(ಐದನೇ ಸಣ್ಣ ಕತೆ -೧೯೪೭)

[ಜಿಟಿ ನಾರಾಯಣ ರಾವ್ (ನನ್ನ ತಂದೆ) ೧೯೪೬ ರಿಂದ ೧೯೫೨ರ ನಡುವೆ ಕೆಲವು ಸಣ್ಣ ಕತೆಗಳನ್ನು ಬರೆದು, ಆ ಕಾಲದ ಕೆಲವು ನಿಯತಕಾಲಿಕಗಳಲ್ಲಲ್ಲದೆ ಎರಡು ಸಂಕಲನವಾಗಿಯೂ ಪ್ರಕಟಿಸಿದ್ದರು. ಅವನ್ನೆಲ್ಲ ಕೇವಲ ಐತಿಹಾಸಿಕ ದಾಖಲೆಗಾಗಿ ನಾನು ಒಟ್ಟು ಮಾಡಿ ೧೯೯೩ರಲ್ಲಿ ಕೊಡಗಿನ ಸುಮಗಳು ಹೆಸರಿನಲ್ಲಿ ಪ್ರಕಟಿಸಿದ್ದೆ. ಹಾಗೆ ಮಾಡುವಾಗ ಪ್ರಸ್ತುತ ಒಂದು ಕತೆಆದರೆ ಇಪ್ಪತ್ತೊಂದರ ಹರೆಯ. ಯ ಹಳೆಯ ಪ್ರತಿ ಅಲಭ್ಯವಾದ್ದರಿಂದ ಅನಿವಾರ್ಯವಾಗಿ ಸ್ವತಃ ಆಧುನಿಕ ಜಿಟಿನಾ ಅದನ್ನು ನೆನಪಿನಿಂದ ಪುನರ್ನಿರೂಪಿಸಿದ್ದಾರೆ. ಕತಾಸಂಕಲನದ ವಿ-ಧಾರಾವಾಹಿಯಲ್ಲಿ ಇದು ಐದನೇ ಹೆಜ್ಜೆ. ಆಸಕ್ತರು ಹಿಂದಿನ ನಾಲ್ಕೂ ಕತೆಗಳ ಸರಣಿ ನೋಡಲು ಇಲ್ಲಿಚಿಟಿಕೆ ಹೊಡೆಯಬಹುದು. ಹೀಗೆ ಎಲ್ಲ ಕತೆಗಳ ಪ್ರಕಟಣಾ ಕೊನೆಯಲ್ಲಿ ಇಡಿಯ ಸಂಕಲನವನ್ನು ವಿ-ಪುಸ್ತಕವಾಗಿಯೂ ಸಾರ್ವಜನಿಕಕ್ಕೆ ಮುಕ್ತಗೊಳಿಸಲಿದ್ದೇನೆ. – ಅಶೋಕವರ್ಧನ]

ಮಡಿಕೇರಿಯ ಸುಂಕದ ಕಟ್ಟೆಯಲ್ಲಿ ಬಸ್ಸು ಜಕ್ಕು ಹೊಡೆದು ತನ್ನ ತುಂಬಿ ಬಿರಿವ ಸರಕನ್ನು ಬರಖಾಸ್ತು ಮಾಡಿದಾಗ ನಾನೂ ಹೊರಕ್ಕೆ ರಟ್ಟಿದೆ. ಈ ಮಹಾಘಟನೆಯನ್ನೇ ಕಾಯುತ್ತಿತ್ತೋ ಎಂಬಂತೆ ಆಗ ಕೋಟೆ ಗಡಿಯಾರ ನಟ್ಟಿರುಳ ೧೨ನ್ನು ಢಣಾರಣೆ ಬಜಾಯಿಸಿ ಅನುರಣಿಸಿ ವಿರಮಿಸಿತು. ಕೂಲಿಗಳಿರಲಿ, ತೊಂಡಿದನ ನಾಯಿ ಕೂಡ ಇರದ ಶ್ಮಶಾನ ಭೀಕರತೆ, ಅಮಾವಾಸ್ಯೆಯ ಕರಾಳ ರಾತ್ರಿ. ಮೂಳೆಯೊಳಗಣ ನೆಣ ಮಜ್ಜೆಗಳನ್ನೇ ಝಾಡಿಸುವಂತಿತ್ತು ಚಳಿ. ನಡುಗಿದೆ – ಚಳಿಗೆ, ಮಿಗಿಲಾಗಿ ಎಲ್ಲಿ ಆಸರೆ ಅರಸಲಿ ಆ ಅಕಾಲ ಎಂದರಿಯದೇ.

ಆದರೆ ಇಪ್ಪತ್ತೊಂದರ ಹರೆಯ. ಕೆಚ್ಚು, ಅದಟು, ಜಂಬಗಳೇ ಮೈವೆತ್ತ ಯೌವನ. ಕಟ್ಟಾಳು, ಹಿಂದಿನ ಹತ್ತು ತಿಂಗಳೂ ಮದ್ರಾಸಿನಲ್ಲಿ ಕಡ್ಡಾಯವಾಗಿ ಜ್ಞಾನತಪಸ್ಸು ಮಾಡಿ ಅಂತಿಮ ಎಂ.ಎ (ಗಣಿತ) ಯುದ್ಧ ಮುಗಿಸಿ ತವರಿಗೆ ಮರಳುತ್ತಿದ್ದ ಧೀರ ಯೋಧ. ಬಾಣ ಚಿಮ್ಮಿದಂತೆ, ಹನುಮಂತ ನೆಗೆದಂತೆ ತಂದೆ ತಾಯಿ ಇರುವೆಡೆಗೆ ನೇರ ಧಾವಿಸಬೇಕೆಂಬ ತವಕ. ಆಗ ಅವರಿದ್ದುದು ಮಡಿಕೇರಿಯಿಂದ ನಾಲ್ಕು ಹರದಾರಿ ದೂರದ ಕಾರುಗುಂದ ಎಂಬ – ಮಡಿಕೇರಿ-ಭಾಗಮಂಡಲ ಹಾದಿಬದಿಯ ಒಂಟಿ ಬಂಗ್ಲೆ – ಮಹಾಗ್ರಾಮದಲ್ಲಿ.

ನಾನು ಹುಟ್ಟಿದ್ದು ಬೆಳೆದದ್ದು ಪ್ರೌಢಶಾಲೆ ಓದಿದ್ದು ಎಲ್ಲವೂ ಮಡಿಕೇರಿಯಲ್ಲೇ. ಸುಂಕದಕಟ್ಟೆಯಿಂದ ಕೇವಲ ಐದು ಮಿನಿಟುಗಳ ಇಳಿಹಾದಿ ನೇರ ನಮ್ಮ ಮೂಲ ಮನೆಗೇ ಒಯ್ಯುತ್ತಿತ್ತು. ನಮ್ಮ ಅವಿಭಕ್ತ ಕುಟುಂಬದ ಸದಸ್ಯರಾಗಿ ಈಗ ಅಲ್ಲಿದ್ದವರು ನನ್ನ ಮೂವರು ಅಜ್ಜಿಯಂದಿರು, ಚಿಕ್ಕಪ್ಪ, ಚಿಕ್ಕಮ್ಮ. ಇವರೆಲ್ಲರೂ ಯಾವ ಹೊತ್ತಿಗೂ ನನ್ನನ್ನು ಅತ್ಯಂತ ಪ್ರೀತಿ ಸಂಭ್ರಮಗಳಿಂದ ಬರಮಾಡಿಕೊಳ್ಳುತ್ತಿದ್ದರು. ಈ ಎಲ್ಲವುಗಳ ಅರಿವೂ ನನಗಿತ್ತು. ಆದರೆ ಆಗಿಂದಾಗಲೇ ಗುರಿ ತಲಪುವುದು ಒಳ್ಳೆಯದೋ, ಮರುಮುಂಜಾನೆ ತನಕ ಅದನ್ನು ಮುಂದೂಡುವುದು ಒಳ್ಳೆಯದೋ? ಮಧ್ಯರಾತ್ರಿ ನಿರ್ಜನ ಮಾರ್ಗದಲ್ಲಿ ಏಕಾಂಗಿಯಾಗಿ ನಡೆದು ತವರು ಸೇರುವ ಸಾಹಸ ಪ್ರಿಯಕರವೋ ಮರುದಿನ ಮತ್ತೆ ಪ್ರಯಾಣ ತೊಡಗುವ ಮಾಮೂಲೀ ಕ್ರಮ ಪ್ರಿಯಕರವೋ?

ಎರಡನೆಯ ಯೋಚನೆಗೆ ಅವಕಾಶವಿಲ್ಲದಂತೆ ಆ ಕ್ಷಣವೇ ನಾನು ಕಾರಗುಂದಾಭಿಮುಖವಾಗಿ ದಾಪುಗಾಲು ಬೀರಿಯೇ ಬೀರಿದೆ: ತೊಟ್ಟ ಬಾಣ ಮರುತೊಡದವನ ಏಕಾಗ್ರತೆಯಿಂದ, ಇಟ್ಟಗುರಿ ಬದಲಾಯಿಸದವನ ಚಿತ್ತಸ್ಥೈರ್ಯದಿಂದ ಕಡಲು ದಾಟಲು ಬಾನಿಗಡರಿದವನ ಪರಮನಿಷ್ಠೆಯಿಂದ.

ಮಡಿಕೇರಿಯ ಗಡಿ ರಾಜಾಸೀಟ್ – ಬೆಟ್ಟದ ಮೇಲಂಚು. ಅಲ್ಲಿಂದಾಚೆಗೆ ಆಳದಲ್ಲಿ ಗದ್ದೆ ಕಣಿವೆ ತೆಮರು ತೆರೆದುಕೊಂಡು ಅಲೆ ಅಲೆಯಾಗಿ ಹರಡಿ ಹೋಗಿವೆ ದಿಗಂತದವರೆಗೂ. ಆ ಸಾಂದ್ರ ತಮಸ್ಸಿನ ಕಡಲಾಳದಲ್ಲೆಲ್ಲೋ ಹುದುಗಿದೆ ನಮ್ಮನೆ – ಮಿಕ್ಕುದೆಲ್ಲ ಸುಮ್ಮನೆ!

ಕೈಯಲ್ಲಿ ಬೆಳಕಿಲ್ಲ, ಬಾನಲ್ಲಿ ಚುಕ್ಕಿಗಳು ಮಾತ್ರ, ಕಾಡಿನ ಮಾಡು ಗಾಢವಾಗಿತ್ತು. ಮೂಡ್? ಅನಂತದ ಅಖಂಡತೆ ಪ್ರದರ್ಶಿಸುವ ರುದ್ರ ಗಾಂಭೀರ್ಯ. ಈ ಮೇರೆ ಇರದ ಗುಹೆಯಲ್ಲಿ ದಾರಿ ಯಾವುದಯ್ಯಾ ವೈಕುಂಠಕೆ? ಆದರೆ ನಾನು ಆ ಪರಿಸರದ ಕೂಸು, ಆ ನಿಸರ್ಗದ ಕುಡಿ, ಆ ಬೆಟ್ಟದ ಇಲಿ.

ರಾಜಾಸೀಟಿನಿಂದ ಮುಂದಕ್ಕೆ ಘನತಿಮಿರಗರ್ಭದಲ್ಲಿ ಹುದುಗಿತ್ತು ಕುಂದೂರುಮೊಟ್ಟೆಯ ಇಳಿಜಾರು. ಇಳಿದೆ ಧಡ ಧಡನೆ. ತಳದಲ್ಲಿ ತಾಳತ್ತಮನೆ. ಅಲ್ಲಿಂದ ಮುಂದಕ್ಕೆ ಇರುಕಲು ಓಣಿ. ಅದನ್ನು ಅಡ್ಡ ಹಾಯ್ದು ಮೇಕೇರಿ ದಾರಿ ಸೇರಿದೆ. ಕಾಟಕ್ಕೇರಿ ಹೊಳೆದಾಟಿದೆ. ಈ ವೈತರಣೀ ನದಿಯನ್ನು ಉತ್ತರಿಸಿದೊಡನೆ ಎದುರಾಗುವುದು ಉಡುವತ್ತುಮೊಟ್ಟೆಯ ಚಡಾವು. ಬೆಟ್ಟ ಇಳಿಯುವುದಕ್ಕಿಂತ ಏರುವುದೇ ಸುಲಭ. ಬದುಕೂ ಹಾಗೆಯೇ ಎಂದು ಕೊನೆಯ ಪರೀಕ್ಷೆ ಮುಗಿದಾಗ ನನಗನ್ನಿಸಿತ್ತು. ಸವಾಲು ಎದುರಾದಾಗ ಮಾತ್ರ ನಮ್ಮ ಛಲ ಪುಟಿಯುವುದಲ್ಲವೇ?

ಉಡುವತ್ತುಮೊಟ್ಟೆಯ ಕೊಡಿ ತಲಪಿದೆ. ಅಲ್ಲಿ ಹಾದಿ ಹಠಾತ್ ಬಲಕ್ಕೆ ಹೊರಳಿ ಕೆಳಕ್ಕೆ ಜಗುಳತೊಡಗುತ್ತದೆ. ಬೆಟ್ಟಗಳು ಪ್ರದರ್ಶಿಸುವ ವರಿಸೆಗಳೇ ಹಾಗೆ – ನಿರೀಕ್ಷಣೆಗೆ ಮೀರಿದ ಅಪಾಯಗಳು, ವಿಸ್ಮಯಗಳು, ಲಾಭಾಂಶಗಳು, ದಂಡಗಳು ಎಲ್ಲವೂ. ಆ ಇಳಿಜಾರಿನಲ್ಲಿ ಎಡವಿ ಬೀಳದಂತೆ ಬಲು ಎಚ್ಚರಿಕೆಯಿಂದ ನಡೆಯುತ್ತಿದ್ದೆ. ಗಂಟೇ ಒಂದು ದಾಟಿರಬೇಕು. ಗಹನ ಕಾಂತಾರ. ಗಗನ ದರ್ಶನವಿಲ್ಲ. ಸಾಂದ್ರತಮಂಧದಿ ಮುಳುಮುಳುಂಗುತ ಕರಂಗಿದೋಲಿದೆ ರಾತ್ರಿ. ಗೂಬೆಗಳ ಘೂಕಾರ. ಯಾವುದೋ ಎರೆ ಪ್ರಾಣಿಯ ಚೀತ್ಕಾರ. ಎಲ್ಲೋ ಏನೋ ಓಡಿದ ಅಥವಾ ಹಾರಿದ ಸದ್ದು, ಎಲ್ಲಕ್ಕೂ ಹಿನ್ನೆಲೆಯಾಗಿ ಗೊಂಡಾರಣ್ಯದ ಅವ್ಯಕ್ತ ನಿನಾದ – ಭಾವಗಮ್ಯ ಹೃದಯಸಂವಾದ.

ಕೊಂಬೆರೆಂಬೆಗಳ ನಿಕಟ ಹಂದರದಲ್ಲಿ ಚಕಚಕಿಸುತ್ತಿದ್ದ ಮೀನುಂಬಳಗಳ ಸರಮಾಲೆ ಕತ್ತಲೆಯ ಯವನಿಕೆಗೆ ಕುಂದಣದ ಚಿತ್ತಾರ ಪೋಣಿಸಿದಂತಿತ್ತು. ಎಲ ಎಲ ಇದೇನು – ಬೆವರುತ್ತಿದ್ದೇನೆ? ನಡಿಗೆಯ ರಭಸ ಕಾರಣವೇ? ದೆವ್ವಗಳ ಅವ್ಯಕ್ತ ಅಥವಾ ಸುಪ್ತ ಭಯ ಕಾರಣವೇ? ಕಳ್ಳಕಾಕರು ಹೊಂಚುತ್ತಿರಬಹುದು ಎಂಬ ಹೆದರಿಕೆ ಕಾರಣವೇ? ಹುಲಿಯೋ ಹಾವೋ ಫಕ್ಕನೆ ಎದುರು ಆಗಬಹುದೆಂಬ ಭೀತಿ ಕಾರಣವೇ? ಯಾವುದೂ ಅಲ್ಲ, ಅಲ್ಲ. ನಾನು ಹೆದರುವ ಕುಳ ಖಾತ್ರಿ ಅಲ್ಲ ಎಂದು ಮೇಲ್ಮನಸ್ಸು ಜಪಿಸುತ್ತಿದ್ದಂತೆಯೇ ಮೈ ಜುಮ್ಮೆಂದಿತು – ಚಳಿಜ್ವರ ಬರುವಾಗಿನ ಪೀಠಿಕೆಯಂತೆ. ಇದರ ಕಾರಣವೇನು? ಯಾವ ಗಣಿತ ಸಮೀಕರಣ ಈ ಸಮಸ್ಯೆಯ ಹೂರಣವನ್ನು ಹೊರಗೆಡವಬಲ್ಲದು? ಮನಸ್ಸು ನನ್ನ ಬಾಲ್ಯದ ಅನುಭವಗಳನ್ನು ಮೂಕದೃಶ್ಯವಾಗಿ ಮನಃಪಟಲದ ಮೇಲೆ ಪ್ರಕ್ಷೇಪಿಸಿತು.

ಆಗ ನನಗೆ ವಯಸ್ಸು ಐದು ಅಥವಾ ಆರು. ಯಾವುದೋ ಒಂದು ಪರ್ವಕಾಲವನ್ನು ಕಾವೇರಿ ತೀರದ ಹರಿಶ್ಚಂದ್ರದಲ್ಲಿ ಆಚರಿಸಬೇಕೆಂದು ಹಿರಿಯರು ನಿರ್ಧರಿಸಿದರು. ಹಿಂದಿನ ರಾತ್ರಿ ಮಡಿಕೇರಿಯಿಂದ ಹೊರಟಿತು ನಮ್ಮ ಜೋಡೆತ್ತಿನ ಸವಾರಿ ಬಂಡಿ. ಸವಾರರು ನನ್ನ ಅಜ್ಜಿಯರಿಬ್ಬರು, ತಾಯಿ ಮತ್ತು ನಾನು. ದೆವ್ವ ಭೂತ ಪಿಶಾಚಿಗಳ ಮಾಯ, ಮಾಟ, ತಂತ್ರ ಛಿದ್ರಗಳನ್ನು ಸಾಕಷ್ಟು ಕೇಳಿದ್ದೆ. ಕೇಳಿ ನಡುಗಿದ್ದೆ. ನನಗೆ ಆಗ ನೇರ ಭೂತಗ್ರಾಮವನ್ನೇ ಹೊಕ್ಕ ಅನುಭವವಾಯಿತು. ಗಾಡಿಯ ಮೂಕಿಯಿಂದ ನೇಲುತ್ತಿದ್ದ ಲಾಂದ್ರದ ಮಬ್ಬು ಬೆಳಕಿನಲ್ಲಿ, ಹಿಂದೆಮುಂದೆ ಎಲ್ಲಿ ನೋಡಿದರೂ ವಿಕರಾಳ ಛಾಯೆಗಳು ಸರಿಯುವುದನ್ನು ಕಂಡೆ. ಶೀತಲ ಬೆವರಿನಿಂದ ತೊಯ್ದು ತೊಪ್ಪೆಯಾದೆ. ಮಹಿಳಾಮಣಿಯರಿಂದಲೂ ಗಾಡಿಹೊಡೆಯುತ್ತಿದ್ದ ಚನ್ನನಿಂದಲೂ ಸುರಕ್ಷಿತನಾಗಿದ್ದ ನಾನು ಗರಬಡಿದವನಂತೆ ಕಣ್ಣುಮುಚ್ಚಿ ಕುಳಿತಿದ್ದೆ. ಉಡುವತ್ತುಮೊಟ್ಟೆಯ ಚಡಾವು ಏರಿ ಮುಂದಿನ ಇಳಿಜಾರಿನಲ್ಲಿ ಗಾಡಿ ಒಂದಷ್ಟು ದೂರ ಉರುಳಿದಂತೆ ಎಡಗಡೆಯ ಎತ್ತು ದಿಢೀರನೆ ನೆಲಕ್ಕೆ ನೊಗಸಹಿತ ಬಿತ್ತು.

ಆ ಗಳಿಗೆ ಚನ್ನ ಅಮ್ಮಾ! ಕೆಟ್ಟಿತು ಕೆಲಸ ಎಂದು ರಸ್ತೆಗೆ ಹಾರಿ, ಬಿದ್ದ ಎತ್ತಿನ ಚಾಚಿದ ಕಾಲಿನ ಮೇಲೆ ಉರುಳಿ ಹಾಯಬಹುದಾಗಿದ್ದ ಚಕ್ರಕ್ಕೆ ಅಡ್ಡವಾಗಿ ಮಲಗಿ, ಅದನ್ನು ತಡೆದು ನಿಲ್ಲಿಸಿದ – ಕರ್ಣನಂತೆ. ಚಕ್ರಕ್ಕೆ ಅಡ್ಡವಾಗಿ ಕಲ್ಲಿಡಿ, ಕಲ್ಲಿಡಿ ಕೂಡಲೇ ಎಂದು ಕಿರುಚಿದ. ಈ ಮೊರೆಯ ಕೇಳಿ ಮೂವರು ಕೃಷ್ಣೆಯರೂ ಗಾಡಿಯಿಂದ ಹೊರಕ್ಕೆ ದುಮುಕಿ ಕತ್ತಲೆಯಲ್ಲಿ ಪರಡಿ ಕೈಗೆ ಸಿಕ್ಕ ಕಲ್ಲು ಜಲ್ಲಿ ಬೇರು ನಾರುಗಳನ್ನು ಬಲಗಾಲಿಯ ಅಡ್ಡ ಒಟ್ಟಿದರು. ನಾರಾಯಣನಾದ ನಾನು ಗಾಡಿಯೊಳಗೇ ಥರಥರ ನಡುಗುತ್ತಿದ್ದೆ. ಚನ್ನ ಎದ್ದ, ನೊಗದಿಂದ ಎತ್ತುಗಳನ್ನು ಬಿಡಿಸಿದ. ಎಡ ಎತ್ತನ್ನು ಮೈದಡವಿ ಮಾಲೀಸು ಮಾಡಿ ಎಬ್ಬಿಸಿದ – ಸದ್ಯ ಅದರ ಕಾಲು ಮುರಿದಿರಲಿಲ್ಲ. ನೋಡಿ ಅಮ್ಮಾ! ಆ ಮುಂದಿನ ತಿರುಗಾಸಿನಲ್ಲಿ ಬೆಳ್ಳಗೆ ದೆವ್ವ ಸುಳಿದದ್ದು ನಾನು ಕಂಡೆ. ಈ ಎತ್ತು ಅದನ್ನು ನೋಡಿ ಗಾಬರಿಯಾಗಿ ಬಿತ್ತು ನೆಲಕ್ಕೆ. ನನಗೇ ನೇರ ಬಡಿಯಲಿಲ್ಲ ಆ ಪಿಶಾಚಿ ಹೀಗೆ ಚನ್ನ ದೆವ್ವ ಸಾಕ್ಷಾತ್ಕಾರವಾದದ್ದನ್ನು ವಿವರಿಸಿದ. ದೆವ್ವಗಳ ಬೀಡು ಉಡುವತ್ತುಮೊಟ್ಟೆಯ ಇಳಿಜಾರು!

ಅಂದ ಹಾಗೆ ಈ ರಾತ್ರಿ ನಾನು, ಸುಮಾರು ಹದಿನೈದು ವರ್ಷಗಳ ಅನಂತರ, ಅದೇ ಆಸುಪಾಸಿನಲ್ಲಿ ಒಂಟಿಯಾಗಿ ನಡೆಯುತ್ತಿದ್ದೇನೆ. ಶಾಕಿನಿ ಡಾಕಿನಿ ಲಂಕಿಣಿ ಕಿಂಕಿಣಿ ಕಥೆಗಳ ಪುಷ್ಕಳ ಗ್ರಾಸ ಉಂಡೇ ನಾನು ಬೆಳೆದಿದ್ದರೂ ಅವೆಲ್ಲ ಸುಳ್ಳಿನ ಕಂತೆಗಳು, ಕಲ್ಪನಾವಿಲಾಸಗಳು ಎಂದು ಈಗ ನನಗೆ ಗೊತ್ತಿದೆ. ಯಾವುದೇ ಬಗೆಯ ಅತೀಂದ್ರಿಯ ಅಥವಾ ಅನೈಸರ್ಗಿಕ ಘಟನೆಯ ಬಗ್ಗೆ ಇನಿತೂ ನಂಬಿಕೆ ಇರದ ತರುಣಧಮನಿ ನಾನು, ಆದರೂ ಮೈಜುಮ್ಮೆನ್ನುತ್ತಿದೆ. ನನಗೇನಾಗಿದೆ? ಅಷ್ಟರಲ್ಲಿಯೇ ಹಿಂದಿನಿಂದ ದಾಪುಗಾಲು ನಡಿಗೆಯ ಸಪ್ಪುಳ ಕೇಳಿಸಿತು – ನನ್ನ ಮೈ ಒರೆಸುತ್ತ ಎಂಬಂತೆ ಒಂದು ವ್ಯಕ್ತಿ ನನ್ನನ್ನು ಹಿಂದೆ ಹಾಕಿ ಮುಂದಕ್ಕೆ ಚಿಮ್ಮಿತು.
ಯಾರು? ಯಾರಲ್ಲಿ? ತುಸು ಗಟ್ಟಿಯಾಗಿಯೇ ಒದರಿದೆ. ಏಕೆ ಈ ತಾರಸ್ಥಾಯಿ?
ನಾನು ಶಂಭು. ನೀವು ಯಾರು? ಆ ವ್ಯಕ್ತಿಯ ಉತ್ತರ.
ನಾನು ನಾರಾಯಣ, ಕಾರಗುಂದಕ್ಕೆ ಹೋಗುತ್ತಿದ್ದೇನೆ. ನೀವೆಲ್ಲಿಗೆ ಹೋಗುತ್ತಿದ್ದೀರಿ ಈ ಅವೇಳೆಯಲ್ಲಿ?
ಶಂಭು ಹೇಳಿದ ಓ ನೀವು! ನಮ್ಮ ಕಾರುಗುಂದದ ತಿಮ್ಮಪ್ಪಯ್ಯ ಸಾಹೇಬರ ಮಗ. ಮದ್ರಾಸಿನಲ್ಲಿ ಓದುತ್ತಿರುವಿರಲ್ಲ? ನನಗೆ ಚೆನ್ನಾಗಿ ಗೊತ್ತಿದೆ ನಿಮ್ಮನ್ನು.
ಸರಿ ಶಂಭು, ನಿಮ್ಮ ವಿವರ?
ಅದೇ ಬೇಂಗನಾಡು ಪುರೋಹಿತ ಕೃಷ್ಣ ಭಟ್ಟರ ಮಗ ನಾನು. ಇಲ್ಲಿ ಪೂರ ಕತ್ತಲೆ, ಇಲ್ಲವಾದರೆ ನೀವೇ ನನ್ನನ್ನು ಗುರುತಿಸಿರುತ್ತಿದ್ದಿರಿ.
ಶಂಭು ನನಗಿಂತ ನಾಲ್ಕೈದು ವರ್ಷ ಕಿರಿಯ. ಓದಿನಲ್ಲಿ ಬಲು ಜಾಣ. ಆ ವರ್ಷ ಮಂಗಳೂರಿನಲ್ಲಿ ಕಾಲೇಜ್ ಸೇರಿದ್ದ. ರಜೆಯಲ್ಲಿ ಮನೆಗೆ ಮರಳುತ್ತಿದ್ದ. ಅವನು ಕಾರುಗುಂದ ದಾಟಿ ಮತ್ತೂ ಮುಂದಕ್ಕೆ ಹೋಗಬೇಕಾಗಿತ್ತು.
ನಮ್ಮ ಮಾತುಕಥೆ ದಾರಿಯುದ್ದಕ್ಕೂ ಮುಂದುವರಿದುವು. ಹೀಗಾಗಿ ಹಾದಿ ಸವೆದದ್ದೇ ಅರಿವಿಗೆ ಬರಲಿಲ್ಲ. ಕಾರುಗುಂದ ಹತ್ತಿರವಾದಂತೆ ನಾನವನಿಗೆ ಸೂಚಿಸಿದೆ ಈ ರಾತ್ರಿ ನಮ್ಮ ಮನೆಯಲ್ಲೇ ತಂಗಿದ್ದು ನಾಳೆ ಸಾವಕಾಶವಾಗಿ ನಿಮ್ಮಲ್ಲಿಗೆ ಹೋಗು.
ಇಲ್ಲ ಈಗಲೇ ಮನೆ ತಲಪಬೇಕು. ಅಲ್ಲಿ ನನ್ನನ್ನು ಕಾಯುತ್ತಿದ್ದಾರೆ. ನಾಳೆ ಮುಂಜಾನೆ ಒಂದು ತುರ್ತು ಜಂಬ್ರ ಉಂಟು. ಅದರಲ್ಲಿ ನಾನು ಇದ್ದೇ ತೀರಬೇಕು. . . ನಮ್ಮ ಒಂಟಿ ಬಂಗ್ಲೆ ಹತ್ತಿರವಾದಂತೆ ಶಂಭು ಇನ್ನಷ್ಟು ವೇಗದಿಂದ ನಡೆಯುತ್ತ ಕತ್ತಲೆಯ ಒಡಲಿನಲ್ಲಿ ಲೀನವಾಗಿಯೇ ಹೋದ.

ನಮ್ಮ ಮನೆಯ ಕದ ಬಡಿದಾಗ ಗಂಟೆ ಮುಂಜಾನೆ ಮೂರು ದಾಟಿತ್ತು. ಅನಿರೀಕ್ಷಿತವಾಗಿ ತೀರ ಅಕಾಲದಲ್ಲಿ ‘ಯೋಧನ ಪುನರಾಗಮನ. ಸಹಜವಾಗಿ ಎಲ್ಲರಿಗೂ ಸಂತೋಷ, ಪರಮಾಶ್ಚರ್ಯ, ತುಸು ಗಾಬರಿ ಸಹಿತ. ಮರುದಿನ ಹೀಗೆಯೇ ಹರಟೆ ಹೊಡೆಯುತ್ತ ನನ್ನ ನಡಿಗೆಯ ಅನುಭವ, ಉಡುವತ್ತುಮೊಟ್ಟೆಯಿಂದೀಚೆಗೆ ಶಂಭುವಿನ ಜೊತೆ ‘ಸಹಗಮನ ಎಲ್ಲ ವಿವರಗಳನ್ನು ಹೇಳಿದೆ.
ಯಾರು? ನಮ್ಮ ಬೇಂಗುನಾಡು ಶಾಂತಿಕಾರ ಕೃಷ್ಣಭಟ್ಟರ ಮಗ ಶಂಭುವಿನ ಜೊತೆ ನೀನು ನಡೆದು ಬಂದೆಯಾ? ತಾಯಿ ಕಣ್ಣರಳಿಸಿ ಕೇಳಿದರು.
ಇದು ನಿಜವೇ? ತಂದೆಯ ಪ್ರಶ್ನೆ.
ಶಂಭುವಿನ ಕಥೆಯನ್ನು ತಾಯಿ ಹೇಳಿದರು.

ಪುರೋಹಿತ ಕೃಷ್ಣ ಭಟ್ಟರದು ಬಡತನದ ಬಾಳು. ಮಗ ಶಂಭು ಚಿಕ್ಕಂದಿನಿಂದಲೇ ಬಲು ಸುಟಿಯಾದ ಹುಡುಗ – ಆಟ, ಪಾಠ, ಓಟ ಎಲ್ಲದರಲ್ಲೂ. ಈಜುವಿಕೆಯಲ್ಲಿ ನಿಸ್ಸೀಮ. ಅದೇ ಹಿಂದಿನ ವರ್ಷ ಕಾವೇರಿ ಹೊಳೆ ತುಂಬು ಹೊನಲಿನಲ್ಲಿ ಹರಿಯುತ್ತಿದ್ದಾಗ ಅದನ್ನು ಈಸಿ ದಾಟಿದ್ದ. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಪ್ರಥಮಸ್ಥಾನ ಪಡೆದು ಸರ್ಕಾರದಿಂದ ವಿದ್ಯಾರ್ಥಿವೇತನ ಗಳಿಸಿದ್ದ. ತಂದೆ ಸಾಲ ಮಾಡಿ ಮಗನನ್ನು ಮಂಗಳೂರಿನಲ್ಲಿ ಕಾಲೇಜ್ ಸೇರಿಸಿದರು.
ಈಗ ಎಂಟು ದಿನಗಳ ಹಿಂದೆ ಏನಾಯಿತು ಗೊತ್ತಾ? ತಾಯಿ ಮುಂದುವರಿಸಿದರು. ಶಂಭು ತನ್ನ ಸ್ನೇಹಿತರ ಜೊತೆ ಮಂಗಳೂರಿನಲ್ಲಿ ಉಳ್ಳಾಲದ ಕಡಲ ಕಿನಾರೆಗೆ ಹೋಗಿದ್ದ. ಎಲ್ಲರೂ ಹದಿಹರೆಯದ ಹುಡುಗರು: ಕಡಲಘೋಷವನ್ನು ಮೀರಿಸುವಂತಿದ್ದುವು ಈ ಉತ್ಸಾಹದ ಕಾರಂಜಿಗಳ ನಗು, ಕೇಕೆ, ಉಲಿತ. ಸಮುದ್ರ ಸ್ನಾನ ಮಾಡೋಣವೆಂದು ಇಳಿದರು ನೀರಿಗೆ. ಬಹಳ ಹೊತ್ತು ಕಡಲಂಚಿನ ತೆಟ್ಟೆ ನೀರಿನಲ್ಲೇ ನೀರಾಟವಾಡಿದರು. ಆಗ ಭರತ ಏರುತ್ತಿದ್ದ ಹೊತ್ತು. ಗಜಗತ್ರದ ಅಲೆಯೊಂದರಲ್ಲಿ ಮೂವರು ಸಿಕ್ಕಿ ಹಾಕಿಕೊಂಡರು. ಅವರಿಗೆ ಈಸು ಬಾರದು, ಸಮುದ್ರರಾಜನ ಲಹರಿ ತಿಳಿಯದು. ದಡ ಸೇರುವ ಬಗೆ ಹೊಳೆಯದು.
ಶಂಭು ನೋಡಿದ. ಕಾವೇರಿಪೂರವನ್ನು ಜಯಿಸಿದ ವೀರ, ಕಡಲಾಳಕ್ಕೆ ಸೆಳೆಯಲ್ಪಡುತ್ತಿದ್ದ ಗೆಳೆಯರತ್ತ ಛಂಗನೆ ಚಿಮ್ಮಿದ. ಅವರನ್ನು ದಂಡೆಯತ್ತ ದೂಡಿದ.
ಆದರೆ ಶಂಭು ಮಾತ್ರ ಹಿಂದೆ ಬರಲಿಲ್ಲ.
ಅಂದ ಹಾಗೆ ನೀನು ನಮ್ಮ ನಾರಾಯಣನೇ ಹೌದಷ್ಟೆ?