ಶ್ಯಾಮಲಾ ಮಾಧವ ಇವರ ಆತ್ಮಕಥಾನಕ ಧಾರಾವಾಹಿ
ನಾಳೆ ಇನ್ನೂ ಕಾದಿದೆ
ಅಧ್ಯಾಯ – ೨೭

“ಗುಡ್ ಮಾರ್ನಿಂಗ್, ಅಂಕ್‌ಲ್”, ಎನ್ನುತ್ತಾ, ಮುಖ ತುಂಬ ಸೌಮ್ಯನಗು ಚೆಲ್ಲುತ್ತಾ, ಶುಶ್ರೂಷಾ ಪರಿಕರಗಳೊಡನೆ ಒಳಬರುವ ಬೀನಾ ಮತ್ತು ರೇಶ್ಮಾ, ಫಾ| ಮುಲ್ಲರ್‍ಸ್ ಆಸ್ಪತ್ರೆಯ ನರ್ಸಿಂಗ್ ಕಾಲೇಜ್‌ನ ವಿದ್ಯಾರ್ಥಿನಿಯರು. ಆ ಸಂಸ್ಥೆಯ ಶಿಕ್ಷಣ, ಶಿಸ್ತು, ವೃತ್ತಿ ಪರಿಣತಿಯ, ಸೇವಾ ಮನೋಭಾವದ ಪ್ರತಿರೂಪಗಳು. ತಂದೆಯವರಂತೆಯೇ ನಮಗೆ ಮನೆಯವರೆಲ್ಲರಿಗೂ ಪ್ರಿಯರಾಗಿದ್ದ ಚೈತನ್ಯಶೀಲರು. ಬೀನಾ, ರೇಶ್ಮಾಳಿಗಿಂತಲೂ ಚುರುಕಾದ ಉತ್ಸಾಹದ ಬುಗ್ಗೆ.

ನನ್ನ ತಂದೆಯವರು ಅಪಘಾತದಿಂದ ಚೇತರಿಸಿಕೊಳ್ಳಲು ಒಂದೂವರೆ ತಿಂಗಳು ಹಿಡಿಯಿತು. ಆದರೆ ಮನೆಗೆ ಹಿಂದಿರುಗಿದ ಒಂದು ವಾರದಲ್ಲೇ, ಮನೆಯೊಳಗೆ ಬಿದ್ದು, ತೊಡೆಯ ಎಲುಬು ಫ್ರಾಕ್ಷರ್ ಆಗಿ ಪುನಃ ಆಸ್ಪತ್ರೆ ಸೇರಿದರು. ಆಗ ನಡೆದ ಶಸ್ತ್ರಕ್ರಿಯೆಯಲ್ಲಿ ಅರಿವಳಿಕೆ ಉಪಯೋಗಿಸಲೇ ಬೇಕಾಗಿ ಬಂದಾಗ, ಬಹಳ ಅಪಾಯಕಾರಿಯಾದ ಆ ಚಿಕಿತ್ಸೆಯಲ್ಲಿ, ಡಾಕ್ಟರ್‍ಸ್ ಕೈ ಚೆಲ್ಲುವಂತಾದಾಗ, “ದೇವನೇ ಅವರನ್ನು ನಿಮಗೆ ಉಳಿಸಿ ಕೊಟ್ಟ”, ಎಂದು ಅರಿವಳಿಕೆ ತಜ್ಞ ಡಾ| ಮುಖರ್ಜಿ ಹೊರ ಬಂದು ನಮಗೆ ಹೇಳಿ ಹೋಗಿದ್ದರು! ಪುನಃ ಸುದೀರ್ಘ ಆಸ್ಪತ್ರೆವಾಸವಾಯ್ತು. ನಮಗಂತೂ ಆಸ್ಪತ್ರೆ ಎರಡನೇ ಮನೆಯಂತಿತ್ತು. ಡೈರೆಕ್ಟರ್ ರೆ. ಫಾ| ಮೊರೇಸ್ ಬೆಂಗಳೂರಿಗೆ ಸೇಂಟ್ ಜಾನ್ಸ್ ಆಸ್ಪತ್ರೆಗೆ ವರ್ಗವಾಗಿ ಹೋಗಿ, ಅವರ ಸ್ಥಾನದಲ್ಲಿ ರೆ. ಫಾ| ಮಿನೇಜ಼ಸ್ ಬಂದಿದ್ದರು. ನರ್ಸಿಂಗ್ ಸ್ಟಾಫ್ ಹೆಡ್ ಆಗಿ ನಮ್ಮ ಪ್ರಿಯ ಸಿಸ್ಟರ್ ಲೂಸಿ ಇದ್ದರು. ಆಸ್ಪತ್ರೆಯ ಮೆಡಿಕಲ್ ಸ್ಟೋರ್‌ನಲ್ಲಿ ಪ್ರಿಯ ಸಿಸ್ಟರ್ ಆನಿ ಇದ್ದರು. ಪ್ರತಿ ಬೆಳಿಗ್ಗೆ ತಂದೆಯವರ ಸ್ಪಾಂಜಿಂಗ್ ನಡೆವಾಗ ನಾನು ಇಡಿಯ ಆಸ್ಪತ್ರೆಗೆ ಸುತ್ತು ಬಂದು, ಚಾಪೆಲ್‌ಗೂ ಹೋಗಿ ಹಿಂದಿರುಗುತ್ತಿದ್ದೆ.

ಒಂದು ಬೆಳಗ್ಗೆ, ಆ ಬಿಡುವಿನ ಸಮಯದಲ್ಲಿ ನನ್ನ ಬಾಟನಿ ಲೆಕ್ಚರರ್ ಮಿಸ್. ಲೀಲಾರಾವ್ ಅವರ ನೆನಪಾಗಿ, ಅವರನ್ನು ಕಂಡು ಬರುವೆನೆಂದು ಹೋದೆ. ಕಾಲೇಜ್ ಬಿಟ್ಟು ಇಪ್ಪತ್ತೈದು ವರ್ಷಗಳು ಸಂದಿದ್ದುವು. ಆದರೂ ಬಾಗಿಲು ತೆರೆದೊಡನೆ, ಮಿಸ್ ನನ್ನನ್ನು ನೋಡಿ, “ಶ್ಯಾಮಲಾ! ಬನ್ನಿ, ಬನ್ನಿ”, ಎಂದುದ್ಗರಿಸಿದಾಗ ನನಗಾದ ಅಚ್ಚರಿ, ಸಂತೋಷಕ್ಕೆ ಪಾರವಿರಲಿಲ್ಲ! ಮುಂದೆ ನಮ್ಮ ನಡುವೆ ಪತ್ರ ವ್ಯವಹಾರ ಆರಂಭವಾಯ್ತು. ಮಂಗಳೂರಲ್ಲಿ ನಡೆದ ನನ್ನೆಲ್ಲ ಪುಸ್ತಕ ಬಿಡುಗಡೆಗಳಿಗೂ , ಮಕ್ಕಳ ಮದುವೆಗೂ, ನಮ್ಮ ಪ್ರೀತಿಯ ಮಿಸ್ ಉಷಾ ನಳಿನಿ ಜೊತೆ ಬಂದು ಹರಸಿದವರು, ನನ್ನೀ ಗೌರವಾದರದ ಮಿಸ್ ಲೀಲಾ ರಾವ್. ನಾವು ಕಾಲೇಜ್ ಬಿಟ್ಟ ಬಳಿಕ, ಅವರು ವಿವಾಹವಾಗಿ – ಲೀಲಾ ಉಪಾಧ್ಯಾಯರಾಗಿ, ಸದ್ಯ ನಿವೃತ್ತಿಯ ಬಳಿಕ ಶಾರದಾ ವಿದ್ಯಾಲಯದ ಪ್ರಾಂಶುಪಾಲೆಯೂ ಆಗಿದ್ದಾರೆ.

ತಂದೆಯವರು ಗುಣಮುಖರಾಗಿ ಮನೆಗೆ ಹಿಂದಿರುಗಿದ ಬಳಿಕ, ನಾನು ಮುಂಬೈಗೆ ಮರಳಿ ಕೆಲ ದಿನಗಳಲ್ಲೇ ವೃತ್ತಪತ್ರಿಕೆಯಲ್ಲಿ ಅಪಘಾತದ ವಾರ್ತೆಯೊಂದು ಪ್ರಕಟವಾಗಿತ್ತು. ನಮಗೆ ಆಘಾತವನ್ನುಂಟು ಮಾಡಿದ ವಾರ್ತೆಯದು! ಆಸ್ಪತ್ರೆಯಲ್ಲಿ ಫ್ಲಾರೆನ್ಸ್ ನೈಟಿಂಗೇಲ್‌ನಂತಿದ್ದ ನರ್ಸ್ ಬೀನಾ, ಘೋರ ಅಪಘಾತಕ್ಕೆ ಸಿಲುಕಿದ್ದಳು. ಜೀವಚ್ಛವವಾಗಿ ಕೋಮಾ ಸ್ಥಿತಿಯಲ್ಲಿ ಅದೇ ಆಸ್ಪತ್ರೆಯಲ್ಲಿ ಒರಗಿದ್ದಳು. ತಾನು ಶುಶ್ರೂಷೆಗೈದ ರೋಗಿಯ ಅಣ್ಣನೊಬ್ಬನೊಡನೆ ಸ್ನೇಹ ಬೆಳೆಸಿಕೊಂಡ ಬೀನಾಳ ನಡವಳಿಕೆಯ ಬಗ್ಗೆ ಮೇಲಧಿಕಾರಿಗಳಿಂದ ಎಚ್ಚರಿಕೆ ಬಂದಿದ್ದರೂ, ಹದಿಹರೆಯ ಅದನ್ನು ಗಣಿಸದೆ ಸ್ವೇಚ್ಛೆಯ ನಡೆ ನಡೆದಿತ್ತು. ಒಂದು ರವಿವಾರ ಆತನೊಡನೆ ಬೈಕ್ ಏರಿ ವಿಹಾರ ಹೊರಟು, ಹಿಂದಿರುಗಿ ಪಯಣಿಸುವಾಗ, ನಗರದ ಹೊರವಲಯದಲ್ಲಿ ಬೈಕ್ ಸ್ಕಿಡ್ ಆಗಿ ಈ ಜೋಡಿ ಧರಾಶಾಯಿಯಾಗಿತ್ತು. ಜೊತೆಗಾರನಿಗೆ ಹೆಚ್ಚಿನ ಅಪಾಯವೇನೂ ಆಗಿರಲಿಲ್ಲ. ಆದರೆ ಆ ಹೂವಿನಂತಹ ಜೀವದಲ್ಲಿ ಚಲನೆಯಿರಲಿಲ್ಲ. ಅವಳು ಸತ್ತಿರಬೇಕೆಂದು ಭಯಪಟ್ಟ ಆತ, ಅವಳನ್ನೆತ್ತಿ ಅಲ್ಲೇ ರಸ್ತೆಯಿಂದ ಕೆಳಗೆ ಆಳದಲ್ಲಿದ್ದ ಬಾವಿಗೆ ಹಾಕಿಬಿಟ್ಟ! ಅದ್ಯಾರೋ ಹೇಗೋ ಗುರುತಿಸಿ ಆಕೆಯನ್ನು ಆಸ್ಪತ್ರೆಗೇನೋ ಮುಟ್ಟಿಸಿದರು. ಆದರೆ ಚೈತನ್ಯವೇ ಮೂರ್ತಿವೆತ್ತಂತಿದ್ದ ಬೀನಾ, ಜೀವಚ್ಛವವಾಗಿದ್ದಳು. ಆಸ್ಪತ್ರೆಯೇ ಅವಳ ಶುಶ್ರೂಷೆ ನಡೆಸಿತ್ತು. ಕೋಮಾಸ್ಥಿತಿಯಲ್ಲೂ ಅಂತಃಪ್ರಜ್ಞೆಗೆ ಎಲ್ಲವೂ ಅರಿವಾಗುತ್ತದೆಂಬ ನಂಬಿಕೆ ಇರುವುದರಿಂದ ಅವಳ ಸಹವರ್ತಿಯರೆಲ್ಲ ದಿನವೂ ಅವಳ ಬಳಿ ಕುಳಿತು ಮಾತಾಡಿ ಬರುತ್ತಿದ್ದರು. ವರ್ಷಗಳ ಬಳಿಕ, ಬೀನಾ ಕೋಮಾದಿಂದ ಹೊರ ಬಂದಳು. ಅದೆಷ್ಟೋ ವರ್ಷಗಳು ಅಲ್ಲೇ ಆಸ್ಪತ್ರೆಯಲ್ಲಿದ್ದಳು. (ಈಗಲೂ ಅವರದೇ ಆರೈಕಾಕೇಂದ್ರದಲ್ಲಿ ನೋಡಿಕೊಳ್ಳುತ್ತಿದ್ದಾರಂತೆ) ಕಣ್ಣು ತೆರೆದು ಅಸ್ಪಷ್ಟವಾಗಿ ಮಾತನಾಡುತ್ತಿದ್ದ ಅವಳನ್ನು ನಾವೊಮ್ಮೆ ಕಂಡು ಬಂದಿದ್ದೆವು. ಆ ಅಸಹಾಯ ಜೀವದ ಬದಲಿಗೆ, “ಗುಡ್ ಮಾರ್ನಿಂಗ್ ಅಂಕ್‌ಲ್” ಎನ್ನುತ್ತಾ ದೀಪಧಾರಿಣಿ ಫ್ಲಾರೆನ್ಸ್‌ನಂತೆ ಬೆಳಗುತ್ತಿದ್ದ ನಮ್ಮ ಬೀನಾಳನ್ನೇ ಮನದಲ್ಲಿ ನಿಲಿಸುವ ಯತ್ನ ಮಾಡಿದರೂ, ವಾಸ್ತವವನ್ನು ಮರೆಸುವದೆಂತು? ನನ್ನಚ್ಚನ ಶುಶ್ರೂಷೆಯಲ್ಲಿ ಮತ್ತೂ ಅಡಿಗಡಿಗೆ ಫಾ| ಮುಲ್ಲರ್‍ಸ್‌ಗೆ ಹೋಗಬೇಕಾಗಿ ಬಂದರೂ, ಸದಾ ನಗು ಬೀರುವ ಆ ಸೇವಾತತ್ಪರ ಪ್ರಿಯ ಮುಖ ಮಾತ್ರ ಅಲ್ಲಿರಲಿಲ್ಲ.

ಕೆ.ಟಿ.ಗಟ್ಟಿಯವರು ಮಗಳು ಚಿತ್ಪ್ರಭಾಳನ್ನು ಮುಂಬೈಯಲ್ಲಿ ಎಮ್.ಎ. ಸೋಶಿಯಾಲಜಿ ಸೇರಿಕೊಳ್ಳಲು ಕರೆತರುವಾಗ ಯಶೋದಾ ಹಾಗೂ ಯಮುನಕ್ಕ ಕೂಡಾ ಜೊತೆಗೆ ಬಂದಿದ್ದರು. ಅವರು ಜೊತೆಗಿದ್ದ ತಿಂಗಳ ಕಾಲ ಸಂತೋಷದಿಂದ ಕಳೆಯಿತು. ಚಿತ್ತಾ ವಿಶ್ವವಿದ್ಯಾಲಯದ ಕಲೀನಾ ಕ್ಯಾಂಪಸ್‌ಗೆ ಹೋಗಿ ಬರಲಾರಂಭಿಸಿದರೆ, ತುಷಾರ್ ರೂಯಿಯಾದಲ್ಲೇ ಎಮ್.ಎ. ಇಕನಾಮಿಕ್ಸ್ ಸೇರಿಕೊಂಡ. ಯೂನಿವರ್ಸಿಟಿಗೆ ನಮ್ಮಲ್ಲಿಂದ ನೇರ ಬಸ್ ಇರಲಿಲ್ಲ; ಸಾಕಷ್ಟು ದೂರವೂ ಆದ್ದರಿಂದ ಕೆಲ ತಿಂಗಳುಗಳ ಬಳಿಕ ಚಿತ್ತಾ, ಹಾಸ್ಟೆಲ್ ಸೇರಿ ಕೊಂಡು ರಜಾ ದಿನಗಳಲ್ಲಿ ಮನೆಗೆ ಬರುತ್ತಿದ್ದಳು. ತುಷಾರ್ ಎಮ್.ಎ. ಮೊದಲ ವರ್ಷದಲ್ಲಿದ್ದಾಗ ಕುವೈಟ್ ಯುಧ್ಧ ಆರಂಭವಾಗಿ, ಅವನ ಗೆಳೆಯ ಆದಿತ್ಯನ ತಂದೆ ಭಾರತಕ್ಕೆ ಮರಳಿದವರು ಇಲ್ಲಿ ಲೆದರ್ ಬಿಸಿನೆಸ್ ಆರಂಭಿಸಿದ್ದರು. ಯುಧ್ಧ ಮುಗಿದು ಕುವೈಟ್‌ಗೆ ಮರಳುವಾಗ ತಮ್ಮ ಬಿಸಿನೆಸ್ ಮುಂದುವರಿಸುವಂತೆ ತುಷಾರ್ ಹಾಗೂ ಆದಿತ್ಯನನ್ನು ಕೇಳಿಕೊಂಡರು. ಕಾಂಪಿಟೀಶನ್ ಸಕ್ಸೆಸ್ ಪತ್ರಿಕೆಗಳನ್ನು ಅಭ್ಯಸಿಸುತ್ತಾ ಐ.ಎ.ಎಸ್. ಪ್ರಿಲಿಮ್ಸ್‌ನ ತಯಾರಿಯಲ್ಲಿದ್ದ ತುಷಾರ್‌ಗೆ ಬಿಸಿನೆಸ್ ಬೇಡವೆಂದೇ ನನ್ನ ಇಚ್ಛೆಯಾಗಿತ್ತು. ಆದರೆ ಅವನ ತಂದೆ ಪ್ರೋತ್ಸಾಹಿಸಿದರು.

೧೯೯೨ರ ಡಿಸೆಂಬರ್ ೬ರ ಕರಾಳ ದಿನ (ಅಯೋಧ್ಯೆಯಲ್ಲಿ ಬಾಬರ್ ಮಸೀದಿ ಪತನ) ಇಳಿದು ಬಂತು. ಮತಾಂಧತೆಯ ಮಡುವಿನಲ್ಲಿ ದೇಶದ ಜನತೆಯನ್ನು ಕೆಡವಿತು. ಮಾನವೀಯತೆ ಮರೆಯಾಗಿ. ಮುಂಬೈಯ ಗಲ್ಲಿ ಗಲ್ಲಿಗಳಲ್ಲೂ ದಂಗೆ, ಹಿಂಸೆ ವೈಷಮ್ಯ ಮೆರೆದುವು. ಧಾರಾವಿ, ಕುರ್ಲಾ, ಅಸಲ್ಫಾ, ಬಾಂದ್ರಾ, ಮಾಹಿಮ್ ಎಂದು ಎಲ್ಲೆಡೆ ಕೊಳ್ಳಿಯಿಟ್ಟು ಸುಟ್ಟ ಜನವಸತಿಗಳು ಮೆರೆದ ದಾನವೀಯತೆಗೆ ಸಾಕ್ಷಿಯಾದುವು. ದಂಗೆ ತಣಿದ ಬಳಿಕ ಗೋರೆಗಾಂವ್‌ನತ್ತ ಪಯಣಿಸಿದ್ದ ನಾನು, ದಾರಿಯುದ್ದಕ್ಕೂ ಸುಟ್ಟು ಕರಕಲಾದ ವಸತಿಗಳನ್ನು ಕಂಡೆ. ಮಂದಿರ, ಮಸೀದಿ ಎಂದು ಈ ಜನರು ಹೀಗೇಕೆ ದಾನವರಾಗುವರು? ಭಗವಂತ ಸರ್ವಾಂತರ್ಯಾಮಿ ಹೌದಾದರೆ ಮಂದಿರದೊಳಗಿರುವ ದೇವರು ಮಸೀದಿಯೊಳಗಿಲ್ಲವೇ? ಯಾವ ಶ್ರೀರಾಮನ ಹೆಸರಲ್ಲಿ ಇಷ್ಟೆಲ್ಲ ಉತ್ಪಾತ ನಡೆದಿದೆಯೋ, ಆತ ಆ ಅಯೋಧ್ಯೆಯಲ್ಲಿ ಕಂಡ ಸುಖವೇನು? ಬಾಲ್ಯದಲ್ಲೇ ಋಷಿ ವಿಶ್ವಾಮಿತ್ರನ ಹಿಂದೆ ಕಾಡಿಗೆ ಹೋದ. ಸೀತೆಯನ್ನು ವರಿಸಿ ಮರಳಿದಾತ ಮರಳಿ ಹದಿನಾಲ್ಕು ವರ್ಷ ಕಾಡು ಸೇರಿದ. ಸೀತಾ ಸಮೇತ ಹಿಂದಿರುಗಿದಾತ, ಪತ್ನಿಯನ್ನು ಅಗ್ನಿ ಪರೀಕ್ಷೆಗೊಳ ಪಡಿಸಿದ. ಅಗಸನ ಮಾತಿಗೆ ಕಿವಿಗೊಟ್ಟು ಪತ್ನಿಯನ್ನು ಕಾಡಿಗಟ್ಟಿದ. ಮತ್ತವಳನ್ನು ಶಾಶ್ವತವಾಗಿ ಕಳಕೊಂಡ. ಅಯೋಧ್ಯೆ ಅವನಿಗೆ ನೀಡಿದ್ದಾದರೂ ಏನು? ಅಯೋಧ್ಯೆಯ ಹೆಸರಲ್ಲಿ ಇವರೇಕೆ ಸಾಯುತ್ತಾರೆ? ಸಾಯಿಸುತ್ತಾರೆ? ದ್ವೇಷಿಸುತ್ತಾರೆ? ತೀರ ನೊಂದ ಮನದಿಂದ ಇನ್ನೆಂದೂ ಪೂಜೆಗಾಗಿ ದೇವಳಕ್ಕೆ ಕಾಲಿಡಲಾರೆ, ಎಂದು ಕೊಂಡೆ.

ತುಷಾರ್, ತನ್ನ ವ್ಯವಹಾರ ಸಂಬಂಧ ಧಾರಾವಿಯ ಗಲ್ಲಿಗಳಲ್ಲಿ ತಡರಾತ್ರಿಯವರೆಗೆ ಸುತ್ತಾಡಿ ಬಂದೂ, ಐ.ಎ.ಎಸ್. ಪ್ರಿಲಿಮ್ಸ್ ಪಾಸ್ ಆದ. ಅವನ ಐ.ಎ.ಎಸ್. ಆಕಾಂಕ್ಷೆ ಮುರುಟಿ ಹೋಯ್ತು. ಅವನು ಮೇಜರ್‍ಸ್ ತಯಾರಿಗೆ ತೊಡಗುವನೆಂಬ ನಮ್ಮ ಭರವಸೆ ಹುಸಿಯಾಗಿ ನಿರಾಶೆಯಾಯ್ತು. ಮುಂಬೈ ಲಿವಿಂಗ್ ಗೈಡ್ ಎಂಬ ಪತ್ರಿಕೆಯ ಸಂಪಾದಕನಾಗಿ ಅವನು ರೂಪಿಸಿದ ಪತ್ರಿಕೆಗಳ ಪ್ರತಿಗಳು ಮನೆಗೆ ಬಂದಾಗಲೇ ಅವನ ಈ ತೊಡಗುವಿಕೆ ನಮ್ಮರಿವಿಗೆ ಬಂದುದು. ಮುಂಬೈ ಪಿಲ್ಮ್ ಫ್ರೆಟರ್ನಿಟಿ ಸದಸ್ಯನೂ ಆಗಿದ್ದ.

ಚಿತ್ಪ್ರಭಾ ಮುಂಬೈ ಐ.ಐ.ಟಿ. ಸೇರಿ ಸೋಶಿಯಲ್ ಸೈಕಾಲಜಿ ಆಯ್ದುಕೊಂಡಾಗ, ಅವಳ ತಂಗಿ ಪ್ರಿಯಾ ಪೂನಾದಲ್ಲಿ ಎಮ್.ಎಸ್.ಸಿ. ಸೇರಿದಳು. ಕೆ.ಟಿ.ಗಟ್ಟಿ ಅವರು, ಪತ್ನಿ ಯಶೋದಾರೊಂದಿಗೆ ಬಂದು ಮಕ್ಕಳನ್ನು ಸ್ವಸ್ಥಾನಗಳಿಗೆ ಸೇರಿಸಿ ಹಿಂದಿರುಗಿದರು. ಅವರ ಹಿಂದಣ ಭೇಟಿಯಲ್ಲಿ ಎಲಿಫೆಂಟಾ ಸುತ್ತಾಡಿ ಬಂದಿದ್ದ ನಾವು, ಈ ಭೇಟಿಯಲ್ಲಿ ಕೆನರಿ ಕೇವ್ಸ್ ನೋಡಿ ಬಂದೆವು.

೧೯೯೬ರ ಬೇಸಿಗೆ ರಜೆಯಲ್ಲಿ ನಾವು ಊರಲ್ಲಿದ್ದಾಗ ಒಂದು ರಾತ್ರಿ ತಂದೆಯವರಿಗೆ ಅಸ್ತಮಾ ತೀವ್ರವಾಗಿ ಬಾಧಿಸಿ, ಅವರು ನಿಶ್ಚೇತನರಾದರು. ಎಂದಿನಂತೆ ಡಾ.ಶೆಟ್ಟಿ ಬಂದು ಇಂಜೆಕ್ಷನ್ ಕೊಟ್ಟರೂ ತಂದೆಯವರು ಚೇತರಿಸಿಕೊಳ್ಳದಾಗ ತಕ್ಷಣ ಆಸ್ಪತ್ರೆಗೊಯ್ಯುವಂತೆ ತಿಳಿಸಿದರು. ರಕ್ತಪರೀಕ್ಷೆಯಲ್ಲಿ ಬಿಳಿರಕ್ತಕಣಗಳು ವಿಪರೀತ ಏರಿರುವುದು ಪತ್ತೆಯಾಯ್ತು. ಮೈಲೋಮಾ – ಬ್ಲಡ್ ಕ್ಯಾನ್ಸರ್ – ಎಂದು ಡಾ. ಕೆ. ಎಸ್. ಭಟ್ ಸಾರಿದಾಗ ನಾವು ಕುಸಿದು ಹೋದೆವು. ಔಷಧಿಯಿಂದ ಎರಡೂವರೆ ವರ್ಷ ಬದುಕ ಬಹುದು; ಹದಿನೈದು ದಿನಕ್ಕೊಮ್ಮೆ ರಕ್ತ ಪರೀಕ್ಷೆ ಆಗ ಬೇಕು, ಎಂದು ಡಾಕ್ಟರ್ ಹೇಳಿದರು. ಕೆಲ ಸಮಯದಿಂದ ನನ್ನಚ್ಚನಿಗೆ ನಿತ್ರಾಣ ಬಾಧಿಸುತ್ತಿತ್ತು. ಎಡತೊಡೆಯ ಹಿಂಭಾಗ ಸೆಳೆತದ ನೋವಾಗುತ್ತಿತ್ತು. ಉಸಿರಾಟಕ್ಕೆ ಕಷ್ಟವಾಗುತ್ತಿತ್ತು. ಊಟ ರುಚಿಸುತ್ತಿರಲಿಲ್ಲ. ತುಂಬ ಸೆಖೆಯೆನಿಸುತ್ತಿತ್ತು. ರಾತ್ರಿಯಂತೂ ನಿದ್ದೆಯಿರದ ರಾತ್ರಿಗಳೇ ಆಗಿದ್ದುವು. ಆದರೂ ಹಗಲಲ್ಲೆಂದೂ ಅವರು ಮಲಗಿದ್ದನ್ನು ನಾವು ಕಾಣಲಿಲ್ಲ.

೧೯೯೭ರಲ್ಲಿ ಸೌದಿಯಲ್ಲಿದ್ದ ನನ್ನ ತಮ್ಮನ ಮನೆ, ಮನ ತುಂಬುವಂತೆ ಮಗು ಶುಭಾ ಮಂಗಳೂರಲ್ಲೇ ಹುಟ್ಟಿ ಬಂದಳು. ಆರೋಗ್ಯವಾಗಿದ್ದ ಮೂರು ತಿಂಗಳ ಮಗುವಿನೊಂದಿಗೆ ನಿತ್ಯಾ ಸೌದಿಗೆ ಹಿಂದಿರುಗಿದಳು.

೧೯೯೮ರಲ್ಲಿ ತುಮಕೂರಿನಲ್ಲಿ ತನ್ನ ಸೋದರಿ, ನಮ್ಮ ದೇವಕಿ ಅತ್ತೆಯ ಬಳಿ ಇದ್ದ ನಮ್ಮ ಸಂಜೀವ ಚಿಕ್ಕಪ್ಪ, ಊರಿಗೆ ಮನೆಗೆ ಬಂದವರು ಏನನ್ನೂ ನುಂಗಲಾಗುತ್ತಿಲ್ಲವೆಂದು ದ್ರವಾಹಾರ ಮಾತ್ರ ಸೇವಿಸುತ್ತಿದ್ದರು. ಮಂಗಳೂರಲ್ಲಿ ವೈದ್ಯಕೀಯ ತಪಾಸಣೆಯಾಗಿ, ಮೂರನೆಯ ಬಯಾಪ್ಸಿಯಲ್ಲಿ ಗಂಟಲ ಅನ್ನನಾಳದ ಕ್ಯಾನ್ಸರ್ ಎಂದು ಪತ್ತೆಯಾಯ್ತು. ಮೂರು ತಿಂಗಳಷ್ಟೇ ಬದುಕಿರಬಹುದು ಎಂದೂ ಡಾಕ್ಟರ್ ಸಾರಿದರು. ಚಿಕ್ಕಪ್ಪ ಮನೆಯಲ್ಲೇ ಉಳಿದರು. ಪ್ರತಿ ಬೆಳಗೂ ಅಣ್ಣ, ತಮ್ಮ ಇಬ್ಬರೂ ಎದ್ದು ಬಂದು, ಪರಸ್ಪರ ಗ್ರೀಟ್ ಮಾಡುತ್ತಿದ್ದರು. ” ಹೇಗಿದ್ದೀ, ಸಂಜೀ?” ಎಂದು ಅಚ್ಚ ಕೇಳಿದರೆ, ” ಫರ್ಸ್ಟ್ ಕ್ಲಾಸ್, ಅಣ್ಣಾ! ನೀವು?” ಎಂದ ತಮ್ಮನ ಮಾತಿಗೆ ” ನಾನೂ ಫರ್ಸ್ಟ್ ಕ್ಲಾಸ್, ಸಂಜೀ “, ಎಂದು ಅಣ್ಣ ಉತ್ತರಿಸಿ, ಇಬ್ಬರೂ ನಗುತ್ತಿದ್ದರು. ಚಿಕ್ಕಪ್ಪನ ರೇಡಿಯೇಶನ್ ನಡೆದಿತ್ತು. ತುಮಕೂರಿನಿಂದ ಬರುವಾಗ, ತಾವು ಅಚ್ಚುಕಟ್ಟಾಗಿ ಕತ್ತರಿಸಿ ತೆಗೆದಿರಿಸಿದ್ದ ಮಹತ್ವದ ಬರಹಗಳ, ಕಥೆಗಳ ಪೇಪರ್ ಕಟ್ಟಿಂಗ್‌ಗಳನ್ನು ಚಿಕ್ಕಪ್ಪ ನನಗಾಗಿ ತೆಗೆದುಕೊಂಡು ಬಂದಿದ್ದರು. ಉಳಿದವನ್ನು ಮತ್ತೆ ತರಿಸಿಕೊಂಡು ನನಗಿತ್ತರು. ಅವರ ಅಸಂಖ್ಯ ಪತ್ರಗಳೂ ನನ್ನಲ್ಲಿ ಜೋಪಾನವಿವೆ. ಅಂತಹ ಅಸೌಖ್ಯದಲ್ಲೂ ಧೃತಿಗೆಡದೆ, ಸ್ಥಿರಚಿತ್ತರಾಗಿ, ಇನ್ನೊಬ್ಬರಿಗೆ ಹೊರೆಯಾಗದೆ ಬಾಳಿದ ನನ್ನ ಚಿಕ್ಕಪ್ಪ, ಡಾಕ್ಟರ್ ಹೇಳಿದಂತೆ ನಿಖರವಾಗಿ ಮೂರು ತಿಂಗಳಷ್ಟೇ ಬದುಕಿದ್ದು, ಮತ್ತೆ ನಮ್ಮನ್ನಗಲಿದರು.

(ಮುಂದುವರಿಯಲಿದೆ)