ಅಧ್ಯಾಯ ಮೂರು
[ಡೇವಿಡ್ ಕಾಪರ್ಫೀಲ್ಡ್‌ನ ಜೀವನ ವೃತ್ತಾಂತ ಮತ್ತು ಅನುಭವಗಳು, ಕಾದಂಬರಿ. ಮೂಲ ಇಂಗ್ಲಿಷಿನಲ್ಲಿ ಚಾರ್ಲ್ಸ್ ಡಿಕನ್ಸ್ ಕನ್ನಡ ಭಾವಾನುವಾದ ಎ.ಪಿ. ಸುಬ್ಬಯ್ಯ]
ವಿ-ಧಾರಾವಾಹಿಯ ಐದನೇ ಕಂತು

ನಮ್ಮ ಗಾಡಿಯ ಕುದುರೆಯಷ್ಟು ನಿಧಾನವಾಗಿ ನಡೆಯುವ ಕುದುರೆ ಇನ್ನೆಲ್ಲಿಯೂ ಇರಲಾರದು. ಗಾಡಿಯ ಮುಖಾಂತರ ತಮಗೆ ಬಟವಾಡೆಯಾಗಬೇಕಾದ ಸಾಮಾನುಗಳನ್ನು ಪಡೆಯುವುದಕ್ಕಾಗಿ ರಸ್ತೆಯಲ್ಲಿ ಕಾದು ನಿಂತವರನ್ನು ಮತ್ತಷ್ಟು ಕಾಯಿಸಬೇಕೆಂದೇ ಈ ಕುದುರೆ ಈ ರೀತಿ ತಲೆ ಅಡಿಗೆ ಹಾಕಿ ಮಂಕಾಗಿ ನಡೆಯುತ್ತಿತ್ತು. ಕುದುರೆಗೆ ಒಂದು ವಿಧದ ಕೆಮ್ಮು ಇದ್ದು, ಅದು ಕೆಮ್ಮುತ್ತಿದ್ದಾಗ ಕಾದು ನಿಂತಿದ್ದವರ ಕಷ್ಟವನ್ನು ತಿಳಿದೇ – ತನ್ನ ಉದ್ದೇಶ ಸಾಫಲ್ಯಕ್ಕಾಗಿ – ಅದು ಸಂತೋಷಿಸುತ್ತಿದ್ದಂತೆ ತೋರುತ್ತಿತ್ತು. ಗಾಡಿಯವನೂ ಸಹ ಕುದುರೆಗೆ ತಕ್ಕಂಥವನೇ ಆಗಿದ್ದನೆಂದರೆ ತಪ್ಪಾಗಲಾರದು. ಅವನು ತನ್ನ ಮೊಣಕಾಲುಗಳ ಮೇಲೆ ಮೊಣಕೈಗಳನ್ನೂರಿಕೊಂಡು ತಲೆ ಅಡಿಗೆ ಹಾಕಿಕೊಂಡು ಗಾಡಿಯನ್ನು ನಡೆಸುತ್ತಿದ್ದನು. ನಮ್ಮ ಗಾಡಿಯ ಮಟ್ಟಿಗೆ, ಯಾವ ಗಾಡಿಯವನಿರದಿದ್ದರೂ ಗಾಡಿ ಯಾರ್ಮತ್ತಿಗೆ ತಲುಪುತ್ತಿತ್ತೆಂಬುದರಲ್ಲಿ ಸಂಶಯವಿಲ್ಲ.

ನಮ್ಮ ಜತೆ ಪ್ರಯಾಣಿಕಳಾಗಿ ಒಬ್ಬ ಮುದುಕಿಯಿದ್ದಳು. ಗಾಡಿಯು ಎಷ್ಟೇ ಅಲುಗಾಡಿದರೂ ಆ ಮುದುಕಿ ನಿದ್ರಿಸಿ ಗೊರಕೆ ಹೊಡೆಯುತ್ತಿದ್ದಳು. ಗಾಡಿಯ ಅಲುಗಾಟ, ಮುದುಕಿಯ ಗೊರಕೆ, ಮತ್ತೂ ನನ್ನ ಪಕ್ಕದಲ್ಲಿ ಕುಳಿತು ನನ್ನನ್ನು ಒತ್ತಿ ಅಮರಿಸುತ್ತಿದ್ದ ಹಿಂಸೆ, ಇಷ್ಟನ್ನೆಲ್ಲ ಸಹಿಸುತ್ತಾ ಕೊನೆಗೆ ಯಾರ್ಮತ್ತಿಗೆ ಸಮೀಪವಾಗತೊಡಗಿದೆವು.

ನನ್ನೆದುರಿನ ಪ್ರದೇಶ ಬಹು ವಿಶಾಲವಾಗಿಯೂ ಸಮತಟ್ಟಾಗಿಯೂ ಇತ್ತು. ಭೂಮಿ ಉರುಟಾಗಿದೆಯೆಂದು ಭೂಗೋಳಶಾಸ್ತ್ರ ಹೇಳುತ್ತಿರುವುದಕ್ಕೆ ಆಧಾರವೇನಿರಬಹುದೆಂಬ ಸಂಶಯವೂ ತಲೆದೋರಿತು. ಆದರೆ, ಯಾರ್ಮತ್ತು ಧ್ರುವಪ್ರದೇಶದಲ್ಲಿರಬೇಕೆಂದೂ ಆ ಕಾರಣದಿಂದಲೇ ಆ ಪ್ರದೇಶದ ಸಮತಟ್ಟು ಪರಿಸ್ಥಿತಿ ಇರಬೇಕೆಂದೂ ನಿಶ್ಚೈಸಿಕೊಂಡೆ. ಇನ್ನೂ ಮುಂದೆ ಹೋಗುತ್ತಿದ್ದಂತೆಯೇ ದಿಗಂತದಲ್ಲಿ ನೆಟ್ಟಗಿನ ಗೆರೆಯಂತೆ ಗಡಿಯಿದ್ದ ಸ್ಥಳವನ್ನು ಕಂಡು ನನಗೆ ಆಶ್ಚರ್ಯವಾಯಿತು. ಹೀಗೆ ಸಮತಟ್ಟು, ಸರಳ ರೇಖೆ, ಮೊದಲಾದ ಸರ್ವತ್ರ ಒಂದೇ ವಿಧದಿಂದ ತೋರಿಬರುವ ಸೌಂದರ್ಯಕ್ಕಿಂಥ ಮಧ್ಯೆ ಮಧ್ಯೆ ಚಿಕ್ಕ ಗುಡ್ಡಗಳು, ಡೊಂಕಾಗಿ ಏರಿಹೋಗುವ ರಸ್ತೆಗಳು, ಇತ್ಯಾದಿಗಳ ವೈವಿಧ್ಯ ಕೊಡುವ ಸೌಂದರ್ಯ ಉತ್ತಮವೆಂಬ ನನ್ನ ಅನುಭವವನ್ನು ಪೆಗಟಿಗೆ ಹೇಳಿದೆ. ಆದರೆ ಇದನ್ನೆಲ್ಲ ಕೇಳಿ ಪೆಗಟಿಗೆ ಬೇಸರವಾಯಿತು. ಅವಳು ಬಹಳವಾಗಿ ಅಭಿಮಾನದಿಂದ ತಿಳಿದು ಬಂದಿದ್ದ ಯಾರ್ಮತ್ತನ್ನು ಕುರಿತು ನನ್ನ ಅನುಭವ ಹಾಗಿರುವುದು ಸರಿಯಲ್ಲವೆಂದು, ಅವಳ ಕಡೆಯ ಹೊಗಳಿಕೆ, ಹೊಗಳಿಕೆಗೆ ತಕ್ಕಂಥ ಸಮರ್ಥನೆಯನ್ನು ಕೊಟ್ಟಳು. ನೆಟ್ಟಗಿರುವ ಗೆರೆ ಸಮುದ್ರದ ದೂರದ ಗಡಿಯೆಂದೂ, ಸಮೀಪ ಹೋದ ಹಾಗೆ ವಸ್ತುಸ್ಥಿತಿ ಬೇರೊಂದು ರೂಪದಲ್ಲಿ ತೋರ್ಪಡುವುದೆಂದೂ, ಸೃಷ್ಟಿಯಲ್ಲಿ ಹಾಗಿರಬೇಕಿತ್ತು, ಹೀಗಿರಬೇಕಿತ್ತು ಎನ್ನುವುದಕ್ಕಿಂತ ವಸ್ತುಸ್ಥಿತಿಯನ್ನು ಸಮಾಧಾನ ಚಿತ್ತದಿಂದ ಗ್ರಹಿಸಿಕೊಂಡು, ಇದ್ದುದರಲ್ಲೇ ತೃಪ್ತಿಪಟ್ಟುಕೊಳ್ಳುವ ಮನೋಭಾವವನ್ನು ತಂದುಕೊಳ್ಳಬೇಕೆಂದೂ ಅವಳು ಹೇಳಿದಳು.

ನಮ್ಮ ಗಾಡಿ ಪಟ್ಟಣವನ್ನು ಪ್ರವೇಶಿಸುತ್ತಿದ್ದ ಹಾಗೆಯೇ ಪಟ್ಟಣದಿಂದ ಮೀನು, ತಾರು, ಹೊಗೆಸೊಪ್ಪು ಇತ್ಯಾದಿಗಳ ವಾಸನೆ ಬರತೊಡಗಿತು. ಕಾರ್ಖಾನೆಯಲ್ಲಿನ ಯಂತ್ರಗಳ ಕೀರುಧ್ವನಿ, ಕಬ್ಬಿಣ ಕೆಲಸಗಾರರ ಝಣಝಣ ಶಬ್ದ, ಗಾಡಿ ಗರಗಸಗಳ ಗರಗರ ಶಬ್ದಗಳೂ ಕೇಳಿಸಿದುವು. ಒಂದು ಪ್ರವಾಹದಂತೆ ಜನಸ್ತೋಮ ದೂರದಲ್ಲಿ ತೋರಿ, ಹತ್ತಿರ ಬಂದು ಹಿಂದೆ ದಾಟಿ ಹೋಗುತ್ತಾ ಮುಗಿಯದಷ್ಟು ಜನರು ಕಾಣಿಸಿಕೊಂಡರು. ಇದನ್ನೆಲ್ಲ ಕಂಡು ನನ್ನ ಮೊದಲಿನ ಅಭಿಪ್ರಾಯವನ್ನು ಬದಲಿಸಬೇಕಾಯ್ತು. ಯಾರ್ಮತ್ತು ನಿಜವಾಗಿಯೂ ಒಂದು ಸುಂದರವಾದ ಗಣನೀಯ ಪ್ರದೇಶವೆಂಬುದಾಗಿ ನಾನು ತಿಳಿದು, ಇದನ್ನೇ ಪೆಗಟಿಗೆ ತಿಳಿಸಿದೆ. ಪೆಗಟಿಗೂ ನನ್ನ ಅಭಿಪ್ರಾಯ ಕೇಳಿ ಸಂತೋಷವಾಯಿತು. ಯಾರ್ಮತ್ತು ವಿದ್ವಜ್ಜನರಿಂದ ಮಾತ್ರ ತಿಳಿಯಲು ಶಕ್ಯವಾದ – ಪ್ರಪಂಚದ ಸುಂದರ ಪ್ರದೇಶಗಳಲ್ಲಿ ಒಂದು ಪ್ರಾಮುಖ್ಯವಾದ ಸ್ಥಳವೆಂದು ಪೆಗಟಿ ಹೇಳಿದಳು.

ನಮ್ಮನ್ನು ಇಷ್ಟರಲ್ಲೇ ಪೆಗಟಿಯ ಅಳಿಯ ಹೇಮನು ಬಂದು ಎದುರುಗೊಂಡನು. ನನ್ನನ್ನು ಕಂಡ ಕೂಡಲೇ ಅವನು ನನ್ನ ಪರಿಚಯ ಅವನಿಗೆ ಆ ಮೊದಲೇ ಇದ್ದವನಂತೆ ಕುಶಲವೇ? ಸ್ಥಳ ಒಗ್ಗುತ್ತಿದೆಯೇ? ಎಂದು ಗಂಭೀರವಾಗಿ ಕೇಳಿದನು. ನನ್ನ ಜನನದ ಕಾಲದಲ್ಲೇ ಇವನಿಗೆ ನನ್ನ ಪರಿಚಯವಾಗಿದ್ದುದರಿಂದ, ಅವನಿಗೆ ಈ ತೆರನಾದ ಸಲಿಗೆ ಬಂದಿರಬೇಕೆಂದು ತಿಳಿಯುತ್ತಾ, ಅವನ ‘ಮರ್ಜಿ’ಗೆ ನಾನು ಮೆಚ್ಚಿ, ಅವನಂತೆಯೇ ಗಂಭೀರವಾಗಿ, ಅವನನ್ನು ವಂದಿಸಿ, ಊರು ಚೆನ್ನಾಗಿದೆಯೆಂದೆನು.
ಹೇಮ ದೃಢಕಾಯನು; ಸಾಧಾರಣ ಆರಡಿಗಿಂತ ಹೆಚ್ಚಾಗಿಯೇ ಎತ್ತರವಾಗಿದ್ದನು. ಒಳಗೆ ಕಾಲುಗಳಿರದಿದ್ದರೂ ತಾವಾಗಿಯೇ ನೆಟ್ಟಗೆ ನಿಲ್ಲುವಷ್ಟು ತ್ರಾಣವಿದ್ದ, ದಪ್ಪದ ಕಾಕಿ ಬಟ್ಟೆಯ ಇಜಾರನ್ನು ಧರಿಸಿದ್ದನು. ತಲೆಯಲ್ಲಿ ತುಂಬಾ ಗುಂಗುರು ಕೂದಲಿತ್ತು. ಈ ಹೇಮ ನಾನು ಬೇಡವೆಂದನ್ನುತ್ತಿದ್ದಾಗಲೇ – ನಾನೊಬ್ಬ ಪ್ರಾಯಸ್ಥ, ಅವನಿಗೆ ಸರಿಸಮಾನಸ್ಥ ಎಂದನ್ನುತ್ತ ಅವನೊಡನೆ ಮಾತಾಡುತ್ತಿದ್ದ ಹಾಗೆಯೇ – ನನ್ನನ್ನೆತ್ತಿ ತನ್ನ ಹೆಗಲ ಮೇಲೆ ಕೂರಿಸಿಕೊಂಡು ನಡೆಯತೊಡಗಿದನು. ಪೆಗಟಿ ನಮ್ಮನ್ನು ಹಿಂಬಾಲಿಸಿದಳು.

ಕಾರ್ಖಾನೆ, ಅಂಗಡಿ, ಹೋಟೆಲು ಮೊದಲಾದುವುಗಳನ್ನೆಲ್ಲಾ ಫರ್ಲಾಂಗುಗಳ ಗಟ್ಟಲೆ ದಾಟಿದನಂತರ ವಿಶಾಲವಾದ ಮರಳಿನ ಬೈಲು ಪ್ರದೇಶಕ್ಕೆ ತಲುಪಿದೆವು. ಆ ಬೈಲಿನ ಒಂದು ಕಡೆಗೆ ಕೈ ತೋರಿಸುತ್ತಾ “ಅದೆ ನಮ್ಮನೆ” ಅಂದನು ಹೇಮ. ನಾನು ಅತ್ತ ಕಡೆ ನೋಡಿದರೂ ನನಗೆ ಯಾವ ಮನೆಯೂ ಅಲ್ಲಿ ಕಾಣಿಸಲಿಲ್ಲ. ಆದರೆ ನಮ್ಮಿಂದ ಸ್ವಲ್ಪ ದೂರದಲ್ಲಿ ಒಂದು ಹರಿಗೋಲು ನಿಂತಿತ್ತು. ನಾನು ಆ ಹರಿಗೋಲನ್ನು ಕೈಯಿಂದ ತೋರಿಸುತ್ತಾ, ಸ್ವಲ್ಪ ಆಶ್ಚರ್ಯದಿಂದಲೂ, ಸ್ವಲ್ಪ ಸಂಶಯದಿಂದಲೂ “ಹಡಗಿನಂತೆ ಕಾಣುತ್ತದಲ್ಲಾ, ಅದಲ್ಲವಷ್ಟೆ ಮನೆ?” ಎಂದು ಕೇಳಿದೆನು.

“ನಮ್ಮನೆ ಅದೇ” ಅಂದನು ಹೇಮ.

ಅವರು ಆ ಹರಿಗೋಲನ್ನು ವಾಸಕ್ಕಾಗಿ ಮನೆಯಂತೆ ಉಪಯೋಗಿಸುತ್ತಿರುವರು ಎಂದು ತಿಳಿದ ಕೂಡಲೆ ನನಗೆ ಆದ ಆನಂದ, ಆಶ್ಚರ್ಯ ಅಷ್ಟಿಷ್ಟಲ್ಲ. ಮನೆಗೆ ತಲಪಿದ ಹಾಗೆ ಅದು ಅಲ್ಲಾವುದ್ದೀನನ ದೀಪದ ಒಂದು ವಿಚಿತ್ರ ನಿರ್ಮಾಣವೆಂದೂ ಅಥವಾ ದೇವ, ಗಂಧರ್ವ, ಯಕ್ಷಿಣಿಯರ ನಿರ್ಮಾಣ ಅದೇಕೆ ಆಗಿರಬಾರದೆಂದೂ ತೋರಿತು. ಅದರ ಒಂದು ಪಕ್ಕದಲ್ಲಿ ಬಾಗಿಲೂ, ಮನೆಗೆ ಸುತ್ತಲೂ ತುಂಬಾ ಕಿಟಕಿಗಳೂ ಇದ್ದುವು. ಈ ಬಾಗಿಲು ಮತ್ತು ಕಿಟಕಿಗಳಿಗೆಲ್ಲ – ನಮ್ಮ ತಲೆಯ ಹೇಟಿನ ಮುಂಬದಿ ಮತ್ತು ಹಿಂಬದಿ ಇರುವ ಚಿಕ್ಕ ಇಳಿ ಅಂಚುಗಳಂತೆ – ಚಿಕ್ಕ ಮಾಡುಗಳಿದ್ದುವು. ಮನೆಯ, ಸಾಧಾರಣ ಮಧ್ಯ ಭಾಗದಲ್ಲಿ ಒಂದು ಹೊಗೆನಳಿಗೆ ಮೇಲಕ್ಕೆದ್ದು – ಮನೆಯೊಳಗೆ ಜನರಿದ್ದಾರೆ, ಜೀವನ ನಡೆಸುತ್ತಿದ್ದಾರೆ, ಚಟುವಟಿಕೆಯಲ್ಲಿದ್ದಾರೆ, ಎಂದು ತೋರಿಸಲೋಸ್ಕರವೆಂಬಂತೆ – ಆಗಾಗ ಬಿಸಿಬಿಸಿ ಹೊಗೆ ಕಾರುತ್ತಿತ್ತು. ಸಮುದ್ರವನ್ನು ಬಿಟ್ಟು, ಮರಳಲ್ಲಿ ತಂಗಿ, ಜನರನ್ನು ತುಂಬಿಸಿಕೊಂಡು, ಬಿಸಿ ಉಸಿರು ಬಿಡುತ್ತಿದ್ದ ಆ ಮನೆ ತುಂಬ ಮನೋಹರವಾಗಿತ್ತು.

ನಮ್ಮನ್ನೆದುರುಗೊಳ್ಳಲು ಸ್ವಲ್ಪ ಪ್ರಾಯವಾದ ಹೆಂಗುಸೊಬ್ಬಳು, ಒಬ್ಬ ಚಿಕ್ಕ ಹುಡುಗಿಯ ಜತೆಯಲ್ಲಿ, ಕಾದು ನಿಂತಿದ್ದಳು. ಆ ಹುಡುಗಿ ನಮ್ಮ ಸ್ವಾಗತಕ್ಕಾಗಿಯೇ ಹೊಸ ಲಂಗವನ್ನು ಧರಿಸಿ, ಗಾಜಿನ ಮಣಿಸರಗಳಿಂದ ಅಲಂಕೃತಳಾಗಿದ್ದಳು. ಇವರ ಸ್ವಾಗತದ ಕ್ರಮಗಳೆಲ್ಲ ಬಹು ಸೊಗಸಾಗಿದ್ದುವು. ಹುಡುಗಿಯು ಬಹು ಮುದ್ದುಮುಖದವಳು. ಅವರಿಬ್ಬರು ನಮ್ಮನ್ನು ಒಳಗೆ ಕರೆದುಕೊಂಡು ಹೋಗಿ ಆಸನಗಳನ್ನಿತ್ತರು.

ಆ ಮನೆಯಲ್ಲೇ ಅಡಿಗೆಗೆ, ಊಟಕ್ಕೆ, ಕುಳಿತು ಮಾತಾಡಲು, ನಿದ್ರಿಸಲು ಪ್ರತ್ಯಪ್ರತ್ಯೇಕ ಅಂಕಣಗಳಿದ್ದವು. ಇಷ್ಟೂ ಅಲ್ಲದೆ ಅದರಲ್ಲೊಂದು ಚಿಕ್ಕ ಉಗ್ರಾಣವೂ ಇತ್ತು. ಮಲಗುವ ವಿಭಾಗದಲ್ಲಿ ದೇವರ ಪಟ, ಇತರ ಕೆಲವು ಚಿತ್ರ, ಒಂದು ಗಡಿಯಾರ, ಮೊದಲಾದುವು ಇದ್ದುವು. ನಾನು ಮಲಗಲೋಸ್ಕರವೆಂದೇ ಒಂದು ಚಿಕ್ಕ ಕೋಣೆಯನ್ನು ಏರ್ಪಡಿಸಿದ್ದರು. ಅದರಲ್ಲಿ ಮಂಚ, ಕನ್ನಡಿ, ಚಿಕ್ಕದೊಂದು ಕಪಾಟು ಮೊದಲಾದ ಅನುಕೂಲಗಳೂ ಇದ್ದುವು. ಇದನ್ನೆಲ್ಲ ನೋಡುವಾಗ ಅದೆಲ್ಲ ಇಂದ್ರಜಾಲವೋ, ವಾಸ್ತವಿಕವೋ ಎಂದು ನನಗೆ ಭ್ರಮೆ ಉಂಟಾಯಿತು. ನನ್ನ ಕೋಣೆಯಲ್ಲಿ ನನ್ನ ಎತ್ತರಕ್ಕೆ ತಕ್ಕದಾದಷ್ಟೇ ಎತ್ತರದಲ್ಲಿ ಒಂದು ಕನ್ನಡಿಯನ್ನಿಟ್ಟಿದ್ದರು. ಕೋಣೆಯ ಅಲಂಕಾರಕ್ಕಾಗಿ ಒಂದೆರಡು ರಮ್ಯವಾದ ಚಿತ್ರಪಟಗಳನ್ನು ತೂಗಾಡಿಸಿದ್ದರು. ನೀಲಿ ಬಣ್ಣದ ಉಡುಪನ್ನುಟ್ಟಿದ್ದ ಐಸಾಕನನ್ನು ಕೆಂಪುಬಣ್ಣದ ಉಡುಪನ್ನು ಧರಿಸಿದ್ದ ಎಬ್ರಹಾಮನು ಕಡಿದು ದೇವರಿಗೆ ಸಮರ್ಪಿಸುವ ಚಿತ್ರವೂ, ಹಸುರು ಬಣ್ಣದ ಸಿಂಹಗಳ ಮಧ್ಯದಲ್ಲಿ ಹಳದಿ ಬಣ್ಣದ ಡೇನಿಯಲನು ಎಸೆಯಲ್ಪಟ್ಟಿದ್ದ ಚಿತ್ರವೂ ನನ್ನ ಕೋಣೆಯಲ್ಲಿದ್ದುವು. ಈ ಪುರಾಣ ಕಥೆಗಳ ಚಿತ್ರಗಳ ಜತೆಗೆ ಚಿತ್ರಕಲೆ ಮತ್ತು ಶಿಲ್ಪಕಲೆ ಮಿಶ್ರವಾದ ಕಲಾಕೃತಿಯೊಂದು ನನ್ನ ಕೋಣೆಯಲ್ಲಿತ್ತು. ಸರ್ಹಜೇನಿನ ಹಡಗು ಚಿತ್ರವಾಗಿದ್ದುದರ ಜತೆಗೆ, ಅದರ ಒಂದು ತುದಿಗೆ ಚಿತ್ರಕ್ಕೆ ಜತೆಗೂಡುವ ಮರದ ಕೆತ್ತನೆಯ ಭಾಗವನ್ನು ಅಂಟಿಸಿದ್ದ ಆ ಕಲಾಕೃತಿ ಸರಕಾರದ ಪ್ರದರ್ಶನಾಲಯಗಳಲ್ಲಿ ಇಡಲು ತಕ್ಕದೆಂದು ನಾನು ಗ್ರಹಿಸಿಕೊಂಡೆ. ಸ್ವಲ್ಪ ಹೊತ್ತಿನಲ್ಲಿ ಊಟದ ಏರ್ಪಾಡಾಯಿತು. ಊಟ ಮಾಡುತ್ತಾ ಹೋದ ಹಾಗೆ ಮನೆಯ ಯಜಮಾನರು ಮೀನುಗಾರಿಕೆ ಕಸಬಿನವರೆಂದು ತಿಳಿದುಕೊಂಡೆ. ಊಟ ಬಹು ಸೊಗಸಾಗಿದ್ದಿತು.

ಮನೆಯ ಯಜಮಾನ ಪೆಗಟಿಯ ಅಣ್ಣ. ಅವನ ಹೆಸರು ಮಿ. ಪೆಗಟಿ. ಆಕರ್ಷಣೀಯ ಮುಖವುಳ್ಳವನು; ನಡುಪ್ರಾಯ ದಾಟಿದವನು. ಅವನ ಮೈ ಮುಖದಲ್ಲೆಲ್ಲಾ ತುಂಬಾ ರೋಮವಿದ್ದುದೊಂದು ವಿಶೇಷವಾಗಿತ್ತು. ಅವನು ತನ್ನ ಸಂಸಾರದೊಂದಿಗೆ ಮಿಳಿತವಾಗಿ ಮಾತಾಡುತ್ತಿದ್ದ ಕ್ರಮ, ನಗೆ, ನುಡಿ ಎಲ್ಲವೂ ಅವನೊಬ್ಬ ಯೋಗ್ಯನಾದ ಗೃಹಸ್ಥನೆಂದು ತೋರಿಸುತ್ತಿದ್ದುವು. ಮಾತ್ರವಲ್ಲದೆ ಅವನು ಸಹವಾಸಕ್ಕೂ ವ್ಯವಹಾರಕ್ಕೂ ಸ್ನೇಹಕ್ಕೂ ಒಪ್ಪುವವನೆಂದು ನಾನು ತಿಳಿದೆ.

ಊಟದನಂತರ ಹೊರಗಿನ ಚಳಿಗಾಳಿ ಒಳಗೆ ಬರದಂತೆ ಬಾಗಿಲು ಹಾಕಿಕೊಂಡು ಮಾತಾಡುತ್ತಾ ಕುಳಿತೆವು. ಅತಿಥಿಯಾದ ನನಗೆ ಒಂದು ಚಿಕ್ಕಪೆಟ್ಟಿಗೆಯನ್ನು ಬೆಂಕಿಯ ಎದುರಿಟ್ಟು ನಾನು ಅದರ ಮೇಲೆ ಕುಳಿತುಕೊಳ್ಳುವಂತೆ ಕೇಳಿಕೊಂಡರು. ಅಲ್ಲಿ ಕುಳಿತು ಅವರೆಲ್ಲರೊಡನೆ ಮಾತಾಡುತ್ತಾ ಅಲ್ಲಿನ ಅನೇಕ ವಿಷಯಗಳನ್ನು ತಿಳಿದುಕೊಂಡೆ. ಆ ಮುದ್ದುಮುದ್ದಾದ ಬಾಲಿಕೆಯ ಹೆಸರು ಎಮಿಲಿ ಎಂದು ತಿಳಿದುಕೊಂಡೆ. ಅವಳನ್ನು ನನ್ನ ಜತೆಯಲ್ಲೇ ಪೆಟ್ಟಿಗೆಯ ಅರ್ಧಭಾಗದಲ್ಲಿ ಕುಳ್ಳಿರಿಸಿದ್ದರು. ಅವಳಂತೂ ಬಹಳ ಸಂತೋಷದಿಂದಲೇ ಅಲ್ಲಿ ಕುಳಿತಿದ್ದಳು. ನಮ್ಮ ಕೋಣೆಯಲ್ಲೇ ಒಂದು ಮೂಲೆಯಲ್ಲಿ ಒಬ್ಬ ಮುದುಕಿ ದುಃಖದ ಮುಖ ಮಾಡಿಕೊಂಡು ಕುಳಿತಿದ್ದಳು. ಅವಳು ಮಾತಾಡುವ ಕ್ರಮವನ್ನು ನೋಡಿದ್ದಾದರೆ ದುಃಖವನ್ನು ಪ್ರಸಾರ ಮಾಡುವ ಕಾರ್ಯವೂ, ಉದ್ದೇಶವೂ ಅವಳದಾಗಿದ್ದಂತೆ ತೋರುತ್ತಿತ್ತು. ಅವಳ ಹೆಸರು ಮಿಸೆಸ್ ಗಮ್ಮಿಜ್ ಎಂದು ತಿಳಿಸಿ, ಅವಳ ಪರಿಚಯವನ್ನು ಮಾಡಿಕೊಟ್ಟರು. ಮಿ. ಪೆಗಟಿ ನನ್ನೆದುರು ಕುಳಿತು ಸಿಗಾರ್ ಸೇದುತ್ತಿದ್ದನು. ಹೀಗೆ ಅತಿಥಿಯೊಡನೆ ಗಂಭೀರವಾದ ಕ್ರಮದಿಂದ ಕೂಡಿದ್ದ ನಮ್ಮ ಕೂಟಕ್ಕೆ ತಕ್ಕದಾಗಿ – ಕೇವಲ ಮರ್ಯಾದೆಗಾಗಿ – ನಾನೊಂದೆರಡು ಪ್ರಶ್ನೆ ಕೇಳುವುದು ನ್ಯಾಯವೆಂದು ನನಗೆ ತೋರಿತು. ಬಹು ಗಂಭೀರ ಮುಖಮುದ್ರೆಯಿಂದ ಮಿ. ಪೆಗಟಿಯನ್ನು ಕುರಿತು –
“ಅಲ್ಲ, ಮಿ. ಪೆಗಟಿ, ನಿಮ್ಮ ಮಗನಿಗೆ ಹೇಮ್ ಎಂದು ಹೆಸರಿಟ್ಟಿರುತ್ತೀರಷ್ಟೆ – ಪುರಾಣದ ಹೇಮನು ದೋಣಿಯಲ್ಲಿ ಜನಿಸಿರುವಂತೆ ನಿಮ್ಮ ಹೇಮನು ದೋಣಿಯಲ್ಲಿ ಜನಿಸಿದುದಕ್ಕಾಗಿ ಈ ಹೆಸರನ್ನಿಟ್ಟಿರುತ್ತೀರಿ ತಾನೆ?” ಎಂದು ವಿಚಾರಿಸಿದೆ.
“ಆ ಹೆಸರನ್ನಿಟ್ಟದ್ದು ನನ್ನ ತಮ್ಮ. ಹೇಮನು ನನ್ನ ತಮ್ಮನ ಮಗ, ಮಾಸ್ಟರ್ ಕಾಪರ್‌ಫೀಲ್ಡ್” ಅಂದನು ಮಿ. ಪೆಗಟಿ.
“ಆ ತಮ್ಮ ಈಗ ಎಲ್ಲಿದ್ದಾರೆ ಮಿ. ಪೆಗಟಿ?”
“ಆತನು ಸಮುದ್ರ ಪಾಲಾಗಿದ್ದಾನೆ.”
“ಹಾಗೋ! ಅದಿರಲಿ, ಈ ಎಮಿಲಿ ನಿಮ್ಮ ಮಗಳು ತಾನೆ?”
“ಅಲ್ಲ ಸರ್, ಅವಳು ನನ್ನ ಭಾವನ ಮಗಳು.”
ನನ್ನ ಈ ಎಲ್ಲಾ ಉಪಚಾರದ ಮಾತುಗಳಲ್ಲೂ ನಾನು ತಪ್ಪಿದ್ದನ್ನು ತಿಳಿದು ಸ್ವಲ್ಪ ನಾಚಿಕೆಯಾಯ್ತು. ಹೀಗಾಗಿ ಸ್ವಲ್ಪ ಯೋಚಿಸಿ, ಎಚ್ಚರಿಕೆಯಿಂದ, ಮೂಲೆಯಲ್ಲಿದ್ದ ಮುದುಕಿಯನ್ನು ತೋರಿಸುತ್ತಾ ನಾನು ಪ್ರಶ್ನಿಸಿದೆ –
“ಮಿ. ಪೆಗಟಿ, ಅವರು ನಿಮ್ಮ ಪತ್ನಿಯಷ್ಟೆ?”

“ಅಲ್ಲ, ಅವಳು ಮಿಸ್ಟರ್ ಗಮ್ಮಿಜ್ಜರ ಪತ್ನಿ” ಎಂದು ಉತ್ತರ ಸಿಕ್ಕಿತು. ನನ್ನ ಎಲ್ಲಾ ಪ್ರಶ್ನೆಗಳೂ ಹೀಗಾದುವಲ್ಲಾ ಎಂದು ನನಗೆ ತುಂಬಾ ನಾಚಿಕೆಯಾಯ್ತು. ನಾನು ವಿಶೇಷ ಮಾತಾಡಬಾರದೆಂದು ಪೆಗಟಿ ತನ್ನ ಹೊಲಿಗೆ ಕೆಲಸದ ಮಧ್ಯೆ ಕೈ ಸನ್ನೆಯಿಂದ ತಿಳಿಸಿದ ಮೇಲಂತೂ ಮತ್ತಷ್ಟು ನಾಚಿಕೆ ಪಡುತ್ತಾ ಮೌನದಿಂದ ಗಂಭೀರವಾಗಿ ಕುಳಿತೆ. ರಾತ್ರಿ ಮಲಗುವ ಮೊದಲು ಪೆಗಟಿ ಬಂದು ತನ್ನಣ್ಣನ ದಿವ್ಯ ಗುಣಗಳನ್ನೆಲ್ಲಾ ವರ್ಣಿಸಿದಳು. ಮಿಸೆಸ್ ಗಮ್ಮಿಜ್, ಹೇಮ್, ಎಮಿಲಿ ಮೂವರು ಅನಾಥರನ್ನು ಅವನು ತನ್ನ ಮಕ್ಕಳಂತೆ ಸಾಕುವುದನ್ನೆಲ್ಲ ವಿವರಿಸಿದಳು. ಅವನನ್ನು ಯಾರಾದರೂ ಇದಕ್ಕಾಗಿ ಹೊಗಳಿದರೆ ಅವನು ಆ ಕೂಡಲೇ, ಬಹುಕೋಪದಿಂದ, ತಾನು ‘ಗೋರಂ’ ಮಾಡಿಕೊಳ್ಳುವುದು ಖಂಡಿತವೆಂದು ಬೊಬ್ಬೆ ಹೊಡೆಯುತ್ತಿದ್ದನಂತೆ. ಒಮ್ಮೆ ಹಾಗೆ ‘ಗೋರಂ’ ಮಾಡಿಕೊಳ್ಳುವುದಾಗಿ ಹೇಳಿ ಮೇಜನ್ನು ಕೋಪದಿಂದ ಗುದ್ದಿದಾಗ ಮೇಜೇ ಮುರಿದು ಹೋಗಿತ್ತಂತೆ. ‘ಗೋರಂ’ ಶಬ್ದದ ಅರ್ಥ ಯಾರಿಗೂ ತಿಳಿದಿರಲಿಲ್ಲವಾದರೂ ಅದು ಭಯಂಕರ ಪರಿಣಾಮ ಸೂಚಕ ಶಬ್ದವೆಂದು ಅವರೆಲ್ಲರೂ ತಿಳಿದಿದ್ದರು. ಅಣ್ಣನ ಗುಣವರ್ಣನೆ ಮಾಡುತ್ತಾ ಕೊನೆಗೆ ಪೆಗಟಿ –
“ಅವನಷ್ಟು ಉತ್ತಮ, ಕನಿಕರವುಳ್ಳವ, ದಯಾಮಯ ಪ್ರಪಂಚದಲ್ಲೇ ಇನ್ನೆಲ್ಲೂ ಇಲ್ಲ,” ಎಂದಳು.

ಕೊನೆಗೆ ನಾವೆಲ್ಲರೂ ಮಲಗಿದೆವು. ಕೆಲವರು ತೂಗಾಡುವ ಬಲೆಗಳಲ್ಲೂ ನಾನು ಮಂಚದ ಮೇಲೂ ಮಲಗಿ ನಿದ್ರಿಸಿದೆವು. ಒಳಗಿನ ಹದಬಿಸಿಯ ವಾತಾವರಣ, ಮತ್ತು ಹೊರಗೆ ಬೀಸುತ್ತಿದ್ದ ಗಾಳಿಯ ಸೌಮ್ಯ ಶಬ್ದಗಳು ನನ್ನ ನಿದ್ರೆಗೆ ತುಂಬಾ ಸಹಾಯಕವಾದುವು. ಬೆಳಗಿನ ಜಾವದಲ್ಲಿ ಕಡಲ ಕಡೆಯಿಂದ ಕೇಳಿಬರುತ್ತಿದ್ದ ಸಮುದ್ರ ಘೋಷವನ್ನು ಕೇಳಿ ಸಮುದ್ರ ಉಕ್ಕಿ ಬಂದರೆ ನಾನು ಮನೆ ಸೇರುವುದು ಹೇಗೆಂದೂ ಯೋಚಿಸಬೇಕಾಯ್ತು. ಆದರೆ, ಮಿ. ಪೆಗಟಿಯಂಥ ನಾವಿಕನ ಆಶ್ರಯವೂ, ನಮ್ಮ ಮನೆಯೇ ದೋಣಿಯಾಗಿರುವ ಸಂದರ್ಭವೂ ನೆನಪಿಗೆ ಬಂದು ನಾನು ಧೈರ್ಯಗೊಂಡೆ.

ಸಮುದ್ರ ಉಕ್ಕಿ ನಾವು ನಾಶವಾಗುವ ಬದಲು, ಮರುದಿನ ಬೆಳಗ್ಗೆ, ಎಮಿಲಿಯೂ ನಾನೂ ಏಳುವಾಗ ನವಚೇತನ ಪಡೆದೇ ಎದ್ದೆವು. ಆ ದಿನದ ಬೆಳಗ್ಗಿನ ನಮ್ಮ ಕಾರ್ಯಗಳ ಪೈಕಿ ಸಮುದ್ರ ದಂಡೆಯಲ್ಲಿ ತಿರುಗಾಡಿದುದರ ನೆನಪು ಈಗಲೂ ಬಹು ಚೆನ್ನಾಗಿ ಉಳಿದಿದೆ. ಎಮಿಲಿಯೂ ನಾನೂ ಮರಳಿನಿಂದ ಚಿಪ್ಪುಗಳನ್ನು ಹೆಕ್ಕುತ್ತಲೂ ಮರಳಿನಲ್ಲಿ ನಮ್ಮ ಹೆಸರುಗಳನ್ನು ಬರೆಯುತ್ತಲೂ, ಬೇಕುಬೇಕಾದಂತೆ ಮಾತಾಡುತ್ತಲೂ, ಆಟವಾಡುತ್ತಲೂ ಕಾಲ ಕಳೆದೆವು. ಒಮ್ಮೆ, ಎಮಿಲಿಯನ್ನೇ ನಾನು ನೋಡಿದಾಗ ಅವಳ ಕಣ್ಣಿನ ಬೊಂಬೆಯಲ್ಲಿ ಹಾಯಿ ಕಟ್ಟಿದ ಹಡಗನ್ನು ಕಂಡು ಆಶ್ಚರ್ಯಚಕಿತನಾಗಿ, ಆ ಚಮತ್ಕಾರವನ್ನು ನಾವು ಉಭಯತರೂ ಅನೇಕ ಸರ್ತಿ ಪರೀಕ್ಷಿಸಿ ನೋಡಿದೆವು. ಹೀಗೆ ನಾವು ಎಷ್ಟೇ ಸರಿಸಮಾನರೆಂದೇ ಆಟವಾಡಿದರೂ ಅವಳೊಬ್ಬ ಸ್ತ್ರೀ ಎಂದೂ, ನಾನು ಜವಾಬ್ದಾರಿ ಹೊತ್ತಿರುವ ಗಂಡುಸಾದ ಗೃಹಸ್ಥನೆಂದೂ ನಾನು ತಿಳಿಯುತ್ತಿದ್ದೆ. ಈ ಕಾರಣದಿಂದಲೇ ಗೃಹಸ್ಥಧರ್ಮಕ್ಕೆ ತಕ್ಕದಾಗಿ, ಎಮಿಲಿಯನ್ನು ಔಪಚಾರಿಕವಾಗಿ ಮಾತಾಡಿಸಿ ಗೌರವಿಸಬೇಕೆಂದು ಉದ್ದೇಶಿಸಿ, ಕೆಲವು ಪ್ರಶ್ನೆಗಳನ್ನು ಕೇಳಿದೆ.

“ನೀನು ಒಬ್ಬ ನಾವಿಕಳಷ್ಟೆ, ಎಮಿಲಿ?” ಎಂದು ಕೇಳಿದೆ.
“ಅಬ್ಬ! ನಾನು ನಾವಿಕಳು! ಸಮುದ್ರ ಅಂದರೆ ನನಗೆ ಭಯ,” ಎಂದು ಅವಳು ಉತ್ತರವಿತ್ತಳು.
ಅವಳ ಅಂಜಿಕೆಯ ಸಮಯದಲ್ಲಿ ಗಂಡುಸಾದ ನಾನು ಧೈರ್ಯವಹಿಸಿ ಮಾತಾಡಬೇಕೆಂದು ಗ್ರಹಿಸಿದೆ. ನನ್ನ ಪ್ರಾಯ, ಎತ್ತರ, ಎಲ್ಲವೂ ಉಬ್ಬಿದುವು.
“ನನಗೆ ಅಂಜಿಕೆಯೆಂದರೆ ಏನೆಂದೇ ಗೊತ್ತಿಲ್ಲ!” ಅಂದೆ.
“ನೀನೇನೋ ಹಾಗೆ ಹೇಳಬಹುದು. ಆದರೆ ನನಗೆ ಮಾತ್ರ ಅಂಜಿಕೆ ಬಿಡುವುದಿಲ್ಲ. ನನ್ನ ತಂದೆ ಮತ್ತು ಕೆಲವರು ಸಮುದ್ರದಲ್ಲಿ ಸತ್ತದ್ದನ್ನು ನಾನು ನೋಡಿರುವೆನು. ಎಂತೆಂಥ ಗಟ್ಟಿ ಹಡಗನ್ನೇ ಆದರೂ ಅದು ಮನಸ್ಸು ಮಾಡಿದರೆ ಪುಡಿಪುಡಿ ಮಾಡುವುದು” ಅಂದಳು ಎಮಿಲಿ.

ಹೀಗೆಲ್ಲಾ ನಾವು ಮಾತಾಡುತ್ತಾ ನಾನು ನನ್ನ ತಂದೆ ಸತ್ತು ಹೋಗಿದ್ದ ವಿಷಯವನ್ನೂ, ಅವನ ಗೋರಿ, ಇಗರ್ಜಿ ಕಾಂಪೌಂಡಿಗೆ ನಮ್ಮ ಮನೆ ಸಮೀಪವಿದ್ದುದರಿಂದ, ನಾವು ಆ ಗೋರಿ ಬಳಿ ಆಗಾಗ ಹೋಗಿಬರುತ್ತಿದ್ದ ಕಥೆಗಳನ್ನು ಎಮಿಲಿಗೆ ತಿಳಿಸಿದೆ. ಅವಳೂ ಸಹ ಅವಳ ಆತ್ಮಚರಿತ್ರೆಯನ್ನು ಕೈಸನ್ನೆ, ಕಣ್ಣುಸನ್ನೆ ಹಾವ ಭಾವಗಳಿಂದ ನನಗೆ ತಿಳಿಸುತ್ತಾ ಅವಳ ತಂದೆಯ ಗೋರಿ ಭೋರ್ಗರೆಯುವ ಸಮುದ್ರ ಮಧ್ಯದಲ್ಲೇ ಇತ್ತೆಂದೂ, ಆ ಕಾರಣದಿಂದ ತಾನು ಹೋಗಿ ನೋಡುವ ಅನುಕೂಲವಿಲ್ಲವೆಂದೂ ಹೇಳುತ್ತಾ ವ್ಯಥೆಪಟ್ಟಳು.

ಹೀಗೆ ನಮ್ಮ ನಮ್ಮ ಪರಿಚಯವನ್ನು ಬೆಳೆಸುತ್ತಾ ಹೋಗುವಾಗ ಅವಳು ಬಡಬೆಸ್ತರ ಹುಡುಗಿ ಎಂದೂ, ಅವಳ ನೆಂಟರಿಷ್ಟರೆಲ್ಲ ಬೆಸ್ತರೇ ಎಂದು ತಿಳಿಸುತ್ತಾ, ಅವರೆಲ್ಲರ ಬಡತನ, ಕೀಳುತನಗಳನ್ನು ಗ್ರಹಿಸುತ್ತಾ, ಹೇಳಲೂ ಸ್ವಲ್ಪ ಸಂಕೋಚಪಟ್ಟುಕೊಳ್ಳುತ್ತಿದ್ದಳು. ಇದೇ ಸಮಯದಲ್ಲಿ ನಾನು ಕುಲೀನನು, ನನ್ನ ಬಂಧುಬಾಂಧವರೆಲ್ಲರೂ ಕುಲೀನರು, ನಾವು ಶ್ರೀಮಂತರು, ನಗರವಾಸಿಗಳು ಎಂದು ಮೊದಲಾಗಿ ನಮ್ಮ ಗೌರವಗಳನ್ನು ಅವಳು ಬಹುವಾದ ಆನಂದದಿಂದ ಪ್ರಶಂಸಿಸಿ ಮಾತಾಡುತ್ತಿದ್ದಳು. ಆದರೆ ಅವಳು ತನ್ನ ಬಡತನ, ಕೀಳುತನದಿಂದ ಉದ್ಧರಿಸಿಕೊಂಡು ಶ್ರೀಮಂತಿಕೆ, ಕುಲೀನತೆಯನ್ನು ಪಡೆಯುವ ನಿರ್ಧಾರದಲ್ಲಿದ್ದಳು. ತಾನು ಸುಸಂಸ್ಕೃತ ಕುಲೀನ ಗೃಹಿಣಿಯಾಗಿ, ಐಶ್ವರ್ಯವಂತಳಾಗಿ ತನ್ನ ಮಾವ ಪೆಗಟಿಗೆ ತುಂಬಾ ಉಡುಗೊರೆಗಳನ್ನು ಕೊಡುವುದಾಗಿಯೂ, ತನ್ನ ಕಡೆಯ ಬಡ ಬೆಸ್ತರೆಲ್ಲ ತನ್ನ ಉತ್ತಮ ಸ್ಥಿತಿಯಿಂದ ತುಂಬಾ ಸಹಾಯಗಳನ್ನು ತಾನು ಮಾಡಿಯೇ ಮಾಡುವವಳೆಂದೂ ಹೇಳಿದಳು. ಈ ರೀತಿ ನಮ್ಮ ಎರಡು ಹೃದಯಗಳು ನಮ್ಮ ಸಾಮಾಜಿಕ ಅಂತಸ್ತುಗಳನ್ನೆಲ್ಲ ಮರೆತು, ಪರಿಶುದ್ಧ ಪ್ರೇಮದಿಂದ ಬೆರೆತು, ನಲಿದು, ಸಂತೋಷಿಸಿದುವು.

ಅವಳ ಈ ಮಾತುಗಳನ್ನು ಕೇಳಿ ಎಮಿಲಿಗೆ ನಾವಿಕ ವೃತ್ತಿಯಲ್ಲಿ ಭಯವೇ ಇರಬೇಕೆಂದು ಊಹಿಸಿ ನಾನು ಕೇಳಿದೆ –
“ಸಮುದ್ರದ ಅಂಜಿಕೆಯಿಂದಾಗಿ ನಿನಗೆ ನಾವಿಕ ವೃತಿಯಲ್ಲೇ ಪ್ರೀತಿಯಿಲ್ಲವೇ, ಎಮಿಲಿ?”
“ವೃತ್ತಿಯ ಕುರಿತು ದ್ವೇಷವಿಲ್ಲ – ಪ್ರೀತಿಯೇ ಇದೆ. ಸಮುದ್ರದ ಕುರಿತು ನನಗೆ ಅಂಜಿಕೆಯೂ ಇಲ್ಲ. ನನ್ನ ಮುಖ್ಯ ಗುರಿ – ನಾನು ಒಬ್ಬ ಶ್ರೀಮಂತನ ಪತ್ನಿಯಾಗಿ ನನ್ನ ಬಡ ಮಾವ ಮಿ. ಪೆಗಟಿ ಮತ್ತು ಹೇಮರಿಗೆ ಸಹಾಯ ಮಾಡಬೇಕೆಂದು ಮಾತ್ರವಿದೆ. ಇಂಥ ಉತ್ತಮ ಶ್ರೀಮಂತಿಕೆಗೆ ಸಮುದ್ರ ವೃತ್ತಿ ಪ್ರಯೋಜನ ಬೀಳಬಹುದೇ ಎಂಬ ಶಂಕೆ ಮಾತ್ರ ನನಗಿದೆ.”

ಎಮಿಲಿ ಇಷ್ಟು ಹೇಳಿ, ಸಮುದ್ರಕ್ಕೆ ಚಾಚಿಕೊಂಡಿದ್ದ ಒಂದು ದೊಡ್ಡ, ಉದ್ದದ, ಮರದ ತೋಳಿನ ಮೇಲೆ ಏರಿಕೊಂಡು ಹೋಗಿ, ಅದರ ತುದಿಯಲ್ಲಿ ನಿಂತು ತನ್ನ ಲಂಗದ ಇಬ್ಬದಿಯ ಅಂಚುಗಳನ್ನು ಎತ್ತಿ ಹಿಡಿದುಕೊಂಡು ಪತಂಗದಂತೆ ನಲಿದಳು.

ಆಗ್ಗೆ ನನಗೆ ಬಹುವಾದ ಭಯವೇ ಆಯ್ತು. ಅವಳು ಸಮುದ್ರಕ್ಕೆ ಬಿದ್ದರೆ ನಾನೇನೂ ಮಾಡುವಂತಿರಲಿಲ್ಲ. ಆದರೆ ಸ್ವಲ್ಪ ಸಮಯದನಂತರ, ಅವಳು ಏರಿಹೋಗಿದ್ದಷ್ಟೇ ಸುಲಭದಲ್ಲಿ ಕೆಳಕ್ಕೆ ಇಳಿದು ಬಂದಳು. ಈ ಅಪಾಯಕರ ಪ್ರಸಂಗ ನನ್ನ ಪ್ರಾಯಬಂದನಂತರ ಕೆಲವೊಂದು ಬಾರಿ ನನ್ನೆದುರು ಒಂದು ತಾತ್ವಿಕ ಸಮಸ್ಯೆಯಾಗಿ ನಿಂತದ್ದುಂಟು.

ಈ ಸಾಹಸ ನಡೆದನಂತರ ನಾವು ಸಮುದ್ರದ ಕರೆಗಾಗಿ ಕೈ ಕೈ ಹಿಡಿದು ತಿರುಗುತ್ತಾ, ಎಳೆದಾಡಿಕೊಂಡು, ಆಲಿಂಗಿಸಿಕೊಂಡು, ಮುತ್ತು ಕೊಟ್ಟು ಮುದ್ದಾಡಿಕೊಂಡು, ಮನೆಯನ್ನು ಸೇರಿದೆವು. ನಮ್ಮ ಅಂತರಂಗವನ್ನು ಬಿಚ್ಚಿ ಹೇಳುವುದಾದರೆ ನಮ್ಮೊಳಗೆ ಅನುರಾಗವೇ ಉಂಟಾಗಿತ್ತು. ಮನೆಯನ್ನು ಸೇರುವ ಮೊದಲು ನಾವು ಒಬ್ಬರನ್ನೊಬ್ಬರು ಚುಂಬಿಸಿದೆವು. ನೀಲಿವರ್ಣದ ಲಂಗಧರಿಸಿದ ಚಿಕ್ಕ ಎಮಿಲಿ ಸ್ವರ್ಗೀಯ ಪ್ರಭೆಯಿಂದ ಪ್ರಕಾಶಿಸುತ್ತಿದ್ದಳು. ಅವಳೊಬ್ಬ ಅಪ್ಸರೆಯೆಂದೇ ನಾನು ಅವಳ ಸೌಂದರ್ಯವನ್ನು ಕಂಡು ತಿಳಿದಿದ್ದೆ. ಒಂದು ದಿನ ಇದ್ದಕ್ಕಿದ್ದ ಹಾಗೆಯೇ ಅವಳಿಗೆ ರೆಕ್ಕೆ ಬಂದು ಸೂರ್ಯ ಪ್ರಕಾಶದಲ್ಲಿ ಪ್ರಭೆಯಾಗಿ ಹಾರಿ ಮಾಯವಾದರೆ ಅದೊಂದು ಆಶ್ಚರ್ಯದ ಸಂಗತಿಯಾಗದೆಂದು ನಾನು ತಿಳಿದಿದ್ದೆ. ನಮ್ಮ ಈ ನಿಷ್ಕಪಟ ಪ್ರೇಮ ಪ್ರಾಯಭರಿತರಾದವರಲ್ಲಿ ಇರಲಾರದೆಂದು ನನ್ನ ಅಭಿಪ್ರಾಯ. ನಾವು ಯಾರ್ಮತ್ತಿನಲ್ಲಿ ಹೀಗೆ ಪ್ರತಿದಿನವೂ ಆಟವಾಡುತ್ತಾ ಕಾಲಕಳೆಯುತ್ತಿದ್ದೆವು. ಕಾಲವೂ ಬೆಳೆಯದೆಯೇ ನಮ್ಮ ಜತೆಯಲ್ಲೇ ಎಳೆಯದಾಗಿ ಉಳಿದು, ನಮ್ಮ ನರ್ತನಗಳಲ್ಲಿ ತಾನೂ ನಲಿದು, ನಮ್ಮ ದಿನಗಳನ್ನೆಲ್ಲ ಸದಾ ಪ್ರಾತಃಕಾಲವನ್ನಾಗಿಯೇ ಮಾಡಿತ್ತು. ನಾನು ಎಮಿಲಿಯನ್ನು ಆಜನ್ಮವಾಗಿ ಪ್ರೀತಿಸುವೆನೆಂದು ಒಂದು ಪ್ರಸಂಗದಲ್ಲಿ ತಿಳಿಸಿಯೇ ಬಿಟ್ಟೆ. ಅಲ್ಲದೆ, ಅವಳೂ ಅದೇ ರೀತಿ ನನ್ನನ್ನು ಪ್ರೀತಿಸುತ್ತಿಲ್ಲವೆಂದು ತಿಳಿದದ್ದಾದರೆ ಆ ಕೂಡಲೇ ನಾನು ಆತ್ಮಹತ್ಯೆ ಮಾಡಿಕೊಳ್ಳುವುದು ಖಂಡಿತವೆಂದೂ ತಿಳಿಸಿದೆ. ಅಷ್ಟಕ್ಕೇ ನಿಲ್ಲದೇ, ಅವಳ ಸುಂದರರೂಪವನ್ನೂ, ಅವಳೊಡನೆ ಕಳೆದ ದಿನಗಳ ದಿವ್ಯ ಸ್ಮರಣೆಯನ್ನೂ ಮನಸ್ಸಲ್ಲಿಟ್ಟುಕೊಂಡು ನಾನು ಮೃತ್ಯುವನ್ನು ಆಲಿಂಗಿಸಬೇಕೋ, ಅಥವಾ, ನಾವೀರ್ವರೂ ಸಂತೋಷದಿಂದ ಬಾಳಲು ಬೇಕಾದ ಮರುತ್ತರವನ್ನು ಆಗಲೇ ಅವಳು ಕೊಡುವಳೋ, ಎಂದೂ ಸಹ ಕೇಳಿಬಿಟ್ಟೆ. ನನ್ನ ವೀರವಾಕ್ಯಗಳನ್ನು ಕೇಳಿ ಎಮಿಲಿಯು, ತಾನೂ ಸಹ ನನ್ನನ್ನು, ನನ್ನ ಮಟ್ಟದಿಂದಲೇ ಪ್ರೀತಿಸುತ್ತಿರುವುದಾಗಿ ತಿಳಿಸಿ, ಅದನ್ನು ಖಚಿತಪಡಿಸುವುದಕ್ಕೆಂದು ನನ್ನನ್ನು ಚುಂಬಿಸಿದಳು. ನಮ್ಮೀರ್ವರ ಆನಂದದ ಬೆಳಕು ಪೆಗಟಿಯ ಸಂಸಾರವನ್ನು ಬೆಳಗಿಸಿತು. ಸದಾ ದುಃಖದಲ್ಲೇ ಮುಳುಗಿರುತ್ತಿದ್ದ ಮಿಸೆಸ್ ಗಮ್ಮಿಜ್ಜಳೂ ಸಹ ನಮ್ಮ ಈ ಆನಂದದ ಬೆಳಕಿನಿಂದ ಹರ್ಷಗೊಂಡು ನಮ್ಮೊಡನೆ ಆಗಾಗ ಮಾತಾಡಿಬಿಡುತ್ತಿದ್ದಳು.

ಈ ರೀತಿ ಹದಿನೈದು ದಿನಗಳು ಕಳೆಯುತ್ತಾ ಬಂದು ನಾನು ನಮ್ಮ ಮನೆಗೆ ಹಿಂತಿರುಗಿ ಹೋಗಬೇಕಾದ ದಿನ ಬಂದೇ ಬಂತು. ಮಿ. ಪೆಗಟಿ, ಹೇಮ್ ಮೊದಲಾದವನ್ನು ಬಿಟ್ಟು ಹೊರಡುವುದೇ ನನಗೆ ದುಃಖಕರವಾಗಿತ್ತು. ಇನ್ನು ಎಮಿಲಿಯನ್ನು ಅಗಲುವುದು ಹೃದಯಭೇದಕವೇ ಆಗಿತ್ತು. ಎಮಿಲಿಯೂ ನಾನು ಅಪ್ಪಿ ಮುತ್ತಿಟ್ಟುಕೊಂಡು ಅಳುತ್ತಾ ಅಗಲಿದೆವು.

ಯಾರ್ಮತ್ತನ್ನು ಬಿಟ್ಟು ಬ್ಲಂಡರ್ಸ್ಟನ್ನಿಗೆ ಹೊರಟು ಬಂಡಿಯನ್ನೇರಿದೆವು. ಬಂಡಿ ಮುಂದೆ ಸಾಗಿದಂತೆ ನನ್ನ ತಾಯಿ ಮತ್ತು ಮನೆಯ ನೆನಪಾಯಿತು. ನಮ್ಮ ಆನಂದಮಯ ಮನೆಯನ್ನೂ, ಮಮತೆಯ ಮಾತೆಯನ್ನೂ ಬಿಟ್ಟು ಪರಸ್ಥಳದಲ್ಲಿ ಸ್ವೇಚ್ಛೆಯಿಂದ ದಿನಕಳೆದು ಆನಂದಿಸಿದ್ದನ್ನು ಗ್ರಹಿಸಿ ನೋಡಿದಂತೆ, ನಾನು ನಮ್ಮ ಮನೆ, ನನ್ನ ತಾಯಿಗೆ ಕೃತಘ್ನನೇ ಆಗಿಬಿಟ್ಟೆನೋ ಎಂಬ ಪಶ್ಚಾತ್ತಾಪವೂ ಆಗತೊಡಗಿತು. ಆದರೂ ತಾಯಿಯನ್ನು ಗ್ರಹಿಸಿದಂತೆಲ್ಲ ಅವಳ ಪ್ರೇಮ ವಾತ್ಸಲ್ಯದ ನಿರೀಕ್ಷಣೆಯಿಂದ ಮುಂದೆ ಸಿಗುವ ಸಂತೋಷವನ್ನು ಕುರಿತು ನನ್ನಲ್ಲಿ ಉದ್ವೇಗವೇ ಉಂಟಾಗತೊಡಗಿತು. ಬ್ಲಂಡರ್‌ಸ್ಟನ್ನಿನ ಚಿರಪರಿಚಿತ ಮರಗಳನ್ನು ಕಾಣಲು ಪ್ರಾರಂಭವಾಗಿ ಕೊನೆಗೆ ನಮ್ಮ ಮನೆಯೇ ಎದುರು ನಿಂತಾಗ ನನ್ನ ಹೃದಯವೇ ಮನೆ ಕಡೆ ಹಾರಿತು. ನಾನು ಎಷ್ಟೇ ಉತ್ಸಾಹಭರಿತನಾಗಿದ್ದರೂ ಪೆಗಟಿ ಮಾತ್ರ ದುಃಖವನ್ನೇ ನಿರೀಕ್ಷಿಸುತ್ತಿದ್ದವಳಂತೆ ಮೌನವಾಗಿ ಉಳಿದಿದ್ದಳು. ನನ್ನೊಡನೆ ಅವಳು ಮಾತಾಡುತ್ತಿದ್ದ ಕ್ರಮವೆಲ್ಲ ನನ್ನ ಮುಂದಿನ ದುಃಖ ಶಮನಕ್ಕಿರುವ ಮಾರ್ಗದಲ್ಲಿದ್ದಂತೆ ನನಗೆ ಸ್ಪಷ್ಟವಾಗಿ ಗೊತ್ತಾಗುತ್ತಿತ್ತು. ನಾವು ಮನೆಗೆ ತಲಪುವಾಗ ಸಂಜೆಯಾಗಿತ್ತು. ಅಂದಿನ ಸಂಜೆಯಲ್ಲಿ ಮೋಡಗಳು ಮುಸುಕಿದ್ದು, ಬೆಳಕಿಗಿಂತ ಕತ್ತಲೇ ಮನೆಯನ್ನು ಆವರಿಸಿತ್ತು. ಮನೆ ಮೆಟ್ಟಲು ಹತ್ತಿದ ಕೂಡಲೇ ಬಾಗಿಲುಗಳನ್ನು ನೂಕಿಕೊಂಡು, ಅಮ್ಮನನ್ನು ಕರೆಯುತ್ತಾ, ತವಕದಿಂದ ಮುಂದೋಡಿದೆ. ನನ್ನ ಸ್ವರವನ್ನು ಕೇಳಿ ಅಮ್ಮ ಬರುತ್ತಿರುವಳೆಂದು ಮುಂದೆ ನೋಡುವಾಗ ಅಪರಿಚಿತ ಕೆಲಸದವಳೊಬ್ಬಳು ಎದುರು ಬಂದಳು. ಹೊಸ ಹೆಂಗಸನ್ನು ಕಂಡು ಆಶ್ಚರ್ಯವಾಯಿತು. ನಾನು ಉತ್ಸಾಹಭಂಗಿತನಾಗಿ ಜತೆಯಲ್ಲಿದ್ದ ಪೆಗಟಿಯನ್ನು ಕೇಳಿದೆ –
“ಏನು ಪೆಗಟಿ, ಅಮ್ಮ ಮಿ. ಗ್ರೈಪರರ ಮನೆಯಿಂದ ಇನ್ನೂ ಬರಲಿಲ್ಲವೇ?”
“ಡೇವೀ, ನಾನು ಈ ಮೊದಲೇ ನಿನಗೆ ತಿಳಿಸಬೇಕಾದುದನ್ನು ಹೆದರಿಯೇ ನಿನಗೆ ತಿಳಿಸಿರುವುದಿಲ್ಲ” ಅಂದಳು.
ನನ್ನ ಕಣ್ಣಿನಲ್ಲಿ ನೀರು ತುಂಬಿತು. “ಅಮ್ಮ ಸತ್ತಿರುವಳೇ, ಪೆಗಟಿ?” ಎಂದು ಕೇಳಿದೆನು.
“ಇಲ್ಲ ಮಗು, ಇದ್ದಾಳೆ – ನಿನಗೊಬ್ಬ ಅಪ್ಪ ಬಂದಿದ್ದಾನೆ,” ಎಂದು ಹೇಳುತ್ತಾ ಪೆಗಟಿ ಅತ್ತಳು. ನನಗೂ ಬಲವಾಗಿ ಅಳು ಬಂತು. ಅಪ್ಪ ಬಂದಿದ್ದಾನೆ ಎಂಬ ಮಾತನ್ನು ಕೇಳಿದೊಡನೆಯೇ ಹೆದರಿಕೆ, ದುಃಖ, ತಂದೆಯ ಗೋರಿ, ಸತ್ತವರು ಎದ್ದು ಬಂದದ್ದನ್ನು ಕಂಡರೆ ಆಗಬಹುದಾದ ಮನಸ್ಸಿನ ಪರಿಸ್ಥಿತಿ – ಇವೆಲ್ಲವುಗಳ ನಾನಾ ಭಾವನೆಗಳು ಮನಸ್ಸಿನಲ್ಲಿ ಎದ್ದು ತೋರಿದುವು.

ನನ್ನನ್ನು ಸಮಾಧಾನಪಡಿಸದೆ ನಿರ್ವಾಹವಿಲ್ಲವೆಂದು, ನನ್ನನ್ನು ಅಪ್ಪಿ, ಆಲಿಂಗಿಸಿ, ಹೊಸ ಅಪ್ಪನನ್ನೂ ಅಮ್ಮನನ್ನೂ ತೋರಿಸುವೆನು ಎಂದಂದುಕೊಂಡು, ನಮ್ಮ ಮನೆಯ ಮುಂಭಾಗದ ಸಡಗರದ ಕೋಣೆಗೆ ಕರೆದುಕೊಂಡು ಹೋಗಿ, ಬಾಗಿಲನ್ನು ತೆಗೆದು, ನನ್ನನ್ನು ಒಳಗೆ ಬಿಟ್ಟಳು.

ಒಳಗೆ ನನ್ನಮ್ಮನೂ ಮಿ. ಮರ್ಡ್‌ಸ್ಟನ್ನರೂ ತಮ್ಮ ಪಾದಗಳನ್ನು ಅಗ್ಗಿಷ್ಟಿಕೆಯ ಅಂಚಿನಲ್ಲಿಟ್ಟುಕೊಂಡು ಎದುರುಬದಿರಾಗಿ ಕುಳಿತಿದ್ದರು. ತಾಯಿ ತಲೆ ಅಡಿಗೆ ಹಾಕಿಕೊಂಡು ಏನೋ ಹೊಲಿಯುತ್ತಿದ್ದಳು.
ನನ್ನನ್ನು ಕಂಡಕೂಡಲೆ ತಾಯಿ ಸಂತೋಷಪಡುತ್ತಾ-
“ಬಾ ಮಗನೆ, ಮುದ್ದು,” ಎಂದಳು.
“ಕ್ಲೇರಾ, ಮನಸ್ಸನ್ನು ಬಿಗಿಹಿಡಿಯಬೇಕು” ಎಂದು ಮಿ. ಮರ್ಡ್‌ಸ್ಟನ್ನರು ನನ್ನ ತಾಯಿಗೆ ಬೋಧನೆಯಿತ್ತರು.

ನಾನು ಮಿ. ಮರ್ಡ್‌ಸ್ಟನ್ನರನ್ನು ನೋಡದೆ, ತಾಯಿಯ ಬಳಿಗೆ ಹೋಗಿ ತಾಯಿಯನ್ನು ಅಪ್ಪಿ, ಮುತ್ತಿಟ್ಟು ಸಂತೋಷಪಟ್ಟೆ. ಮಿ. ಮರ್ಡ್‌ಸ್ಟನ್ನರು ನಮ್ಮಿಬ್ಬರನ್ನೂ ಎಡೆಬಿಡದೆ ನೋಡುತ್ತಿದ್ದರೆಂದು ನಮಗಿಬ್ಬರಿಗೂ ಗೊತ್ತಿದ್ದಿತು. ನಮ್ಮ ಪ್ರೀತಿಯು ಅವರು ಮೆಚ್ಚದ ವಿಷಯವೆಂಬುದು ಹೇಗೋ ತಿಳಿದಿದ್ದೆವು.
“ಡೇವಿಡ್, ಹೇಗಿದ್ದೀಯಾ?” ಎಂದು ಮಿ. ಮರ್ಡ್‌ಸ್ಟನ್ನರು ವಿಚಾರಿಸಿದರು.

ಸಾಂಪ್ರದಾಯಿಕವಾಗಿ ನಾನು “ಕ್ಷೇಮ” ಎಂದುತ್ತರಕೊಟ್ಟು ಹಸ್ತ ಲಾಘವವನ್ನಿತ್ತೆ. ನನಗೂ ನನ್ನ ತಾಯಿಗೂ ಸಾಂಪ್ರದಾಯಿಕ ಶಿಸ್ತಿನ ನಡೆ, ನುಡಿಗಳಿಗಿಂತ ಹೆಚ್ಚು ಯಾವ ಸ್ವಾತಂತ್ರ್ಯವೂ ಇರಲಿಲ್ಲವೆಂದು ನಮಗೆ ಗೊತ್ತಿತ್ತು. ಅಲ್ಲಿ ನಿಲ್ಲಲಾರದ ನಾನು ಕೋಣೆಯಿಂದ ಹೊರಗೆ ಬಂದೆ. ಹೊರಗೂ ಯಾರೂ ಮಾತಾಡಲು ಜನರಿಲ್ಲದಿದ್ದುದರಿಂದ ನನ್ನ ಚಿರಪರಿಚಿತ ಮರಗಿಡಗಳನ್ನಾದರೂ ನೋಡೋಣವೆಂದು ಕಿಟಕಿಯ ಹೊರಗೆ ನೋಡಿದೆ. ಅಂಗಳದ ಕರೆಯಲ್ಲಿದ್ದ ಗಿಡಗಳು ಮಂಜಿನಿಂದಲೂ ಚಳಿಯಿಂದಲೂ ಮುದುಡಿ ಬಗ್ಗಿದ್ದುವು.

ಉಪ್ಪರಿಗೆಯ ನನ್ನ ಮಲಗುವ ಕೋಣೆಗೆ ಹೋಗಿ ನೋಡಿದೆನು. ಅಲ್ಲೂ ಅನೇಕ ಬದಲಾವಣೆ ನಡೆದಿತ್ತು. ನನ್ನ ಮಲಗುವ ಸ್ಥಳವನ್ನೇ ಬದಲಾಯಿಸಿದ್ದರು. ಮನೆಯಲ್ಲಿ ನಾನಿದ್ದ ಹಿಂದಿನ ದಿನಗಳ ಸವಿನೆನಪಿನಿಂದಲಾದರೂ ಇಂದಿನ ಕಹಿಯನ್ನು ಸ್ವಲ್ಪವಾದರೂ ಕಡಿಮೆ ಮಾಡಿಕೊಳ್ಳೋಣವೆಂದು ಮನೆಯ ಎಲ್ಲಾ ಭಾಗವನ್ನೂ, ವಠಾರವನ್ನೂ ಸುತ್ತಿ ನೋಡಿದೆ. ಎಲ್ಲೆಲ್ಲೂ ಬದಲಾವಣೆ ನಡೆದಿತ್ತು. ಮನೆಯ ಅಂಗಳದ ಮೂಲೆಗೆ ಹೋಗುವಾಗ ಹಠಾತ್ತಾಗಿ ಒಂದು ನಾಯಿ ನನ್ನನ್ನು ಕಂಡು ಬೊಗಳಿ ಹಾರಿಬಿತ್ತು. ನಾಯಿ ಗೂಡಿನೊಳಗಿದ್ದುದರಿಂದ ನನ್ನನ್ನು ಕಚ್ಚದಿದ್ದರೂ ಮಹಾಕೋಪದಿಂದ ಬೊಗಳಿತು. ಆ ನಾಯಿಗೂ ಅವನಿಗಿದ್ದಂಥ ಕಪ್ಪು ಕೂದಲೂ ಭಯಂಕರ ಸ್ವರವೂ ಇತ್ತು – ಅದೂ ಸಹ ನನ್ನನ್ನು ಕಂಡ ಮಾತ್ರಕ್ಕೇ ಕೋಪಗೊಂಡಿತ್ತು!

(ಮುಂದುವರಿಯಲಿದೆ)