ಜಿಟಿನಾರಾಯಣ ರಾಯರ ‘ಮುಗಿಯದ ಪಯಣ’ ವಿ-ಧಾರಾವಾಹಿಯ ಕಂತು – ಏಳು
ಅಧ್ಯಾಯ ಹದಿನೈದು
ಫಲಿತಾಂಶ ಬಂದಾಗ ಕೊಡಗಿನ ವಿದ್ಯಾರ್ಥಿಗಳಾಗಿ ನಾವು ಮೂವರು ಮಾತ್ರ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದೆವು: ಒಂದನೆಯ ಸ್ಥಾನ ಕೆ.ಬಿ.ಸುಬ್ಬಯ್ಯನಿಗೂ ಎರಡನೆಯದು ನನಗೂ ಮೂರನೆಯದು ಶೆಣೈಗೂ ಲಭಿಸಿದ್ದುವು. ಆ ದಿನಗಳಂದು ಇಂಟರ್ಮೀಡಿಯೆಟ್ ಪಿಸಿಎಂ ಸಂಯೋಜನೆ ಎಲ್ಲ ಶಿಸ್ತುಗಳಿಗೂ ನೇರ ಪ್ರವೇಶ ಒದಗಿಸುತ್ತಿದ್ದ ಕೀಲಿಕೈ: ಮೆಡಿಕಲ್, ಎಂಜಿನಿಯರಿಂಗ್, ಅಗ್ರಿಕಲ್ಚರಲ್, ಬಿಎ ಮತ್ತು ಬಿಎ (ಆನರ‍್ಸ್) ಮುಂತಾದ ಅಧ್ಯಯನಶಾಖೆಗಳಿಗೆ.
ಇಂದಿನವರಂತೆ, ಅಥವಾ ತುಸು ಹೆಚ್ಚಾಗಿ, ಅಂದಿನ ನಮ್ಮೆಲ್ಲರ ಆಶಯವಿದ್ದುದು ಎಂಜಿನಿಯರಿಂಗ್‌ಗೆ ಸೇರಬೇಕು, ಹಿರಿಹುದ್ದೆ ಹಿಡಿಯಬೇಕು, ತೋರ ಸಂಬಳ ಗಳಿಸಬೇಕು ಮತ್ತು ಸುಖಜೀವನ ಬಾಳಬೇಕು ಎಂಬ ಘನಸಾಧನೆಯತ್ತ ಮಾತ್ರ. ಕೊಡಗಿನ ಅರ್ಹ ವಿದ್ಯಾರ್ಥಿಗಳಿಗೆ ಮದ್ರಾಸಿನ ಸರ್ಕಾರೀ ಎಂಜಿನಿಯರಿಂಗ್ ಮತ್ತು ಮೆಡಿಕಲ್ ಕಾಲೇಜುಗಳಲ್ಲಿ ತಲಾ ಒಂದು ಸ್ಥಾನ ಮೀಸಲಿತ್ತು. ನಾವು ಮೂವರೂ ಉಭಯ ಕಾಲೇಜುಗಳಿಗೂ ಕೊಡಗಿನ ಚೀಫ಼್ ಕಮಿಶನರ್ ಮೂಲಕ ಅರ್ಜಿ ಸಲ್ಲಿಸಿದೆವು. ಸುಬ್ಬಯ್ಯ ಬಿಟ್ಟ ಸ್ಥಾನ ನನಗೆ ದೊರೆಯುವುದು ಖಾತ್ರಿ ಎಂಬುದು ನನ್ನ, ಮಿಗಿಲಾಗಿ ತಂದೆಯವರ, ದೃಢ ವಿಶ್ವಾಸ. ಆದರೆ ಹೂರಣ ಹೊರಬಿದ್ದಾಗ ಕಾಲ ಮಿಂಚಿತ್ತು: ಸುಬ್ಬಯ್ಯನಿಗೆ ಆತ ಇಷ್ಟಪಟ್ಟ ಎಂಜಿನಿಯರಿಂಗಿಗೆ ಪ್ರವೇಶ ದೊರೆತಿತ್ತು. ನನಗೂ ಶೆಣೈಗೂ ತೊಪ್ಪಿ: ಸಸ್ಯವಿಜ್ಞಾನ ಬಿಎಸ್‌ಸಿಯಲ್ಲಿ ಅನುತ್ತೀರ್ಣಳಾಗಿದ್ದ ತಮ್ಮ ನೆಂಟಿತ್ತಿಯನ್ನು ಚೀಫ಼್ ಕಮಿಶನರ್ ಮೆಡಿಕಲ್‌ಗೆ ಆಯ್ದಿದ್ದರು. ನ್ಯಾಯಾಲಯದ ಕಟ್ಟೆ ಏರುವ ದಿನಗಳು ಅವಲ್ಲ. ಜೊತೆಗೆ ನನ್ನಪ್ಪ ಸರ್ಕಾರೀ ನೌಕರ ಕೂಡ.
ಆಗ ನನ್ನೆದುರು ಇದ್ದುದು ಎರಡೇ ಹಾದಿ: ಮಂಗಳೂರಿಗೆ ಹೋಗಿ ಬಿಎಸ್‌ಸಿ (ಪಿಸಿಎಂ) ತರಗತಿ ಸೇರುವುದು, ಇಲ್ಲವೇ ಮದ್ರಾಸಿಗೆ ತೆರಳಿ ಬಿಎ(ಆನರ‍್ಸ್) ಭೌತ ಅಥವಾ ಗಣಿತವಿಜ್ಞಾನ ವಿಭಾಗಕ್ಕೆ ದಾಖಲಾಗುವುದು. ಆ ವೇಳೆಗೆ ಮಂಗಳೂರು ಮತ್ತು ರಸಾಯನವಿಜ್ಞಾನ ಎರಡೂ ನನ್ನ ಪ್ರಥಮವೈರಿಗಳಾಗಿದ್ದುವು. ಹೀಗಾಗಿ ಮದ್ರಾಸಿನ ಲಯೋಲಾ ಮತ್ತು ಕ್ರಿಶ್ಚಿಯನ್ ಕಾಲೇಜುಗಳಿಗೆ ಭೌತವಿಜ್ಞಾನ ಆನರ‍್ಸ್‌ಗೆ ಅರ್ಜಿ ಗುಜರಾಯಿಸಿದೆ. ಉಭಯ ಕಾಲೇಜುಗಳಲ್ಲಿಯೂ ಭೌತವಿಜ್ಞಾನ ವಿಭಾಗಕ್ಕೆ ಸ್ಥಾನ ದೊರೆಯಲಿಲ್ಲ. ಕ್ರಿಶ್ಚಿಯನ್‌ನಲ್ಲಿ ಗಣಿತ ಆನರ‍್ಸ್‌ಗೆ ಪ್ರವೇಶವೇನೋ ಸಿಕ್ಕಿತು, ಆದರೆ ಹಾಸ್ಟೆಲ್ ಸೌಕರ್ಯ ನಾಸ್ತಿ. ವಾಸಕ್ಕೆ ನೆಲೆ ಎಲ್ಲಿ? ಮದ್ರಾಸು ನಗರದಿಂದ ಸುಮಾರು ೩೫ ಕಿಮೀ ದೂರದ ತಾಂಬರಮ್ ಎಂಬ ಹಳ್ಳಿಯಲ್ಲಿ ನಮ್ಮ ಕಾಲೇಜಿತ್ತು. ಇದೊಂದು ವಿಶಾಲವಾದ ದ್ವೀಪ. ಆವರಣದ ಹೊರಗೆ ಮನೆಗಳು ಇರಲಿಲ್ಲ. ಅಂದ ಮೇಲೆ ನಗರದಲ್ಲಿ ಕೊಠಡಿ ಹಿಡಿದು ದಿನವೂ ಕಾಲೇಜಿಗೆ ಪಯಣಿಸಿ ಶಿಕ್ಷಣ ಮುಂದುವರಿಸುವುದೊಂದೇ ವರ್ಗ. ಆದರೆ ಇದು ಆರ್ಥಿಕವಾಗಿ ಕೈಗೂಡದ ಸಾಹಸ. ಹೀಗಾಗಿ ಕಾಲೇಜಿನ ಭವ್ಯ ಕಟ್ಟಡದ ಹೊರ ಜಗಲಿಯನ್ನೇ ನನ್ನ ಶಯನಮಂದಿರ ಮತ್ತು ಅಧ್ಯಯನ ಕೊಠಡಿಯಾಗಿ ಮಾಡಿಕೊಂಡೆ. ಹಾಸ್ಟೆಲ್ಲಿನಲ್ಲಿ ಸ್ನಾನಾಹಾರಾದಿಗಳನ್ನು ಪೂರೈಸಿ ತರಗತಿಗಳಿಗೆ ಹಾಜರಾಗುತ್ತಿದ್ದೆ. ಇದೊಂದು ರೀತಿಯ ಗುಟ್ಟಿನ ವ್ಯವಹಾರ, ನನ್ನ ನೆರಳಿಗೇ ನಾನು ಅಂಜುತ್ತಿದ್ದ ಸನ್ನಿವೇಶ. ಇನ್ನು ತರಗತಿಗಳಲ್ಲಿಯ ಪಾಠ ಚೂರೂ ನನಗೆ ಅರ್ಥವಾಗುತ್ತಿರಲಿಲ್ಲ. ಅಧ್ಯಯನ ಬಿಟ್ಟು ಊರಿಗೆ ಮರಳಲೇ? ಕಾಪಿ಼ ತೋಟದಲ್ಲಿ ಗುಮಾಸ್ತಿಕೆಯೊಂದೇ ಗತಿ. ಎಸ್‌ಎಸ್‌ಎಲ್‌ಸಿಯಲ್ಲಿ ನನಗೆ ಪ್ರಥಮ ಸ್ಥಾನ ಬಂದಿದ್ದುದರಿಂದ ಇಂಟರ್ಮೀಡಿಯೆಟ್ ತರಗತಿಗಳಲ್ಲಿ ಪ್ರತಿ ತಿಂಗಳೂ ಕೊಡಗು ಸರ್ಕಾರದಿಂದ ರೂ ೧೫ ವಿದ್ಯಾರ್ಥಿ ವೇತನ ದೊರೆಯುತ್ತಿತ್ತು. ಡಿಗ್ರಿ ತರಗತಿಗಳಿಗಾಗುವಾಗ ಇದು ರೂ ೨೦ಕ್ಕೆ ಏರಿತ್ತು. ಇದೇನೂ ಸಣ್ಣ ಮೊತ್ತವಲ್ಲ — ಅಂದು- ಒಂದು ತಿಂಗಳ ಆಹಾರಕ್ಕೆ ಸಾಕಾಗುತ್ತಿತ್ತು. ವಾರ್ಡನ್‌ರನ್ನು ಅಂಜಿ ಅಳುಕಿ ಕಂಡು ನನ್ನ ದಾರುಣ ಪರಿಸ್ಥಿತಿಯನ್ನು ವಿವರಿಸಿ ಹಾಸ್ಟೆಲ್ಲಿನೊಳಗೆ ಸ್ಥಳಾವಕಾಶ ಕೊಡಿರೆಂದು ಬೇಡಿದೆ.
“ಈಗ ಎಲ್ಲಿ ವಾಸಿಸುತ್ತಿರುವೆ?” ಎಂಬ ಅವರ ತೀಕ್ಷ್ಣ ಪ್ರಶ್ನೆಗೆ ಸತ್ಯವನ್ನೇ ನುಡಿದೆ. ಅವರ ಪ್ರತಿಕ್ರಿಯೆ ತೀವ್ರ, “ತಿರುಕರಿಗೆ ನಮ್ಮ ಕಾಲೇಜಿನಲ್ಲಿ ನೆಲೆ ಇಲ್ಲ. ನೀನು ತತ್‌ಕ್ಷಣ ಕಾಲೇಜ್ ಆವರಣದ ಹೊರಗೆ ಬೇರೆ ಕೊಠಡಿ ಹಿಡಿದು ಬಂದು ನನಗೆ ತಿಳಿಸಬೇಕು. ಇಲ್ಲವಾದರೆ ಕಾಲೇಜ್ ಬಿಟ್ಟು ತೊಲಗಬೇಕು.”
ಸಂಜೆ ಕಾಲೇಜ್ ಆವರಣದಲ್ಲಿಯ ಮರಗಾಡಿಗೆ ಹೋದೆ, ದೊಡ್ಡ ಮರದಡಿ ಒಂಟಿಯಾಗಿ ಕುಳಿತೆ, ಮುಂದೇನು, ಕರಾಳ ಕತ್ತಲೆ ಎಂಬ ಚಿಂತೆಯಿಂದ ಬಾಧಿತನಾಗಿದ್ದೆ. ಆಗೊಂದು ಪವಾಡಸದೃಶ ಘಟನೆ ಸಂಭವಿಸಿತು. ನನ್ನ ಮರದೆಡೆಗೆ ದೂರದಲ್ಲಿ ಯಾರೋ ಬರುತ್ತಿದ್ದರು, ಇಲ್ಲ, ಬಂದೇ ಬಿಟ್ಟರು. ಇಬ್ಬರಿಗೂ ಪರಮಾಶ್ಚರ್ಯ, “ಏನು ಜೀಟಿ ನೀವಿಲ್ಲಿ?” ಅವರ ಪ್ರಶ್ನೆ ಕನ್ನಡದಲ್ಲಿ! “ನೀವೇನಿಲ್ಲಿ ದೇವರಾವ್?” ನನಗಂತೂ ನಂಬಲಾಗದ ಅನುಭವವದು. ಮಂಗಳೂರಿನಲ್ಲಿ ಇದ್ದದ್ದು ಕೇವಲ ಮುಖ ಪರಿಚಯ. ಆದರೆ ಬದಲಾದ ಈ ಪರಕೀಯ ಪರಿಸರದಲ್ಲಿ ನಾವಿಬ್ಬರೂ ಚಿರಕಾಲದಿಂದಲೂ ಆತ್ಮೀಯ ಮಿತ್ರರೋ ಎಂಬಂತೆ ಮನಬಿಚ್ಚಿ ಹರಟೆ ಹೊಡೆದೆವು. ಅವರು ಸ್ವಂತ ಇಷ್ಟದಿಂದ ಸಕಾಲದಲ್ಲಿ ಕ್ರಿಶ್ಚಿಯನ್ ಕಾಲೇಜಿನ ಇಂಗ್ಲಿಷ್ ಆನರ‍್ಸ್ ವಿಭಾಗ ಸೇರಿದ್ದರು, ಹಾಸ್ಟೆಲ್‌ನಲ್ಲಿ ಕೊಠಡಿಯೂ ದೊರೆತಿತ್ತು. ನನ್ನ ಪರಿಸ್ಥಿತಿ ತದ್ವಿರುದ್ಧ.
“ಮುಂದೇನು ಮಾಡಬೇಕೆಂದು ಯೋಚಿಸಿದ್ದೀರಿ?” ಅವರ ಪ್ರಶ್ನೆ. “ಊರಿಗೆ ಮರಳುವುದು. ಮತ್ತೇನೆಂಬುದು ತಿಳಿಯದು.” “ನಿಮ್ಮ ಸಹಪಾಠಿ ಈ ದೇವರಾಯ ಇನ್ನೂ ಬದುಕಿದ್ದಾನೆ!” ನಾನು ಬೆರಗಾಗಿ ಅವರ ಮೋರೆ ದಿಟ್ಟಿಸಿದೆ. ಅವರು ಆದೇಶಿಸಿದರು, “ಈ ಕ್ಷಣ ಏಳಿ, ನಿಮ್ಮ ಎಲ್ಲ ಸರಂಜಾಮುಗಳನ್ನು ತೆಗೆದುಕೊಂಡು ಬನ್ನಿ, ಒಂದನೆಯ ಮಾಳಿಗೆಯಲ್ಲಿರುವ ನನ್ನ ಒಂಟಿ ಕೊಠಡಿ ಸಾಕಷ್ಟು ದೊಡ್ಡದಾಗಿದೆ, ಅದರೊಳಗೆ ಮಡಗಿ, ಮತ್ತೇನು ಮಾಡಬೇಕೆಂಬುದನ್ನು ಯೋಚಿಸೋಣ, ನೀವು ಯಾವುದೇ ಕಾರಣಕ್ಕೂ ಊರಿಗೆ ಮರಳತಕ್ಕದ್ದಲ್ಲ.”
ಎದ್ದೆವು. ಇಬ್ಬರೂ ಸೇರಿ ನನ್ನ ಗಂಟು ಮೂಟೆಗಳನ್ನು ಅವರ ಕೊಠಡಿಗೆ ಸಾಗಿಸಿದೆವು. ಅಷ್ಟರಲ್ಲಿ ಕತ್ತಲೆ ಕವಿದಿತ್ತು. ರಾತ್ರಿ ೮ ಗಂಟೆಗೆ ಹಾಸ್ಟೆಲ್ ದ್ವಾರವನ್ನು ಬಂದ್ ಮಾಡುತ್ತಿದ್ದರು. ಆ ಮೊದಲೇ ಹಕ್ಕಿಗಳು (ಹಾಸ್ಟೆಲ್ ನಿವಾಸಿಗಳು) ಗೂಡು ಸೇರಿ ಊಟ ಮುಗಿಸಿ, ತಮ್ಮ ಕೊಠಡಿ ಕದ ತೆರೆದಿಟ್ಟು ಅಧ್ಯಯನಮಗ್ನರಾಗಬೇಕಿತ್ತು, ಒಳಗಿದ್ದ ಅತಿಥಿಗಳು ನಿರ್ಗಮಿಸಲೇಬೇಕಿತ್ತು. ವಾರ್ಡನ್ ಮಹಾಶಯರು ೮-೧೫ರಿಂದ ೮-೩೦ರ ನಡುವೆ ಪ್ರತಿಯೊಂದು ಕೋಣೆಯನ್ನೂ ಪರೀಕ್ಷಿಸಿ ತಪಾಸಿಸುತ್ತಿದ್ದರು. ಹಾಗಾದರೆ ಅವರ ತಪಾಸಣೆಯಿಂದ ನಾನು — ನಿಯಮವಿರುದ್ಧವಾಗಿ ಹಾಸ್ಟೆಲಿನೊಳಗಿರುವ ಆಗಂತುಕ — ಪಾರಾಗುವುದು ಹೇಗೆ?
ನಾನೆಂದೆ, “ನನ್ನಿಂದಾಗಿ ನಿಮಗೆ ವೃಥಾ ತೊಂದರೆ.” “ನಿಮಗೆ ವ್ಯವಹಾರಜ್ಞಾನವೇನೂ ಇಲ್ಲ! ನೋಡಿ, ಇದು ಮನುಷ್ಯಕೃತ ನಿಯಮ, ಆದರೆ ಮನುಷ್ಯವಿರೋಧಿ. ನಾವಿದನ್ನು ಉಲ್ಲಂಘಿಸಿದರೆ ಅದೇನೂ ನೈತಿಕ ಅಪರಾಧವಾಗುವುದಿಲ್ಲ.” ಅವರೇ ನನಗೊಂದು ಸುಲಭೋಪಾಯ ಸೂಚಿಸಿದರು. ಹಿಮಾಲಯಭಾರ ಆ ಗಳಿಗೆ ಮಲ್ಲಿಗೆಹಗುರವಾಗಿ ನಿರುಮ್ಮಳನಾದೆ. ರಾತ್ರಿ ೮ ಗಂಟೆಗೆ ಮೊದಲೇ ಕೋಣೆ ಬಿಟ್ಟೆ, ನಿರ್ಮಲಮಂದಿರ (lavatory) ಹೊಕ್ಕೆ, ನಿಶ್ಶಬ್ದದಲ್ಲಿ ತಪಸ್ಸ್ವಾಧ್ಯಾಯನಿರತನಾದೆ! ವಾರ್ಡನ್-ತಪಾಸಣೆ ಮುಗಿದನಂತರ ದೇವರಾಯರು ಪೂರ್ವನಿಶ್ಚಿತ ಏರ್ಪಾಡಿನಂತೆ ಅಲ್ಲಿಗೆ ಬಂದು ಕದತಟ್ಟುತ್ತಿದ್ದರು, ನಾನು ಹೊರಬಂದು ಕೊಠಡಿ ಸೇರಿ ಕದಮುಚ್ಚಿ ಇಬ್ಬರೂ ಅಧ್ಯಯನಮಗ್ನರಾಗುತ್ತಿದ್ದೆವು. ಮಲಗಲು ನಾನು ಟಾರ್ಸಿಗೆ (open terrace) ಹೋಗುತ್ತಿದ್ದೆ. ಹಸಿವಿಗೆ ಹಾಸ್ಟೆಲ್ ಮೆಸ್, ತೃಷೆಗೆ ಕೊಳಾಯಿ, ಶಯನಕೆ ಟಾರ್ಸಿ, ಮಾಡಿಗೆ ಆಗಸ, ದೇವರಾಯರಲ್ಲಿ ಕೃಪಾಶ್ರಯ ಈ ಪ್ರಕಾರ ನನ್ನ ಆ ಕಠಿಣ ‘ಭೂಗತ’ ದಿನಗಳು ಸಂದುವು? ಇಲ್ಲ.
ಆ ಒಂದು ಕರಾಳ ರಾತ್ರಿ, ಹೊತ್ತಲ್ಲದ ಹೊತ್ತಿಗೆ ಹೊರಗಿನ ಜಗಲಿಯಲ್ಲಿ ದುಷ್ಮನ್ ದೃಢ ಹೆಜ್ಜೆ ಕುಕ್ಕಿ ನಮ್ಮ ಕೊಠಡಿಯತ್ತ ಬರುತ್ತಿದ್ದುದು ಕೇಳಿ ನಡುಗಿದೆವು. ಕದ ಮುಚ್ಚಿ ಓದುತ್ತಿದ್ದೆವಾದರೂ ವಾರ್ಡನ್ ಬಂದು ತೆರೆಯಲು ಆಜ್ಞೆ ಮಾಡಿದರೆ ನನಗೆಲ್ಲಿ ರಕ್ಷಣೆ, ಮಿಗಿಲಾಗಿ, ನನ್ನ ಆಶ್ರಯದಾತನ ಗತಿ ಏನು? ಯಮನ ಕಠೋರ ವಾಣಿ ನಮ್ಮ ಬೆನ್ನೆಲುಬುಗಳನ್ನು ನಡುಗಿಸಿದುವು, “Deva Rao! Open the door.”
ಇನ್ನೇನು ನಾವಿಬ್ಬರೂ ಬಲೆಗೆ ಬೀಳುವುದು ಖಾತ್ರಿ? ಆ ಗಳಿಗೆ ದೇವರಾಯರೇನೋ ಕೈಕರಣಮಾಡಿ ನನಗೊಂದು ಗುಪ್ತ ಸಂದೇಶವಿತ್ತರು, ಮತ್ತು ಕದ ತೆರೆಯಲು ತುಸು ನಿಧಾನವಾಗಿ ಹೋದರು.
ವಾರ್ಡನ್ ಗುಡುಗಿದರು, “Why so much time? What were you doing?”
“I was immersed in my studies, sir.”
“Where ’s the other person?”
“Who? I’m alone here.”
“Are you sure?”
“Of course what doubt is there, sir?”
“Well! Deva Rao. I believe you. Others had told me that you were harbouring someone else. You know that is illegal. We could just dismiss you from the college itself for such an offence.”
ಅಷ್ಟು ಹೊತ್ತೂ ನಾನೆಲ್ಲಿದ್ದೆ? ಒಂದನೆಯ ಮಾಳಿಗೆಯಲ್ಲಿದ್ದ ನಮ್ಮ ಕೋಣೆಯ ಕಿಟಕಿಗೆ ಸರಳುಗಳಿರಲಿಲ್ಲ. ದೇವರಾವ್ ಸೂಚಿಸಿದ ಹಿಕಮತ್ತಿನಂತೆ ನಾನು ಆ ಮುಕ್ತ ಗವಾಕ್ಷಿಯ ಮೂಲಕ ನುಸುಳಿ, ಹೊರಗಿನ ಕೆಳಚೆಜ್ಜಾದ ಮೇಲೆ ತಂಪು ಗಾಳಿಗೆ ಮೈಯೊಡ್ಡಿ ಮುದುಡಿ ಅಸುಖಾಸನನಾಗಿದ್ದೆ. ಆದರೆ ನನ್ನ ಸ್ಥಿತಿ ಮಾತ್ರ “ನೀರೊಳಗಿರ್ದುಂ ಬೆಮರ್ದನ್” ಎಂಬಂತಿತ್ತು. ಸದ್ಯಕ್ಕೆ ಬಚಾವ್. ಆದರೆ ಬಲು ಬೇಗನೆ ವಾರ್ಡನ್ ನಮ್ಮ ‘ಕಾರಸ್ಥಾನ’ವನ್ನು ಪತ್ತೆ ಹಚ್ಚುವುದು ಖಾತ್ರಿ. ಆಗ ದೇವರಾಯರ ಸ್ಥಿತಿ ನೆನೆದು ನಡುಗಿದೆ. ಮರುದಿನ ತಾಂಬರಮಿನ ಬಹುತೇಕ ನಿರ್ಜನ ಆದರೆ ಹಂದಿ, ಕೋಳಿ, ಕತ್ತೆ, ದನಗಳ ರೊಪ್ಪಗಳಂತಿದ್ದ ಗುಡಿಸಲುಗಳ ಹಿಂಡಿನಲ್ಲಿ ಒಂದು ಖೋಲಿ ಹಿಡಿದೆ. ರಾತ್ರಿ ವಾಸ ಮಾತ್ರ ಅಲ್ಲಿ. ಆಹಾರ, ಸ್ನಾನ, ಅಧ್ಯಯನ ಎಲ್ಲವೂ ಕಾಲೇಜ್ ವಲಯದಲ್ಲಿ. ನಿಜ, “ಅಲ್ಲಿದೆ ನನ್ನ ಮನೆ, ಇಲ್ಲಿ ಬಂದೆ ಸುಮ್ಮನೆ!” ಜೊತೆಗೆ, “ಅಂಜಿಕಿನ್ಯಾತಕಯ್ಯಾ ಸಜ್ಜನರಿಗೆ, ಅಂಜಿಕಿನ್ಯಾತಕಯ್ಯಾ?
ಸರಿ, ಸದ್ಯಕ್ಕೇನೋ ದೊಣ್ಣೆ ಬೀಸಿನಿಂದ ಪಾರಾಗಿದ್ದೆ. ಆದರೆ ಕಾಲೇಜಿನ ಪಾಠ ಪ್ರವಚನಗಳಲ್ಲಿ ನಾನು ಪೂರ್ತಿ ಸೋತಿದ್ದೆ: ಅನನುಭವಿ ಯುವ ಉಪನ್ಯಾಸಕರು ಬೇಕಾಬಿಟ್ಟಿ ತರಗತಿಗೆ ಬಂದು ಯಾಂತ್ರಿಕವಾಗಿ (ಪಠ್ಯ ಪುಸ್ತಕ ನೋಡುತ್ತ) ಏನನ್ನೋ ಗುನುಗುತ್ತಿದ್ದಾಗ ಯಾವ ಲೆಕ್ಕವೂ ನನ್ನ ತಲೆಗೆ ಹತ್ತುತ್ತಲೇ ಇರಲಿಲ್ಲ. ಆಗ ಗೀಚಿದ ಕಗ್ಗಗಳು ಕೆಲವು ನೆನಪಿವೆ (ಮುಂದೊಂದು ದಿನ ನಾನೇ ಯುವ ಅನನುಭವಿ ಉಪನ್ಯಾಸಕನಾಗಿದ್ದಾಗ ನನ್ನ ವಿದ್ಯಾರ್ಥಿಗಳನ್ನು ರಂಜಿಸಲು ಇವನ್ನು ಉಲ್ಲೇಖಿಸುವುದಿತ್ತು):
ನಿದ್ದೆ ಬರುತಿದೆ ಪಾಠ ಕೇಳಲು
ಬುದ್ಧಿಯೆಲ್ಲವು ಮಂದವಾಗಿದೆ
ಸದ್ದ ಕಿವಿಗಳು ಕೇಳಲೊಲ್ಲವು ಕರದ ಲೆಕ್ಕಣಿಕೆ
ಉದ್ಯಮದಿ ತೊಡಗಿರದು ಕಣ್ ತೆರೆ-
ದಿದ್ದರೂ ವಸ್ತುಗಳ ನೋಡದು
ಬದ್ಧ ವೈರಿಗು ಬೇಡವಿಂತಹ ಶಿಕ್ಷೆ ಹಾದೇವll
ಲೆಕ್ಚರರು ಭರದಿಂದ ಪಾಠವ-
ನುಚ್ಚರಿಸುತಿರಲಗಲಮಾಗಿಯೆ
ಬಿಚ್ಚಿ ಕಂಗಳು ನೋಡುವುವು ಅವರನ್ನು ಮನಮಾತ್ರ
ಇಚ್ಛೆ ಬಂದೆಡೆಗೋಡಿ ಕಾಲವ
ವೆಚ್ಚಗೈವುದು ಪ್ರಶ್ನೆ ಕೇಳ್ದೊಡೆ
ಬೆಚ್ಚಿ ಬೀಳುತ ಏನನಾದರು ಗಳಹತೊಡಗುವುದುll
ಲೆಕ್ಕವನು ಕಲಿಯುವುದರಲಿ ನನ-
ಗಕ್ಕರೆಯು ರವೆಯಷ್ಟು ಬಾರದು
ನಕ್ರಪೂರಿತ ಮಡುವಿದರೊಳಗೆ ತಳ್ಳಿ ನನ್ನನ್ನು
ನಕ್ಕು ನಲಿದಿದೆ ದುರುಳ ವಿಧಿ ಹಾ
ದಕ್ಕದೆನಗೀ ದೊಂಬರಾಟವು
ಬಿಕ್ಕೆ ಬೇಡುತ ಹೊಟ್ಟೆ ಹೊರೆವೆನು ಕರುಣಿಸೈ ದೇವಾ!ll
೧೬. ನಮ್ಮ ಅಸ್ಮಿತೆಗೆದುರಾದ ಸವಾಲು
ಇಂಗ್ಲಿಷ್ ಆನರ‍್ಸ್ ತರಗತಿಯಲ್ಲಿ ಗುರುಮೂರ್ತಿ ಎಂಬ ತೆಲುಗು ಮನೆಮಾತಿನ ಅಪ್ಪಟ ತಮಿಳ ದೇವರಾಯರ ಸಹಪಾಠಿ ಮಿತ್ರ. ಹೀಗಾಗಿ ನನಗೂ ಸ್ನೇಹಿತನಾದ. ನಾವು ಮೂವರೂ ಆ ದಿನಗಳಂದು ತಾಂಬರಂ ಸುತ್ತುಮುತ್ತಲಿನ ಗುಡ್ಡ ಬೆಟ್ಟ ತೆಮರು ಗದ್ದೆ ಎಲ್ಲ ಅಲೆದದ್ದೂ ಅಲೆದದ್ದೇ. ಆಗ ನಮ್ಮೊಳಗೆ ಬಹಳವಾಗಿ ಚರ್ಚಿತವಾಗುತ್ತಿದ್ದ ವಿಷಯ ದೇವರು, ಧರ್ಮ, ಆಚರಣೆ ಮತ್ತು ಪೂಜೆ. ಕರ್ಮಠ ಬ್ರಾಹ್ಮಣ ಸಂಪ್ರದಾಯದ ಶಿಶುವಾದ ನಾನು ಆ ವೇಳೆಗೆ (ಪ್ರಾಯ ೧೮) ಬಹುತೇಕ ಉದಾಸೀನನಾಗಿದ್ದೆ, ನಿರೀಶ್ವರತೆಯತ್ತ ಮಾಲುತ್ತಿದ್ದೆ, “ದಯೆಯೇ ಧರ್ಮದ ಮೂಲವಯ್ಯಾ” ಎನ್ನುವ ತತ್ತ್ಸ್ವದಿಂದ ಆಕರ್ಷಿತನಾಗಿದ್ದೆ. ಈ ಬಗ್ಗೆ ಯಾವುದೇ ಸಿದ್ಧಾಂತ ಅಥವಾ ತರ್ಕ ತಿಳಿದಿರಲಿಲ್ಲ. ಗುರುಮೂರ್ತಿ ಪೂರ್ತಿ ನಿರುದ್ವಿಗ್ನ, ನಿಶ್ಚಿಂತ. ದೇವರಾರಾಯರಾದರೋ ಉಗ್ರ ಭಗವಂತವೈರಿ, “ಚೂಟಿ ಮಂದಿ ಸ್ವಾರ್ಥಸಾಧನೆಗಾಗಿ ದೇವರೆಂಬ ಕಲ್ಪನೆಯನ್ನು ಹುಟ್ಟುಹಾಕಿ ಅದರ ಸುತ್ತ ಧರ್ಮ, ಆಚರಣೆ ಮುಂತಾದ ಭದ್ರ ಬೇಲಿ ಕಟ್ಟಿದ್ದಾರೆ. ನಾನಂತೂ ಶತ ನಾಸ್ತಿಕ. ಯೋಗ್ಯ ವ್ಯಕ್ತಿಯಾಗಿರಬೇಕೆಂಬುದೇ ನನ್ನ ಸಂಕಲ್ಪ ಮತ್ತು ಪ್ರಯತ್ನ.” ಹೀಗೆ ಗುರುಮೂರ್ತಿ ಮತ್ತು ನನ್ನ ಅಸ್ಪಷ್ಟ ಚಿಂತನೆಗೆ ದೇವರಾವ್ ಖಚಿತ ಮುಖವಾಣಿ ಆಗಿದ್ದರು.
ಕಾಲೇಜಿನ ಮೊದಲನೇ ಆನರ‍್ಸ್ ತರಗತಿಯಲ್ಲಿ ವಾರಕ್ಕೊಂದು ಸಲ ಎಲ್ಲ ವಿಭಾಗಗಳವರೂ ಒಂದೇ ಉಪನ್ಯಾಸ ಕೊಠಡಿಯಲ್ಲಿ ಸೇರುತ್ತಿದ್ದೆವು — ಸುಮಾರು ೨೦೦ ಮಂದಿ. ಕ್ರಿಶ್ಚಿಯನ್ ಧಾರ್ಮಿಕ ಬೋಧನೆಯ ತರಗತಿಯದು, ಹೆಸರು ಮಾತ್ರ Moral Instruction (MI), ನಮ್ಮ ಪರಿಭಾಷೆಯಲ್ಲಿ Immoral Mortification (IM). ಈ ವಿಷಯ ಕುರಿತಂತೆ ನಾವೊಂದು ಆಂತರಿಕ ಪರೀಕ್ಷೆಯನ್ನೂ ಕಡ್ಡಾಯವಾಗಿ ತೆಗೆದುಕೊಳ್ಳಬೇಕಿತ್ತು. ಸದ್ಯ ಯಾರನ್ನೂ ಅನುತ್ತೀರ್ಣಗೊಳಿಸುತ್ತಿರಲಿಲ್ಲ. ಆದರೆ ಸರಾಸರಿಯಲ್ಲಿ ಅಧಿಕ ಅಂಕ ಗಳಿಸಿದವರಿಗೆ ಆಕರ್ಷಕ ಬಹುಮಾನವೀಯುತ್ತಿದ್ದರು. ಕ್ರಿಶ್ಚಿಯನ್ ಧರ್ಮಶಾಸ್ತ್ರದಲ್ಲಿ ಡಾಕ್ಟೊರೇಟ್ ಗಳಿಸಿದ್ದ ವಾರ್ಡನ್ ಮಹಾಶಯರು ನಮ್ಮ ಉಪನ್ಯಾಸಕರು. ಇವರಿಗೆ ರೆವರೆಂಡ್ ಎಂಬ ಬಿರುದು ಕೂಡ ಇತ್ತು.
ಆ ತರಗತಿಯಲ್ಲಿಯ ಪಾಠವಸ್ತು ಬೈಬಲ್, ವಿವರಣೆಯ ಧಾಟಿ ಕ್ರಿಶ್ಚಿಯನ್ ಧರ್ಮದ ವೈಭವೀಕರಣ ಮತ್ತು ಹಿಂದೂ ಸಂಪ್ರದಾಯಗಳ ಪರೋಕ್ಷ ನಿಂದನೆ. ವಿದ್ಯಾರ್ಥಿಗಳಲ್ಲಿ ಹೆಚ್ಚಿನವರು ಹಿಂದೂಗಳು. ಸಹಜವಾಗಿ ನಮಗೆಲ್ಲ ತುಂಬ ಇರಸುಮುರಸಾಗುತ್ತಿತ್ತು. ಇಂತಿದ್ದರೂ ತರಗತಿಯಲ್ಲಿ ಬಾಯಿಬಿಡಲು ಅಂಜಿಕೆ, ಸರಕೂ ಇರಲಿಲ್ಲ. ಹೀಗೆ ನಾಲ್ಕೈದು ಪಾಠಗಳು ಸಂದುವು. ಗುರುಮೂರ್ತಿ ಕುದ್ದ, ನಾನು ಕ್ರುದ್ಧ, ಆದರೆ ತರಗತಿಯಲ್ಲಿ ಎದ್ದೇಳಲು ಇಬ್ಬರೂ ಅಸಿದ್ಧ! ನಮ್ಮ ಪ್ರತಾಪವೆಲ್ಲ ಹೊರಗೆ. ದೇವರಾಯರ ಜೊತೆ ವಾದಮಾಡಿದ್ದೇ ಮಾಡಿದ್ದು. ಮೂವರೂ ಬೈಬಲನ್ನು ಪಠಿಸಿ ಅದರ ಸಾರ ಹೀರಲು ಪ್ರಯತ್ನಿಸಿದೆವು.
ಅದೊಂದು ತರಗತಿಯಲ್ಲಿ ಗಳಿಗೆಬಟ್ಟಲು ತುಂಬಿಬಂದಿತ್ತು! ಅಂದಿನ ಪಾಠದಲ್ಲಿ ರೆವರೆಂಡ್ ಮಹಾಶಯರು Parable of the Sower ಅಧ್ಯಾಯವನ್ನು ಓದಿ ವಿವರಿಸಲು ತೊಡಗಿದರು: And that which fell among thorns are they, which when they have heard, go forth, and are choked with cares and riches and pleasures of this life, and bring no fruit to perfection (St Luke VIII 14).
ಇದರಲ್ಲಿಯ thorns ಮತ್ತು they ಪದಗಳ ಮೇಲೆ ವ್ಯಾಖ್ಯಾನ ಮಾಡುತ್ತ ಇತರ ಧರ್ಮೀಯರ ನಂಬಿಕೆ ಆಚರಣೆಗಳ ವಿರುದ್ಧ ನೇರ ವಾಗ್ದಾಳಿ ಮಾಡಿದರು. ನಾವೆಲ್ಲ ಪಿಳಿಪಿಳಿ, ಆದರೆ ದೇವರಾಯರು ಅಪವಾದ. ಅವರೆದ್ದರು, ಬೈಬಲಿನ ಆ ಅಧ್ಯಾಯದ ಪೂರ್ಣ ಪಾಠವನ್ನು ನೆನಪಿನಿಂದಲೇ ಹೇಳಿ ಅದರ ವಾಚ್ಯ, ಸೂಚ್ಯ ಮತ್ತು ಧ್ವನಿತ ಅರ್ಥಗಳನ್ನು ಸೌಂಯವಾಗಿ ಮತ್ತು ರೆವರೆಂಡರಿಗಿಂತ ಸ್ಫುಟವಾಗಿ ವಿವರಿಸಿದರು! ರೆವರೆಂಡರಿಗೆ ಪರೋಕ್ಷ ಮುಖಪ್ರಕ್ಷಾಳನೆ. ಅವರು, “ಹಾಗೆಯೂ ವ್ಯಾಖ್ಯಾನಿಸಬಹುದು” ಎನ್ನುತ್ತ ಹಠಾತ್ತನೆ ನಿಷ್ಕ್ರಮಿಸಿಯೇಬಿಟ್ಟರು. ನಮಗೆಲ್ಲ ಖುಷಿಯೋ ಖುಷಿ. ಪರಧರ್ಮ ದೂಷಣೆ ಖಂಡನೆ ನಿಂದನೆಗಳೇ ಸ್ವಧರ್ಮ ಸ್ಥಾಪನೆ ಸ್ಥಿರೀಕರಣಗಳ ಮೂಲವಾಗಿರಬಹುದೇ?
೧೭. ವಿಮೋಚನೆ ಮತ್ತು ನಿರ್ಮೋಚನೆ
ಅಂದು ಮದ್ರಾಸಿನಲ್ಲಿದ್ದುದು ಕೇವಲ ನಾಲ್ಕು ಪುರುಷರ ಕಾಲೇಜುಗಳು: ಪ್ರೆಸಿಡೆನ್ಸಿ, ಪಚ್ಚಯ್ಯಪ್ಪ, ಲಯೊಲಾ ಮತ್ತು ಕ್ರಿಶ್ಚಿಯನ್. ವಿದ್ಯಾರ್ಥಿಗಳ ಪರಿಭಾಷೆಯಲ್ಲಿ ಇವು Princes of Presidency, Rowdies of Pachhayyappa’s, Slaves of Loyola and Gentlemen of Christian. ೧೯೪೪-೪೫ರ ಶಿಕ್ಷಣವರ್ಷ ಮುಗಿಯುವ ವೇಳೆಗೆ ನಾನು ಉಳಿದ ಮೂರೂ ಕಾಲೇಜುಗಳ ಪಾಠಪ್ರವಚನ ಮತ್ತು ಹಾಸ್ಟೆಲ್ ಸೌಕರ್ಯ ಕುರಿತು ಸಾಕಷ್ಟು ಮಾಹಿತಿ ಸಂಗ್ರಹಿಸಿದ್ದೆ. ಈ ಪೈಕಿ ಪರೀಕ್ಷೆ ಮತ್ತು ಹಾಸ್ಟೆಲ್ ದೃಷ್ಟಿಯಿಂದ ಲಯೊಲಾವೇ ಸರ್ವಶ್ರೇಷ್ಠವೆಂಬುದು ಸ್ಪಷ್ಟವಾಗಿತ್ತು. ಇತ್ತ ಕ್ರಿಶ್ಚಿಯನ್ ಕಾಲೇಜಿನಲ್ಲಿ ಮುಂದಿನ ವರ್ಷವಾದರೂ ಹಾಸ್ಟೆಲ್ ಸೌಕರ್ಯ ದೊರೆಯುವ ಬಗ್ಗೆ ಭರವಸೆ ಇರಲಿಲ್ಲ. ಅಂದಮೇಲೆ ಈ ನರಕದಿಂದ ವರ್ಷಾಂತ್ಯದಲ್ಲಿ ವಿಮೋಚನೆ ಪಡೆದು ಎರಡನೆಯ ಮತ್ತು ಮೂರನೆಯ ಆನರ‍್ಸ್ ತರಗತಿಗಳಿಗೆ ಲಯೊಲಾ ಸೇರುವುದೊಂದೇ ಸರಿಯಾದ ಮಾರ್ಗವೆಂಬ ದೃಢ ನಿರ್ಧಾರಕ್ಕೆ ಬಂದಿದ್ದೆ.
ಲಯೊಲಾದ ಪ್ರಾಂಶುಪಾಲ ರೆವರೆಂಡ್ ಜೆರೋಮ್ ಡಿಸೋಜ಼ಾರನ್ನು ಭೇಟಿಯಾಗಿ ನನ್ನ ಸಮಸ್ಯೆಗಳನ್ನು ವಿವರಿಸಿ ಅವರಲ್ಲಿ ಆಶ್ರಯ ಕೋರಿದೆ. ಹಿಂದೆ ಸಂತ ಅಲೋಶಿಯಸ್ ಕಾಲೇಜಿನಲ್ಲಿ ನಾನು ಇವರ ಅಣ್ಣ ರೆವರೆಂಡ್ ಬರ್ಟ್ರಮ್ ಡಿಸೋಜ಼ಾರ ವಿದ್ಯಾರ್ಥಿ ಆಗಿದ್ದೆನೆಂಬುದನ್ನು ಮನವರಿಕೆ ಮಾಡಿದೆ. ಅವರು ಆಶ್ವಾಸಿಸಿದರು, “ಸರಿ! ನೀನು ಒಂದನೆಯ ಆನರ‍್ಸ್‌ನಲ್ಲಿ ಉತ್ತೀರ್ಣನಾಗಿ ಕ್ರಿಶ್ಚಿಯನ್‌ನಿಂದ ವರ್ಗಾವಣೆ ಮತ್ತು ನಡತೆ ಶಿಫಾರಸು ಪತ್ರಗಳನ್ನು ತಂದುದಾದರೆ ಇಲ್ಲಿ ಎರಡನೆಯ ಆನರ‍್ಸ್‌ಗೆ ಮತ್ತು ಹಾಸ್ಟೆಲ್ಲಿಗೆ ಪ್ರವೇಶ ಕೊಡಬಹುದು.” ಅದೇ ಜೂನ್ ವೇಳೆಗೆ ಒಂದನೆಯ ಆನರ‍್ಸ್ ಫಲಿತಾಂಶ ಪ್ರಕಟವಾಯಿತು. ನಾನು ಮುಳುಗಿರಲಿಲ್ಲ. ಕ್ರಿಶ್ಚಿಯನ್ ಕಾಲೇಜ್ ಪ್ರಾಂಶುಪಾಲ ಅಲೆಗ್ಸಾಂಡರ್ ಜಾನ್ ಬಾಯ್ಡ್‌ರನ್ನು ಭೇಟಿಮಾಡಿ ಒಂದು ಸುಳ್ಳು ಹೇಳಿದೆ, “ನನಗೆ ಗಣಿತ ಆನರ‍್ಸ್‌ನಲ್ಲಿ ಮುಂದುವರಿಯಲು ಸಾಧ್ಯವಾಗುತ್ತಿಲ್ಲ. ಮಂಗಳೂರಿಗೆ ಹಿಂತಿರುಗಿ ಬಿಎಸ್‌ಸಿಗೆ ದಾಖಲಾಗುತ್ತೇನೆ. ದಯವಿಟ್ಟು ವರ್ಗಾವಣೆ ಮತ್ತು ನಡತೆ ಶಿಫಾರಸು ಕಾಗದಗಳನ್ನು ದಯಪಾಲಿಸಬೇಕು.”
ಶುಭಾಶಯಸಹಿತ ಅವರು ನನ್ನನ್ನು ಬೀಳ್ಕೊಟ್ಟರು. ಆಗೇನಾದರೂ ನಾನು ಅವರಿಗೆ ಅಪ್ರಿಯವಾಗಬಹುದಾಗಿದ್ದ ಸತ್ಯ ನುಡಿದಿದ್ದರೆ ನನ್ನ ಭವಿಷ್ಯ ಏನಾಗಿರುತ್ತಿತ್ತೋ ಹೇಳಲಾರೆ. “ಸತ್ಯವಂತರಿಗಿದು ಕಾಲವಲ್ಲ?” ಜೂನ್ ಮಾಸುವ ಮೊದಲೇ ನಾನು ತಾಂಬರಮಿನ ರೊಪ್ಪದಿಂದ ವಿಮೋಚಿತನಾಗಿ ಮುಕ್ತನಾಗಿ ಲಯೊಲಾದ ಕಪ್ಪಕ್ಕೆ (ಆನೆಗಳನ್ನು ಹಿಡಿದು ಪಳಗಿಸುವ ಏರ್ಪಾಡು) ಸ್ವ-ಇಚ್ಛೆಯಿಂದ ಕೆಡೆದಿದ್ದೆ! ಇದೊಂದು ಬಗೆಯ ನಿರ್ಮೋಚನೆ (moulting), ಅಂದರೆ ಪೊರೆಯುರ್ಚಿ ಹೊಸಹುಟ್ಟು ಪಡೆಯುವುದು. ಹೀಗೆ ೧೯೪೫-೪೬ರ ಶೈಕ್ಷಣಿಕ ವರ್ಷಾರಂಭದಲ್ಲಿ ನಾನು ಲಯೊಲಾದಲ್ಲಿ ಎರಡನೆಯ ಆನರ‍್ಸ್ ವಿದ್ಯಾರ್ಥಿಯಾದೆ, ಹಾಸ್ಟೆಲ್‌ನಿವಾಸಿಯೂ ಆದೆ.
ಅದೊಂದು ವಿನೂತನ ಅನುಭವ. ಅಲ್ಲಿ ಎಲ್ಲವೂ ಯಾಂತ್ರಿಕವೆನ್ನುವ ಮಟ್ಟಿಗೆ ಕ್ರಮಬದ್ಧ. ಪಾಠಪ್ರವಚನಗಳಾಗಲೀ ಸ್ಪೆಶಲ್ ಕ್ಲಾಸ್‌ಗಳಾಗಲೀ ಒಂದು ಸುಸಜ್ಜಿತ ಕಾರ್ಖಾನೆಯ ತೆರದಲ್ಲಿ ಸಾಗುತ್ತಿದ್ದುವು. ಸುಮಾರು ೪೦೦ ಹಾಸ್ಟೆಲಿಗರಿದ್ದೆವು. ಹುಡುಗ ಪಾಳ್ಯ. ಹುಡುಗಿಯರಿಗೆ ಪ್ರವೇಶವಿಲ್ಲ. ನಾಲ್ಕು ಬಗೆಯ ಭೋಜನಶಾಲೆUಳಿದ್ದುವು: ತಮಿಳು, ಆಂಧ್ರ, ಕೇರಳ (ಇವು ಮೂರೂ ಶಾಕಾಹಾರಿ), ಮತ್ತು ಮಾಂಸಾಹಾರಿ. ಯಾವುದನ್ನು ಬೇಕಾದರೂ ಆಯಬಹುದಿತ್ತು. ನನ್ನ ರುಚಿ ಶುಚಿಗಳಿಗೆ ತಮಿಳು ಮೆಸ್ ಹೆಚ್ಚು ಒಪ್ಪುವಂತಿತ್ತು.
ಎರಡನೆಯ ಆನರ‍್ಸ್‌ನ ಮೊದಲನೆಯ ಪಾಠಕ್ಕೆ ಹಾಜರಾದೆ. ಇದು ಅಲೋಶಿಯಸ್ ಕಾಲೇಜಿನ ವಿಸ್ತರಣೆ ಎಂದು ಒಡನೆ ಕಂಡುಕೊಂಡೆ. ಸುಮಾರು ೨೦ ಮಂದಿ ಗಂಭೀರ ವಿದ್ಯಾರ್ಥಿಗಳು. ಉಪನ್ಯಾಸಕರೆಲ್ಲರೂ ಅನುಭವಿಗಳು, ಅದ್ಭುತ ಆಸಕ್ತಿ, ನಿಷ್ಠೆ ಮತ್ತು ಸ್ಪಷ್ಟತೆ ಸಹಿತ ಬೋಧಿಸುತ್ತಿದ್ದರು. ಪ್ರಾಚೀನ ಗುರುಕುಲಾಶ್ರಮ ಹೀಗೆ ಇದ್ದಿರಬೇಕೆಂದೆನ್ನಿಸಿತು. ಪ್ರತಿ ದಿನ ತಲಾ ೧ ಗಂಟೆಯ ೫ ಉಪನ್ಯಾಸಗಳು, ಜೊತೆಗೆ ಗ್ರಂಥಾಲಯದೊಳಗಿನ ಸ್ವಂತ ಅಧ್ಯಯನಾವಕಾಶ, ಭಾನುವಾರದ ಹೊರತು ಬೇರೆ ಯಾವ ರಜೆಯೂ ಇಲ್ಲ – ಇಂಥಲ್ಲಿ ವಿದ್ಯಾರ್ಥಿಯಾಗಿರುವುದು ಪರಮ ಭಾಗ್ಯವೆಂದುಕೊಂಡೆ. ಆದರೆ ತರಗತಿಯೊಳಗೆ ನಾನು ಕೀಳರಿಮೆಯಿಂದ ಕುಸಿದು ಹೋದೆ. ಉಪನ್ಯಾಸಕರು ಕೇಳುತ್ತಿದ್ದ ತೀರ ಸುಲಭ ಪ್ರಶ್ನೆಗಳಿಗೂ ಉತ್ತರ ಕೊಡಲಾಗದೆ ತಲೆ ಅಡಿಹಾಕಿ ನಿಲ್ಲುತ್ತಿದ್ದೆ. ಏಕೆಂದರೆ ಹಿಂದಿನ ವರ್ಷ ಆ ಜಂಟಲ್‌ಮೆನ್ನರ ಕಾಲೇಜಿನಲ್ಲಿ ಗಣಿತ ಕುರಿತಂತೆ ಯಾವ ಗಂಭೀರ ಪಾಠವೂ ನಡೆದಿರಲಿಲ್ಲ! ಸಹಪಾಠಿ ಸಿಡಿಲ ಮರಿಗಳ ದೃಷ್ಟಿಯಲ್ಲಿ ನಾನೊಬ್ಬ ಪರಪುಟ್ಟ, ಅನಾಹ್ವಾನಿತ ನಾಲಾಯಕ್ಕು.
ಅವರ ಪೈಕಿ ಆ ಹಿಂದೆ ಇಂಟರ್‌ಮೀಡಿಯೆಟ್ ತರಗತಿಗಳಲ್ಲಿ ನನ್ನ ಸಹಪಾಠಿಯಾಗಿದ್ದ ದೇವಿದಾಸಆಚಾರ್ಯ ಎಂಬ ವಿದ್ಯಾರ್ಥಿ ಇದ್ದ. ಮಂಗಳೂರಿನಲ್ಲಿಯಂತೆ ಇಲ್ಲಿ ಕೂಡ ಈತ ಆಸನದಲ್ಲಿಯೂ ಅಂಕಗಳಿಕೆಯಲ್ಲಿಯೂ ಒಬ್ಬ front bencher. ದೇವರಾಯರಂತೆ ಮೌನಿ, ಒಂಟಿಗ, ವಾಮನಮೂರ್ತಿ. ಪಾಠ ಮುಗಿದ ಕೂಡಲೇ ನಾನು ಈತನಿಗೆ ಗಂಟುಬಿದ್ದೆ — ಹೇಗೂ ಮುಖಪರಿಚಯವಿತ್ತಷ್ಟೆ. ಇವನೂ ಹಾಸ್ಟೆಲಿಗ ಆಗಿದ್ದುದು ಅನುಕೂಲವಾಯಿತು. ಆಚಾರ್ಯನಿಂದ ಹಿಂದಿನ ವರ್ಷದ ತರಗತಿ ಟಿಪ್ಪಣಿ ಹೊತ್ತಗೆಗಳನ್ನು ಎರವಲು ತಂದೆ, ಅವನ್ನು ನಕಲು ಮಾಡಲು ಮೂರು ನಾಲ್ಕು ವಾರ ಹಗಲಿರುಳೂ ಶ್ರಮಿಸಿ ಸಫಲನಾದೆ. ಅವು ಪ್ರಪಂಚ ಮಹಾಯುದ್ಧದ ದಿನಗಳಾಗಿದ್ದುದರಿಂದ ಪಾಠ ಪುಸ್ತಕಗಳೊಂದೂ ಕೊಳ್ಳಲು ದೊರೆಯುತ್ತಿರಲಿಲ್ಲ, ಗ್ರಂಥಾಲಯದಿಂದ ಅವನ್ನು ತಂದು ಅಕ್ಷರಶಃ ನಕಲುಮಾಡುವುದೊಂದೇ ಅಂದು ನಮಗಿದ್ದ ಹಾದಿ. ಆಚಾರ್ಯನೂ ನಾನೂ ಈ ಕೆಲಸವನ್ನು ಹಂಚಿಕೊಂಡೆವು. ಸರಿ, “ಬಂದದ್ದೆಲ್ಲ ಬರಲಿ, ಗೋವಿಂದನ ದಯ ನಮಗಿರಲಿ” ಎಂದು ಹೊನಲಿಗೆ ದುಮುಕಿಯೇ ಬಿಟ್ಟೆ. ಅನ್ಯ ಮಾರ್ಗ ಹೇಗೂ ಇರಲಿಲ್ಲವಷ್ಟೆ.
ಆ ಎರಡು ವರ್ಷ (೧೯೪೫-೪೭) ನಡುವಿನ ಒಂದು ಬೇಸಗೆ ರಜೆಯ ಹೊರತು ಮಿಕ್ಕ ಎಲ್ಲ ದಿನಗಳಂದೂ ಇರುಳು ೯ ಗಂಟೆಗೆ ಮಲಗಿ ಮುಂಜಾನೆ ೩ ಗಂಟೆಗೆದ್ದು ಅಧ್ಯಯನನಿರತನಾಗುತ್ತಿದ್ದೆ; ಸಂಜೆ ೬ರಿಂದ ೭ರ ತನಕ ಕಾಲೇಜ್ ಮೈದಾನದಲ್ಲಿ ಸುಮಾರು ೧೦ ಕಿಮೀ ದೂರ ಸುತ್ತೋಟ ಓಡುತ್ತಿದ್ದೆ. ಇನ್ನು ಹಾಸ್ಟೆಲ್ ಆಹಾರ ಅತ್ಯಂತ ಸ್ವಾದಿಷ್ಟವಾಗಿರುತ್ತಿತ್ತು. ವಾರಾಂತ್ಯದಲ್ಲಿ ಕರ್ನಾಟಕ ಸಂಗಿತ ಕಛೇರಿಯೊಂದಕ್ಕೆ ಕಡ್ಡಾಯವಾಗಿ ಹಾಜರಾಗುತ್ತಿದ್ದೆ. ಇಂತಿದ್ದರೂ ಪ್ರಾಯಸಹಜವಾದ ಮನೋವಿಕಾರಗಳು ಸತತ ಬಾಧಿಸುತ್ತಿದ್ದುವು. ಇಲ್ಲಿ ಕಾಪಾಡಿದ್ದು ಮನೆಯಲ್ಲಿ ದೊರೆತಿದ್ದ ಸಂಸ್ಕಾರ: ಮುಂಜಾನೆ ಅಧ್ಯಯನ ತೊಡಗುವ ಮುನ್ನ ಭಗವದ್ಗೀತೆಯ ೧೦ ಶ್ಲೋಕಗಳನ್ನು ಕ್ರಮಶಃ ನಕಲುಮಾಡುತ್ತ ಅರ್ಥ ಗ್ರಹಿಸುತ್ತ ಮುನ್ನಡೆದೆ. ಮನಶ್ಶಾಂತಿ ಮತ್ತು ಏಕಾಗ್ರತೆ ಲಭಿಸಿದುವು, ಆತ್ಮಭರವಸೆಯೂ ಮೂಡಿತು.
ಪ್ರಾಂಶುಪಾಲರು ನನ್ನನ್ನು ಲಯೊಲಾ ಕಾಲೇಜಿನ ಕರ್ನಾಟಕ ಸಂಘಕ್ಕೆ ವಿದ್ಯಾರ್ಥಿ ಕಾರ್ಯದರ್ಶಿಯಾಗಿ ನಿಯೋಜಿಸಿದರು. ಹಣಕ್ಕೆ ಕೊರತೆ ಇಲ್ಲ — ಪ್ರಾಂಶಪಾಲರ ಆಶ್ವಾಸನೆ; ವಿದ್ಯಾರ್ಥಿಗಳಲ್ಲಿ ಆಸಕ್ತ ಶ್ರೋತೃಗಳು ಸಾಕಷ್ಟು ಮಂದಿ ಇದ್ದರು — ಪ್ರಾಯಶಃ ತಾಯಿನುಡಿಯ ತವರಿನಿಂದ ದೂರವಾದಾಗ ನಾವದನ್ನು ಹೆಚ್ಚುಹೆಚ್ಚು ಪ್ರೀತಿಸುತ್ತೇವೆ; ಇನ್ನು ಮದ್ರಾಸಿನ ವಿವಿಧ ಸಾರ್ವಜನಿಕ ಕ್ಷೇತ್ರಗಳಲ್ಲಿದ್ದ ಕನ್ನಡ ಪ್ರತಿಭೆಗಳಿಗೂ ದಾನಿಗಳಿಗೂ ಎಂದೂ ಕೊರತೆ ಇರಲಿಲ್ಲ. ಇವೆಲ್ಲ ಸಂಗತಿಗಳೂ ವಾಸ್ತವ ಕಾರ್ಯರಂಗ ನನಗೆ ಕಲಿಸಿದ ಪಾಠಗಳು:
ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ
ಮಾ ಕರ್ಮಫಲಹೇತುರ್ಭೂರ್ಮಾ ತೇ ಸಂಗೋsಸ್ತ್ವಕರ್ಮಣಿll
ಏರಿರದ ಬಂಡೆಗಳು ನೂರಾರು ಜಗದೊಳಗೆ
ಏರಲಾಗದ ಶಿಖರ ಸೃಷ್ಟಿಯೊಳಗಿಲ್ಲವೋ
ದಾರಿ ಮುನ್ನಡೆದಂತೆ ಕಾಣ್ಬ ಕಂಟಕಗಳ ನಿ-
ವಾರಿಸೆಲೊ ಧೃತಿಗೆಡದೆ ಕೆಚ್ಚಿನಿಂ ಅತ್ರಿಸೂನುll
೧೯೪೭ರ ಮಾರ್ಚ್ ದಿನಾಂಕ ೨೦-೨೮ ಅವಧಿಯಲ್ಲಿ ಅಂತಿಮ ಆನರ‍್ಸ್ ಪರೀಕ್ಷೆ ಬರೆದು ಕೃತಾರ್ಥ ಭಾವದಿಂದ ಮಡಿಕೇರಿಗೆ ಮರಳಿದೆ. ಕ್ರಿಶ್ಚಿಯನ್ ಕಾಲೇಜಿನಲ್ಲಿ ದೇವರಾಯರ ಮೂಲಕ ಗೆಳೆಯನಾಗಿದ್ದ ಗುರುಮೂರ್ತಿ ನಮ್ಮೂರು ನೋಡಬಯಸಿ ನನ್ನ ಜೊತೆ ಬಂದಿದ್ದ. ಹಾದಿಯಲ್ಲಿ ಬೆಂಗಳೂರು, ಮೈಸೂರು, ಬೇಲೂರು, ಹಳೇಬೀಡು ಮುಂತಾದ ಪ್ರೇಕ್ಷಣೀಯ ನೆಲೆಗಳನ್ನು ದರ್ಶಿಸಿದೆವು. ಮಡಿಕೇರಿ-ಭಾಗಮಂಡಲ ದಾರಿಯನ್ನು ನಡೆದು ಕ್ರಮಿಸಿದೆವು. ಅಲ್ಲೆಲ್ಲ ನಮ್ಮ ನೆಂಟರಿಷ್ಟರು ಇದ್ದುದರಿಂದ ಮತ್ತು ಅವರ ಮುಗ್ಧ ದೃಷ್ಟಿಯಲ್ಲಿ ನಾವು ಅಸಾಧ್ಯವಾದುದೇನನ್ನೋ ಸಾಧಿಸಿ ಮರಳಿದವರಾದ್ದರಿಂದ ನಮಗೆ ಹೋದಲ್ಲೆಲ್ಲ ಭವ್ಯ ಸ್ವಾಗತ ಲಭಿಸಿದ್ದೊಂದು ಭಾಗ್ಯ.
ಅದೇ ಜೂನ್‌ನಲ್ಲಿ ನಮ್ಮ ಪರೀಕ್ಷಾಫಲಿತಾಂಶ ಪ್ರಕಟವಾಯಿತು: ಇಡೀ ವಿಶ್ವವಿದ್ಯಾಲಯದಲ್ಲಿ ಪ್ರಥಮ ದರ್ಜೆಯಲ್ಲಿ (ಸರಾಸರಿ ೬೦% ಮತ್ತು ಹೆಚ್ಚು ಅಂಕ ಗಳಿಸಿದವರು) ಕೇವಲ ೫ ಮಂದಿಯೂ ದ್ವಿತೀಯ ದರ್ಜೆಯಲ್ಲಿ (ಸರಾಸರಿ ೫೦-೫೯% ಅಂಕ ಪಡೆದವರು) ೧೨ ಮಂದಿಯೂ ಉತ್ತೀರ್ಣರಾಗಿದ್ದರು. ಈ ಎರಡನೆಯವರ ಸಾಲಿನಲ್ಲಿ ನಾನೂ ಇದ್ದೆ. ಕ್ರಿಶ್ಚಿಯನ್ ಕಾಲೇಜಿನಲ್ಲೇ ಮುಂದುವರಿದಿದ್ದರೆ ಖಂಡಿತ ಗೋತಾ ಹೊಡೆದಿರುತ್ತಿದ್ದೆ. ಆಚಾರ್ಯ ಪ್ರಥಮ ದರ್ಜೆ ಗಳಿಸಿದ್ದ.
It was a pleasure reading GTNs days in MCC.It was very educative.We shall mutually call once and share the joy.Wishes and regards
ಆಹಾ! ಅಚ್ಚರಿಯೆ!
kathukakari matthu bodhaprada
ಮದ್ರಾಸಿನ ಹುಡುಗರ ಕಾಲೇಜುಗಳ ಬಗ್ಗೆ ಮಾತ್ರ Princes of Presidency, Slaves of Loyola, Rowdies of Pachiyappa, Gentlemen of Christian ಇಷ್ಟೇ ಹೇಳಿ ಮುಗಿಸಿದರು. ಇತರ ಕಲಾಶಾಲೆಗಳ ಬಗ್ಗೆ ಹೀಗಿತ್ತು: Lords of Law, Yogis of Vivekadanda; Butter flies of Queen Mary's. Moulvis of Mohammadan.ಜಿಟಿನಾ ಮದ್ರಾಸಿನ ಅರೆ ಅಲೆಮಾರಿ ವಿದ್ಯಾರ್ಥಿ ಜೀವನದ ಬಗ್ಗೆ ಓದುವಾಗ ಪ್ರಸಿದ್ಧ ತೆಲುಗು ಮಹಾಕವಿ ಶ್ರೀರಂಗಮ್ ಶ್ರೀನಿವಾಸ ರಾವ್ (ಶ್ರೀ ಶ್ರೀ) ನೆವಪು ಬರುತ್ತದೆ. “ಕೈಯಲ್ಲಿ ಕಾಸಿಲ್ಲದೆ ಉಪವಾಸದಿಂದ ಪಾನಗಲ್ ಪಾರ್ಕಿನಲ್ಲಿ ಕುಳಿತು ಹರಟೆ ಹೊಡೆಯುತ್ತಿದ್ದಾಗ ನನಗೂ ಮಿತ್ರ ಕೊಂಪೆರ್ಲ ಜನಾರ್ಧನರಾವಿಗೂ ಸಮಾಧಾನ ಕೊಡುತ್ತಿದ್ದ ಸೊತ್ತುಗಳು ಎರಡೇ: ’ಮದ್ರಾಸಿನ ನಲ್ಲಿ ನೀರು; ಕವಿಸಾಮ್ರಾಟ್ ವಿಶ್ವನಾಥ ಸತ್ಯನಾರಾಯಣ ಅವರ ಕವಿತೆಗಳು.” (ಅನಂತ – ಅವರ ಆತ್ಮಕಥೆ.) ಅಂತೆಯೇ ಕೈಯಲ್ಲಿ ಎರಡಾಣೆ ಇದ್ದ ಒಬ್ಬ ಕಾರ್ಮಿಕನಿಗೆ ಬಾದಾಮ ಹಲ್ವನಾ? ಸೇಮಿಯಾ ಖೀರಾ? ಒಬ್ಬ ವಿದ್ಯ್ರಾರ್ಥಿಒಬ್ಬನಿಗೆ, ಯಾವ ಸಿನೆಮಾ? ಎಂಬಿತ್ಯಾದಿ ಮೀಮಾಂಸಗಳನ್ನು ಮಹಾಕವಿ ಪದ್ಯಮುಖೇನ ವಿಷದೀಕರಿಸಿದ್ದಾರೆ. ಅರೆ ಬೈರಾಗಿ ವಿದ್ಯಾರ್ಥಿಯೊಬ್ಬ ಕರ್ನೂಲು ಪುರಪಾಲಕ ಸಂಘದ ಉನ್ನತ ಪಾಠಶಾಲೆಯಲ್ಲಿ S.S.L.C.ಉತ್ತೀರ್ಣನಾಗಿ ಗತಶತಮಾನದ ಎರಡನೇ ದಶಕದಲ್ಲಿ ಮದ್ರಾಸ್ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಪ್ರವೇಶ ಕೋರಿ ಅರ್ಜಿ ಕೇಳಿದಾಗ ಅಲ್ಲಿದ್ದ ಗುಮಾಸ್ತ “This is a college meant for princes and not for beggars, get out”. ಅಂದನಂತೆ. ಅದೇ ವಿದ್ಯಾರ್ಥಿ ಮಹಮ್ಮಡನ ಕಲಾಶಾಲೆಯಲ್ಲಿ ಸೇರಿ ಮುಂದೆ Oxford ನಲ್ಲಿ P.Hd. ಕೂಡಾ ಮುಗಿಸಿ ಭಾರತಕ್ಕೆ ತಿರುಗಿ ಬಂದು ಪ್ರೆಸಿಡೆನ್ಸಿ ಕಲಾಶಾಲೆಯ ಪ್ರಾಂಶುಪಾಲರಾದಾಗ ಆ ಗುಮಾಸ್ತೆ ಇನ್ನೂ ಅಲ್ಲೇ ಸೆವೆಯಲ್ಲಿದ್ದರಂತೆ. ಆತನ ಮಗನಿಗೆಕರೆದು ಪ್ರವೇಶ, ಪ್ರಾಂಶುಪಾಲ ಅಬ್ದುಲ್ ಹಕ್ ಋಣ ತೀರಿಸಿಕೊಂಡರು. ಅಂತೆಯೇ ತನಗಾದ ಕಷ್ಟ ಮುಂದಿನ ಪೀಳಿಗೆಯವರಿಗೆ ಬರಬಾರದೆಂದು ಕರ್ನೂಲಿನಲ್ಲಿ “ಓಸ್ಮಾನಿಯಾ ಕಾಲೇಜು ಸ್ಥಾಪಿಸಿದರು. ನಾನು ಅಲ್ಲಿ ’ಇಸ್ಲಾಮಿಕ್ ಚರಿತ್ರೆ’ ವಿದ್ಯ್ರಾರ್ಥಿಯಾಗಿ ನನ್ನ ಪದವಿ ಪಡೆದೆ. ಅಂದ ಹಾಗೆ MCC and Dr>Rev.fr.Boyd. He was a legend. ಅವರ ಅಪಾರ ಜ್ನಾಪಕ ಶಕ್ತಿಯ ಬಗ್ಗೆ ಹಲವಾರು ದಂತಕಥೆಗಳಿವೆ. ಪ್ರಸಿದ್ಧ ಚುನಾವಣಾ ಆಯೋಗದ ಕಮಿಶನರು ಶೆಷನ ಅವರ ವಿದ್ಯಾರ್ಥಿ. ಅವರು ವಾರಕ್ಕೊಮ್ಮೆ 'Morals' ಪಾಠ ಹೇಳುತ್ತಿದ್ದರಂತೆ. ಹೆಸರುಗಳನ್ನು ಬಾಯಿಪಾಠ ಹೇಳಿ ಹಾಜರಿ ಕರೆಯುತ್ತಿದ್ದರಂತೆ. ಆವರ ಶ್ರಿಷ್ಯರುಗಳು ನನಗೆ ಕರ್ನೂಲು ಒಸ್ಮಾನಿಯಾ ಕಲಾಶಾಲೆಯಲ್ಲಿ ಗುರುಗಳಾಗಿದ್ದ್ದರು.
ಮಡಿಕೇರಿ-ಭಾಗಮಂಡಲ ದಾರಿಯನ್ನು ನಡೆದು ಕ್ರಮಿಸಿದೆವು!