(ಮೂರು ಭಾಗಗಳ ಸಾಹಸ ಕಥನ – ಅಸಾಧ್ಯ ಅಮೆದಿಕ್ಕೆಲ್ಲಿನ ಅಂತಿಮ ಭಾಗ)
ನನ್ನ ಚಾರಣಗಳು ಹಳ್ಳಿ, ಕುಗ್ರಾಮಗಳನ್ನು ದಾಟಿಯೇ ಇರುತ್ತಿದ್ದವು ನಿಜ. ಆದರೆ ಆ ಸಂದರ್ಭಗಳಲ್ಲಿ ಸ್ಥಳೀಯ ಜನ ಮತ್ತು ಜನಪದಗಳನ್ನು ನಮ್ಮ ಮಾರ್ಗದರ್ಶನದ ಆವಶ್ಯಕತೆಗಿಂಥ ಹೆಚ್ಚಿಗೆ ನಾನು ಬಳಸಿಕೊಂಡವನಲ್ಲ, ವಿಶೇಷ ಆಸಕ್ತಿಯೂ ತೋರಿದವನಲ್ಲ. ಅವುಗಳ ಕುರಿತು ನನಗೆ ಕುತೂಹಲವಿರುತ್ತಿತ್ತು, ಆದರೆ ನನ್ನ ವೃತ್ತಿಯ ಸಮಯಮಿತಿಯಲ್ಲಿ ಪ್ರಾಕೃತಿಕ ಸತ್ಯಗಳನ್ನು ಮೀರಿದ ಇನ್ಯಾವುದರಲ್ಲೂ ತೊಡಗಿಕೊಳ್ಳಲು ನನಗೆ ಕಷ್ಟವೇ ಆಗುತ್ತಿತ್ತು; ಖಂಡಿತಕ್ಕೂ ತಿರಸ್ಕಾರವಿರಲಿಲ್ಲ. ಹಾಗೆ ಉಪಯುಕ್ತತೆಯನ್ನಷ್ಟೇ ಲೆಕ್ಕ ಹಾಕಿ ಉಳಿದುಕೊಂಡ ಸಂಬಂಧಗಳು ಮಾತ್ರ ಬಹುತೇಕ ಗಾಢವಾಗಿರುತ್ತಿತ್ತು. ಅಂಥಾ ಸಂಬಂಧಗಳಲ್ಲಿ ಅಮೆದಿಕ್ಕೆಲ್ ನೆಪದಿಂದ ಒದಗಿದ ನೆರಿಯ ಹೆಬ್ಬಾರರ ಕುಟುಂಬದ ಪರಿಚಯ, ನನಗೆ ಹೆಚ್ಚು ಸ್ಮರಣೀಯವಾಗಿರುವುದು ವನ್ಯಬಂಧದಿಂದ.
ನಾನು ಸುಮಾರು ೧೯೭೪ರಿಂದ ೧೯೮೫ರವರೆಗೆ, ಅಂದರೆ ನನ್ನ ಮಂಗಳೂರು ವಾಸದ ಮೊದಲ ದಿನಗಳಲ್ಲಿ ಕೇವಲ ಸಾಹಸ ಚಟುವಟಿಕೆಗಳ ತೋರಗಾಣ್ಕೆಯ ದಿನಚರಿ ಪುಸ್ತಕವನ್ನೇ ಇಟ್ಟಿದ್ದೆ. ಅದು ಡೈರಿಯೊಂದರಲ್ಲಿ ಯಾವ ಔಪಚಾರಿಕ ಅಂಚುಗಳನ್ನೂ ಉಳಿಸದೆ ಒತ್ತೊತ್ತಾಗಿ ತುಂಬಿದ, ಕೇವಲ ಟಿಪ್ಪಣಿ ರೂಪದ ದಾಖಲೆಯಾದರೂ ಸುಮಾರು ಎಪ್ಪತ್ತು ಪುಟಗಳಷ್ಟಿದೆ. ಮುಂದೆ, ಅಂದರೆ ಸುಮಾರು ೧೯೮೫ರಿಂದ ೨೦೦೦ದವರೆಗೆ ನನ್ನದೇ ನಕ್ಷೆಯೊಡನೆ ಅಂಕಿಸಂಕಿಗಳಕಾರ್ಡುಗಳನ್ನು ಮಾಡುತ್ತ ಬಂದೆ. ಅವು ಸುಮಾರು ೯೫ ಬಗೆಯವು ಇವೆ. ನನ್ನ ಹಲವು ಲೇಖನಗಳಲ್ಲಿ ಅವುಗಳ ಪ್ರತಿಕೃತಿಯನ್ನು ನೀವೂ ನೋಡಿದ್ದೀರಿ. ಮತ್ತವುಗಳಲ್ಲಿ ಅನೇಕವನ್ನು ಅನುಸರಿಸುವ ಉತ್ಸಾಹಿಗಳ ಸೌಕರ್ಯಕ್ಕೆ ಇಲ್ಲೇ ಮೇಲೆ ನಕ್ಷಾ ವಿಭಾಗದಲ್ಲಿ ಸ್ವಲ್ಪ ಮಟ್ಟಿಗೆ ಪರಿಷ್ಕರಿಸಿಯೂ ಪ್ರಕಟಿಸಿದ್ದೇನೆ. ೨೦೦೮ರಿಂದೀಚೆಗೆ ಮಾತ್ರ ಈ ಗಣಕ ಮತ್ತು ಜಾಲತಾಣದ ದಾಖಲೆಗಳಿಗಿಳಿದೆ, ಹೆಚ್ಚು ಲೋಕಾಂತರಗೊಂಡೆ. ಈ ಎಲ್ಲ ದಾಖಲೆಗಳು ಸ್ಪಷ್ಟಪಡಿಸುವಂತೆ ನೇರ ಅಮೆದಿಕ್ಕೆಲ್ ಶಿಖರವನ್ನೇ ಲಕ್ಷ್ಯವಾಗಿಟ್ಟುಕೊಂಡು ಏಳೆಂಟು ಬಾರಿ, ಒಟ್ಟಾರೆ ಆ ಪರಿಸರದಲ್ಲಿ ಕನಿಷ್ಠ ಹತ್ತು ಹದಿನೈದು ಬಾರಿಯಾದರೂ ನಾನು ವಿವರವಾಗಿ ಓಡಾಡಿದ್ದೇನೆ. ಅವನ್ನೆಲ್ಲ ವಿಸ್ತರಿಸಿ ನಿಮ್ಮ ತಲೆ ತಿನ್ನುವುದಿಲ್ಲ. ಅವುಗಳಲ್ಲಿ ಕೆಲವು ಕಾರ್ಡುಗಳನ್ನು ಮಾತ್ರ ಇಲ್ಲಿ ಪ್ರಕಟಿಸಿದ್ದೇನೆ – ಗಮನಿಸಿ. ಉಳಿದಂತೆ ಒಂದು ಅನುಭವವನ್ನು, ಕೊನೆಯಲ್ಲಿ ದಿಕ್ಕೆಲ್ ಕಲ್ಲನ್ನೇರಿದ ಕಥನವನ್ನು ವಿಸ್ತರಿಸಿ ಪ್ರಸ್ತುತ ಸರಣಿಯನ್ನು ಮುಗಿಸುತ್ತೇನೆ.
ಕಾಳಿಂಗನೊಡನೆ ಹಿಡಿಯುವಾಟ:
ಅಂದು ಶರತ್ (ನೋಡಿ: ಉರಗೋದ್ಯಾನ ಕುದುರೆಯ ಬಾಯಿಯಿಂದ) ಎಂಬ ಉದಯೋನ್ಮುಖ ಉರಗಸಂರಕ್ಷಕ, ಜನಪದರು ಗುರುತಿಸುವಂತೆ ಸಂಕವಾಳದ ಅರ್ಥಾತ್ ಕಾಳಿಂಗ ಸರ್ಪದ ಸಂಶೋಧನೆಗಿಳಿದಿದ್ದ. ಆತ ವಿದ್ಯಾರ್ಥಿ ದೆಸೆಯಲ್ಲಿ ದಿಕ್ಕು ತಪ್ಪಿದ ಉರಗಗಳನ್ನು ಪಾರುಗಾಣಿಸುತ್ತಿದ್ದದ್ದು, ಹಾವುಗಳ ಸಂಗ್ರಹ ನಡೆಸಿ ಇಂದು ಪಿಲಿಕುಳದಲ್ಲಿ ನೆಲೆಗೊಂಡಿರುವ ಉರಗೋದ್ಯಾನದ ಮೂಲಸೆಲೆಯಾದದ್ದು ನಿಮಗೆಲ್ಲ ತಿಳಿದೇ ಇದೆ. ಆತ ಪ್ರಾಣಿವಿಜ್ಞಾನದಲ್ಲಿ ಸ್ನಾತಕೋತ್ತರ ಶಿಕ್ಷಣ ಮುಗಿಸಿ, ಸಂಶೋಧನಾ ನೆಲೆಯಲ್ಲಿ ವಿಚಾರಗಳನ್ನು ಹುತ್ತಗಟ್ಟಿಸುವ ಉಮೇದಿನಲ್ಲಿದ್ದ (ಸುಮಾರು ೧೯೮೭). ಹಾಗೆಂದು ಕಾಡಿಗೆ ಹೋಗೋಣವೆಂದರೆ, ಅರಣ್ಯ ಇಲಾಖೆ ಸಂದ ಯುಗದ ಕಾನೂನಿನ ನೆಪ ಹಿಡಿದು ವೈಚಾರಿಕ ಅಥವಾ ವೈಜ್ಞಾನಿಕ ಬೆಳವಣಿಗೆಗಳನ್ನೆಲ್ಲ ಹತ್ತಿಕ್ಕುತ್ತಿತ್ತು. ಅಂದಿನ ಅರಣ್ಯ ಇಲಾಖೆ ಅನ್ನಿ, ಇಂದಿನ ವನ್ಯ ಇಲಾಖೆ ಅನ್ನಿ ನನಗೆ ನೆನಪಾಗುವ ರೂಪಕ – Dog in the manger! ಅರ್ಥಾತ್ ತನಗೆ ತಿನ್ನಲಾಗದ, ಜಾನುವಾರುಗಳಿಗೆ ಮೆಲ್ಲಲು ಬಿಡದ ಹುಲ್ಲ ಮೆದೆಯೇರಿದ ಮೊಂಡು ನಾಯಿ! ಸಹಜವಾಗಿ ನಾನು ಶರತ್ತಿಗೆ ನೆರಿಯ ಹೆಬ್ಬಾರರ ಖಾಸಾ ಕಾಡಿನ ಪರಿಚಯ ಮಾಡಿಕೊಟ್ಟದ್ದು ಉಪಯೋಗಕ್ಕೆ ಬಂದಿತ್ತು. ಮತ್ತೆ ತಿಳಿಯಿತು, ಕೌಟುಂಬಿಕ ವಲಯದಲ್ಲಿ ಶರತ್ತಿಗೆ ಹೆಬ್ಬಾರರೊಡನೆ ಏನೋ ಬಂಧುತ್ವವೂ ಇತ್ತು. ಶರತ್ತಿಗೆ ಕಾಳಿಂಗ ಸರ್ಪದ ಕುರಿತ ಕ್ಷೇತ್ರ ಕಾರ್ಯ ನಡೆಸಲು ಅನುಕೂಲವಾಗುವಂತೆ ಹೆಬ್ಬಾರರು ಏಲಕ್ಕಿ ಮಲೆಯ ರೈಟರ ಬಂಗ್ಲೆಯಲ್ಲಿ ಒಂದು ಪುಟ್ಟ ಕೋಣೆಯನ್ನೇ ಬಿಟ್ಟುಕೊಟ್ಟಿದ್ದರು.
ನಾಗರಿಕ ರೂಢಿಗಳಿಗೆ ಒಗ್ಗಿಹೋದ ಶರತ್, ಮತ್ತಾತನ ಸಹಾಯಕ ವಿದ್ಯುತ್, ನಲ್ಲಿ, ಶೌಚಾನುಕೂಲಗಳಿಲ್ಲದ `ಬಂಗ್ಲೆ’ಯಲ್ಲಿ, ಊರಿಂದ ಒಯ್ದ ಅಕ್ಕಿ ಬೇಯಿಸಿಕೊಂಡು, ಕೇವಲ ಉಪ್ಪಿನಕಾಯಿ ನಂಚಿಕೊಂಡು ಕೆಲವು ತಿಂಗಳೇ ಕಳೆಯುತ್ತಿದ್ದರು. ನೀವು ನಂಬಿದರೆ ನಂಬಿ, ನನಗಂತೂ ಅದು ಮತ್ಸರದ ವಿಷಯವೇ ಆಗಿತ್ತು. ಯಾಕೆಂದರೆ ನಾನು ವಿದ್ಯಾರ್ಥಿ ದಿನಗಳಲ್ಲೇ ಹೆನ್ರಿ ಡೇವಿಡ್ ಥೋರೋನ ವಾಲ್ಡನ್ ಸರೋವರದ ತಟದಲ್ಲಿ ಕಳೆದ ದಿನಗಳ ಕಥನ ಕೇಳಿದ್ದೆ. ಕನಿಷ್ಠ ನಾಗರಿಕ ವ್ಯವಸ್ಥೆಗಳೊಡನೆ, ಯಾವುದೇ ಅಧ್ಯಾತ್ಮಿಕ ಹುನ್ನಾರಗಳಿಲ್ಲದೆ, ಪರಿಸರಾನುಸಾರಿಯಾಗಿ ಬದುಕುವುದು ಇಂದಿಗೂ ನನಗೆ ಈಡೇರದ ಬಯಕೆಯಾಗಿಯೇ ಉಳಿದಿದೆ. ಇರಲಿ, ನೆರಿಯದ ರೈಟರ ಬಂಗ್ಲೆಗೇ ಮತ್ತೆ ಬನ್ನಿ. ಅಲ್ಲಿ ಶರತ್ತಿಗೆ ಬಲು ನಿಷ್ಠಾವಂತ ಮತ್ತು ಸಮರ್ಥ ಸಹಾಯಕರಾಗಿ ಒದಗಿದ್ದ ತರುಣ ಭಟ್ಟರ ಕುರಿತು ಎರಡು ಮಾತು ಹೇಳಲೇಬೇಕು. ಕ್ಷಮಿಸಿ, ಅವರ ನಿಜನಾಮಧೇಯ ನಾನು ಮರೆತಿದ್ದೇನೆ. ಆತ ಪುತ್ತೂರು ಕಾಲೇಜಿನಲ್ಲಿ ಶರತ್ತಿನ ಶಿಷ್ಯನೇ ಆಗಿದ್ದರಂತೆ. ಬಿಯೆಸ್ಸಿಯನ್ನು ಸಮರ್ಥವಾಗಿಯೇ ಪೂರೈಸಿದ್ದರೂ ಕೌಟುಂಬಿಕ ಜವಾಬ್ದಾರಿಗಳಿಂದ ಸ್ನಾತಕೋತ್ತರ ಓದಿಗೆ ಮುಂದುವರಿಯಲಾಗದೇ ಉಳಿದಿದ್ದರು. ನೆರಿಯದ ಶಿಬಿರವಾಸದ ಕಾಲದಲ್ಲಿ ಈ ಭಟ್ಟರು ಸ್ವಂತಾಸಕ್ತಿಯಿಂದ ಪಕ್ಷಿವೀಕ್ಷಣೆಯನ್ನೂ ಬೆಳೆಸಿಕೊಂಡ ಪರಿ ನೋಡಿ, ನಾವೆಲ್ಲ ಪ್ರೀತಿಯಿಂದ `ಸಲೀಂಅಲಿ’ ಎಂದೇ ಸಂಬೋಧಿಸುತ್ತಿದ್ದದ್ದೂ ಇತ್ತು! ಈತ ಮುಂದೆ ಅಣ್ಣಾಮಲೈ ಮುಕ್ತ ವಿವಿ ನಿಲಯದ ಪ್ರಾಣಿಶಾಸ್ತ್ರ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ್ದು, ಅನಿವಾರ್ಯತೆ ಮತ್ತು ಪ್ರಕೃತಿಪ್ರೇಮಗಳನ್ನು ಒಗ್ಗೂಡಿಸಿ ಪಿತ್ರಾರ್ಜಿತ ಭೂಮಿಯಲ್ಲಿ ಕೃಷಿಗೇ ಮರಳಿದ್ದು ಕೇಳಿದ್ದೇನೆ.
ಅದೊಂದು ಪರ್ವ ಕಾಲದಲ್ಲಿ ಶರತ್ತಿಗೆ ನೆರಿಯದ ಕಾಡಿನ ಮೂಲೆಯೊಂದರಲ್ಲಿ ಕಾಳಿಂಗವೊಂದು ಗೂಡು ಕಟ್ಟಿದ್ದ ಸುದ್ಧಿ ಮಲೆಕುಡಿಯರಿಂದ ಸಿಕ್ಕಿತ್ತು. ಅನಂತರ ಸರದಿಯಲ್ಲಿ ಶರತ್ ಮತ್ತು ಭಟ್ಟರು ಅದರ ಮೇಲೆ ನಿಗಾವಹಿಸಿ, ಅಲ್ಲಿ ಠಳಾಯಿಸಿದ್ದ ಕಾಳಿಂಗನ ಚಟುವಟಿಕೆಗಳನ್ನು ದಾಖಲಿಸುತ್ತಲೇ ಇದ್ದರು. ಹಾವುಗಳಲ್ಲಿ ಗೂಡು ಕಟ್ಟುವ ಏಕೈಕ ವಿಚಿತ್ರ ಮಾದರಿ – ಕಾಳಿಂಗ ಸರ್ಪಗಳು. ಅದರ ಗೂಡಿನಲ್ಲಿ ಮೊಟ್ಟೆ ಇಟ್ಟಾಗಿದೆಯೇ, ಹಾವು ಅದಕ್ಕೆ ಕಾವು ಕೊಡುತ್ತದೆಯೇ ಅಥವಾ ಕೇವಲ ಕಾವಲು ನಡೆಸುತ್ತದೆಯೇ, ಮುಂದೆ ಶಿಶುಸಂಗೋಪನೆ ಇದೆಯೇ ಎಂಬಿತ್ಯಾದಿ ನೂರೆಂಟು ಪ್ರಶ್ನೆಗಳೊಡನೆ ಇವರ ಪಹರೆ ತೀವ್ರಗೊಂಡಿತ್ತು. ಆ ಎಡೆಯಲ್ಲೆಲ್ಲೋ ಶರತ್ ತನ್ನ ಮಂಗಳೂರ ಮನೆಗೆ ಬಂದವರು ನನಗೂ ಸುದ್ಧಿ ಮುಟ್ಟಿಸಿದರು. ಅದನ್ನು ಕಣ್ಣಾರೆ ನೋಡುವ ಸಂತೋಷಕ್ಕಾಗಿ ಅದೊಂದು ಆದಿತ್ಯವಾರ ನಾನು ಶರತ್ ಬೈಕ್ ಅನುಸರಿಸಿದ್ದೆ. ನನ್ನ ಬೈಕಿನಲ್ಲಿ ಎಂದಿನಂತೆ, ಹೆಂಡತಿ ದೇವಕಿ ಮತ್ತು ಸುಮಾರು ಒಂಬತ್ತರ ಹರಯದ ಮಗ – ಅಭಯನಿದ್ದ. ಮಲೆಕುಡಿಯರ ವಸತಿಗಳ ಸಮೀಪವೆಲ್ಲೋ ಬೈಕ್ ಇಳಿದೆವು. ಆತ್ಮರಕ್ಷಣಾ ವಿಚಾರದಲ್ಲಿ ಜನಪದ ನಂಬಿಕೆಗಳನ್ನು ತುಸು ಗೌರವಿಸಿ, ತುರ್ತು ಪರಿಸ್ಥಿತಿಯಲ್ಲಿ ಮುಖ್ಯವಾಗಿ ಅಭಯ ರಕ್ಷಣೆಯನ್ನೂ ಗಮನದಲ್ಲಿಟ್ಟುಕೊಂಡೇ ಕಾಡು ನುಗ್ಗಿದೆವು. ಒಂದೆರಡು ಕಿಮೀ ಸವಕಲು ಜಾಡುಗಳಲ್ಲಿ ಬೆಟ್ಟದೇರು ಕಳೆದು ಲಕ್ಷ್ಯ ಸಮೀಪಿಸಿದ್ದೆವು. ಕೊನೆಯ ನೂರಿನ್ನೂರು ಮೀಟರ್ ಅಂತೂ ಉಸಿರು ಬಿಡಲೂ ಯೋಚಿಸುತ್ತಾ ತುದಿಗಾಲಿನಲ್ಲಿ ಎಂಬಂತೆ ನಡೆದಿದ್ದೆವು. ಇನ್ನೂ ಸುಮಾರು ಹದಿನೈದು ಇಪ್ಪತ್ತಡಿ ಅಂತರ ಉಳಿಸಿಯೇ ತರಗೆಲೆಗಳ ಸಾಕಷ್ಟು ದೊಡ್ಡ ಗುಪ್ಪೆಯಂಥ ಕಾಳಿಂಗನ ಗೂಡನ್ನು ದಿಟ್ಟಿಸಿದ್ದೆವು. ಎಚ್ಚರದಲ್ಲಿ ಹಿಂದೆ ಸರಿಯುವ ಅವಕಾಶ ಉಳಿಸಿಕೊಂಡೇ ತುಸು ಆಚೀಚೆ ಸುತ್ತಾಡಿ ಕೆಲವು ಮಿನಿಟು ಕಳೆದೆವು. ಆಸುಪಾಸಿನಲ್ಲೆಲ್ಲೂ ಹಾವಿನ ಚಲನವಲನ ಕಾಣಲಿಲ್ಲ. ಅಕಸ್ಮಾತ್ ಹಾವು ಸಮೀಪದಲ್ಲೆಲ್ಲಾದರೂ ಇದ್ದರೆ, ತರಗೆಲೆ ಗುಡ್ಡೆಯಡಿಯಲ್ಲಿ ಮೊಟ್ಟೆಗಳು ಇರುವುದು ನಿಜವೇ ಆದರೆ ಎಂಬ ವಿಚಾರಗಳ ಸಂಶಯಲಾಭವನ್ನು ಪ್ರಕೃತಿಗೇ ಬಿಟ್ಟು ನಾವು ಬೈಕುಗಳಿಗೆ ಮರಳಿದೆವು.
ಬೈಕ್ ಮತ್ತೆ ಏರಿ ನಮ್ಮ ಸವಾರಿ ಏಲಕ್ಕಿ ಮಲೆಯತ್ತ ಸಾಗಿತು. ಕಾಳಿಂಗನ ಚಲನವಲನ ಮತ್ತು ಗೂಡಿನ ಬಗ್ಗೆ ನಿರಂತರ ನಿಗಾ ವಹಿಸಿದ್ದ ಭಟ್ಟರು ರೈಟರ ಬಂಗ್ಲೆಯಲ್ಲಿ ಸಿಕ್ಕರು. ಶರತ್ ಅಲ್ಲೇ ಉಳಿಯುವವರಿದ್ದರು. ಹಾಗಾಗಿ ನಾವು ತುಸು ಹರಟೆ ಕೊಚ್ಚಿ, ಕತ್ತಲೆಗೂ ಮೊದಲೇ ಮನೆ ಸೇರುವ ಅಂದಾಜಿನಲ್ಲಿ ಘಟ್ಟ ಇಳಿಯತೊಡಗಿದೆವು. ಏಲಕ್ಕಿ, ಕಾಫಿ ಕಳೆದು, ರಬ್ಬರ್ ತೋಟದ ಹರಹೂ ಮುಗಿಸಿ ಮತ್ತೆ ನೈಜ ಕಾಡಿನ ವಲಯಕ್ಕೆ ಬಂದಿದ್ದೆವು. ನನ್ನ ಎದುರು ಟ್ಯಾಂಕನ್ನಾಧರಿಸಿ ಅಭಯ, ಬೆನ್ನಿಗೆ ದೇವಕಿ. ಕಚ್ಚಾ ಮಾರ್ಗದಲ್ಲಿ, ಒಣ ಕಡ್ಡಿ ತರಗೆಲೆ ಹಾಸಿನಲ್ಲಿ ಬೈಕ್ ಜಾರದಂತೆ, ಮುಸುಕಿನಲ್ಲಿ ಹುದುಗಿರಬಹುದಾದ ತಗ್ಗು, ಕಲ್ಲುಗಳನ್ನು ತೊಡರಿ ಮಗುಚದಂತೆ ನಿಧಾನಕ್ಕೆ, ಆಗೀಗ ಎಡಬಲಕ್ಕೆ ಸಣ್ಣದಾಗಿ ಕಾಲೊತ್ತಿನ ಆಸರೆಗಳೊಡನೆ ಓಟ ಸಾಗಿಸಿದ್ದೆ. ನನ್ನ ದೃಷ್ಟಿ ಬೈಕಿಗೆ ಇದ್ದುದರಲ್ಲಿ ಹಸನಾದ ಜಾಡು ಹುಡುಕುವುದರೊಂದಿಗೆ ಸುತ್ತಣ ಪರಿಸರದ ಬಗ್ಗೆಯೂ ಜಾಗೃತವಾಗಿಯೇ ಇತ್ತು. ಇದರ ಫಲವೋ ಎಂಬಂತೆ ಒಂದು ಸಣ್ಣ ತಿರುವು ಕಳೆಯುತ್ತಿದ್ದಂತೆ, ಒಮ್ಮೆಲೆ ಬಲಪಕ್ಕದ ಪೊದರ ಮರೆಯಿಂದ ದೊಡ್ಡ ಹಾವು ದಾರಿಗಿಳಿಯುವುದನ್ನು ಗಮನಿಸಿದೆ. ಹಾವು ಸಹಜ ಓಟದಲ್ಲಿತ್ತು ಮತ್ತು ನಮ್ಮೊಳಗೆ ಸುಮಾರು ಮೂವತ್ತಡಿ ಅಂತರವೂ ಇತ್ತು. ನಾನಲ್ಲೇ ಬೈಕ್ ಇಂಜಿನ್ ಆರಿಸಿ ನಿಂತೆ. ಹದಿನೈದು ಮಿನಿಟಿಗೂ ಮೊದಲು ಶರತ್ ಮತ್ತು ಭಟ್ಟರ ಮಾತಿನ ವಿವರಣೆಗಳಲ್ಲಷ್ಟೇ ದಟ್ಟವಾಗಿದ್ದ ಕಾಳಿಂಗ ಇಲ್ಲಿ ನಮ್ಮೆದುರು ಮೈವೆತ್ತಿತ್ತು. ಅದಕ್ಕೆ ಬೇಟೆಯಟ್ಟುವ ಧಾವಂತ ಇರಲಿಲ್ಲ. ನಮ್ಮನ್ನು ಕಂಡೂ ಕಾಣದಂತೆ, “ಮನೆಯವರೆಗೆ ಬಂದಾಗ ಸಿಕ್ಕಲಾಗಲಿಲ್ಲ” ಎಂದು ಹೇಳಿಕೊಂಡಂತೆ, ಮಿರಮಿರ ಮಿಂಚುತ್ತ ದಾರಿಗಡ್ಡಲಾಗಿ ಪೂರ್ಣ ಹರಿದಿತ್ತು. `ನರ ವಾಸನೆ ಮಾತ್ರದಿಂದ ಅಟ್ಟಿಸಿಕೊಂಡು ಬರುವ’, `ವಿಷವನ್ನು ಬಾಣದಂತೆ ಕಕ್ಕಿ ಕೊಲ್ಲುವ’ `ಕ್ರೂರ ಸಂಕವಾಳ’ ಅಲ್ಲಿರಲೇ ಇಲ್ಲ. ವನಸಿರಿಯ ಇನ್ನೊಂದೇ ರತ್ನ, ಜೀವ ಸರಪಳಿಯಲ್ಲಿ ನಮ್ಮ (ಮನುಷ್ಯರ) ಉಡಾಫೆಯಿಂದ ತೀರಾ ದುರ್ಬಲಗೊಂಡಿರುವ ಅಪೂರ್ವ ಗೊಣಸು ದುರ್ಬಲ ಮನಸ್ಸುಗಳ ಅಪಕಥನಕ್ಕೇನೂ ಪುಷ್ಟಿ ಕೊಡದೆ, ತಣ್ಣಗೆ ಎಡ ಕೊಳ್ಳಕ್ಕಿಳಿದು ಹೋಯ್ತು.
ಭೀಮ ಒಲೆ: ೧೯೮೦ರ ಡಿಸೆಂಬರ್ ತಿಂಗಳಲ್ಲಿ ನಾವು (ಆರೋಹಣ ಪರ್ವತಾರೋಹಿಗಳು ಸಾಹಸಿಗಳು, ಮಂಗಳೂರು) ಹಿಂದೆಂದೂ ಆಗಿಲ್ಲ, ಮುಂದೆ ಇಂದಿನವರೆಗೂ (೨೦೧೬) ಆಗಿಯೇ ಇಲ್ಲ ಎನ್ನುವಂಥ ಕಲಾಪ – ಪರ್ವತಾರೋಹಣ ಸಪ್ತಾಹವನ್ನು, ದಕ ಜಿಲ್ಲೆಯೊಳಗೆ ನಡೆಸಿದೆವು. ಈ ಅಪೂರ್ವ ಕಲಾಪದ ವಿವರಗಳನ್ನು ಮುಂದೆಂದಾದರೂ ಇಲ್ಲಿ ಹಂಚಿಕೊಳ್ಳುತ್ತೇನೆ. ಸಪ್ತಾಹದ ನೆಪದಲ್ಲಿ ನಾವು ಧರ್ಮಸ್ಥಳದ ವೀರೇಂದ್ರ ಹೆಗ್ಗಡೆಯವರಿಂದ ಶಿಲಾರೋಹಣಕ್ಕೆ ಅವಶ್ಯವಾದ ಕನಿಷ್ಠ ಸಲಕರಣೆಗಳ ಸಂಗ್ರಹಣೆ ಮಾಡಿಕೊಂಡಿದ್ದೆವು. ಆ ಏಳು ದಿನಗಳ ಕಲಾಪದ ಸಮಾರೋಪವೂ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನಲ್ಲೇ ಸಾಂಗವಾಗಿತ್ತು. ಸಪ್ತಾಹದ ಮತ್ತು ಅಂದಿನ ಕೊನೆಯ ಕಲಾಪವಾಗಿ ನೀವೇ ಅನುಭವಿಸಿ – ಏರಿಕಲ್ಲು ಏರೋಣ, ವ್ಯವಸ್ಥೆ ಮಾಡಿದ್ದೆವು. ಅಂದರೆ, ಉಜಿರೆಯಿಂದ ರಾತ್ರಿಯೇ ಚಾರ್ಮಾಡಿ ಘಾಟಿಯ ಹದಿನಾಲ್ಕನೇ ಕಿಮೀ ಕಲ್ಲಿನವರೆಗೆ ಚಾರಣ. ಏರಿಕಲ್ಲಿನ ನೇರ ಬುಡದ ಕಗ್ಗಾಡಿನ ಅಸಮ ನೆಲದಲ್ಲಿ, ಕೇವಲ ಶಿಬಿರಾಗ್ನಿ ಬೆಳಕು ಮತ್ತು ರಕ್ಷಣೆಯಲ್ಲಿ ಉಳಿದ ರಾತ್ರಿಗೆ ನಿದ್ರೆ. ಬೆಳಿಗ್ಗೆ ಅಲ್ಲೇ ಉಪಾಹಾರ ಮುಗಿಸಿ, ಶಿಖರಾರೋಹಣ. ಇದರಲ್ಲಿ ನಮಗೆ ಏರಿಕಲ್ಲಿನ ತಪ್ಪಲಿಗೆ ಹಿಂದಿನ ಸಂಜೆಯೇ ಸ್ವಯಂಸೇವಕರನ್ನು ತಲಪಿಸುವ ಮತ್ತು ಬೆಳಗ್ಗಿನ ಉಪಾಹಾರಾದಿಗಳನ್ನು ಉಚಿತವಾಗಿ ಒದಗಿಸುವ ಹೊಣೆಗಾರಿಕೆಯನ್ನು ನೆರಿಯ ಹೆಬ್ಬಾರರು ವಹಿಸಿಕೊಂಡದ್ದು ಸ್ಮರಣೀಯ.
ಸಂಗ್ರಹಿಸಿದ್ದ ಸಲಕರಣೆ ಮತ್ತು ಏರಿಕಲ್ಲಿನ ಸಾಧನೆಯಲ್ಲಿ ಬಳಕೆಯಾದ ತಂತ್ರಪ್ರಾವೀಣ್ಯಕ್ಕೆ ದಿಕ್ಕೆಲ್ ಕಲ್ಲು ಒಂದು ಪರೀಕ್ಷಾಕಣವಾಗಿಯೇ ಕಾಣಿಸಿತ್ತು. ಚಾರ್ಮಾಡಿ-ಶಿರಾಡಿ ಸಾಹಸಯಾನ ಪೂರೈಸಿ ಸುಮಾರು ಎರಡು ವರ್ಷಗಳೇ ಕಳೆದಿತ್ತು. ಅಂದಿನ ಸದಸ್ಯರೆಲ್ಲ ತಂತಮ್ಮ ಕಾರ್ಯರಂಗದಲ್ಲಿ ಚದುರಿಹೋಗಿದ್ದರು. ಆದರೇನು, ಹೊಸದಾಗಿ ಕಥನ ಕೇಳಿದವರೆಲ್ಲರನ್ನೂ ಬಾಕಿಯುಳಿದ ದಿಕ್ಕೆಲ್ ಕಲ್ಲಿನ ಆರೋಹಣದ ಸವಾಲು ಹುಚ್ಚೆಬ್ಬಿಸುತ್ತಿತ್ತು. ಪ್ರಶ್ನೆ ಬಂತು – ಮತ್ತೊಮ್ಮೆ ಹೋಗಬಾರದೇ? ದಿಕ್ಕೆಲ್ ಕಲ್ಲು ಏರುವುದನ್ನೇ ಸವಾಲಾಗಿ ಸ್ವೀಕರಿಸಿ ನಮ್ಮಲ್ಲಿ ಕೆಲವು ಜನ ಹುರಿಗೊಂಡದ್ದೂ ಆಯ್ತು. ಅದೊಂದು ಆದಿತ್ಯವಾರ (೨೨-೩-೧೯೮೧) ಗೆಳೆಯ ಶರತ್ತಿನ ಜೀಪೇರಿ ನಮ್ಮ ತಂಡ ಹೊರಟೇಬಿಟ್ಟಿತು. ನಾನು, ಲೋಕೇಶ್, ಸಮೀರ, ಶೌರಿ ಅಮೆದಿಕ್ಕೆಲ್ ಆರೋಹಣದಲ್ಲಿ ಮೊದಲು ಪಾಲ್ಗೊಂಡವರೇ, ಮೊದಲೇ ಹೇಳಿದಂತೆ ಶರತ್ ನಮ್ಮ ಜತೆಯಲ್ಲಲ್ಲದಿದ್ದರೂ ಅಮೆದಿಕ್ಕೆಲ್ ಏಲಕ್ಕಿಮಲೆಯಿಂದ ಕಂಡವರೇ. ಉಳಿದಂತೆ ಹಿಂದೆ ಚಾರ್ಮಾಡಿ-ಶಿರಾಡಿಗೆ ಬಂದಿದ್ದ ಸಾಲಿಗ್ರಾಮದ ಮಂಜುನಾಥ ಉಪಾಧ್ಯ ಈ ಸಂತೋಷಕ್ಕೆ ತಮ್ಮ ವೆಂಕಟ್ರಮಣನನ್ನು ಕಳಿಸಿದ್ದರು. ಶರತ್ತಿನ ಸಹಪಾಠಿ, ಉರಗ ಚಟುವಟಿಕೆಗಳ ಸಹಚರ ಅಡ್ಡೂರು ಸೂರ್ಯ ಬಂದದ್ದು ಸಹಜವೇ ಇತ್ತು. ನನ್ನ ಅಂಗಡಿಯ ಸಹಾಯಕ ಪ್ರಕಾಶ, ಮೂಲದಲ್ಲಿ ಗೆರಸೊಪ್ಪೆಯ ಕಾಡಮೂಲೆಯವನೇ. ಅಲ್ಲಿ ಜನಪದದ ಅಂಗವಾಗಿ ಸುತ್ತಿದ ಕಾಡು, ಏರಿದ ಬೆಟ್ಟಗಳ ಅನುಭವಗಳನ್ನು ಇಲ್ಲಿ ಸ್ಮರಿಸಿಕೊಳ್ಳುವ ಅವಕಾಶ ಸಿಕ್ಕಾಗೆಲ್ಲ ಬಿಟ್ಟವನಲ್ಲ. ಇವನ ಈ ಆಸಕ್ತಿಯೇ ಈತನನ್ನು ಕೊಡಂಜೆ ಕಲ್ಲಿನಲ್ಲಿ ಜೀವನ್ಮರಣಗಳ ಅಂಚಿನಲ್ಲೇ ನಿಲ್ಲಿಸಿದ್ದು ನಿಮಗೆಲ್ಲ ತಿಳಿದೇ ಇದೆ. (ಇಲ್ಲದವರು ಇಲ್ಲಿ ಚಿಟಿಕೆ ಹೊಡೆಯಿರಿ – ಮಧುಚುಂಬನ) ಆತ ದಿಕ್ಕೆಲ್ ಹತ್ತುವುದನ್ನು ಹೇಗೆ ತಪ್ಪಿಸಿಕೊಂಡಾನು! ನಮ್ಮ ಪರ್ವತಾರೋಹಣ ಸಪ್ತಾಹದ ಚಟುವಟಿಕೆಗಳಿಂದ ಪ್ರಭಾವಿತನಾದ ಅಂದಿನ ಕೆಯಾರೀಸೀ, ಅಂದರೆ ಇಂದಿನ ಎನ್ನೈಟೀಕೇಯ ವಿದ್ಯಾರ್ಥಿ ಗೋಪಾಲಕೃಷ್ಣ ಬಾಳಿಗರಿಗೆ ತಮ್ಮಲ್ಲೊಂದು ಅಡ್ವೆಂಚರ್ ಕ್ಲಬ್ ಕಟ್ಟುವ ಉಮೇದು ಬಂದಿತ್ತು. ಅದಕ್ಕೆ ಸಲಕರಣೆ ತರಿಸಿಕೊಡುವ, ಅದನ್ನು ಉದ್ಘಾಟನೆ ಮಾಡುವ ಮತ್ತು ಪ್ರಾಥಮಿಕ ತರಬೇತು ನೀಡುವ ಗೌರವವನ್ನೂ ಬಾಳಿಗರು ನನಗೇ ಕೊಟ್ಟಿದ್ದರು. ಇವೆಲ್ಲದರ ಮುಂದುವರಿಕೆಯಾಗಿ ದಿಕ್ಕೆಲ್ ಕಲ್ಲೇರುವ ನಮ್ಮ ತಂಡಕ್ಕೆ ಬಾಳಿಗರೂ ಸೇರಿಕೊಂಡರು.
ಆರೋಹಣದ ಹಲವು ಚಟುವಟಿಕೆಗಳ ಅನುಭವೀ ಗೆಳೆಯ, ವೃತ್ತಿಪರ ಛಾಯಾಚಿತ್ರಗ್ರಾಹಿ ಯಜ್ಞ ತಾನಿದ್ದೇನೆ ಎಂದರು. ಅವರು ಸರಿಯಾಗಿಯೇ ಇಲ್ಲೊಂದು ಐತಿಹಾಸಿಕ ಘಟನೆ ನಡೆಯುತ್ತಿದೆ. ಅದನ್ನು ತಾನು ಸ್ವಂತ ವೆಚ್ಚದಲ್ಲಾದರೂ ದಾಖಲಿಸಿಕೊಳ್ಳಲೇಬೇಕೆಂಬ ಉನ್ನತ ಚಿಂತನೆ ಇತ್ತು. ಆ ದಿನಗಳಲ್ಲಿ ಸಾಹಿತ್ಯ ಮತ್ತು ಪರಿಸರಪ್ರೇಮಿ ಶಂಪಾ ದೈತೋಟ, ಪಾಣಾಜೆಮೂಲದವರಾದರೂ ಕೃಷಿಕನಾಗಿ ಅಮೆದಿಕ್ಕೆಲ್ಲಿನದೇ ತಪ್ಪಲ ಊರು ಮುಂಡಾಜೆಯಲ್ಲಿ ಕೃಷಿಕರಾಗಿದ್ದರು. ಅವರು ನನಗೆ ಪೂರ್ವಪರಿಚಿತರು, ದೂರದ ಬಂಧು, ನಮ್ಮ ಪರ್ವತಾರೋಹಣ ಸಪ್ತಾಹದ ಸಮಾರೋಪ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಬಂದದ್ದಲ್ಲದೆ, ನಿಶಾಚಾರಣದಲ್ಲಿ ಉಜಿರೆಯಿಂದ ಮುಂಡಾಜೆಯವರೆಗೆ ನಮ್ಮೊಡನೆ ಹೆಜ್ಜೆಯನ್ನೂ ಹಾಕಿದವರು. ಅವರು ಯಜ್ಞರೊಡನೆಯೂ ಇದ್ದ ಆತ್ಮೀಯತೆಯಲ್ಲಿ ನಮ್ಮ ದಿಕ್ಕೆಲ್ ಆರೋಹಣದ ಸಂಗತಿ ತಿಳಿದುಕೊಂಡರು. ಶಿಲಾರೋಹಣವಲ್ಲದಿದ್ದರೂ ಆ ಶಿಖರಕ್ಕೇರುವುದು, ನಮ್ಮ ಚಟುವಟಿಕೆಗೆ ಸಾಕ್ಷಿಯಾಗುವುದನ್ನು ಅಪೇಕ್ಷಿಸಿ ಅವರು ನಮ್ಮನ್ನು ನೆರಿಯದಲ್ಲೇ ಸೇರಿಕೊಂಡರು. ಪರ್ವತಾರೋಹಣ ಸಪ್ತಾಹದಲ್ಲಿ ಭಾಗಿಯಾಗಿದ್ದ ವಿದ್ಯಾರ್ಥಿ ಮಿತ್ರ – ಪಾಂಡುರಂಗ, ನಮ್ಮ ಅಮೆದಿಕ್ಕೆಲ್ ಯೋಜನೆ ತಿಳಿದು, ಸೇರಿಕೊಳ್ಳುವ ಬಯಕೆಯಲ್ಲಿ ದೂರದ ಕುಂದಾಪುರದಿಂದ ಏನೆಲ್ಲಾ ಸರ್ಕಸ್ ಮಾಡಿ ಬಂದು, ಹಿಂದಿನ ರಾತ್ರಿಯೇ ನೆರಿಯ ಸೇರಿ ಕಾದಿದ್ದರು. ಹೀಗೇ ಪರಿಚಿತರಾದ ಇನ್ನೂ ಒಂದೆರಡು ಮಂದಿ ಎಲ್ಲೆಲ್ಲಿಂದಲೋ ಬಂದು, ಕೆಲವರು ಕಕ್ಕಿಂಜೆಯಿಂದ ಬಾಡಿಗೆ ಸೈಕಲ್ ಮೆಟ್ಟಿ ನೆರಿಯದಲ್ಲಿ “ನಾವೂ ಇದ್ದೇವೆ” ಎಂದದ್ದು ನನ್ನ ನೆನಪಿನಲ್ಲಿದೆ, ವಿವರಗಳಲ್ಲಿ ಕಳೆದುಕೊಂಡಿದ್ದೇನೆ – ಕ್ಷಮಿಸಿ.
ಹೆಬ್ಬಾರರ ಕುಟುಂಬ ಬೆಳೆದ ಆತ್ಮೀಯತೆಯಲ್ಲಿ, ನಮ್ಮ ಜೀಪಿಗೆ ಮಿಕ್ಕ ಸದಸ್ಯರನ್ನು ಮತ್ತೂ ಮಾರ್ಗದರ್ಶನಕ್ಕೆ ಒಂದೆರಡು ಮಲೆಕುಡಿಯರನ್ನು ತಮ್ಮದೇ ವಾಹನದಲ್ಲಿ ಏಲಕ್ಕಿ ಮಲೆಗೆ ಮುಟ್ಟಿಸಿದರು. ಬಿಸಿಲೇರುವ ಮುನ್ನ ಎಲ್ಲ ಬಿದಿರುಬಂಗ್ಲೆಯನ್ನು ಮುಟ್ಟಿದ್ದೆವು. ಮಧ್ಯಾಹ್ನದ ತಿನಿಸು, ನೀರು, ಸ್ವಲ್ಪ ಶಿಲಾರೋಹಣದ ಸಲಕರಣೆಗಳ ಹೊರೆ ಹೊರೆಯಲ್ಲವೆಂಬಂತೆ ಎಲ್ಲ ಹಂಚಿಕೊಂಡು ಹೊತ್ತು, ಚುರುಕಾಗಿಯೇ ಶಿಖರದತ್ತ ನಡೆದೆವು. ನಮ್ಮೆದುರು ಬಿದ್ದಿದ್ದ ತಿರುವೇರಿನ ಕೊನೆಯಲ್ಲಿ ಬಾನ ಬಟ್ಟಲ ಹೊತ್ತು ನಮಗಾಗಿ ಹೊಸ ಸಾಹಸ ಪಾಕ ಅಡುತ್ತಿತ್ತು ದಿಕ್ಕೆಲ್ ಕಲ್ಲು. ಚಾರಣದ ಅಂತರದ ಲೆಕ್ಕ ಹಿಡಿದರೆ ನಾಲ್ಕು ಕಿಮೀಗೆ ಕಡಿಮೆ ಇರಲಿಲ್ಲವಾದರೂ ಹತ್ತೂಕಾಲು ಗಂಟೆಗೆ ಶಿಖರ ಸಾಧಿಸಿದ್ದೆವು.
ಉಜಿರೆಯ ಅಧ್ಯಾಪಕಿ ಪ್ರೇಮಾ ಶಾಸ್ತ್ರಿ ನಮ್ಮ ಚಟುವಟಿಕೆ ತಿಳಿದು, ಅಂದೇ ಶಿಶಿಲ ಬದಿಯಿಂದ ಅಮೆದಿಕ್ಕೆಲ್ಲಿಗೆ ಏರಿ ಬರಲು ತಮ್ಮದೇ ಪ್ರತ್ಯೇಕ ತಂಡವನ್ನೇ ಕಟ್ಟಿದ್ದರು. ಆ ತಂಡ ಹಿಂದಿನ ದಿನವೇ ಶಿಶಿಲದಲ್ಲಿ ಯಾರದೋ ಮನೆಯಲ್ಲುಳಿದು, ಕಾಡು ತಿಳಿದ ಮಾರ್ಗದರ್ಶಿಗಳನ್ನಿಟ್ಟುಕೊಂಡು ಹತ್ತೂವರೆಗೆ ಶಿಖದ ಸಾಧಿಸುವ ಸಂಕಲ್ಪ ತೊಟ್ಟಿತ್ತು. ಹಿಂದೆ ಗೋಖಲೆ ತಂಡ ಸಾಧಿಸಿದ ಆ ಕಷ್ಟದ ಮೈ ಇವರೂ ಸಾಧಿಸಿದ್ದೇ ಆದರೆ ಮತ್ತೊಂದು ಶೃಂಗಸಭೆಯೆಂದೇ ನಾನು ತಮಾಷೆ ಮಾಡಿದ್ದೆ. ಆದರೆ ನಾವು ಶಿಖರ ತಲಪಿದ ಸಂಭ್ರಮ, ಸುತ್ತಾಟ, ಕುರುಕಲು ತಿನ್ನುವುದನ್ನೆಲ್ಲ ಮುಗಿಸಿಕೊಂಡರೂ ಆ ತಂಡ ಪತ್ತೆಯಾಗಲೇ ಇಲ್ಲ. ಭೀಕರ ಕೊಳ್ಳದ ಆಳದಲ್ಲೂ ತಪ್ಪಲಿನ ವಿಸ್ತಾರ ಹರಹಿನಲ್ಲೂ ಮನುಷ್ಯ ಸುಳಿವು ಇರಲಿಲ್ಲ. ಕೂಗಿ ಕರೆದರೆ ಪ್ರತಿಧ್ವನಿಯಷ್ಟೇ ಅನುರಣಿಸಿತ್ತು: ಓ ಎಂದವರಿಲ್ಲ!
ಪಶ್ಚಿಮದ ಅದೂರ ಕೊಳ್ಳ – ಶಿಖರ ಸಾಲಿನಿಂದ ಆವೃತ್ತವಾಗಿದ್ದುದರಿಂದ ಪ್ರಾಕೃತಿಕ ಗಾಳಿ ಮಳೆಗಳಿಂದ ರಕ್ಷಿತವಾದ ದಟ್ಟ ಕಾಡು, ಆನೆಯೇ ಮೊದಲಾಗಿ ಜೀವವೈವಿಧ್ಯಗಳ ಬೀಡು. ಅಲ್ಲಿನ ಅಗೋಚರ ಅರ್ಬಿಗಳ ಏಕನಾದಕ್ಕೆ ಸುವಿಸ್ತಾರ ಆಲಾಪನೆಗಿಳಿದಂತಿತ್ತು ಕೀಟಗಳ ಕೀರಲು. ಸಮೀಪದಲ್ಲೇ ಎಲ್ಲೋ ಸಿಡಿದ ಗುಂಡಿನ ಧ್ವನಿಗೆ ಕಾಡೇ ಬೆಚ್ಚಿದಂತೆ ಮರ ಕುಲುಕಿತು ಕಪಿಸೇನೆ. ಕಾಡು ಹರಿದ ಮೇಲೂ ಪ್ರದಕ್ಷಿಣಾ ಕ್ರಮದಲ್ಲೇ ನಾವೇರಿ ಬಂದಿದ್ದ ಶಿಖರ ಸಾಲು ಚಿನ್ನದ ಬಣ್ಣದ ಹುಲ್ಲುಳಿದು ಶುದ್ಧಾಂಗ ಬೋಳು. ನಾವು ನಿಂತಿದ್ದ ಆ ಅತ್ಯುನ್ನತ ಕೇಂದ್ರದ ಭಾಗವಾಗಿಯೇ ದಕ್ಷಿಣಕ್ಕೆ ಚಾಚಿಕೊಂಡ, ಆದರೆ ತುಸು ತಗ್ಗಿನ ಶುದ್ಧಾಂಗ ಬಂಡೆ – ದಿಕ್ಕೆಲ್ ಕಲ್ಲು. ದಿಕ್ಕೆಲ್ ಕಲ್ಲು ಆಚಿನ ಕೊಳ್ಳದ ಬಹು ದೂರದವರೆಗಿನ ದೃಶ್ಯವನ್ನು ನಮ್ಮ ಕಣ್ಣಿಂದ ವಂಚಿಸುತ್ತಿತ್ತು. ದಿಕ್ಕೆಲ್ ಏರುವುದಿದ್ದರೆ ಮೊದಲು ಮುಖ್ಯ ಶಿಖರದಿಂದ ದಕ್ಷಿಣಕ್ಕೆ ಸುಮಾರು ಮುನ್ನೂರು ನಾನೂರಡಿ ತೀವ್ರ ಇಳಿಯಬೇಕಿತ್ತು. ಆ ಕೊನೆಯಲ್ಲಿ ಸುಮಾರು ಐವತ್ತಡಿಯ ಸಂದುಳಿಸಿ ದಿಣ್ಣೆಯೊಂದಿತ್ತು. ಆ ದಿಣ್ಣೆಯನ್ನು ನಾವು ದಿಕ್ಕೆಲ್ ಸೇತು ಎಂದೇ ಗುರುತಿಸಿಕೊಂಡಿದ್ದೆವು. ಸೇತು ಬಿಟ್ಟರೆ ದಿಕ್ಕೆಲ್ ಕಲ್ಲಿನ ಮೂರೂ ದಿಕ್ಕಿಗೆ ಸಾವಿರ ಅಡಿಗೂ ಮಿಕ್ಕ ಪ್ರಪಾತ. ಹನ್ನೊಂದು ಗಂಟೆಯ ಸುಮಾರಿಗೆ ಇನ್ನು ಪ್ರೇಮಶಾಸ್ತ್ರಿಗಳ ತಂಡ ಬರುವುದು ಅಸಾಧ್ಯವೆಂದು ನಾವು ಅಂದಾಜಿಸಿ, ದಿಕ್ಕೆಲ್ ಲಗ್ಗೆಗೆ ಅತ್ತಣ ಇಳುಕಲಿನಲ್ಲಿ ಮುಂದುವರಿದೆವು.
ನಾಲ್ಕೆಂಟು ಸಣ್ಣ ಕೊರಕಲು ದಾಟಿದರೆ ಅಖಂಡ ಬಂಡೆಯ ಹಾಸು. ಮೊದಮೊದಲು ಅದರ ತೆಮರು, ಸಂದುಗಳಲ್ಲಿನ ಮಣ್ಣನಲ್ಲಿ ಭದ್ರವಾಗಿ ಬೇರೂರಿದ್ದ ವಿರಳ ಮುಳ್ಳ ಕಂಟಿ ಮತ್ತು `ಬಂಗಾರ’ದ ಹುಲ್ಲನ್ನು ಹಾಯ್ದು ನಿಧಾನಕ್ಕೆ ಪಕ್ಕಾ ಬಂಡೆಮೈಯನ್ನೇ ಸೇರಿದೆವು. ಅಲ್ಲಿ ಬಂಡೆಯಲ್ಲಿ ಎರಡು ಸ್ಪಷ್ಟ ಧಾರೆಗಳು – ಪಶ್ಚಿಮದ್ದು ಸುಲಭವಾಗಿ ಕಾಣಿಸಿದರೂ ನಮ್ಮ ಗುರಿಯಾಗಿದ್ದ ದಿಕ್ಕೆಲ್ ಕಲ್ಲಿನಿಂದ ದೂರವಾದ ಆಳಕ್ಕಿಳಿದಂತಿತ್ತು. ಪೂರ್ವಧಾರೆಗೆ ದಿಕ್ಕೆಲ್ ಸೇತುವೊಂದೇ ಲಕ್ಷ್ಯ. ನಾವಿದನ್ನೇ ಅನುಸರಿಸಿದೆವು. ಇದರಲ್ಲಿ ಇಳಿಜಾರು ಹೆಚ್ಚುತ್ತಿದ್ದರೂ ನಮ್ಮ ಹೆಜ್ಜೆಗೆ ದೃಢತೆ ತರುವಂತೆ ಬಿರುಕು, ಚಡಿ, ಮೇಲ್ಮೈ ಕೊರಕಲು ಸಾಕಷ್ಟಿದ್ದುವು. ಹೀಗೆ ಸುಮಾರು ಒಂದು ನೂರಡಿ ಇಳಿಯುವುದರೊಳಗೆ ಬಂಡೆಯಲ್ಲೊಂದು ತಗ್ಗು. ಮುಂದೆ ಧಾರೆ ಸಪುರವೂ ತೀವ್ರ ಇಳುಕಲಿನ ಕೊರಕಲೂ ಆಗಿತ್ತು. ಇಲ್ಲಿ ಆಕಸ್ಮಿಕಗಳು ನಮ್ಮನ್ನು ಕಾಡದಂತೆ ಜೀವರಕ್ಷಣಾ ಹಗ್ಗದ ಬಳಕೆಗೆ ತೊಡಗಿದೆವು. ಆಳದ ಭಯ ಕಾಡಿದವರು, ಹಗ್ಗ ನೆಚ್ಚದವರು ನಿಧಾನಕ್ಕೆ ಹಿಂದೆ ಸರಿದು, ಶಿಖರ ಸೇರಿ ಕೇವಲ ದೂರದರ್ಶಿಗಳಾದರು. ಜೀವರಕ್ಷಣಾ ಹಗ್ಗ ಮತ್ತದರ ಬಳಕೆ ಬಗ್ಗೆ ಸೂಕ್ಷ್ಮವಾಗಿ ಎರಡು ಮಾತು. ಶಿಲಾರೋಹಣಕ್ಕೆಂದೇ ಲಭ್ಯವಿರುವ, ಸುಮಾರು ತೋರು ಬೆರಳ ದಪ್ಪದ ಈ ನೈಲಾನ್ ಮಿಶ್ರಿತ ಹತ್ತಿ ಹಗ್ಗ ನಮ್ಮಲ್ಲಿ ಒಟ್ಟು ಸುಮಾರು ಮುನ್ನೂರಡಿಯಾಗುವಂಥವು ಎರಡಿತ್ತು. ಇವುಗಳಲ್ಲಿ ಒಂದನ್ನು ನಾವು ನಾಲ್ಕೈದು ಮಂದಿ, ಪರಸ್ಪರ ಸುಮಾರು ಇಪ್ಪತ್ತು – ಮೂವತ್ತಡಿ ಅಂತರ ಉಳಿಸಿಕೊಂಡು ಸೂಕ್ತ ಗಂಟಿನೊಡನೆ ಸೊಂಟಕ್ಕೆ ಕಟ್ಟಿಕೊಂಡೆವು. ಮತ್ತೆ ಸರದಿಯಲ್ಲಿ ಓರ್ವ ಗಟ್ಟಿ ನೆಲೆ ಹಿಡಿದು ಸರಿದು ಹೋಗುವ ಹಗ್ಗದ ಮೇಲೆ ನಿಗಾವಹಿಸುತ್ತ ಇನ್ನೊಬ್ಬನನ್ನು ಇಳಿಸುವುದು ರಕ್ಷಣಾಕ್ರಮ. ಈಗಾಗಲೇ ಇಲ್ಲಿ ನನ್ನ ಹಳೆಯ ಲೇಖನಗಳನ್ನು ಓದಿದವರಿಗೆ ನಾನು ಹೆಚ್ಚು ಹೇಳಬೇಕೆಂದಿಲ್ಲ. (ಓದದವರು ಅವಶ್ಯ ಇಲ್ಲಿ ಚಿಟಿಕೆ ಹೊಡೆಯಿರಿ: ಕೊಡಂಜೆ ಕಲ್ಲಿನ ಮಾಲಿಕೆ ಅಥವಾ ರಂಗನಾಥ ಸ್ತಂಭ ವಿಜಯದ ಮಾಲಿಕೆ )
ಅಂದಂದಿನ ಸಲಕರಣೆಗಳ ಮತ್ತು ಸಮಯದ ಮಿತಿ ಮೀರದ ಎಚ್ಚರ ಇಂಥಲ್ಲಿ ಮುಂದಾಳಿಗೆ ಇರಲೇಬೇಕು. ಆ ಲೆಕ್ಕದಲ್ಲಿ ದಿಕ್ಕೆಲ್ ಸೇತು ಇನ್ನೇನು ಎಪ್ಪತ್ತಡಿ ಕೆಳಗಿರುವುದು ಸ್ಪಷ್ಟವಾಗುವವರೆಗೂ ನಾವು ಮರಳುವ ಜಾಡು ಖಾತ್ರಿಪಡಿಸಿಕೊಳ್ಳುತ್ತ ಮುಂದುವರಿದಿದ್ದೆವು. ಆ ಕೊನೇ ಹಂತದಲ್ಲಿ ಮಾತ್ರ ನಾವು ಸಲಕರಣೆಯಾಧಾರಿತ ಶಿಲಾವರೋಹಣ ತಂತ್ರವನ್ನೇ ಬಳಸಬೇಕಾಯ್ತು. ಇದನ್ನು ಸರಳವಾಗಿ ಹೇಳುವುದಿದ್ದರೆ ಬಾವಿಗಿಳಿದಂತೇ ಎನ್ನಬಹುದು. ಇಲ್ಲಿ ಒಂದು ಹಗ್ಗದ ತುದಿಯನ್ನು ಭದ್ರ ಬಂಡೆ ನೆಲೆಗೆ ಕಟ್ಟಿ, ಉಳಿದ ಉದ್ದವನ್ನು ಕೊಳ್ಳಕ್ಕೆ ಇಳಿಬಿಡುತ್ತೇವೆ. ಮತ್ತೆ ಒಮ್ಮೆಗೆ ಒಬ್ಬರಂತೇ ಹಗ್ಗವನ್ನು ಯೋಜಿತ ಕ್ರಮದಲ್ಲಿ ನಮ್ಮ ದೇಹಕ್ಕೆ ಸುತ್ತಿ, ಎರಡೂ ಕೈಗಳಿಂದ ಸುಲಭವಾಗಿ ನಿಯಂತ್ರಿಸುತ್ತ, ಹಿಮ್ಮುಖವಾಗಿ ಕೊಳ್ಳಕ್ಕೆ ಇಳಿ ಹೆಜ್ಜೆ ಹಾಕುತ್ತೇವೆ. ಇದು ಸಾಮಾನ್ಯರು ಬಾವಿಗಿಳಿಯುವಂತೇ ಕಂಡರೂ ವಾಸ್ತವದಲ್ಲಿ ಶ್ರಮರಹಿತ ಮತ್ತು ಹೆಚ್ಚು ವಿಶ್ವಾಸಾರ್ಹ ಕ್ರಮ. ದಿಕ್ಕೆಲ್ ಸೇತು ಮುಟ್ಟುವ ಕೊನೆಯ ಹಂತದಲ್ಲಿದ್ದ ಮುಳ್ಳ ಹೊದರೊಂದನ್ನು ಮೆಟ್ಟಿ ಹುಡಿ ಮಾಡಿಯೇ ಇಳಿದು, ಕ್ರಮವಾಗಿ ನಾವು ನಾಲ್ಕೈದು ಮಂದಿಯಷ್ಟೇ ಮುಂದಿನ ಹಂತಕ್ಕೆ ಅಣಿಯಾದೆವು. ಸುಮಾರು ನೂರೈವತ್ತಡಿ ಉದ್ದ ಮತ್ತು ಅಷ್ಟೇ ಅಗಲಕ್ಕೆ ಮಣ್ಣು, ಪುಡಿ ಬಂಡೆಗಳ ದಿಣ್ಣೆಯಂತೇ ಇತ್ತು ಆ ಸೇತು. ಹುಲ್ಲು ಪೊದರುಗಳನ್ನು ಸರಿಸುತ್ತ, ಮುರಿಯುತ್ತ, ಪುಟ್ಟ ಬಂಡೆದಿಣ್ಣೆ ಹತ್ತಿ ಕಳೆದು ದಿಕ್ಕೆಲ್ ಕಲ್ಲಿನ ಪಾದ ಕಂಡೆವು.
ನಮ್ಮ ಎದುರು ತೊಂಬತ್ತರ ಕೋನದಲ್ಲೇ ನಿಂತ ಆ ಪ್ರಧಾನ ಗುಪ್ಪೆ, ಶಿರೋಭಾಗದಲ್ಲಿ ಮುಂಚಾಚಿಕೊಂಡಿತ್ತು. ದಿಕ್ಕೆಲ್ಲಿನ ಇನ್ನೆರಡು ಗುಪ್ಪೆಗಳು ಮತ್ತೂ ಆಚಿನವಾದ್ದರಿಂದ ಗುಪ್ಪೆಗಳ ಲೆಕ್ಕ ಮೂರಾದರೂ ನಮಗೆ ಆಯ್ಕೆಗಳೇನೂ ಇರಲಿಲ್ಲ. ಎದುರಿನ ಮಹಾಬಂಡೆ ನೋಟಕ್ಕೆ ಅಗಾಧವೇ ಇದ್ದರೂ ಏರಿಕೆಗೆ ಸುಲಭ ಅವಕಾಶವನ್ನೇ ತೆರೆದಿಟ್ಟಿತ್ತು. ಓರೆಯಲ್ಲಿ ಅದರ ಬಲಭುಜದತ್ತ ಸರಿದ ಧಾರಾಳ ಪೊಳ್ಳು, ಕೊರಕಲುಗಳ ಸರಣಿಯನ್ನು ನಾವು ಮೊದಲು ಅಂದಾಜಿಸಿಕೊಂಡೆವು. ಏನಿದ್ದರೂ ಏರಿಕೆ ತೊಂಬತ್ತರ ಕೋನದಲ್ಲೇ ಇದ್ದುದರಿಂದ ನಾವು ರಕ್ಷಣಾ ಹಗ್ಗದ ಸರಣಿ ಉಳಿಸಿಕೊಂಡೇ ಏರಿದೆವು.
ಚಡಿಗಳಲ್ಲಿ ದೊಡ್ಡ ಚಕ್ಕೆಗಳು ಕಿತ್ತು ಬಾರದ ಎಚ್ಚರ ಅವಶ್ಯ. ಕೊರಕಲು, ಇನ್ನೂ ಮುಖ್ಯವಾಗಿ ಪೊಳ್ಳುಗಳನ್ನು ಬಲು ಎಚ್ಚರಿಕೆಯಲ್ಲಿ ಪರಿಶೀಲಿಸಿಕೊಂಡೇ ಮುಂದುವರಿದೆವು. ಹೆಜ್ಜೇನಿನ ಹುಟ್ಟೋ ಹದ್ದಿನ ಗೂಡೋ ಇದ್ದು ಅವುಗಳ ಆತಂಕಿತ ಆಕ್ರಮಣವಾಗಬಾರದಲ್ಲ! ಕೊನೆಯ ಹಂತದ ಮುಂಚಾಚಿಕೆಯ ತಳದಲ್ಲಿ ಪ್ರಕೃತಿಯೇ ಮೂಡಿಸಿದ್ದ ಕಂಡಿ ನಮಗೆ ಬಂಡೆಯ ಶಿರಕ್ಕೆ ಸುಲಭ ರಹದಾರಿಯನ್ನೇ ಕೊಟ್ಟಿತು. ನುಸುಳಿ ಸುಮಾರು ನೂರೈವತ್ತಡಿ ಎತ್ತರದ ಆ ದಿಕ್ಕೆಲ್ ಗುಪ್ಪೆಯ ತಲೆಯನ್ನು ಮಿನಿಟುಗಳ ಅಂತರದಲ್ಲೇ ಏರಿ ಮುಗಿಸಿದ್ದೆವು. ದಿಕ್ಕೆಲ್ ಕಲ್ಲನ್ನೇರಿದ್ದು ನಮ್ಮ ಲೆಕ್ಕಕ್ಕೆ ಮೊದಲು ಚಂದ್ರನ ಮೇಲೆ ಪಾದದಚ್ಚು ಮೂಡಿಸಿದ ನೀಲ್ ಆರ್ಮ್ಸ್ಟ್ರಾಂಗನದೇ ಸಾಧನೆ! ವಾಸ್ತವದಲ್ಲಿ ಹಳ್ಳಿಗರ ಮಟ್ಟದಲ್ಲಿ ಅದು ಅಕ್ಷತ ನೆಲವೇನೂ ಅಲ್ಲ ಎನ್ನುವುದಕ್ಕೆ ಅಲ್ಲಿ ಕೆಲವು ಕುರುಹುಗಳಿದ್ದವು. ಸಾರ್ವಜನಿಕದಲ್ಲಿ ಘೋಷಿಸಿಕೊಂಡು ಮೆರೆಯುವ ಪ್ರೀತಿಯವರು (ಇಂದಿನ ಫೇಸ್ ಬುಕ್ಕಿನ ಹಾಗೆ), “ಇತರ ಕುರುಹುಗಳಾದರೂ ತೀರಾ ವಿರಳವೂ ಹಳತೂ ಇತ್ತು” ಎಂದೇ ಹೇಳಿಕೊಂಡರೆ ತಪ್ಪಿಲ್ಲ! ನನಗೆ ಇಂದಿಗೂ ಅದನ್ನು ನೆನೆಸಿಕೊಳ್ಳುವಾಗ, ಇಂದು ಸಂತೆಕಟ್ಟೆಯೇ ಆಗಿದ್ದರೂ ಎವರೆಸ್ಟ್ ನೆತ್ತಿ ಕೊಡಬಹುದಾದ ಧನ್ಯತೆಯನ್ನೇ ಮೂಡಿಸುತ್ತದೆ
ದಿಕ್ಕೆಲ್ ಕಲ್ಲಿನ ಉಳಿದೆರಡು ಗುಪ್ಪೆಗಳು ಒಂದೇ ಕೋಡಿನ ಜೋಡಿ ಚಾಚಿಕೆಗಳು. ಅವನ್ನೇರುವುದಾದಲ್ಲಿ ನಮ್ಮ ಗುಪ್ಪೆಯ ನೆತ್ತಿಯಿಂದಾಚೆಗೆ ಮತ್ತೆ ಸುಮಾರು ಐವತ್ತಡಿ ನೇರ ಇಳಿಯಬೇಕಾಗುತ್ತಿತ್ತು. ಆ ತಗ್ಗಿನ ನೆಲವಾದರೂ ವಿಪರೀತ ಕಲ್ಲ ಚಕ್ಕೆ, ಮುಳ್ಳು, ಹುಲ್ಲುಗಳ ಜಾಲದಲ್ಲಿ ತೀರಾ ದುರ್ಗಮವಾಗಿಯೇ ಕಾಣುತ್ತಿತ್ತು. ಅಂದಿನ ನಮ್ಮ ಸಮಯಮಿತಿಯಲ್ಲಿ ಅವನ್ನು ಮರೆತು ಸಾಧಿಸಿದ್ದನ್ನಷ್ಟೇ ಸಂಭ್ರಮಿಸಿ ತೃಪ್ತರಾದೆವು. ನೆತ್ತಿ ಸುಡುವ ಸೂರ್ಯ, ಕಾದು ಸೀದುಹೋದ ಬಂಡೆ ಎಲ್ಲ ಮರೆತು, ಹಿಂದೆ ದಿಕ್ಕೆಲ್ ಶಿಖರದಲ್ಲೇ ಉಳಿದಿದ್ದ ಯಜ್ಞರಿಗೆ ಪೋಸು ಕೊಡುವುದು, ಶಂಪಾ ಹಾಗೂ ಇತರ ಮಿತ್ರರೊಡನೆ ಕೂಗು-ನುಡಿಯಾಡುವುದು, ಮೂಡುತ್ತಿದ್ದ ಪ್ರತಿಧ್ವನಿಗೆ ಬಾಲರಾಗುವುದು, ಬುತ್ತಿಯೂಟ ಮುಗಿಸುವುದನ್ನೆಲ್ಲ ಸಾಂಗಗೊಳಿಸಿದೆವು. ಆರೋಗ್ಯಪೂರ್ಣ ಪರ್ವತಾರೋಹಣದಲ್ಲಿ ಶಿಖರ ಸಾಧನೆಯಷ್ಟೇ ಸೌಖ್ಯ ಮರಳಿಕೆಯೂ ಸೇರಿದೆ. ದಿಕ್ಕೆಲ್ ಕಲ್ಲು ಮೆಟ್ಟಿದ ಸಂತೋಷದಲ್ಲೂ ನಾವು ಸೂರ್ಯ ಪಶ್ಚಿಮಕ್ಕೆ ವಾಲುತ್ತಿದ್ದುದನ್ನು ಮರೆಯಲಿಲ್ಲ.
ಹತ್ತಿದಷ್ಟೇ ಸುಲಭವಾಗಿ ದಿಕ್ಕೆಲ್ ಗುಪ್ಪೆಯನ್ನೇನೋ ಇಳಿದೆವು. ಹಾಗೇ ಸೇತು ಕಳೆಯುವುದೂ ಸಮಸ್ಯೆಯಾಗಲಿಲ್ಲ. ಶಿಖರದಿಂದ ದಿಕ್ಕೆಲ್ ಸೇತುಗಿಳಿಯುವಲ್ಲಿ ಕೊನೆಯ ಹಂತದಲ್ಲಿ ನೇರ ಎಪ್ಪತ್ತಡಿ ಇಳಿದದ್ದು ಮಾತ್ರ ಸಣ್ಣ ಸವಾಲೇ ಆಗಿತ್ತು. ನಾವು ಇಳಿಯುವಲ್ಲಿ ನೇತು ಬಿಟ್ಟಿದ್ದ ಹಗ್ಗವೇನೋ ಇತ್ತು. ಆದರೆ ಅದನ್ನು ರಕ್ಷಣೆಗಷ್ಟೇ ಬಳಸಿಕೊಂಡು ನೈಜ ಶಿಲಾರೋಹಣ ಮಾಡುವ ಅವಕಾಶವನ್ನು ಬಂಡೆ ಮೈ ಕೊಡಲಿಲ್ಲ. ಆ ದಿನಗಳಲ್ಲಿ ಸ್ಥಿರ ಹಗ್ಗಕ್ಕೆ ಎರಡು ದೊಡ್ಡ ಕ್ಲಿಪ್ಪುಗಳಂತೆ ಸಿಕ್ಕಿಸಿ ಏರುವ ಜೂಮರ್ ಎಂಬ ಸಲಕರಣೆಯ ಕುರಿತು ನಾವು ಕೇಳಿಯಷ್ಟೇ ತಿಳಿದಿದ್ದೆವು. ಇದ್ದುದರಲ್ಲಿ ನೇರ ಎತ್ತರಗಳನ್ನು ಸುಲಭವಾಗಿ ಏರುವ ತಂತ್ರ – ಪ್ರೂಸಿಕ್ ಕ್ಲೈಂಬಿಂಗ್, ನಮಗೆ ರೂಢಿಯಿತ್ತು. ಅದರಲ್ಲಿ ಸಣ್ಣ ಎರಡು ಹಗ್ಗದ ಬಳೆಗಳನ್ನು (ಸ್ಲಿಂಗ್) ವಿಶಿಷ್ಟ ಗಂಟಿನಲ್ಲಿ ಸ್ಥಿರ ಹಗ್ಗಕ್ಕೆ ಪೋಣಿಸಿ ಏರುವುದು ಕ್ರಮ. ಆದರೆ ಆ ಸನ್ನಿವೇಶದಲ್ಲಿ ಅದನ್ನೂ ಸುಲಭದಲ್ಲಿ ಬಳಸದಂತೆ ಬಂಡೆಯ ಮುಖ ತುಸು ಅಡ್ಡಿ ಮಾಡಿತ್ತು. ಒಂದೆರಡು ವಿಫಲ ಪ್ರಯತ್ನಗಳ ಕೊನೆಯಲ್ಲಿ ನಮ್ಮಲ್ಲೊಬ್ಬ ಗಟ್ಟಿಗ, ಸ್ಥಿರ ಹಗ್ಗವನ್ನು ಕೇವಲ ತೋಳ್ಬಲ ಬಳಸಿಯೇ ಏರಿ, ಗಟ್ಟಿ ನೆಲೆಯನ್ನು ಸಾಧಿಸಿದ. ಅನಂತರ ಆತ ಉಳಿದ ಮೂರ್ನಾಲ್ಕು ಮಂದಿಗೆ ಆರಂಭದಲ್ಲಿ “ಜಗ್ಗಯ್ಯ”ನಾಗಿಯೂ ಮತ್ತೆ “ರಕ್ಷಕ್ಕ”ನಾಗಿಯೂ ಪಾರುಗಾಣಿಸಿದ. ಏತನ್ಮಧ್ಯೆ ಈರ್ವರು ದಿಕ್ಕೆಲ್ ಸೇತುವಿನಲ್ಲೇ ಪಶ್ಚಿಮದ ಕೊಳ್ಳದತ್ತ ತುಸು ಸರಿದು, ಶಿಖರದಿಂದಿಳಿದ ಎರಡನೇ ಧಾರೆಗೆ ಸುಲಭದ ಜಾಡೊಂದನ್ನು ಕಂಡುಕೊಂಡರು. ಮುಂದೊಂದು ದಿನ ಉಳಿದೆರಡೂ ಗುಪ್ಪೆಗಳನ್ನು ಏರುವುದಿದ್ದಲ್ಲಿ ಹೆಚ್ಚು ಸುಲಭದ ಅದನ್ನೇ ಬಳಸಬಹುದೆಂದೂ ನಾವು ಕಂಡುಕೊಂಡೆವು. ಆದರೆ ಪ್ರಾಕೃತಿಕ ವಿಸ್ಮಯಗಳ ಅನಂತತೆಯಲ್ಲಿ ಕಳೆದು ಹೋದ ನಾವು ಇಂದಿಗೂ ಮತ್ತೆ ದಿಕ್ಕೆಲ್ ಕಲ್ಲು ಏರುವ ಪ್ರಯತ್ನ ನಡೆಸಲಾಗಿಯೇ ಇಲ್ಲ!
ಆ ಬೆಳಿಗ್ಗೆ ನಮ್ಮ ಮುಖ್ಯ ತಂಡ ನೆರಿಯ ಬಿಟ್ಟ ಮೇಲೂ ಜಿಲ್ಲೆಯ ಕೆಲವು ಮೂಲೆಗಳಿಂದ ನಾಲ್ಕೈದು ಮಿತ್ರರು ತಡವಾಗಿ ನೆರಿಯ ಮನೆಗೆ ಬಂದಿದ್ದರಂತೆ. ಹೆಬ್ಬಾರರ ಕುಟುಂಬ ಬೇಸರಿಸದೆ ಅವರನ್ನೂ ಏಲಕ್ಕಿ ಮಲೆಗೆ ತಮ್ಮ ವಾಹನದಲ್ಲಿ ರವಾನಿಸಿ, ಮುಂದಕ್ಕೆ ಮಾರ್ಗದರ್ಶಿಯನ್ನೂ ಕೊಟ್ಟು ಶಿಖರ ಮುಟ್ಟಿಸಿದ್ದರು.
ಹೀಗಾಗಿ ಪ್ರೇಮಾಶಾಸ್ತ್ರಿ ಬಳಗ ನಮ್ಮ ಲೆಕ್ಕಕ್ಕೆ ಪೂರ್ಣ ಕಳೆದೇ ಹೋದರೂ ದಿಕ್ಕೆಲ್ ಏರಿದಾಗ ದೂರವುಳಿದು ಜಯಕಾರ ಹಾಕುವಲ್ಲಿ, ಮತ್ತೆ ಶಿಖರಕ್ಕೆ ಮರಳಿದಾಗ ಹಾರ್ದಿಕ ಅಭಿನಂದಿಸುವಲ್ಲಿ ಜನರ ಕೊರತೆ ಏನೂ ಆಗಲಿಲ್ಲ! ಸೂರ್ಯ – ಅಡ್ಡೂರಿನವನಲ್ಲ, ನಮ್ಮಾಟದ ಸಮಯಪಾಲಕ ದಿನಮಣಿ, ತನ್ನ ಅಂದಿನ ಪಾಳಿ ಮುಗಿಸುವ ಸಿದ್ಧತೆಯಲ್ಲಿದ್ದ.ನಾವು ಔಪಚಾರಿಕತೆಗಳಲ್ಲಿ ಹೆಚ್ಚು ಕಳೆದು ಹೋಗದೆ, ಕೇವಲ `ಪಾನ-ಕ’ಮತ್ತರಾಗಿ ಸುಧಾರಿಸಿಕೊಂಡೆವು. ಒಂದು ತಂಡವಾಗಿ ಏಲಕ್ಕಿ ಮಲೆಗೆ ಮರಳಿದೆವು. ಅಷ್ಟರಲ್ಲಿ ಕವಿದ ಪೂರ್ಣಗತ್ತಲಿಗೆ ನಮ್ಮ ವಾಹನಗಳ ದೀಪ ಉತ್ತರಿಸಿದರೆ, ದಾಟುತ್ತಿದ್ದ ಕಗ್ಗಾಡಿನ ಆನೆಯೇ ಮೊದಲಾದ ಪ್ರಾಣಿ-ಭಯಗಳನ್ನು ದಿಕ್ಕೆಲ್ ವಿಜಯ ನಗಣ್ಯ ಮಾಡಿತ್ತು!
ನೆರಿಯ ಮನೆಯಲ್ಲಿ ನಮಗೆ ಅನೌಪಚಾರಿಕ ಆದರೆ ರುಚಿಕರವಾಗಿ ಹೊಟ್ಟೆ ತುಂಬುವಷ್ಟು ಸಮೃದ್ಧ ಔತಣ ಕಾದಿತ್ತು. ಮುಂದೆ ಉಜಿರೆಯಲ್ಲಿ ಪ್ರೇಮಾ ಬಳಗದ ವಿಫಲ ಕಥನ ಕೇಳಿಸಿಕೊಂಡೆವು. ನಾನೂಹಿಸಿದ್ದಂತೆ ದಕ್ಷಿಣ ಕೊಳ್ಳದ ಸವಾಲು ಅವರ ತಂಡಕ್ಕೆ ವಿಪರೀತ ಅನ್ನಿಸಿ, ಪ್ರಾಥಮಿಕ ಹಂತದಲ್ಲೇ ಎಲ್ಲೋ ತಂಡ ಕೈಚೆಲ್ಲಿ ಊರಿಗೆ ಮರಳಿತ್ತಂತೆ. ಆದರೇನು ಪರ್ವತಾರೋಹಣದಲ್ಲೂ (ಜೀವನದಂತೇ) ಸೋಲ ಸೋಪಾನಗಳು ಹೆಚ್ಚಿದಷ್ಟೂ ಗೆಲುವಿನ ಗೆಲ್ಲಿನ ಫಲಕ್ಕೆ ರುಚಿ ಹೆಚ್ಚು. ನಿರಂತರ ಸವಾಲಿನ ಅಮೆದಿಕ್ಕೆಲ್ ಇನ್ನಷ್ಟು ಮತ್ತಷ್ಟು ಸಾಹಸಗಾಥೆಗಳಿಗೆ ವೀಳ್ಯ ಕೊಡುತ್ತಲೇ ಇದೆ. ನೀವು ಸ್ವೀಕರಿಸುತ್ತೀರಾ??
ವಿ.ಸೂ: ಈ ಸರಣಿಯ ಕೆಲವು ಭಾಗಗಳು ಸಂಗ್ರಹ ರೂಪದಲ್ಲಿ ಮೇ ೧೯೮೨ರ ತುಷಾರದಲ್ಲಿ `ಭೀಮ ಒಲೆ’ ಹೆಸರಿನಲ್ಲೇ ಪ್ರಕಟವಾಗಿತ್ತು. ಅದರಲ್ಲಿ ಬಳಸಿದ ಚಿತ್ರಗಳು, ಚಿತ್ರಗಳ ಮೇಲಿನ ಬರಹಗಳೆಲ್ಲ ಯಜ್ಞರ ಕೃಪೆ. ಕೊನೆಯ ಚಿತ್ರ – ಸೂರ್ಯಾಸ್ತದ ವೇಳೆ ಅಮೆದಿಕ್ಕೆಲ್ ಶಿಖರದ ಮೇಲಿನ ಚಿತ್ರವನ್ನೇ ಮುಂದೆ ಆರೋಹಣದ ಪ್ರಚಾರ ಅಂಟುಚೀಟಿಯಲ್ಲೂ ಬಳಸಿದ್ದನ್ನು ಇಲ್ಲಿ ನೀವು ಕಾಣಬಹುದು:
(ಸರಣಿ ಮುಗಿಯಿತು)
ತುಂಬಾ ಖುಷಿ ನೀಡಿದ ಮಾಲಿಕೆ…. ಸಮೀಪದಲ್ಲೇ ಇದ್ದರೂ ನಮಗೇ ತಿಳಿದಿರದ ಸವಾಲಿನ ಶಿಖರಗಳು… ನಮಗೆ ಓದಿ ಆನಂದಿಸಿದ್ದಷ್ಟೇ ಸಮಾಧಾನ.
ಅಬ್ಬಾ!! ಅಸಮ ಸಾಹಸಿಗಲೈ ನೀವ್ ದಿಟದಿ!
ನಾನೂ ಇದರಲ್ಲಿ ಭಾಗಿಯಾದೆನೋ? ಅಂಟು ಅಂಟುಚೀಟಿಯಲ್ಲಿ ಬಲ ಬದಿ ಗಾಳಿಯಲ್ಲಿ ತೇಲುವ ಚಿತ್ರ ನನ್ನದೇ ಆದುದರಿಂದ ನಂಬಲೇ ಬೇಕಾಗಿದೆ.
ಪ್ರಪಾತದಿಂದ ಕೆಳಗೆ ನೋಡುವಾಗ ನಡಗಿದ ಎದೆ ಇಂದೂ ವುರೆತಿಲೢ