(ಚಿತ್ರ ನಿರ್ಮಾಣದ ಅನಧಿಕೃತ ಕಥನ – ೧)

ಅಭಯಸಿಂಹ (ಮಗ) ಮೂರು ವರ್ಷ ಪ್ರಾಯಕ್ಕೇ ಬಲ್ಲಾಳರಾಯನ ದುರ್ಗ, ಬಂಡಾಜೆ ಅಬ್ಬಿ, ಶಿಬಿರವಾಸ ಅನುಭವಿಸಿದ್ದ. ಆತನ ಕಾಲ ಕಸುವು ಹೆಚ್ಚಿದಂತೆಲ್ಲ ಕುದುರೆಮುಖ, ಕುಮಾರಪರ್ವತ, ಕೊಡಚಾದ್ರಿ, ಜಮಾಲಾಬಾದ್, ಹಿರಿಮರುದುಪ್ಪೆಯಾದಿ ಈ ವಲಯದ ಹಿರಿ ಶಿಖರಗಳು, ಕಾಡು, ಜಲಪಾತಾದಿಗಳ ಪರಿಸರಗಳಲ್ಲಿ ನನ್ನ ಮತ್ತು (ಹೆಂಡತಿ) ದೇವಕಿಯ ಹೆಜ್ಜೆ ಗುರುತು ಮೂಡಿದಲ್ಲೆಲ್ಲ ಪುಟ್ಟಪಾದದ ಗುರುತುಗಳು ಸೇರುತ್ತಲೇ ಇದ್ದವು. ಅವನು ಬಯಸಿದ ‘ವನವಾಸ’ವನ್ನು, ಚಳಿ ಬಿಸಿಲುಗಳಿರಲಿ, ಕುಮಾರಪರ್ವತದ ನೆತ್ತಿಯ ಮಳೆಗಾಲಕ್ಕೂ ನಿರಾಕರಿಸುವುದಾಗಲಿಲ್ಲ. ವಿಸ್ತರಿಸುವುದಿಲ್ಲ, ಒಟ್ಟಾರೆ ಇವನ ಬಾಲ್ಯದ ಬಹು ದೊಡ್ಡ ಪ್ರಭಾವ ಪ್ರಕೃತಿ, ಅದರ ತಾಜಾತನದಲ್ಲಿ. ಇನ್ನವನ ಆದರ್ಶ…

ಅಭಯ ತನ್ನ ಅನುಭವ ಮತ್ತು ಅಭಿವ್ಯಕ್ತಿಗೆ ಇನ್ನೂ ಪುಣೆಯಲ್ಲಿ ಚಲಚಿತ್ರದ ಮಾಧ್ಯಮ ರೂಢಿಸಿಕೊಳ್ಳುತ್ತಿದ್ದಾಗಲೇ (ಎಫ್.ಟಿ.ಐ.ಐ) ಸೂಕ್ತ ಮಂತ್ರೋಪದೇಶ ನೀಡಿದವರು – ಶೇಖರ ದತ್ತಾತ್ರಿ, ಅಸಂಖ್ಯ ಅಂತಾರಾಷ್ಟ್ರೀಯ ಮಟ್ಟದ ಪ್ರಾಕೃತಿಕ ಸಾಕ್ಷ್ಯಚಿತ್ರಗಳ ಪ್ರಶಸ್ತಿವಿಜೇತ. ಆ ದಿನಗಳಲ್ಲಿ ನಮ್ಮ ಮಾತುಗಳಲ್ಲಿ ಹೆಚ್ಚಾಗಿ ಸುಳಿಯುತ್ತಿದ್ದ, ಆಗೀಗ ಪ್ರತ್ಯಕ್ಷ ಒಡನಾಟಕ್ಕೂ ಸಿಗುತ್ತಿದ್ದ, ಉಲ್ಲಾಸ ಕಾರಂತ, ಚಿಣ್ಣಪ್ಪ, ಪೂರ್ಣಚಂದ್ರ ತೇಜಸ್ವಿಯಾದಿಗಳು ಅಭಯನಿಗೆ ಕಥಾನಾಯಕರಾಗಿಯೇ ಕಾಣುತ್ತಿದ್ದರು. ಸಿನಿ-ಮಾದರಿಯಲ್ಲಿ ನ್ಯಾಷನಲ್ ಜಿಯಾಗ್ರಫಿಕ್ ನಿರ್ಮಾಣಗಳಿಗಿಂತ ಸಣ್ಣದು ಆತನ ಕಣ್ಣಿಗೆ ಬೀಳುತ್ತಲೇ ಇರಲಿಲ್ಲ. ಆದರೆ ಆರಂಭಿಕನಾಗಿ ಈ ಆದರ್ಶಗಳಿಗೆ ನೇರ ಧುಮ್ಮಿಕ್ಕಲು ಅವಶ್ಯವಾದ ಹೆಸರು ಅಥವಾ ಹಣ ಅವನಲ್ಲಿರಲಿಲ್ಲ. (ಸಾಮಾನ್ಯ ಪುಸ್ತಕ ವ್ಯಾಪಾರಿಯಾಗಿದ್ದ ನಾನು, ಸಿನಿ-ಪ್ರಪಂಚದ ಅಗಾಧ ಮೊತ್ತಗಳನ್ನು ಕನಸುವುದೂ ಸಾಧ್ಯವಿರಲಿಲ್ಲ!) ಹಾಗಾಗಿ ಗಂಭೀರ ಚಿತ್ರಗಳಲ್ಲಿ ಪದೋನ್ನತಿ ಪಡೆದು (ಗುಬ್ಬಚ್ಚಿಗಳಿಗೆ ರಾಷ್ಟ್ರಪ್ರಶಸ್ತಿ), ಕಥಾಚಿತ್ರಗಳಲ್ಲಿ ಜನಪ್ರಿಯತೆ ಗಳಿಸುತ್ತ (ಮಮ್ಮುಟ್ಟಿ ಮತ್ತು ಗಣೇಶ್ ಚಿತ್ರಗಳ ನಿರ್ದೇಶನಕ), ಪ್ರಾಕೃತಿಕ ಆದರ್ಶಗಳ ಉನ್ನತಿಯತ್ತ ಹೆಜ್ಜೆ ಹಾಕಿದ್ದನ್ನು ತುಸು ವಿಸ್ತರಿಸುತ್ತೇನೆ.

ಪುಣೆಯಿಂದ ಮರಳಿದ್ದೇ ಅಭಯನಿಗೆ ತನ್ನನ್ನು ಪ್ರಭಾವಿಸಿದ ಈ ವಲಯದ ಪ್ರಾಕೃತಿಕ ಹಾಗೂ ಅದಕ್ಕೆ ಬೆಸೆದು ಬಂದ ಸಾಂಸ್ಕೃತಿಕ ಸಂಪತ್ತನ್ನು ಸ್ವಂತ ಬೊಗಸೆಯಲ್ಲಿ ಮೊಗೆದು, ಲೋಕಕ್ಕೂಡುವ ಬಯಕೆ ಗಾಢವಾಗಿತ್ತು. ಸಹಜವಾಗಿ ಅವನ ಮೊದಲ ಸಿನಿಮಾ – ಗುಬ್ಬಚ್ಚಿಗಳು, ಪರಿಸರದ ಒಂದು ದೊಡ್ಡ ಕೊರಗಿಗೆ ಸಣ್ಣ ಧ್ವನಿಯಾಗೇ ಮೂಡಿಬಂತು. ಎರಡನೇ ಚಿತ್ರ – ಶಿಕಾರಿ, (ಜೊತೆಗೆ ಮಲಯಾಳದ ಸ್ವತಂತ್ರ ಆವೃತ್ತಿಯೂ ಬಂದದ್ದರಿಂದ ಮೂರನೇದೂ ಹೌದು) ಹಳ್ಳಿ ಹಿನ್ನೆಲೆಯದ್ದು. ಮಲೆನಾಡ ಹಸಿರು, ನೀರು ಯಥಾನುಶಕ್ತಿ ತುಂಬಿದ. ಅಭಯನಿಗೆ ಒಳ್ಳೆಯ ಸಿನಿಮಾ ಮಾಡಿದ ಕುಶಿಯೊಡನೆ, ಮಲಯಾಳದ ಖ್ಯಾತ ನಟ ಮಮ್ಮುಟ್ಟಿಯನ್ನು ಪ್ರಥಮ ಬಾರಿಗೆ ಕನ್ನಡಕ್ಕೆ ತಂದ ಹೆಮ್ಮೆ ಏನೋ ಬಂತು. ಆದರೆ ಕರಾವಳಿ ವಲಯದ ಸೆಳೆತ ಬಾಕಿಯೇ ಉಳಿದಿತ್ತು. ಸಕ್ಕರೆಅಭಯನ ನಾಲ್ಕನೆಯ ಸಿನಿಮಾ. ವೃತ್ತಿ ರಂಗದ ಅನಿವಾರ್ಯತೆಯಲ್ಲಿ ಅಪ್ಪಟ ನಗರದ್ದೇ ಕತೆ. ಆದರೂ ಈತ ಕಲ್ಪನಾವಲ್ಲರಿಯನ್ನು ಮಡಿಕೇರಿಯ ಹಸಿರಿಗೆ, ಪಶ್ಚಿಮದ ಕಡಲ ಮಡಿಲಿಗೆ ಬಡಕಲು ಆಸರೆ ಕೊಟ್ಟು ಹಬ್ಬಿಸಿದ. ಸಹಜವಾಗಿ ಅತೃಪ್ತಿ ಉಳಿದೇ ಇತ್ತು.

ಈಚಿನ ವರ್ಷಗಳಲ್ಲಿ, ‘ಅಶೋಕವನ’ದ ಕಪ್ಪೆ ಶಿಬಿರಗಳು ಹೆಚ್ಚುತ್ತಿದ್ದಂತೆ, ಅಭಯನಲ್ಲೂ ಮಂಡೂಕ ಪ್ರೇಮ ಅಂಕುರಿಸಿತು. ಅಭಯ ಹೆಗ್ಗೋಡಿನಲ್ಲಿ ನಡೆಸಿದ ಕಿರುಚಿತ್ರ ನಿರ್ಮಾಣ ಶಿಬಿರಕ್ಕೆ, ಸ್ವತಃ ಕೆವಿ ಗುರುರಾಜರೇ (ಕಪ್ಪೆ ವಿಜ್ಞಾನಿ) ವಿದ್ಯಾರ್ಥಿಯಾಗಿ ಬಂದ ಮೇಲೆ, ಅಭಯನಲ್ಲಿ ಹುದುಗಿದ್ದ ಮುಗುಳು ಮರವಾಗಿ ಬೆಳೆಯಿತು; ಅಭಯ ಕಪ್ಪೆ ವಿಜ್ಞಾನಿಯದ್ದೇ ಕತೆ ಹೊಸೆದ. ಅದಕ್ಕೆ ಸೀಮಿತ ಹಣಕಾಸಿನ ನಿರ್ಮಾಪಕರೊಬ್ಬರ ಆಶ್ವಾಸನೆಯೂ ಬಂತು. ನನ್ನ ಚಾರಣಾನುಭವಗಳ ಬೆಳಕಿನಲ್ಲಿ, ಯೋಗ್ಯ ಸ್ಥಳಗಳ ಆಯ್ಕೆಗೆ ಸಣ್ಣದಾಗಿ ಓಡಾಡಿದ್ದೂ ಆಯ್ತು (ನೋಡಿ: ಗೋಧಿ ಬಣ್ಣ, ಸಾಮಾನ್ಯ ಮೈಕಟ್ಟು). ಆದರೆ ಸ್ವಲ್ಪೇ ಸಮಯದಲ್ಲಿ, ಸಿನಿಮಾರಂಗದ ಅನಿಶ್ಚಿತತೆಗೆ ಸರಿಯಾಗಿ ನಿರ್ಮಾಪಕರು ಹಿಂಜರಿದದ್ದರಿಂದ, ಕಪ್ಪೆ ಗೂಡು ಸೇರಿತು. ಮುಂದೆಂದಾದರೂ (ಹಣದ) ಮಳೆಯಾದರೆ, ‘ಕಪ್ಪೆ’ ಹೊರಬಂದು ಬೆಳ್ಳಿತೆರೆಯ ಮೇಲೆ ವಟಗುಟ್ಟಲೂಬಹುದು!

ಹೊಸ ಚಿತ್ರಗಳಿಗೆ, ಪ್ರಯತ್ನಗಳಿಗೆ ಹಣ ಹೂಡುವವರನ್ನು ಹುಡುಕುತ್ತಿದ್ದಾಗ, ದೊರೆತವರು ಕಾರ್ಕಳದ ನಿತ್ಯಾನಂದ ಪೈ. ಇವರು ಕಿರು ಬಜೆಟ್ಟಿನ ಒಳ್ಳೇ ಸಿನಿಮಾದ ಬಯಕೆಯವರು. ಅಭಯ ನಿತ್ಯಾನಂದ ಪೈಗಳ ಆರ್ಥಿಕ ಮಿತಿಗೆ ಹೊಂದುವಂತೆ, ತನ್ನದೇ ಕಥಾಖಜಾನೆಯ ಹೊಸತೊಂದೇ ಅಸ್ತ್ರ ಪ್ರಯೋಗಿಸಿದ – ಕಡಲ್! ಅಭಯ ಹುಟ್ಟೂರಿನ ಪ್ರೀತಿಗೂ ತನ್ನ ಬಾಲ್ಯ ಪರಿಸರವನ್ನು ಪ್ರಭಾವಿಸಿದ ಭಾಷೆ ಮತ್ತು ಸಂಸ್ಕೃತಿಗೂ ಕಥಾಮಿತಿಯಲ್ಲಿ ಪೂರ್ಣ ಸಮ್ಮಾನವಾಗಬೇಕೆಂದು ತುಳುವನ್ನೇ ಪ್ರಥಮದಲ್ಲಿ ಆರಿಸಿಕೊಂಡ.

ವಸ್ತುವಿನ ಗಾಂಭೀರ್ಯಕ್ಕೆ ಈತ ವಿಶ್ವ ಖ್ಯಾತಿಯ ಇಂಗ್ಲಿಷ್ ನಾಟಕಕಾರ ಶೇಕ್ಸ್‍ಪಿಯರಿನ ದುರಂತ ನಾಟಕ ಮ್ಯಾಕ್ಬೆತ್‍ನ್ನು ತನ್ನ ಮೂಸೆಗೆ ಆವಾಹಿಸಿಕೊಂಡಿದ್ದ. ಎಲ್ಲಾ ಮಹಾನ್ ಕೃತಿಗಳೂ ತಮ್ಮ ಕಾಲದ ಮಿತಿಯನ್ನು ಮೀರುತ್ತವೆ, ಅಂದರೆ ಅವು ಸಾರ್ವಕಾಲಿಕ ಸತ್ಯಗಳೇ ಆಗಿರುತ್ತವೆ ಎನ್ನುವುದನ್ನು ಅಭಯನ ಕಥೆ ಸಾರುತ್ತಿತ್ತು. ವಿಶ್ವಚಿತ್ರರಂಗದ ಮುನ್ನೆಲೆಯಲ್ಲಿ ಇದು ಹೊಸದೇನಲ್ಲ. (ಅದಕ್ಕೊಂದು ಸಣ್ಣ ಉದಾಹರಣೆ – ಅಪ್ಪಟ ಕನ್ನಡ ಐತಿಹಾಸಿಕ ನಾಟಕವೇ ಎನ್ನುವ ಭ್ರಮೆ ಮೂಡಿಸುವಂತೆ ಹತ್ತೊಂಬತ್ತನೇ ಶತಮಾನದ ಮೊದಲ ಭಾಗದಲ್ಲಿ ಮೂಡಿ ಬಂದ ‘ಮಾರನಾಯಕ’, ಮೂಲದಲ್ಲಿ ಮ್ಯಾಕ್ಬೆತ್ತೇ!) ಅಭಯನಾದರೋ ಕರಾವಳಿಯ ಸಮುದ್ರ, ಮಳೆಗಾಲಗಳೊಡನೆ ಇಲ್ಲಿನ ಮತ್ತು ಇಂದಿನ ಮೀನುಗಾರ ಸಮುದಾಯವನ್ನೇ ನೆಚ್ಚಿಕೊಂಡ. ನಿತ್ಯಾನಂದ ಪೈಗಳು ಬಹಳ ಸಂತೋಷದಿಂದ ಮತ್ತು ಅಮಿತ ವಿಶ್ವಾಸದಿಂದ ಅಭಯನ ‘ಕಡಲ್’ಗೆ ವೀಳ್ಯ ಕೊಟ್ಟರು. [ಅನಾರೋಗ್ಯಕರ ಸ್ಪರ್ಧೆಗಳು ಮೂಡದಂತೆ ರಾಜ್ಯದಲ್ಲಿ ಸಿನಿಮಾ ಶೀರ್ಷಿಕೆಗಳನ್ನು ಕೇಂದ್ರೀಯವಾಗಿ ನೋಂದಾಯಿಸುವುದು ಕಡ್ಡಾಯ. ಆದರೆ ಅಲ್ಲಿ ಕನ್ನಡದವರ್ಯಾರೋ ‘ಕಡಲು’ ಶೀರ್ಷಿಕೆಯನ್ನು ಮುಂದಾಗಿಯೇ ಕಾಯ್ದಿರಿಸಿದ್ದರಿಂದ, ಅಭಯನ ಬಳಗ ಅದಕ್ಕೆ ಪರ್ಯಾಯವಾಗಿಯೂ ಈ ವಲಯಗಳಲ್ಲಿ ಹೆಚ್ಚು ರೂಢಿಯಲ್ಲಿರುವಂತೆಯೂ ‘ಪಡ್ಡಾಯಿ’ ಎಂಬ ಹೆಸರನ್ನು ಅಂತಿಮಗೊಳಿಸಿಕೊಂಡರು.]

ಸಿನಿಮಾರಂಗದೊಳಗೆ ರಾಷ್ಟ್ರೀಯವಾಗಿಯೂ ಅಂತಾರಾಷ್ಟ್ರೀಯ ಮಟ್ಟದಲ್ಲೂ ಹಲವು ಉದಾತ್ತ ಸಂಸ್ಥೆಗಳು ಯುವ ಚಿತ್ರಕಾರರಿಗೆ ಉತ್ತೇಜನ ಕೊಡುವ ನಿಟ್ಟಿನಲ್ಲಿ ಹಲವು ಕಮ್ಮಟಗಳನ್ನು ನಡೆಸುತ್ತಿರುತ್ತಾರೆ. ಅಭಯ ಅಂತರ್ಜಾಲದ ಬ್ರಹ್ಮಾಂಡದಲ್ಲಿ ಅಂಥಾ ಹಲವು ಯೋಜನೆಗಳ ಜಾಡು ಹಿಡಿದು, ತನ್ನ ಆರ್ಥಿಕ ಮಿತಿಗೆ ಹೊಂದುವಂಥಲ್ಲಿ ಅಭ್ಯರ್ಥಿತನವನ್ನು ತೂರಿದ್ದಿತ್ತು. ಹಾಗೆ ಹಿಂದೊಮ್ಮೆ ಇವನ ಇನ್ನೊಂದೇ ಚಿತ್ರಕಥೆ ಎನ್.ಎಫ್.ಡಿ.ಸಿಯ (ರಾಷ್ಟ್ರೀಯ ಸಿನಿಮಾ ಅಭಿವೃದ್ಧಿ ನಿಗಮ – ಅರವತ್ತೆಪ್ಪತ್ತಕ್ಕೂ ಮಿಕ್ಕು ಅಭ್ಯರ್ಥಿಗಳ ಸ್ಕ್ರಿಪ್ಟ್ ನೋಡಿ ಆರೆಂಟು ಮಂದಿಯನ್ನಷ್ಟೇ ಆಯುತ್ತಾರೆ) ಕಮ್ಮಟವೊಂದಕ್ಕೆ ಆಯ್ಕೆಯಾಗಿತ್ತು. ಸಂಸ್ಥೆ ಇವರು ಕೇವಲ ಆರೆಂಟು ಮಂದಿಯನ್ನು ಪೂರ್ಣ ತನ್ನ ಖರ್ಚಿನಲ್ಲಿ, ಅಂತಾರಾಷ್ಟ್ರೀಯ ಮಟ್ಟದ ಮೂವರು ಸಿನಿ-ಪರಿಣತರ ಮಾರ್ಗದರ್ಶನಕ್ಕೆ ಒಳಪಡಿಸಿದ್ದರು. ಪುಣೆಯ ಈ ಹತ್ತು ದಿನಗಳ ಶಿಬಿರ, ಅಭ್ಯರ್ಥಿಗಳದೇ ಚಿತ್ರ ಕತೆಗಳನ್ನಿಟ್ತುಕೊಂಡು ಅವಿರತ ಸಂವಾದ, ತಿದ್ದುಪಡಿ, ಮರುಲೇಖನ ಎಂದು ತೊಡಗಿಸಿ ಉತ್ತಮ ಫಲಿತಾಂಶವನ್ನೇ ಕಾಣಿಸಿತ್ತು. ಹೀಗೆಯೇ… ಬೇರೊಂದು ಸಂಸ್ಥೆಯ ಕಥಾವಿಮರ್ಶೆ ಕಮ್ಮಟ, ನೇಪಾಳದಲ್ಲಿ ಇವನ ‘ಪಡ್ಡಾಯಿ’ಗೆ (ಇಂಗ್ಲಿಷ್ ಅನುವಾದ) ಒದಗಿತ್ತು. ನೇಪಾಳಕ್ಕೆ ಹೋಗಿಬರುವ ಖರ್ಚು ಮಾತ್ರ ಇವನದ್ದು. ಅಲ್ಲಿ ಇವನೂ ಸೇರಿದಂತೆ ಆರೇ ಅಭ್ಯರ್ಥಿಗಳ (ಭಾರತ, ಶ್ರೀಲಂಕಾ ಮತ್ತು ಬಾಂಗ್ಲಾದೇಶ) ಚಿತ್ರಕತೆಗಳನ್ನು, ಮೂವರು ವಿದೇಶೀ ಪರಿಣತರು ದಿನದ ಹನ್ನೆರಡು ಗಂಟೆಯಂತೆ ಹದಿನೈದು ದಿನಗಳ ಕಾಲ ‘ಶಸ್ತ್ರ ಚಿಕಿತ್ಸೆ’ಗೊಳಪಡಿಸಿದರು; ಕಿರುಕಸ ಕಳೆದು, ಸೂಕ್ಷ್ಮಗಳ ಮೌಲ್ಯವರ್ಧನೆಯಾಯ್ತು. ಮ್ಯಾಕ್ಬೆತ್‍ ಯಾವುದೋ ದೇಶದ, ಐತಿಹಾಸಿಕ ಕಾಲದ, ರಾಜಸತ್ತೆಯ ಘಟನೆಯಷ್ಟೇ ಆಗಿ ಉಳಿಯಲಿಲ್ಲ. ಅದು ಪ್ರತಿಪಾದಿಸಿದ ಮೌಲ್ಯಗಳನ್ನು ಸಾಮಾನ್ಯೀಕರಿಸಿ, ಇಲ್ಲಿನ, ಇಂದಿನ, ಪ್ರಜಾಸತ್ತೆಯ ಹಂದರದ ಮೇಲೆ ಸುಂದರವಾಗಿ ಹೊದಿಸಿದರು. ಪ್ರಜಾಪ್ರಭುತ್ವದೊಳಗಿನ ಸಾಮ್ರಾಜ್ಯಶಾಹೀ ಧೋರಣೆ ಸಣ್ಣದೇ? ಯಜಮಾನ ನೌಕರ ತರತಮ ಅಳಿಯುವುದುಂಟೇ? ಔದಾರ್ಯವರ್ಷ ಮೇರೆಮೀರಿದರೂ ದುರಾಸೆಯ ಪಾತ್ರೆ ತುಂಬುವುದಿದೆಯೇ? ಇಲ್ಲ, ಇಲ್ಲ, ಮನೋಕಾಮನೆಗಳು ಬಲವತ್ತರದವಾದರೆ ಹುಸಿಸೂಚನೆಗಳೂ ಭರವಸೆಯ ದೀವಟಿಗೆಗಳಾಗಿಯೇ ಕಾಣುತ್ತವೆ. ಹುಲ್ಲೂ ಕಳೆದೊಗೆಯಲೇಬೇಕಾದ ಹುಲಿಯಾಗುತ್ತದೆ. ಹದಿನೈದು ದಿನಗಳ ಕೊನೆಯಲ್ಲಿ ನೇಪಾಳದ ಕಮ್ಮಟ, ಈ ಸಾರ್ವಕಾಲಿಕ ಸತ್ಯಗಳನ್ನು ಪ್ರಾದೇಶಿಕ ಮಣ್ಣವಾಸನೆಯೊಡನೆ (ಭಾಷೆ, ವೇಷ, ವ್ಯಕ್ತಿ, ಅಭಿನಯ ಇತ್ಯಾದಿ) ಹಿತಮಿತವಾಗಿ ಬೆಸೆದು, ಚಿತ್ರ ಮಾಡುವ ಕೆಲಸಕ್ಕೆ ಅಭಯನನ್ನು ಹುರಿಗೊಳಿಸಿಬಿಟ್ಟಿತು.

ಅಭಯ ಇನ್ನೂ ಸ್ನಾತಕ ಕಾಲೇಜು ವಿದ್ಯಾರ್ಥಿಯಾಗಿದ್ದ ಕಾಲದಲ್ಲಿ (೧೯೯೮) ಆಯ್ದ ಕಾಲೇಜು ವಿದ್ಯಾರ್ಥಿಗಳಿಗೆ ನಾನೊಂದು ವ್ಯಕ್ತಿವಿಕಸನ ಹಾಗೂ ಪ್ರಕೃತಿ ಶಿಬಿರವನ್ನು (ಪೂರ್ಣ ಉಚಿತ) ಸಂಯೋಜಿಸಿದ್ದೆ. ಅದಕ್ಕೆಂದೇ ನಮ್ಮ ಅಭಯಾರಣ್ಯದ ದೂರಕ್ಕೆ ತಮ್ಮದೇ ಖರ್ಚು, ವ್ಯವಸ್ಥೆಗಳಲ್ಲಿ ಇಪ್ಪತ್ತಕ್ಕೂ ಮಿಕ್ಕು ಸಂಪನ್ಮೂಲ ವ್ಯಕ್ತಿಗಳು ಬಂದು, ಶಿಬಿರಕ್ಕೆ ತಮ್ಮ ಪ್ರತಿಭಾ ದೇಣಿಗೆಯನ್ನು ಕೊಟ್ಟು ಹೋಗಿದ್ದರು. (ನೋಡಿ: ಏಳಿ ಎದ್ದೇಳಿ – ವ್ಯಕ್ತಿತ್ವ ವಿಕಸನ ಶಿಬಿರ) ಅದರಲ್ಲಿ ನಾಟಕದ ನಟನಾ ಪಾಠಗಳನ್ನು ಉಚಿತವಾಗಿಯೇ ನಡೆಸಿಕೊಟ್ಟವರು ಚಂದ್ರಹಾಸ್ ಉಳ್ಳಾಲ. ಈ ಚಂದ್ರಹಾಸ್ ಅಂದಿನಿಂದ ಇಂದಿಗೆ ಹಿರಿಯ ನಟಮಿತ್ರನಾಗಿಯೇ ಬೆಳೆದು ನಿಂತಿದ್ದಾರೆ. ಇವರು ನಾಟಕ ರಂಗದ ಬೇರುಗಳನ್ನು ಗಟ್ಟಿಯಾಗಿರಿಸಿಕೊಳ್ಳುತ್ತ, ಟೀವೀ ಸರಣಿಗಳನ್ನು ಹಾಯ್ದು, ಗಿರೀಶ್ ಕಾಸರವಳ್ಳಿಯಂಥ ಖ್ಯಾತ ನಾಮರೊಡನೆ ಸಿನಿಮಾರಂಗಕ್ಕೂ (ಹಸೀನಾ) ವ್ಯಾಪಿಸಿದ್ದಾರೆ. ಅಷ್ಟೇ ಸಹಜವಾಗಿ ತಮ್ಮ ನಿರಸೂಯಾ ಮತ್ತು ನಿರಪೇಕ್ಷಾ ಗುಣಪಕ್ಷಪಾತತನವನ್ನು ಒಡನಾಟಕ್ಕೆ ಬಂದ ಎಲ್ಲ ಕಲಾವಿದರ ಮೇಲೂ ತೋರುತ್ತಲೇ ಇದ್ದಾರೆ. ಇವರು ಅಭಯ ಸಿನಿಮಾರಂಗದಲ್ಲಿ ವಿಕಸಿಸಿದ ಪರಿಯನ್ನು ಕಾಲಕಾಲಕ್ಕೆ ಪ್ರೀತಿಯಿಂದಲೇ ಗಮನಿಸುತ್ತಿದ್ದರು. ಹಾಗಾಗಿ ಅಭಯ ಶಿಕಾರಿ, ಸಕ್ಕರೆ ಸಿನಿಮಾಗಳನ್ನು ಎತ್ತಿಕೊಂಡ ಕಾಲಕ್ಕೆ ಚಂದ್ರಹಾಸ್ ಬೇಷರತ್ ಅವುಗಳ ಭಾಗವಾಗಿ ಒಲಿದರು. ಪಡ್ಡಾಯಿಗಂತು ತಾನು ಮಾತ್ರವಲ್ಲ, ತನ್ನ ಅನೇಕ ಆತ್ಮೀಯ ಗೆಳೆಯರನ್ನೂ (ಮುಖ್ಯವಾಗಿ ಗೋಪಿನಾಥ್ ಭಟ್, ವಾಣೀ ಪೆರಿಯೋಡಿ, ಪ್ರಭಾಕರ ಕಾಪಿಕಾಡ್) ಒಲಿಸಿ ತಂದರು. ಇವರೆಲ್ಲ ಸಹಜವಾಗಿ ತುಳುವರೇ ಅಥವಾ ತುಳು ವಲಯದವರೇ ಎನ್ನುವುದು ಪಡ್ಡಾಯಿಯ ಶಕ್ತಿಯೇ ಸರಿ.

ಪಡ್ಡಾಯಿಗೆ ನಟನೆ ಮತ್ತು ಭಾಷಾ ಸಾಮರ್ಥ್ಯಕ್ಕೆ ಹಿರಿಯ ಕಲಾವಿದರ ಪಡೆ ಒದಗಿದಷ್ಟೇ ಸಹಜವಾಗಿ ಯುವಪಡೆಯೂ ಸಿಕ್ಕಿದ್ದು ಅಭಯನ ಅದೃಷ್ಟವೇ ಸರಿ. ಈಚಿನ ಎರಡು ಮೂರು ವರ್ಷಗಳ ನೀನಾಸಂ ತಿರುಗಾಟಗಳ ಮುಖ್ಯ ಭೂಮಿಕೆಗಳಲ್ಲಿ ಕೆಲವು ತುಳುವರೇ ಮೆರೆದಿದ್ದರು. ಅಭಯನ ಸಂಚಿ-ನೀನಾಸಂ ದಾಖಲೀಕರಣದ ನೆಪದಲ್ಲಿ ಆ ಯುವ ಕಲಾವಿದರೊಡನೆ ಅಭಯನಿಗೆ ಆತ್ಮೀಯತೆ ಬೆಳೆದಿದ್ದದ್ದು ಪಡ್ಡಾಯಿಗೆ ವರವಾಗಿ ಒದಗಿತು. ಅವಿನಾಶ್ ರೈ, ಮೋಹನ್ ಶೇಣಿ, ಬಿಂದು ರಕ್ಷಿದಿ, ಶ್ರೀನಿಧಿ, ಸದಾಶಿವ ಮುಂತಾದವರ ಸರ್ವಾಂಗೀಣ ರಂಗ ತರಬೇತಿ ಮತ್ತು ನೇರ ರಸಿಕರನ್ನೆದುರಿಸಿ ಗಳಿಸಿದ ಅನುಭವ ಬಹುತೇಕ ಸಿನಿ-ಕಲಾವಿದರಿಗೆ ಇರುವುದೇ ಇಲ್ಲ. ಇದರಿಂದಲೇ ಪಡ್ಡಾಯಿಯಲ್ಲಿ ಜನಪ್ರಿಯ ಸಿನಿಮಾದ ಸೋಂಕಿರದ ಗಂಭೀರ ಮತ್ತು ಯಶಸ್ವೀ ಸಾಧನೆ ಸಾಧ್ಯವಾಯಿತು. ಅಷ್ಟೇ ಅಲ್ಲ, ಇಡಿಯ ತಂಡದ ಕಲಾಪಗಳಲ್ಲಿ ಸಹಜವಾಗಿ ತೊಡಗಿಕೊಳ್ಳುವ ಅವರ ನಾಟಕರಂಗದ ಶಿಸ್ತು ಈ ಕಿರು ಬಜೆಟ್ಟಿನ ಸಿನಿಮಾಕ್ಕೆ ಬಹು ದೊಡ್ಡ ವರವಾಗಿಯೂ ಒದಗಿತು. ಹೊತ್ತು ಗೊತ್ತುಗಳ ಪರಿವೆಯಿಲ್ಲದೆ, ನಟನೆ ಚಾಕರಿಗಳ ಬೇಧ ಮಾಡದೆ, ಬಹುತೇಕ ಉಡುಪು ತೊಡಪುಗಳಲ್ಲಿ ಸ್ವಂತದ್ದನ್ನೇ ಬಳಸುತ್ತ ಸಿನಿಮಾ ಒಂದು ಸಮೂಹ ಕಲೆ ಎನ್ನುವುದನ್ನು ಅಕ್ಷರಶಃ ಪ್ರಮಾಣಿಸಿ ತೋರಿಸಿದರು.

ಅಭಯನ ಕಳೆದ ನಾಲ್ಕೂ ಸಿನಿಮಾಗಳ ಕ್ಯಾಮರಾಮ್ಯಾನ್ – ಪುಣೆಯ ಸಹಪಾಠೀ ಮತ್ತು ಸಹವಾಸಿಯಾಗಿಯೂ ಇದ್ದ ವಿಕ್ರಂ ಶ್ರೀವಾಸ್ತವ್. ಉಳಿದಂತೆ ವಿಕ್ರಂನ ವೃತ್ತಿ, ವಾಸಗಳು ಮುಂಬೈ, ಚೆನ್ನೈಗಳ ದೂರದಲ್ಲಿದ್ದವು. ಹಾಗಾಗಿ ನಡುವಣ ಇತರ ಕಿರು ಚಿತ್ರ ಯೋಜನೆಗಳಲ್ಲಿ ಅಭಯನಿಗೆ ಹಲವು ಸ್ಥಳೀಯ ಕ್ಯಾಮರಾಮ್ಯಾನ್‍ಗಳು ಬಳಕೆಗೆ ಸಿಕ್ಕಿದ್ದರು. ಅವರಲ್ಲಿ ಆತ್ಮೀಯ ಪರಿಚಯದೊಡನೆ, ರುಚಿ ಮೈತ್ರಿಯಲ್ಲೂ ಅಭಯನಿಗೆ ಹೆಚ್ಚು ಒಗ್ಗಿದವರು, ದ.ಕ ಮೂಲದ ವಿಷ್ಣು. ಈತ ಸಕ್ಕರೆ ಸಿನಿಮಾಕ್ಕಾಗುವಾಗ ಏಕೈಕ ಸಹ-ಕ್ಯಾಮರಾಮ್ಯಾನಾಗಿಯೂ ಬೆಳೆದು ನಿಂತಿದ್ದರು. ಸದ್ಯ ವಿಕ್ರಂ ಸಿನಿಮಾರಂಗದಿಂದಲೇ ದೂರ ಸರಿದಿರುವ ಕಾರಣ, ಅಭಯ ಸಹಜವಾಗಿ ಮುಖ್ಯ ಕ್ಯಾಮರಾ ಕೆಲಸಕ್ಕೆ ವಿಷ್ಣುವನ್ನೇ ಆಯ್ದುಕೊಂಡ. ಹೀಗೇ ಇನ್ನಿತರ ತಾಂತ್ರಿಕ ರಂಗಗಳಲ್ಲೂ ನನ್ನರಿವಿಗೆ ಹೆಚ್ಚು ಬಾರದಿದ್ದರೂ ಅಭಯ ಗಳಿಸಿದ ವೃತ್ತಿಪರ ಪರಿಣತರ (ಜೆಮಿ ಡಸಿಲ್ವಾ, ಪ್ರಶಾಂತ್ ಪಂಡಿತ್, ಮಣಿಕಾಂತ್ ಕದ್ರಿ, ಶಿಶಿರ ಕೆವಿ ಮುಂತಾದವರು) ದಂಡಿಗೂ ವಿಶ್ವಾಸವೇ ಪ್ರಧಾನ ಬಂಡವಾಳ! ಚಲನಚಿತ್ರವನ್ನು ಮಹಾನೌಕೆಗೆ ಹೋಲಿಸುವ ಮಾತಿದೆ. ‘ಪಡ್ಡಾಯಿ’ಯನ್ನು ಕಿರು ಆರ್ಥಿಕ ಕೊಳದೊಳಗೆ ಎಲ್ಲೂ ನೆಲಕಚ್ಚಿಸದೇ ದಂಡೆ ಕಾಣಿಸುವಲ್ಲಿ ಅಭಯನಿಗೆ ಇವರೆಲ್ಲರ ಸಹಕಾರ ಒದಗಿದ್ದು ನಿಜಕ್ಕೂ ಅನುಪಮ.

ಚಿತ್ರ ಸಾಹಿತ್ಯ ರಚನೆ ಎನ್ನುವುದು ತುಂಬ ಸಂಕೀರ್ಣ ಬಂಧ. ಇದು ಮೊದಲು ಅಭಯನ ಸಹಜ ಓಟದಲ್ಲಿ ಕನ್ನಡದಲ್ಲೇ ರೂಪು ಪಡೆದದ್ದಿರಬೇಕು. ಕಮ್ಮಟಕ್ಕಾಗುವಾಗ ಅಷ್ಟೇ ಸಹಜವಾಗಿ ಇಂಗ್ಲಿಷ್ ಅನುವಾದಿಸಲೂ ಅಭಯ ಸಮರ್ಥನಿದ್ದ. ಆದರೆ ನಿಜ ಕೆಲಸಕ್ಕೆ ಬೇಕಾದ ತುಳು, ಅದರಲ್ಲೂ ಮೊಗವೀರರ ಶೈಲಿಯ ಆಡುನುಡಿ, ಸಣ್ಣ ಕೆಲಸವಲ್ಲ. ಅದು ಬರಿಯ ಶಬ್ದಾರ್ಥಗಳ ವ್ಯಾಕರಣಬದ್ಧ ಜೋಡಣೆಯಾದರೆ ಸಾಲದು. ಮೀನುಗಾರರ ಜನಪದ, ವೃತ್ತಿರಂಗದ ಅನಿವಾರ್ಯತೆ ಮೂಡಿಸಿದ ಬೊಬ್ಬೆ, ಗುನುಗು, ಮೌನಗಳ ಸಂಕಲನವೂ ಆಗಬೇಕು. ಅದನ್ನು ಮಾಡುವುದು ಕನ್ನಡ ಮನೆಮಾತಿನ, ಸಸ್ಯಾಹಾರಿ ಸಂಸ್ಕಾರಗಳ ಹಿನ್ನೆಲೆಯ ಅಭಯನಿಂದ ಬಿಡಿ, ಕೇವಲ ಮನೆಮಾತಾಗಿಯೇ ವಿವಿಧ ಶೈಲಿಗಳಲ್ಲಿ ಬಳಸುವ ತುಳುವರಿಗೂ ಕಷ್ಟಸಾಧ್ಯ. ಆಗ ಕುಂಬಳೆ ಸದಾಶಿವ ಮೇಸ್ಟ್ರು ಸೂಚಿಸಿದ ವ್ಯಕ್ತಿ – ವಿ.ಕೆ. ಯಾದವ. ಇವರು ಮೊಗವೀರರ ಹಿನ್ನೆಲೆಯಿಂದಲೇ ಬಂದು, ಸದ್ಯ ಉಡುಪಿಯ ಸರಕಾರೀ ಪದವಿಪೂರ್ವ ಕಾಲೇಜಿನ ಇಂಗ್ಲಿಷ್ ಅಧ್ಯಾಪಕ. ಜತೆಗೇ ತುಳುವನ್ನು ಸಾಹಿತ್ಯಕ ಭಾಷೆಯಾಗಿಯೂ ಸಾಕಷ್ಟು ಕೃಷಿ ಮಾಡಿದ ಅನುಭವಿ. ಸಿನಿಮಾರಂಗದ ಅನಿವಾರ್ಯ ತುರ್ತು, ಒತ್ತಡಗಳಿಗೆ ಕುಂದದೆ, ಚೆನ್ನಾಗಿಯೇ ಅನುವಾದ ಮಾಡಿಕೊಟ್ಟರು.

ಚಿತ್ರೀಕರಣಕ್ಕೂ ಮೊದಲೇ ಮುಖ್ಯ ನಟವರ್ಗ ವೃತ್ತಿಪರರ ದೇಹಭಾಷೆ, ಮಾತಿನಶೈಲಿಯ ಅನುಭವ ಗಳಿಕೆಗಾಗಿ, ಕನಿಷ್ಠ ವಾರಕಾಲ ನೇರ ಮೀನುಗಾರರ ಕೆಲಸಕ್ಕೆ ಯಥಾನುಶಕ್ತಿ ಜತೆಗೊಟ್ಟಿದ್ದರು. ಆಗ ಹೊರಗಿನವರು ಮಾತಿನ ಹಂದರದಲ್ಲಿ ಕಟ್ಟಿಕೊಡುವ ಎಷ್ಟೋ ಸಂಗತಿಗಳು, ಅಲ್ಲಿ ಅಂತಃಪ್ರಜ್ಞೆಯಲ್ಲೇ ನಡೆದು ಹೋಗುವುದನ್ನು ಸಾಕಷ್ಟು ಗ್ರಹಿಸಿದ್ದರು. ಈ ಹೊಳಹನ್ನು ತಮ್ಮ ನಾಟಕರಂಗದ ಸಮಯಸ್ಫೂರ್ತಿಯೊಡನೆ ಮೇಳೈಸಿ ಯಾದವರ ಅನುವಾದವನ್ನು ಬಳಸಿದಾಗ ಸಿದ್ಧಿಸಿದ ಪರಿಣಾಮ ಹೊಸತೇ! ಈ ನಿಟ್ಟಿನಲ್ಲಿ ಚಿತ್ರೀಕರಣದ ಆರಂಭದಿಂದ ಮುಕ್ತಾಯದ ಒಳಗೆ ಮತ್ತೆ ಮತ್ತೆ ಲಿಖಿತ ಸಾಹಿತ್ಯ ತಿದ್ದಿಸಿಕೊಂಡದ್ದೂ ಇತ್ತು, ಮರೆಗೆ ಸರಿದದ್ದೂ ಇತ್ತು. ಸಿನಿಮಾ ಅಂದರೆ ಬರಿಯ ನೋಟವಲ್ಲ, ಕೇಳ್ಮೆಯಲ್ಲ, ಕಲ್ಪನೆಯಲ್ಲ… ಎಲ್ಲ ಒಳಗೊಂಡೂ ಅವನ್ನು ಮೀರಿದ ಒಂದು ಅನುಭವ ಎನ್ನುವ ಮಾತಿಗೆ ‘ಪಡ್ಡಾಯಿ’ ನಿಸ್ಸಂದೇಹವಾಗಿ ಶ್ರಮಿಸಿದೆ.

ಅಭಯನ ಕಥಾನುಕೂಲಕ್ಕೆ ಒದಗುವ ಮನೆ ಮತ್ತು ಪರಿಸರದ ಹುಡುಕಾಟಕ್ಕಾಗುವಾಗ, ನಾನು ಸೈಕಲ್ ಸರ್ಕೀಟ್ ಅನುಭವದಿಂದ ಸಣ್ಣಪುಟ್ಟ ಸಲಹೆ ಕೊಟ್ಟದ್ದೂ ತಿರುಗಾಟಗಳನ್ನು ಮಾಡಿಸಿದ್ದೂ ಉಂಟು. ಆದರೆ ಈ ವಿಚಾರದಲ್ಲಿ ಅಭಯನಿಗೊದಗಿದ ನಿರ್ಮಾಣ ಸಹಾಯಕರ (ರಕ್ಷಿತ್ ಕಾರಂತ ಮುಂತಾದವರು) ಪೂರ್ವಾನುಭವ ಹೆಚ್ಚು ಪ್ರಾಯೋಗಿಕವೂ ಉಪಯುಕ್ತವೂ ಆಯ್ತು. ಸಹಾಯಕರು ಸ್ವತಃ ಮೊದಲು ನೋಡದೇ ಇದ್ದ ಮನೆ, ವಠಾರಗಳನ್ನೂ ತಮ್ಮ ಜನ ಸಂಪರ್ಕ ಮತ್ತು ಸಿನಿಮಾ ಅನುಭವಗಳ ಬಲದಲ್ಲಿ ಒದಗಿಸಿದರು.

ಚಿತ್ರೀಕರಣ ಕೇರಳ ಗಡಿಯಿಂದ ಉಡುಪಿಯ ತಡಿಯವರೆಗೆ ನಡೆದರೂ ಬಹ್ವಂಶಕ್ಕೆ ಒದಗಿದ್ದು ಮಲ್ಪೆಯೇ. ಅಲ್ಲಿನ ಕಿದಿಯೂರು ಪಡುಕರೆಯ ಮೊಗವೀರ ಸಮುದಾಯದ ಪ್ರೀತಿ ವಿಶ್ವಾಸಗಳು, ಮಲ್ಪೆಯ ಒಟ್ಟಾರೆ ಮೀನುಗಾರಿಕಾ ಸಮುದಾಯದ ಸಹಕಾರ ಅಭಯನಿಗೆ ಸದಾ ಮಧುರ ಸ್ಮರಣೀಯ. ಇದಕ್ಕೆ ಪೂರಕವಾಗಿ ಒಂದು ಸನ್ನಿವೇಶವನ್ನಷ್ಟೇ ತುಸು ವಿಸ್ತರಿಸಿ ಈ ಕಂತನ್ನು ಮುಗಿಸುತ್ತೇನೆ.

ಕಡಲಪೂಜೆಯೇ ‘ಮುಹೂರ್ತ’!

ಸಿನಿಮಾರಂಗದ ತರಹೇವಾರಿ ಕ್ಯಾಮರಾಗಳು ದಿನ ಬಾಡಿಗೆಯ ಲೆಕ್ಕದಲ್ಲಿ ನಡೆಯುತ್ತವೆ. ತುಳು ಚಿತ್ರರಂಗ ವ್ಯಾಪಕವಾದ ಈ ದಿನಗಳಲ್ಲಿ ಸಿನಿ-ಕ್ಯಾಮರಾ ವಹಿವಾಟು ಇಲ್ಲೇ ಸುತ್ತಮುತ್ತ ಸಣ್ಣದಾಗಿ ಸಜ್ಜುಗೊಳ್ಳುತ್ತಿದೆ. ಆದರೆ ಅಭಯನ ಆಯ್ಕೆಗಳಿಗೆ ಇದು ಬೆಂಗಳೂರಿನಷ್ಟು ದೃಢವಾಗಿಯೂ ಸ್ಪರ್ಧಾತ್ಮಕವಾಗಿಯೂ ಕಾಣಿಸಲಿಲ್ಲ. ಅವನು ಬೆಂಗಳೂರಿನ ಕ್ಯಾಮರಾ ಬಾಡಿಗೆದಾರರನ್ನು ಗೊತ್ತುಪಡಿಸಿದನಾದರೂ ದಿನ ಹೇಳಲಿಲ್ಲ. ಮುಖ್ಯ ಕಾರಣ ಇಲ್ಲಿನ ಮಳೆಯ ಬಿರುಸು, ಕಡಲಿನ ಅಬ್ಬರ ತಗ್ಗಿರಲಿಲ್ಲ. ಬದಲಿಗೆ ಬೆಂಗಳೂರಿನಿಂದ ಬಂದ ಮೊದಲ ವಾರ-ಹತ್ತು ದಿನಗಳ ಕಾಲ – ಸಹಾಯಕರು, ಸ್ಥಳ, ದೃಶ್ಯ, ಸಾಮಗ್ರಿ, ತುಳು ಅನುವಾದ, ಕಲಾವಿದರಿಗೆ ತರಬೇತಿ ಮುಂತಾದವುಗಳತ್ತ ಗಮನ ಹರಿಸಿದ್ದ.

ಮೀನುಗಾರರಾದರೂ ಮಳೆಗಾಲದಲ್ಲಿ ದೋಣಿಗಳನ್ನು ದಡ ಹತ್ತಿಸಿ, ಕಡ್ಡಾಯ ‘ರಜೆ’ ಅನುಭವಿಸುತ್ತಾರೆ. ಮಳೆಗಾಲದ ಕೊನೆ ಬರುತ್ತಿದ್ದಂತೆ ಇವರು ದೋಣಿ, ಇಂಜಿನ್ನು, ಬಲೆ ಸಜ್ಜುಗೊಳಿಸುತ್ತ, ಸಾಂಪ್ರದಾಯಿಕ ‘ಮುಹೂರ್ತ’ಗಳ ಲೆಕ್ಕ ಹಾಕಿ, ಹೊಸ ಮೀನುಗಾರಿಕಾ ಋತುವನ್ನು ಕಡಲಪೂಜೆಯಿಂದಲೇ ಸ್ವಾಗತಿಸುತ್ತಾರೆ. ಹಾಗೆ ಕಿದಿಯೂರು ಪಡುಕರೆಯ ದೇವಿ ಭಜನಾ ಮಂದಿರದಲ್ಲಿ ಆಗಸ್ಟ್ ಏಳರಂದು ‘ಕಡಲ ಪೂಜೆ’ಯ ಸುದ್ದಿ ಸಿಕ್ಕಿದ್ದೇ ಅಭಯ ಚುರುಕಾದ. ಅವನ ಲಿಖಿತ ಸಿನಿ-ಯೋಜನೆಯಲ್ಲಿ (ಸ್ಕ್ರಿಪ್ಟ್) ಕಡಲ ಪೂಜೆಗೆ ವಿಶೇಷ ಸ್ಥಾನವೇನೂ ಇರಲಿಲ್ಲ. ಆದರೆ ಮೀನುಗಾರ ಸಮುದಾಯದ ಒಂದು ಸಾಂಸ್ಕೃತಿಕ ಸಂಭ್ರಮದ ದಾಖಲೆ ಇದ್ದರೆ, ಸಿನಿಮಾದಲ್ಲಿ ಎಲ್ಲಾದರೂ ಉಪಯೋಗಕ್ಕೆ ಬಂದೀತೆಂಬ ದೂರದೃಷ್ಟಿ. ಮತ್ತೆ ತನ್ನ ತಂಡಕ್ಕೊಂದು ಪ್ರಾಯೋಗಿಕ ಅನುಭವಕ್ಕೂ ಈ ಪೂಜೆ ಯೋಗ್ಯ ಸನ್ನಿವೇಶ ಎಂದೇ ಅಭಯ ಅಂದಾಜಿಸಿರಬೇಕು. ನಟವರ್ಗವನ್ನೆಲ್ಲ ಕಡಲಪೂಜೆಯಲ್ಲಿ ಸೇರಿಕೊಳ್ಳಲು ಸೂಚಿಸಿದ. ಅವಸರಕ್ಕೆ ಬೆಂಗಳೂರಿನಿಂದ ಒಂದು ಕ್ಯಾಮರಾ ತರಿಸಿದ. ಹೆಚ್ಚುವರಿಯಾಗಿ ತನ್ನದೇ ಕ್ಯಾಮರಾವನ್ನು ಇಳಿಸಿದ. ವಿಷ್ಣು ಮತ್ತು ಅಷ್ಟೇ ಆಪ್ತ ತಂತ್ರಜ್ಞ ಲಕ್ಷ್ಮಣ್ ನಾಯಕ್ ಸೇರಿಸಿಕೊಂಡು ತನ್ನ ಕಾರಿನಲ್ಲೇ ಮಲ್ಪೆಗೆ ಧಾವಿಸಿದ. (ಕಾರಿನಲ್ಲಿನ ಒಂದು ಸೀಟ್ ಖಾಲಿಯುಳಿಯದಂತೆ ನಾನೂ ಸೇರಿಕೊಂಡೆ.)

ಕಿದಿಯೂರು ಪಡುಕರೆಯ ದೇವಿ ಮಂದಿರದ ಅಂಗಳದಲ್ಲಿ ಪೂಜಾ ಸಾಮಾಗ್ರಿಗಳನ್ನು ಜೋಡಿಸಿಟ್ಟಿದ್ದರು. ಅವುಗಳ ನಡುವೆ, ಕಡಲಿನಿಂದಲೇ ತಂದ ಕೆಸರು ಮಿಶ್ರಿತ ನುಣ್ಣನೆ ಮರಳಿನಲ್ಲಿ ಮಾಡಿದ ಶಿವಲಿಂಗದ ಆಕೃತಿಯೊಂದು ಹರಿವಾಣದಲ್ಲಿ ಕುಳಿತಿತ್ತು. ಊರ ಮಂದಿ ಸಂಭ್ರಮದಲ್ಲೇ ಸೇರುತ್ತಿದ್ದಂತೆ ಸಮುದಾಯದ ಅರ್ಚಕರು ‘ತುಂಬಿದ ಮಂದಿರ’ದೊಳಗೆ ದೇವಿಗೆ ವಿಶೇಷ ಪ್ರಾರ್ಥನೆ, ಆರತಿ ಸಲ್ಲಿಸಿದರು. ಅನಂತರ ಸಾರ್ವಜನಿಕರ ದೇವ ಭಜನೆ, ಗಂಟೆ ಜಾಗಂಟೆಗಳ ಮೇಳದಲ್ಲಿ ಅರ್ಚಕರು ಹೊರಬಂದು, ಶಿವಬಿಂಬದ ಹರಿವಾಣ ಹೊತ್ತು, ಕಡಲಿನತ್ತ ಮೆರವಣಿಗೆ ಹೊರಟರು. ಭಕ್ತಾದಿಗಳು ಸಾಲಂಕೃತ ಕಳಶ, ಪೂಜಾ ಸಾಮಗ್ರಿಗಳನ್ನು ಹಿಡಿದು ಸಾಲಿನಲ್ಲಿ ಹಿಂಬಾಲಿಸಿದರು. ನಸು ಮೋಡ ಕವಿದ ವಾತಾವರಣ, ದಾರಿಯಾಚಿನ ಕಡಲಿನ ಭೋರ್ಗರೆತ ಈ ಬಳಗಕ್ಕೆ ಹೊಸತೂ ಅಲ್ಲ, ಮನ ಕುಗ್ಗಿಸುವಂತದ್ದೂ ಅಲ್ಲ.

ಮಳಲ ಹಾಸಿನಲ್ಲಿ ಆ ಕ್ಷಣದ ಅಲೆಗಳ ಹೊಡೆತದಿಂದ ತುಸು ಮೇಲೆ ಅರ್ಚಕ ಶಿವ ಬಿಂಬವನ್ನು ಇಳಿಸಿದರು. ಭಕ್ತಾದಿಗಳ ಸಮಕ್ಷಮದಲ್ಲಿ ಮೊದಲು ಅದಕ್ಕೆ ಪೂಜೆ. ಅನಂತರ ಸಮುದ್ರಕ್ಕೆ ಹಾಲು ಬೊಂಡಾದಿಗಳ ಅಭಿಷೇಕ. ಆ ವೇಳೆಗೆ ಕಡಲ ಭೋರ್ಗರೆತ ಸಾಲದೆನ್ನುವಂತೆ, ಅದೆಲ್ಲಿಂದಲೋ ಸೀರ್ಪನಿಗಳಿಂದ ತೊಡಗಿದ ಸಾಧಾರಣ ಮಳೆ, ಹುಯ್ಯಲಿಡುವ ಗಾಳಿಯೇರಿ ಬಂತು. ಅದರ ಆರ್ಭಟೆಯಲ್ಲಿ ಭಜಕರ ಕಂಠತ್ರಾಣ ಹುಗಿದೇ ಹೋದಂತಿತ್ತು. ಆದರೆ ವಿಚಲಿತಗೊಳ್ಳದ ಅರ್ಚಕ, ಉತ್ಸವ ಮೂರ್ತಿಯ ಹರಿವಾಣವನ್ನು ತಲೆಯ ಮೇಲೆ ಹೊತ್ತು, ಅಲೆಗಳ ಎದುರು ನಡೆದೇ ಬಿಟ್ಟರು. ಅಲೆಗೈಗಳು ಬಾಚಿ ಬಾಚಿ ಶಿವಬಿಂಬವನ್ನು ವಿಸರ್ಜನೆಗೊಳಿಸುತ್ತ ಹರಿವಾಣ ಖಾಲಿಯಾದಲ್ಲಿಗೆ, ಅರ್ಚಕ ವಾಪಾಸು ಬಂದರು!

ಮಂದಿರದಲ್ಲಿ ಪೂಜೆಯಿಂದ ತೊಡಗಿ, ಕಡಲಂಚಿನಲ್ಲಿ ಶಿವಬಿಂಬದ ವಿಸರ್ಜನೆಯವರೆಗೂ ಸಿನಿಕಲಾವಿದರನ್ನು ಊರವರು ತಮ್ಮವರಂತೆಯೇ (ಚಿತ್ರಕ್ಕನುಕೂಲವಾಗುವಂತೆ) ಮುಂದಿಟ್ಟುಕೊಂಡರು. ಇವರ ಅರ್ಚನೆ ಅಭಿಷೇಕಗಳನ್ನೂ ದೇವರಿಗೆ ಸೇವೆಯಂತೆಯೇ ಸ್ವೀಕರಿಸಿದರು. ಮಂದಿರಕ್ಕೆ ಮರಳಿದಾಗ ಎಲ್ಲರಿಗೂ ಕೊಟ್ಟಂತೆ ಬೊಗಸೆ ತುಂಬ ಪಂಚಕಜ್ಜಾಯ, ಹಣ್ಣೂ ಕೊಟ್ಟರು. ಎಲ್ಲಕ್ಕೂ ಮಿಗಿಲಾಗಿ ಇವೆಲ್ಲವನ್ನು ಯಾವ (ಹಣದ) ನಿರೀಕ್ಷೆಯಿಲ್ಲದೆ, ಕೇವಲ ಪ್ರೀತಿಯಿಂದ ನಡೆಸಿಕೊಟ್ಟದ್ದು ಎಣಿಸುವಾಗ, ಇತರೆಡೆಯ ಚಿತ್ರೀಕರಣಗಳಲ್ಲಿ ಸಾಕಷ್ಟು ಸಾರ್ವಜನಿಕ ಹಿಂಸೆಗಳನ್ನು ಅನುಭವಿಸಿದ ಅಭಯನೇನು, ನನಗೂ ಹೃದಯ ತುಂಬಿ ಬರುತ್ತದೆ.

‘ಕಡಲಪೂಜೆ’ ಪರೋಕ್ಷವಾಗಿ ‘ಪಡ್ಡಾಯಿ’ಗೆ (ಸಿನಿಸಂಪ್ರಾದಯದಂತೆ ಹೇಳುವುದಿದ್ದರೆ) ‘ಮುಹೂರ್ತ’ದ ಸನ್ನಿವೇಶ. ಆ ದಿನಗಳಲ್ಲಿ ಇದೇ ವಲಯದಿಂದ ಹೊರಟ ‘ಒಂದು ಮೊಟ್ಟೆಯ ಕತೆ’, ತೆರೆ ಕಂಡು ಬಹು ಜನಪ್ರೀತಿ ಗಳಿಸಿತ್ತು. ಅದರ ಕೆಲವು ಹಿರಿಯ ಕಲಾವಿದರು, ತಮ್ಮ ಮಿತ್ರರಿಂದ ‘ನಮ್ಮವನ’ ಹೊಸ ಚಿತ್ರದ ‘ಮುಹೂರ್ತ’ ಎಂದು ತಿಳಿದು, ಅಭಿಮಾನದಿಂದ ಪ್ರೋತ್ಸಾಹಿಸಲು ಪಡುಕರೆಗೆ ಬಂದಿದ್ದರು. ಶುಭಾಶಯಗಳನ್ನು ಕೊಡುವುದರೊಂದಿಗೆ, ಮುಂದಕ್ಕೂ ತಮ್ಮ ಪೂರ್ಣ ಸಹಕಾರದ ಆಶ್ವಾಸನೆಯ ಸಿಹಿಯನ್ನು ಅಭಯನಿಗೆ ಉಣಿಸಿಯೇ ಹೋದರು. ಅದು ಬರಿಯ ಮಾತಲ್ಲ, ಚಿತ್ರೀಕರಣದಲ್ಲಿ ಅಗತ್ಯ ಬಂದಾಗೆಲ್ಲ ಅವರ ಸಹಕಾರ ಒದಗಿತೆಂದೂ ಅಭಯ ಸಂತೋಷದಲ್ಲೇ ಸ್ಮರಿಸುತ್ತಾನೆ.

ಅಭಯ ಮತ್ತು ಹೆಚ್ಚಿನ ನಟವರ್ಗಕ್ಕೂ ಕಡಲಪೂಜೆಯ ಪೂರ್ವಾನುಭವವಿರಲಿಲ್ಲ. ಹಾಗಾಗಿ ಮಂದಿರದಿಂದ ಕಡಲಂಚಿನವರೆಗೂ ಇವನ ಎರಡೂ ಕ್ಯಾಮರಾಮ್ಯಾನುಗಳನ್ನು ಬೇಕಾದಂತೆ ಬಳಸುವುದು, ನಟವರ್ಗವನ್ನು ಪ್ರಮುಖವಾಗಿ ಕಾಣುವಂತೆ ಹೊಂದಿಸಿಕೊಳ್ಳುವುದೇ ದೊಡ್ಡ ಕೆಲಸವಾಗಿತ್ತು. ಮೆರವಣಿಗೆ ಹಿಡಿಯುವ ಉತ್ಸಾಹದಲ್ಲಿ ಕಡಲಿಗೆ ಬೆನ್ನು ಹಾಕಿದರೂ ಬೊಬ್ಬಿಡುತ್ತಲೇ ಸೊಂಟದವರೆಗೂ ನೆಕ್ಕುತ್ತಿದ್ದ, ಎಂದೂ ತಲೆ ಮೀರಿ ಅಪ್ಪಳಿಸಬಹುದಿದ್ದ ಅಲೆಗಳನ್ನು ಮರೆಯಲುಂಟೇ. ಇನ್ನೂ ಒಂದಂಶ – ಕ್ಯಾಮರಾ. ನೀರಿನಲ್ಲಿ ಮುಳುಗುವುದಿರಲಿ, ಕ್ಯಾಮರಾದ ಯವಗಳ (ಕಣ್ಣು ಅಥವಾ ಲೆನ್ಸು) ಮೇಲೆ ಒಂದು ಪುಟ್ಟ ಹನಿ ಕುಳಿತರೂ ಇವರು ಬಯಸುವ ದೃಶ್ಯ ಮುಳುಗಿದಂತೆಯೇ ಸರಿ. ರಾಚುವ ಅಲೆಗಳನ್ನೂ ಸೋಲಿಸುವಂತೆ ಅನಿರೀಕ್ಷಿತ ಮಳೆಗಾಳಿ ಹೊಡೆದಾಗ ಇವರು ಕಂಗಾಲು. ಒಬ್ಬ ಕ್ಯಾಮರಾ ಸಹಾಯಕ ಅಗತ್ಯ ಬಂದರೆ, ನೆರಳು ಕಲ್ಪಿಸಲೆಂದು ಮಡಿಚಿ ಒಯ್ದಿದ್ದ ದೊಡ್ಡ ಅಲಂಕಾರಿಕ ಕೊಡೆ, ಅಷ್ಟೇ ಆಕಸ್ಮಿಕವಾಗಿ ನನ್ನ ಬೆನ್ನಿಗೆ ತಗುಲಿಸಿಕೊಂಡಿದ್ದ ‘ಅಜ್ಜರ ಕೊಡೆ’ಗಳು ಸಾರ್ಥಕವಾಗಿದ್ದವು. ಪೂಜಾ ಕಲಾಪ ಕಳೆದುಹೋಗದಂತೆ ಕ್ಯಾಮರಾದೊಳಗೇ ಕಣ್ಣು ನೆಟ್ಟ ತಂತ್ರಜ್ಞರ ಅಡಿ, ಸೆಳೆ ಒಯ್ಲುಗಳೊಡನೆ ಕುಸಿಯುತ್ತಿದ್ದರೂ ಎಲ್ಲ ಮುಗಿಸಿಕೊಂಡೇ ಕಟ್ಟಡದ ಮರೆಗೆ ಓಡಿದ್ದೆವು.

ಹೆದ್ದೆರೆ, ಅನಿರೀಕ್ಷಿತ ಮಳೆ ಚಿತ್ರೀಕರಣದ ತಂಡಕ್ಕೆ ಪ್ರಕೃತಿ ಕೊಟ್ಟ ಎಚ್ಚರದ ನುಡಿಯೇ ಎಂದು ಮೊದಲು ಸಂಶಯಿಸಿದವರಿದ್ದರು. ಆದರೆ ಒಟ್ಟು ಚಿತ್ರೀಕರಣ ಚಂದಕ್ಕೆ ಮುಗಿದಂದು, ಒಳ್ಳೆಯ ಸನ್ನಿವೇಶದಲ್ಲಿ (ಬೆಂಗಳೂರು ಚಿತ್ರೋತ್ಸವದಲ್ಲಿ ಮೊನ್ನೆ ಫೆಬ್ರುವರಿ ೨೫) ಪ್ರಥಮ ಪ್ರದರ್ಶನ ಕಂಡು ‘ಪಡ್ಡಾಯಿ’ ಪ್ರೇಕ್ಷಕರ ಮನವನ್ನೂ ಗೆದ್ದ ಸಂದರ್ಭದಂದು, ಹೀಗೂ ಭಾವಿಸುವಂತಾಯ್ತು – ಮಹಾಸಾಗರವೇ ಸಂಭ್ರಮಿಸಿತು, ಕೊಟ್ಟಿತ್ತು ಹರ್ಷದಾ ಒಂದು ಮುಗುಳು!

(ಮುಂದುವರಿಯಲಿದೆ)

[ಇದು ‘ಪಡ್ಡಾಯಿ’ ಚಿತ್ರ ನಿರ್ಮಾಣದ ಅಧಿಕೃತ ದಾಖಲೆ ಅಲ್ಲ. ಇದರ ಅಭಿಪ್ರಾಯಗಳೇನಿದ್ದರೂ ಪೂರ್ಣ ನನ್ನವೇ, ಅಭಯನದ್ದಲ್ಲ. ‘ಪಡ್ಡಾಯಿ’ ಚಿತ್ರೀಕರಣದುದ್ದಕ್ಕೆ ನಾನು ಗ್ರಹಿಸಿದ ಇನ್ನಷ್ಟು ಸ್ವಾರಸ್ಯಕರ ತುಣುಕುಗಳೊಂದಿಗೆ, ಸಿನಿಮಾ ಬಿಡುಗಡೆಯ ಸಂತಸವನ್ನೂ ಮುಂದಿನ ಸೋಮವಾರ, ಮತ್ತಿಲ್ಲೇ ಹಂಚಿಕೊಳ್ಳಲಿದ್ದೇನೆ.]