ಪೀಠಿಕೆ: [ಈಚೆಗೆ ‘ಕುತ್ಲೂರು ಕಥನ’ ಪುಸ್ತಕದ ಲೋಕಾರ್ಪಣಕ್ಕೆ ನಾನು ಹೋಗಿದ್ದೆ. ಸಭೆ ತಡವಾಗಿ ಶುರುವಾಯ್ತು. ಹಾಗಾಗಿ ನನಗೆ ಸಭೆಯಲ್ಲಿ ಪ್ರಕಾಶಕಿ – ಅಕ್ಷತಾ ಹುಂಚದ ಕಟ್ಟೆ, ಲೇಖಕ – ನವೀನ್ ಸೂರಿಂಜೆ ಮತ್ತು ವಕೀಲ – ದಿನೇಶ್ ಉಳೇಪಾಡಿಯವರ ಮಾತುಗಳನ್ನಷ್ಟೇ ಕೇಳಲು ಸಾಧ್ಯವಾಯ್ತು. ಅನ್ಯ ಕಾರ್ಯ ಒತ್ತಡದಿಂದ ಎದ್ದು ಬರುವಾಗ, ವಿಷಯ ವನ್ಯಕ್ಕೆ ಸಂಬಂಧಿಸಿದ್ದರಿಂದ ಅಪಾರ ಕುತೂಹಲದಲ್ಲಿ ಪುಸ್ತಕದ ಪ್ರತಿಯೊಂದನ್ನು ಕೊಂಡು ತಂದೆ. ಪುಸ್ತಕ ಮೊದಲಲ್ಲಿ ‘ಮಲೆಕುಡಿಯ ಸಮುದಾಯ’ಕ್ಕೆ ಅರ್ಪಣೆ ಮಾಡಿದಲ್ಲಿಂದ, ವಿರೋಧ ಪಕ್ಷದ ನಾಯಕ ಹರಿಪ್ರಸಾದರ ಹಿನ್ನುಡಿಯವರೆಗಿನ ಪೂರ್ಣ (ಸುಮಾರು ಒಂದು ನೂರು ಪುಟ) ಗಮನವಿಟ್ಟು ಓದಿದೆ. ಮತ್ತೆ ಅದರ ಕುರಿತು ಫೇಸ್ ಬುಕ್ಕಿಗೆ ಬರೆದ ಟಿಪ್ಪಣಿ ಮತ್ತು ಚರ್ಚೆಗಳ ಫಲ….]
ಕುತ್ಲೂರು – ಕುದುರೆಮುಖ ರಾಷ್ಟ್ರೀಯ ಉದ್ಯಾನದ ಒಳಗಿರುವ ಒಂದು ಮೂಲವಾಸಿಗಳ, ನಿರ್ದಿಷ್ಟವಾಗಿ ಹೇಳುವುದಿದ್ದರೆ ಮಲೆಕುಡಿಯ ಸಮುದಾಯದ ಹಳ್ಳಿ. ಅಲ್ಲಿ ಮಲೆಕುಡಿಯರ ಸಾಂಪ್ರದಾಯಿಕ ಜೀವನ ಕ್ರಮಕ್ಕೂ ಹೊಸದಾಗಿ ಹೇರಿದ ವನ್ಯ ಸಂರಕ್ಷಣಾ ನ್ಯಾಯಕ್ಕೂ ಸಂಘರ್ಷ ಏರ್ಪಟ್ಟಿದೆ. ಅದರ ಭಾಗವಾಗಿ ವಿಠಲ ಮಲೆಕುಡಿಯ ಎಂಬ ತರುಣ ಕೇಂದ್ರಿತವಾದಂತ ಒಂದು ಪ್ರಕರಣವನ್ನು ‘ಕುತ್ಲೂರು ಕಥನ’ ಪುಸ್ತಕ ಸಾದ್ಯಂತ ವಿವರಿಸಿದೆ. ಇದರಲ್ಲಿ ಅರಣ್ಯ ಅಥವಾ ವನ್ಯ ಇಲಾಖೆ, ಪೋಲಿಸ್ ಮತ್ತು ಅದರದೇ ವಿಶೇಷ ನಕ್ಸಲ್ ವಿರೋಧೀ ದಳಗಳು ಮಹಾ ಖಳನಾಯಕರಾಗಿ ಮೂಡುತ್ತಾರೆ. ಈ ಎರಡು ಇಲಾಖೆಗಳ ಚಕ್ರಸುಳಿಯಲ್ಲಿ, ಬಹುತೇಕ ಅವಿದ್ಯಾವಂತ ಮತ್ತು ಆರ್ಥಿಕವಾಗಿ ತೀರಾ ದುರ್ಬಲವಾದ ಮಲೆಕುಡಿಯ ಸಮುದಾಯ ಸಿಕ್ಕು ನರಳಿದೆ. ಅದರಲ್ಲಿ ಪ್ರಸ್ತುತ ಪ್ರಸಂಗಕ್ಕೆ ಸಂಬಂಧಿಸಿದಂತೆ ವಿಠಲ ಮಲೆಕುಡಿಯರಿಗೆ ಸಂವಿಧಾನದತ್ತ ‘ಸಮಾನ ನ್ಯಾಯ’ ಒದಗಿಸುವಲ್ಲಿ ಸಾಹಸೀ ಪತ್ರಕರ್ತನಾಗಿ ನವೀನ್ ಸೂರಿಂಜೆ, ಕ್ರಿಯಾತ್ಮಕ ಚಳವಳಿಗಾರನಾಗಿ ಮುನೀರ್ ಕಾಟಿಪಳ್ಳ ಮತ್ತು ಉದಾತ್ತ ವಕೀಲರಾಗಿ ದಿನೇಶ ಉಳೇಪಾಡಿಯವರು ಆದರ್ಶಪ್ರಾಯವಾಗಿಯೇ ದುಡಿದಿದ್ದಾರೆ, ವಿಠಲ ‘ಅಗ್ನಿಪರೀಕ್ಷೆ’ಯನ್ನೇ ಗೆದ್ದ ಅನುಭವದೊಡನೆ, ಇಂದು ಪತ್ರಕರ್ತನೂ ಆಗಿ ತನ್ನ ಹಾಗೂ ಸಮುದಾಯದ ಭರವಸೆಯಾಗಿ ರೂಪುಗೊಳ್ಳುತ್ತಿರುವುದು ತುಂಬ ಸಂತೋಷದ ಸಂಗತಿ. ಹೀಗೆ ಕುತ್ಲೂರಿನ ಒಂದು ನಿರ್ದಿಷ್ಟ ಅನ್ಯಾಯಕ್ಕೆ ಒಂದು ತಾರ್ಕಿಕ ಅಂತ್ಯವನ್ನು ಕೊಟ್ಟು ಪುಸ್ತಕ ಮುಗಿದಿದೆ. ಆದರೆ….
ಕುತ್ಲೂರು ಕಥನಕ್ಕೆ ಮುಖ್ಯ ನೆಲೆಯೂ ಕಾರಣವೂ ಮತ್ತು ಎಲ್ಲಕ್ಕೂ ಬಹಳ ಪುರಾತನವೂ ಆದ ವನ್ಯ ಸ್ಥಿತಿಯ ಉಲ್ಲೇಖ (ಪ್ರವಾಸ ಕಥನದಂತೆ ಬಂದ ವಿವರಣೆಯಲ್ಲ) ಮತ್ತು ವಿಶ್ಲೇಷಣೆ ಪುಸ್ತಕದಲ್ಲಿ ಬರಲೇ ಇಲ್ಲ. ಆ ವಲಯದಲ್ಲಿ ಸುಮಾರು ಮೂರು ದಶಕಗಳ ಹಿಂದೆ, ಕೇವಲ ಇಪ್ಪತ್ತು – ಮೂವತ್ತು ವರ್ಷಗಳ ಒಪ್ಪಂದದ ಮೇರೆಗೆ ನೆಲೆಸಿದ್ದ ಕುದುರೆಮುಖ ಗಣಿಗಾರಿಕೆ ಕಂಪೆನಿ ಒಟ್ಟಾರೆ ಬೆಟ್ಟ, ನೀರು, ಜೀವಜಾಲಕ್ಕೆಲ್ಲ ಮಹಾಮಾರಿಯಾಗಿತ್ತು. ಮತ್ತದು ಅನಿರ್ದಿಷ್ಟವಾಗಿ ಮುಂದುವರಿಯಲು ಸರಕಾರದಲ್ಲೇ ಒತ್ತಡ ತಂದಿತ್ತು ಮತ್ತು ಒಲವನ್ನೂ ಗಳಿಸಿತ್ತು. ಆಗ ಖಾಸಗಿ ವನ್ಯ ಸಂರಕ್ಷಣಾ ಪ್ರೇಮಿಗಳು/ ಸಂಸ್ಥೆಗಳು ಭಾರೀ ನ್ಯಾಯಿಕ ಹೋರಾಟ ಮಾಡಿ ಗಣಿಗಾರಿಕೆಗೆ ಪೂರ್ಣ ವಿರಾಮ ಹಾಕಿಸಿದರು. ಆ ನಿಟ್ಟಿನಲ್ಲಿ ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಘೋಷಣೆ ಮತ್ತು ಅನುಷ್ಠಾನ ಬಹಳ ದೊಡ್ಡ ಪಾತ್ರವನ್ನು ನಿರ್ವಹಿಸಿದೆ. ಇಂದು ಗಣಿಗಾರಿಕೆ ಮತ್ತು ಅದಕ್ಕೆಂದೇ ರೂಪುಗೊಂಡ ಪಟ್ಟಣ ಮತ್ತಿತರ ವ್ಯವಸ್ಥೆಗಳೆಲ್ಲ ಬಹುತೇಕ ನಿವಾರಣೆಯಾಗಿದೆ. ಆದರೆ…
ಅಷ್ಟಕ್ಕೇ ಮುಗಿಯಲ್ಲಿಲ್ಲ ಎನ್ನುವಂತೆ ಅನ್ಯ ‘ಅಭಿವೃದ್ಧಿ’ ಕಲಾಪಗಳ ಒತ್ತಡ ವನ್ಯದ ಮೇಲೆ ಮುಂದುವರಿದೇ ಇದೆ, ಹೆಚ್ಚುತ್ತಲೂ ಇದೆ. ರಸ್ತೆ, ಕಲ್ಲ ಕೋರೆಗಳು, ವಿದ್ಯುತ್, ಅಣೆಕಟ್ಟು, ಕೊಳವೆಸಾಲು, ಪ್ರವಾಸೋದ್ಯಮ ಮುಂತಾದವುಗಳ ಒತ್ತಡಗಳು ಹೊರಗಿನವು. ಇನ್ನೂ ಸಂಕೀರ್ಣವಾದದ್ದು ತಲೆತಲಾಂತರಗಳಿಂದ ಕಾಡಿನೊಳಗೇ ಅಥವಾ ಅಂಚುಗಳಲ್ಲಿ ಬದುಕು ಕಂಡುಕೊಂಡವರ ಜೀವನ. ಅತ್ತ ಆದಾಯವರಸಿ ಕಾಡಿಗೆ ನುಗ್ಗುವಂತಿಲ್ಲ, ಇತ್ತ ಹೊರಗೆ ಹೆಚ್ಚುತ್ತಲೇ ಇರುವ ‘ನಾಗರಿಕ’ ಸವಲತ್ತುಗಳನ್ನು ಪಡೆಯುವಂತಿಲ್ಲ. ಅವರು ಸಾರ್ವಕಾಲಿಕ ದಾರಿ, ವಿದ್ಯುಚ್ಛಕ್ತಿ, ನಿತ್ಯೋಪಯೋಗಿ ಸಾಮಗ್ರಿ ಪೂರೈಕೆ….. ಎಂದೆಲ್ಲ ಹಕ್ಕೊತ್ತಾಯ ಮಾಡುವುದು ಸರಿಯೇ ಇದೆ. ಮತ್ತೆ ಸಮಾನ ಹಕ್ಕುಗಳ ನೆಲೆಯಲ್ಲಿ ಪಟ್ಟಿ ಬೆಳೆಯುತ್ತ ಹೋಗುವುದೂ ತಪ್ಪಲ್ಲ. ಆದರೆ ಅವು ವನ್ಯನಾಶಕ್ಕೆ ಕಾರಣವಾಗುವುದನ್ನೂ ಬದಲಿಗೆ ಮೂಲವಾಸಿಗಳಿಗೆ ಇರುವ ಪರ್ಯಾಯಗಳನ್ನು ಚರ್ಚಿಸುವುದರಲ್ಲಿ ಕುತ್ಲೂರು ಕಥನ ಪುಸ್ತಕ ಪ್ರಯತ್ನವನ್ನೇ ಮಾಡಿಲ್ಲ. ಪತ್ರಿಕಾ ಅಥವಾ ವಿದ್ಯುನ್ಮಾನ ಮಾಧ್ಯಮದ ಲೇಖನಗಳದರೋ ಅಂದಂದಿನ ತುರ್ತಿನಲ್ಲಿ, ಹಾಗಾಗಿ ಸೀಮಿತ ವ್ಯಾಪ್ತಿಯಲ್ಲಿ ವಿಷಯ ಮಂಡಿಸುತ್ತವೆ. ಆದರೆ ಕೆಲವು ಕಾಲವಾದರೂ ಬಾಳಬೇಕಾದ ಪುಸ್ತಕಕ್ಕೆ ಇಷ್ಟು ಸಾಲದು ಅನಿಸಿತು.
ಮೇಲಿನ ನನ್ನ ಟಿಪ್ಪಣಿಗೆ ಯಾರಿಂದಲೂ ಪ್ರತಿಕ್ರಿಯೆ ಬರಲೇ ಇಲ್ಲ. ಆ ಸಮಯಕ್ಕೆ ಪ್ರಜಾವಾಣಿಯಲ್ಲೊಂದು ಸುದ್ದಿ ಬಂತು – ವನಧಾಮದೊಳಗಿನ ಮೂಲವಾಸಿಗಳ “ಪುನರ್ವಸತಿ ಪ್ಯಾಕೇಜ್ ೧೫ ಲಕ್ಷಕ್ಕೆ ಹೆಚ್ಚಳ.” ಅದನ್ನು ಉದ್ಧರಿಸಿ ನಾನಿನ್ನೊಂದು ಟಿಪ್ಪಣಿಯ ಬರೆದೆ.
ದಿನೇ ದಿನೇ ‘ಅಭಿವೃದ್ಧಿ’ಯ ಹೆಸರಿನಲ್ಲಿ ಕ್ಷೀಣಿಸುತ್ತಿರುವ ವನ್ಯ ಸಂಪತ್ತು ಮತ್ತು ಹೊರಗೆ ಹೆಚ್ಚುತ್ತಿರುವ ನಾಗರಿಕ ಸವಲತ್ತುಗಳ ನಡುವೆ ಮಲೆಕುಡಿಯ ಅಥವಾ ಇನ್ಯಾವುದೇ ವನ್ಯ ಸಮುದಾಯಗಳು ಸಾಂಪ್ರದಾಯಿಕ ಜೀವನ ನಡೆಸುವುದು ಸಾಧ್ಯವಿಲ್ಲ. ಇದಕ್ಕೆ ಬಹಳ ಹಿಂದೆಯೇ ನನ್ನ ಕೆಲವು ಹಿರಿಯ ಮಿತ್ರರು ಪರಿಣತ ಉತ್ತರ ಕಂಡುಕೊಂಡಿದ್ದನ್ನೇ ಸರಕಾರ ತನ್ನ ಯೋಜನೆಯಾಗಿಯೂ ಸ್ವೀಕರಿಸಿತ್ತು. ಈ ಗೆಳೆಯರು ಕುದುರೆಮುಖ ರಾಷ್ಟ್ರೀಯ ಉದ್ಯಾನದ ಒಳ ಬರುವ ಕೆಲವು ನೆಲೆಗಳಲ್ಲಿ (ಸಂಸೆ, ಯಳನೀರು, ಹೇವಳ, ಮುಳ್ಳೋಡಿ, ಸಿಂಗ್ಸರ…) ಬಹುತೇಕ ಸರಕಾರೀ ಯೋಜನೆಯನ್ನು ಯಶಸ್ವಿಯಾಗಿ ಜನಗಳಿಗೆ ಮುಟ್ಟಿಸಿ, ಗೌರವಯುತ ಮರುವಸತಿಯನ್ನು ಮಾಡಿಸುತ್ತ ಬಂದರು. ಈಗ ಆ ಸವಲತ್ತು ಇನ್ನಷ್ಟು ಉತ್ತಮಗೊಂಡಿದೆ ಎನ್ನುವುದು ವರದಿಯ ಸಾರಾಂಶ. ನಮ್ಮ ಬಹುತೇಕ ಸರಕಾರೀ ಯೋಜನೆ ಮತ್ತು ಅನುಷ್ಠಾನಗಳ ನಡುವೆ ಭೀಕರ ನುಂಗುವ ಮತ್ತು ವಿಳಂಬಿಸುವ ಕಂದರಗಳಿವೆ. ಹಿಂದೆ ಅವನ್ನು ನಿವಾರಿಸಿದ ನನ್ನ ಮಿತ್ರಕೂಟ ಇಂದು ಬಹುತೇಕ ಬರ್ಖಾಸ್ತಾಗಿದೆ. ಈಗ ಇಲಾಖೆಯ ಸಹಕಾರವನ್ನು ಗಳಿಸಿಕೊಂಡು, ಹೆಚ್ಚಿದ ಕೊಡುಗೆಯನ್ನು ಮಲೆ ಮಕ್ಕಳಿಗೆ ಪ್ರೀತಿಯಿಂದ ಮುಟ್ಟಿಸುವವರು ಬೇಕಾಗಿದ್ದಾರೆ. ನನ್ನ ಪುಸ್ತಕ ವಿಮರ್ಶೆಗೆ ಮಾತಾಡದವರು ಇಲ್ಲಿ ಅಸಮಾಧಾನವನ್ನೂ ಕೆಲವರು ನನ್ನ ಮಾತಿಗೆ ಬೆಂಬಲವನ್ನೂ ಫೇಸ್ ಬುಕ್ಕಿನಲ್ಲೇ ಕೊಟ್ಟದ್ದು ಹೀಗಿತ್ತು….
ಅಕ್ಷತಾ ಹುಂಚದಕಟ್ಟೆ: ಹದಿನೈದು ಲಕ್ಷ ಎಂತಕ್ಕೆ ಸಾಕು ಸರ್? ಜುಜುಬಿ ಹದಿನೈದು ಲಕ್ಷ ತಲುಪಿಸಲು (ಜುಜುಬಿ ಯಾಕೆ ಹೇಳ್ತಾ ಇದೇನೆ ಅಂದರೆ ಶಿವಮೊಗ್ಗ, ತೀರ್ಥಹಳ್ಳಿ ಅಂತ ಪಟ್ಟಣದಲ್ಲಿ ಈ ಮೊತ್ತಕ್ಕೆ ಒಂದು ಪುಟ್ಟ ಸೈಟು ಕೂಡಾ ಸಿಗೋದಿಲ್ಲ . ಮನೆ ಬಾಡಿಗೆ ಅಡ್ವಾನ್ಸ ಇಷ್ಟು ಕೇಳತಾರೆ. ಇನ್ನೂ ಜಾಸ್ತಿ).ಸಾಹಸೀ ಸ್ವಯಂ ಸೇವೆ ಮಾಡೊರು ಬೇಕಾ?
ಶ್ರೀನಿವಾಸಮೂರ್ತಿ: ಅಭಯಾರಣ್ಯದ ಹೊರಭಾಗದಲ್ಲಿ ಚಿಕ್ಕ ಜಮೀನು ಮನೆ ಖರೀದಿಸಬಹುದು.
ಅಕ್ಷತಾ: ಸರ್, ಹೌದಾ? ಅಷ್ಟು ಸುಲಭವ… ತಲಾತಲಾಂತರದಿಂದ ಕಾಡಿನಲ್ಲಿ ವಾಸವಿರುವವರು… ಕಾಡನ್ನೆ ತಮ್ಮ ಊರಾಗಿ ಭಾವಿಸಿ ಬದುಕ್ತಾ ಇರ್ತಾರೆ. ನಮಗೆ ನಿಮಗೆ ಅದು ಕಾಡು. ಅವರಿಗೆ ಅದು ಊರು, ಅವರ ಹಳ್ಳಿ…ಅಷ್ಟೇ. ಕಾಡಿನಲ್ಲಿರುವವರನ್ನು ಬಿಡಿಸೋ ಬದಲು ಹಳ್ಳಿಗರನ್ನು ಹದಿನೈದು ಲಕ್ಷ ಕೊಟ್ಟು ಊರು ಬಿಡಿ ಅಂತ ಪ್ರಭುತ್ವ ಹೇಳಿದರೆ ಏನಾಗಬಹುದು?
ಶ್ರೀನಿವಾಸಮೂರ್ತಿ: ನಾನೂ ಕಾಡಿನಲ್ಲೇ ವಾಸವಿರುವುದು. ಅಭಯಾರಣ್ಯದ ಅಂಚು. ಬಫರ್ ಝೋನ್. ನಾನೂ ಒಂದು ದಿನ ಎತ್ತಂಗಡಿ ಆಗುವವ. ಈ ಹಿಂದೆ ಅಭಯಾರಣ್ಯದಿಂದ ಪರಿಹಾರ ಪಡೆದು ಹೊರಗೆ ಬಂದು ಬದುಕು ಕಟ್ಟಿಕೊಂಡ ಹಲವು ಕುಟುಂಬಗಳು ಈಗ ಸುಖವಾಗಿರುವುದನ್ನೂ ಕಂಡಿದ್ದೇನೆ. ನಮ್ಮ ಬಾವನವರ ಜಮೀನು ಖರೀದಿಸಿದ ಕುಟುಂಬವೂ ಅದರಲ್ಲೊಂದು. ಹದಿನೈದು ಲಕ್ಷ ಎಂಬುದು ಬರಿ ವಾಸವಿರುವುದಕ್ಕೆ ಕೊಡುವುದು. ಜಮೀನು, ಮನೆ ಇದ್ದರೆ ಅದಕ್ಕೆ ಗ್ರಾಮವಾರು ಸರಕಾರಿ ಮೌಲ್ಯ ಮಾಪನ ಮಾಡಿ ಸೂಕ್ತ ಪರಿಹಾರ ಕೊಡಲಾಗುತ್ತದೆ. ಹಾಗೆ ದೊಡ್ಡ ಮೊತ್ತದ ಪರಿಹಾರ ಪಡೆದು ಬಂದು ಕಾಡಂಚಿನ ನಮ್ಮ ಗ್ರಾಮದಲ್ಲೇ ಜಮೀನು ಖರೀದಿಸಿದವರು ಇದ್ದಾರೆ. ನಾನು ತಿಳಿದಂತೆ, ಕುದುರೆಮುಖ ರಾಷ್ಟ್ರೀಯ ಉದ್ಯಾನದಿಂದ ಹೊರಬರುವ ಆದಿವಾಸಿಗಳಿಗೆ ಪರಿಹಾರದ ಪ್ಯಾಕೇಜ್ ಚನ್ನಾಗಿ ಇದೆ, ಶೃಂಗೇರಿ ತಾಲೂಕಿನಲ್ಲಿ ಹಲವಾರು ಕುಟುಂಬಗಳು ಈಗಾಗಲೆ ಹೊರಬಂದಿವೆ, (ಕೆರೆಕಟ್ಟೆ, ಶೀರ್ಲು, ಅಡಿಕೆಸು.. ಮುಂತಾದ ಊರಿನವರು) ಅವರಿಗೆಲ್ಲ ಕೆಲವರಿಗೆ ಒಂದುಕೋಟಿ, ಒಂದು ಕಾಲು ಕೋಟಿವರೆಗೂ ಸಿಕ್ಕಿ, ಹೊರಬಂದ ಗೆಳೆಯರೊಬ್ಬರು, ಒಂದು ಜಮೀನು, ಒಂದು ಸೈಟು ತಗೊಂಡು ಮನೆ ಕಟ್ಟಿಸಿಕೊಂಡಿದ್ದಾರೆ.
ನಾನು: (ಅಕ್ಷತಾರಿಗೆ ಉತ್ತರಿಸುತ್ತ) ನಗರದ ಕಣ್ಣಿನಲ್ಲಿ ಕಾಡಿನ ಬದುಕಿನ ವೈಭವೀಕರಣ ಸರಿಯಲ್ಲ. ಅಂಡಮಾನ್ ಮೂಲೆಯಲ್ಲಿ ‘ಅವರಷ್ಟಕ್ಕೇ’ ಬದುಕು ಸಾಗಿಸಲು ಕಾನೂನಾತ್ಮಕವಾಗಿಯೇ ಬಿಟ್ಟ ಎರಡು ತರದ ಮಲೆಮಕ್ಕಳ ಕತೆ ಇಂದು ಏಕಾಂತವಾಸದ ಜೈಲಿಗಿಂತ ಭಿನ್ನವಾಗಿಲ್ಲ ಎನ್ನುವುದನ್ನು ಗಮನಿಸಿ. ನಾನು ೧೯೭೪ರಿಂದಲೇ ಪಶ್ಚಿಮ ಘಟ್ಟ ವಲಯದ ಕಾಡು ಮತ್ತು ಅಲ್ಲಿನ ಜೀವ ಜಗತ್ತನ್ನು ವಿವಿಧ ಸ್ತರಗಳಲ್ಲಿ ಕಂಡಿದ್ದೇನೆ, ಆದಷ್ಟೂ ನಾಗರಿಕ ಸವಲತ್ತುಗಳನ್ನು ಬಿಟ್ಟು ಚೂರುಪಾರು ಅನುಭವಿಸಿದ್ದೇನೆ. ಇಂದು ಕಾಡು ಎದುರಿಸುತ್ತಿರುವ ಒತ್ತಡಗಳಲ್ಲಿ ಅಲ್ಲಿನ ಜನಗಳನ್ನು ಅಲ್ಲೇ ಸ್ವಾಯತ್ತರಾಗುವಂತೆ ‘ನೋಡಿಕೊಳ್ಳುವುದು’ ಅಥವಾ ‘ಬಿಡುವುದು’ ಕ್ರೌರ್ಯವಾಗುತ್ತದೆ. ಪರಿಸ್ಥಿತಿಯ ವ್ಯಂಗ್ಯ ಗಮನಿಸಿ – ಇಲ್ಲಿ ಯಾರು ಉದ್ದೇಶಪಡದಿದ್ದರೂ ಹೊರ ಜಗತ್ತಿನ ದಟ್ಟ ಪ್ರಭಾವ ಮಲೆಮಕ್ಕಳನ್ನು ಕಾಡಿಯೇ ಕಾಡುತ್ತದೆ.
ಅಕ್ಷತಾ: ಸರ್, ವೈಭವೀಕರಣ ಯಾರು ಮಾಡತಿದಾರೆ? ಅವರನ್ನು ಹದಿನೈದು ಲಕ್ಷ ಕೊಟ್ಟು ಒಕ್ಕಲೇಳಿಸುವುದಕ್ಕಿಂತ ಹೆಚ್ಚಿನ ಕ್ರೌರ್ಯ ಇನ್ನೇನಿದೆ.
ನಾನು: ನೀವು ನಾನು ಅಂಡಮಾನ್ ಉದಾಹರಣೆ ಕೊಟ್ಟದ್ದನ್ನು ಗಮನಿಸಿಲ್ಲ. ನಾವು ಇಲ್ಲಿದ್ದುಕೊಂಡು, ಮಲೆಮಕ್ಕಳಿಗೆ “ನೀವಿರುವ ಸ್ಥಿತಿಯೇ ಸರಿ, ಉಳಿಸಿಕೊಡುತ್ತೇವೆ, ಅಲ್ಲಿಗೇ ನಾಗರಿಕ ಸೌಲಭ್ಯಗಳನ್ನು ಮುಟ್ಟಿಸುತ್ತೇವೆ, ಮುಂದುವರಿಯಿರಿ…” ಎನ್ನುವುದು ಇಂದಿನ ಕಾಡಿನ ಸ್ಥಿತಿಗತಿ ತಿಳಿದವರು ಶಿಫಾರಸು ಮಾಡುವುದು ಅಪ್ರಾಯೋಗಿಕ ಮತ್ತು ಕ್ರೂರವೂ ಹೌದು. ಮತ್ತೆ ಹಿಂದೆ, ಹತ್ತು ಲಕ್ಷವೋ ಮತ್ತೊಂದೋ ಇದ್ದ ಕಾಲದಲ್ಲೂ ‘ಬಲವಂತವಾಗಿ ಒಕ್ಕಲೆಬ್ಬಿಸಿಲ್ಲ’. ಅರಣ್ಯ ಇಲಾಖೆ, ಪೋಲಿಸ್ (ಕುತ್ಲೂರು ಕಥನದಲ್ಲಿ ಹೇಳಿದಂತೆ ಅಥವಾ ಅದಕ್ಕೂ ಹೆಚ್ಚೇ) ಹಿಂಸೆ ಕೊಟ್ಟಿರುವುದನ್ನು ನಾನು ಖಂಡಿತಾ ಅಲ್ಲ ಎನ್ನಲಾರೆ. ಆದರದು ಮರುವಸತಿ ಯೋಜನೆಯ ಧೋರಣೆಯ ತಪ್ಪಲ್ಲ, ಇಲಾಖೆಯಲ್ಲಿರುವ ವ್ಯಕ್ತಿಗಳ ಮನೋಸ್ಥಿತಿಯ ದೋಷ ಎಂದು ನಿಮಗೆ ನಾನು ಹೇಳಬೇಕೆ. ನಾನು ಹಿಂದೆ ಹೇಳಿದಂತೆ, ನನ್ನ ಗೆಳೆಯರ ಬಳಗ ಮರುವಸತಿ ಕೊಡಿಸಿದ ಹೇವಳ, ಸಿಂಗ್ಸರ, ಮುಳ್ಳೋಡಿ ಮತ್ತಿತರ ಹಲವು ತಲೆಗಳಿಂದ ನೆಲೆ ನಿಂತವರ ಮತ್ತು ತತ್ಕಾಲೀನ (ಯಾವುದೇ ದಾಖಲೆಗಳಿಲ್ಲದೇ ಇದ್ದ) ಗೋವಳಿಗರೆಲ್ಲ ಸಂತೋಷದಿಂದಲೇ ಪರಿಹಾರವನ್ನು ಒಪ್ಪಿಕೊಂಡು ಹೊರ ನಡೆದವರು. ಮೂರು ನಾಲ್ಕು ವರ್ಷ ಕಳೆದ ಮೇಲೊಮ್ಮೆ ಹೇವಳದ ಒಬ್ಬಿಬ್ಬರನ್ನು ಸಂಸೆಯ ಅವರ ಹೊಸ ನೆಲಯಲ್ಲಿ ಕಂಡಾಗಲೂ ಸಂತೋಷದಲ್ಲೇ ಮಾತಾಡಿಸಿದರು. (ಇದಕ್ಕೆ ಪೂರಕವಾಗಿ …)
ಶೃಂಗೇಶ ವೈ.ವಿ: ವಾಸ್ತವವನ್ನು ಗ್ರಹಿಸಿದ್ದೀರಿ. ರೋಮಾಂಟಿಕ್ ಆಗಿ ಯೋಚಿಸುವುದರಿಂದ ಕಾಡಲ್ಲಿನ ಜನರ ಬದುಕು ಇನ್ನಷ್ಟು ಹೈರಾಣು ಅಷ್ಟೇ.
ರವಿ ಜೋಗಿಬೈಲ್: ಇಲ್ಲಿ ಕನ್ಪ್ಯೂಷನ್ ಇದೆ, ನಾನು ತಿಳಿದಂತೆ, ಕುದುರೆಮುಖ ರಾಷ್ಟ್ರೀಯ ಉದ್ಯಾನದಿಂದ ಹೊರಬರುವ ಆದಿವಾಸಿಗಳಿಗೆ ಪರಿಹಾರದ ಪ್ಯಾಕೇಜ್ ಚನ್ನಾಗಿ ಇದೆ. ಶೃಂಗೇರಿ ತಾಲೂಕಿನಲ್ಲಿ ಹಲವಾರು ಕುಟುಂಬಗಳು ಈಗಾಗಲೆ ಹೊರಬಂದಿವೆ, (ಕೆರೆಕಟ್ಟೆ, ಶೀರ್ಲು, ಅಡಿಕೆಸು.. ಮುಂತಾದ ಊರಿನವರು) ಅವರಿಗೆಲ್ಲ ಕೆಲವರಿಗೆ ಒಂದುಕೋಟಿ, ಒಂದು ಕಾಲು ಕೋಟಿವರೆಗೂ ಸಿಕ್ಕಿ, ಹೊರಬಂದ ಗೆಳೆಯರೊಬ್ಬರು, ಒಂದು ಜಮೀನು, ಒಂದು ಸೈಟು ತಗೊಂಡು ಮನೆ ಕಟ್ಟಿಸಿ ಕೊಂಡಿದಾರೆ. ಕುಟುಂಬಕ್ಕೆ ಒಂದಿಷ್ಟು ಪರಿಹಾರ + ತೋಟದ ಮರಗಳಿಗೆ (ಅಡಿಕೆ, ಕಾಪಿ..) ಒಂದಕ್ಕೆ ಇಷ್ಟು ಬೆಲೆ ಅಂತ, ಹಾಗು ಜಾಗದಲ್ಲಿರುವ ಹಣ್ಣಿನ ಮರಗಳಿಗೂ (ಪೇರಲೆ, ಮಾವು,..) ಬೆಲೆ. + ಕಟ್ಟಿರುವ ಮನೆಗೆ ಇಷ್ಟು ಬೆಲೆ ಅಂತ ಇದೆ. ಎಲ್ಲವೂ ಸೇರಿ ದೊಡ್ಡ ಮೊತ್ತವೇ ಸಿಗುತ್ತಿದೆ. ಈ ವರ್ಷವೂ ನನ್ನ ಹಲವಾರು ಪರಿಚಿತರು ಹೊರಬರುತ್ತಿದ್ದಾರೆ ಸೆಟಲ್ಮೆಂಟ್ ಆಗಿದೆ (ಗುರಿಗೆ). ಈವರ್ಷದ ಪಸಲು ತೆಗೆದುಕೊಂಡು ಬರೋರಂತೆ. ಬಹುಶ ದಾಖಲೆಗಳಿಲ್ಲದ ಕುಟುಂಬಗಳಿಗೆ ಕಷ್ಟ ವಾಗಿರಬಹುದು.
ಅಕ್ಷತಾ: ಅಲ್ಲಿಯೇ ಮುಂದುವರೆಯಿರಿ ಎಂದು ಯಾರು ಹೇಳುವುದು ತಪ್ಪು ಹೇಗೋ ಹಾಗೆ ಅಲ್ಲಿಂದ ಒಕ್ಕಲೇಳಿ ಹತ್ತು, ಹದಿನೈದು ಲಕ್ಷ ಕೊಡುತ್ತೇವೆ ಎಂದು ಹೇಳುವುದು ತಪ್ಪೇ…ಅವರೇ ನಿರ್ಧಾರ ಮಾಡಬೇಕು. (ಇವರು ನನ್ನ ಸರಳ ಅಂಡಮಾನ್ ಉದಾಹರಣೆ ಸಹಿತ ಕೊಟ್ಟ ತಾರ್ಕಿಕ ಸವಾಲನ್ನು ಎದುರಿಸಲೇ ಇಲ್ಲ. ಉಳಿದವರು ಉತ್ತಮ ಪರಿಹಾರ ಪಡೆದವರ ಉಲ್ಲೇಖ, ವಿವರಗಳ ಸಹಿತ ಕೊಟ್ಟದ್ದನ್ನೂ ನಗಣ್ಯ ಮಾಡಿ, ಅಸಂಬದ್ಧ ಸಾಮಾಜಿಕ ತರತಮಗಳನ್ನು ತುರುಕಲು ನೋಡಿದರು. ಅದಕ್ಕೆ ನಾನು ನೇರ ಪ್ರತಿಕ್ರಿಯಿಸುವ ಅಗತ್ಯ ಕಾಣದೇ ಹೀಗೊಂದು ಪ್ರತ್ಯೇಕ ಟಿಪ್ಪಣಿಸಿದೆ….)
ಮಲೆಮಕ್ಕಳ ಮೇಲೆ ಅಪಾರ ಪ್ರೀತಿಯಿಂದಲೇ ನಾನು ಪುನರ್ವಸತಿ ಪ್ಯಾಕೇಜ್ನ್ನು ಮಲೆಮಕ್ಕಳಿಗೆ ಮುಟ್ಟಿಸುವ ಸ್ವಯಂಸೇವಕರು ಬೇಕು ಎಂದಿದ್ದೆ. ಆಗ ನನ್ನ ಆತ್ಮಕತೆಯ ತುಣುಕು ಹಾಕಿದರೆ ಆತ್ಮಪ್ರಶಂಸೆಯಂತೆ ಕೇಳೀತೆಂಬ ಎಚ್ಚರದಲ್ಲಿ ಹೇಳದುಳಿದಿದ್ದೆ. ಆದರೆ ಅಲ್ಲಿ ಎದ್ದ ಅಪಸ್ವರ ಮತ್ತು ಗೊಂದಲಗಳ ಪರಿಹಾರಕ್ಕಾಗಿ, ಇಲ್ಲಿ ನನ್ನ ನೆಲೆಯನ್ನು ಸ್ಪಷ್ಟಪಡಿಸುತ್ತಿದ್ದೇನೆ. ನಾನು ಕೇವಲ ಪರ್ವತಾರೋಹಣ ಹವ್ಯಾಸಿಯಾಗಿ ೧೯೭೪ರಲ್ಲಿ ಕುದುFರೆಮುಖ ಶಿಖರ ಏರುವುದರಿಂದ ತೊಡಗಿ, ಈ ವಲಯದ ಬಹುತೇಕ ಕಾಡುಗಳನ್ನು ಸುತ್ತಿ, ಶಿಖರಗಳನ್ನು ಏರಿ, ಶಿಬಿರ ವಾಸ ಮಾಡಿ ಆಪ್ತವಾಗಿ ಅನುಭವಿಸಿದ್ದೇನೆ. ಜತೆಗೇ ಅವುಗಳ ಪ್ರಾಮಾಣಿಕ ಕಥನಗಳನ್ನು (ನನ್ನ ದೊಡ್ಡಸ್ತಿಕೆ ಅಲ್ಲ) ಕಾಲಕಾಲಕ್ಕೆ ಬರೆದು ಲೋಕಮುಖಕ್ಕೆ ತಿಳಿಸುತ್ತಲೂ ದಾಖಲೀಕರಣಗೊಳಿಸುತ್ತಲೂ ಬಂದಿದ್ದೇನೆ. ಅಂತರ್ಜಾಲದಲ್ಲಿ ನನ್ನದೇ ನೆಲೆ ಸ್ಥಾಪಿಸಿದ ಮೇಲೆ (೨೦೦೮- www.athreebook.com ಮತ್ತು ೨೦೧೨ – ಫೇಸ್ ಬುಕ್) ಹಳೆ ಕಥನಗಳನ್ನು ಇಲ್ಲಿಗೂ ತಂದು, ಹೊಸತರೊಡನೆ, ಹೊಸ ಚರ್ಚೆಯೊಡನೆ ಮುಕ್ತ ಆಕರವಾಗಿಯೂ ಮಾಡಿದ್ದೇನೆ. ಸದ್ಯ ಅಂಥ ಎರಡೇ ಸಮೀಕ್ಷಾ ಚಾರಣಗಳನ್ನು ಇಲ್ಲಿ ಓದಬಹುದು:
೧. ಭಗವತಿ, ಕರಡಿಬೆಟ್ಟ (ಕಾಡ ಜಾಡಿನಲ್ಲಿಹೆಕ್ಕಿದ ಪರಿಸರದ ಪ್ರಶ್ನೆಗಳು -೧)
೨. ಪಾಂಡರಮಕ್ಕಿ ಜಾಡಿನಲ್ಲಿ… (ಕಾ.ಜಾ.ಪ.ಪ್ರಶ್ನೆಗಳು -೨)
ಮೊದಲು ನಾನು ಶಿಸ್ತಿನ ಪರ್ವತಾರೋಹಿಯಾಗಿ (ಎಂದೂ ಮೋಜುಗಾರನಾಗಿರಲಿಲ್ಲ) ಪ್ರಾಕೃತಿಕ ಸಂಪತ್ತಿನ ಕುರಿತು ಮೋಹ ಬೆಳೆಸಿಕೊಂಡೆ. ಆಗ ಕೇವಲ ಮಾರ್ಗದರ್ಶಿಗಳ ಮಟ್ಟದಲ್ಲಷ್ಟೇ ವನ್ಯ ಸಮುದಾಯದ ಸಂಪರ್ಕಕ್ಕೂ ಬಂದೆ. ಕುದುರೆಮುಖಕ್ಕೆ ಹೇವಳ ಮೂಲದ ಸೋಜಾ ಮತ್ತು ಸಿಂಹ ಪುರ್ಬುಗಳ ಕುಟುಂಬದವರು, ಕುಮಾರಪರ್ವತಕ್ಕೆ ಮಲೆಕುಡಿಯರ ಕುಂಡ, ಅಮೆದಿಕ್ಕೆಲ್ಲಿಗೆ ಮಲೆಕುಡಿಯರು, ವಾಲಿಕುಂಜಕ್ಕೆ ಸ್ಥಳೀಯ ಉಗ್ರಾಣಿ ಮುಂತಾದವರನ್ನು ಬಳಸಿಕೊಂಡಿದ್ದೇನೆ. ಮುಂದುವರಿದ ದಿನಗಳಲ್ಲಿ ಗಂಗಡಿ ಕಲ್ಲು, ಕುರಿಯಂಗಲ್ಲು, ಪಾಂಡರಮಕ್ಕಿ ಮುಂತಾದೆಡೆಗೆ ಅರಣ್ಯ ಇಲಾಖೆಯ ಅಧಿಕೃತ ‘ಮಾರ್ಗದರ್ಶಿತ್ವ’ವನ್ನೂ ಅನುಭವಿಸಿದ್ದೇನೆ.
ಕುದುರೆಮುಖ ಗಣಿಗಾರಿಕಾ ನಗರ ಹಾಗೂ ಉದ್ಯಮ (೧೯೭೮ರ ಸುಮಾರಿಗೆ ಮಲ್ಲೇಶ್ವರ ಎಂಬ ಕಗ್ಗಾಡ ಮೂಲೆಯಲ್ಲಿ) ನೆಲೆಸುವ ಕಾಲದಲ್ಲಿ, ನನ್ನ ಸೀಮಿತ ಜ್ಞಾನಕ್ಕೆ ನಿಲುಕಿದಂತೆ – ‘ವ್ಯರ್ಥವಾಗುವ ಪ್ರಾಕೃತಿಕ ಸಂಪತ್ತ’ನ್ನು (ಬರಿಯ ಅದಿರು) ‘ಸದುಪಯೋಗ’ಪಡಿಸುವ ತಂತ್ರಜ್ಞಾನದ ಬೆರಗನ್ನು ಮೆಚ್ಚಿಕೊಂಡೆ. ಕಾಲಾಂತರದಲ್ಲಿ ಗಣಿಗಾರಿಕೆಯಿಂದ ನಾಶವಾಗುತ್ತಿದ್ದ ಹಸಿರು, ಛಿದ್ರಗೊಳ್ಳುತ್ತಿದ್ದ ಜೀವಜಾಲ ಇನ್ನೂ ದೊಡ್ಡ ಪ್ರಾಕೃತಿಕ ಸಂಪತ್ತು ಎಂಬ ಅರಿವು ನನಗುಂಟಾಯ್ತು. ಆಗ ಇನ್ನೂ ಎಷ್ಟೋ ನಾಗರಿಕ ಚಟುವಟಿಕೆಗಳು (ಶಿಸ್ತಿಲ್ಲದ ಪರ್ವತಾರೋಹಣವೂ ಸೇರಿ) ಒಟ್ಟಾರೆ ಪಶ್ಚಿಮ ಘಟ್ಟಗಳನ್ನೇ ಮುಕ್ಕುತ್ತಿರುವುದು ಸ್ಪಷ್ಟವಾಯ್ತು. ಆ ಸಮಯಕ್ಕೆ ಕೇರಳದಿಂದ ಗುಜರಾತಿನವರೆಗೆ ಎದ್ದ ‘ಪಶ್ಚಿಮ ಘಟ್ಟ ಉಳಿಸಿ’ ಜಾಥಾಕ್ಕೆ ನನ್ನ ಮಿತಿಯಲ್ಲಿ ಸೇವೆಯನ್ನೂ ಸಲ್ಲಿಸಿ, ಸಣ್ಣದಾಗಿ ಹೆಜ್ಜೆಯನ್ನೂ ಹಾಕಿದ್ದೆ. ವನ್ಯ ವಿಜ್ಞಾನಿ, ಗೆಳೆಯ ಉಲ್ಲಾಸ ಕಾರಂತ ಮತ್ತು ನಾಗರಹೊಳೆ ವನಧಾಮದ ಮುಖ್ಯ ರೂವಾರಿ ಚಿಣ್ಣಪ್ಪನವರ ಮೂಲಕ ನನ್ನಲ್ಲಿ ವನ್ಯದ ಕುರಿತು ಆತ್ಯಂತಿಕ ಜಾಗೃತಿ ಉಂಟಾಯ್ತು. ಅದರ ಮೇಲೆ ಗಣಿಯಲ್ಲದೆ ಕಳ್ಳಬೇಟೆ, ಕಳ್ಳ ನಾಟಾ, ಕೃಷಿಭೂಮಿಯ ಅಕ್ರಮ ವಿಸ್ತರಣೆ, ನದಿಪಾತ್ರೆಗಳಿಗೆ ಮಣ್ಣು ತುಂಬುವುದು, ಪ್ರವಾಸೋದ್ಯಮ ಇತ್ಯಾದಿ ಹಾವಳಿಗಳು ಎದ್ದು ತೋರತೊಡಗಿದವು. ಅದಕ್ಕೆ ಸರಿಯಾಗಿ…
ಕುದುರೆಮುಖ ಗಣಿಗಾರಿಕಾ ಕಂಪೆನಿಯ ಮೂಲ ಕಂತ್ರಾಟಿನ ಅವಧಿ ಮುಗಿದ ಮೇಲೂ ಸಮಯ ಹಾಗೂ ನೆಲ ವಿಸ್ತರಣೆ ಕೇಳುತ್ತಾ ಗಂಗಡಿಕಲ್ಲು ಶ್ರೇಣಿಗೆ ಮುತ್ತಿಗೆ ಹಾಕಿತ್ತು. ಅದರ ಸಾಗಣಾ ಕೊಳವೆ ಒಡೆದು ಅದಿರು ದ್ರವ ಎಲ್ಲಂದರಲ್ಲಿ ಸೋರುವುದೂ ನಡೆದಿತ್ತು. ಹೂಳು ತುಂಬಿದ ಲಖ್ಯಾ ಅಣೆಕಟ್ಟು ಅರೆಬರೆ ಒಡೆದು, ಹೆಚ್ಚಿನ ಅನಾಹುತದೊಡನೆ ವನ್ಯದ ಅವಸಾನ ದಟ್ಟವಾಗಿ ಕಾಣುತ್ತಿತ್ತು. ಇತ್ತ ಪ್ರವಾಸೋದ್ಯಮದ ಅಬ್ಬರ, ಮುಖ್ಯವಾಗಿ ಸಂಸೆ ಬದಿಯಲ್ಲಿ ಅಕ್ರಮ ರಿಸಾರ್ಟ್/ ಹೋಂಸ್ಟೇಗಳು ಮೊಳೆಯುವ ಜತೆಗೆ ವನ್ಯದ ಕುರಿತ ಕನಿಷ್ಠ ಗೌರವವೂ ಇಲ್ಲದ ಚಾರಣಿಗರು ನೂರು ಸಾವಿರಗಳ ಸಂಖ್ಯೆಯಲ್ಲಿ ಕುದುರೆಮುಖ, ಹಿರಿಮರುದುಪ್ಪೆ, ಬಲ್ಲಾಳರಾಯನ ದುರ್ಗ…. ಎಂದು ದಾಂಧಲೆ (ಗದ್ದಲ, ಅವಿನಾಶೀ ಕಸ ಎರಚಾಡುವುದು, ಕಿಚ್ಚಿಕ್ಕುವುದು …) ನಡೆಸತೊಡಗಿದ್ದರು. ಆಗ ಈ ದುಷ್ಪರಿಣಾಮಗಳ ವಿರುದ್ಧವಾಗಿ ನ್ಯಾಯಿಕ ಹೋರಾಟಕ್ಕೆ ತೊಡಗಿಕೊಂಡ ಗೆಳೆಯರ ಬಳಗದೊಡನೆ ನಾನು ಕಿರಿ ಸದಸ್ಯನಾಗಿ ಗುರುತಿಸಿಕೊಂಡೆ. ಅದರ ಮುಖ್ಯ ಆವಶ್ಯಕತೆಯಾಗಿ ರಾಷ್ಟ್ರೀಯ ಉದ್ಯಾನದ ಘೋಷಣೆ ಮತ್ತು ಅನುಷ್ಠಾನ ಆಯ್ತು, ಗಣಿಕಾರಿಕಾ ಸಂಸ್ಥೆ ಉಚ್ಚಾಟನೆಗೊಂಡಿತು.
ತತ್ವತಃ ಕುದುರೆಮುಖ ರಾಷ್ಟ್ರೀಯ ಉದ್ಯಾನ ನಿಸ್ಸಂದೇಹವಾಗಿ ಈ ಘಟ್ಟ ಪ್ರದೇಶದ ನೆಲ ನೀರು ಮತ್ತು ಜೀವಜಾಲದ (ಕಾಡು, ಪ್ರಾಣಿ ಪಕ್ಷಿ ಮತ್ತು ಮಲೆ ಮೂಲದ ಜನಗಳೂ ಸೇರಿ) ದೊಡ್ಡ ರಕ್ಷಾ ಕವಚವೇ ಆಗಿದೆ. ಆದರೆ ಇಂದು ರಾಷ್ಟ್ರೀಯ ಉದ್ಯಾನವನ್ನು ಗಣಿ ಕಂಪೆನಿ ಮತ್ತು ಅಸಂಖ್ಯ ಕಿರು ಉದ್ದಿಮೆದಾರರು (ಪ್ರವಾಸ, ಜಲವಿದ್ಯುತ್, ಕಪ್ಪು ಕಲ್ಲು ಗಣಿಗಳು, ನೀರಾವರಿ…) ವನ್ಯೋತ್ಪನ್ನಗಳ ದಳ್ಳಾಲಿಗಳು (ಹೊಟ್ಟೆಪಾಡಿಗೆ ನಾಲ್ಕೇ ನಾಲ್ಕು ಕಾಸು ಸಂಪಾದಿಸುತ್ತಿದ್ದ ಮಲೆಕುಡಿಯರಲ್ಲ), ನೆಲಗಳ್ಳರು, ಭಕ್ತಿ ಕೇಂದ್ರಗಳು, ದಾರಿ, ಕೊಳವೆ ಸಾಲು, ವಿದ್ಯುತ್ ಸಾಲು…. ಮೊದಲಾದ ಅಭಿವೃದ್ಧಿ ಹೆಸರಿನಲ್ಲಿ ಹಣ ಹೂಡಿ, ಹಣ ತೆಗೆಯುವ ಮಹಾಫಿತೂರಿಗಾರರು ಜನವಿರೋಧಿಯಾಗಿ ಕಾಣುವಂತೆ ಮಾಡಿದ್ದಾರೆ. ವನ್ಯದ ಕುರಿತು ಸ್ಪಷ್ಟ ಸರ್ವೇಕ್ಷಣೆ ಮತ್ತು ಸಂಶೋಧನೆ ನಡೆಸಿ, ವೈಜ್ಞಾನಿಕವಾಗಿಯೂ ಸಾಮಾಜಿಕವಾಗಿಯೂ ಹಿತವಾದದ್ದನ್ನೇ ಹೇಳಿದ ಮಾಧವ ಗಾಡ್ಗೀಳ್ ವರದಿಯ ಹೊದಿಕೆ ಮುಟ್ಟಲೂ ಯೋಗ್ಯತೆ ಇಲ್ಲದ ಜನಪ್ರತಿನಿಧಿಗಳು ಅದನ್ನು ನಗಣ್ಯ ಮಾಡಿದರು. ಕೊನೆಯದಾಗಿ ನಮ್ಮ ಎಲ್ಲಾ ಸರಕಾರೀ ಇಲಾಖೆಗಳಂತೆ ವನ್ಯ ಇಲಾಖೆಯೂ ಮುಸುಕಿನಲ್ಲಿ ನುಂಗಪ್ಪಗಳಿಗೇ ನೆಲ ಹಸನು ಮಾಡುತ್ತಾ ಪ್ರವಾಸೋದ್ಯಮದ ಹುಚ್ಚಿನಲ್ಲಿ ತನ್ನ ಇರವನ್ನೇ ಹಳಿಯುತ್ತಾ ಕಾಲ ಕಳೆಯುತ್ತಿದೆ. ಕೇವಲ ಕುದುರೆಮುಖ ಗಣಿಗಾರಿಕೆ ಕಂಪೆನಿಯ ಕೆಟ್ಟ ಉದಾಹರಣೆಯನ್ನೇ ಸ್ವಲ್ಪ ಬಿಡಿಸಿನೋಡಿ….
ಅಪಕಲ್ಪನೆ ಹಬ್ಬಿಸುವಲ್ಲಿ ಪ್ರಥಮ ಸ್ಥಾನಿ ಕುದುರೆಮುಖ ಗಣಿಗಾರಿಕೆಗೆ ಸುಮಾರು ಮೂರು ದಶಕಗಳ ಕಾಲ ವನ್ಯದ ಹೃದಯ ಭಾಗವನ್ನೇ ಪಳಗಿಸಿ, ಮುಕ್ಕಿದ ಅನುಭವ ಇದೆ. ಅದು ಸಾಲದೆನ್ನುವಂತೆ, ಅಪಾರ ಹೊಸ ನೆಲಗಳಿಗೆ ಹರಡಿಕೊಳ್ಳುವ ಹಂಬಲವನ್ನೂ ಹೊತ್ತಿತ್ತು. ಅದಕ್ಕೆ ನ್ಯಾಯಾಲಯದ ಆದೇಶದ ಮೇಲೂ ಕಟು ನಿರ್ದೇಶನಗಳನ್ನು ಹೇರಿಸುವ ಅನಿವಾರ್ಯತೆ ವನ್ಯಪ್ರೇಮಿಗಳಿಗೆ ಬಂತು. ಅದು ಇಂದು ಅಧಿಕ ವಿದ್ಯುಚ್ಛಕ್ತಿ ಪೂರೈಕೆ ಮತ್ತು ಘನ ಯಂತ್ರಸ್ಥಾವರಗಳನ್ನೆಲ್ಲ ಪೂರ್ಣ ಕಳಚಿ ಬೆತ್ತಲಾಗಿಯೇ ಕುಳಿತಿದೆ. ಅಲ್ಲಿನ ಎಲ್ಲ ನೌಕರವರ್ಗ, ವಸತಿ ಮತ್ತು ನಾಗರಿಕ ಸವಲತ್ತುಗಳನ್ನು ಬರ್ಖಾಸ್ತು ಮಾಡಿದ್ದೂ ಆಗಿದೆ. ಆದರೂ ಬೆಂಗಳೂರು ಮಂಗಳೂರುಗಳಲ್ಲಿ ಭದ್ರ ಕಚೇರಿಗಳನ್ನು ಹೊಂದಿರುವ ಕಂಪೆನಿ, ಮುಳುಗುವವ ಹುಲ್ಲ ಎಳೆ ಹಿಡಿಯುವಂತೆ, ಹುಸಿ ಯೋಜನೆಗಳನ್ನು ಘೋಷಿಸುತ್ತಲೇ ಇರುತ್ತಾರೆ. ತಮ್ಮ ನೌಕರರಿಗೋಸ್ಕರ ಮಾಡಿದ್ದ ನಗರ ವ್ಯವಸ್ಥೆಯಲ್ಲಿ ಪ್ರವಾಸೋದ್ಯಮ, ಲಖ್ಯಾದ ಕೆಸರ ಹೊಂಡದಲ್ಲಿ ಇಟ್ಟಿಗೆ ಉದ್ಯಮವೋ ಮತ್ತೊಂದೋ ನಡೆಸುವುದಾಗಿ ಅಲವತ್ತುಕೊಳ್ಳುತ್ತದೆ. ಇನ್ನೊಂದು ಮುಖದಲ್ಲಿ, ಹೂಳಿನ ಹೊಂಡ ಲಖ್ಯಾ ಅಣೆಕಟ್ಟೆನ್ನು ಭಾರೀ ಜಲಮೂಲ ಎಂದು ಸುಳ್ಳೆಬ್ಬಿಸಿ, “ಮಂಗಳೂರಿಗೆ ಕುಡಿನೀರು ಒದಗಿಸುತ್ತೇನೆ” ಎಂದೂ ಹೇಳುತ್ತದೆ. (ನೋಡಿ: ಲಕ್ಯಾದಲ್ಲಿ ಮೃಗಜಲ ) ಅದಕ್ಕೆ ಪೂರಕ ಎನ್ನುವಂತೆ, ಮೂರು ದಶಕಗಳ ಕಾಲ ಮಂಗಳೂರಿನ ದೂರಕ್ಕೆ ಅದಿರು ದ್ರವ ರವಾನಿಸುವಲ್ಲೇ ಆಯುಷ್ಯ ಮುಗಿಸಿಕೊಂಡ ಕೊಳವೆ ಸಾಲನ್ನು ತೋರುತ್ತದೆ. ಇಂದಿಗೂ ಅದರಂಚಿನ ಉಸ್ತುವಾರಿ ದಾರಿಯನ್ನು ಊರ್ಜಿತದಲ್ಲಿಟ್ಟುಕೊಂಡು ಹೊಂಚುಹಾಕುತ್ತಲೇ ಇದೆ.
ನನ್ನ ಗೆಳೆಯರ ಬಳಗ ರಾಷ್ಟ್ರೀಯ ಉದ್ಯಾನದ ವೈಜ್ಞಾನಿಕ ಅಗತ್ಯವನ್ನು ಸರಕಾರಕ್ಕೆ ಮನಗಾಣಿಸಿ, ಅದು ಜ್ಯಾರಿಯಾಗುವಂತೆ ನೋಡಿಕೊಂಡಿತು. ಮತ್ತೆ ಗಣಿಗಾರಿಕೆಯ ವಿರುದ್ಧ ಪೂರ್ಣ ನ್ಯಾಯಿಕ ಹೋರಾಟಕ್ಕಿಳಿದು, ಗೆದ್ದು, ಅದೂ ಜ್ಯಾರಿಗೆ ಬರುವಂತೆ ಶ್ರಮಿಸಿತು. ಕೊನೆಯದಾಗಿ ಉದ್ಯಾನದ ನಿಯಮಗಳನ್ನು ಮಾನವೀಯ ನೆಲೆಯಲ್ಲೇ ರೂಢಿಸುವಲ್ಲಿ ಬಹು ದೊಡ್ಡ ನಿಸ್ವಾರ್ಥ ಸಾಹಸವನ್ನೂ ಮಾಡಿತು. ಅದು ಪ್ರಚಾರ ಅಥವಾ ಆರ್ಥಿಕ ಆದಾಯಗಳೇನನ್ನೂ ಪಡೆಯದೇ ಮಾಡಿದ ಕೆಲಸಗಳ ವಿವರಗಳನ್ನು ಕೊಡಲು ನಾನು ಅಧಿಕಾರಿಯಲ್ಲವಾದ್ದರಿಂದ ಕೊಡುತ್ತಿಲ್ಲ. ಆ ಬಳಗಕ್ಕೆ ಮಲೆಗಳ ಮೂಲವಾಸಿಗಳ ಕುರಿತು ಸದಾ ಅಪಾರ ಕಾಳಜಿಯೇ ಇತ್ತು. ಅದು ಇಲಾಖೆಗಳನ್ನು ಆ ನಿಟ್ಟಿನಲ್ಲಿ ಸಾಧ್ಯವಾದಷ್ಟೂ ಪ್ರಭಾವಿಸಿ ಕೆಲಸ ಸಾಧಿಸಿದ್ದಕ್ಕೆ ಎಷ್ಟೂ ಸಾಕ್ಷಿಗಳಿವೆ. ಅವನ್ನು ಹಿಂದಿನ ನನ್ನ ಟಿಪ್ಪಣಿಗಳು, ನನ್ನ ಜಾಲತಾಣದ ಹಲವು ಲೇಖನಗಳು, ಪ್ರತಿಕ್ರಿಯೆ ತೋರಿದ ಶ್ರೀನಿವಾಸಮೂರ್ತಿ, ಶೃಂಗೇಶ್, ರವಿ ಜೋಗಿಬೈಲ್ ಕೂಡಾ ಉಲ್ಲೇಖಿಸಿದ್ದಾರೆ, ಓದಿಕೊಳ್ಳಿ.
(ಬಹುತೇಕ ಕಾಡುಗಳನ್ನು ಸುತ್ತಿ, ಶಿಖರಗಳನ್ನು ಏರಿ, ಶಿಬಿರ ವಾಸ ಮಾಡಿ ಆಪ್ತವಾಗಿ ಅನುಭವಿಸಿದ್ದೇನೆ)
ವಾದ ಮಾತ್ರ ಸೂಪರ್. ಕಾಡಲ್ಲಿ ಉಳಿದು ಆಪ್ತವಾಗಿ ಅನುಭವಿಸಲು ನಿಮಗೆ ಖುಷಿ ಕೊಡುತ್ತದೆ ಅಲ್ವೇ…ಆದ್ರೆ ಅಲ್ಲೇ ತಲೆತಲಾಂತರದಿಂದ ವಾಸ ಮಾಡ್ತಾ ಇರುವ ಮಲೆಕುಡಿಯರು ಮಾತ್ರ ಇಂಥ ಆಪ್ತತೆಯ ಬದಲಿಗೆ 10, 15 ಲಕ್ಷಕ್ಕೆ ಇಡೀ ಕುಟುಂಬ ಸಹಿತ ಮಾರಾಟವಾಗಬೇಕೇ.
ನಾನು ಅಂಥ ಮಾತು ಎಲ್ಲೂ ಹೇಳಿಲ್ಲ. ಮೇಲೆ ಹೆಸರಿಸಿರುವ ಹೇವಳ, ಶೀರ್ಲು, ಸಿಂಗ್ಸರ…. ಇಲ್ಲೆಲ್ಲ ಮರುವಸತಿ ಕಂಡಿರುವವರು ಯಾರೂ ನೀವು ಹೇಳಿದಂತೆ ಹತ್ತು ಲಕ್ಷಕ್ಕೆ ಹೋದವರೂ ಅಲ್ಲ. ನಿಮ್ಮ ಹಾಗೂ ನಿಮ್ಮ ಕುಟುಂಬದ ಜತೆ ಆಗಿರುವ ಬಲಾತ್ಕಾರದ ಕಲಾಪಗಳಿಗೆ ನನ್ನ ಬದ್ಧ ವಿರೋಧವಿದೆ, ಅನುಕಂಪೆಯೂ ಇದೆ. ಮತ್ತು ಪಾರುಗಾಣಿಸಿದವರ ಕುರಿತೂ ಸಂತೋಷವೇ ಇದೆ. ನಾನು ಮುಂದುವರಿದ ದಿನಗಳಲ್ಲೂ ಇದು ಪ್ರಾಯೋಗಿಕವೇ ಎನ್ನುವ ಮಾತನ್ನಷ್ಟೇ ಹೇಳುತ್ತಿದ್ದೇನೆ. ಶಾಂತವಾಗಿ ಇನ್ನೊಮ್ಮೆ ಓದಿ ನೋಡಿ.
ನೀವು ಎತ್ತಿರುವ ಪ್ರಶ್ನೆ ಬಹಳ ಗಹನವಾದುದು. ಅಭಿವೃದ್ಧಿ ಮತ್ತು ಬೆಳವಣಿಗೆಗಳ ನಡುವಣ ಸಂಬಂಧ ಸಂಕೀರ್ಣವಾದುದು ಮತ್ತು ಅದಕ್ಕೆ ಇದುವರೆಗೆ ಸರಿಯಾದ ಉತ್ತರ ದೊರಕಿಲ್ಲ. ಜಪಾನ್ ಸುಮಾರು ೪೦% ಕಾಡನ್ನು ಉಳಿಸಿಕೊಂಡೂ ಅಭಿವೃದ್ಧಿ ಸಾಧಿಸಿದೆ. ಆದರೆ ಅಮೇರಿಕಾಕ್ಕೆ ಅದು ಸಾಧ್ಯವಾಗಿಲ್ಲ, ಮುಖ್ಯವಾಗಿ ದಕ್ಷಿಣ ಅಮೇರಿಕಾದ ಅಮೇಜಾನ್ ಕಾಡುಗಳು ನಾಶವಾಗುತ್ತಿವೆ. ಭಾರತದಲ್ಲಿ ಜನಸಂಖ್ಯೆ ಹೆಚ್ಚು. ಪರಿಸರದ ಬಗ್ಗೆ ಕಳಕಳಿ ಯಾರಿಗೂ ಇಲ್ಲ. ಮಲೆಕುಡಿಯರನ್ನು ಕಾಡಿನಿಂದ ಬಿಡಿಸಿದರೆ ಮತ್ತಾರೋ ಕಾಡುಗಳ್ಳರು ಅದನ್ನು ಹೊತ್ತೊಯ್ಯುತ್ತಾರೆ. ನಿಮ್ಮ ಹಾಗೆ ಕಾಡು ಖರೀದಿಸಿ ಕಪ್ಪೆಗೂಡು ಕಟ್ಟಿ ನಿಸ್ವಾರ್ಥವಾಗಿ ಕಾಡುಳಿಸುವವರು ನೀವೊಬ್ಬರೇ. ಸಂಸ್ಕೃತಿಯ ಅರಿವಿಲ್ಲದ ಅಭಿವೃದ್ಧಿಯ ಪರಿಕಲ್ಪನೆಯು ಮೂಲತ: ವಿನಾಶಕಾರಿಯಾದುದು ಎಂದು ನಾನು ಭಾವಿಸುತ್ತೇನೆ. ಇದರ ಬಗ್ಗೆ ಸ್ಪಷ್ಟ ತಿಳಿವಳಿಕೆ ಮೂಡಿದಾಗ ಬಹುಶ: ನಮ್ಮಲ್ಲಿ ಕಾಡುಗಳೇ ಇರುವುದಿಲ್ಲ.