ಅಧ್ಯಾಯ ಐದು
[ಡೇವಿಡ್ ಕಾಪರ್ಫೀಲ್ಡ್‌ನ ಜೀವನ ವೃತ್ತಾಂತ ಮತ್ತು ಅನುಭವಗಳು, ಕಾದಂಬರಿ. ಮೂಲ ಇಂಗ್ಲಿಷಿನಲ್ಲಿ ಚಾರ್ಲ್ಸ್ ಡಿಕನ್ಸ್ ಕನ್ನಡ ಭಾವಾನುವಾದ ಎ.ಪಿ. ಸುಬ್ಬಯ್ಯ]
ವಿ-ಧಾರಾವಾಹಿಯ ಏಳನೇ ಕಂತು

ನಾನು ಬಂಡಿಯಲ್ಲಿ ಅಳುತ್ತಲೇ ಮುಂದೆ ಸಾಗಿದೆ. ಕಣ್ಣೀರಿನಿಂದ ನನ್ನ ಕರವಸ್ತ್ರವೆಲ್ಲ ಒದ್ದೆಯಾಗಿತ್ತು. ಇನ್ನೂ ನಾವು ಒಂದು ಫರ್ಲಾಂಗು ಸಹ ದೂರ ಸಾಗಿರಲಿಲ್ಲ – ಅಷ್ಟರಲ್ಲೇ ರಸ್ತೆ ಕಡೆಯ ಬೇಲಿಯ ಮರೆಯಿಂದ ಪೆಗಟಿ ಓಡಿ ಬಂದಳು. ಬಂಡಿಯನ್ನು ಸ್ವಲ್ಪ ನಿಲ್ಲಿಸಿ, ನನ್ನ ಜೇಬಿನೊಳಗೆ ತುಂಬಾ ತಿಂಡಿ ಪೊಟ್ಟಣಗಳನ್ನು ತುಂಬಿದಳು. ಒಂದು ಚಿಕ್ಕ ಹಣದ ಚೀಲವನ್ನೂ ಕೊಟ್ಟಳು. ಏನೂ ಮಾತಾಡದೆ ಈ ಕೆಲಸವನ್ನೆಲ್ಲ ಮಾಡಿ ನನ್ನನ್ನು ಬಲವಾಗಿ ಅಪ್ಪಿದಳು; ಅಪ್ಪುವುದರ ಜತೆಯಲ್ಲೇ ಅಳಲಾರಂಭಿಸಿದಳು. ಆದರೆ ನನಗೆ ಅಳು ಗೊತ್ತಾಗಬಾರದೆಂದು, ತಡೆದುಕೊಳ್ಳಲು ಪ್ರಯತ್ನಿಸಿ, ಸಾಧ್ಯವಾಗದೆ ನನ್ನನ್ನು ಬಿಟ್ಟು ಓಡಿಹೋದಳು. ಅಪ್ಪಿದುದರಲ್ಲಿ ಈ ಸರ್ತಿಯಂತೂ ಅವಳ ಜುಬ್ಬದ ಎಲ್ಲಾ ಗುಂಡಿಗಳೂ ಹಾರಿಹೋಗಿರಬೇಕು – ಒದೆರಡು ಗುಂಡಿಗಳನ್ನು ನಾನೇ ಹೆಕ್ಕಿ ಇಟ್ಟುಕೊಂಡು, ಪ್ರೀತಿಯ ನೆನಪಿಗಾಗಿ ಕಾಪಾಡಿಕೊಂಡು ಬಂದಿದ್ದೇನೆ.

ನನ್ನ ಅಳುವನ್ನು ತಡೆದು ನಿಲ್ಲಿಸಲು ಸಾಧ್ಯವಾಗದೆ ಅಳುತ್ತಲೇ ಇದ್ದೆ. ಒದ್ದೆಯಾಗಿದ್ದ ಕರವಸ್ತ್ರವನ್ನು ಕುದುರೆಯ ಬೆನ್ನಮೇಲೆ ಹರಗಿ ಒಣಗಿಸಿಕೊಂಡೆನು. ಗಾಡಿ ಮುಂದುವರಿದ ಹಾಗೆ ಹಣದ ಚೀಲವನ್ನೂ ಪರೀಕ್ಷಿಸಿದೆ. ಅದರೊಳಗೆ “ನನ್ನ ಮುದ್ದು ಡೇವಿಗೆ” ಎಂದು ತಾಯಿಯ ಕೈ ಬರಹದಲ್ಲಿ ಸುತ್ತಲ್ಪಟ್ಟಿದ್ದ ಕಾಗದದ ಒಳಗೆ ಎರಡು ಅರ್ಧ ಪವನುಗಳಿದ್ದುವು. ಇದಲ್ಲದೆ ಮೂರು ಶಿಲಿಂಗ್ ಬೆಲೆಯ ಇತರ ಚಿಲ್ಲರೆ ನಾಣ್ಯಗಳೂ ಇದ್ದುವು. ಅವು ಪೆಗಟಿಯದು ಇರಬೇಕೆಂದು ಊಹಿಸಿದೆ. ತಾಯಿಯ ಪತ್ರ ಮತ್ತು ಹಣವನ್ನು ಕಂಡು ಪುನಃ ಅಳಬೇಕಾಯ್ತು.

ಹೀಗೆ ಸ್ವಲ್ಪ ದೂರ ಹೋಗುವಾಗ ಗಾಡಿಯವನನ್ನು ಕೇಳಿದೆ
“ನೀವು ನನ್ನನ್ನು ಲಂಡನ್ ನಗರದವರೆಗೂ ಕರೆದುಕೊಂಡು ಹೋಗುವಿರೇನು?”
“ಅಷ್ಟು ದೂರ ಹೋದರೆ ನನ್ನ ಕುದುರೆ ಸತ್ತು ಹೋದೀತು. ನಾನು ಯಾರ್ಮತ್ತಿನಲ್ಲಿ ನಿನ್ನನ್ನು ಲಂಡನ್ ಬಂಡಿಗೆ ಮುಟ್ಟಿಸಿದರೆ ಆಯ್ತು” ಎಂದು ಗಾಡಿಯವನಂದನು. ನನ್ನ ಪ್ರಶ್ನೆಯಿಂದ ಗಾಡಿಯವನಿಗೆ ಬೇಸರವಾಗಿರಬೇಕೆಂದು ಹೆದರಿ, ನನ್ನ ಕೈಯ್ಯಲ್ಲಿದ್ದ ದೋಸೆಗಳಲ್ಲಿ ಒಂದನ್ನು ಅವನನ್ನು ಗೌರವಿಸಲೋಸ್ಕರ ಕೊಟ್ಟೆನು. ನಾನು ತಿನ್ನಲು ಅರ್ಧ ಘಂಟೆ ಸಮಯ ಬೇಕಾದಷ್ಟು ದೊಡ್ಡ ದೋಸೆಯನ್ನು ಗಾಡಿಯವನು ಒಂದೇ ಒಂದು ತುತ್ತಿಗೆ – ಆನೆ ನುಂಗಿದಂತೆ – ನುಂಗಿಬಿಟ್ಟನು. ಆ ದೋಸೆಯನ್ನು ಆನೆ ತಿಂದಿದ್ದರೆ ಅದರ ಮುಖದಲ್ಲಿ ತೋರಿಬರಬಹುದಾಗಿದ್ದಷ್ಟೇ ಈ ಗಾಡಿಯವನ ಮುಖದಲ್ಲೂ ದೋಸೆ ತಿಂದುದರ ತೃಪ್ತಿ ತೋರಿಬಂತು.
ಗಾಡಿಯು ಸಾಗುತ್ತಾ ಹೋದಾಗ ಗಾಡಿಯವನು – ನನ್ನ ಕಡೆ ನೋಡಿ-
“ಆ ತಿಂಡಿಯನ್ನು ಅವಳೇ ಮಾಡುತ್ತಾಳೇನು?” ಎಂದು ಹಠಾತ್ತಾಗಿ ಕೇಳಿದನು.
“ಅವಳೇ ಮಾಡುತ್ತಾಳೆ, ಮಿಸ್ಟರ್ ಬಾರ್ಕಿಸ್” ಎಂದೆ. ಇಷ್ಟರಲ್ಲೇ ಗಾಡಿಯವನನ್ನು ಇತರರು ಕರೆದು ಮಾತಾಡಿಸಿದ್ದುದನ್ನೆಲ್ಲ ಕೇಳಿ ಗಾಡಿಯವನ ಹೆಸರು ಮಿ. ಬಾರ್ಕಿಸ್ ಎಂದು ತಿಳಿದಿದ್ದೆ.
“ನಿಮ್ಮ ಮನೆಯ ತಿಂಡಿ, ತಿನಸು, ಅಡುಗೆಯನ್ನೆಲ್ಲ ಅವಳೇ ಮಾಡುತ್ತಾಳೆ ತಾನೆ?” ಎಂದು ಪುನಃ ಕೇಳಿದನು.
“ಹೌದು” ಅಂದೆ ನಾನು. ಈ ಉತ್ತರ ಕೇಳಿ ಅವನಿಗೆ ಸಂತೋಷವಾದಂತೆ ತೋರಿತು. ಅವನು ಶಿಳ್ಳು ಹಾಕುತ್ತಾ ಬಂಡಿ ಹೊಡೆಯುತ್ತಿದ್ದನು. ಸ್ವಲ್ಪ ಹೊತ್ತಾದ ಮೇಲೆ –
“ನಲ್ಲನಿಲ್ಲವೋ?” ಎಂದು ವಿಚಾರಿಸಿದನು.
ಈ ಪ್ರಶ್ನೆ ನನಗರ್ಥವಾಗಲಿಲ್ಲ. `ನಲ್ಲ’ ಅಂದರೆ ಬೆಲ್ಲವೋ ಹಲ್ವವೋ ಅಂತೂ ಯಾವುದೋ ಒಂದು ತಿಂಡಿ ನನ್ನಲ್ಲಿ ಇದೆಯೇ ಇಲ್ಲವೇ ಎಂಬುದಾಗಿ ವಿಚಾರಿಸಿದ್ದಾಗಿ ತಿಳಿದು –
“ನನ್ನ ಹತ್ತಿರ `ನಲ್ಲ’ ಇಲ್ಲ” ಅಂದೆನು.
“’ನಲ್ಲ’ ಅಂದರೆ ತಿಂಡಿಯಲ್ಲ. ಗಂಡ – ಅವಳಿಗೆ ಗಂಡನಿಲ್ಲವೋ ಎಂದು ಕೇಳಿದೆ.”
ಅವಳಿಗೆ ನಲ್ಲನಿಲ್ಲವೆಂದು ತಿಳಿಸಿದಾಗ ತುಂಬಾ ಸಂತೋಷಿಸಿದಂತೆ ತೋರಿದನು. ಅನಂತರ ಸ್ವಲ್ಪ ಸಮಯ ಕಳೆದ ಮೇಲೆ,
“ನೀನು ಅವಳಿಗೆ ಎಂದಾದರೂ ಪತ್ರ ಬರೆಯುವುದಿದೆಯೇ” ಎಂದು ಕೇಳಿದನು.
“ಇದೆ” ಅಂದೆ.
“ಹಾಗೆ ಬರೆಯುವಾಗ, ನನಗಾಗಿ, ‘ಬಾರ್ಕಿಸನು ತಯಾರು’ ಎಂದು ಬರೆಯಬೇಕು, ಏನು?” ಎಂದು ಹೇಳಿದನು. ಈ ಸೂಚನೆ ನನಗೊಂದು ಒಗಟಿನಂತೆ ತೋರಿತು. ಆದರೂ ಹಾಗೆ ಪತ್ರ ಬರೆಯಲು ಒಪ್ಪಿದೆನು. ಮತ್ತು ನಾನು ನಮ್ಮ ದಾರಿಯಲ್ಲೇ – ಅಂದರೆ, ಮಧ್ಯ ಸ್ಥಳವಾದ ಯಾರ್ಮತ್ತಿನಲ್ಲೇ – ಒಂದು ಪತ್ರವನ್ನು ಬರೆದು ಪೆಗಟಿಗೆ ಟಪಾಲು ದ್ವಾರ ಕಳುಹಿಸಿದೆ. ಅದರಲ್ಲಿ `ಬಾರ್ಕಿಸನು ತಯಾರು’ ಎಂದೂ ಬರೆದಿದ್ದೆ.

ಕೊನೆಗೆ ನಾವು ಯಾರ್ಮತ್ತಿಗೆ ತಲುಪಿದೆವು. ಅಲ್ಲಿ ನನ್ನನ್ನು ಬಾರ್ಕಿಸನು ಟಪಾಲಾಫೀಸಿನ ಎದುರು ಇಳಿಸಿ, ನನ್ನ ಪೆಟ್ಟಿಗೆಯನ್ನು ಇಳಿಸಿಟ್ಟು ತಾನು ಹೊರಟು ಹೋದನು. ಬಂಡಿ ನಿಂತಲ್ಲೇ ಒಂದು ವಿವಿಧೋದ್ದೇಶದ ಅಂಗಡಿ ಇತ್ತು. ಅಂದರೆ, ಇಲ್ಲಿ ಆಫೀಸು, ಅಂಗಡಿ, ಹೋಟೇಲು, ಇಂಥಾ ವಿವಿಧ ಕೆಲಸಗಳೆಲ್ಲ ಈ ಅಂಗಡಿಯಲ್ಲಿ ನಡೆಯುತ್ತಿತ್ತು. ಒಬ್ಬಳು ಹೆಂಗಸು ಬಂದು ನನ್ನನ್ನು ನೋಡಿ –
“ಬ್ಲಂಡರ್ಸ್ಟನ್ನಿನಿಂದ ಬಂದ ಗೃಹಸ್ಥರು ನೀವೇನು? ನಿಮ್ಮ ಹೆಸರು?” ಎಂದು ವಿಚಾರಿಸಿದಳು.
ನನ್ನ ಹೆಸರು ಡೇವಿಡ್ ಕಾಪರ್ಫೀಲ್ಡ್ ಎಂದುದಕ್ಕೆ ಅವಳು ತಾನು ಹುಡುಕುತ್ತಿದ್ದುದು ಮಾಸ್ಟರ್ ಮರ್ಡ್ಸ್ಟನ್ನರನ್ನು ಎಂದು ತಿಳಿಸಿದಳು. ಅವನೂ ನಾನೇ ಎಂದು ತಿಳಿಸಬೇಕಾಯಿತು; ನಾನು ಹಾಗೆ ತಿಳಿಸಿದೆ. ಅದಕ್ಕೆ ಅವಳಿಗೆ ಸ್ವಲ್ಪ ಸಿಟ್ಟಾಯಿತು. ಆದರೂ ತನ್ನ ಕರ್ತವ್ಯವನ್ನು ಮಾಡುವವಳಂತೆ ಒಬ್ಬ ಆಳನ್ನು ಕರೆದು ನನಗೆ ಊಟಬಡಿಸಬೇಕೆಂದು ಅಪ್ಪಣೆಯಿತ್ತಳು. ತಾನೊಬ್ಬ ದೊಡ್ಡ ಗೃಹಸ್ಥನಿಗೆ ಊಟ ಬಡಿಸುವ ಸಂದರ್ಭ ಸಿಕ್ಕಿತೆಂದು ಬಂದ ಆಳು ನನ್ನನ್ನು ಕಂಡ ಕೂಡಲೇ “ಫೂ, ಇಷ್ಟೇಯೋ” ಎಂದನ್ನುವಂತೆ ತನ್ನ ಮುಖದಲ್ಲಿ ಭಾವನೆ ಮೂಡಿಸಿಕೊಂಡು, ಅನೇಕ ಚಮುಚ, ಕತ್ತರಿ, ಚೂರಿಗಳನ್ನು ನನ್ನೆದುರು ತಂದಿಟ್ಟು, ಜತೆಯಲ್ಲೇ ಆಹಾರ ಪದಾರ್ಥಗಳನ್ನೂ ಮೇಜದ ಮೇಲಿರಿಸಿ, ನನ್ನೆದುರೇ ನಿಂತು ನನ್ನನ್ನೇ ನೋಡತೊಡಗಿದನು. ನಾನು ಸ್ವಲ್ಪ ದಿಗಿಲುಗೊಂಡೇ ಊಟ ಮಾಡತೊಡಗಿದೆ. ಊಟ ಪೂರೈಸುವ ಸಮಯಕ್ಕೆ ನನ್ನೆದುರು ಅರ್ಧ ಬಾಟ್ಲಿ ವೈನನ್ನು ತಂದಿಟ್ಟನು. ವೈನು ನನಗೆ ಬೇಡವೆಂದು ನಾನು ತಿಳಿಯುತ್ತಿದ್ದರೂ ಹಾಗೆ ಬೇಡವೆನ್ನುವುದು ಮರ್ಯಾದೆಯೋ, ನ್ಯಾಯವೋ – ಬೇಡವೆಂದು ತಿಳಿಸಿಬಿಡಲೋ – ಎಂದು ಗ್ರಹಿಸಿದೆ. ಅಷ್ಟರಲ್ಲೇ ಆ ಆಳು ಆ ವೈನನ್ನು ಒಂದು ಕುಪ್ಪಿ ಪಾತ್ರೆಗೆ ಹಾಕಿ ಬೆಳಕಿನ ಅಡ್ಡವಾಗಿ ಹಿಡಿದುಕೊಂಡು ನೋಡತೊಡಗಿದನು. ಅದರಲ್ಲೇನೋ ವಿಶೇಷವಿರಬಹುದೆಂದು ನಾನೂ ಆ ಕಡೆ ನೋಡತೊಡಗಿದೆ. ಆಗ ನನ್ನನ್ನು ಕುರಿತು ಆ ಆಳು –
“ಆ ಮರಸಿಗಿಯುವವನನ್ನು ನೀವು ನೋಡಿದ್ದೀರೇನು?” ಎಂದು ಕೇಳಿದ.
“”ಯಾವ? ನಾನು ನೋಡಿಲ್ಲ” ಅಂದೆ ನಾನು.
“ಕಾಕಿ ಚಡ್ಡಿ, ಉದ್ದ ಟೋಪಿ ಹಾಕಿ, ಮೇಲೆ ನಿಂತು ಸಿಗಿಯುತ್ತಿದ್ದವನು? – ಕನ್ನಡಕವಿತ್ತು – ಅವನನ್ನು ಗೊತ್ತಿಲ್ಲವೇ?”
“ಇಲ್ಲ” ಅಂದೆ. ಆದರೂ ಎಲ್ಲರಿಗೂ ಪರಿಚಯವಿರಬೇಕಾದ ಅವನ ಪರಿಚಯ ನನಗಿಲ್ಲದುದಕ್ಕೆ ಸ್ವಲ್ಪ ನಾಚಿಕೆಪಟ್ಟುಕೊಂಡೆ.
“ಹಾಗಾದ್ರೆ ಕೇಳಿ, ಈ ವೈನು ಬಹಳ ಹಳತು – ಸಾಧಾರಣದವರಿಂದ ಜೀರ್ಣಿಸಿ ಜೈಸಲು ಸಾಧ್ಯವಿಲ್ಲದ್ದು. ಆ ಮರ ಸಿಗಿಯುವವನು ಎಷ್ಟೇ ದೃಢ ಕಾಯನಾಗಿದ್ದರೂ ಇದನ್ನು ಕುಡಿದು ಸ್ವಲ್ಪವೇ ಹೊತ್ತಿನಲ್ಲಿ ಸತ್ತೇಹೋದ. ನಮ್ಮ ದಾಸ್ತಾನು ಮಾಲನ್ನು ಕುಡಿದು ದಕ್ಕಿಸಲು ಎಲ್ಲರಿಂದ ಆಗುವಂಥದ್ದಲ್ಲ” ಅಂದನು ಆಳು.

ಈ ವರ್ತಮಾನ ನನಗೆ ದಿಗಿಲೆಬ್ಬಿಸಿತು. ನಾನು ಆ ವೈನು ಕುಡಿದರೆ ಸಾಯುವುದು ಖಂಡಿತವೆಂದೇ ನನಗೆ ಖಚಿತವಾಯ್ತು. ವೈನು ಬೇಡವೆನ್ನುವುದು ನನ್ನ ಗೌರವಕ್ಕೆ ಸ್ವಲ್ಪ ಕೊರತೆ ತರಬಹುದಾದರೂ ಸಾಯುವುದರಿಂದ ಪಾರಾಗುವುದು ಉತ್ತಮವೆಂದು ನನಗೆ ತೋರಿತು. ನನಗೆ ವೈನ್ ಬೇಡ, ಎಂದು ಕೊನೆಗೆ ತಿಳಿಸಿಯೇಬಿಟ್ಟೆನು.
ಆಳಿಗೆ ನನ್ನ ಮೇಲೆ ಸ್ವಲ್ಪ ಕನಿಕರವುಂಟಾಗಿರಬೇಕು; ಆದರೂ –
ಬೇಕೆಂದು ತರಿಸಿದನಂತರ ಬೇಡವೆನ್ನುವುದು ಈ ಹೋಟೇಲಿನ ಮರ್ಜಿಗೆ ಸ್ವಲ್ಪ ವಿರೋಧವಷ್ಟೇ ಎಂದಂದುಕೊಂಡು, ಸ್ವಲ್ಪ ಹಿಂದೆ ಮುಂದೆ ಆಲೋಚಿಸಿ, ನನ್ನ ಮೇಲಿನ ಕನಿಕರವನ್ನು ಕಣ್ಣಲ್ಲಿ ಬೀರುತ್ತಾ, ನನ್ನ ಜವಾಬ್ದಾರಿಯನ್ನು ಹಗುರಮಾಡಲು ನನ್ನೆದುರೇ ಆ ವೈನನ್ನೆಲ್ಲ ಒಮ್ಮೆಗೇ ಕುಡಿದುಬಿಟ್ಟನು. ಇಷ್ಟೂ ಅಲ್ಲದೆ, ಆ ವೈನಿನ ಘಾಟನ್ನು ಕಡಿಮೆ ಮಾಡಿ ಅವನ ಹೊಟ್ಟೆಯನ್ನು ಉಳಿಸುವುದಕ್ಕಾಗಿ ನನ್ನ ತಟ್ಟೆಯಲ್ಲಿದ್ದ ತಿಂಡಿಯನ್ನೆಲ್ಲಾ ತಿಂದನು. ಅದರಿಂದ ಪೂರ್ಣ ಗುಣ ಹೊಂದಲಾರನೆಂದೇ ನನಗಾಗಿ ಮತ್ತೂ ಸ್ವಲ್ಪ ತಿಂಡಿ ತರಿಸಿ ತಿಂದು, ಸಾಯದೆ, ನನ್ನ ಜವಾಬ್ದಾರಿಯನ್ನು ನಿರ್ವಹಿಸಿ, ಹೋಟೆಲ್ ಮರ್ಜಿಯನ್ನು ಉಳಿಸಿಕೊಟ್ಟನು. ನಾವೀರ್ವರೂ ಸುಖವಾಗಿ ಉಳಿದದ್ದಕ್ಕೆ ನಾನು ಸಂತೋಷಪಟ್ಟೆನು.

ಹೀಗೆ ನಾನು ಹೋಟೆಲಿನಲ್ಲಿರುವಾಗ್ಗೆ ಒಬ್ಬ ಅಪರಿಚಿತನು ಬಂದು ನನ್ನ ಸುಖದುಃಖವನ್ನೆಲ್ಲ ವಿಚಾರಿಸಿ, ತನ್ನ ಸಂಸಾರದ ಬಡತನ, ದಿನನಿತ್ಯದ ಕಷ್ಟಗಳನ್ನೆಲ್ಲ ಹೇಳಿಕೊಂಡನು.; ಅವನ ಸಂಸಾರದ ದುಃಖಗಳನ್ನು ಕೇಳಿಯೂ, ಅವನ ಕಣ್ಣೀರನ್ನು ಕಂಡೂ, ಪೆಗಟಿ ಕೊಟ್ಟಿದ್ದ ಒಂದು ಶಿಲಿಂಗನ್ನು ಅವನಿಗೆ ದಾನ ಕೊಟ್ಟೆನು. ನನ್ನ ದಾನ ಸಿಗುವ ಮೊದಲು ವಿನೀತನಾಗಿದ್ದವನು ದಾನ ಸಿಕ್ಕಿದನಂತರ ನನ್ನನ್ನು ಬಹು ಅಸಡ್ಡೆಯಿಂದ ಕಂಡು, ಆ ಶಿಲಿಂಗನ್ನು ಮೇಲಕ್ಕೆ ಹಾರಿಸಿ, ಕಳ್ಳ ನಾಣ್ಯವಲ್ಲವಷ್ಟೆ ಎಂದು ಪರೀಕ್ಷಿಸಿ, ನಾನು ಶಾಲೆಗೆ ಹೋಗಲಿದ್ದ ಒಬ್ಬ ಬಾಲಕನೆಂದು ತಿಳಿದಿದ್ದುದರಿಂದ, ನನ್ನ ಜಾಗ್ರತೆಗಾಗಿ ನಾನು ಹೋಗಲಿದ್ದ ಶಾಲೆಯನ್ನು ಕುರಿತು –
“ಆ ಶಾಲೆಯಲ್ಲಿ ಸದ್ಯ ಈಚೆಗೆ ನಿನ್ನಷ್ಟೇ ಪ್ರಾಯದ ಒಬ್ಬ ಹುಡುಗನನ್ನು ಹೊಡೆದು ಎರಡು ಪಕ್ಕೆಲುಬುಗಳನ್ನು ಮುರಿದಿರುತ್ತಾರೆ” ಎಂದು ಶುಭ ವರ್ತಮಾನವನ್ನು ತಿಳಿಸಿದನು.

ಇಷ್ಟು ಹೊತ್ತಿಗೆ ನನ್ನ ಮುಂದಿನ ಪಯಣದ ಬಂಡಿ ಬಂದಿತು. ಹೋಟೆಲಿನಲ್ಲಿ ನನ್ನ ಊಟದ ಚಾರ್ಜನ್ನು ಕೊಡುವಾಗ ಅಷ್ಟೊಂದು ಕ್ರಯದ ಆಹಾರವೆಲ್ಲ – ತಿಂಡಿ ತಿನಸೆಲ್ಲ – ನನ್ನ ಹೊಟ್ಟೆಯಲ್ಲಿ ಹೇಗೆ ಹಿಡಿಸಿರಬಹುದೆಂದು ಅಲ್ಲಿದ್ದವರೆಲ್ಲ ಅವರವರೊಳಗೆ ಮಾತಾಡಿಕೊಂಡರು.

ಸಾಧಾರಣ ಮೂರು ಘಂಟೆಗೆ ಯಾರ್ಮತ್ತನ್ನು ಬಿಟ್ಟು ಹೊರಟೆವು. ಮರುದಿನ ಬೆಳಗ್ಗೆ ಎಂಟು ಘಂಟೆಗೆ ನಮ್ಮ ಬಂಡಿ ಲಂಡನ್ನಿಗೆ ಮುಟ್ಟಬಹುದೆಂದು ಬಂಡಿಯಲ್ಲಿದ್ದವರು ಮಾತಾಡಿಕೊಳ್ಳುತ್ತಿದ್ದರು. ನಾನು ಚಿಕ್ಕವನಾದ್ದರಿಂದ ಬಂಡಿಯಿಂದ ಕೆಳಗೆ ಉರುಳಬಾರದೆಂದು ಪ್ರಾಯಹೋದ ಇಬ್ಬರ ಮಧ್ಯದಲ್ಲಿ ನನ್ನನ್ನು ಕುಳ್ಳಿರಿಸಿದರು. ನಾನು ಮೂರು ಜನರು ತಿನ್ನಬಹುದಾದಷ್ಟು ತಿಂಡಿ ತಿಂದದ್ದರಿಂದ ನನಗೆ ಮೂರು ಜನರ ಭಾರದ ಚಾರ್ಜು ಬಂಡಿಯಲ್ಲೂ ಮುಂದೆ ನಾನು ಶಾಲೆಗೆ ಸೇರಿದನಂತರ ಬೋರ್ಡಿಂಗಿನಲ್ಲೂ, ವಸೂಲ್ ಮಾಡದಿದ್ದರೆ ಬಂಡಿಯ ಮಾಲಿಕನೂ, ಬೋರ್ಡಿಂಗಿನ ಆಡಳಿತದಾರನೂ ದಿವಾಳಿಯಾಗಬಹುದೆಂದು ಬಂಡಿಯಲ್ಲಿ ಕುಳಿತವರು ಕೆಲವರು ಮಾತಾಡಿಕೊಳ್ಳುತ್ತಿದ್ದರು. ಮುಂಭಾರ, ಹಿಂಭಾರಗಳು ಹೆಚ್ಚು ಕಡಿಮೆಯೆಂದು ಬಂಡಿಯವನು ಹೇಳಿದಾಗಲೆಲ್ಲ ನನ್ನನ್ನೇ ತೋರಿಸಿಕೊಂಡು ನಗಾಡುತ್ತಿದ್ದರು. ನಮ್ಮ ಜತೆ ಪ್ರಯಾಣಿಕರು ಅಲ್ಲಲ್ಲಿ ತಿಂಡಿ ತಿನಸು, ಹಣ್ಣು ಹಂಪಲುಗಳನ್ನು ತಿನ್ನುತ್ತಿದ್ದರು. ನನ್ನೆದುರೇ ಅವರು ಹಣ್ಣುಗಳನ್ನು ತಿನ್ನುತ್ತಿದ್ದಾಗ ನನಗೆ ಯಾರೂ ಏನನ್ನೂ ಕೊಡುತ್ತಿರಲಿಲ್ಲ. ಕೊನೆಗೆ ಪೆಗಟಿ ಕೊಟ್ಟಿದ್ದ ತಿಂಡಿಯನ್ನಾದರೂ ತಿಂದು ಹಸಿವೆ ನಿವಾರಿಸಿಕೊಳ್ಳೋಣವೆಂದು ನೋಡಿದಾಗ ಆ ತಿಂಡಿ ಕಟ್ಟು ಯಾರ್ಮತ್ತಿನ ಹೋಟೆಲಿನಲ್ಲಿ ಮರೆತುಬಂದಿದ್ದೇನೆಂದು ಗೊತ್ತಾಯಿತು. ಅಮ್ಮನ ನೆನವರಿಕೆ, ಮತ್ತು ಹಸಿವೆಗಳಿಂದ ಗುಟ್ಟಾಗಿ ಅಳತೊಡಗಿದೆ. ರಾತ್ರಿ ಪೂರಾ ನನ್ನ ಜತೆಯಲ್ಲಿದ್ದವರು ನನ್ನನ್ನು ಸುತ್ತಲಿನಿಂದಲೂ ಒತ್ತುತ್ತಾ ನಿದ್ರಿಸಿ ಗೊರಕೆ ಹೊಡೆಯುತ್ತಿದ್ದರು. ಆದರೆ ಬೆಳಗಾದಾಗ ರಾತ್ರಿಯಿಡೀ ನಿದ್ದೆ ಬರಲಿಲ್ಲವೆಂದು ಅವರೇ ಅವರವರೊಳಗೆ ಬೊಬ್ಬೆ ಹೊಡೆದುಕೊಳ್ಳುತ್ತಿದ್ದರು. ಕೆಲವೊಮ್ಮೆ ಅವರ ನಿದ್ರಾ ಭಂಗಕ್ಕೆ ನಾನೇ ಕಾರಣನೆಂದೂ ಜಿಗುಪ್ಸೆಯಿಂದ ನನ್ನನ್ನು ನೋಡುತ್ತಿದ್ದರು.

ನಮ್ಮ ಬಂಡಿ ಮುಂದೆ ಸಾಗುತ್ತಿದ್ದಂತೆ ಕೆಲವು ಕಡೆ ಹಳ್ಳಿ ಹುಡುಗರು ಹಿಂಬದಿಯಿಂದ ಬಂಡಿಯಲ್ಲಿ ನೇತಾಡಿಕೊಂಡು ಸ್ವಲ್ಪ ದೂರ ಬರುತ್ತಿದ್ದರು. ದಾರಿಯ ಬದಿಯ ಮನೆಗಳಲ್ಲಿ ಹೆಂಗಸರು, ಮಕ್ಕಳು ಮನೆ ಒಳಗೂ ಹೊರಗೂ ಹೋಗುತ್ತಿದ್ದುದೂ. ತಂತಮ್ಮ ಕೆಲಸ ಮಾಡುತ್ತಿದ್ದುದೂ ಕಾಣಿಸುತ್ತಿತ್ತು. ಅಲ್ಲಿನ ಕೆಲವು ಮಕ್ಕಳನ್ನು ಕಾಣುವಾಗ ಅವರೆಗೆಲ್ಲ ತಾಯಿ ಇರಬಹುದೇ ಇಲ್ಲದಿದ್ದರೆ ಅವರೆಲ್ಲ ಹೇಗಿರಬಹುದು, ಅವರನ್ನು ಮನೆಯವರು ಹೇಗೆಲ್ಲ ಕಾಣುತ್ತಿರಬಹುದು. ಎಂದು ಮೊದಲಾಗಿ ತುಂಬಾ ಯೋಚನೆಗಳು ಬರುತ್ತಿದ್ದುವು. ಕೆಲವು ಕಡೆ ನಾಯಿಗಳು ಬಂಡಿಯನ್ನು ಕಂಡ ಕೂಡಲೇ ಬೊಗಳುತ್ತಾ ರಸ್ತೆಗೆ ಬಂದು ಬಂಡಿ ಸಮೀಪಿಸಿದ ಹಾಗೆ ಬೊಗಳುತ್ತಾ ದೂರ ಸರಿಯುತ್ತಿದ್ದುವು.

ಹೀಗೆ ಮುಂದುವರಿದ ಹಾಗೆ ಲಂಡನ್ನಿನ ಹೊರ ವಲಯಕ್ಕೆ ತಲುಪಿದೆವು. ಅಲ್ಲಿ ಮನೆಗಳ ಸಾಲುಗಳೂ, ಬೀದಿಗಳೂ, ಜನಸ್ತೋಮಗಳೂ ಕಾಣಿಸತೊಡಗಿದುವು. ಮತ್ತೂ ಮುಂದುವರಿದ ಹಾಗೆ ಲಂಡನ್ ನಗರಕ್ಕೆ ಬಂದು ತಲುಪಿದೆವು. ನಮ್ಮ ಬಂಡಿ ಒಂದು ಹೋಟೆಲಿನ ಬಳಿ ಬಂದು ನಿಂತಿತು. ಆ ಹೋಟೆಲು ಮಾಡಿನಲ್ಲಿ ‘ನೀಲನಂದಿ’ಯೆಂದೋ `ನೀಲ ಹಂದಿ’ಯೆಂದೋ ಅಂತೂ ನೀಲಿ ಬಣ್ಣದ ಯಾವುದೋ ಒಂದು ಮೃಗದ – ಚಿತ್ರ, ಮತ್ತೂ ದೊಡ್ಡ ಅಕ್ಷರಗಳಲ್ಲಿ ಅದರ ಹೆಸರು ಬರೆದಿದ್ದ ಒಂದು ಹಲಗೆಯನ್ನು ತೂಗಾಡಿಸಿದ್ದರು.

ನಾನು ಬಂಡಿಯಿಂದಿಳಿದ ಕೂಡಲೇ ಬಂಡಿಯವನು ಸುತ್ತಲೂ ನೋಡುತ್ತಾ “ಬ್ಲಂಡರ್ ಸ್ಟನ್ನಿನಿಂದ ಬಂದಿರುವ ಬಾಲಕನ್ನು ಕರೆದುಕೊಂಡು ಹೋಗುವವರು ಯಾರು? – ಯಾರು?” ಎಂದು ಕೆಲವು ಸರ್ತಿ ಕೂಗಿದನು. ಆದರೆ ಯಾರೂ ಬರದಿದ್ದುದನ್ನು ನೋಡಿ, ನನ್ನನ್ನು ಹೋಟೆಲಿನ ಜಗುಲಿಯಲ್ಲಿದ್ದ ದೊಡ್ಡ ತಕ್ಕಡಿಯ ಒಂದು ತ್ರಾಸಿನ ಮೇಲೆ ಕುಳ್ಳಿರಿಸಿದರು. ನಾನು ಅಲ್ಲೇ ಉಳಿದು ಹೋದರೆ ನನ್ನ ಮುಂದಿನ ಗತಿಯೇನೆಂದೂ ನಾನು ಯೋಚಿಸತೊಡಗಿದೆ. ಬೇಕೆಂದೇ ನನ್ನನ್ನು ಈ ರೀತಿ, ಒಂದು ವಿಧದಲ್ಲಿ, ಬಿಸಾಡಿಬಿಟ್ಟರೋ ? ನಾನು ಹೀಗೆ ಎಷ್ಟು ದಿನ ಕಾದು ಕುಳಿತುಕೊಳ್ಳಬಹುದು – ಕೊನೆಗೆ, ನನ್ನ ಕೈಯ್ಯಲ್ಲಿದ್ದ ಹಣವೆಲ್ಲ ಮುಗಿದನಂತರ ನನ್ನ ಊಟಕ್ಕೆ ನಾನು ಮಾಡುವುದೇನು – ಅಥವಾ ಅನ್ನವಿಲ್ಲದೆ ಸತ್ತರೆ ನನ್ನ ಶವಸಂಸ್ಕಾರ ಮಾಡುವವರು ಯಾರು, ಎಂಬಿತ್ಯಾದಿ ಯೋಚಿಸಿ, ಯೋಚಿಸಿ, ದುಃಖಿಸತೊಡಗಿದೆನು. ಇಷ್ಟರಲ್ಲೇ ಒಬ್ಬನು ಬಂದು ಬಂಡಿಗೆ ಟಿಕೆಟ್ ಕೊಡುವವನ ಹತ್ತಿರ ಏನೋ ಮಾತಾಡಿ, ಅನಂತರ ನನ್ನ ಹತ್ತಿರ ಬಂದು, ತಾನೇ ನನ್ನನ್ನು ಕರೆದುಕೊಂಡು ಹೋಗಲು ಬಂದವನೆಂದು ಹೇಳಿದನು. ಅನಂತರ ನಾವಿಬ್ಬರೂ ಮುಂದೆ ನಮ್ಮ ಮುಂದಿನ ಶಾಲಾಭಿಮುಖವಾಗಿ ಟಪ್ಪಾಲು ಬಂಡಿಯನ್ನೇರಿ ಹೋದೆವು. ನಮ್ಮ ಶಾಲೆ ಇನ್ನೂ ಸ್ವಲ್ಪ ದೂರದಲ್ಲಿದ್ದುದರಿಂದ ನಾವು ಹಾಗೆ ಹೋಗಬೇಕಾಗಿತ್ತು. ಹೀಗೆ ಸ್ವಲ್ಪ ದೂರ ಹೋದನಂತರ ಒಂದು ಸಾರ್ವಜನಿಕ ಅನಾಥಾಲಯದ ಸಮೀಪ ನಾವು ಬಂಡಿಯಿಂದಿಳಿದು ನಡೆದು ಹೋದೆವು.

ನನ್ನನ್ನು ಕರೆದುಕೊಂದು ಹೋಗಲು ಬಂದಿದ್ದವನು ರೋಗಿಷ್ಠನಂತೆ ತೋರುತ್ತಿದ್ದನು. ಅವನು ಕೃಶ ಕಾಯನಾಗಿದ್ದನು. ಪಾದದ ಕಡೆಗೆ ತಲಪುತ್ತಾ ಸಪುರವಾಗುತ್ತಿದ್ದ ನಮೂನೆಯ ಇಜಾರವನ್ನು ಧರಿಸಿದ್ದನು. ಅವನ ಕೋಟು ಮೈ ತುಂಬ ಮುಚ್ಚಿರಲಿಲ್ಲ. ಕೋಟಿನ ಒಳಗಡೆ ಶರ್ಟಾಗಲೀ, ಜುಬ್ಬವಾಗಲೀ ಇದ್ದಂತೆ ತೋರುತ್ತಿರಲಿಲ್ಲ. ಆತನ ಮುಖ ಒಣಗಿ, ಬತ್ತಿ, ಮುಖದಲ್ಲಿ ಒಂದು ವಿಧದ ಹಳದಿ ಬಣ್ಣ ಇತ್ತು. ಅವನು ಯಾರು, ಅವನ ಹೆಸರೇನೆಂದು ಇತರರಿಂದ ಗುಟ್ಟಾಗಿ ವಿಚಾರಿಸಿ ತಿಳಿದಾಗ ಅವನು, ನಾನು ಮುಂದೆ ಕಲಿಯಲು ಸೇರಬೇಕಾಗಿದ್ದ `ಸೆಲಂ’ ಶಾಲೆಯಲ್ಲಿನ ಒಬ್ಬ ಉಪಾಧ್ಯಾಯ ಮಿಸ್ಟರ್ ಮೆಲ್ ಎಂದು ತಿಳಿದೆನು. ಅವರ ಬಾಹ್ಯವು ಹೇಗೇ ಇದ್ದರೂ, ಲಂಡನ್ ನಗರದ ಸಮೀಪದ ಶಾಲೆಯ ಉಪಾಧ್ಯಾಯ ಅವರಾಗಿದ್ದುದರಿಂದ ಅವರ ಜ್ಞಾನಭಂಡಾರ ದೊಡ್ಡದೇ ಇರಬೇಕೆಂದು ತೀರ್ಮಾನಿಸಿಕೊಂಡೆನು. ಅನಂತರ ನಾನು ಅವರ ಹತ್ತಿರ ಬಹು ನಮ್ರತೆಯಿಂದಲೇ ಸಂಭಾಷಿಸಿ, ನಡೆದು ಹೋಗತೊಡಗಿದೆ.

ಪ್ರಥಮವಾಗಿ ನಾವು ಅನಾಥಾಲಯವನ್ನು ಪ್ರವೇಶಿಸಿದೆವು. ಅಲ್ಲಿ ಮಿ. ಮೆಲ್ಲರಿಗೆ ಸಂಬಂಧಪಟ್ಟ ಮುದುಕಿಯೊಬ್ಬರಿದ್ದರು. ಮಿ. ಮೆಲ್ಲರು ಆ ಮುದುಕಿಯೊಡನೆ ಸ್ವಲ್ಪ ಮಾತಾಡಿ, ಅವರ ಸಂತೋಷಕ್ಕಾಗಿ ತಮ್ಮ ಕೊಳಲನ್ನು ಊದಿದರು. ಸ್ವಲ್ಪ ಹೊತ್ತು ಅಲ್ಲಿದ್ದು, ನಾವು ನಮ್ಮ ಸೆಲಂ ಶಾಲೆಗೆ ಬಂದೆವು.

ಸೆಲಂ ಶಾಲೆಯ ಕಂಪೌಂಡು ನಾಲ್ಕೂ ಬದಿಗಳಲ್ಲಿ ಎತ್ತರವಾಗಿದ್ದ ಗೋಡೆಗಳಿಂದ ಆವೃತವಾಗಿತ್ತು. ಅದರ ಎದುರು ಬದಿಯಲ್ಲಿ ಮಾತ್ರ ಒಂದು ಎತ್ತರವಾಗಿಯೂ, ಅಗಲವಾಗಿಯೂ ಇದ್ದ ಬಾಗಿಲಿತ್ತು. ಈ ಹೆಬ್ಬಾಗಿಲಿನ ಮೇಲೆ ದೊಡ್ಡ ಅಕ್ಷರದಲ್ಲಿ `ಸೆಲಂ ಶಾಲೆ’ ಎಂದು ಅದರ ಹೆಸರನ್ನು ಬರೆದಿದ್ದರು. ಆ ಬಾಗಿಲಲ್ಲಿದ್ದ ಸರಳುಗಳಿಂದ ಒಳಗೂ, ಹೊರಗೂ ನೋಡಬಹುದಿತ್ತೇ ಹೊರತು, ಬಾಗಿಲು ಮುಚ್ಚಿದ್ದಾಗ ಯಾರೂ ಒಳಗೆ ಹೋಗದಿರುವಷ್ಟು ಭದ್ರವಾಗಿ ಅದಿತ್ತು. ನಮ್ಮನ್ನು ಕಂಡಾ ಕೂಡಲೇ ದಪ್ಪ ಕತ್ತಿನ, ಸಿಟ್ಟು ಮುಖದ ಪಹರೆಯವನು ಒಳಗಿನಿಂದಲೇ ಬೀಗ ತೆಗೆದು ನಮ್ಮನ್ನು ಒಳಗೆ ಬಿಟ್ಟನು. ನಾವು ಒಳನುಗ್ಗಿದ ಕೂಡಲೇ ಪೂರ್ವದಂತೆಯೇ ಬಾಗಿಲು ಬಂದೋಬಸ್ತು ಮಾಡಿದನು.

ಈ ಪಹರೆಯವನ ಮನೆ ಶಾಲಾ ಕಂಪೌಂಡಿನಲ್ಲೇ ಒಂದು ಕಡೆಯಲ್ಲಿ ಇತ್ತೆಂದೂ, ಅವನ ಎರಡು ಕಾಲುಗಳಲ್ಲಿ ಒಂದು ಮರದ (ಕೃತಕ) ಕಾಲು ಎಂದೂ ನಾನು ಹಿಂದಿನಿಂದ ತಿಳಿದುಕೊಂಡೆ. ನಾವು ಹೆಬ್ಬಾಗಿಲನ್ನು ದಾಟಿ ಮುಂದೆ ಹೋಗುತ್ತಿದ್ದ ಹಾಗೆ, ಪಹರೆಯವನು ತನ್ನ ಮನೆಗೆ ಹೋಗಿ ಎರಡು ಹಳತು ಬೂಟ್ಸುಗಳನ್ನು ತಂದು ಮಿ. ಮೆಲ್ಲ್ ಕಡೆಗೆ ಎಸೆದು, ಆ ಬೂಟ್ಸುಗಳಲ್ಲಿ ಮೂಲ ಭಾಗಕ್ಕಿಂತ ರಿಪೇರಿ ಭಾಗಗಳೇ ಹೆಚ್ಚಿದ್ದವೆಂದೂ, ಆದ್ದರಿಂದ ರಿಪೇರಿಗೆ ಅಸಾಧ್ಯವೆಂದೂ ಸಮಗಾರನು ತಿಳಿಸಿರುವುದಾಗಿ ಹೇಳಿದನು. ಹೇಗಿದ್ದರೂ ತಾನು ಧರಿಸಿದ್ದ ಬೂಟ್ಸುಗಳಿಗಿಂತ ಅವು ಉತ್ತಮ ತರದ್ದಾಗಿರುವುದರಿಂದ ಅವನ್ನು ಕಾಪಾಡಿಟ್ಟುಕೊಳ್ಳಬೇಕೆಂದೆನ್ನುತ್ತ ಮಿ. ಮೆಲ್ಲರು ಅವುಗಳನ್ನು ಹೆಕ್ಕಿ ತೆಗೆದುಕೊಂಡು ಶಾಲೆಯ ಕಡೆಗೆ ನಡೆದರು.

ಆ ಕಂಪೌಂಡಿನ ಮಧ್ಯದಲ್ಲಿ ಶಾಲಾ ಕಟ್ಟಡವಿತ್ತು. ಕಟ್ಟಡದ ಮಧ್ಯದ ವಿಶಾಲವಾಗಿದ್ದ ಒಂದು ಕೋಣೆಯಲ್ಲಿ ಉದ್ದಕ್ಕೂ ಮೂರು ಸಾಲುಗಳಾಗಿ ಬೆಂಚುಗಳನ್ನು ಡೆಸ್ಕುಗಳನ್ನು ಇಟ್ಟಿದ್ದರು. ಶಾಲೆಯಲ್ಲಿ ಆ ದಿನ ಯಾರೂ ಇರಲಿಲ್ಲ. ಆ ಕೋಣೆಯಲ್ಲಿ ಹರುಕು ಕಾಗದ, ಒಡಕು ಸ್ಲೇಟು, ಕಸ, ಬೋರ್ಡುಚಾಕು, ಚಿಂದಿಬಟ್ಟೆ, ದೂಳು ಮೊದಲಾದ್ದು ಎಲ್ಲಾ ಕಡೆಯೂ ಇತ್ತು. ಕೆಲವು ಕಡೆ ಕಸದ ರಾಶಿಯಿಂದ ಜೀವಂತ ಇಲಿಗಳು ಅತ್ತಿತ್ತ ಓಡುತ್ತಿದ್ದುವು. ಒಂದು ಮೂಲೆಯಲ್ಲಿ ಒಂದು ಚಿಕ್ಕ ಹಕ್ಕಿಗಿಂತಲೂ ಚಿಕ್ಕದಾಗಿದ್ದ, ಅರೆಜೀವದ ಗಿಳಿಯೊಂದು ಪಂಜರದಲ್ಲಿ ಕುಳಿತು ನಮ್ಮನ್ನೇ ನೋಡುತ್ತಿತ್ತು. ಮುಳ್ಳು ಹಂದಿಗೆ ಕೋಪಬಂದಾಗ ಅದರ ಮುಳ್ಳು ಎದ್ದುನಿಂತಂತೆ, ಗೋಡೆಗಳಿಂದ ನೂರಾರು ಮೊಳೆ, ಗೂಟ ಮೊದಲಾದ ಸಲಕರಣೆಗಳು ಎದ್ದು ನಿಂತಿದ್ದುವು. ಗೋಡೆಯೇ ವಿಕಾರವಾಗಿ ತೋರುತ್ತಿತ್ತು. ಒಂದು ಯುಗ ಪೂರ್ತಿಯಾಗಿ ಶಾಯಿಯ ಮಳೆ ಸುರಿದಿದ್ದು, ಆ ಎಲ್ಲಾ ಕಾಲದಲ್ಲೂ ಈ ಶಾಲೆಗೆ ಮಾಡೇ ಇಲ್ಲದಿದ್ದಿದ್ದರೆ ಗೋಡೆಯ ಮೇಲೆ ಎಷ್ಟು ಶಾಯಿ ತೋರಬಹುದಾಗಿತ್ತೋ ಅಷ್ಟರಮಟ್ಟಿನಲ್ಲಿ ಆ ಗೋಡೆಗಳಲ್ಲಿ ಶಾಯಿಯ ಕಲೆಗಳು ತುಂಬಿದ್ದುವು.

ಮಿ.ಮೆಲ್ಲರು ಒಂದುಕಡೆ ಕುಳಿತಿದ್ದಾಗ ನಾನು ಆಕೋಣೆಯನ್ನೆಲ್ಲಾ ಸುತ್ತಾಡಿ ನೋಡಿದೆ. ಒಂದು ಮೂಲೆಯಲ್ಲಿ `ಎಚ್ಚರ, ಕಚ್ಚುತ್ತದೆ’ ಎಂದು ಚಂದದ ಅಕ್ಷರಗಳಿಂದ ಬರೆದಿದ್ದ, ಹಗ್ಗ ಸಮೇತವಾಗಿದ್ದ ರಟ್ಟಿನ ತುಂಡೊಂದನ್ನು ಕಂಡೆನು. ಅಲ್ಲಿ ಒಂದು ನಾಯಿಯಿರಬೇಕೆಂದು ಹೆದರಿ ಹಠಾತ್ತಾಗಿ ಹಿಂದೆ ಹಾರಿದೆ. ನನ್ನ ಗಾಬರಿಯನ್ನು ಕಂಡು, ನಾನು ಆ ರೀತಿ ಹಾರಿದ್ದೇಕೆಂದು ಮಿ. ಮೆಲ್ಲರು ಕೇಳಿದರು.
“ನಾಯಿಗೆ ಹೆದರಿದೆ”, ಅಂದೆನು ನಾನು.
“ಎಲ್ಲಿದೆ, ನಾಯಿ?” ಎಂದು ಮಿ. ಮೆಲ್ಲರು ಕೇಳಿದರು.
ಅವರಿಗೆ ರಟ್ಟಿನ ಮೇಲಿದ್ದ ಬರಹವನ್ನು ತೋರಿಸಿದೆನು.
“ಅದು ನಾಯಿಗಲ್ಲ ಇರುವುದು – ಹೇಳದೆ ನಿರ್ವಾಹವಿಲ್ಲ – ನಿನಗಾಗಿ ಇರುವುದು” ಅಂದರು ಮಿ. ಮೆಲ್ಲರು.
ನಾನು ಆಶ್ಚರ್ಯದಿಂದ ಅವರ ಮುಖ ನೋಡಿದೆನು.
“ನೀನು ನಿಮ್ಮನೆಯಲ್ಲಿ ಮಾಡಿದ ತಪ್ಪಿಗಾಗಿ ನಿನ್ನನ್ನು ಇಲ್ಲಿಗೆ ಕಳುಹಿಸಿರುವರು. ಈಗ ರಜೆಯಾದ್ದರಿಂದ ಇಲ್ಲಿ ಯಾರೂ ಇಲ್ಲ. ಇದನ್ನು ನಿನ್ನ ಬೆನ್ನಿಗೆ ಕಟ್ಟಬೇಕೆಂದು ನನಗೆ ಅಪ್ಪಣೆಯಾಗಿದೆ” ಎಂದು ಮಿ. ಮೆಲ್ಲರು ಸ್ವಲ್ಪ ಬೇಸರದಿಂದಲೇ ಹೇಳಿಕೊಳ್ಳುತ್ತಾ, ಆ ರಟ್ಟನ್ನು ನನ್ನ ಬೆನ್ನಿಗೆ ಕಟ್ಟಿದರು. ಅಂದಿನಿಂದ ಅದರಲ್ಲಿರುವ ವಿಷಯವನ್ನು ಪ್ರಕಟಿಸುವ ಖ್ಯಾತಿ ನನ್ನದಾಯಿತು. ರಜ ಮುಗಿದನಂತರ ಎಷ್ಟು ಜನ ವಿದ್ಯಾರ್ಥಿಗಳು ಬರಬಹುದು, ಅವರ ಮರ್ಜಿಗಳೆಲ್ಲ ಹೇಗಿರಬಹುದು, ಎಷ್ಟು ಜನರು ನನ್ನನ್ನು ಹಾಸ್ಯ ಮಾಡುವರು ಹೆದರಿಸುವರು ಎಂಬಿತ್ಯಾದಿಯಾಗಿ ನಾನು ತುಂಬಾ ಊಹಿಸಿ, ಕಲ್ಪಿಸಿಕೊಂಡು ಹೆದರಿದೆನು. ಶಾಲೆಯ ಹಿಂಬದಿಯ ಬಾಗಿಲ ಹಲಗೆಯ ಮೇಲೆ ಅನೇಕ ಹೆಸರುಗಳು ಕೆತ್ತಲ್ಪಟ್ಟಿದ್ದುವು. ಹಾಗೆ ತಂತಮ್ಮ ಚೂರಿಗಳಲ್ಲಿ ಹೆಸರು ಕೆತ್ತಿದ ಹುಡುಗರು ಬಹು ಜೋರಿನವರಿರಬೇಕೆಂದು ಊಹಿಸಿದೆನು. ಆ ಹೆಸರುಗಳಲ್ಲೆಲ್ಲ ಜೆ. ಸ್ಟಿಯರ್ ಫೋರ್ತ್, ಟೋಮಿ ಟ್ರೇಡಲ್, ಡೆಂಪಲ್ ಎಂಬ ಹೆಸರುಗಳು ಎದ್ದು ಕಾಣಿಸುತ್ತಿದ್ದುವು. ಜೆ. ಸ್ಟಿಯರ್ ಫೋರ್ತನು ನನ್ನನ್ನು ಎಷ್ಟು ಮಾತ್ರಕ್ಕೂ ಹಿಂಸಿಸದೆ ಬಿಡನೆಂದು ಊಹಿಸಿದೆನು. ನಾನು ಈ ರಟ್ಟಿನ ತುಂಡನ್ನು ನನ್ನ ಶರ್ಟಿನ ಮೇಲ್ಗಡೆ ಕಟ್ಟಿಕೊಂಡು ಹಗಲು ಇಡೀ ಇರಬೇಕಾಗಿತ್ತು. ನಾನು ಅಪ್ಪಿತಪ್ಪಿ ಗೋಡೆಗೋ ಮರಕ್ಕೋ ಒರಗಿ ನಿಂತ ಕೂದಲೆ ಆ ಮರದ ಕಾಲಿನ, ಹೆಬ್ಬಾಗಿಲ ಪಹರೆಯವನು, ದೂರದಿಂದಲೇ ಕರೆದು –
“ಮಿಸ್ಟರ್ ಕಾಪರ್ ಫೀಲ್ಡ್, ರಿಪೋರ್ಟು ಮಾಡುತ್ತೇನೆ – ರಟ್ಟನ್ನು ಅಡಗಿಸಿ ನಿಲ್ಲಕೂಡದು” ಎಂದು ಆರ್ಭಟಿಸುತ್ತಿದ್ದನು.ನಮ್ಮ ವಠಾರದ ಅಡುಗೆಯವರು, ಅಗಸರು, ಕೆಲಸದವರೂ ಎಲ್ಲರೂ ಈ ರಟ್ಟನ್ನು ಓದಿಯೇ ಓದುವರೆಂದು ಊಹಿಸಿ ಹೆದರುತ್ತಿದ್ದೆನು. ಕೊನೆಗೆ, ನಾನೊಬ್ಬ ಭಯಂಕರ ಪ್ರಾಣಿಯೇ ಆಗಿರಬಹುದೋ ಎಂಬ ಸಂಶಯವು ನನಗೇ ತೋರತೊಡಗಿತು. ಶಾಲೆಯ ಹೆಡ್ ಮಾಸ್ಟರ್ ಮಿಸ್ಟರ್ ಕ್ರೀಕಲರು ಬಂದನಂತರ ಅಂಥ ಗೌರವಯುತ ಪ್ರಾಜ್ಞ ಗಂಭೀರ ವ್ಯಕ್ತಿಗಳ ಎದುರು ನನ್ನಂಥ ಅಲ್ಪ, ದುಷ್ಟ ಪ್ರಾಣಿ ಹೇಗೆ ತಾನೇ ಸರಿಯಾಗಿ ನಡೆದುಕೊಳ್ಳುವುದೆಂದು ಅಂಜತೊಡಗಿದೆ. ನಾನು ಸುಮ್ಮನೆ ಕುಳಿತಾಗ, ಊಟ ಮಾಡುತ್ತಿದ್ದಾಗ, ಓದುತ್ತಿದ್ದಾಗ ಎಲ್ಲ ಸಮಯದಲ್ಲೂ ‘ಎಚ್ಚರಿಕೆ, ಕಚ್ಚುತ್ತದೆ’ ಎಂಬುದು ಎದ್ದು ಕಾಣುತ್ತಿದ್ದಿತು. ಮನೆ ಬಿಟ್ಟು ಬಂದ ದುಃಖವನ್ನು, ನಮ್ಮ ಮನೆ, ನನ್ನಮ್ಮ, ಪೆಗಟಿ ಮೊದಲಾದವರನ್ನು ನೆನಸಿ ಸಂತೋಷಿಸಿ ಹಗುರಮಾಡಿಕೊಳ್ಳೋಣವೆಂದು ಆಲೋಚಿಸಿದಾಗಲೂ ಈ `ಎಚ್ಚರಿಕೆ, ಕಚ್ಚುತ್ತದೆ’ ಎಂಬುದು ಹಿಂಬಾಲಿಸಿ ಬರುತ್ತಿತ್ತು. ಯಾರ್ಮತ್ತಿನ ವಿಶಾಲವಾದ ಸಮುದ್ರದ ದಂಡೆ, ಎಮಿಲಿ ನಮ್ಮ ಆಟ ಸಂತೋಷಗಳ ನೆನಪು – ಇವೆಲ್ಲ ಈ ಘೋರ ಶಬ್ದಗಳಿಂದ ಕಲುಷಿತವಾಗಿದ್ದುವು. ಹೀಗೆ ದುಃಖ, ದುಃಖಶಮನದ ಹಿಂದಿನ ಸವಿನೆನಪುಗಳ ಪ್ರವಾಹ, ಇವೆಲ್ಲ ಎದ್ದೆದ್ದು ಹರಿದು ಹೋದಲ್ಲೆಲ್ಲ `ಎಚ್ಚರಿಕೆ, ಕಚ್ಚುತ್ತದೆ’ ಎಂಬುದೂ ಬೆರೆತು, ಮನಸ್ಸಿನಲ್ಲಿ ಮಹಾ ವಿಪ್ಲವವೇ ಎದ್ದು, ಸಮಸ್ತವೂ ಹಿಂಸೆ ಮಾತ್ರವಾಗಿ ನನ್ನ ಪಾಲಿಗೆ ಬರುತ್ತಿದ್ದುವು.

ಇಂಥ ಪರಿಸ್ಥಿತಿಯ ಮಧ್ಯವೇ ನಾನು ಪಾಠಗಳನ್ನು ಸರಿಯಾಗಿ ಕಲಿಯುತ್ತಿದ್ದೆ. ಪಾಠವಿಲ್ಲದೆ ನನಗೆ ಕೆಲವು ಚಿಕ್ಕ ಕೆಲಸಗಳನ್ನು ಕೊಡುತ್ತಿದ್ದರು. ಏನೇ ಇದ್ದರೂ ಮಿಸ್ಟರ್ ಮತ್ತು ಮಿಸ್ ಮರ್ಡ್ಸ್ಟನ್ ಅಣ್ಣ ತಂಗಿಯರಿದ್ದ ವಠಾರಕ್ಕಿಂತ ಈ ವಠಾರ ಸುಖಕರವಾಗಿ ತೋರಿತು.

ಮಿ. ಮೆಲ್ಲರು ನನ್ನ ಜತೆಯಲ್ಲೇ ಇದ್ದರು. ಅವರಿಗೆ ಮಾತು ಬಹು ಕಡಿಮೆ. ಕಾಗದಗಳಿಗೆ ಮತ್ತು ಪುಸ್ತಕಗಳಿಗೆ ಗೆರೆಯೆಳೆಯುವುದು, ಪುಸ್ತಕಗಳಲ್ಲಿ ಲೆಕ್ಕ ಬರೆಯುವುದು, ಶಾಲೆ ಮತ್ತು ಬೋರ್ಡಿಂಗಿನ ಲೆಕ್ಕ ಪುಸ್ತಕಗಳ ತಯಾರಿಕೆ ಮುಂತಾದ ಕೆಲಸಗಳನ್ನು ಈ ರಜಾ ಕಾಲದಲ್ಲಿ ಅವರು ಮಾಡುತ್ತಿದ್ದರು. ಮಿ. ಮೆಲ್ಲರು ನನ್ನ ಪಾಲಿಗೆ ಒಳ್ಳೆಯವರೇ ಆಗಿದ್ದರು. ಅವರು ನೀಲವರ್ಣದ ಪಿಂಗಾಣಿ ಪಾತ್ರದಲ್ಲಿ ಚಾ ಕುಡಿಯುತ್ತಿದ್ದಾಗ ಒಂದು ಟಿನ್ ಡಬ್ಬಿಯಲ್ಲಿ ನನಗೂ ಸ್ವಲ್ಪ ಚಾ ಕೊಡುತ್ತಿದ್ದರು.

ಮಿ. ಮೆಲ್ಲರಿಗೆ ಕೆಲವೊಂದು ವಿಶೇಷ ಗುಣಗಳಿದ್ದುವು. ಮೂರು ತುಂಡಾಗಿ ತಯಾರಿಸಲ್ಪಟ್ಟಿದ್ದ ಕೊಳಲನ್ನು ಒಂದಾಗಿ ಮಾಡಿಕೊಂಡು, ಅವರಿಗೆ ಪುರಸತ್ತು ಇದ್ದಾಗಲೆಲ್ಲಾ ಕೊಳಲೂದುತ್ತಿದ್ದರು. ಈ ಕೊಳಲ ಗಾನ ಅನಾಥಾಲಯದಲ್ಲಿ ಆ ಮುದುಕಿ ಎದುರು ಬಾರಿಸಿದ್ದ ಗಾನದಂತೆಯೇ ಇದ್ದು, ನಮ್ಮ ಶಾಲಾ ವಠಾರದಲ್ಲೆಲ್ಲ ನಿರುತ್ಸಾಹ, ದುಃಖ ಭಾವನೆಗಳನ್ನು ಪಸರಿಸುತ್ತಿತ್ತು. ಅವರು ಲೆಕ್ಕ ಬರೆಯುತ್ತಿದ್ದಾಗಲೆಲ್ಲ, ಯಾರೋ ಮತ್ತೊಬ್ಬರ, ಹತ್ತಿರ ತಾವು ಮಾತಾಡುತ್ತಿರುವಂತೆ, ಎಡೆಬಿಡದೆ ಮಾತಾಡುತ್ತಿದ್ದರು. ಕೆಲವು ಸಂದರ್ಭಗಳಲ್ಲಿ – ಕೆಲವು ದಿನಗಳಲ್ಲಿ – ಹೀಗೆ ಮಾತಾಡುತ್ತಿದ್ದುದು ಮಾತ್ರವಲ್ಲದೆ, ಹಲ್ಲು ಕಡಿಯುತ್ತಾ, ಮಹಾ ರೋಷಾವೇಶದಿಂದ ಮೇಜನ್ನೂ ಬಲವಾಗಿ ಗುದ್ದುತ್ತಿದ್ದರು. ಇವೇ ಅವರ ವೈಶಿಷ್ಟ್ಯಗಳು.

(ಮುಂದುವರಿಯಲಿದೆ)