(ಪರ್ವತಾರೋಹಣ ಸಪ್ತಾಹದ ಎರಡನೇ ಭಾಗ)

ಪರ್ವತಾರೋಹಣ ಸಪ್ತಾಹದ ಮೊದಲ ದಿನದ ಸಭಾ ಕಲಾಪಕ್ಕೆ, ಅಂದರೆ ಸಂತ ಅಲೋಶಿಯಸ್ ಕಾಲೇಜಿನ ವಿಶೇಷ ಭಾಷಣಕ್ಕೆ, ನಾನು ಪರ್ವತಾರೋಹಣದ ಕೆಲವು ವಿಶೇಷ ಅನುಭವಗಳನ್ನು ಸೂಕ್ಷ್ಮವಾಗಿ ಮಾತಿನ ಹಂದರಕ್ಕೆ ಅಳವಡಿಸಿದ್ದೆ. ಅವುಗಳಲ್ಲಿ ಅಮೆದಿಕ್ಕೆಲ್ ಏರಲು ಹೋದಾಗ ಆನೆ ಬೆನ್ನಟ್ಟಿದ್ದು, ಮಳೆಗಾಲದ ಜಮಾಲಾಬಾದ್ ಏರಿದ್ದು, ಕುಮಾರಪರ್ವತದಲ್ಲಿ ಕಾಲುಳುಕಿದ್ದನ್ನೆಲ್ಲ ಇಲ್ಲಿ ವಿವರಗಳಲ್ಲಿ ನೀವೀಗಾಗಲೇ ಓದಿದ್ದಾಗಿದೆ. (ಆಸಕ್ತರು ಆಯಾ ಹೆಸರಿನ ಮೇಲೇ ಚಿಟಿಕೆ ಹೊಡೆದು ಈಗಲೂ ಓದಿಕೊಳ್ಳಬಹುದು.) ಹಾಗೆಯೇ ನಾನು ಸೂಕ್ಷ್ಮವಾಗಿ ಉಲ್ಲೇಖಿಸಿದ್ದ ಏರಿಕಲ್ಲನ್ನು ಪ್ರಥಮ ಬಾರಿಗೆ ಏರಿದ ಅನುಭವವನ್ನು ಮಾತ್ರ ಇಲ್ಲಿ ವಿಸ್ತರಿಸುತ್ತೇನೆ.

ಕರಾವಳಿಯಿಂದ ಚಾರ್ಮಾಡಿ ಘಾಟಿ ಬಳಸುವವರ ಪಾದನಮಸ್ಕಾರ ಸ್ವೀಕರಿಸುವ ಶಿಖರ ಏರಿಕಲ್ಲು (೩೧೩೭ ಅಡಿ ಸಮುದ್ರ ಮಟ್ಟದಿಂದ). ಹಾಗೇ ಕರಾವಳಿಯತ್ತ ಇಳಿದು ಬರುವವರಿಗೂ ಕೊಟ್ಟಿಗೆಹಾರದ ದೂರದಿಂದಲೇ ಎಡದಿಗಂತವನ್ನು ನಿರ್ಧರಿಸುತ್ತ, ಕಣ್ತುಂಬಿ ಬೆರಗು ಹುಟ್ಟಿಸುವ ಏಕೈಕ ಶಿಖರ ಏರಿಕಲ್ಲು. `ಪರ್ವತಾರೋಗಿಗೆ’ – ಅಂದರೆ ತುಳುವರು ಹೇಳುವಂತೆ `ಮಲೆಬಡಪ್ಪುನೆ ಸೀಕ್’ ತಗುಲಿದವರಿಗೆ ಅಷ್ಟೇ ಸಾಕಾಗುವುದಿಲ್ಲ, ಅದರ ನೆತ್ತಿಯ ಎತ್ತರದಿಂದ ಸುತ್ತ ದಿಟ್ಟಿ ಬೀರುವ ಸಂತೋಷವೂ ಬೇಕಾಗುತ್ತದೆ!

೧೯೭೮ನೇ ವರ್ಷದ ಮೊದಲ ದಿನ, ಆದಿತ್ಯವಾರ. ಆಗ ನಾನು ಸಂತ ಅಲೋಶಿಯಸ್ ಕಾಲೇಜಿನ ಹಾಸ್ಟೆಲ್ ವಾಸದಲ್ಲಿದ್ದ ಬ್ರಹ್ಮಚಾರಿ. ಹಾಸ್ಟೆಲ್ಲಿನಲ್ಲಿ ನನ್ನಂತೇ ಇದ್ದ ಇನ್ನೂ ಸುಮಾರು ಆರೆಂಟು ವೃತ್ತಿ ನಿರತರಲ್ಲಿ ಈ ಸುದ್ದಿ ಹರಡಿದೆ. ಆ ವೇಳೆಗೆ ನನಗೆ ಆತ್ಮೀಯರೇ ಆಗಿದ್ದ ಸರಕಾರೀ ಪಶುವೈದ್ಯ ಡಾ| ರಾಘವೇಂದ್ರ ಉರಾಳ ಮೊದಲ ಉಮೇದ್ವಾರಿಕೆಯೊಡನೆ ತನ್ನ ಕಾರನ್ನೂ ಹೊರಡಿಸಿದ್ದರು. ಉರಾಳರ ಹೆಂಡತಿ ಉಡುಪಿ ಶಾಲೆಯೊಂದರ ಅಧ್ಯಾಪಿಕೆ. ಹೆಂಡತಿ ಮತ್ತು ಮೂರು ಮಕ್ಕಳನ್ನೂ ತನ್ನೂರು – ಕೋಟದಲ್ಲೇ ಉಳಿಸಿ, ಕೆಲಸದ ದಿನಗಳ ತತ್ಕಾಲೀನ ವಸತಿಗಷ್ಟೇ ಹಾಸ್ಟೆಲ್ ನೆಚ್ಚಿದವರು ಉರಾಳರು. ಆಜನ್ಮ ಕಾಡುವ ಅಸ್ತಮಾ ಒಂದನ್ನು ಬಿಟ್ಟರೆ, ಉರಾಳರ ಚೇತನ ಕುತೂಹಲ ತಾಳದ ಮತ್ತು ತೊಡಗಿಕೊಳ್ಳದ ಕ್ಷೇತ್ರವಿಲ್ಲ.

ಅವರ ಪ್ರಯೋಗಶೀಲ ಮನಸ್ಸಿಗೆ ತಕ್ಕಂತೆ ಅವರು ಹಳೆಯ, ಎರಡು ಬಾಗಿಲಿನ ಸ್ಟ್ಯಾಂಡರ್ಡ್ ಕಾರು ಕೊಂಡಿದ್ದರು. ಅವರ ಕೈಗೆ ಬಂದ ಮೇಲೆ ಆ ಕಾರು ಕಾಣದ ಪ್ರಯೋಗಗಳಿಲ್ಲ. ತಗಡು ಗುದ್ದಿ ಬಾಗಿಲು ನಾಲ್ಕು ಮಾಡಿಸುವುದರಿಂದ ತೊಡಗಿ, ಹೃದಯಕ್ಕೆ ಅರ್ಥಾತ್ ಇಂಜಿನ್ನಿಗೆ ಕೈ ಹಾಕಿ ಡೀಸೆಲ್ಲಿಗೆ ಪರಿವರ್ತಿಸಲು ಹೊರಟು ಪೂರ್ಣ ಕಳಚಿಕೊಳ್ಳುವವರೆಗೂ ಬಿಡಲಿಲ್ಲ. ಉರಾಳರು ಅದಕ್ಕೆ ಹಾಕಿದ ಹಣ, ನಾಲ್ಕೈದು ವರ್ಷಗಳ ಉದ್ದಕ್ಕೆ ಉಳಿಸಿಕೊಂಡ `ಯುದ್ಧೋತ್ಸಾಹ’ಕ್ಕೆ ನನಗೆ ಕೂಡಲೇ ನೆನಪಿಗೆ ಬರುವ ಹೆಸರು ಥಾಮಸ್ ಆಲ್ವ ಎಡಿಸನ್. ವಿದ್ಯುತ್ ಬಲ್ಬ್ ಶೋಧದ ಅಪೂರ್ವ ಯಶಸ್ಸಿನ ಹಿಂದೆ ಸಾವಿರಾರು ವಿಫಲ ಪ್ರಯೋಗಗಳನ್ನು ಮಾಡಿದರೂ ಬಳಲದಿದ್ದವ ಎಡಿಸನ್! ಬಡಕಲು ಕಾರು ಅಥವಾ ಕನಿಷ್ಠಾವಶ್ಯಕತೆಯ ವಾಹನ ಎಂದೇ ಸ್ಟ್ಯಾಂಡರ್ಡ್ ಆ ಕಾಲದಲ್ಲಿ ಪ್ರಚಾರದಲ್ಲಿತ್ತು. ಆದರೆ ಉರಾಳರು ಅದರಲ್ಲಿ ಮಾಡಿಸದ ಕೆಲಸಗಳಿಲ್ಲ. ಪುರಾಣ ಹೆಚ್ಚು ಬಿಚ್ಚದೆ, ಎರಡೇ ಮಾತಿನಲ್ಲಿ ಒಂದೇ ಉದಾಹರಣೆ ಕೊಡುತ್ತೇನೆ – ಕುದುರೆಮುಖ ಗಣಿನಗರಿಗೆ ಭೇಟಿ! ಅವು ಇನ್ನೂ ಗಣಿ ಉದ್ದಿಮೆ ರೂಪುಗೊಳ್ಳುತ್ತಿದ್ದ, ಭಗವತಿ ಘಾಟಿಯ ದಾರಿ ಬಹುತೇಕ ಕಚ್ಚಾ ಸ್ಥಿತಿಯಲ್ಲಿದ್ದ ದಿನಗಳು. ಚಾಲಕನ ಪಕ್ಕದ ಗೇರ್ ದಿಣ್ಣೆಯ ಮೇಲೊಂದು ಅಡ್ಡ ಹಲಗೆ ಇಟ್ಟು ಆರನೆಯವನನ್ನೂ ಹೇರಿಕೊಂಡ ಈ ಸ್ಟ್ಯಾಂಡರ್ಡ್ ಕಾರು ಯಾನವನ್ನು ಯಶಸ್ವೀಗೊಳಿಸುವಲ್ಲಿ ಉರಾಳರ ಧೈರ್ಯ ಮತ್ತು ನಿರ್ಮೋಹ ಎಂದೂ ಮರೆಯುವಂತದ್ದಲ್ಲ.

ಹಾಸ್ಟೆಲ್ಲಿನಲ್ಲಿನ ದೊಡ್ಡ ಕೋಣೆಯೊಂದರಲ್ಲಿ ಉರಾಳರ ಸಹವಾಸಿಗಳೇ ಆಗಿದ್ದ ಇನ್ನಿಬ್ಬರು – ಪುತ್ತೂರು ಮೂಲದ ಜನಾರ್ದನ ಪೈ ಮತ್ತು ಏತಡ್ಕದ ಸುಬ್ರಹ್ಮಣ್ಯ ಭಟ್ ಕೂಡಾ ತಂಡಕ್ಕೆ ಸೇರಿಕೊಂಡರು. ಪೈ ಕೆನರಾ ಜ್ಯೂನಿಯರ್ ಕಾಲೇಜಿನ ರಸಾಯನಶಾಸ್ತ್ರಾಧ್ಯಾಪಕ ಮತ್ತು ನನ್ನಂತೆಯೇ ಬ್ರಹ್ಮಚಾರಿ. ಸುಬ್ರಹ್ಮಣ್ಯ ಮಂಗಳಗಂಗೋತ್ರಿಯ ಎಂಕಾಂ ವಿದ್ಯಾರ್ಥಿ, ಸಹಜವಾಗಿ ಒಂಟಿ. ನನ್ನ ಮೈಸೂರು ಪರಿಚಯದಿಂದಲೇ ಬಂದ ಗೆಳೆಯ, ಮಂಗಳಗಂಗೋತ್ರಿಯ ಕನ್ನಡ ಅಧ್ಯಾಪಕ ಪಂಡಿತಾರಾಧ್ಯರು, ಫಳ್ನೀರಿನಲ್ಲಿ ಸ್ವತಂತ್ರ ಕೋಣೆ ಮಾಡಿಕೊಂಡೇನೋ ಇದ್ದರು. ಆದರೆ ಆ ದಿನಗಳ ನನ್ನ ಬಹುತೇಕ ಹಾರಾಟಗಳಿಗೆಲ್ಲ ಅವರು ನಿಶ್ಚಿತ ಪಾಲುದಾರ; ಇದಕ್ಕೆ ಐದನೆಯವರಾಗಿ ಸೇರಿಕೊಂಡರು.

ಬೆಳಿಗ್ಗೆ ಆರು ಗಂಟೆಗೇ ಹೊರಟು, ಬೆಳ್ತಂಗಡಿಯ ಹೋಟೆಲಿನಲ್ಲಿ ತಿಂಡಿ ಮುಗಿಸಿ, ಮಧ್ಯಾಹ್ನಕ್ಕೆ ಬುತ್ತಿಯನ್ನೂ ಕಟ್ಟಿಸಿಕೊಂಡೆವು. ಭಾರತೀಯ ಸರ್ವೇಕ್ಷಣಾ ಇಲಾಖೆಯವರ ಭೂಪಠದ (ಒಂದಿಂಚು ಅಂದರೆ ಒಂದು ಮೈಲು ಅಳತೆಯದು) ಅಕ್ಷಾಂಶ, ರೇಖಾಂಶಗಳ ಸಲಾಕೀ ಬಂಧನದಲ್ಲಿ, ಮಾಸಲು ಕಂದು ಬಣ್ಣದ ಸುಂದರ ಬಳುಕುರೇಖೆಗಳ (ಕಾಂಟೂರ್ ಲೈನ್ಸ್) ಕೇಂದ್ರದಲ್ಲಿ, ಮಾರ್ಗದಿಂದ ಒಂದೆರಡೇ ಸೆಂಟಿಮೀಟರ್ ಅಂತರದಲ್ಲಿ ಮಲಗಿತ್ತು ಏರಿಕಲ್ಲು. ನಮ್ಮ ಕಾರು ಮುಂಡಾಜೆ ಕಳೆಯುತ್ತಿದ್ದಂತೆ, ಅದೇ ಏರಿಕಲ್ಲು ವಾಸ್ತವದಲ್ಲಿ ಸಟ್ಟನೆ ಮೈದಳೆದಾಗ ಏನು ಅಗಾಧ, ಎಂಥಾ ಸವಾಲು ಎಂದೇ ಕಾಣಿಸಿತು!

ತಪ್ಪಲಿನ ಚಾರ್ಮಾಡಿ ಹಳ್ಳಿಯಿಂದ ಒಂದೇ ಎನ್ನುವಂತೆ ದಟ್ಟ ಕಾಡೇ ಪೀನಾಕೃತಿಯಲ್ಲಿ ಅಲ್ಲಿ ಏರಿ ನಿಂತಿತ್ತು. ಆ ಗಿರಿರಾಜನ ಶೃಂಗಮಾತ್ರ ಕಾಡು ಕಳೆದು ಭಾರೀ ಬಂಡೆಗಳ ಕೋಡು ಹೊತ್ತಿತ್ತು. ನಕ್ಷೆ ಹೇಳುವಂತೆ, ಚಾರ್ಮಾಡಿ ಘಾಟಿ ಎಂದೇ ಖ್ಯಾತ ದಾರಿ ಇದರ ಮಗ್ಗುಲಲ್ಲಿ ಅಸಂಖ್ಯ ಹೊರಳಾಟ, ಕೆಲವು ಹಿಮ್ಮುರಿ ತಿರುವುಗಳಲ್ಲಿ ಹೆಣಗುತ್ತ ಇದರ ಸೊಂಟ ಮಟ್ಟ ಮುಟ್ಟುವಲ್ಲಿ ಬಹುತೇಕ ಏರು ಉತ್ಸಾಹವನ್ನೇ ಕಳೆದುಕೊಂಡಿತ್ತು. ಮತ್ತದು ಇನ್ನೊಂದೇ ಶ್ರೇಣಿಯ ಮಗ್ಗುಲಿಗೆ ಜಾರಿ, ಹೆಚ್ಚುಕಡಿಮೆ ಸಮಾಧಾನದ ಓಟದಲ್ಲಿ ಕೊಡೆಕಲ್ಲು, ಅಣ್ಣಪ್ಪನ ಗುಡಿಗಾಗಿ ಕೊಟ್ಟಿಗೆಹಾರದತ್ತ ಸಾರುತ್ತದೆ. ಏರಿಕಲ್ಲಿನ ಸೊಂಟಮಟ್ಟ ಅಥವಾ ಸುಮಾರು ಎಂಟು – ಒಂಬತ್ತನೇ ಹಿಮ್ಮುರಿ ತಿರುವಿನ ಬಳಿಯಿಂದಲೇ ಬೆಟ್ಟಕ್ಕೆ ಲಗ್ಗೆ ಹಾಕುವ ಅಂದಾಜು ನಮ್ಮದು. ಭೂಪಟ ಆ ವಲಯದಲ್ಲೇ ಬಲಗವಲಿನಲ್ಲಿ ಒಂದು ಕಚ್ಚಾದಾರಿಯನ್ನೇನೋ ತೋರಿಸುತ್ತಿತ್ತು. ಅನಂತರ ತಿಳಿದಂತೆ ಅದು ಏನೆಪೋಯಾದವರ ಮಹಾ ಗುತ್ತಿಗೆಯ ಕಾಡುಗಳಿಗೆ ಹೋಗುವ ಖಾಸಗಿ ದಾರಿ. ಆ ಕೊನೆಯಲ್ಲೆಲ್ಲೋ ಮಲೆಕುಡಿಯರ ಸಣ್ಣ ಹಳ್ಳಿ ಬಾಂಜಾರುಮಲೆಯಿದ್ದರೂ ಮಾರ್ಗಬಳಕೆಗೆ ಅನುಮತಿ ಏನೆಪೋಯದವರದೇ ಸೀಮಿತವಿತ್ತು. ನಾವು ಆ ಕವಲಿಗೂ ತುಸು ಮೊದಲೇ ಡಾಮಾರು ಮಾರ್ಗದ ಎಡ ಬದಿಯಲ್ಲೇ ಒಂದು ತಟ್ಟು ಆಯ್ದು, ಕಾರು ಬಿಟ್ಟು ಚಾರಣಕ್ಕಿಳಿದೆವು.

ಅತ್ಯಾಧುನಿಕ ಆವಿಷ್ಕಾರ, ಸಂಶೋಧನೆಗಳ ಫಲಿತಾಂಶಗಳೇನೇ ಇದ್ದರೂ ವನ್ಯ ಪ್ರದೇಶಗಳು ವ್ಯರ್ಥ. ಹಾಗೆಲ್ಲ ಒದಗಿದರೂ ಮನುಷ್ಯೋಪಯೋಗಕ್ಕೇ ಎನ್ನುವ ಭ್ರಮೆಯನ್ನು ಆಡಳಿತ ವ್ಯವಸ್ಥೆಗಳು ಇಂದೂ ಕಳಚಿಕೊಂಡಿಲ್ಲ. ಮನುಷ್ಯ ಉಪಯುಕ್ತತೆ ಸಂಬಂಧಿಸಿದಂತೆ ದುರ್ಗಮ ಕಾಡು, ಬೆಟ್ಟಗಳ ಸರ್ವೇಕ್ಷಣೆ, ಕ್ರಮಬದ್ಧವಾದ ಕಟಾವು, ಮರುನಾಟಿ, ಕೃಷಿ, ಇತ್ಯಾದಿ ಅಂದರೆ, ವನ್ಯಕ್ಕೊಂದು ವ್ಯವಸ್ಥೆ ತಂದವರು ಬ್ರಿಟಿಷರು. ಇದರಿಂದ ಘಟ್ಟದ ಯಾವುದೇ ಮೂಲೆಯಲ್ಲೂ ಇಂದು ಊರ್ಜಿತದಲ್ಲಿರದಿದ್ದರೂ ಕನಿಷ್ಠ ಮರ ಸಾಗಣೆಗೆ ರೂಪಿಸಿ ಮರೆವಿಗೆ ಬಿಟ್ಟ ಕಚ್ಚಾ ಮಾರ್ಗಗಳನ್ನು ಧಾರಾಳ ಕಾಣಬಹುದು. ಅಂಥ ಒಂದು ದಾರಿಯನ್ನು ನಾವು ಮುಖ್ಯ ದಾರಿಯ ಬಲಮಗ್ಗುಲಲ್ಲೇ ಗುರುತಿಸಿದೆವು. ಅದು ಓರೆಯಲ್ಲಿ ತೆಳು ನೀರಿದ್ದ ಬೆಟ್ಟದ ತೊರೆ ಪಾತ್ರೆಯೊಂದಕ್ಕೆ ಇಳಿದು ಎದುರು ದಂಡೆಯಲ್ಲಿ ಬೆಟ್ಟದ ಎಡ ಏಣಿನತ್ತ ಮುಂದುವರಿದಿತ್ತು. ಭಾರೀ ಬಂಡೆಗಳ ಎಡೆಯಲ್ಲಿನ ಮಾಸಲು ಸವಕಲು ಜಾಡರಸಿ ನಾವು ನೇರ ಬೆಟ್ಟದ ಮೈಯನ್ನೇ ಗುರಿಯಾಗಿಸಿಕೊಂಡೆವು.

ಸ್ವಲ್ಪ ದೂರ ಕೆಳ ಹಂತದಲ್ಲಿ ವಿಶೇಷ ಮರೆಗಳೇನೂ ಇಲ್ಲದ ಘನ ಮರಗಳ ನೆರಳಿನಲ್ಲಿ, ಲಘುವಾಗಿ ಏರುತ್ತ ಸಾಗಿದೆವು. ಅನಂತರ ಜಾಡು ಪೂರ್ಣ ಮಾಸಿದ್ದಲ್ಲದೆ, ಸಾಮಾನ್ಯ ಪೊದರು, ಪುಡಿ ಬಂಡೆಗಳ ನಡುವೆ ಕುತ್ತೇರು ಎದುರಿಸಿದೆವು. ಇಲ್ಲಿ ಎಂದೋ ಅಡಿ ಮಗುಚಿಯೋ ಗಾಳಿ ತಿರುಚಿಯೋ ಅಡ್ಡ ಮಲಗಿಸಿದ್ದ ಭಾರೀ ಮರದ ಬೊಡ್ಡೆಗಳೂ ನಮ್ಮ ಪ್ರಗತಿ ತಡೆಯನ್ನು ಮಾಡುತ್ತಿದ್ದವು. ನಿಧಾನಕ್ಕೆ ಉಸಿರು ದಕ್ಕಿಸಿಕೊಳ್ಳುತ್ತ, ದಾಹ ನೀಗುತ್ತ ಒಂದೊಂದನ್ನೂ ದಾಟಿದೆವು. ಔನ್ನತ್ಯ ಸಾಧಿಸುತ್ತಿದ್ದಂತೆ ಮರಗಳು ಸಣ್ಣದಾಗುತ್ತ, ಪೊದರು ಹೆಚ್ಚುತ್ತ, ಏರು ಕಠಿಣವಾಗುತ್ತ, ಜಾಡು ಮೂಡಿಸುವಲ್ಲಿ ನಮ್ಮ ಶ್ರಮ ಹೆಚ್ಚುತ್ತ ಹೋಯ್ತು. ಕೊನೆಗೂ ಎಂಬಂತೆ ಮಧ್ಯಾಹ್ನ ಒಂದು ಗಂಟೆಯ ಸುಮಾರಿಗೆ ಕಾಡಗರ್ಭವನ್ನು ಸೀಳಿ ಹೊರಚಾಚಿದಂತಿದ್ದ ಒಂದು ಭಾರೀ ಬಂಡೆಮಂಡೆ ಸೇರಿದ್ದೆವು. ಏನೆಪೋಯಾ ಕವಲಿನಿಂದಾಚಿನ ಡಾಮರು ದಾರಿ, ಅತ್ತಣ ಬೆಟ್ಟಮಾಲೆಯ ನೋಟವೆಲ್ಲ ಆಕರ್ಷಕವಾಗಿಯೇ ಕಾಣಿಸಿತ್ತು. ಒಮ್ಮೆ ಇದೇ ಶಿಖರವೆಂದು ಭ್ರಮಿಸಿ, ಬುತ್ತಿಯೂಟ ಮುಗಿಸಿದ್ದೂ ಆಯ್ತು. ಆದರೆ ನನ್ನ ತಾತಾರ್ ಶಿಖರಾರೋಹಣದ ನೆನಪು ಸುಮ್ಮನಿರಲಿಲ್ಲ.

ನಮ್ಮ ಬೆಂಬದಿಯಲ್ಲಿ ತುಸು ಎತ್ತರಕ್ಕೆ, ಯಾವುದೇ ನೋಟದಾಟದ ತೆರೆಯಂತೆ ಹುಲ್ಲು ಪೊದರು ಹಬ್ಬಿತ್ತು. ಹೇಗಾದರೂ ಅದನ್ನು ನಿವಾರಿಸಿ, ಕರಾವಳಿಯತ್ತವೂ ಒಂದು ದಿಟ್ಟಿ ಹರಿಸಬೇಕೆಂಬ ಚಡಪಡಿಕೆ ನಮ್ಮದು. ಅತ್ತ ನುಗ್ಗಲು ಸವಕಲು ಜಾಡಿಲ್ಲ, ಪೊದರು ಕಡಿದು ಮರೆ ಕಳೆಯಲು ಕತ್ತಿಯೂ ಇರಲಿಲ್ಲ. ಹುಲ್ಲನ್ನು ನುಗ್ಗುನುರಿ ಮಾಡಿ, ಪೊದರ ಬುಡದಲ್ಲಿ ತೆವಳಿ, ಅಸಾಧ್ಯವಾದಲ್ಲಿ ಸಣ್ಣ ರೆಂಬೆಗಳನ್ನು ನಮ್ಮ ಕೈಯಲ್ಲೇ ಮುರಿದೋ ಮೈ ಕೊಟ್ಟು ದೂಡಿಯೋ ಇಪ್ಪತ್ತು ಮೂವತ್ತಡಿ ಕಳೆಯುತ್ತಿದ್ದಂತೆ, ನಮ್ಮೆದುರು ಭಾರೀ ಬಂಡೆಗುಂಡುಗಳ ಒಟ್ಟಣೆಯಾಗಿ ಕನಿಷ್ಠ ಐನೂರು ಅಡಿ ಎತ್ತರಕ್ಕೆ ಮಲೆತು ನಿಂತ ನಿಜ ಶಿಖರ ಕಂಗೊಳಿಸಿತು.

ಸಮಯ, ಬಂಡೆ ಹತ್ತುವಲ್ಲಿನ ಪರಿಣತಿ, ಎಲ್ಲಕ್ಕೂ ಮುಖ್ಯವಾಗಿ ಸಾಮರ್ಥ್ಯ ನಮ್ಮ ತಂಡಕ್ಕೆ ಕೊರತೆ ಖಾತೆಯಲ್ಲೇ ಇತ್ತು. ಆದರೆ ನನ್ನಲ್ಲಿದ್ದ ದಪ್ಪ ಹತ್ತಿ ಹಗ್ಗದ (ಸುಮಾರು ಐವತ್ತಡಿ ಉದ್ದದ) ತುಣುಕು, ಶಿಲಾರೋಹಣದ ಅನುಭವ ಮತ್ತು ಪ್ರಾಯ ಸಹಜವಾದ ಗರ್ವ ಬಿಡಲಿಲ್ಲ. ಗೋಡೆಯಂಥ ಬಂಡೆಯಲ್ಲಿ ಬಲಕ್ಕೆ ತಿರುಪೇರಿನಂತಿದ್ದ ಚಡಿಯೊಂದರಲ್ಲಿ ಐವತ್ತು ನೂರಡಿ ಸರಿದೆವು. ಮತ್ತೆ ಬಂಡೆ ಕೊರಕಲೊಂದರೊಳಗೆ ಪುಡಿ ಬಂಡೆಗಳನ್ನು ಸುಧಾರಿಸುತ್ತ ಮತ್ತೆ ನೂರಿನ್ನೂರಡಿ ಏರು. ಕೊನೆಯಲ್ಲಿ ಬಿರುಕು, ಚಡಿಗಳನ್ನೇ ಆಧರಿಸಿ ಸುಮಾರು ಎಪ್ಪತ್ತಡಿ ಗೋಡೆಯಂಥ ಬಂಡೆಯನ್ನೇ ಏರುವಲ್ಲಿಗೆ ಸವಾಲನ್ನು ಪೂರ್ಣವಾಗಿ ಉತ್ತರಿಸಿದ್ದೆವು. ಅಲ್ಲಿ ಒಂದು ಪಾರ್ಶ್ವ ತೆರೆದಂತಿದ್ದ ಗುಹಾ ಓಣಿಯಲ್ಲಿ ಸುಲಭವಾಗಿಯೇ ನಡೆದು ನಿಜ ಶಿಖರ ಸಾಧಿಸಿದ್ದೆವು.

ದೇವಾಲಯಗಳ ಶಿಖರದಲ್ಲಿರುವ ಕೊಂಬಿನಂತೇ ತೋರುತ್ತಿದ್ದ ಒಂಟಿ ಬಂಡೆಯ ನೆರಳಿನಲ್ಲೇ ಇರುವ ಮಣ್ಣ ನೆಲದಲ್ಲೇ ಸರ್ವೇಕ್ಷಣಾ ಇಲಾಖೆ ರಚಿಸಿದ್ದ ಕಾಡು ಕಲ್ಲುಗಳ ಗುಪ್ಪೆಯೇ ನಮ್ಮ ಸಾಧನೆಗೆ ಸಾಕ್ಷಿ. ಅಂದು ನಾವು ಸೂರೆಗೊಂಡ ದೃಶ್ಯಾವಳಿ ನನ್ನಲ್ಲಿಂದು ನಿಸ್ಸಂದೇಹ ಅಮೂರ್ತ ಆನಂದವಾಗಿ ಉಳಿದಿದೆ. ಅದಕ್ಕೆ ಇಂದಿನ ಮಾತಿನ ತೊಡುಗೆ ಹಾಕಿದರೆ ಸಹಜ ಸಿದ್ಧಿಯ ಮೈಗೆ ಕೃತಕ ಅಲಂಕಾರ ಹೇರಿದ ಹಾಗಾದೀತು, ಬೇಡ! (ಇಲ್ಲೂ ಮುಂದಿನ ಕಂತಲ್ಲೂ ಬರುವ ಚಿತ್ರಗಳಲ್ಲಿ ತುಸು ಸಮಾಧಾನ ತಂದುಕೊಳ್ಳಿ – ಇವುಗಳಲ್ಲಿ ಹೆಚ್ಚಿನವು ಯಜ್ಞ, ಕೀರ್ತಿ ತೆಗೆದವು ಇರಬೇಕು) ನಾವು ಶಿಖರ ಸಂಭ್ರಮವನ್ನು ಎಷ್ಟು ಚುಟುಕಾಗಿ ನಡೆಸಿದರೂ ಅಪರಾಹ್ನ ಮೂರೂವರೆಗೆ ಮೊದಲು ಶಿಖರ ಬಿಡಲಾಗಲಿಲ್ಲ.

ಏರುವಾಗಲೇ ಬಂಡೆ ವಲಯದಲ್ಲಿ, ವಿವಿಧ ಹಂತಗಳಲ್ಲಿ ನಾಲ್ವರನ್ನೂ ಒಮ್ಮೆಗೆ ಒಬ್ಬರಂತೆ, ಸೊಂಟಕ್ಕೆ ಹಗ್ಗ ಕಟ್ಟಿ ಏರಿಸಿಕೊಂಡಿದ್ದೆ. ಇಂಥಲ್ಲೆಲ್ಲ ಹಗ್ಗ ಕೇವಲ ರಕ್ಷಣೆಗೆ, ಏರಿಕೆ ಅಥವಾ ಇಳಿಕೆ ಅವರವರಿಗೆ ಸಹಜವಾದದ್ದು ಎನ್ನುವುದು ಆಶಯ. ವಾಸ್ತವದಲ್ಲಿ ಹೆಚ್ಚಿನ ಆರಂಭಿಕರು ರಾಕ್ ಕ್ಲೈಂಬಿಂಗ್ ಎನ್ನುವುದನ್ನು ರೋಪ್ ಕ್ಲೈಂಬಿಂಗ್ ಎಂದು ತಪ್ಪಾಗಿಯೇ ಗ್ರಹಿಸುತ್ತಾರೆ. ಅದಕ್ಕೆ ಸರಿಯಾಗಿ ತಾವು ಹತ್ತುವ ನೆಲ ಅಥವಾ ಬಂಡೆಯ ಪ್ರಾಕೃತಿಕ ಆಧಾರಗಳನ್ನು ನೆಚ್ಚುವುದಕ್ಕಿಂತ ಹೆಚ್ಚಿಗೆ ರಕ್ಷಣೆಗೆ ಕೊಟ್ಟ ಹಗ್ಗದಲ್ಲೇ ಜಗ್ಗಾಡುತ್ತಾರೆ. ಇದರಿಂದಲೇ ಬಹುತೇಕ ಇಳಿನಡೆಗಳಲ್ಲಿ ಆರೋಹಿಗಳನ್ನು ನಾವು `ಕೊಡಪಾನ’ ಎಂದೇ ಗೇಲಿ ಮಾಡುವುದೂ ಇರುತ್ತದೆ. ಏರಿಕಲ್ಲಿನ ಬಂಡೆ ವಲಯದಿಂದ ನಾಲ್ಕೂ ಗೆಳೆಯರನ್ನು ಹಾಗೆ ಕೊಡಪಾನ ಇಳಿಸಿ ಮುಗಿಯುವಾಗ ಮತ್ತಷ್ಟು ಸಮಯ ಸೋರಿಹೋಗಿತ್ತು.

ಕಾಡು ಬಂದ ಮೇಲೆ ಲೆಕ್ಕಕ್ಕೆ ಎಲ್ಲರೂ ಸ್ವತಂತ್ರರು. ಅವರಿಗೆ ಏರುಮುಖದಲ್ಲಿ ಹೊಸತನ್ನು ಶೋಧಿಸುವ ಉತ್ಸಾಹವಿತ್ತು, ಅನಾವರಣದ ಆನಂದವಿತ್ತು, ಎಲ್ಲಕ್ಕೂ ಮಿಕ್ಕು ತಾಕತ್ತಿದ್ದಷ್ಟೇ ಪ್ರಗತಿ ಸಾಧ್ಯವಾಗಿತ್ತು. ಆದರೆ ಇಳಿಮುಖದಲ್ಲಿ, ಸಕಾಲದಲ್ಲಿ ಮತ್ತೆ ದಾರಿ ಸೇರುವ ಆತುರ, ಬಂದ ಜಾಡು ತಪ್ಪಿಹೋಗುವ ಆತಂಕ, ಎಲ್ಲಕ್ಕು ಮಿಕ್ಕು ಬಳಲಿದ ದೇಹವನ್ನು ಆಳದ ಸೆಳೆತದಲ್ಲಿ ಪೂರ್ಣ ನಿಯಂತ್ರಿಸಲಾಗದ ಕಷ್ಟ ಕಾಡುತ್ತಿತ್ತು. ಯಾರೂ ಪಳಗಿದ ಚಾರಣಿಗರಲ್ಲ ಎನ್ನುವುದರಿಂದ ಧಾವಂತ ಅಸಾಧ್ಯವೇ ಇತ್ತು. ಸಡಿಲ ಕಲ್ಲೋ ತರಗೆಲೆಗುಪ್ಪೆಯೋ ಕಾಲು ಕಟ್ಟುವ ಬೆತ್ತದ ಬಳ್ಳಿಯೋ ಆಗೀಗ ಒಬ್ಬೊಬ್ಬರನ್ನೂ ಸಣ್ಣಪುಟ್ಟದಾಗಿ ಕುಸಿದು ಬೀಳುವಂತೆ ಮಾಡುತ್ತಿತ್ತು. ಆತಂಕಿತ ಹೆಜ್ಜೆ ಇಡುವಲ್ಲಿ ಸ್ನಾಯು ಸೆಳೆತಗಳು ಮೂಡಿದಾಗಂತೂ ವಿಶ್ರಾಂತಿ ಅನಿವಾರ್ಯವೇ ಆಗುತ್ತಿತ್ತು. ಇವುಗಳ ಜತೆಗೆ ನಾವು ಅದುವರೆಗೆ ಅಂದಾಜಿಸದ ಕತ್ತಲ ಭಯ ಒತ್ತರಿಸತೊಡಗಿತು. ಕಾಡಿನ ಮುಚ್ಚಿಗೆಯಿರುವಲ್ಲಿ ನಡು ಮಧ್ಯಾಹ್ನದಲ್ಲೂ ಕತ್ತಲ ಪ್ರಭಾವ ಎಂಥದ್ದು ಎಂದು ಎಲ್ಲರೂ ಕಂಡದ್ದೇ ಇದೆ. ಇಲ್ಲಿ ಜಾರುವ ಸಮಯದೊಡನೆ, ನಮ್ಮ ಇಳಿಮೈಯೂ ಪೂರ್ವ ದಿಕ್ಕಿನಲ್ಲಿತ್ತು. ಕತ್ತಲ ಪರದೆ ನಮ್ಮರಿವಿಲ್ಲದಂತೇ ದಟ್ಟವಾಗುತ್ತಲೇ ಇತ್ತು.

ಈ ಹಂತದಲ್ಲಿ ಸಾಲಿನ ಮುಂಚೂಣಿಯಲ್ಲಿದ್ದ ನನಗೆ ಒಮ್ಮೆಗೇ ಕೊನೆಯಲ್ಲಿದ್ದ ಪೈಗಳ ದುರ್ಬಲ ಬೊಬ್ಬೆ ಕೇಳಿಸಿತ್ತು. ಎಲ್ಲ ಪರಸ್ಪರ ಕಣ್ಣಳವಿಯಲ್ಲೇ ನನ್ನನ್ನು ಅನುಸರಿಸಿದ್ದಾರೆಂದು ಭಾವಿಸಿದ್ದು ತಪ್ಪಾಗಿ, ಪೈಗಳು ಹಿಂದೆಲ್ಲೋ ದಾರಿ ಕಳೆದುಕೊಂಡಿರುವುದು ಅರಿವಾಯ್ತು. ಅಪಾಯವೇನೂ ಆಗಲಿಲ್ಲ. ಎಲ್ಲರನ್ನೂ ಇದ್ದಲ್ಲೇ ಒಟ್ಟು ಮಾಡಿ ನಿಲ್ಲಿಸಿದೆ. ಪೈಗಳನ್ನು ಕೂಗು ಪ್ರತಿಕೂಗುಗಳ ಸರಣಿಯಲ್ಲಿ ಮತ್ತೆ ತಂಡಕ್ಕೆ ಸೇರಿಸಿಕೊಂಡದ್ದೂ ಆಯ್ತು. ಆದದ್ದಿಷ್ಟೆ: ಅವರು ಸರಿಯಾಗಿಯೇ ಸಾಲಿನ ಬಾಲದಲ್ಲಿದ್ದರು. ಆದರೆ ಮಿನಿಟೆರಡರ ಹಿಂದೆ, ಅರೆಗಳಿಗೆ ವಿಶ್ರಮಿಸಿದ್ದಲ್ಲೇ ಕೈಚೀಲ ಮರೆತು ಬಂದಿದ್ದರಂತೆ. ಫಕ್ಕನೆ ಅದನ್ನು ತಂದುಬಿಡುವೆನೆಂದು ಹೋದವರಿಗೆ ಚೀಲವೇನೋ ಸಿಕ್ಕಿತ್ತು, ತಿರುಗಿ ಬರುವಲ್ಲಿ ದಿಕ್ಕು ಮಾತ್ರ ತಪ್ಪಿತ್ತು.

ಇಷ್ಟರಲ್ಲಿ ಕತ್ತಲು ಪೂರ್ಣ ಕವಿದಿತ್ತು. ಕೃಷ್ಣಪಕ್ಷದಲ್ಲೂ ಆರೇಳು ದಿನಗಳು ಕಳೆದಿದ್ದುದರಿಂದ ಚಂದ್ರಪ್ರಕಾಶದ ಸೋರಿಕೆಯೂ ಅಸಾಧ್ಯವಿತ್ತು. ಎಲ್ಲರು ಕೈಯಳವಿಯಲ್ಲೇ ಇದ್ದರೂ ಪರಸ್ಪರ ಕಣ್ಣು ಮುಟ್ಟಿಸಲಾಗದ ಅಂಧಕಾರ. ಕೇವಲ ಹಗಲಿನ ಚಾರಣಕ್ಕಷ್ಟೇ ಸಜ್ಜಾಗಿದ್ದ ನಮ್ಮಲ್ಲಿ ಯಾವುದೇ ಬೆಳಕಿನ ಕುಡಿಯೂ ಇರಲಿಲ್ಲ. ಅದೃಷ್ಟಕ್ಕೆ ಪೈಗಳು ಕಾಲೇಜಿನ ಪ್ರಯೋಗಾಲಯದಲ್ಲಿ ಹಿಂದೆಂದೋ ಮರೆತು ಕಿಸೆಗೆ ಸೇರಿಸಿದ್ದ ಕೆಲವೇ ಕಡ್ಡಿಗಳುಳಿದಿದ್ದ ಬೆಂಕಿಪೊಟ್ಟಣ ಒಂದರ ಪತ್ತೆಯಾಗಿತ್ತು. ಆದರೆ ಅದನ್ನು ನಾವು ತುರ್ತು ಪರಿಸ್ಥಿತಿಗಿರಲಿ ಎಂದೇ ನಿರ್ಧರಿಸಿದೆವು. ವಾಸ್ತವದಲ್ಲಿ ಈ ವೇಳೆಗೆ ನಾವು ಏರುವ ಪ್ರಥಮದಲ್ಲೇ ದಾಟಿದ್ದ ಬೆಟ್ಟದ ತೊರೆ ಮತ್ತು ಎದುರು ದಂಡೆಯ ಡಾಮರು ದಾರಿ ಸಿಗಬೇಕಿತ್ತು. ಅಲ್ಲದಿದ್ದರೂ ನೀರ ಹರಿವಿನ ಸದ್ದು, ಅಪರೂಪಕ್ಕಾದರೂ ಕೇಳಿಸಲೇಬೇಕಾದ ವಾಹನಗಳ ಗುಡುಗುಡಿಕೆಯೂ ಯಾಕಿಲ್ಲ ಎನ್ನುವ ಯೋಚನೆಗಳನ್ನು ತಲೆ ತಿನ್ನುತ್ತಿತ್ತು. ಅವನ್ನು ಮನದ ಮೂಲೆಗೆ ನೂಕಿದೆ. ಜಾಡು ಗುರುತಿಸುವ ತಪ್ಪೇನೇ ಆಗಿರಲಿ, ಪ್ರಗತಿ ಎಷ್ಟೇ ನಿಧಾನಿಸಲಿ ಮುಂದೆ ತಂಡದ ಒಗ್ಗಟ್ಟು ಮಾತ್ರ ಕಡಿಯದ ವ್ಯವಸ್ಥೆ ಮಾಡಿಕೊಂಡೆವು. ನಾನು ಬಲಗೈಯಲ್ಲೊಂದು ಬಲವಾದ ಬಡಿಗೆ ಹಿಡಿದುಕೊಂಡೆ. ಎಡಗೈಯನ್ನು ಹಿಂದಿನೊಬ್ಬ ಗೆಳೆಯನಿಗೆ ಕೊಟ್ಟಿದ್ದೆ. ಉಳಿದವರೂ ಪರಸ್ಪರ ಕೈ ಜೋಡಿಸಿ ಪಕ್ಕಾ ಮಾನವ ಸರಪಳಿ ಮಾಡಿಕೊಂಡೆವು. ನಾನು ಕುರುಡಾಗಿ ಬಡಿಗೆಯನ್ನು ಮುಂದಿನ ಇಳಿಜಾರಿನ ನೆಲಕ್ಕೆ ಕುಟ್ಟುತ್ತ, ಬಹು ನಿಧಾನದಲ್ಲಿ ಒಂದೊಂದೇ ಹೆಜ್ಜೆ ಮುಂದಿಡುತ್ತ ನಡೆದೆ. ಉಳಿದವರು ಅನುಸರಿಸಿದರು. ಪೊದರು, ಪೊಳ್ಳು, ಬಂಡೆಗಳನ್ನು ಮೆಲ್ಲಗೆ ನಿವಾರಿಸುತ್ತ ಕೆಲವು ಮಿನಿಟುಗಳನ್ನೇ ಕಳೆದಿರಬೇಕು. ಅಲ್ಲೊಂದೆಡೆ ಬಡಿಗೆಗೆ ಮುಂದೆ ಏನೂ ಸಿಗದ ಸ್ಥಿತಿ. ತುಸು ಆಚೀಚೆ ಪರಡಿ, ಸೋತು, ಪೈಗಳ ಬೆಂಕಿಪೊಟ್ಟಣದ ಮೊರೆ ಹೋದೆ. ಯಾರದೋ ಕಿಸೆಯ ನಿರುಪಯುಕ್ತ ಕಾಗದವನ್ನೇ ಬತ್ತಿಯಂತೆ ಹಿಡಿದು, ಬೆಂಕಿ ಹಿಡಿಸಿ ನೋಡಿದಾಗ ಎದೆ ಝಿಲ್ಲೆನಿಸಿತು. ನಾವೊಂದು ಬಂಡೆಯ ಅಂಚಿನಲ್ಲಿದ್ದೆವು. ನೇರ ಹದಿನೈದಿಪ್ಪತ್ತಡಿ ಕೆಳಗೆ ನಾವು ಕಾಣಲಾಶಿಸಿದ್ದ ಬೆಟ್ಟದ ತೊರೆ! ಮಳೆ ದೂರದ ದಿನಗಳಾದ್ದರಿಂದ ತೆಳು ನೀರು ನಿಶ್ಶಬ್ಧವಾಗಿ, ತಣ್ಣಗೆ ಹರಿದಿತ್ತು. ಹಾಗೇ ದಾರಿಯೂ ಇಪ್ಪತ್ತು ಮೂವತ್ತಡಿಗಳ ಅಂತರದಲ್ಲಿದ್ದರೂ ವಾಹನ ಸಂಚಾರವೇನೂ ಇಲ್ಲದ್ದರಿಂದ ನಾವು ವಿವಂಚನೆಗೊಳಗಾಗಿದ್ದೆವು ಎಂಬ ಅರಿವೂ ಆಯ್ತು. ಮುಂದಿನ ಕತೆ ಬಹುತೇಕ ಯಾರೂ ಊಹಿಸುವಂತೇ ಆಯ್ತು. ಎಚ್ಚರಿಕೆಯಲ್ಲಿ ಬಂಡೆಯಂಚಿನಿಂದ ಹಿಂದೆ ಸರಿದು, ಬಳಸು ನಡಿಗೆಯಲ್ಲಿ ತೊರೆ ದಾಟಿ, ದಾರಿ ಸೇರುವಾಗ ಗಂಟೆ ಎಂಟೂವರೆ. ಮುಂದೆ ದಾರಿಯ ದುರವಸ್ಥೆಯಲ್ಲಿ ಕಾರು ಪಂಚೇರಾದರೂ ಬೆಳ್ತಂಗಡಿಯಲ್ಲಿ ರಿಪೇರಿ ಮಾಡಿಸಿಕೊಂಡು ಮಂಗಳೂರು ಸೇರುವಾಗ ಮತ್ತೆ ಹೊಸದಿನವೇ ಉದಿಸಿದಂತೆ ಮಧ್ಯರಾತ್ರಿ ಹನ್ನೆರಡು ಗಂಟೆ ಕಳೆದಿತ್ತು.

ಏರಿಕಲ್ಲಿನ ಅದ್ಭುತ ಸಾಧನೆಯ ನೆನಪಿನೊಡನೆ, ಸದಾ ಕಾಡುವ ಇನ್ನೊಂದು ಸಂಗತಿ ತಣ್ಣೀರ ಗುಗ್ಗು! ಇದು ಅನಂತರದ ದಿನಗಳಲ್ಲಿ ಜನಪದರಿಂದ ನಾವು ಕೇಳಿ ತಿಳಿದ ಒಂದು ಸಸ್ಯವಿಶೇಷ. ಮಲೆ ನುಗ್ಗುವಲ್ಲೆಲ್ಲೋ ನಾವು ಈ ಪೊದೆಸಸ್ಯವನ್ನು ಸಂಪರ್ಕಿಸಿದ್ದೆವು. ಅದು ಮುಳ್ಳು, ರೋಮಗಳೇನೂ ಇಲ್ಲದೆ, ತನ್ನ ಜೀವದ್ರವದ ಸಂಪರ್ಕಕ್ಕೆ ಬಂದವರಿಗೆ ದಿನಗಟ್ಟಳೆ ಚರ್ಮದ ಉರಿ ಉಳಿಸುವ ಸ್ವಭಾವದ ಸಸ್ಯವಂತೆ. ಅಪೂರ್ವ ಬಳಲಿಕೆ, ನಿದ್ರಾ ಕೊರತೆಗಳೆಲ್ಲ ಒಂದೆರಡು ದಿನದ ಮಾತು. ಆದರೆ ಮರುದಿನ ನಮ್ಮೆಲ್ಲರನ್ನೂ ಕಾಡಿದ ಮೈ ಉರಿ ಮಾತ್ರ ಮರೆಯುವಂತದ್ದಲ್ಲ. ಸ್ನಾನಕ್ಕಿಳಿದಲ್ಲಿ ಮುಖ, ಕತ್ತು, ತೋಳು ಮುಂತಾಗಿ ಬಟ್ಟೆಯ ಆವರಣವಿದ್ದಿರದ ದೇಹದ ಭಾಗಗಳಿಗೆ ತಣ್ಣೀರು ಹಾಕಿದಾಗ ಕೆಂಡದ ಮಳೆಗೆ ಸಿಕ್ಕ ಉರಿ! ಮತ್ತಾ ಭಾಗಗಳನ್ನು ಏನು ಮುಟ್ಟಿದರೂ ಕಣ್ಣೀರು ಉಕ್ಕುವಂಥಾ ಉರಿ. ಸ್ವಸ್ಥ ಮಲಗಿದರೂ ಹಾಸಿಗೆ ಸಹಸ್ರ ಮುಳ್ಳುಗಳ ಹೂಟ ಎನ್ನುವ ಅನುಭವ. ನಾನೇನೋ ಪೂರ್ಣತೋಳಿನ, ಮುಚ್ಚು ಕಾಲರಿನ ಅಂಗಿಯನ್ನೇ ಕಾಡಿಗೆ ಹಾಕುವವನಾದ್ದರಿಂದ ಕೇವಲ ಮುಂಗೈಗಳಲ್ಲಷ್ಟೇ ಉರಿ ಅನುಭವಿಸಿದ್ದೆ. ಮರುಹಗಲಿನ ಕೆಲಸಗಳನ್ನೆಲ್ಲ ಸುಧಾರಿಸಿಕೊಂಡೆ. ಭಾರೀ ಸೆಕೆಯೆಂದು ತೋಳಿಲ್ಲದ ಬನಿಯನ್ನಷ್ಟೇ ಉಳಿಸಿಕೊಂಡು ಬೆಟ್ಟವೇರಿದ್ದ ಸುಬ್ರಹ್ಮಣ್ಯ, ಜನಾರ್ದನ ಪೈಗಳಂತೂ ಸುಮಾರು ಎರಡು ದಿನ ಭಾರೀ ಜ್ವರ ಬಂದವರಂತೇ ಹಾಸಿಗೆ ಹಿಡಿದು ಒದ್ದಾಡಿದ್ದರು. ತಣ್ಣೀರಗುಗ್ಗಿನ ಪ್ರಭಾವ ವೈದ್ಯ ಪರೀಕ್ಷೆ ಮತ್ತು ಉಪಚಾರಗಳನ್ನು ಮೀರಿ ವಾರ ಕಾಲ ಕಾಡಿ, ತನ್ನಷ್ಟಕ್ಕೇ ಮಸಳಿತು. ಆ ವಲಯದ ಜನ ಗುರುತಿಸುವಂತೆ, ನಾವು ಸಂಪರ್ಕಿಸಿದ್ದು ತಣ್ಣೀರು ಮುಟ್ಟಿದಾಗ ಉರಿ ಹತ್ತಿಸುವ ಜಾತಿ. ಅದರಲ್ಲೇ ಇನ್ನೊಂದು ಪ್ರಬೇಧಕ್ಕೆ ಬಿಸಿನೀರು ಆಗಿಬರುವುದಿಲ್ಲವಂತೆ; ಬಿಸಿನೀರಗುಗ್ಗು. ಇಂಥವನ್ನೇ ಆಕಿರೆ, ಆನೆ ಸೊಣಗು ಎಂದೆಲ್ಲ ಹೇಳುವುದನ್ನೂ ಕೇಳಿದ್ದೇನೆ. ಅವೆಲ್ಲ ಏಕಂ ಸತ್, ವಿಪ್ರ ಬಹುಧಾ ವದಂತಿಯೇ? ಸಸ್ಯಶಾಸ್ತ್ರೀಯವಾಗಿ ಈ ಸೊಪ್ಪಿನ ಗುರುತೇನು? ಉರಿಯ ಕಾರಣವೇನು? ಇತ್ಯಾದಿ ವಿವರಗಳು ನನಗೆ ತಿಳಿದಿಲ್ಲ. ಆದರೆ ನಾನು ಯಾವತ್ತೂ ನಂಬಿದಂತೆ, ಕಾಡು ನಾಗರಿಕರ ಸ್ವಚ್ಛಂದ ವಿಹಾರತಾಣವಲ್ಲ. ಹಾಗಾಗಿ ಅಲ್ಲಿನ ಸತ್ಯಗಳಿಗೆ ನಾವು ವಿನೀತರಾಗಿಯೇ ತೆರೆದು ಕೊಳ್ಳಬೇಕು ಎನ್ನುವ ನಿಲುವಿಗೆ ಇಲ್ಲಿ ಬಲ ಬಂತು. ಹೀಗೇ ಆದಷ್ಟು ಮೈ ಮುಚ್ಚಿಕೊಳ್ಳುವ ದಿರುಸೇ ಮುಂದೊಂದು ದಿನ ಹೆಜ್ಜೇನ ಹಿಂಡು ಮುತ್ತಿಗೆ ಹಾಕಿದಲ್ಲೂ ನನಗೆ ಹೆಚ್ಚಿನ ರಕ್ಷಣೆ ಒದಗಿಸಿದ್ದು ನೀವು ತಿಳಿದಂತೇ ಇದೆ!

(ಮುಂದುವರಿಯಲಿದೆ)