(ಬಾಗಲೋಡಿ ವಾಙ್ಮಯ ಸಮೀಕ್ಷೆ ೨)
(ಬಾಗಲೋಡಿ ದೇವರಾಯರ ಸ್ಮರಣ ಸಂಪುಟ – ‘ದೇವಸ್ಮರಣೆ’ ೨೦೦೩ರಲ್ಲಿ ಅತ್ರಿ ಬುಕ್ ಸೆಂಟರ್ ಪ್ರಕಟಿಸಿದ ಪುಸ್ತಕದ ಯಥಾ ವಿದ್ಯುನ್ಮಾನ ಪ್ರತಿ ೨೦೧೭. ಸಂಪಾದಕ – ಜಿ.ಟಿ. ನಾರಾಯಣ ರಾವ್)
(ಭಾಗ ೧೪)
ಎಸ್. ದಿವಾಕರ್
ಹಿಂದಕ್ಕೆ ಬಾಚಿದ ಹೇರಳ ಕಪ್ಪು ಕೂದಲು. ಅರ್ಧ ಮುಖವನ್ನೇ ಮರೆಮಾಡುವಂತೆ ಇರುವ, ಬಿಳಿದಾಗುತ್ತಿರುವ ಗಡ್ಡ. ಮಾತನಾಡತೊಡಗಿದರೆ ಆಗಾಗ ಧ್ಯಾನದಲ್ಲಿ ಇರುವಂತೆ ಅರೆಮುಚ್ಚುವ ಕಣ್ಣುಗಳು. ಐದೂಕಾಲು ಅಡಿ ಎತ್ತರದ ಸಪೂರ ದೇಹ. ಐವತ್ತೈದು ವರ್ಷ ವಯಸ್ಸಿನ ಬಾಗಲೋಡಿ ದೇವರಾಯರು ಮೂಲತಃ ದಕ್ಷಿಣ ಕನ್ನಡದವರು. ೧೯೪೫ – ೫೪ರ ಸುಮಾರಿನಲ್ಲಿ ಕೆಲವು ಅತ್ಯುತ್ತಮ ಸಣ್ಣ ಕತೆಗಳನ್ನು ಬರೆದವರು. ಹುಚ್ಚ ಮುನಸೀಫ ಮತ್ತು ಇತರ ಕತೆಗಳು (೧೯೪೯) ಮತ್ತು ಆರಾಧನಾ (೧೯೫೪) ಅವರ ಪ್ರಕಟಿತ ಕಥಾಸಂಗ್ರಹಗಳು. ಸದ್ಯ ಬಲ್ಗೇರಿಯಾದಲ್ಲಿ ಭಾರತದ ರಾಯಭಾರಿಯಾಗಿರುವ ಅವರು ಇತ್ತೀಚೆಗೆ [೧೯೮೩] ಸ್ವಲ್ಪ ಕಾಲ ಬೆಂಗಳೂರಿಗೆ ಬಂದಿದ್ದರು. ಸಾಹಿತ್ಯದಿಂದ ಹಿಡಿದು ರಾಜಕಾರಣದವರೆಗೆ, ಸಂಸ್ಕೃತ ಭಾಷೆಯಿಂದ ಹಿಡಿದು ಸಮಾಜಶಾಸ್ತ್ರದವರೆಗೆ ಅನೇಕ ವಿಷಯಗಳ ಬಗ್ಗೆ ಅವರ ಕುತೂಹಲ ಹುಟ್ಟಿಸುವಂಥ ಮಾತು ಕೇಳುವುದೊಂದು ಅನುಭವ.
“ನಾನು ಬರೆದ ಮೊದಲ ಕತೆ ಶುದ್ಧ ಫಟಿಂಗ. ಅದು ೧೯೪೬ರಲ್ಲಿ ಜೀವನ ಪತ್ರಿಕೆಯಲ್ಲಿ ಪ್ರಕಟವಾಯಿತು” ಎನ್ನುವ ದೇವರಾಯರು ಸುಮಾರು ೨೮ ವರ್ಷಗಳನಂತರ, ಮೊನ್ನೆ ಮೊನ್ನೆ ಮೃಷ್ಟಾನ್ನ ಎಂಬ ಒಂದು ಕತೆ ಪ್ರಕಟಿಸಿದ್ದಾರೆ. ಇಷ್ಟು ದೀರ್ಘ ಕಾಲ ಅವರು ಕತೆ ಬರೆಯದಿರಲು ಕಾರಣ? ತಮ್ಮ ಎರಡು ಸಂಕಲನಗಳಿಗೆ ಸಿಕ್ಕಬೇಕಾದಷ್ಟು ವಿಮರ್ಶಾ ಮನ್ನಣೆ ಸಿಕ್ಕಲಿಲ್ಲವೆಂದೇ? “ಅಲ್ಲ. ಖಂಡಿತ ಅಲ್ಲ” ಎನ್ನುತ್ತಾರೆ ಅವರು. “ನನ್ನ ಮೊದಲ ಕಥಾ ಸಂಕಲನ ಹುಚ್ಚ ಮುನಸೀಫ ಪ್ರಕಟಿಸಿದವರು ಬೇರೆ ಯಾರೂ ಅಲ್ಲ, ಮಾಸ್ತಿಯವರು. ಆರಾಧನಾ ಕಥಾಸಂಕಲನವನ್ನು ಮುಂಬೈ, ಕೇರಳ ವಿಶ್ವವಿದ್ಯಾಲಯಗಳು ಪಠ್ಯ ಪುಸ್ತಕವನ್ನಾಗಿ ನೇಮಿಸಿದ್ದುವು. ಕನ್ನಡ ಸಾಹಿತ್ಯ ಪರಿಷತ್ತಿನ ಅತ್ಯುತ್ತಮ ಸಣ್ಣ ಕತೆಗಳು ಸಂಗ್ರಹದಲ್ಲಿ ಕೆ. ನರಸಿಂಹಮೂರ್ತಿಯವರು ನನ್ನದೊಂದು ಕತೆಯನ್ನೂ ಸೇರಿಸಿದ್ದಾರೆ. ಸಾಹಿತ್ಯದಲ್ಲಿ ನಾನು ಮಾಡಿರುವ ಕೆಲಸಕ್ಕೆ ಇದಕ್ಕಿಂತ ಹೆಚ್ಚಿನ ಮನ್ನಣೆ ಇನ್ನೇನು ಬೇಕು?”
ದೇವರಾಯರ ಪ್ರಕಾರ ಹೆಚ್ಚು ಬರೆಯದಿರಲು ಕಾರಣ, ಅವರಿಗಿರುವ ಸಮಯಾಭಾವ. ೧೯೪೯ರಲ್ಲಿ ‘ಇಂಡಿಯನ್ ಫಾರಿನ್ ಸರ್ವಿಸ್’ಗೆ ಸೇರಿದ ಅವರು ಇದುವರೆಗೆ ಪ್ರಥಮ ಕಾರ್ಯದರ್ಶಿಯಾಗಿ, ಹೈಕಮಿಷನರ್ ಆಗಿ, ರಾಯಭಾರಿಯಾಗಿ ಇಟಲಿ, ನೈಜೀರಿಯ, ನೇಪಾಳ, ಫಿಲಿಪ್ಪೀನ್ಸ್, ಲಾವೋಸ್, ನ್ಯೂಝೀಲ್ಯಾಂಡ್‍ಗಳಲ್ಲಿ ಕೆಲಸ ಮಾಡಿದ್ದಾರೆ. “ರಾಯಭಾರ ಕಚೇರಿಯ ಮುಖ್ಯ ಕೆಲಸಗಳು ರಾಜಕೀಯ, ಆರ್ಥಿಕ ಮತ್ತು ಸಾಂಸ್ಕೃತಿಕ ಹೀಗೆ ಮೂರು ಕ್ಷೇತ್ರಗಳನ್ನು ಒಳಗೊಂಡಿರುತ್ತವೆ, ನಾನು ಫಿಲಿಪ್ಪೀನ್ಸ್‍ನಲ್ಲಿದ್ದಾಗ ಮೊತ್ತಮೊದಲ ಬಾರಿಗೆ ಭಾರತದಿಂದ ರೇಲ್ವೇ ಕೋಚುಗಳನ್ನು ಅಲ್ಲಿಗೆ ರಫ್ತು ಮಾಡಲು ಕರಾರು ಆಯಿತು. ಮತ್ತೆ ನಮ್ಮ ಸಹಯೋಗದಿಂದ ಅಲ್ಲಿ ಅನೇಕ ಕಾರ್ಖಾನೆಗಳು ಪ್ರಾರಂಭವಾದುವು. ನ್ಯೂಝೀಲ್ಯಾಂಡ್‍ನಲ್ಲಿದ್ದಾಗ ನಮ್ಮ ಬಿಹೆಚ್‍ಇಎಲ್ ಕಾರ್ಖಾನೆ ಭಾರೀ ಟರ್ಬೈನುಗಳನ್ನು ಅಲ್ಲಿಗೆ ರಫ್ತು ಮಾಡಲು ಸಾಧ್ಯವಾಯಿತು. ಬಲ್ಗೇರಿಯಾಕ್ಕೆ ಬಂದ ಮೇಲೆ ಭಾರತದಿಂದ ಬುಲ್‍ಡೋಜರುಗಳನ್ನು, ಬಟ್ಟೆ ನೇಯುವ ಯಂತ್ರಗಳನ್ನು ಬಲ್ಗೇರಿಯಾಕ್ಕೆ ಆಮದು ಮಾಡಿಕೊಳ್ಳಲಾಗುತ್ತಿದೆ. ಇವೆಲ್ಲ ಆರ್ಥಿಕ ರಂಗಕ್ಕೆ ಸೇರಿದ ವಿಷಯಗಳು. ಇದರ ಜೊತೆಗೆ ರಾಜಕೀಯಕ್ಕೆ ಸಂಬಂಧಿಸಿದ ಎಷ್ಟೋ ಕೆಲಸಗಳನ್ನು ಮಾಡಬೇಕಾಗುತ್ತದೆ. ಮತ್ತೆ ಸಾಂಸ್ಕೃತಿಕ ಕಾರ್ಯಗಳು ಇರುತ್ತವೆ. ಉದಾಹರಣೆಗೆ ನಮ್ಮ ಉಪಕ್ರಮದಿಂದ ಈಗ ಬಲ್ಗೇರಿಯಾದ ರಾಜಧಾನಿ ಸೋಫಿಯಾದಲ್ಲಿ ಹೈಸ್ಕೂಲಿನಿಂದ ವಿಶ್ವವಿದ್ಯಾಲಯದವರೆಗೆ ಸಂಸ್ಕೃತವನ್ನು ಕಲಿಸಲಾಗುತ್ತಿದೆ. ಒಬ್ಬ ಭಾರತೀಯ ಅಧ್ಯಾಪಕರು ಈ ಕೆಲಸ ನಿರ್ವಹಿಸುತ್ತಿದ್ದಾರೆ. ಇಷ್ಟೆಲ್ಲ ತುರ್ತಾದ ಕೆಲಸಗಳಿರುವಾಗ ಬರವಣಿಗೆಗೆ ಸಮಯವೆಲ್ಲಿ?”
ಆದರೂ ದೇವರಾಯರ ಮುಖ್ಯ ಒಲವು ಸಾಹಿತ್ಯದ ಕಡೆಗೇ ಇದೆ. ಮದರಾಸು ಕ್ರಿಶ್ಚಿಯನ್ ಕಾಲೇಜಿನಲ್ಲಿ ಇಂಗ್ಲಿಷ್ ಸಾಹಿತ್ಯದಲ್ಲಿ ಪದವಿ ಪಡೆದ ಮೇಲೆ ಅವರು ಮದರಾಸು, ಕಾರೈಕುಡಿ ಮತ್ತು ಮಂಗಳೂರು ಕಾಲೇಜುಗಳಲ್ಲಿ ಇಂಗ್ಲಿಷ್ ಸಾಹಿತ್ಯವನ್ನು ಬೋಧಿಸಿದ್ದುಂಟು. ಮದರಾಸು ಕ್ರಿಶ್ಚಿಯನ್ ಕಾಲೇಜಿನಲ್ಲಿ ಇದ್ದಾಗ “ಕುಶಿ ಹರಿದಾಸ ಭಟ್ಟ, ಎಂ. ಜನಾರ್ದನ, ಸೇವ ನಮಿರಾಜ ಮಲ್ಲ ನನ್ನ ಸಹಪಾಠಿಗಳಾಗಿದ್ದರು. ನಾವು ಆ ದಿನಗಳಲ್ಲಿ ಸಾಹಿತ್ಯ, ರಾಜಕೀಯ, ಸಮಾಜವಿಜ್ಞಾನ ಮೊದಲಾದ ವಿಷಗಳನ್ನು ಚರ್ಚಿಸಿ ಸ್ವಸಂತೋಷಕ್ಕಾಗಿ ಕತೆಗಳನ್ನೂ ಬರೆಯುತ್ತಿದ್ದೆವು” ಎಂದು ಅವರು ನೆನಪಿಸಿಕೊಳ್ಳುತ್ತಾರೆ.
ಅನೇಕ ವರ್ಷಗಳ ಕಾಲ ಹೊರ ದೇಶಗಳಲ್ಲೇ ಇರುವ ಅವರಿಗೆ ಕನ್ನಡ ಭಾಷೆಯ ಸಂಪರ್ಕ ತಪ್ಪಿಹೋಗಿಲ್ಲವೆ ಎಂದರೆ ಇಲ್ಲ ಎಂದೇ ಅವರ ಉತ್ತರ. “ನನ್ನಲ್ಲಿ ಬೇಕಾದಷ್ಟು ಕನ್ನಡ ಗ್ರಂಥಗಳಿವೆ. ಅವನ್ನು ಓದುತ್ತಲೇ ಇರುತ್ತೇನೆ. ಈಚೆಗೆ ಬರೆದ ಮೃಷ್ಟಾನ್ನ ಕತೆ ಓದಿದ್ದೀರಲ್ಲ,. ಅದರಲ್ಲಿ ‘ಚರಣ ಚಾರಣ ಚಕ್ರವರ್ತಿ’ ಎಂದು ಬರುತ್ತದೆ. ಇದೆಲ್ಲಿಂದ ಬಂತು? ಇದು ಮುದ್ದಣನ ಒಂದು ಪ್ರಯೋಗ. ಎಷ್ಟೋ ವರ್ಷಗಳ ಹಿಂದೆ ಓದಿದ್ದು ಕತೆ ಬರೆಯುವಾಗ ನಿರಾಯಾಸವಾಗಿ ನೆನಪಿಗೆ ಬಂದಿತ್ತಲ್ಲ!”
ಭಾರತೀಯ ಚರಿತ್ರೆಯಲ್ಲಿ ಕನ್ನಡಿಗರ ಕುತೂಹಲ ಕೆರಳಿಸಲೆಂದೇ ಮೃಷ್ಟಾನ್ನ ಬರೆದುದಾಗಿ ಅವರು ಹೇಳುತ್ತಾರೆ. ಮತ್ತೆ ಈ ಕತೆ ರೂಪುಗೊಳ್ಳಲೂ ಒಂದು ಕಾರಣವಿದೆ. ಕಳೆದ ವರ್ಷ ಮಾಸಪತ್ರಿಕೆಯೊಂದರಲ್ಲಿ ಬಾಗಲೋಡಿಯವರ ಎರಡು ಹಳೆಯ ಕತೆಗಳು ಪುನರ್ಮುದ್ರಣವಾದುವು. ಅವುಗಳನ್ನು ವಿಮರ್ಶಕ ಗಿರಡ್ಡಿ ಗೋವಿಂದರಾಜ ಅವರು ವಿಸ್ತಾರವಾಗಿ ವಿಶ್ಲೇಷಿಸಿದ್ದರು. ಆಕಸ್ಮಿಕವಾಗಿ ಈ ವಿಶ್ಲೇಷಣೆಯನ್ನು ಓದಿದ ದೇವರಾಯರಿಗೆ ಇನ್ನಷ್ಟು ಬರೆಯಬೇಕೆನ್ನಿಸಿದ್ದು ಸಹಜವೇ. “ಅಂದಿನಿಂದ ನನ್ನ ಹೆಂಡತಿ ಪ್ರತಿ ಶನಿವಾರ, ಭಾನುವಾರಗಳಂದು ಕಾಗದ, ಲೇಖನಿ ಕೊಟ್ಟು ಏನಾದರೂ ಬರೆಯುವಂತೆ ಮಾಡುತ್ತಾಳೆ.” ಈ ಪುನರ್ಜನ್ಮದ ಪ್ರಥಮ ಫಲ ಮೃಷ್ಟಾನ್ನ!”
ಬಾಗಲೋಡಿಯವರು ಬಹುಭಾಷಾ ಪಾರಂಗತರು. ಇಂಗ್ಲಿಷ್, ಫ್ರೆಂಚ್, ಜರ್ಮನ್, ಇಟಾಲಿಯನ್, ಸ್ಪಾನಿಷ್…. ಸಂಸ್ಕೃತ ಕೂಡ. ಸಂಸ್ಕೃತದಲ್ಲಿ ಕ್ಷೇಮೇಂದ್ರನ ಕೃತಿ ಅವರಿಗೆ ಬಹುಪ್ರಿಯ. ಪ್ರಸಿದ್ಧ ಇಟಾಲಿಯನ್ ಲೇಖಕರಾದ ಇನ್ಯೇತ್ಸಿಯೋ ಸಿಲೋನೆ, ಆಲ್ಬರ್ತೋ ಮೊರಾವಿಯಾ, ಕಾರ್ಲೋ ಲೇವಿ, ಉಂಗರೆಟ್ಟಿ ಮೊದಲಾದವರು ಅವರ ಸ್ನೇಹಿತರು. ಮೊದಲಿನಿಂದಲೂ ಸಾಮಾಜಿಕ ಅನ್ಯಾಯಗಳಿಗೆಲ್ಲ ಪರಿಹಾರವಾಗಬೇಕೆಂದು ಕನಸು ಕಾಣುತ್ತಿದ್ದ ಅವರಿಗೆ ಜಾರ್ಜ್ ಬರ್ನಾರ್ಡ್ ಷಾನ ಕೃತಿಗಳಿಂದ ಪುರೋಗಾಮಿ ವಿಚಾರಗಳು ಮನವರಿಕೆಯಾದುವು. ಸದ್ಯ ಅವರ ಮೇಲೆ ಅಸಾಧಾರಣ ಪ್ರಭಾವ ಬೀರಿರುವ ಲೇಖಕನೆಂದರೆ ಕಳೆದ ವರ್ಷ ನೊಬೆಲ್ ಬಹುಮಾನ ಪಡೆದ ಗೇಬ್ರಿಯಲ್ ಗಾರ್ಸಿಯಾ ಮಾರ್ಕ್ವೆಸ್.
ಇನ್ನೇನು ಮೂರು ವರ್ಷಗಳನಂತರ ನಿವೃತ್ತರಾಗಲಿರುವ ಬಾಗಲೋಡಿಯವರು ಎರಡು ಬೃಹತ್ ಕಾದಂಬರಿಗಳನ್ನು ಬರೆಯಬೇಕೆಂದಿದ್ದಾರೆ. ಒಂದು “ವಿಶಾಲ ಭಿತ್ತಿಯಲ್ಲಿ ಇಡೀ ಭಾರತವನ್ನು ಸುತ್ತಾಡುವ, ಅನೇಕ ನೋವುಗಳಿಗೆ ಗುರಿಯಾಗುವ ಅದಮ್ಯ ಸಾಹಸಿಗಳ ಕತೆ.” ಇನ್ನೊಂದು “ಭಾರತ, ಗ್ರೀಸ್, ರೋಮ್, ಜಾವ ಮತ್ತು ಇತರ ಎಲ್ಲ ಪೌರಸ್ತ್ಯ ದೇಶಗಳನ್ನೂ ಮಡಗಾಸ್ಕರ್ ದ್ವೀಪವನ್ನೂ ಒಳಗೊಳ್ಳುವ ಮಾನವರ ಕಥೆ.” ಇದು ರಾಬರ್ಟ್ ಗ್ರೇವ್ಯನ ಐ ಕ್ಲಾಡಿಯಸ್ ಕಾದಂಬರಿಯಂತೆ ಅತ್ಯಂತ ಮಹತ್ತ್ವಾಕಾಂಕ್ಷೆಯ ಕೃತಿಯಾಗಿದ್ದು ಪಿಕಾರೆಸ್ ಧಾಟಿಯಲ್ಲಿರುತ್ತದಂತೆ. “ಈ ಬಗೆಗೆ ಈಗಾಗಲೇ ಸಿದ್ಧತೆ ನಡೆಸಿದ್ದೇನೆ” ಎಂದ ಅವರು ಇನ್ನೂ ಅಷ್ಟು ಕತೆಗಳನ್ನು ಬರೆಯಲಿದ್ದಾರೆ.
“ನಿಮ್ಮ ಅನೇಕ ಕತೆಗಳು ಒಂದು ರೀತಿಯಲ್ಲಿ ‘ಪ್ಯಾರಬಲ್’ (ದೃಷ್ಟಾಂತ ಕತೆ)ಗಳ ಹಾಗಿವೆಯಲ್ಲ?” ಎಂದು ಕೇಳಿದರೆ ಅವರು ಹೇಳುತ್ತಾರೆ. “ನನ್ನ ಎಲ್ಲ ಕತೆಗಳೂ ಒಂದೊಂದು ಉದ್ದೇಶಕ್ಕಾಗಿ ಬರೆಯಲ್ಪಟ್ಟಿವೆ. ವೈದ್ಯ, ವಿಜ್ಞಾನಿ, ಗುಮಾಸ್ತರಂತೆ ಸಾಹಿತಿಯೂ ಕೂಡ ಸಮಾಜಕ್ಕೆ ಪ್ರಯೋಜನಕಾರಿಯಾಗಬೇಕು ಎಂಬುದು ನನ್ನ ನಂಬಿಕೆ.”
(ಸುಧಾ ಜೂನ್ ೧೩, ೧೯೮೩ರಲ್ಲಿ ಪ್ರಕಟಿತ ಲೇಖನದ ಯಥಾಪ್ರತಿ ಮುಗಿಯಿತು)
ದಿವಾಕರರು ಅನುಬಂಧಿಸಿದ ಮೂರು ಪೂರಕ ಮಾಹಿತಿಗಳು:
೧.ದೇವರಾಯರ ಕನ್ನಡ ಹಸ್ತಾಕ್ಷರ ಪ್ರತ್ಯಕ್ಷಿಸುವ ಪತ್ರ – ದಿವಾಕರರಿಗೇ ಬರೆದದ್ದು. (ಲಗತ್ತು)
೨. ದೇವರಾಯರ ಇಂಗ್ಲಿಷ್ ಹಸ್ತಾಕ್ಷರ ಪ್ರತ್ಯಕ್ಷಿಸುವ ಪತ್ರ – ಎಂ ಜನಾರ್ದನರಿಗೆ ಬರೆದದ್ದು. (ಲಗತ್ತು)
೩. Letter of appreciation signed by President Marcos –
Dear Ambassador
On the eve of your departure from the Philippines to assume your new assignment may I take this opportunity to extend to you the profoundest appreciation of the Government of the Phillipines for the services which you rendered in enhancing the already warm relationships between our two countries.
In your stay in Manila as ambassador of India to the Phillipines, you showed an energy and a determination remarkable even in a service as demanding as the diplomatic corps, covering a wide and varied range of activities. Since 1970, you have developed a greater exchange of information between our two Governments and countries; promoted joint ventures among Phillipine and Indian industrialists; provided valuable consulting and other technical services for many developmental projects, most noteworthy of which were in our irrigation and railroad facilities; shown your compassion in the calamities that visited our country these past three years.
I feel safe in saying that largely because of this, the relations between our two countries have never been as cordial and as productive as they are at this point.
As I admire your dedication and patriotism in the manner with which you endeavoured to protect and enhance interest of your country. I also appreciate your sincere manifestation of personal concern and regard for the welfare of the filipino people as evidenced by your indefatigable efforts to get the public and the private sectors of your country involved in the rapid industrialization of the Phillipines. Corollarily, the concrete contents of all your efforts to promote greater understanding between our two people are now matters of official record.
But beyond all these, allow me to recall a vision I share with you and the great people of India that the many things we are trying to do in our lifetime are aimed ultimately towards what Gandhi called as the perfection of the human personality, which hopefully shall dissolve suspicion and distrust as well as form party of a foundation upon which may be built the lasting brotherhood of men and nations.
With my highest personal esteem and best wishes in your new post.
– India (Vol. IV, No. 1,1973) published by the Embassy of India, Manila
(ಮುಂದುವರಿಯಲಿದೆ)