‘ಪಂಚಮೇಳಗಳ ಕೂಡಾಟ, ಸಪ್ತ ಕಲ್ಯಾಣಗಳೇ ಪ್ರಸಂಗ’ ಎಂದು ಅಜಿತ್ ಕುಮಾರ್ ಹೆಗಡೆ ಶಾನಾಡಿಯವರು ಆಮಂತ್ರಣ ಕಳಿಸಿದಾಗ ನಾನು ಎರಡನೇ ಯೋಚನೆ ಮಾಡಲಿಲ್ಲ. ಶಾನಾಡಿ ಮನೆಗೆ ದಾರಿ, ಸಾರ್ವಜನಿಕ ವಾಹನ ಸೌಕರ್ಯದ ವಿವರ ಮಾತ್ರ ಕೇಳಿದೆ. ಅಜಿತರೂ ಸೇರಿದಂತೆ ಆ ಕುಟುಂಬದ ಐದು ವಿಭಿನ್ನರು ಮಂದರ್ತಿ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರಿಗೆ ಹೇಳಿಕೊಂಡ ಹರಿಕೆಯಾಟವನ್ನು ಏಕತ್ರ ಸಂಯೋಜಿಸಿದ್ದು ಈ ಪ್ರಯೋಗದ ಪ್ರಾಥಮಿಕ ಹೆಜ್ಜೆ. ಯಕ್ಷಗಾನವನ್ನು ಆರಾಧನೆಯ ಅಂಗವಾಗಿ ಒಪ್ಪಿಕೊಂಡವರು ಇರುವುದರಿಂದವೇ ಮಂದರ್ತಿಯ ಐದೂ ಮೇಳಗಳಿಗೆ ಇನ್ನೂ ಹದಿನೆಂಟು ತಿರುಗಾಟಗಳಿಗೆ (ಅಂದರೆ ವರ್ಷಕ್ಕೆ) ಪೂರೈಸುವಷ್ಟು ಪ್ರದರ್ಶನಾವಕಾಶವಿದೆ ಎಂಬುದನ್ನು ಅಲ್ಲಗಳೆಯುವಂತಿಲ್ಲ. ಹಾಗಾಗಿ ಸೇವಾಕರ್ತರು ಮಧ್ಯಾಹ್ನಕ್ಕೆ ವಿಶೇಷ ಪೂಜೆ, ಸಾರ್ವಜನಿಕ ಅನ್ನಸಂತರ್ಪಣೆಯನ್ನೂ ಜಾಹೀರುಪಡಿಸಿದ್ದರು. ಅವೆಲ್ಲ ಕಲಾಸಕ್ತಿಗೆ ಹೊರತಾದವು ಎಂದು ನಾನು ಸಂಜೆ ಐದಕ್ಕೆ ಮಂಗಳೂರು ಬಿಟ್ಟೆ. ಉಡುಪಿ ಎಕ್ಸ್‌ಪ್ರೆಸ್ ಮತ್ತೆ ಕುಂದಾಪ್ರ ಎಕ್ಸ್‌ಪ್ರೆಸ್ಸ್‌ನಲ್ಲಿ ತೆಕ್ಕಟ್ಟೆ. ಹೆಸರಿನ ತುರುಸು (ಎಕ್ಸ್ ಪ್ರೆಸ್) ಬಸ್ಸುಗಳಿಗೇನೂ ಇರಲಿಲ್ಲವಾದ್ದರಿಂದ ಮತ್ತು ‘ರಾಷ್ಟ್ರೀಯ ಹೆದ್ದಾರಿ’ ಹೆಸರಿಗೆ ಅರ್ಥ ತುಂಬುವ ಕೆಲಸವೂ ಪೂರೈಸಿಲ್ಲವಾದ್ದರಿಂದ ನಾನು ಬಸ್ಸಿಳಿಯುವಾಗ ಕತ್ತಲ ಏಳೂವರೆ ಗಂಟೆಯಾಗಿತ್ತು. ‘ಆಟದ ಮನೆಗೆ ದಾರಿ’ ಸೂಚಕಗಳೇನೋ ಸ್ಪಷ್ಟವಾಗಿಯೇ ಇತ್ತು. ಆದರೆ ಅಜಿತರು ತಿಳಿಸಿದ್ದ ಒಂಬತ್ತು ಕಿಮೀ ಅಂತರಕ್ಕೆ ಸಮೂಹ ಸಾರಿಗೆ ವ್ಯವಸ್ಥೆ ಮಾತ್ರ ಇಲ್ಲವೆಂದು ತಿಳಿಯಿತು. ಆಟೋ ರಾಕ್ಷಸರೇನೋ ಸೇವೆಗೆ ಸನ್ನದ್ಧರೇ ಇದ್ದರು ಆದರೆ ರುಸುಮು ನೂರಿಪ್ಪತ್ತರಿಂದ ನೂರೈವತ್ತು ಕೊಡುವುದಕ್ಕೆ (ಅವರದೇನೂ ತಪ್ಪಿಲ್ಲ ಬಿಡಿ) ನನ್ನ ಜುಗ್ಗ ಮನಸ್ಸು ಕೇಳುತ್ತಿರಲಿಲ್ಲ. ಒಂದೆರಡು ಅಂಗಡಿಗಳಲ್ಲಿ ವಿಚಾರಿಸಿದೆ, ಐದು ಹತ್ತು ಮಿನಿಟು ಯೋಚನೆಯಲ್ಲಿ ಶತಪಥ ಹಾಕಿದೆ.

ಆಟಕ್ಕಿನ್ನೂ ಎರಡು ಗಂಟೆ ಇರುವಾಗ, ಅದೂ ತಂಪು ಹೊತ್ತಿನಲ್ಲಿ ಒಂಬತ್ತು ಕಿಮೀ ನಡಿಗೆ ಏನೂ ದೊಡ್ಡದಲ್ಲ ಎಂದು ಯೋಚಿಸುತ್ತಿದ್ದೆ. ಆಗ ಕುಂದಾಪ್ರ ಕಡೆಯಿಂದ ಬಂದ ಒಂದು ಇನ್ನೋವಾ ಕಾರು ಈ ದಾರಿಗಿಳಿಯಿತು. ಕೈ ಎತ್ತಿದ್ದರಿಂದ ನಷ್ಟವೇನೂ ಇಲ್ಲ ಎಂದು ಕೈ ಎತ್ತಿದೆ. ಕಾರು ನಿಲ್ಲಿಸಿ, ಕನ್ನಡಿ ತುಸು ಜಾರಿಸಿ “ಎಲ್ಲಿಗೆ?” ನಾನು ಸಹಜವಾಗಿ “ಆಟದ ಮನೆಗೆ.” ನನಗಾಶ್ಚರ್ಯವಾಗುವಂತೆ ಗುರುತು, ವಿವರ ಕೇಳದೇ “ಹಿಂದೆ ಹತ್ತಿಕೊಳ್ಳಿ.” [ಕಾಲ ಕೆಟ್ಟದ್ದು. ನಾನೇ ಕಾರು ತಂದಿದ್ದರೆ ಇಷ್ಟು ಧೈರ್ಯ ಮಾಡುತ್ತಿದ್ದೆನೋ ಹೇಳುವುದು ಕಷ್ಟ]

ಕುಂದಾಪುರದ ಉದಯ ಕುಮಾರ್ ಶೆಟ್ಟಿ ಎಂದರೆ ಒಮ್ಮೆಗೆ ಗುರುತು ಸುಲಭವಾಗದಿರಬಹುದು. ಆದರೆ ಕೋಟೇಶ್ವರದ ಯುವ ಮೆರಿಡಿಯನ್ ಕನ್‌ವೆನ್ಷನ್ ಸೆಂಟರ್ (೨೪-೧೧-೧೨ರಂದು ಲೋಕಾರ್ಪಣೆಗೊಂಡ ಈ ವಲಯದ ಅದ್ವಿತೀಯ ಸಭಾಂಗಣ ಸಂಕೀರ್ಣ) ಖ್ಯಾತಿಯ, ವನ್ಯಜೀವಿ ಛಾಯಾಚಿತ್ರಗ್ರಹಣದಲ್ಲಿ ಅಂತಾರಾಷ್ಟ್ರೀಯವಾಗಿ ಗುರುತಿಸಲ್ಪಟ್ಟ, ತಾರುಣ್ಯದ ಗೆರೆ ದಾಟುವ ಮುನ್ನವೇ ಬಲು ದೊಡ್ಡ ಕಟ್ಟಡ ಉದ್ಯಮಿಯೆಂದೇ ಹೆಸರಾಂತ ವ್ಯಕ್ತಿಯಾಗಿ ಇರುವವರೊಬ್ಬರೇ ಉದಯ ಕುಮಾರ್ ಶೆಟ್ಟಿ. ಬಹುಶಃ ಜನಗಳನ್ನು ನೋಟದಲ್ಲೇ ಅಳೆಯುವ ತಾಕತ್ತಿದ್ದದ್ದಕ್ಕೆ ಇವರು ನನ್ನನ್ನು ಕಾರಿಗೇರಿಸಿಕೊಂಡಿದ್ದರು! (ಮಂಗಳೂರು ತನಗೆ ದೂರವಲ್ಲ ಎಂದು ಸಾರಲೆಂಬಂತೆ ಇವರು ಬಲ್ಲಾಳ್ ಭಾಗ್ ರಸ್ತೆಯ ಕಾಂಕ್ರೀಟೀಕರಣವನ್ನು ಚೆನ್ನಾಗಿಯೇ ನಡೆಸಿರುವುದನ್ನು ಇಲ್ಲಿ ಸ್ಮರಿಸಬಹುದು) ಅವರು ಗೆಳೆಯ ಅಜಿತ್ ಕುಮಾರರಿಗೆ ಸಮಾರಂಭದ ಶುಭಾಶಯ ಹೇಳಲಷ್ಟೇ ಶಾನಾಡಿಗೆ ಹೊರಟಿದ್ದರು. ನನ್ನ ದಿರುಸು, ನಿಲುವುಗಳಿಗೆ ಮೊದಲು ಮಣೆ ಹಾಕಿದರೂ ಹೆಸರಿನ ಪರಿಚಯವಾದ ಕೂಡಲೇ ನನ್ನ ವನ್ಯಾಸಕ್ತಿಯ ಕುರಿತೂ ಉದಯಕುಮಾರ್ ತಿಳಿದವರಿದ್ದರು. ಹಾಗೇ ನನ್ನ ಮುಂದುವರಿದ ಚಟುವಟಿಕೆಗಳನ್ನೂ ಅರ್ಥಪೂರ್ಣವಾಗಿ ವಿಚಾರಿಸಿಕೊಂಡು (ಉಪಚಾರಕ್ಕಾಗಿ ಕೇಳುವವರಂತಲ್ಲ), ಕೊನೆಯಲ್ಲಿ ನಾನು ಅವರ ಉಪಕಾರವನ್ನು ಸ್ಮರಿಸುವುದಕ್ಕಿಂತ ಹೆಚ್ಚಾಗಿ, ಅವರಿಗೆ ನಾನು ಸಿಕ್ಕಿದ ಭಾಗ್ಯ ದೊಡ್ಡದು ಎಂಬಂತೆ ಬಿಂಬಿಸಿಬಿಟ್ಟರು. ಒಂಬತ್ತು ಕಿಮೀ ದಾರಿ ಕಳೆದದ್ದು ನನಗೆ ಗೊತ್ತೇ ಆಗಲಿಲ್ಲ.

ಅವರಲ್ಲದಿದ್ದರೆ ಆ ಬಹುತೇಕ ನಿರ್ಜನ ದಾರಿಯುದ್ದಕ್ಕೆ ನಾನು ಒಂಟಿ ನಡಿಗೆಯಲ್ಲಿ (ಅಸಂಖ್ಯ ಕವಲು ಜಾಡುಗಳಲ್ಲೆಲ್ಲ ‘ಆಟದ ಮನೆಗೆ’ ನಿಶಾನಿ ಸ್ಪಷ್ಟವಿದ್ದರೂ) ಆತಂಕ ಅನುಭವಿಸಬೇಕಾಗಿತ್ತು. ಶಾನಾಡಿ ಮನೆಯ ಅಂಗಳದಲ್ಲಿ ಕಾರಿಳಿಯುವಾಗ ಉದಯಕುಮಾರ ಶೆಟ್ಟರಿಗೆ ನಾನು ನಿಜಕ್ಕು ಹೃದಯ ತುಂಬಿದ ಕೃತಜ್ಞತೆಗಳನ್ನು ಸಲ್ಲಿಸಿದೆ.

ಶಾನಾಡಿ ಅಜಿತ್ ಕುಮಾರ್ ಹೆಗ್ಡೆಯವರು ಕರ್ನಾಟಕ ಸರಕಾರದ ಉನ್ನತ ಅಧಿಕಾರಿ ವರ್ಗದಲ್ಲೊಬ್ಬರು. ‘ಪೂರ್ವಾಶ್ರಮ’ದಲ್ಲಿ, ಅಂದರೆ ಅವರು ಎಂಎ ಮಾಡಿದ ಹೊಸದರಲ್ಲಿ ಬ್ರಹ್ಮಾವರ ಕಾಲೇಜಿನ ಅಧ್ಯಾಪಕರಾಗಿದ್ದರಂತೆ. ಆಗಲೇ ಅವರಿಗೆ ನನ್ನಂಗಡಿ ರುಚಿ ಹಿಡಿದಿತ್ತಂತೆ. ಅವರು ಮುಂದೆ ಮಂಗಳೂರು ನಗರ ಸಭೆಯ ಆಡಳಿತಾಧಿಕಾರಿ ಆದ ಮೇಲಿನದಷ್ಟೇ ನನ್ನ ನೆನಪು – ಒಬ್ಬ ಅಪಾರ ಪುಸ್ತಕ ಖರೀದಿದಾರ ಮತ್ತು ಓದುಗ. ‘ಇವರೇನಪ್ಪಾ’ ಎಂಬ ಸಾಮಾನ್ಯ ಕುತೂಹಲದ ಮಾತುಗಳಲ್ಲಷ್ಟೇ ನನಗಿವರ ಹುದ್ದೆ ತಿಳಿದದ್ದು. (ಅಂಗಡಿಯಲ್ಲಿ ಹಲವು ಅಧಿಕಾರಿಗಳನ್ನು ಕಂಡಿದ್ದೇನೆ – ಮುಂದಾಗಿ ತಮ್ಮ ಸಹಾಯಕನನ್ನೋ ಕನಿಷ್ಠ ಚಾಲಕನನ್ನೋ ಕಳಿಸಿ ‘ಭೋ ಪರಾಕ್’ ನಿರೀಕ್ಷಿಸುವವರು!) ಇವರಲ್ಲಿ ಅಧಿಕಾರದ ಯಾವ ಹಮ್ಮುಗಳೂ ಇರಲಿಲ್ಲ. ಅವರ ಭೇಟಿಗಳ ನಡುವಣ ಲೋಕಾಭಿರಾಮದ ಮಾತುಗಳಲ್ಲಿ ನನಗಿವರ ಯಕ್ಷ-ಪ್ರೇಮದ ಮುಖವೂ ತಿಳಿಯಿತು. ಮಾತ್ರವಲ್ಲ ಅವರು ಸ್ಥಳೀಯ ಟೀವಿ ಚಾನೆಲಿನಲ್ಲಿ ಆಗೀಗ ನಡೆಸಿಕೊಡುತ್ತಿದ್ದ ಯಕ್ಷ-ಸಂದರ್ಶನಗಳ ಮಾಹಿತಿ ಸಿಕ್ಕಿ, ಅನುಭವಿಸಲೂ ಸಾಧ್ಯವಾಯ್ತು.

ಅತ್ರಿ ಬುಕ್ ಸೆಂಟರಿನಲ್ಲಿ ನಾನು ಬಹಳ ಹಿಂದೆಯೇ ನನ್ನ ಪರಿಸರ ರಕ್ಷಣೆಯ ಜಾಗೃತಿಯನ್ನು ಸಾರ್ವಜನಿಕದಲ್ಲಿ ಅಳವಡಿಸುವ ಉಮೇದಿನಲ್ಲಿ ಪುಸ್ತಕಗಳ ಪ್ಯಾಕಿಂಗನ್ನೇ ನಿರುತ್ತೇಜಿಸುತ್ತಿದ್ದೆ. ಪ್ಲ್ಯಾಸ್ಟಿಕ್ಕನ್ನಂತು ಕಾಯಾ ವಾಚಾ (ಅಂಗಡಿಯಲ್ಲಿ ವಾಗ್ಸಮರಗಳೇ ಹಲವು ನಡೆದಿದ್ದವು. ವಿವರಗಳಿಗೆ ನೋಡಿ: ನಾನ್ಯಾಕೆ ಚೀಲ ಕೊಡುತ್ತಿಲ್ಲ?) ಕಡ್ಡಾಯವಾಗಿ ನಿಷೇಧಿಸಿದ್ದೆ. ಅಜಿತ್ ಕುಮಾರರ ಪರಿಚಯ ಬೆಳೆದ ಮೇಲೆ ನನಗೆ ಗುರುತಿಲ್ಲದ ಕೆಲವು ಗಿರಾಕಿಗಳು ಹೇಳತೊಡಗಿದರು “ನಿಮ್ಮ ಪ್ಲ್ಯಾಸ್ಟಿಕ್ ಧೋರಣೆ ಬಗ್ಗೆ ಸಾಹೇಬ್ರು ತಮ್ಮ ಮೀಟಿಂಗುಗಳಲ್ಲೆಲ್ಲ ಹೇಳ್ತಾರೆ” ಎಂದು ಕೇಳಿಬರತೊಡಗಿತು. ಅವರ ಸಾರ್ವಜನಿಕ ಭಾಷಣದ ಮಾತುಗಳು ಪತ್ರಿಕೆಗಳಲ್ಲೂ ವರದಿಯಾದಾಗ, ಹಲವು ಮಳಿಗೆಗಳ ಮೇಲೆ ಕಮಿಶನರ್ ದಾಳಿಯೂ ನಡೆದದ್ದು ನನಗೆ ತಿಳಿಯಿತು. ಆಗೆಲ್ಲ ಅವರು ಎಂದಿನಂತೆ ಬಂದು ಹೋಗುತ್ತಿದ್ದರೂ ನನ್ನನ್ನು ‘ಸಾಹೇಬರು ಗುರುತಿಸಿದ’ ಭಾವ ಅವರು ಪ್ರಕಟಿಸಿದ್ದು ಇಲ್ಲವೇ ಇಲ್ಲ. ಪರೋಕ್ಷವಾಗಿ ಅದುವರೆಗೆ ನನಗೆ ಅಯಾಚಿತವಾಗಿ ಸಿಗುತ್ತಿದ್ದ “ಎಲ್ರೂ ಕೊಡ್ತಾರೆ, ನಿಮ್ಮದೇನು ಮಹಾ? ನೀವೊಬ್ಬರೇ ಪರಿಸರ ಉಳಿಸ್ತೀರೋ? ಜಿಪುಣ” ಎಂಬಿತ್ಯಾದಿ ಸಾರ್ವಜನಿಕ ಸಮ್ಮಾನದ ಮಾತುಗಳ ಅಬ್ಬರ ಮಾತ್ರ ಖಂಡಿತಾ ಇಳಿದಿತ್ತು. ಅಜಿತ್ ಕುಮಾರ್ ಮಂಗಳೂರಿನಲ್ಲೆ ಕೆಲವು ಅವಧಿ ಮುಗಿಸಿ ಹೋಗಿ ಮತ್ತೆ ಬಂದ ಕಾಲಕ್ಕೆ ನಾನು ಅಂಗಡಿ ಮುಚ್ಚಿದರೇನು – ಯಕ್ಷಕೂಟಗಳಲ್ಲಿ ಧಾರಾಳ ಭೇಟಿಯಾಗುತ್ತಲೇ ಇತ್ತು. ಅವರ ಯಕ್ಷ-ಪ್ರೀತಿ ತಿಳಿದ ಬಹುತೇಕ ಸಂಘಟಕರು ಅವರ ಹುದ್ದೆ ಗೌರವವನ್ನು ತಮ್ಮ ಕೂಟಗಳಿಗೆ ಬಳಸಿಕೊಳ್ಳಲು ವೇದಿಕೆಗೇ ಎಳೆಯುತ್ತಿದ್ದರು. ಆದರೆ ಸದಾ ಪ್ರೇಕ್ಷಾಂಗಣದಲ್ಲೇ ಇರುತ್ತಿದ್ದ ನನ್ನ ಮನದ ತುಡಿತಕ್ಕೆ ಅವರ ಭಾವನೆಗಳು ಸಂವಾದಿಯಾಗಿಯೇ ಇರುತ್ತಿದ್ದವು. ನನ್ನ ಜಾಲತಾಣದ ಬರಹಗಳಿಗೆ, ಖಾಸಗಿಯಾಗಿ ಸಿಕ್ಕಾಗಿನ ಮಾತುಗಳಲ್ಲಿ ಇವು ಧಾರಾಳ ಸ್ಪಷ್ಟವಾಗುತ್ತಿದ್ದವು. ಈ ಎಲ್ಲದರ ಮೊತ್ತವಾಗಿ ಅವರ ಖಾಸಗಿ ವ್ಯವಸ್ಥೆಯ ಕೂಡಾಟಕ್ಕೆ ನನ್ನನ್ನು ಆಮಂತ್ರಿಸಿದ್ದರು. ಏನಲ್ಲದಿದ್ದರೂ ಕನಿಷ್ಠ ತೆಕ್ಕಟ್ಟೆಯಿಂದ ನನಗೊಂದು ಸಾರಿಗೆ ವ್ಯವಸ್ಥೆ ಮಾಡಿಸುವುದು ಅವರಿಗೇನೂ ಕಷ್ಟದ ಮಾತಾಗುತ್ತಿರಲಿಲ್ಲ. ಆದರೆ ಅವರ ಸರಳ ಪ್ರೀತಿಯನ್ನು ಗೌರವಿಸುವುದಕ್ಕೆ ನಾನೂ ಮುಂದಾಗಿಯೇ ಅಂಥ ಪ್ರಯತ್ನಕ್ಕೇ ನಿಷೇಧ ಹೇರಿದ್ದೆ. ತಮಾಷೆ ಎಂದರೆ ಪರಿಸ್ಥಿತಿ ನಮ್ಮೆಲ್ಲರ ಆಶಯಕ್ಕೆ ರೂಪ ಕೊಡುವಂತೆ ಅಜಿತರ ಗೆಳೆಯ ಉದಯರನ್ನೇ ನನಗೆ ಕೊಟ್ಟಿತ್ತು!

ನಮ್ಮ ದಾರಿ ಮುಗಿದಲ್ಲಿನ ಮನೆಗೆ ಅತ್ತ ಹಳ್ಳಿಯ ಭವ್ಯತೆಯೂ ಇಲ್ಲ ಇತ್ತ ನಗರದ ವೈಭವವೂ ಇಲ್ಲ. ಸಮಾರಂಭವನ್ನು ಪ್ರತಿನಿಧಿಸುವಂತೆ ಸರಳ ಅಲಂಕಾರವೇನೋ ಮಾಡಿದ್ದರು. ಗದ್ದೆ, ಹೊಸದಾಗಿಟ್ಟ ತೆಂಗಿನ ತೋಟದ ನಡುವೆ ಮಣ್ಣ ಹರಹಿನಲ್ಲೇ ವಾಹನ ಬಿಟ್ಟು ಜನರ ಗಜಿಬಿಜಿಯೆಡೆ ಸೇರಿಕೊಂಡೆವು. ತೆಂಕು ತಿಟ್ಟಿನ ಯಕ್ಷಗಾನದ ಕ್ಷಿತಿಜ ವಿಸ್ತರಣೆಯಲ್ಲಿ ಅಪೂರ್ವ ಕೆಲಸ ನಡೆಸಿರುವ ಕಲಾವಿದೆ ವಿದ್ಯಾ ಕೊಳ್ಯೂರು (ಮೈಸೂರಿನಿಂದ) ಮತ್ತು ಅವರಿಗೆ ಸಂಘಟನಾ ಬಲ ಊಡುವ ಸರವು ಕೃಷ್ಣ ಭಟ್ಟರನ್ನು (ದಿಲ್ಲಿಯಿಂದ) ಪ್ರಥಮದಲ್ಲೇ ನೋಡಿ ನಾನು ಬೆರಗಾದೆ. (ಪರೋಕ್ಷವಾಗಿ ಮಂಗಳೂರಿನ ದೂರದಿಂದ ಬಂದವನೆಂಬ ನನ್ನ ಅಹಂಕಾರಕ್ಕೂ ಮದ್ದಾಯ್ತು!) ಮನೆಯ ಹಿತ್ತಲಿನಾಚೆ ಗದ್ದೆಯ ಹರಹಿನಲ್ಲಿ ವಿಸ್ತಾರಕ್ಕೆ ಶಾಮಿಯಾನ ಹಾಕಿ, ಕುರ್ಚಿಗಳನ್ನು ಜೋಡಿಸಿದ್ದರು. ಅವುಗಳ ಎದುರಿಗೆ ಒಂದಕ್ಕೊಂದು ಮುಟ್ಟಿದಂತೆ ಏಕರೂಪಿನ ಐದು ರಂಗಮಂಚಗಳು ತೆರೆ ಎಳೆದುಕೊಂಡು ಶೋಭಿಸಿದ್ದವು. ಅವುಗಳ ಹಿತ್ತಿಲಿನ ಚೌಕಿವಲಯದಿಂದ ‘ಗೆಳೆಯ ಉದಯ’ನ ಬರವಿನ ಸುದ್ದಿ ಮುಟ್ಟಿ ಅಜಿತ್ ಬಂದರು. ಆದರೆ ಜೊತೆಗೇ ನನ್ನನ್ನು ಕಂಡು ಗೆಳೆಯನನ್ನೇ ಮರೆತಷ್ಟು ಸಂಭ್ರಮಿಸಿದ್ದು ಅವರ ಸೌಜನ್ಯ.

ಐದೂ ರಂಗಮಂಚಗಳ ಹಿಂದೆ ಓಡಾಟಕ್ಕೆ ಸಾಕಷ್ಟು ಅಂತರ ಬಿಟ್ಟು ನೇರಕ್ಕೆ ಐದು ಚೌಕಿಯ ಗುಡಾರಗಳೆದ್ದಿದ್ದವು. ಅವುಗಳ ಇನ್ನೊಂದು ಕೊನೆಯಲ್ಲಿ ಪುಟ್ಟ ಪ್ರತ್ಯೇಕ ನೆರಳಿನಲ್ಲಿ ಐದೂ ಮೇಳದ ಗಣಪತಿಯರು ವಿರಾಜಮಾನರಾಗಿದ್ದರು. ಗದ್ದೆ ಒಣಗಿದ್ದರೂ ಅಸಮ ನೆಲ, ಕಟ್ಟೆಪುಣಿ, ಶಾಮಿಯಾನ ಮತ್ತು ಗುಡಾರಗಳ ಕಂಬ, ಹಗ್ಗ, ಗೂಟ, ಅಷ್ಟೂ ರಂಗ ಮತ್ತು ಚೌಕಿಗಳ ದೀಪ ಧ್ವನಿಗೆ ಎಳೆದ ನೂರೆಂಟು ವಯರು ಎಲ್ಲಾ ಹೊರಗಿನವರಿಗೆ ಅರ್ಥವಾಗದ ಗೋಜಲು. ಹೇಗೋ ಒಂದು ರಾತ್ರಿಯ ಅಗತ್ಯವಲ್ಲವೇ ಎಂದೂ ಕಾಣಬಹುದು. ಆದರೆ ಮೇಳಗಳ ತಿರುಗಾಟದ ಅವಧಿಯಲ್ಲಿ (ಅಂದರೆ ವರ್ಷದಲ್ಲಿ ಸುಮಾರು ಏಳು ತಿಂಗಳು) ಪ್ರತಿ ರಾತ್ರಿಗೂ ಮುನ್ನ (ಹೌದು, ಒಂದೂ ರಜೆಯಿಲ್ಲದೆ ‘ಗೆಜ್ಜೆಕಟ್ಟು’ವಲ್ಲಿಂದ ‘ಪತ್ತನಾಜೆ’ಯವರೆಗೆ) ಹೊಸತೇ ಪ್ರಯಾಣ ಅನುಭವಿಸಿ, ಪರಿಸರಕ್ಕೆ ಹೊಂದಿ, ಸನ್ನಿವೇಶ ನಿರ್ಮಾಣ ಮಾಡುವ ಪಳಗಿದ ಕೈಗಳು ಮಿತಿಯಲ್ಲಿ ಸುವ್ಯವಸ್ಥೆಯನ್ನೇ ಮಾಡಿದ್ದವು. ಇದಕ್ಕೆ ಸಾಕ್ಷಿ – ಇಡೀ ರಾತ್ರಿಯ ಅವಧಿಯಲ್ಲಿ ಒಮ್ಮೆಯೂ ದೀಪ ಧ್ವನಿಗಳು ಕೈಕೊಟ್ಟದ್ದಿಲ್ಲ. ಮೇಳದ ದೇವರುಗಳನ್ನು ನೋಡಲು ಬರುವ ಭಕ್ತಾದಿಗಳಿಗೆ ಪ್ರತ್ಯೇಕ ಪ್ರವೇಶ ಮತ್ತು ನೆಲ ಹಾಸನ್ನೂ ಕೊಟ್ಟಿದ್ದರು. ಚೌಕಿಯ ಕಲಾವಿದರನ್ನು ಭೇಟಿಯಾಗಲು ಬರುವ ಅಭಿಮಾನಿಗಳಿಗೂ ಅಲ್ಲಿ ಸೀಮಿತ ಜಾಗ, ಕುರ್ಚಿಗಳನ್ನು ಕೊಟ್ಟಿದ್ದರು. ಪ್ರೇಕ್ಷಾಂಗಣದ ಹೊರ ಸುತ್ತಿನಲ್ಲಿ ಅನಿವಾರ್ಯ ಸೇವೆಗಳಾದ ಚಾ, ಚರುಮುರಿಯೇ ಮುಂತಾದ ಪಾನೀಯ ತಿನಿಸುಗಳ ಅಡ್ಡೆಗಳು ಸ್ವತಂತ್ರವಾಗಿ ಬಿಡಾರ ಹೂಡಿ ‘ಬಯಲಾಟ ಎನ್ನುವುದು ಕೇವಲ ರಂಗಮಂಚದ ಮೇಲಿನ ಕ್ರಿಯೆಯಲ್ಲ’ ಎಂಬ ಪ್ರಸಿದ್ಧ ಹೇಳಿಕೆಯನ್ನು ಶ್ರುತಪಡಿಸಿದವು.

ಚೌಕಿಗಳಲ್ಲಿ ವೇಷ ಪ್ರಕ್ರಿಯೆ ಇನ್ನೂ ಬಿಸಿ ಏರಿದಂತೆ ಕಾಣುತ್ತಿರಲಿಲ್ಲ. ಆದರೆ ಸಮಯದ ಶಿಸ್ತನ್ನು ತುಂಬ ಚೆನ್ನಾಗಿಯೇ ಪಾಲಿಸಿದರು. ಎಂಟೂವರೆಗೆ ಸರಿಯಾಗಿ ಪ್ರತಿ ಚೌಕಿಯ ಆ ಕೊನೆಯಲ್ಲಿ ಒಂದೊಂದು ಕಬ್ಬಿಣ ಸಲಾಕೆಯ ಎದುರು ತೂಗಿಬಿದ್ದ ಒಂಟಿ ಎಣ್ಣೆ ದೀಪ ಸನ್ನಿವೇಶಕ್ಕೆ ರಂಗೇರಿಸುತ್ತಿರಲು, ಭಾಗವತರಾದಿ ಹಿಮ್ಮೇಳ ಗಣಪತಿಗೆ ಮುಖ ಹಾಕಿ ಸ್ತುತಿಪದಗಳನ್ನು ಹಾಡತೊಡಗಿದರು. ಚೌಕಿಯುದ್ದಕ್ಕೂ ಕಲಾವಿದರು ಇದ್ದಿದ್ದ ಸ್ಥಿತಿಯಲ್ಲೇ ನಿಂತು, ಕೈ ಜೋಡಿಸಿ ಗಣಪನ ಮೇಲಿನ ದೀಪದ ಮಿಂಚನ್ನು ಕಣ್ಣು ತುಂಬಿಕೊಳ್ಳುತ್ತಿದ್ದರು. ಅನುಕ್ರಮದಲ್ಲಿ ಐದೂ ಸೇವಾಕರ್ತ ಕುಟುಂಬಗಳ ಸದಸ್ಯರು ಗಣಪನ ಸಾಮೀಪ್ಯದಲ್ಲೇ ಕರಜೋಡಿಸಿದ್ದರು. ಐದೂ ಪೂಜಾಭಟ್ಟರು ಕಲಾರಾಧನೆಗೆ ಸೂಕ್ತ ವಾತಾವರಣವನ್ಣೇ ಆವಾಹಿಸಿದರು.

ಏಕಕಾಲಕ್ಕೆ ಒಂದೇ ಆಡಳಿತಕ್ಕೊಳಪಟ್ಟ (ಮಂದರ್ತಿ ಅಮ್ಮನವರ ಮೇಳಗಳು) ಐದು ಹಿಮ್ಮೇಳಗಳು ಹೆಚ್ಚುಕಡಿಮೆ ಒಂದೇ ಸಾಹಿತ್ಯದ ಮತ್ತು ಶಿಸ್ತಿನ ರಂಗ ಪ್ರಸ್ತುತಿ ನಡೆಸುತ್ತವೆ ಎನ್ನುವುದು ಅಂದಿನ ಕೂಡಾಟದ ನಿರೀಕ್ಷೆ ಮತ್ತು ವಿಶೇಷ. ಬೇರೆ ಬೇರೆ ಮೇಳಗಳ ಜೋಡಾಟ ನಡೆಯುವುದನ್ನು ನಾನು ಸಾಕಷ್ಟು ಕೇಳಿದ್ದೇನೆ. ಅಲ್ಲಿ ಯಕ್ಷಗಾನ ಮತ್ತು ಕಥಾನಕದ ಸಾರೂಪ್ಯವನ್ನು ಬಿಟ್ಟರೆ ಉಳಿದೆಲ್ಲವೂ ‘ಸ್ಪರ್ಧಾ ಮನೋಭಾವದಿಂದ’ ಪ್ರೇರಿತವಿರುತ್ತದಂತೆ. ಅಲ್ಲಿ ಎರಡೂ ವೇದಿಕೆಗಳ ನಡುವೆ ತುಸು ಅಂತರವನ್ನೂ ಧ್ವನಿಸಂಯೋಜನೆಯಲ್ಲಿ ಸ್ವಾತಂತ್ರ್ಯವನ್ನೂ ಕೊಟ್ಟಿರುತ್ತಾರೆ. ಹೀಗಾಗಿ ಪ್ರೇಕ್ಷಕವರ್ಗ ವಿವಿಧ ಸನ್ನಿವೇಶಗಳು ವಿಕಸಿಸುವ ಚಂದ (‘ರೈಸು’ವುದು ಎಂದೇ ಶಬ್ದವಿದೆ), ಅಥವಾ ಅಭಿಮಾನೀ ಕಲಾವಿದನ ಪ್ರವೇಶವನ್ನೋ ನೋಡಿಕೊಂಡು ಕಾಲಕಾಲಕ್ಕೆ ಅತ್ತಿತ್ತ ಒಲೆದಾಡುವುದು, ಇದ್ದದ್ದರಲ್ಲಿ ಸ್ವತಂತ್ರವಾಗಿ ಅನುಭವಿಸುವುದು ಸಾಧ್ಯ. ಆದರಿಲ್ಲಿ ಐದೂ ವೇದಿಕೆಗಳು ಒಂದೇ ನೆಲದ ವಿವಿಧ ಮುಖವಾಗಿಯಷ್ಟೇ ಇತ್ತು.

ಹಿಮ್ಮೇಳ ಸೇರಿದಂತೆ ಐದೂ ಮುಖಗಳಿಗೆ ಎಂದಿನ ಮೈಕ್ ಜೋಡಣೆಗಳೇನೋ ಇತ್ತು. ಆದರೆ ಎಲ್ಲ ಧ್ವನಿಗಳು ಪ್ರಸಾರವಾಗುತ್ತಿದ್ದದ್ದು ಒಂದೇ ಸಂಯೋಜಕದ ಮೂಲಕ. ಚೌಕಿ ಪೂಜೆಯಲ್ಲಿ ಭಾಗವತರುಗಳ ತಾಳ ಮತ್ತು ಲಹರಿಗಳು ಉದ್ದ ಗಿಡ್ಡವಾದರೂ ಮೈಕ್ ಇಲ್ಲದ್ದರಿಂದ ಮತ್ತು ಭಕ್ತಿ ಭಾವ ಪ್ರಧಾನವಾದ್ದರಿಂದ ಏರ್ಪಟ್ಟ ಗದ್ದಲ ಗಮನ ಸೆಳೆಯಲಿಲ್ಲ. ಆದರೆ ರಂಗದ ಮೇಲೆ ಐದೂ ತಂಡಗಳು ಏಕಕಾಲಕ್ಕೆ ಪೂರ್ವರಂಗದ ಕಲಾಪಕ್ಕಿಳಿದಾಗ ಬಹುಮುಖ್ಯವಾಗಿ ಧ್ವನಿ ಯಾವುದೇ ಜಲ್ಲಿ ಕಾರ್ಖಾನೆಗೆ ಸ್ಪರ್ಧೆ ಕೊಡುವಂತಿತ್ತು. ಆಯ್ಕಾ ಸ್ವಾತಂತ್ರ್ಯ ಪ್ರೇಕ್ಷಕರಿಗೆ ಬಿಡಿ, ಆಯಾ ಮೇಳದಲ್ಲಿ ರಂಗದ ಮೇಲೆ ಕಸುಬು ನಡೆಸುತ್ತಿದ್ದ ಕಲಾವಿದರಿಗೇ ಉಳಿದಿರಲಿಲ್ಲ. ಎಷ್ಟೋ ಬಾರಿ ಹಿಮ್ಮೇಳದೊಳಗೇ ವಿತಾಳ, ಅಪಸ್ವರ ಅವರವರ ಅರಿವಿಗೂ ಬಾರದೆ ಧಾರಾಳ ನಡೆದಿರಬಹುದು!

ಉದಾಹರಣೆಗೆ ಒಂದನೇ ಮೇಳದ ಭಾಗವತನ ಸೊಲ್ಲಿಗೆ ಎರಡನೇ ಮೇಳದ ಮದ್ದಳೆಯವನು ಜಾಗೃತನಾಗಿರಬಹುದು, ಮೂರನೇ ಮೇಳದ ಚಂಡೆಯವನು ಹೊಡೆದುಕೊಂಡಿರಬಹುದು, ನಾಲ್ಕನೇ ಮೇಳದ ಬಾಲಗೋಪಾಲ ಗಾಬರಿಬಿದ್ದು ಹೆಜ್ಜೆ ತಪ್ಪಿರಬಹುದು, ಐದನೇ ಮೇಳದ ಪರದೆ ಜರ್ರೆಂದಿಳಿದು ವೇಷದವನ ತಲೆ ಮೊಟಕಿರಬಹುದು!! ಪ್ರಸಂಗ ಸಾಹಿತ್ಯಕ್ಕೆ ಬಂದಾಗ ಈ ಗೊಂದಲವಿರುವುದಿಲ್ಲವೆಂಬ ಆಶ್ವಾಸನೆ ಮೊದಲೇ ಸಿಕ್ಕಿದ್ದುದರಿಂದ, ಸಮಯಕ್ಕೆ ಸರಿಯಾಗಿ ಅಜಿತರ ಭಾವ (ಎರಡರಥದಲ್ಲೂ) ನನ್ನನ್ನು ಊಟಕ್ಕೆ ಎಬ್ಬಿಸಿದ್ದರಿಂದಲೂ ನಾನು ರಂಗಕ್ಕೆ ದೂರನಾದರೂ ಏನೂ ಕಳೆದುಕೊಳ್ಳಲಿಲ್ಲವೆಂದು ಧೈರ್ಯವಾಗಿ ಹೇಳಬಲ್ಲೆ.

ಶಾನಾಡಿ ಮನೆಯಲ್ಲಿ ಘೋಷಣೆಯಂತೆ ಸಾರ್ವಜನಿಕ ಅನ್ನಸಂತರ್ಪಣೆ ಮಧ್ಯಾಹ್ನಕ್ಕಿದ್ದರೂ ರಾತ್ರಿಗೆ ಅಗತ್ಯದ ಊಟವನ್ನೂ ವಿಸ್ತೃತವಾಗಿಯೇ ಮಾಡಿದ್ದಕ್ಕೆ ನಾನು ಬಿಟ್ಟಿದ್ದ ಹೊಟ್ಟೆಯ ಚಿಂತೆಯನ್ನು ಅಜಿತರು ರುಚಿಕರವಾಗಿಯೇ ಪೂರೈಸಿಕೊಟ್ಟರು. ಆ ದೂರದಲ್ಲಿ ಊಟ ನಡೆಸುತ್ತಾ ಆಟ ನೋಡುವಾಗ ಧ್ವನಿವರ್ಧಕಗಳನ್ನು ಮೀರಿ ರಂಗದ ಮೇಲಿನ ರಂಗು, ಚಲನೆಯ ಗತ್ತು ನನ್ನನ್ನು ಒಲಿಸಿತು. ಮೊದಲೇ ನಾನು ಹೆಚ್ಚು ಕತ್ತು ಕೊಂಕಿಸದೇ ಐದೂ ರಂಗ ಕಣ್ಣಳವಿಗೆ ಸಿಗುವಷ್ಟು ಅಂತರದ ಕುರ್ಚಿ ಹಿಡಿದಿದ್ದೆ. (ನನ್ನ ‘ಗೌರವ’ಕ್ಕೆ ಕುಂದಾಗಬಾರದೆಂಬಂತೆ ಎರಡೆರಡು ಬಾರಿ ಅಜಿತರು ಎದುರಿನ ಆಸನಕ್ಕೆ ಆಮಂತ್ರಿಸಿದ್ದನ್ನು ಸತರ್ಕವೇ ನಿರಾಕರಿಸಿದ್ದೆ.) ಮತ್ತೆಯೂ ಅಲ್ಲಿಗೆ ಹೋದಾಗ ಬಾಲಗೋಪಾಲರ ವೈಭವ ನಡೆದಿತ್ತು. ಒಂದನೇ ರಂಗದವರು ಮಾತ್ರ ಜೋಡಿಯನ್ನು ಇಳಿಸಿದ್ದರು, ಉಳಿದಂತೆ ಎಲ್ಲರೂ ಒಂದೊಂದೆ. ಎರಡನೇದರಲ್ಲಿ ನಿಜಕ್ಕೂ ನೇರ ಬಾಲ ಮೇಳದವನೇ ಬಂದಂತಿತ್ತು. ಕುಣಿತ ಮಣಿತಗಳು ಲಯ ಸಾಮರ್ಥ್ಯವನ್ನೂ ಉತ್ಸಾಹವನ್ನೂ ಒಗ್ಗೂಡಿಸಿಕೊಂಡು ಸಂಭ್ರಮದ ನಾಂದಿಯನ್ನೇ ಕೊಟ್ಟವು. ಗಣಪತಿ ಪೂಜೆ ಮುಗಿದು ಕೊನೆಯ ಸುತ್ತಿನ ಮೊಣಕಾಲು ಹಾಕುವಲ್ಲಿ ಮುಖ್ಯವಾಗಿ ನಾಲ್ಕು ಮತ್ತು ಐದನೆಯ ರಂಗದವರು ನಿರಂತರ ಸುತ್ತು (ಸುಸ್ತು?) ಹೊಡೆಯುತ್ತ ಸ್ಪರ್ಧೆಯ ಸ್ಪರ್ಷ ಕೊಟ್ಟಾಗ ಪ್ರೇಕ್ಷಕರ ಸಿಳ್ಳೆ, ಹುಯ್ಲು ಹೆಚ್ಚಿತ್ತು. ಆದರೆ ಸಕಾಲಿಕವಾಗಿ ಸೇವಾಕರ್ತರ ಪ್ರತಿನಿಧಿ ಕಲಾವೇದಿಕೆ ಜೂಜುಕಟ್ಟೆಯಾಗದ ಎಚ್ಚರವಹಿಸಿದರು.

ಸಪ್ತ ಕಲ್ಯಾಣ ಪ್ರಸಂಗಕ್ಕಿಳಿಯುವ ಹಂತದಲ್ಲಿ ಐದು ರಂಗಗಳನ್ನು ಒಗ್ಗೂಡಿಸಿದರು. ಮುಮ್ಮೇಳದ ಕಲಾಪಗಳಿಗೆ ಎರಡು ಮತ್ತು ಮೂರನೆ ರಂಗಗಳನ್ನು ಒಂದಾಗಿ ಪರಿಗಣಿಸಿದರು. ಹಿಮ್ಮೇಳದಲ್ಲಿ ಸುಮಾರು ಒಂದನೇ ರಂಗದ ಮಧ್ಯದಿಂದ ತೊಡಗಿ ನಾಲ್ಕನೇ ರಂಗದ ಅಂಚಿನವರೆಗೆ ಬಲದಿಂದ ಕ್ರಮವಾಗಿ ಐದು ಭಾಗವತರು ಶ್ರುತಿವಾದಕರೊಂದಿಗೆ, ಐದು ಮದ್ದಲೆಯವರು ಮತ್ತು ಕೊನೆಯಲ್ಲಿ ಐದು ಚಂಡೆಯವರು ವ್ಯವಸ್ಥಿತರಾದರು. ಭಾಗವತರೊಳಗಿನ ಹಿರಿತನವೋ ಪ್ರಸಂಗ ಸಾಹಿತ್ಯದ ಹಿಡಿತಕ್ಕೋ ಅನುಸಾರವಾಗಿ ಕೆಲವರು ಹೆಚ್ಚು ಕೆಲವರು ಕಡಿಮೆ ಹಾಡಿದರು. ಮದ್ದಲೆ ಚಂಡೆಗಳಲ್ಲೂ ಹಾಗೇ ಇದ್ದಿರಬಹುದಾದರೂ ಕೆಲವೊಮ್ಮೆ ಮುಮ್ಮೇಳದ ಕಲಾವಿದನ ಲಹರಿಯರಿತವನು ನುಡಿತಗಳನ್ನು ಎತ್ತಿಕೊಳ್ಳುತ್ತಿದ್ದಂತಿತ್ತು. ಕ್ರಮವಾಗಿ ರುಕ್ಮಿಣೀ ಕಲ್ಯಾಣ, ಸುಭದ್ರಾ ಕಲ್ಯಾಣ, ಶ್ರೀನಿವಾಸ ಕಲ್ಯಾಣ, ರತ್ನಾವತೀ ಕಲ್ಯಾಣ ಹಾಗೂ ಜಾಂಬವತೀ ಕಲ್ಯಾಣಗಳು ಸಾಂಪ್ರದಾಯಿಕ ಯಕ್ಷ ಶೈಲಿಯಲ್ಲಿ ನಡೆದು ಜನಮನ ರಂಜಿಸಿದವು. ‘ಜನಪದ ಸ್ವಾತಂತ್ರ್ಯ’ ಬಳಸುತ್ತ ಒಂದೆರಡು ಕಡೆ ಪಾತ್ರಧಾರಿಗಳು ಪಾತ್ರೌಚಿತ್ಯ ಮೀರಿ ಸಿನಿಮಾ ಹಾಡಿನ ಉದ್ಧರಣದಂತಹ ಲೌಕಿಕಗಳಿಗೆ ಮನಸ್ಸು ಮಾಡಿದರೂ ‘ಹರಕೆ ಮೇಳ’ ಎಂಬ ಕೀಳೆಣಿಕೆಗೆ ಎಲ್ಲೂ ಅವಕಾಶ ಕೊಡದ ಸ್ತರದಲ್ಲಿ ಚೊಕ್ಕವಾಗಿ ನಡೆಸಿದರು. ಕಥಾ ನಾವೀನ್ಯ, ಸ್ವಘೋಷಿತ ‘ಸ್ಟಾರ್ ಕಲಾವಿದರ’ ಚಮಕ್, ಪ್ರಚಾರದ ಭರಾಟೆಗಳಲ್ಲಿ ಇನ್ನು ಆಟಗಳೇ ಇಲ್ಲ, ಇವರನ್ನು ಬಿಟ್ಟರೆ ಕಲಾವಿದರೇ ಇಲ್ಲ ಎನ್ನುವ ಭ್ರಮೆ ಹುಟ್ಟಿಸುವ ಟಿಕೆಟ್ ಮೇಳಗಳ ಮಾಯೆ ಹರಿಯುವಂತೆ ಇಲ್ಲಿನ ಕಲಾವಿದರು ದುಡಿದರು.

ಕೂಡಾಟದ ಕಲ್ಪನೆಯನ್ನು ಪೂರ್ಣಗೊಳಿಸುವಂತೆ ಕೊನೆಯ – ಮೀನಾಕ್ಷಿ ಕಲ್ಯಾಣಕ್ಕೆ ಪುನಃ ರಂಗಗಳು ಐದಾದವು. ಸರಿಯಾಗಿ ಒಂದು ಗಂಟೆಯ ಕಾಲ ನಡೆದ ಆ ಪ್ರಸಂಗ ಪೂರ್ವರಂಗದಂತೆ ಕಿವಿಮುಚ್ಚಿಯಾದರೂ ನೋಡಿ ಅನುಭವಿಸುವ ಕುಶಿಯನ್ನೂ ನಮ್ಮಿಂದ ಅಪಹರಿಸಿತು ಎಂದು ಸಖೇದ ಹೇಳಬೇಕು. ಆ ಒಂದು ಗಂಟೆಯಲ್ಲಿ ಪ್ರತಿ ರಂಗದ ಮೇಲೂ ವೇಷ (ಪಾತ್ರ),ಭಾವ, ಕುಣಿತಗಳ ಬಹು ವೈವಿಧ್ಯಮಯ ಮೆರವಣಿಗೆಯೇ ಆಗಿತ್ತು. ಪೂರ್ವರಂಗದ ನಡೆಗಳಲ್ಲಿರುವ ಸಹಜವಾಗಿರುವ ಕಡಿವಾಣ ಪ್ರಸಂಗ ನಿರೂಪಣೆಯಲ್ಲಿ ಕಳಚಿಕೊಂಡಂತಿತ್ತು ಇಲ್ಲಿ ಹಿಮ್ಮೇಳ ಅಬ್ಬರಿಸಿತು. ಚಂಡೆ ಮದ್ದಳೆಯವರ ಕೈ ಬಡಿತ ನಿಲ್ಲಿಸಿದ್ದೇ ಕಾಣಲಿಲ್ಲ, ಭಾಗವತರುಗಳು ಐತಿಹಾಸಿಕ ದಿನಗಳ ಪುನಾರಚನೆಗೆ ತೊಡಗಿದವರಂತೆ ಮೈಲು ದೂರಕ್ಕೆ ಕೇಳುವ ಧ್ವನಿತೆಗೆದೂ ಸೋತಂತೆ ಕೇಳುತ್ತಿತ್ತು. ಪಾತ್ರಧಾರಿಗಳು ಚುರುಕಿನ ಅಭಿನಯ ಕೊಟ್ಟು, ಕುಣಿದು, ನುಡಿದು, ದಣಿದು, ಬದಲುವ ವೇಗದೊಡನೆ ಸ್ಪರ್ಧೆಯಲ್ಲಿ ಇನ್ನೊಂದು ರಂಗದವರು ಎಲ್ಲಿದ್ದಾರೆ, ಹೇಗಿದ್ದಾರೆ ಎಂದು ಕಣ್ಣಿಟ್ಟಂತೆಯೇ ನಡೆಸಿಕೊಂದು ಹೋದರು. ಈ ಹಂತದಲ್ಲೂ ಧೀಂಗಣ ಹಾಕುವ ಸ್ಪರ್ಧೆ ಮತ್ತೆ ಯಾವುದೋ ಎರಡು ಮೇಳಗಳ ನಡುವೆ ಜಿದ್ದಿಗೆ ಬಿದ್ದದ್ದನ್ನು ಸೇವಾಕರ್ತ ಪರಿಹರಿಸಬೇಕಾಯ್ತು!

ಹರಕೆ ಮೇಳದ ಎಲ್ಲಾ ಔಪಚಾರಿಕತೆಗಳನ್ನು ಪೂರೈಸುವಂತೆ ಕೊನೆಯಲ್ಲಿ ಪ್ರತಿ ಮೇಳದ ಸೇವಾಕರ್ತರ ಪ್ರತಿನಿಧಿಗಳು ರಂಗದಲ್ಲೂ ಅನಂತರ ಚೌಕಿಯಲ್ಲೂ ಪ್ರಸಾದವನ್ನು ಪಡೆಯುವುದರೊಡನೆ ಹಗಲಿನ ಬೆಳಕೂ ಅರಳಿತ್ತು.

****

ರಾತ್ರಿ ಪೂರ್ವರಂಗದ ಗದ್ದಲ ಮುಗಿದು ರಂಗಸ್ಥಳ ಸಜ್ಜಾಗುತ್ತಿದ್ದಂತೆ ನನ್ನ ಚರವಾಣಿ ಮೊಳಗಿ, ನಿಟ್ಟೆಯ ಗೆಳೆಯ ಮಂಜುನಾಥಶೆಟ್ಟಿಯವರ ಹೆಸರು ತೊರಿಸಿತು. ಅವರೂ ನನ್ನಂತೇ ಹುಚ್ಚುಗಟ್ಟಿ, ನನ್ನಷ್ಟು ಗೊತ್ತುಗುರಿಯಿಲ್ಲದೆ ಕುಂಭಾಸಿಯಲ್ಲಿ ಹೊಟೆಲ್ ರೂಮು ಹಿಡಿದು ವಟವೃಕ್ಷಕ್ಕೆ ದುಬಾರಿ ಹಣತೆತ್ತು ಸಕಾಲಕ್ಕೇ ಶಾನಾಡಿಗೆ ಬಂದಿದ್ದರು. ಆ ಜನಜಾತ್ರೆಯಲ್ಲೂ ಅವರಿಗೆ ನನ್ನ ಛಾಯೆ ಕಂಡಂತಾದ್ದಕ್ಕೆ ಚರವಾಣಿಸಿ, ಇರವನ್ನು ಖಾತ್ರಿಪಡಿಸಿಕೊಂಡಿದ್ದರು. ಅರ್ಧರಾತ್ರಿ ಮೀರುವವರೆಗೂ ವಿದ್ಯಾಕೋಳ್ಯೂರು, ಅವರ ಮಗಳು ಮತ್ತು ಸರವು ಕೃಷ್ಣ ಭಟ್ಟರ ಜೊತೆ ಪ್ರದರ್ಶನದ ಕುರಿತಂತೆ ಮಾತು, ಇಂಥ ಪ್ರದರ್ಶನಗಳ ಸಾಧ್ಯತೆಗಳ ಕುರಿತು ವಿಚಾರ ವಿನಿಮಯ ಆಗೀಗ ವಿಚಾರವಿನಿಮಯ ನಡೆಸಿದ್ದೆವು. ಶಾಮಿಯಾನವನ್ನೂ ತೂರಿಬಂದ ಮಂಜಿನ ಅಲೆಗೆ ಎಲ್ಲ ಚೇತನಗಳೂ ಶಾಲು, ಹೊದಿಕೆಗಳ ಮುಸುಕಿನೊಳಗೆ ತೂರಿಕೊಂಡವು. ಸೇವಾಕರ್ತರ ಔದಾರ್ಯದ ಒಡೆ, ಚಾಯಗಳು ಮತ್ತೆ ನಮ್ಮ ನಮ್ಮ ಅಗತ್ಯಾನುಸಾರ ಜಾತ್ರೆಯ ತಿನಿಸು ಪಾನೀಯಗಳು ನಿದ್ರೆಯ ಅಲೆಯನ್ನು ತಡೆಯದಾದಾಗ ಅವರು ಮೂವರು ಮೊದಲೇ ಮಾಡಿಬಂದ ಕಾರಿನಲ್ಲಿ ಬಿಡಾರ ಸೇರಿಕೊಂಡರು. ಪುರಾಣ ಲೋಕ ಹರಿದು ಶಾನಾಡಿಯ ಹಗಲಿಗೆ ನಾನು ಕಣ್ಣು ಕೊಡುವ ಹೊತ್ತಿಗೆ ಉಳಿದ ಬಹುತೇಕ ಸಭೆ ಸ್ಥಳೀಯರದ್ದೇ. ರಿಕ್ತ ವಾಹನ ತಂಗುದಾಣದಲ್ಲಿ ಒಂದು ಮುಸುಕಿನ ಗುಮ್ಮ ನಾನಾದರೆ ಇನ್ನೊಂದು ಮಂಜುನಾಥ ಶೆಟ್ಟಿ. ಅದೃಷ್ಟವಶಾತ್ ಸಿಕ್ಕಿದ ಬಾಡಿಗೆಯ ‘ಫಟ್ಫಟೀ’ ಏರಿ ಹೆದ್ದಾರಿಗೆ ಹೋಗುವ ದಾರಿಯಲ್ಲಿ ನಮ್ಮಿಬ್ಬರ ವಿಚಾರಲಹರಿಯೂ ಹೆಚ್ಚುಕಮ್ಮಿ ಒಂದೇ ನಿಟ್ಟಿನಲ್ಲಿ ಹರಿದಿತ್ತು.

ಐದೂ ಮೇಳದ ಕಲಿಕೆಯ ಶಿಸ್ತನ್ನು (ಉತ್ತಮ) ಏಕರೂಪಕ್ಕೆ ತಂದು, ಒಟ್ಟು ಸಂಯೋಜನೆಯಲ್ಲಿ ಸಮರ್ಥ ಏಕ ನಿರ್ದೇಶನವನ್ನು ತರುವುದು ಸಾಧ್ಯವಾದರೆ ಕೂಡಾಟ ನಿಸ್ಸಂದೇಹವಾಗಿ ಮನಸ್ಸನ್ನು ತುಂಬಬಹುದು. ಯಕ್ಷ ಕಲಾಸಾಗರ ಕಾರ್ಗಾಲದ ರೊಚ್ಚು ತೋರುವುದು ಬಿಟ್ಟು ಮಂದಾನಿಲದಲ್ಲಿ ತೆಳು ತೆರೆಗಳನ್ನೆಬ್ಬಿಸುತ್ತಲಿದ್ದರೆ, ರಸ ಭಾವದ ನಿರ್ಮಲ ಪ್ರತಿಬಿಂಬವೂ ತೋರೀತು, ದಿಗಂತ ಅನಂತಕ್ಕೆ ವಿಸ್ತರಿಸೀತು.

ನೀವು ಕಂಡಿದ್ದೀರಾ ಪಂಚ ಕೂಡಾಟ? ಕನಿಷ್ಠ ಜೋಡಾಟ? ಕೊಡಲಾರಿರಾ ನಿಮ್ಮ ನೋಟಾ?