(ಪರ್ವತಾರೋಹಣ ಸಪ್ತಾಹದ ಆರನೇ ಅಧ್ಯಾಯ)

ದ.ಕ ಜಿಲ್ಲೆಯಲ್ಲಿ ಎರಡು ಮಹಾಬಂಡೆ ಗುಡ್ಡೆಗಳಿವೆ. ಅತ್ಯುನ್ನತಿ ಮತ್ತು ಅಖಂಡತೆಯಲ್ಲಿ ಜಮಾಲಾಬಾದ್ ಹೆಸರಾಂತ ಮಹಾಬಂಡೆ. ಆದರೆ ಶಿಲಾರೋಹಿಗಳಿಗೆ ವೈವಿಧ್ಯಮಯ ಸವಾಲುಗಳನ್ನು ಎಸೆಯುವಲ್ಲಿ ಅದ್ವಿತೀಯ ಸ್ಥಾನದಲ್ಲಿರುವುದು ಮೂಡಬಿದ್ರೆಯ ಕೊಡಂಜೆ ಕಲ್ಲು. ನಮ್ಮ ಪರ್ವತಾರೋಹಣ ಸಪ್ತಾಹದ ಆರನೇ ದಿನದ ಕಲಾಪ ನಡೆದದ್ದು ಇದೇ ಮೂಡಬಿದ್ರೆಯ ಶ್ರೀ ಮಹಾವೀರ ಕಾಲೇಜಿನಲ್ಲಿ. ಸಹಜವಾಗಿ ಅಲ್ಲಿ ಹಿಂದೆ ನಮಗೆ ಕೊಡಂಜೆ ಕಲ್ಲಿನಲ್ಲೇ ದಕ್ಕಿದ ರೋಚಕ ಅನುಭವ, ಮಧುಚುಂಬನವನ್ನು – ರಾಕ್ಷಸ ನೊಣಗಳು, ಎಂಬ ಹೆಸರಿನಲ್ಲೇ ವಿಶೇಷ ಭಾಷಣವಾಗಿಸಿದೆ. ಮಹಾವೀರ ಕಾಲೇಜಿನ ಎದುರಿನ ವಲಯ ನ್ಯಾಯ ಬಸದಿ ಅಥವಾ ಜನಪದರು ಹೇಳುವಂತೆ, ನಾಯಿಬಸದಿ. ಇಲ್ಲಿನ ಕರಿಕಲ್ಲ ವಲಯದಲ್ಲಿ ಕೆಲವು ಐತಿಹಾಸಿಕ ರಚನೆಗಳು, ಪ್ರಾಕೃತಿಕ ಬಂಡೆ ಹಾಸು ಮತ್ತು ಮಹಾಗುಂಡುಗಳೂ ಇವೆ. ಅವುಗಳಲ್ಲಿ ಭಜಕರ ವಲಯದಿಂದ ಹೊರಗಿದ್ದ ಒಂಟಿ ಮಹಾಬಂಡೆ – ಕೊಡಂಗಲ್ಲು, ನಮ್ಮ ವಿಶೇಷ ಆಸಕ್ತಿಯ ಕೇಂದ್ರವಾಗಿತ್ತು. ಸಪ್ತಾಹದ ಆರೂ ದಿನಗಳಲ್ಲಿ ನಮ್ಮ ಹೊರವಲಯದ ಕಲಾಪಗಳೆಲ್ಲ ಗೋಡೆ, ಬಾಲ್ಕನಿಗಳನ್ನೇ ಆಶ್ರಯಿಸಿದ್ದವು. ಮೂಡಬಿದ್ರೆಯಲ್ಲಿ ಅದನ್ನು ನಾವು ಕೊಡಂಗಲ್ಲಿಗೆ ವ್ಯಾಪಿಸುವಂತೆ ರೂಪಿಸಿಕೊಂಡಿದ್ದೆವು. ಶಿಲಾವರೋಹಣದ ಪ್ರದರ್ಶನಗಳನ್ನೇನೋ ಕಾಲೇಜು ಗೋಡೆಯಲ್ಲೇ ಮಾಡಿದ್ದೆವು. ಬಂಡೆ ಏರುವ ಅಣಕಕ್ಕೆ ಎಲ್ಲೋ ಒಂದು ಕಡೆ ಎರಡು ಮಹಡಿ ಎತ್ತರಕ್ಕೇರಿದ್ದ ಸಿಮೆಂಟ್ ಗ್ರಿಲ್ಲುಗಳನ್ನು ಬಳಸಿದ್ದಷ್ಟೇ ಆಗಿತ್ತು. ಕೊಡಂಗಲ್ಲಿನಲ್ಲಿ ಪ್ರಾಕೃತಿಕ ಸ್ಥಿತಿಯ ಮೇಲೆ ಪ್ರಯೋಗಿಸಿ ನೋಡುವ ಪ್ರಯತ್ನ ಮಾಡಿದ್ದೆವು.

ನಾಗರಿಕತೆಯ ಬಳಕೆಗೆ ಕಲ್ಲ ಚಪ್ಪಡಿಯಿಂದ ತೊಡಗಿ ಜಲ್ಲಿಪುಡಿಯವರೆಗೆ ಸಾಕಷ್ಟು ಮೈಕೊಟ್ಟ ವಿಸ್ತಾರ ಕಲ್ಲ ಹಾಸದು. ಅದರ ಒಂದು ಏಣಿನಂಚಿನಲ್ಲಿ ಕೊಡಂಗಲ್ಲು ನಿಂತಿದೆ. ಕಿರಿದಾದ ತಳದ ಮೇಲೆ ಹಿರಿದಾದ ತಲೆ ಹೊತ್ತ, ಸುಮಾರು ಐವತ್ತರವತ್ತಡಿ ಎತ್ತರದ ಈ ಭಾರೀ ಏಕಶಿಲೆಯ ನೆತ್ತಿ ಸಾಮಾನ್ಯರಿಗೆ ಸುತ್ತಣಿಂದಲೂ ಅಗಮ್ಯ. ಅದರ ಹಿಮ್ಮೈ ಅಥವಾ ಮಹಾವೀರ ಕಾಲೇಜಿಗೆ ಮರೆಯಾದ ಮುಖದಲ್ಲಿ ಕೆಳಗಿನಿಂದ ಮೇಲಕ್ಕೊಂದು ತುಸು ಆಳದ ಕೊರಕಲಿತ್ತು. ನಾವದನ್ನು ಅನುಸರಿಸಿ ಬಂಡೆಯ ನೆತ್ತಿ ಮೆಟ್ಟುವುದೆಂದು ಮೊದಲು ಪ್ರಯತ್ನಿಸಿದೆವು. ಪ್ರದರ್ಶನಕಲೆಯಲ್ಲಿ ನಮ್ಮ ಅನನುಭವ ಕೈಕೊಟ್ಟಿತು. ಈ ಬಂಡೆಯಲ್ಲಿ ಯಾವ ಪೂರ್ವಾಭ್ಯಾಸವನ್ನೂ ನಡೆಸದೆ, ನೂರಾರು ಕಣ್ಣುಗಳು `ಪವಾಡ’ದ ನಿರೀಕ್ಷೆಯಲ್ಲಿರುವಾಗ ಪ್ರದರ್ಶನಕ್ಕಿಳಿದ ನಾವು ವಿಫಲರಾಗಿ, ತುಸು ಗೇಲಿಗೊಳಗಾದೆವು. ಕೇವಲ ಹತ್ತು ಹದಿನೈದಡಿಯಿಂದ ಮೇಲೆ ನಮ್ಮ ಆಟ ಸಾಗಲಿಲ್ಲ. ನಾವು ಇನ್ನೊಂದೇ ದಿನ ಪುರುಸೊತ್ತಿನಲ್ಲಿ ಬಂದು ಸಾಧಿಸುತ್ತೇವೆ ಎಂದು ವಿನಯದಲ್ಲೇ ಪ್ರಕಟಿಸಿ ಹಿಂದೆ ಬಂದೆವು. ವಾಸ್ತವದಲ್ಲಿ ಎರಡೇ ವಾರ ಕಳೆದು (೨೮-೧೨-೧೯೮೦) ನಾವು ಕೊಡಂಗಲ್ಲನ್ನೇ ಲಕ್ಷ್ಯವಾಗಿಟ್ಟುಕೊಂಡು ಮತ್ತೆ ಮೂಡಬಿದ್ರೆಗೆ ಹೋಗಿದ್ದೆವು. ಆಗಲೂ ಕೊರಕಲಿನ ಮೂಲಕ ಏರಲಾಗಲಿಲ್ಲ. ಆದರೆ ನಾವು ಪರ್ಯಾಯ ಉಪಾಯ, ಸೂಕ್ತ ಸಲಕರಣೆಗಳನ್ನು ಯೋಚಿಸಿಯೇ ಹೋಗಿದ್ದೆವು. ಮೀನುಗಾರರ ಗಾಳದ ಹಗ್ಗವೊಂದಕ್ಕೆ ತೂಕದ ಕಲ್ಲು ಕಟ್ಟಿ ಬಂಡೆಯ ನೆತ್ತಿ ಹಾಯುವಂತೆ ಎಸೆದೆವು. ಅನಂತರ ಅದನ್ನು ನಮ್ಮ ದಪ್ಪದ ಶಿಲಾರೋಹಣ ಹಗ್ಗಗಳು ಅನುಸರಿಸಿದವು. ಹೀಗೆ ಚಾಚಿಕೊಂಡ ಜೋಡಿ ಹಗ್ಗಗಳ ಒಂದು ತುದಿಯನ್ನು ನೆಲದ ಭದ್ರ ಆಧಾರಕ್ಕೆ ಬಿಗಿದು, ಬಂಡೆಯ ಇನ್ನೊಂದು ಮಗ್ಗುಲಿನಲ್ಲಿ ಕೃತಕ ಆರೋಹಣವನ್ನು ಪ್ರಯೋಗಿಸಿ ಏರುವಲ್ಲಿ ಯಶಸ್ವಿಯಾದೆವು. ಪ್ರೂಸಿಕ್ ಕ್ಲೈಂಬಿಂಗ್ ಎಂದೇ ಹೆಸರಾದ ಈ ತಂತ್ರದ ವಿವರಗಳು ಇಲ್ಲಿ ಅನಾವಶ್ಯಕ. ಮತ್ತೆ ಬಂಡೆ ಇಳಿಯುವಲ್ಲಿ ನಮ್ಮ ಪ್ರಿಯ ರ್ಯಾಪ್ಲಿಂಗ್ ವಿಧಾನಗಳು ಇದ್ದೇ ಇತ್ತು. ಈ ಸಾಧನೆಯ ಮರುದಿನವೇ ನಾನು ಮಹಾವೀರ ಕಾಲೇಜಿನ ಪ್ರಕಟಣಾ ಫಲಕಕ್ಕೆಂಬಂತೆ ಸಚಿತ್ರ ವರದಿಯನ್ನೂ ಕಳಿಸಿಕೊಟ್ಟಿದ್ದೆ! ಅದಿರಲಿ….

ಸಪ್ತಾಹದಂದು ಕೊಡಂಗಲ್ಲಿನ ನಮ್ಮ ಸಣ್ಣ ವೈಫಲ್ಯವನ್ನು ಕೆಲವು ಪೋಕರಿಗಳು ಪ್ರಚೋದನೆಯಾಗಿ ಸ್ವೀಕರಿಸಿದ್ದಿರಬೇಕು. ಅವರು ನಾವು ಕಾಲೇಜಿನ ವಠಾರಕ್ಕೆ ಮರಳುವುದರೊಳಗೆ, ಅಲ್ಲಿ ನದಿ ದಾಟುವ ಪ್ರದರ್ಶನಕ್ಕೆಂದು ಕಟ್ಟಿ ಬಂದಿದ್ದ ಹಗ್ಗವನ್ನು ದುರ್ಬಳಕೆ ಮಾಡಿದ್ದರು. ಮಾಳಿಗೆಯ ಬಾಲ್ಕನಿಯೊಂದರಿಂದ ಎತ್ತರದ ಮರದ ಕಾಂಡಕ್ಕೆ ಕಟ್ಟಿದ್ದ ಹಗ್ಗ ಒಬ್ಬಿಬ್ಬರ ತೂಕ ಧಾರಾಳ ತಾಳಿಕೊಳ್ಳುವಂತಿತ್ತು. ಆದರೆ ಇವರು ಒಮ್ಮೆಗೇ ನಾಲ್ಕೈದು ಮಂದಿ ಜಗ್ಗಾಡಿದ್ದಿರಬೇಕು. ಅದೃಷ್ಟವಶಾತ್ ಹಗ್ಗ ಕಡಿದು, ಅಪಘಾತವೇನೂ ಆಗಿರಲಿಲ್ಲ; ಹಗ್ಗ ಮರದ ಕಾಂಡದಲ್ಲಿ ಕೆಳಕ್ಕೆ ಜಾರಿತ್ತು. ನಾವು ನದಿ ದಾಟುವ ಪ್ರದರ್ಶನವನ್ನು ರದ್ದುಪಡಿಸಬೇಕಾಯ್ತು. ಇಂದಿಗೂ ಸಪ್ತಾಹದ ಯಶಸ್ಸಿನ ಕುರಿತು ನನ್ನಷ್ಟಕ್ಕೇ ಹಾಡಿಕೊಳ್ಳುವಾಗ ಮಹಾವೀರ ಕಾಲೇಜಿನ ನೆನಪು ಅಪಸ್ವರ ಮಿಡಿಯುತ್ತದೆ. ಆದರೆ ಒಟ್ಟಾರೆ ಆರೋಹಣ ಬಳಗದಲ್ಲಿ ಮತ್ತು ಸಮೂಹ ಮಾಧ್ಯಮಗಳು ಬಿಂಬಿಸುವಂತೆ ಸಾರ್ವಜನಿಕರಲ್ಲಿ ಸಪ್ತಾಹ ಬಹಳ ದೊಡ್ಡ ಯಶಸ್ಸನ್ನೇ ಕಂಡಿತ್ತು. ಇದಕ್ಕೆ ಸಾಕ್ಷಿಯಾಗುವ ಆ ಕಾಲದ್ದೇ ಎರಡು ವರದಿಗಳನ್ನು ದಾಖಲಿಸುತ್ತಿದ್ದೇನೆ. ವಿಬಿ ಹೊಸಮನೆ ದಂಪತಿ ಬಡ ಶಾಲಾಧ್ಯಾಪಕರು. ಆದರೆ ಇವರ ಸಾಹಿತ್ಯ, ಕಲಾಸಕ್ತಿಗಳ ಹಪಹಪಿ ಹಲವು ತೆರನ ಸಾರ್ವಜನಿಕ ವೇದಿಕೆಗಳನ್ನು, ಚಟುವಟಿಕೆಗಳನ್ನು ನಡೆಸುತ್ತಲೇ ಇತ್ತು. ಅದರಲ್ಲೊಂದು ಮುಖ, ಇವರು ಎರಡು ದಶಕಗಳಿಗೂ ಮಿಕ್ಕು ನಡೆಸಿದ ಕನ್ನಡ ಮಾಸ ಪತ್ರಿಕೆ – ಕಲಾದರ್ಶನ. ಅದು ತನ್ನ ೧೯೮೦ರ ದಶಂಬರ ಸಂಚಿಕೆಯಲ್ಲಿ, ಸಾಹಿತ್ಯ ಮತ್ತು ಪ್ರವಾಸ ಮಾಲಿಕೆಯ ನಾಲ್ಕನೇ ಅಂಕಣದಲ್ಲಿ ಪ್ರಕಟಿಸಿದ ಲೇಖನ ನೋಡಿ:

ವನಸಿರಿಯ ದರ್ಶನ – ಪರ್ವತಾರೋಹಣ ಸಾಹಸ ಪ್ರದರ್ಶನ – ಲೇಖಕ “ವಿಪ್ರ” (ವಿಬಿ ಹೊಸಮನೆಯವರ ಒಂದು ಕಾವ್ಯನಾಮ):

ಮಂಗಳೂರಿನ ಅತ್ರಿ ಪುಸ್ತಕ ಕೇಂದ್ರದ ಜಿ.ಎನ್. ಅಶೋಕವರ್ಧನ ಅವರ ಸಾಹಸೋದ್ಯಮದ ಸಪ್ತಾಹ – ಆರೋಹಣ ಸಪ್ತಾಹ, ನೂರಾರು ಮಂದಿ ಪರ್ವತಾರೋಹಿಗಳ ಒಡನಾಟದೊಂದಿಗೆ ದಶಂಬರ ಏಳರಿಂದ ಹದಿನಾಲ್ಕರವರೆಗೆ ಮಂಗಳೂರು, ಉಡುಪಿ, ಮುಲ್ಕಿ, ಪುತ್ತೂರು, ಕುಂದಾಪುರ, ಮೂಡಬಿದ್ರೆ, ಉಜಿರೆಗಳಲ್ಲಿ, ಕಾಲೇಜುಗಳ ಸಹಕಾರದೊಂದಿಗೆ ನಡೆಯಿತು. ೧೯೭೬ರಿಂದಲೂ ಇವರು ಪ್ರತಿ ಭಾನುವಾರ, ವಿರಾಮದಿನಗಳಂದು ದಕ ಜಿಲ್ಲೆಯ ವನಶ್ರೇಣಿಗಳನ್ನು, ಗಿರಿಶ್ರೇಣಿಗಳನ್ನು ಜಯಿಸಿ, ಬಂಡೆಗಳನ್ನೇರಿ, ಗುಹೆಗಳನ್ನು ನುಗ್ಗಿ, ಬಿಸಿಲಿನ ಝಳಕ್ಕೆ, ನೀರಿನ ಪ್ರವಾಹಕ್ಕೆ, ಚಳಿಮಳೆಗಳ ಹೊಡೆತಕ್ಕೆ, ಕಾಡುಮೃಗಗಳ ಘರ್ಜನೆಗೆ ಒಂದಕ್ಕೂ ಅಂಜದೆ ನಡೆಸಿದ ಈ ಸಾಹಸ ಸ್ತುತ್ಯ. ವನಮಹೋತ್ಸವದ ಇದೊಂದು ಪರಿಯನ್ನು ಜನ ಪ್ರೋತ್ಸಾಹಿಸಿ ಬೆಂಬಲಿಸಿದ್ದಾರೆ. ಪರ್ವತಾರೋಹಣ ಚಟುವಟಿಕೆಗಳ ಪ್ರದರ್ಶನ ಹಾಗೂ ಭಾಷಣಗಳು ಸೈಂಟ್ ಎಲೋಶಿಯಸ್ ಕಾಲೇಜಿನಲ್ಲಿ ಉದ್ಘಾಟನೆಯಾಗಿ, ಉಡುಪಿಯ ಎಂ.ಜಿ.ಎಂ ಕಾಲೇಜಿನಲ್ಲಿ ಜಮಾಲಾಬಾದ್ ಕೋಟೆಯನ್ನೇರಿಸಿ, ಮುಲ್ಕಿಯ ವಿಜಯಾ ಕಾಲೇಜಿನಲ್ಲಿ ಹಿರಿಮರುದುಪ್ಪೆಗೆ ಕರೆದೊಯ್ದು, ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ಗುಹಾಗರ್ಭವನ್ನು ಹೊಗಿಸಿ, ಕುಂದಾಪುರದ ಭಂಡಾರ್ಕರ್ ಕಾಲೇಜಿನಲ್ಲಿ ಜಲಪಾತವನ್ನು ಬೆಂಬತ್ತಿ, ಮೂಡಬಿದ್ರೆಯ ಮಹಾವೀರ ಕಾಲೇಜಿನಲ್ಲಿ ರಾಕ್ಷಸ ನೊಣಗಳೊಡನೆ ಹೋರಾಡಿ, ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನಲ್ಲಿ ಚಾರ್ಮಾಡಿಯಿಂದ ಶಿರಾಡಿಗೆ (ಇದು ನನ್ನ ಭಾಷಣದ ವಿಷಯ – ಲೇಖಕರಿಗೆ ತಪ್ಪು ಗ್ರಹಿಕೆಯಾಗಿರಬೇಕು) ರಾತ್ರಿ ನಡಿಗೆಯನ್ನು, ಏರುಕಲ್ಲು ಆರೋಹಣ – ಜಾರುಕಲ್ಲು ಅವರೋಹಣಾದಿಗಳನ್ನು ತೋರಿಸಿ ಸಮಾರೋಪಗೊಳಿಸಿದರು.

ನಮ್ಮ ಪರಿಸರದಲ್ಲೇ ಇದ್ದ ಪ್ರಕೃತಿ ರಮಣೀಯ ದೃಶ್ಯಗಳನ್ನೆಷ್ಟೊ ನಾವು ನೋಡದೇ ಬಿಡುವುದಿದೆ. ಪ್ರಕೃತಿಯೊಡನೆ ಮಾನವ ಸಂಪರ್ಕ ದೂರ ದೂರವಾಗುತ್ತ ಬರುತ್ತಿರುವ ಈ ಕಾಲದಲ್ಲಿ ಇದೊಂದು ಆದರ್ಶಮಯ ಸಾಹಸವೇ ಸರಿ. ಎಳೆಯರ ಪೀಳಿಗೆ ಈ ಸಾಹಸದಲ್ಲಿ ಅಧಿಕ ಉತ್ಸಾಹ ತಳೆಯಬೇಕಾದುದು ಇಂದು ಅವಶ್ಯ. ಅದಿಲ್ಲವಾದರೆ ಪ್ರಕೃತಿ ಪ್ರೇಮವೇ ಅಳಿದು ಎಲ್ಲೆಲ್ಲೂ ಅಶಾಂತಿ ತಲೆದೋರಲಾಸ್ಪದವಿದೆ ಎಂಬುದು ಎಚ್ಚತ್ತುಕೊಳ್ಳಬೇಕಾದ ಅಂಶ. ಇದು ಸಾಹಿತ್ಯ ಕಲೆಗಳ ಸಾಹಸಮಯ ಚಿತ್ರಣವೇ ಸರಿ. (ಕಲಾದರ್ಶನದ ಲೇಖನ ಮುಗಿಯಿತು)

ನವಭಾರತ ಪತ್ರಿಕೆ ತನ್ನ ೨೪-೧೨-೧೯೮೦ರ ಸಂಚಿಕೆಯಲ್ಲಿ ಪ್ರಕಟಿಸಿದ ವರದಿಯ ಕೆಲವು ಅಂಶಗಳು –
ಪರ್ವತಾರೋಹಣ ಸಪ್ತಾಹ ನಿರೀಕ್ಷೆ ಮೀರಿ ಯಶಸ್ವಿ:

ಪರ್ವತಾರೋಹಣ ಸಾಹಸದ ಪ್ರಚಾರಕ್ಕೋಸ್ಕರ ಆರೋಹಣ ಪರ್ವತಾರೋಹಿಗಳು ಸಾಹಸಿಗಳು, ಮಂಗಳೂರು ಇವರು ತಾ ೭ರಿಂದ ೧೪ರವರೆಗೆ ಜಿಲ್ಲೆಯಲ್ಲಿ ನಡೆಸಿದ ಪರ್ವತಾರೋಹಣ ಸಪ್ತಾಹವು ಯಶಸ್ವಿಯಾಗಿ ಜರುಗಿತು. ಜಿಲ್ಲೆಯ ವಿವಿಧ ಕಾಲೇಜುಗಳಲ್ಲಿ… ಕಾರ್ಯಕ್ರಮಗಳುದ್ದಕ್ಕೂ ಮಾತು ಕ್ರಿಯೆಯ ಪ್ರತಿನಿಧಿಯಾಗಿತ್ತು. `ನೀವೇ ಅನುಭವಿಸಿ’ ಕಲಾಪದಲ್ಲಿ ಭಾಗವಹಿಸಿದವರು “ಮುಂದೆಂದು, ಇಂಥ ಇನ್ನೊಂದು” ಎಂದು ಒಕ್ಕೊರಳಿನಿಂದ ಕೇಳಿದರೆಂದು ತಂಡದ ನಾಯಕ ಅಶೋಕವರ್ಧನರು ತಿಳಿಸಿದ್ದಾರೆ. ಪರ್ವತಾರೋಹಣ ಸಲಕರಣೆ ಖರೀದಿಗೆ ರೂ ೧೦೦೦ ನೀಡಿದ ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀ ಡಿ.ವೀರೇಂದ್ರ ಹೆಗ್ಗಡೆ, ಸಪ್ತಾಹದಲ್ಲಿ ಧನ ಸಹಾಯ ಹಾಗೂ ಸಂಚಾರ ಸಲಕರಣೆಗೆ ನೀಡಿದ ಜಿ.ಎ. ಪೈ ಎಂಡ್ ಕೋ, ಮಂಟಪ ಸ್ಟೋರ್ಸ್, ಅತ್ರಿ ಬುಕ್ ಸೆಂಟರ್, ಹೈಲ್ಯಾಂಡ್ ಕಾಫಿ ವರ್ಕ್ಸ್, ಎಸ್.ಎಲ್ ಶೇಟ್, ಪಿವಿಯೆಸ್ ಬೀಡೀಸ್, ಅಜಂತ ಬಿಸ್ಕತ್ ಕಂಪನಿ ಹಾಗೂ ಎಸ್.ಡಿ.ಎಂ ಮುಂತಾದ ಕಾಲೇಜಿನವರಿಗೆ ಅವರು ಆರೋಹಣದ ಪರವಾಗಿ ಕೃತಜ್ಞತೆ ಸಲ್ಲಿಸಿದ್ದಾರೆ. ಮುಂದೆ ಸಾಹಸ ಯಾತ್ರೆಗಳನ್ನು ದೊಡ್ಡದಾಗಿ ನಡೆಸಲು ಆರೋಹಣ ಸಜ್ಜಾಗಿದೆಯೆಂದೂ ತಿಳಿಸಿದ್ದಾರೆ.

 

(ಮುಂದುವರಿಯಲಿದೆ)