(ಮರಣೋತ್ತರ ನುಡಿನಮನಗಳು ೪)

(ಬಾಗಲೋಡಿ ದೇವರಾಯರ ಸ್ಮರಣ ಸಂಪುಟ – ‘ದೇವಸ್ಮರಣೆ’ ೨೦೦೩ರಲ್ಲಿ ಅತ್ರಿ ಬುಕ್ ಸೆಂಟರ್ ಪ್ರಕಟಿಸಿದ ಪುಸ್ತಕದ ಯಥಾ ವಿದ್ಯುನ್ಮಾನ ಪ್ರತಿ ೨೦೧೭. ಸಂಪಾದಕ – ಜಿ.ಟಿ. ನಾರಾಯಣ ರಾವ್)

(ಭಾಗ ೧೫)

– ಎಂ. ರಾಮಚಂದ್ರ

ಕಳೆದ ಶತಮಾನದ ಐದನೆಯ ದಶಕದ ಪೂರ್ವಾರ್ಧ. ನಾನಾಗ ಹೈಸ್ಕೂಲು ವಿದ್ಯಾರ್ಥಿ. ಒಂದು ದಿನ ನನ್ನ ಕಿರಿಯ ಸಹಪಾಠಿಯೊಬ್ಬನ ಕೈಯಲ್ಲಿ ‘ಆರಾಧನಾ’ ಎಂಬ ಪುಸ್ತಕ ನೋಡಿದೆ. ‘ಏನಿದು ಆರಾಧನೆ’ ಎಂಬ ಕುತೂಹಲದಿಂದ ಮಿತ್ರನ ಕೈಯಿಂದ ಪುಸ್ತಕ ತೆಗೆದು ಪುಟ ತೆರೆದೆ – ಅದೊಂದು ಕಥಾಸಂಗ್ರಹ; ಲೇಖಕ ಬಾಗಲೋಡಿ ದೇವರಾಯ ಎಂಬುದು ಮುಖಪುಟದಲ್ಲೇ ಮುದ್ರಿತವಾಗಿತ್ತು. ಸಂಗ್ರಹದಲ್ಲಿದ್ದ ಕತೆಗಳ ಮೇಲೆ ಕಣ್ಣಾಡಿಸಿದೆ. ಅವುಗಳ ಶೀರ್ಷಿಕೆ, ಕಥಾವಸ್ತು, ನಿರೂಪಣ ವಿಧಾನ, ಭಾಷಾ ಶೈಲಿ ಎಲ್ಲದರಲ್ಲೂ ಒಂದು ನಾವೀನ್ಯವನ್ನು ಕಂಡೆ.

ನಾನು ಹೈಸ್ಕೂಲು ದಾಟಿ, ಮಂಗಳೂರಲ್ಲಿ ಅಲೋಶಿಯಸ್ ಕಾಲೇಜನ್ನು ಸೇರಿದೆ. ಹಾಸ್ಟೆಲ್ ನಿವಾಸಿಯಾದೆ. ನನ್ನ ಸಹವಾಸಿಯೊಬ್ಬನ ಹೆಸರಿನ ಹಿಂದೆ ‘ಬಾಗಲೋಡಿ’ ಎಂಬ ಸ್ಥಳನಾಮವಿತ್ತು. ಆಸಕ್ತಿಯಿಂದ ವಿಚಾರಿಸಿದಾಗ ಆತ ಬಾಗಲೋಡಿ ದೇವರಾಯರ ಸಂಬಂಧಿಯೆಂಬುದು ತಿಳಿಯಿತಲ್ಲದೆ, ದೇವರಾಯರ ಬಗ್ಗೆ ಹೆಚ್ಚಿನ ವಿವರಗಳು ಸಿಕ್ಕಿದುವು.
ಅಧ್ಯಯನವನ್ನು ತಕ್ಕ ಮಟ್ಟಿಕೆ ಪೂರೈಸಿ, ಅಧ್ಯಾಪನಕ್ಕೆ ತೊಡಗಿದ ಮೇಲೆ, ಕು.ಶಿ. ಹರಿದಾಸಭಟ್ಟರ ವಿಶ್ವಾಸ, ವಾತ್ಸಲ್ಯ, ಸಾಮೀಪ್ಯಗಳು ಸಿದ್ಧಿಸಿದ ಅನಂತರ ತಿಳಿದು ಬಂದದ್ದು ಇಷ್ಟು: ಬಾಗಲೋಡಿ ದೇವರಾಯರೂ ಕುಶಿಯವರೂ (ಹಾಗೆಯೇ ಜಿಟಿ ನಾರಾಯಣ ರಾವ್, ಪರ್ಕಳ ರಂಗನಾಥ ಶೆಣೈ, ಸೇವ ನಮಿರಾಜಮಲ್ಲ ಮೊದಲಾದವರೂ) ಅಂದಿನ ಮದರಾಸಿನಲ್ಲಿ ಬೇರೆ ಬೇರೆ ಕಾಲೇಜುಗಳಲ್ಲಿ ಓದುತ್ತಿದ್ದರೂ ಗಾಢ ಸ್ನೇಹಿತರಾಗಿದ್ದವರು. ಬಾಗಲೋಡಿಯವರು ಅತ್ಯಂತ ಮೇಧಾವಿಯಾಗಿದ್ದರು. ತೀರ ಸಣ್ಣ ಪ್ರಾಯದಲ್ಲೇ ಅಖಿಲಭಾರತ ಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಗೆ ಕಟ್ಟಿದರು; ಉತ್ತೀರ್ಣರಾಗಿ ವಿದೇಶಾಂಗ ಸೇವೆಯಲ್ಲಿ ವೃತ್ತಿ. ಹಿಂದೆ ತರುಣದಲ್ಲಿ ಅನಾರೋಗ್ಯ ಪೀಡಿತರೂ ಆಗಿ, ಮತ್ತೆ ಚೇತರಿಸಿ, ವಿದೇಶಾಂಗ ಸೇವೆಗೆ ದಾಖಲಾದರು ಇತ್ಯಾದಿ.

ಹೀಗೆ ಬಾಗಲೋಡಿಯವರ ಕತೆಗಳನ್ನು ಓದಿ, ಅವರ ವ್ಯಕ್ತಿ ವಿವರಗಳನ್ನು ತಿಳಿದಂತೆಯೇ ಅವರ ಬಗೆಗೆ ನನ್ನ ಆಸಕ್ತಿ ಆದರಗಳು ಹೆಚ್ಚುಹೆಚ್ಚಾದುವು. ಆಗಲೇ ಮಾಸ್ತಿಯವರು ತಮ್ಮ ‘ಜೀವನ ಕಾರ್ಯಾಲಯ’ದಿಂದ ಪ್ರಕಟಿಸಿದ್ದ ಬಾಗಲೋಡಿಯವರ ಪ್ರಥಮ ಕಥಾಸಂಗ್ರಹ ಹುಚ್ಚ ಮುನಸೀಫ ಮತ್ತು ಇತರ ಕತೆಗಳು ಎಂಬ ಸಂಕಲನವೂ ನನ್ನ ಕಣ್ಣಿಗೆ ಬಿತ್ತು; ಕತೆಗಳನ್ನು ಓದಿದೆ, ತಲೆದೂಗಿದೆ. ಆ ಕಾಲದಲ್ಲಿ ಉದಯವಾಣಿ ದೈನಿಕ ಸಾಪ್ತಾಹಿಕ ಸಂಚಿಕೆಗಳಲ್ಲಿ ಆಗೊಮ್ಮೆ ಈಗೊಮ್ಮೆ ‘ಮರೆಯಬಾರದ ಪುಸ್ತಕ’, ‘ಓದಲೇಬೇಕಾದ ಪುಸ್ತಕ’ ಎಂಬ ಶೀರ್ಷಿಕೆಗಳಲ್ಲಿ ನಾನು ಮೆಚ್ಚಿದ ಹೆಚ್ಚಾಗಿ ಹಳೆಗಾಲದ ಪುಸ್ತಕಗಳ ಬಗ್ಗೆ ಬರೆಯುತ್ತಿದ್ದೆ. ಆ ಸರಣಿಯಲ್ಲಿ ಹುಚ್ಚ ಮುನಸೀಫನನ್ನು ಸೇರಿಸಿಕೊಂಡೆ. ಅಚ್ಚಾದ ಲೇಖನದ ಒಂದು ಪ್ರತಿಯನ್ನು ಬಾಗಲೋಡಿಯವರಿಗೆ (ಅವರು ನ್ಯೂಝೀಲ್ಯಾಂಡಿನಲ್ಲಿದ್ದರು) ಕಳುಹಿಸಿದೆ. ನನಗೆ ಆಶ್ಚರ್ಯವಾಗುವಂತೆ, ಅತಿ ಶೀಘ್ರದಲ್ಲಿಯೇ ಅವರ ಪತ್ರ ಬಂತು. ಅವರು ಬರೆದಿದ್ದರು:

ಭಾರತೀಯ ರಾಯಭಾರಿ, ೪೯, ವಿಲ್ಲಿಸ್ ಸ್ಟ್ರೀಟ್, ವೆಲ್ಲಿಂಗ್ಟನ್ (ನ್ಯೂಝೀಲ್ಯಾಂಡ್)

೪ ಮೇ ೧೯೭೯

ಆದರಣೀಯ ಶ್ರೀಯುತ ರಾಮಚಂದ್ರರವರಿಗೆ, ಬಾಗಲೋಡಿ ದೇವರಾಯನ ಸವಿನಯ ವಂದನೆಗಳು. ತಮ್ಮ ಪ್ರಿಯ ಪತ್ರ, ತಥಾ ಮರೆಯಬಾರದ ಪುಸ್ತಕವೆಂಬ ಲೇಖನ ಉದಯವಾಣಿಯಲ್ಲಿ ಪ್ರಕಟಿತವಾದುದುದು ಕೈಸೇರಿದುವು. ಬಹಳ ಕೃತಜ್ಞನಾಗಿದ್ದೇನೆ.

ಮೂವತ್ತು ವರ್ಷ ಪೂರ್ವ ವಿದ್ಯಾರ್ಥಿ ಜೀವನದಲ್ಲಿ ನಾನು ಬರೆದ ಕತೆಗಳನ್ನು (ಹುಚ್ಚ ಮುನಸೀಫ ಮತ್ತು ಇತರ ಕತೆಗಳು) ತಾವು ಈಗಲೂ – ನನ್ನ ವೃದ್ಧಾಪ್ಯದಲ್ಲೂ ನೆನಪಿಟ್ಟದ್ದನ್ನು ಕಂಡು, ಬಹಳ ಆತ್ಮಸಂತೋಷವಾಯಿತು. ಅನೇಕಾನೇಕ ಕೃತಜ್ಞತೆಗಳನ್ನು ಅರ್ಪಿಸುತ್ತೇನೆ.

ತದನಂತರ ಪ್ರಾಯಶಃ ೧೯೫೩ರಲ್ಲಿ ಆರಾಧನಾ ಎಂಬ ಕಥಾಸಂಕಲನವನ್ನು ಬರೆದಿದ್ದೆ. ಅದರಲ್ಲಿ ಪವಾಡಪುರುಷ ಮತ್ತು ಹುಲಿ ಜೋಯಿಸರ ಕಥೆ ಮತ್ತು ಆರಾಧನ ಪ್ರಾಯಶಃ ತಮಗೆ ರುಚಿಸಬಹುದು.

ಇತಿ ಪುನಃ ಅನೇಕಾನೇಕ ನಮಸ್ಕಾರಗಳು
ಬಾಗಲೋಡಿ ದೇವರಾಯ

ಪತ್ರವನ್ನೋದಿ ನಾನು ಮೂಕನಾದೆ. ಭಾರತ ಸರಕಾರದ ಒಬ್ಬ ಉಚ್ಛ ಅಧಿಕಾರಿ ದೇವರಾಯರೆಲ್ಲಿ? ಸಾಮಾನ್ಯ ಕಾಲೇಜ್ ಅಧ್ಯಾಪಕನಾದ ನಾನೆಲ್ಲಿ? ಪತ್ರದಲ್ಲಿ ಪ್ರಕಟವಾದ ಅವರ ವಿನಯಶಾಲೀನತೆ ನನ್ನೆದೆಯನ್ನು ಮುಟ್ಟಿತು; ಆರಾಧನಾ ಲೇಖಕ ದೇವರಾಯರು ನನಗೆ ಆರಾಧ್ಯರೇ ಆಗಿಬಿಟ್ಟರು!

ಅದೇ ಸುಮಾರಿಗೆ ಪತ್ರಿಕೆಯಲ್ಲಿ ಒಂದು ಸುದ್ದಿ ಓದಿದೆ: ದೇವರಾಯರು ಊರಿಗೆ ಬಂದವರು, (ಮಂಗಳೂರು ಹತ್ತಿರದ) ಕಿನ್ನಿಕಂಬಳದಲ್ಲಿ ತಾವು ಓದಿ ಕಲಿತ ಶಾಲೆಗೆ ಭೇಟಿ ನೀಡಿದರೆಂದೂ ತಮಗೆ ಪಾಠ ಹೇಳಿದ್ದ ಒಬ್ಬ ವೃದ್ಧ ಅಧ್ಯಾಪಕರನ್ನು ಹುಡುಕಿಕೊಂಡು ಅವರ ಮನೆಗೇ ಹೋಗಿ, ದರ್ಶಿಸಿ, ಪಾದಸ್ಪರ್ಶ ಮಾಡಿ ಸಂತೋಷಪಟ್ಟರೆಂಬುದೂ ಆ ಸುದ್ದಿಯಾಗಿತ್ತು. ಈ ಕಲಿಕಾಲದಲ್ಲೂ ಇಂಥವರಿದ್ದಾರೆಯೇ ಎಂದು ತೋರಿತು. ಏಕೆಂದರೆ ‘ಉಪಾಧ್ಯಾಯಾಶ್ಚ ವೈದ್ಯಾಶ್ಚ ಕಾರ್ಯಾಂತೇ ನಿಷ್ಪ್ರಯೋಜಕಾ’ ಎಂಬ ಲೋಕೋಕ್ತಿಯೇ ಇದೆಯಲ್ಲ! ಈ ಉಕ್ತಿಗೆ ಅಪವಾದವೂ ಇದೆಯೆಂಬುದನ್ನು ಬಾಗಲೋಡಿಯವರು ನನಗೆ ಮನವರಿಕೆ ಮಾಡಿಕೊಟ್ಟರು. ನನ್ನ ಕಣ್ಣಲ್ಲಿ ಅವರ ಎತ್ತರ ಹೆಚ್ಚಾಯಿತು! ತೂಕ ಇಮ್ಮಡಿಯಾಯಿತು. ಮತ್ತೆ ಸುದ್ದಿ ಕೇಳಿದೆ: ದೇವರಾಯರು ಅಧಿಕಾರ ನಿವೃತ್ತರಾಗಿ, ತಾಯ್ನಾಡಿಗೆ – ಹುಟ್ಟೂರಿಗೆ – ಮರಳಿ ಬಂದಿದ್ದಾರೆ: ಉಡುಪಿಯ ಪರಿಸರದಲ್ಲಿ, ಒಂದು ಪ್ರಶಾಂತ ಸುಂದರ ಸ್ಥಳದಲ್ಲಿ ನೆಲೆಯೂರಿ, ಶೇಷ ಜೀವನವನ್ನು ಸಾಹಿತ್ಯಕೃಷಿಯಲ್ಲಿ ಸಾರ್ಥಕಗೊಳಿಸಲು ಉತ್ಸುಕರಾಗಿದ್ದಾರೆ. ಆ ಸುದ್ದಿಯನ್ನು ಕುಶಿಯವರ ಬಾಯಿಯಿಂದಲೇ ಕೇಳಿದೆ. ಅದನ್ನು ಕೇಳಿದಾಗ ಬಹುಕಾಲದಿಂದ ನನ್ನಲ್ಲಿ ಹುದುಗಿಕೊಂಡಿದ್ದ ಆಸೆ ಎಚ್ಚರಗೊಂಡಿತು, ಕಣ್ಣರಳಿಸಿತು. ಆ ಆಸೆಯೆಂದರೆ ಬಾಗಲೋಡಿಯವರ ಸಂದರ್ಶನ. ಆದರೆ ಚಿಗುರಿದ ಆಸೆ ಅಲ್ಲಿಯೇ ಮುರುಟಿತು. ಕೆಲವೇ ದಿನಗಳಲ್ಲಿ ದುರ್ವಾರ್ತೆಯೊಂದು ನನ್ನ ಕವಿದೆರೆಯನ್ನು ಬಡಿಯಿತು – “ಬಾಗಲೋಡಿ ದೇವರಾಯರ ದೇಹಾಂತ್ಯ!”

ನಾನು ದೇವ (ರಾಯ)ರನ್ನು ನೋಡಲೇ ಇಲ್ಲ!

ಮಣಿಯದಿಹ ಮನವೊಂದು, ಸಾಧಿಸುವ ಹಟವೊಂದು
ನಿಜದ ನೇರಕೆ ನಡೆವ ನಿಶ್ಚಲತೆಯೊಂದು
ಅನ್ಯಾಯಕೆಂದೆಂದು ಬಾಗದೆಚ್ಚರವೊಂದು
ಮರುಕಕ್ಕೆ ಪ್ರೇಮಕ್ಕೆ ಚಿರತೆರೆದ ಎದೆಯೊಂದು
ಅಭೀಃ ಅಭೀಃ ಎಂಬ ತಾರಕವಾಕ್ಯ
ನಾಡಿಯನು ನಡೆಸುತಿರೆ, ಬಾಳನ್ನು ತಿದ್ದುತಿರೆ
ನಡೆ ಮುಂದಕೆನ್ನುತ್ತ ಕೂಗುತಿವೆ, ನುಗ್ಗಿಸುತಿವೆ
-ವಿಸೀ

[ವಿಸೂ: ಮೂಲಪುಸ್ತಕದ ಕ್ರಮ ತುಸು ತಪ್ಪಿಸಿ ಅಲ್ಲಿನದೇ ಎಂ. ರಾಮಚಂದ್ರರ ಎರಡನೇ ಲೇಖನವನ್ನು ಇಲ್ಲೇ ಕೊಡುತ್ತಿದ್ದೇನೆ – ಅಶೋಕವರ್ಧನ]

ಹುಚ್ಚ ಮುನಸೀಫ ಮತ್ತು ಇತರ ಕತೆಗಳು

(ಬಾಗಲೋಡಿ ವಾಙ್ಮಯ ಸಮೀಕ್ಷೆ ೩)

(ಬಾಗಲೋಡಿ ದೇವರಾಯರ ಸ್ಮರಣ ಸಂಪುಟ – ‘ದೇವಸ್ಮರಣೆ’ ೨೦೦೩ರಲ್ಲಿ ಅತ್ರಿ ಬುಕ್ ಸೆಂಟರ್ ಪ್ರಕಟಿಸಿದ ಪುಸ್ತಕದ ಯಥಾ ವಿದ್ಯುನ್ಮಾನ ಪ್ರತಿ ೨೦೧೭. ಸಂಪಾದಕ – ಜಿ.ಟಿ. ನಾರಾಯಣ ರಾವ್)

– ಎಂ. ರಾಮಚಂದ್ರ

“ಕುಳ್ಳಿರೆ ಮಂತ್ರಿ, ನಿಂತಿರೆ ದಂಡಾಧೀಶಂ, ತೊಡಂಕೆ ಕವಿ” ಎಂದು ಹಳಗನ್ನಡದ ಕವಿ ಜನ್ನ ತನ್ನನ್ನು ತಾನೇ ವರ್ಣಿಸಿಕೊಂಡಿದ್ದಾನೆ. ಜನ್ನನಂತೆ ಹೀಗೆ ತ್ರಿಮುಖ ವ್ಯಕ್ತಿತ್ವವನ್ನು ಬೆಳೆಸಿಕೊಂಡವರು ವಿರಳರಾದರೂ ಅಸಂಭಾವ್ಯರೇನಲ್ಲ. ಜನ್ನನ ಮಾತಿಗೆ ಅವನಿಗಿಂತ ಹಿರಿಯನಾದ ಆದಿಕವಿ ಪಂಪನೇ ಉದಾಹರಣೆ. ಜಗತ್ತಿನ ಇನ್ನಿತರ ಭಾಗಗಳಲ್ಲೂ ಭಾಷೆಗಳಲ್ಲೂ ಇಂಥವರು ಕೆಲವರು ಆಗಿಹೋಗಿದ್ದಾರೆ. ದಿನದ ಇಪ್ಪತ್ತನಾಲ್ಕು ತಾಸೂ ತಲೆ ತಿನ್ನಬಹುದಾದ ರಾಜಕಾರಣದ ಕುರುಕ್ಷೇತ್ರದಲ್ಲಿದ್ದೂ ಬುದ್ಧಿ ಭಾವಗಳನ್ನು ಪ್ರಚೋದಿಸುವ ಕಲಾಪ್ರಕಾರಗಳ ಸೂರ್ಯ-ಚಂದ್ರ ಮಂಡಲಗಳಲ್ಲಿ ವಿಹರಿಸುವವರು, ಹಿಂದಿನಂತೆ ಈಗಲೂ ನಮ್ಮಲ್ಲಿ ಕೆಲವರಿದ್ದಾರೆ. ವಿದೇಶವೊಂದರಲ್ಲಿ ಭಾರತದ ಪ್ರತಿನಿಧಿಯಾಗಿರುತ್ತ ಇತ್ತೀಚೆಗೆ ಹುಟ್ಟುನಾಡು ದಕ್ಷಿಣ ಕನ್ನಡಕ್ಕೆ ಬಂದು ಸುದ್ಧಿ ಮಾಡಿದ ಬಾಗಲೋಡಿ ದೇವರಾಯರು ಅಂಥವರಲ್ಲಿ ಒಬ್ಬರು. ದೇವರಾಯರ ಲೇಖನಶಕ್ತಿಯನ್ನು ಗುರುತಿಸಿ, ಹುರಿದುಂಬಿಸಿದುದಲ್ಲದೆ ಅವರ ಚೊಚ್ಚಲ ಕಥಾಸಂಕಲನವನ್ನು ಪ್ರಕಟಿಸಲೂ ಮುಂದಾದವರು ಆ ಕ್ಷೇತ್ರದಲ್ಲಿ ಅದ್ವಿತೀಯರೆನಿಸಿದ ಮಾಸ್ತಿ ವೆಂಕಟೇಶ ಅಯ್ಯಂಗಾರರು. ಹೀಗೆ ಬಾಗಲೋಡಿಯವರಿಂದ ರಚಿತವಾದ, ೧೯೪೯ರಲ್ಲಿ ಮಾಸ್ತಿಯವರಿಂದ ಪ್ರಕಟಿತವಾದ ಪುಸ್ತಕವೇ ಹುಚ್ಚ ಮುನಸೀಫ ಮತ್ತು ಇತರ ಕತೆಗಳು. (ಸಿನಿಮಾದ ಮಾದರಿಗೆ ಚಿಟಿಕೆ ಹೊಡೆಯಿರಿ)

ಈ ಸಂಕಲನದಲ್ಲಿ ಏಳು ಕತೆಗಳಿವೆ. ಇವು ಏಳೂ ಅಂದಿಗೆ ಅಷ್ಟೆ ಅಲ್ಲ, ಇಂದಿಗೂ ವಸ್ತು-ವಿನ್ಯಾಸ-ನಿರೂಪಣೆಗಳಲ್ಲಿ ಆ ಮೊದಲು ಕಾಣದ, ಈಗಲೂ ಕಾಣಲಾಗದ ರೀತಿಯ ರಚನೆಗಳು. ಹೀಗೆಂದರೆ ಈ ಕತೆಗಳು ಕನ್ನಡದಲ್ಲೇ ಅದ್ವಿತೀಯ, ಅತ್ಯುತ್ತಮ ಎಂಬ ಅಭಿಪ್ರಾಯವಲ್ಲ. ಆದರೆ ಈ ಕತೆಗಳದೇ ಒಂದು ವಿಚಿತ್ರವಾದ, ವಿಶಿಷ್ಟವಾದ ಗುಂಪು. ಇಲ್ಲಿ ಸ್ವತಂತ್ರವಾದವು ಇವೆ, ಅನ್ಯ ಪ್ರೇರಿತವಾದವು ಇವೆ, ಯಾವು ಯಾವುದೋ ‘ಹೇಳಿಕೆ’ಗಳನ್ನು ಹಿಡಿದು ಬರೆಯಲಾದವೂ ಇವೆ. ಹುಚ್ಚ ಮುನಸೀಫರ ಚರಿತ್ರೆ ಎಂಬ ಮೊದಲ ಕತೆಯೇ ಮೇಲಿನ ಮಾತುಗಳಿಗೆ ಒಳ್ಳೆಯ ಉದಾಹರಣೆ. ಕತೆ ಮೇಲು ನೋಟಕ್ಕೆ ಹಾಸ್ಯಪೂರ್ಣವೆಂದು ತೋರುತ್ತದೆ. ಮೇಲೆ ತಿಳಿನೀರಿನಂತಿದ್ದರೂ ಆಳಕ್ಕಿಳಿದಂತೆ ಕರಿ – ಕರಿಯಾಗಿ, ವಿಷಾದದ ಮಡುವಾಗಿ ಕಾಣುತ್ತದೆ. “ಒರೆ ಬೇರೆ, ಒಳ ಬಾಳು ಬೇರೆ” ಎಂಬ ಕವಿವಾಕ್ಯವನ್ನು ರುಜುಪಡಿಸುವ ಸಂಗತಿ ಈ ಚರಿತ್ರೆಯಲ್ಲಿದೆ. ಮನುಷ್ಯನ ಜನ್ಮ ಸಂಸ್ಕಾರದ ಛಾಯೆ ಅವನ ಬಾಳಿನುದ್ದಕ್ಕೂ ಹಾಯುತ್ತದೆ ಎಂಬುದನ್ನು ಇಲ್ಲಿ ಶ್ರುತಪಡಿಸಿರುವ ರೀತಿ ಸ್ವಾರಸ್ಯಕರ, ಹಾಗೆಯೇ ಕುತೂಹಲಕಾರಿ…. ಸೇಡಿಯಾಪು ಕೃಷ್ಣ ಭಟ್ಟರ ಧರ್ಮಮ್ಮ ಎಂಬ ಕತೆಯನ್ನು ಹುಚ್ಚ ಮುನಸೀಫರ ಚರಿತ್ರೆ ನೆನಪಿಗೆ ತರುತ್ತದೆ. ಎಂದರೆ ಪರಸ್ಪರ ಸಾದೃಶ್ಯವಿದೆ ಎಂದಾಗಲಿ ಪ್ರಭಾವಿತವಾಗಿದೆ ಎಂದಾಗಲಿ ಅರ್ಥವಲ್ಲ. ಕಥನಕುತೂಹಲಿಗಳು ಅದನ್ನೂ ಇದನ್ನೂ ಓದಿ ತೂಗಿ ನೋಡಬಹುದು.

ಅವರವರ ಸುಖದುಃಖವೆಂಬ ಎರಡನೆಯ ಕತೆ, ಮನುಷ್ಯನ ಎದೆಯೊಳಕ್ಕೆ ಇಣುಕು ನೋಟವೊಂದನ್ನು ಬೀರುತ್ತದೆ; ಕಾಲಕಾಲಕ್ಕೆ ಬದಲಾಗುವ ಅವನ ವ್ಯಕ್ತಿತ್ವದ ಬೇರೆ ಬೇರೆ ಹಾಳೆಗಳನ್ನು ತೆರೆದು ತೋರುತ್ತದೆ. ಶಂಭು ಮತ್ತು ಅವನ ತಾಯ್ತಂದೆಯವರ ಸುತ್ತ ಹೆಣೆದಿರುವ ಕತೆ ಇದು. ಚಿಕ್ಕಂದಿನಲ್ಲಿ ಅವರಿವರ ಕಷ್ಟ ನಿಷ್ಠುರಗಳಿಗೆ ಕರಗಿ ಕಣ್ಣೀರೊರೆಸಲು ತವಕಿಸುತ್ತಿದ್ದ ಶಂಭುವೇ ಬರಬರುತ್ತ ಹೇಗೆ ಸ್ವಾರ್ಥದ ಮೊಟ್ಟೆಯಾದನೆಂಬುದನ್ನು ಈ ಕತೆ ಹೇಳುತ್ತದೆ…..\

ವೀಣೆಯ ತಂತಿಯನ್ನು ಹೆಚ್ಚಾಗಿ ಬಿಗಿದರೆ ನಾದ ಹೊರಡದು; ಮೀಟುವಾಗ ತಂತಿ ತುಂಡಾಗಲೂಬಹುದು. ಜೋಲು ಬಿದ್ದರೆ ಒಡಕುಸ್ವರ. ಆದುದರಿಂದ ಹದವಾಗಿ ಬಿಗಿದಾಗಲೇ ಇಂಪಾದ ದನಿ. ಬುದ್ಧ ಗುರು ಈ ನಿದರ್ಶನದಿಂದ ಬದುಕಿನಲ್ಲಿ ಸುಖವಿರುವುದು ಎರಡು ‘ಅತಿ’ಗಳಲ್ಲಿ ಅಲ್ಲ ಅವುಗಳ ನಡುವಣ ‘ಮಿತಿ’ಯಲ್ಲಿ ಎಂಬುದನ್ನು ಲೋಕಕ್ಕೆ ತೋರಿದ. ಮೂರನೆಯದಾದ ಸತ್ಯಮೇವ ಜಯತೇ ಎಂಬುದು ಇಂಥ ‘ಅತಿ’ಗಳಲ್ಲಿ ಒಂದನ್ನು ಎತ್ತಿ ಹೇಳುವ ಕತೆ. ತಾಪಸನಾದರೂ ಮನುಷ್ಯವಾಸನೆಗೆ ಮೂಗರಳಿದ ಒಬ್ಬ ಗುರು; ಲೋಕಸಂಪರ್ಕಕ್ಕೆ ಹಿಮಗಡ್ಡೆಯಂತೆ ತಣ್ಣಗಿರುವ ವಜ್ರಧರ್ಮ; ಇದ್ದುದನ್ನು ಉಂಡು, ಇಲ್ಲದುದನ್ನು ಪಡೆದು ಸುಖವಾಗಿರುವ ಪುಷ್ಪಧರ್ಮ; ಕೇವಲ ಕಿಂಕರವೃತ್ತಿಯ ವೃಷಲ – ಹೀಗೆ ಗುರು ಮತ್ತವನ ಮೂವರು ಶಿಷ್ಯರನ್ನು ಸುತ್ತುವರಿದಿರುವ ಈ ಕತೆ ಅವರ ಇಹಜೀವನವನ್ನೂ ಪರಗತಿಯನ್ನೂ ಬಿಡಿಸಿ ಹೇಳುತ್ತದೆ.

ನಾಲ್ಕನೆಯದಾದ ಅಜ್ಜ ನೆಟ್ಟ ಮರ ಎಂಬ ಕತೆ ಕೆಲಮಟ್ಟಿಗೆ ಅವರವರ ಸುಖದುಃಖವನ್ನು ಹೋಲುತ್ತದೆ. ಅಲ್ಲಿಯ ಶಂಭು ಎಳವೆಯಲ್ಲಿ ಅಷ್ಟೊಂದು ಮಿದು-ಮಿದುವಾಗಿ ನೆರೆಹೊರೆಯವರ ಕಣ್ಣೀರಿಗೆಲ್ಲ ಕರಗಿಬಿಡುತ್ತಿದ್ದವನೇ, ಮುಂದೆ ತನ್ನದೂ ಹೆಂಡತಿ ಮಕ್ಕಳದೂ ಬೇರೆಯೇ ಒಂದು ಪ್ರಪಂಚ ಎಂದು ತಿಳಿದುಕೊಂಡಂತೆ ಇಲ್ಲಿಯ ಶ್ರೀನಿವಾಸ. ತನ್ನ ಮನೆ, ಮನೆ ಮಂದಿ, ಮನೆ ಮುಂದಿನ ಗೊಡ್ಡು ಮರ – ಹೀಗೆ ಒಂದೊಂದರಲ್ಲೂ ತಾದಾತ್ಮ್ಯ ಹೊಂದಿದ್ದವನೇ ಕಾಲಕ್ರಮೇಣ ಹತ್ತು ಕಾಸಿಗಾಗಿ ಎಲ್ಲವನ್ನೂ ತೊರೆಯುವುದಕ್ಕೆ, ಮರೆಯುವುದಕ್ಕೆ, ಮಾರುವುದಕ್ಕೆ ಸಿದ್ಧನಾಗುತ್ತಾನೆ. ಈ ಕತೆಯಲ್ಲಿ ಪರಂಪರೆಯ ಸಂಕೇತವಾಗಿ ಮುದಿ ಮಾವಿನ ಮರವೊಂದು ಬರುತ್ತದೆ. ಅಪ್ಪ ಸಂಪಿಗೆರಾಯ ಮರವನ್ನಷ್ಟೇ ಮಾರಿ, ಅದರ ಕುತ್ತಿಯನ್ನು ಉಳಿಸುತ್ತಾನೆ. ಮಗ ಶ್ರೀನಿವಾಸ ಎಲ್ಲವನ್ನೂ – ಅಪ್ಪ, ಅಜ್ಜ, ಮುತ್ತಜ್ಜರೂ ಹುಟ್ಟಿ ಬೆಳೆದ ಮನೆಯ ಅಡಿಯನ್ನು ಸಹ – ಮಾರಿ ಕೈತೊಳೆದುಕೊಳ್ಳುತ್ತಾನೆ. ಬಡ ಮುದುಕ ಸಂಪಿಗೆರಾಯರು ಪರಭಾರೆಯಾದ ಮನೆ ಬಿಟ್ಟು ಹೊರಟಾಗ ಮಾವಿನ ಮರದ ಕುತ್ತಿಯನ್ನು ಎಡವಿ ಮುಗ್ಗರಿಸುವುದು ಎಷ್ಟು ಸಾಂಕೇತಿಕವೋ ಅಷ್ಟೇ ಸಂಕಟಕರವೂ ಆಗಿದೆ.

ಶುದ್ಧಫಟಿಂಗ ಎಂಬ ಕತೆಯ ಕೊನೆಯಲ್ಲಿ ಒಂದು ಇಂಗ್ಲಿಷ್ ಉದ್ಧರಣೆ ಹೀಗಿದೆ: The ways of God are strange but the ways of man are stranger. ದೈವಗತಿ ವಿಚಿತ್ರವಾದರೆ ಮನುಷ್ಯಗತಿ ವಿಚಿತ್ರತರ ಎಂಬುದನ್ನು ಈ ಕತೆಯಲ್ಲಿ ಸಾಧಿಸಿ, ಸಿದ್ಧಪಡಿಸಿರುವ ರೀತಿ ರೋಚಕವಾದುದು…. ಕತೆಯನ್ನು ಓದಿದ ಬಳಿಕ “ಯಾವ ಗಿಡಬೇರು ಯಾವುದಕ್ಕೆ ಮದ್ದೋ ಎಂದು ದೇವರೇ ಬಲ್ಲ” ಎಂಬ ಲೇಖಕನ ಒಕ್ಕಣೆಗೆ ‘ಯಾವ ಬಂಡೆಯ ಅಡಿಯಲ್ಲಿ ಎಷ್ಟು ಒಸರಿದೆಯೋ ಯಾರು ಬಲ್ಲರು’ ಎಂಬ ಒಂದು ಪಂಕ್ತಿಯನ್ನೂ ಸೇರಿಸೋಣ ಎಂದು ತೋರುತ್ತದೆ.

‘ಹತ್ತು ಸುಳ್ಳು ಹೇಳಿ ಒಂದು ಮದುವೆ ಮಾಡಿ’ಕೊಂಡ ಒಬ್ಬ ಕದೀಮನ ಕತೆ – ಭೀಮಸೇನ ಹೆಂಗರುಳನ್ನು ಕಂಡುದು. ಮರದ ಡಿಪೋ ಒಂದರಲ್ಲಿ ಉದ್ಯೋಗವನ್ನೂ ಡಿಪೋ ಯಜಮಾನನ ಹಿಡಿಂಬಿಯಂಥ ಮಗಳ ಕೈಯನ್ನೂ ಜತೆಜತೆಯಾಗಿ ಹಿಡಿದ ಅಭಿನವ ಭೀಮಸೇನನೊಬ್ಬನನ್ನು ಈ ಕತೆಯಲ್ಲಿ ಕಾಣುತ್ತೇವೆ. ಅವನ ಸಾಹಸಕಥನ ಓದುಗರಿಗೆ ಕಚಗುಳಿಯಿರಿಸಿ, ತುಟಿಯಂಚಿನಲ್ಲಿ ಕಿರುನಗೆಯನ್ನು ತುಳುಕಿಸುವಂತಿದೆ.

ಕೊನೆಯದಾದ ವೀರಬೀಡು ಬಲಭೀಮೈಯ ಅರಸು ಎಂಬ ಕತೆ ಗಾತ್ರದಲ್ಲೂ ಸತ್ತ್ವದಲ್ಲೂ ಮೊದಲನೆಯದಾದ ಹುಚ್ಚಮುನಸೀಫರ ಚರಿತ್ರೆಗೆ ಸಮಾನವಾದುದು….ಏಳು ಬಣ್ಣಗಳ ಮಳೆಯ ಬಿಲ್ಲಿನಂತೆ ಬಾಗಲೋಡಿಯವರ ಈ ಕಥಾ ಸಂಕಲನವೂ ಒಂದು ವರ್ಣಮೇಳನ. ಇಲ್ಲಿರುವ ಏಳು ಕತೆಗಳದ್ದೂ ಒಂದೊಂದು ಬಣ್ಣ, ತೂಕ ಮತ್ತು ರುಚಿ. ಆಗಲೇ ಹೇಳಿರುವಂತೆ ಅವರವರ ಸುಖದುಃಖ ಮತ್ತು ಅಜ್ಜ ನೆಟ್ಟ ಮರಗಳಲ್ಲಿ ಸ್ವಲ್ಪ ಸಾದೃಶವಿದೆಯೇ ವಿನಾ ಮಿಕ್ಕೆಲ್ಲವೂ ಬಿಡಿಯಾಗಿ ಇಡಿಯಾಗಿ ನಿಲ್ಲತಕ್ಕವು. ಎಲ್ಲ ಕತೆಗಳಲ್ಲೂ ಸ್ಥಾಯಿಯಾದ ಒಂದು ಗುಣವಿದೆ. ಅದೆಂದರೆ ನವುರಾದ ಹಾಸ್ಯ. ಕಥಾವಸ್ತು ಅಜ್ಜ ನೆಟ್ಟಮರದಲ್ಲಿರುವಂತೆ ಗಂಭೀರವೇ ಇರಲಿ, ಅಥವಾ ಭೀಮಸೇನ ಹೆಂಗರುಳನ್ನು ಕಂಡಲ್ಲಿರುವಂತೆ ಲಘುವಾದುದೇ ಆಗಿರಲಿ – ಕಾವಲಿಗೆ ಕೂರ್ಚದಿಂದ ಒಂದಿಷ್ಟು ಎಣ್ಣೆ ಸವರಿ ದೋಸೆ ಹೊಯ್ದು ಎಬ್ಬಿಸುವಂತೆ – ತಮ್ಮ ಲೇಖನಿಯಿಂದ ಕೆಲವು ಹಾಸ್ಯ ಬಿಂದುಗಳನ್ನು ಸಿಂಪಡಿಸಿಯೇ ದೇವರಾಯರು ಕಥೆಯನ್ನು ನಿರೂಪಿಸುತ್ತಾರೆ. ಮಾತಿನಲ್ಲಿರುವ ಕೊಂಕು-ಕಾಕುಗಳು ಕತೆಗೆ ಒಂದು ಹೃದ್ಯತೆಯನ್ನೂ ಆತ್ಮೀಯತೆಯನ್ನೂ ಒದಗಿಸುತ್ತವೆ. ಉದಾ: “…ಈತ ಕಣ್ಣು ತೆರೆದೇ ಮಲಗಿದವನಂತೆ, ಸ್ಥಿರವಾಗಿ, ’ತಟ್ಟೀರಾಯ’ನಂತೆ ಸಮಾಧಿಸ್ಥನಂತೆ ಕೂರುತ್ತಿದ್ದ…” (ಹುಚ್ಚ ಮುನಸೀಫ). ನಮ್ಮೂರ ಜಾತ್ರೆಗಳಲ್ಲಿ ತಟ್ಟೀರಾಯನನ್ನು ಕಂಡವರಿಗೆ ಇಲ್ಲಿಯ ಅರ್ಥಸ್ವಾರಸ್ಯ ಕರತಲಾಮಲಕವಾಗುತ್ತದೆ. “…ರೈಗಳು ತಮ್ಮ ಒಕ್ಕಲುಗಳನ್ನು ಕಟ್ಟಿ ಅವನ ಒಂದು ಕಾಲೇನೋ ಮುರಿಸಿದರೂ ಶನಿ ಮಹಾತ್ಮನ ಕಾಟ ಹೆಚ್ಚು ಆಯಿತೇ ವಿನಾ ಕುಂದಲಿಲ್ಲ….” (ಶುದ್ಧ ಫಟಿಂಗ). ಶನಿರಾಜನ ಒಂದು ಕಾಲು ಕುಂಟು ಎಂಬ ನಂಬಿಕೆಯುಂಟು. ಹುಸನೆಯ ಕಾಲು ಕುಂಟಾದರೂ ಊರಿಗೆ ‘ಶನಿಕಾಟ’ ತಪ್ಪಲಿಲ್ಲ ಎಂಬಲ್ಲಿರುವ ಅರ್ಥಸಾಮ್ಯ ಮೆಚ್ಚಬೇಕಾದುದು. “ಬಿಲದಲ್ಲಿ ಹೆಗ್ಗಣವನ್ನು ಮೆಣಸಿನ ಹೊಗೆ ಹಾಕಿ ಕೊಂದಂತೆ ಆಗಬಾರದು” – ಪಾಲಿಗೆ ಬಂದುದನ್ನು ಎದುರಿಸಬೇಕು ವಿನಾ ಅಗಾಧ ಸೋಲನ್ನೋ ಸಾವನ್ನೋ ಒಪ್ಪಿಕೊಳ್ಳುವುದಲ್ಲ ಎಂಬುದನ್ನು ತಿಳಿಸುವ ರೀತಿ ಇದು. ಲೇಖಕರ ಹಾಸ್ಯ ಪ್ರಜ್ಞೆ ಉಕ್ತಿವಿಲಾಸ ಕೆಲವೊಮ್ಮೆ ಹದ್ದುಮೀರಿದಂತೆ ತೋರುವುದೂ ಇದೆ. ಗಂಭೀರ ವಿಷಯ ಪ್ರತಿಪಾದನೆಗಳ ನಡುನಡುವೆಯೂ ‘ವಕ್ರೋಕ್ತಿಕೌಶಲ’ವು ಅಷ್ಟಾಗಿ ಒಪ್ಪುವುದಿಲ್ಲ. ಉದಾಹರಣೆಗೆ ಸತ್ಯಮೇವ ಜಯತೇ’ ಎಂಬ ಕತೆಯನ್ನು ನೋಡಬಹುದು. ಅಲ್ಲಿ ಲೇಖಕರು ಇದ್ದಕ್ಕಿದ್ದಂತೆ ಹೊಸಗನ್ನಡದಿಂದ ಹಳಗನ್ನಡಕ್ಕೆ ಹೊರಳಿಬಿಡುತ್ತಾರೆ. ಇಂಥ ದೋಷಭಾಗಗಳು ಉದ್ದೇಶಪೂರ್ವಕವಾದವು ಎನ್ನುವಂತಿಲ್ಲ. ಒಮ್ಮೊಮ್ಮೆ ನಮ್ಮ ಬಾಯ್ದೆರೆಯ ನುಡಿ, ನುಡಿಗಟ್ಟುಗಳು ಲೆಕ್ಕಣಿಕೆಯಿಂದಲೂ ಇಳಿದುಬಿಡುತ್ತವೆ. ಹೇಗೆ ನಮ್ಮ ಪಾಡೋ ಹಾಗೆ ನಮ್ಮ ಹಾಡು. ಬಾಗಲೋಡಿಯವರ ಭಾಷಾಪ್ರಭುತ್ವ, ವರ್ಣನ ಸಾಮರ್ಥ್ಯಗಳೆಲ್ಲ, ಮೇಲು ಮಟ್ಟದವು. ಅಂಥವರು ಸ್ವಲ್ಪ ಪರಿಶ್ರಮವಹಿಸಿ, ಕತೆಗಳನ್ನು ಪರಿಷ್ಕರಿಸುತ್ತಿದ್ದರೆ ಅವುಗಳ ಸೊಗಸು ಈಗಿರುವುದಕ್ಕಿಂತ ಒಂದು ಮಡಿ ಹೆಚ್ಚುತ್ತಿತ್ತು.

ಲೇಖಕರು ಕರೆನಾಡಿನ ತಂಪಿನಲ್ಲಿ ಬೆಳೆದವರು. ಕಂಪನ್ನು ಸವಿದವರು ಎಂಬುದಕ್ಕೆ ಪುಸ್ತಕದ ಏಳು ಕತೆಗಳೂ ನಿದರ್ಶನವಾಗುತ್ತವೆ. ಅವರು ಜನರ ನಡೆ-ನುಡಿ-ನಂಬಿಕೆ-ವೃತ್ತಿ-ವ್ಯವಹಾರ, ನಾಡಿನ ಇತಿಹಾಸ ಎಲ್ಲವನ್ನೂ ಚೆನ್ನಾಗಿ ಬಲ್ಲವರು; ಅಷ್ಟೇ ಚೆನ್ನಾಗಿ ವಿವರಿಸಲೂ ಶಕ್ತರು. ಹುಚ್ಚ ಮುನಸೀಫರ ಚರಿತ್ರೆಯಲ್ಲಿ ವಿವೃತವಾದ ಕೋರ್ಟು ವ್ಯವಹಾರದಲ್ಲಿ, ಅವರವರ ಸುಖದುಃಖ ಮತ್ತು ಅಜ್ಜ ನೆಟ್ಟ ಮರಗಳಲ್ಲಿ ನಿರೂಪಿತವಾದ ಕುಟುಂಬ ಜೀವನದಲ್ಲಿ, ಶುದ್ಧ ಫಟಿಂಗದಲ್ಲಿ ವರ್ಣಿತವಾದ ಮಾಪಿಳ್ಳೆ ಜನರ ರೀತಿ ನೀತಿಗಳಲ್ಲಿ, ವೀರಬೀಡು ಬಲಭೀಮೈಯ ಅರಸುವಿನ ಐತಿಹಾಸಿಕ ಕಥಾಭಿತ್ತಿಯಲ್ಲಿ ಈ ಅಂಶಗಳನ್ನು ಚೆನ್ನಾಗಿ ಮನಗಾಣುತ್ತೇವೆ. ಚರಿತ್ರಚಿತ್ರಣಗಳೂ (Character) ಖಚಿತವಾಗಿ, ವಿಶಿಷ್ಟವಾಗಿ ಎದ್ದುನಿಲ್ಲುವಂತಿವೆ. ಸುಂದರಪ್ಪ, ಶೀನ, ಹುಸನೆ ಇಂಥ ವ್ಯಕ್ತಿಗಳು ಅಷ್ಟೇ ಅಲ್ಲ, ಈ ಕಥಾಪಾತ್ರಗಳ ದ್ವಂದ್ವವ್ಯಕ್ತಿತ್ವಗಳನ್ನು (dual) ರೇಖಿಸಿದ ರೀತಿಯೂ ಸ್ವಾರಸ್ಯಕರ, ಕುತೂಹಲಕಾರಿ. ಸತ್ಯಮೇವ ಜಯತೇ ಮತು ವೀರಬೀಡು ಬಲಭೀಮೈಯ ಅರಸುಗಳ ಕಥಾಭೂಮಿಕೆ ನಮಗೆ ಅಷ್ಟೊಂದು ಪರಿಚಿತವಲ್ಲವಾದರೂ ಬಾಗಲೋಡಿಯವರ ವರ್ಣನಕಲೆಯಿಂದಾಗಿ ಆ ಕತೆಗಳು ನಮಗೆ ಪ್ರಿಯವಾಗುತ್ತವೆ.

ಸಣ್ಣ ಕತೆಗಳ ಹಿರಿಯಣ್ಣ ಮಾಸ್ತಿಯವರ ಮುನ್ನುಡಿಯ ಸಾಲುಗಳೇ ಈ ಅವಲೋಕನಕ್ಕೆ ಉಚಿತವಾದ ಉಪಸಂಹಾರ. “…. ಶ್ರೀ ಬಾಗಲೋಡಿಯವರ ಕತೆಗಳು ಅವರದೇ ಆದ ಒಂದು ವಸ್ತು ವೈಶಿಷ್ಟ್ಯ, ಕಥನಪದ್ಧತಿ, ಉಚಿತ ಶೈಲಿ, ರಸಸಿದ್ಧಿಗಳಿಂದ ನಿರಾಯಾಸವಾಗಿ ಒಂದು ಮೇಲ್ಮಟ್ಟವನ್ನು ಮುಟ್ಟುತ್ತವೆ. ಜೀವನಕ್ಕೆ ಹತ್ತಿರವಾದಷ್ಟೂ ಸಾಹಿತ್ಯಕ್ಕೆ ಕಳೆಗೂಡುತ್ತದೆ ಎನ್ನುವುದು ಸರ್ವಸಮ್ಮತವಾದ ಒಂದು ಸೂತ್ರ. ಈ ಸಂಕಲನ ಕತೆಗಳು ಈ ಸೂತ್ರಕ್ಕೆ ಒಂದು ನಿದರ್ಶನವಾಗುವಂತೆ ಒಂದು ಕನ್ನಡ ಪ್ರಾಂತದ ಬಾಳುವೆಯಲ್ಲಿ ಬೇರೂರಿ ನಿಲ್ಲುತ್ತವೆ.”

– ‘ತೋರಣ’ ಸ್ಮೃತಿ ಸಂಚಿಕೆಯಿಂದ (೧೯೯೯)

(ಮುಂದುವರಿಯಲಿದೆ)