ತಿಂಗಳ ಹಿಂದೆ ಜಾಲ-ಸಂವಾದಕ್ಕೆ (ಚಾಟ್) ಸಿಕ್ಕಾಗ (ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿಯ ಅಧ್ಯಕ್ಷರೂ ಬಹುಮುಖೀ ಕಲಾವಿದರೂ ಎಂ.ಜಿ.ಎಂ ಕಾಲೇಜಿನ ನಿವೃತ್ತ ಇಂಗ್ಲಿಷ್ ಪ್ರಾಧ್ಯಾಪಕ ಹಾಗೂ ಪ್ರಾಂಶುಪಾಲರೂ ನನ್ನ ಆತ್ಮೀಯ ಗೆಳೆಯರೂ ಆದ ಎಂ. ಲಕ್ಷ್ಮೀನಾರಾಯಣ-) ಸಾಮಗರು ‘ಜನವರಿ ೨೪ ರಿಂದ ೨೬ ಬಿಡುವಿಟ್ಟುಕೊಳ್ಳಿ’ ಎಂದು ಮುನ್ಸೂಚನೆಯನ್ನೇ ಕಳಿಸಿದ್ದರು. ಆದರೆ ನನ್ನ ದಿಕ್ಕಾಪಾಲಾಗುವ ನಡೆಯನ್ನು ಅದು ಪೂರ್ತಿ ಲಯಬದ್ಧಗೊಳಿಸಲು ಸೋತಿತು (ಅಪರಾಧ ನನ್ನದೇ) ಎನ್ನುವುದನ್ನು ಮೊದಲು ನಿವೇದಿಸಿಕೊಳ್ಳುತ್ತೇನೆ. ಉಡುಪಿಯ ಎಂಜಿಎಂ ಕಾಲೇಜಿನ ಆಶ್ರಯದಲ್ಲಿನ ಮೂರು ದಿನಗಳ ನಮ್ಮ (ಕರ್ನಾಟಕ ಕರಾವಳಿಯ) ಯಕ್ಷಗಾನ ಮತ್ತು ಕೂಚಿಪುಡಿ ಯಕ್ಷಗಾನದ ಕೆಲವು ಎಳೆಗಳನ್ನಷ್ಟೇ ಹಿಡಿದುಕೊಂಡು ಸಾಮ್ಯ, ಸಂಬಂಧಗಳ ಶೋಧಕ್ಕಿಳಿದ ಕಾರ್ಯಾಗಾರ – ‘ಯಕ್ಷವಸಂತ’ದಲ್ಲಿ ಮೊದಲ ದಿನವಷ್ಟೇ ನಾನು ಹಾಜರಿದ್ದೆ. ಅಲ್ಲಿ ನಾನು ಗ್ರಹಿಸಿದ್ದನ್ನು ಯಥಾಮತಿ ಪ್ರಾಜ್ಞರ ವಿಮರ್ಶೆಗೆ ತೆರೆದಿಟ್ಟು, ಉತ್ತರೋತ್ತರವಾಗಿ ಕಲಾ ಇತಿಹಾಸಕ್ಕೆ ಒಂದು ಮೌಲ್ಯಯುತ ಸಾಲಾದರೂ ದಕ್ಕಲಿ ಎಂದು ಪ್ರಯತ್ನ ಮಾಡುತ್ತೇನೆ.

‘ನಮ್ಮ’ ಯಕ್ಷಗಾನದ ಜಲಗಣ್ಣು ಬಿಡಿಸಿದವರು ಹೇಳುತ್ತ ಹೋದರು, “ಇದು ಅನಾಮಧೇಯ ಹಳ್ಳಿಗರ (ಜಾನಪದ) ಗದ್ದಲ ಅಲ್ಲ, ಬರಿಯ ಕುಂಬಳೆ ಮೂಲದ್ದಲ್ಲ, ಪಡುಕರಾವಳಿಗೋ ವಿಸ್ತರಿಸಿದಂತೆ ಮಲೆನಾಡಿಗೋ ಸೀಮಿತವಲ್ಲ, ಅಲ್ಲ, ಅಲ್ಲ!” ಇದನ್ನು ಕರ್ಣಾಟಕದಲ್ಲಿ ಜಾನಪದ ಅಕಾಡೆಮಿಯೊಂದಿಗೆ ಕಟ್ಟಲು ಹೋದವರ ಹಗ್ಗ ಹರಿದು ಯಕ್ಷಗಾನ ಸ್ವತಂತ್ರಗೊಂಡದ್ದೂ ಆಯ್ತು. ಇದರ ಭೂಮ ಬೆಳವಣಿಗೆಯಲ್ಲಿ ಬಂಗಾಳದಿಂದ ಮಲಯಾಳದವರೆಗೂ ಜ್ಞಾತಿಗಳು ಕಾಣಿಸಿದರು, ಭರತನ ನಾಟ್ಯಶಾಸ್ತ್ರವೆಂಬ ಭೂ (ಭಾರತ?) ವ್ಯಾಪೀ ತ್ರಿವಿಕ್ರಮ ಪಾದಕ್ಕೆ ಏಕೈಕ ವಾರೀಸುದಾರನೇ ತಾನೆಂದು ಶ್ರುತಪಡಿಸುವಲ್ಲಿಗೂ ಇಂದು ನಮ್ಮ ಯಕ್ಷಗಾನ ನಿರ್ವಿವಾದವಾಗಿ ಮುಟ್ಟಿದೆ. ಈ ಹಂತದಲ್ಲಿ ಕನ್ನಡಿತಿ, ಕರ್ನಾಟಕ ಲಲಿತಕಲಾ ಅಕಾಡೆಮಿಯ ಅಧ್ಯಕ್ಷೆ, ಸ್ವತಃ ಪ್ರಖ್ಯಾತ ಕೂಚಿಪುಡಿ ಕಲಾವಿದೆ ಹಾಗೂ ಬೆಂಗಳೂರಿನ ಶಾಂಭವಿ ನೃತ್ಯಶಾಲೆಯ ಕಲಾ ನಿರ್ದೇಶಕಿಯೂ ಆದ ವೈಜಯಂತಿ ಕಾಶಿ ಅಷ್ಟೊಂದು ಪ್ರಚಾರದಲ್ಲಿಲ್ಲದ ಕೂಚಿಪುಡಿ ಯಕ್ಷಗಾನದೊಡನೆ ಎಂ.ಎಲ್ ಸಾಮಗರನ್ನು ಸಂಪರ್ಕಿಸಿದರು.

ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿಯ ಆಡಳಿತ ನೆಲೆ ಬೆಂಗಳೂರಾದರೂ ಪ್ರಧಾನ ಪ್ರವೃತ್ತಿಯ ನೆಲೆಯಾಗಿ ಪಡು ಕರಾವಳಿಗೆ ಇಳಿಯುವುದು ಸಹಜವೇ. ಮತ್ತೆ ಸಾಮಗರಿಗೆ ಸ್ವಕ್ಷೇತ್ರವೇ ಆದ ಉಡುಪಿ, ಅಂದರೆ ಆತಿಥ್ಯದ ನೆಲೆಯಲ್ಲಿ ಹೆರಂಜೆ ಕೃಷ್ಣ ಭಟ್ಟರ ನಿರ್ದೇಶನಕ್ಕೊಳಪಟ್ಟ ಎಂಜಿಎಂ ಕಾಲೇಜ್ ವಠಾರ, ಕ್ರಿಯಾ ಸಹಯೋಗದಲ್ಲಿ ಬನ್ನಂಜೆ ಸಂಜೀವ ಸುವರ್ಣರ ಪ್ರಾಂಶುಪಾಲತ್ವದ ಯಕ್ಷಗಾನ ಕೇಂದ್ರಗಳೆಲ್ಲ ಸರಪಳಿ ಕ್ರಿಯೆಯಂತೆ ಜೋಡಿ ಯಕ್ಷವಸಂತ ಆಯೋಜಿತವಾಯ್ತು. ಅಷ್ಟೇ ಅಲ್ಲ, ಒಟ್ಟು ಕಲಾಪಗಳಿಗೆ ಅರ್ಥವಂತಿಕೆಯನ್ನೂ ಉಪಯುಕ್ತತೆಯನ್ನೂ ಕೊಟ್ಟಿತು. ಪ್ರಾಯೋಜಕತ್ವದ ಕಿರು ಪಾಲುದಾರಿಕೆಯಲ್ಲಿ ಮಂಗಳೂರು ವಿವಿನಿಲಯದ ಯಕ್ಷಗಾನ ಅಧ್ಯಯನ ಕೇಂದ್ರವೂ ಸೇರಿದಂತೆ ಇನ್ನೂ ಹಲವು ಸಂಸ್ಥೆಗಳು ತೊಡಗಿಕೊಂಡದ್ದರಿಂದ ನಿಜದಲ್ಲಿ ಅವುಗಳು ಗೌರವ ಹೆಚ್ಚಿಸಿಕೊಂಡವು ಎಂದರೆ ತಪ್ಪಾಗದು.

ಘನ ಸಾರ್ವಜನಿಕ ಕಲಾಪ ಒಂದರ ಸಂಯೋಜನೆಗೆ ಕೈಜೋಡಿಸುವವರೂ ಬಹಳಸಲ ತಾವು ಉದ್ದೇಶಿಸಿದ ಉದಾತ್ತ ವಿಚಾರಕ್ಕೇ ಕೊರಳ ಕುಣಿಕೆಯಾಗುವುದು ನಾವು ಕಾಣುತ್ತಲೇ ಇದ್ದೇವೆ. ಅವರ ದಾಕ್ಷಿಣ್ಯಗಳು, ಅನಿವಾರ್ಯತೆಗಳು ಏನೇ ಇರಲಿ, ಸಾಮಾನ್ಯ ಪ್ರೇಕ್ಷಕನನ್ನು (ನನ್ನನ್ನು) ಬಾಧಿಸಬೇಕಿಲ್ಲ ಅಂದುಕೊಂಡೇ ನಾನು ಸಾಕಷ್ಟು ತಡವಾಗಿಯೇ ಉಡುಪಿಗೆ ಹೋಗಿದ್ದೆ. ಆದರೂ ಔಪಚಾರಿಕ ಉದ್ಘಾಟನೆಯ ಅಂಗವಾಗಿ ಪೇಜಾವರಶ್ರೀ, ಚಿನ್ನಪ್ಪ ಗೌಡ, ಲಕ್ಷ್ಮೀ ನಾರಾಯಣ ಕಾಶಿ, ಸೂರಿಕುಮೇರು, ಚಿಟ್ಟಾಣಿಗಳೆಲ್ಲರ ಮಾತುಗಳನ್ನು ನಾನು Share (ಇದು ನಿರ್ವಾಹಕನ ಕನ್ನಡ!) ಮಾಡಿಕೊಳ್ಳುವುದು ತಪ್ಪಲಿಲ್ಲ. ಇದು ಎಳೆದೆಳೆದು ಪೂರ್ವಾಹ್ನದ ನಿಜಕಲಾಪದ ಒಂದಂಗವನ್ನೇ ನುಂಗಿಬಿಟ್ಟಿತ್ತು. ಮೂರು ದಿನಗಳ ರಾಷ್ಟ್ರೀಯ ಕೂಚಿಪುಡಿ ಮತ್ತು ಯಕ್ಷಗಾನ ಪ್ರಸ್ತುತಿ-ಪರಾಮರ್ಶೆ ಮತ್ತು ಪ್ರದರ್ಶನಗಳ ಬಂಡಿಗೆ ಬೆಳಿಗ್ಗೆ ಹತ್ತೂವರೆಗೆ ಸಿಗಬೇಕಿದ್ದ ನಿಜ ನೂಕು-ಚಾಲನೆ ಸಿಕ್ಕಿದ್ದು ಹನ್ನೆರಡು ಗಂಟೆಗೆ! ಸಹಜವಾಗಿ ಈ ಸಮಯದ ಒತ್ತಡ ದಿನದುದ್ದದ ಕಲಾಪಗಳ ಸಹಜ ದಾಂಗುಡಿಗಳಿಗೆ ಕತ್ತರಿಯಾಡಿಸಿತು. ನೆಲ ಹದವಾಗಿ ಮೊಳೆತ ಪ್ರಶ್ನೆಗಳಿಗೆ ನೆನಪಿನ ಚೀಲ ತೋರಿಸಿತು! ಈ ಸೋಲನ್ನು ಕಪ್ಪು ಚುಕ್ಕೆಯೆಂದರೂ ಮತ್ತೆ ಮೂರು ದಿನಗಳ ಉದ್ದಕ್ಕೆ ನಡೆದ ಕಲಾಪಗಳ ಸುಂದರ ಶಿಲ್ಪಕ್ಕಿಟ್ಟ (ಎರಡು ದಿನಗಳದ್ದನ್ನು ಅವರಿವರ ಮಾತಿನಲ್ಲಿ ಸಂಗ್ರಹಿಸಿದೆ) ದೃಷ್ಟಿಬೊಟ್ಟೆಂದು ಮರೆಯುತ್ತೇನೆ!

ಗುರು ಗುಂಡ್ಮಿ ಸದಾನಂದ ಐತಾಳರದು ಮೊದಲ ಕಲಾಪ. ಬಡಗುತಿಟ್ಟು ಯಕ್ಷಗಾನ ಸಂಗೀತವನ್ನು ಪ್ರಸ್ತುತಪಡಿಸಿ, ಪರಾಮರ್ಶೆಗೊಳಪಡಿಸುವ ಕಾಯಕ ಅವರದು. ವಿಷಯದ ಹರಹು, ಐತಾಳರ ವಿದ್ವತ್ತು ಮತ್ತು ಸಿದ್ಧತೆಗಳೆಲ್ಲವೂ ದೊಡ್ಡದೇ. ಆದರೆ ಇದಕ್ಕೆ ಮೊದಲ ತೊಡಕು ಸಮಯ. ಅದನ್ನು ಸುಧಾರಿಸಲು ಅವರು ನೇರ ರಾಗ, ತಾಳಗಳ ಪ್ರಾಯೋಗಿಕ ಲೋಕಕ್ಕೇ ಪ್ರವೇಶಕ್ಕೆಳಸಿದಾಗ ಹೊಸದೇ ಎರಡು ಸಮಸ್ಯೆಗಳು ತೆರೆದುಕೊಂಡವು. ಕೂಚಿಪುಡಿ ಪಕ್ಷದಿಂದ ಬಂದಿದ್ದ ಸಣ್ಣ ವಿದ್ವತ್ ವರ್ಗ ಶುದ್ಧ ತೆಲುಗರು; ಇಂಗ್ಲಿಶ್ ಕಷ್ಟದಲ್ಲಿ ಅರ್ಥ ಮಾಡಿಕೊಳ್ಳಬಲ್ಲರು, ಕನ್ನಡವಲ್ಲ! ಮತ್ತೆ ಅವರಿಗೆ ಇಲ್ಲಿನ ಯಕ್ಷಗಾನದ ಪೂರ್ವ ಸಂಸ್ಕಾರ (ನೋಡಿದ್ದು, ಓದಿದ್ದು ಇಲ್ಲ ಎನ್ನುವಷ್ಟು ಕಡಿಮೆ) ಇಲ್ಲದಾಗ ಗುರು ಐತಾಳರು ಸಮರ್ಥವಾಗಿಯೇ ಇಂಗ್ಲಿಶ್ ವಿವರಣೆ ಕೊಟ್ಟರೂ ಅವರ ಗ್ರಹಿಕೆಗಳ ಭೂಮಿಕೆಗೆ ಮೇಲೆ-ಹಾಯುವ ಸೇತುವೆ ನಿಲ್ಲಿಸಿದಂತಾಗುತ್ತಿತ್ತು.

ಇದು ಸಹಜವಾಗಿ ಆಪ್ತ ಸಂಭಾಷಣೆಯಲ್ಲಿ ಸುಧಾರಿಸಬಹುದಾಗಿದ್ದ ಸಂಗತಿಯನ್ನು ಸಾರ್ವಜನಿಕ ಸಮಯದಲ್ಲಿ ಹೇಳುವ ಅನಿವಾರ್ಯತೆ ತಂದಿತ್ತು. ಇದ್ದ ಒಂದೂವರೆ ಗಂಟೆ ಅವಕಾಶದ ಬಹುಭಾಗ ಬಹುಸಂಖ್ಯಾತ ಸಭಾಸದರ (ಕನ್ನಡಿಗರು ಮತ್ತು ಯಕ್ಷಗಾನ ವಲಯದವರು) ಔದಾರ್ಯದಲ್ಲೇ ಕಳೆದುಹೋಯ್ತು. ಇದನ್ನು ಅರ್ಥ ಮಾಡಿಕೊಂಡೇ ಐತಾಳರ ತಯಾರಿಯ ಅಲ್ಪಾಂಶವನ್ನಾದರೂ ಎಲ್ಲರಿಗೆ ಮುಟ್ಟಿಸಲೆಂದು ಕಲಾಪದ ಉದ್ದಕ್ಕೂ ಸಾಮಗರು ನಡುನಡುವೆ ಪ್ರವೇಶಿಸುತ್ತಲೇ ಇದ್ದರು. ಐತಾಳರಾದರೋ ಸಾಮಗರ ಹಿರಿತನ ಮತ್ತು ಉದ್ದೇಶದ ಸದಾಶಯವನ್ನು ಸರಿಯಾಗಿಯೇ ಗ್ರಹಿಸಿದ್ದಕ್ಕೆ ಮನಃಕಷಾಯವೇನೂ ಏರ್ಪಡದೇ ಸಭೆ ಊಟದ ಬಿಡುವಿಗೆ ಜಾರಲೇಬೇಕಾಯ್ತು.

ಅಪರಾಹ್ನದ ಸಭೆಯಲ್ಲಿ ಮೊದಲಿಗೆ ನಗರ ಸುಬ್ರಹ್ಮಣ್ಯ ಆಚಾರ್ಯರಿಂದ ಸ್ವಲ್ಪ ಹೊತ್ತು ಯಕ್ಷ-ಸಂಗೀತವಿತ್ತು. ಇದು ಭೋಜನ ವಿರಾಮದಲ್ಲಿ ವ್ಯಸ್ತರಾಗಿದ್ದ ಶಿಬಿರಾರ್ಥಿಗಳನ್ನು ಆಕರ್ಷಿಸುವುದರೊಡನೆ ಯಕ್ಷ-ಸಂಗೀತದ ಕಿರು ಮಾದರಿಯನ್ನು ಕೊಟ್ಟಿತು. ಆಚಾರ್ಯರು ಯಕ್ಷಗಾನ ಕೇಂದ್ರದ್ದೇ ಹಳೇ ವಿದ್ಯಾರ್ಥಿಯಂತೆ. ಅವರಿಗೆ ಇಲ್ಲಿ ಮದ್ದಳೆಯಲ್ಲಿ ಕೇಂದ್ರದಲ್ಲಿ (ಮದ್ದಳೆ) ಗುರುಗಳೇ ಆಗಿದ್ದಿರಬಹುದಾದ ದೇವದಾಸ್ ಕೂಡ್ಲಿಯವರು ಸಹಕಾರ ಕೊಟ್ಟರು. ಇನ್ನೂ ವಿಶೇಷ – ಕೇಂದ್ರದ ನೃತ್ಯಾಭಿನಯ ಗುರು, ಪ್ರಾಂಶುಪಾಲ – ಬನ್ನಂಜೆ ಸಂಜೀವ ಸುವರ್ಣರೇ ಚಂಡೆಗೆ ಕುಳಿತಿದ್ದರು. ಇದೂ ಒಂದು ಲೆಕ್ಕದಲ್ಲಿ ಒಟ್ಟು ಯಕ್ಷವಸಂತದ ಅನೌಪಚಾರಿಕ ಸಂಯೋಜನೆಗೆ ಅಪ್ಯಾಯಮಾನವಾಗಿ ಹೊಂದಿಕೊಂಡಿತು.

ಇಂದು ಜನಜನಿತವಾಗಿರುವಂತೆ ಕೂಚಿಪುಡಿ ಕೇವಲ ಏಕವ್ಯಕ್ತಿ ಪ್ರದರ್ಶನವಲ್ಲ. ಅದನ್ನು ಮೀರಿ ದೇವಾಲಯದಲ್ಲಿ, ಶ್ರೀಮಂತರ ಮನೆಗಳಲ್ಲಿ, ಸಾಮಾನ್ಯರ ಬಳಿಯಲ್ಲೂ ಕೂಚಿಪುಡಿಯ ಭಿನ್ನ ಪ್ರಬೇಧಗಳು (ಭಾಮಾ ಕಲಾಪಂ, ವೀಧಿ ನಾಟಕಂ, ಯಕ್ಷಗಾನಂ ಇತ್ಯಾದಿ) ವಿಕಸಿಸಿವೆ. ಅವುಗಳಲ್ಲಿ ಕೂಚಿಪುಡಿ ಯಕ್ಷಗಾನವೆಂದೇ ಹೆಸರಿನಲ್ಲೂ ರೂಪದಲ್ಲೂ ಕಾಲನ ಪರೀಕ್ಷೆ ಗೆದ್ದ ಪ್ರಕಾರವನ್ನೇ ಇಲ್ಲಿ ಕೇಂದ್ರೀಕರಿಸಿ ಪ್ರಸ್ತುತಿ, ಪರಾಮರ್ಶೆಯಲ್ಲದೆ ಸಂಜೆಯ ಪರಿಪೂರ್ಣ ರಂಗಪ್ರಸ್ತುತಿಗೂ ವ್ಯವಸ್ಥೆ ಮಾಡಲಾಗಿತ್ತು. ಕೂಚಿಪುಡಿ ಯಕ್ಷಗಾನ ಮತ್ತು ಕರ್ನಾಟಕದ ಕರಾವಳೀ ವಲಯದ ಯಕ್ಷಗಾನದ ಸಾಮ್ಯ ಬೇಧಗಳನ್ನು ಗುರುತಿಸಿಕೊಳ್ಳುತ್ತ ಒಂದು ರೀತಿಯ ತೌಲನಿಕ ಅಧ್ಯಯನಕ್ಕೆ ತೊಡಗಿದ್ದು ಈ ಶಿಬಿರದ ಬಲು ದೊಡ್ಡ ಸಾಧನೆ.

ಅಪರಾಹ್ನದ ಮೊದಲ ಕಲಾಪ, ಕೂಚಿಪುಡಿ ಯಕ್ಷ-ಸಂಗೀತದ ಪ್ರಸ್ತುತಿ ಮತ್ತು ಪರಾಮರ್ಶೆ. ಅಲ್ಲಿನ ಓರ್ವ ಹಿರಿಯ ಕೂಚಿಪುಡಿ-ಯಕ್ಷಗಾನ ಭಾಗವತ (ಕ್ಷಮಿಸಿ, ಹೆಸರು ಮರೆತಿದ್ದೇನೆ.), ಅದಕ್ಕೂ ಮಿಗಿಲಾಗಿ ಕರ್ನಾಟಕ ಸಂಗೀತದ ವಿಖ್ಯಾತ ವಿದ್ವಾಂಸರ (ಇಂದು ನಮ್ಮೊಡನಿಲ್ಲ) ಈರ್ವರು ಮೊಮ್ಮಗಳಂದಿರು – ಶಿಷ್ಯೆಯರೂ ಹೌದು – ಪಾವನಿ ಮತ್ತು ಪವಿತ್ರ ಈ ಕಲಾಪಕ್ಕೆ ಕಲಾಸಂಪನ್ನರು. ಅವರು ಪ್ರಾಯದ ಎಳಸು, ನಡವಳಿಕೆಯ ಸಂಕೋಚಗಳಿಗೆ ಮೀರಿದ ವಿದ್ವತ್ತು, ವಿನಯ ಮತ್ತು ಧೈರ್ಯದೊಡನೆ ವಿಷಯ ನಿರ್ವಹಣೆ ಮಾಡಿದರು. ಇಬ್ಬರೂ ಒಂದೇ ಉಸಿರಿನಲ್ಲಿ ಎಂಬಂತೆ ಒಂದೊಂದು ನುಡಿ ‘ನೀನು, ನಾನು’ ಎಂಬಂತೆ ಚುಟುಕು ಇಂಗ್ಲಿಷಿನಲ್ಲೇ ನಿರೂಪಿಸುತ್ತ, ತಡವರಿಕೆಯಿಲ್ಲದೆ ಹಾಡುತ್ತ ಹೋದರು. (ಕೊನೆಯಲ್ಲಿ ತಿಳಿದು ಬಂದಂತೆ, ಅವರು ಇದೇ ಮೊದಲು ಹೀಗೊಂದು ಗೋಷ್ಠಿಯನ್ನುದ್ದೇಶಿಸಿ ಪ್ರದರ್ಶನ, ಭಾಷಣ ನಡೆಸಿದ್ದಂತೆ!)

ಪಾವನಿ, ಪವಿತ್ರ ಜೋಡಿ ಬೇರೆ ಬೇರೆ ಪ್ರಸಂಗಗಳ – ಭಾಮಾಚರಿತಮು, ಪ್ರಹ್ಲಾದ ಚರಿತಮು ಇತ್ಯಾದಿ, ಉಲ್ಲೇಖಿಸುತ್ತಿದ್ದುದು ನಮಗೆ ಸ್ಪಷ್ಟವಾಗುತ್ತಿತ್ತು. ಮುಂದುವರಿದು ‘ಪ್ರವೇಶ ದರುವು’ (ಸ್ವಪರಿಚಯ, ಮಟ್ಟು ಎನ್ನುವ ಪದಗಳಿಗಿದು ಪರ್ಯಾಯವಾಗಿ ಬಳಕೆಯಾಗುತ್ತದೆಂದು ನಡೆದ ಚರ್ಚೆಯಲ್ಲಿ ಸ್ಪಷ್ಟವಾಯ್ತು) ಎಂದರೇನು? ಅದಕ್ಕೂ ಮಿಗಿಲಾಗಿ ಹಾಡುಗಾರಿಕೆ ಶುದ್ಧ ಕರ್ನಾಟಕ ಸಂಗೀತ ಕಛೇರಿಯ ಭಾವ ಮೂಡಿಸುತ್ತಿತ್ತು. ಆದರೆ ಮೃದಂಗದ ನುಡಿಗಳು ಶುದ್ಧ ಸಂಗೀತ ಕಛೇರಿಯಂತೆ ಭಾವಾನುಸಾರಿಯಾಗುವುದಕ್ಕೂ ಮಿಗಿಲಾಗಿ ನಾಟ್ಯಾನುಸಾರಿಯಿದ್ದಂತೆ ಕೇಳುತ್ತಿತ್ತು. ಕೂಚಿಪುಡಿ ಯಕ್ಷಗಾನದ ಪೂರ್ವ ಪರಿಚಯವೇ ಇಲ್ಲದ ಬಹುತೇಕ ಸಭಿಕರಿಗೆ ಇದು ಬಿಡಿಸಲಾಗದ ಒಗಟಾಗಿ ಕಾಡಿತು. ಒಂದು ತರದಲ್ಲಿ, ಪೂರ್ವಾಹ್ನದ ಗುಂಡ್ಮಿ ಸದಾನಂದ ಐತಾಳರ ಪ್ರಸ್ತುತಿ ಹೊರಗಿನಿಂದ ಬಂದವರಿಗೆ ತಂದ ಸಮಸ್ಯೆ ಈಗ ನಮಗೊದಗಿತ್ತು! ಕೂಚಿಪುಡಿಯಲ್ಲಿ ಸಂಶೋಧನಾ ಪ್ರಾಧ್ಯಾಪಿಕೆಯೇ ಆಗಿರುವ ಡಾ| ಶ್ರೀದೇವಿ ಇಂಗ್ಲಿಶಿನಲ್ಲೂ ಇನ್ನೋರ್ವ ಹಿರಿಯ ವಿದ್ವಾಂಸ ಪಾಸುಮರ್ತಿ ಕೇಶವಪ್ರಸಾದ್ ತೆಲುಗಿನಲ್ಲೂ ವೈಜಯಂತಿ ಕಾಶಿಯವರು ಕನ್ನಡದಲ್ಲೂ ವಿವರಣೆಗಳನ್ನೇನೋ ಕೊಟ್ಟರು. ಆದರೆ ಅವೆಲ್ಲ ಅಪರ್ಯಾಪ್ತ ಎನ್ನುವ ಸ್ಥಿತಿಯಲ್ಲಿ ರಕ್ಷಣೆಗೆ ಒದಗಿದವರು ಸ್ವತಃ ಹುಡುಗಿಯರಿಬ್ಬರ ತಂದೆ (ಮತ್ತೆ ಕ್ಷಮಿಸಿ, ಇವರ ಹೆಸರೂ ನನ್ನ ನೆನಪಿನಲ್ಲಿಲ್ಲ). ಅದುವರೆಗೆ ವೇದಿಕೆಯಿಂದ ಕೆಳಗೆ ಅಜ್ಞಾತನಂತೆ ಮಕ್ಕಳ ಕಲಾಪವನ್ನು ವಿಡಿಯೋ ದಾಖಲಿಸುತ್ತಿದ್ದವರು ರಂಗ ಏರಿ, ಮಕ್ಕಳ ಹಾಡಿಗೆ ಖಚಿತವಾದ ನಾಟ್ಯಾಭಿನಯದ ತೊಡವು ಕೊಟ್ಟು ರಂಜಿಸಿದರು.

ನಮ್ಮ ಯಕ್ಷಗಾನ ಸಂಗೀತವಾದರೋ ಇತ್ತ ಕರ್ನಾಟಕದಲ್ಲೂ ಅತ್ತ ಹಿಂದುಸ್ತಾನಿಯಲ್ಲೂ ಸಾಕಷ್ಟು ಜ್ಞಾತಿಗಳನ್ನು ಕಾಣಿಸುತ್ತದೆ. ಅದರ ಮೇಲೆ ಇಂದು ಸಿನಿಮಾ, ಜಾನಪದ, ಭಾವಗೀತೆಗಳೆಲ್ಲದರ ದುಷ್ಪ್ರಭಾವವೂ ಅಪರಿಮಿತವಾಗಿ ಆಗುತ್ತಲೇ ಇದೆ. ಆದರೂ ಅದು ತನ್ನ ‘ಮಟ್ಟು’ಗಳನ್ನು ಪೂರ್ತಿ ಕಳೆದುಕೊಂಡಿಲ್ಲ. ಆದರೆ ಕೂಚಿಪುಡಿಯ ಗಾಯನಶೈಲಿಯ ಕುರಿತಂತೆ ಪಾವನಿ-ಪವಿತ್ರರೇ ಹೇಳಿಕೊಂಡಂತೆ ಅದು ತನ್ನೆಲ್ಲ ಅಸ್ತಿತ್ವವನ್ನು ಯಾವುದೇ ಅಪರಾಧ ಪ್ರಜ್ಞೆಯಿಲ್ಲದೆ ಕರ್ನಾಟಕ ಸಂಗೀತಕ್ಕೆ ಒಪ್ಪಿಸಿಬಿಟ್ಟಿದೆ. ಬಾಲಕಿಯರಿಬ್ಬರ ಸುಪ್ರಸಿದ್ಧ ಅಜ್ಜ, ಕರ್ನಾಟಕ ಸಂಗೀತದ ಪ್ರಾವೀಣ್ಯದಲ್ಲಿ ಇಲ್ಲೂ ಧಾರಾಳವಾಗಿ ಗಮಕಗಳನ್ನು ಸೇರಿಸುತ್ತಿದ್ದದ್ದನ್ನೂ ಇವರು ಒಪ್ಪಿಸಿದರು. ಕೊನೆಯಲ್ಲಿ ಅವರ ಅಜ್ಜನದೇ ರಚನೆಯ ತಿಲ್ಲಾನ ಹಾಡಿಯೇ ತಮ್ಮ ಪ್ರಸ್ತುತಿಯನ್ನು ಮುಗಿಸಿದ್ದರು.

ಕೂಚಿಪುಡಿಯಲ್ಲಿ ಈ ಕಲಾಪಗಳು ‘ಯಕ್ಷಗಾನ’ಗಳೇ ಹಾಡುವವನು ಭಾಗವತನೇ. ವೇಷಭೂಷಣ, ಗೀತ, ನಾಟ್ಯಾಭಿನಯ, ಸಂಭಾಷಣೆಗಳಲ್ಲೆಲ್ಲಾ ಕೂಚಿಪುಡಿ ಯಕ್ಷಗಾನಕ್ಕೆ ನಮ್ಮ ಯಕ್ಷಗಾನದೊಡನಿರುವ ಸಾಮ್ಯಗಳ ವಿವರ ಕೇಳಕೇಳುತ್ತ ನಮ್ಮ ‘ಯಕ್ಷಗಾನ,’ ಭಾರತದ ಭೂಪಟದಲ್ಲಿ ಅದ್ವಿತೀಯ ಎನ್ನುವ ಭ್ರಮೆ ನನಗಂತೂ ಅಳಿಯಿತು! ಆದರೆ ಅದೇ ವೇಳೆಗೆ ನಮ್ಮದು ಅತ್ಯಂತ ಜೀವಂತ ಎಂಬ ಬಗ್ಗೆ ಅಪಾರ ಹೆಮ್ಮೆಯೂ ಮೂಡಿತು. ಸಂಜೆಯ ಕೂಚಿಪುಡಿ ಮೇಳ ಒಂದರ ಪೂರ್ಣಪ್ರಮಾಣದ (ಸಮಯಮಿತಿಗೊಳಪಟ್ಟು) ‘ಪ್ರಹ್ಲಾದ ಚರಿತಮು’ ಪ್ರದರ್ಶನದ ಬೆಳಕು ಬಿದ್ದ ಮೇಲಂತೂ ನಾವು ನಮ್ಮದೇ ಕೂಪಮಂಡೂಕತ್ವದಲ್ಲಿ ಕಳೆದುಕೊಂಡ ‘ನಿಜ ಸಾಂಸ್ಕೃತಿಕ’ ಭಾರತವನ್ನೇ ಗಳಿಸಿದ ಆನಂದವಾಯ್ತು.

ಹಗಲಿನ ನಾಲ್ಕನೇ ಕಲಾಪ – ಯಕ್ಷಗಾನ ನೃತ್ಯಬಂಧಗಳು. ಗುರು ಬನ್ನಂಜೆ ಸಂಜೀವ ಸುವರ್ಣರು ಕೇಂದ್ರದ್ದೇ ಸಮರ್ಥ ಹಿಮ್ಮೇಳದೊಡನೆ (ಭಾಗವತ ಸತೀಶ ಕೆದಿಲಾಯ, ಮದ್ದಳೆ ದೇವದಾಸ ಕೂಡ್ಲಿ ಮತ್ತು ಚಂಡೆ ಕೃಷ್ಣಮೂರ್ತಿ ಭಟ್) ಕೃತಿಯೇ ಮಾತು ಎನ್ನುವಂತೆ ಕುಣಿದು, ಅಭಿನಯಿಸಿ ತೋರಿದರು. ಅವರದೇ ಶಿಷ್ಯರ ಬಳಗ ಸಮರ್ಥವಾಗಿ ಸಹಕಾರವನ್ನು ಕೊಟ್ಟಿತು. ಸಂಜೀವರು ಸಂಕ್ಷಿಪ್ತ ಪೂರ್ವರಂಗದ ತುಣುಕುಗಳ ಹೊರತಾಗಿ ಸನ್ನಿವೇಶದ ಅಗತ್ಯಕ್ಕೆ ತಕ್ಕಂತೆ ತಾಳ ಮತ್ತು ನಾಟ್ಯದ ಸಂಯೋಜನೆಯನ್ನಷ್ಟೇ ಬಿಂಬಿಸುತ್ತಿದ್ದರು. ಆದರೆ ಸಭೆಯಲ್ಲಿದ್ದ ಕೆಲವರಿಗೆ ನಮ್ಮ ‘ಯಕ್ಷ-ಪೆರ್ಮೆ’ಯನ್ನು ಅತಿಥಿಗಳು (ಅನ್ಯ ನಾಟ್ಯಪ್ರಕಾರಗಳಿಂದ ಬಂದವರು) ರಸಹೀನ ಕಸರತ್ತೆಂದು ಕೀಳೆಣಿಸಿಯಾರೇ ಎಂಬ ಸಂಶಯ ಕಾಡಿದ್ದಿರಬೇಕು. ಪದ್ಯ ಸಾಹಿತ್ಯಕ್ಕೆ ಪೂರಕವಾಗುವಂತೆ ಸಾಭಿನಯ ನಾಟ್ಯಕ್ಕೆ ಒತ್ತಾಯಿಸಿದರು. ಪಾವನಿ ಪವಿತ್ರರ ತಂದೆಗೆ ಬಂದ ಅನಿವಾರ್ಯತೆ ಇಲ್ಲಿ ಸಂಜೀವರೂ ಮನಗಂಡರು. ಮರುಕ್ಷಣದಲ್ಲಿ ಸವ್ಯಸಾಚಿ ಸಂಜೀವರು ಚಿತ್ರಾಂಗದೆಯಾಗಿ, ಶಿಷ್ಯನೊಬ್ಬನನ್ನು ಸಖಿಯಾಗಿಸಿಕೊಂಡು ನೀಡಿದ ಅಭಿನಯ ನಿರೀಕ್ಷೆಯಂತೆ ಮನೋಹರವಾಯ್ತು.

ಸಂಜೀವರು ತಮ್ಮ ಕಲಾಪದ ಆದಿಭಾಗದಲ್ಲಿ ಪ್ರತಿ ಕಲಾವಿದ ರಂಗದ ಮೇಲೆ ವೇಷಧಾರಿ ಮತ್ತು ಪಾತ್ರಧಾರಿ ಎಂಬೆರಡು ಅವಸ್ಥೆಗಳಲ್ಲಿ ನಿರಂತರ ವ್ಯವಹರಿಸುತ್ತಿರುತ್ತಾನೆ ಎಂದಿದ್ದರು. ಅದಕ್ಕೆ ಪ್ರಾತ್ಯಕ್ಷಿಕೆಯಾಗಿ ಶಿಷ್ಯನೊಬ್ಬನನ್ನು ಅರ್ಜುನನ ಪ್ರತೀಕವಾಗಿ ಸುಮ್ಮನೆ ನಿಲ್ಲಿಸಿ (ವೇಷಧಾರಿ), ತಾನು ಬಭ್ರುವಾಹನನ ಪಾತ್ರಧಾರಿಯಾಗಿ ದುಡಿಮೆ ಕೊಟ್ಟಿದ್ದರು. ಅನಂತರ ಆತನನ್ನೇ ಬಭ್ರುವಾಹನನ ಪ್ರತೀಕವಾಗಿ (ವೇಷಧಾರಿ) ನಿಲ್ಲಿಸಿ, ಸ್ವತಃ ಅರ್ಜುನನಾಗಿ (ಪಾತ್ರಧಾರಿ) ಪ್ರತಿಕ್ರಿಯಿಸಿದ್ದರು. ಮಾತುಭಾರಿಯಲ್ಲದ (ಕಾರುಭಾರಿ ಖಂಡಿತ) ಸಂಜೀವರ ಈ ಹಿಡಿದಿಡುವ ಮಾತನ್ನು ಸಾಮಗರು ಎತ್ತಿ ಆಡಿಸಿದ್ದಕ್ಕೆ, ಕೊನೆಯಲ್ಲಿ ಸಂಜೀವರು ತುಸು ಹೆಚ್ಚಿನ ವಿವರಣೆ ನೀಡುವುದೂ ಅನಿವಾರ್ಯವಾಯ್ತು. ಒಟ್ಟು ಒಂದೆರಡು ಗಂಟೆಯ ನಾಟಕದ ರಂಗಕ್ರಿಯೆಯ ಅಗತ್ಯಗಳನ್ನು ರಾತ್ರಿಯಿಡೀ ವ್ಯಸ್ತವಾಗುವ ಯಕ್ಷ-ರಂಗ ಅಳವಡಿಸಿಕೊಳ್ಳುವುದು ಅಸಾಧ್ಯವೂ ಅನಾವಶ್ಯಕವೂ ಎನ್ನುವುದನ್ನು ಪ್ರತಿಪಾದಿಸಿದರು. (ಆ ಲೆಕ್ಕದಲ್ಲಿ ಯಕ್ಷಗಾನ ‘ಒಳ್ಳೇ ನಾಟಕದಂತಿತ್ತು’ ಎನ್ನುವುದು ಅವಹೇಳನಕರ ಮಾತೇ ಆಗುತ್ತದೆ ಎನ್ನುವುದನ್ನೂ ಸಂಜೀವರು ಧ್ವನಿಸಿದರು!) ಭೂತಪಾತ್ರಿಯ ಆವೇಶದ ಉದಾಹರಣೆ ಕೊಟ್ಟದ್ದಂತೂ ಮನನೀಯವಾಗಿತ್ತು. ಪರೋಕ್ಷವಾಗಿ ‘ಸಂಗೀತ’ ಪ್ರಯೋಗ ಮಾಡುವ ಭಾಗವತರುಗಳಿಗೂ ‘ಪರಿಣತಿ’ ಪ್ರದರ್ಶಿಸುವ ಇತರ ಹಿಮ್ಮೇಳ ವಾದಕರಿಗೂ ‘ಯಕ್ಷಗಾನ ಸಮೂಹಕಲೆ’ ಎಂಬ ದಿವ್ಯ ಸತ್ಯವನ್ನು ಮತ್ತೊಮ್ಮೆ ‘ಕುಟ್ಟಿ’ ಹೇಳಿದಂತಿತ್ತು!

ದಿನದ ಕೊನೆಯ ಅಂಗವಾಗಿ ಎರಡು ಪೂರ್ಣ ಪ್ರಮಾಣದ (ಸೀಮಿತ ಅವಧಿಯ) ರಂಗ ಪ್ರದರ್ಶನಗಳದ್ದೇ ವ್ಯವಸ್ಥೆಯಾಗಿತ್ತು. ಮೊದಲಿಗೆ ಕೂಚಿಪುಡಿ ಗ್ರಾಮದಿಂದಲೇ ಬಂದಿದ್ದ ಚಿಂತಾ ಬಾಲಕೃಷ್ಣರ ತಂಡದಿಂದ, ಅನಂತರ ಕೊಂಡದಕುಳಿ ರಾಮಚಂದ್ರ ಹೆಗಡೆಯವರ ತಂಡದಿಂದ; ಪ್ರಸಂಗ (ಪ್ರಾದೇಶಿಕ ಭಿನ್ನ ಪಾಠಾಂತರಗಳೊಡನೆ) ಪ್ರಹ್ಲಾದ ಚರಿತ್ರೆ. ನಮ್ಮಲ್ಲಿರುವ ‘ಭಾಗವತ ಮೊದಲ ವೇಷಧಾರಿ’ ಎನ್ನುವ ಮಾತನ್ನು ಕೂಚಿಪುಡಿ ಹೆಚ್ಚು ವಾಸ್ತವದಲ್ಲೇ ತೋರಿಸುತ್ತದೆ. ಎರಡು ಭಾಗವತರು (ಸ್ತ್ರೀ ಧ್ವನಿಗೆ ಮೂರನೆಯವರೂ ಇದ್ದರು. ಇದು ಯಕ್ಷವಸಂತಕ್ಕಾಗಿ ಮಾಡಿಕೊಂಡ ವಿಶೇಷ ವ್ಯವಸ್ಥೆಯೋ ನನಗೆ ತಿಳಿದಿಲ್ಲ. ಆದರೆ ಈಕೆ ಹಾಡುಗಾರಿಕೆ ಮೀರಿದ ರಂಗಕ್ರಿಯೆಯಲ್ಲಿ ತೊಡಗಿಕೊಳ್ಳಲಿಲ್ಲ) ಪೌರಾಣಿಕ ಉಡುಪು ಸಂಹಿತೆಯಲ್ಲೇ ಇದ್ದರು ಮತ್ತು ಪ್ರಸಂಗದ ಆಯಕಟ್ಟಿನ ಸನ್ನಿವೇಶಗಳಲ್ಲಿ ಪೀಠದಿಂದಿಳಿದು ನರ್ತನ ವಾಚ್ಯಾದಿ ರಂಗಕ್ರಿಯೆಗಳಲ್ಲೂ ತೊಡಗಿಕೊಳ್ಳುತ್ತಿದ್ದರು.

ನಮ್ಮ ಯಕ್ಷಗಾನದಲ್ಲಿ ಪೂರ್ವರಂಗದ ಕಲಾಪಗಳು ದೇವಾರಾಧನೆಯತ್ತ ಒಲವು ತೋರುತ್ತವೆ. ಆದರೆ ಕೂಚಿಪುಡಿ ರಂಗ ಮತ್ತು ಪ್ರಸಂಗಕ್ಕೆ ಹೆಚ್ಚಿನ ಮನ್ನಣೆ ಕೊಡುತ್ತದೆ. ನಮ್ಮ ಗಣಪ ಚೌಕಿ ಬಿಟ್ಟು ರಂಗಕ್ಕೆ ಬಂದರೂ ಕಲಾವಿದ ಮತ್ತು ಪ್ರೇಕ್ಷಕರಿಂದ ಪೂಜೆ ಕೊಳ್ಳುವವನಾಗುತ್ತಾನೆ. ಆದರೆ ಕೂಚಿಪುಡಿಯಲ್ಲಿ ಪ್ರೋಕ್ಷಣೆ, ದೀಪ, ಧೂಪ, ಪುಷ್ಪ ಕೊನೆಯಲ್ಲಿ ಸ್ವತಃ ಮೊಗ ಹೊತ್ತ ಗಣಪ ಪಾತ್ರಧಾರಿಯೇ ಬಂದು ರಂಗವನ್ನೂ ಪ್ರೇಕ್ಷಕರನ್ನೂ ಹರಸುತ್ತಾನೆ! ಪ್ರಸಂಗದ ಕೊನೆಯಲ್ಲಿ ವಿಜೃಂಭಿಸಿದ ಪಾತ್ರವಾಗಿ ಬಂದ ನರಸಿಂಹನಿಗೆ ಪೂಜೆ ಸಂದಿತೇ ವಿನಾ ವಿಸ್ತೃತ ‘ರಂಗನಾಯಕ, ರಾಜೀವಲೋಚನನಿಗೆ’ ಸ್ತುತಿ ನಡೆದಂತೆ ಕಾಣಲಿಲ್ಲ. (ಇದು ನನ್ನ ಭಾಷಾ ಅಜ್ಞಾನದ ಕೊರತೆಯೂ ಇರಬಹುದು)

ಕೂಚಿಪುಡಿ ವೇಷ ಭೂಷಣಗಳಲ್ಲಿ ನಮ್ಮ ಯಕ್ಷಗಾನಕ್ಕಿಂತಲೂ ಹೆಚ್ಚು ಆಧುನಿಕಕ್ಕೆ ತೆರೆದುಕೊಂಡದ್ದು ಸ್ಪಷ್ಟವಾಗುತ್ತದೆ. ಆದರೂ ಹಿರಣ್ಯಕಶ್ಯಪನ ಮರದ ಭುಜಕೀರ್ತಿ ಒಟ್ಟು ಆಹಾರ್ಯದ ಪುನಾರಚನೆಗೆ ಅವಕಾಶ ತೆರೆದೇ ಇದೆ ಎಂಬುದನ್ನು ಸೂಚಿಸುತ್ತದೆ. ಇಲ್ಲಿ ವೇಷಧಾರಿಗಳು ನಾಟ್ಯಾಭಿನಯದೊಡನೆ ಹಾಡಿಕೆಯಲ್ಲೂ ಪಾತ್ರಪೋಷಣೆ ಮಾಡುವುದು ಸಂಪ್ರದಾಯವೇ ಆಗಿದೆ. (ನಮ್ಮ ಯಕ್ಷಗಾನದಲ್ಲಿ ಮುಖ್ಯವಾಗಿ ಬಡಾಬಡಗಿನವರು ಪದ್ಯಗಳನ್ನೇ ಹಾಡಿಕೊಳ್ಳುವ ರೀತಿ, ಪಾತ್ರಧಾರಿಯ ವಾಚಿಕಾಭಿನಯ ಶ್ರುತಿಬದ್ಧವಾಗಿರಬೇಕೆಂಬ ವಾದವನ್ನೂ ಇಲ್ಲಿ ಅವಶ್ಯ ಜ್ಞಾಪಿಸಿಕೊಳ್ಳಬಹುದು.) ನಮ್ಮಲ್ಲಿನಂತೇ ಕೂಚಿಪುಡಿಯೂ ಮೈಕ್ (ಮತ್ತು ಪ್ರಖರ ಬೆಳಕು) ಪೂರ್ವದಿನಗಳ ಆಪ್ತರಂಗಭೂಮಿಯ ಮಿತಿ ಹರಿದುಕೊಂಡೇ ಬೆಳೆದು ನಿಂತಂತಿದೆ. ಹಾಗಾಗಿ ಇಂದು ನಾಟ್ಯಾಭಿನಯದ ಅನಿವಾರ್ಯತೆಯಲ್ಲಿ ಪ್ರೇಕ್ಷಕರಿಗೆ ಕೇಳದಾಗುವ (ಮೈಕ್ ದೂರರಾದ) ಪಾತ್ರಧಾರಿಗಳ ಹಾಡನ್ನು ಭಾಗವತರು ಹಿಮ್ಮೇಳ ಸಹಿತ ತುಂಬಿಕೊಡುವುದು ರೂಢಿಸಿರಬೇಕು. ಆದರೂ ವೇಷಧಾರಿಗಳು ಸಣ್ಣ ಗುನುಗಿನ ಮಟ್ಟದಲ್ಲೋ ಕನಿಷ್ಠ ತುಟಿಚಲನೆಯಲ್ಲೋ ಪ್ರಸಂಗ ಸಾಹಿತ್ಯದ ಹೊಕ್ಕುಳಬಳ್ಳಿ ಹರಿದುಕೊಳ್ಳದೇ ನಡೆಯುವುದು ಸ್ಪಷ್ಟವಾಗಿ ಇಂದೂ ನಡೆಯುತ್ತಿದೆ. ಬಹುಶಃ ಈ ಉದ್ದದ ಶುದ್ಧ ಸಂಗೀತ ಮತ್ತು ಸಾಭಿನಯ (ಬಹುತೇಕ ಸೂಕ್ಷ್ಮಗಳನ್ನು ಕಳೆದುಕೊಂಡಂತಿದೆ) ತಾಳನಡೆಯ ಶ್ರಮ ಇವರ ಅನಿವಾರ್ಯ ವಾಚಿಕಾಭಿನಯವನ್ನು ಅಗತ್ಯದ ಮಾತುಗಳ ಮಿತಿಯಲ್ಲೇ ಉಳಿಸಿಬಿಡುತ್ತದೆ.

ಸಹಜವಾಗಿ ನಾನು ನೋಡಿದ ಒಂದೇ ಪ್ರದರ್ಶನದಲ್ಲೂ ಸೃಜನಶೀಲತೆಯ ಕೊರತೆಯೂ ನಿಯತ ಕವಾಯತು ಒಪ್ಪಿಸುವ ಪರಿಣಾಮವೂ ಕಂಡು ಬಂತು. ಕೂಚಿಪುಡಿ ಯಕ್ಷಗಾನ ಇಂದು ಜನದೂರವಾದ್ದಕ್ಕೆ ಇದು ಪ್ರಬಲ ಕಾರಣವೂ ಇರಬಹುದು ಅನಿಸಿತು.

ಕರ್ನಾಟಕ ಯಕ್ಷಗಾನದ ಪ್ರತಿನಿಧಿಯಾಗಿ ಕೊಂಡದಕುಳಿ ಬಳಗದವರ ಪ್ರಹ್ಲಾದ ಚರಿತ್ರೆಯೂ ಕಾಲಮಿತಿಗೊಳಪಟ್ಟು ನಡೆಯಿತು. ಇದು ನಾನು ಮೊದಲು ನೋಡದ್ದೇನೂ ಅಲ್ಲ. ಅಲ್ಲದೆ ನನ್ನ ಕಾಲಮಿತಿಯೂ ಬಳಲಿದ್ದರಿಂದ ನಾನು ಬೇಗನೆ ಎದ್ದು ಮಂಗಳೂರಿಗೆ ಮರಳಿದೆ.

ಆಂಧ್ರಪ್ರದೇಶದ ಕೂಚಿಪುಡಿ ಹಳ್ಳಿಯಿಂದಲೇ ಬಂದ ಕಲಾವಿದರಲ್ಲದೆ ಕೆಲವು ಹಿರಿತಲೆಯ ಭಿನ್ನ ನೃತ್ಯಾಸಕ್ತರೂ ನೃತ್ಯ ಗುರುಗಳೂ ವಿದ್ಯಾರ್ಥಿಗಳೂ ಸೇರಿ ‘ಯಕ್ಷವಸಂತ’ದ ಕಲಾಪಗಳು ಆದರ್ಶಯುತವಾಗಿಯೇ ನಡೆಯಿತೆನ್ನಬೇಕು. ಎಲ್ಲಕ್ಕೂ ಮುಖ್ಯವಾಗಿ ಇತ್ತ ಯಕ್ಷಗಾನ ಕುರಿತಂತೆ ಸಾಮಗರು, ಅತ್ತ ಕೂಚಿಪುಡಿ ಕುರಿತಂತೆ ವೈಜಯಂತಿಯವರು ತಮ್ಮ ಅಪಾರ ಅನುಭವ, ಹಿನ್ನೆಲೆ, ಆಸಕ್ತಿಗಳೊಡನೆ ಅನೌಪಚಾರಿಕವಾಗಿ ಕಾರ್ಯಕರ್ತರಂತೆ ಶಿಬಿರದ ಎಲ್ಲಾ ವಿವರಗಳಲ್ಲೂ ತೊಡಗಿಕೊಂಡಿದ್ದರು. ಅಕಾಡೆಮಿ, ವಿವಿನಿಲಯಗಳಂಥ ಬಹುತೇಕ ಗಂಭೀರ ವಿಷಯ ಕೇಂದ್ರಿತ ಸಂಸ್ಥೆಗಳಲ್ಲಿಂದು ಸ್ವಂತದ ವೈಯಕ್ತಿಕ ಸವಲತ್ತುಗಳನ್ನೇ ಗುಡ್ಡೆ ಹಾಕುವವರನ್ನು ಕಾಣುತ್ತೇವೆ. ಅಂಥವರು ಕಾರ್ಯರಂಗದಲ್ಲೂ ಪೀಠ ಗೌರವದ ಹುಸಿಮುಸುಕಿನಲ್ಲಿ ತಮ್ಮ ಅಜ್ಞಾನವನ್ನು ಮರೆಸುತ್ತ, ಅಧಿಕಾರವನ್ನು ಮೆರೆಸುವುದು ರೂಢಿಯೇ ಆಗಿದೆ. ತದ್ವಿರುದ್ಧವಾಗಿದ್ದ ಎಂ.ಎಲ್ ಸಾಮಗ ಮತ್ತು ವೈಜಯಂತಿ ಕಾಶಿಯವರನ್ನು ಯಕ್ಷವಸಂತದ ಕಲ್ಪನೆಯಿಂದ ತೊಡಗಿ ಯಶಸ್ಸಿನವರೆಗೆ ಹೆಸರಿಸಿ ಅಭಿನಂದಿಸಲೇ ಬೇಕು. ಇನ್ನೂ ಹೆಚ್ಚಿನದನ್ನು ಸಾಧಿಸಲು ಕನಿಷ್ಠ ನೈತಿಕ ಬಲವನ್ನಾದರೂ ಕೊಡಲೇ ಬೇಕು.

ಈ ಲೇಖನದ ವಿಡಿಯೋಗಳನ್ನು ನೋಡಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ

https://youtu.be/R_dtCNk7yy4

https://youtu.be/4il9xlovJjM

https://youtu.be/hAyKnD4buAA

https://youtu.be/JxmzncoLaxU

https://youtu.be/6KyTK-9qr-I

https://youtu.be/NeEUOfIv1ak

https://youtu.be/9eSS7c9sfjs