಆಹ್ವಾನವಾದೀತು.”

“ವಿದ್ಯಾರ್ಥಿಗಳಿಗೆ ಕಡ್ಡಾಯದ ಸಂಕೋಲೆ ತೊಡಿಸಿಡಲು ಇದೇನೂ ಸೇನಾಕೇಂದ್ರವಲ್ಲ. ನಾವಿಂದು ಪ್ರಜಾಪ್ರಭುತ್ವದಲ್ಲಿದ್ದೇವೆ. ಇಷ್ಟವಿಲ್ಲದ ವಿದ್ಯಾರ್ಥಿಗಳು ಹೋಗಲಿ.” ಇದು ಪ್ರಾಂಶುಪಾಲರ ಪ್ರತಿಕ್ರಿಯೆ. ಅಂತೂ ನಾವು ಕೆಲವರ ಒತ್ತಾಯಕ್ಕೆ ಮಣಿದು ತರಗತಿ ಮುಕ್ತಾಯದ ದೀರ್ಘ ಬಾಜಣೆಯನ್ನು ೩-೪೫ಕ್ಕೆ ಮುಂದೂಡಿ ಆ ಪ್ರಕಾರ ಮಾಡಲಾಯಿತು. ನಾವು ಅಧ್ಯಾಪಕರೆಲ್ಲರೂ ಪ್ರಾಂಶುಪಾಲರ ಹಿರಿತನದಲ್ಲಿ ಕಾಲೇಜಿನ ಮುಖಮಂಟಪದಲ್ಲಿ ನಿಂತೆವು. ಪಟ್ಟಣದಿಂದ ಏರುತ್ತ ಸುತ್ತಿ ಬಳಸಿ ಬರುವ ಸುರುಳಿ ರಸ್ತೆಯತ್ತ ದೃಷ್ಟಿ ಚಾಚಿದೆವು: ಯಾವ ಕ್ಷಣದಲ್ಲೂ ಸಚಿವರ ಹಸುರು ಕಾರ್ ದೂರದ ತಿರುಗಾಸಿನಲ್ಲಿ ಪ್ರತ್ಯಕ್ಷವಾಗಬಹುದು, ಮುಂದಿನ ಕೆಲವೇ ಕ್ಷಣಗಳಲ್ಲಿ ಅವರೆ ನಮ್ಮೆದುರು ಮೈದಳೆಯಲಿದ್ದಾರೆ, ಅಷ್ಟರಲ್ಲಿ ವಿದ್ಯಾರ್ಥಿಗಳೆಲ್ಲರೂ ಕಾಲೇಜಿನ ಭವ್ಯ ಸಭಾಭವನದಲ್ಲಿ ಜಮಾಯಿಸಿರುತ್ತಾರೆ, ನಮ್ಮ ಶಿಸ್ತುಬದ್ಧ ಏರ್ಪಾಡುಗಳನ್ನು ಗಮನಿಸುವ ಸಚಿವರು ಸುಪ್ರೀತರಾಗುತ್ತಾರೆ ಎಂಬುದೆಲ್ಲ ನಮ್ಮ ಕನಸು. ಆದರೆ ವಾಸ್ತವವಾಗಿ ಘಟಿಸಿದ್ದೇನು?

ಅಂದು ಕಾಲೇಜಿನ ಒಟ್ಟು ಸಂಖ್ಯೆ ಮುನ್ನೂರರ ಒಳಗಿತ್ತು. ಈ ಪೈಕಿ ಅರ್ಧಕ್ಕೂ ಮಿಕ್ಕಿದ ವಿದಾರ್ಥಿಗಳ ಹಿಂಡು ಒಮ್ಮೆಗೇ ಕಟ್ಟೆಯೊಡೆದ ನೀರಹೊನಲಿನಂತೆ ಪಟ್ಟಣದತ್ತ ಧಾವಿಸತೊಡಗಿತು. ಆ ಕೊನೆ ಗಳಿಗೆಯಲ್ಲಿ ನಾವೇನೂ ಮಾಡುವಂತಿರಲಿಲ್ಲ. ಮುಂದಿನ ಕೆಲವೇ ಕ್ಷಣಗಳಲ್ಲಿ ಈ ಪ್ರವಾಹ ಇಳಿಜಾರಿನಲ್ಲಿ ರಭಸದಿಂದ ದುಮುಕಿ ದೂರದ ತಿರುಗಾಸನ್ನೂ ತಲಪಿತು. ಅಷ್ಟರಲ್ಲೇ ಅಲ್ಲಿಗೆ ಸಚಿವರ ಕಾರ್ ಕೂಡ ಬರಬೇಕೇ? ನಿರ್ಜನ ಮಾರ್ಗ. ಹಠಾತ್ ವಿದ್ಯಾರ್ಥಿಗಳ ದಂಡು. ಜೊತೆಗೆ ಕೆಲವರು ಹುಚ್ಚಾಬಟ್ಟೆ ಹೀನ ಘೋಷಣೆಗಳನ್ನು ಕೇಕೆಹಾಕುತ್ತಿದ್ದುದೂ ನಮಗೆ ಕೇಳುತ್ತಿತ್ತು. ಮಂತ್ರಿಗಳ ಕಾರ್ ನಿಂತಿತು. ನಮ್ಮ ಹುಡುಗರು ಅದಕ್ಕೆ ಮುತ್ತಿಗೆ ಹಾಕಿದರು. ಏನು ಮಾತುಕತೆ ನಡೆಯಿತೋ ಗೊತ್ತಿಲ್ಲ. ತುಸು ವೇಳೆಯಲ್ಲೇ ಕಾರ್ ಚಲಿಸಿತು ಮುಂದಕ್ಕೆ, ಚಡಾವು ಏರಿ ಬಂತು ನಮ್ಮಲ್ಲಿಗೆ, ತಂಗಿತು ಮುಖಮಂಟಪದಲ್ಲಿ ಗಕ್ಕನೆ. ಸಿಟ್ಟಿನಿಂದ ನಿಗಿನಿಗಿಯುತ್ತಿದ್ದ ಮಂತ್ರಿ ಅದರಿಂದ ಹೊರಗಿಳಿದು ಒಂದೇ ಸವನೆ ವಾಗ್ಪ್ರವಾಹ ಹರಿಯಬಿಟ್ಟರು. ಪ್ರಾಂಶುಪಾಲರು ಅವರಿಗೆ ತೊಡಿಸಲೆಂದು ಪುಷ್ಪಹಾರ ಸಹಿತ ಮುಂದೆ ಹೋದಾಗ ಅದನ್ನು ತೀಕ್ಷ್ಣವಾಗಿ ನಿರಾಕರಿಸುತ್ತ ಸಚಿವರು ಹೇಳಿದರು, “ಎಂಥ ರೌಡಿಗಳನ್ನು ನೀವಿಲ್ಲಿ ತಯಾರಿಸುತ್ತಿದ್ದೀರಿ. ನಾನಿಲ್ಲಿಗೆ ಕಾಲಿಡಲಾರೆ.” ಪ್ರಾಂಶುಪಾಲರ ಯಾವುದೇ ಸಬೂಬು, ಸಮಾಧಾನ ಅಥವಾ ಅಂಗಲಾಚಿಕೆ ಆಲಿಸುವ ವ್ಯವಧಾನ ಅವರಿಗಿರಲಿಲ್ಲ. ಕಾರ್ ಹತ್ತಿದರು, ಹೊರಟುಹೋಗಿಯೇ ಬಿಟ್ಟರು.

ಒಂದು ಕ್ಷಣ ನಾವೆಲ್ಲರೂ ಸ್ತಂಭೀಭೂತರಾದೆವು. ಪ್ರಾಂಶುಪಾಲರು ತಮ್ಮ ಪಕ್ಕದಲ್ಲೇ ನಿಂತಿದ್ದ ಕ್ಯಾಶಿಯಸ್ ಜೊತೆ ಸಾವಧಾನವಾಗಿ ಮಾತು ತೊಡಗಿದರು, “ವಿದ್ಯಾರ್ಥಿಗಳನ್ನು ನಾವೇನು ಕಟ್ಟಿಹಾಕಬೇಕೇ?” ಕ್ಯಾಶಿಯಸ್, “ನಮ್ಮದು ಪ್ರಜಾಪ್ರಭುತ್ವ. ರಾಜನಂತೆ ಪ್ರಜೆ, ಅಲ್ಲವೇ?” ಪ್ರಾಂಶುಪಾಲ, “ಈಗ ಸಭೆಯನ್ನೇನೋ ಬರಖಾಸ್ತು ಮಾಡಬಹುದು. ಆದರೆ ಮೈಸೂರಿನ ಇಂದ್ರ ಭವನದಿಂದಲೇ ತರಿಸಿರುವ ತಿಂಡಿತೀರ್ಥಗಳನ್ನೇನು ಮಾಡೋಣ?” ಅಧ್ಯಾಪಕರೆಲ್ಲರ ಅಭಿಪ್ರಾಯದ ಮೇರೆಗೆ ನಾವೆಲ್ಲ ಉಪಾಹಾರ ಬಡಿಸಿಟ್ಟಿದ್ದ ಕೊಠಡಿಗೆ ಹೋಗಿ ಕುಳಿತೆವು, ಸಚಿವರ ನಿರಂಕುಶ ಧೋರಣೆಯನ್ನು ಮನಸ್ವೀ ಹಳಿಯುತ್ತ ಒಳಗೆ ತುಂಬಿದ್ದ ಹತಾಶೆ ಅಪಮಾನಗಳನ್ನು ಕಾರಿದೆವು. ಸಾಕಷ್ಟು ಕಟಕಿ ಕೂಡ ಸೇರಿತ್ತು. ಕ್ಯಾಶಿಯಸ್ ಎಲ್ಲದರಲ್ಲೂ ಭಾಗಿಯಾಗಿದ್ದರೂ ತುಟಿ ಮಾತ್ರ ಪಿಟಕ್ ಅನ್ನಲಿಲ್ಲ — “ನಿಮ್ಮೊಡನಿದ್ದೂ ನಿಮ್ಮಂತಾಗದೆ” (ನಿಸಾರ್ ಅಹಮದ್). “ಮಸೆಯಲಿ ಮಸೆಯಲಿ ದ್ವೇಷ ಕುಠಾರಂ ನೆಲಸಮವಾಗಲಿ ವೈರಿ ವಠಾರಂ” (ರಾಜರತ್ನಂ) ಎಂಬಂತಿತ್ತು ಅವರ ಆಮ್ಲ ಮುಖಭಾವ. ಅದೊಂದು ಕೆಟ್ಟ ದಿವಸ.

ಅದೇ ರಾತ್ರಿ ನಾನು ಮನೆಯಲ್ಲಿ ಊಟಕ್ಕೆ ಕುಳಿತಿದ್ದಾಗ ಅಪರಿಚಿತನೊಬ್ಬ ಒಳಬಂದು ತಾನು ರಾಜ್ಯದ ಬೇಹುಗಾರ ಸಂಸ್ಥೆಯ ಪರವಾಗಿ ನನ್ನನ್ನು ಕಾಣಲು ಬಂದುದಾಗಿ ಹೇಳಿ ತನ್ನ ಪರವಾನಿಗೆ ಪತ್ರ ತೋರಿಸಿದ. ಪಕ್ಕದಲ್ಲೇ ಇದ್ದ ನನ್ನ ತಂದೆಯವರಿಗೆ ಆತನ ಪರಿಚಯವಿತ್ತು. ನಾನೆಂದೆ, “ನನ್ನಿಂದೇನಾಗಬೇಕು?” “ಮಿನಿಸ್ಟರ್ ಹೊರಟುಹೋದ ಬಳಿಕ ಕಾಲೇಜಿನಲ್ಲಿ ಏನೇನು ನಡೆಯಿತೆಂಬ ವಿವರ ತಿಳಿಯಲು ನಮ್ಮ ಮುಖ್ಯಸ್ಥರಿಂದ ನಿಯೋಜಿತನಾಗಿ ನಾನಿಲ್ಲಿಗೆ ಬಂದಿದ್ದೇನೆ.” ನನ್ನ ಹೇಳಿಕೆ ದಾಖಲಿಸಲು ಆತ ಸಿದ್ಧನಾಗಿ ಕುಳಿತ. “ಅದು ಕಾಲೇಜಿನ ಆಂತರಿಕ ವಿಷಯ. ರಹಸ್ಯ ಸಂಗತಿ. ನಿಮ್ಮ ಜೊತೆ ಹೇಳಬೇಕಾದರೆ ನಮ್ಮ ಪ್ರಾಂಶುಪಾಲರ ಲಿಖಿತ ಅನುಮತಿ ಬೇಕು. ತಂದಿದ್ದೀರಾ?” “ಇಲ್ಲ. ಆದರೆ ನಮ್ಮ ಇಲಾಖೆಯ ಮುಖ್ಯಸ್ಥರು ನಿಮ್ಮಿಂದ ನಾನದನ್ನು ಸಂಗ್ರಹಿಸಬೇಕೆಂಬ ಆದೇಶ ನೀಡಿದ್ದಾರೆ.” “ಅದು ನಿಮಗಿತ್ತ ಆದೇಶ, ನನಗೆ ಲಗಾವಾಗದು. ಇನ್ನು ಮಾತು ಚರ್ಚೆ ಎಲ್ಲ ಸಾಕು” ಎನ್ನುತ್ತ ನಾನು ಎದ್ದೆ. “ನನ್ನ ಕರ್ತವ್ಯ ನಿರ್ವಹಣೆಯಲ್ಲಿ ನಿಮ್ಮ ಸಹಕಾರ ಲಭಿಸಲಿಲ್ಲ ಎಂದು ನಾನು ಮೇಲಧಿಕಾರಿಗಳಿಗೆ ದೂರು ಸಲ್ಲಿಸಬೇಕಾಗುತ್ತದೆ.” “ಸ್ವಾಮೀ! ಈ ಪೊಳ್ಳು ಬೆದರಿಕೆಗೆ ನಾನು ಜಗ್ಗುವುದಿಲ್ಲ. ಇನ್ನು ನೀವು ಹೊರಡಬಹುದು” ಎನ್ನುತ್ತ ತಂದೆಯವರ ಮುಖ ನೋಡಿದೆ. ನನ್ನ ಖಚಿತ ನಿಲವನ್ನು ಒಪ್ಪಿದ್ದರೆಂಬುದು ಹೃದ್ಗತವಾಯಿತು.

ಮರುದಿನ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಸಾಮೂಹಿಕ ಮುಷ್ಕರ: ವಿದ್ಯಾಮಂತ್ರಿಗಳಿಂದ ಕಾಲೇಜಿಗೆ ಅಗೌರವವಾಗಿದೆ, ಅವರು ಮತ್ತೆ ಕಾಲೇಜಿಗೆ ಬಂದು ಸಾರ್ವಜನಿಕ ಕ್ಷಮೆಯಾಚಿಸಿ ವಿದ್ಯಾರ್ಥಿಸಭೆಯನ್ನು ಉದ್ದೇಶಿಸಿ ಮಾತಾಡಲೇಬೇಕು, ಅಲ್ಲಿಯ ತನಕ ಮುಷ್ಕರ ಮುಂದುವರಿಯಲಿದೆ. ಇದು ಅವರ ಬೇಡಿಕೆ. ಪ್ರಾಂಶುಪಾಲರೂ ಅಧ್ಯಾಪಕರೂ ವಿದ್ಯಾರ್ಥಿಗಳ ಜೊತೆ ಸೌಹಾರ್ದ ವಾತಾವರಣದಲ್ಲಿ ಮಾತಾಡಿ ಆ ಮುಷ್ಕರವನ್ನೇನೋ ನಿಲ್ಲಿಸಿದ್ದಾಯಿತು. ಫಲಶ್ರುತಿ? ಅಷ್ಟರಲ್ಲಿ ವಾರ್ಷಿಕ ಪರೀಕ್ಷೆಗಳು ಬಂದುವು. ಬೇಸಗೆ ರಜೆ ಶುರುವಾಯಿತು — ಏಪ್ರಿಲ್ ಆರಂಭ. ನಾವೆಲ್ಲ ಉತ್ತರ ಪತ್ರಿಕೆಗಳ ಮೌಲ್ಯಮಾಪನೆಯಲ್ಲಿ ಮಗ್ನರಾಗಿದ್ದಾಗ ಸರ್ಕಾರದಿಂದ ಅನಿರೀಕ್ಷಿತ ಕ್ಷಿಪಣಿಯೊಂದು ಬಂದು ಬಡಿಯಿತು: ಸಂದ ಶೈಕ್ಷಣಿಕ ವರ್ಷದಲ್ಲಿ, ಕಾಲೇಜಿನ ವಾರ್ಷಿಕೋತ್ಸವದ ಸಂದರ್ಭದಲ್ಲಿ, ನಡೆದ ದುರಾಚರಣೆ ಬಗೆಗಿನ ವಿಚಾರಣಾಯೋಗ ಒಡನೆ ಕಾಲೇಜಿಗೆ ಬರಲಿದೆ, ಎಲ್ಲ ಅಧ್ಯಾಪಕರೂ ಅದರೊಂದಿಗೆ ಸಹಕರಿಸತಕ್ಕದ್ದು.

ರಾಜ್ಯದ ಮುಖ್ಯ ನ್ಯಾಯಾಧೀಶ ಎನ್.ಆರ್.ಗೋಪಾಲಕೃಷ್ಣ ಯುಕ್ತ ಸಹಾಯಕ ಸಿಬ್ಬಂದಿ ಸಹಿತ ಮರುದಿನವೇ ಬಂದರು. ಮೊದಲ ಎರಡು ದಿನಗಳಲ್ಲಿ ಪ್ರಾಂಶುಪಾಲ ಮತ್ತು ಹಿರಿಯ ಪ್ರಾಧ್ಯಾಪಕರುಗಳನ್ನು ವೈಯಕ್ತಿಕವಾಗಿ ವಿಚಾರಣೆ ಮಾಡಿ ಮಾಹಿತಿ ಸಂಗ್ರಹಿಸಿದರು. ಮೂರನೆಯ ದಿನ ನನ್ನನ್ನು ಕರೆಸಿದರು. “ಕಾಲೇಜ್ ವಾರ್ಷಿಕೋತ್ಸವದ ಕರೆಯೋಲೆ ಬಟವಾಡೆ ನಿನ್ನ ಹೊಣೆಯಾಗಿತ್ತು, ಹೌದೇ?” ಅವರು ನಮ್ಮ ಸಮೀಪ ಸಂಬಂಧಿ ಕೂಡ. “ಹೌದು.” “ಅದನ್ನು ಹೇಗೆ ನಿಭಾಯಿಸಿದೆ? ದಾಖಲೆ ಇಟ್ಟಿರುವೆಯಾ?” ಎಲ್ಲ ವಿವರಗಳನ್ನೂ ಕೂಲಂಕಷವಾಗಿ ಹೇಳಿದೆ. ಪ್ರತಿ ಹಂತದಲ್ಲೂ ವಿದ್ಯಾರ್ಥಿಗಳ ನೆರವು ಪಡೆದುದನ್ನು ಸಾಕ್ಷಿ ಸಹಿತ ಕಾಣಿಸಿದೆ. “ವಿಶಿಷ್ಟ ಅಧಿಕಾರಿಯೊಬ್ಬರಿಗೆ ಆಹ್ವಾನಪತ್ರಿಕೆ ಕೊಡಬಾರದೆಂಬ ಆದೇಶ ನಿಮಗಿತ್ತೇ?” ನಾನು ನಕ್ಕೆ, “ಅಂಥ ನಿಷೇಧಾತ್ಮಕ ಆದೇಶ ಇರಲಿಲ್ಲ ಮಾತ್ರವಲ್ಲ, ಆದಷ್ಟು ಹೆಚ್ಚು ಮಂದಿಗೆ ಅದನ್ನು ಕೈಯಾರೆ ಕೊಡಿ, ಇದೊಂದು ನಾಡ ಹಬ್ಬ ಎಂಬ ಸ್ಪಷ್ಟ ನಿರ್ದೇಶನವೂ ಇತ್ತು. ನಾನು ಇದೇ ಪಟ್ಟಣದವನಾದುದರಿಂದ ಎಲ್ಲರಿಗೂ ಕರೆಯೋಲೆಗಳನ್ನು ತಲಪಿಸಿದ್ದೇವೆಂದು ದೃಢವಾಗಿ ಹೇಳಬಲ್ಲೆ.” “ಇಲ್ಲ. ಬೇಹುಗಾರಿಕೆ ಇಲಾಖೆಯ ಮುಖ್ಯಸ್ಥರಿಗೆ ಅದು ತಲಪಿಲ್ಲವೆಂಬ ಲಿಖಿತ ಆಕ್ಷೇಪಣೆ ನಮಗೆ ಬಂದಿದೆ?” “ಖುದ್ದು ನಾನೇ ಅವರ ಕಚೇರಿಗೆ ಹೋಗಿದ್ದೆ. ಅವರು ತಮ್ಮ ಆಸನದಲ್ಲಿರಲಿಲ್ಲ” ಎನ್ನುತ್ತ ಕಡತ ಹೊರತೆಗೆದು ಅವರ ಹೆಸರಿನ ಎದುರು ಇದ್ದ ಆ ಅಧಿಕಾರಿಯ ಸಹಾಯಕನ ರುಜು ತೋರಿಸಿದೆ. “ಭಲೇ! ತಿಮ್ಮಪ್ಪಯ್ಯನವರ ಮಗ” ಎಂದವರು ನಸುನಗುತ್ತ ಉದ್ಗರಿಸಿದರು.

ಮೇ ತಿಂಗಳ ಹಗಲು ಮಡಿಕೇರಿಯಲ್ಲಿಯೂ ಬಿಸಿಲ ಧಗೆ ತೀವ್ರವಾಗಿದ್ದಾಗ, ಇರುಳಿನಲ್ಲಿ ಕೋಲ್ಮಿಂಚು ಗುಡುಗು ಸಿಡಿಲುಗಳ ಆರ್ಭಟೆ ಭಯಕಾರಕವಾಗಿದ್ದಾಗ, ರೈತರೆಲ್ಲರೂ ಆಸೆ ಕಣ್ಣುಗಳಿಂದ ಮೋಡಗಳನ್ನೇ ದಿಟ್ಟಿಸುತ್ತಿದ್ದಾಗ ಬಡಿದೇ ಬಡಿಯಿತು ಕಾಲೇಜಿಗೆ ಬರಸಿಡಿಲು? ಹೌದು, ಅಚ್ಯುತನ್ ಪಿಳ್ಳೆಯವರು ಅದಕ್ಷ ಪ್ರಾಂಶುಪಾಲ, ಎಂದೇ ಅವರನ್ನು ಕೊಡಗು ಸರ್ಕಾರದ ಸೇವೆಯಿಂದ ತತ್‌ಕ್ಷಣ ರದ್ದುಗೊಳಿಸಿ ಮಾತೃ ಸಂಸ್ಥೆಗೆ (ಕೇಂದ್ರ ಸರ್ಕಾರ) ವರ್ಗಾಯಿಸಲಾಗಿದೆ ಎಂಬ ಸರ್ಕಾರೀ ಆದೇಶ. ಕಾಲೇಜಿಗೆ ಪಿಳ್ಳೆಯವರಿಗಿಂತ ಹೆಚ್ಚು ಒಳ್ಳೆಯದನ್ನು ಮಾಡಿ ಅಧಿಕ ಮನಃಕ್ಲೇಶ ಅನುಭವಿಸಿದವರು ಇನ್ನೊಬ್ಬರಿರಲ್ಲ. ಮೇ ಕೊನೆಯ ಆ ಮುಂಜಾನೆ ಅವರು ಸಂಸಾರ ಸಹಿತ ಮಡಿಕೇರಿಯಿಂದ ನಿರ್ಗಮಿಸಿದಾಗ ಅವರನ್ನು ಬೀಳ್ಕೊಟ್ಟವರು ನಾವು ಕೆಲವರು ಮಾತ್ರ. ಆ ದುರ್ಭರ ಸನ್ನಿವೇಶದಲ್ಲಿ ನನ್ನ ಮನದೊಳಗೆ ಮಿಡಿದ ನುಡಿಗಳೆರಡು: “ಪುರದ ಪುಣ್ಯಂ ಪುರುಷರೂಪಿಂದೆ ಪೋಗುತಿದೆ, ಪರಿಜನದ ಭಾಗ್ಯವಡವಿಗೆ ನಡೆಯುತಿದೆ” (ರಾಘವಾಂಕ) ಮತ್ತು “ಸತ್ಯವಂತರಿಗಿದು ಕಾಲವಲ್ಲ, ದುಷ್ಟ ಜನರಿಗೆ ಸುಭಿಕ್ಷ ಕಾಲ… ಧರ್ಮ ಮಾಡುವವ ನಿರ್ಮೂಲವಾಗುವ ಕಾಲ, ಕರ್ಮಿ ಪಾತಕರಿಗೆ ಬಹು ಸೌಖ್ಯ ಕಾಲ” (ಪುರಂದರದಾಸ).

ಕ್ರಮೇಣ ಒಂದು ರಹಸ್ಯ ಬಯಲಾಯಿತು: ಅಚ್ಯುತನ್ ಪಿಳ್ಳೆಯವರ ಉಚ್ಚಾಟನೆ ಪಿತೂರಿಯನ್ನು ಹೊಸೆದು ನಿರ್ವಹಿಸಿದಾತ ಕ್ಯಾಶಿಯಸ್, ಈತನ ಸೋದರಮಾವನೇ ರಾಜ್ಯ ಬೇಹುಗಾರಿಕೆ ಇಲಾಖೆಯ ಮುಖ್ಯಸ್ಥ, ಕಾಲೇಜಿನ ಒಬ್ಬ ಜವಾನ ಈ ದುಷ್ಟಕೂಟದ ಮೀರ್ ಸಾದಕ್. ಉದ್ದೇಶ: ಪಿಳ್ಳೆಯವರನ್ನು ಅದಕ್ಷರೆಂದು ರುಜುವಾತಿಸಿ ಪ್ರಾಂಶುಪಾಲಗಿರಿಯಿಂದ ಇಳಿಸಿ ಕ್ಯಾಶಿಯಸನ ಸಿಂಹಾಸನಾರೋಹಣ. ಆದರೆ ಸೇವಾಜ್ಯೇಷ್ಠತೆಯಲ್ಲಿ ಈತನದು ನಾಲ್ಕನೆಯ ಸ್ಥಾನವಾಗಿದ್ದುದರಿಂದ ಈ ಎರಡನೆಯ (ದುರ್-)ಉದ್ದೇಶ ಈಡೇರಲಿಲ್ಲ. ಅಳಿಯ ಪೃಥ್ವೀರಾಜನ ವಿರುದ್ಧ ಸೇಡು ತೀರಿಸಿಕೊಳ್ಳಲು ಪರದೇಶದ ಘಜನೀ ಮಹಮೂದನನ್ನು ಆಹ್ವಾನಿಸಿದ ಜಯಚಂದನ ನಾಡಲ್ಲವೇ ಮೇರಾ ಮಹಾನ್ ಭಾರತ್?

ಅಧ್ಯಾಯ ಇಪ್ಪತ್ತೆಂಟು
ಜೀವನ್ಮುಕ್ತ ಬಂಟ್ವಾಳ ಜನಾರ್ದನ ಬಾಳಿಗ

೧೯೫೩-೫೪ರ ಬೇಸಗೆ ರಜೆಯಲ್ಲಿ ಕೇಂದ್ರ ಸರ್ಕಾರ ನಮ್ಮ ಕಾಲೇಜಿನಲ್ಲಿ ಸೀನಿಯರ್ ವಿಭಾಗದ ಎನ್‌ಸಿಸಿ ದಳವನ್ನು ಪ್ರಾರಂಭಿಸಿತು. ರಾಜ್ಯದ ಎಲ್ಲ ಪ್ರೌಢಶಾಲೆಗಳಲ್ಲಿಯೂ ಜೂನಿಯರ್ ವಿಭಾಗದ ಎನ್‌ಸಿಸಿ ಆ ಮೊದಲೇ ಇದ್ದುದರಿಂದ ಇವೆಲ್ಲವನ್ನೂ ಬೆಸೆದು ಕೊಡಗು ರಾಜ್ಯಕ್ಕೇ ಮೀಸಲಾಗಿ ಕೂರ್ಗ್ ಇಂಡೆಪೆಂಡೆಂಟ್ ಕಂಪನಿ ಎನ್‌ಸಿಸಿ ಘಟಕವನ್ನು ಆಗ ಸ್ಥಾಪಿಸಿದರು. ಇದರ ಮುಖ್ಯಸ್ಥನಾಗಿ ಒಬ್ಬ ಹಿರಿಯ ಸೇನಾ ಕ್ಯಾಪ್ಟನ್‌ನನ್ನು ನೇಮಿಸಿದರು. ೧೯೫೪ರ ಶೈಕ್ಷಣಿಕ ವರ್ಷ ತೊಡಗುವಾಗ ಕಾಲೇಜಿನ ಎನ್‌ಸಿಸಿ ಘಟಕ ಕಾರ್ಯಾರಂಭಿಸಬೇಕೆಂಬುದು ಉದ್ದೇಶ. ಆಗ ಆ ಅಧಿಕಾರಿಗಳಿಗೆ ತೀರ ಸುಲಭವಾಗಿ ಒದಗಿದ ಭಾಗಕಾಲೀನ ಎನ್‌ಸಿಸಿ ಅಧಿಕಾರಿ ನಾನು! ಹೇಗೂ ನನಗೆ ತತ್ಪೂರ್ವ ಈ ಸಂಬಂಧದ ಸೇನಾಶಿಕ್ಷಣ ದೊರೆತಿತ್ತಷ್ಟೆ. ಒಂದು ವರ್ಷದ ಪ್ರತ್ಯಕ್ಷಾನುಭವವೂ ಇತ್ತು. ನಮ್ಮ ಕಂಪನಿಯಲ್ಲಿ ಇನ್ನೂ ಎರಡು ಎನ್‌ಸಿಸಿ ಅಧಿಕಾರಿಗಳಿಗೆ ಅವಕಾಶವಿತ್ತು.

ನಾನು ಸಂತ ಅಲೋಶಿಯಸ್ ಕಾಲೇಜಿನಲ್ಲಿದ್ದಾಗ (೧೯೪೯-೫೩) ಬಂಟ್ವಾಳ ಜನಾರ್ದನ ಬಾಳಿಗರೆಂಬ ಭೌತವಿಜ್ಞಾನ ಉಪನ್ಯಾಸಕರಿಂದ ವಿಶೇಷವಾಗಿ ಆಕರ್ಷಿತನಾಗಿದ್ದೆ. ನನ್ನ ಸಮವಯಸ್ಕರು, ಸಮಾನಶೀಲರು ಮತ್ತು ಉಚ್ಚ ಆದರ್ಶದೀಪ್ತರು. ದೈಹಿಕವಾಗಿ ನನಗಿಂತ ಬಲಿಷ್ಠರು. ಸಾಮೂ ಮಾಡಿ ಉಕ್ಕಾಗಿದ್ದ ಒಡಲು. ಇದಕ್ಕೊಪ್ಪುವ ಗಂಡು ಕಂಠ. ಎನ್‌ಸಿಸಿ-ಅಧಿಕಾರಿ ಆಯ್ಕೆಗೆಂದು ಕಾಲೇಜ್ ನಿಯೋಜಿಸಿ ಮದ್ರಾಸಿಗೆ ಕಳಿಸಿದ್ದ ತಂಡದಲ್ಲಿ ನನ್ನ ಜೊತೆಗೆ ಬಾಳಿಗರೂ ಇದ್ದರು. ನಮ್ಮೆಲ್ಲರ ಅಭಿಪ್ರಾಯದಲ್ಲಿ ಆಯ್ಕೆಸಮಿತಿ ಇವರನ್ನೇ ಒಪ್ಪುತ್ತದೆಂದಿತ್ತು. ಆದರೆ ಆ ‘ಉರುಳು’ ನನ್ನ ಕೊರಳಿಗೆ ಬಿತ್ತು. ನನಗೆ ಹತಾಶೆ ಆಯಿತು, ಅಳುಕೂ ಆಯಿತು. ಬಾಳಿಗರಿಗೆ ಸಂತೋಷವಾಯಿತು,“ಜನರಲ್‌ಗಳ ನಾಡಿನವರಲ್ಲವೇ ನೀವು!” ಎಂದು ನನ್ನನ್ನು ಹುರಿದುಂಬಿಸಿದರು. ಇಂಥ ಪರಿಶುದ್ಧ ಹೃದಯಿ ಅವರು.

೧೯೫೩ರ ತರುಣದಲ್ಲಿ ನಾನು ಅಲೋಶಿಯಸ್ ಕಾಲೇಜನ್ನೂ ಆ ಕಾರಣದಿಂದ ಎನ್‌ಸಿಸಿ ಹೊಣೆಯನ್ನೂ ಬಿಡುವ ಮೊದಲು ಬಾಳಿಗರನ್ನು ಎನ್‌ಸಿಸಿ ಸ್ಥಾನಕ್ಕೆ ಆಯುವಂತೆ ಮಿಲಿಟರಿ ವರಿಷ್ಠರಿಗೆ ವಿನಂತಿಸಿದ್ದೆ. ನನ್ನ ಮಾತಿಗೆ ಅವರು ಬೆಲೆಕೊಟ್ಟು ಆ ಬೇಸಗೆಯಲ್ಲಿ ಬಾಳಿಗರನ್ನು ಸೇನಾಶಿಕ್ಷಣಕ್ಕೆಂದು ಮಿಲಿಟರಿ ಕೇಂದ್ರಕ್ಕೆ ಕಳಿಸಿದರು. ಮಡಿಕೇರಿಯಲ್ಲಿಯ ನಮ್ಮ ಕಾಲೇಜಿಗೆ ಒಬ್ಬ ಭೌತವಿಜ್ಞಾನ ಉಪನ್ಯಾಸಕ ಬೇಕಾಗಿತ್ತು (೧೯೫೪). ಇತ್ತ ಎನ್‌ಸಿಸಿಯಲ್ಲಿ ಎರಡು ಹುದ್ದೆಗಳು ಖಾಲಿ ಇದ್ದುವು. ಆಗ ಕಾಲೇಜಿನ ಪ್ರಾಂಶುಪಾಲರು ವಿ.ವೆಂಕಟರಮಣರಾವ್ (ಗಣಿತ) ಮತ್ತು ಉಪಪ್ರಾಂಶುಪಾಲರು ಎಂ.ಎ.ರಾಮಚಂದ್ರರಾವ್ (ಭೌತವಿಜ್ಞಾನ). ಇವರಿಬ್ಬರೂ ತತ್ಪೂರ್ವ ಅಲೋಶಿಯಸ್ ಕಾಲೇಜಿನಲ್ಲಿ ಸಹೋದ್ಯೋಗಿಗಳಾಗಿದ್ದು ಬಾಳಿಗರನ್ನು ಬಲ್ಲವರಾಗಿದ್ದರು. ಅಲ್ಲದೇ ಬಾಳಿಗರು ರಾಮಚಂದ್ರರಾಯರ ಶಿಷ್ಯರು ಕೂಡ. ಹೀಗೆ ಎಲ್ಲ ರೀತಿಗಳಲ್ಲಿಯೂ ಮಡಿಕೇರಿ ಕಾಲೇಜಿಗೆ ಬಾಳಿಗರನ್ನು ಆವಾಹಿಸಿ ಪ್ರತಿಷ್ಠಾಪಿಸಲು ಕಾಲ ಪಕ್ವವಾಗಿತ್ತು.

೧೯೫೪-೫೫ ಶೈಕ್ಷಣಿಕ ವರ್ಷಾರಂಭ ನಮ್ಮ ಕಾಲೇಜಿನಲ್ಲಿ ಹೊಸ ಶಕೆಯನ್ನೇ ಹುಟ್ಟುಹಾಕಿತು: ವಿದ್ಯಾರ್ಥಿಗಳ ಸಹಕಾರ ಸಂಘ, ಬಾಳಿಗರ ಪ್ರವೇಶ ಮತ್ತು ಸೀನಿಯರ್ ಎನ್‌ಸಿಸಿ ಚಟುವಟಿಕೆಗಳು. ಇಂಥ ಪ್ರಸನ್ನ ವಾತಾವರಣದಲ್ಲಿಯೂ ಶೈಕ್ಷಣಿಕ ಮತ್ತು ಪಠ್ಯೇತರ ಕ್ರಿಯಾಕಲಾಪಗಳ ಜೇನುಗೂಡಿನಲ್ಲಿಯೂ ಅತೃಪ್ತ ಗುರುವೃಂದವೊಂದು ಇದ್ದೇ ಇತ್ತು. ಇದರ ‘ಕಣ್ಮಣಿ’ ನಮ್ಮ ಕ್ಯಾಶಿಯಸ್! ಬಾಳಿಗರೂ ನಾನೂ ಕಾಲೇಜಿನ ಎಲ್ಲ ಕೆಲಸಗಳಲ್ಲಿ ಅವಳಿಜವಳಿ ಸಹೋದರರಂತೆ ಹಗಲಿರುಳೆಂಬ ವ್ಯತ್ಯಾಸವಿಲ್ಲದೆ ಕಾರ್ಯನಿರತರಾಗಿದ್ದೆವು. ಅವರು ಒಳಗೂ ಹೊರಗೂ ಪರಮಧಾರ್ಮಿಕರು, ನಾನೋ ಚಿಕ್ಕಂದಿನಲ್ಲಿ ಕಡ್ಡಾಯವಾಗಿ ಅನುಭವಿಸಿದ ಸಾಕಷ್ಟು ‘ಮತಧರ್ಮಕವಾಯತಿ’ಯ ಕಾರಣವಾಗಿ ಎಲ್ಲ ಬಾಹ್ಯಾಚರಣೆಗಳನ್ನೂ ತೊರೆದು ‘ಕಾಯಕವೆ ಕೈಲಾಸ’ ಎಂಬ ಶರಣತತ್ತ್ವಕ್ಕೆ ಶರಣಾದವನು. ನಮ್ಮಿಬ್ಬರದೂ ಗುರಿ ಒಂದೇ ಆಗಿದ್ದುದರಿಂದ — ಸಾಮಾಜಿಕ ಕೈಂಕರ್ಯ ಮತ್ತು ಕರ್ತವ್ಯ ಬದ್ಧತೆ — ಎಂದೂ ಎಲ್ಲಿಯೂ ನಮ್ಮ ನಡುವೆ ಯಾವುದೇ ಭಿನ್ನಾಭಿಪ್ರಾಯ ಹಣುಕಲಿಲ್ಲ.

ಖಾಸಗಿಯಲ್ಲಿ ಬಾಳಿಗರು ಮತ್ತು ಅವರ ಕುಟುಂಬ ಮಾತೆ ರಮಾದೇವಿಯವರ ನೈಷ್ಠಿಕ ಭಕ್ತರು. ಮಡಿಕೇರಿಯಲ್ಲಿಯ ತಮ್ಮ ಮನೆಯಲ್ಲಿ ರಮಾದೇವಿ ಭಜನಾ ವೃಂದವನ್ನು ಸ್ಥಾಪಿಸಿ ಸತ್ಸಂಗ ಚಟುವಟಿಕೆಗಳನ್ನು ತೊಡಗಿದರು. ಕ್ರಮೇಣ ಈ ಸಸಿ ಹೆಮ್ಮರವಾಗಿ ಬೆಳೆಯಿತು. ಆಗ ತಾವೇ ಒಂದು ಸಾರ್ವಜನಿಕ ಭಜನಾಮಂದಿರವನ್ನೇಕೆ ನಿರ್ಮಿಸಬಾರದೆಂಬ ಪ್ರಶ್ನೆ ಇವರೆದುರು ನಿಂತಿತು. ಆ ದಿಶೆಯಲ್ಲಿ ಯೋಜನೆ, ಸಂಪನ್ಮೂಲ ಸಂಗ್ರಹಣೆ, ಸಮರ್ಥ ನಿರ್ವಹಣೆ ಎಲ್ಲವೂ ಬಾಳಿಗರ ನೇತೃತ್ವದಲ್ಲಿ ಭರದಿಂದ ಸಾಗುತ್ತಿದ್ದಂತೆ ಇವರಿಗೆ ತುರ್ತಾಗಿ ಒಮ್ಮೆಗೇ ಸುಮಾರು ೧೨,೦೦೦ ರೂಪಾಯಿಗಳ ಆವಶ್ಯಕತೆ ಧುತ್ತೆಂದು ಎದುರಾಯಿತು: ಅಷ್ಟು ಬೆಲೆಯ ಸಿಮೆಂಟ್ ಅವರಿಗೆ ಸರ್ಕಾರದಿಂದ ಮಂಜೂರಾಗಿತ್ತು (ಸಿಮೆಂಟ್ ತೀರ ದುರ್ಲಭವಾಗಿದ್ದ ದಿನಗಳವು, ಇನ್ನು ಒಂದೇ ಗಂಟಿನಲ್ಲಿ ರೂ ೧೨,೦೦೦ವಂತೂ ಗಗನಕುಸುಮ). ಗಂಗೆ ಬರುತ್ತಿದೆ, ಪಾತ್ರವೆಲ್ಲಿದೆ? ಹೇಗೆ ಹಿಡಿದಿಡುವುದು? ಆ ಪ್ರವಾಹವನ್ನು ಮಂದಿರ ನಿರ್ಮಾಣದತ್ತ ತಿರುಗಿಸಬಲ್ಲ ಭಗೀರಥ ಎಲ್ಲಿದ್ದಾನೆ? ಅದೊಂದು ಆದಿತ್ಯವಾರದ ಅಪರಾಹ್ಣ. ತೀರ ಅನಿರೀಕ್ಷಿತವಾಗಿ ಬಾಳಿಗರು (ಪಟ್ಟಣದ ಹೊರವಲಯದ ಕಾಲೇಜ್ ಬಳಿ ಇದ್ದ) ನಮ್ಮ ಮನೆಗೆ ಬಂದರು. ಅವರ ವಾಸ ಪಟ್ಟಣದ ಮಧ್ಯೆ, ಓಂಕಾರೇಶ್ವರ ದೇವಾಲಯದ ಸಮೀಪ. ಆ ಸುಮಾರು ೩ ಕಿಮೀ ದೂರವನ್ನು ಎಂದಿನಂತೆ ನಡೆದೇ ಕ್ರಮಿಸಿದ್ದರು. ನನಗೆ ಆಶ್ಚರ್ಯ ಮತ್ತು ಸಂಭ್ರಮ. ಅವರು ಮಂದಿರದ ಪ್ರಗತಿಯನ್ನು ಸಂಕ್ಷೇಪವಾಗಿ ವಿವರಿಸಿ ಸದ್ಯದ ತುರ್ತು ಆವಶ್ಯಕತೆಯನ್ನು ನನ್ನೆದುರಿಟ್ಟರು: ರೂ ೧೨,೦೦೦ವನ್ನು ಅವರು ಮರುದಿನವೇ ಬ್ಯಾಂಕಿಗೆ ಪಾವತಿಸಿ ಸಿಮೆಂಟ್ ವ್ಯಾಗನ್ನನ್ನು ಬಿಡಿಸಿಕೊಳ್ಳಬೇಕು? ಮನೆಯಲ್ಲಿ ನಡೆದ ಮಾತುಕತೆ ವಿವರಗಳನ್ನೂ ತಿಳಿಸಿದರು. “ಜಿಟಿಯವರಿಂದ ಹಣದ ಸಮಸ್ಯೆ ಪರಿಹಾರ ಆಗಿಯೇ ಆಗುತ್ತದೆ” ಎಂದು ಅವರ ಹೆಂಡತಿ ಸಲಹೆ ನೀಡಿದ್ದರಂತೆ. ಈ ಸೂಚನೆಯನ್ನು ಮನಸಾ ಒಪ್ಪಿ ಬಾಳಿಗರು, ಮಠ ಮಂದಿರ ಭಜನೆ ಪೂಜೆ ಮುಂತಾದವುಗಳಿಂದ ಎಂದೋ ಮುಕ್ತನಾಗಿದ್ದ ನನ್ನ ಬಳಿಗೆ, ಆ ನಡುಹಗಲು ಬಂದರು!

ನಾವೆಲ್ಲರೂ ಬಡವರೇ. ಆದರೆ ನಮ್ಮ ಶೀಲ ಚಾರಿತ್ರ್ಯಗಳು ಸದಾ ಶ್ರೀಮಂತ. ಈ ಬಂಡವಾಳವನ್ನು ನಗದಿಸುವುದು ಹೇಗೆ? ಕೊಡಗಿನ ಕೊಡುಗೈ ಕರ್ಣ ಎಂದೇ ಜನಾದರಣೀಯರಾಗಿದ್ದ ಕಾಪಿ಼ ಪ್ಲಾಂಟರ್ ಜಿ.ಎಂ.ಮಂಜನಾಥಯ್ಯನವರ ತೋಟಕ್ಕೆ (ಶುಂಠಿಕೊಪ್ಪ) ಹೋದೆ. ಇವರು ನಮ್ಮ ಕುಟುಂಬ ಸಂಬಂಧಿಕರು, ತಂದೆಯವರ ಸಹಪಾಠಿ ಮತ್ತು ಎಲ್ಲ ಸಾಮಾಜಿಕ ಕಾರ್ಯಕರ್ತರ ಬಗ್ಗೆ ಪ್ರೀತಿ ವಿಶ್ವಾಸ ತಳೆದಿದ್ದ ಮಹಾನುಭಾವರು. ನಮ್ಮ ತುರ್ತು ಆವಶ್ಯಕತೆಯನ್ನು ವಿವರಿಸಿ ರೂ ೧೨,೦೦೦ವನ್ನು ಸಾಲವಾಗಿ ಬೇಡಿದೆ, ಮುಂದಿನ ೧೨ ತಿಂಗಳ ಒಳಗೆ ಬಡ್ಡಿಸಹಿತ ಅದನ್ನು ಮರುಪಾವತಿಸುವ ಭರವಸೆ ನೀಡಿದೆ. ಮರುಸೊಲ್ಲಿಲ್ಲದೇ ಅವರು ಆ ಹಿರಿ ಮೊತ್ತಕ್ಕೊಂದು ಚೆಕ್ ಬರೆದುಕೊಟ್ಟು, “ಬಡ್ಡಿ ಬೇಡ, ಅನುಕೂಲವಾದಾಗ ಅಸಲು ತೀರಿಸಿದರೆ ಸಾಕು” ಎಂದು ಹರಸಿ ಕಳಿಸಿದರು. ಮಂದಿರ ನಿರ್ಮಾಣವಾಯಿತು, ಹಣದ ಹೊಳೆ ಹರಿದು ಬಂತು, ೧ ವರ್ಷದ ಗಡು ಮುಗಿಯುವ ಮೊದಲೇ ಮಂಜನಾಥಯ್ಯನವರ ಸಾಲ ತೀರಿಸಲು ಬಾಳಿಗ ಮತ್ತು ನಾನು ಅವರಲ್ಲಿಗೆ ಹೋದೆವು. ಅಲ್ಲಿ ಇನ್ನೊಂದು ಆಶ್ಚರ್ಯ ಕಾದಿತ್ತು. ಅವರೆಂದರು, “ನಾನೇನೂ ಕೊಡಲಿಲ್ಲ. ನಿಮ್ಮ ನಿಷ್ಠೆಯೇ ಇದರ ಮೂಲ. ದಯವಿಟ್ಟು ಈ ಮೊಬಲಗನ್ನು ಇಟ್ಟುಕೊಂಡು ನೀವು ಇಷ್ಟಪಡುವ ಸಮಾಜಸೇವಾಕಾರ್ಯಗಳಿಗೆ ವಿನಿಯೋಗಿಸಿ.” ತ್ಯಾಗರಾಜರು ಹಾಡಿರುವಂತೆ “ಎಂದರೋ ಮಹಾನುಭಾವುಲು ಅಂದರಿಕಿ ವಂದನಮು.”

೧೯೬೩ರಲ್ಲಿ ನಾನು ಮಡಿಕೇರಿ ಬಿಟ್ಟು ಬೇರೆ ಬೇರೆ ಊರುಗಳಲ್ಲಿ ಕೆಲಸ ಮಾಡುತ್ತಿದ್ದೆ. ಇಂಥ ದಿನಗಳಲ್ಲಿ ಮಡಿಕೇರಿಗೆ ಹೋದಾಗ ಪ್ರತಿ ಸಲವೂ ಬಾಳಿಗ ದರ್ಶನ ಮತ್ತು ಸಂವಾದ ನನಗೆ ಕಡ್ಡಾಯ. ಒಮ್ಮೆ ಹೀಗೆ ಹೋದಾಗ ಬಾಳಿಗರ ಸೇವೆಯನ್ನು ಬಂಟ್ವಾಳದಲ್ಲಿಯ ಶ್ರೀವೆಂಕಟರಮಣ ಕಾಲೇಜಿನ ಕೋರಿಕೆ ಪ್ರಕಾರ ಅಲ್ಲಿಗೆ ಪ್ರಾಂಶುಪಾಲರಾಗಿ ಎರವಲು ನೀಡಲಾಗಿತ್ತೆಂದು ತಿಳಿದೆ. ಮತ್ತೊಮ್ಮೆ ಪೂರ್ವ ಸೂಚನೆ ನೀಡದೆ ನೇರ ಈ ಕಾಲೇಜಿಗೇ ಹೋದೆ. ಗುಡ್ಡದ ತಪ್ಪಲಿನ ಭವ್ಯ ಕಾಲೇಜು ಸಂಜೆಗೆಂಪಿನೋಕುಳಿಯಿಂದ ಇನ್ನಷ್ಟು ರಮ್ಯವಾಗಿ ಕಾಣುತ್ತಿತ್ತು. ಎದುರಿಗೆ ವನಶ್ರೀ, ದೂರದಲ್ಲಿ ಗಿರಿಶ್ರೀ, ಬೆನ್ನಿಗೆ ಈ ವಿದ್ಯಾಶ್ರೀ ನಡುವೆ ಪರಿವ್ರಾಜಕನಾದ ನಾನು! ಮಧುರಚೆನ್ನರ ಕವನ ನೆನಪಾಯ್ತು:

ಮಹಾಕಾಶ ಶಿರದ ಮೇಲೆ
ಅಹಾ ಪೃಥ್ವಿ ರಮ್ಯ ಮುಂದೆ
ಬಾನು ಬುವಿಯು ಸೇರುವಲ್ಲಿ
ಏನು ರಮ್ಯ ದೂರದಲ್ಲಿ
ಪ್ರಭಾಮಯನು ವಿಭಾಕರನು
ನಭೋಂಗಣದಿ ವಿರಾಜಿಪನು!

ಪ್ರಾಂಶುಪಾಲರ ಕೊಠಡಿಗೆ ಹೋದೆ. ಅವರು ಮೂರನೆಯ ಮಹಡಿಯಲ್ಲಿದ್ದಾರೆಂದು ಜವಾನ ಹೇಳಿದ. ಮೆಟ್ಟಲೇರಿ ಶಿಖರ ತಲಪಿದೆ. ಬಾಳಿಗರೆಲ್ಲಿ? ದೂರದ ಹೊರಗೋಡೆಗೆ ಆಂತುಕೊಂಡಿದ್ದ ಏಣಿ ಮೆಟ್ಟಲ ಮೇಲೆ ನಿಂತು ಗಾರೆ ಕೆಲಸದಲ್ಲಿ ಲೋಕವನ್ನೇ ಮರೆತಿದ್ದ ಆ ಕರ್ಮಯೋಗಿಯನ್ನು ಕಂಡೆ! ಇಂಥ ಕರ್ತವ್ಯ ಮೇರುವನ್ನು ಕಾಲೇಜಿನ ವ್ಯವಸ್ಥಾಪನೆ ತೀರ ಕೆಟ್ಟದಾಗಿ ನಡೆಸಿಕೊಂಡಿತೆಂದು ಮುಂದೊಂದು ದಿನ ತಿಳಿದು ಖೇದವಾಯಿತು. ಸ್ವಾರ್ಥಕ್ಕೆ ಚ್ಯುತಿ ಬರುವ ಸಂದರ್ಭದಲ್ಲಿ ದುಷ್ಟವ್ಯಕ್ತಿ ನೀತಿ, ನಿಯಮ, ಮಾನವೀಯತೆ ಎಲ್ಲವನ್ನೂ ಗಾಳಿಗೆ ತೂರಿ ಮೆರೆಯುವುದು ಮನುಕುಲಕ್ಕೆ ಹೊಸತಲ್ಲ. ಬಾಳಿಗರು ಸಾಕಷ್ಟು ಕಷ್ಟ, ನಷ್ಟ ಮತ್ತು ಮನಃಕ್ಲೇಶ ಅನುಭವಿಸಿ ಮಡಿಕೇರಿಗೆ ಮರಳಿದರು.

೨೦೦೬ ಮೇ ೫, ೬ರಂದು ಮಡಿಕೇರಿಯಲ್ಲಿ ಏರ್ಪಡಿಸಿದ್ದ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಲೆಂದು ನಾನಲ್ಲಿಗೆ ೪ರ ಸಂಜೆ ತಲಪಿದೆ (೧೯೬೯ರಿಂದ ನನ್ನ ಶಾಶ್ವತ ನೆಲೆ ಮೈಸೂರು). ಆ ರಾತ್ರಿಯೇ ಬಾಳಿಗರ ಮನೆಗೆ ಹೋದೆ. ಅಲ್ಲಿ ಎದುರಾದ ದೃಶ್ಯ ನನ್ನನ್ನು ತೀವ್ರ ಚಿಂತೆಗೆ ಗುರಿ ಮಾಡಿತು. ಅವರು ತೀರ ಅಸ್ವಸ್ಥರಾಗಿ ಹಾಸಿಗೆ ಹಿಡಿದಿದ್ದg. ಮಾತಾಡಲೂ ಸಾಧ್ಯವಾಗುತ್ತಿರಲಿಲ್ಲ. ಕಣ್ತುಂಬಿ ಮನತುಂಬಿ ಎದೆತುಂಬಿ ನನ್ನನ್ನು ನೋಡಿದರು, ಮರುದಿನದ ಸಾರ್ವಜನಿಕ ಸಭೆಗೆ ಖಂಡಿತ ಬರುವುದಾಗಿ ಅವರ ಪತ್ನಿ ಹೇಳಿದರು.

ನಾನೆಂದೆ, “ನೀವು ದಯವಿಟ್ಟು ಮನೆಯಿಂದ ಅಲ್ಲಾಡಬೇಡಿ. ನಾನೇ ಇನ್ನೊಮ್ಮೆ ಬಂದು ನಿಮ್ಮ ಅಭಿನಂದನೆ ಮತ್ತು ಶುಭಾಶಯ ಪಡೆದು ಮೈಸೂರಿಗೆ ಮರಳುತ್ತೇನೆ.” (ಆಶೀರ್ವಾದ ಪದ ಬಳಸಿಲ್ಲವೇಕೆಂದರೆ ವಯಸ್ಸಿನಲ್ಲಿ ನಾನು ಅವರಿಗಿಂತ ತುಸು ಹಿರಿಯ!) ಆದರೆ ೫ರ ಮುಂಜಾನೆ ನಾನು ಕಂಡದ್ದೇನು? ಈ ಪ್ರಾಣಮಿತ್ರ-ಕರ್ಮಯೋಗಿ-ಜೀವನ್ಮುಕ್ತ ಪತ್ನಿಸಹಿತ ಆ ಬೃಹತ್ಸಭೆಯಲ್ಲಿ ಹಾಜರ್! ಸುಮಾರು ೧ ತಾಸು ಕುಳಿತಿದ್ದು ನನ್ನ ಭಾಷಣ ಪೂರ್ತಿ ಆಲಿಸಿ ಮನೆಗೆ ಮರಳಿದರು. ೬ರ ರಾತ್ರಿ ನಾನು ಮೈಸೂರಿಗೆ ಹಿಂತಿರುಗಿದೆ. ೭ರ ಮುಂಜಾನೆ ಮಡಿಕೇರಿಯಿಂದ ತಮ್ಮ ರಾಘವೇಂದ್ರ ಅನಿವಾರ್ಯವಾಗಿ ಕಹಿ ಸುದ್ದಿ ಬಿರಿದ: ನಮ್ಮ ಪ್ರಿಯ ಬಾಳಿಗರು ಅದೇ ಹಿಂದಿನ ರಾತ್ರಿ ಮಡಿದಿದ್ದರು. ನಾನು ಕುಸಿದು ಹೋದೆ. ಮರುಗಳಿಗೆ ಚೇತರಿಸಿಕೊಂಡು ಅವರಿಗೆ ನನ್ನ ನುಡಿತರ್ಪಣ ಬರೆದು ಮೈಸೂರಿನ ಮತ್ತು ಕೊಡಗಿನ ದೈನಿಕಗಳಿಗೆ ರವಾನಿಸಿದೆ:

ಅಗಲಿದ ಗೆಳೆಯನಿಗೆ ಅರ್ಪಿಸಿದ ನುಡಿನಮನ

*ಇಸವಿ ೧೯೪೯. ಸ್ಥಳ ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜ್. ಅಲ್ಲಿಯ ಭೌತವಿಜ್ಞಾನ ವಿಭಾಗದಲ್ಲಿ ಬಾಳಿಗರೂ ಗಣಿತವಿಭಾಗದಲ್ಲಿ ನಾನೂ ಯುವ ಉಪನ್ಯಾಸಕರಾಗಿ ನೇಮನಗೊಂಡಿದ್ದೆವು. ಇಪ್ಪತ್ತರ ಹರೆಯ. ಅವಿವಾಹಿತರು. ಉತ್ಕೃಷ್ಟ ಶೈಕ್ಷಣಿಕ ಪರಿಸರ. ನಮ್ಮ ಉತ್ಸಾಹ, ಆಶೋತ್ತರಗಳಿಗೆ ಆಕಾಶವೇ ಮಿತಿ. *ಇಸವಿ ೧೯೫೩. ನಾನು ಮಡಿಕೇರಿ ಸರ್ಕಾರೀ ಕಾಲೇಜಿನಲ್ಲಿ ಉಪನ್ಯಾಸಕನಾಗಿ ನೇಮಕಗೊಂಡೆ. ಮರುವರ್ಷ ಬಾಳಿಗರೂ ನಮ್ಮ ಬಳಗ ಸೇರಿದರು. ಆ ವೇಳೆಗೆ ನಾವಿಬ್ಬರೂ ಎನ್‌ಸಿಸಿ ಶಿಕ್ಷಣ ಪಡೆದು ಭಾಗಕಾಲೀನ ಅಧಿಕಾರಿಗಳಾಗಿದ್ದೆವು ಕೂಡ. ಹೀಗೆ ಮಂಗಳೂರಿನಲ್ಲಿ ಆರಂಭವಾದ ನಮ್ಮ ಸಾಹಚರ್ಯ ಮತ್ತು ಮೈತ್ರಿ ಮಡಿಕೇರಿಯ ಹೊಸ ಹವೆಯಲ್ಲಿ ಇನ್ನಷ್ಟು ದೃಢವಾದುವು. ಕಾಲೇಜಿನ ಸಮಸ್ತ ಚಟುವಟಿಕೆಗಳಲ್ಲಿಯೂ — ಪಾಠಪ್ರವಚನಗಳ ಜೊತೆಗೆ ಎನ್‌ಸಿಸಿ, ಲಲಿತ ಕಲೆಗಳು, ಕ್ರೀಡೆ, ಸಹಕಾರ ಸಂಘ, ಸಾಮಾಜಿಕ ಸೇವೆ ಇತ್ಯಾದಿ — ನಮ್ಮ ಅನ್ಯೋನ್ಯತೆಯನ್ನು ಗುರುತಿಸಿದ ಸಹೋದ್ಯೋಗಿಗಳೂ ವಿದ್ಯಾರ್ಥಿಗಳೂ ಪ್ರೀತಿಯಿಂದ ನಮಗಿತ್ತ ಬಿರುದುಗಳು ‘ಮೌನದಕ್ಷತೆ’ ಬಾಳಿಗ, ‘ಮಾತಾಳಿದಕ್ಷತೆ’ ಜಿಟಿಎನ್!

*ಇಸವಿ ೧೯೬೩. ಮಡಿಕೇರಿ ಬಿಟ್ಟೆ. ಎಲ್ಲೆಲ್ಲೋ ಅಲೆದು ೧೯೬೯ರಲ್ಲಿ ಮೈಸೂರಿನ ಶಾಶ್ವತ ನಿವಾಸಿಯಾದೆ. ಆದರೆ ನಮ್ಮ ಬಾಂಧವ್ಯ ಸದಾ ಹಸುರಾಗಿಯೇ ನಳನಳಿಸುತ್ತಿತ್ತು. ಏಕೆಂದರೆ ಅದು ಭದ್ರ ಜೀವನಮೌಲ್ಯಾಧಾರಿತವಾದುದಾಗಿತ್ತು. ತರುವಾಯದ ವರ್ಷಗಳಲ್ಲಿ ನಾನು ಮಡಿಕೇರಿಗೆ ಹೋದಾಗಲೆಲ್ಲ ಬಾಳಿಗರ ಆಶ್ರಮಕ್ಕೆ ಭೇಟಿಯಿತ್ತು ಅವರಿಂದ ಉತ್ಸಾಹೋಲ್ಲಾಸ ಪಡೆದು ಮರಳುತ್ತಿದ್ದುದು ವಾಡಿಕೆ.

*ದಿನಾಂಕ ೪-೫-೨೦೦೬. ಮಡಿಕೇರಿಯಲ್ಲಿ ಮರುದಿನ ಆರಂಭವಾಗಲಿದ್ದ ಕೊಡಗು ಜಿಲ್ಲಾ ೫ನೆಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಲು ಅಲ್ಲಿಗೆ ಹೋಗಿದ್ದೆ. ಆ ಸಂಜೆಯೇ ಬಾಳಿಗಾಶ್ರಮಕ್ಕೆ ಭೇಟಿನೀಡಿದೆ. ಆಗ ಕಂಡ ದೃಶ್ಯ ನನ್ನ ಬುಡವನ್ನೇ ಅಲ್ಲಾಡಿಸಿಬಿಟ್ಟಿತು: ನಮ್ಮ ಪ್ರಿಯ ಬಾಳಿಗರು ಮಾತಾಡದ ಮತ್ತು ನಡೆಯಲಾಗದ ಸ್ಥಿತಿಯಲ್ಲಿದ್ದರು. ಈಚೆಗಿನ ದಿನಗಳಲ್ಲಿ ಅವರ ಆರೋಗ್ಯ ಹದಗೆಟ್ಟು ಆ ಸಂಜೆ ಅದು ಪ್ರಕೋಪಿಸಿತ್ತೆಂದು ಅವರ ಹೆಂಡತಿ ಹೇಳಿದರು. ಮಾತು ಸಂವಹನಿಸಲಾಗದ್ದನ್ನು ಬಾಳಿಗರ ಕಣ್ಣುಗಳು ಅಧಿಕ ಅರ್ಥಭಾವಪೂರ್ಣವಾಗಿ ನನಗೆ ತಿಳಿಸಿದುವು. ಇಬ್ಬರ ಹೃದಯಗಳೂ ತುಂಬಿಬಂದಿದ್ದ ಕ್ಷಣವದು.

*ದಿನಾಂಕ ೫-೫-೨೦೦೬. ನಮ್ಮ ನಗರ ಮೆರವಣಿಗೆ ಮುಗಿದು ಕಾವೇರೀ ಪುರಭವನವನ್ನು ಪ್ರವೇಶಿಸಿದಾಗ, ಆ ತುಂಬು ಸಭೆಯಲ್ಲಿ, ನಮ್ಮ ಪ್ರೀತಿಯ ಬಾಳಿಗರೂ ಅವರ ಪತ್ನಿಯೂ ಪ್ರತ್ಯಕ್ಷರಾಗಿದ್ದರು! ಕನ್ನಡದ ಹಾಗೂ ನನ್ನ ಬಗೆಗಿನ ನಿರ್ವ್ಯಾಜ ಅಂತಃಕರಣ ಮತ್ತು ಅಕೃತ್ರಿಮ ಪ್ರೀತಿ ಅವರ ದೇಹಾಲಸ್ಯವನ್ನು ಮೀರಿ ಅವರಿಗೆ ಉತ್ಸಾಹ ತುಂಬಿ ಅಲ್ಲಿಗೆ ತಂದಿದ್ದುವು.

*ದಿನಾಂಕ ೬-೫-೨೦೦೬. ರಾತ್ರಿ ವೇಳೆಗೆ ಮೈಸೂರಿಗೆ ಮರಳಿದೆ.

*ದಿನಾಂಕ ೭-೫-೨೦೦೬. ಮಡಿಕೇರಿಯಿಂದ ದೂರವಾಣಿ ಸಂದೇಶ, “ಅದೇ ಹಿಂದಿನಿರುಳು ಜನಾರ್ದನ ಬಾಳಿಗರು ವಿಶ್ವಲೀನರಾಗಿದ್ದರು.” ಆಗ ಮನದೊಳಗೆ ಮಿಡಿದದ್ದು ಮಹಾತ್ಮ ಗಾಂಧಿಯವರನ್ನು ಕುರಿತು ಐನ್‌ಸ್ಟೈನ್ ಸಲ್ಲಿಸಿದ ನುಡಿಕಾಣಿಕೆ, “[ಈ ಮಹಾಪುರುಷನ] ಯಶಸ್ಸು ಚಮತ್ಕಾರವನ್ನಾಗಲೀ ತಾಂತ್ರಿಕ ಕೌಶಲಗಳಲ್ಲಿ ಗಳಿಸಿರುವ ಪ್ರಾವೀಣ್ಯವನ್ನಾಗಲೀ ಅವಲಂಬಿಸಿಲ್ಲ, ಬದಲು, ಮನವೊಲಿಸಬಲ್ಲ ಸ್ವಂತ ವ್ಯಕ್ತಿತ್ವದ ಸಾಮರ್ಥ್ಯವನ್ನು ಮಾತ್ರ ಅವಲಂಬಿಸಿದೆ… ದೃಢನಿರ್ಧಾರ ಮತ್ತು ಅಚಲ ಸ್ಥೈರ್ಯದಿಂದ ಸಜ್ಜುಗೊಂಡು ಸಕಲ ತ್ರಾಣವನ್ನೂ ತನ್ನ ಜನರ ಉದ್ಧಾರ ಹಾಗೂ ಸ್ಥಿತಿಗತಿಗಳ ಸುಧಾರಣೆಗಾಗಿ ಅರ್ಪಿಸಿದಾತ …” ನಿಜ, ಬಾಳಿಗರ ಸಾರ್ಥಕ ಜೀವನ ಡಿವಿಜಿಯವರ ಅಮರ ನುಡಿಗಳಿಗೆ ಬರೆದ ಜೀವಂತ ಭಾಷ್ಯ:

ವಿಸ್ತಾರದಲಿ ಬಾಳು, ವೈಶಾಲ್ಯದಿಂ ಬಾಳು
ಕತ್ತಲೆಯ ಮೊಡಕು ಮೂಲೆಗಳ ಸೇರದಿರು
ಭಾಸ್ಕರನನುಗ್ರಹವೆ ನೂತ್ನ ಜೀವನ ಸತ್ತ್ವ
ಮೃತ್ಯು ನಿನಗಲ್ಪತೆಯೊ ಮಂಕುತಿಮ್ಮll

Loss of my twin brother

Bantwala Janardana Baliga and I had worked as twin brothers in the two Colleges we served: St Aloysius’ College, Mangalore and Government College, Madikeri. He taught Physics and I Mathematics. We were also NCC Officers in the Units attached to the respective Colleges. Our outlooks on life, work, values, student welfare, society etc were identical. Students used to distinguish between us as silent efficiency (BJB) and noisy efficiency (GTN). I do agree with them.

In 1963 I left Madikeri. Since then whenever I visited my native town Madikeri I made it a point to call on this gem of purest ray serene and derive inspiration for my pursuits. On May 4, 2006 I reached Madikeri (to attend the Fifth Kodagu Jilla Kannada Sahitya Sammelana, May 5 and 6). On that cold and rainy evening we waded our way to Baliga’s Ashram (yes, he lived as a hermit) in the Sri Ramadevi Mandira complex adjacent to Omkareshwara Temple.

However, in the place of a buoyant and beaming Baliga I was accustomed to see, I met a pale and weak shadow of the great man. His wife told me, just a few minutes earlier he had a severe bout of asthma. He was unable to speak. Yet his eyes full of compassion and love did express his feelings of appreciation. On the following morning he was very much present at the Town Hall to receive me! His dedication to Kannada and love for his friend were of that intensity.

We returned to Mysore late last night. This morning [May 7, 2006] I got a phone call from Madikeri that Janardana Baliga had breathed his last just a few hours earlier. At that unkindest moment of grievous personal loss, my mind hovered around the immortal words of Einstein on Gandhi, “… a man of wisdom and humility, armed with resolve and inflexible consistency, who has devoted all his strength to the uplifting of his people and the betterment of their lot…”
Yes, the mortal frame of Baliga (aged about 80) has dissolved in the elements. But the values he had defined by dedicated work will remain eternal to serve as beacon light to generations to come.

(ಮುಂದುವರಿಯಲಿದೆ)