ಜಿಟಿನಾರಾಯಣ ರಾಯರ ‘ಮುಗಿಯದ ಪಯಣ’ ವಿ-ಧಾರಾವಾಹಿಯ ಕಂತು ಮೂವತ್ತೊಂದು
ಅಧ್ಯಾಯ ಅರವತ್ತ ಐದು [ಮೂಲದಲ್ಲಿ ೩೭]
೧೯೬೮ರ ಫ಼ೆಬ್ರುವರಿ ತಿಂಗಳು. ವಿಶ್ವವಿದ್ಯಾಲಯದ ಕುಲಸಚಿವ ಪಿ. ಮಲ್ಲಿಕಾರ್ಜುನಪ್ಪನವರಿಂದ ನನಗೊಂದು ತುರ್ತು ಕರೆ. ಹೋಗಿ ಅವರೆದುರು ಕುಳಿತೆ. ನಾನು ಮಡಿಕೇರಿಯಲ್ಲಿದ್ದಾಗ ಇವರು ಮೈಸೂರು ವಿಶ್ವವಿದ್ಯಾನಿಲಯದ ಕುಲಸಚಿವರಾಗಿ ನಮ್ಮ ಕಾಲೇಜಿಗೆ ಭೇಟಿ ನೀಡಿದ್ದರು. ಸಹಕಾರ ಸಂಘಕ್ಕೂ ಬಂದು ಅದರ ಕಾರ್ಯವೈಖರಿ ನೋಡಿ ತುಂಬ ಮೆಚ್ಚುಗೆ ವ್ಯಕ್ತಪಡಿಸಿ, “ಪ್ರತಿಯೊಂದು ಕಾಲೇಜಿನಲ್ಲಿಯೂ ಇಂಥ ಸಂಘವಿದ್ದರೆ ವಿದ್ಯಾರ್ಥಿಗಳಿಗೆಷ್ಟು ಅನುಕೂಲ” ಎಂದಿದ್ದರು. ಆಗ ನಮ್ಮಿಬ್ಬರ ನಡುವೆ ಗಾಢ ವಿಶ್ವಾಸ ಮೈದಳೆದಿತ್ತು. ಅದೇ ಹಿಂದಿನ ಸಲಿಗೆಯಿಂದ ಹೇಳಿದರು, “ಈಗ ವಿಶ್ವವಿದ್ಯಾಲಯ ನಿಮಗೊಂದು ಹೆಚ್ಚಿನ ಹೊಣೆ ವಹಿಸಬೇಕೆಂದು ತೀರ್ಮಾನಿಸಿದೆ. ದಯವಿಟ್ಟು ಒಪ್ಪಿಕೊಳ್ಳಿ.” ಆ ಹೊಸ ಕೆಲಸದ ವಿವರವಿತ್ತರು. ರಾಜ್ಯಭಾಷೆಗಳಲ್ಲಿ ಕಾಲೇಜ್ ಪಠ್ಯಪುಸ್ತಕಗಳನ್ನು ಪ್ರಕಟಿಸುವ ಸಲುವಾಗಿ ಕೇಂದ್ರ ಸರ್ಕಾರ ಪ್ರತಿಯೊಂದು ರಾಜ್ಯಕ್ಕೂ ರೂ. ೧ ಕೋಟಿ ಸಹಾಯಧನ ಮಂಜೂರಿಸಿದೆ. ಹೀಗೆ ತನಗೆ ದೊರೆತ ಬಳುವಳಿಯನ್ನು ಕರ್ನಾಟಕ ಸರ್ಕಾರ ಇಲ್ಲಿಯ ನಾಲ್ಕು (ಮೈಸೂರು, ಕರ್ನಾಟಕ, ಕೃಷಿ ಮತ್ತು ಬೆಂಗಳೂರು) ವಿಶ್ವವಿದ್ಯಾಲಯಗಳಿಗೆ ಸಮವಾಗಿ ವಿತರಿಸಿ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಪ್ರಕಟಣೆಯ ಕೆಲಸ ತೊಡಗಲು ಆದೇಶ ನೀಡಿದೆ. ಈ ಪ್ರಕಾರ ಬೆಂಗಳೂರು ವಿಶ್ವವಿದ್ಯಾಲಯ ಕನ್ನಡ ಪಠ್ಯಪುಸ್ತಕ ಸಮಿತಿಯನ್ನು ಕನ್ನಡ ಪ್ರಾಧ್ಯಾಪಕ ಮತ್ತು ಇಲಾಖಾಮುಖ್ಯಸ್ಥ ರಂ.ಶ್ರೀ. ಮುಗಳಿಯವರ ಅಧ್ಯಕ್ಷತೆಯಲ್ಲಿ ರಚಿಸಿದೆ. ಇದರ ಗೌರವ ಸಂಯೋಜಕನಾಗಿ ನಾನು ಸೇವೆ ಸಲ್ಲಿಸಬೇಕು. “ಈ ಕೆಲಸ ನಿಮ್ಮಿಂದ ಖಂಡಿತ ಕೈಗೂಡುತ್ತದೆ” ಎಂದರು. ನನಗೆ ಅದರ ತಲೆ ಬುಡ ಒಂದೂ ಅರ್ಥವಾಗಲಿಲ್ಲ. ಒಂದು ಸಂದೇಹ ಎತ್ತಿದೆ, “ಆದರೆ ನಾನು ಸರ್ಕಾರೀ ನೌಕರ, ವಿಶ್ವವಿದ್ಯಾಲಯದ ಅಲ್ಲ. ಈ ಹೆಚ್ಚಿನ ಹೊಣೆ ಹೊರಲು ಸರ್ಕಾರದ ಅನುಮತಿ ಬೇಕಲ್ಲವೇ?” “ಅದನ್ನು ನಾವೇ ನೇರವಾಗಿ ಪಡೆಯುತ್ತೇವೆ. ಅದಿರಲಿ, ಈ ಕೆಲಸಕ್ಕೆ ನಿಮಗೆಷ್ಟು ಸಂಭಾವನೆ ದೊರೆಯಬೇಕೆಂದು ಬಯಸುತ್ತೀರಿ?”
“ಅದಕ್ಕೆ ಕೊನೆಯ ಆದ್ಯತೆ. ಮೊದಲು ಇದು ನನ್ನಿಂದ ಸಾಧ್ಯವಾದೀತೇ ಎಂಬುದನ್ನು ಉಭಯರೂ ಪರಿಶೀಲಿಸೋಣ.” “ನಿಮ್ಮಿಂದ ಆಗಿಯೇ ಆಗುತ್ತದೆ. ಸದ್ಯಕ್ಕೆ ನಿಮ್ಮ ಮಾಸಿಕ ಸಂಭಾವನೆ ರೂ. ೩೦೦ ಎಂದು ನಿಗದಿಸಿದ್ದೇವೆ.” “ತುಂಬ ಜಾಸ್ತಿಯಾಯಿತು!” “ವ್ಯವಹಾರವರಿಯದ ಬೋಳೆ ಮಂದಿಯಯ್ಯ ನೀವು” ಎನ್ನುತ್ತ ಅವರು ಪೂರ್ವ ಸಿದ್ಧ ಆದೇಶವನ್ನು ಕೈಗಿತ್ತು, “ಹೋಗಿ ಡಾ| ಮುಗಳಿಯವರನ್ನು ನೋಡಿ” ಎಂದರು.
ನನ್ನ ಸಹಾಯಕ್ಕೆ ವಿಶ್ವವಿದ್ಯಾಲಯ ಒಬ್ಬ ಯುವ ಗುಮಾಸ್ತನನ್ನು ನೇಮಿಸಿತ್ತು. ಆ ಬೇಸಗೆ ರಜೆ ಪೂರ್ತಿ ವ್ಯವಸ್ಥಿತವಾಗಿ ಭದ್ರ ಬುನಾದಿ ಹಾಕಿದೆವು. ಸಮರ್ಥ ವಿದ್ವಾಂಸರನ್ನು ಸಂಪರ್ಕಿಸಿ ಪುಸ್ತಕ ರಚಿಸಲು ಆದೇಶವಿತ್ತು ಯಥಾಕಾಲದಲ್ಲಿ ಹಸ್ತಪ್ರತಿಗಳನ್ನು ಸಂಗ್ರಹಿಸಿದೆವು. ಇವುಗಳ ಸಂಪಾದನೆ ಮತ್ತು ಪರಿಷ್ಕರಣವನ್ನು ತಜ್ಞರಿಂದ ಮಾಡಿಸುತ್ತಿದ್ದಾಗಲೇ ಮುದ್ರಣ ಕುರಿತು ಬೆಂಗಳೂರಿನ ಪ್ರಸಿದ್ಧ ಮುದ್ರಣಾಲಯಗಳಿಂದ ದರಪಟ್ಟಿಗಳನ್ನು ತರಿಸಿ ಶಿಷ್ಟೀಕರಿಸಿದ್ದೂ ಆಯಿತು. ಮುದ್ರಿತ ಪುಸ್ತಕಗಳು ನಮ್ಮ ಗೋದಾಮು ಸೇರಿದ ಕ್ಷಣವೇ ಮುದ್ರಣಾಲಯಕ್ಕೆ ನಾವೇ ನೇರವಾಗಿ ಬಿಲ್ ಹಣವನ್ನು ಚೆಕ್ ಮೂಲಕ ಪಾವತಿಸತಕ್ಕದ್ದೆಂಬುದು ನನ್ನ ಸ್ಪಷ್ಟ ನಿಲವು. ಇಂಥ ಸೂಕ್ಷ್ಮ ಕಾರ್ಯದಲ್ಲಿ ಕೆಂಪುದಟ್ಟಿ ನುಸುಳಿ ಭ್ರಷ್ಟಾಚಾರಕ್ಕೆ ಎಡೆಮಾಡಿಕೊಡದಿರಬೇಕಾದರೆ ನಮ್ಮ ಸಮಿತಿಯ ಬ್ಯಾಂಕ್ ಲೆಕ್ಕಕ್ಕೆ ವಿಶ್ವವಿದ್ಯಾಲಯ ಸರ್ಕಾರದ ಅನುದಾನ ಮೊತ್ತವನ್ನು ವರ್ಗಾಯಿಸಬೇಕು, ಇದರ ದೈನಂದಿನ ವ್ಯವಹಾರದ ಅಧಿಕಾರವನ್ನು ನಮ್ಮ ಅಧ್ಯಕ್ಷರಿಗೆ ಕೊಡಬೇಕು ಎಂದು ಮುಂತಾಗಿ ಕುಲಸಚಿವರಿಗೆ ಮನವಿ ಸಲ್ಲಿಸಿ ಎಲ್ಲವನ್ನೂ ಪಡೆದೆವು. “Ask, thou shalt get – ಕೇಳು, ನಿನಗೆ ದೊರೆಯುತ್ತದೆ” ಎಂಬಂಥ ಮನಃಸ್ಥಿತಿ.
ಅದೇ ಜುಲೈ ತಿಂಗಳಿನಲ್ಲಿ ನಾವು ಒಮ್ಮೆಗೇ ನಾಲ್ಕು ಪಠ್ಯಪುಸ್ತಕಗಳನ್ನು, ಅದೂ ವಿಜ್ಞಾನ ವಿಷಯಗಳಲ್ಲಿ, ಸಾರ್ವಜನಿಕವಾಗಿ ಅನಾವರಣಗೊಳಿಸಿದಾಗ ವಿಶ್ವವಿದ್ಯಾಲಯದ ಖ್ಯಾತಿ ಭಾರತಾದ್ಯಂತ ಅನುರಣಿಸಿತೆಂದು ವೃತ್ತಪತ್ರಿಕೆಗಳಿಂದ ತಿಳಿದುಬಂತು. ನಮ್ಮದು ಅಖಿಲ ಭಾರತದಲ್ಲಿ ಮೊದಲ ಸ್ಥಾನ ಗಳಿಸಿತ್ತು! ಮಲ್ಲಿಕಾರ್ಜುನಪ್ಪನವರು ವೈಯಕ್ತಿಕವಾಗಿ ನನ್ನನ್ನು ಅಭಿನಂದಿಸಿದಾಗ ನಾನೆಂದೆ, “ವಿಶ್ವವಿದ್ಯಾಲಯದ ಪ್ರೋತ್ಸಾಹ, ಅಧ್ಯಕ್ಷರ ಮಾರ್ಗದರ್ಶನ, ಸಮಿತಿ ಸದಸ್ಯರ ಸಹಕಾರ, ಲೇಖಕರ ಕ್ರಿಯಾಶೀಲ ಸಹಭಾಗಿತ್ವ, ಮುದ್ರಣಾಲಯಗಳ ನಿಷ್ಠೆ ಎಲ್ಲ ಸೇರಿ ಇದು ಸಾಧ್ಯವಾಯಿತಷ್ಟೆ. ಅದಿರಲಿ, ಇತರ ಹಳೆ ಹುಲಿ ವಿಶ್ವವಿದ್ಯಾಲಯಗಳು ಈ ನಿಟ್ಟಿನಲ್ಲೇಕೆ ಇನ್ನೂ ಕಾರ್ಯಪ್ರವೃತ್ತವಾಗಿಲ್ಲ?” ಅವರ ಉತ್ತರ, “ಅಲ್ಲೊಬ್ಬ ನಾರಾಯಣರಾವ್ ಇಲ್ಲ!”
ಇಂಥ ಆತ್ಮಪ್ರತಿಷ್ಠಾಪೋಷಕ ಪ್ರಶಂಸೆ ಅನಿರೀಕ್ಷಿತವಾಗಿ ದೊರೆತಾಗಲೆಲ್ಲ ನನ್ನ ಪ್ರತಿಕ್ರಿಯೆ ಒಂದೇ: ನಮ್ಮ ದೇಶ ಏಕೆ ಹೀಗಾಗಿದೆ? “ಎನಗಿಂತ ಕಿರಿಯರಿಲ್ಲ” ಎಂಬುದು ನನ್ನ ನಂಬಿಕೆ ಮತ್ತು ಆ ಪ್ರಕಾರ ವರ್ತನೆ. ನಾನೇನೂ ಭಾರೀ ಸಾಹಸ ಮಾಡಿಲ್ಲ. ಇಂಥ ಕೆಲಸಗಳಲ್ಲಿ ಅವಶ್ಯವಾದ ಧಾತುಗಳು ಐದು: ನೈತಿಕತೆ, ಮಗ್ನತೆ, ಉತ್ಕೃಷ್ಟತೆ, ಪಾರದರ್ಶಕತೆ ಮತ್ತು ಉತ್ತರದಾಯಿತ್ವ (ethics, involvement, excellence, transparency and accountability). ವಿವಿಧ ರಂಗಗಳಲ್ಲಿಯ ನನ್ನ ಸುದೀರ್ಘ ಸೇವಾನುಭವವನ್ನು ಮುಂದಿನ ಕಗ್ಗದಲ್ಲಿ ಗುರುತಿಸಬಹುದು:
ಸಂಕಲ್ಪದೃಢನಾಗಿ ಮೊದಲ ಹೆಜ್ಜೆಯನಿಟ್ಟು
ಸಂಕಷ್ಟಗಳ ಲೆಕ್ಕಿಸದೆ ಸದಾ ನಡೆಯುತಿರು
ಶಂಕೆತೊರೆ ನಚಿಕೇತನೋಲ್ ಸತ್ಯದರ್ಶನಕೆ
ಕೈಂಕರ್ಯವೊಪ್ಪಿಸೋ ಜಯಸಿದ್ಧ ಅತ್ರಿಸೂನು
ನಮ್ಮ ಪ್ರಕಟಣೆಗಳ ವಿತರಣೆ ಮತ್ತು ಮಾರಾಟ, ಜೊತೆಗೆ ವಿದ್ಯಾರ್ಥಿಗಳಿಗೆ ಅವರ ಕಾಲೇಜ್ ಆವಶ್ಯಕತೆಗಳ ಪೂರೈಕೆ ಮಾಡಲು ವಿಶ್ವವಿದ್ಯಾಲಯ ಅದೇ ವೇಳೆಗೆ ಸೆಂಟ್ರಲ್ ಕಾಲೇಜ್ ಆವರಣದಲ್ಲಿ ಸಹಕಾರ ಸಂಘವನ್ನು ಸ್ಥಾಪಿಸಿತು. ಆಡಳಿತ ಸಮಿತಿಗೆ ನನ್ನನ್ನೊಬ್ಬ ಗೌರವ ಸದಸ್ಯನಾಗಿ ಕುಲಸಚಿವ ಮಲ್ಲಿಕಾರ್ಜುನಪ್ಪ ನಾಮಕರಣ ಮಾಡಿದ್ದರು. ಮೂಲ ಬಂಡವಾಳವಾಗಿ ವಿಶ್ವವಿದ್ಯಾಲಯ ಬಲುದೊಡ್ಡ ಮೊತ್ತವನ್ನು ಹೂಡಿತ್ತು. ಸಂಘದ ಪೂರ್ಣಕಾಲೀನ ಕಾರ್ಯದರ್ಶಿಯಾಗಿ ಸರ್ಕಾರದ ಸಹಕಾರ ಇಲಾಖೆಯಿಂದ ಒಬ್ಬ ಅನುಭವೀ ಅಸಿಸ್ಟೆಂಟ್ ರಿಜಿಸ್ಟ್ರಾರ್ ಮಟ್ಟದ ಅಧಿಕಾರಿ ನಿಯೋಜಿತನಾಗಿದ್ದ. ಈತ ಸಂಘಕ್ಕೆ ರಖಂ ದರದಲ್ಲಿ ಮಾಲು ಖರೀದಿಸಲು ದೊಡ್ಡದೊಂದು ಯಾದಿ ಸಿದ್ಧಪಡಿಸಿ ಸಮಿತಿಯ ಮುಂದಿಟ್ಟ. ನನ್ನ ಪೂರ್ವಾನುಭವದ ಕಣ್ಣಿಗೆ ಇದರಲ್ಲಿ ಸ್ಪಷ್ಟ ಗೋಲ್‌ಮಾಲ್ ಇದ್ದುದು ಎದ್ದು ಕಾಣುತ್ತಿತ್ತು. ಈ ಸಂಗತಿಯನ್ನು ಚರ್ಚಿಸಬೇಕೆಂದು ನಾನು ಹಠ ಹಿಡಿದಾಗ ಆತ ಉಲ್ಟಾ ಮಾತಾಡಿ ನನ್ನ ಅನುಭವವನ್ನೇ ಪ್ರಶ್ನಿಸಿದ. “ಬನ್ನಿ, ನಾವೆಲ್ಲರೂ ಈಗಲೇ ಅವೆನ್ಯೂ ರಸ್ತೆಯಲ್ಲಿರುವ ಯಾವುದೇ ಪುಸ್ತಕ ಮಳಿಗೆಗೆ ಹೋಗಿ ಗುಣ ಮಟ್ಟ, ರಖಂ ದರ ಮತ್ತು ಪೂರೈಕೆ ಶರತ್ತು ಇವನ್ನು ಪ್ರತ್ಯಕ್ಷ ಪರಾಂಬರಿಸೋಣ” ಎಂದೆದ್ದೆ. ಸಮಿತಿಯ ಇತರ ಸದಸ್ಯರಿಗೆ ಯಾರಿಗೂ ಈ ಕ್ಷೇತ್ರದಲ್ಲಿ ಏನೂ ಅರಿವು ಇರಲಿಲ್ಲ. ಪರಿಸ್ಥಿತಿ ಬಿಗಡಾಯಿಸಿದ್ದನ್ನು ನೋಡಿ ಅಧ್ಯಕ್ಷರು ಸಭೆಯನ್ನು ಮರುದಿನಕ್ಕೆ ಮುಂದೂಡಿದರು.
ಆ ರಾತ್ರಿ ಆತ ನಮ್ಮ ಮನೆಗೇ ಬರಬೇಕೇ!? ನನಗೆ ತುಂಬ ಮುಜಗರವಾಯಿತು. ಮೊದಲು ನನ್ನನ್ನು ಬಲುವಾಗಿ ಹೊಗಳಿದ. ಅಕೃತ್ರಿಮವಲ್ಲದ ಇಂಥ ಎಲ್ಲ ಸಂದರ್ಭಗಳಲ್ಲಿ ನನ್ನ ಮನದೊಳಗೆ ಮಿಡಿಯುವ ಸಾಲುಗಳಿವು:
ಬಾನೊಣವೆ ಬಾನೊಣವೆ ಬಾನನ್ನ ಮನೆಗೆ
ಬಾನೊಳಗೆ ಹಾರಿ ಬಲುದಣಿವಾಯ್ತು ನಿನಗೆ.
ಆ ಮಾತಿಗಾ ನೊಣವು “ಎಲೆ ಜೇಡ ಜೇಡ!
ನಿನ್ನ ಮನೆ ಸುಖವೆನಗೆ ಹಾ ಬೇಡ ಬೇಡ!”
ಆದರೆ ಜೇಡ ಆ ಮೊದ್ದು ನೊಣವನ್ನು “ಹೊಗಳಿ ಹೊಗಳಿ ಹೊನ್ನ ಶೂಲಕ್ಕೆ” ಏರಿಸಿಯೇಬಿಟ್ಟಿತು, ನೊಣ ಜೇಡನ ಬಲೆಗೆ ಬಿದ್ದೇ ಬಿತ್ತು. ಪಂಜೆಯವರ ಈ ಪದ್ಯವನ್ನು ಪ್ರಾಥಮಿಕ ತರಗತಿಗಳಲ್ಲಿ ಹಾಡಿ, ಕುಣಿದು, ನಾಟಕವಾಡಿ ಖುಷಿ ಪಟ್ಟದ್ದಿತ್ತು.
ಕಾರ್ಯದರ್ಶಿಯ ದೈನ್ಯಯುಕ್ತ ಯಾಚನೆಯ ಸಾರವಿಷ್ಟು: ಇಂಥ ಪ್ರತಿಯೊಂದು ಖರೀದಿಯಲ್ಲಿಯೂ ಅಂತೆಯೇ ಬಿಲ್ ಪಾವತಿಸುವುದರಲ್ಲಿಯೂ ೧೦% ಸೇವಾಶುಲ್ಕ ಪಡೆಯುವುದು ಮಾಮೂಲು. ಇದರಲ್ಲಿ ಸಮಿತಿಯ ಸದಸ್ಯರೆಲ್ಲರಿಗೂ ಪಾಲು ದೊರೆಯಲಿದೆ. “ನಿಮಗೆ ಬೇಕಾದರೆ ಸ್ವಲ್ಪ ಹೆಚ್ಚೇ ಪಾಲನ್ನು ಕೊಡಬಹುದು. ಈ ವಿವರಗಳನ್ನು ನನಗೆ ಬಿಡಿ, ಸರ್!” ಮನೆಗೆ ಬಂದವನನ್ನು ಅಪಮಾನಗೊಳಿಸುವುದು ಶಿಷ್ಟವರ್ತನೆಯಲ್ಲ ಎಂಬ ಒಂದೇ ಕಾರಣಕ್ಕಾಗಿ ನಯವಾಗಿಯೇ ಹೇಳಿದೆ, “ಹೇಗೂ ನಾಳೆ ಸಭೆ ಸೇರುವೆವಷ್ಟೆ. ಆಗ ಈ ಎಲ್ಲ ಸೂಕ್ಷ್ಮಗಳನ್ನು ಕೂಲಂಕಷವಾಗಿ ವಿಶ್ಲೇಷಿಸಿ ಒಂದು ಒಪ್ಪಂದಕ್ಕೆ ಬರೋಣ.” ಆತ ಪ್ರಸನ್ನವದನನಾಗಿ ಹೋದ?
ಮರುದಿನದ ಸಭೆ. ಇವೆಲ್ಲ ಸಂಗತಿಗಳನ್ನೂ ಬರಹಕ್ಕೆ ಇಳಿಸಿ ಆತನ ಸಮಕ್ಷಮವೇ ಮಂಡಿಸುತ್ತ ಹೇಳಿದೆ, “ಇಂಥ ಭ್ರಷ್ಟ ಕಾರ್ಯದರ್ಶಿ ನಮಗೆ ಖಂಡಿತ ಬೇಡ. ಇವರು ಇಲಾಖೆಗೇ ಮರಳಲಿ.” ಸಮಿತಿಯ ಸದಸ್ಯರೆಲ್ಲರೂ ಒಕ್ಕೊರಲಿನಿಂದ ಅನುಮೋದಿಸಿದರು. ನಿಜ,
ಆದರ್ಶ ಮಾರ್ಗವನು ಮಲ್ಲಿಗೆಯ ಪಕಳೆಗಳ-
ನಾಧರಿಸಿ ರಚಿಸಿಲ್ಲ. ಕಂಟಕವನೆದುರಿಸಿತ
ಸಾಧನೆಯ ನಿಸ್ವಾರ್ಥ ನೀತಿಯುತ ಭಾವದಿಂ
ಗೈದವಂ ದೀಪ್ತಿಸುವ ಹಾದಿಯದು ಅತ್ರಿಸೂನು
ಬದಲಿಗೆ ಇನ್ನೊಬ್ಬ ಬಂದ. ಒಟ್ಟು ವ್ಯವಹಾರ ನನ್ನಲ್ಲಿ ಇಡೀ ವ್ಯವಸ್ಥೆಯ ಬಗೆಗೇ ಜುಗುಪ್ಸೆ ಮೂಡಿತು. ರಾಜಿನಾಮೆ ಸಲ್ಲಿಸಿದೆ. ಸ್ವೀಕೃತವಾಗಲಿಲ್ಲ. ಹೀಗೆ ೧೯೬೮-೬೯ರ ಶೈಕ್ಷಣಿಕ ವರ್ಷದಲ್ಲಿ ನನ್ನ ಸೇವೆ ಏಕಕಾಲಿಕವಾಗಿ ಪಾಠಪ್ರವಚನ, ವಿಶೇಷ ತರಗತಿಗಳು, ಪಠ್ಯ ಪುಸ್ತಕ ಸಮಿತಿ, ಎನ್‌ಸಿಸಿ, ಸಹಕಾರ ಸಂಘ, ಸ್ವಂತ ಬರೆಹ ಮುಂತಾದ ಕ್ಷೇತ್ರಗಳಲ್ಲಿ ಬಿರುಸಿನಿಂದ ಸಾಗಿದುವು.
ಆ ವರ್ಷ ನಮ್ಮ ಕಾಲೇಜಿನ ಪರೀಕ್ಷಾಫಲಿತಾಂಶಗಳು, ಕ್ರೀಡಾಸಾಧನೆಗಳು ಮತ್ತು ಎನ್‌ಸಿಸಿ ವಿಕ್ರಮಗಳು ನಗರದ ರ‍್ಯಾಂಕ್ ಕಾಲೇಜುಗಳ ಹಿಂದಿನ ಎಲ್ಲ ದಾಖಲೆಗಳನ್ನೂ ಮುರಿದಿದ್ದುವು. ಎಸ್‌ಎಸ್‌ಎಲ್‌ಸಿಯಲ್ಲಿ ಶೇಕಡಾ ೮೦ಕ್ಕಿಂತ ಹೆಚ್ಚು ಅಂಕಗಳಿಸಿದವರನ್ನು ಆಯ್ದು ಮತ್ತಷ್ಟು ಟ್ಯೂಷನ್ ಗುಳಿಗೆ ನುಂಗಿಸಿ ಪಿಯುಸಿಯಲ್ಲಿ ಪ್ರಥಮ ದರ್ಜೆ ಗಳಿಸುವುದೇನೂ ಮಹಾಸಾಧನೆಯಲ್ಲ. ಇಂಥ ರ‍್ಯಾಂಕ್‌ವಿಜೇತರ (ಹೌದು ಜ್ಞಾನದೊಡನೆ ಹೋರಾಡಿ ಸ್ಥಾನ ಗಿಟ್ಟಿಸಿರುವವರಿವರು!) ಎದುರು ‘ದೊಡ್ಡಿ ಕಾಲೇಜ್’ನ ನಮ್ಮ ‘ದಡ್ಡ’ ವಿದ್ಯಾರ್ಥಿಗಳು ಸೆಣಸಿ ಗೆಲ್ಲುವುದೇನು ಸಾಮಾನ್ಯ ಸಾಧನೆಯೇ? ಮಹಾಭಾರತ ಯುದ್ಧದ ವೇಳೆ ಕರ್ಣನ ರಥವನ್ನು ಅರ್ಜುನ ೧೦೦ ಗಾವುದ ಹಿಂದಕ್ಕೆ ರಟ್ಟಿಸಿದಾಗ ಪಾರ್ಥಸಾರಥಿ ತೆಪ್ಪಗಿದ್ದ; ಅದೇ ಮರುಕ್ಷಣ ಪಾರ್ಥನ ರಥವನ್ನು ಕರ್ಣ ಕೇವಲ ೧ ಗಾವುದ ಹಿಂದಕ್ಕೆ ಸರಿಸಿದಾಗ “ಭಲೇ ಕರ್ಣ” ಎಂದು ಕೃಷ್ಣ ಉದ್ಗರಿಸಲಿಲ್ಲವೇ?
ಭಾರತೀಯ ವಿಜ್ಞಾನ ಸಂಸ್ಥೆ (Indian Institute of Science) ಆ ವರ್ಷ ನಡೆಸಿದ ಗಣಿತ ಒಲಿಂಪಿಯಾಡ್ ಪರೀಕ್ಷೆಗೆ ನಮ್ಮ ಆಯ್ದ ವಿದ್ಯಾರ್ಥಿಗಳನ್ನು ಸಾಕಷ್ಟು ಪೂರ್ವ ಸಿದ್ಧತೆ ಸಹಿತ ಕಳಿಸಿದೆವು. ಇವರ ಪೈಕಿ ಒಬ್ಬ ಇಡೀ ರಾಜ್ಯದಲ್ಲೇ ಪ್ರಥಮ ಸ್ಥಾನ ಗಳಿಸಿದ! ನೀತಿ ಏನು? ಹುಟ್ಟಿನಿಂದ ಎಲ್ಲರೂ ಸಮಾನ ಪ್ರತಿಭಾನ್ವಿತರೇ. ಅವರಿಗೆ ಯುಕ್ತ ಸಮರ್ಥ ಶಿಕ್ಷಣವಿತ್ತಾಗ “ಪಂಗುಂ ಲಂಘಯತೇ ಗಿರಿಂ.”
ನನ್ನ ಬಗ್ಗೆ ಅಪಾರ ವಿಶ್ವಾಸ ತಳೆದಿದ್ದ ಕುಲಪತಿ ಗೋಕಾಕ್, ಕುಲಸಚಿವ ಮಲ್ಲಿಕಾರ್ಜುನಪ್ಪ, ಗಣಿತ ವಿಭಾಗಮುಖ್ಯಸ್ಥ ನರೊನ್ನ ಮತ್ತು ಗುರುಸ್ಥಾನದಲ್ಲಿದ್ದ ಸಿಎನ್‌ಎಸ್ ಎಲ್ಲರ ಅಭಿಪ್ರಾಯವೂ ಒಂದೇ: ಸರ್ಕಾರೀ ಸೇವೆಯಲ್ಲಿರುವ ನನ್ನನ್ನು ಹೇಗಾದರೂ ಮಾಡಿ ವಿಶ್ವವಿದ್ಯಾಲಯದ ಸೇವೆಗೆ ತರಬೇಕು. ಯೋಗಾಯೋಗ ಅದೇ ವೇಳೆ ವಿಶ್ವವಿದ್ಯಾಲಯ ಹೊಸ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿತು. ಗಣಿತ ವಿಭಾಗದಲ್ಲಿ ಉಪನ್ಯಾಸಕ ಹುದ್ದೆ ಖಾಲಿ ಇತ್ತು. ಅಲ್ಲಿಯ ವೇತನ ಶ್ರೇಣಿ ಸರ್ಕಾರದ್ದಕ್ಕಿಂತ ಎಷ್ಟೋ ಹೆಚ್ಚು. ಇನ್ನು ವರ್ಗಾವಣೆಯಂತೂ ಇಲ್ಲವೇ ಇಲ್ಲ. ಅದಕ್ಕೆ ಬೇಕಾಗುವ ಅರ್ಹತೆ ನನಗಿಲ್ಲವೆಂಬ ಅರಿವು ನನಗಿತ್ತು: ೪೨ರ ಈ ಮಧ್ಯವಯಸ್ಸಿನ ತನಕ ಸ್ನಾತಕ (ಬಿಎ, ಬಿಎಸ್‌ಸಿ) ಕಾಲೇಜುಗಳಲ್ಲೇ ಅನುಭವ ಗಳಿಸಿರುವ ಮತ್ತು ಗಣಿತದಲ್ಲಿ ಯಾವ ಸಂಶೋಧನೆ ಅಥವಾ ವಿಶೇಷೀಕರಣ ಮಾಡದಿರುವ ನಾನು ಈಗ ಹಠಾತ್ತನೆ ಸ್ನಾತಕೋತ್ತರ ತರಗತಿಗಳಿಗೆ ಬೋಧಿಸಲು ನನ್ನಲ್ಲಿ ಸಾಕಷ್ಟು ಸರಕು ಇಲ್ಲವೆಂದು ಯೋಚಿಸಿದೆ. ಹೀಗಾಗಿ ಅರ್ಜಿ ಹಾಕಲಿಲ್ಲ. ಆದರೆ ಮೇಲೆ ಹೇಳಿದ ನನ್ನ ನಾಲ್ವರು ಹಿತೈಷಿಗಳೂ ಇವೆಲ್ಲ ಆತಂಕಗಳನ್ನೂ ಕೇವಲ ಊಹಾಪೋಹಗಳೆಂದು ತಳ್ಳಿಹಾಕಿ ನನ್ನಿಂದ ಅರ್ಜಿ ಹಾಕಿಸಿಯೇ ಬಿಟ್ಟರು! ನರೊನ್ನ ಮತ್ತು ಸಿಎನ್‌ಎಸ್ ಇಬ್ಬರೂ “ನಿಮ್ಮ ಶೈಕ್ಷಣಿಕ ಕೊರತೆ ಬಗ್ಗೆ ಏನೂ ಯೋಚನೆ ಮಾಡಬೇಡಿ. ನಾವಿದ್ದೇವೆ ಅಂಥ ವ್ಯಾವಹಾರಿಕ ಸಮಸ್ಯೆ ಏನಾದರೂ ಇದ್ದರೆ ಪರಿಹರಿಸಲು” ಎಂದು ಆಶ್ವಾಸಿಸಿದರು. ಹೀಗೆ ಒಂದು ದುರ್ಬಲ ಕ್ಷಣದಲ್ಲಿ ಗುಂಡಿಗೆ ಬಿದ್ದೆ. ಮುಂದೇನಾಯಿತು? (ಅಧ್ಯಾಯ ೬೮ ನೋಡಿ)
ನಾವು ಮಾಡಿಸದಿದ್ದ ಒಂದು ಮದುವೆ
ಅಧ್ಯಾಯ ಅರವತ್ತ ಆರು [ಮೂಲದಲ್ಲಿ ೩೮]
ನಾನು ಬೆಂಗಳೂರಿನಲ್ಲಿದ್ದಾಗ ಸಂಭವಿಸಿದ ಹೃದಯವಿದ್ರಾವಕ ಘಟನೆಯಿದು. ಇಲ್ಲಿಯ ಪಾತ್ರಧಾರಿಗಳ ಹೆಸರುಗಳನ್ನು ಉದ್ದೇಶಪೂರ್ವಕವಾಗಿ ಬದಲಾಯಿಸಿದ್ದೇನೆ. ಅದಾಗ ತಾನೇ ನಾನು ತರಗತಿಪಾಠ ಮುಗಿಸಿ ಕೊಠಡಿಗೆ ಮರಳಿದ್ದೆ, ಲಭ್ಯವಿದ್ದ ಕೇವಲ ಅರ್ಧ ತಾಸಿನಲ್ಲಿ ಊಟಮಾಡಿ ಮುಂದಿನ ತರಗತಿಗೆ ಧಾವಿಸಬೇಕಿತ್ತು. ಅಷ್ಟರಲ್ಲೇ “Good morning sir! Do you recognize me?” ಎಂಬ ಅಪರಿಚಿತ ಗಂಡುಧ್ವನಿ ನನ್ನನ್ನು ಸ್ವಾಗತಿಸಿತು. “ಓಹೋಹೋ! ಏನು ಮೋಹನ? ಯಾವಾಗ ಬಂದೆ? ಎಲ್ಲಿಂದ? ಎಷ್ಟು ವರ್ಷವಾಯ್ತು ನಿನ್ನನ್ನು ನೋಡದೇ! ಚೆನ್ನಾಗಿರುವೆಯಾ?” “Sorry sir, I do not understand that language.” ವಿಚಿತ್ರ ಎನ್ನಿಸಿತು. ಏಕೆಂದರೆ ಮೋಹನ ಕೊಡಗಿನ ಹುಡುಗ. ೧೯೫೫ರ ಸುಮಾರಿಗೆ ಮಡಿಕೇರಿಯಲ್ಲಿ ನನ್ನ ಒಬ್ಬ ಆಪ್ತ ವಿದ್ಯಾರ್ಥಿ ಮತ್ತು ಸುಟಿ ಎನ್‌ಸಿಸಿ ಕ್ಯಾಡೆಟ್ ಆಗಿದ್ದ. ನಮ್ಮಲ್ಲಿ ಬಿಎಸ್‌ಸಿಯನ್ನು ಉನ್ನತ ಶ್ರೇಣಿಯಲ್ಲಿ ಗಳಿಸಿ, ನನ್ನ ಸಲಹೆ ಮೇರೆಗೆ ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡಕ್ಕೆ ಹೋಗಿ, ಅಲ್ಲಿ ಸಂಖ್ಯಾಕಲನ ವಿಜ್ಞಾನ ಪದವಿ ಗಳಿಸಿ, ಸಂಶೋಧನೆ ಮಾಡುವ ಸಲುವಾಗಿ ಆಸ್ಟ್ರೇಲಿಯಾಕ್ಕೆ ತೆರಳಿದ್ದ ಪ್ರತಿಭಾವಂತ. ಇಂಥ ಅಪ್ಪಟ ಕನ್ನಡ ಶಿಶುವಿಗೆ ಈಗ ಮಾತೃಭಾಷೆಯೇ ಮರೆತು ಹೋಗಿದೆ!? ಇವನಿಗೇನಾಗಿದೆ? ಹುಡುಗ ಈಗ ಧಡೂತಿಯಾಗಿ ಉಬ್ಬಿದ್ದಾನೆ, ಸ್ವರ ಗಡಸಾಗಿದೆ.
“ನೋಡಪ್ಪಾ ಮೋಹನ! ನಾನೀಗ ತುರ್ತು ಒಂದು ತುತ್ತು ನುಂಗಿ ಮುಂದಿನ ಪಾಠಕ್ಕೆ ಓಡಬೇಕಾಗಿದೆ. ೩-೩೦ ಗಂಟೆಗೆ ಮತ್ತೆ ಇಲ್ಲಿಗೇ ಮರಳುತ್ತೇನೆ. ಆಗ ವಿವರವಾಗಿ ಮಾತಾಡೋಣ” ಎಂದು ಮುಂದಕ್ಕೆ ನಡೆದೆ. ಅಲ್ಲೇ ಇದ್ದ ನನ್ನ ಯುವ ಸಹೋದ್ಯೋಗಿ ಜೊತೆ ಮೋಹನ ಉದ್ಗರಿಸಿದ್ದು ಕಿವಿಗೆ ಬಿತ್ತು, “That’s like him. My great Guru GTN – sir is particular about time and duty.”
ಕೊಠಡಿಗೆ ಮರಳಿ ಮೋಹನನ ಜೊತೆ ವಿರಾಮವಾಗಿ ಸಂಭಾಷಿಸಿದಾಗ ತಿಳಿದದ್ದು ಇಷ್ಟು: ಅವನು ಆಸ್ಟ್ರೇಲಿಯಾದಿಂದ ಅಮೆರಿಕಕ್ಕೆ ಇನ್ನೂ ಉನ್ನತಾಧ್ಯಯನ ಮಾಡಲೆಂದು ತೆರಳಿದ್ದ. ಈ ಎರಡೂ ರಾಷ್ಟ್ರಗಳಲ್ಲಿಯ ಗಂಡು-ಹೆಣ್ಣು ಮುಕ್ತ ಜೀವನಕ್ಕೆ ಮರುಳಾಗಿ ಒಂದು ರಾತ್ರಿ ಪ್ರೇಯಸಿ ಜೊತೆ ಕಾರಿನಲ್ಲಿ ಪಯಣಿಸುತ್ತಿದ್ದಾಗ ಅಪಘಾತಕ್ಕೆ ತುತ್ತಾಗಿದ್ದ. ಸುದೀರ್ಘ ಶುಶ್ರೂಷಾನಂತರ ದೇಹ ಚೇತರಿಸಿಕೊಂಡರೂ ಹಿಂದಿನ ನಿಶಿತ ಮತಿ ಮಾತ್ರ ಮರಳಿರಲಿಲ್ಲ. ಹೀಗಾಗಿ ಇವನಿಗೆ ಮನೋವೈಜ್ಞಾನಿಕ ಚಿಕಿತ್ಸೆ ನೀಡಲಾಯಿತು. ಇನ್ನು ಊರಿಗೆ ಹಿಂತಿರುಗಿ ಮದುವೆಯಾಗಿ ಬಾ ಎಂದು ದೀರ್ಘ ರಜೆಯಿತ್ತು ಕಳಿಸಿದ್ದಾರೆ. “ಈಗ ನಾನು ಪೂರ್ಣ ಮೊದಲಿನ ಮೋಹನನೇ ಆಗಿದ್ದೇನೆ. ನೋಡಿ ಈ ಕಿರುಹೊತ್ತಗೆಯಲ್ಲಿ ನನ್ನ ಆತ್ಮಕಥನವನ್ನು ನಿರೂಪಿಸಿದ್ದೇನೆ” ಎನ್ನುತ್ತ Honam goes to the US (ತನ್ನ ಹೆಸರಿನ ಅಕ್ಷರಗಳನ್ನೇ ಮರುಬಳಸಿ ಈ ವಿನೂತನ ನಾಮಧೇಯವನ್ನು ಹೊಸೆದಿದ್ದ) ಎಂಬ ಹೊತ್ತಗೆಯನ್ನು ನನಗೆ ಕೊಟ್ಟ. ಮಾತುಕಥೆ ನಡೆದದ್ದು ಇಂಗ್ಲಿಷಿನಲ್ಲಿಯೇ.
ಇಷ್ಟಾಗುವಾಗ ನನಗೆ ಒಂದು ಸಂಗತಿ ಸ್ಪಷ್ಟವಾಗಿತ್ತು: ಈತ ದೈಹಿಕವಾಗಿ ಸ್ಥೂಲ ಮತ್ತು ಬೌದ್ಧಿಕವಾಗಿ ಮಂದ ಆಗಿದ್ದಾನೆ. ಶೀಲ? “ಸರ್! ನೀವು ನನಗೊಂದು ಉಪಕಾರ ಮಾಡಬೇಕು. ಅದಕ್ಕಾಗಿ ನಿಮ್ಮ ಬಳಿ ಬಂದಿದ್ದೇನೆ. ನನಗೊಬ್ಬಳು ಯೋಗ್ಯ ಬ್ರಾಹ್ಮಣ ಕನ್ಯೆಯನ್ನು ಗೊತ್ತುಮಾಡಿ ಮದುವೆ ಮಾಡಿಸಬೇಕು. ಹಣಕ್ಕೇನೂ ಕೊರತೆಯಿಲ್ಲ. ನಾನವಳ ಜೊತೆ ಮತ್ತೆ ಅಮೆರಿಕಕ್ಕೆ ಮರಳುವವನು.” ಮೋಹನ ದೀನನಾಗಿದ್ದ. ಆದರೆ ಅವನ ಶೀಲ ಕುರಿತು ಇಷ್ಟೆಲ್ಲ ವಿವರಗಳನ್ನು ಖುದ್ದು ಅವನಿಂದಲೇ ಕೇಳಿದ ಬಳಿಕ ನಾನು ಅವನಿಗೇನು ನೆರವು ತಾನೇ ಕೊಡಬಲ್ಲೆ? ಹಾಗೆ ಕೊಡುವುದು ಧರ್ಮವೇ? ಕನ್ಯಾಬಲಿಗೆ ನಾನು ಕಾರಣನಾಗಬೇಕೇ? ಆ ನಿಟ್ಟಿನಲ್ಲಿ ನನ್ನ ಪೂರ್ಣ ಅಸಹಾಯಕತೆಯನ್ನು ವ್ಯಕ್ತಪಡಿಸುತ್ತ, “ಏನಪ್ಪ ಮಾಡಲಿ, ನಮಗೊಬ್ಬ ಮಗಳೇ ಇಲ್ಲವಲ್ಲ!” ಎಂದು ಚಟಾಕಿ ಹಾರಿಸಿದೆ.
ಅವನೇ ಮುಂದುವರಿಸಿದ, “ಸರ್! ನಿಮಗೆ ನನ್ನ ಕೃಷ್ಣ ಮಾವನನ್ನು ಗೊತ್ತಿದೆಯಲ್ಲ. ಅವರು ನನ್ನ ತಾಯಿಯ ಅಣ್ಣ. ಅವರೀಗ ಬೆಂಗಳೂರಿನಲ್ಲಿಯೇ ನೆಲಸಿದ್ದಾರೆ. ಅವರ ಮಗಳು ಜಾನಕಿಗೂ ನನಗೂ ನಡುವೆ ಪ್ರೇಮ ಎಂದೋ ಅಂಕುರಿಸಿತ್ತು. ಸಾಕಷ್ಟು ಮಾತುಕತೆ ಮತ್ತು ಪತ್ರವ್ಯವಹಾರ ಕೂಡ ನಡೆದಿವೆ. ನೀವು ದಯವಿಟ್ಟು ಆಕೆಯ ಜೊತೆ ನನಗೊಂದು ಭೇಟಿಗೆ ಏರ್ಪಾಡು ಮಾಡಿದರೆ ಉಪಕಾರವಾಗುತ್ತದೆ.”
ಹೌದು, ಮೋಹನನ ಈ ಮಾವ ಬಲು ಹಿಂದೆ ಮಡಿಕೇರಿಯಲ್ಲಿ ನನಗೆ ಓಂಕಾರೇಶ್ವರ ದೇವಾಲಯದ ಭವ್ಯ ಕೆರೆಯಲ್ಲಿ ಈಸು ಕಲಿಸಿದ ಗುರು, ನನ್ನ ಗೌರವ ಮತ್ತು ಅಭಿಮಾನಗಳಿಗೆ ಪಾತ್ರರಾದ ಹಿರಿಯರು. ಜಾನಕಿಯ ತಂಗಿ ಕುಮುದ, ಆಗ ನಮ್ಮ ಕಾಲೇಜಿನಲ್ಲಿ ನನ್ನ ವಿದ್ಯಾರ್ಥಿನಿ ಕೂಡ. ಕೂಡಲೇ ಅವಳನ್ನು ಕರೆಯಿಸಿ ಈ ವಿಷಯವನ್ನು ಸೂಕ್ಷ್ಮವಾಗಿ ತಿಳಿಸಿದೆ ಮತ್ತು ಕೃಷ್ಣ ಮಾವನಿಗೆ ಆಸಕ್ತಿ ಇದ್ದರೆ ಮರುದಿನ ಅಪರಾಹ್ಣ ೪ ಗಂಟೆಗೆ ನಮ್ಮ ಕಾಲೇಜಿಗೆ ಬಂದು ನಮ್ಮಿಬ್ಬರನ್ನೂ (ಮೋಹನ ಮತ್ತು ನಾನು) ಭೇಟಿ ಮಾಡಬಹುದೆಂದೂ ಸೂಚಿಸಿದೆ. ಅವರು ಬಂದರು, ಅತ್ಯಂತ ಅಸ್ವಾಭಾವಿಕವಾಗಿ ಮತ್ತು ನಾಟಕೀಯವಾಗಿ ನಮ್ಮಿಬ್ಬರ ಕುಲ, ಗೋತ್ರ, ವೃತ್ತಿ, ಸಾಧನೆ ಮುಂತಾದವನ್ನು ಹೊಗಳಿದರು ಮತ್ತು ಇಂಥ ದೈವಿಕ ಸಂಘಟನೆ – ಜಾನಕೀ ಮೋಹನ – ಬಗ್ಗೆ ತಮ್ಮ ಪೂರ್ಣ ಅನುಮೋದನೆ ವ್ಯಕ್ತಪಡಿಸಿದರು! “ನಮ್ಮ ಮನೆಗೆ ನೀವಿಬ್ಬರೂ ಬನ್ನಿ. ವಿವರಗಳನ್ನು ಅಲ್ಲಿ ಮಾತಾಡೋಣ” ಎಂಬುದಾಗಿ ಆಹ್ವಾನವಿತ್ತರು ಕೂಡ. ಮರುದಿನ ಸಂಜೆಗೆ ಆ ಭೇಟಿಯನ್ನು ನಿಗದಿಸಿದೆವು. ನನ್ನ ಅಂತರ್ವಾಣಿ ಮಿಡಿಯುತ್ತಿತ್ತು, “ನೀನು ಯಾವುದೋ ದಾಕ್ಷಿಣ್ಯಕ್ಕೊಳಗಾಗಿ ಗೊಸರಿನೊಳಕ್ಕೆ ಗೊತ್ತಿದ್ದೂ ಧಾವಿಸುತ್ತಿದ್ದೀಯೆ, ಎಚ್ಚರೆಚ್ಚರ!”
ಮೋಹನ ಬಾಡಿಗೆ ಕಾರ್ ತಂದ. ನಮ್ಮ ಸವಾರಿ ರಾಜಮಹಾಲ್ ಗುಟ್ಟಳ್ಳಿಯಲ್ಲಿದ್ದ ಮಾವನ ಮನೆ ತಲಪಿದಾಗ ಸಂಜೆ ೬ ಆಗಿತ್ತು. ಮತ್ತೆ ಅವರ ಅತ್ಯುತ್ಪ್ರೇಕ್ಷಿತ ಸ್ವಾಗತ. ಕಾಫಿ ತಿಂಡಿ ಸೇವನೆ ಮುಗಿಯಿತು. ಆದರೆ ಜಾನಕಿ ಬರಲಿಲ್ಲ. ನಾನೇ ಮಾವನಿಗೆ ಸೂಚಿಸಿದೆ ಅವರಿಬ್ಬರ ಖಾಸಗಿ ಭೇಟಿ ಏರ್ಪಡಿಸಿರೆಂದು. ಅದೂ ನಾಟಕೀಯವಾಗಿಯೇ ನಡೆಯಿತು, ಪಕ್ಕದ ಕೋಣೆಯಲ್ಲಿ. ಅಲ್ಲಿಂದ ಮೋಹನನ ಮಾತು ನಮಗೆ ಸ್ಪಷ್ಟವಾಗಿ ಕೇಳುತ್ತಿತ್ತು. ಮಾದರಿ, “Janaki dear! I love you. Tell me you too love me!” ಅವಳ ಉತ್ತರ ನನಗೆ ಕೇಳಲಿಲ್ಲ. ಮತ್ತೆ ಇವನದೇ ವಾಗ್ಪ್ರವಾಹ. ಸಾರಾಂಶ: ಇವನಿಗೆ ತತ್ಪೂರ್ವ ಅನೇಕ ಯುವತಿಯರ ಸಂಗವಿತ್ತು, ಪಾಶ್ಚಾತ್ಯ ದೇಶಗಳಲ್ಲಿ ಇದು ತೀರ ಸಾಮಾನ್ಯ, “But when once we are married, Janaki dear, I promise I will be totally loyal to you. Similarly I expect you to be completely faithful to me, notwithstanding your earlier love affairs.” ಎಂಥ ವಿಚಿತ್ರ ಮತ್ತು ಅಸ್ವಾಭಾವಿಕ ಭೇಟಿ ಇದು ಎಂದು ನನ್ನ ಮನಸ್ಸು ಕುಟುಕುತ್ತಿತ್ತು. ಎಚ್ಚರೆಚ್ಚರ!
ಅವರ ದೀರ್ಘ ಬೈಠಕ್ಕು ಮುಗಿದಾಗ ರಾತ್ರಿ ೮ ಆಗಿತ್ತು! ಊಟ ಮಾಡಿಯೇ ಹೋಗತಕ್ಕದ್ದು ಎಂದು ಮಾವನ ಅಪ್ಪಣೆ. ಸ್ಸರಿ, ಅದೂ ಆಯಿತು. “ನಾಳೆ ಬನ್ನಿ, ಜಾನಕಿಯ ಅಭಿಪ್ರಾಯ ತಿಳಿದು ಖಚಿತ ನಿರ್ಣಯ ಹೇಳುತ್ತೇನೆ” ಎಂದರು ಕೃಷ್ಣ ಮಾವ. ನಾನು ದಾಕ್ಷಿಣ್ಯ ಬಿಟ್ಟು ಸ್ಪಷ್ಟವಾಗಿ ನುಡಿದೆ, “ನಾಳೆ ನೀವೇ ನಮ್ಮ ಕಾಲೇಜಿಗೆ ಬಂದು ಅಭಿಪ್ರಾಯ ತಿಳಿಸಿ. ಪುನಃ ನನಗೆ ಇಷ್ಟು ದೂರ ಬರಲು ವೇಳೆ ಇಲ್ಲ.” ಮರುದಿನ ಅವರು ಸಕಾಲದಲ್ಲಿ ಬಂದರು, ಈ ಸಂಬಂಧಕ್ಕೆ ತಮ್ಮ ಸಮ್ಮತಿ ಸೂಚಿಸಿ, ಮದುವೆಯ ದಿನ ನಿಶ್ಚಯಿಸಲು ಮೋಹನನ ತಂದೆ-ತಾಯಿಯರನ್ನು ಬೆಂಗಳೂರಿಗೆ ಕರೆಸಬೇಕೆಂದು ಹೇಳಿದರು. ಹೇಗೂ ಅವನ ತಾಯಿಗೆ ಕೃಷ್ಣ ಮಾವ ಅಣ್ಣ ಅಲ್ಲವೇ? ನಾನು ಇನ್ನಷ್ಟು ಆಳದ ಪಂಕಕ್ಕೆ ತಿಳಿದೂ ಬೀಳುತ್ತಿರುವೆನೇ? ಎಚ್ಚರೆಚ್ಚರ!
ಕೆಲವು ದಿನಗಳು ಉರುಳಿದುವು. ಮೋಹನ, ಅವನ ತಂದೆ ಮತ್ತು ತಾಯಿ ಕೃಷ್ಣ ಮಾವನ ಬಿಡಾರದಲ್ಲಿ ವಿವಾಹದ ವಿವರಗಳನ್ನು ನಿಶ್ಚಯಿಸಲು ಸೇರಿದರು. ಇತ್ತ ಗೊಸರಿನಿಂದ ಹೊರಬರಲಾಗದೆ ಅತ್ತ ಮಾತೂ ಆಡಲಾಗದೆ ನಾನು ಕೂಡ ಆ ಕೂಟದಲ್ಲಿರಬೇಕಾಯಿತು. ನನ್ನ ಮೂಕಪ್ರೇಕ್ಷಕತ್ವದಲ್ಲಿ ಮಾತುಕತೆ ಮುಂದುವರಿದು, ಎಲ್ಲವೂ ಉಭಯ ಪಕ್ಷಗಳಿಗೂ ಒಪ್ಪಿಗೆಯಾಗಿ, ಒಪ್ಪಂದ ಕರಾರನ್ನು ದಾಖಲಿಸಲು ಮಾವ ಮುಂದಾದರು. ಸರ್ಕಾರದ ಹಿರಿಯ ಕಾನೂನು ಅಧಿಕಾರಿಯಾಗಿದ್ದ ಅವರು ಅಪ್ಪಟ ವ್ಯಾವಹಾರಿಕ ಕ್ರಯಚೀಟಿಯನ್ನು ತಯಾರಿಸಿದ್ದರು. ಇದಕ್ಕೆ ಅವರೂ ಅವರ ಹೆಂಡತಿಯೂ ಮೋಹನನ ತಂದೆಯೂ ತಾಯಿಯೂ ರುಜು ಮಾಡಬೇಕು ಮತ್ತು ನಾನು ಸಾಕ್ಷಿಯಾಗಿ ರುಜುವಿಕ್ಕಬೇಕು ಎಂಬುದು ಅವರ ಇಂಗಿತ. ಈಗ ನಾನು ಪೂರ್ಣ ಎಚ್ಚತ್ತಿದ್ದೆ, ಸ್ಪಷ್ಟವಾಗಿ ನುಡಿದೆ, “ಒಲಿದ ಮನಗಳ ಮಿಲನವೇ ಮದುವೆ, ಇದು ವ್ಯಾಪಾರವಲ್ಲ. ಇಲ್ಲಿ ಹುಡುಗಿ ಹುಡುಗ ಪರಸ್ಪರ ಒಲಿದಿರುವರೆಂದಾದರೆ ಈ ಒಪ್ಪಿಗೆ ಚೀಟಿ ಅನಾವಶ್ಯ, ಒಲಿದಿಲ್ಲವೆಂದಾದರೆ ವ್ಯರ್ಥ. ಆದ್ದರಿಂದ ನಾನಂತೂ ಈ ಕಾಗದಕ್ಕೆ ರುಜು ಹಾಕಲಾರೆ.”
ಇಷ್ಟೆಲ್ಲ ಚರ್ವಿತಚರ್ವಣಗಳು ಮುಗಿಯುವಾಗ ರಾತ್ರಿ ೮ ಮೀರಿತ್ತು. “ನಾನು ಹೊರಡುತ್ತೇನೆ” ಎಂದು ಎದ್ದೆ. “ಮಾವಾ! ನನಗೂ ಅಪ್ಪಣೆ ಕೊಡಿ” ಎಂದ ಮೋಹನ. ನಾನು ಹೇಳಿದೆ, “ಬೇಡ. ನಿನ್ನ ತಾಯಿತಂದೆಯರ ಜೊತೆ ನೀನಿಲ್ಲೇ ತಂಗಿದ್ದು ನಾಳೆ ಮುಂಜಾನೆ ಅವರ ಜೊತೆ ಕೊಡಗಿಗೆ ಹೋಗು. ಹೇಗೂ ಮದುವೆ ದಿನಾಂಕಕ್ಕೆ ಇನ್ನೂ ಒಂದು ತಿಂಗಳು ಇದೆಯಷ್ಟೆ.” ಇಷ್ಟಾಗುವಾಗ ರಂಗಸ್ಥಳದಲ್ಲಿ ಹಠಾತ್ತನೆ ರಂಗು ಬದಲಾಯಿತು. ಉದ್ರಿಕ್ತ ಮಾವ ಗರ್ಜಿಸಿದರು, “ಮೋಹನಾ! ಇಲ್ಲಿಗೆ ಮದುವೆ ಆಗಿಹೋಯಿತೆಂದು ಬೀಗಬೇಡ. ಈ ಒಂದು ತಿಂಗಳು ನಾನು ನಿನ್ನ ವರ್ತನೆ, ಗುಣ, ನಡತೆ ಎಲ್ಲವನ್ನೂ ವಿಮರ್ಶಿಸುತ್ತಿರುವೆನು. ಯಾವಾಗ ಬೇಕಾದರೂ ಈ ಒಪ್ಪಂದವನ್ನು ರದ್ದುಗೊಳಿಸಬಲ್ಲೆ.”
“ಏನಂದಿರಿ ಮಾವಾ! ನೀವೇನೆಂದು ಭಾವಿಸಿದ್ದೀರಿ” ಎಂದು ಕಿರುಚಿದ ಮೋಹನ. ಮಾವ ಅಳಿಯಂದಿರ ನಡುವೆ ಜಗಳ ತಾರಕ್ಕೇರಿ ಕೈಕೈ ಮಿಲಾಯಿಸುವ ಮಟ್ಟಕ್ಕೂ ಹೋಯಿತು. ಆ ಹುಯ್ಲಿನಲ್ಲಿ ಕೃಷ್ಣಮಾವನಿಂದ ನನಗೂ ಮುಖಪ್ರಕ್ಷಾಳನೆ ಆಯಿತು. “I know what you are – you are an agent to export Indian girls to America. Hell with your ulterior motives.” ನನ್ನ ಸಹನೆ ಕಟ್ಟೆ ಒಡೆಯಿತು. ಈ ಮಾವ ಅಳಿಯರೆಂಬ ಇಬ್ಬರು ಹುಚ್ಚರ ನಡುವೆ ನನಗೆ ಉಳಿಗಾಲವಿಲ್ಲ ಎಂಬುದು ಸ್ಪಷ್ಟವಾಯಿತು. ನಾನು ಅಲ್ಲಿಂದ ಕಂಬಿಕಿತ್ತು ಒಂದೇ ಉಸಿರಿಗೆ ಓಡಿ ಸಿಕ್ಕಿದ ಬಸ್ ಹತ್ತಿ ನಿರ್ಗಮಿಸಿದೆ.
ಮರುದಿನ ಮಾವ ಕಾಲೇಜಿಗೆ ಬಂದರು. ನನ್ನನ್ನು ಸಮಾಧಾನಪಡಿಸುವುದು ಅವರ ಉದ್ದೇಶ, “ಮಗಳ ಮೇಲೆ ನನಗೆ ಅತಿಶಯ ವಾತ್ಸಲ್ಯ. ಅವಳು ಮದುವೆಯಾಗಿ ಹೋಗಿಬಿಡುವಳಲ್ಲ ಎಂಬ ಚಿಂತೆಯ ಕಾರಣವಾಗಿ ನಾನು ಹಾಗೆ ವರ್ತಿಸಿದ್ದು ಮಾತ್ರ. ಮತ್ತೆಲ್ಲ ಸರಿಹೋಯ್ತು. ಇವತ್ತು ಸಂಜೆ ಬಾ. ಸಂತೋಷವಾಗಿ ಮಾತಾಡಿ ಮುಂದುವರಿಯೋಣ.” ನಾನೇನೂ ಉತ್ತರ ಕೊಡಲಿಲ್ಲ. ಅವರ ಸಂಪರ್ಕ ಮುಂದುವರಿಸಲೂ ಇಲ್ಲ. ಸದ್ಯ ಒಂದು ಸಮಾಧಾನ: ಜಾನಕಿ-ಮೋಹನ ಮದುವೆ ನಡೆಯಲಿಲ್ಲ. ಮೋಹನನ ಹುಚ್ಚು ಕ್ರಮೇಣ ಬಿಗಡಾಯಿಸಿ ಒಂದು ದಿನ ಅವನು ತನ್ನ ತಂದೆಯ ಬಿಡಾರದಲ್ಲೇ ಮೃತನಾದನೆಂದು ತಿಳಿಯಿತು. ಈ ರೇಜಿಗೆ ವ್ಯವಹಾರದಲ್ಲಿ ತಪ್ಪು ಯಾರದು? ಮಾವನದೋ? ಅಳಿಯನದೋ? ಇದೊಂದು ಅಡಕತ್ತರಿ. ಘನೋದ್ದೇಶದಿಂದಲೇ ಆದರೂ ಇದರಲ್ಲಿ ಸಿಕ್ಕಿಹಾಕಿಕೊಂಡ ನನ್ನದೋ? “ಅಪರಾಧಿ ನಾನಲ್ಲ, ಅಪರಾಧವೆನಗಿಲ್ಲ” ಎಂದು ಭಾವಿಸುವುದು ನನಗೆ ಪ್ರಿಯವಾದರೂ ಇಂಥ ಸುಲಭೀಕರಣ ಹಿತಕರವೆನ್ನಿಸುವುದಿಲ್ಲ. ಒಂದು ಸಂತಸದ ಸಂಗತಿ ಎಂದರೆ ಮುಂದೆ ಜಾನಕಿಗೆ ಯೋಗ್ಯ ವರ ದೊರೆತು ಅವನೊಡನೆ ಮದುವೆಯಾಗಿ ಈ ದಂಪತಿಗಳು ಈಗ (೨೦೦೬) ಅಮೆರಿಕದಲ್ಲಿ ನೆಲಸಿರುವರಂತೆ. ಚೆನ್ನಾಗಿರಲಿ.
ಆವಗಾಳಿಯದಾವ ಘಾತವನು ಪೊತ್ತಿಹುದೊ,
ಆವ ಘಾತದೊಳಾವ ಮೃತ್ಯುವಿನ ನಗುವೊ
ಜೀವವಿಂತರಿಯದ ವಿಪತ್ತುಗಳ ಸರಮಾಲೆ
ಭಾವಿಸಾ ಸೂತ್ರಗಳ ಅಣಕುಬೊಮ್ಮ!
ಕನ್ನಡದ ಕರೆ
ಅಧ್ಯಾಯ ಅರವತ್ತೇಳು (ಮೂಲದಲ್ಲಿ ೩೯)
ಆಗ ತಾನೇ ತರಗತಿ ಪಾಠ ಮುಗಿಸಿ ಅಧ್ಯಾಪಕರ ಕೊಠಡಿಗೆ ಮರಳಿದ್ದೆ (ಪ್ರಾಯಶಃ ಆಗಸ್ಟ್ ೧೯೬೮). ನಮ್ಮ ಗಣಿತ ವಿಭಾಗದ ಮುಖ್ಯಸ್ಥ ಆರ್.ಗುರುರಾಜರಾಯರು ಕುತೂಹಲ ದೃಷ್ಟಿಯಿಂದ ನನ್ನನ್ನು ಪ್ರಶ್ನಿಸಿದರು, “ದೇಜಗೌರನ್ನು ನೀವು ಚೆನ್ನಾಗಿ ಬಲ್ಲಿರೇ? ನಿಮ್ಮನ್ನು ನೋಡಲೆಂದು ಅವರಿಲ್ಲಿಗೆ ಬಂದಿದ್ದರಲ್ಲಾ!?”
ಕನ್ನಡದ ಸೇನಾನಿ ಮತ್ತು ಮೈಸೂರು ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ದೇ.ಜವರೇಗೌಡರ ಹೆಸರು ನನಗೆ ಸುಪರಿಚಿತ, ಅವರ ಕೆಲವು ಕೃತಿಗಳನ್ನು ಓದಿದ್ದೆ, ಒಂದೆರಡು ಸಾರ್ವಜನಿಕ ಸಭೆಗಳಲ್ಲಿ ಭಾಷಣಗಳನ್ನು ಕೇಳಿಯೂ ಇದ್ದೆ. ಆದರೆ ಅವರಿಗೆ ಸುತರಾಂ ನನ್ನ ಹೆಸರು ಕೂಡ ತಿಳಿದಿರಬೇಕಾಗಿಲ್ಲ. ಅವರು ನನಗಿಂತ ಹಿರಿಯರು, ನಮ್ಮಿಬ್ಬರ ವಯಸ್ಸು, ಊರು, ಅಧ್ಯಯನ ವಿಷಯ, ಆಸಕ್ತಿ ಎಲ್ಲವೂ ವಿಭಿನ್ನ. ನಾನು ಮಡಿಕೇರಿಯವ, ಕಲಿತದ್ದು ಗಣಿತ – ಮಂಗಳೂರು ಮದ್ರಾಸು ನಗರಗಳಲ್ಲಿ, ಹವ್ಯಾಸ ಕನ್ನಡದಲ್ಲಿ ಜನಪ್ರಿಯ ವಿಜ್ಞಾನ ಲೇಖನ ರಚನೆ ಮತ್ತು ಪ್ರಕಟಣೆ ಇತ್ಯಾದಿ. ೧೯೬೫ರಿಂದ ಮಾತ್ರ ನಾನು ಬೆಂಗಳೂರು ನಿವಾಸಿ. ಸಹಜವಾಗಿ ನನ್ನಲ್ಲಿ ಆಶ್ಚರ್ಯವೂ ತುಸು ಅಳುಕೂ ಮೂಡಿದುವು: ಆ ಪ್ರಸಿದ್ಧರು ಈ ಸಾಮಾನ್ಯನನ್ನು ಅರಸಿ ಬಂದುದೇಕೆ? ನನ್ನ ಕನ್ನಡ ಬರೆಹಗಳಲ್ಲಿ ಏನಾದರೂ ತಪ್ಪು ನುಸುಳಿರಬಹುದೇ?
“ಅವರು ಸೆಂಟ್ರಲ್ ಕಾಲೇಜ್ ಗ್ರಂಥಾಲಯದಲ್ಲಿ ದೇಶಪಾಂಡೆಯವರ ಜೊತೆ ನಿಮ್ಮನ್ನು ಕಾಯುತ್ತಿರುವರಂತೆ. ನೀವಲ್ಲಿಗೆ ಒಡನೆ ಹೋಗಿ ಅವರನ್ನು ನೋಡಬೇಕಂತೆ” ಎಂದರು ಗುರುರಾಜರಾಯರು. ನಮ್ಮ ಸರ್ಕಾರೀ ಕಾಲೇಜಿನ ಎದುರಿನ ವಿಶಾಲ ಆವರಣವೇ ಸೆಂಟ್ರಲ್ ಕಾಲೇಜು. ಲಗುಬಗೆಯಿಂದ ಅಲ್ಲಿಗೆ ನಡೆದೆ, ದೇಶಪಾಂಡೆಯವರ ಎದುರು ಹಾಜರಾದೆ. ಅಲ್ಲೇ ಅವರ ಪಕ್ಕ ಕುಳಿತಿದ್ದರು ದೇಜಗೌ: ಮುಖದಲ್ಲಿ ಪ್ರಸನ್ನ ಭಾವ, ಏನನ್ನೋ ಸಾಧಿಸಿದೆನೆಂಬ ತೃಪ್ತಿ, ಇನಿತೂ ಬಿಗುಮಾನ ಅಥವಾ ಅನುಗ್ರಹದ ಛಾಯೆ ಇಲ್ಲ! ಸನ್ಮಿತ್ರ ಮತ್ತು ಕಾಯಕನಿಷ್ಠ ದೇಶಪಾಂಡೆ ತೀರ ಆತ್ಮೀಯತೆಯಿಂದ ಉದ್ಗರಿಸಿದರು, “Look my Lord! It comes!” “Do I look like a ghost?” ಎಂದು ನಾನು ಮರುಚಟಾಕಿ ಹಾರಿಸಿದೆ. “Yes! The Holy Ghost!” ಎಂದರವರು. ದೇಜಗೌ ನನ್ನನ್ನು ಸೆಂಟ್ರಲ್ ಕಾಲೇಜ್ ಎದುರಿನ ತೋಪಿಗೆ ಕರೆದೊಯ್ದರು. ರಸ್ತೆಯ ವಾಹನಾರ್ಭಟೆ, ಕಾಲೇಜ್ ಆವರಣದ ನಿಗಿನಿಗಿ ವಿದ್ಯಾರ್ಥಿ ಜಂಗುಳಿ ಎಲ್ಲವುಗಳಿಂದ ದೂರವಾದ ಏಕಾಂತ. ತುಂಬ ಆತ್ಮೀಯವಾಗಿ ಕನ್ನಡ ವಿಶ್ವಕೋಶದ ಯೋಚನೆ-ಯೋಜನೆ-ನಿರ್ವಹಣೆ ಬಗ್ಗೆ ಸೂಕ್ಷ್ಮ ಚಿತ್ರ ನೀಡಿದರು. ಸಾರಾಂಶವಿಷ್ಟು:
೧೯೫೪ರಲ್ಲಿ ಅಂದು ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಪ್ರಾಧ್ಯಾಪಕರೂ ಮುಖ್ಯಸ್ಥರೂ ಆಗಿದ್ದ ಕುವೆಂಪು ಕನ್ನಡಕ್ಕೊಂದು ಸಾಮಾನ್ಯ ವಿಶ್ವಕೋಶ ಪ್ರಕಟಿಸುವುದರ ಕನಸು ಕಂಡರು. ಅವರ ಆತ್ಮೀಯ ಶಿಷ್ಯ ಮತ್ತು ಸಹೋದ್ಯೋಗಿಯಾಗಿದ್ದ ದೇಜಗೌ ಅದರ ಬಗೆಗಿನ ಸವಿವರ ಯೋಜನೆ ಸಿದ್ಧಪಡಿಸಿದರು. ಇದನ್ನು ವಿಶ್ವವಿದ್ಯಾನಿಲಯ ಸರ್ಕಾರಕ್ಕೆ ಮಂಜೂರಾತಿಗಾಗಿ ಸಲ್ಲಿಸಿತು (೧೯೫೬). ಮುಖ್ಯ ಮಂತ್ರಿ ಕೆಂಗಲ್ ಹನುಮಂತಯ್ಯ ಇದಕ್ಕೆ ಅಸ್ತು ಮುದ್ರೆ ಒತ್ತಿದರು, ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆಗೆ ಕಾರ್ಯಗತಗೊಳಿಸಲು ಯುಕ್ತ ಆದೇಶ ಹೊರಡಿಸಿದರು. ಹೀಗೆ ಆ ಇಲಾಖೆಯ ಅಧೀನದಲ್ಲಿ ವಿಶ್ವಕೋಶ ಘಟಕ ಸ್ಥಾಪಿತವಾಯಿತು.
ಮುಂದೇನಾಯಿತು? ಕ್ರಮೇಣ ಈ ಘಟಕ ಸಾಕಷ್ಟು ಉಬ್ಬಿ ಬೆಳೆಯಿತು, ಕಡತಗಳು ಕೊಬ್ಬಿ ಸೊಕ್ಕಿದುವು, ಸಿಬ್ಬಂದಿ ಸಂಖ್ಯೆ ಹಿಗ್ಗಿ ಬಿರಿಯಿತು ಮತ್ತು ಕಛೇರಿ ಅಣಿಕಟ್ಟುಗಳು ಅರಬ್ಬನ ಒಂಟೆಯಂತೆ ಕೊಠಡಿಗಳನ್ನೆಲ್ಲ ಸ್ವಾಹಾಕರಿಸಿದುವು — ಎಲ್ಲವೂ ಪಾರ್ಕಿನ್ಸನ್ನನ ನಾಲ್ಕು ನಿಯಮಾನುಸಾರ. (ಆ ನಿಯಮಗಳಿವು: ೧. ಕೆಲಸ ಸದಾ ವೃದ್ಧಿಸುತ್ತ ಲಭ್ಯ ವೇಳೆಯನ್ನು ಕಬಳಿಸುತ್ತದೆ. ೨. ಖರ್ಚು ನಿರಂತರವಾಗಿ ಏರುತ್ತ ಆದಾಯವನ್ನು ಮೀರಿ ಜಿಗಿಯುತ್ತದೆ. ೩. ನಡೆಯುವ ಕೆಲಸ ಸಿಬ್ಬಂದಿ ಸಂಖ್ಯೆಯ ವಿಲೋಮಾನುಪಾತದಲ್ಲಿರುವುದು. ೪. ಒದಗಿಸಿರುವ ಎಲ್ಲ ಜಾಗವನ್ನೂ ಸರಕು ಸರಂಜಾಮುಗಳು ನುಂಗಿ ಇನ್ನಷ್ಟನ್ನು ಬೇಡುತ್ತಿರುವುವು.) ವಿಶ್ವಕೋಶದ ಪ್ರಕಟಣೆ ಮಾತ್ರ ಗಗನಕುಸುಮವಾಗಿತ್ತು! ಸರ್ಕಾರೀ ಕರ್ಮಕಾಂಡಕ್ಕೆ ಇನ್ನೂ ಒಂದು ನಿದರ್ಶನ. ಇದು ೧೯೬೮ರಲ್ಲಿದ್ದ ಪರಿಸ್ಥಿತಿ.
ಆ ವೇಳೆಗೆ ಕನ್ನಡಬದ್ಧ, ಕರ್ತವ್ಯಸಿದ್ಧ ಮತ್ತು ಉದ್ದೇಶಶುದ್ಧ ತ್ರಿಮೂರ್ತಿಗಳು ಕರ್ನಾಟಕ ಸರ್ಕಾರದ ನೇತಾರರಾದರು: ವೀರೇಂದ್ರ ಪಾಟೀಲ್ (ಮುಖ್ಯ ಮಂತ್ರಿ), ರಾಮಕೃಷ್ಣ ಹೆಗ್ಡೆ (ವಿತ್ತ ಮಂತ್ರಿ) ಮತ್ತು ಶಂಕರೇ ಗೌಡ (ಶಿಕ್ಷಣ ಸಚಿವ). ಶಂಕರೇ ಗೌಡ ಮತ್ತು ದೇಜಗೌ ಸಹಪಾಠಿಗಳು, ಮಿತ್ರರು ಹಾಗೂ ಕಾರ್ಯಧುರಂಧರರು ಕೂಡ. ದೇಜಗೌ ಜೊತೆ ಸಮಾಲೋಚಿಸಿ ಇವರ ಸಲಹೆ ಮೇರೆಗೆ ಶಿಕ್ಷಣಮಂತ್ರಿಗಳು ಯೋಜನೆಯ ನಿರ್ವಹಣೆ ಕುರಿತು ರಾಜ್ಯದ ನಾಲ್ಕೂ ವಿಶ್ವವಿದ್ಯಾಲಯಗಳ ಅಭಿಪ್ರಾಯ ಕೇಳಿದರು. ಕರ್ನಾಟಕ ಮತ್ತು ಕೃಷಿ ವಿಶ್ವವಿದ್ಯಾಲಯಗಳು ತಮ್ಮ ಅಸಹಾಯಕತೆಯನ್ನು ವ್ಯಕ್ತಪಡಿಸಿದುವು. ಅದೇ ತರುಣದಲ್ಲಿ ಸ್ಥಾಪನೆಗೊಂಡಿದ್ದ ಬೆಂಗಳೂರು ವಿಶ್ವವಿದ್ಯಾಲಯ ಬೃಹತ್ಸಂಖ್ಯೆಯ ಮತ್ತು ಭೂರಿ ವೇತನಶ್ರೇಣಿಯ ಸಿಬ್ಬಂದಿವರ್ಗವನ್ನು ಸೂಚಿಸಿ ಸರ್ಕಾರ ಅಷ್ಟು ವೆಚ್ಚ ಭರಿಸುವುದಾದಲ್ಲಿ ಈ ಕೆಲಸದ ಹೊಣೆ ವಹಿಸಿಕೊಳ್ಳಬಹುದೆಂಬ ಅಭಿಪ್ರಾಯ ವ್ಯಕ್ತಪಡಿಸಿತು. ಅದರಲ್ಲಿ ಸಂಪುಟದ ಪ್ರಕಟಣೆ ಬಗ್ಗೆ ಯಾವ ಸುಳುಹೂ ಇರಲಿಲ್ಲ.
ಇವೆಲ್ಲವುಗಳಿಗಿಂತ ಭಿನ್ನವಾಗಿ ಮೈಸೂರು ವಿಶ್ವವಿದ್ಯಾನಿಲಯ ಮುಂದಿಟ್ಟ ಕಾರ್ಯಸೂಚಿ ತೀರ ಸರಳವೂ ಪ್ರಾಯೋಗಿಕವೂ ಆಗಿತ್ತು. ನಾಲ್ಕು ಸಂಪಾದಕರು, ನಾಲ್ಕು ಉಪಸಂಪಾದಕರು ಮತ್ತು ಯುಕ್ತ ಕಚೇರಿ ಸಿಬ್ಬಂದಿ ಇವರ ವೇತನ ಹಾಗೂ ವಿಶ್ವಕೋಶದ ಮುದ್ರಣ ಖರ್ಚು ಇಷ್ಟನ್ನು ಸರ್ಕಾರ ಭರಿಸುವುದಾದಲ್ಲಿ ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕರ ಗೌರವ ಪ್ರಧಾನ ಸಂಪಾದಕತ್ವದಲ್ಲಿ ಸಮಗ್ರ ಯೋಜನೆಯನ್ನು ನಿರ್ದಿಷ್ಟ ಕಾಲಾವಧಿಯಲ್ಲಿ ಪೂರೈಸುವುದಾಗಿ ಆಶ್ವಾಸನೆ ನೀಡಿತು. ಅಲ್ಲದೆ ಒಂದನೆಯ ಸಂಪುಟವನ್ನು ಕೇವಲ ಒಂದು ವರ್ಷದೊಳಗೆ ಪ್ರಕಟಿಸುವುದಾಗಿ ಭರವಸೆಯನ್ನೂ ಕೊಟ್ಟಿತು. ದೇಜಗೌ ಮುಂದುವರಿಸಿದರು, “ಕಳೆದ ಮೇ ತಿಂಗಳಿನಲ್ಲಿ ನಾವು ಸರ್ಕಾರದ ಪರವಾಗಿ ಈ ಹೊಣೆ ವಹಿಸಿಕೊಂಡಿದ್ದೇವೆ. ಈಗ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಮೂರು ಸಂಪಾದಕರು – ಕಾರ್ಯನಿರ್ವಾಹಕ, ಸಂಯೋಜಕ ಹಾಗೂ ಮಾನವಿಕ – ಮತ್ತು ಬೆರಳೆಣಿಕೆಯ ಸಹಾಯಕರು ಹಗಲಿರುಳು ಎನ್ನದೆ ಕನ್ನಡದ ತೇರನ್ನು ಎಳೆಯುತ್ತಿದ್ದಾರೆ. ನಮಗೆ ಸಮರ್ಥ ವಿಜ್ಞಾನ ಸಂಪಾದಕರೊಬ್ಬರ ತುರ್ತು ಅಗತ್ಯವಿದೆ. ನೀವು ಬಂದು ಈ ಹೊಣೆ ವಹಿಸಿಕೊಳ್ಳಬೇಕೆಂಬುದು ನಮ್ಮೆಲ್ಲರ ಅಭಿಲಾಷೆ.”
ಈ ಹಠಾತ್ ಮತ್ತು ಅನಿರೀಕ್ಷಿತ ಆಹ್ವಾನ ನನ್ನನ್ನು ಮೂಕನನ್ನಾಗಿಸಿತು. ಹೆಚ್ಚೆಂದರೆ ನಾನೊಬ್ಬ ದಕ್ಷ ಗಣಿತೋಪನ್ಯಾಸಕ, ವಿಜ್ಞಾನಸಾಗರದ ದಂಡೆ ಮೇಲಿನ ಒಬ್ಬ ವೀಕ್ಷಕ, “ನನ್ನಿಯ ಕಡಲಿಡೀ ನನ್ನೆದುರು ಅನನ್ವೇಷಿತವಾಗಿ ಚೆಲ್ಲಿಕೊಂಡಿದೆ” ಎಂಬುದು ಯುಗಪ್ರತಿಭೆ ನ್ಯೂಟನ್ನನ ಉದ್ಗಾರ. ಅಂದ ಮೇಲೆ ನನ್ನ ಪಾಡೇನು? ಇದು ಹೇಗೆ ನನ್ನಿಂದಾಗದ ಕಾರ್ಯವೆಂದು ಅವರಿಗೆ ಪರಿಪರಿಯಾಗಿ ವಿವರಿಸಿದೆ. ಜೊತೆಗೆ ಆ ಮೊದಲೇ ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಅದರ ಕುಲಪತಿ, ಕುಲಸಚಿವ ಮತ್ತು ಗಣಿತಮುಖ್ಯಸ್ಥರ ಒತ್ತಾಯಕ್ಕೆ ಮಣಿದು ಅಲ್ಲಿಯ ಉಪನ್ಯಾಸಕ ಹುದ್ದೆಗೆ ಅರ್ಜಿಯನ್ನೂ ಸಲ್ಲಿಸಿದ್ದೆ. ಈ ವಚನವನ್ನು ಮುರಿಯಲೇ? ಇವೆಲ್ಲ ಸಂಗತಿಗಳನ್ನೂ ದೇಜಗೌ ಅವರಿಗೆ ವಿವರಿಸಿದೆ. ಆಗ ಅವರೊಂದು ದೊಡ್ಡ ಮಾತು ಹೇಳಿ ನನ್ನ ಹೃದಯ ಗೆದ್ದರು, “ಕುವೆಂಪು, ಶಿವರಾಮಕಾರಂತ, ಕು.ಶಿ. ಹರಿದಾಸಭಟ್ಟ, ಜೆ.ಆರ್. ಲಕ್ಷ್ಮಣರಾವ್ ಎಲ್ಲರೂ ಮುಕ್ತ ಕಂಠದಿಂದ ನಿಮ್ಮ ಹೆಸರನ್ನು ಸೂಚಿಸಿದ್ದಾರೆ. ಒಂದು ವಾರ ಯೋಚಿಸಿ ದಯವಿಟ್ಟು ಒಪ್ಪಿಗೆ ಕಾಗದ ಬರೆಯಿರಿ. ಇದು ಕನ್ನಡದ ಕರೆ.”
ನನ್ನ ಅನೇಕ ಸಹೋದ್ಯೋಗಿಗಳು ಸ್ಪಷ್ಟವಾಗಿ ಹೇಳಿದರು, “ಅಲ್ಲಿಯ ಜಾತೀಯತೆ ಮತ್ತು ಒಳಜಗಳಗಳ ಮಡುವಿನಲ್ಲಿ ಕೊಳೆಯಬೇಡಿ.” ಕೆಲವರು ತಾವಾಗಿಯೇ ಮುಂಬಂದು ಮೈಸೂರು ವಿಶ್ವವಿದ್ಯಾನಿಲಯದಲ್ಲಿ ತಾವು ಅನುಭವಿಸಿದ ಹಿಂಸೆ ಕ್ಷೆಭೆಗಳನ್ನು ವಿವರಿಸಿ, “ನಿಮ್ಮಂಥ ನೇರ ನುಡಿ ನಡೆಗಳ ಒಬ್ಬಾತ ಸುತರಾಂ ಅಲ್ಲಿ ಏಗಲಾರ” ಎಂದರು. ಇಂಥ ಎಲ್ಲ ಪುಕ್ಕಟೆ ಸಲಹೆಗಳಿಗೆ, ಅವು ಎಷ್ಟೇ ಪಾಮಾಣಿಕವಾದವಾಗಿದ್ದರೂ, ನನ್ನ ಪ್ರತಿಕ್ರಿಯೆ ಸದಾ ಒಂದೇ, “ಸ್ವಭಾವದಿಂದಲೂ ಸಂಸ್ಕಾರದಿಂದಲೂ ನಾನು ಅಂಥ ಎಲ್ಲ ಕಲ್ಮಷವಿದೂರ. ನನ್ನ ಅರ್ಹತೆ ಮತ್ತು ನೈತಿಕಬದ್ಧತೆ ಮಾತ್ರ ಪ್ರಸ್ತುತ. ನಾನು ಲೋಕವನ್ನು ನೋಡವುದು ಪಾರದರ್ಶಕ ಗಾಜಿನ ಮೂಲಕ.” ಮುಂದಿನ ವಾರ ದೇಜಗೌಅವರಿಗೆ ನಿರ್ಣಾಯಕವಾಗಿ ನಿರ್ಧಾರ ತಿಳಿಸಿದೆ: ಬೆಂಗಳೂರು ವಿಶ್ವವಿದ್ಯಾಲಯಕ್ಕೆ “ಕೊಟ್ಟ ಮಾತಿಗೆ ತಪ್ಪಿ ನಡೆಯೆನು,” ಆದ್ದರಿಂದ ಮೈಸೂರಿಗೆ ಬರಲಾರೆ.
(ಮುಂದುವರಿಯಲಿದೆ)
ನನ್ನ ಹೆಮ್ಮೆಯ ಗಣಿತ ಮೇಷ್ಟ್ರು ಜಿಟಿನ!!
ಗಣಿತ ಮಾತ್ರವಲ್ಲ ಶಿಸ್ತಿನಿಂದ “ಜೀವನ ರೀತಿಯನ್ನೂ” ಬೋಧಿಸುತ್ತಿದ್ದ ಪರಮ ಗುರು.
ಉತ್ತಮ ಲೇಖನ…. ಸದುದ್ದೇಶದಿಂದ ಕಾರ್ಯವೆಸಗಲು ಹೊರಟ ಇನ್ನೂ ಹಲವರಿಗೆ ಇಂತಹದೇ ಅನುಭವಗಳಾಗಿವೆ.